ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚುರುಕು ಮತಿತ್ವ ಮುಖ್ಯವಾಗಿ ಅವರು ಸಮಾಜ, ಸಂಸ್ಕೃತಿ, ಕಲೆ, ಮೌಲ್ಯಗಳ ಬಗ್ಗೆ ವಿಶೇಷ ಕಾಳಜಿಯುಳ್ಳವರು, ಸಮಾಜದ ಅಂಕುಡೊಂಕನ್ನು, ಅಪಸವ್ಯವನ್ನು, ಮೌಡ್ಯವನ್ನು ತೀವ್ರತರವಾಗಿ ವಿರೋಧಿಸುವವರು. ಅದಕ್ಕಾಗಿ ಅವರು ಲೇಖನಿಯನ್ನು ಝಳಪಿಸಿದ್ದಾರೆ. ಮೌಖಿಕವಾಗಿ ಸಮರ ಸಾರಿದ್ದಾರೆ. ಸಹಜವಾಗಿಯೇ ಒಳ್ಳೆಯದಕ್ಕೆ ತುಡಿಯುವ, ಮೌಲ್ಯಾನುಸಂಧಾನಕ್ಕೆ ಯತ್ನಿಸುವ ವ್ಯಕ್ತಿತ್ವ ಅವರದು. ಸಮಾಜದಲ್ಲಿ ದೊಡ್ಡವರು, ಗಣ್ಯರು ಅಂತ ಅನ್ನಿಸಿಕೊಂಡವರ ಅಲ್ಪತನವನ್ನು ಕಂಡು ಮರುಗಿದ್ದಾರೆ. ಕೆಲವರ ಹೃದಯ ವೈಶಾಲ್ಯವನ್ನು ಕಂಡು ಸಂತೋಷಪಟ್ಟಿದ್ದಾರೆ. ಅದರಿಂದ ಪ್ರೇರಿತರೂ ಆಗಿದ್ದಾರೆ.

ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತಿಹೊಂದಿದ ಜೋಶಿವರು ಒಳ್ಳೆಯ ಅಧ್ಯಾಪಕರೆಂದು ಹೆಸರು ಪಡೆದವರು. ಹಳಗನ್ನಡ, ನಡುಗನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಸಮಕಾಲೀನ ಸಾಹಿತ್ಯಗಳನ್ನು ಜೋಶಿ ಓದಿಕೊಂಡವರು, ಅದರ ಪರಿಣಾಮ ಅವರ ಅಧ್ಯಾಪನಕ್ಕೆ ಒಂದು ಶಕ್ತಿಯನ್ನೂ, ಸೊಗಸನ್ನೂ ತಂದಿದೆ. ತಾವು ಬೋಧಿಸುವ ವಿಷಯದ ಮೇಲಿನ ಪ್ರಭುತ್ವ, ನಿರರ್ಗಳ ನಿರೂಪಣಾ ಸಾಮರ್ಥ್ಯ ಅವರನ್ನು ಒಬ್ಬ ಉತ್ತಮ ಅಧ್ಯಾಪಕರ ಪಂಕ್ತಿಗೆ ಸೇರಿಸಿದೆ.

ಜೋಶಿಯವರ ಅಭಿರುಚಿ, ಆಸಕ್ತಿಗಳಲ್ಲಿ ಅವರಿಗೆ ಅತ್ಯಂತ ಪ್ರಿಯವಾದುದು ವ್ಯಕ್ತಿಚಿತ್ರ ದಾಖಲಿಸುವುದು. ಯಕ್ಷಗಾನ ಕಲಾವಿದರು, ಸಂಘಟಕರು, ಸಾಧಕರು, ಕಲಾಪೋಷಕರು ಹೀಗೆ ನೂರಾರು ಜನರ ವ್ಯಕ್ತಿಚಿತ್ರ ಕಡೆದಿದ್ದಾರೆ ಅವರು. ಚಿಕ್ಕ ವಾಕ್ಯಗಳಲ್ಲಿ, ಕೆಲವೇ ಪದಗಳಲ್ಲಿ ವ್ಯಕ್ತಿಯೊಬ್ಬನ ವ್ಯಕ್ತಿತ್ವವವನ್ನು, ಸ್ವಭಾವವನ್ನು, ಗುಣವೈಶಿಷ್ಟ್ಯವನ್ನು ಕಣ್ಮುಂದೆ ನಿಲ್ಲಿಸುವುದು ಜೋಶಿಯವರ ವ್ಯಕ್ತಿಚಿತ್ರ ಹರೆಹದ ವೈಶಿಷ್ಟವಾಗಿದೆ. ಉತ್ತೇಕ್ಷೆ, ಅತಿರಂಜನೆ ಯಾವುದೂ ಇಲ್ಲದೇ ಇದ್ದುದನ್ನು ಇದ್ದಹಾಗೆಯೇ ಹೇಳುವುದು, ಅವರ ಒಡನಾಟದಲ್ಲಿ ತಮಗಾದ ಅನುಭವವನ್ನು ಹಂಚಿಕೊಳ್ಳುವುದು, ಅವರ ಸಾಧನೆಯ ಮೌಲ್ಯಮಾಪನ ಮಾಡುವುದು, ಯಾವ ಪೂರ್ವಾಗ್ರಹವೂ ಇಲ್ಲದೆ ಅವರ ಗುಣದೋಷಗಳನ್ನು ವಿಮರ್ಶಿಸುವುದು ಮುಂತಾದುವು ಅವರ ವ್ಯಕ್ತಿಚಿತ್ರಕ್ಕೆ ಜೀವಂತಿಕೆಯನ್ನೂ, ಅಧಿಕೃತತೆಯನ್ನೂ, ರಸಪೂರ್ಣತೆಯನ್ನೂ ತಂದುಕೊಟ್ಟಿದೆ. ಇದರ ಜತೆಗೆ ಅವರು ನೂರಾರು ಕಲಾವಿದರ ಬಗ್ಗೆ, ಸಾಧಕರ ಬಗ್ಗೆ ಭಾಷಣ ಮಾಡಿದ್ದಾರೆ; ಅಭಿನಂದನೆ ಸಲ್ಲಿಸಿದ್ದಾರೆ; ಲೇಖನ ಬರೆದಿದ್ದಾರೆ.

ಎಲ್ಲರನ್ನೂ, ಎಲ್ಲವನ್ನೂ ತಿಳಿದುಕೊಳ್ಳುವ ಜೋಶಿಯವರ ಕುತೂಹಲ ಎಂದೂ ತಣಿಯದ್ದು. ಅವರ ನೆನಪು ಚಿತ್ರಾತ್ಮಕವಾದುದು. ಪ್ರತಿಯೊಬ್ಬರ ಬಗ್ಗೆಯೂ, ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಸಮೃದ್ಧವಾದ ವಿವರ ತುಂಬಿಕೊಡಿರುತ್ತವೆ. ಒಮ್ಮೆ ನೋಡಿದ್ದನ್ನು ಅವರು ಎಂದೂ ಮರೆಯುವುದಿಲ್ಲ. ನೆನಪಿನ ಯಾವುದೋ ಮೂಲೆಯಲ್ಲಿ ಅವು ಶಾಶ್ವತ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಬೇಕೆಂದಾಗ ಬೆಳಕಿಗೆ ಬರುತ್ತವೆ. ಜೋಶಿಯವರ ಅಕಾಡೆಮಿಕ್ ಶಿಸ್ತು ಬಹಳ ಗಮನಾರ್ಹವಾದುದು. ಬಹುಶಃ ಯಕ್ಷಗಾನದ

ವಾಗರ್ಥ ಗೌರವ / 35