ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

108
ಗೋವುಗಳನ್ನು ಕದ್ದಾಗ ಬಸವಣ್ಣನವರು ಅವರಿಗೆ ಕರುಗಳನ್ನು ಒಪ್ಪಿಸಲು ತಮ್ಮ ಸೇವಕರನ್ನು ಆಜ್ಞಾಪಿಸಿದರು. ಹೆಂಡತಿಯ ಆಭರಣಗಳನ್ನು ಕದಿಯಬಂದಾಗ ಅವರಿಗೆ ಅವನ್ನು ತೆಗೆದುಕೊಡಲು ಬಸವಣ್ಣನವರು ಪತ್ನಿಗೆ ಹೇಳಿದರು. ಈ ಬಗೆಯಾಗಿ ಅವರು ಈ ತ್ರಿವಿಧ ಅಗ್ನಿದಿವ್ಯದೊಳಗಿಂದ ಸುರಕ್ಷಿತ ಪಾರಾದರು. ತಮ್ಮ ಅಚಲ ಭಕ್ತಿಯಿಂದ ಸಂಗನ ಹೃದಯವನ್ನು ಕರಗಿಸಿ ಆತನಿಂದ ಕರುಣದ ಸುಧೆಯನ್ನು ಪಡೆದರು.
ನಿಜವಾಗಿ ಭಕ್ತಿ ಎಂಬುದು ಮಾಡಬಾರದು, ಮಾಡಲು ಬಾರದಂತಹದು. ಅದು ಕರಗಸದಂತೆ ಹೋಗುತ್ತ ಕೊಯ್ಯುವುದು, ಬರುತ್ತ ಕೊಯ್ಯುವುದು. ಅದು ಘಟಸರ್ಪನಲ್ಲಿ ಕೈ ದುಡಿಕಿದಂತೆ. ಅದಕ್ಕಾಗಿಯೇ 'ಹರಿನೋ ಮಾರಗ ಛೇ ಶೂರಾನೊ ಹರಿಯನ್ನು ಪಡೆಯುವ ಪಂಥವು ಶೂರರದು, ಹೇಡಿಗಳದಲ್ಲ ಎಂದು ಗುಜರಾತ ಪ್ರೀತಮ್ ಸಂತಕವಿಯು ಅರುಹಿದ ಮೇರೆಗೆ ಅದೊಂದು ಅಸಿಧಾರಾವ್ರತ. ಅದನ್ನು ಛಲವುಳ್ಳ ವೀರರೇ ನೆರವೇರಿಸಬಲ್ಲರು.
ಆತ್ಮಾರ್ಪಣ ಅನನ್ಯತೆ :
ಅಂದಿನಿಂದ ಬಸವಣ್ಣನವರು ಪೂರ್ತಿಯಾಗಿ ಸಂಗನಿಗೆ ಶರಣುಹೋದರು. ತಮ್ಮ ವಾಮ-ಕ್ಷೇಮ, ಹಾನಿ-ವೃದ್ಧಿ ಮಾನಾಪಮಾನ, ಎಲ್ಲವೂ ಸಂಗನ ಹೊಣೆಯೆಂದು ಭಾವಿಸಿದರು. ಸಂಗನಿಗೆ ತಮ್ಮ ಸರ್ವಸ್ವವನ್ನು ಅರ್ಪಿಸಿ, ಅನನ್ಯರಾದರು. ತಮ್ಮ ದೇಹವನ್ನೆ ದೇಗುಲ ಮಾಡಿ ಅಲ್ಲಿ ಸಂಗನನ್ನು ಆತ್ಮ ಲಿಂಗವನ್ನು ಆರಾಧಿಸಿದರು.
ಉಳ್ಳವರು ಶಿವಾಲಯವ ಮಾಡುವರು ;
ನಾನೇನ ಮಾಡುವೆ ? ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಸಿರ ಹೊನ್ನಕಳಸವಯ್ಯಾ.
ಕೂಡಲಸಂಗಮದೇವ, ಕೇಳಯ್ಯಾ :
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ !