ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗ್ರಂಥ ಪರಿಚಯ

“ಬಸವಣ್ಣನವರು ಸಾಧಕರಾಗಿದ್ದಾಗ ಅವರ ಅಂತರಂಗದಲ್ಲಿ ಉದಿಸಿದ ಭಾವ ಲಹರಿಗಳನ್ನೂ, ಅನುಭಾವಿಗಳಾದಾಗ ಅವರು ಪಡೆದ ಆನಂದ-ತೃಪ್ತಿಗಳನ್ನೂ, ಅವರು ತಮ್ಮ ಅಮೃತ ವಚನಗಳಲ್ಲಿ ಹೇಗೆ ಎರಕಹೊಯ್ದಿದ್ದಾರೆ ಎಂಬುದನ್ನೂ ಇಲ್ಲಿ ನೋಡಬಹುದು. ಮುಂದೆ ಬಸವಣ್ಣನವರು ಪರಮಾತ್ಮನ ಆಣಿತಿಯ ಮೇರೆಗೆ ಭಕ್ತ ವೃಂದಕ್ಕೆ ಬೋಧೆ ಮಾಡಿ ಅವರನ್ನು ಹೇಗೆ ಉದ್ಧರಿಸಿದರೆಂಬುದನ್ನೂ ಅವರ ಪ್ರತ್ಯಕ್ಷ ವಚನಗಳ ಉದಾಹರಣೆಯಿಂದ, ಅವರದೇ ಆದ ಆವೇಶಪೂರ್ಣ ಶೈಲಿಯಲ್ಲಿ ಶ್ರೀ ದೇಶಪಾಂಡೆಯವರು ವಿವರಿಸಿದ್ದಾರೆ.
ಹರಿಹರ ಮಹಾಕವಿಯ 'ಬಸವರಾಜದೇವರ ರಗಳೆ'ಯ ಚಾರಿತ್ರಿಕ ಹಿನ್ನೆಲೆಯ ಮೇಲೆ, ಬಸವಣ್ಣನವರ ಅಂತರಂಗ ನಿರೂಪಕ ವಚನಗಳ ಮೇಳದಿಂದ, ಬಸವಣ್ಣನವರನ್ನು ಕುರಿತಾದ ಪುರಾಣ ಹಾಗೂ ಐತಿಹ್ಯ ಕಥನಗಳ ನೆರವಿನಿಂದ, ಕವಿಸಹಜವಾದ ಭಾವಪೂರ್ಣ ಕಲ್ಪನಾ ಸೂತ್ರದಿಂದ ಹೆಣೆದು ಶ್ರೀ ದೇಶಪಾಂಡೆಯವರು ಈ ಕೃತಿಯನ್ನು ರೂಪಿಸಿದ್ದಾರೆ.
ಈ ಗ್ರಂಥ ರಚನೆಯಲ್ಲಿ ಶ್ರೀ ದೇಶಪಾಂಡೆಯವರ ಶ್ರಮ ಸಾರ್ಥಕವಾಗಿದೆಯೆಂದು ಹೇಳಲು ಸಂಶಯವಿಲ್ಲ. ಬಸವಣ್ಣನವರಂಥ ಅನುಭಾವಿಗಳ ಜೀವನಚರಿತ್ರೆಗಳನ್ನು ಚಿತ್ರಿಸುವುದು ಎಷ್ಟೊಂದು ಕಷ್ಟವೆಂಬುದನ್ನು ಅರಿತರೆ, ಶ್ರೀ ದೇಶಪಾಂಡೆಯವರು ಈ ಕೆಲಸವನ್ನು ಸಾಮರ್ಥ್ಯದಿಂದ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಈ ಪ್ರಯತ್ನವು ಶ್ಲಾಘನೀಯವಾಗಿದೆ.

ಶ್ರೀ ಬಿ. ಡಿ. ಜತ್ತಿ
ಅಧ್ಯಕ್ಷರು,
ಬಸವಸಮಿತಿ, ಬೆಂಗಳೂರು,
(ಗ್ರಂಥಕ್ಕೆ ಬರೆದ 'ಮುನ್ನುಡಿ' ಯಲ್ಲಿ)