ವಿಷಯಕ್ಕೆ ಹೋಗು

ಶ್ರೀ ಬಸವಣ್ಣನವರ ದಿವ್ಯಜೀವನ

ವಿಕಿಸೋರ್ಸ್ದಿಂದ
ಶ್ರೀ ಬಸವಣ್ಣನವರ ದಿವ್ಯಜೀವನ (2011)
ಎಂ. ಎಸ್. ದೇಶಪಾಂಡೆ

ಬೆಳಗಾವಿ: ಅಕ್ಯಾಡೆಮಿ ಆಪ್ ಕಂಪ್ಯಾರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್. 

98418ಶ್ರೀ ಬಸವಣ್ಣನವರ ದಿವ್ಯಜೀವನ2011ಎಂ. ಎಸ್. ದೇಶಪಾಂಡೆ
15

ಪರಿವಿಡಿ

ಪ್ರಕಾಶಕರ ನಿವೇದನೆ (ದ್ವಿತೀಯ ಆವೃತ್ತಿ) ...........................
ಪ್ರಕಾಶಕರ ನಾಲ್ಕು ಮಾತು (ಪ್ರಥಮ ಆವೃತ್ತಿ) ...........................
ಮುನ್ನುಡಿ (ಬಿ.ಡಿ.ಜತ್ತಿ) ...........................
ಅರಿಕೆ (ಲೇಖಕರು) ........................... ೧೧
ಆಶೀರ್ವಚನಗಳು: (ಪೂಜ್ಯ ಸ್ವಾಮಿಗಳಿಂದ) ........................... ೧೪
ಶ್ರೀ ಬಸವಣ್ಣನವರ ದಿವ್ಯ ಜೀವನ
ಅಲೆ ೧: ಪೀಠಿಕೆ ...........................
ಅಲೆ ೨: ಜನನ-ಬಾಲ್ಯ ........................... ೧೨
ಅಲೆ ೩: ಸಂಗಮನಾಥನ ದೇವಸ್ಥಾನದಲ್ಲಿ ........................... ೨೮
ಅಲೆ ೪: ಬಿಜ್ಜಳರಾಜನ ಆಸ್ಥಾನದಲ್ಲಿ ........................... ೪೪
ಅಲೆ ೫: ಅನುಭವ ಮಂಟಪ ........................... ೬೩
ಅಲೆ ೬: ಭಕ್ತಿಯ ಬೆಳೆ ........................... ೯೦
ಅಲೆ ೭: ಬೋಧ ಸುಧೆ ........................... ೧೧೫
ಅಲೆ ೮: ಉಪಸಂಹಾರ ........................... ೧೩೩

ಶ್ರೀ ಬಸವಣ್ಣನವರ

ದಿವ್ಯಜೀವನ

(Saint Basaveshwara's Life Divine)



ರಚನೆ

ಮನೋಹರ ಶ್ರೀನಿವಾಸ ದೇಶಪಾಂಡೆ, ಎಂ.ಎ.

ಅಥಣಿ.


ಪ್ರಕಾಶಕರು


ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಆ್ಯಂಡ ರಿಲಿಜನ್ (ACPR)

ಶ್ರೀ ಗುರುದೇವ ರಾನಡೆ ಮಂದಿರ, ಹಿಂದವಾಡಿ, ಬೆಳಗಾವಿ.

॥ ಸಾ ವಿದ್ಯಾ ಯಾ ವಿಮುಕ್ತಯೇ ॥



ಶ್ರೀ ಬಸವಣ್ಣನವರ ದಿವ್ಯಜೀವನ

(Saint Basaveshwara's Life Divine)






:ರಚನೆ:

ಮನೋಹರ ಶ್ರೀನಿವಾಸ ದೇಶಪಾಂಡೆ, ಎಂ.ಎ.

ಅಥಣಿ



ಪ್ರಕಾಶಕರು:

ಅಕೆಡಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್

ಬೆಳಗಾವಿ

( ೨೦೧೧ )


ಶ್ರೀ ಬಸವಣ್ಣನವರ ದಿವ್ಯ ಜೀವನ
(Saint Basaveshwara's Life Divine)


ACPR, Belgaum


ದ್ವಿತೀಯ ಆವೃತ್ತಿ:


ಲೇಖಕರು:
ಮನೋಹರ ಶ್ರೀನಿವಾಸ ದೇಶಪಾಂಡೆ, ಎಂ.ಎ.
ಅಥಣಿ


ಪುಟಗಳು: ೧೭೫

ಬೆಲೆ: ರೂ. ೧೦೦/

ಪ್ರಕಾಶಕರು:

ಅಕೆಡಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್
ಗುರುದೇವ ರಾನಡೆ ಮಂದಿರ, ಹಿಂದವಾಡಿ, ಬೆಳಗಾವಿ,
ಫೋನ: ೦೮೩೧-೨೪೬೭೨೩೧


ಮುದ್ರಕರು:
ಸ್ವಸ್ತಿಕ ಪ್ರಿಂಟಿಂಗ್ ಪ್ರೆಸ್,
ಹಂಸ ಟಾಕೀಜ ರೋಡ, ಬೆಳಗಾವಿ







ಬಸವನ

ಭಕ್ತಿಯೇ ಭಕ್ತಿ

ಬಸವಣ್ಣನ

ಯುಕ್ತಿಯೇ ಯುಕ್ತಿ

(ಕರ್ಮಕೌಶಲ)

ಲೋಕದೊಳ್ !

-ಹರಿಹರ

ಪ್ರಕಾಶಕರ ನಿವೇದನೆ

(ದ್ವಿತೀಯ ಆವೃತ್ತಿ)

ಶ್ರೀ ಜಗಜ್ಯೋತಿ ಬಸವೇಶ್ವರರು, ಅನುಭಾವ ದಾರ್ಶನಿಕರು, ಕರ್ಮಸಿದ್ಧಾಂತದ ಹರಿಕಾರರು. ಮಾನವ ಜೀವನದಲ್ಲಿ ಸಮಾನತೆಯ ಸಂಕ್ರಾಂತಿ ಪುರುಷರು. ಶ್ರೀ ಬಸವಣ್ಣನವರು ಜೀವನದ ಎಲ್ಲಾ ಆಯಾಮಗಳಿಂದಲೂ ತಾವೇ ಒಂದು ಸಂಸ್ಥೆಯಾಗಿದ್ದವರು, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗಗಳಲ್ಲಿ ಸಂಪೂರ್ಣ ಸಮನ್ವಯವನ್ನು ಸಾಧಿಸಿ ಅದ್ಭುತ ಸಾಮಾಜಿಕ ಸಾಮರಸ್ಯವನ್ನು ಕಂಡುಕೊಂಡಂಥವರು. ಈ ಸನ್ನಿವೇಶದಲ್ಲಿ ಶ್ರೀ ಬಸವೇಶ್ವರರ ಪ್ರಸ್ತುತತೆ ಅತೀ ಅವಶ್ಯಕವೆನಿಸುತ್ತದೆ. ಹಾಗಾಗಿ "ಶ್ರೀ ಬಸವಣ್ಣನವರ ದಿವ್ಯ ಜೀವನ' ಗ್ರಂಥದ ಮರು ಪ್ರಕಟಣೆಯು ಈ ನಿಟ್ಟಿನಲ್ಲಿ ನಾವಿಡುವ ಒಂದು ಹೆಜ್ಜೆಯಷ್ಟೇ.

ಈ ಕೃತಿಯ ಲೇಖಕರು ದಿ|| ಶ್ರೀ ಮನೋಹರ ಶ್ರೀನಿವಾಸ ದೇಶಪಾಂಡೆಯವರು, ಪ್ರಾತಃಸ್ಮರಣೀಯ ಪೂಜ್ಯ ಗುರುದೇವ ಡಾ|| ಆರ್.ಡಿ. ರಾನಡೆಯವರ ಆಪ್ತ ಶಿಷ್ಯರಾಗಿದ್ದವರು. ದಿ|| ದೇಶಪಾಂಡೆಯವರು ಶ್ರೀ ಗುರುದೇವರ ಉತ್ತುಂಗ ಅನುಭಾವ ಹಾಗೂ ಪಾಂಡಿತ್ಯದ ವಿಶ್ವ ಮಾನ್ಯತೆಯನ್ನು ಹತ್ತಿರದಿಂದ ಕಂಡು ಅನುಭವಿಸಿದವರು, ಅಲ್ಲದೇ ಶ್ರೀ ಗುರುದೇವರ ಆದರ್ಶಕ್ಕೆ ತಕ್ಕಂತೆ ತಮ್ಮ ಜೀವನವನ್ನು ರೂಪಿಸಿಕೊಂಡು, ಅವರ ನಿರ್ದೇಶಕ ಸೂತ್ರದಂತೆ ಅನುಭಾವ ಸಾಹಿತ್ಯವನ್ನು ರಚಿಸಿದವರು.

ಶ್ರೀ ಗುರುದೇವರ ವಿಚಾರಧಾರೆಯು ಈ ಗ್ರಂಥದುದ್ದಕ್ಕೂ ಅನುಸ್ಯೂತವಾಗಿ ಕಾಣಸಿಗುತ್ತದೆ. ದಿವ್ಯತಮವಾದ ಅನುಭಾವದ ಭಕ್ತಿ ಸರ್ವಸಮಾನತೆಯ ಸಹಜೀವನ, ಅಂತರ್‌ ದೃಷ್ಟಿಯಿಂದ ಮಾಡಿದ ಸಮನ್ವಯ ಸೂತ್ರಗಳು ಶ್ರೀ ಬಸವೇಶ್ವರರ ಜೀವನದಲ್ಲಿ ಕಾಣಸಿಗುತ್ತವೆ. ಅವುಗಳನ್ನು ನಿಖರ ಅಭಿಪ್ರಾಯ ಹಾಗೂ ಆರ್ಷ ಸಾಹಿತ್ಯ ಮತ್ತು ಪಾಶ್ಚಾತ್ಯ ತತ್ವ-ಶಾಸ್ತ್ರಗಳ ಆಧಾರಗಳನ್ನು ನೀಡಿ ಶ್ರೀ ಗುರುದೇವರು ತೋರಿಸಿಕೊಟ್ಟ ರೀತಿಯಲ್ಲಿ ಪರಿಚಯಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

6

ಇಂಥ ಹೊತ್ತಿಗೆಯನ್ನು ಪುನಃ ಪ್ರಕಟಿಸುವಲ್ಲಿ ACPR (Academy of Comparative Philosophy and Religion, Belgaum) ಕೃತಕೃತ್ಯತೆಯನ್ನು ಭಾವಿಸುತ್ತದೆ. ಶ್ರೀ ಗುರುದೇವ ಡಾ|| ಆರ್.ಡಿ.ರಾನಡೆಯವರು ಸ್ವತಃ ಒಂದು ವಿಶ್ವವಿದ್ಯಾಲಯವೇ ಆಗಿದ್ದರು, ಅವರು ಅಲಂಕರಿಸಿದ ಅಲಹಾಬಾದ್ ವಿಶ್ವವಿದ್ಯಾಲಯದ "ಕುಲಪತಿ" ಪದವಿಯು ಅಕ್ಷರಶಃ ಅನ್ವರ್ಥಕವಾಗಿತ್ತು. ಅವರು ತತ್ವಶಾಸ್ತ್ರದ ಓಡಾಡುವ ವಿಶ್ವಕೋಶವೇ ಆಗಿದ್ದರು. ಅವರ ಎಲ್ಲಾ ಅಂಶಗಳ ವ್ಯಾವಹಾರಿಕ ರೂಪವೇ ಅವರು ಸಂಕಲ್ಪಿಸಿ ಸ್ಥಾಪಿಸಿದ ACPR ಸಂಸ್ಥೆ.

ಈ ಹೊತ್ತಿಗೆಯ ಪ್ರಕಟಣೆಗೆ ಪ್ರೇರಣೆ ಆದರಣೀಯ ಹಿರಿಯ ಲೇಖಕ ದಿ|| ಮ. ಶ್ರೀ ದೇಶಪಾಂಡೆಯವರ ಜೀರಂಜೀವಿ ಶ್ರೀ ಗೋವಿಂದ ಮ.ದೇಶಪಾಂಡೆ ಮಹನೀಯರು, ತಾವು ರಕ್ಷಿಸಿಕೊಂಡು ಬಂದ ಪ್ರಸ್ತುತ ಗ್ರಂಥದ ಪ್ರತಿಯನ್ನು ನೀಡಿ ಪ್ರಕಟಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಸಲ್ಲಿಸಿ ನಮಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಈ ಕಾರ್ಯ ಸಾಧ್ಯವಾಗುವುದು ಕಷ್ಟವೇ ಆಗಿತ್ತು. ಈ ಆವೃತ್ತಿಯಲ್ಲಿ ಮಾಡಬೇಕಾದ ಸೂಕ್ತ ಬದಲಾವಣೆಗಳನ್ನು ಸೂಚಿಸಿ ಕರಡು ಪ್ರತಿಯನ್ನು ಈ ಇಳಿ ವಯಸ್ಸಿನಲ್ಲಿ ತಿದ್ದುವ ಕ್ಷಮತೆ ತೋರಿದ್ದು ಶ್ರೀ ಗುರುದೇವರು ಹಾಗೂ ಶ್ರೀ ಬಸವಣ್ಣನವರ ಮೇಲಿನ ಅವಿಚ್ಛಿನ್ನ ಪ್ರೀತಿಯಿಂದ ಎಂಬುದನ್ನು ನೆನೆದು ನಮ್ಮ ಹೃದಯ ಆದರ ಭಾವದಿಂದ ತುಂಬಿ ಬರುತ್ತದೆ. ಅವರಿಗೆ ನಾವು ಚಿರಋಣಿ.

ಸಮನ್ವಯ ಸಿದ್ಧಾಂತವು ಕೇವಲ ಪಂಡಿತ ಚರ್ಚೆಯ ವಿಷಯವಾಗದೆ, ಅದು ಒಂದು ಸಾಮಾಜಿಕ ಬದ್ಧತೆಯ ಸೂತ್ರದಡಿಯಲ್ಲಿ ಸಾಧನಾರೂಪದಲ್ಲಿ ಬರಬೇಕೆಂಬ ಮಹಾಸಂಕಲ್ಪವನ್ನು ಶ್ರೀ ಗುರುದೇವರು ಹೊಂದಿದ್ದರು. “ದೇವರೊಬ್ಬ ಜಗವೆಲ್ಲ ಒಂದು, ಮಾನವೀಯತೆಯ ಧರ್ಮಒಂದೇ" ಎಂಬ ತತ್ವವನ್ನು ರೂಪಿಸಿ, ನಿರೂಪಿಸುವ ಸಂಸ್ಥೆ ACPR ೧೯೨೪ ರಲ್ಲಿ ಪುಣೆಯಲ್ಲಿ ಸ್ಥಾಪಿತವಾಗಿ, ೧೯೫೨ ರಲ್ಲಿ ಬೆಳಗಾವಿಯಲ್ಲಿ ಸ್ಥಾಯಿಯಾಗಿದೆ. ಈಗಿನ ಕೇಂದ್ರ ಕಟ್ಟಡವು ಅಂದಿನ ರಾಷ್ಟ್ರಪತಿ ಡಾ|| ಎಸ್. ರಾಧಾಕೃಷ್ಣನ್‌ರವರಿಂದ ೧೯೬೫ರಲ್ಲಿ ಉದ್ಘಾಟಿತವಾಯಿತು. ಸಂಸ್ಥೆಯು ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ.

7

೧) ವಿಶ್ವದ ಎಲ್ಲಾ ಧರ್ಮದರ್ಶನಗಳ ಅಧ್ಯಯನದಲ್ಲಿ ಸಮನ್ವಯ ಸಿದ್ಧಾಂತ ಪ್ರತಿಪಾದನೆ.

೨) ಧಾರ್ಮಿಕ- ದಾರ್ಶನಿಕಗಳನ್ನೊಳಗೊಂಡ ಗ್ರಂಥಗಳ ಪ್ರಕಟಣೆ.

೩) ವಿವಿಧ ಚಿಂತನೆಗಳ ಬಗೆಗೆ ಚರ್ಚೆ, ಸಮ್ಮೇಳನ, ಕಾರ್ಯಾಗಾರ ಹಾಗೂ ಉಪನ್ಯಾಸಗಳ ಆಯೋಜನೆ.

ಈ ಮೇಲಿನ ಎಲ್ಲಾ ಕಾರ್ಯಗಳನ್ನು ಅಧ್ಯಯನ ಪೀಠದ ಮಾದರಿಯಲ್ಲಿ ಕ್ರೋಢೀಕರಿಸಿ, ಸಾಧನೆ ಮತ್ತು ಶಿಕ್ಷಣಕ್ಕೆ ಅನುವು ಮಾಡಿ ಕೊಡುವುದು.

ಶ್ರೀ ಬಸವಣ್ಣನವರ ದಿವ್ಯ ಜೀವನದರ್ಶನವೇ ಸಮನ್ವಯ ಸಿದ್ಧಾಂತದ ಸಾರ, ಅಂಥ ಮಹನೀಯರ ದಿವ್ಯ ಜೀವನದರ್ಶನದ ಮರು ಪ್ರಕಟಣೆ ನಮ್ಮ ಭಾಗ್ಯ ಎಂದು ಭಾವಿಸಿದ್ದೇವೆ.

ಈ ಪ್ರಕಟಣೆಗೆ ಅನುಮತಿಯನ್ನು ನೀಡಿದ ಲೋಕಶಿಕ್ಷಣ ಟ್ರಸ್ಟನ ಆಡಳಿತ ವರ್ಗಕ್ಕೆ ಹಾಗೂ ಶ್ರೀ ಎ. ಸಿ. ಗೋಪಾಲರವರಿಗೆ ನಾವು ಕೃತಜ್ಞರಾಗಿದ್ದೇವೆ.

ಅಂದವಾಗಿ ಮುದ್ರಿಸಿಕೊಟ್ಟ ಸ್ವಸ್ತಿಕ್ ಪ್ರಿಂಟರ್ ಅವರಿಗೆ ಸಂಸ್ಥೆ ಅಭಾರಿಯಾಗಿದೆ.

ಇಂತು,

ಸಜ್ಜನವಿಧೇಯ
ಎಂ. ಬಿ. ಝಿರಲಿ
(ವಕೀಲರು)
ಗೌ. ಕಾರ್ಯದರ್ಶಿ
ACPR, ಹಿಂದವಾಡಿ, ಬೆಳಗಾವಿ

8

ಪ್ರಕಾಶಕರ ನಾಲ್ಕು ಮಾತು
(ಪ್ರಥಮ ಆವೃತ್ತಿ)

ಶ್ರೀ ಬಸವಣ್ಣನಂಥವರ ಜೀವನ ನಿತ್ಯ ಬೆಳಗುವ ಅಮರಜ್ಯೋತಿಯಂತೆ. ಅವರ ಸಂದೇಶ ಹಗಲಿರುಳು ಹೊಳೆಯುವ ಬೆಳಕಿನಂತೆ.

ಮನುಷ್ಯ ಮೈವೆತ್ತು ನಿಂತ ಚಿತ್‌ಶಕ್ತಿ, ದಿನರಾತ್ರಿ, ಬೆಳಕು ಕತ್ತಲೆ, ಸುಖದುಃಖ, ಶೀತ ಉಷ್ಣ ರಾಗದ್ವೇಷ, ಹುಟ್ಟು ಸಾವು ಎಂಬ ದ್ವಂದ್ವಗಳು ಅವನನ್ನು ಆವರಿಸಿಕೊಂಡಿರುವವು. ಅವುಗಳ ಬಾಧೆಯಿಂದಾಚೆಗೆ ಹೋಗಬೇಕೆಂಬುದೇ ಅವನ ಸತತ ಹವಣು-ಹಂಬಲ, ಅವುಗಳ ಆಚೆಗೆ ಹೋದವನೇ ದ್ವಂದ್ವಗಳನ್ನು ಗೆದೆಯಬಲ್ಲನು; ಗೆದ್ದು ಎರಡನ್ನೂ ಆಳಬಲ್ಲನು; ಸುಖದುಃಖಗಳೆರಡೂ ಆಟನೋಟಗಳೆಂದು ಎಣಿಸಿ ಆನಂದಿಸಬಲ್ಲನು. ಅವನೇ ಸಿದ್ದನು. ಅವನೇ ಆರೂಢನು. ಅವನೇ ಸಿದ್ಧಾರೂಢನು.

ಶ್ರೀ ಬಸವಣ್ಣನವರು ಅಂಥ ಜೀವಜ್ಯೋತಿಗಳಲ್ಲಿ ಒಬ್ಬರು. ತಾವು ಬರೀ ದೇಹ-ಜೀವ ಅಲ್ಲ. ತಾವು ದೇಹಧಾರಿಯಾಗಿದ್ದರೂ ಪರಾತ್ಪರ ಚಿತ್‌ಶಕ್ತಿಯ ಒಂದು ಕಣ. ಅದನ್ನರಿತು, ದೇಹ-ಜೀವಗಳನ್ನು ಮರೆತು, ಜ್ಞಾನ-ಭಕ್ತಿ-ಕ್ರಿಯೆ ಎಂಬ ಯೋಗತ್ರಯವನ್ನು ಸಾಧಿಸಿ, ಪರಶಿವಸಮಾಧಿ ಯನ್ನು ಗೈದು ಅಮರಪದವನ್ನು ಪಡೆದು ಮೃತ್ಯುಲೋಕದ ವ್ಯವಹಾರಿಕರಿಗೆ ದಾರಿತೋರಲು ಬಂದ ಕಾರಣಪುರುಷರವರು. ಅವರ ಸ್ಮರಣ ಪಾವಕ, ಅವರ ಜೀವನ ಸ್ಪೂರ್ತಿದಾಯಕ, ಅವರ ಉಪದೇಶ ಉದ್ಧಾರಕ.

ಶ್ರೀ ಬಸವಣ್ಣನವರ ಅಷ್ಟಶತಸಾಂವತ್ಸರಿಕ ಉತ್ಸವದ ಸಂದರ್ಭದಲ್ಲಿ ಅವರ ದಿವ್ಯಜೀವನದ ನೆನಪನ್ನು ಮಾಡಿಕೊಳ್ಳಬೇಕೆಂಬ ಸಂಕಲ್ಪದಿಂದ ಲೋಕ ಶಿಕ್ಷಣ ಮಾಲೆಯು ಈ ಚಿಕ್ಕ ಪುಸ್ತಕದ ಪ್ರಕಟನೆಯ ನಮ್ರ ಕಾರ್ಯವನ್ನು ಕೈಕೊಂಡಿತು. ಆಧ್ಯಾತ್ಮಿಕ ಗ್ರಂಥಲೇಖನ- ಪ್ರಕಟನೆಯ ಕೆಲಸದಲ್ಲಿ ಪಳಗಿದ ಕೈ, ಎಂದು ಪ್ರಸಿದ್ಧರಾದ ಅಥಣಿಯ ಶ್ರೀ ದೇಶಪಾಂಡೆ ಮನೋಹರರಾಯರು ಮಾಲೆಯ ಮಾತಿಗೆ ಮನ್ನಣೆ ಕೊಟ್ಟರು. ಅವರ ಸವಿಯಾದ ಫಲ ಈ ಪುಸ್ತಿಕೆ.


9

ಶ್ರೀ ಬಸವಣ್ಣನವರ ಅಮೋಘವಾದ ಜೀವನಚರಿತ್ರವನ್ನು ಪೂರ್ಣವಾಗಿ ಓದಬೇಕೆನ್ನುವವರ ಹಸಿವನ್ನು ಈ ಕಿರುಹೊತ್ತಿಗೆ ಪೂರೈಸಲಾರದೆಂಬುದು ಸ್ಪಷ್ಟ ಆದರೆ ಆ ಹಸಿವನ್ನು ಹುಟ್ಟಿಸಿ, ಕೆರಳಿಸುವ ಕಾರ್ಯವನ್ನು ಈ ಪುಸ್ತಿಕೆ ಮಾಡಬಲ್ಲದು ಎಂಬುದು ಅಷ್ಟೇ ಸ್ಪಷ್ಟ ಆ ಭರವಸೆಯಿಂದಲೇ ಲೋಕ ಶಿಕ್ಷಣ ಮಾಲೆ ಈ ಚಿಕ್ಕ ಪುಸ್ತಕವನ್ನು ಪ್ರಕಟಿಸುವ ಸಾಹಸವನ್ನು ಕೈಕೊಂಡಿದೆ. ಕನ್ನಡ ಓದುಗರು ಆ ವಿಶ್ವಾಸವನ್ನು ಸಫಲಗೊಳಿಸುವರೆಂಬ ಆಸೆ ನನಗೆ ತುಂಬಾ ಇದೆ.

ಈ ಕಾರ್ಯದಲ್ಲಿ ನೆರವಾದ ಲೇಖಕರಿಗಂತೂ ಸೈ. ಈ ಪುಸ್ತಕವನ್ನು ಪರಿಶೀಲಿಸಿ ಇದಕ್ಕೆ ಶೀಘ್ರವಾಗಿ ಗುಣಗ್ರಹಣಪೂರಿತವಾದ ಮುನ್ನುಡಿಯನ್ನು ಬರೆದುಕೊಟ್ಟ ನಿಷ್ಠಾವಂತ ಹಾಗೂ ಶ್ರೀ ಬಸವ ಸಮಿತಿಯ ಪ್ರಾಣಸ್ವರೂಪರಾದ ಶ್ರೀಮಾನ್ ಬಿ.ಡಿ. ಜತ್ತಿಯವರಿಗೆ ಕೃತಜ್ಞತಾಪೂರ್ವಕವಾದ ವಂದನೆಗಳನ್ನರ್ಪಿಸದೆ ಇರಲಾರೆ. ಉಳಿದ ಎಲ್ಲ ಬಗೆಯ ಸಹಾಯ-ಸಹಕಾರಗಳನ್ನು ನೀಡಿದವರಿಗೂ ನನ್ನ ಹೃತ್ಪೂರ್ವಕ ವಂದನೆಗಳು.


ಬೆಂಗಳೂರು
ರಂಗನಾಥ ದಿವಾಕರ
೧೫-೪-೬೬
ಲೋಕ ಶಿಕ್ಷಣ ಮಾಲೆ

10

ಮುನ್ನುಡಿ
(ಪ್ರಥಮ ಆವೃತ್ತಿ)

ಅಥಣಿಯ ಶ್ರೀ ಮ. ಶ್ರೀ ದೇಶಪಾಂಡೆಯವರ "ಶ್ರೀ ಬಸವಣ್ಣನವರ ದಿವ್ಯ ಜೀವನ" ಎಂಬ ಈ ಗ್ರಂಥಕ್ಕೆ ಮುನ್ನುಡಿಯ ರೂಪವಾಗಿ ಒಂದೆರಡು ಮಾತುಗಳನ್ನು ಬರೆಯಲು ನಾನು ಹರ್ಷಿಸುತ್ತೇನೆ. ಶ್ರೀ ದೇಶಪಾಂಡೆ ಯವರು ಶ್ರದ್ಧಾವಂತ ಹಾಗೂ ಆವೇಶಪೂರ್ಣ ಲೇಖಕರು. ಅವರು ಇಂಗ್ಲೀಷ್, ಕನ್ನಡ, ಮರಾಠಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಹಲವಾರು ಗ್ರಂಥಗಳನ್ನು ರಚಿಸಿ ಹೆಸರು ಪಡೆದಿದ್ದಾರೆ.

ಪ್ರಸಕ್ತ ಗ್ರಂಥದಲ್ಲಿ ಅವರು ಕನ್ನಡನಾಡಿನ ಕಣ್ಮಣಿಯೂ, ಭಾರತೀಯ ತತ್ವಸಿದ್ಧಾಂತದ ಪುರುಷಮಣಿಯೂ, ಜಗತ್ತಿನ ಜೀವನ ಸಿದ್ಧಾಂತದ ದಿನಮಣಿಯೂ ಆಗಿರುವ ಬಸವಣ್ಣನವರ ದಿವ್ಯ ಜೀವನದ ಪರಿಚಯವನ್ನು ಭಕ್ತಿ ಪರವಶತೆಯಿಂದ ಮಾಡಿಕೊಟ್ಟಿದ್ದಾರೆ. ಈ ಗ್ರಂಥವನ್ನು ಎಂಟು ಅಧ್ಯಾಯಗಳಾಗಿ ವಿಂಗಡಿಸಿ, ನಲವತ್ತು ಶಿರೋನಾಮಗಳಲ್ಲಿ ವಿಭಜಿಸಿ ಅವರು ಬಸವಣ್ಣನವರ ಉದಾತ್ತ ನಡೆನುಡಿಗಳನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಮಾನವನು ಅಶಾಶ್ವತವಾದ ಅನೇಕತೆಯಿಂದ ಶಾಶ್ವತವಾದ ಏಕತೆಯ ಕಡೆಗೆ, ಅಳಿಯುವ ಭೌತಿಕ ಸುಖದಿಂದ ಅಳಿಯದ ಆನಂದದ ಕಡೆಗೆ, ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನ ಕಡೆಗೆ ಸಾಗಿರುವನು. ನಿಧಾನವಾದರೂ ಸ್ಥಿರವಾದ, ಸೌಮ್ಯವಾದರೂ ಪರಿಣಾಮಕರವಾದ, ಇಡೀ ಲೋಕಕ್ಕೆ ಅಖಂಡ ಕಲ್ಯಾಣವನ್ನು ಉಂಟು ಮಾಡುವ ಹಾಗೂ ಜೀವಕೋಟಿಗೆ ಅಪಾರ ಸೌಭಾಗ್ಯವನ್ನು ನೀಡುವ - ದಿವ್ಯ ಭವ್ಯ "ವಿಕಾಸ" ಮಾರ್ಗದಲ್ಲಿ ಬಸವಣ್ಣನವರು ಅಡಿಯಿಟ್ಟರು. ತಮ್ಮ ಬುದ್ಧಿಬಲದಿಂದ ಪರಮಾತ್ಮನನ್ನು ಅರಿತು, ಭಾವಬಲದಿಂದ ಆತನನ್ನು ಒಲಿಸಿ, ತಪೋಬಲದಿಂದ ಆತನ ಕರುಣೆಯನ್ನು ಪಡೆದು, ಪ್ರಜ್ಞಾಬಲದಿಂದ ಆತನ ಇರವನ್ನು ಸಾಕ್ಷಾತ್ಕರಿಸಿ, ತಾವು ಉದ್ಧಾರವಾಗುವುದಲ್ಲದೇ ಜಗತ್ತನ್ನು ಉದ್ಧರಿಸಲು ಸಾಹಸ ಮಾಡಿದ ಜಗತ್ತಿನ ಕಾರಣಪುರುಷರಲ್ಲಿ ಬಸವಣ್ಣನವರು

11

ಒಬ್ಬರು. ಶ್ರೀ ದೇಶಪಾಂಡೆಯವರು ಈ ಗ್ರಂಥದಲ್ಲಿ ಅವರ ದಿವ್ಯಜೀವನವನ್ನು ವೈವಿಧ್ಯತೆಯಿಂದ ರೂಪಿಸಿದ್ದಾರೆ.

ಮಹಾ ಕಾರಣಿಕರಾದ ಬಸವಣ್ಣನವರು ತಮ್ಮ ಭಕ್ತಿಯ ಭಂಡಾರ ವನ್ನು ಹೇಗೆ ಗಳಿಸಿ ಬೆಳೆಸಿದರು, ಅದರ ಫಲವಾಗಿ ಅವರು ಪರಮಾತ್ಮನ ಅನುಭಾವವನ್ನು ಹೇಗೆ ಪಡೆದರು, ಅದರ ಬಲದಿಂದ ಪರಮಾನಂದವನ್ನು ಹೇಗೆ ಸವಿದರು, ತಾವು ಸವಿದ ಆ ಪರಮಾನಂದವನ್ನು ಜಗತ್ತಿಗೆ ಸಾರಿ ಅದನ್ನು ಅನುಕಂಪೆಯಿಂದ ಜನತೆಗೆ ಹೇಗೆ ಹಂಚಿಕೊಟ್ಟರು, ಎಂಬುದನ್ನು ದೇಶಪಾಂಡೆಯವರು ಈ ಗ್ರಂಥದಲ್ಲಿ ಕಣ್ಣೆದುರು ಒಂದು ಚಿತ್ರ ಕಟ್ಟುವಂತೆ ವರ್ಣಿಸಿದ್ದಾರೆ. ಬಸವಣ್ಣನವರು ಸಾಧಕರಾಗಿದ್ದಾಗ ಅವರ ಅಂತರಂಗದಲ್ಲಿ ಉದಿಸಿದ ಭಾವಲಹರಿಗಳನ್ನೂ ಅನುಭಾವಿಗಳಾದಾಗ ಅವರ ಪಡೆದ ಆನಂದ ತೃಪ್ತಿಗಳನ್ನೂ ಅವರು ತಮ್ಮ ಅಮೃತವಚನಗಳಲ್ಲಿ ಹೇಗೆ ಎರಕ ಹೊಯ್ದಿದ್ದಾರೆ ಎಂಬುದನ್ನೂ ಇಲ್ಲಿ ನೋಡಬಹುದು. ಮುಂದೆ ಬಸವಣ್ಣನವರು ಪರಮಾತ್ಮನ ಆಣತಿಯ ಮೇರೆಗೆ ಭಕ್ತವೃಂದಕ್ಕೆ ಬೋಧೆ ಮಾಡಿ ಅವರನ್ನು ಹೇಗೆ ಉದ್ದರಿಸಿದರೆಂಬುದನ್ನೂ ಅವರ ಪ್ರತ್ಯಕ್ಷ ವಚನಗಳ ಉದಾಹರಣೆಯಿಂದ ಅವರದೇ ಆದ ಆವೇಶಪೂರ್ಣ ಶೈಲಿಯಲ್ಲಿ ದೇಶಪಾಂಡೆಯವರು ವಿವರಿಸಿದ್ದಾರೆ. ಹರಿಹರ ಮಹಾಕವಿಯ 'ಬಸವರಾಜದೇವರ ರಗಳೆ'ಯ ಚಾರಿತ್ರಿಕ ಹಿನ್ನಲೆಯ ಮೇಲೆ, ಬಸವಣ್ಣನವರ ಅಂತರಂಗ ನಿರೂಪಕ ವಚನಗಳ ಮೇಳದಿಂದ ಬಸವಣ್ಣನವರನ್ನು ಕುರಿತು ಪುರಾಣ ಹಾಗೂ ಐತಿಹ್ಯಕಥನಗಳ ನೆರವಿನಿಂದ ಕವಿಸಹಜವಾದ ಭಾವಪೂರ್ಣ ಕಲ್ಪನಾಸೂತ್ರದಿಂದ ಹೆಣೆದು ಶ್ರೀ ದೇಶಪಾಂಡೆಯವರು ಈ ಕೃತಿಯನ್ನು ರೂಪಿಸಿದ್ದಾರೆ.

ಈ ಗ್ರಂಥರಚನೆಯಲ್ಲಿ ಶ್ರೀ ದೇಶಪಾಂಡೆಯವರ ಶ್ರಮ ಸಾರ್ಥಕವಾಗಿದೆಯೆಂದು ಹೇಳಲು ಸಂಶಯವಿಲ್ಲ, ಬಸವಣ್ಣನವರಂಥ ಅನುಭಾವಿಗಳ (ಮಿಸ್ಟಿಕ್) ಜೀವನಚರಿತ್ರೆಗಳನ್ನು ಚಿತ್ರಿಸುವುದು ಎಷ್ಟೊಂದು ಕಷ್ಟವೆಂಬುದನ್ನು ಅರಿತರೆ ಶ್ರೀ ದೇಶಪಾಂಡೆಯವರು ಈ ಕೆಲಸವನ್ನು ಸಾಮರ್ಥ್ಯದಿಂದ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಈ ಪ್ರಯತ್ನವು ಶ್ಲಾಘನೀಯವಾಗಿದೆ.

-ಬಿ.ಡಿ. ಜತ್ತಿ

ಈ ಚರಿತ್ರಗ್ರಂಥವು ಸಂಶೋಧನಾತ್ಮಕ ಕೃತಿಯಲ್ಲ. ಇದು ಒಂದು ರಚನಾತ್ಮಕ ಕಲಾಕೃತಿ, ಹಿಂದಿನ ಮತ್ತು ಇಂದಿನ ಪಂಡಿತ ಸಂಶೋಧಕರು ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ಕೆಲ ಪ್ರಧಾನ ಅಂಶಗಳನ್ನು ಕಂಡು ಹಿಡಿದಿರುವರು. ಇನ್ನೂ ಹೊಸ ಸಂಶೋಧನೆ ನಡೆದೇ ಇರುವದು ಸ್ವಾಬಾವಿಕ. ಈಗಾಗಲೇ ಹಸ್ತಗತವಾಗಿರುವ ಅಂಶಗಳ ಮೂಲಕ ನಿರ್ಮಿಸಲಾದ ರೂಪರೇಷೆಯಲ್ಲಿ ಕಲ್ಪನೆಯ ಕೊಂಚ ಬಣ್ಣವನ್ನು ಬೆರೆಸಿ, ಇಲ್ಲಿ ಬಸವಣ್ಣನವರ ಶ್ರೀಮೂರ್ತಿಯ ಸಚೇತನ ಚಿತ್ರವನ್ನು ಬರೆಯಲು ಯತ್ನಿಸಲಾಗಿದೆ. ಫ್ರೆಂಚ್ ಭಾಷೆಯಲ್ಲಿ ಆಂದ್ರೆ ಮೋರ್‌ವಾ ಎಂಬ ಹಿರಿಯ ಲೇಖಕರು 'ಏರಿಯಲ್' ಎಂಬ ಹೆಸರಿನ, ಚಾರಿತ್ರಿಕ ಸನ್ನಿವೇಶಗಳನ್ನು ಆಧರಿಸಿದ, ಈ ಬಗೆಯ ಕಲ್ಪನಾ ಚರಿತ್ರವನ್ನು ಬರೆದಿರುವರು. ಅದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತುಂಬ ಲೋಕಪ್ರಿಯವಾಗಿರುವುದು. ನಮ್ಮ ಪ್ರಸ್ತುತ ಗ್ರಂಥದಲ್ಲಿ ಅದರಲ್ಲಿಯ ಕೆಲ ಪ್ರಧಾನ ಅಂಶಗಳನ್ನು ಅನುಕರಿಸಲು ಯತ್ನಿಸಲಾಗಿದೆ. ಅದನ್ನು ಪೂರ್ತಿಯಾಗಿ ಅನುಕರಿಸುವದು ಸರಿದೋರಲಿಲ್ಲ. ಕಾರಣಾಂತರಗಳ ಮೂಲಕ ಅದು ಸಾಧ್ಯವೂ ಆಗಲಿಲ್ಲ. ನಮ್ಮ ಯತ್ನವು ಅದೆಷ್ಟು ಯಶಸ್ಸನ್ನು ಪಡೆದಿದೆ ಎಂಬುದನ್ನು ಸಹೃದಯರಾದ ಜಾಣರಾದ ವಿಮರ್ಶಕರು ನಮಗೆ ಅರುಹಬೇಕಾಗಿ ಬಿನ್ನಹ. ಅವರು ಇದರ ಗುಣದೋಷಗಳನ್ನು ತಿಳಿಸಿದರೆ, ಮುಂದೆ ದೋಷಗಳನ್ನು ಅಳಿಸಿ ಗುಣಗಳನ್ನು ಬೆಳೆಸಲು ನಮಗೆ ಅನುಕೂಲವಾಗುವದು.

ಬಸವಣ್ಣನವರ ಜೀವನರತ್ನಾಕರವನ್ನು ಹಿರಿಯ ಸಂಶೋಧಕರು ಈಗ ಆಗಲೇ ಕಡೆದಿರುವರು, ಕೆಲ ಬೆಲೆಯುಳ್ಳ ರತ್ನಗಳನ್ನು ಪಡೆದಿರುವರು. ನನ್ನ ಒಲವಿನ ಕಲ್ಪನೆಯ ಚಿನ್ನತ ಎಳೆಯಲ್ಲಿ ಅವನ್ನೆಯೇ ಪವಣಿಸಿ, ಈ ರತ್ನಮಾಲೆಯನ್ನು ಕೋದಿರುವೆ. ಅದನ್ನು ಬಸವಣ್ಣನವರ ಸಿರಿಗೊರಳಲ್ಲಿ ಭಕ್ತಿಭಾವದಿಂದ ಇರಿಸಬಯಸುವೆ. ಅವರು ಅದನ್ನು ಪ್ರೀತಿಯಿಂದ ಧರಿಸುವರೆಂದು ಭಾವಿಸುವೆ. ಇದೊಂದು ಬಸವಣ್ಣನವರ ಪಾವನಸ್ಮೃತಿಗೆ ಸಲ್ಲಿಸಿದ ನನ್ನ ಅಳಿಲಸೇವೆ. ಬಲ್ಲ ಹರಿಯರೂ ಬಸವಣ್ಣನವರ ಭಕ್ತರೂ ಇದನ್ನು ಮನ್ನಿಸಬೇಕಾಗಿ ಬಿನ್ನಹ.

ಈ 'ದಿವ್ಯಜೀವನ'ದಲ್ಲಿ ಎಂಟು 'ಅಲೆ'ಗಳಿರುವವು. ಅವುಗಳಲ್ಲಿ ಬಸವಣ್ಣನವರ ದಿವ್ಯ ಬಹಿರಂಗ-ಅಂತರಂಗ ಜೀವನದಲ್ಲಿಯ ಹಾಗೂ ಭವ್ಯ ಬೋಧೆಯಲ್ಲಿಯ ಬಗೆಬಗೆಯ ಉಜ್ವಲ ರತ್ನಗಳನ್ನು ಇರಿಸಲಾಗಿದೆ. ಅವುಗಳನ್ನು ಬಳಸಿ, ತಮ್ಮ ಬಾಳನ್ನು ಉಜ್ವಲಗೊಳಿಸಿ, ಬಸವಣ್ಣನವರ ಭಕ್ತರು ತಮ್ಮ ಬೆಳಕಿನ ಬಾಳಿನಿಂದ ಬಸವಣ್ಣನವರ ಪ್ರಭಾವವನ್ನು ಪ್ರಪಂಚದಲ್ಲಿ ಬೀರಬೇಕೆಂದು ಬಯಸಿ ಈ 'ದಿವ್ಯ ಜೀವನ'ವನ್ನು ಆದರ್ಶಪ್ರಿಯ ಕನ್ನಡಿಗರಿಗೆ ಸಲ್ಲಿಸಿರುವೆ. ಬಸವಣ್ಣನವರು ಅವರಿಗೆ ಸಾಕಷ್ಟು ಬೆಳಕನ್ನೂ ಬಲವನ್ನೂ ದಯಪಾಲಿಸಲಿ! ಇದೇ ಭಗವಂತನ ಅಡಿದಾವರೆಗಳಲ್ಲಿ ಪ್ರಾರ್ಥನೆ.

ನನ್ನ ಸನ್ಮಾನ್ಯ ಹಿರಿಯ ಸ್ನೇಹಿತರಾದ ಡಾ. ದಿವಾಕರ ರಂಗರಾಯರು ನನ್ನಿಂದ ಈ ಗ್ರಂಥವನ್ನು ಬರೆಯಿಸಿದರು. ಅದಕ್ಕೆ ಅಂದವಾದ 'ಮುನ್ನುಡಿ' ಯನ್ನು ಬರೆಯಿಸಿ, ತಮ್ಮ ಲೋಕ ಶಿಕ್ಷಣ ಮಾಲೆ' ಯಲ್ಲಿ ಪ್ರಕಟಿಸಿದರು. ಅದಕ್ಕಾಗಿ ಅವರಿಗೆ ನನ್ನ ಹಾರ್ದಿಕ ಧನ್ಯವಾದಗಳು. ನನ್ನ ಆಪ್ತಸ್ನೇಹಿತರಾದ ಶ್ರೀ ಸಂಗೋರಾಮ ಕೃಷ್ಣರಾಯರು ಈ ಗ್ರಂಥವನ್ನು ಓದಿಸಿಕೊಂಡು ಕೆಲ ಸಲಹೆಗಳನ್ನಿತ್ತರು. ತಮ್ಮ ಕೆಲ ಗ್ರಂಥಗಳನ್ನು ಕೊಟ್ಟರು. ನನ್ನ ತರುಣ ಸ್ನೇಹಿತರಾದ ಶ್ರೀ ವಾಯಿಕರ ದತ್ತರಾಯರು ಕೊನೆಯ ಮೂರು 'ಅಲೆ'ಗಳ ಶುದ್ದ ಪ್ರತಿಯನ್ನು ಮಾಡಿಕೊಟ್ಟರು. ಅದಕ್ಕಾಗಿ ಈ ಉಭಯತರಿಗೆ ನನ್ನ ವಂದನೆಗಳು, ಅದೇ ಮೇರೆಗೆ ಇದನ್ನು ಅಂದವಾಗಿ ಮುದ್ರಿಸಿದ್ದಕ್ಕಾಗಿ ಬೆಂಗಳೂರು ಸಂಯುಕ್ತ ಕರ್ನಾಟಕ ಮುದ್ರಣ ವಿಭಾಗದ ಮುಖ್ಯಸ್ಥರಿಗೆ ನಾನು ವಂದಿಸದಿರಲಾರೆ.

ಅಥಣಿ

ತಮ್ಮ

ಅಕ್ಷಯತೃತೀಯಾ
ಮ.ಶ್ರೀ.ದೇಶಪಾಂಡೆ

ಶಕೆ ೧೮೮೮

15

ಪರಿವಿಡಿ

ಪ್ರಕಾಶಕರ ನಿವೇದನೆ (ದ್ವಿತೀಯ ಆವೃತ್ತಿ) ...........................
ಪ್ರಕಾಶಕರ ನಾಲ್ಕು ಮಾತು (ಪ್ರಥಮ ಆವೃತ್ತಿ) ...........................
ಮುನ್ನುಡಿ (ಬಿ.ಡಿ.ಜತ್ತಿ) ...........................
ಅರಿಕೆ (ಲೇಖಕರು) ........................... ೧೧
ಆಶೀರ್ವಚನಗಳು: (ಪೂಜ್ಯ ಸ್ವಾಮಿಗಳಿಂದ) ........................... ೧೪
ಶ್ರೀ ಬಸವಣ್ಣನವರ ದಿವ್ಯ ಜೀವನ
ಅಲೆ ೧: ಪೀಠಿಕೆ ...........................
ಅಲೆ ೨: ಜನನ-ಬಾಲ್ಯ ........................... ೧೨
ಅಲೆ ೩: ಸಂಗಮನಾಥನ ದೇವಸ್ಥಾನದಲ್ಲಿ ........................... ೨೮
ಅಲೆ ೪: ಬಿಜ್ಜಳರಾಜನ ಆಸ್ಥಾನದಲ್ಲಿ ........................... ೪೪
ಅಲೆ ೫: ಅನುಭವ ಮಂಟಪ ........................... ೬೩
ಅಲೆ ೬: ಭಕ್ತಿಯ ಬೆಳೆ ........................... ೯೦
ಅಲೆ ೭: ಬೋಧ ಸುಧೆ ........................... ೧೧೫
ಅಲೆ ೮: ಉಪಸಂಹಾರ ........................... ೧೩೩

16

ಆಶೀರ್ವಚನಗಳು

ಶ್ರೀಮನ್ನಹಾರಾಜ ನಿರಂಜನ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು, ಮೂರುಸಾವಿರ ಮಠ, ಹುಬ್ಬಳ್ಳಿ-

ಆಶೀರ್ವಜನ

ವಿಶ್ವೇಶ್ವರನ ಕೃತಿಯ ವಿಶ್ವ-ರಥ-ಗತಿ ಪಡೆದು,
ವಿಶ್ವಸ್ತ ಕಲ್ಯಾಣ- ಕ್ರಾಂತಿಯಲಿ ಮುನ್ನಡೆದು,
ಕಾಯಕವೇ ಕೈಲಾಸವೆಂಬ ರವಿ ಬಳಿವಿಡಿದು,
ಭಕ್ತಿ-ಚಂದ್ರಿಕೆ ಬೆಳಗಿ, ಮಿಗೆ ಹಗಲಿರುಳು ದುಡಿದು,

ನುಡಿದರೋ, ಮುತ್ತುಗಳ ಹಾರದಂತಿರಬೇಕು ;
ಭಾವಾರ್ಥ : ಮಾಣಿಕದ ದೀಪ್ತಿಯಂತರಿಬೇಕು ;
ಸೂಚನೆಯು : ಸ್ಪಟಿಕದ ಶಲಾಕೆಯಂತಿರಬೇಕು ;
ನುಡಿದಂತೆ ನಿಜವಾದ ನಡೆ-ನಡೆಯುತಿರಬೇಕು.

ಕಳಬೇಡ; ಕೊಲಬೇಡ ; ಹುಸಿಯ ನುಡಿಯಲು ಬೇಡ ;
ತನ್ನ ಬಣ್ಣಿಸಬೇಡ; ಇದಿರು ಹಳಿಯಲೆ ಬೇಡ ;
ಸಿರಿಯಂಬುದೊಂದು ಸಂತೆಯ ಮಂದಿ-ತಡೆ ಬೇಡ ;
ಇದ ನೆಚ್ಚಿ ಕೆಡಬೇಡ : ಮರುಹಿಗೆಡೆಗೊಡಬೇಡ.

ಇತ್ಯಾದಿ ಪರಮಾರ್ಥ ಸಂದೇಶವೀಯುತ್ತ
ಕಾಯದಿಂ ಕಾಯಕದ ಕೈಪಿಡಿಯ ನೀಡುತ್ತ
ವಚನದಿಂ ಶಿವಶರಣತತ್ತ್ವವನು ಬೀರುತ್ತ
ಮನದಿಂದ ಭಕ್ತರನು ತಿದ್ದಿ ಚೇತರಿಸುತ್ತ

ಲೌಕಿಕದ ಜೊತೆಗೆ ಪರಮಾರ್ಥವನು ಸಂಗೊಳಿಸಿ,
ಸಕಲ ಜೀವಾತ್ಮರಿಗೆ ಲೇಸನೇ ಬಯಸಿರುವ -
'ಹಿರಿಯ ಮಾನವ' ಶರಣ ಕಾರಣಿಕ ಜಗದಣ್ಣ
ಬಸವಣ್ಣನವರ ಜೀವನ : ದಿವ್ಯಜೀವನವು.

17

“ಬುದ್ಧಿ ಬಲದಿಂದವರು ಭಗವಂತನನ್ನರಿತು,
ಭಾವಬಲದಿಂದಾತನನ್ನವರು ಒಲಿಸಿದರು ;
ತಪದ ಬಲದಿಂದ, ಜಪ-ಧ್ಯಾನಾದಿ-ಸಾಧನದ
ಬಲದಿಂದ, ಆತನ ಕರುಣವನ್ನು ಪಡೆದಿಹರು.

ಜಾಗ್ರತಾಂತಃಪ್ರಜ್ಞೆಯ ಬಲದಿಂದಾತನನು
ಸಾಕ್ಷಾತ್ಕರಿಸಿಕೊಂಡು, ಆ ಭವ್ಯರೂಪವನು
ಕಂಡು, ದಿವ್ಯಾನಂದ-ತಲ್ಲೀನರಾಗಿದ್ದು,
ಜಗಕೆಲ್ಲ ದಿವ್ಯ ಜೀವನವನ್ನು ತೋರಿದರು'.

ಇಂತೆಂದು - ಕನ್ನಡದ ಕನ್ನಡಿಗೆ - ಕಾಣಿಸಿದ
ದೇಶ್ಪಾಂಡೆ ಎಂಬವರ ಈ ಕೃತಿಯು ಸತ್ಕ್ರತಿಯು,
ಇನ್ನುಳಿದ ಶರಣಗಣ-ಜೀವನದ ಪರಿಚಯವು
ಹಲಕೆಲವು ಭಾಷೆಗಳಲೂ ಬರಲಿ, - ಪ್ರತಿಕೃತಿಯು.

ಲೋಕಕ್ಕೆ ಶಿಕ್ಷಣವ ಕೊಡಲೆಳಸಿ, ವಿಧಿಯಿಂದ,
"ಲೋಕ-ಶಿಕ್ಷಣ-ಮಾಲೆ" ಯೆಂಬ ಭೂಷಣದಿಂದ
ಶರಣಸಾಹಿತ್ಯವನು ಸಿಂಗರಿಸಿ, ಪೂಜಿಸುವ
ಶ್ರೀಮಾನ್‌ ದಿವಾಕರರು ಧನ್ಯವಾದಾರ್ಹರು.

ಬಸವಣ್ಣನವರ ಈ 'ದಿವ್ಯ ಜೀವನ'ವನ್ನು
ಕಾಣಿಸಿದ ಮೇಣ್ ಮುದ್ರಿಸಿದವರೀರ್ವರನು ಸಹ
ಆಯುರಾರೋಗ್ಯಸುಖಸಂಪತ್ತುಗಳನಿತ್ತು
ಗುರುಸಿದ್ದ ಕಾಪಾಡುತಿರಲೆಂದು ಹರಸುವೆವು.

ಸತ್ಯಂ ಶಿವಂ ಸುಂದರಂ

18

!!ಓಂ ನಮಃ ಶಿವಾಯ!!

ಜಗದ್ಗುರು ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮಿಗಳು ರಾಮಾಜುನ ರಸ್ತೆ
ಶ್ರೀ ವೀರಸಿಂಹಾಸನ ಮಠ ಮೈಸೂರು
ಸುತ್ತೂರು ಸಂಸ್ಥಾನಂ ..........................

ಶ್ರೀ ಬಸವಣ್ಣನವರ ಅಂತರಂಗದ ಹಿರಿಮೆ ಮತ್ತು ಅವರ ಅನುಭಾವದ ಪ್ರಭಾವವನ್ನು ಮೂಡಿಸಲು ಪ್ರಯತ್ನಿಸಿರುವ ಈ ಗ್ರಂಥವನ್ನು ಅವಲೋಕಿಸಿ ಆನಂದಪಟ್ಟಿದ್ದೇವೆ. ಜೀವನದ ಶಾಶ್ವತವಾದ ಸತ್ಯಗಳನ್ನು ವಿಮರ್ಶಾತ್ಮಕವಾಗಿ ವಿವೇಚಿಸಿ ಆಧುನಿಕ ಜೀವನಕ್ಕೆ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಯುಗದಲ್ಲಿ ಬಸವಣ್ಣನವರ ಆದರ್ಶ ಮತ್ತು ಸಾಧನೆಗಳು ಮಾರ್ಗದರ್ಶಕ ಶಕ್ತಿಗಳಾಗಿ ಪರಿಣಮಿಸಬಲ್ಲವು. ಅವರು ಬೋಧಿಸಿದ ಕಾಯಕನಿಷ್ಠೆ, ಸರ್ವಸಮತಾಭಾವ, ಅಂತರಂಗಶುದ್ಧಿ ಬಹಿರಂಗಶುದ್ಧಿ ಮೊದಲಾದ ಮಾನವ ಧರ್ಮದ ಮೌಲ್ಯಗಳು ಶಾಶ್ವತವಾದುವು. ಅವರ ಮಾತು ಮಾಣಿಕ್ಯದ ದೀಪ್ತಿಯಂತಹದು, ಅವರ ಕೃತಿ ಶಿವಕಾರುಣ್ಯದ ಒಲುಮೆಗೆ ಕಾರಣವಾದುದು. ನುಡಿದಂತೆ ನಡೆದು ತೋರಿಸಿದ ಅವರ ಸಾಧನೆ ಮಾನವತೆಯ ಮುಂದೆ ಎಂದೆಂದೂ ನಿಲ್ಲಬಹುದಾದ ಉಜ್ವಲವಾದ ಆದರ್ಶವಾಗಿದೆ. ಆದುದರಿಂದ ಇಂದಿನ ವಿಚಾರವಂತ ಜಗತ್ತು ಅತ್ತ ದೃಷ್ಟಿಯನ್ನು ತಿರುಗಿಸುತ್ತಿರುವುದು ಸಹಜವ ಆಗಿಯೇ ಇದೆ ; ಮತ್ತು ಅದು ಅವಶ್ಯಕವೂ ಹೌದು. ಆ ಮಾರ್ಗದಲ್ಲಿ ಶ್ರೀ ಮನೋಹರ ದೇಶಪಾಂಡೆಯವರ 'ಶ್ರೀ ಬಸವಣ್ಣನವರ ದಿವ್ಯಜೀವನ' ಎಂಬ ಈ ಗ್ರಂಥ ಒಂದು ಸ್ತುತ್ಯ ಪ್ರಯತ್ನವಾಗಿದೆ. ಇದನ್ನು ಹೊರತರುತ್ತಿರುವ ಲೋಕ ಶಿಕ್ಷಣ ಮಾಲೆಯ ಸಂಚಾಲಕರು ಅಭಿನಂದನೀಯರು. ಶ್ರೀ ಬಸವಣ್ಣನವರ ಜೀವನಚರಿತ್ರೆ, ಅವರ ಭಕ್ತಿಸಾಧನೆ, ಅವರ ಬೋಧನೆ ಮತ್ತು ಕಾರ್ಯನಿರ್ವಹಣೆ ಈ ಎಲ್ಲ ಅಂಶಗಳನ್ನು ಆಧಾರಸಹಿತವಾಗಿ ಪರಿಣಾಮಕಾರಿಯಾಗಿ ಲೇಖಕರು ಹೇಳಿದ್ದಾರೆ. ಅವರ ವಚನಗಳೊಡನೆ ಹರಿಹರನ ಬಸವರಾಜದೇವರ ರಗಳೆಯನ್ನೂ ಅಲ್ಲಲ್ಲಿ ಬಳಸಿಕೊಂಡಿರುವುದು ಸೂಕ್ತವಾಗಿದೆ. ಒಟ್ಟಿನಲ್ಲಿ ಬಹುಮುಖ ಪ್ರತಿಭೆಯುಳ್ಳ ಯುಗಪ್ರವರ್ತಕ ಶಕ್ತಿಯಾದ ಶ್ರೀ ಬಸವಣ್ಣನವರ ವ್ಯಕ್ತಿತ್ವವನ್ನು ಸಾಮಾನ್ಯರಿಗೂ ತಿಳಿಯುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯ

19

ಮಾಡಿಕೊಡುವ ಪ್ರಯತ್ನ ಸಾರ್ಥಕವಾಗಿದೆ ಎಂದು ಸಂತೋಷದಿಂದ ಹೇಳಬಯಸುತ್ತೇವೆ. ಅನೇಕ ಕೃತಿಗಳನ್ನು ಕನ್ನಡ ಲೋಕಕ್ಕೆ ಕೊಟ್ಟಿರುವ ಶ್ರೀ ದೇಶಪಾಂಡೆಯವರ ಸಾರಸ್ವತ ತಪಸ್ಸು ಇತೋಪ್ಶತಿಶಯವಾಗಿ ವರ್ಧಿಸಲೆಂದೂ, ಲೋಕ ಶಿಕ್ಷಣ ಮಾಲೆ ಇಂತಹ ಅನೇಕ ಗ್ರಂಥಗಳನ್ನು ಪ್ರಕಟಿಸಿ ಲೋಕಶಿಕ್ಷಣಕ್ಕೆ ನೆರವಾಗಲೆಂದೂ ಹಾರೈಸುತ್ತೇನೆ.

ಇತ್ಯಾಶಿಷಃ

20

॥ಶಿವಯೋಗೀಶ್ವರಾಯ ನಮಃ॥

ಶ್ರೀ ನಿ.ಪ್ರ.ಸ್ವ.
ಮೃತ್ಯುಂಜಯನಗರ
ಮೃತ್ಯುಂಜಯ ಮಹಾಸ್ವಾಮಿಗಳು
ಧಾರವಾಡ
ಶ್ರೀ ಮುರುಘಾಮಠ
೧೬-೬-೧೯೬೬

ಮಹಾನುಭಾವ ಶ್ರೀ ಬಸವಣ್ಣನವರು ಮಾನವತೆಯ ಕಲ್ಯಾಣಕ್ಕಾಗಿ ಹೆಣಗಿದ ಮಹಾಶರಣರು. ಸಮತಾವಾದವನ್ನು ಒತ್ತಿ ಹಿಡಿದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸುಖ ದೊರೆಯಲೆಂದು ಹೆಣಗಿದ ಸತ್ಯವಾದಿಗಳು. ಅವರ ವ್ಯಕ್ತಿತ್ವ ಬಹುಮುಖವುಳ್ಳದಾಗಿದೆ. ನರನು ಶುದ್ಧ ಆಚರಣೆಯಿಂದ, ಸತ್ಯಶುದ್ಧ ಕಾಯಕದಿಂದ ಕೈಲಾಸ ಕಾಣಬಲ್ಲನೆಂಬುದಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ. ಅವರನ್ನು ಕುರಿತು ಪುರಾಣಕವಿಗಳು, ಇತಿಹಾಸಜ್ಞರು, ತತ್ತ್ವಜ್ಞಾನಿಗಳು ಈಗಾಗಲೇ ಅನೇಕ ಕೃತಿಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ. ಆ ಮಾಲಿಕೆಯಲ್ಲಿ ಸೇರಲು ಶ್ರೀ ಮನೋಹರ ಶ್ರೀ ದೇಶಪಾಂಡೆ, ಎಂ.ಎ., ಅವರು ಯತ್ನಿಸಿದ್ದಾರೆ. ಲಿಂಗೈಕ್ಯ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳವರಿಗೆ ಚಿರಪರಿಚಿತರು. ಅವರ ಪ್ರಯತ್ನ ಯಶಸ್ವಿಯಾಗಿದೆ ಎಂದೇ ನಮ್ಮ ಭಾವನೆ. ಶ್ರೀ ಬಸವಣ್ಣನವರ ದಿವ್ಯ ಜೀವನವನ್ನು ಒಳಹೊಕ್ಕು ನೋಡಿ ಅಲ್ಲಿರುವ ಒಳತಿರುಳನ್ನು ಓದುಗರಿಗೆ ನೀಡಿದುದು, ಶ್ರೀ ಶಿವಯೋಗಿ ಗಳಿಗೆ ತುಂಬಾ ಆನಂದದಾಯಕವಾದ ಸಂಗತಿ. ಶ್ರೀ ಶಿವಯೋಗಿಗಳು ಅವರ ಸತ್ಕಾರ್ಯಕ್ಕಾಗಿ ಸಕಲ ಸಂಪದ ನೀಡಲೆಂದು ಹಾರೈಸುತ್ತೇನೆ.

ಲೋಕ ಶಿಕ್ಷಣ ಟ್ರಸ್ಟನವರು ಇಂಥ ಉಪಯುಕ್ತ ಗ್ರಂಥಗಳನ್ನು ಪ್ರಕಾಶನ ಮಾಡುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ.

ಮಹಾಂತ ಸ್ವಾಮಿಗಳು
ಶ್ರೀ ಗುರು ಮೃತ್ಯುಂಜಯ ಸ್ವಾಮಿಗಳು
ಶ್ರೀ ಮುರುಘಾಮಠ

ಅಲೆ : ಒಂದು

ಪೀಠಿಕೆ

ಈಶ-ಸಂಕಲ್ಪ:

ಅಸತಿನಿಂದ ಸತ್ಯದೆಡೆಗೆ | ಕತ್ತಲೆಯಿಂದ ಜ್ಯೋತಿಯೆಡೆಗೆ |
ಮೃತ್ಯುವಿನಿಂ ಅಮೃತಬಾಳಿ | ನೆಡೆಗೆ ನಡೆಯಿಸೈ ||

ಅಸತ್ತು ಅಶಾಶ್ವತ-ಅನೇಕ ; ಸತ್ತು ಶಾಶ್ವತ- ಏಕ. ಕತ್ತಲೆಯು ಅಜ್ಞಾನ; ಜ್ಯೋತಿಯು ಜ್ಞಾನ. ಮೃತ್ಯು ದುಃಖ, ಅಮೃತವು ಆನಂದ. ವಿಶ್ವವು ಅಶಾಶ್ವತ- ಅನೇಕ ; ವಿಶ್ವಂಭರನು ಶಾಶ್ವತನು-ಏಕನು, ವಿಶ್ವವು ಅಜ್ಞಾನಮಯ ; ವಿಶ್ವಂಭರನು ಜ್ಞಾನಮಯನು. ವಿಶ್ವವು ದುಃಖಪೂರ್ಣ; ವಿಶ್ವಂಭರನು ಆನಂದಪೂರ್ಣನು. ಈ ಅಶಾಶ್ವತವಾದ ಅನೇಕತೆಯಿಂದ, ಈ ಮರವಿನ ಕತ್ತಲೆಯಿಂದ, ಈ ಸಾವಿನ ನೋವಿನಿಂದ, ಶಾಶ್ವತವಾದ ಏಕನೆಡೆಗೆ, ಆರವಿನ ಜ್ಯೋತಿಯೆಡೆಗೆ, ಸಾವಿರದ ನಲಿವಿನೆಡೆಗೆ, ತಮ್ಮನ್ನು ನಡೆಯಿಸಲು, ಋಷಿಗಳು ಭಗವಂತನನ್ನು ಪ್ರಾರ್ಥಿಸಿರುವರು. ಅದೇ ಮಾನವನು ಮುಟ್ಟಬೇಕಾದ ಹಿರಿಯ ಗುರಿ; ಅದೇ ಮಾನವ ಜೀವನದ-ಮಾನವತೆಯ ಜೀವನದ ದಿವ್ಯ ಆದರ್ಶ. ಈಶನೂ ಅದನ್ನೆಯೇ ಬಯಸುವಂತೆ ಕಾಣುವುದು. ತನ್ನ ಮಾಯೆಯ ತೆರೆಯ ಮರೆಯಲ್ಲಿ ನಿಂತು ಅವನು ಅದನ್ನೆಯೆ ನಡೆಸಿರುವನು. ಅದರ ಫಲವಾಗಿಯೇ -

ಒಂದರಾ ಮೊದಲಲ್ಲಿ ಬಂದಿರುವ ಜಗವೆಲ್ಲ
ಒಂದರಾನಂದದಲಿ ನಲಿವುದಕೆ ನಡೆದಿಹುದು !

ಆದರೆ ಈ ಸಂಕಲ್ಪವನ್ನು ಅರಿಯುವದೆಂತು ? ಓರ್ವ ಆಧುನಿಕ ಅನುಭಾವಿಗಳು ಉಸುರಿದ ಮೇರೆಗೆ - “ಭಗವಂತನು ಹಲವು ಘಟನೆಗಳ ಮುಖಾಂತರವಾಗಿ ತನ್ನ ಸಂಕಲ್ಪವನ್ನು ಅರುಹುವನು." (God speaks through events) ಇತಿಹಾಸ ದರ್ಶನದ ಪ್ರಬಲ

2

ಪಂಜನ್ನು ಹಿಡಿದು ನೋಡಿದರೆ, ಇಂದಿನವರೆಗೆ ನಡೆದ ಹಲ ಸಂಗತಿಗಳು ನಮಗೆ ಅದೇನನ್ನು ಕಾಣಿಸುವವು? ಸಂಸ್ಕೃತಿ- ಮಂದಾಕಿನಿಯು ಕೆಲವು ಮಹಾಮಹಿಮರ ಉತ್ತುಂಗ ಶಿಖರಗಳಿಂದಿಳಿದು, ಬರಬರುತ್ತ ಅನೇಕರನ್ನು ಪಾವನಗೊಳಿಸುತ್ತ ಮಾನವತೆಯ ಮಹಾರ್ಣವವನ್ನು ಸಾರಲಿರುವಳು, ಸೇರಲಿರುವಳು. ಅದರ ಫಲವಾಗಿ ಮಾನವನು ಮೇಲ್ಕಾಣಿಸಿದ ಮೇರೆಗೆ ಅಶಾಶ್ವತವಾದ ಅನೇಕತೆಯಿಂದ, ಶಾಶ್ವತವಾದ ಏಕತೆಯೆಡೆಗೆ, ಅಳಿಯುವ ಭೌತಿಕ ಸುಖದಿಂದ ಅಳಿಯದ ಅತ್ಯಾನಂದದೆಡೆಗೆ, ಸಾಗಿರುವ. ಪರಮಾತ್ಮನಿಂದ ಕೆಳಗಿಳಿಸಿದ ವಿಶ್ವರಥವು ಮರಳಿ ಆತನೆಡೆ ನಡೆದಿದೆ. ಅದನ್ನು ಮುಂದೂಡಲು ಪರಮಾತ್ಮನು ಎರಡು ಸಾಧನಗಳನ್ನು ಬಳಸಿರುವ ಒಂದು ವಿಕಾಸ, ಇನ್ನೊಂದು ವಿಪ್ಲವ. ವಿಕಾಸದ ಕಾರ್ಯವು ತುಂಬ ನಿಧಾನವಾಗಿ ಸಾಗುವದು. ಆದರೆ ವಿಪ್ಲವದ ಪರಿವರ್ತನವು ಕೂಡಲೇ ಜರುಗುವದು. ವಿಶ್ವಜೀವನದ, ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಾವು ಈ ಉಭಯವಿಧ ಸಾಧನಗಳ ಕೈವಾಡವನ್ನು ಕಾಣಬಹುದು. ಅದರ ಫಲವಾಗಿ,

ಹಳೆಯ ರೀತಿಯ ಅಳಿದು ಹೊಳೆಯುವದು ಹೊಸದಲ್ಲಿ.
ದೇವ ತನ್ನಿಷ್ಟ ನಡೆಸುವನು ಬಗೆಬಗೆಯಲ್ಲಿ!

ಇದೇ ಪ್ರಗತಿ-ಪುರೋಗಮನ!

ಇತಿಹಾಸ- ದರ್ಶನವು ಇನ್ನೊಂದು ಸಂಗತಿಯನ್ನು ಕಾಣಿಸುವುದು. ಈ ವಿಶ್ವರಥದ ಗತಿಯು ಅನಾದಿಯು, ಅನಂತವು. ಅದರ ಆದಿಯೂ ಕಾಣದು-ತಿಳಿಯದು, ಅಂತವೂ ಕಾಣದು-ತಿಳಿಯದು. ಅದು ಸಾಗಿರುವುದು ತುಂಬ ನಿಧಾನವಾಗಿ. ಆದರೆ ಅದರೊಡನೆ ಹೊರಟ ಕೆಲವು ಹಿರಿಯ ಮಾನವರು, ತುಂಬ ಭರದಿಂದ ನಡೆದು ತಮ್ಮ ಪ್ರಗತಿಯನ್ನು ಬೇಗ ಸಾಧಿಸಿಕೊಂಡಿರುವರು. ತಮ್ಮ ಬುದ್ದಿಬಲದಿಂದ ಅವರು ಭಗವಂತನನ್ನು ಅರಿತು, ಭಾವಬಲದಿಂದ ಆತನನ್ನು ಒಲಿಸಿದರು, ನಲಿಸಿದರು; ತಪೋಬಲದಿಂದ ಜಪ-ಧ್ಯಾನಾದಿ ಸಾಧನ ಬಲದಿಂದ ಆತನ ಕರುಣವನ್ನು ಪಡೆದರು; ಹಾಗೂ ಜಾಗೃತವಾದ ಅಂತಃಪ್ರಜ್ಞೆಯ

3

(Intuition) ಬಲದಿಂದ ಆತನನ್ನು ಸಾಕ್ಷಾತ್ಕರಿಸಿಕೊಂಡರು. ಆತನ ಭವ್ಯರೂಪವನ್ನು ಕಂಡರು. ದಿವ್ಯ ಆನಂದವನ್ನು ಉಂಡರು. ಈ ರೀತಿ ಅವರು ತಮ್ಮನ್ನು ಉದ್ದರಿಸಿಕೊಂಡು, ತಮ್ಮ ಪರಿವಾರದವರನ್ನೂ ಉದ್ದರಿಸಿದರು. ಇವರೇ ಮಹಾತ್ಮರು, ಸಂತರು, ಶರಣರು, ದಾಸರು, ಪ್ರೇಷಿತರು, ಕಾರಣಿಕ ಪುರುಷರು. ಭಗವಂತನು ಆಯಾ ಸ್ಥಲ-ಕಾಲಗಳಿಗೆ ಅವಶ್ಯವಿರುವ ಇಂಥ ಪ್ರೇಷಿತರಿಂದಲೇ ಜನತೆಯಲ್ಲಿ ನವಜಾಗೃತಿಯನ್ನುಂಟು ಮಾಡಿರುವ. ಆಯಾ ಸಮಾಜದ, ರಾಷ್ಟ್ರದ, ಸಾಂಸ್ಕೃತಿಕ ನೆಲೆಯನ್ನು ಉನ್ನತ ಗೊಳಿಸಿರುವ. ಇಂಥ ಪ್ರೇಷಿತರಲ್ಲಿ ಬಸವಣ್ಣನವರು ಒಬ್ಬರು.

ಪರಿಸ್ಥಿತಿ:

"ಕಾರಣಪುರುಷನು ಆ ಕಾಲದ ನಿರ್ಮಿತಿಯು (A Hero is the product of the Age) ಎಂದು ಓರ್ವ ಹಿರಿಯರು ಉಸಿರಿರುವರು. ಆಯಾ ಕಾಲವು ಆಯಾ ಕಾರಣಪುರುಷನನ್ನು ಕರೆಯುವುದು. ಆತನ ನೆರವಿನಿಂದ ಅಂದಿನ ಕುಂದುಕೊರತೆಗಳನ್ನು ಕಳೆಯಲು ಯತ್ನಿಸುವದು. ಆದುದರಿಂದ ಬಸವಣ್ಣನವರು ಅವತರಿಸಿದ ದೇಶ-ಕಾಲ-ಪರಿಸ್ಥಿತಿಯ ಪರಿಚಯವು ಅವರ ಕಾರ್ಯದ ಸ್ವರೂಪವನ್ನು ಹಿರಿಮೆಯನ್ನೂ ಅರಿಯಲು ಚೆನ್ನಾಗಿ ನೆರವಾಗಬಲ್ಲದು. ಆದುದರಿಂದ ಅದನ್ನಿಲ್ಲಿ ಕಿರಿದರಲ್ಲಿ ಅರುಹಬಯಸುವೆ.

ಬಸವಣ್ಣನವರು ಅವತರಿಸಿದುದು ಹನ್ನೆರಡನೇ ಶತಮಾನದಲ್ಲಿ, ಕನ್ನಡ ನಾಡಿನಲ್ಲಿ. ಈ ಶತಮಾನವು ನಮ್ಮ ನಾಡಿನಲ್ಲಿ ಕ್ರಾಂತಿಮಯ ಕೋಲಾಹಲವನ್ನು ಎಬ್ಬಿಸಿದ ಕಾಲ. ಅಂದು ಕಲ್ಯಾಣಚಾಲುಕ್ಯರ ವೈಭವವು ಇಳಿಮುಖವಾಯಿತು. ಅವರ ಮಹಾಮಂಡಲೇಶ್ವರನಾದ ಕಳಚೂರ್ಯ ವಂಶದ ಬಿಜ್ಜಳನು, ರಾಜ್ಯಸೂತ್ರಗಳನ್ನೆಲ್ಲ ತಾನೇ ವಹಿಸಿಕೊಂಡು 'ನಿಜ- ಭುಜ- ಬಲ- ಚಕ್ರವರ್ತಿ'ಯಾದನು. ಧಾರ್ಮಿಕ ಪರಂಪರೆಗಳಲ್ಲಿ ಒಂದಾದ ಜೈನಮತವು ಹಿಂದಿನ ಉತ್ಕರ್ಷಕ್ಕೆ ಹೊರತಾಗಿ ಇದ್ದುದನ್ನು ಕಾಯ್ದುಕೊಳ್ಳುವದರಲ್ಲಿತ್ತು. ದೈವಭಕ್ತಿ

4

ಪ್ರಧಾನವಾದ ಮತಗಳ ಆಕರ್ಷಣೆಯನ್ನು ತರುಬಲು ಅದಕ್ಕೆ ಶಕ್ತಿ ಸಾಲದಾಗಿತ್ತು. ವೈದಿಕ ಮತಗಳು ಶುಷ್ಕ ಆಚಾರಧರ್ಮದ ಬೆನ್ನು ಹತ್ತಿದ್ದವು. ಅದರಿಂದ ತೋರಿದ ದಾಂಭಿಕತೆ, ಹೆಚ್ಚುಕಡಿಮೆ ಎಂಬ ಭಾವನೆ, ಅಂಧವಿಶ್ವಾಸದ ಆಧಾರದಿಂದ ನಡೆಸಿದ ಸುಲಿಗೆ ಇವಕ್ಕೆ ದಾರುಣವಾದ ಪ್ರತಿಭಟನೆ ಗುಡುಗು ಹಾಕುತ್ತಿರಬೇಕು. ನವೀನ ಬುದ್ದಿಯಿಂದ ಸಮಾಜಕ್ಕೆ ದಾರಿ ತೋರಿ, ಕೆಡುಕನ್ನು ತಿದ್ದುವ ಮಹಾವ್ಯಕ್ತಿಗಳ ಉದಯಕ್ಕೆ ಇದು ಯೋಗ್ಯ ಸಮಯವಾಯಿತು. ಬಸವೇಶ್ವರ, ಪ್ರಭುದೇವ, ಸಿದ್ದರಾಮರಂಥ ಶಿವಶರಣರನ್ನು 'ಕಲ್ಯಾಣ' ಪಥಕ್ಕೆ ಕರೆಯುವ ಕಹಳೆಯನ್ನು ಕಾಲ ಊದಿದಂತಾಯಿತು. ನಾಡಿನಲ್ಲಿ ಆಗ ಅನೇಕ ಶೈವಪಂಥಗಳು ಇದ್ದವು... ಶಿವಶರಣರು ಇವುಗಳ ಸಾರವನ್ನು ಸ್ವೀಕರಿಸಿ... ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ತಳಹದಿಯನ್ನಾಗಿ ಮಾಡಿಕೊಂಡರು.

ಅಂದಿನ ಸುಸಂಸ್ಕೃತರು, ಮೇಲ್ಕಾಣಿಸಿದಂತೆ, ತಮ್ಮ ಧರ್ಮ-ಪಂಥಗಳ ತಿರುಳನ್ನು ತೊರೆದು, ಜಳ್ಳು ಆಚಾರಗಳನ್ನು ಅಪ್ಪಿ ದಂಭದ ಹುಸಿ ಮೆರುಗಿನಿಂದ ಮೆರೆಯುತ್ತಿದ್ದರು. 'ಅರುಹಿರಿಯರನ್ನು' ಪ್ರಭುದೇವರು ಈ ಬಗೆಯಾಗಿ ಬಣ್ಣಿಸಿರುವರು :

ಆದ್ಯರಲ್ಲ ವೇದ್ಯರಲ್ಲ, ಸಾಧ್ಯರಲ್ಲದ ಹಿರಿಯರು ನೋಡಾ !
ತನುವಿಕಾರ, ಮನವಿಕಾರ, ಇಂದ್ರಿಯವಿಕಾರದ ಹಿರಿಯರು
ನೋಡಾ!
ಶಿವಚಿಂತೆ, ಶಿವಜ್ಞಾನಿಗಳ ಕಂಡರೆ, ಅಳಿವಾಡಿ ನುಡಿವರು.
ಗುಹೇಶ್ವರನರಿಯದ ಕರ್ಮಿಗಳಯ್ಯಾ!

ಇವರದು ವಿಕೃತಬುದ್ಧಿ, ವಿಪರೀತ ನಡೆನುಡಿ, "ಇವರಿಗೆ ಹಗಲೇ ಇರುಳು, ಇರುಳೇ ಹಗಲು ; ಆಚಾರವೇ ಅನಾಚಾರ, ಅನಾಚಾರವೇ ಆಚಾರ ; ಭಕ್ತರೇ ಭವಿಗಳು, ಭವಿಗಳೇ ಭಕ್ತರು. ಇಂಥವರ ನಡೆ

೧. ಕ.ಸಾ.ಚ. ಪು. ೧೪೬

5

ನೋಡಲಾಗದು, ನುಡಿ ಕೇಳಲಾಗದು ಎಂದು ಪ್ರಭುದೇವರು ಅರುಹಿರುವರು. ಅವರು ಮತ್ತೂ ಹೇಳಿರುವುದೇನೆಂದರೆ :

ಪದ್ಯದಾಶೆಯ ಹಿರಿಯರು ಕೆಲವರು
ಬುದ್ಧಿಯಾಶೆಯ ಹಿರಿಯರು ಕೆಲವರು
ಸಮತೆಯಾಶೆಯ ಹಿರಿಯರು ಕೆಲವರು

ಕೆಲವರು ಕಾವ್ಯಪ್ರಿಯರು, ಕೆಲವರು ದರ್ಶನಪ್ರಿಯರು, ಕೆಲವರು ಪರಾರ್ಥ ಪ್ರಿಯರು. ಇವರೆಲ್ಲ ತಮ್ಮ ನಿಜವ ತಾವರಿಯದೆ ಆಚರಿಸುವರು. ಇವರಲ್ಲಿಯ ಕೆಲವರು -

ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ,
ಆಗುಹೋಗೆಂಬುದನರಿಯರು.
ಯುಕ್ತಿಯನರಿಯರು, ಮುಕ್ತಿಯನರಿಯರು
ಭಕ್ತಿಯನರಿಯರು !
ಮತ್ತು ವಾದಿಗಳೆನಿಸುವರು,
ಹೋದರು ಗುಹೇಶ್ವರಾ ! ಸಲೆ ಕೊಂಡ ಮಾರಿಂಗೆ !
ಏನೆಂದರಿಯರು ! ಎಂತೆಂದರಿಯರು !
ಬರಿ ಮಾತಿನ ಬ್ರಹ್ಮವನಾಡುತ್ತಿದ್ದರು !

ಈ ಬಗೆಯಾಗಿ,

ಆಶೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು ಹೆಣ್ಣು ಮಣ್ಣಿಗೆ ಸತ್ತುದು ಕೋಟಿ !
ಗುಹೇಶ್ವರಾ ! ನಿನಗಾಗಿ ಸತ್ತವರನಾರನೂ ಕಾಣೆ

_____________________
೨. ಪ್ರ. ಪ್ರ. ಪು. ೪೧

6

ಎಂದು ಪ್ರಭುದೇವರು 'ಆಶಾಪಾಶದಲ್ಲಿ ಸಿಲುಕಿ, ಕಾಮಕ್ರೋಧಪರಾಯಣರಾದ' ಅಂದಿನ ಹಿರಿಯರನ್ನು ಬಣ್ಣಿಸಿರುವರು.

ಒಂದೆಡೆ ಇಂಥ ಸುಸಂಸ್ಕೃತ ಹಿರಿಯರ ದಾಂಭಿಕ ಅನಾಚಾರವು ಬೆಳೆದಂತೆ, ಇನ್ನೊಂದೆಡೆ ಅಸಂಸ್ಕೃತ ಸಾಮಾನ್ಯರ ಮೂಢ ದುರಾಚಾರವು ಪ್ರಬಲವಾಗಿದ್ದಿತು. ಅದನ್ನು ಬಸವಣ್ಣನವರು ತಮ್ಮ ಕೆಲವು ವಚನಗಳಲ್ಲಿ ಚೆನ್ನಾಗಿ ಚಿತ್ರಿಸಿರುವರು.

ಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ,
ಕೆರೆ, ಬಾವಿ, ಹೂ, ಗಿಡ, ಮರಂಗಳಲ್ಲಿ ;
ಗ್ರಾಮಮಧ್ಯದಲ್ಲಿ, ಚೌಪಥ ಪಟ್ಟಣಪ್ರದೇಶದಲ್ಲಿ.
ಹಿರಿಯಾಲಯದ ಮರದಲ್ಲಿ, ಮನೆಯ ಮಾಡಿ,
ಕೆರೆಮ್ಮೆಯ, ಹಸುಗೂಸು, ಬಸುರಿ, ಬಾಣತಿ,
ಕುಮಾರಿ, ಕೊಡಗೂಸೆಂಬವರ ಹಿಡಿದು ತಿಂಬ ತಿರಿದುಂಬ,
ಮಾರಯ್ಯ, ಬೀರಯ್ಯ, ಕೇರಚಗಾವಿಲ, ಅಂತರಬೆಂತರ,

'ಕಾಳಯ್ಯ, ಮಾರಯ್ಯ, ಗೂಳಯ್ಯ, ಕೇತಯ್ಯಗಳೆಂಬ... ನೂರು ಮಡಕೆ' ಗಳಿಗೆ ಜನರು ನಡೆದುಕೊಳ್ಳುತ್ತಿದ್ದರು. ಅವರು ಮಾರಿಕವ್ವೆಯನೊಂತು ಕೊರಳಲ್ಲಿ ಕಟ್ಟಿಕೊಂಬರು'; 'ಮೊರನ ಗೋಟಿಗೆ ಬರ್ಪ ಕಿರುಕುಳ ದೈವಕ್ಕೆ ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು. ಕುರಿ ಸತ್ತುಕಾವುದೇ ಹರ ಮುಳಿದವರ?' ಆದರೆ ಇದನ್ನು ಲೆಕ್ಕಿಸುವರಾರು? 'ಅರಗು ತಿಂದು ಕರಗುವ' ಇಂಥ ದೈವಗಳೇ ಎಲ್ಲೆಲ್ಲಿಯೂ ಅಂದು ಮೆರೆಯುತ್ತಿದ್ದವು. ಇನ್ನೂ ಮೆರೆಯಲಿರುವವು.

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ !
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ !
ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ !
ದೈವದೈವವೆಂದು ಕಾಲಿಡಲಿಂಬಿಲ್ಲಾ!
ದೈವನೊಬ್ಬ ಕೂಡಲಸಂಗಮದೇವ !

_____________________
೩. ಪ್ರ. ಪ್ರ. ಪು. ೩೯-೪೨

7

ಎಂಬುದಾಗಿ ಬಸವಣ್ಣನವರು ತಮ್ಮ ಕಾಲದ ಮೂಢ ಆರಾಧನೆಗಳನ್ನು ವಿಡಂಬಿಸಿರುವರು.

ಇಂಥ ಹಾಳುಹಿಂಸೆ, ಪೊಳ್ಳುದಂಭ, ಮೂಢನಂಬಿಕೆ ಹಾಗೂ ಕಾಡುನಡತೆಗಳಿಂದ ಹಾಳಾಗಲಿರುವ ಸಮಾಜವನ್ನು ಎಚ್ಚರಿಸಿ, ಅದರಲ್ಲಿ ಪರಶಿವನ ಭಕ್ತಿಯನ್ನು ಬಲಿಸಿ, ಅದಕ್ಕೆ ಪರಮಾನಂದದಲ್ಲಿ ನಲಿಯಲು ಕಲಿಸಲೆಂದೇ ಬಸವಣ್ಣನವರು ಅಂದು ಅವತರಿಸಿದದು.

ಕಲ್ಯಾಣ-ಕೇಂದ್ರ :

ಅಂದು ಕಲ್ಯಾಣಪಟ್ಟಣವು ಕನ್ನಡನಾಡಿನ- ಅದೇಕೆ-ಇಡಿ ಭಾರತದ ಒಂದು ಪ್ರಧಾನ ಸಾಂಸ್ಕೃತಿಕ ಕೇಂದ್ರವಾಗಿದ್ದಿತು. ಅಂದಿನ ಚಾಲುಕ್ಯರ ವೀರ ವಿಕ್ರಮಾದಿತ್ಯನ ವೈಭವಸಂಪನ್ನ ಆಳಿಕೆಯು ಕಲ್ಯಾಣದ ಕೀರ್ತಿಯನ್ನು ತುಂಬ ಬೆಳೆಸಿದ್ದಿತು. ಅದು ಭಾರತದ ಉತ್ತರದ ತುತ್ತತುದಿಯಾದ ಕಾಶ್ಮೀರದವರೆಗೂ ಹಬ್ಬಿದ್ದಿತು. ಅದು ಎಲ್ಲೆಡೆಯಿಂದ ಪಂಡಿತರನ್ನೂ ಮಹಾಪುರುಷರನ್ನೂ ಕಲ್ಯಾಣದೆಡೆ ಆಕರ್ಷಿಸಿದ್ದಿತು. ಕಾಶ್ಮೀರದಿಂದ ಬಂದ ವಿಜ್ಞಾನೇಶ್ವರ ಪಂಡಿತನೂ, ಬಿಲ್ಹಣ ಮಹಾಕವಿಯೂ ಕಲ್ಯಾಣವನ್ನು ಬಣ್ಣಿಸಿದ ಬಗೆಯನ್ನು ನೋಡಿದರೆ, ಅಂದು ಅದು ಎಲ್ಲ ಬಗೆಯಾಗಿ 'ಕಲ್ಯಾಣ-ಕೇಂದ್ರ' - ಕಲ್ಯಾಣಕರ ಸಂಗತಿಗಳ ಕೇಂದ್ರವಾಗಿದ್ದಿತೆಂಬುದು ಸಹಜವಾಗಿ ಹೊಳೆಯದೆ ಇರದು.

ವಿಜ್ಞಾನೇಶ್ವರನು ತನ್ನ 'ಮಿತಾಕ್ಷರಾ' ಎಂಬ ಹಿರಿಯ ಗ್ರಂಥದ ಕೊನೆಯಲ್ಲಿ ಈ ರೀತಿ ಬಣ್ಣಿಸಿರುವ :

ನಾಸೀದಸ್ತಿ! ಭವಿಷ್ಯತಿ ಕ್ಷಿತಿತಲೇ ಕಲ್ಯಾಣಕಲ್ಪಂ ಪುರಂ |
ನ ದೃಷ್ಟಃ ಶ್ರುತ ಏವ ವಾ ಕ್ಷಿತಿಪತಿಃ ಶ್ರೀವಿಕ್ರಮಾರ್ಕೋಪಮಃ ||

“ಈ ಇಳೆಯ ಮೇಲೆ ಕಲ್ಯಾಣದಂಥ ಇನ್ನೊಂದು ಪಟ್ಟಣವು ಹಿಂದೆ ಇರಲಿಲ್ಲ, ಇಂದು ಇರುವದಿಲ್ಲ, ಮುಂದೆ ಆಗುವದಿಲ್ಲ. ಶ್ರೀವಿಕ್ರಮನಂಥ ಅರಸನನ್ನು ಕಂಡಿಲ್ಲ, ಕೇಳಿಲ್ಲ" ಅದೇ ಮೇರೆಗೆ ಕವಿ ಬಿಲ್ಹಣನು ತನ್ನ 'ವಿಕ್ರಮಾಂಕಚರಿತ' ದಲ್ಲಿ ಅಂದು ಪೂರ್ತಿಯಾಗಿ ನೆಲೆಗೊಂಡ

8

ಶಾಂತಿಸಮೃದ್ಧಿಗಳನ್ನು ಈ ರೀತಿ ಕಾವ್ಯಮಯವಾಗಿ ಬಣ್ಣಿಸಿರುವ :

ಜನೈರವಜ್ಞಾತಕವಾಟಮುದ್ರಣೈಃ | ಕ್ಷಪಾಸು ರಕ್ಷಾವಿಮುಖೈರಸುಪ್ಯತೆ ||
ಕರಾ ವಿಠಂತಿ ಸ್ಮಗವಾಕ್ಷವರ್ತ್ಮಸು | ಕ್ಷಪಾಪತೇಃ ಛಿದ್ರಪಥೈರ್ನ ತಸ್ಕರಾಃ ||

“ಜನರು ರಾತ್ರಿಯಲ್ಲಿ ತಮ್ಮ ಮನೆಗಳ ಬಾಗಿಲುಗಳನ್ನು ಕೂಡ ಇಕ್ಕುವದಿಲ್ಲ. ತಮ್ಮ ರಕ್ಷಣದ ಚಿಂತೆಯಿಲ್ಲದೆ ಅವರು ಸುಖವಾಗಿ ನಿದ್ರಿಸುತ್ತಿದ್ದರು. ಅವರ ಮನೆಯಲ್ಲಿ ಗವಾಕ್ಷದ್ವಾರದಿಂದ ಚಂದ್ರಕಿರಣಗಳಷ್ಟೇ ಸೇರುತ್ತಿದ್ದವಲ್ಲದೆ, ಕಳ್ಳರು ಎಂದೂ ಸೇರುತ್ತಿರಲಿಲ್ಲ. ಇಂಥ ನೀತಿ- ಶಾಂತಿಗಳು ಅಂದು ಅಲ್ಲಿ ನೆಲೆಸಿದ್ದವು.

ಕಲ್ಯಾಣವೇ ಮುಂದೆ ಬಸವಣ್ಣನವರ ಕಲ್ಯಾಣಕರ ಮಹಾಜೀವನದ ಹಾಗೂ ಮಹಾಕಾರ್ಯದ ಪ್ರಧಾನ ಕೇಂದ್ರವಾಯಿತು. ಪರಶಿವಪ್ರೇರಣೆಯಿಂದ ಬಸವಣ್ಣನವರು ಅಲ್ಲಿಗೆ ತೆರಳಿದರು. ಅಲ್ಲಿಯೆ ಬಾಳಿದರು, ಬೆಳೆದರು, ಬೆಳಗಿದರು. ಅದೇ ಅವರ ಮುಂದಿನ ತಪೋಭೂಮಿ, ಕರ್ಮಭೂಮಿ ಹಾಗೂ ಧರ್ಮಭೂಮಿ ಆಗಿ ಪರಿಣಮಿಸಿತು. ಅವರ ಪಾವನಜೀವನದ ಫಲವಾಗಿಯೆ ಕಲ್ಯಾಣವು "ಸಕಲೈಶ್ವರದ ನಿಲಯ, ಸತ್ಯದ ಸಾಗರ, ಭಕ್ತಿಯ ತವರ್ಮನೆ, ಮುಕ್ತಿಗೆಮುಖ, ಹಾಗೂ ಪುಣ್ಯದ ಪುಂಜವಾಗಿ ಲೋಕದಲ್ಲಿ ಅದು ಅಭನವ ಕೈಲಾಸ ಎನಿಸಿತು.” "ಇಂತಪ್ಪ ಕಲ್ಯಾಣದ ದರುಶನವ ಮಾಡಿದರೆ, ಭವಂನಾಸ್ತಿ ಆಗಿ, ನೆನೆದರೆ ಪಾಪಕ್ಷಯವೂ ಕರ್ಮಕ್ಷಯವೂ ಆಗಿ ಮೋಕ್ಷವು ಸಾಧ್ಯ ಆಗುತ್ತಿತ್ತಂತೆ."

ಶ್ರೀ ಪ್ರಭುದೇವರು ಉಸುರಿದ ಮೇರೆಗೆ -

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ, ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿರ್ದಿತಯ್ಯಾ ಶಿವನ ಪ್ರಸಾದ !

____________________
೪. ಶೂ. ಸಂ. ಪು. ೮೩

9

ಆ ಬೆಳಕಿನೊಳು ಒಪ್ಪುತ್ತಿರ್ದರಯ್ಯಾ ಅಸಂಖ್ಯಾತ ಮಹಾಗಣಂಗಳು!
ಶಿವಭಕ್ತರಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ?
ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೇ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯರು
ಸಂಗನ ಬಸವಣ್ಣನ ಮಹಿಮೆ ನೋಡಾ ಸಿದ್ಧರಾಮಯ್ಯ!

"ಆ ಭಕ್ತಗಣದಲ್ಲಿ ಪ್ರಭುದೇವರೇ ಪ್ರಮುಖರು. ಅಲ್ಲಮ ವ್ಯೋಮ, ಬಸವ ಭಾನು, ಚನ್ನಬಸವ ಚಂದ್ರ, ಬೇರೆ ಶರಣರು ಉಳಿದ ಗ್ರಹನಕ್ಷತ್ರಗಳು, ಎಂಬುದು ತುಂಬ ಯಥಾರ್ಥವಾದ ಭಾವನೆ. ಏಕೆಂದರೆ ಗ್ರಹನಕ್ಷತ್ರಗಳಿಗೆಲ್ಲ ಆಕಾಶವು ಆಶ್ರಯವಿದ್ದಂತೆ, ಶರಣವೃಂದಕ್ಕೆಲ್ಲ ಪ್ರಭುದೇವ ಆಶ್ರಯವಾಗಿದ್ದ ಸ್ಫೂರ್ತಿಯ ಕೇಂದ್ರವಾಗಿದ್ದ."

ಈ ಬಗೆಯಾಗಿ ಬಸವಣ್ಣನವರು ಶರಣರನೇಕರನ್ನು ತಮ್ಮೆಡೆ ಸೆಳೆದರು. ಅವರ ನೆರವಿನಿಂದ ತಮ್ಮ ಭಕ್ತಿಭಾಂಡಾರವನ್ನು ಬೆಳೆಸಿದರು. ಅದನ್ನು ವಿಪುಲವಾಗಿ ಬಳಸಿ ವೀರಶೈವಬಾಂಧವ್ಯವನ್ನು ನೆಲೆಗೊಳಿಸಿದರು. ಆತ್ಮೋದ್ಧಾರವನ್ನೂ ಲೋಕೋದ್ಧಾರವನ್ನೂ ನೆರವೇರಿಸಿದರು.

ನಮ್ಮ ದೃಷ್ಟಿ

ನಮ್ಮದು ಮತಾತೀತ ದೃಷ್ಟಿ. ನಾವು ಬಸವಣ್ಣನವರನ್ನು ಕಾಣುವದು ಮತೋದ್ಧಾರಕರೆಂದಲ್ಲ, ಆದ್ದಾರಕರೆಂದು, ಲೋಕೋದ್ಧಾರಕರೆಂದು. ಬಸವಣ್ಣನವರು ವೀರಶೈವ ಮತವನ್ನು ಉದ್ದರಿಸಿದರು. ನಿಜ. ಅದು ಆ ದೇಶ-ಕಾಲಗಳಿಗೆ ಬೇಕಾದ ವಿಷಯ. ಅದರ ಜತೆಯಲ್ಲಿ ಅವರು ತಮ್ಮನ್ನು ತಾವು ಉದ್ದರಿಸಿಕೊಂಡರು. ತಮ್ಮ ಉಜ್ವಲ ಭಕ್ತಿ-ಆನುಭಾವ-ಬೋಧೆಗಳಿಂದ ತಮ್ಮ ಪರಿಸರದವರನ್ನು ಉದ್ದರಿಸಿದರು. ಇದು ಎಲ್ಲ ದೇಶ-ಕಾಲಗಳಿಗೆ ಬೇಕಾದ ಮಾತು. ಮತವು ದೇಹ-ಸಾಂತ; ಅನುಭಾವವು ಆತ್ಮ- ಅನಂತ. ಮತವು

೫. ಪ್ರ.ಪ್ರ. ಪು. ೨

10

ಅಳಿಯುವಂತಹದು, ಅನುಭಾವವು ಕೊನೆಯವರೆಗೆ ಉಳಿಯುವಂತಹುದು. ಆದುದರಿಂದ 'ನಿಜವಾದ ಅನುಭಾವಿಗಳು ಮತದಲ್ಲಿ ಹುಟ್ಟಿದರೂ, ಅವರು ಅದರಲ್ಲಿಯೆ ಮಡಿಯುವದಿಲ್ಲ' (Real Mystics though born in a creed, don't die in it). ಅವರು ತಮ್ಮ ಭಕ್ತಿಯನ್ನು ಬೆಳೆಸಿ, ದಿವ್ಯ ಅನುಭಾವವನ್ನು ಗಳಿಸಿ, ಅದರ ಬಲದಿಂದ ಬೇಗನೆ ಮತದ ಸಂಕುಚಿತ ಎಲ್ಲೆ ಮೀರಿ, ಮತಾತೀತರಾಗುವರು. ಬಸವಣ್ಣನವರು ಅಂಥ ಅನುಭಾವಿಗಳು!

ಮೇಲಾಗಿ ಮತಪ್ರಸಾರದ ಎರಡು ಬಗೆಗಳಾದ ಪರಮತಖಂಡನ ಹಾಗೂ ಸ್ವಮತಮಂಡನಗಳಲ್ಲಿ ಖಂಡನವು ವಿಘಾತಕ, ಮಂಡನವು ವಿಧಾಯಕ. ಮಂಡನದಲ್ಲಿ ಸ್ವಮತಪ್ರೇಮವು ಪ್ರಧಾನವಾದರೆ, ಖಂಡನದಲ್ಲಿ ಪರಮತದ್ವೇಷವು ತುಂಬಿ ತುಳುಕುವದು. ಮಂಡನದ ಸಾಧನಗಳು ಉನ್ನತ ಬಾಳು, ಅನುಭಾವದ ಪ್ರಭಾವ ಹಾಗೂ ಒಲವಿನ ಸಂವಾದ. ಆದರೆ ಖಂಡನವು ಸಾಮಾನ್ಯವಾಗಿ ಸಾಗುವದು ವಿವಾದದಿಂದ, ವಿಡಂಬನದಿಂದ, ಹಿಂಸೆಯಿಂದ, ಖಂಡನದಿಂದ ಉಂಟಾಗುವದು ಅಸಹನ-ಕಲಹ-ಕೋಲಾಹಲ. ಅದರಿಂದ ಬಹುಕಾಲ ಉಳಿಯುವದು ಕಟುತರವಾದ ಕ್ರಿಯೆ-ಪ್ರತಿಕ್ರಿಯೆಗಳಷ್ಟೇ! ಆದುದರಿಂದ ಈ ಖಂಡನಾತ್ಮಕ ಮತಪ್ರಚಾರದಲ್ಲಿ ಅಂದಿನವರು ಆಸ್ಥೆವಹಿಸಿದ್ದರೂ ನಾವಿಂದು ಅದನ್ನು ಬಳಸಕೂಡದು. ಇಂದು-ಎಂದೆಂದೂ-ಬೇಕಾದುದು, ಶೀಲ-ಸೌಹಾರ್ದ-ಶಾಂತಿಗಳ ಬೆಳವಣಿಗೆ. ಅದಕ್ಕೆ ನಾವು ಬಳಸಬೇಕಾದುದು ಆತ್ಮೋದ್ಧಾರದ ಮಂಡನಾತ್ಮಕ ಸಾಧನವನ್ನು!

ಆದುದರಿಂದ ಬಸವಣ್ಣನವರು ತಮ್ಮ ಭಕ್ತಿಭಾಂಡಾರವನ್ನು ಹೇಗೆ ಗಳಿಸಿದರು, ಹೇಗೆ ಬೆಳೆಸಿದರು? ಅದರ ಫಲವಾಗಿ ಅವರು ಪರಮಾತ್ಮನ ಅನುಭಾವವನ್ನು ಹೇಗೆ ಪಡೆದರು? ಆತನಿಂದ ಪರಮಾನಂದವನ್ನು ಹೇಗೆ ಸವಿದರು? ಅದರಲ್ಲಿ ಅವರು ಹೇಗೆ ನಲಿದರು? ಈ ರೀತಿ ತಮ್ಮ ಬಾಳನ್ನು ಬೆಳಗಿಸಿ ಅವರು ಪರಿಸರದವರಿಗೆ ಹೇಗೆ ಆದರ್ಶಪುರುಷರಾದರು?

11

ಅವರು ಸಾಧಕರಾಗಿ ಬೆಳೆಯುತ್ತಿರುವಾಗ, ಹಾಗೂ ಅನುಭಾವವನ್ನು ಪಡೆಯಲಿರುವಾಗ ಅವರ ಅಂತರಂಗದಲ್ಲಿ ಉದಿಸಿದ ಭಾವಲಹರಿಗಳೂ ಅವರು ಪಡೆದ ಅನುಭಾವ-ಆನಂದಗಳೂ ಅವರ ಅಂದವಾದ ವಚನಗಳಲ್ಲಿ ಹೇಗೆ ಮೈದಳೆದವು? ಮುಂದೆ ಪರಮಾತ್ಮನ ಆಣತಿಯ ಮೇರೆಗೆ, ಅವರು ಭಕ್ತವೃಂದವನ್ನು ಬೋಧಿಸಿ, ಅವರನ್ನು ಹೇಗೆ ಉದ್ದರಿಸಿದರು? ಎಂಬುದನ್ನು ಅವರ ವಚನಗಳ ನೆರವಿನಿಂದ ಮುಂದೆ ವಿವರಿಸಲು ಯತ್ನಿಸಲಾಗಿದೆ.

ನಮ್ಮ ಈ ಕಿರಿಚರಿತೆಯಲ್ಲಿ ಮೂಡಿರುವದು ವಿಶೇಷವಾಗಿ ಬಸವಣ್ಣನವರ ಅಂತರಂಗದ ಹಿರಿಮೆ, ಅವರ ಅನುಭಾವದ ಪ್ರಭಾವ. ಹರಿಹರನ 'ಬಸವರಾಜ ದೇವರ ರಗಳೆ' ಅದರ ಪ್ರಧಾನ ಚಾರಿತ್ರಿಕ ಹಿನ್ನೆಲೆ. ಏಕೆಂದರೆ ಬಸವಣ್ಣನವರ ಪರಿಚಯವು ಹರಿಹರ ಕವಿಗೆ ಸಾಕಷ್ಟಿರಬೇಕು; ಬಸವಣ್ಣನವರ ಶ್ರೀಮೂರ್ತಿಯನ್ನು ಅವನು ಕಣ್ಣಾರೆ ಕಂಡಿರಬೇಕು; ಅವರ ವಚನಗಳನ್ನು ಸಾಕಷ್ಟು ಓದಿ, ಕಂಠಪಾಠಮಾಡಿ ಬಸವಣ್ಣನವರ ಜೀವನಚರಿತ್ರ ನಿರೂಪಣೆಗೆ ವಚನಗಳನ್ನು ಹೇರಳವಾಗಿ... ಉಪಯೋಗಿಸಿಕೊಂಡಿರಬೇಕು. ಆದರೆ ಬಸವಣ್ಣನವರ ಹಾಗೂ ಬೇರೆ ಶರಣರ ವಚನಗಳೇ ಅದರ ಪ್ರಧಾನ ಆಧಾರ. ಅವನ್ನೆಲ್ಲ ಚೆನ್ನಾಗಿ ಹೊಂದಿಸಿಕೊಳ್ಳಲು ನಾವು ಪಡೆದುದು ಕೊಂಚ ಕೆಲ ಪುರಾಣಗಳ ನೆರವು, ಕೊಂಚ ಕಲ್ಪನೆಗಳ ಬೆಂಬಲ. ಈ ಕೆಲ ಸಾಧನಗಳಿಂದ ಬಸವಣ್ಣನವರ ದಿವ್ಯಜೀವನವು ಇಲ್ಲಿ ಚಿತ್ರಿಸಲಾಗಿದೆ. ಸಹೃದಯರು ಇದರ ಗುಣಾವಗುಣಗಳನ್ನು ಗುರುತಿಸಲಿ! ಗುಣಗಳಿಂದ ನಲಿಯಲಿ! ಅವಗುಣಗಳನ್ನು ಅರುಹಲಿ! ಅಂದರೆ ಅವನ್ನು ಮುಂದೆ ತೊರೆಯಲು ಅನುಕೂಲ ಆಗಬಹುದು. ಇದೇ ಅವರಲ್ಲಿ ವಿನಮ್ರ ಬಿನ್ನಹ.

೬. ಧ.ಬ. ಪು. ೪

ಅಲೆ
ಎರಡು
ಜನನ — ಬಾಲ್ಯ
ಕಾರಣಿಕ ಶಿಶು

"ಹೆದರದಿರಮ್ಮಾ! ಹಲುಬದಿರು! ಇದು ಕಾರಣಿಕ ಶಿಶು!
ಪರಶಿವನ ಪ್ರಸಾದ! ಇದೀಗ ಎಲ್ಲವೂ ಸರಿಹೋಗುವುದು."

ಬಾಗೇವಾಡಿ ಅಗ್ರಹಾರದಲ್ಲಿಯ ಅಗ್ರೇಶ್ವರರಾದ ಮಾದಿರಾಜನ ಮನೆ. ಸತಿ ಮಾದಲಾಂಬೆಯು, ಇದೀಗ ಹಡೆದ ತನ್ನ ಶಿಶುವನ್ನು ತೊಡೆಯ ಮೇಲೆ ಇರಿಸಿಕೊಂಡು, ನಡುಮನೆಯಲ್ಲಿ ಕಂಬನಿ ಕರೆಯುತ್ತಿದ್ದಳು. ಬಳಿಯಲ್ಲಿಯೇ ಕುಳಿತ ಅವಳ ಮುಪ್ಪಿನ ತಾಯಿ ಹಾಗೂ ಮಗಳು ಇವರ ಕಂಗಳಲ್ಲಿಯೂ ಕಣ್ಣೀರು ಕಾಣುತ್ತಿತ್ತು ಮೊಗಸಾಲೆಯಲ್ಲಿ ಮಾದರಸನೂ ದುಃಖಿತನಾಗಿ ಕುಳಿತಿದ್ದನು. ಅಷ್ಟರಲ್ಲಿ ಕಾವಿಯ ಕೌಪೀನವನ್ನು ಧರಿಸಿದ ಓರ್ವ ಮುನಿಯು ಒಮ್ಮೇಲೆ ಅವರ ಮನೆಯಲ್ಲಿ ಬಂದ. ತಲೆಯ ಮೇಲೆ ವಿಪುಲವಾದ ಜಡೆ, ಭಸಿತದಿಂದ ಒಪ್ಪುವ ವಿಶಾಲವಾದ ಹಣೆ, ಕೊರಳಲ್ಲಿ ರುದ್ರಾಕ್ಷಿಗಳ ಮಾಲೆಗಳು, ಕೈಯಲ್ಲಿ ದಂಡ-ಕಮಂಡಲುಗಳು, ಪಾದಗಳಲ್ಲಿಯ ಪಾದುಗೆಗಳನ್ನು ಮೊಗಸಾಲೆಯಲ್ಲಿರಿಸಿ, ಮುನಿಯು ನೇರವಾಗಿ ತಾಯಿಯ ಬಳಿ ಬಂದ. ಮಗುವನ್ನು ಕರುಣಪೂರ್ಣ ನೋಟದಿಂದ ನೋಡಿ, ಮೇಲ್ಕಾಣಿಸಿದಂತೆ ನುಡಿದ. ತರುವಾಯ ಮಗುವಿನ ಹಣೆಗೆ ಭಸಿತವನ್ನು ಹಚ್ಚಿ ಅದರ ಕಿವಿಯಲ್ಲಿ ಪಂಚಾಕ್ಷರೀ ಮಂತ್ರವನ್ನು ಊದಿದ. ಕೂಡಲೇ ಕೂಸು ಮೆಲ್ಲನೆ ಕಣ್ಣೆರೆಯಿತು. ಮುನಿಯನ್ನು ನೆಟ್ಟನೋಟದಿಂದ ನೋಡಿತು. ಆಗ ಒಂದು ಅಲೌಕಿಕ ನಗು ಅದರ ಮುದ್ದು ಮುಖವನ್ನು ಅಲಂಕರಿಸಿದ್ದಿತು. ಮಗುವು ಚೇತನಗೊಂಡು, ಕಣ್ಣೆರೆದುದನ್ನು ಕಂಡು ಮನೆಯವರಿಗೆಲ್ಲ ಅತೀವ ಆನಂದವಾಯಿತು. ಸಾಕ್ಷಾತ್ ಪರಶಿವನೇ ಮುನಿರೂಪದಿಂದ ಬಂದು ತಮ್ಮ ಮಗುವನ್ನು ಉಳಿಸಿದನು ಎಂದು ಅನಿಸಿತು ತಂದೆತಾಯಂದಿರಿಗೆ.

13

ಅವರು ತಮ್ಮ ಧನ್ಯವಾದಗಳನ್ನು ಮುನಿಗೆ ಸಲ್ಲಿಸುವ ಪೂರ್ವದಲ್ಲಿಯೇ ಆತನು ಅಲ್ಲಿಂದ ಮಾಯವಾಗಿದ್ದನು. ಆತನನ್ನು ಶೋಧಿಸಿ, ಕರೆತರುವ ಅವರ ಯತ್ನಗಳೆಲ್ಲ ವಿಫಲವಾದವು.

ಮಾದಲಾಂಬಿಕೆಯ ಉದರದಲ್ಲಿ ಅಂದು (ಕ್ರಿ.ಶ.೧೧೦೬) ಜನಿಸಿದುದು ಒಂದು 'ಪುಣ್ಯಶಿಶು', 'ಕಾರಣಿಕ ಶಿಶು', ಮಗಳು ನಾಗಲಾಂಬಿಕೆಯ ತರುವಾಯ ಬಹುದಿನ ಮಕ್ಕಳು ಆಗದ ಮೂಲಕ, ಮಾದಲಾಂಬಿಕೆಯು 'ಪುತ್ರಾರ್ಥಕಾರಣಂ... ವೃಷಭನೋಂಪಿಯ ನೋನುತ' ಇದ್ದಳಂತೆ. ಅವಳು ನಂದಿಕೇಶ್ವರನನ್ನು ಭಕ್ತಿಭಾವದಿಂದ ಆರಾಧಿಸುತ್ತಿದ್ದಳು; ಏಕಾಗ್ರತೆಯಿಂದ ಆತನ ಧ್ಯಾನವನ್ನು ಮಾಡುತ್ತಿದ್ದಳು. ಅದರ ಫಲವಾಗಿ ಅವಳು ಕೆಲ ತಿಂಗಳಲ್ಲಿ ಗರ್ಭವತಿಯಾದಳು.

ಇಂತು ನವಮಾಸವಾಕೆಯೊಳಾಗೆ ಸನ್ನುತಂ
ಅಂತಸ್ಥಳದೆ ಪುಣ್ಯಶಿಶು ತೊಳಗಿ ಹೊಳೆವುತಂ
ಚಿಪ್ಪಿನೊಳ್ ಮುತ್ತು ಕಾಸಾರದೊಳ್ ಪಂಕಜಂ
ಪುಟ್ಟುವಂತಿರೆ ಪುಟ್ಟಿದಂ ಶಿವನ ಶಿಶುವಲ್ಲಿ
ಸುಮುಹೂರ್ತವೇ ಗಂಡುರೂಪಾದ ತೆರನಾಗೆ
ಅಮಮ ಕಾರಣಿಕ ಶಿಶು ಜನಿಯಿಸಿದನನುವಾಗ.

ಆದರೆ ಹುಟ್ಟಿದೊಡನೆ ಮಗು ತನ್ನ ಕಣ್ಣು ಬಾಯಿ ತೆರೆಯಲಿಲ್ಲ, ಅಳಲಿಲ್ಲ, ಅಲೆಯಲಿಲ್ಲ. ಅದು ನಿಶ್ಚಲವಾಗಿ ಒರಗಿಕೊಂಡಿತು. ಅದನ್ನು ಕಂಡ ತಂದೆ ತಾಯಂದಿರು ಭಯಭೀತರಾದರು, ದುಃಖಿತರಾದರು: "ಶಿವನೇ! ಇಂಥ ಕಾಂತಿಯುತ ಕೂಸನ್ನು ನೀಡಿ, ಅದನ್ನು ಈ ಪರಿಯಾಗಿ ಚೇತನಹೀನ ಮಾಡಬೇಕೆ? ಅದನ್ನು ಸರಿಯಾಗಿ ಸಚೇತನಗೊಳಿಸಬಾರದೇ? ಎಂದು ಅತಿಯಾಗಿ ಹಲುಬಿದರು. ಪರಶಿವನನ್ನು ಅನನ್ಯಭಾವದಿಂದ ಪ್ರಾರ್ಥಿಸಿದರು. ಅವರ ಆರ್ತಮೊರೆಯನ್ನು ಕೇಳಿಯೇ ಪರಶಿವನು ಮುನಿಯನು ಕಳುಹಿದನೇನೋ? ಮುನಿಯು ತನ್ನ ಕರುಣಕಟಾಕ್ಷದಿಂದಲೂ ಪರುಷಸ್ಪರ್ಶದಿಂದಲೂ ಮಗುವನ್ನು ಸಚೇತನಗೊಳಿಸಿದ ಮತ್ತು ತಂದೆ-ತಾಯಂದಿರನ್ನು ಸಂತಸಗೊಳಿಸಿದ!

14
ಕೂಡಲೇ ಅಲ್ಲಿಂದ ಮಾಯವಾದ.
ಯಥಾಕಾಲಕ್ಕೆ ಮಗುವಿನ ಜಾತಕರ್ಮಗಳು ನೆರವೇರಿಸಲಾದವು. ನಂದಿಕೇಶ್ವರನ ಪ್ರಸಾದದಿಂದ ಜನಿಸಿದ ಮೂಲಕ ಮಗುವಿಗೆ 'ಬಸವ' ಎಂಬ ಮುದ್ದು ಹೆಸರು ಇಡಲಾಯಿತು. ಬಸವನು ಕೆಲಕಾಲ ತನ್ನ ಮುಗ್ಧಲೀಲೆಗಳಿಂದ ತಂದೆತಾಯಂದಿರನ್ನು ಸಂತಸದ ಕಡಲಲ್ಲಿ ತೇಲಿಸಿದನು, ಮುಳುಗಿಸಿದನು. ಆದರೆ ಆತನ ಬಾಲಕೇಳಿಗಳನ್ನು ಕಂಡು ತಣಿಯುವ ಭಾಗ್ಯ ಅವರಿಗೆ ಲಭಿಸಲಿಲ್ಲ. ಹಾಗೂ ಅವರ ಒಲವಿನ ನೆಳಲಲ್ಲಿನಲಿಯುವ ಭಾಗ್ಯ ಅವನಿಗೆ ಬಹುಕಾಲ ದೊರೆಯಲಿಲ್ಲ. ಕೂಸು ಇನ್ನೂ ಚಿಕ್ಕದು ಇರುವಾಗಲೇ ತಂದೆ ತಾಯಂದಿರು ಕೈಲಾಸಕ್ಕೆ ತೆರಳಿದರು. ಮುಂದೆ ಅದು ತನ್ನ ಶಿವಭಕ್ತಿ ಮುತ್ತಂತಿರ್ದ ಮುತ್ತಜ್ಜಿಯ' ಪಕ್ಕದೊಳು ಸುಖದಿಂದ ಬೆಳೆಯಿತು.

ಬಾಲ್ಯ-ವಿದ್ಯಾರ್ಜನೆ

ಬಾಲ ಬಸವನು ತನ್ನ ಬಗೆಬಗೆಯ ಲೀಲೆಗಳಿಂದ ತನ್ನ ಪೂಜ್ಯಳಾದ ಮುತ್ತಜ್ಜಿಯನ್ನೂ ಪ್ರಿಯ ಅಕ್ಕನನ್ನೂ ನಲಿಸುತ್ತಿದ್ದನು. ಸ್ವಲ್ಪ ದೊಡ್ಡವ ಆದ ಮೇಲೆ ಅವನು ಅಲ್ಲಿಯ ಬಾಲಕರ ಬಳಗವನ್ನು ಸೇರಿ, ಅವರೊಡನೆ ಆಟಪಾಟಗಳಲ್ಲಿ ಮೈಮರೆಯತೊಡಗಿದನು. ಅವನ ಅಂದವಾದ ರೂಪವೂ ಬುದ್ಧಿಯೂ ವಿಶಾಲ ಹೃದಯವೂ ಮೃದುಮಧುರ ವಾಣಿಯೂ ಬಸವನಿಗೆ ಬಾಲಕರ ಬಳಗದಲ್ಲಿ ಒಂದು ಹಿರಿಯ ಸ್ಥಾನವನ್ನು ಸಹಜವಾಗಿಯೇ ಕಲ್ಪಿಸಿಕೊಟ್ಟವು. ಆತನ ವ್ಯಕ್ತಿತ್ವದ ಆಕರ್ಷಣವು ಅಂದಿನಿಂದಲೂ ಕಾಣಿಸಿಕೊಳ್ಳುತ್ತಿತ್ತು, ಬಾಲಕರೆಲ್ಲ ಆತನ ಮಾತನ್ನು ಕೇಳಲು, ಆತನು ಹೇಳಿದಂತೆ ನಡೆಯಲು, ಆತನನ್ನು ಎಲ್ಲೆಲ್ಲಿಯೂ ಹಿಂಬಾಲಿಸಲು ಸದೈವ ಸಿದ್ಧರಿರುತ್ತಿದ್ದರು. ಬಸವನು ನುಡಿದಂತೆ ನಡೆವ, ತನ್ನಂತೆ ಪರರನ್ನು ಬಗೆವ, ಪರರ ನೋವಿನಿಂದ ನೊಂದುಕೊಳ್ಳುವ, ಅವರ ನಲಿವಿನಿಂದ ನಲಿವ. ಆಗಾಗ ಭಕ್ತಿಪರವಶನಾಗಿ ಶಿವಧ್ಯಾನದಲ್ಲಿ ಮೈಮರೆಯುವ. ಆಗ ಅವನು ಊರ ನೆರೆಯಲ್ಲಿ ನಂದೀಕೇಶ್ವರನ ದೇವಾಲಯಕ್ಕೆ ತೆರಳುವ. ಅವನೆದುರು ಧ್ಯಾನಮಗ್ನನಾಗಿ

15

ಕುಳಿತುಕೊಳ್ಳುವ, ಇವೆಲ್ಲ ಸಂಗತಿಗಳ ಫಲವಾಗಿ ಆತನ ಮುಖದ ಮೇಲೆ ಒಂದು ಅಲೌಕಿಕ ಕಾಂತಿಯು ಹೊಳೆಯುತ್ತಿತ್ತು. ಅವನ ಮಾತಿನಲ್ಲಿ ವಿಲಕ್ಷಣವಾದ ಸೆಳೆತವು ನೆಲೆಗೊಂಡಿದ್ದಿತು. ಅದರ ಮೂಲಕ ಬಸವನ ಸಂಗಡಿಗರ ಒಲವನ್ನೂ ಗೌರವವನ್ನೂ ಗಳಿಸಿದ್ದನು.

ಬಾಗೇವಾಡಿಯು ಒಂದು ಅಗ್ರಹಾರ, ಅಗ್ರಹಾರಗಳು ನಮ್ಮ ನಾಡಿನಲ್ಲಿಯ ಒಂದು ಕಾಲದ ಶಿಕ್ಷಣ ಕೇಂದ್ರಗಳಾಗಿದ್ದವು. ಇಂಥ ಕೇಂದ್ರಗಳ ಹೇರಳತೆಯಿಂದಲೇ ನಮ್ಮ ನಾಡಿನ ಸಂಸ್ಕೃತಿಯು ಪ್ರಾಚೀನ ಕಾಲಲ್ಲಿಯೂ ಮಧ್ಯಯುಗದಲ್ಲಿಯೂ ಚೆನ್ನಾಗಿ ಬಾಳಿ ಬೆಳೆಯಿತು. ಎಲ್ಲ ಅಗ್ರಹಾರಗಳಂತೆ ಬಾಗೇವಾಡಿಯು ಕೂಡ ರಮಣೀಯವಾದ ಪ್ರಾಕೃತ ಪರಿಸರದಲ್ಲಿ ನೆಲೆಸಿದ ಒಂದು ಹಳ್ಳಿಯಾಗಿದ್ದಿತು. ಅದು ಸ್ವಯಂಪೂರ್ಣವಾಗಿದ್ದಿತು. ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಭೋಜನಗಳು ಲಭಿಸುತ್ತಿದ್ದವು. ಅಲ್ಲಿ ವೇದ, ವೇದಾಂತ, ಪುರಾಣ, ಸ್ಮೃತಿ, ದರ್ಶನ, ಭಾಷೆ, ಸಾಹಿತ್ಯ, ಕಾವ್ಯ, ನಾಟಕ ಹಾಗೂ ಬೇರೆ ಲಲಿತಕಲೆಗಳ ಶಿಕ್ಷಣವು ಕೊಡಲಾಗುತ್ತಿತ್ತು. ಒಂದೊಂದು ವಿದ್ಯೆಯಲ್ಲಿ ಪಾರಂಗತತೆಗೆ ತುಂಬ ಪ್ರಾಧಾನ್ಯವಿದ್ದಿತು. ಸ್ಮೃತಿಶಕ್ತಿ ಸಮಯ ಸೂಚಕತೆ, ವಾದಕೌಶಲ್ಯ, ಮಾತುಗಾರಿಕೆ ಇವುಗಳಿಗೆ ಹೆಚ್ಚಿನ ಬೆಲೆಯು ನೀಡಲಾಗುತ್ತಿದ್ದಿತು. ಈ ಬಗೆಯ ಶಿಕ್ಷಣವು ಅಲ್ಲಿ ದೊರೆಯುತ್ತಿದ್ದಿತು. ಬಸವನ ತಂದೆಯವರು ಈ ಅಗ್ರಹಾರದ ಒಡೆಯರು- ಪ್ರಮುಖರು ಇದ್ದುದರಿಂದ, ಅವರು ನಿಧನಹೊಂದಿದರೂ ಕೂಡ, ಬಸವನ ಶಿಕ್ಷಣವು ಚೆನ್ನಾಗಿಯೇ ನಡೆಯಿತು. ಅಕ್ಕ ನಾಗಾಂಬಿಕೆಯು ಸುಸಂಸ್ಕೃತಳು ಮತ್ತು ಸುಶಿಕ್ಷಿತಳು. ಪೂಜ್ಯ ತಂದೆಯವರಿಂದ ಒಳ್ಳೆಯ ಶಿಕ್ಷಣವನ್ನು ಪಡೆದವಳು. ಬಾಲಬಸವನಿಗೆ ಅವಳೇ ಕನ್ನಡ ಓದುಬರಹವನ್ನು ಕಲಿಸಿದಳು.

2. H.K.P. 156: “The Agraharas may be said to have constituted the real Universities of Mediaval India.., the schools of universal learning.”

(Kadambakula, P 287)

16

ಅಜ್ಜಿಯೂ ಅಕ್ಕನೂ ಅವನಿಗೆ ಮಹಾಭಾರತ, ರಾಮಾಯಣ, ಹಾಗೂ ಶೈವಪುರಾಣಗಳಲ್ಲಿಯ ಕಥೆಗಳನ್ನು ಹೇಳಿ ಆತನ ಎಳೆಯ ಹೃದಯದಲ್ಲಿ ಭಕ್ತಿಯ ಒಳ್ಳೆ ಸಂಸ್ಕಾರಗಳನ್ನು ಮೂಡಿಸಿದರು. ಬಸವನ ಎಂಟನೆಯ ವರುಷ ಆತನ ಉಪನಯನವಾಯಿತು. ತಂದೆಯವರಿರುವಾಗಲೇ ನಾಗಮ್ಮನ ಮದುವೆ ಆದ ಮೂಲಕ, ಅವಳ ಯಜಮಾನನಾದ ಶಿವದೇವನು ಅವರ ಮನೆಯ ವ್ಯವಸ್ಥೆಯನ್ನು ನೋಡಲು ಅಲ್ಲಿಯೇ ಬಂದು ನಿಂತಿದ್ದನು. ಅವನು ಬಸವನಿಗೆ ಸಂಧ್ಯಾವಂದನೆ, ಪುರುಷಸೂಕ್ತ ಮತ್ತು ಪೂಜಾವೈಶ್ವದೇವಾದಿ ಮಂತ್ರಗಳನ್ನು ಕಲಿಸಿದನು. ಮುಂದೆ ಬಸವನು ಪಾಠಶಾಲೆಯಲ್ಲಿ ಹೆಚ್ಚಿನ ಅಧ್ಯಯನವನ್ನು ನಡೆಸಿದನು. ಅಲ್ಲಿ ಅವನು ಪಂಡಿತ-ಗುರುಗಳಿಂದ ಸಂಸ್ಕೃತವನ್ನೂ ವೇದ, ಆಗಮ, ಉಪನಿಷತ್ತುಗಳು, ಶೈವಪುರಾಣಗಳು ಇತ್ಯಾದಿ ವಿಷಯಗಳನ್ನೂ ಕಲಿಯಲಾರಂಭಿಸಿದನು. ಮಿಕ್ಕ ಸಮಯವನ್ನು ಅವನು ಗೆಳೆಯರೊಡನೆ ಆಟ ನೋಟಗಳಲ್ಲಿ ಕಳೆಯುತ್ತಿದ್ದನು.

ಬಸವನ ಗೆಳೆಯರಲ್ಲಿ ಕೃಷ್ಣ ಅವನ ನೆಚ್ಚಿನವನು. ಇಬ್ಬರೂ ಒಬ್ಬರನ್ನು ಒಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಅವರು ಬಹುತರವಾಗಿ ಒಂದೆಡೆಯಲ್ಲಿಯೇ ಇರುತ್ತಿದ್ದರು. ಅವರು ಸದೈವ ಕೂಡಿಯೇ ಆಡುವರು. ಬಸವನ ಮನೆಯೇ ಕೃಷ್ಣನ ಮನೆಯಾಗಿತ್ತು ಒಮ್ಮೆಯಂತೂ ಬಸವನು ಕೃಷ್ಣನನ್ನು ಒಂದು ಭೀಕರ ಗಂಡಾಂತರದಿಂದ ಉಳಿಸಿದನು. ಅದರಿಂದ ಬಸವನಲ್ಲಿ ಕೃಷ್ಣನ ಪ್ರೀತಿವಿಶ್ವಾಸಗಳು ಅತಿಯಾಗಿ ಬೆಳೆದವು. ಈ ಘಟನೆಯು ನಡೆದುದು ಕೆಳಗೆ ಕಾಣಿಸಿದಂತೆ:

ಒಂದು ದಿನ ಬಸವನು ತನ್ನ ಬಾಲಗೆಳೆಯರೊಡನೆ ಈಜಲು ಒಂದು ದೊಡ್ಡ ಬಾವಿಗೆ ಹೋದನು. ಬಾವಿಯಲ್ಲಿ ಎಲ್ಲರೂ ತುಂಬ ಉತ್ಸಾಹದಿಂದ ಈಜುಬಿದ್ದರು. ಕೂಡಲೇ ಅವರು ನೀರಿನಲ್ಲಿ ಬಗೆಬಗೆಯ ಆಟಗಳನ್ನು ಪ್ರಾರಂಭಿಸಿದರು. ಕೆಲವರು ಮೇಲಿನಿಂದಲೇ ನೀರಿನಲ್ಲಿ ಜಿಗಿದರು; ಕೆಲವರು ಅದರಲ್ಲಿ ಸುರಂಗಗಳನ್ನು ಹೊಡೆದರು; ಕೆಲವರು ನೀರಿನಲ್ಲಿ ಮುಳುಗುವ ಆಟವನ್ನು ಆಡಿದರು; ಕೆಲವರು ಪರಸ್ಪರರ ಮುಖದ ಮೇಲೆ ನೀರು ಕೊಚ್ಚ ತೊಡಗಿದರು. ಕೃಷ್ಣನು ಅದೇ ಈಜಲು

17

ಕಲಿತಿದ್ದನಾದರೂ ಉತ್ಸಾಹದ ಭರದಲ್ಲಿ ಅವನು ಈ ಚೆಲ್ಲಾಟದಲ್ಲಿ ಭಾಗವಹಿಸಿದನು. ಆತನ ಈ ಹೊಸತನವನ್ನರಿಯದ ಒಬ್ಬ ಬಾಲಕ ಚೇಷ್ಟೆಯಿಂದ ಅವನ ಮುಖದ ಮೇಲೆ ಜೋರಾಗಿ ನೀರು ಗೊಜ್ಜಿದನು. ಅದರಿಂದ ಕೃಷ್ಣನು ತುಂಬ ಗಾಬರಿಯಾದನು. ಅದೇ ಸಮಯಕ್ಕೆ ಅವನ ಬಾಯಿಯಲ್ಲಿ ನೀರು ಸೇರಿ, ಅವನು ಮುಳುಗತೊಡಗಿದನು. ಈ ರೀತಿ ನಗೆಯು ಹೊಗೆಯಾಗ ತೊಡಗಿದುದನ್ನು ಕಂಡು ಬಾಲಕರೆಲ್ಲ ಹೆದರಿ ಅಲ್ಲಿಂದ ಓಡಿಹೋದರು. ಕೃಷ್ಣನನ್ನು ಬಸವ ಮುಳುಗಿಸಿದನೆಂದು ಊರಲ್ಲೆಲ್ಲ ಸಾರತೊಡಗಿದರು. ಈ ನಗೆಯಾಟದಿಂದ ತನ್ನ ನೆಚ್ಚಿನ ಗೆಳೆಯನಿಗೆ ಒದಗಿದ ಈ ಗಂಡಾಂತರವನ್ನು ಕಂಡು ಬಸವನೂ ಗಾಬರಿಕೊಂಡನು. ಆದರೆ ಎಲ್ಲರಂತೆ ಅಲ್ಲಿಂದ ಓಡಿಹೋಗದೆ ಅವನು ನೀರಿನಲ್ಲಿ ಜಿಗಿದು, ಕೃಷ್ಣನ ಚಂಡಿಕೆಯನ್ನು ಹಿಡಿದು ಎತ್ತಿ ಅವನನ್ನು ಬಾವಿಯ ದಂಡೆಗೆ ಎಳೆದು ತಂದನು. ಅಷ್ಟರಲ್ಲಿ ಬಾಲಕರ ಬೊಬ್ಬಾಟವನ್ನು ಕೇಳಿ ಊರ ಜನರೆಲ್ಲ ಅಲ್ಲಿಗೆ ಧಾವಿಸುತ್ತಲೇ ಬಂದರು. ಕೃಷ್ಣನ ತಂದೆತಾಯಂದಿರು ಬಸವನನ್ನು ಶಪಿಸುತ್ತ ಬಂದು ನೋಡುತ್ತಾರೆ — ಕೃಷ್ಣನು ನಿಶ್ಚೆಷ್ಟನಾಗಿ ಬಿದ್ದಿರುವ. ಬಸವನು ಅವನ ಬಳಿ ಕಂಬನಿಗಳನ್ನು ಸುರಿಸುತ್ತ ಕುಳಿತಿರುವ. ರೇಗಿಗೆದ್ದ ಕೆಲವರು ಬಸವನನ್ನು ಬೈಯಲು ಹಾಗೂ ಬಡಿಯಲು ಕೂಡ ಹಿಂಜರಿಯಲಿಲ್ಲ. ಬಸವನು ಅದನ್ನೆಲ್ಲ ಸಹಿಸಿಕೊಂಡನು. ಕೃಷ್ಣನಿಗೆ ಕೂಡಲೇ ಪ್ರಥಮೋಪಚಾರವು ನಡೆಯಿತು. ಶರೀರವನ್ನು ಸ್ವಲ್ಪ ಕಾಯಿಸಲಾಯಿತು. ಒಂದು ಅರ್ಧ ಗಂಟೆಯಲ್ಲಿ ಅವನ ಶ್ವಾಸೋಚ್ಚ್ವಾಸ ಸರಿಯಾಗಿ ನಡೆಯಿತು. ಆತನು ಸಚೇತನಾದ, ಕಂಗಳನ್ನು ತೆರೆದ. ಕೂಡಲೇ "ಬಸವಣ್ಣನೆಲ್ಲಿ?” ಎಂದು ಕೇಳಿದ. ಬಸವನ ದುಃಖಾಶ್ರುಗಳು ಆನಂದಾಶ್ರುಗಳಾಗಿ ಪರಿಣಮಿಸಿದವು. ಕೃಷ್ಣನು ಬಸವನನ್ನು ಬಿಗಿಯಾಗಿ ಅಪ್ಪಿಕೊಂಡು ಅಂದ: "ಬಸವಣ್ಣಾ! ಏನು ಹೇಳಲಿ? ನಾನು ಇದೀಗ ಒಂದು ಅದ್ಭುತ ಕನಸನ್ನು ಕಂಡೆನಯ್ಯಾ! ನೀರಿನಲ್ಲೆಲ್ಲ ಅಲೌಕಿಕ ಬೆಳಕೊಂದು ಹೊಳೆಯಿತು! ಅದರಲ್ಲಿ ನೀನು ಬಂದು ನನ್ನನ್ನು ಎತ್ತಿಕೊಂಡೆ! ಹೆದರದಿರು ಎಂದೆ. ಬಸವಣ್ಣಾ! ನಿನ್ನಿಂದಲೇ ನಾನಿಂದು ಉಳಿದೆ. ನಿನ್ನ ಉಪಕಾರಕ್ಕೆ ಎಣೆ ಇಲ್ಲ! ನೋಡಾ

18

!" ಹೀಗೆಂದು ಕೃಷ್ಣನು ಬಸವನನ್ನು ಅಶ್ರುಗಳಿಂದ ಎರೆದ. ಅದನ್ನು ಕೇಳಿ ಬಸವನೆಂದ: "ಕೃಷ್ಣಾ ನಿನ್ನನ್ನು ಉಳಿಸಿರುವನು ಪರಶಿವನಯ್ಯ!

ಆತ ಕೊಲಬಯಸಿದರೆ, ಕಾಯಬಲ್ಲವರಾರು? ಆತ ಕಾಯುತಲಿರಲು, ಕೊಲ್ಲಬಲ್ಲವರಾರು?

ಆದುದರಿಂದ ಆತನನ್ನೆ ನಂಬುತಿರು, ನೆನೆಯುತಿರು! ಆತನಡಿಗಳ ನೆಮ್ಮಿ ನಿಲ್ಲುತಿರು, ನಲಿಯುತಿರಯ್ಯಾ! ಬಸವನ ಈ ಸ್ಪೂರ್ತಿಯುತ ಬೋಧನೆಯನ್ನು ಕೇಳಿ ನೆರೆದ ಜನರೆಲ್ಲ ಆತನನ್ನು ಕೊಂಡಾಡಿದರು. ಬಸವನನ್ನು ಹಿಂಸಿಸಿದವರು ಅತಿಯಾಗಿ ವ್ಯಸನಪಟ್ಟರು. ಬಸವನ ಬಾಲ್ಯವು ಈ ಬಗೆಯ ಅಧ್ಯಯನ ಧ್ಯಾನಗಳಲ್ಲಿಯೂ ಆಟನೋಟಗಳಲ್ಲಿಯೂ ಸಲೀಲವಾಗಿ ಸಾಗಿತು. ಅವನು ಗ್ರಾಮದ ಎಲ್ಲ ಜನರ ಕಣ್ಮಣಿ ಆದನು. ನಿಧಾನವಾಗಿ ಆತನು ಯೌವನದಲ್ಲಿ ಕಾಲಿರಿಸಿದನು.

ಪರಿವರ್ತನ

ಬಸವಣ್ಣನ ದಾರ್ಶನಿಕ ಬುದ್ಧಿಯು ಅತೀವ ಸ್ವತಂತ್ರವಾದುದು, ಹರಿತ ಆದುದು; ಅವನ ಕವಿಹೃದಯವು ಬಲು ಕೋಮಲವಾದುದು, ವಿಶಾಲ ಆದುದು; ಅವನ ಛಲವು ದೃಢವಾದುದು, ಅಚಲವಾದುದು. ಶಿವನಲ್ಲಿಯ ಆತನ ಭಕ್ತಿಯು ಅದ್ವಿತೀಯವಾದುದು, ಅಲೌಕಿಕವಾದುದು. ಬಸವಣ್ಣನ ಪಾವನವಾದ ಜೀವನಮಂದಿರವು ಈ ನಾಲ್ಕು ಕಂಬಗಳನ್ನು ಆಶ್ರಯಿಸಿರುವುದು. ಈ ಶಾಶ್ವತ ತಳಹದಿಯ ಮೇಲೆ ನಿಂತಿರುವದು. ಅವನ ಬುದ್ದಿಯು ಎಲ್ಲ ವಿಷಯಗಳ ಸಾರವನ್ನು ಅರಿಯಲು ಯತ್ನಿಸಿತು, ಹೃದಯವು ಪರಿಸರದ ನೋವಿನಿಂದ ನವೆಯಿತು, ನಲಿವಿನಿಂದ ನಲಿಯಿತು. ಬುದ್ದಿಯು ಕಾಣಿಸಿದ ಸಾರಭೂತ ತತ್ತ್ವಗಳನ್ನೂ ಅಂತರಂಗದಲ್ಲಿ ಜನಿಸಿದ ಭಾವಲಹರಿಗಳನ್ನೂ ಅದು ವಚನಗಳ ಸವಿನುಡಿಗಳಲ್ಲಿ ಮೂಡಿಸಲು ಯತ್ನಿಸಿತು. ಬಸವಣ್ಣನ ನುಡಿಯು 'ಮುತ್ತಿನ ಹಾರವಾಯಿತು, ಮಾಣಿಕ್ಯದ ದೀಪ್ತಿಯಾಯಿತು, ಸ್ಫಟಿಕದ ಸಲಾಕೆ ಆಯಿತು'. ಅದು ಜನರ ಮೆಚ್ಚುಗೆಯನ್ನು ಪಡೆಯಿತು.

19

ಅದೇ ಮೇರೆ ಬಸವಣ್ಣನು 'ಉರಿ ಬರಲಿ! ಸಿರಿ ಬರಲಿ' ನುಡಿದಂತೆ ನಡೆವ, ಕಂಡುದನು ಆಡುವ! ಇದು ಬಸವಣ್ಣನು ಪಡೆದ ಅನುವಂಶಿಕ ಸೊತ್ತು.

ಮುಂದೆ ಗುರುಹಿರಿಯರಿಂದಲೂ ಆತನು ಈ ಪಾಠಗಳನ್ನೆ ಕಲಿತನು. "ಸತ್ಯಂ ವದ!" "ಧರ್ಮ೦ ಚರ!" ಎಂದು ಬೋಧಿಸಿದರು ಗುರುಗಳು. 'ದಿಟವ ನುಡಿ, ನುಡಿದಂತೆ ನಡೆ' ಎಂಬುದು ಬಸವಣ್ಣನ ಸತ್ಯಾಚಾರವಾಯಿತು. 'ತನ್ನಂತೆ ಪರರ ಬಗೆ, ಪರಶಿವನನ್ನು ನೆನೆ' ಎಂಬುದು ಆತನ ಧರ್ಮಾಚಾರ ಆಯಿತು. ಎಳೆತನದಲ್ಲಿ ಪಡೆದ ಈ ಬೋಧೆಯು ಸುಸಂಸ್ಕೃತವಾದ ಆತನ ಹೃದಯದಲ್ಲಿ ಚೆನ್ನಾಗಿ ಬೇರೂರಿತು, ಹುಲುಸಾಗಿ ಬೆಳೆಯಿತು. ಈ ನೆಲೆಯಾಗಿ ನೆಲೆಸಿದ ಸಂಸ್ಕಾರಗಳನ್ನು ವಿರೋಧಿಸುವ ಸಂಗತಿಗಳನ್ನು ಬಸವಣ್ಣನು ಸಹಿಸುತ್ತಿರಲಿಲ್ಲ. ಅವನ್ನು ಕಂಡಾಕ್ಷಣ ಅವನ ಬುದ್ಧಿಯು ಕೆರಳುವುದು, ಹೃದಯವು ಅತಿಯಾಗಿ ಕದಡುವದು. ಅವನ ಅಂತರಂಗದಲ್ಲಿ ಅಂದು ಆಶಾಂತಿಯ ಕೋಲಾಹಲ! ಆಗವನು ತುಂಬ ವಿಚಾರಮಗ್ನನಾಗುವ. ಏನೂ ತೋಚದಂತೆ ಆಗಲು ಅವನು ಊರ ಬಳಿಯ ದೇವಾಲಯದಲ್ಲಿ ಧ್ಯಾನಮಗ್ನನಾಗಿ ಕುಳಿತುಕೊಳ್ಳುವ. ಮನಃಶಾಂತಿಯನ್ನು ಪಡೆಯಲೆತ್ನಿಸುವ.

ಬಸವಣ್ಣನ ಬುದ್ದಿಯನ್ನು ಅಂದು ತುಂಬ ಕೆರಳಿಸಿದ ಸಮಸ್ಯೆಗಳಲ್ಲಿ ಮುಂದಿನವು ಪ್ರಧಾನವಾದವುಗಳು. ಪಾಠಶಾಲೆಯಲ್ಲಿ ಗುರುಗಳು ಆತನಿಗೆ 'ದ್ಯಾವಾಭೂಮಿಂ ಜನಯನ್ ದೇವ ಏಕಃ' ಎಂಬುದನ್ನು ಕಲಿಸಿದ್ದರು. ಆದರೆ ಅವರೇ ಬ್ರಹ್ಮ-ವಿಷ್ಣು-ಮಹೇಶ್ವರರನ್ನೂ ಇಂದ್ರ-ಅಗ್ನಿ-ವಾಯು ಇತ್ಯಾದಿ ಅನೇಕ ದೇವ-ದೇವತೆಗಳನ್ನೂ ಪೂಜಿಸುತ್ತಿದ್ದರು. ಅವರ ನುಡಿ-ನಡೆಗಳಲ್ಲಿಯ ವಿರೋಧವು ಬಸವಣ್ಣನನ್ನು ಸಂದೇಹದಲ್ಲಿ ಮುಳುಗಿಸಿತು. ದೇವರು ಒಬ್ಬನೇ? ಹಲವರೇ? ಒಬ್ಬನಿದ್ದರೆ ಹಲವರ ಪೂಜೆ ಏಕೆ? ಹಲವರು ಇದ್ದರೆ "ಏಕೋ ದೇವಃ' ಎಂದು ಹೇಳುವದೇಕೆ? ಈ ಸಮಸ್ಯೆಯು ಅವನ

20

ತಲೆಯನ್ನು ತಿನ್ನಹತ್ತಿತು. ದೇವನು ದಯಾಮಯನು. ಆತನು ಸಕಲ ಪ್ರಾಣಿಗಳನ್ನು ಪ್ರೀತಿಸುವನು! ರಕ್ಷಿಸುವನು! ಎಂಬುದನ್ನು ಬಸವಣ್ಣನು ಗುರುಹಿರಿಯರಿಂದ ಅನೇಕ ಸಲ ಅರಿತಿದ್ದನು. ಅದೇ ಮೇರೆಗೆ ಅಂಥ ಹಿರಿಯರೇ ಯಜ್ಞ ಯಾಗಾದಿಗಳಲ್ಲಿ ಪ್ರಾಣಿಹಿಂಸೆ ಮಾಡಿದುದನ್ನು ಕೇಳಿದ್ದನು. ಆದುದರಿಂದ ದಯಾಮಯನಾದ ಭಗವಂತನು ಪ್ರಾಣಿಗಳ ಕೊಲೆಯನ್ನು ಸಹಿಸಬಲ್ಲನೆ? ಅವುಗಳ ಬಲಿಯನ್ನು ಸೇವಿಸಬಲ್ಲನೆ? ಇಂಥ ಹಿಂಸಾಯುಕ್ತಯಾಗದಿಂದ ಭಗವಂತನ ಯೋಗ ಸಾಧ್ಯವೇ? ಎಂಬುದು ಆತನ ಎಳೆಹೃದಯವನ್ನು ಕದಡಿಸಿದ ಬೇರೊಂದು ಸಮಸ್ಯೆ. ಭಗವಂತನೇ ಜಗತ್ತಿನ ಜನಕ! ಆತನೇ ಎಲ್ಲರ ತಂದೆ, ತಾಯಿ! ಎಲ್ಲ ಜನ ಆತನ ಮಕ್ಕಳು! ಅಂದಮೇಲೆ ಅವರೆಲ್ಲ ಒಂದೇ ಬಳಗದವರು, ಬಂಧುಭಗಿನಿಯರು. ಹೀಗಿರಲು ಅವರಲ್ಲಿ ಮೇಲು ಕೀಳೆಂಬುದು ಎಲ್ಲಿಂದ ಬಂತು? ಈ ಸಮಸ್ಯೆಯು ಆತನನ್ನು ಕಾಡತೊಡಗಿತು.

ಬಸವಣ್ಣನು ಆಗಾಗ ಈ ಸಮಸ್ಯೆಗಳನ್ನು ಕುರಿತು ತನ್ನ ಗೆಳೆಯರೊಡನೆ ಚರ್ಚಿಸಿದ. ಅವನ್ನು ಕೆಲ ಹಿರಿಯರೆದುದು ಇರಿಸಿ, ಅವರಿಂದ ಅವುಗಳ ಪರಿಹಾರ ಪಡೆಯಲು ಯತ್ನಿಸಿದ. ಆದರೆ ಅವರಿಂದ ಅದು ಅವನಿಗೆ ಲಭಿಸಲಿಲ್ಲ. ಕೆಲವರು ಅವನನ್ನು ದಬಾಯಿಸಿದರು, ಕೆಲವರು ಛೇ ಹಾಕಿದರು. ಬೇರೆ ಕೆಲವರು, ಸತ್ಪುರುಷರಿಂದ ಅದನ್ನು ಪಡೆಯಲು ಬೋಧಿಸಿದರು. ಆದರೆ ಅನುಭಾವಿ ಸತ್ಪುರುಷರನ್ನಾದರೂ ಪಡೆಯುವದೆಲ್ಲಿ? ಪಡೆಯುವದು ಎಂತು? ಕೊನೆಗೆ ಬಸವಣ್ಣನು ವಾಡಿಕೆಯಂತೆ ಶಿವಾಲಯಕ್ಕೆ ಹೋಗಿ ಶಿವನ ಎದುರು ತನ್ನ ಹೃದಯವನ್ನು ತೆರೆದಿಟ್ಟನು:

ಏನಯ್ಯಾ! ವಿಪ್ರರು ನುಡಿದಂತೆ ನಡೆಯರು. ಇದೆಂತಯ್ಯಾ!
ತಮಗೊಂದು ಬಟ್ಟೆ! ಶಾಸ್ತ್ರಕ್ಕೊಂದು ಬಟ್ಟೆ!
ನೀರ ಕಂಡ ಮುಳುಗುವರಯ್ಯಾ!
ಮರನ ಕಂಡ ಸತ್ತುವರಯ್ಯಾ!
ಬತ್ತುವ ಜಲವನೊಣಗುವ ಮರನ ಮೆಚ್ಚಿದವರು
ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವಾ!

21

"ಕಿಚ್ಚು ದೈವವೆಂದು ಹವಿಯನಿಕ್ಕುವರು. ಅವರ ವೇದಶಾಸ್ತ್ರ ಹೋತಿಂಗೆ ಮಾರಿಯಾಗಿಹುದು. ಕೊಲುವನು ಮಾದಿಗನಲ್ಲವೇ? ಹುಸಿವನು ಹೊಲೆಯ ಅಲ್ಲವೇ? ಸಕಲರಿಗೆ ಲೇಸ ಬಯಸುವವರೇ ಕುಲಜರಲ್ಲವೇ? ಬಸವಣ್ಣನವರ ಮನಸ್ಸು ಈ ಬಗೆಯ ಭಾವಲಹರಿಗಳ ಮೇಲೆ ಎನಿತು ಕಾಲ ವಿಹರಿಸಿತೋ? ಎನಿತು ಸಲ ಈ ಬಗೆಯಾಗಿ ವಿಹರಿಸಿತೋ?

ಬಸವಣ್ಣನು ಇಂಥ ಮನಃಸ್ಥಿತಿಯಲ್ಲಿರುವಾಗ ಬಾಗೇವಾಡಿಯಲ್ಲಿ ಒಂದು ವಿಶೇಷ ಘಟನೆಯು ಜರುಗಿತು. ಅದರಿಂದ ಬಸವಣ್ಣನ ಜೀವನದಲ್ಲಿ ಅದ್ಭುತವಾದ ಪರಿವರ್ತನವು- ಕ್ರಾಂತಿಯು ಉಂಟಾಯಿತು. ಆವರೆಗೆ ಬಸವಣ್ಣನು ಯಜ್ಞದ ವರ್ಣನೆಯನ್ನು ಕೇಳಿದ್ದ ಅದರಲ್ಲಿ ನಡೆದ ಹಿಂಸೆಯ ಕಥೆಯನ್ನು ಕೇಳಿ ಕಳವಳಗೊಂಡಿದ್ದ ಕಿಡಿಕಿಡಿಯಾಗಿದ್ದ ಹೇಸಿಕೊಂಡಿದ್ದ. ಅಂಥ ಯಜ್ಞದ ಸಮಾರಂಭವೊಂದನ್ನು ನೋಡುವ ಸಂದರ್ಭವು ಬಾಗೇವಾಡಿಯಲ್ಲಿಯೇ ಅವನಿಗೆ ಲಭಿಸಿತು. ಯಜ್ಞವು ಒಳ್ಳೆಯ ವಿಜೃಂಭಣೆಯಿಂದ ನಡೆಯಿತು. ಅಗ್ರಹಾರವು ಹಬ್ಬದ ಉತ್ಸಾಹದಿಂದ ಮೆರೆಯಿತು. ಬಸವಣ್ಣನು ಯಜ್ಞದಲ್ಲಿಯ ಎಲ್ಲ ವಿಧಾನಗಳನ್ನು ತುಂಬ ಕುತೂಹಲದಿಂದ ನಿರೀಕ್ಷಿಸಿದ. ಪಶುವಧೆಯ ದಿನ ಯೂಪಕ್ಕೆ ಕಟ್ಟಿದ ಹೋತನ್ನು ಅವನು ನೆಟ್ಟನೋಟದಿಂದ ನೋಡುತ್ತ ನಿಂತ. ಆಗ ಅದರ ಕೊಲೆಯ ನೋಟವು ಆತನ ಒಳಗಣ್ಣಿನ ಎದುರು ಅಚ್ಚೊತ್ತಿದಂತೆ ನಿಂತಿತು. ಅದು ಅವನ ಕರುಳನ್ನು ಕರಗಿಸಿತು. ಕಂಗಳಿಂದ ಕಂಬನಿಗಳನ್ನು ಸುರಿಸಿತು. ಅಷ್ಟರಲ್ಲಿ ಆ ಹೋತಿನ ಕರುಣರವವು ಆತನಿಗೆ ಕೇಳಿಸಿತು. ಕೂಡಲೇ ಆತನ ಮುಖದಿಂದ ಕೆಣಗಣ ವಚನವು ನುಸುಳಿತು:

ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು
ಎಲೆ ಹೋತೆ! ಆಳು ಕಂಡಾ!
ವೇದವನೋದಿದವರ ಮುಂದೆ ಅಳು ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ!

22

ಬಸವಣ್ಣನ ಈ ಬಿರುನುಡಿಯನ್ನು ಕೇಳಿ, ಬಳಿಯಲ್ಲಿದ್ದ ವಿಪ್ರನು ಕಿಡಿಕಿಡಿ ಆದನು. "ಎಲೇ! ಏನು ಅಸಹ್ಯ ನುಡಿಯುತ್ತಿರುವಿ? ಅಬ್ರಹ್ಮಣ್ಯಂ! ಬಾಯಿ ಮುಚ್ಚು! ನಮ್ಮ ಈ ಯಜ್ಞದಲ್ಲಿ ಬಲಿಯಾಗಲಿರುವ ಈ ಹೋತು, ತಾನು ಸ್ವರ್ಗವನ್ನು ಏರುವದಲ್ಲದೇ, ನಮಗೆಲ್ಲ ಸ್ವರ್ಗದ ಸೌಭಾಗ್ಯವನ್ನು ಸಲ್ಲಿಸುವುದು! ಗೊತ್ತೇ? ಮರುಳನಂತೆ ಬೊಗಳಬೇಡ! ವಿಪ್ರನ ಈ ಕೋಪಾಟೋಪವು ಬಸವಣ್ಣನ ಕೋಪವನ್ನು ಕೆರಳಿಸಿತು. ಕನಿಕರವು ಅಡಗಿ ಕೋಪವು ಗುಡುಗಿತು!

"ಅಯ್ಯಾ! ಮರುಳ ನಾನಲ್ಲ ನೀವು! ಒಂದಾಡ ತಿಂಬಾತ ಹೊಂದುವಡೆ ಸ್ವರ್ಗವನು, ಎಂದೆಂದು ಆಡ ತಿಂಬುವ ಕಟುಕನು ಇಂದ್ರನಾಗಬೇಕಾದೀತು! ಖಂಡಿಸದೆ ಕರಣವನು, ದಂಡಿಸದೆ ದೇಹವನು, ಉಂಡುಂಡು ಸ್ವರ್ಗ ಸೇರಲಿಕೆ, ಅದನೇನು ರಂಡೆಯಾಳುವಳೇ? ಬಸವಣ್ಣನ ಈ ಗರ್ಜನೆಯು ಮಂಟಪದಲ್ಲಿ ಮಾರ್ದನಿಗೊಂಡು ಕೋಲಾಹಲವನ್ನೆಬ್ಬಿಸಿತು. "ದಬ್ಬರೀ ಮುಂಡೆಮಗನನ್ನ! ಎಂದು ರೇಗಿಗೆದ್ದ ವಿಪ್ರರೆಲ್ಲರು ಆತನ ಮೇಲೆ ಸಾಗಿಬಂದರು. "ಯಜ್ಞೋಪವೀತವನ್ನು ಧರಿಸಿದ ಬ್ರಾಹ್ಮಣನಾಗಿ ಈತನು ಯಜ್ಞವನ್ನು ಹಳಿವನು! ದೂಡಿರೀ ಕತ್ತೆಯನ್ನು ಇಲ್ಲಿಂದ! ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದರು. ಅದನ್ನು ಕೇಳಿ ಇಕೋ! ಕೊಳ್ಳಿರೀ ನಿಮ್ಮ ಯಜ್ಞೋಪವಿತವನ್ನು! ಅದು ಇಂಥ ಹೇಸಿ ಹಿಂಸೆಯ ಪ್ರತೀಕವಿದ್ದರೆ ಅದನ್ನು ಈಗಲೇ ಹರಿದೊಗೆವೆ! ಹೀಗೆಂದು ಬಸವಣ್ಣನು ತನ್ನ ಜನಿವಾರವನ್ನು ಹರಿದೆಸೆದು ಅಲ್ಲಿಂದ ಕೂಡಲೇ ಹೊರಟುಹೋದನು.

ಅವನು ಅಲ್ಲಿಂದ ನೇರವಾಗಿ ದೇವಾಲಯಕ್ಕೆ ತೆರಳಿದ. ಶಿವನ ಎದುರು ಕುಳಿತು ಕಂಬನಿಗರೆದ. ತನ್ನ ದುಗುಡವನ್ನು ಶಿವನಿಗೆ ಅರುಹಿದ. ಎಂದಿನಂತೆ ತನ್ನ ತಲೆ ತಿನ್ನುತ್ತಿದ್ದ ಸಂದೇಹಗಳನ್ನು ಆತನ ಎದುರು ಇರಿಸಿದ. "ದಾರಿದೋರೈ ಪ್ರಭುವೆ! ಹಾರೈಸುತಿಹ ಬಸವ! ಎಂದು ಅಂತಃಕರಣದಿಂದ ಪ್ರಾರ್ಥಿಸಿ ಧ್ಯಾನಸ್ಥನಾದ. ಕೂಡಲೇ ಮೈಮರೆತ.

23

ಕೆಲಕಾಲ ಕಳೆಯಿತು. ಆಗ ಆತನು ಒಂದು ಕನಸನ್ನೋ ಕಣಸನ್ನೋ ಕಂಡನು. ಎಲ್ಲೆಡೆ ಬೆಳದಿಂಗಳ ಬೆಳಕು! ಒಬ್ಬ ಮುನಿಯು ಎದುರು ನಿಂತಿರುವ, ಆತನ ಎರಗಿದ ಮಸ್ತಕದ ಮೇಲೆ ತನ್ನ ವರದಹಸ್ತವನ್ನಿರಿಸಿ ಮುನಿಯು ಅಂದ:

"ಸಂಗನೆಡೆ ನಡೆಸಯ್ಯ! ಹಿಂಗುವವು ಸಂದೇಹ!
ಬೇಗ ನಡೆಯೇ ಬಸವ! ಕಾಯುತಿರುವನು ದೇವ!"

ಈ ದಿವ್ಯ ಕರೆಯನ್ನು ಕೇಳಿ ಬಸವನು ಮುನಿಯೆಡೆ ನೋಡುವಷ್ಟರಲ್ಲಿ ಕನಸು ಆಳಿದು ಮುನಿಯು ಕಾಣದಾದ. ತನ್ನ ಕುಲದೇವನಾದ-ಇಷ್ಟದೇವನಾದ ಸಂಗಮನಾಥನ ಕರೆಯೇ ಇದೆಂದು ಬಗೆದು, ಬಸವಣ್ಣನು ಕೂಡಲಸಂಗಮ ಕ್ಷೇತ್ರಕ್ಕೆ ತೆರಳಲು ನಿಶ್ಚಯಿಸಿ, ಮನೆಗೆ ಬಂದ, ಮತ್ತು ನಡೆದ ಸಂಗತಿಯನ್ನು ಯಾರಿಗೂ ಆರುಹದೆ ತನ್ನ ಕೋಣೆಯಲ್ಲಿ ಮಲಗಿಕೊಂಡ.

ಸಂಗನೆಡೆಗೆ:

'ಭಗವಂತನ ಕರೆ ಬಂದಾಗ ಎಲ್ಲವನ್ನು ಬೆಂಕಿಯಲ್ಲಿ ಎಸೆಯಬೇಕಾಗುವದು' (When the call comes, into the bontfire all must go!) ಎಂದು ಓರ್ವ ಆಧುನಿಕ ಅನುಭಾವಿಗಳು ಉಸುರಿರುವರು. ಎಲ್ಲ ಅನುಭಾವಿಗಳಂತೆ ಬಸವಣ್ಣನು ಹಾಗೆಯೇ ಮಾಡಿದನು. ಮಧ್ಯರಾತ್ರಿಯ ಸಮಯ ಬಸವಣ್ಣನು ಎಚ್ಚತ್ತ, ಆತನ ಅಂತರಂಗದಲ್ಲಿ ಮರಳಿ ವಿಚಾರಲಹರಿಗಳು ಬಲವಾಗಿ ಅಲೆಯತೊಡಗಿದವು. 'ಕರ್ಮವೂ ಭಕ್ತಿಯೂ ಒಂದೆಡೆ ಅದೆಂತು ಇರಬಲ್ಲದು? ಸಂಗಮ ಕರೆದಿರುವ! ಇನ್ನು ತಡಮಾಡದೆ ನಾನು ಅವನೆಡೆ ತೆರಳಲೇಬೇಕು!' ಎಂದು ತನ್ನಲ್ಲಿಯೇ ನುಡಿದು ಬಸವಣ್ಣ ಹಾಸಿಗೆಯಿಂದ ಒಮ್ಮೆಲೆ ಎದ್ದ. ಅದನ್ನು ಸುತ್ತಿಟ್ಟ ಒಂದು ಧೋತರವನ್ನು ಹೊದ್ದುಕೊಂಡ! ಉಟ್ಟ ಧೋತರದೊಡನೆ ಹೊರಡಲು ಸಿದ್ಧವಾದ.


————

೮. ನೋಡು 'ನವ್ಯದುಕೂಲಮಂ ಉಟ್ಟು, ದಿವ್ಯವಸ್ತ್ರಮಂ ಪೊದೆದು.'ಬ.ರ.ಪು.೧೧

24

ಆಗ 'ಅಕ್ಕನದು ಅದೆಂಥ ಅಕ್ಕರೆ, ಭಾವನದು ಅದೆಂಥ ಪ್ರೀತಿ ನನ್ನ ಮೇಲೆ! ಅವರಿಗೆ ತಿಳಿಸದೆ ತೆರಳಬೇಕೆ? ಹೀಗೆ ಮಾಡುವದು ಉಚಿತವೇ?.... ಆದರೆ ತಿಳಿಸಿದರೆ ಅವರು ನನ್ನನ್ನು ತಡೆಯಲಿಕ್ಕಿಲ್ಲವೇ? ಹಾಗಾದರೆ ಸಂಗನ ಕರೆಯನ್ನು ಮೀರಿದಂತಾಗಲಿಕ್ಕಿಲ್ಲವೇ? ಅದನ್ನು ಮೀರುವದು ಒಳಿತೆ?... ಸರಿ. ತಿಳಿಸದೆ ತೆರಳುವುದೇ ಯೋಗ್ಯ. ಅದರಿಂದ ಅವರಿಗೆ ತುಂಬ ವ್ಯಸನವಾಗಬಹುದು, ನಿಜ. ನನ್ನನ್ನು ಕರೆದ ಸಂಗನು ಅವರನ್ನು ಸಂತೈಸಬಲ್ಲ, ನನಗೇಕೆ ಅದರ ಚಿಂತೆ?’ ಬಸವಣ್ಣನು ಸ್ವಲ್ಪ ತಡೆದ. ಏನನ್ನೋ ಯೋಚಿಸಿದ. ಬಳಿಯಲ್ಲಿಯ ಮಾಡಿನಲ್ಲಿಯ ಒಂದು ಕಾಗದದ ತುಂಡಿನ ಮೇಲೆ ಏನನ್ನೋ ಬರೆದು, ಅದನ್ನು ಅಲ್ಲಿಯೇ ಇರಿಸಿದ. ಭಕ್ತಿಭಾವದಿಂದ ಸಂಗನನ್ನು ಮನದಲ್ಲಿ ವಂದಿಸಿ 'ಜಯ ಸಂಗಮನಾಥ! ಕಾವುದು! ಎಂದು ಪ್ರಾರ್ಥಿಸಿ ಮನೆಯಿಂದ ಹೊರಹೊರಟ. 'ಮನೆನೆಳಲ್ವಂ ನೆನೆಯದೆ, ಅರ್ಥಮಂ ಲೆಕ್ಕಿಸದೆ, ವೃತ್ತಿಯಂ ವಿಚಾರಿಸದೆ, ಬಂಧುಗಳಂ ಬಗೆಯದೆ, ಪುರಜನಮಂ ಪರಿಕಿಸದೆ, ಹರಿಭಕ್ತಿಯೊಳಾತುರದಿಂ ಬಾಗೇವಾಡಿಯಂ ಪೊರಮಟ್ಟು ಪೂರ್ವದಿಶಾಮುಖನಾಗಿ. ಸಂಗನನ್ನು ನೆನೆಯುತ್ತ ನಡೆದ. ಕೂಡಲಸಂಮಗದ ದಾರಿಯು ಅವನಿಗೆ ಗೊತ್ತಿತ್ತು. ಆದರೆ ಅದರ ಬಗೆಗೆ ಯಾವ ಯೋಜನೆಯನ್ನು ಮಾಡದೆ, ಕಾಲುಗಳು ಒಯ್ದತ್ತ ಝಪಝಪನೆ ಹೆಜ್ಜೆ ಇಕ್ಕುತ್ತ ಬಸವಣ್ಣ ನಡೆದ. ಮುಗಿಲು ಹರಿಯುವಷ್ಟರಲ್ಲಿ ಅವನು ಬಾಗೇವಾಡಿಯಿಂದ ಎಷ್ಟೋ ಮೈಲು ದಾರಿಯನ್ನು ಆಕ್ರಮಿಸಿದ.

ಇತ್ತ ಮನೆಯಲ್ಲಿ ಬೆಳಿಗ್ಗೆ ಗೊಂದಲವೇ ಗೊಂದಲ! ನಸುಕಿನಲ್ಲಿ ಅಕ್ಕಭಾವಂದಿರು ಎದ್ದು "ಬಸವಾ ಎಂದು ವಾಡಿಕೆಯಂತೆ ಬಸವಣ್ಣನನ್ನು ಕರೆದರು. ಕೋಣೆಯ ಒಳಗಿನಿಂದ ಉತ್ತರ ಬರಲಿಲ್ಲ, ಕದ ತೆರೆದು ನೋಡುತ್ತಾರೆ. ಒಳಗೆ ಬಸವಣ್ಣನಿರಲಿಲ್ಲ. ಹಾಸಿಗೆಯನ್ನು ಸುತ್ತಿ ಮೂಲೆಯಲ್ಲಿ ಇರಿಸಿತ್ತು. ಮನೆಯ ಬಾಗಿಲೂ ತೆರೆದಿದ್ದಿತು. ಬಸವಣ್ಣನು ಬಹಿರ್ದೆಶೆಗೆ ಹೋಗಿರಬಹುದು ಎಂದು ಯೋಚಿಸಿ, ಅವರು ತಮ್ಮ

——————

೯. ಬ.ರ.ಪು.೧೧

25

ಪ್ರಾತರ್ವಿಧಿಗಳನ್ನು ಮುಗಿಸಿದರು. ಬೆಳಗಾಯಿತು. ಆದರೆ ಬಸವಣ್ಣನು ಬರಲೇ ಇಲ್ಲ. ಆತನು ಶಿವಾಲಯಕ್ಕೆ ಹೋಗಿರಬಹುದೆಂದು ಬಗೆದು, ಶಿವದೇವನು ಅಲ್ಲಿ ಹೋಗಿ ನೋಡಿದ. ಅಲ್ಲಿಯೂ ಆತನಿರಲಿಲ್ಲ. ಬಸವಣ್ಣನು ಅದೆಲ್ಲಿ ಹೋಗಿರಬಹುದು? ಎಂದವರು ತುಂಬ ಯೋಚಿಸಿದರು. ಬಗೆಯು ಹರಿಯದಂತಾಯಿತು. ಹೊತ್ತು ಏರಿದಂತೆ ಅವರ ಚಿಂತೆಯೂ ಬೆಳೆಯಿತು. ಮುನ್ನಾದಿನ ಯಜ್ಞಮಂಟಪದಲ್ಲಿ ನಡೆದ ಕೋಲಾಹಲದ ನೆನಪಾಯಿತು. ಅಂದಿನ ಬಸವಣ್ಣನ ಆವೇಶದ ಮಾತು, ವಿಪ್ರರ ಕೋಪಾಟೋಪ, ಯಜ್ಞೋಪವೀತವನ್ನು ಹರಿದೆಸೆದು ಹೊರಹೊರಟ ಬಸವಣ್ಣನ ಸಂತಪ್ತ ಮೂರ್ತಿ. ಈ ನೋಟವು ಅವರ ಕಂಗಳೆದುರು ಹೊಳೆಯಿತು. ಇದರ ಜತೆಯಲ್ಲಿ 'ನೋಡಯ್ಯ, ಶಿವಸ್ವಾಮಿ! ನಿನ್ನ ಬಸವನ ಉದ್ಧಟತನವನ್ನು ಸಹಿಸುವದು ಸಾಧ್ಯವಿಲ್ಲ. ಆತನಿಗೆ ಚೆನ್ನಾಗಿ ಬುದ್ದಿ ಕಲಿಸು. ಇಲ್ಲವಾದರೆ ಅವನನ್ನು ಮನೆಯಿಂದ ಹೊರತಳ್ಳು! ನೀನು ಸುಮ್ಮನೆ ಕುಳಿತರೆ ಪರಿಣಾಮ ಸರಿಯಾಗಲಿಕ್ಕಿಲ್ಲ! ಎಂಬುದಾಗಿ ಹಲವು ವಿಪ್ರರು ಆತನಿಗೆ ಬೆದರಿಕೆಯನ್ನು ಹಾಕಿದ್ದರು. ಈ ಸಂಗತಿಗಳನ್ನೆಲ್ಲ ನೆನೆದು, ಶಿವದೇವನ ಮನಸ್ಸಿನಲ್ಲಿ ಸಲ್ಲದ ಯೋಚನೆಗಳು ತಲೆದೋರಿದವು. 'ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು ಬಸವನು...?’ ಎಂದು ಬಗೆದು ಅವರು ಸುತ್ತಲಿನ ಬಾವಿಗಳನ್ನು ನೋಡಿ ಬಂದರು. ಅಲ್ಲಿಯೂ ಬಸವಣ್ಣನ ಸುಳಿವು ಸಿಗಲಿಲ್ಲ. 'ಅವನು ಈ ಗ್ರಾಮವನ್ನು ತೊರೆದು ಬೇರೆಡೆ ಹೋಗಿರಬಹುದು. ಆತನನ್ನು ಅರಸಲು ಆಳುಗಳನ್ನು ಕಳಿಸೋಣ. ಸುಮ್ಮನೆ ಚಿಂತಿಸಿ ಫಲವಿಲ್ಲ ಶಿವನೇ, ನಮ್ಮ ಬಸವನನ್ನು ಕಾಯಯ್ಯಾ' ಎಂದು ಬೇಡಿಕೊಂಡು, ಶಿವದೇವನು ನಾಲ್ಕೂ ನಿಟ್ಟಿನಲ್ಲಿ ಆಳುಗಳನ್ನು ಕಳುಹಿಸಿದನು. ಅಷ್ಟರಲ್ಲಿ ಬಸವಣ್ಣನ ಕೋಣೆಯಲ್ಲಿ ನಾಗಮ್ಮನಿಗೆ ಒಂದು ಕಾಗದವು ಕಾಣಿಸಿತು. ಅದನ್ನವಳು ತನ್ನ ಯಜಮಾನರಿಗೆ ತೋರಿಸಿದಳು. ಅದರಲ್ಲಿ ಮುಂದಿನ ಎರಡೇ ಸಾಲುಗಳಿದ್ದವು:

'ಸಂಗನ ಕರೆ ಕೇಳಿ ಆತನೆಡೆ ನಡೆದಿಹೆನು.
ಅಂಜದಿರಿ, ಅಳುಕದಿರಿ, ಅಳಲದಿರಿ, ಬಳಲದಿರಿ.'

26

ಈ ಕಾಗದವನ್ನು ಓದಿದೊಡನೆ ಅವರಿಗೆ ಕೊಂಚ ಸಮಾಧಾನವಾಯಿತು. ಬಸವಣ್ಣನನ್ನು ಅವನ ಕಾಲುಗಳು ಒಂದು ಕಿರಿದಾರಿಯಿಂದ ಒಯ್ದ ಮೂಲಕ, ಹಿರಿದಾರಿಗಳಿಂದ ತೆರಳಿದ ಆಳುಗಳು ಆತನನ್ನು ಕಾಣದೆ ಮರಳಿ ಬಂದರು. ಬಸವಣ್ಣನು ಒಮ್ಮೆಲೆ ಊರು ಬಿಟ್ಟು ತೆರಳಿದ ಸುದ್ದಿಯು ಊರಲ್ಲೆಲ್ಲ ಹಬ್ಬಿದ ಒಡನೆ ಆತನ ನೆಚ್ಚಿನ ಗೆಳೆಯರಿಗೆ- ವಿಶೇಷವಾಗಿ ಕೃಷ್ಣನಿಗೆ-ಅದನ್ನು ಕೇಳಿ ತುಂಬ ವ್ಯಸನವಾಯಿತು. ಆದರೆ ಊರಲ್ಲಿಯ ಹಿರಿಯರಿಗೆ ಸಂತೋಷವಾಯಿತು. "ಮದ್ದಿಲ್ಲದೆ ಬೇನೆಯಳಿಯಿತು. ಈ ಹಾಳು ಹುಡುಗ ನಮ್ಮ ಮಕ್ಕಳ ತಲೆಯನ್ನು ತಿರುಗಿಸಬಹುದಾಗಿತ್ತು! ಪೀಡೆಯೇ ಹೋಯಿತು! ಎಂದು ಬಗೆದು ಸಂತಸದ ಉಸಿರನ್ನು ಎಳೆದರು ಅವರು.

ಸಂಗನನ್ನು ನೆನೆಯುತ್ತ ನಡೆದ ಬಸವಣ್ಣನಿಗೆ ತನ್ನ ದೇಹದ ಪರಿವೆಯೇ ಇರಲಿಲ್ಲ. ಅವನು ಹಗಲೆಲ್ಲ ಇರುಳೆನ್ನಲಿಲ್ಲ, ಕೂಳೆನ್ನಲಿಲ್ಲ, ನೀರೆನ್ನಲಿಲ್ಲ. ಸತತವಾಗಿ ದಾರಿ ನಡೆದು ಕೂಡಲಸಂಗಮನನ್ನು ತಲುಪಿದ. ಅದೇ ಬೆಳಗು ಆಗಿತ್ತು, ಆರುಣನ ಹೊಂಬೆಳಕು ಗುಡಿಯ ಗೋಪುರವನ್ನು ಬೆಳಗುತ್ತಿತ್ತು. ಊರೊಳಗಿಂದ ಹಾದು ಬಸವಣ್ಣನು ನೇರವಾಗಿ ಸಂಗನ ಮಂದಿರಕ್ಕೆ ಬಂದ. "ಸಂಗಾ, ಸಂಗಾ! ಎಂದು ಆತನು ಸಾಷ್ಟಾಂಗವೆರಗಿದನು. "ದೇವದೇವ! ಅನಾಥನಾಥ!... ತಾಯ್ತಂದೆ ಬಂಧುಬಳಗವೇ ಕುಲವೇ! ಛಲವೇ! ತವರೇ! ಕಣೇ! ಗತಿಯೇ! ಮತಿಯೇ ಪುಣ್ಯವೇ! ಪ್ರಾಣವೇ! ಕಾವುದು! ಎಂದು ಅನನ್ಯಭಾವದಿಂದ ಪ್ರಾರ್ಥಿಸಿದ. ಆಗ ಬೆಳಗಿನ ಪೂಜೆ ನಡೆದಿತ್ತು ಮುನಿಗಳೊಬ್ಬರು ಸಂಗಮೇಶನ ಪೂಜೆಯಲ್ಲಿ ತಲ್ಲೀನರಾಗಿದ್ದರು. ಬಸವಣ್ಣನನ್ನು ಕಂಡೊಡನೆ ಅವರೆಂದರು: "ಬಾರಯ್ಯಾ, ಬಾ ಬಸವ. ಕಾಯುತಿರುವನು ದೇವ!” ಮುನಿಗಳು ತಮ್ಮ ಪ್ರೀತಿಯ ಕಂದನನ್ನು ಕರೆದಂತೆ ಬಸವಣ್ಣನನ್ನು ಕರೆದರು. ಮುನಿಗಳನ್ನು ಕಂಡೊಡನೆ ಬಸವಣ್ಣನು ಸೋಜಿಗಗೊಂಡ, ಅವರ ಮಾತನ್ನು ಕೇಳಿ ಅವನ ಅಚ್ಚರಿಯು ಮತ್ತಷ್ಟು ಬೆಳೆಯಿತು. ಬಾಗೇವಾಡಿಯ ಶಿವಾಲಯದಲ್ಲಿ ತಾನು

ಕಂಡ ಕನಸನ್ನು ನೆನೆದು ಅವನೆಂದ: "ಏನಾಶ್ಚರ್ಯ! ನನ್ನನ್ನು ಕನಸಿನಲ್ಲಿ ಕರೆದ ಮುನಿಗಳೇ ಇಲ್ಲಿರುವರಲ್ಲಾ ಅದೇ ರೂಪು, ಅವೇ ನುಡಿಗಳು! ಸಂಗಮ ಇವರನ್ನೇ ಕಳುಹಿಸಿದ್ದನೇ ನನ್ನೆಡೆ? ಬಸವಣ್ಣನ ಮನಸ್ಸನ್ನರಿತು ಮುನಿಗಳೆಂದರು: "ಅಚ್ಚರಿಪಡುವ ಅಗತ್ಯವಿಲ್ಲ, ಕಂದಾ, ಸಂಗನ ಕರುಣದಿಂದ ಇಂಥ ಸಂಗತಿಗಳು ಜರುಗುವವು... ನೀನೀಗ ತುಂಬ ಬಳಲಿರುವಿ. ನಮ್ಮ ಆಶ್ರಮಕ್ಕೆ ನಡೆ, ಸ್ನಾನಭೋಜನಗಳನ್ನು ತೀರಿಸಿ ವಿಶ್ರಾಂತಿ ಪಡೆ, ಸಕಾಲಕ್ಕೆ ಎಲ್ಲವೂ ತಿಳಿಯಬಹುದು!

ಅಲೆ:ಮೂರು

ಸಂಗಮನಾಥನ ದೇವಸ್ಥಾನದಲ್ಲಿ

ಆಶ್ರಮವಾಸ:
ಈ ಬಗೆಯಾಗಿ 'ಬಾಗೇವಾಡಿಯ ಭಾಗ್ಯ ಸಂಗಮಕ್ಷೇತ್ರವನ್ನು ಸೇರಿತು... ಅಲ್ಲಿ ಕೃಷ್ಣಾನದಿ ವಿಶಾಲವಾಗಿ ಗಂಭೀರವಾಗಿ ಹರಿಯುತ್ತ ಸಂಗಮನಾಥನ ಪಾದೋದಕವಾಗಿ ಪರಿವರ್ತನೆ ಹೊಂದಿ, ಭಕ್ತರನ್ನು ಪುನೀತರನ್ನಾಗಿ ಮಾಡುತ್ತದೆ. ಇತ್ತ ಕಡೆಯಿಂದ ಮಲಾಪಹಾರಿ ಕಿರುದೆರೆಗಳಿ೦ದ ಕೂಡಿ ಕಿರುದೊರೆಯಾಗಿ ಹರಿಯುತ್ತ ಕೃಷ್ಣವೇಣಿಯೊಡನೆ ಐಕ್ಯಳಾಗಿ ತನ್ನನ್ನು ತಾನು ಅರಿಯದೆ, ಕೃಷ್ಣವೇಣಿಯಾಗಿಯೇ ಪ್ರವಹಿಸುತ್ತಾಳೆ. ಸುತ್ತಲು ಫಲವತ್ತಾದ ಭೂಮಿ, ದೂರದಲ್ಲಿ ಸುತ್ತಲು ವನಶ್ರೇಣಿಯನ್ನು ಧರಿಸಿನಿಂತಿರುವ ಪರ್ವತಶ್ರೇಣಿ, ನದಿಯ ಇರ್ಕಡೆಗಳಲ್ಲಿಯೂ ಪೈರುಪಚ್ಚೆಗಳು. ಈ ಮನೋಹರ ಸನ್ನಿವೇಶದಲ್ಲಿ ಸಂಗಮನ ಎಡೆಯಲ್ಲಿ ಸ್ವಲ್ಪ ತಿಟ್ಟಿನ ಮೇಲೆ ಸಣ್ಣದೊಂದು ಗುಡಿ, ಎತ್ತರದ ಗೋಪುರದ ವೈಖರಿಯಿಲ್ಲ. ಸುಕನಾಸಿ ನವರಂಗಗಳ ಶಿಲ್ಪಚಾತುರ್ಯವಿಲ್ಲ. ಸಾಮಾನ್ಯವಾದ ಮಂಟಪ, ಆ ಮಂಟಪದಲ್ಲಿನ ಬಸವಣ್ಣನ ವಿಗ್ರಹ ಚಿಕ್ಕದು... ಆ ಬಸವಣ್ಣನಿಗೆ ಎದುರಾಗಿ ಗರ್ಭಗುಡಿಯಲ್ಲಿ ಹೆಚ್ಚುಕಡಿಮೆ ನೆಲದ ಮಟ್ಟದಲ್ಲಿಯೇ ಪಾಣಿಪೀಠ ಮತ್ತು ಸಣ್ಣದೊಂದು ಲಿಂಗ, ಆತನೇ ಕೂಡಲಸಂಗಮನಾಥ!... ಬಸವಣ್ಣನವರ ಮನಃಪ್ರೇರಕ... ಸೂತ್ರಧಾರ!೧೦

ಈ ದೇವಾಲಯದ ನೆರೆಯಲ್ಲಿ ಚಿಕ್ಕದೊಂದು ಆಶ್ರಮವಿದ್ದಿತು. ಕ್ಷೇತ್ರದ 'ಸ್ಥಾನಪತಿ' ಗಳಾದ ಮೇಲ್ಕಾಣಿಸಿದ ಈಶಾನ್ಯ ಮುನಿಗಳೇ೧೧ ಅದನ್ನು ನಡೆಸುತ್ತಿದ್ದರು. ಗುಲಾಬಿ ಕಂಟಿಗಳಿಂದ ಸುತ್ತುವರಿದ ಅಂದವಾದ


೧೦. ಭ.ಪ. ಪು. ೩೦-೩೧
೧೧. ಇವರನ್ನು 'ಜಾತವೇದ' ರೆಂದೂ ಕರೆಯುತ್ತಿದ್ದರು.

29

ಪರಿಸರ, ನಾಲ್ಕೆಂಟು ಚಿಕ್ಕ ಚೊಕ್ಕ ಗುಡಿಸಲುಗಳು. ಒಂದೆಡೆ ಗೋವುಗಳಿಗಾಗಿ ಕೊಟ್ಟಡಿ. ಅವುಗಳ ಬದಿಯಲ್ಲಿ ಒಂದು ಚಪ್ಪರದಲ್ಲಿ ನಾಲ್ಕು ಎತ್ತುಗಳು, ಕೆಲ ಕೃಷಿಯ ಉಪಕರಣಗಳು, ಎದುರು ಬಗೆಬಗೆಯ ಹೂ ಹಣ್ಣುಗಳ ಗಿಡ ಬಳ್ಳಿಗಳಿಂದ ಅಲಂಕೃತವಾದ ತೋಟ! ಎಲ್ಲೆಡೆ ಪ್ರಶಾಂತವಾದ ಶಾಂತಿಯ ಸಾಮ್ರಾಜ್ಯ! ಆಶ್ರಮದಲ್ಲಿ ಕೆಲ ಬಟುಗಳು ತಮ್ಮ ತಮ್ಮ ಅಧ್ಯಯನಕಾಯಕಗಳಲ್ಲಿ ನಿರತರಾಗಿದ್ದರು. ಅವರೆಲ್ಲ ಮುನಿಗಳೊಡನೆ ಬಂದ ಬಸವಣ್ಣನನ್ನು ನಗೆಮೊಗದಿಂದ ಸ್ವಾಗತಿಸಿದರು. ಮುನಿಗಳು ಅವರಿಗೆ ಅವರ ನೂತನ ಬಂಧುವಾದ ಬಸವಣ್ಣನ ಪರಿಚಯ ಮಾಡಿಕೊಟ್ಟರು. ಮರುದಿನ ಆತನ ಬಿನ್ನಹದ ಮೇರೆಗೆ ಆತನನ್ನು ಸಂಗಮನಾಥನೆದುರು ಯಥಾವಿಧಿ ಅನುಗ್ರಹ ಮಾಡಿದರು.

ಈಶಾನ್ಯ ಮುನಿಗಳು ಬೂದಿ ಮುಚ್ಚಿದ ಕೆಂಡ. ಸ್ವಾಮಿ ವಿವೇಕಾನಂದರಿಗೆ ಶ್ರೀ ರಾಮಕೃಷ್ಣರಿದ್ದಂತೆ, ಬಸವಣ್ಣನವರಿಗೆ ಈಶಾನ್ಯ ಮುನಿಗಳು, ಅವರ ಹಿರಿಮೆ ಅಳೆಯಲು ಬಾರದಂತಹದು. ವಿವೇಕಾನಂದರೇ ಒಂದೆಡೆ ಅರುಹಿದ ಮೇರೆಗೆ:

"ಪ್ರಪಂಚದಲ್ಲಿಯ ಅತಿ ಶ್ರೇಷ್ಠರಾದ ಪುರುಷೋತ್ತಮರು ಮರೆಯಲ್ಲಿಯೇ ಬಾಳಿದರು, ಮರೆಯಲ್ಲಿಯೇ ಮಡಿದರು. ಪ್ರಪಂಚಕ್ಕೆ ತೀರ ಅಜ್ಞಾತರಾದ ಈ ಪುರುಷೋತ್ತಮರೊಡನೆ ಹೋಲಿಸಿದರೆ, ನಮಗೆ ಜ್ಞಾತರಾದ ಬುದ್ದಕ್ರಿಸ್ತಾದಿ ಮಹಾಪುರುಷರು ಎರಡನೆಯ ತರಗತಿಯ ಹಿರಿಯರು. ಈ ಪುರುಷೋತ್ತಮರು ಮೌನದಿಂದ ಬಾಳಿದರು, ಮೌನದಿಂದ ತೆರಳಿದರು. ಅವರ ವಿಚಾರಗಳು ಸರಿಯಾದ ಸಮಯದಲ್ಲಿ ಬುದ್ಧ-ಕ್ರಿಸ್ತರಂಥವರಲ್ಲಿ ಮೈದಳೆದವು ಮತ್ತು ಇವರೇ ನಮಗೆ ಪರಿಚಿತರಾದರು."

(The greatest of men have passed away unknown. The Buddhas and Christs whom we know, are but second rate heroes, in comparison with the greatest men of whom the world knows nothing. Silently they live and silently


30

they pass away and in time, their thoughts find expression in Buddhas and Christs and it is these latter that become known to us!)12

ಸಂಗಮನಾಥನ ದೇವಸ್ಥಾನದ ಆಡಳಿತವನ್ನು ಮುನಿಗಳೇ ತಮ್ಮ ಶಿಷ್ಯರ ನೆರವಿನಿಂದ ನೋಡಿಕೊಳ್ಳುತ್ತಿದ್ದರು. ಆಶ್ರಮದಲ್ಲಿ ಬಸವಣ್ಣನವರ ಮನಸ್ಸಿನಲ್ಲಿ ಮೂಡಿದ ನೂತನ ವಿಚಾರಗಳು ಮೂರ್ತಸ್ವರೂಪಗಳನ್ನು ತಳೆದಿದ್ದವು. ಅಲ್ಲಿ ವೈದಿಕ ಕರ್ಮಕಾಂಡಕ್ಕೆ ಎಡೆಯಿರಲಿಲ್ಲ. ಸಂಗನ ಭಕ್ತಿಗೆ ಪ್ರಾಧಾನ್ಯವಿದ್ದಿತು. ವಿದ್ಯಾರ್ಥಿಗಳ ಆಯ್ಕೆಯಲ್ಲಿ ಕುಲವನ್ನು ಕಾಣದೆ, ಗುಣವನ್ನೇ ಕಾಣಲಾಗುತ್ತಿತ್ತು. ಆದುದರಿಂದ ವಿದ್ಯಾರ್ಥಿಗಳಲ್ಲಿ ಎಲ್ಲ ಜಾತಿಯ ಗುಣಿಗಳು ಸೇರಿಕೊಂಡಿದ್ದರು. ಆಶ್ರಮವು ದೇವಸ್ಥಾನದ ಆಶ್ರಯದಲ್ಲಿ ನಡೆಯಿಸಲಾಗಿದ್ದರೂ ಅದು ಸಾಧ್ಯವಿದ್ದಷ್ಟು ಸ್ವಯಂಪೂರ್ಣ ವಾಗುವಂತೆ ನೋಡಿಕೊಳ್ಳಲಾಗಿತ್ತು. ಆಶ್ರಮದ ಲಸಗಳನ್ನೆಲ್ಲ ವಿದ್ಯಾರ್ಥಿಗಳೇ ಮಾಡುತ್ತಿದ್ದರು. ಆಶ್ರಮಕ್ಕೆ ಬೇಕಾದ ಧಾನ್ಯ, ಹಣ್ಣು ಹಂಪಲು, ಕಾಯಿಪಲ್ಲೆಗಳನ್ನು ಅಲ್ಲಿಯ ತೋಟದಲ್ಲಿಯೂ ದೇವಸ್ಥಾನದ ಹೊಲಗಳಲ್ಲಿಯೂ ವಿದ್ಯಾರ್ಥಿಗಳ ಸ್ವಂತ ಶ್ರಮದಿಂದಲೇ ಬೆಳೆಯಿಸಲಾಗುತ್ತಿತ್ತು ವಿದ್ಯಾರ್ಥಿಗಳು ತಮ್ಮ ನಿತ್ಯದ ಪೂಜೆ, ಜಪ, ಧ್ಯಾನ, ಅಧ್ಯಯನಗಳನ್ನು ಮುಗಿಸಿ ತಮ್ಮ ತಮ್ಮ ಕಾಯಕಗಳಲ್ಲಿ ನಿರತರಾಗುತ್ತಿದ್ದರು. ನಸುಕಿನಲ್ಲಿ ಎದ್ದು ಪ್ರಾತರ್ವಿಧಿ-ಸ್ನಾನಾದಿಗಳನ್ನು ತೀರಿಸಿ, ಎಲ್ಲರೂ, ಸಂಗಮನಾಥನಿಗೆ ಪತ್ರಪುಷ್ಪಗಳನ್ನು ಏರಿಸಿ, ಅವನನ್ನು ಭಕ್ತಿಭಾವದಿಂದ ವಂದಿಸಿ, ಕೆಲಕಾಲ ಧ್ಯಾನದಲ್ಲಿ ಕಳೆದು, ಆಶ್ರಮಕ್ಕೆ ಬರುವರು. ಒಂದೆರಡು ಗಂಟೆ ಗುರುಗಳ ಸಾನ್ನಿಧ್ಯದಲ್ಲಿ ವೇದ-ವೇದಾಂತ ಆಗಮ-ಶಾಸ್ತ್ರ ದರ್ಶನ- ಪುರಾಣಗಳ ಅಧ್ಯಯನವನ್ನು ಮಾಡಿ ಅಲ್ಪ ಉಪ ಆಹಾರವನ್ನು ಸೇವಿಸಿ, ಅವರು ತಮ್ಮ ತಮ್ಮ ಕಾಯಕವನ್ನು ಮಾಡತೊಡಗುವರು. ತರುವಾಯ ಮಧ್ಯಾಹ್ನದ ಭೋಜನ, ಆಮೇಲೆ ಮರಳಿ ಅಧ್ಯಯನ, ಸಾಯಂಕಾಲ ಎಲ್ಲರೂ

————

೧೨. On liberty

31

ಗುಡಿಯಲ್ಲಿ ಸೇರಿ ಸಂಗಮನಾಥನ ಭಜನೆ-ಧ್ಯಾನ ಮುಗಿಸಿ, ಕೆಲ ಕಾಲ ಅಧ್ಯಯನ ಮಾಡಿ ವಿಶ್ರಮಿಸುವರು. ತಮಗೆ ಬೇಕಾದುದೇ ದೊರೆತುದರಿಂದ ಬಸವಣ್ಣನು ಆಶ್ರಮಜೀವನದಲ್ಲಿ ಕೂಡಲೇ ಸಮರಸ ಆದನು. ಆತನ ಉತ್ಕಟ ಭಕ್ತಿಭಾವವನ್ನು ಅರಿತು, ಗುರುಗಳು ಆತನಿಗೆ ಸಂಗಮನಾಥನ ನಿತ್ಯದ ಪೂಜೆಯನ್ನು ಒಪ್ಪಿಸಿದರು. ಅವನ ಲೆಕ್ಕ ನೈಪುಣ್ಯವನ್ನು ಕಂಡು ಆತನಿಗೆ ದೇವಸ್ಥಾನದ ಕೆಲಸದಲ್ಲಿ ತಮಗೆ ನೆರವಾಗಲು ಆಜ್ಞೆ ಕೊಟ್ಟರು. ಈ ರೀತಿ ಬಸವಣ್ಣನು ಕರಣಿಕ ಕಾರ್ಯದಲ್ಲಿಯೂ ತನ್ನ ಆರಾಧ್ಯದೇವನಾದ ಸಂಗಮನಾಥನ ಆರಾಧನೆ-ಧ್ಯಾನ-ಭಜನೆಗಳಲ್ಲಿಯೂ ತಲ್ಲೀನನಾದನು.

ಬಸವಣ್ಣನ ನಿತ್ಯದ ಕಾರ್ಯಕ್ರಮವನ್ನು ಹರಿಹರನು ಚೆನ್ನಾಗಿ ಚಿತ್ರಿಸಿರುವ. ಆತನು ಪ್ರಭಾತ ಸಮಯಕ್ಕೆ ಮುನ್ನ ಏಳುವ, ಸಂಗಂಗೆ ಸಾಷ್ಟಾಂಗ ಪೊಡಮಡುವ, ಭಯಭಕ್ತಿಯಿಂದ ಮುಂಡಾಡಿ ಪುಳಕಿಸುವ. ಅಗ್ಗವಣೆಯ ಕಂಬಿಯನ್ನು ತೆಗೆದುಕೊಂಡು ಹೂದೋಟಕ್ಕೆ ಹೋಗುವ ಅದನ್ನಲ್ಲಿರಿಸಿ, ಅಳಿಯೆರಗದ ಗಿಡ ಬಗೆಬಗೆಯ ಮೀಸಲು ಮೊಗ್ಗುಗಳನ್ನು ಕೊಂಡು, ತರುವಾಯ ನದಿಯಿಂದ ಸೋದಿಸಿದ ನೀರನ್ನು ತುಂಬಿಕೊಂಡು ಬರುವ. ಆನಂದದಿಂದ ಸಂಗನನ್ನು ಕೊಂಡಾಡುವ, ಮಜ್ಜನಕ್ಕೆರೆವ, ಸಿರಿಗಂಧಪುಷ್ಪಗಳಿಂದ ಆತನನ್ನು ಅಲಂಕರಿಸುವ. ನಯನಂಗಳೊಳು ಪೂಜೆ ಬರೆದಂತೆ ನೋಡುವ, ಭಯ ಭಕ್ತಿಯಿಂ ಪೂಜೆ ಮೆರೆವಂತೆ ಮಾಡುವ. ಧೂಪದೀಪಗಳನ್ನು ಬೆಳಗಿ, ನೈವೇದ್ಯ ತೋರಿಸುವ ಕೊನೆಗೆ ಮಂಗಳಾರತಿಯನ್ನು ಬೆಳಗಿ ಕೈಮುಗಿದು ರೋಮಾಂಚಿತನಾಗಿ ನಿಲ್ಲುವ

"ಎನ್ನ ನತಿ ಕರುಣದಿಂ ನೋಡು, ಕಣ್ಣಿನೊಳಗೆ ಪರಿದಾಡು
ಮನದೊಳಗೆ ಕುಣಿದಾಡು ಕೊಡಲಸಂಗ!"

ಎಂದು ಸಂಗನನ್ನು ಪ್ರಾರ್ಥಿಸುವ, ಭಕ್ತಿಭಾವವು ಅಂತರಂಗದಲ್ಲಿ ಬೆಳೆದು, ಮಣಿಯುವ, ಕುಣಿಯುವ, ಕೆಲೆಯುವ, ನಲಿಯುವ, ಶಿವಾನಂದರಸದ ಹೊನಲಲ್ಲಿ ಮುಳುಗುವ, ಆ ಘನಸುಖದಲ್ಲಿ ಬೆರೆಯುವ


32

ಈ ಬಗೆಯಾಗಿ ಬಸವಣ್ಣನಲ್ಲಿಯ ಭಕ್ತಿಯು ಗಳಿಗೆಗಳಿಗೆಗೆ ದಿನದಿನಕ್ಕೆ ಮಿಗಿಲಾಗತೊಡಗಿತು. ಆತನು ನಡೆವಲ್ಲಿ ನುಡಿವಲ್ಲಿ, ಉಡುವಲ್ಲಿ ಉಂಬಲ್ಲಿ, ಕೊಡುವಲ್ಲಿ, ಕೊಂಬಲ್ಲಿ, 'ಸಂಗ ಶರಣು' ಎನ್ನುವ. 'ಸಂಗನಾಮಂಗಳಂ ಪುರಜನಕೆ ಕಲಿಸುತಂ ಶಿವಪೂಜೆಯೊಳಗೆ ಪುಟ್ಟಿದ ಸುಧಾಕರನಂತೆ' ಅವನಲ್ಲಿ ಇರುತ್ತಿದ್ದನು.

ಬಸವಣ್ಣನ ಅಂದಿನ ಜೀವನದ ಮಾದರಿಯೆ ಆತನ ಮುಂದಿನ ವಚನಗಳಲ್ಲಿ ಚಿತ್ರಿಸಲಾಗಿರುವದು:

ಹೊತ್ತಾರೆ ಎದ್ದು ಅಘವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ!
ಹೊತ್ತು ಹೋದ ಬಳಿಕ ನಿನ್ನನ್ನಾರು ಬಲ್ಲರು?
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ
ತೊತ್ತು ಗೆಲಸವ ಮಾಡು ಕೂಡಲಸಂಗಮದೇವನ! |
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವದು
ಮಾಡಿದ ಪೂಜೆಯ ನೋಡುವದಯ್ಯಾ!
ಶಿವತತ್ವಗೀತವ ಪಾಡುವದು, ಶಿವನ ಮುಂದೆ ನಲಿದಾಡುವದಯ್ಯಾ!
ಭಕ್ತಿಸಂಭಾಷಣೆಯ ಮಾಡುವದು
ನಮ್ಮ ಕೂಡಲಸಂಗಯ್ಯನ ಕೂಡುವದು!

ಒಳಕಾಳಗ

ಆದರೆ ಬಸವಣ್ಣನ ಅಂತರಂಗದಲ್ಲಿಯ ಭಕ್ತಿಯು ಇಷ್ಟು ಸಹಜವಾಗಿ, ಸುಲಭವಾಗಿ ಬೆಳೆಯಲಿಲ್ಲ, ಅದರ ಫಲ ಆತನಿಗೆ ಇಷ್ಟು ಬೇಗ ಲಭಿಸಲಿಲ್ಲ, ಅದಕ್ಕಾಗಿ ಆತನ ಅಂತರಂಗವು ಭೀಕರ ಯುದ್ಧದ ರಣರಂಗವಾಗಬೇಕಾಯಿತು. ಸಂತ ತುಕಾರಾಮರು ಉಸುರಿದ ಮೇರೆಗೆ ಬಸವಣ್ಣನು,

ಹಗಲಿರುಳು ಒಳಹೊರಗೆ ಕಾಳಗವ ನಡೆಸಿದನು
ಒಳಗೆ ಮನ, ಹೊರಗೆ ಜನರೊಡನೆ ಹೋರಾಡಿದನು.

33

ಕಬ್ಬಿಣದ ಕಡಲೆಯ ತಿಂದನು, ಕಳವಳದ ಕಂಬನಿ ಕುಡಿದನು, ಮುಳ್ಳಿನ ಮಾಲೆಯ ಧರಿಸಿದನು, ಬೆಂಕಿಯ ಅಂಕವನ್ನಲಂಕರಿಸಿದನು. ಅದರ ವಿವರಗಳನ್ನು ಮುಂದಿನ ಆರನೆಯ 'ಅಲೆ'ಯಲ್ಲಿ ಕಾಣಬಹುದು. ಇಲ್ಲಿ ಅದರ ಒಂದೆರಡು ಅಂಶಗಳನ್ನು ಅರುಹಿ ಮುಂದುವರಿಯುವೆ.

ಬಸವಣ್ಣನು ಭಕ್ತಿಸಾಧನವನ್ನು ಪ್ರಾರಂಭಿಸಿದ ಕೂಡಲೆ ಅವನಿಗೆ ಮನೋವಿಕಾರ- ಇಂದ್ರೀಯವಿಕಾರಗಳು ಕಾಡತೊಡಗಿದವು. ಆಗ ಆತನು ಅವುಗಳೊಡನೆ ಹೋರಾಡಿ, ಸೋತು, ಸಂಗನನ್ನು ಈ ರೀತಿ ಮೊರೆಯಿಟ್ಟನು:

ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದೆ.
ಮತಿಗೆಟ್ಟೆನು ಮನದ ವಿಕಾರದಿಂದ

ದೃತಿಗೆಟ್ಟೆನು ಕಾಯವಿಕಾರದಿಂದ.
ಶರಣುವೊಕ್ಕೆನು ಕೂಡಲಸಂಗಮದೇವಾ!
ಸುಚಿತ್ತದಿಂದಲೇ ಮನವು
ನಿಮ್ಮ ನೆನೆಯಲೊಲ್ಲದು, ಎಂತಯ್ಯಾ?
ಎನಗಿನ್ನಾವುದು ಗತಿ? ಎಂತಯ್ಯಾ?
ಎನಗಿನ್ನಾವುದು ಮತಿ? ಎಂತಯ್ಯಾ?
ಹರ ಹರಾ! ಕೂಡಲಸಂಗಮದೇವಾ! ಮನವ ಸಂತೈಸೆನ್ನ!

ಈ ಬಗೆಯ ಕಳವಳದ ಕಡಲೊಳಗಿಂದ ಹಾಗೂ ಅವನು ಶಿವಕರುಣದಿಂದ ಆಚೆಯ ದಂಡೆಯನ್ನು ತಲುಪಿದನು. ತನ್ನ ದೃಢವಾದ ನಿಷ್ಠೆಯ ಬಲದಿಂದ ಮಹೇಶನ ದರ್ಶನವನ್ನು ಪಡೆದನು, ಮಾಹೇಶನಾದನು. ಅದರ ಜತೆಯಲ್ಲಿ ಆತನ ಕೆಲ ಅತೀಂದ್ರಿಯ ಸಿದ್ಧಿಗಳನ್ನು ಪಡೆದನು.

ವಚನರಚನೆ:

ಮಾಹೇಶ ಬಸವಣ್ಣನು, "ಶಿವನೇ ಸರ್ವೋತ್ತಮ, ಆತನೊಬ್ಬನೇ ಪರದೈವ! ಆತನ ಭಕ್ತಿಯೇ ಮಿಗಿಲಾದುದು. ಅದನ್ನುಳಿದ ಬಾಳು

34
ಹಾಳು! ಎಂಬ ಭಾವವನ್ನೊಳಗೊಂಡ ಕೆಲ ವಚನಗಳನ್ನು ಆ ಅವಧಿ ಯಲ್ಲಿ ಬರೆದನು. ಅವನ್ನು ಗುರುಗಳೆದುರು, ಗುರುಬಂಧುಗಳೆದುರು ಹಾಡಿ ತೋರಿಸಿ, ಅವರ ಮೆಚ್ಚುಗೆಯನ್ನು ಪಡೆದನು. ಸಂಗನ ಜಾತ್ರೆಯ ಕಾಲದಲ್ಲಿಯೂ ಬೇರೆ ಉತ್ಸವ ಪ್ರಸಂಗಗಳಲ್ಲಿಯೂ ಜನ ನೆರೆದಾಗ, ಗುರುಗಳ ಆಜ್ಞೆಯ ಮೇರೆಗೆ ಅದನ್ನವನು ಅವರೆದುರು ಹಾಡುವ ಅವುಗಳ ಜತೆಯಲ್ಲಿಯೇ ಜನರ ಅನಾಚಾರವನ್ನು ಹಳಿಯುವ, ಸದಾಚಾರ-ಸದ್ಭಕ್ತಿಗಳನ್ನು ಹೊಗಳುವ ಕೆಲ ವಚನಗಳನ್ನು ರಚಿಸಿ, ಅವನ್ನೂ ಹಾಡುವ. ಆತನ ವಚನಗಳನ್ನು ಹಲವರು ಕೊಂಡಾಡಿದರು. ಕೆಲವರು ಅವನ್ನು ಕೇಳಿ ಕೆಂಡದಂತಾದರು. ಅವುಗಳ ಒಂದೆರಡು ಮಾದರಿಗಳನ್ನು ಕೆಳಗೆ ಕಾಣಬಹುದು.
ಸಂಗನೇ ಏಕೋದೇವನೆಂಬುದನ್ನು ಬಸವಣ್ಣನು ಈ ರೀತಿ ಬಣ್ಣಿಸಿರುವ:
“ಸ್ವಾಮಿ ನೀನು ! ಶಾಶ್ವತ ನೀನು”
ಎತ್ತಿದೆ ಬಿರುದ ಜಗವೆಲ್ಲರಿಯಲು
“ಮಹಾದೇವ ! ಮಹಾದೇವ !?
ಇಲ್ಲಿಂದ ಮುಂದೆ ಶಬ್ದವಿಲ್ಲ.
ಪಶುಪತಿ ಜಗಕ್ಕೆ ಏಕೋದೇವ. ಸ್ವರ್ಗಮೃತ್ಯುಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ !
ದೇವನೊಬ್ಬ ನಾಮ ಹಲವು :
ಪರಮಪತಿವ್ರತೆಗೆ ಗಂಡನೊಬ್ಬ :
ಮತ್ತೊಂದಕ್ಕೆರಗಿದರೆ ಕಿವಿಮೂಗ ಕೊಯ್ವನು !
ಹಲವು ದೈವದ ಎಂಜಲ ತಿಂಬವರನೇನೆಂಬೆ
ಕೂಡಲಸಂಗಮದೇವಾ |
ಇಂಥ ಸಂಗನ ಭಕ್ತಿಯು ಕಡುಪಾಪಿಗಳನ್ನು ಉದ್ದರಿಸಬಲ್ಲದು. ಆದುದರಿಂದ ಆತನಿಗೆ ಶರಣುಹೋಗಿರಿ! ಎಂದು ಬಸವಣ್ಣನು ಆರುಹುವ.

35

ಎಲವೋ, ಎಲವೋ, ಪಾಪಕರ್ಮವ ಮಾಡಿದವನೇ !
ಎಲವೋ, ಎಲವೋ, ಬ್ರಹ್ಮತ್ಯವ ಮಾಡಿದವನೇ !
ಒಮ್ಮೆ 'ಶರಣೆ'ನ್ನಲವೋ!
ಒಮ್ಮೆ 'ಶರಣೆಂದರೆ ಪಾಪಕರ್ಮ ಓಡುವವು.
ಓರ್ವಂಗೆ ಶರಣೆನ್ನು ! ನಮ್ಮ ಕೂಡಲಸಂಗಮದೇವಂಗೆ :
ಒಮ್ಮೆ ಬಸವಣ್ಣನೀರು ತರಲು ನದಿಗೆ ತೆರಳಿದಾಗ, ಅಲ್ಲಿ ಶಂಭೋ ಹರಹರ !' ಎಂದು ಗರ್ಜಿಸಿ ನದಿಯಲ್ಲಿ ಮರಮರಳಿ ಮುಳುಗಿ ಏಳುವ ಕೆಲ ಹಿರಿಯರನ್ನು (?) ಕಂಡ. ನೀರಿನ ಮೇಲೆ ಬಂದೊಡನೆ ಅವರ ಕಂಗಳು ಅಲ್ಲಿ ಮೀಯುತ್ತಿರುವ ಹೆಂಗಳೆಯರೆಡೆ ಹೊರಳುತ್ತಿದ್ದವು. ಅದನ್ನು ಕಂಡ ಖಂಡ ತುಂಡಾಗಿ ಬಸವಣ್ಣನೆಂದ :
ತೊರೆಯ ಮೀವಣ್ಣಗಳಿರಾ ! ತೊರೆಯ ಮೀವ ಸ್ವಾಮಿಗಳಿರಾ !
ತೊರೆಯಿಂ ಭೋ ! ತೊರೆಯಿಂ ಭೋ!
ಪರನಾರಿಯರ ಸಂಗ ತೊರೆಯಿಂ ಭೋ!
ಪರಧನದಾಮಿಷ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು, ಕೂಡಲಸಂಗಮದೇವಾ!
ಸಂಗಮನಾಥನಿಗೆ ಎಲ್ಲ ಜಾತಿಯ ಜನರು ನಡೆದುಕೊಳ್ಳುತ್ತಿದ್ದರು. ಆದುದರಿಂದ ಆತನ ದರುಶನ ಆರಾಧನೆಯನ್ನು ಕುರಿತು ಮುನಿಗಳು ಕೆಲ ನಿಯಮಗಳನ್ನು ಮಾಡಿದ್ದರು. ಎಲ್ಲರು ಹೊರವಲಯದಲ್ಲಿ ನಿಂತು ಆತನನ್ನು ವಂದಿಸಬೇಕು. ಆತನಿಗೆ ಪತ್ರಪುಷ್ಪಗಳನ್ನು ಏರಿಸಬಯಸುವವರು ಸ್ನಾನ ಮಾಡಿ ಒದ್ದೆಯಿಂದ ಒಳವಲಯದಲ್ಲಿ ಬರಬೇಕು ಎಂಬುದು ಅಲ್ಲಿ ಬಳಸಲಾದ ರೂಢಿಯಾಗಿದ್ದಿತು. ಅಲ್ಲಿ ಭಕ್ತರೆಲ್ಲ ಅದನ್ನು ತಪ್ಪದೆ ಪಾಲಿಸುತ್ತಿದ್ದರು. ಒಂದು ದಿನ ವೈದಿಕರೊಬ್ಬರು ಸಂಗನಿಗೆ ರುದ್ರಾಭಿಷೇಕ ಮಾಡಿ ಯಥಾಸಂಗವಾಗಿ ಷೋಡಶ ಉಪಚಾರಗಳಿಂದ ಕೂಡಿದ ಪೂಜೆಯನ್ನು ಸಲ್ಲಿಸಿ ಅದೇ ಹೊರಬಂದಿದ್ದರು. ತಾವು ಅಂದವಾಗಿ ಮಾಡಿದ ಪೂಜೆಯನ್ನು ಎಲ್ಲರೂ

36
ನೋಡಿ ಕೊಂಡಾಡಬೇಕೆಂಬುದು ಅವರ ಬಯಕೆ. ಅಷ್ಟರಲ್ಲಿ ಒಬ್ಬ ಹಳ್ಳಿಯವನು ಒದ್ದೆಯಿಂದ ಬಂದು ಸಂಗನ ಲಿಂಗದ ಮೇಲೆ ತನ್ನ ಚರಿಗೆಯಲ್ಲಿಯ ನೀರನ್ನು ಸುರಿದು, ಅದರ ಮೇಲೆ ನಾಲ್ಕು ಪತ್ರಿಗಳನ್ನಿರಿಸಿ, “ಶಂಭೋ! ಹರಹರ! ಎಂದು ಗದ್ಗರಿಸಿ, ಆತನನ್ನು ಅನನ್ಯಭಾವದಿಂದ ವಂದಿಸಿ, ಅಲ್ಲಿಂದ ಹೊರ ಬಂದನು. ಈ ಹುಂಬನು ತನ್ನ ಪೂಜಾಲಂಕಾರಗಳನ್ನೆಲ್ಲ ಕೆಡಿಸಿದನಲ್ಲ ! ಎಂಬ ವಿಚಾರದಿಂದ ವೈದಿಕರು ಕಿಡಿಕಿಡಿಯಾದರು. ಕೆಂಗಣ್ಣದಿಂದ ಆ ಹಳ್ಳಿಗನನ್ನು ದಿಟ್ಟಿಸಿದರು. ಆಗ ಅಕಸ್ಮಾತ್ತಾಗಿ ಅಲ್ಲಿಯೇ ಬಂದು ನಿಂತಿದ್ದ ಬಸವಣ್ಣನು ಅದನ್ನು ಕಂಡು ಹೀಗೆಂದನು :
ನಾದಪ್ರಿಯ ಶಿವನೆಂಬರು-ನಾದಪ್ರಿಯ ಶಿವನಲ್ಲವಯ್ಯಾ !
ವೇದಪ್ರಿಯ ಶಿವನೆಂಬರು-ವೇದಪ್ರಿಯ ಶಿವನಲ್ಲವಯ್ಯಾ !
ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು!
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ !
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ |
ಈ ವಚನವನ್ನು ಕೇಳಿ ವೈದಿಕರು ನಾಚಿಕೊಂಡರು.

ಭಕ್ತಿಯು ಬೆಳೆಯಲಿರುವಾಗ ಸಾಧಕನಲ್ಲಿ ಕೆಲ ಸಿದ್ದಿಗಳು ಮೈದಳೆಯುವವು. ಅವನ್ನು ಆತನು ತೊರೆಯಬೇಕು. ಅವುಗಳ ಬಲೆಯಲ್ಲಿ ಎಂದೂ ಬೀಳಕೂಡದು. ಅವನ್ನೆಂದೂ ಬಳಸಕೂಡದು, ಎಂಬುದು ಭಕ್ತಿಶಾಸ್ತ್ರದ ಕಟ್ಟಪ್ಪಣೆ. ಏಕೆಂದರೆ ಅವುಗಳ ಬಳಕೆಯಿಂದ ಅಹಂಕಾರವು ಬೆಳೆದು, ಭಕ್ತಿಯು ಅಳಿಯತೊಡಗುವದು. ಗುರುಗಳಿಂದ ಇದನ್ನರಿತ ಬಸವಣ್ಣನು ಅವನ್ನು ಮೊದಮೊದಲು ಬಳಸುತ್ತಿರಲಿಲ್ಲ. ಪವಾಡಗಳನ್ನು ಮೆರೆಯುತ್ತಿರಲಿಲ್ಲ ಆದರೆ ಸಂಗನೇ ಆತನಿಗಾಗಿ, ಆತನ ಹಿರಿಮೆಯು ಜನರಿಗೆ ತಿಳಿಯಲಿ ಎಂದು ಕೆಲ ಪವಾಡಗಳನ್ನು ಅಲ್ಲಿ ಮೆರೆದನು. ಮುಂದೆ ಕಲ್ಯಾಣದಲ್ಲಿ ತನ್ನ ಮತಪ್ರಚಾರಕಾರ್ಯವು ಭರದಿಂದ ಸಾಗಲು ಬಸವಣ್ಣನು ಕೆಲವು ಪವಾಡಗಳನ್ನು ಮೆರೆದನು ನಿಜ

37

ಆದರೆ ಅದರಿಂದ ತನ್ನಲ್ಲಿ ಅಹಂಕಾರ ಬೆಳೆದುದನ್ನು ಕಂಡು, ಅವನ್ನು ತೊರೆದು, ಆತನು ಸಂಗನಿಗೆ ಅನನ್ಯಭಾವದಿಂದ ಸರ್ವಸ್ವವನ್ನು ಅರ್ಪಿಸಿ, ಸಂಗನ ಬಯಕೆಯಂತೆ ನಡೆಯಲು-ನುಡಿಯಲು ತೊಡಗಿದ. ನಿಜವಾಗಿ ಬಸವಣ್ಣನ ಬೆಳಕಿನ ಬಾಳೇ ಒಂದು ಅದ್ಭುತವಾದ ಪವಾಡವಿದ್ದಿತು. ಅದರ ಫಲವಾಗಿಯೂ ಸಂಗನು ಅವನಿಗಾಗಿ ಮೆರೆದ ಕೆಲ ಪವಾಡಗಳ ಫಲವಾಗಿಯೂ ಬಸವಣ್ಣನ ಕೀರ್ತಿಪರಿಮಳವು ಅಲ್ಲಿ ಬಂದ ಭಕ್ತರ ಮುಖಾಂತರ ಕನ್ನಡ ನಾಡಿನಲ್ಲೆಲ್ಲ ಪಸರಿಸಿತು. ಅದು ಗುರುಗಳ ಹಿರಿಮೆಯನ್ನೂ ಮರೆ ಮಾಡಿತು. 'ಶಿಷ್ಯಾದಿಚ್ಛೇತ್ ಪರಾಜಯಂ' ಎಂದು ಭಾವಿಸಿದ ಮುನಿಗೆ ತನ್ನ ಕಾರಣಿಕ ಶಿಷ್ಯನ ಇಂಥ ಹಿರಿಮೆಯನ್ನು ಕಂಡು ತುಂಬ ಸಂತೋಷ ಆಯಿತು. ತಮ್ಮ ಕಾರ್ಯವು ಫಲಿಸಿತು, ತಾವು ಕೃತಾರ್ಥರಾದೆವು ಎಂದು ಅವರಿಗೆನಿಸಿತು.

ಬಸವಣ್ಣನು ಸಂಗಮದಲ್ಲಿದ್ದ ಸುದ್ದಿಯು ಆತನ ಅಕ್ಕಭಾವಂದಿರಿಗೆ ತಿಳಿದೊಡನೆ, ಅವರು ಬಾಗೇವಾಡಿಯನ್ನು ತೊರೆದು ಸಂಗಮದಲ್ಲಿಯ ಆಶ್ರಮದಲ್ಲಿಯೇ ಬಂದು ನಿಂತರು. ಆಶ್ರಮದ ಕೆಲಸದಲ್ಲಿ ಅವರೂ ಭಾಗವಹಿಸಿದರು. ಕೆಲವರುಷಗಳ ತರುವಾಯ ನಾಗಮ್ಮನು ಗರ್ಭವತಿಯಾಗಿ, ಒಂದು ಗಂಡು ಮಗುವನ್ನು ಹೆತ್ತಳು. ಮುನಿಗಳು ಮಗುವಿನ ಮುಂದಿನ ಹಿರಿಮೆಯನ್ನು ಅರಿತು, ಆತನಿಗೆ 'ಚೆನ್ನಬಸವ ಎಂಬ ನಾಮಕರಣವನ್ನು ಮಾಡಿದರು. ಈ ಬಗೆಯಾಗಿ ಬಸವಣ್ಣನೊಡನೆ ಅವರ ಜೀವನವು ಆಶ್ರಮದ ಪಾವನ ಪರಿಸರದಲ್ಲಿ ಆನಂದದಿಂದ ಸಾಗಿತು. ಅವರೂ ತಮ್ಮ ಭಕ್ತಿಯನ್ನು ಬೆಳೆಯಿಸಿಕೊಂಡು ಧನ್ಯರಾದರು.

ಸಂಗನ ಆದೇಶ

ಬಸವಣ್ಣನು ಸದ್ಗುರುಗಳ ಸನ್ನಿಧಿಯಲ್ಲಿ ಸುಮಾರು ಹತ್ತು ವರುಷ ಇದ್ದನು. ಈ ಅವಧಿಯಲ್ಲಿ ಬಸವಣ್ಣನ ಜೀವನ ಒಂದು ವಿಶೇಷವಾದ ಮಟ್ಟವನ್ನು ಮುಟ್ಟಿತು. ಇನ್ನು ಆತನು ತನ್ನ ಮಹಾಕಾರ್ಯವನ್ನು ಪ್ರಾರಂಭಿಸಬೇಕು. ಅದರ ಜತೆಯಲ್ಲಿಯೇ ಮುಂದಿನ ಸಾಧನವನ್ನು

38
ನಡೆಯಿಸಬೇಕು ಎಂದು ಮುನಿಗಳು ಬಗೆದರು. ಆತನ ಮಹಾಕಾರ್ಯದ ಕ್ಷೇತ್ರ ಮಂಗಳವಾಡ ಕಲ್ಯಾಣ. ಅಲ್ಲಿ ಆತನಿಗೆ ಹೋಗಲು ಆಜ್ಞಾಪಿಸಬೇಕೆಂದು ಅವರು ಯೋಚಿಸಿದರು. ಅದೇ ಸಮಯಕ್ಕೆ ಒಂದು ದಿನ ಸಾಯಂಕಾಲ ಬಸವಣ್ಣನು ಸಂಗನನ್ನು ಅರ್ಚಿಸಿ, ಆತನ ಪ್ರಸಾದವನ್ನು ಕೈಕೊಂಡು, ರಂಗಮಂಟಪದಲ್ಲಿ ಧ್ಯಾನಮುದ್ರಾನಿದ್ರೆ' ಯಲ್ಲಿ ಇದ್ದನು. ಆಗ ಪಶುಪತಿಯು ಆತನ 'ಮನದ ಮೊನೆಯೊಳೊಪ್ಪ ಮೂರ್ತಿಗೊಂಡು' ಅಂದನು :
“ಎಲೈ ಮಗನೆ, ಬಸವಣ್ಣ! ನಿನ್ನಂ ಮಹೀತಳದೊಳು ಮೆರೆದಪೆವು. ನೀಂ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಪೋಗು!
ಈ ಮಾತನ್ನು ಕೇಳಿ ಬಸವಣ್ಣನು ಎಚ್ಚತ್ತನು. ಕಣ್ಣೆರೆದು ಅತ್ತಿತ್ತ ನೋಡಿದನು. ಯಾರೂ ಇರಲಿಲ್ಲ. ಆಗ ಈ ಅದ್ಭುತ ಕನಸನ್ನು ಕುರಿತು ಆತನ ಅಂತರಂಗದಲ್ಲಿ ವಿಚಾರಲಹರಿಗಳು ಅಲೆಯತೊಡಗಿದವು. “ಸಂಗನು ನನಗೆ ಮಂಗಳವಾಡಕ್ಕೆ ಹೋಗಲು ಯಾಕೆ ಹೇಳಿರುವ? ಅಲ್ಲಿ ಅದೆಂಥ ವೈಭವವು ನನ್ನನ್ನು ಕಾದಿರುವದು? ಆದರೆ ಅದಕ್ಕಾಗಿ ನಾನು ಸಂಗನಿಂದ ಅಗಲಬೇಕಲ್ಲ? ಸಂಗನಿಲ್ಲದ ವೈಭವವು ಅದೆಂಥ ವೈಭವ? ಅದಕ್ಕೆ ಬೆಲೆಯೇನು? ಅದನ್ನೆಳಸಿ ನಾನು ಸಂಗನನ್ನು ತೊರೆಯಬೇಕೆ? ತೊರೆಯುವದು ಉಚಿತವೇ? ಸರಿಯೇ? ಆದರೆ ಸಂಗನಾದರೂ ನನಗೆ ಹಾಗೇಕೆ ಆಜ್ಞಾಪಿಸಿರಬೇಕು? ಆತನ ಆಜ್ಞೆಯ ಉದ್ದೇಶವೇನು? ಆತನು ಸುಮ್ಮಸುಮ್ಮನೆ ಆಜ್ಞಾಪಿಸಲರಿಯ. ಆದುದರಿಂದ ಆತನ ಆಜ್ಞೆಯನ್ನು ಮೀರಬೇಕೆ? ಮೀರುವದು ಸರಿಯೇ? ಒಂದೆಡೆ ಸಂಗನ ಅಗಲಿಕೆ, ಇನ್ನೊಂದೆಡೆ ಸಂಗನ ಆಜ್ಞಾಭಂಗ! ಯಾವುದನ್ನು ಮಾಡಲಿ? ಯಾವುದನ್ನು ಬಿಡಲಿ? ಆಗ ಬಸವಣ್ಣನು ತುಂಬ ಇಕ್ಕಟ್ಟಿನಲ್ಲಿ ಸಿಲುಕಿದ. ಕೊನೆಗೆ, ಮುಂಬರುವ ವೈಭವವನ್ನು ತೊರೆಯಬಹುದು, ಆದರೆ ಅಗಲಿಕೆಯ ದುಃಖವನ್ನು ಸಹಿಸುವದು ಸಾಧ್ಯವಿಲ್ಲ ಎಂದು ಆತನು ನಿರ್ಣಯಿಸಿದನು.

39

ಬಸವಣ್ಣನಿಗೆ ಅಂದು ತನ್ನ ಮುಂದಿನ ಮಹಾಕಾರ್ಯದ ಕಲ್ಪನೆಯು ಇರಲಿಲ್ಲ. ಆಶ್ರಮದಲ್ಲಿ ತನ್ನ ಆದರ್ಶ ಸಮಾಜದ ಚಿತ್ರವನ್ನು ಅವನು ಕಂಡಿದ್ದ. ಆದರೆ ಅದನ್ನು ನಿರ್ಮಿಸುವ ಹೊಣೆಯು ತನ್ನದು-ಸಂಗನು ಅದನ್ನು ತನಗೆ ಒಪ್ಪಿಸಿರುವ ಎಂಬುದು ಆತನಿಗೆ ಅಂದು ಹೊಳೆದಿರಲಿಲ್ಲ. ಆತನಲ್ಲಿ ಆ ವಿಚಾರ ಇನ್ನೂ ಅಷ್ಟು ಮೂರ್ತಸ್ವರೂಪವನ್ನು ತಳೆದಿರಲಿಲ್ಲ. ಪ್ರಭುದೇವರು ಕಲ್ಯಾಣಕ್ಕೆ ಬಂದ ತರುವಾಯ ಅವರೊಡನೆ ನಡೆದ ವಿಚಾರ ಮಂಥನದಿಂದ ಅಂಥ ಸಮಾಜರಚನೆಯ ಆದರ್ಶವೂ ಅದರ ಸಾಧನಗಳೂ ನಿಶ್ಚಯಿಸಲ್ಪಟ್ಟವು. ಮತ್ತು ಆ ಮೇರೆಗೆ ಪ್ರತ್ಯಕ್ಷ ಕಾರ್ಯವು ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ನಾವು ಅರಿಯುವದಗತ್ಯ, ಭಗವಂತನು ಸರ್ವಾಂತರ್ಯಾಮಿ - ಸರ್ವವ್ಯಾಪಿ ಎಂಬುದನ್ನು ಬಸವಣ್ಣನು ಅರಿತಿದ್ದ ಉದಕದೊಳಗಣ ಕಿಚ್ಚಿನಂತೆ' ಸಸಿಯೊಳಗಣ ರಸದ ರುಚಿಯಂತೆ ನನೆಯೊಳಗಣ ಪರಿಮಳದಂತೆ ಆತನು ಇರುವ ಎಂಬುದನ್ನು ಬಸವಣ್ಣನು ಬಲ್ಲ, ಆದರೆ ಪ್ರಬಲವಾದ ಪೂರ್ವಸಂಸ್ಕಾರಗಳ ಫಲವಾಗಿಯೂ ಹಲವಾರು ವರುಷಗ ನಿಕಟಸಾನ್ನಿಧ್ಯದ ಫಲವಾಗಿಯೂ ಸಂಗನ ವಿಗ್ರಹ, ಸಂಗನ ನಾಮ ಸಂಗಮಕ್ಷೇತ್ರ ಇವುಗಳ ಬಗೆಗೆ ಆತನು ತುಂಬ ಪ್ರೀತಿ ಆದರಗಳನ್ನು ತಳೆದಿದ್ದ. ಆದುದರಿಂದ ಆ ಪಾವನ ಪರಿಸರದಿಂದ ತೆರಳಬೇಕಾಗಿ ಬಂದಾಗಿ ಆತನಿಗೆ ಸ್ವಾಭಾವಿಕವಾಗಿ ಬಹಳ ವ್ಯಸನವಾಯಿತು. ಅದು ಸಂಗನ ಅಗಲಿಕೆಯೇ ಎಂದೆನಿಸಿ, ಬಸವಣ್ಣನು ತುಂಬ ವ್ಯಥಿತನಾದ. ಅತಿಯಾಗಿ ಕಳವಳಗೊಂಡು ಅವನು ಸಂಗನ ಎದುರು ತನ್ನ ದುಗುಡವನ್ನು ಈ ರೀತಿ ತೋಡಿಕಂಡನು :
“ದೇವದೇವ, ಸಂಗ! ಕೆಟ್ಟ ಕೆಟ್ಟೆ.. ಪರಮಬಂಧುವೇ, ಪ್ರಾಣವೇ! ಬೆಳುದಿಂಗಳೇಕೆ, ಬಿಸುಲೇಕೆ? ಅಮೃತವೇಕೆ, ವಿಷವೇಕೆ?... ನೀನೇಕೆ, ಈ ನುಡಿಯೇಕೆ? ಹೊದ್ದಿ ಹರಂ ಹೋಗೆಂಬರೆ? ಸಾರ್ದರಂ ಸೈರಿಸೆಂಬರೆ? ನಂಬಿದವರ ಗೋಣಂ ಕೊಯ್ದರೆ? ಶಿಶುವನಿರಿವರೆ?

40
ಪಶುವಂ ಕೊಲುವರೆ? ಎನ್ನಂ ಬಿಡುವರೆ? ಕರುಣಿ, ಕರುಣಿ!... ಇನ್ನೇನು, ಇನ್ನೇನು?”

ಬಸವಣ್ಣನು ಅತಿಯಾಗಿ ಹಲುಬಿದನು. ಸಂಗನನ್ನು ಆಲಿಂಗಿಸಿ ಆತನನ್ನು ತನ್ನ ಆಶ್ರುಗಳಿಂದ ಎರೆದನು. ಅಂದು ಅವನಿಗೆ ಅಗ್ಗವಣೆ ಹೂಗಳಿಗಾಗಿ ಹೋಗಲು ಕೂಡ ಮನಸ್ಸಾಗಲೊಲ್ಲದು ಆದರೂ ಅದನ್ನು ಕೆಲಕಾಲದ ತರುವಾಯ ತಂದು, ಆತನು ಸಂಗನನ್ನು ಪೂಜಿಸಿದನು. ಆದರೆ ಮೋಹದ ಮುನಿಸಿನಿಂದ ಪ್ರಸಾದವನ್ನು ಸ್ವೀಕರಿಸದೆ, ಆಶ್ರಮಕ್ಕೆಯೂ ತೆರಳಲಾರದೆ, ಬಸವಣ್ಣನು ಸಂಗನ ಪಾದದ ಬಳಿ ಹಾಗೆಯೇ ಮಲಗಿಬಿಟ್ಟನು. ರಾತ್ರಿಯಲ್ಲಿ ಭಕ್ತನ ಈ ಸ್ಥಿತಿಯನ್ನು ನೋಡಿ, ಸಂಗಮನಾಥನು ಕೌತುಕಗೊಂಡು, ಆತನ ಕನಸಿನಲ್ಲಿ ಬಂದು ಆತನನ್ನು ಈ ಬಗೆಯಾಗಿ ಸಂತೈಸಿದನು :

“ಎಲೆ ಕಂದ, ಬಸವ! ನಿನ್ನನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ? ಬೇಡಯ್ಯ ಬೇಡೆನ್ನರಸ! ಬೇಡೆನ್ನ ಭಕ್ತನಿಧಿಯೆ! ನಿನ್ನೊಡನೆ ಬಿಡದೆ ಬಪ್ಪೆಂ೧೪

ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ !
ನೆನೆಯೆ ಮಂದಿರ್ದಪಂ ಕರೆದೊಡೋ ಎಂದಪೆಂ
ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ
ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪಂ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ !

“ನಾಳೆ ಮಧ್ಯಾಹ್ನದೊಳು ಶುದ್ಧಾಂಗನಾಗಿ ಬಂದು, ನಂದಿಕೇಶ್ವರನ ಮುಂದೆ ಎನ್ನಂ ನೆನೆವುತ್ತ ಕುಳ್ಳಿರೆ, ವೃಷಭನ ಮುಖಾಂತರ ಆವೆ ಬಂದಪೆವು... ಅಲ್ಲಿಂ ಬಳಿಕ್ಕಂ ಎಮ್ಮನರ್ಚಿಸುತ್ತೆ ಭಕ್ತರ ಬಂಧುವಾಗಿ,

೧೩. ಬ. ರ. ಪು. ೨೧
೧೪. ಬ. ರ. ಪು. ೨೨
೧೫. ಬ. ರ. ಪು. ೨೬

41

ಶರಣರ ಪುರುಷದ ಕಣಿಯಾಗಿ ನಿತ್ಯಸಖಿಯಾಗಿ... ಭಕ್ತರಂ ಗೆಲಿಸಿ, ಪ್ರತ್ಯಕ್ಷಂಗಳಂ ತೋರಿ, ಲೌಕಿಕ ಧರ್ಮಮಂ ಮೀರಿ, ಕಡುನಿಷ್ಠೆಯಿಂ ಹೇರಿ, ಪರಮಸುಖದಿಂದ ಇರ್ಪುದು!೧೬
ಅ೦ದಿನ ಅರುಣೋದಯವು ಬಸವಣ್ಣನಿಗೆ ಹರನ ಕರುಣೋದಯವಾಗಿ ಪರಿಣಮಿಸಿತು. ಆತನು ನಿದ್ರೆಯಿಂದೆದ್ದಾಗ ಆತನ ಮೈಮೇಲೆ ಪುಳಕಂಗಳು, ಕಂಗಳಲ್ಲಿ ಆನಂದಾಶ್ರುಗಳು! ಹೃದಯದಿಂದ ಹರುಷವು ಹೊರಸೂಸುತ್ತಿತ್ತು, ಹರಕರುಣದ ಪ್ರತೀತಿಯನ್ನು ಕಾಣಲು ಬಸವಣ್ಣನು ಕೂಡಲೆ ಅಲ್ಲಿಂದೆದ್ದ, ಪ್ರಾತರ್ವಿಧಿಗಳನ್ನು ಮುಗಿಸಿದ. ಸ್ನಾನವನ್ನು ಮಾಡಿ, ಸಂಗಮೇಶ್ವರನನ್ನು ಭಕ್ತಿಯಿಂದ ಪೂಜಿಸಿದ. ಅನಂತರ ರಂಗಮಂಟಪದಲ್ಲಿ ಹೋಗಿ ನಂದಿಕೇಶ್ವರನನ್ನು ವಂದಿಸಿದ. ಸಾಷ್ಟಾಂಗ ಎರಗಿದ. ಎದ್ದು ನೋಡುವಷ್ಟರಲ್ಲಿ ಆತನ ಕೊಂಬುಗಳ ಮಧ್ಯದಲ್ಲಿ ಬಸವಣ್ಣನಿಗೆ ಒಂದು ದಿವ್ಯ ಲಿಂಗವು ಕಾಣಿಸಿತು. ಅದೇ ಸಂಗನ ಪ್ರಸಾದವೆಂದು ಬಗೆದು, ಅದನ್ನು ಆನಂದದಿಂದ ಸ್ವೀಕರಿಸಿ, ಅಂದು ನಡೆದ ಸೋಜಿಗವಾದ ಸಂಗತಿಗಳನ್ನೆಲ್ಲ ಸದ್ಗುರುಗಳಿಗೆ ಅರುಹಲು ಬಸವಣ್ಣನು ಆಶ್ರಮಕ್ಕೆ ಬಂದನು.
ಈಶಾನ್ಯ ಮುನಿಗಳು ತಮ್ಮ ಅಂತರ್ದೃಷ್ಠಿಯಿಂದ ಇದನ್ನೆಲ್ಲ ಮೊದಲೇ ಅರಿತಿದ್ದರು. ಬಸವಣ್ಣನು ಬಂದು ಅವರನ್ನು ವಂದಿಸಿದೊಡನೆ ಅವರೆಂದರು : ಬಾರಯ, ಬಸವ, ಪಡೆದೆಯಾ ಪ್ರಸಾದವ? ಇನ್ನು ಸಂಗನ ಆಜ್ಞೆಯಂತೆ ನಡೆಯಯ್ಯಾ, ಇಲ್ಲಿಯ ನಿನ್ನ ಸಿದ್ಧತೆಯು ಪೂರ್ಣವಾಯಿತು. ಮುಂದಿನ ಮಹಾಕಾರ್ಯಕ್ಕಾಗಿ ಮಂಗಳವಾಡಕ್ಕೆ ತೆರಳು! ಜಯಜಯಕಾರ ಆಗುವದು! ಸದ್ಗುರುಗಳ ಅಲೌಕಿಕ ಸಾಮರ್ಥ್ಯವನ್ನು ಅರುಹುವ ಈ ಹರಕೆಯ ಭವಿಷ್ಯವಾಣಿಯನ್ನು ಕೇಳಿ ಅವರ ಬಗೆಗಿನ ಬಸವಣ್ಣನ ಆದರವು ನೂರ್ಮಡಿಯಾಯಿತು. ಆದರಭಾವದಿಂದ ಆತನ ಎದೆ ತುಂಬಿಹೋಯಿತು. ಬಾಯಿಂದ ಮಾತೇ

೧೬. ಬ. ರ. ಪು. ೨೨

42
ಹೊರಡಲೊಲ್ಲದು. ವಿನೀತನಾಗಿ ಸದ್ಗುರುಗಳನ್ನು ವಂದಿಸಿದಾಗ ಅವರ ಚರಣಗಳನ್ನು ತೊಳೆದ ಅಶ್ರುಗಳೇ ಆತನ ಭಾವನೆಯು ಉತ್ಕಟತೆಯನ್ನು ಪ್ರಕಟಿಸಿದವು.
ಈಶಾನ್ಯ ಗುರುಗಳಿಗೆ ತಮ್ಮ ಕನಸು ನನಸಾಗುವ ಸಮಯವು ಸನ್ನಿಹಿತ ಆಗಿದೆ ಎಂದೆನಿಸಿತು. ತಮ್ಮ ಶಿಷ್ಯವರನಾದ ಬಸವಣ್ಣನು ಇನ್ನು ಕಾರ್ಯ ರಂಗಕ್ಕೆ ಇಳಿಯುವ, ಶಿವಭಕ್ತಿಯನ್ನು ಬೆಳೆಸುವ. ಶಿವಭಾಂಧವ್ಯವನ್ನು ನಿರ್ಮಿಸುವ, ಹಾಗೂ ತಮ್ಮ ಬಹುದಿನಗಳ ಮನೋರಥವನ್ನು ಪೂರ್ಣಗೊಳಿಸುವ. ಇನ್ನು ತಮ್ಮ ಜೀವನ ಸಫಲವಾಯಿತು, ಎಂದೆನಿಸಿತವರಿಗೆ ಕೂಡಲೇ ಅವರು ಬಸವಣ್ಣನ ಪ್ರಯಾಣದ ಸಿದ್ಧತೆಯನ್ನು ಮಾಡಿದರು. ಅವನಿಗೆ ಬಟುವಿನ ವೇಷವನ್ನು ತೊರೆದು ಕರಣಿಕನ ವೇಷವನ್ನು ಧರಿಸಲು ಹೇಳಿದರು. ಬಸವಣ್ಣನು ಗಣಿತ ವಿದ್ಯೆಯಲ್ಲಿಯೂ ಕರಣಿಕ ವಿದ್ಯೆಯಲ್ಲಿಯೂ ಕುಶಲನಿದ್ದುದರಿಂದ ಅವನಿಗೆ ಅದೇ ಕಾಯಕವನ್ನು ಕೈಗೊಳ್ಳಲು ಬೋಧಿಸಿದರು. ಮಂಗಳವಾಡದಲ್ಲಿನ ಬಾಚರಸನೆಂಬ ತಮ್ಮ ಶಿಷ್ಯನಿಗೆ ಒಂದು ಕಾಗದ ಕಳುಹಿಸಿ, ಬಸವಣ್ಣನ ಬರವನ್ನು ಅವನಿಗೆ ತಿಳಿಸಿದರು. ಬಸವನನ್ನು ತನ್ನ ಮನೆಯಲ್ಲಿ ಬರಮಾಡಿಕೊಳ್ಳಬೇಕು ಹಾಗೂ ಆತನನ್ನು ತಮ್ಮ ಭಕ್ತ ಸಿದ್ಧರಸನೆಡೆ ಕರೆದುಕೊಂಡು ಹೋಗಬೇಕು ಎಂದು ಆತನನ್ನು ಆಜ್ಞಾಪಿಸಿದರು. ಮೊದಲು ಬಸವಣ್ಣನೊಬ್ಬನೇ ಅಲ್ಲಿ ಹೋಗಬೇಕು. ಆತನಿಗೆ ಅಲ್ಲಿ ಕೆಲಸವು ದೊರೆತ ಮೇಲೆ ಹಿಂದಿನಿಂದ ಅಕ್ಕಭಾವಂದಿರೂ ಆತನೆಡೆ ತೆರಳಬೇಕು ಎಂದು ಗೊತ್ತು ಪಡಿಸಲಾಯಿತು. ಒಂದು ಶುಭಮುಹೂರ್ತವನ್ನು ನೋಡಿ ಬಸವಣ್ಣನು ಅಲ್ಲಿಗೆ ಪ್ರಯಾಣ ಬೆಳೆಸಲು ಸಿದ್ಧನಾದನು.
ಸದ್ಗುರು- ಸಚ್ಚಿಷ್ಯರ ಅಂದಿನ ಅಗಲಿಕೆಯು ನಲಿವು- ನೋವುಗಳಿಂದ ಕೂಡಿತ್ತು ಬಸವಣ್ಣನ ಮುಂದಿನ ಭಾಗ್ಯದ ಅರಿವು ಆನಂದದ ಸೆಲೆ. ಭಕ್ತನ ಅಂದಿನ ವಿರಹ ದುಃಖದ ನೆಲೆ. ಗುರು-ಶಿಷ್ಯರ ಕಂಗಳಲ್ಲಿ ಅಂದು ಆನಂದ-ದುಃಖಗಳ ಕುರುಹುಗಳು ಆದ ಕಂಬನಿಗಳ

43

ಸಂಗಮವಾಗಿತ್ತು. ಇಬ್ಬರೂ ಗದ್ಗದಿತರಾದರು. ಮುಖದಿಂದ ಮಾತು ಹೊರಬಾರದಾಯಿತು. ಒಬ್ಬರನ್ನು ಒಬ್ಬರು ಬಹುಕಾಲ ಮೌನದಿಂದ ನೋಡುತ್ತಲೇ ನಿಂತರು. ಕೊನೆಗೆ ಬಲು ಕಷ್ಟದಿಂದ ತಮ್ಮ ಮೌನವನ್ನು ತೊರೆದು ಮುನಿಗಳೆಂದರು :

“ನಡೆಯಯ್ಯ, ಮಗನೆ ! ನಡೆ, ಕಂದ ಬಸವಣ್ಣ

ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ !”


ಸದ್ಗುರುಗಳ ಆಶೀರ್ವಾದ ಪಡೆದು ಬಸವಣ್ಣ ಅಕ್ಕಭಾವಂದಿರಿಗೆ ನಮಸ್ಕಾರ ಮಾಡಿದನು. ಅವರನ್ನು ಪ್ರೀತಿಯಿಂದ ಬೀಳ್ಕೊಂಡನು. ತರುವಾಯ ಸಂಗಮೇಶನನ್ನೂ ನಂದಿಕೇಶನನ್ನೂ ಅನನ್ಯಭಾವದಿಂದ ವಂದಿಸಿ, ಸಂಗನ ಧ್ಯಾನವನ್ನು ಮಾಡುತ್ತ ಬಸವಣ್ಣನು ಮಂಗಳವಾಡಕ್ಕೆ ಪಯಣ ಬೆಳೆಸಿದನು.

ಅಲೆ : ನಾಲ್ಕು
ಬಿಜ್ಜಳರಾಜನ ಆಸ್ಥಾನದಲ್ಲಿ
ಮಂಗಳವಾಡದಲ್ಲಿ :
“ಬರಮಾಡಿಕೊಳ್ಳಯ್ಯ, ಬರುವ ಸಂಗನಬಸವ!
ಕಲ್ಯಾಣ ಪಟ್ಟಣದಲ್ಲಿಯ ಸಿದ್ಧರಸ ದಂಡಾಧಿಪನ ಮಹಾಮನೆಯ ಶಯ್ಯಾಗೃಹ. ಬೆಳಗಿನ ಸಮಯ. ಮೇಲ್ಕಾಣಿಸಿದ ಶಬ್ದಗಳನ್ನು ಕೇಳಿ ಅದೇ ಎಚ್ಚತ್ತಸಿದ್ಧರಸನು, ತಾನು ಕಂಡ ಕನಸನ್ನು ತನ್ನ ಮಡದಿಗೆ ಅರುಹಲಿರುವ, “ಇದು ನೋಡು, ಇಂದಿನ ಕನಸು ತುಂಬ ಅದ್ಭುತವಾದುದು! ಕನಸಿನಲ್ಲಿ ಒಬ್ಬ ತೇಜಃಪುಂಜನಾದ ಮುನಿ ಬಂದು ಬರಮಾಡಿಕೊಳ್ಳಯ್ಯ, ಬರುವ ಸಂಗನ ಬಸವ!' ಎಂದು ನುಡಿದು ಕೂಡಲೇ ಕಾಣದಾದ ಸಂತತಿಗಾಗಿ ಕೊರಗುವ ನಮ್ಮ ಭಾಗ್ಯ ಇಂದು ಬೆಳಗುವದೇನೋ? ಸಂಗಮನಾಥನು ಅದೆಂತು ಕರುಣಿಸಲಿರುವ ನೋಡೋಣ! ನಸುಕಿನ ಕನಸು ನನಸಾಗದೆ ಇರದೆಂದು ಬಗೆದು ಸತಿಪತಿಯರಿಬ್ಬರೂ ಪ್ರಮುದಿತರಾದರು. ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ, ಮುಂದೇನಾಗುವದು ಎಂಬುದನ್ನು ಕಾಣಲು ಆತುರರಾಗಿ ಕುಳಿತರು.
ಅಷ್ಟರಲ್ಲಿ ಅವರ ಸೇವಕನು ಒಳಗೆ ಬಂದು ಸಿದ್ದರಸನ ಕೈಯಲ್ಲಿ ಒಂದು ಕಾಗದವನ್ನು ಕೊಟ್ಟನು. “ಒಬ್ಬ ಬ್ರಹ್ಮಚಾರಿಯು ಈ ಕಾಗದವನ್ನು ತಮಗೆ ಕೊಡಹೇಳಿ, ತನ್ನ ಪರಿಚಯವನ್ನು ಮಾಡಿಕೊಡದೆ, ಒಮ್ಮೆಲೆ ಹೋಗಿಯೇ ಬಿಟ್ಟ ಎಂದು ಅರುಹಿ, ಸೇವಕನು ಅಲ್ಲಿಂದ ತೆರಳಿದನು. ಆಗ ಸಿದ್ಧರಸನು ಕುತೂಹಲದಿಂದ ಕಾಗದವನ್ನು ತೆರೆದು ಓದಿದ. ಅದರಲ್ಲಿ ಈ ಬಗೆಯಾಗಿ ಬರೆಯಲಾಗಿದ್ದಿತು :
“ಅನಂತ ಆಶೀರ್ವಾದಗಳು.
“ನಮ್ಮ ಪ್ರಿಯತಮ ಶಿಷ್ಯನಾದ ಭಕ್ತ ಬಸವಣ್ಣನು ಇಂದು ನಿಮ್ಮೆಡೆ

45

ಬರಲಿರುವ. ಆತನು ಕಾರಣಿಕಪುರುಷ. ಆತನನ್ನು ಸರಿಯಾಗಿ ಸತ್ಕರಿಸಿರಿ. ನಿಮ್ಮ ಇಷ್ಟವು ಫಲಿಸಬಹುದು.”
ಕಾಗದವು ಸಂಗಮದ ಈಶಾನ್ಯ ಮುನಿಗಳಿಂದ ಬಂದಿತ್ತು. ಮುನಿಗಳ ಹಿರಿಮೆಯನ್ನು ಚೆನ್ನಾಗಿ ಅರಿತ ಸಿದ್ಧರಸನು ಅಂದಿನ ಕನಸಿನಲ್ಲಿಯ ಸಂದೇಶವು ಅವರಿಂದಲೇ ಬಂದಿರಬಹುದೆಂದು ಬಗೆದನು. ಕನಸಿನ ಮುಂದಿನ ಹಂತವನ್ನು ಕಾಣಲು ಆತುರನಾದನು. ಬೆಳಗಿನ ಫಲಾಹಾರದ ಸಿದ್ಧತೆಯನ್ನು ಮಾಡಿಡಲು ಆಜ್ಞಾಪಿಸಿ, ತನ್ನ ಸ್ನಾನಪೂಜಾದಿಗಳನ್ನು ಮುಗಿಸಿ ಬಸವಣ್ಣನವರ ಬರವನ್ನೇ ನಿರೀಕ್ಷಿಸುತ್ತ ಕುಳಿತುಕೊಂಡನು.
ಕೆಲ ಸಮಯ ಕಳೆದ ಮೇಲೆ ಸಿದ್ದರಸನು ನಿರೀಕ್ಷಿಸಿದ ಮೇರೆಗೆ ಬಸವಣ್ಣನವರು ಬಂದೇಬಿಟ್ಟರು. ಬಾಚರಸನು ಗುರುಗಳ ಆಜ್ಞೆಯ ಮೇರೆಗೆ ಅವರನ್ನು ಅಲ್ಲಿಗೆ ಕರೆತಂದಿದ್ದನು. ಮುನ್ನಾದಿನ ಸಾಯಂಕಾಲವೇ ಬಸವಣ್ಣನವರು ಕಲ್ಯಾಣವನ್ನು ತಲುಪಿ ಬಾಚರಸನ ಮನೆಯಲ್ಲಿ ಇಳಿದುಕೊಂಡಿದ್ದರು. ತನ್ನ ಗುರುಬಂಧುಗಳ ಆಗಮನದಿಂದ ಬಾಚರಸನಿಗೆ ಹಿಡಿಸಲಾರದ ಹಿಗ್ಗು ಅದರಲ್ಲಿ ಸದ್ಗುರುಗಳ ಕಾಗದ ಬೇರೆ. ಅದನ್ನೋದಿ ಬಸವಣ್ಣನವರ ಬಗೆಗೆ ಬಾಚರಸನಲ್ಲಿ ಭಕ್ತಿ ತುಂಬ ಬೆಳೆದವು. ಸದ್ಗುರುಗಳ ಆಜ್ಞೆಯ ಮೇರೆಗೆ ಕೊಂಚವೂ ತಡ ಮಾಡದೆ ಬೆಳಿಗ್ಗೆ ಎದ್ದೊಡನೆ ಆತನು ಬಸವಣ್ಣನವರನ್ನು ಸಿದ್ಧರಸನೆಡೆ ಕರೆತಂದನು. ಮುನಿಗಳ ಸಂದೇಶವನ್ನು ಆಗಾಗ ಸಿದ್ಧರಸನಿಗೆ ಅವನು ಸಲ್ಲಿಸುತ್ತಿರುವ ಮೂಲಕ ಬಾಚರಸನು ಸಿದ್ಧರಸನಿಗೆ ತುಂಬ ಪರಿಚಿತ ಆಗಿದ್ದನು. ಬಾಚರಸನು ಬಸವಣ್ಣನವರೊಡನೆ ತಾನು ಬಂದುದನ್ನು ಸೇವಕನ ಮುಖಾಂತರ ಸಿದ್ಧರಸನಿಗೆ ತಿಳಿಸಿದನು. ಕೂಡಲೇ ಸಿದ್ಧರಸನು ಅವರನ್ನು ಒಳಗೆ ಕರೆಯಿಸಿಕೊಂಡನು.
ಬಾಚರಸ-ಬಸವಣ್ಣನವರು ಒಳಗೆ ಬಂದೊಡನೆ ಅರಸನನ್ನು ವಿನಯದಿಂದ ವಂದಿಸಿ, ಅರಸನು ತೋರಿಸಿದ ಆಸನಗಳ ಮೇಲೆ ಕುಳಿತುಕೊಂಡರು. ಆಗ ಬಸವಣ್ಣನವರ ಅಲೌಕಿಕ ಕಾಂತಿಯು ಸಿದ್ಧರಸನನ್ನು ಕೂಡಲೇ ಮುಗ್ಧಗೊಳಿಸಿತು. ಬಾಚರಸನು ತಮ್ಮ ಬರವಿನ

46

ಕಾರಣವನ್ನೂ ಬಸವಣ್ಣನವರ ಪರಿಚಯವನ್ನೂ ಈ ರೀತಿ ಅರಿಕೆ ಮಾಡಿದನು:

"ಅರಸರೇ! ಇವರು ಬಸವಣ್ಣನವರು. ಸದ್ಗುರುಗಳಿಂದ ಬಂದಿರುವರು. ತಮಗೆ ಇವರ ಪರಿಚಯವನ್ನು ಮಾಡಿಕೊಡಲು ಗುರುಗಳು ನನಗೆ ಆಜ್ಞಾಪಿಸಿರುವರು. ಇವರು ಲೌಕಿಕ ವಿದ್ಯೆಯಲ್ಲಿಯೂ ಪಾರಮಾರ್ಥಿಕ ವಿದ್ಯೆಯಲ್ಲಿಯೂ ಪಾರಂಗತರು. ಅಪ್ರತಿಮ ಬುದ್ಧಿಶಾಲಿಗಳು, ಗಣಿತಶಾಸ್ತ್ರವಿಶಾರದರು. ಕುಶಲ ಕರಣಿಕರು, ಅದೇ ಮೇರೆಗೆ ಇವರು ಸಂಗನ ಕರುಣವನ್ನು ಪಡೆದ ಭಕ್ತವರರು, ಶರಣರು, ಕಾರಣಿಕರು. ಇವರನ್ನು.."

ಸಿದ್ಧರಸನು ಆತನನ್ನು ತಡೆದು ಅಂದನು: "ಇರಲಿ, ಬಾಚರಸಾ! ಮುನಿಗಳು ನನಗಿದನ್ನೆಲ್ಲ ಅರುಹಿರುವರು. ಇವರೀಗ ನಮ್ಮಲ್ಲಿಯೇ ಇರಲಿ, ಇವರ ಮುಂದಿನ ವಿಚಾರವನ್ನೆಲ್ಲ ನಾವು ನೋಡಿಕೊಳ್ಳುವೆವು. ತರುವಾಯ ಬಸವಣ್ಣನವರ ಕಡೆ ಹೊರಳಿ, 'ಏನು ಬಸವಣ್ಣನವರೇ! ನಮ್ಮಿ ಬಿನ್ನಹವನ್ನು ದಯವಿಟ್ಟು ಮನ್ನಿಸಬಹುದೇ? ಎಂದು ಕೇಳಿದನು.

ಆಗ ಬಸವಣ್ಣನವರು ಬಾಚರಸನೆಡೆ ನೋಡಿದರು. ಅವರ ಆಶಯವನ್ನು ಅರಿತ ಬಾಚರಸನೆಂದ:

"ಅರಸರೇ, ಬಸವಣ್ಣನವರು ಕಾಯಕಜೀವಿಗಳು. ಅವರಿಗೆ ಒಂದು ಕೆಲಸ ನೋಡಿ ಕೊಡಿ. ಅಂದರೆ ಅವರು ತಮ್ಮ ಬಳಗದವರನ್ನು ಸಂಗಮದಿಂದ ಕರೆತರಿಸಿ, ಸ್ವತಂತ್ರವಾಗಿ ಮನೆ ಮಾಡಿಕೊಂಡು ಇರಬಹುದು. ಅಲ್ಲಿಯವರೆಗೆ ಅವರು ನಮ್ಮಲ್ಲಿಯೇ ಉಳಿದುಕೊಳ್ಳುವರು. ಅದನ್ನು ಕೇಳಿ ಸಿದ್ದರಸನೆಂದ: "ಆಗಲಿ, ಅವರ ಇಷ್ಟದಂತೆಯೇ ಆಗಲಿ, ನಾನು ಆಗ್ರಹ ಮಾಡುವದಿಲ್ಲ ಕೆಲಸವೇನು? ನಾಳಿನಿಂದಲೇ ಅವರು ನಮ್ಮ ಲೆಕ್ಕಪತ್ರಗಳನ್ನೆಯೇ ನೋಡಿಕೊಳ್ಳಲಿ. ನಾನು ಅವರು ಬಯಸಿದ ಸಂಬಳವನ್ನು ಕೊಡಬಲ್ಲೆ ಮುಂದೆ ಅವರಿಗೆ ಬಿಜ್ಜಳರಾಯನ ಪರಿಚಯವನ್ನು ಮಾಡಿಕೊಡುವೆ.

47

"ನಾನು ತಮ್ಮ ಈ ಆಶ್ವಾಸನಕ್ಕಾಗಿ ತಮ್ಮಿಂದ ತುಂಬ ಉಪಕೃತನು, ಅರಸರೇ!" ಬಸವಣ್ಣನವರೆಂದರು, "ತಮಗೆ ನನ್ನ ಅನಂತ ವಂದನೆಗಳು, ಕಾಯಕದಿಂದ ಬಾಳಲು ಗುರುಗಳು ಆಜ್ಞಾಪಿಸಿರುವ ಮೂಲಕ ನಾನು ತಮ್ಮ ಒಲವಿನ ಔತಣವನ್ನು ನಿರಾಕರಿಸಬೇಕಾಯಿತು. ಕ್ಷಮಿಸಿರಿ. ನಾಳಿನಿಂದ ತಮ್ಮ ಕಡೆ ಕೆಲಸಕ್ಕೆ ಬರುವೆ.

ಇಷ್ಟು ಹೇಳಿ ಬಸವಣ್ಣನವರು ಬಾಚರಸನೊಡನೆ ಅಲ್ಲಿಂದ ಹೊರಡಲು ಅನುವಾದರು. ಅವನ್ನು ಕಂಡು ಸಿದ್ಧರಸನು, ಫಲಾಹಾರವನ್ನು ಸೇವಿಸಿಕೊಂಡು ಹೋಗಲು ಅವರನ್ನು ಬಿನ್ನವಿಸಿದನು. ಆ ಮೇರೆಗೆ ಅದನ್ನು ಸ್ವೀಕರಿಸಿ, ಅವರಿಬ್ಬರೂ ಮನೆಗೆ ತೆರಳಿದರು.

ಮಂತ್ರಿಪದ:

ಮರುದಿನದಿಂದಲೇ ಬಸವಣ್ಣನವರ ಕೆಲಸವು ಪ್ರಾರಂಭ ಆಯಿತು. ಅವರು ದಿನಾಲು ಬೆಳಿಗ್ಗೆ ತಮ್ಮ ಇಷ್ಟಲಿಂಗದ ಪೂಜೆಯನ್ನೂ ಧ್ಯಾನವನ್ನೂ ತೀರಿಸಿಕೊಂಡು, ಸಿದ್ಧರಸನ ಮನೆಗೆ ಬಂದು, ಲೆಕ್ಕಪತ್ರಗಳನ್ನೊಳಗೊಂಡ ಮನೆಯ ಎಲ್ಲ ಆಢಳಿತವನ್ನು ನೋಡಿಕೊಳ್ಳತೊಡಗಿದರು. ಆಡಳಿತದಲ್ಲಿಯ ಅವರ ಕೌಶಲವನ್ನೂ ಪ್ರಾಮಾಣಿಕತೆಯನ್ನೂ ನಡತೆಯಲ್ಲಿಯ ಅವರ ನಯವಿನಯಗಳನ್ನೂ ನುಡಿಯಲ್ಲಿಯ ಮಾಧುರ್ಯವನ್ನೂ ಕಂಡು, ಸಿದ್ಧರಸನು ಅವರನ್ನು ತುಂಬ ಪ್ರೀತಿಸತೊಡಗಿದನು, ಗೌರವಿಸತೊಡಗಿದನು. ಆತನ ಪ್ರೀತ್ಯಾದರಗಳು ದಿನದಿನಕ್ಕೆ ಬೆಳೆಯುತ್ತಲೇ ನಡೆದವು. ಬಸವಣ್ಣನವರೂ ದಂಡಾಧಿಪನ ಸೌಜನ್ಯ ಕಂಡು ಆತನ ಬಗೆಗೆ ಆದರಭಾವವನ್ನು ತಳೆದರು. ಈ ರೀತಿ ಸಂಗನ ಕಾರಣದಿಂದ ಲಭಿಸಿದ ಈ ಯೋಗವು ಮುಂದೆ ಬರುವ ಭಾಗ್ಯೋದಯದ ಮುಂಬೆಳಕಾಗಿ ಪರಿಣಮಿಸಿತು, ಅದನ್ನೂ ಬೇಗನೆ ಬರಮಾಡಿಕೊಂಡಿತು. ಕೆಲದಿನಗಳಲ್ಲಿಯೇ ಬಸವಣ್ಣನವರಿಗೆ ತಮ್ಮ ಬುದ್ಧಿಚಾತುರ್ಯವನ್ನು ಕಾಣಿಸುವ ಒಂದು ಒಳ್ಳೆಯ ಸಂದರ್ಭವು ಲಭಿಸಿ, ಅದರ ಫಲವಾಗಿ ಅವರ ಭಾಗ್ಯರವಿಯು ಉದಿತನಾದ. ಅಂದಿನ ಕೆಲ ಸನ್ನಿವೇಶಗಳನ್ನು ನೆನೆದೇ ಬಸವಣ್ಣನವರು ಮುಂದಿನ ವಚನವನ್ನು

48

ಬರೆದಂತೆ ಕಾಣುವದು :
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು.
ಹರಿದು ಹೆದ್ದೊರೆಯೆ ಕೆರೆ ತುಂಬಿದಂತಯ್ಯಾ !
ನೆರೆಯದ ವಸ್ತು ನೆರೆವುದು ನೋಡಯ್ಯಾ !
ಅರಸು ಪರಿವಾರ ಕೈವಾರ ನೋಡಯ್ಯಾ !
ಪರಮ ನಿರಂಜನನೆ ಮರೆದ ಕಾಲಕ್ಕೆ
ತುಂಬಿದ ಹರವೆಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ !

ಒಂದು ದಿನ ಸಿದ್ದರಸನ ಕೈಕೆಳಗೆ ರಾಜಭಾಂಡಾರದ ಅಧಿಕಾರಿಯು ವಂಚಕರಾದ ಗಣಕರಿಗೆ ಕೊಟ್ಟು ಅವರಿಂದ ಸುಳ್ಳು ಲೆಕ್ಕವನ್ನು ಬರೆಯಿಸಿ, ಭಾಂಡಾರದಲ್ಲಿಯ ವಿಪುಲ ಹಣವನ್ನು ಅಪಹರಿಸುವ ಹೊಂಚು ಹಾಕಿದನು. ಈ ಸಂಗತಿಯು ಚಾರರ ಮುಖಾಂತರ ಬಿಜ್ಜಳರಾಯನಿಗೆ ತಿಳಿದೊಡನೆ ಆತನು ಸಿದ್ಧರಸನನ್ನು ಕರೆಯಿಸಿ ಭಾಂಡಾರದ ಲೆಕ್ಕವನ್ನೂ ನಿಲವನ್ನು ಕೂಡಲೇ ಪರೀಕ್ಷಿಸಲು ಆತನನ್ನು ಆಜ್ಞಾಪಿಸಿದನು. ಆ ಮೇರೆಗೆ ಸಿದ್ಧರಸನು ಬಸವಣ್ಣನವರೊಡನೆ ಭಾಂಡಾರಗೃಹಕ್ಕೆ ಒಮ್ಮೆಲೇ ಸಂದರ್ಶನ ಇತ್ತು ಲೆಕ್ಕಪತ್ರಗಳನ್ನೂ ಅಂದಿನ ನಿಲವನ್ನೂ ತನಗೆ ತೋರಿಸಲು ಅಧಿಕಾರಿಗೆ ಹೇಳಿದನು. ಎಲ್ಲ ಬಗೆಯ ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದ ಅಧಿಕಾರಿಯು ಅವನ್ನು ಸಿದ್ಧರಸನಿಗೆ ತೋರಿಸಿದನು. ಆಯದಲ್ಲಿ ಬೀಯವನ್ನು ಕಳೆದು ಉಳಿದ ನಿಲವನ್ನು ಭಾಂಡಾರದಲ್ಲಿಯ ಹಣವನ್ನು ಎಣಿಸಿ ಅದರಲ್ಲಿಯ ಅಂದಿನ ನಗದು ಹಣವನ್ನು ಸರಿಹೋಲಿಸಲು, ಅವುಗಳಲ್ಲಿ ಹೊಂದಿಕೆಯಾಯಿತು. “ಇದು ಕೀಳು ಕೊಂಡೆಗಾರರ ಕಾಯಕ! ಎಂದು ಬಗೆದು ಸಿದ್ಧರಸನು ಅಲ್ಲಿಂದ ಹೊರಡುವರಲ್ಲಿದ್ದ. ಅಷ್ಟರಲ್ಲಿ ಗಣಕರನ್ನೂ ಅಧಿಕಾರಿಯನ್ನೂ ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸಿದ ಬಸವಣ್ಣನವರಿಗೆ ಅವರ ಪ್ರಾಮಾಣಿಕತನದ ಬಗೆಗೆ ಸಂದೇಹ ಬಂದಿತು. ಕೂಡಲೇ ಲೆಕ್ಕವನ್ನು ಪರೀಕ್ಷಿಸಲು ತಮಗೆ ಅನುಜ್ಞೆ ನೀಡಬೇಕೆಂದು ಅವರು ಸಿದ್ಧರಸನನ್ನು

ಬಿನ್ನವಿಸಿದರು. ಅವರ ಬಿನ್ನಹದ ಮೇರೆಗೆ ಲೆಕ್ಕದ ವಹಿಗಳನ್ನು ಬಸವಣ್ಣನವರಿಗೆ ತೋರಿಸಲು, ಸಿದ್ಧರಸನು ಗಣಕರಿಗೆ ಆಜ್ಞಾಪಿಸಿದನು. ಅವನ್ನು ಕೆಲ ಸಮಯ ಪರೀಕ್ಷಿಸಿದ ಮೇಲೆ, ಬಸವಣ್ಣನವರು ಅವರ ಮೋಸವನ್ನೂ ಕೈ ಚಳಕವನ್ನೂ ಕಂಡುಹಿಡಿದರು. ಅದರ ಫಲವಾಗಿ ಕಾಗದದಲ್ಲಿಯ ನೀಲವಿನಲ್ಲಿ ಐದು ಕೋಟಿ ಹಣ ಹೆಚ್ಚಾದದ್ದು ಕಂಡುಬಂದಿತು. ಈ ಸಂಗತಿಯನ್ನು ಅವರು ಸಿದ್ಧರಸನಿಗೆ ತಿಳಿಸಿದರು. ಅದನ್ನು ಅರಿತು ಅತೀವ ರೇಗಿಗೆದ್ದ ಸಿದ್ಧರಸನು, ಗಣಕರಿಗೆ ಅದರ ಸರಿಯಾದ ವಿವರವನ್ನು ಅರುಹಲು ಹೇಳಿದಾಗ, ಅವರೆಲ್ಲ ಹತಪ್ರಭರಾಗಿ, ತಮ್ಮ ತಪ್ಪನ್ನು ಒಪ್ಪಿಕೊಂಡರು. ಅಧಿಕಾರಿಯು ತಾನು ಅಪಹರಿಸಿದ ಹಣವನ್ನೆಲ್ಲ ಮರಳಿ ಭಾಂಡಾರದಲ್ಲಿ ಇರಿಸಲು ಒಪ್ಪಿದನು. ಈ ಸಂಗತಿಯನ್ನು ಬಿಜ್ಜಳರಾಯನಿಗೆ ತಿಳಿಸಲಾಯಿತು. ಆತನು ಕೂಡಲೇ ಅಲ್ಲಿಗೆ ಬಂದು, ಬಸವಣ್ಣನವರ ಬುದ್ಧಿಚಾತುರ್ಯವನ್ನು ಕಂಡು ಅವರನ್ನು ತುಂಬ ಕೊಂಡಾಡಿದನು. ಮೋಸ ಮಾಡಿದ ಅಧಿಕಾರಿ ಗಣಕರನ್ನು ದಂಡಿಸಿ, ಅವರನ್ನು ಕೆಲಸದಿಂದ ತಳ್ಳಿಹಾಕಿದನು. ಆ ಅಧಿಕಾರಿಯ ಸ್ಥಳದಲ್ಲಿ ಬಸವಣ್ಣನವರನ್ನೇ ನಿಯಮಿಸಿದನು. ಸಂಗಯ್ಯನ ಕರುಣದ ಫಲವದು ಎಂದು ಭಾವಿಸಿ, ಬಸವಣ್ಣನವರು ಭಕ್ತಿಭಾವದಿಂದ ಮನದಲ್ಲಿ ಸಂಗನನ್ನು ವಂದಿಸಿ, ತಮ್ಮ ಹೊಸ ಅಧಿಕಾರವನ್ನು ಸ್ವೀಕರಿಸಿದರು. ಮುಂದೆ ಕೆಲಕಾಲದಲ್ಲಿಯೇ ಬಸವಣ್ಣನವರ ಕೆಲಸವನ್ನು ಅತಿಯಾಗಿ ಮೆಚ್ಚಿ ಬಿಜ್ಜಳರಾಯನು ಸಿದ್ದರಸನ ಸಲಹೆಯ ಮೇರೆಗೆ ಬಸವಣ್ಣನವರಿಗೆ ಮಂತ್ರಿಪದವನ್ನು ದಯಪಾಲಿಸಿ, ಭಾಂಡಾರದ ಇಡೀ ಆಢಳಿತವನ್ನು ಅವರಿಗೆ ಒಪ್ಪಿಸಿದರು.

ವಿವಾಹ

ಬಸವಣ್ಣನವರು ಈ ಬಗೆಯಾಗಿ ಬಿಜ್ಜಳರಾಯನ ಪ್ರೀತಿಗೂ ಮತ್ತು ಗೌರವಕ್ಕೂ ಪಾತ್ರವಾದುದನ್ನು ಕಂಡು ಸಿದ್ಧರಸನಿಗೆ ಅತಿಯಾಗಿ ಆನಂದ

50

ಆಯಿತು. ಆಗ ಆತನಿಗೆ ಒಂದು ಯೋಚನೆಯು ಹೊಳೆಯಿತು. ಆತನಿಗೆ ಗಂಗಾದೇವಿ೧೯ ಎಂಬ ಒಬ್ಬಳೇ ಮಗಳಿದ್ದಳು. ಅವಳನ್ನು ಬಸವಣ್ಣನಿಗೆ ಕೊಟ್ಟು ಮದುವೆ ಮಾಡಬೇಕೆಂದು ಸಿದ್ಧರಸನು ಬಗೆದನು. ಬಾಚರಸನಿಂದ ಬಸವಣ್ಣನವರ ಕುಲಗೋತ್ರಗಳನ್ನು ತಿಳಿದುಕೊಂಡನು. ಅವು ತನ್ನವುಗಳೊಡನೆ ಚೆನ್ನಾಗಿ ಕೂಡುವುದನ್ನು ಕಂಡು, ಅವನಿಗೆ ಮತ್ತಷ್ಟು ಸಂತೋಷವಾಯಿತು. ತರುವಾಯ ಅವನು ತನ್ನ ಮನೀಷೆಯನ್ನು ಬಾಚರಸನ ಮುಖಾಂತರ ಬಸವಣ್ಣನವರಿಗೆ ತಿಳಿಸಿದನು. ಆಗ ಬಸವಣ್ಣನವರು 'ಗುರುಹಿರಿಯರನ್ನು ಕೇಳೋಣ. ಅವರ ಆಜ್ಞೆಯಂತೆ ಮಾಡೋಣ ಎಂಬುದಾಗಿ ತಮ್ಮ ಅಭಿಮತವನ್ನು ಅರುಹಿದರು. ಆ ಮೇರೆಗೆ ಈಶಾನ್ಯ ಮುನಿಗಳನ್ನು, ಅಕ್ಕ ಭಾವಂದಿರನ್ನು ಕರೆತರಲು ವಾಹನವನ್ನು ಕಳುಹಲಾಯಿತು. ಅವರಿಗೆ ಕಲ್ಯಾಣದಲ್ಲಿ ನಡೆದ ಸಂಗತಿಗಳನ್ನೆಲ್ಲ ತಿಳಿಸಲಾಯಿತು. ಸಂಗನ ಅಪಾರ ಕರುಣದ ಪ್ರತ್ಯಕ್ಷ ಫಲವನ್ನು ಕಂಡು, ಅವರೆಲ್ಲರು ಆನಂದಭರಿತರಾದರು. ತಮ್ಮ ಮನೋರಥವು ಸತ್ಯ ಸೃಷ್ಟಿಯಲ್ಲಿ ಮೂರ್ತಸ್ವರೂಪವನ್ನು ತಳೆಯಲಿರುವದನ್ನು ಕಂಡು, ಗುರುಗಳಿಗೆ ಧನ್ಯತೆಯೆನಿಸಿತು. ಎಲ್ಲರೂ ಸಂಗನನ್ನು ಹೊಗಳುತ್ತ ಕಲ್ಯಾಣಕ್ಕೆ ಪಯಣ ಬೆಳೆಸಿ, ಅಲ್ಲಿ ಬಂದು ಬಾಚರಸನ ಮನೆಯಲ್ಲಿ ಉಳಿದುಕೊಂಡರು.

ತರುವಾಯ ಸಿದ್ಧರಸನು ಅವರೊಡನೆ ಆಪ್ತಾಲೋಚನೆ ಮಾಡಿ, ತನ್ನ ಮಗಳೊಡನೆ ಬಸವಣ್ಣನವರ ವಿವಾಹವನ್ನು ನಿಶ್ಚಯಿಸಿದನು. ಈ ವಿಷಯವು ಬಿಜ್ಜಳರಾಯನಿಗೆ ತಿಳಿಸಲಾಯಿತು. ಅದನ್ನು ಅರಿತು ಅವನಿಗೂ ತುಂಬಾ ಸಂತೋಷವಾಯಿತು. ಬಂಧು ಬಾಚಣ್ಣನಂತೂ ಹಿರಿಹಿರಿ ಹಿಗ್ಗಿದನು. ಮದುವೆಯು ತುಂಬ ರಾಜವೈಭವದಿಂದ ನೆರವೇರಿತು. ಸಿದ್ಧರಸನಿಗೆ ಬಸವಣ್ಣನವರಂಥ ತೇಜಸ್ವಿ ಅಳಿಯನು ಲಭಿಸಿದುದರಿಂದ ಆತನ ಆಪ್ತಸ್ನೇಹಿತರಿಗೂ ಬಹಳ ಹರ್ಷವಾಯಿತು.
————
೧೯. ಧ.ಬ. ಪು. xx
೨೦. ಕ.ಬ.ಜೀ. ಪು. ೧೬

51

ಅವರು ಸಿದ್ಧರಸನನ್ನು ತುಂಬ ಕೊಂಡಾಡಿದರು. ಈಶಾನ್ಯ ಗುರುಗಳು ನವದಂಪತಿಗಳನ್ನು ಆನಂದಾಶ್ರುಗಳಿಂದ ಆಶೀರ್ವದಿಸಿ, ಸಿದ್ಧರಸನನ್ನು ಹರಿಸಿ, ಮರಳಿ ಸಂಗಮಕ್ಷೇತ್ರಕ್ಕೆ ತೆರಳಿದರು. ಅಕ್ಕ-ಭಾವ ಇಬ್ಬರೂ ಬಸವಣ್ಣನ ವೈಭವವನ್ನು ಕಂಡು ಅತೀವ ಪ್ರಮುದಿತರಾದರು. ಬಸವಣ್ಣನವರು ಮಡದಿಯೊಡನೆಯೂ ತಮ್ಮ ಅಕ್ಕಭಾವಂದಿರೊಡನೆಯೂ ಸಿದ್ದರಸನ ಮಹಾಮನೆಯ ಒಂದು ಭಾಗದಲ್ಲಿಯೇ ಸ್ವತಂತ್ರವಾಗಿ ಸಂಸಾರವನ್ನು ಹೂಡಿದರು. ಅದರಿಂದ ಸಿದ್ದರಸ ದಂಪತಿಗಳಿಗೆ ಆನಂದಕ್ಕಂತೂ ಮೇರೆಯೇ ಇರಲಿಲ್ಲ. ಸಂಗನ ಕರುಣದ ಹಾಗೂ ನೆಚ್ಚಿನ ಅತ್ತೆಮಾವಂದಿರ ಒಲವಿನ ನೆರಳಿನಲ್ಲಿ ಬಸವಣ್ಣನವರ ವೈವಾಹಿಕ ಜೀವನವು ಸಂತಸದಿಂದ ಸಾಗಿತು. ಕಾಲಕ್ರಮದಲ್ಲಿ ಗಂಗಾದೇವಿಯು ಗರ್ಭವತಿಯಾಗಿ ಗಂಡುಮಗುವನ್ನು ಹೆತ್ತಳು. ಸಂಗಮನಾಥನ ಕರುಣದ ಕಂದನಾದುದರಿಂದ ಮಗುವಿಗೆ 'ಸಂಗ' ಎಂದು ಹೆಸರಿಡಲಾಯಿತು. ಮೊಮ್ಮಗನನ್ನು ಕಾಣುವ ಸುಯೋಗ ಲಭಿಸಿದುದರಿಂದ ಅಜ್ಜ-ಅಜ್ಜಿಯರ ಹರ್ಷವು ಇಮ್ಮಡಿಯಾಯಿತು. ತಾವು ಧನ್ಯರಾದೆವು. ತಮ್ಮ ಜೀವನವು ಸಫಲವಾಯಿತು ಎಂದು ಅವರಿಗನಿಸಿತು.
ಈ ರೀತಿ ಅವರೆಲ್ಲರೂ ಅತ್ಯಾನಂದದಲ್ಲಿ ಕೆಲ ಕಾಲ ಕಳೆದರು. ಆದರೆ ಆ ಆನಂದವು ಅವರಿಗೆ ಬಹುಕಾಲ ಲಭಿಸಲಿಲ್ಲ ಮುಂದೆ ಒಂದೆರಡು ವರ್ಷಗಳಲ್ಲಿಯೇ ಉಭಯತರಿಗೆ ಪರಶಿವನಿಂದ ಕರೆಯು ಬಂದುದರಿಂದ ಅವರು ಕೈಲಾಸಕ್ಕೆ ತೆರಳಿದರು. ಮೊದಲು ಅತ್ತೆಯವರು ಹೋದರು. ತರುವಾಯ ಸಿದ್ಧರಸನು ತೆರಳಿದನು. ಬಸವಣ್ಣನವರಿಗೂ ಗಂಗಾದೇವಿಗೂ ಅತೀವ ದುಃಖ ಆಯಿತು. ಬಿಜ್ಜಳರಾಯನಿಗೂ ಸಿದ್ಧರಸನಲ್ಲಿ ಆದರ-ವಿಶ್ವಾಸಗಳು ತುಂಬ ನೆಲೆಸಿದ್ದರಿಂದ ಆತನ ನಿಧನದಿಂದ ಬಿಜ್ಜಳರಾಯನು ಬಹಳ ಮರುಗಿದನು. ಸಿದ್ಧರಸನು ಅತಿ ದಕ್ಷ ಮಂತ್ರಿಯಾಗಿದ್ದನು. ಆತನ ಸಮರ್ಥ ನೆರವಿನಿಂದಲೇ ಬಿಜ್ಜಳನ ಆಸನವು ಭದ್ರವಾಗಿದ್ದಿತು. ಇಂಥ ಬಲವಂತನೂ ಬುದ್ಧಿವಂತನೂ ಆದ ದಂಡನಾಯಕನ ಬೆಂಬಲವು ಅಳಿದದ್ದರಿಂದ ರಾಯನಿಗೆ ತುಂಬ ವ್ಯಸನ ಆದುದು ಸ್ವಾಭಾವಿಕ.

52
ಸಿದ್ದರಸನ ನಿಧನದ ತರುವಾಯ ಆತನ ಹಿರಿಯ ಆಸ್ತಿಯೆಲ್ಲ ತನ್ನಿಂದ ತಾನೇ ಬಸವಣ್ಣನವರಿಗೆ ಲಭಿಸಿತು. ಬಿಜ್ಜಳರಾಯನೂ ಅದಕ್ಕೆ ಒಪ್ಪಿಕೊಂಡ. ಇಷ್ಟೇ ಅಲ್ಲ ಸಿದ್ಧರಸನು ಈವರೆಗೆ ವಹಿಸಿದ್ದ ದಂಡಾಧಿಪನ ಅಧಿಕಾರವನ್ನೂ ಆತನು ಬಸವಣ್ಣನವರಿಗೆ ಕೊಡಮಾಡಿದ. ಬಸವಣ್ಣನವರ ಬುದ್ಧಿವೈಭವವೂ ಶೀಲಸೌರಭವೂ ಶಾಸನ ಕೌಶಲದಕ್ಷತೆಗಳೂ ಈ ಮೊದಲೇ ರಾಯನ ಗೌರವವನ್ನು ಪಡೆದಿದ್ದವು. ಆತನ ಮನಸ್ಸನ್ನು ಸೆಳೆದಿದ್ದವು, ಮುಗ್ಧಗೊಳಿಸಿದ್ದವು. ಸಿದ್ಧರಸನ ತೆರವಾದ ಸ್ಥಾನವನ್ನು ಪಡೆಯಲು ಬೇರಾರೂ ಸಮರ್ಥರಿರಲಿಲ್ಲ. ಆದುದರಿಂದ ಬಸವಣ್ಣನವರೇ ಅದನ್ನು ಸಮರ್ಥ ರೀತಿಯಿಂದ ನಿರ್ವಹಿಸಬಲ್ಲರೆಂದು ಬಗೆದು ರಾಯನು ಬಸವಣ್ಣನವರನ್ನು ಕೇಳಿಕೊಂಡನು. ರಾಯನ ಈ ಕೊಡುಗೆಯನ್ನು ಅವರು ಸಂತೋಷದಿಂದ ಸ್ವೀಕರಿಸಿದರು ಮತ್ತು ಕೆಲವೇ ದಿನಗಳಲ್ಲಿ ಅವರು ಸಿದ್ಧರಸನ ಅಧಿಕಾರಸ್ಥಾನವನ್ನು ಪಡೆದು ದಂಡಾಧಿಪರೂ ಪ್ರಧಾನಮಂತ್ರಿಗಳೂ ಆದರು. ಬಸವಣ್ಣನವರ ಅಲೌಕಿಕ ಭಾಗ್ಯವು ಈ ಬಗೆಯಾಗಿ ಶಿಖರವನ್ನು ಮುಟ್ಟಿತು.
ದಂಡಾಧಿಪ :
ಪರಶಿವನ ಕರುಣದಿಂದ ನಡೆದ ಇನ್ನೊಂದು ಸಂಗತಿಯು ಈ ಶಿಖರಕ್ಕೆ ಕಳಸವನ್ನಿಟ್ಟಿತು. ಬಸವಣ್ಣನವರು ದಂಡಾಧಿಪನ ಹಾಗೂ ಪ್ರಧಾನಮಂತ್ರಿಗಳ ಕೆಲಸವನ್ನು ನಿರ್ವಹಿಸಲು ಪ್ರಾರಂಭಿಸಿದ ತರುವಾಯ ಕೆಲದಿನಗಳಲ್ಲಿಯೇ ಬಿಜ್ಜಳನ ಮನಸ್ಸಿನಲ್ಲಿ ಇನ್ನೊಂದು ಯೋಚನೆಯು ತಲೆದೋರಿತು. ಬಿಜ್ಜಳನಿಗೆ ನೀಲಲೋಚನೆಯೆಂಬ ಅತಿ ಸುಂದರಿಯಾದ ತಂಗಿಯಿದ್ದಳು. ಆಕೆಯನ್ನು ಈ ಪ್ರಭಾವಯುತ ಮಂತ್ರಿಗೆ ಕೊಟ್ಟು ಆತನ ಆಪ್ತಸಂಬಂಧವನ್ನು ಬೆಳೆಸಬೇಕು. ಅದರ ಫಲವಾಗಿ ಒಬ್ಬ ಸಮರ್ಥ ಬೆಂಬಲಿಗನನ್ನು ಪಡೆದು ತನ್ನ ಆಸನವನ್ನು ತುಂಬ ಭದ್ರಪಡಿಸಬೇಕು, ಎಂದು ಬಿಜ್ಜಳರಾಯನು ಯೋಚಿಸಿದನು. ಆದರೆ ಇದಾಗುವದೆಂತು?
೨೧. ದ.ಭ. ಪು. XXII ೧೩೫

53

ಬಸವಣ್ಣನವರಿಗೆ ಇದನ್ನರಹುವವರಾರು? ಇದನ್ನವರು ಒಪ್ಪಿಕೊಳ್ಳಬಹುದೇ? ಆಗ ರಾಯನಿಗೆ ಬಸವಣ್ಣನವರ ಪರಮ ಸ್ನೇಹಿತರಾದ ಬಾಚರಸ ಹಾಗೂ ಅವರ ಭಾವಂದಿರಾದ ಶಿವದೇವರ ನೆನಪಾಯಿತು. ಬಸವಣ್ಣನವರು ಪ್ರಧಾನ ಮಂತ್ರಿಗಳಾದಾಗಿನಿಂದ ಬಾಚರಸನು ಭಾಂಡಾರಗೃಹದಲ್ಲಿ ಕರಣಿಕನಾಗಿಯೂ ಶಿವದೇವನು ಅರಮನೆಯ ಮಕ್ಕಳ ಉಪಾಧ್ಯಾಯನಾಗಿಯೂ ಕೆಲಸ ಮಾಡುತ್ತಿದ್ದರು. ಆದುದರಿಂದ ಬಿಜ್ಜಳರಾಯನಿಗೆ ಅವರ ಪರಿಚಯವಿದ್ದಿತು. ಅವರೀರ್ವರ ಮುಖಾಂತರ ಆತನು ತನ್ನ ಮನೀಷೆಯನ್ನು ಬಸವಣ್ಣನವರಿಗೆ ತಿಳಿಸಿದನು. ಅದಕ್ಕೆ ಬಸವಣ್ಣನವರು ಎಂದಿನಂತೆ, "ಗುರುಹಿರಿಯರನ್ನು ಕೇಳೋಣ. ಅವರ ಆಜ್ಞೆಯಂತೆಯೇ ಮಾಡೋಣ ಎಂಬುದಾಗಿ ತಮ್ಮ ಅಭಿಮತವನ್ನು ರಾಯನಿಗೆ ಅರುಹಿದರು.
ಕೂಡಲೇ ಬಿಜ್ಜಳರಾಯನು ತನ್ನ ಬಿನ್ನಹವನ್ನು ಒಳಗೊಂಡ ಕಾಗದ ಒಂದನ್ನು ಸೇವಕನ ಕೂಡ ಸಂಗಮಕ್ಷೇತ್ರದಲ್ಲಿಯ ಶ್ರೀ ಈಶಾನ್ಯಮುನಿಗಳೆಡೆ ಕಳುಹಿದನು. ಅದನ್ನೋದಿ, ಇನ್ನು ಅರಮನೆಯೇ ಗುರುಮನೆಗೆ ಬರುವದರಿಂದ ಬಸವಣ್ಣನ ಭಾಗ್ಯರವಿಯು ನಡುಮುಗಿಲನ್ನು ಮುಟ್ಟುವನು, ಎಂದೆನಿಸಿ ಮುನಿಗಳು ಪುಲಕಿತರಾದರು. ಆದುದರಿಂದ ಇದು ದ್ವಿತೀಯ ಸಂಬಂಧವಿದ್ದರೂ ವರು ಅದಕ್ಕೊಪ್ಪಿ ರಾಯನ ಕಾಗದಕ್ಕೆ ಉತ್ತರವನ್ನು ಕಳುಹಿಸಿ ಕೊಟ್ಟರು:
“ತಾವು ತಮ್ಮ ತಂಗಿಗೆ ಶಿವದೀಕ್ಷೆಯನ್ನು ಕೊಡಿಸಲು ಸಿದ್ಧರಿದ್ದರೆ, ಬಸವಣ್ಣನವರು ಮದುವೆಗೆ ಒಪ್ಪಿಕೊಳ್ಳಬಹುದು. ನಾವು ಅವರಿಗೆ ಆ ಬಗೆಯಾಗಿ ತಿಳಿಸುವೆವು.
೨೨. ಬಿಜ್ಜಳನು ಶೈವನಿದ್ದನು ಎಂಬುದು ಕೆಲ ಸಂಶೋಧಕರ ಮತ. ಹಾಗಿದ್ದ ಪಕ್ಷದಲ್ಲಿ ದೀಕ್ಷೆ'ಯು ಅಪ್ರಸ್ತುತವಾಗುವದು.

54
ರಾಯನಿಗೆ ಬರೆದ ಈ ಉತ್ತರದ ಜತೆಯಲ್ಲಿ ಅವರು ಬಸವಣ್ಣನವರಿಗೂ ಒಂದು ಕಾಗದವನ್ನು ಬರೆದು ಅದರಲ್ಲಿ ಮೇಲ್ಕಾಣಿಸಿದ ತಮ್ಮ ಅಭಿಪ್ರಾಯವನ್ನು ಅವರಿಗೆ ತಿಳಿಸಿದರು.
ಬಿಜ್ಜಳ ದೊರೆಯು ಮುನಿಗಳ ಉತ್ತರವನ್ನು ಓದಿ, ಶಿವದೀಕ್ಷೆಯ ಬಗೆಗೆ ಮೊದಲು ತಂಗಿ ನೀಲಲೋಚನೆಯ ಅಭಿಮತವನ್ನು ಕೇಳಿಕೊಂಡನು. ಬಾಲ್ಯದಲ್ಲಿಯೇ ಅವಳ ತಾಯಿ ತೀರಿಕೊಂಡ ಮೂಲಕ ನೀಲಲೋಚನೆ ತನ್ನ ತಮ್ಮ ಕರ್ಣಿದೇವನೊಡನೆ ಸಿದ್ಧರಸನ ಮನೆಯಲ್ಲಿಯೇ ಬೆಳೆದಿದ್ದಳು. ಮಕ್ಕಳಿಗಾಗಿ ಹಂಬಲಿಸುವ ಅವನ ಪತ್ನಿಯು ಅವರಿಬ್ಬರನ್ನು ತನ್ನ ಮಕ್ಕಳೆಂದೇ ಬಗೆದು ಒಳ್ಳೆಯ ನಲ್ಮೆಯಿಂದ ಬೆಳೆಸಿದ್ದಳು. ಆದುದರಿಂದ ಆ ಶೈವಕುಟುಂಬದ ಬಗೆಗೂ ಅವರ ಧರ್ಮದ ಬಗೆಗೂ ನೀಲಮ್ಮನಲ್ಲಿ ಬಾಲ್ಯದಿಂದಲೇ ಆದರವು ನೆಲೆಸಿದ್ದಿತು. ಅದೇ ಮೇರೆಗೆ ಅವಳು ಬಸವಣ್ಣನವರಲ್ಲಿಯೂ ತುಂಬ ಪ್ರೀತಿ- ಆದರಗಳನ್ನು ತಳೆದಿರುವ ಮೂಲಕ, ಹಾಗೂ ಅವರ ಪ್ರಭಾವವನ್ನು ಕಂಡು ಮನಸೋತವಳಾದ ಮೂಲಕ, ಅವಳು ಶಿವದೀಕ್ಷೆಯನ್ನು ಪಡೆಯಲು ಕೂಡಲೇ ಒಪ್ಪಿಕೊಂಡಳು. ಬಿಜ್ಜಳರಾಯನೂ ಅದಕ್ಕೆ ಒಪ್ಪಿದನು. ಆದುದರಿಂದ ಸದ್ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬಸವಣ್ಣನವರು ಈ ಎರಡನೆಯ ವಿವಾಹವನ್ನು ಮಾಡಿಕೊಳ್ಳಲು, ಗಂಗಾದೇವಿಯ ಒಪ್ಪಿಗೆಯನ್ನು ಪಡೆದುಕೊಂಡು, ತಮ್ಮ ಅನುಮತಿಯನ್ನು ತಿಳಿಸಿದರು.

ತರುವಾಯ ಬಿಜ್ಜಳರಾಯನು ನೀಲಲೋಚನೆಯನ್ನು ಶಿವದೇವ ನಾಗಮ್ಮರೊಡನೆಯೂ ಹಾಗೂ ತಮ್ಮ ಕೆಲ ಹಿರಿಯ ಸೇವಕರೊಡನೆಯೂ ಸಂಗಮಕ್ಷೇತ್ರಕ್ಕೆ ಕಳುಹಿದನು. ಈಶಾನ್ಯ ಮುನಿಗಳು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ನೀಲಲೋಚನೆಗೆ ಯಥಾವಿಧಿ ಶಿವದೀಕ್ಷೆಯನ್ನು ದಯಪಾಲಿಸಿದರು. ಅವರನ್ನು ಒಂದೆರಡು ದಿನ ತಮ್ಮಲ್ಲಿಟ್ಟುಕೊಂಡು ಮರಳಿ ಕಲ್ಯಾಣಕ್ಕೆ ಕಳುಹಿಸಿದರು. ಆಮೇಲೆ ಒಂದು ಶುಭಮುಹೂರ್ತಕ್ಕೆ ಬಸವಣ್ಣನವರೊಡನೆ ಅವಳ ವಿವಾಹವು

55

ಮೊದಲಿನ ವಿವಾಹದಂತೆ- ಅದೇಕೆ ಅದಕ್ಕೂ ಮಿಗಿದಾದ ವೈಭವದಿಂದ ಜರುಗಿತು. ಅಂದು ಮುನಿಗಳು ಅಲ್ಲಿಗೆ ದಯಮಾಡಿಸಿ, ವಧೂವರರನ್ನು ಆಶೀರ್ವದಿಸಿ, ಸಂಗಮಕ್ಕೆ ಮರಳಿದರು. ಗಂಗಾದೇವಿಯು ನೀಲಲೋಚನೆಯನ್ನು ತನ್ನ ತಂಗಿಯಂತೆ ಪ್ರೀತಿಸತೊಡಗಿದಳು. ನಾಗಮ್ಮನಿಗಂತೂ ಈ ಇಬ್ಬರೂ ಅಕ್ಕರದ ನಾದಿನಿಯರಲ್ಲಿ ಅತೀವ ನಲ್ಮೆಯು ಜನಿಸಿತು, ನೆಲೆಸಿತು. ಕಾಲಕ್ರಮದಲ್ಲಿ ನೀಲಲೋಚನೆಗೂ ಒಂದು ಗಂಡುಮಗು ಜನಿಸಿತು. 'ಸಂಗ'ನ ನೆನವಿಗಾಗಿ ಗಂಗಾದೇವಿಯ ಮಗನನ್ನು 'ಸಂಗ' ನೆಂದು ಹೆಸರಿಸಿದಂತೆ, ಸಿದ್ದರಸನ ನೆನವಿಗಾಗಿ ಈ ಮಗುವನ್ನು 'ಸಿದ್ಧರಸ'ನೆಂದು ಹೆಸರಿಸಲಾಯಿತು.


ಮುಂದೆ ಕೆಲಕಾಲದಲ್ಲಿಯೇ ಈಶಾನ್ಯ ಮುನಿಗಳು ಒಮ್ಮೆಲೇ ಸಮಾಧಿಯನ್ನು ಪಡೆದರು. ಇನ್ನು ನನ್ನ ಕಾರ್ಯವು ಮುಗಿಯಿತು. ಮುಂದಿನದನ್ನು ನೆರವೇರಿಸುವುದು ಪ್ರಭುವಿನ ಹೊಣೆ' ಎಂದು ಶಿಷ್ಯರಿಗೆ ಅರುಹಿ ಮುನಿಗಳು ಪರಶಿವನೆಡೆ ತೆರಳಿದರು. ಮರೆಯಲ್ಲಿ ಮೆರೆಯುವ ಇಂಥ ಹಿರಿಯರು ನಿಜವಾಗಿ ಧನ್ಯರು! ಇಂಥವರ ಇರುವಿನಿಂದಲೇ ಭಕ್ತಿ ಉಳಿದು, ಬೆಳೆದು, ಸಮಾಜವು ಉಳಿಯುವದು ಬೆಳೆಯುವದು. ಮುನಿಗಳು ತಮಗೆ ತಿಳಿಸದೆ, ಅಕಸ್ಮಾತ್ತಾಗಿ ಸಮಾಧಿಸ್ಥರಾದ ಸುದ್ದಿಯನ್ನು ಕೇಳಿ ಬಸವಣ್ಣನವರಿಗೆ ಸಿಡಿಲೆರಗಿದಂತೆ ಆಯಿತು. ಅವರು ತುಂಬ ಕಳವಳಗೊಂಡರು. ಕೂಡಲೇ ಅವರು ತಮ್ಮ ಬಳಗದವರೊಡನೆ ಸಂಗಮಕ್ಕೆ ತೆರಳಿ, ಭಕ್ತಿಭಾವದಿಂದ ಸದ್ಗುರುಗಳ ಅಂತ್ಯವಿಧಿಯನ್ನು ತೀರಿಸಿದರು. ಶಿಷ್ಯರಿಂದ ಗುರುಗಳ ಕೊನೆಯ ಸಂದೇಶವನ್ನು ಅರಿತು, ಬಸವಣ್ಣನವರು ಕಲ್ಯಾಣಕ್ಕೆ ತೆರಳಿದರು ಹಾಗೂ 'ಪ್ರಭುವಿನ ಬರವನ್ನು ಕಾಯುತ್ತ ತಮ್ಮ ದೈನಂದಿನ ಕಾರ್ಯದಲ್ಲಿ ನಿರತರಾದರು.
ಗೃಹಸ್ಥಾಶ್ರಮ :
ಸುಸಂಸ್ಕೃತರೂ ಸುಶೀಲರೂ ಆದ ಇಬ್ಬರು ಪತ್ನಿಯರೊಡನೆ ಬಸವಣ್ಣನವರ ಸಂಸಾರವು ಸರಾಗವಾಗಿಯೇ ಸಾಗಿತು. ಲೌಕಿಕ ದೃಷ್ಟಿಯಿಂದ ಅದರಲ್ಲಿ ಯಾವ ಬಗೆಯ ಕೊರತೆಯೂ

56
ನೆಲೆಸಿರಲಿಲ್ಲ. 'ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚು' ಎಂದು ಸರ್ವಜ್ಞನು ಅರುಹಿದಂತೆ ಅವರ ಜೀವನವು ತುಂಬ ಸುಖಸಮಾಧಾನಗಳಿಂದ ನಡೆಯಿತು. ಬೆಳಗಿನಲ್ಲಿ ಬೇಗ ಎದ್ದು ತಮ್ಮ ಇಷ್ಟಲಿಂಗವನ್ನು ಅರ್ತಿಯಿಂದ ಅರ್ಚಿಸಿ, ಧ್ಯಾನದಲ್ಲಿ ಕೆಲಸಮಯ ಕಳೆದು, ಅಲ್ಪ ಉಪಾಹಾರವನ್ನು ತೀರಿಸಿಕೊಂಡು, ಬಸವಣ್ಣನವರು ಪಲ್ಲಕ್ಕಿಯಲ್ಲಿ ಆಗಲಿ, ಕುದುರೆಯ ಮೇಲೆ ಆಗಲಿ ಕುಳಿತು, ಅರಮನೆಗೆ ತೆರಳುವರು. ಅಲ್ಲಿ ರಾಜಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಿ ಮಧ್ಯಾಹ್ನ ಮನೆಗೆ ಬಂದು ಅಂದಿನ ಅತಿಥಿಗಳೊಡನೆ ಭೋಜನ ಮುಗಿಸುವರು. ಸ್ವಲ್ಪ ವಾಮಕುಕ್ಷಿ ಆದೊಡನೆ ಅರಮನೆಗೆ ತೆರಳಿ, ಆಡಳಿತದ ಕೆಲಸ ಮುಗಿಸಿ ಸಾಯಂಕಾಲ ಮನೆಗೆ ಬರುವರು. ತರುವಾಯ ಶಿವಪುರಾಣ, ಶಿವಭಜನೆ ಕೇಳುವರು. ಕೆಲಕಾಲ ಶರಣರ ಗೋಷ್ಠಿಯೂ ನಡೆಯುವದು. ಆಗಾಗ ಭಾವಾವಿಷ್ಟರಾಗಿ ತಮ್ಮ ಅಂದಂದಿನ ಭಾವಗಳನ್ನು ಅಂದವಾದ ವಚನಗಳಲ್ಲಿ ಅರುಹಿ, ಹಾಡಿ, ಶರಣರನ್ನು ಅವರು ತಣಿಸುತ್ತಿದ್ದರು. ಆಮೇಲೆ ರಾತ್ರಿ ಭೋಜನ ಮತ್ತು ವಿಶ್ರಾಂತಿ, ಸಾಮಾನ್ಯವಾಗಿ, ಬಸವಣ್ಣನವರು ಈ ಬಗೆಯ ದೈನಂದಿನ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದರು. ಅಂತೂ ಕುಟುಂಬದವರೊಡನೆ ಸರಸಸಲ್ಲಾಪ, ಒಲವಿನ ಅತಿಥಿಸತ್ಕಾರ, ರಾಜ- ಪ್ರಜೆಗಳ ಕಲ್ಯಾಣಕಾರ್ಯ, ಶರಣರೊಡನೆ ಅನುಭವಗೋಷ್ಠಿ ಸಂಗಮನಾಥನ ಭಾವಪೂರ್ಣ ಆರಾಧನೆ ಧ್ಯಾನಗಳು, ಅದರ ಫಲವಾಗಿ ಲಭಿಸಿದ ಪರಮಾನಂದಮಯ ನಿಚ್ಚ ಶಿವರಾತ್ರಿ ಇವುಗಳಲ್ಲಿ ಬಸವಣ್ಣನವರು ತಮ್ಮ ಪಾವನ ಜೀವನವನ್ನು ಕಳೆಯುತ್ತಿದ್ದರು.
ಬಸವಣ್ಣನವರ ಗೃಹಸ್ಥಾಶ್ರಮವು ಸಂಯಮದಿಂದ ಕೂಡಿದುದು. ಅವರು ತಮ್ಮ ಜೀವನದಲ್ಲಿ ಸತ್ಯ-ಪ್ರೇಮಗಳೊಡನೆ ಸಂಯಮವನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದರು. ನಿಜವಾಗಿ ವಿವಾಹಸಂಸ್ಥೆ ಬಂದುದೇ ಸಂಯಮವನ್ನು ಕಲಿಸಲು, ಮಾನವನ ಸಹಜ ಸ್ವರ ಕಾಮವಾಸನೆಯನ್ನು ನಿಯಂತ್ರಿಸಲು. ಮೊದಲು ಅದು ಏಕಪತ್ನಿ ವ್ರತವನ್ನು ಕಲಿಸುವದು. 'ಮಾತೃವತ್ ಪರದಾರಾಸು' 'ಪರನಾರಿಯರನ್ನು ತಾಯಿಯೆಂದು

57

ಬಗೆಯಲು ಬೋಧಿಸುವದು. ಇದು ಮೊದಲನೆಯ ನಿಯಂತ್ರಣ. ತರುವಾಯ ಅದು ಋತುಗಾಲದ ರತಿಯನ್ನೇ ಪ್ರೋತ್ಸಾಹಿಸುವದು. ಇದು ಎರಡನೆಯ ನಿಯಂತ್ರಣ. ಒಂದು ಗಂಡುಮಗು ಜನಿಸಿದೊಡನೆ, ಸತಿಪತಿಯರು ರತಿಯನ್ನು ನಿಲ್ಲಿಸಿ ವಾನಪ್ರಸ್ಥರಾಗಿ ಭಗವಂತನ ಭಕ್ತಿಯಲ್ಲಿಯೋ ಹಿರಿಯರ ಸೇವೆಯಲ್ಲಿಯೋ ದೀನದಲಿತರ ಉದ್ಧಾರಕಾರ್ಯದಲ್ಲಿಯೋ ಕಾಲಕಳೆಯಲು ಶಾಸ್ತ್ರವು ಆಜ್ಞಾಪಿಸುವದು. ಇದು ಮೂರನೆಯ ನಿಯಂತ್ರಣ. ಈ ಬಗೆಯ ಸಂಯಮವನ್ನು ತಮ್ಮ ಜೀವನದಲ್ಲಿ ಬಳಸಿದ ಭಾಗ್ಯಶಾಲಿಗಳು ಬಸವಣ್ಣನವರು. ಗಂಗಾದೇವಿಗೂ ತರುವಾಯ ನೀಲಲೋಚನೆಗೂ ಒಬ್ಬನೇ ಒಬ್ಬ ಮಗ ಹುಟ್ಟಿದೊಡನೆ, ಅವರು ಸಹ ಬ್ರಹ್ಮಚರ್ಯವನ್ನು ಪಾಲಿಸಿದಂತೆ ಕಾಣುವದು. ಅದಕ್ಕಾಗಿ ಅವರನ್ನು ಬ್ರಹ್ಮಚಾರಿ ಎಂದೂ ಕೆಲ ಹಿರಿಯ ಶರಣರು ಕರೆದಿರುವರು. ಪ್ರಭುದೇವರು ಬಸವಣ್ಣನವರನ್ನು ಕುರಿತು ಅರುಹಿರುವುದೇನೆಂದರೆ:
ಸತಿಯ ಕಂಡು ಬ್ರತಿಯಾದ ಬಸವಣ್ಣ !
ಬ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ!
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರಾ ! ನಿಮ್ಮಲ್ಲಿ ಬಾಲಬ್ರಹ್ಮಚಾರಿಯಾದಾತ ಬಸವಣ್ಣ!
ಬಸವಣ್ಣನವರ ಪತ್ನಿಯರು ಬರೀ ಪತ್ನಿಯರಾಗಿಯೇ ಉಳಿಯಲಿಲ್ಲ. ಅವರು ಬಸವಣ್ಣನವರ ಶಿಷ್ಠೆಯರೂ ಆಗಿದ್ದರು. ಬಸವಣ್ಣನವರೊಡನೆ ಭಕ್ತಿಸಾಧನದಲ್ಲಿ ನಿರತರಾಗಿ, ಅವರು ಪರಮಾರ್ಥದಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದರು. ನೀಲಲೋಚನೆಯ ಮುಂದಿನ ವಚನವು ಇದರ ಉತ್ತಮವಾದ ನಿದರ್ಶನ.
ಆದಿ ಅನಾದಿ ತತ್ತ್ವವ ಭೇದಿಸಿಕೊಟ್ಟ ಗುರುವೇ !
ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೇ !
ಅಕಾರ ಉಕಾರ ಮಕಾರ ಕಳೆಯನರುಹಿಕೊಟ್ಟ ಗುರುವೇ !
ಇಷ್ಟಪ್ರಾಣ-ಭಾವವದೆಂದು ತೋರಿದ ಗುರುವೇ !

58

ನಿಜದರುಶನರುಹಿಕೊಟ್ಟ ಗುರುವೇ !
ನಿರ್ಮಳಪ್ರತಿಭೆಯ ತೋರಿಕೊಟ್ಟ ಗುರುವೇ !
ನಿಮ್ಮ ಘನವ ಕಾಂಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ
ಬಸವಯ್ಯನ ಪ್ರಭೆಯಲ್ಲಿ ಅಡಗಿತ್ತು.

ಬಸವಣ್ಣನವರು ತ್ರಿವಿಧ ದಾಸೋಹದಲ್ಲಿ ಸದೈವ ನಿರತರು. ಅವರು ತಮ್ಮ ತನುವನ್ನು ಗುರುವಿನ ಸೇವೆಯಲ್ಲಿಯೂ ಮನವನ್ನು ಲಿಂಗದ ಧ್ಯಾನದಲ್ಲಿಯೂ ಧನವನ್ನು ಜಂಗಮರ ಸೇವೆಯಲ್ಲಿಯೂ ಸವೆಯಿಸಿದರು. ಗುರುವಿನ ಆಜ್ಞೆಯ ಮೇರೆಗೆ ನಡೆಯುವದೇ ಆತನ ಸೇವೆ. ಧರ್ಮಪ್ರಸಾರಕ್ಕಾಗಿ ಗುರುಗಳು, ರಾಜರ ಹಾಗೂ ಪ್ರಜೆಗಳ ಸೇವೆಯ ಕಾಯಕವನ್ನು ಕೈಕೊಳ್ಳಲು ಅವರನ್ನು ಆಜ್ಞಾಪಿಸಿದರು. ಆ ಕಾರ್ಯವನ್ನು ಬಸವಣ್ಣನವರು ದಕ್ಷತೆಯಿಂದ ನೆರವೇರಿಸಿದರು. ಅದಕ್ಕಾಗಿ ಅವರನ್ನು ಕೆಲ ಪ್ರಮಥರು ಹಳಿದಾಗ ಬಸವಣ್ಣನವರು ಅವರಿಗೆ ತಮ್ಮ ಕಾಯಕದ ಉದ್ದೇಶವನ್ನು ಈ ಬಗೆಯಾಗಿ ಅರುಹಿದರು.

ಹೊತ್ತಾರೆ ಎದ್ದು, ಕಣ್ಣ ಹೊಸೆಯುತ್ತ
ಎನ್ನೊಡಲಿಂಗೆ, ಎನ್ನೊಡವಲಗೆ,
ಎನ್ನ ಮಡದಿಮಕ್ಕಳಿಗೆಂದು,
ಕುದಿದೆನಾದರೆ ಎನ್ನ ಮನಕ್ಕೆ ಮನವೇ ಸಾಕ್ಷಿ.
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನುತ್ತರವನವರಿಗೆ ಕೊಡಲ (ಮ್ಮುವೆ) :
ಹೊಲೆಯ ಹೊಲೆಯರ ಮನೆಯ ಹೊಕ್ಕು
ಸಲೆ ಕೈಕೂಲಿಯ ಮಾಡಿದರೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನೊಡಲವಸರಕ್ಕೆ ಕುದಿದೆನಾದರೆ,
ತಲೆದಂಡ ! ಕೂಡಲಸಂಗಮದೇವಾ.

59

ಅದೇ ರೀತಿ ಬಸವಣ್ಣನವರು ತಮ್ಮ ದೃಢನಿಷ್ಠ-ನಿಃಸ್ಪೃಹತೆಗಳನ್ನು ಕುರಿತು ಹೇಳಿರುವುದೇನೆಂದರೆ :

ಊರ ಮುಂದೆ ಹಾಲಹಳ್ಳ ಹರಿಯುತ್ತಿರಲು
ಓರೆಯಾವಿನ ಬೆನ್ನಲ್ಲಿ ಹರಿಯಲದೇಕಯ್ಯಾ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನಕ,
ಬಿಜ್ಜಳನ ಭಂಡಾರವೇನಗೇಕಯ್ಯಾ?

ಬಸವಣ್ಣನವರ ಮನಸ್ಸು ಸದೈವ ಸಂಗನನ್ನು ನೆನೆಯುತ್ತಿತ್ತು ಚಿಂತಿಸುತ್ತಿತ್ತು. ಅವರು ಇನ್ನಾರನ್ನೂ ಇನ್ನಾವುದನ್ನೂ ಚಿಂತಿಸುತ್ತಿರಲಿಲ್ಲ.
ಪರರ ಚಿಂತೆ ಎನಗೇಕಯ್ಯಾ ?
ನಮ್ಮ ಚಿಂತೆ ನಮಗೆ ಸಾಲದೇ ?
“ಕೂಡಲಸಂಗಯ್ಯ ಒಲಿದಾನೊ, ಒಲಿಯನೋ
ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು !

ಎಂದವರು ಅರುಹಿರುವರು. ತಮ್ಮ ಚಿಂತೆಯ ಉತ್ಕಟತೆಯನ್ನು ಅವರು ಈ ಬಗೆಯಾಗಿ ಬಣ್ಣಿಸಿರುವರು. ಅದರ ಮೇಲಿಂದ ಚಿಂತೆಯ ತೀವ್ರತೆಯೂ ಚೆನ್ನಾಗಿ ತಿಳಿದುಬರುವದು :

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡನುಂಬ ಚಿಂತೆ,
ಎನಗೆ ಎಮ್ಮ ಕೂಡಲಸಂಗಮದೇವರ ನೆನೆವ ಚಿಂತೆ.

ಕೊನೆಗೆ ತಮ್ಮ ಕೆಲಸಗಳೆಲ್ಲ ಪರಮಾತ್ಮನ ಆರಾಧನೆಗಾಗಿ ನಡೆದಿರುವವು, ತಮ್ಮ ಕರ್ಮಕುಸುಮಗಳಿಂದ ತಾವು ಭಗವಂತನನ್ನು ಅರ್ಚಿಸುವೆವು, ಎಂಬುದನ್ನು ಬಸವಣ್ಣನವರು ಮುಂದಿನ ವಚನದಲ್ಲಿ ಅರುಹಿರುವರು :

60

ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು !
ನಾನು ಬೆವಹಾರ ಮಾಡುವೆನಯ್ಯಾ ಲಿಂಗಾರ್ಚನೆಗೆಂದು!
ನಾನು ಪರರ ಸೇವೆ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು,
ನಾನಾವ ಕರ್ಮ ಮಾಡಿದರೆಯೂ, ಆ ಕರ್ಮದ ಭೋಗವ
ನೀ ಕೊಡುವೆಯೆಂಬುದ ನಾನು ಬಲ್ಲೆನು !
ನೀ ಕೊಟ್ಟದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರಿಯೆ ಮಾಡೆನು.
ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ, ಕೂಡಲಸಂಗಮದೇವಾ!

ಈ ಬಗೆಯಾಗಿ ಶಿವಾರ್ಪಣ ಭಾವದಿಂದ ನಡೆದ ಬಸವಣ್ಣನವರ ಬಾಳನ್ನು ಪ್ರಭುದೇವರು ತುಂಬ ಕೊಂಡಾಡಿರುವರು. ಅವರ ಹೊಗಳಿಕೆಯು ಬಸವಣ್ಣನವರಿಗೆ ಅವರಿತ್ತ ಒಂದು ಅದ್ಭುತವಾದ ಪ್ರಶಸ್ತಿ ಪತ್ರವೇ ಸರಿ. ಪ್ರಭುದೇವರು ಹೇಳಿರುವುದೇನೆಂದರೆ :

ಕುಂಡಲಿಗನ ಕೀಟದಂತೆ,
ಮೈ ಮಣ್ಣಾಗದೆ ಇರ್ದೆಯಲ್ಲ ಬಸವಣ್ಣ !
ಜಲದೊಳಗಣ ತಾವರೆಯಂತೆ,
ಹೊದ್ದಿ ಹೊದ್ದದಂತೆ ಇರ್ದೆಯಲ್ಲ ಬಸವಣ್ಣ !
ಜಲದಿಂದಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇರ್ದೆಯಲ್ಲ ಬಸವಣ್ಣ !
ಗುಹೇಶ್ವರ ಲಿಂಗದ ಆಣತಿವಿಡಿದು,
ತನುಗುಣಮತ್ತರಾಗಿರ್ಪ, ಐಶ್ವರ್ಯಾಂಧಕರ,
ಮತವನೇನ ಮಾಡಬಂದೆಯಯ್ಯಾ ಸಂಗನಬಸವಣ್ಣಾ !

ಬಸವಣ್ಣನವರು 'ಕಾಯುವ ಹೊದ್ದದೆ, ಮಾಯವ ಸೋಂಕದೆ ನಿರಾಳದಲಿ ನಿಂತಿದ್ದ' ರಂತೆ. ಆದರೆ ಅವರು ಈ ಉಚ್ಚತಮ ನೆಲೆಯನ್ನು ಅಷ್ಟು ಸುಲಭವಾಗಿ ಮುಟ್ಟಲಿಲ್ಲ. ಅದಕ್ಕವರು 'ಅಗ್ನಿದಿವ್ಯ' ದೊಳಗಿಂದ ಹಾದುಹೋಗಬೇಕಾಯಿತು. ಅದರ ವಿವರಗಳನ್ನು ಆರನೆಯ 'ಅಲೆ' ದಲ್ಲಿ ಕಾಣಬಹುದು.

61

ಇದೇ ಸಮಯದಲ್ಲಿ ಬಸವಣ್ಣನವರು ಕೆಲ ಪವಾಡಗಳನ್ನು ಮೆರೆದರು. ಅದರ ಮೂಲಕ ಜನರಲ್ಲಿ ಅವರ ಬಗೆಗೆ ಭಕ್ತಿಭಾವವು ಬೆಳೆಯಿತು. ಬಿಜ್ಜಳರಾಯನಲ್ಲಿಯೂ ಅವರ ಬಗೆಗೆ ಭೀತ್ಯಾದರಗಳು ಬೆಳೆದವು. ಆದರೆ ಈ ಪವಾಡಗಳಿಂದ ಅವರ ಅಹಂಕಾರ ಬೆಳೆಯಿತು. ಅದರ ಅರಿವು ಉಂಟಾಗಲು ಬಸವಣ್ಣನವರು ಎಂಬತ್ತೆಂಟು ಪವಾಡವ ಮೆರೆದು, ಹಗರಣದ ಚೋಹದಂತಾಯಿತ್ತು ಎನ್ನ ಭಕ್ತಿ! ಎಂಬುದಾಗಿ ತುಂಬ ಕಳವಳಗೊಂಡರು. ಮತ್ತು ಅವನ್ನು ತೊರೆದು ಅವರು ಶಿವನ ಬಯಕೆಯಂತೆ ನಡೆಯತೊಡಗಿದರು. ಬರಬರುತ್ತ ಬಸವಣ್ಣನವರಲ್ಲಿ 'ಸರ್ವಂ ಶಿವಮಯಂ ಜಗತ್' ಎಂಬ ಭಾವನೆ ಬೆಳೆಯಿತು. ಅದರ ಒಂದೆರಡು ನಿದರ್ಶನಗಳನ್ನು ಮುಂದಿನ ಸನ್ನಿವೇಶಗಳಲ್ಲಿ ಕಾಣಬಹುದು :
ಒಂದು ದಿನ ಕಳ್ಳನೋರ್ವನು ಬಸವಣ್ಣನವರ ಪತ್ನಿಯ ಆಭರಣಗಳನ್ನು ಕದಿಯಲು ಬಂದನು. ಕಳ್ಳನು ಅವನ್ನು ಸೆಳೆಯುತ್ತಿರಲು, ಆಕೆ ನಿದ್ದೆಯಲ್ಲಿ ಕೈ ನೀಡಿದಳು. ಅದು ತಾಗಿದ್ದರಿಂದ ಬಸವಣ್ಣನವರು ಎಚ್ಚತ್ತರು. ಆಗ ಕಳ್ಳ ಬಂದುದು ಅವರಿಗೆ ಗೊತ್ತಾಯಿತು. ಪತ್ನಿಯ ಕೈ ತಗಲಿದ ಮೂಲಕ ತನಗೆ ನೋವಾದಂತೆ, ಕಳ್ಳನಿಗೂ ನೋವಾಗಿರಬಹುದು ಎಂದು ಭಾವಿಸಿ, ಅವರು ಹೀಗೆಂದರು :
ಒಡನಿರ್ದ ಸತಿಯೊಂದು ನಚ್ಚಿರ್ದೆನಯ್ಯಾ,
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ,
ಅಯ್ಯೋ ! ನಮ್ಮಯ್ಯನ ಕೈ ನೊಂದಿತು
ತೆಗೆದುಕೊಡಾ, ಎಲೆ ಚಂಡಾಲಗಿತ್ತಿ !
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ
ಕೂಡಲಸಂಗಮನಲ್ಲದೇ ಮತ್ತಾರು ಅಲ್ಲ.
ಮತ್ತು ಕಳ್ಳನಿಗೆ ಅವರು ಆಭರಣಗಳನ್ನು ತೆಗೆಯಿಸಿಕೊಟ್ಟರು. ಅದರಿಂದ ಕಳ್ಳನಲ್ಲಿಯೂ ಉಪರತಿಯುಂಟಾಯಿತು. ಅವನು ಅನುತಾಪ ಪಟ್ಟುಕೊಂಡು ಬಸವಣ್ಣನವರ ಭಕ್ತನಾದ.

62
ಇನ್ನೊಂದು ದಿನ, ಬಸವಣ್ಣನವರ ಆಕಳುಗಳು ಮೇಯಲು ಅಡವಿಗೆ ಹೋದಾಗ, ಕಳ್ಳರು ಅವನ್ನು ಅಪಹರಿಸಿಕೊಂಡು ಹೋದರು. ಗೋಪಾಲಕರು ಮನೆಗೆ ಬಂದು ನಡೆದ ಸಂಗತಿಯನ್ನು ಬಸವಣ್ಣನವರಿಗೆ ಅರಿಕೆ ಮಾಡಿದರು. ಆಗ ಬಸವಣ್ಣನವರು ಅವರಿಗೆ ಈ ರೀತಿ ಬೋಧಿ ಸಿದರು :
ಆಕಳ ಕಳ್ಳರು ಕೊಂಡೊಯ್ದರು
ಎನ್ನದಿರಿಂ ಭೋ ನಿಮ್ಮ ಧರ್ಮ !
ಬೊಬ್ಬಿಡದಿರಿಂ ಭೋ ನಿಮ್ಮ ಧರ್ಮ !
ಆಡದಿರಿಂ ಭೋ ನಿಮ್ಮ ಧರ್ಮ !
ಅಲ್ಲಿ ಉಂಬರೆ ಸಂಗ, ಇಲ್ಲಿ ಉಂಬರೆ ಸಂಗ,
ಕೂಡಲಸಂಗಮದೇವಾ ಏಕೋಭಾವ !
ಆದುದರಿಂದ ನೀವೆಲ್ಲರು ಅವುಗಳ ಕರುಗಳನ್ನು ಆಕಳು ಹೋದ ದಾರಿಯಲ್ಲಿ ಬಿಟ್ಟು ಬರಬೇಕು ಎಂದು ಹೇಳಿ ಬಸವಣ್ಣನವರು ಕರುಗಳನ್ನು ಅವರೊಡನೆ ಕಳುಹಿದರು. ಈ ಅಲೌಕಿಕ ನಡತೆಯನ್ನು ಕಂಡು ಕಳ್ಳರಲ್ಲಿಯೂ ಉಪರತಿ ಉಂಟಾಗಿ ಅವರೂ ಬಸವಣ್ಣನವರ ಭಕ್ತರಾದರು.

ಅಲೆ : ಐದು

ಅನುಭವ ಮಂಟಪ

ಪ್ರಜಾಸೇವೆ :
ಬಸವಣ್ಣನವರು ದಂಡಾಧಿಪರಾದೊಡನೆ ಹಾಗೂ ಪ್ರಧಾನಮಂತ್ರಿಗಳು ಆದೊಡನೆ ಅವರು ತಮ್ಮ ಪ್ರಜೆಗಳ ಕಲ್ಯಾಣದ ಕಾರ್ಯದಲ್ಲಿ ತೊಡಗಿದರು. ಅವರು ಮೊದಲಿನಿಂದಲೂ ನುಡಿದಂತೆ ನಡೆದವರು, ನ್ಯಾಯನಿಷ್ಠುರರು, ನಿಃಸ್ಪೃಹರು. ಅವರು ಯಾರ ದಾಕ್ಷಿಣ್ಯಕ್ಕೂ ಒಳಗಾಗದವರು. 'ತನ್ನಂತೆ ಪರರು' ಎಂಬುದು ಅವರ ಇನ್ನೊಂದು ಮನೋಭಾವನೆ. ಅದರ ಮೂಲಕ ಬಸವಣ್ಣನವರು ಪ್ರಜೆಗಳ ನೋವು-ನಲಿವುಗಳಲ್ಲಿ ಸಹಜವಾಗಿ ಬೆರೆಯಬಲ್ಲವರಾದರು, ಪ್ರಜೆಗಳ ನೋವನ್ನು ಅಳಿಸಿ, ನಲಿವನ್ನು ಬೆಳೆಸಬಲ್ಲವರಾದರು. ಸಂಗನ 'ರಾಜತೇಜ'ವು ಅವರಲ್ಲಿ ನೆಲೆಸಿದುದರಿಂದ ಅವರು ತಮಗೆ ಸರಿ ತೋರಿದುದನ್ನು ನೆರವೇರಿಸಲು ಯಾರಿಗೂ ಅರಸನಿಗೂ ಕೂಡ ಹೆದರುತ್ತಿರಲಿಲ್ಲ. ಅವರು ತಮ್ಮನ್ನು ಕುರಿತು ಒಂದೆಡೆ ಹೇಳಿರುವುದೇನೆಂದರೆ :
ನ್ಯಾಯನಿಷ್ಟುರಿ; ದಾಕ್ಷಿಣ್ಯಪರನು ನಾನಲ್ಲ
ಲೋಕವಿರೋಧಿ; ಶರಣನಾರಿಗಂಜುವನಲ್ಲ.
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪರಾಗಿ,

ಅವರು ಸಂಗನ 'ರಾಜತೇಜ' ಪಡೆದವರು, ನಿರ್ಭಯರು, ನಿರ್ದಾಕ್ಷಿಣ್ಯರು, ನ್ಯಾಯನಿಷ್ಟುರರು, ಲೋಕವಿರೋಧಿಗಳು. ಲೋಕಾಯುತರ ನಾಸ್ತಿಕತೆಯನ್ನು ಭೌತಿಕತೆಯನ್ನು ವಿರೋಧಿಸುವವರು. ಪ್ರಜೆಗಳ ನೈಜ ಕಲ್ಯಾಣಕ್ಕಾಗಿ ಹೆಣಗುವವರು.
ಬಸವಣ್ಣನವರು 'ಪರಮ ಪುರುಷಾರ್ಥಿಗಳು' ಅವರು ಪರಮಾತ್ಮನ ಸಾಕ್ಷಾತ್ಕಾರರೂಪಿಯಾದ ಪರಮಪುರುಷಾರ್ಥವನ್ನು ಪಡೆದವರು.

64
ಆದುದರಿಂದ ಅವರು ಬಾಳಿದ ಪುರುಷಾರ್ಥದಲ್ಲಿಯ ತಾರತಮ್ಯವನ್ನು ಅರಿತವರು. ಅದಕ್ಕಾಗಿ ಅವರು ಮೊದಲು ಜನತೆಯಲ್ಲಿ ನೆಲೆಸಿದ ಅಜ್ಞಾನಜನ್ಯ ಭ್ರಾಂತಿಯನ್ನು ಅಳಿಸಿ, ಅದರಲ್ಲಿ ಸುಜ್ಞಾನವನ್ನು ಬೆಳೆಸಲು ಯೋಚಿಸಿದರು, ಯತ್ನ ಮಾಡಿದರು. ಜನ ಜೀವನದಲ್ಲಿಯ ಕಸ-ಕಂಟಿಗಳನ್ನು ಕಡಿದು, ಅದನ್ನು ಹಸನು ಮಾಡಿ, ಅದರಲ್ಲಿ ಸವಿಚಾರದ-ಸದ್ಭಾವದ ಬೀಜವನ್ನು ಬಿತ್ತಲು ಬಯಸಿದರು. ತಾವು ಕಂಡುಂಡ ಕೆಲವು ಮಹಾತತ್ತ್ವಗಳನ್ನು ತಮ್ಮ ವಚನಗಳಲ್ಲಿ ಹೊಳೆಯಿಸಿ, ಆ ವಚನಗಳನ್ನು ತಮ್ಮ ಅನುಭವಮಂಟಪ' ಎಂಬ ಸಂಸ್ಥೆಯಲ್ಲಿ ತರಬೇತಿ ಪಡೆದ ಶರಣರ ಮುಖಾಂತರ ಜನತೆಯಲ್ಲಿ ಬೀರಿದರು. ಅವರಿಗೆ ಸರಿಯಾದ ಅರಿವಿನ ಬೆಳಕನ್ನು ನೀಡಿದರು.
ಈ ಜೀವನವು ಕ್ಷಣಭಂಗುರ. ಅದನ್ನು ಏಕೋದೇವನಾದ ಪರಶಿವನ ಸೇವೆಯಲ್ಲಿ ಬಳಸುವುದು ಜೀವನದ ಏಕಮೇವ ಗುರಿ. ಭಕ್ತಿಯು ಮುಕ್ತಿಯ ಜನನಿ, ದಯವು ಧರ್ಮದ ಮೂಲ ಭಕ್ತಿಯಿಂದ ಪರಮಸುಖ, ದಯದಿಂದ ಪರರ ಸುಖ, ಒಂದರಿಂದ ಅಲ್ಲಿಯ ಆನಂದ, ಇನ್ನೊಂದರಿಂದ ಇಲ್ಲಿಯ ಆನಂದ. ಇವು ಬಸವಣ್ಣನವರು ಅರುಹಿದ ಕೆಲವು ಪ್ರಧಾನ ತತ್ತ್ವಗಳು ಅವನ್ನು ಅವರ ಕೆಳಗಣ ವಚನಗಳಲ್ಲಿ ಕಾಣಬಹುದು :
ಸಂಸಾರವೆಂಬುದೊಂದು ಗಾಳಿಯ ಸೊಡರು.
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ !
ಇದ ನೆಚ್ಚಿ ಕೆಡಬೇಡ - ಸಿರಿಯೆಂಬುದ.
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತ ಮಾಡುವ ಭರವ ನೋಡಾ.
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕು ವೋ ಕಾಯುವ ನೆಟ್ಟಿದೆ.

65

ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರುವದು. ಹರನು ಒಲಿದರೆ ಕೊರಡು ಕೊನರುವದು, ಬರಡು ಹಯನಹುದು, ವಿಷವು ಅಮೃತವಾಗುವದು, ಸಕಲ ಪಡಿಪದಾರ್ಥಗಳು ದೊರೆಯುವವು. ಅದೇ ಮೇರೆಗೆ -

ದಯವಿಲ್ಲದ ಧರ್ಮವಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯಾ !
ಇವು ಬಸವಣ್ಣನವರು ಮೇಲಿಂದಮೇಲೆ ಪ್ರಚುರಗೊಳಿಸಿದ ಕೆಲವು ಮೂಲಭೂತ ತತ್ತ್ವಗಳು, ಇವುಗಳ ಭದ್ರವಾದ ತಳಹದಿಯ ಮೇಲೆಯೇ ಅವರ ಕಲ್ಯಾಣಮಂದಿರವು ನಿಂತಿರುವದು. ಏಕೆಂದರೆ ಅದರಲ್ಲಿಯೇ ಜನರ ಶಾಶ್ವತ ಕಲ್ಯಾಣವು ನೆಲೆಸಿರುವದು.
ಮೇಲ್ಕಾಣಿಸಿದ ಭಕ್ತಿಯ ಸಂದೇಶದೊಡನೆ ಅವರು ತಮ್ಮ ನೀತಿಯ ಸಂದೇಶವನ್ನೂ ಜನರಿಗೆ ಸಲ್ಲಿಸಿದರು. ಅವರ ನೀತಿಯಲ್ಲಿ ಸಮತೆ, ಸತ್ಯ, ಸಂಯಮ, ಹಾಗೂ ಕಾಯಕಗಳಿಗೆ ತುಂಬ ಪ್ರಾಧಾನ್ಯವಿದ್ದಿತು. ಬಸವಣ್ಣನವರು ಒಂದು ಬಗೆಯ ಸಮತೆಯನ್ನು ತುಂಬ ಪ್ರೋತ್ಸಾಹಿಸಿದರು. ಎಲ್ಲರೂ ದೇವರ ಮಕ್ಕಳು. ದೇವರ ದೃಷ್ಟಿಯಲ್ಲಿ ಎಲ್ಲರೂ ಬಂಧುಗಳು, ಸಮಾನರು, ಭಗವಂತನ ಸಾಮ್ರಾಜ್ಯದಲ್ಲಿ ಮೇಲು-ಕೀಳುಗಳು ಇರಲರಿಯವು. ಸಕಲ ಜೀವಾತ್ಮರಿಗೆ ಲೇಸ ಬಯಸುವವರೇ ಹಿರಿಯರ, ಶರಣರು, ಎಂಬ ಸಮತೆಯ ಸಂದೇಶವನ್ನು ಸಾರಿ, ಅವರು ಸಮಾಜದಲ್ಲಿಯ ಅಶಾಂತಿಯ ಮೂಲವನ್ನೇ ಅಳಿಸಲು ಯತ್ನಿಸಿದರು. ತಮ್ಮಲ್ಲಿ ಬೆಳೆದ ಸಮತಾಭಾವದ ನಂಬಿಗೆಯನ್ನು ಅವರು ಪರಮಾತ್ಮನಿಗೆ ಈ ರೀತಿ ಅರುಹಿದರು :
ದೇವದೇವಾ ! ಎನ್ನ ಬಿನ್ನ ಪವನವಧಾರು !
ವಿಪ್ರ ಮೊದಲು ಅಂತ್ಯದ ಕಡೆಯಾಗಿ
ಶಿವಭಕ್ತರೆಲ್ಲರನು ಒಂದೆ ಎಂಬೆ .

66
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನ್ನು ಒಂದೆ ಎಂಬೆ !
ಈ ಹೀಗೆಂದು ನಂಬುವದೆನ್ನ ಮನ.
ಈ ನುಡಿದ ನುಡಿಯೊಳಗೆ,
ಎಳ್ಳ ಮೊನೆಯಷ್ಟು ಸಂದೇಹವುಳ್ಳರೆ,
ಹಲುದೋರಿ ಮೂಗ ಕೊಯಿ ಕೂಡಲಸಂಗಮದೇವಾ.

ಬಸವಣ್ಣನವರ ಈ ಸಮತೆಯ ಸಂದೇಶವು ಮೇಲಿನವರ ಅಹಂಕಾರವನ್ನು ಖಂಡಿಸಿತು, ಕೆಳಗಿನವರಲ್ಲಿ ನವಚೈತನ್ಯವನ್ನು ಬೀರಿತು. ಅದೇ ಮೇರೆಗೆ ಅದು ಮಹಿಳೆಯರಲ್ಲಿಯೂ ನೂತನ ಉತ್ಸಾಹವನ್ನು ಹುಟ್ಟಿಸಿತು. ಅದರ ಫಲವಾಗಿ, ಅವರಲ್ಲಿ ಅನೇಕರು ಬಸವಣ್ಣನವರ ಮಹಾಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿದರು. ಹಿರಿಯ ಶರಣರಂತೆ, ಶರಣೆಯರೂ ಮತಪ್ರಸಾರದ ಕಾರ್ಯವನ್ನು ತುಂಬ ಉತ್ಸಾಹದಿಂದ ಮಾಡಿದರು. ಮಹಿಳೆಯರಲ್ಲಿನವಜಾಗೃತಿಯನ್ನು ಉಂಟು ಮಾಡಿ ಅವರಿಗೆ ನವಸಂಸ್ಕೃತಿಯನ್ನು ಸಲ್ಲಿಸಿದರು.

ತಮ್ಮ ಸಮತೆಯ ಸಂದೇಶವನ್ನು ಸಲ್ಲಿಸುವಾಗ, ಬಸವಣ್ಣನವರು 'ಕುಲ' ಮದವನ್ನು ಕಠೋರವಾಗಿ ಖಂಡಿಸಿದರು. ಶೀಲದಿಂದಲೇ ಕುಲಕ್ಕೆ ಬೆಲೆ, ಶೀಲದಲ್ಲಿಯೇ ಕುಲದ ಬಲ, ಕುಲಕ್ಕೆ ಹಿರಿಮೆ ಬಂದುದು ಶೀಲದಿಂದ, ಶೀಲವೇ ಅಳಿದಾಗ ಕುಲಕ್ಕೆ ಬೆಲೆಯೇನು? ಇಂಥ ಶೀಲವಳಿದ ಕುಲದ ಹಮ್ಮನ್ನು ಬಸವಣ್ಣನವರೂ ಬೇರೆ ಸಂತರೂ ಹಳಿದಿರುವರಲ್ಲದೆ ನಿಜವಾದ ಕುಲೀನತೆಯನ್ನಲ್ಲ ಎಂಬುದನ್ನು ನೆನೆಯಬೇಕು. ಇದನ್ನು ಅವರು ಮುಂದಿನ ವಚನದಲ್ಲಿ ಅರುಹಿರುವರು:
ಕೊಲುವನೇ ಮಾದಿಗ ಹುಸಿವನೇ ಹೊಲೆಯ
ಕುಲವೇನೋ ? ಅಂದಂದಿನ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು ?

67

ಈ ಬಗೆಯಾಗಿ ಅವರು ಕುಲಮದವನ್ನು ಅಳಿಸಲು ಯತ್ನಿಸಿದರಲ್ಲದೆ, ಸಮಾಜದಲ್ಲಿ ಬಹುಕಾಲದಿಂದ ಬೇರೂರಿದ ಅಸ್ಪೃಶ್ಯತೆಯನ್ನಳಿಸಲು ಯತ್ನಿಸಿದರು. ಅದಕ್ಕಾಗಿ ಶಿವಭಕ್ತನಾದ ಅಸ್ಪೃಶ್ಯರಲ್ಲಿ ಹೋಗಿ ಪ್ರಸಾದವನ್ನು ಸೇವಿಸಲು ಕೂಡ ಅವರು ಹಿಂಜರಿಯಲಿಲ್ಲ. "ಡೋಹರ ಕಕ್ಕೆಯ್ಯ, ಮಾದರ ಚೆನ್ನಯ್ಯ - ಎನ್ನ ಆಪ್ತ ಬಂಧುಗಳು' ಎಂದು ಸಾರತೊಡಗಿದರು. ಇದನ್ನು ಕಂಡು ಬಿಜ್ಜಳರಾಯನ ಓಲಗದಲ್ಲಿಯ ಕೆಲ ಉಚ್ಚವರ್ಣದ ಅಧಿಕಾರಿಗಳು ಈ ಸಂಗತಿಯನ್ನು ಆತನಿಗೆ ಅರುಹಿದರು. ಅದನ್ನು ತಡೆಯಲು ಆತನನ್ನು ಬಿನ್ನವಿಸಿದರು.

ಇದು ಬಸವಣ್ಣನವರ ಸ್ನೇಹಿತರಿಗೆ ತಿಳಿದಾಗ ಅವರು ಇಂಥ ವಿಷಯದಲ್ಲಿ ಅವಸರಪಡದಿರಲು, ಮೇಲಿನ ವರ್ಣದವರನ್ನು ಕೆರಳಿಸದಿರಲು, ಅವರನ್ನು ಬೇಡಿಕೊಂಡರು. ಅದರಿಂದ ಬಿಜ್ಜಳನ ಕ್ರೋಧವು ಕೆರಳಿ ತಮ್ಮ ಕಾರ್ಯಹಾನಿ ಆದೀತು, ಎಂದ ಬಸವಣ್ಣನವರನ್ನು ಎಚ್ಚರಿಸಲು ಯತ್ನಿಸಿದರು. ಆದರೆ ಬಸವಣ್ಣನವರು ಅವರ ಮಾತಿಗೆ ಕಿವಿ ಕೊಡಲಿಲ್ಲ. ಅವರು ತಮ್ಮ ಈ ಕಾರ್ಯವನ್ನು ನಿರ್ಭೀತಿಯಿಂದ ಹಾಗೆಯೇ ಮುಂದುವರಿಸಿದರು. ಅವರು ತಮ್ಮ ಸ್ನೇಹಿತರಿಗೆ ಹೇಳಿದುದೇನೆಂದರೆ :
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವದು ?
ನಮ್ಮ ಕುನ್ನಿಗೆ ಕೂಸು ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯನಿಕ್ಕಬೇಡ.
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲದೇ ?
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ ?
ಅದೇ ಮೇರೆಗೆ ಬಸವಣ್ಣನವರು ತಮ್ಮ ಹೃದಯಸ್ಥ ಸಂಗನಿಗೂ ಈ ರೀತಿ ಅರಿಕೆ ಮಾಡಿಕೊಂಡರು :
ಆನೆ ಅಂಕುಶಕ್ಕಂಜುವದೇ, ಅಯ್ಯಾ
ಮಾಣದೆ ಸಿಂಹನ ನಖವೆಂದು ಅಂಜುವದಲ್ಲದೆ ?

68
ಆನೀ ಬಿಜ್ಜಳಂಗಂಜುವೆನೆ, ಅಯ್ಯಾ
ಕೂಡಲಸಂಗಮದೇವಾ !
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ ?
ಬಸವಣ್ಣನವರು ಸಮತೆಯನ್ನು ಸಮಾಜದಲ್ಲಿ ನಿರ್ಮಿಸಲು ಯತ್ನಿಸಿದಂತೆ, ಸತ್ಯ-ಸದಾಚಾರಗಳನ್ನೂ ಕಾಯಕ- ಪ್ರೀತಿಯನ್ನೂ ಅದರಲ್ಲಿ ಹುಟ್ಟಿಸಲು ತುಂಬ ಹೆಣಗಿದರು. ಅವುಗಳ ಹಿರಿಮೆಯನ್ನು ಜನರಿಗೆ ಪರಿಪರಿಯಾಗಿ ತಿಳಿಹೇಳಿದರು. 'ದಿಟವ ನುಡಿಯಿರಿ ! ನುಡಿದಂತೆ ನಡೆ ಯಿರಿ ! ಅದರಿಂದ ಅಂತರಂಗ- ಬಹಿರಂಗಗಳನ್ನು ಪರಿಶುದ್ಧಗೊಳಿಸಿರಿ ! ದುಡಿದು ಪಡೆಯಿರಿ, ಪಡೆಯಲು ದುಡಿಯಿರಿ, ನೀಡಲು ಪಡೆಯಿರಿ. ಬರಿ ಇಡಬಲ್ಲ, 'ಆದಾನಂ ಹಿ ವಿಸರ್ಗಾಯ ಸತಾಂ ವಾರಿಮುಚಾಮಿವ.' 'ಹಿರಿಯರು ಮೋಡದಂತೆ, ನೀಡಲು ಪಡೆಯುವರು' ಎಂಬುದನ್ನು ಮರೆಯದಿರಿ.
ಆಯುಷ್ಯವುಂಟು, ಪ್ರಳಯವಿಲ್ಲೆಂದು, ಅರ್ಥವ ಮಡಗುವಿರಿ.
ಆಯುಷ್ಯವು ತೀರಿ, ಪ್ರಳಯ ಬಂದರೆ, ಅರ್ಥವನುಂಬುವರಿಲ್ಲ.
ನೆಲನನಗಿದು ಮಡುಗದಿರಾ ! ನೆಲ ನುಂಗಿದೊಡುಗುಳುವದೇ?
ಕಣ್ಣಲ್ಲಿ ನೋಡಿ, ಮಣ್ಣಿನಲ್ಲಿ ನರಹಿ, ಉಣ್ಣದೆ ಹೋಗದಿರಾ!
ಕೂಡಲಸಂಗನ ಶರಣರಿಗೊಡನೆ ಸವೆಸುವದು.
ದುಡಿದು ನೀಡಲು ಪಡೆಯುವದೆ ಕಾಯಕದ ಹಿರಿಯ ಗುರಿ, ಅಂಥ ಕಾಯಕದಿಂದಲೇ ಕೈಲಾಸದ ವೈಭವ, ಅದರಲ್ಲಿಯೇ ಕೈಲಾಸವ ದಿವ್ಯ ಆನಂದ ! ಎಂಬುದು ಬಸವಣ್ಣನವರ ಬೋಧೆ. ಈ ಬಗೆಯಾಗಿ ಕಾಯಕದಲ್ಲಿ ಅವರು ಸ್ವಾವಲಂಬನ ಸಮರ್ಪಣಗಳ ಸಮನ್ವಯ ಮಾಡಲು ಕಲಿಸಿದರು. ಅದರ ಜತೆಯಲ್ಲಿ 'ಹಿರಿಮೆಯು ಧನದ ರಾಶಿಯಲ್ಲಿರುವುದಿಲ್ಲ ಮನದ ಘನತೆಯಲ್ಲಿ ಇರುವುದು' ಎಂಬುದನ್ನು ಅರುಹಲು ಕೂಡ ಬಸವಣ್ಣನವರು ಮರೆಯಲಿಲ್ಲ. ಅವರ ಆದರ್ಶ

69

ಹಿರಿಯರದು, 'ಮನೆ ನೋಡಾ ಬಡವರು, ಮನ ನೋಡಾ ಘನ, ಅವರು ಸ್ವತಂತ್ರರು ಧೀರರು.'

ಈ ಬಗೆಯ ಉನ್ನತವಿಚಾರಗಳ ಪ್ರಚಾರದಿಂದ ಪ್ರಜೆಗಳಲ್ಲಿ ಸೌಹಾರ್ದ, ಸ್ವಾವಲಂಬನೆ, ಸಮಾಧಾನ, ಭಕ್ತಿ, ಶಾಂತಿಗಳನ್ನು ನೆಲೆಗೊಳಿಸಲು ಬಸವಣ್ಣನವರು ಯತ್ನಿಸಿದರು. ಏಕೆಂದರೆ ಅಂತರಂಗದ ಸುಧಾರಣೆಯೇ ಬಹಿರಂಗದ ಸುಧಾರಣೆಯ ತಳಹದಿ ಎಂಬ ಮಹಾಸಿದ್ದಾಂತವನ್ನು ಅವರು ಚೆನ್ನಾಗಿ ಬಲ್ಲರು. ಮಂಗನನ್ನು ಸಿಂಗರಿಸಿ ಏನು ಪ್ರಯೋಜನ? ಅದರಿಂದ ಮಂಗವು ಮಾನವ ಆಗಬಲ್ಲುದೇ? ಈ ಆಂತರಿಕ ಬದಲಾವಣೆಗಳ ಜತೆಯಲ್ಲಿ ಅವರು ಕೆರೆ ಕಾಲುವೆಗಳನ್ನು ನಿರ್ಮಿಸಿ, ಕೃಷಿಗೆ ಪ್ರೋತ್ಸಾಹವನ್ನು ಕೊಟ್ಟು ಚಿಕ್ಕ ಚಿಕ್ಕ ಉದ್ಯಮಗಳನ್ನು ಪ್ರಚುರಗೊಳಿಸಿ, ಅವನ್ನು ಜನರಿಗೆ ಕಲಿಸುವ ಏರ್ಪಾಡನ್ನು ಮಾಡಿ, ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ನೀಡಿದರು. ಸರಿಯಾದ ನ್ಯಾಯ ದಾನವನ್ನು ಸಕಾಲಕ್ಕೆ ಸಲ್ಲಿಸಿ, ಅಪರಾಧಿಗಳನ್ನು ಕೂಡಲೇ ಕಂಡುಹಿಡಿದು, ದಂಡಿಸಿದ ಮೂಲಕ, ಅವರು ಸಮಾಜದಲ್ಲಿ ಸ್ವಾಸ್ಥ್ಯವನ್ನು ನೆಲೆಗೊಳಿಸಿದರು. ಇವೆಲ್ಲವುಗಳ ಫಲವಾಗಿ ಪ್ರಜೆಗಳಲ್ಲಿ ಸಮೃದ್ಧಿ-ಸುಖಶಾಂತಿಗಳು ನೆಲೆಸಿದವು. ಇವನ್ನೆಲ್ಲ ಬಸವಣ್ಣನವರು ಧರ್ಮಭಾವನೆಯನ್ನು ಜಾಗೃತಗೊಳಿಸಿ, ಅದರ ತಳಹದಿಯ ಮೇಲೆಯೇ ನಿಲ್ಲಿಸಲು ಯೋಚಿಸಿದರು, ಯತ್ನಿಸಿದರು. ಅದರಿಂದಲೆ ಅವರಿಗೆ ಕೆಲಮಟ್ಟಿಗೆ ಯಶಸ್ವಿ ಲಭಿಸಿತು. ಇದೇ ಭಾರತೀಯ ಹಿರಿಯರ ಸನಾತನ ರೀತಿ.
ಜಂಗಮಾರಾಧನೆ :
ಗುರುಕಾರುಣ್ಯವಾಗಿ, ಹಸ್ತಮಸ್ತಕ ಸಂಯೋಗವಾದ ಬಳಿಕ,
ಗುರು ಲಿಂಗ ಜಂಗಮವೆ ಗತಿಯಾಗಿದ್ದೆ ಕಾಣಾ.
ಎಂಬುದಾಗಿ ಬಸವಣ್ಣನವರು ತಮ್ಮ ಆರಾಧ್ಯ ದೈವತದ ಸ್ವರೂಪವನ್ನು ಅರುಹಿ ಇರುವರು. ಗುರು-ಲಿಂಗ-ಜಂಗಮ ಇವು ಪರಮಾತ್ಮನ ಮೂರು ಪ್ರತೀಕಗಳು. ಗುರುವಿಗೆ ಅವರು ತಮ್ಮ ತನುವನ್ನು

70
ಅರ್ಪಿಸಿದರು, ಲಿಂಗಕ್ಕೆ ಮನವನ್ನು ಅರ್ಪಿಸಿದರು. ಜಂಗಮಕ್ಕೆ ಧನವನ್ನು ಅರ್ಪಿಸಿದರು. ಈ ಬಗೆಯಾಗಿ ಜಂಗಮಾರಾಧನೆಯು ಬಸವಣ್ಣನವರ ಭಕ್ತಿಯ ಸಾಧನದ ಒಂದು ಪ್ರಧಾನ ಅಂಗವಾಗಿದ್ದಿತು. ಇಷ್ಟೇ ಅಲ್ಲ, 'ಆತ್ಮ ಲಿಂಗ, ಪರಮಾತ್ಮ ಜಂಗಮ' ಎಂಬುದು ಅವರ ಭಾವನೆ. 'ಜಂಗಮವೇ ಲಿಂಗವೆನಗೆ, ಜಂಗಮವೇ ಪ್ರಾಣ ಎನಗೆ' ಎಂದು ಅವರು ಬಗೆದಿದ್ದರು. 'ಮರಕ್ಕೆ ಬಾಯಿ ಬೇರಿರುವಂತೆ, ಲಿಂಗದ ಬಾಯಿ ಜಂಗಮ' ಇರುವ. ಆತನಿಗೆ ನೀಡಿದರೆ ಲಿಂಗವು ತೃಪ್ತವಾಗುವದು, ಎಂಬುದು ಅವರ ಬೋಧೆ.
ಜಂಗಮಕ್ಕೆ ಇಷ್ಟು ಪ್ರಾಧಾನ್ಯ ಕೊಡುವದರಲ್ಲಿ ಆತ್ಮೋದ್ಧಾರದ ಜತೆಗೆ ಲೋಕೋದ್ಧಾರದ ಉದ್ದೇಶವೂ ಇರುವ ಸಂಭವ ಇಲ್ಲದಿಲ್ಲ. ಜಂಗಮರು ನಾಡಿನಲ್ಲೆಲ್ಲ ಅಲೆದಾಡಿ, ಜನರನ್ನು ಬೋಧಿಸುವರು, ಉದ್ಧರಿಸುವರು. ಕೇವಲ ಲೋಕೋದ್ಧಾರನಿರತರಾದ ಈ ಶರಣರ ಯೋಗಕ್ಷೇಮವನ್ನು ನೋಡುವದು ಎಲ್ಲ ಭಕ್ತರ ಕರ್ತವ್ಯ. ಬಸವಣ್ಣನವರ ಮತಪ್ರಸಾರದ ಕಾರ್ಯದಲ್ಲಿ ಜಂಗಮರೇ ಪ್ರಧಾನಪಾತ್ರ ವಹಿಸಿರುವರು. ಅವರಿಗೆ ಬಸವಣ್ಣನವರು ಇಷ್ಟು ಗೌರವ ಸಲ್ಲಿಸಿದುದರಿಂದ ಜನತೆಯು ಅವರ ಬೋಧೆಯನ್ನು ಆದರದಿಂದ ಕೇಳಿಕೊಂಡಿತು, ಅದರಂತೆ ನಡೆಯಲು ಯತ್ನಿಸಿತು. ಜಂಗಮರಲ್ಲಿ ಸ್ವಂತ ತಪಃಪ್ರಭಾವವೂ ಇಲ್ಲದಿರಲಿಲ್ಲ. ಬಸವಣ್ಣನವರು ಅವರಿಗೆ ಸಲ್ಲಿಸಿದ ಗೌರವವು ಅವರ ಪ್ರಭಾವವನ್ನು ಮತ್ತಷ್ಟು ಬೆಳಗಿತು.
ಜಂಗಮ- ಪ್ರಾಣಿಗಳಾದ ಬಸವಣ್ಣನವರು ಅವರ ಬರವಿಗಾಗಿ ಹಾತೊರೆಯುತ್ತಿದ್ದರು. 'ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ, ಬಳಿ ತಪ್ಪಿದ ಪಶು ತನ್ನ ಹಿಂಡನರಸುವಂತೆ' ಅವರು ಶರಣರ ಬರವನ್ನು ಕಾಯುತ್ತಿದ್ದರು. ಶರಣರು ಬಂದಾಗ 'ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ' ಅವರು ಉಲ್ಲಸಿತರಾಗುತ್ತಿದ್ದರು. ತಮ್ಮ ಜಂಗಮಪ್ರೀತಿಯ ಉತ್ಕಟತೆಯನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :

71

ಸೂರ್ಯನುದಯ ತಾವರೆಗೆ ಜೀವಾಳ.
ಚಂದ್ರಮನುದಯ ನೆಯ್ದಿಲೆಗೆ ಜೀವಾಳ.
ಕೂಸರ ಠಾನಿನಲ್ಲಿ ಕೂಟ ಜೀವಾಳ.
ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ ಬರವೆನಗೆ ಪ್ರಾಣಜೀವಾಳವಯ್ಯಾ.
ಆದುದರಿಂದ ಅವರು ಪರಶಿವನನ್ನು ಈ ರೀತಿ ಬೇಡಿಕೊಂಡರು:
ಅಯ್ಯಾ! ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನು-ಮನ-ಧನ-ವಲಸದಂತೆ ಮಾಡಯ್ಯಾ.
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು, ಕೂಡಲಸಂಗಮದೇವಾ.
“ನಗುವುದು ನುಡಿವುದು ಶಿವಭಕರೊಡನೆ, ಶರಣರೊಡನೆ ಮನ ತೆರೆದು ಮಾತಾಡುವದಯ್ಯಾ' ಎಂಬುದು ಅವರು ಮಾಡಿ ಆಡಿದ ಮಾತು.

ಶರಣರ ಬರವನ್ನು ಅವರು ಸದೈವ ಹಾರೈಸುತ್ತಿದ್ದರು. ಶರಣರು ಬಂದರೆ ಅವರು ಆನಂದಭರಿತರಾಗುತ್ತಿದ್ದರು. ಅವರ ಆನಂದಾತಿರೇಕವು ಹೊರಹೊಮ್ಮುವ ಬಗೆಯನ್ನು ಹರಿಹರನು ಚೆನ್ನಾಗಿ ಬಣ್ಣಿಸಿರುವ :

“ಭಾಪು ! ಭಾಗ್ಯವೇ ನರಜನ್ಮದೊಳು ಬಂದು, ಗುರುಕರುಣಮಂ ಹೊತ್ತು ಹರಕಿಂಕರನಾಗಿ, ಶರಣರ ಬರವಂ ಪಡೆದ' ಎಂದುಬ್ಬಿ ಕೊಬ್ಬಿ, ಮುಗಳೊತ್ತಿ ಬಿರಿಬಿರಿದರಳ್ಳು, ಸಕಲ ಶರಣರಂ ನಿಜನಿಳಯದೊಳು ಬಿಜಯಂ ಗೈದು, ಸೈಗೆಡೆದು ನಿಂದು, ಕೈಗಳಂ ಮುಗಿದು, 'ದೇವ ದೇವ, ನಿಮ್ಮಂ ಕಂಡವನಾವಂ ಲೋಕಕ್ಕೆ ಕಣ್ಣಾಗ? ನಿಮ್ಮಡಿಗಳ ಕೆರ್ಪೆo ಪಿಡಿದವನ ಚರಣವಾರ ಮುಕುಟದೊಳು ಬೀಳದು? ದೇವದೇವ, ನಿಮ್ಮನಾರಾಧಿಸಿದ ಮನುಜನ ಕೈ ಆರ ಕೈಯಂ ಕೀಳ್ಳಾಡದು?... ದೇವ, ನಿಮಗೆ ತೊತ್ತಾದಂಗೆ ತೊತ್ತಾಗದ ಲಕ್ಷ್ಮೀಯಾವಳು? ನಿಮ್ಮಂ ಸ್ತುತಿಗೈದ ನಾಲಗೆಗೆ ಮರುಳಾಗದ ಸರಸ್ವತಿಯಾವಳು?... ನಿಮ್ಮ ಪೊಗಳನೆನ್ನಳವಲ್ಲ! ದೇವ, ನಿಮ್ಮೊಳಂ ಸಂಗನೊಳಭೇದಂ, ನಿಮ್ಮ ನೆನೆವುದೆ ಶಿವಚಿಂತೆ, ನೋಡುವುದೇ

72

ದರುಶನಂ, ಮುಟ್ಟುವುದೆ ಸ್ಪರ್ಶನಂ. ನೀವೇ ಗತಿ, ನೀವೆ ಮತಿ, ನೀವೇ ಪ್ರಾಣಂ' ಎನುತ ಆನಂದಜಳಮಂ ಸೂಸುತಮಿರ್ದ೦.

ಬಸವಣ್ಣನವರು ಶರಣರನ್ನು ಈ ಬಗೆಯಾಗಿ ಆರಾಧಿಸುತ್ತಿದ್ದರಂತೆ:

“ಎಲ್ಲರಂ ನಿಜನಿಳಯಮಧ್ಯಸ್ಥಿತ ಭದ್ರಾಸನತಗಳೊಳು ಬಿಜಯಂಗೈದು ಚರಣಗಳಂ ತೊಳೆದು, ಪಾದೋದಕಂ ತಳೆದು, ಸಂಗಡದೊಳು ಲಿಂಗಾರ್ಚನೆಯ ಮಾಡಿ, ಪ್ರಸಾದಭರಿತ ಪ್ರಮೋದಹೃದಯನಾಗುತಂ; ಅಂದಿನ ದಿನದ ಲವರಂ ಪಿಂಗಲಾರದೆ, ಪುರಾತನ ಗೀತಗೋಷ್ಠಿರಸತರಂಗಿಣಿಯೊಳು, ಬೆಳಗಪ್ಪನ್ನವೀಸಾಡಿ, ಪರಿಣಾಮದ ತಡಿಗೆ ಸಾರ್ದು, ಬಸವರಾಜಂ ಭಕ್ತಿಯುಕ್ತಂ ನಿಂದಿರ್ದು - 'ದೇವದೇವ, ಶಿವರಾತ್ರಿಯ ಸುಖಮಂ ಸವಿಗಂಡೆO ಬಿಡಲಾರೆಂ ಇಂದಿನ ತೆರದೊಳ್ ಬಂದೆಂದಿಗಂ ಕುಂದದ - ನಿಚ್ಚಶಿವರಾತ್ರಿಯಂ ಮಾಳನೆಂಬ ನೇಮವಂ ಕೈಕೊಂಡೆಂ ಎಂದು ಉಸುರುವನು. ಗೀತಾಕಾರರು ಉಸುರಿದ ಮೇರೆಗೆ -

ಮಚ್ಚಿತ್ತಾ ಮದ್ಗತಪ್ರಾಣಾ | ಬೋಧಯಂತಃ ಪರಸ್ಪರಂ |
ಕಥಯಂತಶ್ಚ ಮಾಂ ನಿತ್ಯಂ | ತುಷ್ಯOತಿ ಚ ರಮಂತಿ ಚ ||

“ನನ್ನಲ್ಲಿಯ - ಪರಮಾತ್ಮನಲ್ಲಿಯೆ - ಮನಪ್ರಾಣಗಳನ್ನು ನಿಲ್ಲಿಸಿ, ಪರಸ್ಪರರನ್ನು ಬೋಧಿಸುತ್ತ ತನ್ನ ಪರಮಾತ್ಮನ ಕಥೆಗಳನ್ನು ಅರುಹುತ್ತ ಭಕ್ತರು ನಲಿದಾಡುವರು, ಕುಣಿದಾಡುವರು. ಇದು ಇಂಥ ಶರಣರ ಕೂಟಗಳನ್ನೆಯ ಬಣ್ಣಿಸುವದಿಲ್ಲವೇ? ಇಂಥ ಶರಣರ ಅನುಭವಗೋಷ್ಠಿಗಳೇ ಪರಮಾನಂದದ ಸೆಲೆಗಳು!

ಅನುಭವಮಂಟಪ :

ಬಸವಣ್ಣನವರ ಮಹಾಮನೆಯಲ್ಲಿ ನಡೆಯುವ ಶರಣರ ಅನುಭವಗೋಷ್ಠಿಯು ಬರಬರುತ್ತ 'ಅನುಭವಮಂಟಪ' ಎಂದು ಪರಿಣತವಾಯಿತು. 'ಅನುಭವಮಂಟಪ' ಎಂಬ ಸಂಸ್ಥೆಯೇ ಇರಲಿಲ್ಲ. ಅದರ ಉಲ್ಲೇಖವು ಪುರಾಣಗಳಲ್ಲಿಲ್ಲ. ಅದು ಹದಿನೈದನೆಯ

73

ಶತಮಾನದ ಶರಣರ ಕಲ್ಪನೆಯ ನಿರ್ಮಿತಿ” ಎಂಬುದಾಗಿ ಓರ್ವ ಹಿರಿಯ ಸಂಶೋಧಕರ ಅಭಿಪ್ರಾಯವಾಗಿದೆ. ಪುರಾಣಗಳಲ್ಲಿಯ ಅದರ ಅನುಲ್ಲೇಖನವೊಂದೇ ಅದರ ಅಸ್ತಿತ್ವವನ್ನಲ್ಲಗಳೆಯಲರಿಯೆನು. ಅದು ನೆರವೇರಿಸಿದ ಮಹಾಕಾರ್ಯವೇ - ವೀರಶೈವ ಬಾಂಧವ್ಯವೇ ಅದರ ಇರುವಿಕೆಯ ಹಿರಿದಾದ ನಿದರ್ಶನ. ಕಾರ್ಯವು ಇದ್ದಮೇಲೆ ಅದನ್ನು ನೆರವೇರಿಸಿದ ಕಾರಣವು - ಸಂಘಟನೆಯು ಇರಬೇಕಲ್ಲವೇ? ಆ ಸಂಘಟನೆಯು-ಸಂಸ್ಥೆಯು 'ಅನುಭವ ಮಂಟಪ' ಎಂಬ ಹೆಸರಿನಿಂದ ಅಂದು ಮೆರೆದಿರಲಿಕ್ಕಿಲ್ಲ. ಆದರೆ ಹಿರಿಯ ಶರಣರ ಒಂದು ಕೂಟ, ಅದಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕ, ಕೆಲ ನಿಷ್ಠೆಯುಳ್ಳ ಕಾರ್ಯಕರ್ತರು, ಅವರಿಗೆ ಬೇಕಾದ ಶಿಕ್ಷಣ, ಹಾಗೂ ಪ್ರಚಾರ ಸಾಹಿತ್ಯ - ಇವೆಲ್ಲ ಇರಲೇಬೇಕಲ್ಲವೇ? ಇವೆಲ್ಲವುಗಳ ಸಮುದಾಯವೇ 'ಅನುಭವ ಮಂಟಪ'. ಆದುದರಿಂದ ಅಂಥ ಪ್ರಭಾವಶಾಲಿಯಾದ ಸಂಘಟನೆಯ - ಶಿಕ್ಷಣ ಸಂಸ್ಥೆಯ ಅಸ್ತಿತ್ವದ ಬಗೆಗೆ ಸಂದೇಹಪಡುವ ಕಾರಣವಿಲ್ಲ.
ಬಸವಣ್ಣನವರಿಂದ ಆರಾಧಿಸಲಾದ, ಸತ್ಕರಿಸಲಾದ ಜಂಗಮರು, ತಾವು ಹೋದಲ್ಲೆಲ್ಲ ಬಸವಣ್ಣನವರ ಭಕ್ತಿಯನ್ನೂ ಔದಾರ್ಯವನ್ನೂ ಬಾಯಿತುಂಬ ಹೊಗಳಿದರು. ಅವರ ಭಾವಪೂರ್ಣ ವಚನಗಳನ್ನು ಅಲ್ಲಲ್ಲಿ ಹಾಡಿದರು. ಅದರ ಫಲವಾಗಿ ಬಸವಣ್ಣನವರ ಕೀರ್ತಿಪರಿಮಳವು ಎಲ್ಲೆಡೆ ಪಸರಿಸಿತು. ಸುತ್ತಲಿಂದ ಜಂಗಮರ-ಶರಣರ ಹಿರಿದಾದ ಬಳಗವನ್ನು ಅವರೆಡೆ ಸೆಳೆಯಿತು. ಅದರಲ್ಲಿ ಕಿರಿಯರಂತೆ ಹಿರಿಯ ಶರಣರೂ ಅನೇಕರಿದ್ದರು. ಅವರು ತಮ್ಮೊಡನೆ ತಮ್ಮ ಹಿರಿಯ ವಿಚಾರವಾಹಿನಿಗಳನ್ನೂ ತಂದರು. ಎಲ್ಲ ವಾಹಿನಿಗಳು ಕಲ್ಯಾಣದಲ್ಲಿಯ ಪಾವನ ಪುಷ್ಕರಣಿಯನ್ನು ಸೇರಿದವು. ಅದನ್ನು ಸೇರಿದ ಸರಿತ್ತುಗಳಲ್ಲಿ ಮೂರು ಹಿರಿದೊರೆಗಳಿದ್ದವು. ಪ್ರಭುದೇವರ ಜ್ಞಾನಗಂಗೆಯು ಸಿದ್ಧರಾಮರ ಕರ್ಮಕಾಲಿಂದಿಯೊಡನೆ ಕಲ್ಯಾಣಕ್ಕೆ ಬಂದು ಅಲ್ಲಿಯ ಬಸವಣ್ಣನವರ ಭಕ್ತಿಸರಸ್ವತಿಯಲ್ಲಿ ಬೆರೆತು, ಅಲ್ಲಿ ಒಂದು ಪವಿತ್ರ ಪುಷ್ಕರಿಣಿಯನ್ನು ನಿರ್ಮಿಸಿತು. “ಅನುಭವ ಮಂಟಪ'ವೇ ಆ ಪಾವನಪುಷ್ಕರಿಣಿ, ಆ ಪವಿತ್ರ ತ್ರಿವೇಣಿಸಂಗಮ.

74
ಪ್ರಭುದೇವರು, ಬಸವಣ್ಣನವರು, ಸಿದ್ಧರಾಮರು, ಅಕ್ಕಮಹಾದೇವಿಯವರು ಮತ್ತು ಚೆನ್ನಬಸವಣ್ಣನವರು - ಈ ಶರಣಪಂಚಕವು 'ಅನುಭವ ಮಂಟಪ' ದ ಪಂಚಪ್ರಾಣಗಳು. ಪ್ರಭುದೇವರ ಜ್ಞಾನ, ಬಸವಣ್ಣನವರ ಭಕ್ತಿ ಸಿದ್ಧರಾಮರ (ಕರ್ಮ) ಯೋಗ, ಅಕ್ಕನವರ ವಿರತಿ, ಚೆನ್ನನ ಚೈತನ್ಯ-ಕ್ರಿಯಾಶಕ್ತಿ ಸಂಘಟನಾಕೌಶಲ ಇವು ಒಂದುಗೂಡಿ 'ಅನುಭವಮಂಟಪ' ದಲ್ಲಿ ಹೊಸ ಚೈತನ್ಯವನ್ನು ತುಂಬಿದವು. ಅದೊಂದು ಚೈತನ್ಯದ ವಿದ್ಯುದಾಗರ ಆಯಿತು. ಶರಣರನೇಕರಿಗೆ ಅದು ಚೈತನ್ಯವನ್ನೂ ಬೆಳಕನ್ನೂ ನೀಡಿತು. ಅವರಿಂದ ಜನಜಾಗೃತಿಯ ಅದ್ಭುತ ಕಾರ್ಯವನ್ನು ನೆರವೇರಿಸಿತು.
ಪ್ರಭುದೇವರು ಅದರಲ್ಲಿಯ ಶೂನ್ಯಸಿಂಹಾಸನವನ್ನು ಅಲಂಕರಿಸಿ, ಅದರ ಸಭಾಪತಿಗಳ ಕಾರ್ಯವನ್ನು ನಿರ್ವಹಿಸಿದರು. ಅಲ್ಲಿ ನಡೆವ ಗೋಷ್ಠಿಯಲ್ಲಿ ಬಗೆಬಗೆಯ ಧಾರ್ಮಿಕ, ನೈತಿಕ, ಸಾಮಾಜಿಕ ವಿಷಯಗಳ ಮೇಲೆ ಬಿಚ್ಚು ಮನಸ್ಸಿನಿಂದ ಚರ್ಚೆಯು ನಡೆಯುತ್ತಿತ್ತು. ಆಗ ಅನೇಕರಲ್ಲಿಯ ಅಮೂರ್ತ ವಿಚಾರಗಳು ಮೂರ್ತಸ್ವರೂಪವನ್ನು ತಳೆಯುತ್ತಿದ್ದವು. ಅವುಗಳಲ್ಲಿ ಪ್ರಭುದೇವರ ಒಪ್ಪಿಗೆಯನ್ನು ಪಡೆದವುಗಳನ್ನು ಚೆನ್ನಬಸವಾದಿ ಕಾರ್ಯಕುಶಲ ಶರಣರು ಬೇರ ಶರಣರಿಗೆ ತಿಳಿಸಿಹೇಳಿ, ಅವನ್ನು ಕಾರ್ಯರಂಗಕ್ಕಿಳಿಸುತ್ತಿದ್ದರು. ಅವನ್ನು ಜನಜೀವನದಲ್ಲಿ ಹರಿಬಿಡುತ್ತಿದ್ದರು. ಈ ನವ ವಿಚಾರಗಳನ್ನು ಪ್ರಸಾರ ಮಾಡಲು, ಅವರು ಜಂಗಮರಿಗೆ ಮೊದಲು ತರಬೇತಿಯನ್ನು ಕೊಡುತ್ತಿದ್ದರು. ಅವರಿಗೆ ವೀರಶೈವ ಮತದ ವಿಶೇಷ ಕುರುಹುಗಳಾದ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರ ಇವುಗಳ ರಹಸ್ಯವನ್ನು ಅರುಹುತ್ತಿದ್ದರು. ಜನರೊಡನೆ ಜಂಗಮರು ಹೇಗೆ ನುಡಿಯಬೇಕು, ಎಂಬುದನ್ನು ಅವರಿಗೆ ಕಲಿಸುತ್ತಿದ್ದರು. ಕೆಳಗೆ ಕಾಣಿಸಿದ ಒಂದೆರಡು ಉದಾಹರಣೆಗಳಿಂದ ಅವರು ನೀಡುತ್ತಿರುವ ಶಿಕ್ಷಣದ ರೀತಿಯು ಗೊತ್ತಾಗಬಹುದು.
ಜನತೆಯಲ್ಲಿ ಜಂಗಮರು ಹೇಗೆ ವರ್ತಿಸಬೇಕು ಎಂಬುದನ್ನು ಈ ರೀತಿ ಪ್ರಭುದೇವರು ಅರುಹಿರುವರು :

75

ಬಿರುಗಾಳಿ ಬೀಳಿ, ಮರ ಮುರಿದಂತೆ,
ಸುಳುವ ಸುಳಿಯದೆ,
ತಂಗಾಳಿ ಪರಿಮಳದೊಡಗೂಡಿ
ಸುಳಿವಂತೆ ಸುಳಿಯಬೇಕು !
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ಸುಳಿಯದಡೆ ನೆಟ್ಟನೆ ಭಕ್ತನಾಗಿ ನಿಲಬೇಕು.
ಸುಳಿದು ಜಂಗಮವಾಗಲರಿಯದ,
ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರೇನೆಂಬೆ ಗುಹೇಶ್ವರಾ? .

ಜನರನ್ನುದ್ಧರಿಸಲೆಳಸುವ ಶರಣನು ಅವರೊಡನೆ ಯಾವ ಬಗೆಯಾಗಿ ಮಾತು ಆಡಬೇಕೆಂಬುದನ್ನು ಬಸವಣ್ಣನವರು ಈ ರೀತಿ ಬೋಧಿ ಸಿರುವರು :

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ 'ಅಹುದಹುದೆ' ನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ದಿಟವ ನುಡಿವುದು, ನುಡಿದಂತೆ ನಡೆವುದು
ಇದೇ ಅಂತರಂಗಶುದ್ದಿ ಇದೇ ಬಹಿರಂಗಶುದ್ಧಿ,

ಜಂಗಮರು ಭಕ್ತರನ್ನು ಕಾಡಕೂಡದು, ಬೇಡಕೂಡದು, ಭಕ್ತರು ಬೇಡದಲೆ ನೀಡಬೇಕು, ಆಡದಲೆ ನೀಡಬೇಕು, ನೀಡಿದೆನೆಂಬುದು ಮನದಲ್ಲಿ ಮೂಡದೇ ನೀಡಬೇಕು. ಇಂಥವರೇ ನಿಜವಾದ ಆದರ್ಶ ಭಕ್ತರು. ನಿಜವಾದ ಆದರ್ಶ ಜಂಗಮರು. ಇಂಥವರೇ ಜನರನ್ನು ಉದ್ಧರಿಸಬಲ್ಲರು.

76

ಈ 'ಅನುಭವ ಮಂಟಪ'ದ ಸಂಚಾಲಕರಾದ ಹಿರಿಯ ಶರಣರು ಪ್ರಚಾರಕರಿಗೆ ಬೇಕಾದ ಸಾಹಿತ್ಯವನ್ನು ವಿಪುಲವಾಗಿ ನಿರ್ಮಿಸಿದರು, ರಚನೆ ಮಾಡಿದರು. ಅದೇ ನಮ್ಮ ಕನ್ನಡನುಡಿಯ ವಿಶೇಷವಾದ ವಚನಸಾಹಿತ್ಯ, ಹಿರಿಯ ಶರಣ-ಶರಣೆಯರು ತಮ್ಮ ತಮ್ಮ ಜೀವನದಲ್ಲಿಯ ರಸನಿಮಿಷಗಳಲ್ಲಿ ಅವನ್ನು ರಚಿಸಿದರು, ಬರೆದರು. “ಮಂಟಪ' ದ ಕೂಟಗಳಲ್ಲಿ ಅವನ್ನು ಹಾಡಿದರು. ಅವು ಬರೆದವರೊಡನೆ, ಹಾಡಿ ಹೇಳಿದವರೊಡನೆ, ಕೇಳಿದವರಿಗೂ ಸ್ಫೂರ್ತಿಯನ್ನು ನೀಡಿದವು. ಅಂಥ ವಚನಗಳನ್ನು ಕುರಿತು ಚೆನ್ನಬಸವಣ್ಣನವರು ಅರುಹಿರುವದೇನೆಂದರೆ :

ಪಾತಾಳದಗ್ಗವಣೆಯ ನೇಣಿಲ್ಲದೆ,
ಸೋಪಾನದ ಬಲದಿಂದಲ್ಲದೆ ತೆಗೆಯಬಹುದೆ ?
ಶಬ್ದಸೋಪಾನ ಕಟ್ಟಿ ನಡೆಸಿದರು ಪುರಾತನರು,
ದೇವಲೋಕಕ್ಕೆ ಬಟ್ಟೆ ಹಾಕಿರೋ !
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತ-ಮಾತೆಂಬ ಜ್ಯೋತಿಯ ಬೆಳಗಿಕೊಟ್ಟರು
ಕೂಡಲಚೆನ್ನಸಂಗನ ಶರಣರು !

ಈ ವಚನಗಳ ಮಾಧುರ್ಯವನ್ನು ಬಸವಣ್ಣನವರು ತುಂಬ ಕೊಂಡಾಡಿರುವರು. ಅವನ್ನು ಉಪೇಕ್ಷಿಸಿದ ತಮ್ಮ ತಪ್ಪನ್ನು ನೆನೆದು ಅತಿಯಾಗಿ ವ್ಯಸನಪಟ್ಟಿರುವರು.

ಹಾಲ ತೊರೆಗೆ ಬೆಲ್ಲದ ಕೆಸರು
ಸಕ್ಕರೆಯಂತಹ ಮಳಲು
ತವರಾಜದಂತಹ ನೊರೆತೆರೆಗಳು.
ಇಂತಪ್ಪ ಆದ್ಯರ ವಚನವಿರಲು
ಬೇರೆ ಬಾವಿಯ ತೋಡಿ,
ಉಪ್ಪು ನೀರು ಸವಿದಂತಾಯಿತ್ತಯ್ಯಾ ಎನ್ನ ಯುಕ್ತಿ!
ನಿಮ್ಮ ವಚನಂಗಳ ಕೇಳದೆ, ಅನ್ಯಪುರಾಣ ಕೇಳಿ
ಕೆಟ್ಟೆನಯ್ಯಾ ಕೂಡಲಸಂಗಮದೇವಾ,

77

ಆದರೆ ಈ ವಚನಗಳು 'ಅಧರಕ್ಕೆ ಕಹಿ, ಉದರಕ್ಕೆ ಸಿಹಿ, ಬೇವು ಸವಿದಂತೆ' ಎಂಬುದನ್ನು ಅರುಹಲು ಬಸವಣ್ಣನವರು ಮರೆತಿಲ್ಲ. ಉದರಕ್ಕೆ ಸಿಹಿಯಾದ ಇಂಥ ಸುಧೆಯನ್ನು ವಿಪುಲವಾಗಿ ನೀಡಿ, 'ಅನುಭವ ಮಂಟಪ' ದ ಶರಣರು ಜನರಲ್ಲಿ ಅಮರಜೀವನದ ರುಚಿಯನ್ನು ಉಂಟು ಮಾಡಿದರು.
ಶ್ರೀ ಗುರುದೇವ ರಾನಡೆಯವರು ಅರುಹಿದ ಮೇರೆಗೆ :
"The institution of 'Anubhava-Mantap' or the Assembly Hall of Spiritual Experience at Kalyan... was a sanctuary, in which gathered aspirants and devotees for filling the heavens with the praise and glory of God's name. At the portals of this Spiritual Assembly, every earnest seeker after divinity brought in all humility, his own spiritual experience and occupied the place in the Assembly to whoch his spiritual experience entitled him. One of the chief aims of the institution was to democratise religion and free it from ritualism and visionary theoreticism. It wiped out all distinctions of caste, creed and sex, and held aloft the dictum that one's own appointed work done in the spirit of dedication (Kayakave Kailas) leads to heaven. Mutual love and pursuit after a common Spiritual Goal constituted the binding force among the members... It was at this Assembly that highly philosophical discussions on the theoretical and practical aspects of appropriation of Reality took place, and in this sense the Anubhava-Mantap resembled the court of King Janaka of the Upanisadic times.23


23. P.G.K. P. 309-310

78

"ಅನುಭವ-ಮಂಟಪ ಎಂಬ ಸಂಸ್ಥೆಯು ಕಲ್ಯಾಣದಲ್ಲಿಯ ಒಂದು ಪವಿತ್ರ ಮಂದಿರವು. ಅಲ್ಲಿ ಮುಮುಕ್ಷುಗಳೂ ಭಕರೂ ನೆರೆದು, ಭಗವಂತನ ನಾಮಮಹಿಮೆಯಿಂದಲೂ ಸ್ತವನದಿಂದಲೂ ವಾತಾವರಣವನ್ನು ತುಂಬಿಬಿಡುತ್ತಿದ್ದರು. ಈ ಪಾರಮಾರ್ಥಿಕ ಸಭೆಯಲ್ಲಿ ಪ್ರತಿಯೊಬ್ಬ ಅನನ್ಯ ಸಾಧಕನು, ಅತ್ಯಂತ ವಿನಯದಿಂದ ತನ್ನ ಪಾರಮಾರ್ಥಿಕ ಅನುಭವವನ್ನು ಅರುಹುತ್ತಿದ್ದನು ಮತ್ತು ತನ್ನ ಅನುಭವಕ್ಕೆ ಅನುಗುಣವಾದ ಸ್ಥಾನವನ್ನು ಆಕ್ರಮಿಸುತ್ತಿದ್ದನು. ಧರ್ಮವನ್ನು ಜನಸಾಮಾನ್ಯರ ಎಡೆಗೆ ಒಯ್ಯುವದೂ ಕರ್ಮಕಾಂಡದಿಂದಲೂ ಕಾಲ್ಪನಿಕ ತತ್ತ್ವಪ್ರಚುರತೆಯಿಂದಲೂ ಅದನ್ನು ಮುಕ್ತಗೊಳಿಸುವದು ಈ ಸಂಸ್ಥೆಯ ಪ್ರಧಾನ ಉದ್ದೇಶಗಳಲ್ಲಿ ಒಂದಾಗಿತ್ತು. ಅದು ಜಾತಿ-ಮತ-ಲಿಂಗಗಳ ವಿಭೇದವನ್ನು ತೊಡೆದು ಹಾಕಿತು. ಹಾಗೂ 'ಕಾಯಕವೇ ಕೈಲಾಸ' ಅರ್ಪಣಯುಕ್ತ ನಿಯತ ಉದ್ಯಮದಿಂದಲೇ ಕೈಲಾಸವನ್ನು ಪಡೆಯಬಹುದು ಎಂಬ ಸಿದ್ಧಾಂತವನ್ನೆತ್ತಿ ಹಿಡಿಯಿತು. ಪರಸ್ಪರ ಪ್ರೇಮವೂ ಸಮಾನವಾದ ಪಾರಮಾರ್ಥಿಕ ಗುರಿಯೂ ಅದರಲ್ಲಿಯ ಸದಸ್ಯರನ್ನು ಒಂದು ಗೂಡಿಸುವ ಬಂಧವಾಗಿತ್ತು ಈ ಸಭೆಯಲ್ಲಿಯೇ ಪರತತ್ತ್ವವನ್ನು ಪಡೆಯುವ ತಾತ್ವಿಕ ಹಾಗೂ ವ್ಯಾವಹಾರಿಕ ಅಂಗಗಳನ್ನು ಕುರಿತು ಮೇಲ್ತರಗತಿಯ ದಾರ್ಶನಿಕ ಚರ್ಚೆಯು ನಡೆಯುತ್ತಿತ್ತು. ಈ ದೃಷ್ಟಿಯಿಂದ ಅನುಭವ ಮಂಟಪ'ವು ಉಪನಿಷತ್ಕಾಲದ ಜನಕರಾಜನ ಓಲಗವನ್ನು ಹೋಲುವದು.”

'ಈ ವಿಶ್ವವಿದ್ಯಾಲಯದಲ್ಲಿ ಎಲ್ಲರೂ ವಿದ್ಯೆ ಕಲಿತರು, ಬುದ್ಧಿ ಕಲಿತರು, ಆತ್ಮೋದ್ಧಾರ ಮಾಡಿಕೊಂಡರು. ಬಸವಣ್ಣನ ಸಂಕಲ್ಪವು ಕಿಡಿ ಹೋಗಿ ಕೆಂಡಾಯ್ತು, ಹತ್ತುಗಡೆಯ ಗಿಡಮರಗಳಲ್ಲಿ ಅಗ್ನಿಯನ್ನು ಎಬ್ಬಿಸುವ ಜ್ವಾಲೆಯಾಯ್ತು, ಆ ಜ್ವಾಲೆಯಲ್ಲಿ ಕುಲಹೀನನು ಕುಲವಂತನಾದನು. ಹೇಡಿಯು ವೀರನಾದನು. ಕೀಳು ಮೇಲಾಯ್ತು ಮಾನವನು ಶರಣನಾದನು. ಭೂಲೋಕವು ಭುವರ್ಲೋಕವಾಯಿತು. ಕಲ್ಯಾಣದ ಅಂಕಿತವು ಅನ್ವರ್ಥಕವಾಯ್ತು ಕಲ್ಲು ಕುಣಿದವು. ಹುಲ್ಲು ಜಿಗಿದವು. ಮುಗಿಲು ಅಗಲವಾಯಿತು. ಚಿಕ್ಕೆ ನಕ್ಕವು. ಕಡಲು ಉಕ್ಕಿದವು.

79

ಕತ್ತಲೆ ಅಡಗಿತು. ಬೆಳಕು ಬೆಳಗಿತು. ನಿಚ್ಚಶಿವರಾತ್ರಿಯಾಯತ್ತು'೨೪ ಇದೇ ಗುರುತರ ಶರಣರ ಪರಮಾತ್ಮನ 'ಅನುಭವ- ಮಂಟಪ' ದ ಮಹಾಕಾರ್ಯ.
ಮತಪ್ರಚಾರ :
ಪ್ರಭುದೇವರ ನೇತೃತ್ವದಲ್ಲಿ ಶರಣರ ನೆರವಿನಿಂದ ಬಸವಣ್ಣನವರು ತಮ್ಮ ನೂತನ ಮತಪ್ರಚಾರವನ್ನು ಒಳ್ಳೆಯ ರಭಸದಿಂದ ನಡೆಯಿಸಿದರು. ಈ ನೂತನ ಮತದ ತಿರುಳಾದ 'ಷಟ್ ಸ್ಥಲ, ಅಷ್ಟಾವರಣ, ಪಂಚಾಚಾರ'ಗಳ ರಹಸ್ಯವನ್ನು ಚೆನ್ನ ಬಸವಣ್ಣನು ಬಗೆಬಗೆಯಾಗಿ ವಿಶದಗೊಳಿಸಿದನು. ಆತನೇ ವೀರಶೈವ ತತ್ತ್ವಪ್ರಣಾಲಿಯ ಪ್ರಧಾನ ಭಾಷ್ಯಕಾರ, ಆತನು ವಚನಧರ್ಮದ ಮರ್ಮವನ್ನು ಕಲಿಸಿಕೊಟ್ಟು ಜಂಗಮರನ್ನು ಹಿಂದೆ ಅರುಹಿದ ಮೇರೆಗೆ, ಸಮಾಜೋದ್ಧಾರಕ್ಕಾಗಿ ತರಬೇತಿಗೊಳಿಸಿದನು. ಶಿವಾನುಭವಮಂಟಪದಲ್ಲಿ ಜನಗಳು ಸೇರಿದಾಗ, ಷಟ್‌ ಸ್ಥಲ ಸಿದ್ದಾಂತವನ್ನು ಉಪದೇಶಿಸುವ ಗುರು ತಾನೆಂಬ ಅರಿವೂ ಆತನಿಗೆ ಇತ್ತು. ಆದುದರಿಂದ ಷಟ್‌ಸ್ಥಲ ಸಿದ್ಧಾಂತಕ್ಕೆ ಪ್ರಥಮತಃ ಸರಿಯಾದ ತಳಹದಿಯನ್ನು ಹಾಕಿ, ಆ ಭವ್ಯಮಂದಿರವನ್ನು ಸುಂದರವಾಗಿ ಕಟ್ಟಿದಾತನು ಚೆನ್ನಬಸವನು ಆಗಿದ್ದಾನೆ.೨೫

ಈ ಮೊದಲು ಕಾಣಿಸಿದ ಮೇರೆಗೆ, ಸಾಮಾನ್ಯ ಸದಾಚಾರದ ತತ್ತ್ವಗಳ ಜತೆಯಲ್ಲಿ ಶರಣರು ವೀರಶೈವದ ವಿಶೇಷ ಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಪ್ರಚುರಗೊಳಿಸಿದರು. ಅವುಗಳಲ್ಲಿ ಅಷ್ಟಾವರಣ- ಪಂಚಾಚಾರಗಳೆಲ್ಲ ಭಕ್ತರು ಆಚರಿಸಬೇಕಾದ ವಿಷಯಗಳು, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿಮಂತ್ರ-ಇವೇ ಅಷ್ಟಾವರಣಗಳು. ಸದ್ಗುರುಗಳಿಂದ ದೀಕ್ಷೆಯನ್ನು ಪಡೆದು, ಅವರು ದಯಪಾಲಿಸಿದ


೨೪. ಕ.ಬ.ಜೀ, ಪು. ೬೬
೨೫. ವಧ.ಸಾ, ಪು. ೬೩

80

ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ಅದನ್ನು ದಿನಾಲು ಭಕ್ತಿಭಾವದಿಂದ ಪೂಜೆ ಮಾಡಿ, ಅದರ ಜತೆಯಲ್ಲಿ ಗುರು- ಜಂಗಮರಿಗೆ ತನುಧನಗಳನ್ನು ಅರ್ಪಿಸಿ, ಅವರನ್ನು ಆರಾಧಿಸಿ, ಪಾದೋದಕ-ಪ್ರಸಾದಗಳನ್ನು ಸೇವಿಸಬೇಕು. ವಿಭೂತಿ- ರುದ್ರಾಕ್ಷಿಗಳನ್ನು ಧರಿಸಿ, ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದೇ ಭಕ್ತರ ನಿತ್ಯಾಚಾರ. ಅದರ ಕೂಡ ಯಮನಿಯಮಗಳ ಸದಾಚಾರವನ್ನೂ ಸತ್ಯಧರ್ಮರಕ್ಷಣೆಯ ಗಣಾಚಾರವನ್ನೂ ಶರಣರನ್ನೂ ಸತ್ಕರಿಸುವ ಶಿವಾಚಾರವನ್ನೂ ಲಿಂಗಾರ್ಚನೆಯ ಲಿಂಗಾಚಾರವನ್ನೂ ಅವರು ತಪ್ಪದೇ ಪಾಲಿಸಬೇಕು. ಇವು ವೀರಶೈವರೆಲ್ಲರೂ ಅನುಸರಿಸಬೇಕಾದ, ಆಚರಿಸಬೇಕಾದ ಮಾತುಗಳು.

ಮುಂದೆ ಭಕ್ತರು ಪರಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸಿದರೆ, ಅವರು ಷಟ್‌ ಸ್ಥಲಸಿದ್ಧಾಂತವನ್ನು ಚೆನ್ನಾಗಿ ಅರಿತುಕೊಂಡು, ಅದರ ಮೇರೆಗೆ ಸಾಧನದಲ್ಲಿ ನಿರತರಾಗಬೇಕು. ತನ್ನಲ್ಲಿ ಭಕ್ತಿಭಾವವನ್ನು ತಳೆದ ಭಕ್ತನು, ನಿಷ್ಠೆಯನ್ನು ಬೆಳೆಸಿದರೆ ಮಾಹೇಶನಾಗುವ ತಾನು ಸೇವಿಸುವದೆಲ್ಲವೂ ಪರಶಿವನ ಪ್ರಸಾದವೆಂದು ಬಗೆದು, ಆ ಬಗೆಯ ಅವಧಾನದಲ್ಲಿ ನಿಲ್ಲುವವನು ಪ್ರಸಾದಿಯು. ತರುವಾಯ ಆತನು ಅಂತರಂಗದಲ್ಲಿ ಜ್ಯೋತಿರ್ಲಿಂಗದ ಅನುಭಾವವನ್ನು ಪಡೆದು ಪ್ರಾಣಲಿಂಗಿಯಾಗುವನು. ಈ ಅನುಭಾವಜನಿತ ಆನಂದದಲ್ಲಿ ಮುಳುಗಿ, ಪರಶಿವನಿಗೆ ತನ್ನನ್ನೇ ಅರ್ಪಿಸಿಕೊಂಡವನು ಶರಣನು. ಮತ್ತು ಆತನಲ್ಲಿ ಸಮರಸನಾದವನು ಐಕ್ಯನು, ಪರಮಾರ್ಥಸಾಧನವನ್ನು ಮಾಡತೊಡಗಿದ ಭಕ್ತನು ಈ ಆರು ಮೆಟ್ಟಿಲುಗಳನ್ನು ಏರಿ, ಪರಶಿವನಲ್ಲಿ ಬೆರೆತು ಬೇರಿಲ್ಲದಂತೆ ಆಗುವದು, ವೀರಶೈವಪಂಥದ ಚರಮಸ್ಥಿತಿ, ಅವಸ್ಥೆ.

ಪ್ರಭುದೇವ- ಚೆನ್ನಬಸವರು ಜಂಗಮರ ಮುಖಾಂತರ ಈ ಸಿದ್ಧಾಂತಗಳನ್ನು ದೇಶದಲ್ಲೆಲ್ಲ ಪ್ರಚುರಗೊಳಿಸಿದರು. ಈ ವಿರಕ್ತಜಂಗಮರ ಕಾರ್ಯದಲ್ಲಿ ನೆರವನ್ನು ನೀಡಲು ಅವರು ಕೆಲವು ದೊಡ್ಡ ಗ್ರಾಮಗಳಲ್ಲಿ

81

ತಮ್ಮ ಮಠಗಳನ್ನು ಸ್ಥಾಪಿಸಿದರು. ಅಲ್ಲಿ ತಮ್ಮ ಗೃಹಸ್ಥ ಭಕ್ತರನ್ನು ಮಠಪತಿಗಳೆಂದು ನಿಯಮಿಸಿದರು. ಈ ಮಠಪತಿಗಳು ಸುತ್ತಲಿನ ಗ್ರಾಮಗಳಲ್ಲಿಯ ಭಕ್ತರಲ್ಲಿ ಧರ್ಮ ಜಾಗೃತಿಯನ್ನೂ ಮತಪ್ರೀತಿಯನ್ನೂ ಉಳಿಸುವ ಹಾಗೂ ಬೆಳೆಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ವೀರಶೈವಮತವನ್ನು ಹೊಸದಾಗಿ ಸ್ವೀಕರಿಸಬಯಸುವ ಭಕ್ತರಿಗೆ, ಅವರು ದೀಕ್ಷೆಯನ್ನು ಕೊಟ್ಟು ಅವರಿಗೆ ಮತತತ್ತ್ವಗಳನ್ನೂ ಮತಾಚಾರಗಳನ್ನೂ ಕಲಿಸುತ್ತಿದ್ದರು. ಪುರಾಣ, ಪ್ರವಚನ, ಶಿವಭಜನೆ, ಶಿವಕೀರ್ತನೆಗಳ ಮುಖಾಂತರ ಜನರಲ್ಲಿ ಶಿವಭಕ್ತಿಯನ್ನು ಬೆಳೆಸುತ್ತಿದ್ದರು. ಜಂಗಮರು ಆಗಾಗ್ಗೆ ಈ ಮಠಪತಿಗಳ ಕೆಲಸದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು. ಭಕ್ತರಾಗಲಿ ಮಠಪತಿಗಳಾಗಲಿ, ತಪ್ಪು ದಾರಿಯಿಂದ ನಡೆದುದನ್ನು ಅವರು ಕಂಡರೆ, ಅಂಥವರನ್ನು ಕರೆಯಿಸಿ, ಜಂಗಮರು ಅವರಿಗೆ ಬುದ್ದಿ ಹೇಳುತ್ತಿದ್ದರು. ಅದು ವಿಫಲವಾದರೆ ತಾವು ತಮ್ಮ ದೇಹದಂಡನೆಯಿಂದ ಅವರನ್ನು ತಿದ್ದಲು ಯತ್ನಿಸುತ್ತಿದ್ದರು. ಶರಣರ ಈ ಬಗೆಯ ಉನ್ನತ ಜೀವನ ಬೋಧೆಗಳ ಫಲವಾಗಿ ಆಧ್ಯಾತ್ಮಿಕ ತಳಹದಿಯ ಮೇಲೆ ನೆಲೆಸಿದ ಒಂದು ಭವ್ಯವಾದ ವೀರಶೈವ ಬಾಂಧವ್ಯವು ಕನ್ನಡನಾಡಿನಲ್ಲಿ ವೈಭವದಿಂದ ಮೆರೆಯತೊಡಗಿತು.
ಆದರೆ ಭಗವಂತನ ಲೀಲೆಯು ಅಗತ್ಯವಾದುದು, ಅಗಾಧವಾದುದು. ಆತನು ಅವನತಿಯ ಒಡಲಲ್ಲಿ ಉನ್ನತಿಯ ಬೀಜಗಳನ್ನು ಬಿತ್ತುವಂತೆಯೇ, ಉನ್ನತಿಯ ಉದರದಲ್ಲಿ ಅವನತಿಯ ಬೀಜಗಳನ್ನು ಬಿತ್ತುವ. ಸಾತ್ವಿಕರ ಅತಿರಿಕ್ತ ಔದಾರ್ಯ ಒಂದೆಡೆ, ಅದರ ದುರ್ಲಾಭಪಡೆವ ರಾಜಸ-ತಾಮಸರ ಅತಿರಿಕ್ತ ಸ್ವಾರ್ಥ ಇನ್ನೊಂದೆಡೆ. ಈ ಎರಡೂ ಮಾತುಗಳು ಅನರ್ಥಕ್ಕೆ ಔತಣವನ್ನು ಈಯುವವು. ಬಸವಣ್ಣನವರ ಅತ್ಯಂತಿಕ ಔದಾರ್ಯದ ಫಲವಾಗಿ ಪುಂಡರು, ಗುಂಡರು, ಮಿಂಡರು ಜಂಗಮರ ಬಳಗವನ್ನು ಸೇರಿದರು. ಬಸವಣ್ಣನವರು ಜಂಗಮರನ್ನೆಲ್ಲ ಸಂಗಮನಾಥನೆಂದು ಭಾವಿಸಿ ಆರಾಧಿಸುವದನ್ನು ಕಂಡು, ದುರುಳರು ಜಂಗಮರ ವೇಷ ಧರಿಸಿ, ಅದರ ದುರ್ಲಾಭ ಪಡೆಯಲು ಯತ್ನಿಸಿದರು. 'ಲಾಂಛನವ ಕಂಡು ನಂಬುವೆ,

82

ಅ೦ತರ೦ಗವ ನೀನೇ ಬಲ್ಲೆ' ಎಂದು ಬಸವಣ್ಣನವರು ಉಸುರಿರುವದೇನೋ ನಿಜ. ಆದರೆ ಅಂಥ ವೇಷಧಾರಿಗಳನ್ನು ಚೆನ್ನಾಗಿ ಛೀ ಹಾಕಲು ಕೂಡ ಅವರು ಮರೆಯಲಿಲ್ಲ. ಅಂಥ ದಂಡಕರನ್ನು ಹಳಿದು ತಿದ್ದಲು ಅವರು ಯತ್ನಿಸಿದುದುಂಟು.

ಲಿಂಗದಿಚ್ಛೆಗೆ ಮದ್ಯಮಾಂಸವ ತಿಂಬರು
ಕೆಂಗಳಿಚ್ಛೆಗೆ ಪರವಧುವ ನೆರೆವರು,
ಲಿಂಗಲಾಂಛನಧಾರಿಯಾದಲ್ಲಿ ಫಲವೇನು?
ಲಿಂಗಪಥವ ತಪ್ಪಿ ನಡೆದರು,
ಜಂಗಮ ಮುಖದಿಂದ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ !

ಅದೇ ಕಾಲಕ್ಕೆ ಕೋಮಲ ಅಂತಃಕರಣದ ಬಸವಣ್ಣನವರು, ತಮ್ಮ ಬಿರುನುಡಿಗಳಿಂದ ನೊಂದುಕೊಂಡ ಕೆಲವರನ್ನು ಕೆಳಗೆ ಕಾಣಿಸಿದಂತೆ ಸಂತೈಸಲು ಕೂಡ ಯತ್ನಿಸಿದರು. ಇದೇ ಲೋಕಸಂಗ್ರಹದ ರೀತಿಯಲ್ಲವೇ?

ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತಂಗೆ ಬುದ್ದಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಭಕ್ತಿಯ ಹೇಳಿದರೆ,
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.

ಆದರೆ ಬಸವಣ್ಣನವರ ಈ ಬಗೆಯ ಯತ್ನವು ಪರಿಣಾಮಕಾರಿಯಾಗಲಿಲ್ಲ. ಅವರ ಬಳಗದಲ್ಲಿಯ ತಾಮಸರ ತಿಳಿವು ಸಾಲದ ದುರಭಿಮಾನವು ಭೀಕರವಾದ ಅನಾಹುತವನ್ನು ಆಮಂತ್ರಿಸಿತು. ಅದರ ಫಲವಾಗಿ ಕಲ್ಯಾಣದ ಕೇಂದ್ರವಾದ 'ಕಲ್ಯಾಣವು' ಹಾಳಾಗಿ ಹೋಗಿ, ಬಸವಣ್ಣನವರ ಹಿರಿದಾದ ಮನೋರಥವು ತಾತ್ಕಾಲಿಕವಾಗಿ ಮಣ್ಣುಗೂಡಿತು.

83

ಭೀಕರ ಕ್ರಿಯೆ ಪ್ರತಿಕ್ರಿಯೆಗಳು :
ಬಸವಣ್ಣನವರು ತಮ್ಮ ಉಜ್ವಲ ಬುದ್ಧಿಯಿಂದಲೂ ನಿರ್ಮಲ ಚಾರಿತ್ರ್ಯದಿಂದಲೂ ದಿವ್ಯ ಅನುಭಾವದಿಂದಲೂ ಅದ್ಭುತ ಪವಾಡಗಳಿಂದಲೂ ಬಿಜ್ಜಳರಾಯನ ಮೇಲೆ ತುಂಬ ಪ್ರಭಾವವನ್ನು ಬೀರಿದ್ದರು. ಅದರಲ್ಲಿ ಒಲವಿನ ಆಪ್ತಸಂಬಂಧ ಬೇರೆ. ಆದುದರಿಂದ ಬಸವಣ್ಣನವರ ಮತ ಪ್ರಸಾರದ ಕಾರ್ಯದಲ್ಲಿ ರಾಯನು ಕೈ ಹಾಕುತ್ತಿರಲಿಲ್ಲ, ಅದರ ಮೂಲಕ ಈ ನೂತನ ಮತಕ್ಕೆ ಬಸವಣ್ಣನವರ ಮುಖಾಂತರ ಒಂದು ಬಗೆಯಾಗಿ ರಾಜಾಶ್ರಯವು ದೊರೆತುದರಿಂದ, ಆ ಮತವನ್ನು ಸ್ವೀಕರಿಸಿದ ಜನರು ನಿರ್ಭಯರಾಗಿ, ವೈಭವದಿಂದಲೂ ಉತ್ಸಾಹದಿಂದಲೂ ಸಮಾಜದಲ್ಲಿ ಬಾಳತೊಡಗಿದರು. ಎಲ್ಲೆಡೆ • ವಿಭೂತಿ- ರುದ್ರಾಕ್ಷಿಗಳನ್ನೂ ಅಂಗದ ಮೇಲೆ ಲಿಂಗವನ್ನೂ ಧರಿಸಿದ ವೀರಶೈವರು ಗೌರವದಿಂದ ಮೆರೆಯತೊಡಗಿದರು. ತಮ್ಮ ತಮ್ಮ ಕಾಯಕಗಳಲ್ಲಿಯೂ ಗುರು-ಲಿಂಗ-ಜಂಗಮರ ಸೇವೆಯಲ್ಲಿಯೂ ನಿರತರಾಗಿದ್ದರು. ಬಸವಣ್ಣನವರ ನವಮತವು ಅವರಿಗೆ ಆತ್ಮಗೌರವವನ್ನೂ ನವಜೀವನವನ್ನೂ ನೀಡಿತು. ಅದರ ಫಲವಾಗಿ ಅವರಲ್ಲಿ ಉತ್ಸಾಹಕ್ಕೆ ಉಕ್ಕೇರಿತು ; ಹುರುಪಿನ ಹೊಳೆಗೆ ನೆರೆ ಬಂದಿತು; ಅದು ಕೆಲವೆಡೆ ಮೇರೆಯನ್ನು ಮೀರಿ, ಇಡಿ ಸಮಾಜವನ್ನೇ ಆವರಿಸಲು ಹವಣಿಸಿತು. ರಾಜಸ-ತಾಮಸ ಭಕ್ತರು ತಮ್ಮ ಉತ್ಸಾಹಭರದಲ್ಲಿ ನಡೆಯಿಸಿದ ಪರಮತಗಳ ವಿಡಂಬನ-ಖಂಡನೆಗಳ ಅತಿರೇಕವೂ ಅದಕ್ಕೆ ಲಭಿಸಿ, ಅದೇ ಬಗೆಯ ಪ್ರತಿಕ್ರಿಯೆಯೂ ಸಮಾಜದಲ್ಲಿ ಕೋಲಾಹಲವನ್ನು ಎಬ್ಬಿಸಿತು.
ಸನಾತನಿಗಳು ಅವರ ವಿಡಂಬನಗಳಿಂದ ರೇಗಿಗೆದ್ದರು. ಕೆಲವರು ತಮ್ಮ ಧರ್ಮವೇ ಅಳಿಯಬಹುದು ಎಂದು ಗಾಬರಿಗೊಂಡರು. ಕೂಡಲೇ ಅವರು ಬಿಜ್ಜಳರಾಯನ ಆಪ್ತಸ್ನೇಹಿತರಾದ ನಾರಾಯಣಭಟ್ಟ ಮಂಚಯ್ಯ ಇತ್ಯಾದಿ ಹಿರಿಯರ ಮುಖಾಂತರ ತಮ್ಮ ದೂರನ್ನು ಆಗಾಗ ರಾಯನಿಗೆ ತಿಳಿಸತೊಡಗಿದರು. ಕೆಲವು ಸಲ ಈ ನೂತನ ಮತದ

84
ಬಗೆಗೂ ಪರಕೀಯರ ಬಗೆಗೂ ಅಲ್ಲದ ಸಲ್ಲದ ಸಂಗತಿಗಳನ್ನು ಅರುಹಿ, ಅವರು ರಾಯನ ಮನಸ್ಸನ್ನು ಕಲುಷಿತ ಮಾಡತೊಡಗಿದರು. ಅವನ ಮನಸ್ಸಿನಲ್ಲಿ ವಿಷವನ್ನು ಬೀರತೊಡಗಿದರು :
“ಅಯ್ಯಾ, ಅರಸರೇ ! ತಮ್ಮ ದಂಡನಾಯಕನ ಅನುಯಾಯಿಗಳು ತುಂಬ ಉದ್ಧತರಾಗಿರುವರು. ಅವರ ಸೊಕ್ಕು ತಲೆಗೇರಿ, ಅವರು ನಮ್ಮನ್ನೂ ನಮ್ಮ ಪವಿತ್ರವಾದ ಸನಾತನ ಧರ್ಮವನ್ನೂ ಮನಬಂದಂತೆ ತೆಗಳಲಿರುವರು. ಅದರ ಮೂಲಕ ನಮಗೆ ಮರ್ಯಾದೆಯಿಂದ ಬಾಳುವುದೂ ಅಸಾಧ್ಯವಾಗಿದೆ. ಅದಕ್ಕಾಗಿ ತಾವು ಅವರ ಈ ಔದ್ದತ್ವವನ್ನು ಕೂಡಲೇ ನಿಯಂತ್ರಿಸಬೇಕು... ನಮ್ಮ ಮಾತು ಹಾಗಿರಲಿ! ತಮ್ಮ ಅನ್ನವನ್ನುಂಡು ಕೊಬ್ಬಿದ ಈ ಬಸವನು ತಮ್ಮನ್ನು ನಿಂದಿಸಲು ಕೂಡ ಹಿಂಜರಿಯುವುದಿಲ್ಲ. 'ಆ ಭವಿ ಬಿಜ್ಜಳನಿಗೆ ನಾನು ಅಂಜುವೆನೇ?' ಎಂಬುದಾಗಿ ತನ್ನ ಅನುಯಾಯಿಗಳೆದುರು ತನ್ನ ಜಂಬ ಕೊಚ್ಚಿಕೊಳ್ಳುವ. ಇಷ್ಟೇ ಅಲ್ಲ, ಅವನು ತಮ್ಮ ಆಪ್ತನಿರುವದರಿಂದ ಈವರೆಗೆ ತಮಗೊಂದು ಸಂಗತಿಯನ್ನು ಅರುಹಲು ನಮಗೆ ಧೈರ್ಯ ಸಾಲಲಿಲ್ಲ. ಆದರೆ ಇಂದು ತಮ್ಮ ಸಿಂಹಾತನವೇ ತಮ್ಮ ಕೈ ಬಿಡಬಹುದು. ಆ ಭಯವು ಸನ್ನಿಹಿತವಾಗಿರುವುದರಿಂದ ನಾವು ಅದನ್ನೀಗ ತಮಗೆ ಅರುಹುವ ಸಾಹಸವನ್ನು ಮಾಡಲಿರುವೆವು. ದಯವಿಟ್ಟು ಮನ್ನಿಸಬೇಕು... ಈ ಬಸವಣ್ಣನು ತಮ್ಮ ಭಾಂಡಾರವನ್ನು ಬರಿದಾಗಿ ಮಾಡಿ, ಅದರ ನೆರವಿನಿಂದ ಒಂದು ಗುಪ್ತಸೈನಿಕ ದಲವನ್ನು ನಿರ್ಮಿಸಿರುವ. ಜಂಗಮವೇಷಧಾರಿಗಳಾದ ಈ ಸೈನಿಕರು ಸಕಾಲಕ್ಕೆ ತಮ್ಮ ನಿಜರೂಪವನ್ನು ಪ್ರಕಟಿಸಿ, ತಮ್ಮನ್ನು ಸಿಂಹಾಸನದಿಂದ ತಳ್ಳಿ, ಅದನ್ನು ಬಸವಣ್ಣನವರಿಗೆ ಸಲ್ಲಿಸದಿರರು... ಆದುದರಿಂದ ಜೋಗೆ!
ಈ ಮಾದರಿಯ ದೂರುಗಳು ಆಗಾಗ ಬಿಜ್ಜಳರಾಯನ ಕಿವಿಯನ್ನು ತಟ್ಟಿ ಅವನ ಮನಸ್ಸನ್ನು ಅನೇಕ ಸಲ ಕಲಕಿಸಿದ್ದವು. ಒಮ್ಮೊಮ್ಮೆ ಈ ದೂರುಗಳ ಸತ್ಯತೆಯನ್ನು ಪರಿಕಿಸಲು ಬಿಜ್ಜಳನು ತನಿಖೆಯನ್ನು ನಡೆಯಿಸಿದಾಗ ಅವು ಹುರುಳಿಲ್ಲದವು ಎಂಬುದನ್ನು ಆತನು ಅರಿತಿದ್ದನು.

85

ಆದರೆ ಈ ದೂರುಗಳು ಎಡೆಬಿಡದೆ ಸಂತತವಾಗಿ ರಾಯನ ಕಿವಿಯ ಮೇಲೆ ಬೀಳತೊಡಗಿದ್ದರಿಂದ, ಬರಬರುತ್ತ ಆತನ ಮನಸ್ಸಿನಲ್ಲಿ ಬಸವಣ್ಣನವರ ಸದುದ್ದೇಶದ ಬಗೆಗೆ ಸಂದೇಹ ಮೊಳೆಯತೊಡಗಿತು, ಬೆಳೆಯತೊಡಗಿತು. ಅವನು ಬಸವಣ್ಣನವರ ಚಟುವಟಿಕೆಗಳನ್ನು ಸಾಶಂಕದೃಷ್ಟಿಯಿಂದ ಕಾಣತೊಡಗಿದನು.
ಈ ಬಗೆಯಾಗಿ, ಸಂದೇಹದ ಸಿಡಿಮದ್ದು ಜಡಿದು ತುಂಬಿರಲು, ಒಮ್ಮೆಲೇ ಒಂದು ಕಿಡಿಯು ಸಿಡಿಯಿತು. ಬಸವಣ್ಣನವರ ಪ್ರೋತ್ಸಾಹದಿಂದ, ಮಧುವರಸ ಎಂಬ ಬ್ರಾಹ್ಮಣನ ಮಗಳನ್ನು ಹರಳಯ್ಯನೆಂಬ ಅಸ್ಪೃಶ್ಯನ ಮಗನೊಡನೆ ಮದುವೆ ನಡೆಯಿತು. ಅವರಿಬ್ಬರೂ ವೀರಶೈವಮತವನ್ನು ಸ್ವೀಕರಿಸಿದ್ದರು. ಆದುದರಿಂದ ಉಭಯತರು ಸ್ವಸಂತೋಷದಿಂದಲೇ ಈ ವಿವಾಹವನ್ನು ನೆರವೇರಿಸಿದರು. ಆದರೆ ಅದರಿಂದ ವರ್ಣಸಂಗರದ ಈ ಭೀತಿಯು ಸನಾತನಿಗಳನ್ನು ಆವರಿಸಿತು. ಇದನ್ನು ಇನ್ನು ತಡೆಯದಿದ್ದರೆ, ತಮ್ಮ ಧರ್ಮಕ್ಕೆ ಗಂಡಾಂತರ ಒದಗದಿರದು ಎಂದು ಬಗೆದು, ಅವರು ಕೂಡಲೇ ತಮ್ಮ ಹೆದರಿಕೆಯನ್ನು ಬಿಜ್ಜಳರಾಯನಿಗೆ ತಿಳಿಸಿದರು. ಅದನ್ನು ಕೇಳಿ, ವರ್ಣಾಶ್ರಮ ಧರ್ಮವನ್ನೂ ಹಾಗೂ ಉಳಿದೆಲ್ಲ ಧರ್ಮಗಳನ್ನೂ ರಕ್ಷಿಸುವುದು ಅರಸನಾದ ತನ್ನ ಪವಿತ್ರ ಕರ್ತವ್ಯವೆಂದು ಬಗೆದ ಬಿಜ್ಜಳರಾಯನ ಸಹನೆಯು ಆತನ ಅಂಕೆಯನ್ನು ಮೀರಿತು. ಬಸವಣ್ಣನವರ ಸಂಕರಕಾರಕ ಈ ಕೃತ್ಯವನ್ನು ಕಂಡು ಆತನು ಅತೀವ ಕ್ರುದ್ಧನಾದನು. ಮತ್ತು ಕೂಡಲೇ ಇಂಥ ಸಂಕರವನ್ನು ಎಸಗಿದ ಮಧುವರಸ ಮತ್ತು ಹರಳಯ್ಯನವರನ್ನು ಬಂಧಿಸಲು ಆಜ್ಞಾಪಿಸಿ, ಅವರನ್ನು ಕ್ರೂರತನದಿಂದ ಕೊಲ್ಲಿಸಿದನು.
ಆಯಿತು ! ರಾಯನ ಈ ಕ್ರೂರಕೃತ್ಯದಿಂದ ವೀರಶೈವ ಸಮಾಜವೇ ರೋಷಾವೇಶದಿಂದ ಸಿಡಿದೆದ್ದಿತು. ಅವರಲ್ಲಿಯ ಅನೇಕರ ತಲೆ ತಿರುಗಿತು. ಶಿವದ್ರೋಹಿಯಾದ ಬಿಜ್ಜಳನನ್ನು ಕೊಂದುಗಣಪದವಿಯನ್ನು ಪಡೆಯಲು ಅವರು ಸಿದ್ಧರಾದರು. ಈ ಸಂಗತಿಯು ಬಸವಣ್ಣನವರಿಗೂ

86

ಪ್ರಭುದೇವರಿಗೂ ತಿಳಿದೊಡನೆ, ಅವರು ಅಂಥವರಲ್ಲಿ ಪ್ರಮುಖರಾದ ಮಡಿವಳ ಮಾಚಯ್ಯ, ಜಗದೇವ, ಬೊಮ್ಮಣ್ಣ ಇತ್ಯಾದಿ ಕೆಲವರನ್ನು ಕರೆಯಿಸಿ, ಅವರಿಗೆ ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಡದಿರಲು, ತಾಳ್ಮೆಯಿಂದ ವರ್ತಿಸಲು ಬಿನ್ನವಿಸಿಕೊಂಡರು :

ತನುವಿನ ಕೋಪ ಹಿರಿಯತನದ ಕೇಡು.
ಮನದ ಕೋಪ ತನ್ನ ಅರುಹಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ !

ಎಂದು ಅವರನ್ನು ಬೇಡಿಕೊಂಡರು. ಆದರೆ ಅದರ ಪರಿಣಾಮವೇನೂ ಆಗಲಿಲ್ಲ, ಅವರು ತಮ್ಮ ಹಟವನ್ನು ಬಿಡಲಿಲ್ಲ. ಅದನ್ನು ಕಂಡು ಬಸವಣ್ಣನವರು ತುಂಬ ನೊಂದುಕೊಂಡರು. ಅವರನ್ನು ಶಾಂತಗೊಳಿಸುವ ಪ್ರಭುದೇವರ ಯತ್ನವೂ ವಿಫಲವಾಯಿತು. ಅದರಿಂದ ಅತಿಯಾಗಿ ದುಃಖಿತರಾದ ಪ್ರಭುದೇವರು,

ನಾನೊಂದು ನುಡಿದರೆ, ತಾವೊಂದು ನುಡಿವರು.
ತಾವೊಂದು ನುಡಿದರೆ, ನಾನೊಂದು ನುಡಿವೆನು.
ಇದು ಕಾರಣ ಅವರಿಗೆ ನಮಗೆ ಮೇಳವಿಲ್ಲ.
ಮೇಳವಿಲ್ಲದ ಬಳಿಕ ಅನುಭವಗೋಷ್ಠಿಯಿಲ್ಲ.
ಅನುಭವಗೋಷ್ಠಿಯಿಲ್ಲದ ಬಳಿಕ ಗುಹೇಶ್ವರನು ಇಲ್ಲಿಲ್ಲ ಕೇಳಾ.

ಎಂದು ತಮ್ಮ ಅಂತರಂಗದ ದುಗುಡವನ್ನು ಚೆನ್ನಬಸವಣ್ಣನವರಿಗೆ ಅರುಹಿದರು.

ಮಹಾಸಮಾಧಿ : (ಕ್ರಿ.ಶ. ೧೧೬೮)

“ಬಸವಣ್ಣನವರ ಉತ್ಸಾಹಜ್ಯೋತಿಯು ತಣ್ಣಗಾಯಿತು. ಹೃದಯವು ನೈರಾಶ್ಯದಿಂದಲೂ ದುಃಖದಿಂದಲೂ ತುಂಬಿತು.ತಮ್ಮ ಕಾರ್ಯಕಲಾಪಗಳ ಅವಸಾನಕಾಲವನ್ನು ಅವರು ನೋಡಿದರು. ಬೆಳೆಯದ ಮುನ್ನ ಕೊಯ್ಯುವ ನೋಟವು ಕಣ್ಣಿಗೆ ಕಟ್ಟಿಬಿಟ್ಟಿತು.

87

ಮ್ಲಾನವದನರಾಗಿ, ಅಶ್ರುಲೋಚನರಾಗಿ, ನಟ್ಟಿರುಳಿನಲ್ಲಿ ಒಬ್ಬರೇ ಹೊರಟರು... ಸಂಗಮೇಶ್ವರನ ಸನ್ನಿಧಿಗೆ ಬಂದರು. ಆತನ ಎದುರಿನಲ್ಲಿ ಗದ್ಗದಕಂಠರಾಗಿ ಅವರು:

“ನಾನಾ ಭವದುಃಖದಲ್ಲಿ ಹುಟ್ಟಿದ ಪ್ರಾಣಿಯನಿಲ್ಲಿಗೆ ತಂದೆ.
ಇನ್ನು ಹುಟ್ಟಲಾರೆನು, ಹೊಂದಲಾರೆನು.
ಜನನಮರಣವೆಂಬುದಕ್ಕೆ ಹೊರಗಾದೆನಯ್ಯಾ !
ನೀವು ಹೇಳಿದ ಮಣಿಹವ ಮಾಡಿದೆ.
ಇನ್ನು ನಿಮ್ಮೊಳಗೆ ಕೂಡಿಕೊಳಾ ಕೂಡಲಸಂಗಮದೇವ !
ತೆರಪುಗೊಡು ತಂದೆ ಬಂದಿಹೆನು ಬಸವನು ನೊಂದೆ!೨೬

ಎಂದು ಅನನ್ಯಭಾವದಿಂದ ಸಂಗನನ್ನು ಬೇಡಿಕೊಂಡರು. ಆಗ,

ಸಂಗಮದೇವ ಬಸವನ ನಿರೀಕ್ಷಿಸುತ
ತೆರಹ ತನ್ನೊಳು ಕೊಟ್ಟು ಬಸವನಂ ಸೈಪಿಟ್ಟು
ನೋಡುತಿರೆ ಭಕ್ತರೆಲ್ಲರ ಮುಂದೆ ಬಸವಣ್ಣ
ಗಾಢದಿಂ ಶಿವನೊಳಗೆ ಬೆರೆತು ತಾ ಬಯಲಾದ !

ಈ ಬಗೆಯಾಗಿ ಬಸವಣ್ಣನವರು ಮಹಾಸಮಾಧಿಯನ್ನು ಪಡೆದರು. ಅವರು ಕೈಲಾಸವನ್ನೈದಿದ ವಾರ್ತೆಯು ಭಕ್ತರಿಗೆಲ್ಲ ಸಿಡಿಲಿನಂತೆ ಎರಗಿತು.

ಬಸವಣ್ಣ ! ನೀವು ಮರ್ತ್ಯಕ್ಕೆ ಬಂದು ನಿಂದರೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆ ಪಸರಿಸಿತಯ್ಯಾ.
ಸ್ವರ್ಗ-ಮರ್ತ್ಯ-ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳುವಿಗೆಯ ಘನವನಾರು ಬಲ್ಲರು?
ಅಣ್ಣಾ ! ಶಶಿಧರನ ಮಣಿಹವು ಪೂರೈಸಿತೆಂದು
ನೀವು ಲಿಂಗೈಕ್ಯವಾದರೆ,
ನಿಮ್ಮೊಡನೆ ಭಕ್ತಿ ಹೋಯಿತಯ್ಯಾ.


೨೬. ಭ.ಬ. ಪು. ೧೪೯-೧೫೦

88
ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತರು ಹೋದರು.
ಅಣ್ಣಾ ! ಮರ್ತ್ಯಲೋಕದ ಮಹಾಮನೆಯು ಶೂನ್ಯವಾಯಿತು.
ಅಯ್ಯಾ, ಬಸವಣ್ಣಾ! ಎನ್ನ ನೊಯ್ಯದೆ ಹೊದೆಯಲ್ಲಾ!
ಪಂಚಪರುಷರಮೂರುತಿ ಬಸವಣ್ಣ
ಬಸವಣ್ಣ ಪ್ರಿಯ ಚನ್ನಸಂಗಯ್ಯಂಗೆ,
ಪ್ರಾಣಲಿಂಗವಾಗಿ ಹೋದೆಯಲ್ಲಾ! ಸಂಗನಬಸವಣ್ಣ!

★ ★ ★ ★

ಈ ಅವಧಿಯಲ್ಲಿ ಇತ್ತ ಕಡೆ ಜಗದೇವ ಬೊಮ್ಮಣ್ಣರು ಮಾಚಯ್ಯನ ಆಶೀರ್ವಾದವನ್ನು ಪಡೆದು, ತಮ್ಮ ಸಮಯವನ್ನು ಕಾಯುತ್ತಿದ್ದರು. ಅವರು ಬಿಜ್ಜಳನ ಪಂಚು ಹಿಡಿಯುವವರಿದ್ದಮೂಲಕ ಒಂದು ದಿನ ರಾತ್ರಿ ತಕ್ಕ ಅವಕಾಶವನ್ನು ಕಂಡು ಅವರು ರಾಯನನ್ನು ತೀರಿಸಿಬಿಟ್ಟರು. ಈ ಕ್ರೂರ ಕೊಲೆಯ ಮೂಲಕ ಶರಣರಲ್ಲಿ ರಾಜಪರಿವಾರದ ಪ್ರಚಂಡ ಕ್ರೋಧಕ್ಕೆ ತುತ್ತಾದರು. ಅವರು ಅಂದಿನಿಂದ ಕಲ್ಯಾಣದಲ್ಲಿ ಇರುವದೇ ಅಸಾಧ್ಯವಾಯಿತು. ಪ್ರಭುದೇವರೊಡನೆ ಒಂದು ತಂಡವು ಶ್ರೀಶೈಲದೆಡೆ ತೆರಳಿತು. ಮತ್ತೊಂದು ತಂಡವು ಚೆನ್ನಬಸವಣ್ಣನೊಡನೆ ಉಳವಿಯೆಡೆ ಸಾಗಿತು. 'ಒಬ್ಬ ಜಂಗಮನ ಅಭಿಮಾನದಿಂ ಕಲ್ಯಾಣಮಯ ಕಲ್ಯಾಣವು ಹಾಳಾಯಿತು ! ಭಗವಂತನ ಇಚ್ಛೆ !

★ ★ ★ ★

ಇಲ್ಲಿ ಒಂದು ಮಾತು ಓದುಗರ ಜಿಜ್ಞಾಸೆಯನ್ನು ಕೆರಳಿಸದಿರದು. “ಕೆಟ್ಟಿತ್ತು ಕಲ್ಯಾಣ ಜಂಗಮನ ಹಟದಿಂದ' ಎಂಬುದನ್ನು ಅರಿತ ಬಸವಣ್ಣನವರು, ಪವಾಡವನ್ನು ಮೆರೆದು ಅದನ್ನು ಯಾಕೆ ರಕ್ಷಿಸಲಿಲ್ಲ? ಸಂಗನಾದರೂ ಅವರಿಗಾಗಿ ಹಿಂದಿನಂತೆ ಪವಾಡವನ್ನೇಕೆ ಮೆರೆಯಲಿಲ್ಲ. ಅಗಮ್ಯವಾದ ಭಗವಂತನ ಉದ್ದೇಶವನ್ನು ನಾವು ಊಹಿಸಲರಿಯವು. ಆದರೆ ಬಸವಣ್ಣನವರು ಈ ಸಂದರ್ಭದಲ್ಲಿ ಪವಾಡವನ್ನು ಮೆರೆಯದಿರುವ ಕಾರಣವನ್ನು ಮಾತ್ರ ಊಹಿಸಬಲ್ಲೆವು. ಬಸವಣ್ಣನವರಲ್ಲಿ

89

ಭಕ್ತಿಯು ಬೆಳೆದಂತೆ ಅವರಲ್ಲಿ ಅರ್ಪಣ ಭಾವವೂ ತುಂಬ ಬೆಳೆಯಿತು. ಅದರ ಫಲವಾಗಿ, ಶಿಲುಬೆಯನ್ನೇರಿದಾಗ ಕ್ರಿಸ್ತ ಮಹಾತ್ಮನು “ನಿನ್ನ ಬಯಕೆಯಂತೆ ಆಗಲಿ!" (Let Thy will be done!) ಎಂದು ಉಸುರಿದ ಮೇರೆಗೆ ಬಸವಣ್ಣನವರೂ ಕೂಡ :
"ಮಾಡುವಾತ ನಾನಲ್ಲವಯ್ಯಾ ! ನಿನಗೆ ನೀ ಮಾಡಿಕೋ' ಎಂದು ತಮ್ಮ ಆತ್ಮಾರ್ಪಣಭಾವವನ್ನು ಕೊನೆಕೊನೆಗೆ ವ್ಯಕ್ತಮಾಡಿರುವರು. ಈ ಭಾವವು ಅವರಲ್ಲಿ ತುಂಬ ಬೆಳೆದ ಮೂಲಕ, “ಭಗವದಿಚ್ಚೆಯಂತಾಗಲಿ ! ಈಶಸಂಕಲ್ಪ ನೆರವೇರಲಿ ! ಎಂದು ಬಗೆದು ಈ ಸಂದರ್ಭದಲ್ಲಿ ತಮ್ಮ ಬಯಕೆಯನ್ನು ನಡೆಯಿಸಿರಲಿಕ್ಕಿಲ್ಲ. ಮೇಲಾಗಿ ಬಸವಣ್ಣನವರ ಅರಿವಿನ ಕಂಗಳಿಗೆ, ಮುಂದೆ ಒದಗುವ ಅನಾಹುತವು ಕಾಣಿಸಿರಬೇಕು, ಈಶಸಂಕಲ್ಪವು ತಿಳಿದಿರಬೇಕು. ಅದಕ್ಕಾಗಿಯೇ ಅವರು ಸಂಗನೆಡೆ ತೆರಳಿರಬೇಕು. “ಹರ ನಿನ್ನ ಮಾಯೆ ತಿಳಿಯದಯ್ಯಾ! ಇದೇ ನಿಜ.

ಅಲೆ : ಆರು

ಭಕ್ತಿಯ ಬೆಳೆ

ರೂಪರೇಖೆ :
ಭಕ್ತಿಯು ಬಸವಣ್ಣನವರ ಸಹಜ ಗುಣ. ಅದು ಅವರಲ್ಲಿ ಹುಟ್ಟಿದಂದಿನಿಂದಲೇ ನೆಲೆಸಿದ್ದಿತು. ಭಕ್ತಿಯು ಅವರೊಡನೆ ಜನಿಸಿತು, ಅವರೊಡನೆ ಬೆಳೆಯಿತು. ಅದು ಮೊಳೆತ ಹಾಗೂ ಬೆಳೆದ ಬಗೆಯನ್ನು ಅವರೇ ತಮ್ಮ ವಚನವೊಂದರಲ್ಲಿ ಬಣ್ಣಿಸಿರುವರು :
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿ ಎಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವ ತಮಗೆ ಬೇಕೆಂದು ಎತ್ತಿಕೊಂಡ.
ಬಸವಣ್ಣನವರ ಅಂತರಂಗವು ಭಕ್ತಿಯ ಸಂಸ್ಕಾರವನ್ನು ಪಡೆದ ಭೂಮಿ. ಅಲ್ಲಿಗುರು ಬಿತ್ತಿದ ಬೀಜವು ಅಂಕುರಿಸಿತು. ಗುರು ಪಂಚಾಕ್ಷರೀ ಮಂತ್ರದ ಜಪ ಹಾಗೂ ಶಿವಲಿಂಗದ ಪೂಜೆ- ಧ್ಯಾನಗಳನ್ನು ಕಲಿಸಿದ. ಅದರ ಜತೆಯಲ್ಲಿ ಪರಶಿವನ ರೂಪ-ಗುಣ-ಕರ್ಮಗಳ ವಿಚಾರವನ್ನೂ ನೈತಿಕ ಸದಾಚಾರದ ಹಾಗೂ ಪಾರಮಾರ್ಥಿಕ ನಿತ್ಯಾಚಾರದ ಸಾಧನವನ್ನೂ ಬಸವಣ್ಣನವರಿಂದ ಮಾಡಿಸಿಕೊಂಡ. ಅದರ ಫಲವಾಗಿ ಅವರಿಗೆ ಪರಶಿವನ ದಿವ್ಯ ಅನುಭಾವ ಲಭಿಸಿ ಅವರು ಪೂರ್ಣತೆಯನ್ನು ಪಡೆದರು. ತುಂಬ 'ಹಣ್ಣಾದರು'. ಕೊನೆಗೆ ಈ ಹಣ್ಣನ್ನು ಪರಶಿವನು ತಾನೇ

91

ಎತ್ತಿಕೊಂಡ, ಸ್ವೀಕರಿಸಿದ. ಅವರು ಪರಶಿವನ ಒಡನೆ ಬೆರೆತುಕೊಂಡರು. ಅವನಲ್ಲಿ ಸಮರಸರಾದರು.
ಬಸವಣ್ಣನವರಿಗೆ, ಹಿಂದೆ ಆರುಹಿದ ಮೇರೆಗೆ, ಇಬ್ಬರು ಗುರುಗಳು. ಈಶಾನ್ಯಮುನಿಗಳು ಒಬ್ಬರು, ಪ್ರಭುದೇವರು ಇನ್ನೊಬ್ಬರು. ಒಬ್ಬರು ಅವರಿಗೆ ಸಗುಣಭಕ್ತಿಯನ್ನು ಕಲಿಸಿದರು. ಇನ್ನೊಬ್ಬರು ನಿರ್ಗುಣ ಭಕ್ತಿಯನ್ನು ಕಲಿಸಿದರು. ಈಶಾನ್ಯಮುನಿಗಳು ಬಸವಣ್ಣನವರಿಗೆ ಸಗುಣ ಸಂಗಮನಾಥನ ಸ್ಥಾವರ ಲಿಂಗದ ಹಾಗೂ ಇಷ್ಟಲಿಂಗದ ಪೂಜೆ-ಧ್ಯಾನಗಳನ್ನೂ ಪಂಚಾಕ್ಷರೀ ಬೀಜಮಂತ್ರದ ಜಪವನ್ನೂ ಉಪದೇಶಿಸಿದರು. ಬಸವಣ್ಣನವರಲ್ಲಿ ಭಕ್ತಿಯು ಬೆಳೆದು, ಅವರಲ್ಲಿ ನಿಷ್ಠೆಯು ದೃಢವಾಗಿ ನೆಲೆಗೊಂಡು, ಅವರು ಎಲ್ಲವೂ ಪರಶಿವನ ಪ್ರಸಾದವೆ೦ದು ಬಗೆದು ಅದನ್ನು ಬಳಸತೊಡಗಿದರು, ಪ್ರಸಾದ ಜೀವಿಗಳಾದರು. ಅದರಿಂದ ಅವರ ಅಂತರಂಗವು ಪರಿಶುದ್ಧವಾಯಿತು. ಅದರ ಫಲವಾಗಿ ಅವರು ಸಗುಣ ಮಹೇಶನ ದರ್ಶನವನ್ನು ಪಡೆದರು. ಅವರು,
“ಹೊನ್ನ ಹಾವುಗೆಯ ಮೆಟ್ಟಿದವನ,
ಮಿಡಿಮುಟ್ಟಿನ ಕೆಂಜೆಡೆಯವನ
ಮೈಯಲ್ಲಿ ವಿಭೂತಿ ಧರಿಸಿದವನ
ಕರದಲ್ಲಿ ಕಪಾಲ ಪಿಡಿದವನ
ಅರ್ಧನಾರೀಯಾದವನ
ಎನ್ನ ಮನಕ್ಕೆ ಬಂದವನ
ಸದ್ಭಕ್ತರ ಹೃದಯಲ್ಲಿಪ್ಪವನ
ಮಾಡಿದ ಪೂಜೆಯಲೊಪ್ಪವನ
ಕೂಡಲಸಂಗಯ್ಯನೆಂಬವನ"
ಕಂಡರು. ಅವನ ಆದೇಶ ಪಡೆದರು. ಇಲ್ಲಿಗೆ ಈಶಾನ್ಯ ಮುನಿಗಳ ಕಾರ್ಯವು ಮುಗಿದಂತಾಗುವದು. ಮುಂದೆ ಅದನ್ನು ಪ್ರಭುದೇವರು ಮುಂದುವರಿಸಿದರು.

92
ಪ್ರಭುದೇವರು ಬಸವಣ್ಣನವರನ್ನು ಅನುಗ್ರಹಿಸಿ ಅವರ ಮನದ ಕಾಳಿಕೆಯನ್ನು ಕಳೆಯಲು, ಹಾಗೂ ಮತಪ್ರಚಾರವನ್ನು ಸಂಘಟಿಸಲು, ಕಲ್ಯಾಣಕ್ಕೆ ಬಂದದ್ದು. ಅವರು ಮೊದಲು ಬಸವಣ್ಣನವರಲ್ಲಿ ನೆಲೆಸಿದ್ದ 'ಮಾಟ-ಕೂಟ'ದ ಭ್ರಾಂತಿಯನ್ನು ಬಿಡಿಸಿದರು. ಮಹಾಮೇರುವಿನ ಮರೆಯಲ್ಲಿದ್ದು ಭೂತನ ನೆಳಲನಾಚರಿಸುವ ಕರ್ಮಿ ನೀ ಕೇಳಾ ! ಅದು ಆ ಮಹಾಲಿಂಗಕ್ಕೆ ಮಜ್ಜನವೆಂದೆನೋ, ಪರಿಮಳಲಿಂಗಕ್ಕೆ ಪತ್ರಪುಷ್ಟಗಳೆಂದೇನೋ, ಜೀವ ಜ್ಯೋತಿರ್ಲಿಂಗಕ್ಕೆ ಧೂಪದೀಪಾರ್ತಿ ಎಂದೇನೋ, ಅಮೃತಲಿಂಗಕ್ಕೆ ಆರೋಗಣವೆ೦ದೆನೋ, ಮಹೇಶ್ವರನೆಂಬ ಲಿಂಗದಂತವ ಬಲ್ಲವರಾರೋ? ಎಂಬುದಾಗಿ ಬೋಧಿಸಿದರು. ಅವರು ಬಸವಣ್ಣನವರಿಗೆ ಪ್ರಾಣದಲ್ಲಿಯೇ 'ಜ್ಯೋತಿರ್ಲಿಂಗ'ವನ್ನು ಕಾಣಲು ಕಲಿಸಿದರು. ಅಂಥ ಅನುಭಾವದಿಂದ ಆ ದಿವ್ಯ ಆನಂದದಲ್ಲಿನಲಿಯಲು, ಆ ಮಹಾಬೆಳಕಿನಲ್ಲಿ ಸಮರಸರಾಗಿ ಬಯಲಿಗೆ ಬಯಲಾಗುವ ಬಗೆಯನ್ನು ಅರುಹಿದರು. ಆ ಅನುಭಾವವನ್ನು ಅವರಿಗೆ ದಯಪಾಲಿಸಿದರು. ಇದು ಬಸವಣ್ಣನವರ ಬೆಳೆದ ಭಕ್ತಿಯ ಪರಿಪಾಕ-ಪೂರ್ಣತೆ. ಅನುಭಾವದ ಶಿಖರವನ್ನು ಇಂತು ಬಸವಣ್ಣನವರು ಮುಟ್ಟಿದ ಬಗೆಯ ಕೆಲ ವಿವರಗಳನ್ನು ಮುಂದೆ ಕಾಣಿಸಲು ಯತ್ನಿಸಲಾಗಿದೆ.
ವಿವೇಕೋದಯ:
ಸದ್ಗುರುಗಳ ಬೋಧೆ ಪ್ರಸಾದಗಳ ಫಲವಾಗಿಯೂ ಸ್ವಂತ ಆಳವಾದ ಆಲೋಚನೆಯ ಫಲವಾಗಿಯೂ ಬಸವಣ್ಣನವರಲ್ಲಿ ವಿವೇಕವು ಮೈದಳೆದು ಸಂಗಮನಾಥನೇ ಏಕೋದೇವನೆಂಬುದು ಅವರ ಬುದ್ದಿಗೆ ಹೊಳೆಯಿತು.
“ಸ್ವಾಮಿ ನೀನು ಶಾಶ್ವತ ನೀನು
ಎತ್ತಿದೆ ಬಿರುದ ಜನವೆಲ್ಲರಿಯಲು.
“ಮಹಾದೇವ, ಮಹಾದೇವ'
ಇಲ್ಲಿಂದ ಮುಂದೆ ಶಬ್ದವಿಲ್ಲ.
ಪಶುಪತಿ ಜಗಕ್ಕೆ ಏಕೋದೇವ.

93

ಸ್ವರ್ಗಮೃತ್ಯುಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ !

ಮುಂದೆ ಈ ಏಕೋದೇವನೇ ತಮ್ಮ ಸಾರಸರ್ವಸ್ವ, ತಮ್ಮ ಗತಿ ಮತಿ ಎಂದು ಅವರು ಭಾವಿಸಿದರು.

ತಂದೆ ನೀನು, ತಾಯಿ ನೀನು ;
ಬಂಧು ನೀನು ಬಳಗ ನೀನು ;
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ.
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು,
ಎನ್ನಾಪತ್ತು ಸುಖದುಃಖ ನೀನೇ ಕಂಡಯ್ಯಾ.
ಮತ್ತಾರೂ ಇಲ್ಲ ; ಹರಹರಾ ನೀನೇ ಕಂಡಯ್ಯಾ !
ಎನ್ನ ಮಾತಾಪಿತನೂ ನೀನೇ ಕಂಡಯ್ಯಾ !
ಕೂಡಲಸಂಗಮದೇವಾ !

ಎಂದು ಬಸವಣ್ಣನವರು ಪರಶಿವನಿಗೆ ಅರಿಕೆ ಮಾಡಿಕೊಂಡರು. ತರುವಾಯ ಆತನ ಒಲುಮೆ ಇಲ್ಲದೆ ಏನೂ ಲಭಿಸದು, ಆತನ ಕರುಣವೇ ಆತನನ್ನು ಕಾಣಿಸಬಲ್ಲದು. 'ಯಮೇವೇಷ ವೃಣುತೇ ತೇನ ಲಭ್ಯಃ ಆತನೊಲಿದವನೇ ಆತನನ್ನರಿವ, ಆತನ ಕರುಣವು ಅಸಾಧ್ಯವಾದುದನ್ನು ಸಾಧ್ಯಗೊಳಿಸುವದು ಎಂದು ಅವರಿಗೆನಿಸಿತು.

ನೀನೊಲಿಯಿತ್ತೇ ಪುಣ್ಯ; ನೀನೊಲ್ಲದುದೇ ಪಾಪ ಕಂಡಯ್ಯಾ,
ಸಕಲ ಜೀವದೊಳಗೆ ಅನುಶ್ರುತನಾಗಿದ್ದೆಯಯ್ಯಾ,
ನೀನೊಲಿದವನೇ ನಿಮ್ಮನ್ನರಿವನು.
ಪ್ರಸಾದಾದ್ದೇವತಾಭಕ್ತಿಃ । ಪ್ರಸಾದೋ ಭಕ್ತಿಸಂಭವಃ ।
ಯಥಾಂಕುರಸ್ತಥಾ ಬೀಜಂ । ಬೀಜತೋ ವಾ ತಥಾಂಕುರಃ ।।
ನೀನೊಲಿದವನೇ ಧನ್ಯ ಜಗಕ್ಕೆ ಪಾವನ,
ಕೂಡಲಸಂಗಮದೇವಾ !

94

ಅದೇ ಮೇರೆಗೆ,

ನೀನೊಲಿದರೆ ಕೊರಡು ಕೊನರುವದಯ್ಯಾ,
ನೀನೊಲಿದರೆ ಬರಡು ಹಯನಹುದಯ್ಯಾ,
ನೀನೊಲಿದರೆ ವಿಷವು ಅಮೃತವಹುದಯ್ಯಾ,
ನೀನೊಲಿದರೆ ಸಕಲ ಪದಾರ್ಥ ಇದಿರಲಿರ್ಪುದು,
ಕೂಡಲಸಂಗಮದೇವಾ !

ಇಂಥ ಪ್ರಭಾವವು ಭಗವಂತನ ಕರುಣದಲ್ಲಿ ಪ್ರಸಾದದಲ್ಲಿ ಆದುದರಿಂದ ಬಸವಣ್ಣನವರು ಆತನಿಗೆ ಅನನ್ಯಭಾವದಿಂದ ಮೊರೆ ಇಟ್ಟರು. ತಮ್ಮನ್ನು ಕರುಣಿಸಲು ಪ್ರಾರ್ಥಿಸಿದರು.

ಭವರೋಗವೈದ್ಯನೆಂದು ನಾ ನಿನ್ನ ಮೊರೆಹೊಕ್ಕೆ
ಭಕ್ತಿದಾಯಕ ನೀ ಕರುಣಿಸು ಲಿಂಗ ತಂದೆ !
“ಜಯ ಜಯ ಶ್ರೀಮಹಾದೇವ! ಜಯ ಜಯ ಶ್ರೀಮಹಾದೇವ!
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು.
ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು.

ಎಂದು ಅರುಹಿದರು ಬಸವಣ್ಣನವರು. ಆದರೆ ಈ ಬಗೆಯ ಆರಾಧನೆಯಲ್ಲಿ ಕೆಲಕಾಲ ಕಳೆದ ಮೇಲೆ, ಬಸವಣ್ಣನವರ ಭಕ್ತಿಯ ಕಾವು ಕಡಿಮೆ ಆಯಿತು. ಸಾಧನವು ಯಾಂತ್ರಿಕವಾಯಿತು. ಅದನ್ನು ಕಂಡು ಅವರು,

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ : ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ?
ಆ ನಿಮ್ಮ ಮನ ಬೊಗುವನ್ನಕ್ಕ.
ನೀವೆನ್ನ ಮನ ಬೊಗುವನ್ನಕ್ಕ.
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ.
ಕೂಡಲಸಂಗಮದೇವ !

95

ಎಂಬಂತೆ ಶರಣರಿಗೆ ಶರಣಾಗತರಾಗಲು ಬಯಸಿದರು. ಶರಣರು ತಮ್ಮ ಕಾಯಗುಣವನ್ನು ಹೇಗೆ ಅಳಿಸಿದರು, ಭಕ್ತಿಭಾವವನ್ನು ಮರಳಿ ಹೇಗೆ ಬೆಳೆಸಿದರು? ಎಂಬುದನ್ನು ಅವರಿಂದ ಕೇಳಿಕೊಂಡು, ತಮ್ಮಲ್ಲಿಯ ದೇಹಭಾವವನ್ನು ಅಳಿಸಿ, ಭಕ್ತಿಭಾವವನ್ನು ಬೆಳೆಸಲು ಯತ್ನಿಸಬೇಕೆಂದು ಅವರು ಬಗೆದರು.
ಅಂತರ್ನಿರೀಕ್ಷಣ :
“ನಿನ್ನ ಕೃಪೆಯ ಬಲದಿಂದ ನಾನು ಮೇಲಕ್ಕೆ ಏರುವೆ. ಆದರೆ ನನ್ನ ಭಾರದ ಫಲವಾಗಿ ಕೆಳಕ್ಕೆ ಜಾರುವೆ (You lift me up with your grace; but I come down with my weight) ಎಂದು ಓರ್ವ ಸತ್ಪುರುಷರು ಉಸಿರಿರುವರು. ಪರಮಾತ್ಮನ ಕರುಣವು ಮಾನವನದಲ್ಲಿ ವಿವೇಕವನ್ನು ಎಚ್ಚರಿಸಿ ಅದರ ಮುಖಾಂತರ ಆತನನ್ನು ತನ್ನೆಡೆ ಸೆಳೆಯುವದು. “ನಾನವರಿಗೆ ಸರಿಯಾದ ಬುದ್ದಿಯನ್ನು ದಯಪಾಲಿಸುವೆ. ಅದರ ನೆರವಿನಿಂದ ಅವರು- ಭಕ್ತರು- ನನ್ನೆಡೆ ಬರುವರು. (ದದಾಮಿ ಬುದ್ಧಿಯೋಗಂ ತಂ ಏನ ಮಾಮುಪಯಾಂತಿ ತೇ) ಎಂದು ಭಗವಂತನು ಗೀತೆಯಲ್ಲಿ ಅರುಹಿರುವ ಈ ರೀತಿ ವಿವೇಕವು ಭಗವಂತನ ಆಯುಧವಿರುವಂತೆ, ಕಾಮವು ಮಾಯೆಯ ಆಯುಧ, ಮಾಯೆಯ ಮೋಹಕತೆಯು ಕಾಮದ ಮುಖಾಂತರ ಮನುಜನನ್ನು ತನ್ನೆಡೆ ಸೆಳೆಯುವದು. ಮಾನವನ ಕಾಯ-ಇಂದ್ರಿಯ- ಮನಗಳು ಕಾಮದ ಅಭಿಷ್ಠಾನಗಳು, ಆಶ್ರಯಸ್ಥಾನಗಳು. ಕಾಮವು ಅವುಗಳಲ್ಲಿ ಬಗೆಬಗೆಯ ವಿಕಾರಗಳನ್ನು ಹುಟ್ಟಿಸಿ ಮಾನವನನ್ನು ಮಾಯೆಯ ಪಾಶದಲ್ಲಿ ಸಿಲುಕಿಸುವದು. ಈ ರೀತಿ ರಾಮಜನಿತ ವಿವೇಕವು ಹಾಗೂ ಕಾಮಜನಿತ ವಿಕಾರವು- ಇವು ಮಾನವನ ಅಂತರಂಗವನ್ನು ಕಲಹದ ರಂಗವನ್ನಾಗಿ ಮಾರ್ಪಡಿಸುವವು. ಅಲ್ಲಿ ವಿವೇಕ ವಿಕಾರಗಳಲ್ಲಿ ಸತತವಾಗಿ ಯುದ್ದವು ನಡೆಯುವದು. ವಿವೇಕವು ಪ್ರಬಲ ಇರುವಾಗ ಉನ್ನತಿ, ವಿಕಾರದ ಮೇಲುಗೈಯಾದಾಗ ಅವನತಿ. ಈ ವಿಷಯವನ್ನು ಶರಣರಾದ ಸದ್ಗುರುಗಳಿಂದ ಅರಿತು, ಬಸವಣ್ಣನವರು ಸರಿಯಾದ

96
ಅಂತರ್ನಿರೀಕ್ಷಣದಿಂದ ಅದರ ಸತ್ಯತೆಯನ್ನು ಮನವರಿಕೆ ಮಾಡಿಕೊಂಡರು. ಮಾಯೆಯ ಸೆಳೆತವನ್ನು ಕುರಿತು ಅವರು ಉಸಿರಿರುವುದೇನೆಂದರೆ -
ನಾನೊಂದು ನೆನೆದೊಡೆ ತಾನೊಂದು ನೆನೆವುದು ;
ನಾನಿತ್ತಲೆಳೆದೊಡೆ ತಾನತ್ತಲೆಳೆವುದು ;
ತಾ ಬೇರೆಯನ್ನ ನಳಲಿಸಿ ಕಾಡಿತ್ತು;
ತಾ ಬೇರೆಯನ್ನು ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದೊಡೆ.
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
ತಮಗೆ ಕಾಯವಿಕಾರ, ಇಂದ್ರಿಯವಿಕಾರ, ಮನೋವಿಕಾರಗಳು ಕಾಡುವವೆಂಬುದನ್ನು ಅವರು ಕೂಡಲೇ ಕಂಡುಹಿಡಿದರು. ಕಾಯಕ್ಕೆ ಬೇಕಾದ್ದು ಕೂಳು, ರಕ್ಷಣಗಳು, ಇಂದ್ರಿಯಗಳಿಗೆ ಬೇಕಾದದ್ದು ವಿಷಯಗಳು. ಅವನ್ನವು ಮನೋಮುಖದಿಂದ ಬೇಡುವವು. ಮನಸ್ಸಿಗೆ ಸ್ವತಂತ್ರವಾಗಿ ಬೇಕಾಗುವದು ಮನ್ನಣೆ-ಮರ್ಯಾದೆ. ಅಂತೂ ಅವೆಲ್ಲವುಗಳಿಗೆ ಬೇಕಾದವು ಹೆಣ್ಣು ಹೊನ್ನು ಮಣ್ಣು ಅಥವಾ ಕಾಮಿನಿ, ಕಾಂಚನ, ಕೀರ್ತಿ, ಅವನ್ನು ಪಡೆಯುವ ಆತುರ, ಪಡೆಯದಾಗ ಉಂಟಾದ ಕಾತರ ಇವೇ ವಿಕಾರಗಳು, ಅವುಗಳ ಕಾಟವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :
ಕಾಯವಿಕಾರ ಕಾಡಿಹುದಯ್ಯಾ ;
ಮನೋವಿಕಾರ ಕೂಡಿಹುದಯ್ಯಾ ;
ಇಂದ್ರಿಯವಿಕಾರ ಸುಳಿವುದಯ್ಯಾ ;
ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ ; ಸಿಲುಕಿಸದಿರಯ್ಯಾ,
ಅನ್ಯಚಿತ್ತವಿರಿಸದಿರಯ್ಯಾ : ನಿಮ್ಮ ಚಿತ್ತವಿರಿಸಯ್ಯಾ.
ಅನುಪಮ ಸುಖಸಾರಾಯ ಶರಣರಲಿ,
ಕೂಡಲಸಂಗಮದೇವಯ್ಯಾ, ಇದನ್ನೆ ಬೇಡುವೆನಯ್ಯಾ,

97

ಕಾಯವಿಕಾರವು ಬಸವಣ್ಣನವರನ್ನು ಈ ಬಗೆಯಾಗಿ ಕಾಡಿತು. ಅವರ ಬೆಂದ ಬಸುರ ಅವರಿಗೆ ಶಿವನನ್ನು ನೆನೆಯಗೊಡಲಿಲ್ಲ.
ಇಂದಿಗೆಂತು ನಾಳಿಗಂತು ಎಂದು
ಬೆಂದೊಡಲ ಹೊರೆಯ ಹೋಯಿತೆನ್ನ ಸಂಸಾರ !
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ !
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ !
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ!
ಉದಯಾಸ್ತಮಾನವೆನ್ನ ಬೆಂದ ಬಸುರಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲಯ್ಯಾ.
ಎಂತೋ ! ಲಿಂಗ ತಂದೆ ಎಂತಯ್ಯಾ? ಎನ್ನ ಪೂರ್ವಲಿಖಿತ.
ಬೆರಣಿಯ ನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ.
ನೀ ಕರುಣಿಸು ಕೂಡಲಸಂಗಮದೇವಾ.
ಹೊನ್ನು ಹೆಣ್ಣು ಮಣ್ಣೆಂಬ ವಿಷಯಗಳು ಅವರನ್ನು ಮರುಳು ಮಾಡಿ, ಪರಮಾತ್ಮನನ್ನು ಮರೆಯಿಸಿದ ಲೀಲೆಯನ್ನೂ ಅವರಲ್ಲಿ ಅದರಿಂದ ಉಂಟಾದ ಕಳವಳವನ್ನೂ ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :
ಊರ ಸೀರಿಗೆ ಅಗಸ ಹಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದೆಂದು ಮರುಳಾದೆ ;
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ
ಕೂಡಲಸಂಗಮದೇವಾ !
ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯಾ !
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ.
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ಸವಿಯ ಬಲ್ಲುದೆ, ಕೂಡಲಸಂಗಮದೇವಾ !

98
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ,
ಪಶುವೇನ ಬಲ್ಲುದು? ಹಸುರೆಂದೆಳೆಸುವದು.
ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬುದಕವನೆರೆದು,
ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
ಆದರೆ ಬಸವಣ್ಣನವರ ಮಂಗಮನಸ್ಸು ವಿಷಯವನ್ನು ಬಿಡಲಿಲ್ಲ. ಶಿವನನ್ನು ನಂಬಲಿಲ್ಲ, ನೆಚ್ಚಲಿಲ್ಲ ನೆನೆಯಲಿಲ್ಲ. ಅದು ಕಂಡಕಂಡಲ್ಲಿ ಕಂಡಕಂಡಂತೆ ಕುಣಿಯುವದನ್ನು ಕಂಡು, ಬಸವಣ್ಣನವರು ಕಳವಳಗೊಂಡರು. ಅದರ ಅಲೆದಾಟವನ್ನು ತಡೆಯಲು ಸಂಗನನ್ನು ಬೇಡಿಕೊಂಡರು :
ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವದೆನ್ನ ಮನವು ;
ನಿಂದಲ್ಲಿ ನಿಲ್ಲಿಲೀಯದೆನ್ನ ಮನವು ;
ಹೊಂದಿದಲ್ಲಿ ಹೊಂದಲೀಯದೆನ್ನ ಮನವು,
ಕೂಡಲಸಂಗಮದೇವಾ, ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿರಿಸು, ನಿಮ್ಮ ಧರ್ಮ.
ಅಂದಣವನೇರಿದ ಸೊಗಣನಂತೆ
ಕಂಡೊಡೆ ಬಿಡದು ಮುನ್ನಿನ ಸ್ವಭಾವವನು
ಸುಡು ! ಸುಡು ! ಮನವಿದು ವಿಷಯಕ್ಕೆ ಹರಿವುದು ;
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರೆಗೊಡ್ಡಿ ಬೇಡುವೆ, ನಿಮ್ಮ ಧರ್ಮ.
ಸುಚಿತ್ತದಿಂದಲೆನ್ನ ಮನವು
ನಿಮ್ಮ ನೆನೆಯಲೊಲ್ಲದು : ಎಂತಯ್ಯಾ ?
ಎನಗಿನ್ನಾವುದು ಗತಿ ? ಎಂತಯ್ಯಾ ?
ಎನಗಿನ್ನಾವುದು ಮತಿ? ಎಂತಯ್ಯಾ ?
ಹರಹರಾ ! ಕೂಡಲಸಂಗಮದೇವಾ,
ಮನವ ಸಂತೈಸೆನ್ನ.

99

ಬಸವಣ್ಣನವರು ಕೆಲಕಾಲ ತಮ್ಮ ಮನಸ್ಸನ್ನು ಬೋಧಿಸಿ ಅದನ್ನು ತಿದ್ದಲು ಯತ್ನಿಸಿದರು. ಆದರೆ ಅವರ ಬೋಧೆಯು ಅಷ್ಟೊಂದು ಫಲಕಾರಿ ಆದಂತೆ ಕಾಣುವದಿಲ್ಲ, ಆದರೂ ಸಾಧಕರಿಗೆಲ್ಲ ಅದು ಅತಿ ಬೆಲೆಯುಳ್ಳದ್ದು ಆಗಿರುವುದರಿಂದ, ಉಪಯುಕ್ತವಾಗಿರುವುದರಿಂದ, ಅದನ್ನಿಲ್ಲಿ ಕಾಣಿಸಿದೆ :

ಬೆಲ್ಲವ ತಿಂದ ಕೋಡಗದಂತೆ,
ಸಿಹಿಯ ನೆನೆಯಿದಿರಾ, ಮನವೇ.
ಕಬ್ಬತಿಂದ ನರಿಯಂತೆ ಹಿಂದಕ್ಕೆಳಸಿದಿರಾ, ಮನವೇ.
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸಿದಿರಾ, ಮನವೇ
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ !
ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ !
ಭವದ ಭಾರಿಯ ತಪ್ಪಿಸಿಕೊಂಡರೆ
ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ! ಮನವೇ !
ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋಲುವರೆ
ಕಿಂಕಿಲನಾಗಿ ಬದುಕು ಮನವೇ.

ಈ ಬಗೆಯ ಶರಣರನ್ನು ಲಿಂಗವೆಂದು ನಂಬಿ ವಿನಯದಿಂದ ಅವರ ಕಂಕರನಾಗಲು, ಅವರ ಸೇವೆಯನ್ನು ಮಾಡಲು ಬಿನ್ನವಿಸಿದಂತೆ, ಬೇಡುವದಾದರೆ ಸಂಗನನ್ನೇ ಸೆರಗೊಡ್ಡಿ ಬೇಡಲು, ಬಸವಣ್ಣನವರು ತಮ್ಮ ಮನಸ್ಸನ್ನು ಪರಿಪರಿಯಾಗಿ ಬೇಡಿಕೊಂಡಿರುವರು :

ಸುರರ ಬೇಡಿದಡಿಲ್ಲ ನರರ ಬೇಡಿದಡಿಲ್ಲ
ಬರಿದೆ ದೃತಿಗೆಡಬೇಡ, ಮನವೇ ;
ಅರಸನಾದಡೆಯೂ ಬೇಡಿ ಬೇಡಿ,
ಬರಿದೆ ಧೃತಿಗೆಡಬೇಡ, ಮನವೇ

100

ಕೂಡಲಸಂಗಮದೇವನಲ್ಲದೆ
ಆರ ಬೇಡದಡಿಲ್ಲ ಮನವೇ.
ಆಡಿ ಅಳುಪದಿರಾ, ಲೇಸ ಮಾಡಿ ಮರುಗದಿರಾ! ಎಲೆ ಮನವೇ!
ಕೂಡಿ ತಪ್ಪದಿರಾ ಬೇಡಿದವರಿಗಿಲ್ಲೆನ್ನದಿರು, ಕಂಡಾ, ಮನವೇ !
ನಾಡಮಾತು, ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ.

ಕರುಣಾಯಾಚನ :

ಬಸವಣ್ಣನವರ ಈ ಬೋಧೆಯು ಅವರ ಮನಸ್ಸನ್ನು ಒಲಿಸಲು ಸಮರ್ಥ ಆಗಲಿಲ್ಲ. ಅದು ತನ್ನ ಹಿಂದಿನ ಕಾಯಕವನ್ನೆಯೆ ಮುಂದುವರಿಸಿತು. ಆದುದರಿಂದ ತನ್ನ ಮನದ ತಾಮಸ ಬಿಡದು, ಕಪಟ ಬಿಡದು. ತನ್ನಲ್ಲಿ ನಿಜಭಕ್ತಿ ಇಲ್ಲ, ಸಹಜಗುಣವಿಲ್ಲ ತನ್ನ ನಡೆಯೊಂದು ಪರಿ, ನುಡಿಯೊಂದು ಪರಿ, ಮನದಲ್ಲಿ ಎರಡುಳ್ಳನಕ್ಕ ದೇವನು ಹೇಗೆ ಒಲಿಯಬೇಕು? ಎಂದು ಅವರಿಗೆ ಎನಿಸಿತು.

ಎನ್ನ ಮನದಲೊಂದು ಹೃದಯದಲೊಂದು
ವಚನದಲ್ಲೊಂದು ನೋಡಾ.
ಲೌಕಿಕರ ಕಂಡು ಆಡುವೆ, ಹಾಡುವೆ ;
ಸಹಜಗುಣವೆನ್ನಲ್ಲಿಲ್ಲಯ್ಯಾ;
ನಿಜಭಕ್ತಿ ಎನಗಿಲ್ಲ ತಂದೆ.
ಏಕೋಭಾವ ಎನಗುಳ್ಳರೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವ ?

ಇಂಥ ತಮ್ಮ ಡಂಭಾಚಾರದ ಬಗೆಗೆ ಅವರಿಗೆ ಬಹು ನಾಚಿಕೆಯಾಯಿತು. ಆದುದರಿಂದ. ಮನಮನ ಬೆರೆಸಿದಲ್ಲಿ ತನು ಕರಗದಿದ್ದರೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದರೆ,
ಕಂಡಾಗಲಶ್ರುಜಲಂಗಳು ಸುರಿಯದಿದ್ದರೆ,
ನುಡಿವಲ್ಲಿ ಗದ್ಗದಂಗಳು ಹೊರಹೊಮ್ಮದಿದ್ದರೆ

101

ಕೂಡಲಸಂಗಮದೇವರ ಭಕ್ತಿಯ ಚಿಹ್ನ
ಎನ್ನಲ್ಲಿವಿಲ್ಲವಾಗಿ, ಆನು ಡಂಭಕ ಕಾಣಿರೇ !
ಎಂದವನು ಹಾಡತೊಡಗಿದರು.
ಹೀಗಿದ್ದರೂ ಜನರು ಬಸವಣ್ಣನವರ ಭಕ್ತಿಯನ್ನು ಕಂಡು ಅವರ ಚರಣಕ್ಕೆ ಎರಗತೊಡಗಿದರು. ಅವರನ್ನು ತುಂಬ ಹೊಗಳತೊಡಗಿದರು. ಅದರ ಫಲವಾಗಿ ಅವರಿಗೆ ತಿಳಿಯದೆಯೆ ಅವರಲ್ಲಿ ಅಹಂಕಾರವು ತಲೆದೋರಿತು. ಅದರ ಅಸ್ತಿತ್ವದ ಅರಿವಾದೊಡನೆ ಬಸವಣ್ಣನವರು ತುಂಬ ಮರುಗಿದರು. ತಮ್ಮ ಹೊಗಳಿಕೆಯನ್ನು ತಡೆಯಲು ಸಂಗನನ್ನು ಅಂಗಲಾಚಿ ಬೇಡಿಕೊಂಡರು.
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
ಬೆಚ್ಚನೆ ಬೆರೆವೆ ನಾನು : ಕೆಚ್ಚು ಬೆಳಿಯಿತ್ತಯ್ಯಾ.
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರನಂತೆ ಮಾಡು, ಕೂಡಲಸಂಗಮದೇವ,
ಎನ್ನಲ್ಲಿ ಭಕ್ತಿ ಸಾಸವೆಯ ಪಡ್ಭಾಗದನಿತಿಲ್ಲ :
ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು.
ನಾನೇನು ಪಾಪವ ಮಾಡಿದೆನೋ?
ಬೆಳೆಯದ ಮುನ್ನವೆ ಕೊಯ್ದರೆ ? ಹೇಳಾ, ಅಯ್ಯಾ !
ಇರಿಯದ ವೀರ ! ಇಲ್ಲದ ಸೊಬಗವ
ಎಲ್ಲಾ ಒಡೆಯರು ಏರಿಸಿ ನುಡಿವರು.
ಎನಗಿದು ವಿಧಿಯ ಕೂಡಲಸಂಗಮದೇವ.
ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ
ಎನ್ನ ಹೊಗಳತೆ ಎನ್ನ ನಿಮ್ಮೆಲ್ಗೊಂಡಿತ್ತಲ್ಲಾ.
ಅಯ್ಯಾ, ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ,
ಅಯ್ಯೋ ! ನೊಂದೆನು, ಸೈರಿಸಲಾರೆನು,
ಕೂಡಲಸಂಗಮದೇವಾ, ನಿನೆನಗೊಳ್ಳಿದನಾದರೆ,
ಎನ್ನ ಹೊಗಳತೆ ಗಡ್ಡ ಬಾರಾ, ಧರ್ಮೀ !

102

ಕೊನೆಗೆ ತಮ್ಮಲ್ಲಿ ಕಾಮ, ಕ್ರೋಧ, ದಂಭ, ಅಹಂಕಾರಾದಿ ದುರ್ಗುಣಗಳ ರಾಶಿಯು ತುಂಬಿರುವದು. ತಮ್ಮ ತಪ್ಪು ಅನಂತಕೋಟಿ. ಆದರೆ ಭಗವಂತನ ಸೈರಣೆಗೆ ಲೆಕ್ಕವಿಲ್ಲ. ಭಗವಂತನು ತಮ್ಮ ಅವಗುಣಗಳನ್ನು ಲೆಕ್ಕಿಸದೆ, ಉತ್ತಮಿಕಿಯನೆ ಪೂರೈಸಬೇಕು. ಶರಣರ ಭಕ್ತಿಭಾಂಡಾರವನ್ನು ತಮಗೆ ದಯಪಾಲಿಸಬೇಕೆಂದು ಬಸವಣ್ಣನವರು ಬೇಡಿಕೊಂಡರು.
ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ ?
ಎಂತೋ ಶಿವಾಚರವೆನಗೆ ವೇದ್ಯವಪ್ಪುದಯ್ಯಾ ?
ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುಪಡೆದೆನು;
ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ ;
ಪಂಚೇಂದ್ರಿಯ, ಸಪ್ತಧಾತು.
ಹಂಚು ಹರು ಮಾಡಿ ಕಾಡಿಸುವಯ್ಯಾ !
ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ -
ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ ?
ಮೇರು ಗುಣವನರಸುವದೆ ಕಾಗೆಯಲ್ಲಿ ?
ಪರುಷ ಗುಣವನರಸುವದೆ ಕಬ್ಬುನದಲ್ಲಿ ?
ಸಾಧು ಗುಣವನರಸುವನೆ ಅವಗುಣಿಯಲ್ಲಿ ?
ಚಂದನ ಗುಣವನರಸುವದೇ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೇ, ನೀನೆನ್ನಲ್ಲಿ ಅವಗುಣವನರಸುವರೇ,
ಕೂಡಲಸಂಗಮನ ಶರಣರ ಭಕ್ತಿ ಭಂಡಾರವು
ಎನಗೆಂತು ಸಾಧ್ಯವಪ್ಪುದು ? ಹೇಳೆನ್ನ ತಂದೆ.
ತಮ್ಮ ವಿಕಾರಗಳನ್ನು ಅವಗುಣಗಳನ್ನು ಅಲ್ಲಗಳೆಯಲು ಭಗವಂತನು ತನ್ನ ಕರುಣದ ಬೆಂಬಲವನ್ನು ನೀಡಬೇಕೆಂದು ಆತನನ್ನು ಬಸವಣ್ಣನವರು ಬೇಡಿಕೊಂಡಂತೆ, ತಮ್ಮನ್ನು ಅತಿಯಾಗಿ ಕಾಡುತ್ತಿರುವ ಸಂಸಾರದ ಬಂಧನವನ್ನು ಕಡಿಯಲು ನೆರವಾಗಬೇಕೆಂದು ಆತನನ್ನು ಅವರು ಅಂಗಲಾಚಿ ಬೇಡಿಕೊಂಡರು.

103

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ :
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ !
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು;
ಇನ್ನೆಂದಿಗೆ ಮೋಕ್ಷವಹುದೋ ಕೂಡಲಸಂಗಮದೇವಾ!
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆಯುತಿದ್ದುದೇ ನೋಡಾ !
ಸಂಸಾರಸಾಗರಉರದುದ್ದವೇ ? ಹೇಳಾ !
ಸಂಸಾರಸಾಗರ ಕೊರಲುದ್ದವೇ ? ಹೇಳಾ !
ಸಂಸಾರಸಾಗರ ಸಿರಿದುದ್ದವಾದಬಳಿಕ ಏನ ಕೇಳುವೆನಯ್ಯಾ?
ಅಯ್ಯಾ ಅಯ್ಯಾ ! ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ ನಾನೇವೆನಯ್ಯಾ ?
ಎಂದೋ ಸಂಸಾರದ ದಂದುಗ ಹಿಂಗುವದು ?
ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ ?
ಎಂದೋ ಕೂಡಲಸಂಗಮದೇವಾ ಇನ್ನೆಂದೋ ?
ಪರಮಸಂತೋಷದಲ್ಲಿಹುದೆನಗೆಂದೋ ?
ಎಂಬುದಾಗಿ ಅವರು ಒಳ್ಳೆಯ ಕಳವಳಗೊಂಡು ಸಂಗಮನಾಥನನ್ನು ಕೇಳುವರು ಮತ್ತು ತನ್ನನ್ನು ನಡುನೀರಿನಲ್ಲಿ ಇಳಿಬಿಡದೆ, ಶಿವಪಥದಲ್ಲಿ ಇರಿಸಲು ಬಿನ್ನವಿಸುವರು. ಇಷ್ಟೇ ಅಲ್ಲ. ಶಿವನು ತನ್ನನ್ನು ಕಾಡಿಹನೆಂದು ಶರಣರಿಗೆ ದೂರು ಹೇಳುವರು :
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟೊಡೆ
ನಿಮ್ಮ ನಗುವರಯ್ಯಾ
ಶಿವಬಟ್ಟೆಯೊಳೆನ್ನನು ಇರಿಸಯ್ಯಾ ! ಹರನೇ ಹೊಲಬುಗೆಟ್ಟೆನು
ಬಟ್ಟೆಯ ತೋರಯ್ಯಾ !
ಹುಯ್ಯಲಿಟ್ಟೆನು “ಗಣಂಗಳು ಕೇಳಿರಯ್ಯಾ
ಕೂಡಲಸಂಗಮದೇವಯ್ಯಾನೆನ್ನ ಕಾಡಿಹನಯ್ಯಾ

104

ಆಮೇಲೆ ತಮ್ಮನ್ನು ಶರಣರ ಸಹವಾಸದಲ್ಲಿ ಇರಿಸಲು ಬಸವಣ್ಣನವರು ಭಗವಂತನನ್ನು ಪ್ರಾರ್ಥಿಸಿರು.
ಅಯ್ಯಾ ! ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದು
ಮಹಾನುಭಾವರ ಸಂಗದಿಂದ... ತನ್ನ ತಾನರಿಯಬಹುದು
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು.
ಮರಮರ ಮಂಥನದಿಂದ ಅಗ್ನಿ ಹುಟ್ಟಿ
ಆ ಮರವನೆಲ್ಲವ ಸುಡದಿಪ್ಪುದೇ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಮನ ಎಲ್ಲವ ಸುಡದಿಪ್ಪುದೇ ?
ಇದು ಕಾರಣ ಮಹಾನುಭಾವರ ತೋರಿಸು
ಕೂಡಲಸಂಗಮದೇವಾ !
ಆದುದರಿಂದ ಶರಣರ ಬರವು ಅವರಿಗೆ ಅಸುವಿನ ಬರವಿನಂತೆ ಪ್ರಿಯವಾಯಿತು. ಅವರದನ್ನು ಆತುರತೆಯಿಂದ ಕಾಯತೊಡಗಿದರು. ಸೂರ್ಯನ ಉದಯ ತಾವರೆಗೆ ಜೀವಾಳವಾದಂತೆ, ಚಂದ್ರಮನುದಯ ನೆಯ್ದಿಲೆಗೆ ಜೀವಾಳವಾದಂತೆ, ಶರಣರ ಬರವು ಅವರ ಪ್ರಾಣಜೀವಾಳವಾಯಿತು. ಅದರ ಮೂಲಕ,
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ ;
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ ;
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ! ಎಂದವರು ಉಸುರಿದರು.
ಇಂಥ ಪರಿಸ್ಥಿತಿಯಲ್ಲಿ ಶರಣರು ಬಂದಾಗ 'ಕರುಡ ಕಣ್ಣು ಪಡೆದಂತೆ, ಬಡವ ನಿಧಾನವ ಕಂಡಂತೆ ನೀರಡಿಸಿದವರ ನೀರ

105

ಕಂಡಂತೆ' ಅವರಿಗೆ ಹರುಷ ಆಯಿತು. ತಮಗವರ ಬರವಿನಿಂದುಂಟಾದ ಆನಂದಾತಿರೇಕವನ್ನು ಅವರು ಈ ರೀತಿ ಬಣ್ಣಿಸಿರುವರು :
ಸಾಸವೆಯ ಮೇಲೆ ಸಾಗರವರಿದಂತಾಯಿತ್ತಯ್ಯಾ
ಆನಂದದಿಂದ ನಲಿನಲಿದಾಡುವೆ,
ಆನಂದದಿಂದ ಕುಣಿಕುಣಿದಾಡುವೆ,
ಕೂಡಲಸಂಗನ ಶರಣರು ಬಂದರೆ,
ಉಬ್ಬಿ ಕೊಬ್ಬಿ ಹರುಷದಲೋಲಾಡುವೆ!
ಅಗ್ನಿ ದಿವ್ಯ :
ಮೇಲ್ಕಾಣಿಸಿದ ಮೇರೆಗೆ ಮಾಯೆಯ ಮೆರುಗಿನ ಸೆಳೆತದ ಫಲವಾಗಿ ಉಂಟಾದ ನೈತಿಕ ಕಳವಳದ ಕಡಲೊಳಗಿಂದ ಹಾದು ಬಸವಣ್ಣನವರು ಶರಣರ ಪಾವನನೆರೆಯಲ್ಲಿ ಕೆಲಕಾಲ ತಮ್ಮ ಸಾಧನವನ್ನು ಸಮಾಧಾನದಿಂದ ಸಾಗಿಸಿದರು. ಆದರೆ ಬೇಗನೆ ಇನ್ನೊಂದು ಅಗ್ನಿದಿವ್ಯವನ್ನು ಅವರು ಎದುರಿಸಬೇಕಾಯಿತು. ಪರಶಿವನು ಈ ಚೊಕ್ಕ ಚಿನ್ನವನ್ನು ಮರಳಿ ಅಗ್ನಿಯಲ್ಲಿ ಎಸೆದು ಪರೀಕ್ಷಿಸಿ, ಅದರ ಮೆರುಗನ್ನು ಕಾಂತಿಯನ್ನು ಬೆಳೆಸಲು ಹವಣಿಸಿದನು. ಅವನು ಬಸವಣ್ಣನವರ ತನುವನಲ್ಲಾಡಿಸಿ ನೋಡಿದ, ಮನವನಲ್ಲಾಡಿಸಿ ನೋಡಿದ, ಧನವನಲ್ಲಾಡಿಸಿ ನೋಡಿದ. ಆದರೆ ತಮ್ಮಲ್ಲಿಯ ಛಲದ ಬಲದಿಂದ ಬಸವಣ್ಣನವರು ಅದನ್ನು ಯಶಸ್ವಿಯಾಗಿ ಎದುರಿಸಿದರು :
ಬೇಡು ಬೇಡಲೆ ತಂದೆ ಬೇಡಿದ್ದ ನೀಡುವೆನು.
ತನುವ ಬೇಡಿದಡೀವೆ ; ಮನವ ಬೇಡಿದಡೀವೆ.
ಧನವ ಬೇಡಿದಡೀವೆ.
ಎಂದು ಅವರು ಬೇಡಿದ್ದನ್ನು ನೀಡಲು ಸಿದ್ಧರಾದರು, ನೀಡಿದರು. ಭಕ್ತಿ ಕಂಪಿತನಾದ ಭಗವಂತ ಅದರಿಂದ ಪ್ರೀತನಾದ ಅವರಿಗೆ ಅನನ್ಯತೆಯನ್ನು ದಯಪಾಲಿಸಿದ. ಅದರ ವಿವರಗಳು ಸಾಕಷ್ಟು ತಿಳಿದಿಲ್ಲ, ಅವರ ವಚನಗಳಲ್ಲಿಯ ಸೂಚಕ ನಿರ್ದೇಶಗಳಿಂದ ಕೆಲವನ್ನು

106 ಊಹಿಸಬೇಕಾಗಿದೆ.
ಬಸವಣ್ಣನವರ ತನುವಿಗೆ ಹಿಂಸೆಯ ಬೆದರಿಕೆ ಕಾಡಿದಂತೆ ಕಾಣುವದು. ಅದಕ್ಕವರು ಈ ಬಗೆಯ ಉತ್ತರವನ್ನು ಕೊಟ್ಟರು:
ಆಯುಷ್ಯ ತೀರಿದಲ್ಲದೆ ಮರಣವಿಲ್ಲ;
ಭಾಷೆ ತಪ್ಪಿದಲ್ಲದೆ ದಾರಿದ್ರವಿಲ್ಲ
ಅಂಜಲದೇಕೋ ಲೋಕವಿಗುರ್ಬಣಿಗೆ,
ಅಂಜಲದೇಕೊ, ಕೂಡಲಸಂಗಮದೇವಾ, ನಿಮ್ಮಾಳಾಗಿ?
ನಾಳೆ ಬಪ್ಪುದು ನಮಗಿಂದೆ ಬರಲಿ;
ಇಂದು ಬಪ್ಪುದು ನಮಗೀಗ ಬರಲಿ ;
ಇದಕಾರಂಜುವರು, ಇದಕಾರಳುಕುವರು?
“ಜಾತಸ್ಯ ಮರಣಂ ಧ್ರುವಂ ಎಂಬುದಾಗಿ,
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವರೆ
ಹರಿಬ್ರಹ್ಮಾದಿಗಳಿಗಳವಲ್ಲ!
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು, ಮರಣವೇ ಮಹಾನವಮಿ!
ತಮ್ಮ ದೃಢವಾದ ನಿರ್ಧಾರವನ್ನು ಕುರಿತು ಬಸವಣ್ಣನವರು ಸಂಗನಿಗೆ ಮತ್ತೂ ಹೇಳುವುದೇನೆಂದರೆ -
ಕಾಯದ ಕಳವಳಕ್ಕಂಜಿ - 'ಕಾಯಯ್ಯಾ' ಎನ್ನೆನು :
ಜೀವನೋಪಾಯಕ್ಕಂಜಿ, 'ಈಯಯ್ಯಾ' ಎನ್ನೆನು.
"ಯದ್ಭಾವಂ ತದ್ಭವತಿ ಉರಿ ಬರಲಿ! ಸಿರಿ ಬರಲಿ!
“ಬೇಕು, ಬೇಡ ನೆನಯ್ಯಾ,
ಆ ನಿಮ್ಮ ಹಾರುವೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ !
ಎನಿಸೆನಿಸೆಂದೊಡೆ ನಾ ಧೃತಿಗೆಡೆನಯ್ಯಾ;
ಎಲುದೋರಿದರೆ, ನರ ಹರಿದರೆ, ಕರುಳು ಕುಪ್ಪಳಿಸಿದರೆ,
ನಾ ಧೃತಿಗೆಡೆನಯ್ಯಾ.

107

ಸಿರ ಹರಿದು ಅಟ್ಟಿ ನೆಲಕ್ಕೆ ಬಿದ್ದರೆ
ನಾಲಗೆ ಕೂಡಲಸಂಗಾ, ಶರಣೆ” ನ್ನು ತಿದ್ದಿತಯ್ಯಾ !

ಇದಾಯಿತು ಸಂಗನು ತನುವನಲ್ಲಾಡಿಸಿದಾಗಿನ ಬಸವಣ್ಣನವರ ನಿರ್ಭಯ ನಿಲುಮೆಗೆ ಬಗೆ, ಲೋಕನಿಂದೆಯು, ಶರಣರ ಮತ್ಸರವು ಬಸವಣ್ಣನವರ ಮನಸ್ಸನ್ನು ಅಲ್ಲಾಡಿಸಲು ಯತ್ನಿಸಿತು. ಆದರೂ ಅವರು ಅದಕ್ಕೆ ಸೊಪ್ಪು ಹಾಕಲಿಲ್ಲ. 'ಭವಿ ಬಿಜ್ಜಳನನ್ನು ಅವರು ಓಲೈಸಿಹರು ಎಂದು ನಿಂದಿಸಿದರು ಶರಣರು. ನಾನದನ್ನು ಮಾಡಿದುದು ಸಂಗನ ನೆನಪಿಗಾಗಿ, ನನ್ನ ಒಡಲಿಗಾಗಲ್ಲ ಎಂದು ಅವರಿಗೆ ಉತ್ತರವಿತ್ತರು ಬಸವಣ್ಣನವರು. ಬಿಜ್ಜಳನ ಭಂಡಾರವನ್ನು ಬರಿದಾಗಿಸಿ ಜಂಗಮರನ್ನು ಆರಾಧಿಸಿದ ಎಂದು ಹಳಿದರು ಅವರ ನಿಂದಕರು, “ಸಂಗಮದೇವಯ್ಯನುಳ್ಳನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ? ಎಂದು ಖಂಡತುಂಡಾಗಿ ಹೇಳಿದರು ಬಸವಣ್ಣನವರು, ಬಸವಣ್ಣನವರ ಭಕ್ತಿಯ ವೈಭವವನ್ನು ಕಂಡು ಅನೇಕರ ಹೊಟ್ಟೆಯಲ್ಲಿ ಮತ್ಸರದ ಕಿಚ್ಚು ಉರಿಯತೊಡಗಿತು. 'ಮಚ್ಚರಿಸಿದರೇನು ಮಾಡಲಾಪರು ಎನ್ನ ಅಚ್ಯುತ, ನಿನ್ನಯ ಕೃಪೆ ಇರಲು? ಕಿಚ್ಚಿಗೆ ಇರುವೆ ಮುತ್ತುವವೇ? ಎಂದು ದಾಸರಾಯರು ಉಸುರಿದ ಮೇರೆಗೆ ಬಸವಣ್ಣನವರು ಕೂಡ,

ಆರು ಮುನಿದು ನಮ್ಮನೇನು ಮಾಡುವರು?
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲದೆ?

ಎಂದು ಕೇಳಿದರು.
ಇನ್ನು ಧನವನಲ್ಲಾಡಿಸಿದ ವಿಷಯ. ಬಸವಣ್ಣನವರ ಔದಾರ್ಯದ ಕೀರ್ತಿಯನ್ನು ಕೇಳಿದ ಜಂಗಮರು ಅವರನ್ನು ಪರಿಪರಿಯಾಗಿ ಬೇಡಿ ಕಾಡಿದರು. ಸಿಕ್ಕದ್ದನ್ನು ಬೇಡಿದರು. ಕಂಡಕಂಡದ್ದನ್ನು ಬೇಡಿದರು. ಅದನ್ನೆಲ್ಲ ಬಸವಣ್ಣನವರು ಅವರಿಗೆ ನೀಡಲೆತ್ನಿಸಿದರು. ಕೊನೆಗೆ ಕೆಲ ಮಿಂಡ ಜಂಗಮರು ಅವರ ಪತ್ನಿಯನ್ನು ಬೇಡಲು ಕೂಡಾ ಹಿಂಜರಿಯಲಿಲ್ಲ, ಹೇಸಲಿಲ್ಲ. ಅವಳನ್ನು ಕೊಡಲು ಅವರು ಸಿದ್ಧರಾದಾಗ ಸಂಗನು ಅವರ ಮರ್ಯಾದೆಯನ್ನು ಉಳಿಸಿದ. ಕಳ್ಳರು ಅವರ

108
ಗೋವುಗಳನ್ನು ಕದ್ದಾಗ ಬಸವಣ್ಣನವರು ಅವರಿಗೆ ಕರುಗಳನ್ನು ಒಪ್ಪಿಸಲು ತಮ್ಮ ಸೇವಕರನ್ನು ಆಜ್ಞಾಪಿಸಿದರು. ಹೆಂಡತಿಯ ಆಭರಣಗಳನ್ನು ಕದಿಯಬಂದಾಗ ಅವರಿಗೆ ಅವನ್ನು ತೆಗೆದುಕೊಡಲು ಬಸವಣ್ಣನವರು ಪತ್ನಿಗೆ ಹೇಳಿದರು. ಈ ಬಗೆಯಾಗಿ ಅವರು ಈ ತ್ರಿವಿಧ ಅಗ್ನಿದಿವ್ಯದೊಳಗಿಂದ ಸುರಕ್ಷಿತ ಪಾರಾದರು. ತಮ್ಮ ಅಚಲ ಭಕ್ತಿಯಿಂದ ಸಂಗನ ಹೃದಯವನ್ನು ಕರಗಿಸಿ ಆತನಿಂದ ಕರುಣದ ಸುಧೆಯನ್ನು ಪಡೆದರು.
ನಿಜವಾಗಿ ಭಕ್ತಿ ಎಂಬುದು ಮಾಡಬಾರದು, ಮಾಡಲು ಬಾರದಂತಹದು. ಅದು ಕರಗಸದಂತೆ ಹೋಗುತ್ತ ಕೊಯ್ಯುವುದು, ಬರುತ್ತ ಕೊಯ್ಯುವುದು. ಅದು ಘಟಸರ್ಪನಲ್ಲಿ ಕೈ ದುಡಿಕಿದಂತೆ. ಅದಕ್ಕಾಗಿಯೇ 'ಹರಿನೋ ಮಾರಗ ಛೇ ಶೂರಾನೊ ಹರಿಯನ್ನು ಪಡೆಯುವ ಪಂಥವು ಶೂರರದು, ಹೇಡಿಗಳದಲ್ಲ ಎಂದು ಗುಜರಾತ ಪ್ರೀತಮ್ ಸಂತಕವಿಯು ಅರುಹಿದ ಮೇರೆಗೆ ಅದೊಂದು ಅಸಿಧಾರಾವ್ರತ. ಅದನ್ನು ಛಲವುಳ್ಳ ವೀರರೇ ನೆರವೇರಿಸಬಲ್ಲರು.
ಆತ್ಮಾರ್ಪಣ ಅನನ್ಯತೆ :
ಅಂದಿನಿಂದ ಬಸವಣ್ಣನವರು ಪೂರ್ತಿಯಾಗಿ ಸಂಗನಿಗೆ ಶರಣುಹೋದರು. ತಮ್ಮ ವಾಮ-ಕ್ಷೇಮ, ಹಾನಿ-ವೃದ್ಧಿ ಮಾನಾಪಮಾನ, ಎಲ್ಲವೂ ಸಂಗನ ಹೊಣೆಯೆಂದು ಭಾವಿಸಿದರು. ಸಂಗನಿಗೆ ತಮ್ಮ ಸರ್ವಸ್ವವನ್ನು ಅರ್ಪಿಸಿ, ಅನನ್ಯರಾದರು. ತಮ್ಮ ದೇಹವನ್ನೆ ದೇಗುಲ ಮಾಡಿ ಅಲ್ಲಿ ಸಂಗನನ್ನು ಆತ್ಮ ಲಿಂಗವನ್ನು ಆರಾಧಿಸಿದರು.
ಉಳ್ಳವರು ಶಿವಾಲಯವ ಮಾಡುವರು ;
ನಾನೇನ ಮಾಡುವೆ ? ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಸಿರ ಹೊನ್ನಕಳಸವಯ್ಯಾ.
ಕೂಡಲಸಂಗಮದೇವ, ಕೇಳಯ್ಯಾ :
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ !

109

ಅದೇ ಮೇರೆಗೆ ಅವರು ತಮ್ಮ ದೇಹವನ್ನೇ ಒಂದು ವೀಣೆಯನ್ನಾಗಿ ಮಾಡಿ ಅದರೊಳಗಿಂದ ಮಧುರ ಸಂಗೀತವನ್ನು ನುಡಿಸಲು, ಹೊರಡಿಸಲು, ಬಸವಣ್ಣನವರು ಸಂಗನಿಗೆ ಬೇಡಿಕೊಂಡರು :
ಎನ್ನ ಕಾಯುವ ದಂಡಿಗೆಯ ಮಾಡಯ್ಯಾ ;
ಎನ್ನ ಸಿರವ ಸೋರೆಯ ಮಾಡಯ್ಯಾ ;
ಎನ್ನ ನರವ ತಂತಿಯ ಮಾಡಯ್ಯಾ ;
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಹಾಡಯ್ಯಾ; ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ !
ತಮ್ಮ ಸರ್ವಸ್ವವನ್ನು ಈ ರೀತಿ ಪರಮಾತ್ಮನಿಗೆ ಅರ್ಪಣ ಮಾಡಿ ಆತನೊಡನೆ ಅನನ್ಯರಾಗಿ, ಬಸವಣ್ಣನವರು ಆತನ ನೆನವಿನಲ್ಲಿಯೆ ಸಂತತವಾಗಿ ರತರಾಗಲು ಬಯಸಿದರು. ಪರಮಾತ್ಮನ ನೆನವೆಂದರೆ ಆತನ ನಾಮದ ನೆವು, ಆತನ ರೂಪದ-ಲಿಂಗದ ನೆನವು, ಕರಿಯು ಅಂಕುಶಕ್ಕೆ ಅಂಜುವಂತೆ, ಗಿರಿಯು ಕುಲಿಶಕ್ಕೆ ಅಂಜುವಂತೆ, ತಮಂಧವು ಜ್ಯೋತಿಗೆ ಅಂಜುವಂತೆ, ಕಾನನವು ಬೇಗೆಗೆ ಅಂಜುವಂತೆ, ಪಾತಕವು ಸಂಗನ ನಾಮಕ್ಕೆ ಅಂಜುವದು. ಆದ್ದರಿಂದ,
ಎದೆ ಬಿರವನ್ನಕ್ಕ, ಮನದಣಿವನ್ನಕ್ಕ,
ನಾಲಿಗೆ ನಲಿದಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದಿರಿಸು ಕಂಡಯ್ಯಾ ಎನಗೆನ್ನ ತಂದೇ!
ಬಿರಿಮುಗಳಂದದಿ ಎನ್ನ ಹುದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದ ಕಳುಗೆ,
ಕೂಡಲಸಂಗಮದೇವಾ !
ಎಂದು ಅವರು ಸಂಗನನ್ನು ಬೇಡಿಕೊಂಡರು. ಹಾಗೂ 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಜಪಿಸಹತ್ತಿದ್ದರು. ಅದೇ ಮೇರೆಗೆ “ಅಂಗೈಯೊಳಗಣ ಲಿಂಗವ ನೋಡುತ್ತಿರಲು ಅವರ ಕಂಗಳಿಂದ

ಅಶ್ರುಗಳು ಸುರಿಯತೊಡಗಿದವು. ಲಿಂಗದ ನೋಡ-ಕೂಟವೇ ಅವರ ಪ್ರಾಣವಾಯಿತು.
ಬಸವಣ್ಣನವರು “ಜಾಗೃತಿ, ಸ್ವಪ್ನ ಸುಷುಪ್ತಿಯಲ್ಲಿ ಸಂಗನನ್ನಲ್ಲದೆ ಅನ್ಯನ ನೆನೆಯಲಿಲ್ಲ”. ಅವರಿಗೆ ಸಂಗನ ನೆನಹವೇ ಉದಯ, ಮರಹವೇ ಅಸ್ತಮಾನವಾಯಿತು. ಆತನ ನೆನಹವೇ ಜೀವನ ಪ್ರಾಣವಾಯಿತು. ಮತ್ತು ತಮ್ಮ ಇಡೀ ಜೀವನದಲ್ಲಿ ಆತನನ್ನು ತುಂಬಿ ಅವರು ತುಂಬಿಯಾದರು :
ವನಚದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನವು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಕೂಡಲಸಂಗಮದೇವಾ ನಿಮ್ಮ
ಚರಣಕಮಲದಲಾನು ತುಂಬಿ.
ಹೀಗಾಗಿ ಅವರು ಸಂಗನ ನೆನಹು- ಪೂಜೆಗಳಲ್ಲಿ ಮೇಲಿಂದ ಮೇಲೆ ಮೈಮರೆಯತೊಡಗಿದರು.
ವಾರವೆಂದರಿಯೆ ದಿನವೆಂದರಿಯೆ ;
ಏನೆಂದರಿಯೆನಯ್ಯಾ !
ಇರುಳೆಂದರಿಯೆ, ಹಗಲೆಂದರಿಯೆ, ಏನೆಂದರಿಯೆನಯ್ಯಾ !
ನಿಮ್ಮವ ಪೂಜಿಸಿ ಎನ್ನುವ ಮರೆದೆ,
ಕೂಡಲಸಂಗಮದೇವಾ !
ಎಂಬುದಾಗಿ ಅವರು ಈ ಮೈಮರೆವಿನ ಸ್ಥಿತಿಯನ್ನು ಬಣ್ಣಿಸಿರುವರು.
ಸಾಕ್ಷಾತ್ಕಾರ :
ಪರಮಾತ್ಮನ ಅನನ್ಯ ಚಿಂತನದಿಂದ ಸಾಧಕನಲ್ಲಿಯ ಅಂತಃಪ್ರಜ್ಞೆಯು ಜಾಗೃತವಾಗಿ, ಅವನಿಗೆ ಆತನ ನಾದಬಿಂದು ಕಳೆಗಳ ಅತೀಂದ್ರಿಯ

111

ಅನುಭವವು ಬರತೊಡಗುವುದು. ನಾದವೆಂದರೆ ಧ್ವನಿ, ಬಿಂದುವೆಂದರೆ ರೂಪ, ಹಾಗೂ ಕಳೆ ಅಂದರೆ ಬೆಳಕು. ಇವೆಲ್ಲ ಅತೀಂದ್ರಿಯವಾದವು. ಇವೇ ಬರಬರುತ್ತ ಬೆಳೆದು ಸಾಧಕನಲ್ಲಿ ಆನಂದ, ಪರವಶತೆ ಮತ್ತು ಸಾಮರಸ್ಯಗಳನ್ನು ಹುಟ್ಟಿಸುವವು. ಬಸವಣ್ಣನವರ ಕೆಲ ವಚನಗಳಲ್ಲಿ ಇವುಗಳ ಕುರುಹುಗಳನ್ನು ಕಾಣಬಹುದು. ಇವು ಕೂಡ ಅವರ ಇಡಿ ಅನುಭಾವದ ಆಳ, ಅಗಲ, ಎತ್ತರಗಳನ್ನು ಅರುಹಬಲ್ಲವು.
ತಮಗೆ ಲಭಿಸಿದ ರೂಪದ ಅನುಭವವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :

ಎತ್ತೆತ್ತ ನೋಡಿದತ್ತತ್ತ ನೀನೇ ದೇವಾ :
ಸಕಲ ವಿಸ್ತಾರದ ರೂಹು ನೀನೇ, ದೇವಾ ;
ವಿಶ್ವತೋಚುಕ್ಷು ನೀನೇ ದೇವಾ, ವಿಶ್ವತೋಮುಖ ನೀನೇ ದೇವಾ;
ವಿರತೋಬಾಹು ನೀನೇ ದೇವಾ
ವಿಶ್ವತೋಪಾದ ನೀನೇ ದೇವಾ ; ಕೂಡಲಸಂಗಮದೇವಾ,
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ;
ಪಾತಳದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ.
ಅಗಮ್ಯ ಅಗೋಚರ ಅಪ್ರತಿಪ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ!


ತಮ್ಮ ಅನಾಹತ ನಾದದ ಸ್ವರೂಪವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :

ಸುನಾದ ಬಿಂದು ಪ್ರಣವಮಂತ್ರ ಅಗ್ರದ ಕೊನೆಯಲೈದುವುದೆ;
'ಸೋಹಂ'೨೭ ಸೋಹಂ' ಎಂದೆನುತಿದ್ದಿತ್ತು;
'ಕೋಹಂ' ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ;


೨೭. 'ಸೋಹಂ' ಎಂಬುದು ಅನುಭಾವ; 'ದಾಸೋಹಂ' ಎಂಬುದು ವೃತ್ತಿ ಒಂದು ಸಾಧ್ಯ ಇನ್ನೊಂದು ಸಾಧನ.

“ಯತೋ ವಾಚೋ ನಿವರ್ತಂತೇ । ಅಪ್ರಾಪ್ಯಮನಸಾ ಸಹ ।
ಆನಂದಂ ಬ್ರಹ್ಮಣೋ ವಿದ್ವಾನ್ । ನ ಬಿಭೇತಿ ಕದಾ ಚ ನ”
ಇಂತೆಂದುದಾಗಿ
ಅಗಮ್ಯ ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲಾ!
ಬಸವಣ್ಣನವರು ತಾವು ಕಂಡ ಭಗವಂತನ ಮಹಾ ಬೆಳಕನ್ನು ಮೂರು
ನಾಲ್ಕು ವಚನಗಳಲ್ಲಿ ಈ ಬಗೆಯಾಗಿ ಬಣ್ಣಿಸಿರುವರು:
ಬೆಳಗಿನೊಳಗಣ ಬೆಳಗು, ಮಹಾಬೆಳಗು!
ಶಿವಶಿವಾ; ಪರಮಾಶ್ರಯವೇ ತಾನಾಗಿ
ಶತಪತ್ರ ಕಮಳಕರ್ಣಿಕಾಮಧ್ಯದಲ್ಲಿ
ವಸ್ವತಃಸಿದ್ಧನಾಗಿರ್ಪ ನಮ್ಮ ಕೂಡಲಸಂಗಮದೇವ.
ಘನಗಂಭೀರ ಮಹಾಘನದೊಳಗಿನ ಘನಕ್ಕೆ
ಘನವಾಗಿದ್ದೆನಯ್ಯಾ,
ಕೂಡಲಸಂಗಮದೇವಯ್ಯನೆಂಬ ಮಹಾ ಬೆಳಗಿನ
ಬೆಳಗಿನೊಳಗಿದ್ದೆನೆಂಬ
ಶಬ್ದ ಮುಗ್ಧವಾದುದೇನೆಂಬೆನಯ್ಯಾ?
ಸಮಸ್ತ ಕತ್ತಲೆಯ ಮಸಕ ಕಳೆದಿಪ್ಪ ಇರುವ ನೋಡಾ!
ಬೆಳಗಿಂಗೆ ಬೆಳಗು ಸಿಂಹಾಸನವಾಗಿ,
ಬೆಳಗು ಬೆಳಗ ಕೂಡಿದ ಕೂಟವ
ಕೂಡಲಸಂಗಯ್ಯ ತಾನೇ ಬಲ್ಲ
ಈ ಬಗೆಯ ಉಜ್ವಲ ಅನುಭಾವದಿಂದ ಬಸವಣ್ಣನವರ ಅಂತರಂಗವು ಆನಂದಭರಿತವಾಯಿತು. ಆ ಪರಮಾನಂದವು ಉಕ್ಕಿ ಅವರ ವಚನಗಳಲ್ಲಿ ಈ ರೀತಿ ಹರಿಯಿತು:
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬೆ?
ಕಡೆಗೋಡಿವರಿದುವೆನಗಯ್ಯಾ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವ ನಾನಾರಿಗೇನೆಂಬೆ?

ನಿಮ್ಮ ನೋಟವನಂತಸುಖ, ಕೂಟ ಪರಮಸುಖ!
ಅವುಟು ಕೋಟಿ ರೋಮಂಗಳೂ ಕಂಗಳಾಗಿ ನೋಡುತ್ತಿದ್ದನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿ ಹುಟ್ಟಿ ನಿಮಿರ್ದುವನ್ನ ಕಳೆಗಳು!
ಬೆಳಗದೊಳಗಳ ಬೆಳಗು ಮಹಾಬೆಳಕೆಂಬ
ಪ್ರಸಾದದಲ್ಲೊದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ?
ಬಸವಣ್ಣನವರು ಇಂಥ ಅದ್ವಿತೀಯವಾದ ಅನುಭಾವದಲ್ಲಿಯೂ, ಆನಂದದಲ್ಲಿಯೂ ತುಂಬ ಮೈಮರೆದಿರುವದು ತೀರ ಸಹಜ. ಅದನ್ನವರ ಮುಂದಿನ ವಚನಗಳಲ್ಲಿ ಕಾಣಬಹುದು:
ಕಣ್ಣಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ.
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಂತ ಕೂಡಲಸಂಗಮದೇವನ!
ದಶದಿಕ್ಕು ಧರೆಗಗನವೆಂಬುದ ನಾನರಿಯೆನಯ್ಯಾ
“ಲಿಂಗಮಧ್ಯೆ ಜಗತ್ ಸರ್ವಂ' ನಾನರಿಯೆನಯ್ಯಾ
ಲಿಂಗಸೋಂಕಿನ ಸುಖದೊಳಗೆ ಕೂಡಲಸಂಗಮದೇವಯ್ಯಾ
ಅಂಬುಧಿಯೊಳಗೆ ಬಿದ್ದ ಆಲಿಕಲ್ಲಿನಂತೆ
ಭಿನ್ನಭಾವವರಿಯದೆ 'ಶಿವಶಿವಾ' ಎನ್ನುತ್ತಿರ್ದೆನು ನಾನು.
ಕೊನೆಗೆ ತಮ್ಮ ಸಾಮರಸ್ಯದ ದಿವ್ಯ ಅನುಭಾವವನ್ನು ಬಸವಣ್ಣನವರು, ಈ ಬಗೆಯಾಗಿ ಅರುಹಿರುವರು:
ಲಿಂಗವ ಪೂಜಿಸಿ ಫಲವೇನಯ್ಯಾ?
ಸಮರತಿ, ಸಮಕಳೆ, ಸಮಸುಖವರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ?
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿಯೆ ಬೆರಸಿದಂತಾಗದನ್ನಕ್ಕ?

114
ಸ್ವಯಂ ಲಿಂಗದನುಭಾವ ತನಗೆ ದೊರೆಕೊಂಡಬಳಿಕ
ದೇವಲೋಕವೆಂಬುದೇನೋ, ಮರ್ತ್ಯಲೋಕವೆಂಬುದೇನೋ ?
ಆವುದರಲ್ಲಿಯೂ ಭೇದವೇನಯ್ಯಾ?
ಏನೆಂಬೆ, ಏನೆಂಬೆ ಒಂದೆರಡಾದುದ ?
ಏನೆಂಬೆ ಏನೆಂಬೆ ಎರಡೊಂದಾದುದ ?
ಏನೆಂಬೆ ಏನೆಂಬೆ ಅವಿರಳ ಘನವ
ಅಂತರಂಗ ಬಹಿರಂಗ ಆತ್ಮಸಂಗ ಒಂದೇ ಅಯ್ಯಾ,
ನಾದಬಿಂದ ಕಳಾತೀತ ಆದಿಯಾಧಾರ ನೀನೆ ಅಯ್ಯಾ,
ಆರೂಢದ ಕೂಟದ ಸುಖವ ಕೂಡಲಸಂಗಯ್ಯಾ ತಾನೆ ಬಲ್ಲ
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ
ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು ಕಂಡಯ್ಯಾ
ಕರಿಯು ಕನ್ನಡಿಯೊಳಡಗಿದಂತಯ್ಯಾ
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ !

ಅಲೆ : ಏಳು

ಬೋಧಸುಧೆ

ರೂಪರೇಷೆ :
ಅರಿತು ಶರಣರಾದ ಬಸವಣ್ಣನವರು ಮರವಿನಲ್ಲಿ ಮಲಗಿದ ಮರೆತ ಮಾನವರನ್ನು ಎಚ್ಚರಿಸಿದರು. ಅಯ್ಯಾ, ಸಂಸಾರವು ಗಾಳಿಯ ಸೊಡರು !
ಅದನ್ನು ಶಾಶ್ವತವೆಂದು ನಂಬಿ ಕೆಡಬೇಡ, ಭಗವಂತನನ್ನು ಭಜಿಸು' ಎಂದು ಬೋಧಿಸಿದರು. ಭಗವಂತನನ್ನು ಪಡೆಯಲು ಅವರು ನೀತಿ-ಭಕ್ತಿಗಳ ಸಾಧನವನ್ನು ಅರುಹಿದರು. ಅದನ್ನು ಬಲ್ಲ ಸದ್ಗುರುಗಳಿಂದ ಅರಿತು ಆಚರಿಸಲು ತಿಳಿಸಿದರು. ನೀತಿಯು ಭಕ್ತಿಯ ನೆಲ. ಭಕ್ತಿಯು ನೀತಿಯ ಫಲ. ಸತ್ಯ, ಪ್ರೇಮ, ಸಂಯಮಗಳು ನೀತಿಯ ಪ್ರಧಾನ ಅಂಗಗಳಿರುವಂತೆ ತ್ರಿವಿಧ ದಾಸೋಹಗಳು ಬಸವಣ್ಣನವರ ಭಕ್ತಿಯ ಪ್ರಧಾನ ಅಂಗಗಳು. ಅದನ್ನು ಚೆನ್ನಾಗಿ ಮಾಡಲೇಬೇಕು. ಅದನ್ನು ಭಾವಪೂರ್ಣವಾಗಿ ತನು ಉಕ್ಕಿ ಮನ ಉಕ್ಕಿ ಮಾಡಬೇಕು. ಮಾಡಿದೆನೆಂಬುದು ಮನದಲ್ಲಿ ಮೂಡಕೂಡದು. ಅಂಥ ಅನನ್ಯ ಜಪಧ್ಯಾನಗಳಿಂದ ಪರಮಾತ್ಮನ ಅನುಭಾವ- ಆನಂದಗಳನ್ನು ಪಡೆದು, ಶರಣರ ಆದರ್ಶ ಜೀವನವನ್ನು ಬಾಳಲು ಕಲಿಯಬೇಕು. ಅದೇ ಎಲ್ಲರ ಆದರ್ಶವಾಗಬೇಕು, ಎಂಬ ಅವರ ಬೋಧೆಯನ್ನು ಬಸವಣ್ಣನವರ ವಚನಗಳ ನೆರವಿನಿಂದಲೇ ಮುಂದೆ ವಿವರಿಸಲು ಯತ್ನಿಸಲಾಗಿದೆ.
ಉತ್ತಿಷ್ಠ! ಜಾಗೃತ!!
ಏಳಿರಿ ! ಎಚ್ಚರಾಗಿರಿ ! ಎಂಬುದು ಉಪನಿಷತ್ ಕಾಲದಿಂದ ಅನೇಕ ಸಂತಮಹಂತರು ಮನವರಿಗೆ ಇತ್ತ ಕರೆ, ಮರೆವುಳ್ಳ ಮಾನವರಿಗೆ ಮಾಯೆಯ ಮೋಹವು ಆವರಿಸಿರುವದು. ಅವರು ಮೋಹನಿದ್ರೆಯಲ್ಲಿ

116
ಮೈಮರೆತ ಮೂಲಕ ವಿಷಯವಿಷವನ್ನು ಅಮೃತವೆಂದು ಭಾವಿಸುವರು. ಅಳಿವ ಸಿರಿಯನ್ನು ಸ್ಥಿತ ಎಂದು ಬಗೆವರು. ಕಾಯವೇ ತಾವು, ಕಾಯಸುಖವನ್ನು ಪಡೆಯುವದೇ ತಮ್ಮ ಪರಮ ಗುರಿಯೆಂಬ ಭಾವನೆಯಿಂದ ಅವರು ಸಂಸಾರಸುಖವನ್ನು ಗಳಿಸಲು ಸಾರಿ, ಅದರ ಸೆಳವಿನಲ್ಲಿ ಸಿಲುಕಿ ಬಳಲುತ್ತಿರುವರು. ಮರುವಿನ ಮೂಲಕ ಅವರಿಗೆ ಅದರ ಅರಿವು, ಪರಿವೆ ಇರುವುದಿಲ್ಲ. ಆದರೆ ಅವರ ಈ ಮರುಳುತನವನ್ನು ಕಂಡು ಅರಿತ ಶರಣರು, ಮಹಾತ್ಮರು, ಮರಗುವರು... ಅವರನ್ನು ಎಚ್ಚರಿಸಲೆತ್ನಿಸುವರು. ಅವರಿಗೆ ನಿಜವಾದ ಆನಂದದ ದಾರಿಯನ್ನು ಕಾಣಿಸುವರು. ತಮ್ಮ ಬಾಳಿನ ಹಾಗೂ ಬೋಧೆಯ ಬೆಳಕನ್ನು ನೀಡಿ, ಶರಣರು ಅವರನ್ನು ಆ ದಾರಿಯಿಂದ ಕರೆದೊಯ್ಯುವರು. ಅವರಿಗೆ ತಾವು ಕಂಡ ದಿವ್ಯಾನಂದದ ಸವಿಯನ್ನು ಉಣಿಸುವರು.
ಬಸವಣ್ಣನವರು ಅದನ್ನೇ ಮಾಡಿದರು. ಮೊದಲು ಅವರು ಸಂಸಾರದ ಸಿರಿಯು ಸ್ಥಿರವಲ್ಲ ಅದನ್ನು ನೆಮ್ಮಿ ಕೆಡಬೇಡಿರಯ್ಯಾ! ನಿಮಗೆ ಕೇಡಿಲ್ಲದ ಶಾಶ್ವತಜೀವನವು ಬೇಕಾಗಿದ್ದರೆ ಸಂಗನನ್ನು ಭಜಿಸಿರಿ, ಎಂದು ಜನರಿಗೆ ಸಾರಿ ಹೇಳಿದರು :
ಎಲೆ ಎಲೆ ಮಾನವಾ ಅಳಿಯಾಸೆ ಬೇಡವೋ !
ಕಾಳಬೆಳದಿಂಗಳು ಸಿರಿ ಸ್ಥಿರವಲ್ಲ !
ಕೇಡಿಲ್ಲದ ಪದವಿ, ಕೂಡಲಸಂಗಮದೇವನ ಮರೆಯದೆ ಪೂಜಿಸೋ.
ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ !
ಇದ ನೆಚ್ಚಿ ಕೆಡಬೇಡ - ಸಿರಿಯೆಂಬುದ
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
ಸಂಸಾರವು ಅಸ್ಥಿರವಿರುವಂತೆ, ನಮ್ಮ ದೇಹವು ಕೂಡ ಅಸ್ಥಿರವಿರುವದು. ಅದು ಎಂದು ಅಳದೀತೆಂಬುದನ್ನು ಹೇಳಲು ಬರುವದಿಲ್ಲ. ಆದರೂ ಜನರು ಅದನ್ನು ಬಗೆಬಗೆಯ ಸಾಧನಗಳಿಂದ ಅಳಿಯದಂತೆ ಮಾಡಲು

ಹೆಣಗುವರು. ಈ ನಿಮ್ಮ ಯತ್ನವು ವ್ಯರ್ಥವಯ್ಯಾ. ಆದುದರಿಂದ ದೇಹದ ಈ ಹೊಲಸು ಜನನ ಮರಣದ ಚಕ್ರದಿಂದ ನೀವು ಪಾರಾಗಬೇಕಾದರೆ ಸಂಗನನ್ನು ಭಜಿಸಿರಯ್ಯಾ, ಎಂಬುದು ಬಸವಣ್ಣನವರ ಹೇಳಿಕೆ.

ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ !
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕುವೋ ಕಾಯವ ನಿಶ್ಚಯಿಸದೆ !
ಉತ್ಪತ್ತಿ ಶುಕ್ಲ ಶೋಣಿತದಿಂದಾದ ಲಜ್ಜೆ ಸಾಲದೇ ?
ಮತ್ತೆ ದುರಂತಂಗಳ ಹೊರುವ ಹೆಗ್ಗತನವೇಕಯ್ಯಾ ?
ಮೃತ್ಯುವಿನ ಬಾಯಿಗೆ ತುತ್ತಾಗಲೇಕೆ ?
ಒತ್ತೊತ್ತೆಯ ಜನನವ ಗೆಲವೊಡೆ ಕರ್ತನ ಪೂಜಿಸು
ನಮ್ಮ ಕೂಡಲಸಂಗಮದೇವನ.

ಇನ್ನು ವಿಷಯಸುಖದ ನೈಜಸ್ವರೂಪವನ್ನು ಅವರು ಹೇಗೆ ಬಣ್ಣಿಸಿರುವರು ನೋಡಿ :

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು;
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆಯ ಹೋಯಿತ್ತಲ್ಲದೆ,
ಅದಂದೇ ಹುಟ್ಟಿತ್ತು. ಅದಂದೇ ಹೊಂದಿತ್ತು.
ಕೊಂಡವರುಳಿದರೆ ಕೂಡಲಸಂಗಮದೇವಾ?
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆ ಮಾಡುವಂತೆ,
ಸೂಲವನೇರುವ ಕಳ್ಳನು ಹಾಲುತುಪ್ಪವ ಕುಡಿದು
ಮೇಲೇಸು ಕಾಲ ಬದುಕುವನೋ ?
ಕೆಡುವೊಡಲ ನಚ್ಚಿ ಕಡುಹುಸಿಯನೆ ಹಸಿದು, ಒಡಲ ಹೊರೆವರ
ಕೂಡಲಸಂಗಮದೇವನವರನ್ನೆಲ್ಲ ಕಾಣಿರಣ್ಣಾ !

118
ಮೇಲಾಗಿ ಇಂಥ ಭೌತಿಕಸುಖವನ್ನಾದರೂ ನೀಡುವವರಾರು ? ಭಗವಂತನನ್ನು ಉಳಿದು ಅದನ್ನು ಅದನ್ನು ಯಾರೂ ನೀಡಲರಿಯರೆಂಬುದನ್ನು ಮರೆಯಲು ಆಗದು. ಬೇರಾರೂ ಅದನ್ನು ಕೊಡಲರಿಯರು. “ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳ ಇಲ್ಲ ! ಭಗವಂತನೊಬ್ಬನೆ ಜಗದ ನಂಟ, ಆದುದರಿಂದ ಆತನನ್ನೇ ಬೇಡಬೇಕು ಎಂದು ಬಸವಣ್ಣನವರು ಬೋಧಿಸಿರುವರು.
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದೊಡಿಲ್ಲ ಕಂಡಯ್ಯಾ !
ತಾಳಮರಕ್ಕೆ ಕೈಯ ನೀಡಿ,
ಮೇಲೆ ನೋಡಿ, ಗೋಣು ನೊಂದುದಯ್ಯಾ !
ಕೂಡಲಸಂಗಮದೇವಾ, ಕೇಳಯ್ಯಾ,
ನೀವೀನ ಕಾಲಕ್ಕಲ್ಲದಿಲ್ಲ ಕಂಡಯ್ಯಾ.
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯೆ ಕೆರೆ ತುಂಬಿದಂತಯ್ಯಾ
ನೆರೆಯದ ವಸ್ತು ನೆರೆವುದು ನೋಡಯ್ಯಾ.
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ
ಕಲ್ಲು ಕೊಂಡಂತೆ, ಕೂಡಲಸಂಗಮದೇವಾ
ಆದುದರಿಂದ
ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡವೋಗದ ಮುನ್ನ
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು ನಮ್ಮ ಕೂಡಲಸಂಗಮದೇವನ.
ಎಂದು ಬಸವಣ್ಣನವರು ಕಳಕಳಿಯಿಂದ ಬೋಧಿಸಿರುವರು.

ಶರಣರ ಮಾರ್ಗದರ್ಶನ :
ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಶರಣರೇ ಗುರುಗಳಾಗಿ ಮತ್ತು ಜಂಗಮರಾಗಿ ಭಕ್ತರನ್ನು ಅನುಗ್ರಹಿಸಿ ಅವರಿಗೆ ಅದನ್ನರಿವ ದಾರಿಯನ್ನು ಸಾಧನವನ್ನು ಅರುಹುವರು. 'ಹರ ತನ್ನೊಳಿರ್ದು ಗುರು ತೋರದೆ ತಿಳಿವುದೆ? ಎಂದು ಸರ್ವಜ್ಞ ಕೇಳುವ, 'ಗುರುವಿಲ್ಲದೇ ಕುರುಹಿಲ್ಲದಾ? ಎಂದು ಬೇರೋಬ್ಬ ಶರಣರು ಕೇಳಿರುವರು. “ಶಿವಪಥವನರಿವಡೆ ಗುರುಪಥವೆ ಮೊದಲು. ಸಂಗಮದೇವರನರಿವಡೆ, ಶರಣರ ಸಂಗವೇ ಮೊದಲು ಎಂದು ಅರುಹಿರುವರು ಬಸವಣ್ಣನವರು.
ಗುರೂಪದೇಶ ಮಂತ್ರವೈದ್ಯ:
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಗೆಲುವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.
ಸದ್ಗುರು ಅನುಗ್ರಹಿಸಿದ ಮಂತ್ರದಿಂದ ಭವಬಾಧೆ ಅಳಿಯುವದು, ಪರತತ್ತ್ವ ಹೊಳೆಯುವದು. ಶರಣರ ದಿವ್ಯ ಅನುಭಾವವು ಅವರ ಸಹವಾಸದಲ್ಲಿರುವ ಭಕ್ತರ ಕಲ್ಮಲಗಳನ್ನೆಲ್ಲ ಅಳಿಸಿ ಆತನನ್ನು ಪರಿಶುದ್ದಗಳಿಸುವದು.
<pem>ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ;
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ;
ಕೂಡಲಸಂಗನ ಶರಣರ ಅನುಭಾವದಿಂದ
ಎನ್ನ ಮನದ ಕೇಡ ನೋಡಯ್ಯಾ!
ಇಂಥ ಸಾಮರ್ಥ್ಯ ನೆಲೆಸಿರುವದು ಶರಣರ ಅನುಭಾವದಲ್ಲಿ ಆದುದರಿಂದ ಅವರ ಸಂಗದಿಂದ ಕರ್ಮದ ಕಲ್ಮಷ ಕಳೆದು ಭಕ್ತನು

120
ಅವರಂತೆಯೇ ನಿರ್ಮಳ ಆಗುವನೆಂದು ಬಸವಣ್ಣನವರು ಅರುಹಿರುವರು :

ಆರಾರ ಸಂಗವೇನೆನ ಮಾಡದಯ್ಯಾ ?
ಕಿಡಿ ಕುಂಡಲಿಗನಾಗದೆ ಅಯ್ಯಾ ?
ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ
ಬೇವು ಬೊಬ್ಬುಳಿ ತರೆಯ ಗಂಧಂಗಳಾಗವೆ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ
ಕರ್ಮ ನಿರ್ಮಳವಾಗದಿಹುದೆ?

ಶರಣರು ಪ್ರಸನ್ನರಾಗಿ ಒಮ್ಮೆ ಭಕ್ತನನ್ನು ತಮ್ಮವನೆಂದರೆ ಸಾಕು. ಅವನಿಗೆ ಮರಳಿ ಶಿವನಿಗೆ ಏನನ್ನೂ ಬೇಡುವ ಅಗತ್ಯವೇ ಉಳಿಯುವದಿಲ್ಲ. ಅವರ ಪ್ರಸಾದದಿಂದ ಆತನಿಗೆ ಎಲ್ಲವೂ ತಾನಾಗಿಯೆ ಲಭಿಸುವದು. ಅವರ ಅಂತಃಕರಣ ಅರಳಿ ಅವರು ಮಾತಾಡತೊಡಗಿದರಂತೂ ಕೇಳುವದೇನು? ಆತನಿಗೆ ಲಿಂಗ ದರ್ಶನವು ತಾನಾಗಿ ಆಗುವದು.

ಚಂದ್ರನ ಶೈತ್ಯದಲ್ಲಿ ಬೆಳೆದ ಕಾಯಕ್ಕೆ
ಬೆಳದಿಂಗಳ ಬಯಸುವ ಹಂಗೇಕಯ್ಯಾ?
ಶರಣರ ಸಂಗದಲ್ಲಿರ್ದು
ಶಿವನ ಬೇಡುವ ಹಂಗೇಕಯ್ಯಾ ?
ಕೂಡಲಸಂಗಯ್ಯನ ಶರಣರು ಬಂದು
ತಮ್ಮವನೆಂದರೆ ಸಾಲದೆ ಅಯ್ಯಾ?
ಕೆರೆಹಳ್ಳಬಾವಿಗಳು ಮೈದೆಗೆದರೆ
vಗುಳ್ಳೆಗೊರಜೆಚಿಪ್ಪುಗಳು ಕಾಣಬಹುದು !
ವಾರಿಧಿ ಮೈದೆಗೆದರೆ ರತಂಗಳು ಕಾಣಬಹುದು !
ಕೂಡಲಸಂಗನ ಶರಣರು ಮನದೆರೆದು
ಮಾತನಾಡಿದರೆ ಲಿಂಗವೆ ಕಾಣಬಹುದು.

121

ಶರಣರ ಮಾರ್ಗದರ್ಶನದಿಂದ ಸಾಕ್ಷಾತ್ಕಾರವು ಸಹಜವಾಗಿ ಪ್ರಾಪ್ತವಾಗಬಹುದು, ಎಂಬುದು ಬಸವಣ್ಣನವರ ಆಶ್ವಾಸನ.
ಸದ್ಗುಣ ಸಂಪಾದನೆ :
ಶರಣರಾದ ಸದ್ಗುರುಗಳು ಭಕ್ತರಿಗೆ ಸದಾಚಾರ ಸದ್ಭಕ್ತಿಗಳ ಸಾಧನವನ್ನು ಅರುಹುವರು. ಸದ್ಗುಣಗಳ ಸಂಪಾದನವೇ ಸದಾಚಾರ. ಬಸವಣ್ಣನವರು ಎಲ್ಲ ಸಂತರಂತೆ ಕೆಲ ಪ್ರಧಾನ ಸದ್ಗುಣಗಳನ್ನು ಆಯ್ದು ಅವನ್ನು ತಮ್ಮ ಜೀವನದಲ್ಲಿ ಬಳಸಲು ಭಕ್ತರಿಗೆ ಉಪದೇಶಿಸಿರುವರು. ಅವರು ಮೊದಲು ಪ್ರತಿಯೊಬ್ಬರು ತಮ್ಮ ತಮ್ಮ ಅವಗುಣಗಳನ್ನು ಅಳಿಸಲು ಪ್ರಯತ್ನಿಸಬೇಕು. ಅನ್ಯರನ್ನು ತಿದ್ದಲು ಹವಣಿಸಬಾರದು, ಎಂದು ಹೇಳಿರುವರು.
ಲೋಕದ ಡೊಂಡ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ಕೂಡಲಸಂಗಮದೇವ
ಈ ಬಗೆಯ ಎಚ್ಚರವನ್ನು ಕೊಟ್ಟು ಬಸವಣ್ಣನವರು ಸದ್ಗುಣಗಳನ್ನೂ ಅವುಗಳ ಮುಕುಟಮಣಿಯಾದ ಸತ್ಯವನ್ನೂ ಸಂಪಾದಿಸಲು ಒಳ್ಳೆಯ ಒತ್ತಾಯದಿಂದ ಬೋಧಿಸಿರುವರು :
ಆನೆಯನೇರಿಕೊಂಡು ಹೋದಿರೆ ನೀವು:
ಕುದುರೆಯನೇರಿಕೊಂಡು ಹೋದಿರೆ ನೀವು ;
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ, ಅಣ್ಣಾ?
ಸತ್ಯದ ನಿಲವನರಿಯದೆ ಹೋದಿರಲ್ಲಾ !
ಸದ್ಗುಣವೆಂಬ ಫಲವ ಭಿತ್ತಿ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬಸದ ಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನರಾದಿರಲ್ಲಾ!
ಸ್ವಾಮಿಭತ್ಯ ಸಂಬಂಧಕ್ಕೆ ಆವುದು ಪಥವೆಂದರೆ
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ
ಪ್ರಪಂಚಯನೊಲ್ಲ ಕೂಡಲಸಂಗಮದೇವ.
ಸತ್ಯದ ತರುವಾಯ ಬಸವಣ್ಣನವರು ಪ್ರೇಮವನ್ನು ಬೆಳೆಸಲು,

ಬಳಸಲು ಬೋಧಿಸುವರು. ಪ್ರೇಮವು ಲೋಕದಲ್ಲಿ ದಯೆಯ ಶುದ್ಧ ಸ್ವರೂಪದಲ್ಲಿ ಕಾರ್ಯಕಾರಿಯಾಗಬೇಕೆಂದು ಬಸವಣ್ಣನವರು ಉಸಿರಿರುವರು.

ದಯವಿಲ್ಲದ ಧರ್ಮದಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ,
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ !

ತರುವಾಯ ಬಸವಣ್ಣನವರು ಕಾಮಕ್ರೋಧಾದಿ ವಿಕಾರಗಳನ್ನು ತಡೆಯಲು ಬೋಧಿಸುವರು. ಇದೇ ನೀತಿಯ ಸಂಯಮರೂಪಿಯಾದ ಪ್ರಧಾನ ಅಂಗ.

ನೂರನೋದಿ ನೂರ ಕೇಳಿದರೇನು?
ಆಸೆ ಹರಿಯದು, ರೋಷ ಬಿಡದು,
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
ಆರತವಡಗದು, ಕ್ರೋಧ ತೊಲಗದು ;
ಕ್ರೂರ ಕುಭಾಷೆ ಕುಹಕ ಬಿಡದನ್ನಕ್ಕ
ನೀನೆತ್ತ ಶಿವನೆ ? ಹೋಗಯ್ಯಾ ಮರುಳೇ !
ಅಹಂಕಾರ ಮನವನಿಂಬುಗೊಂಡಲ್ಲಿ

ಲಿಂಗ ತಾನೆಲ್ಲಿ ಬಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ ಲಿಂಗ ತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಿಹಿತ, ಕಾಣಾ,
ಕೂಡಲಸಂಗಮದೇವ.

ಮೇಲ್ಕಾಣಿಸಿದ ವಿಕಾರಗಳನ್ನು ತೊರೆದ ಭಕ್ತನು ತನ್ನಂತರಂಗದಲ್ಲಿ ವಿನಯಭಾವವನ್ನು ಬೆಳೆಸಬೇಕು. ವಿನೀತಭಾವದಿಂದ ನಡೆಯಬೇಕು, ನುಡಿಯಬೇಕು. ಅದರಿಂದ ಅವನಿಗೆ ಸದಾಶಿವನ ಒಲುಮೆಯು ಲಭಿಸುವದು, ಎಂಬುದು ಬಸವಣ್ಣನವರ ಹೇಳಿಕೆ :

ಕಂಡ ಭಕ್ತರಿಗೆ ಕೈ ಮುಗಿವಾತನೇ ಭಕ್ತ:
ಮೃದುವಚನವೇ ಸಕಲ ಜಪಂಗಳಯ್ಯಾ,
ಮೃದುವಚನವೇ ಸಕಲ ತಂಪಂಗಳಯ್ಯಾ,
ಸದುವಿನಯವೇ ಸದಾಶಿವನೊಲಿಮೆಯಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
vನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ಅಹುದಹುದೆ'ನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಾ?

ನಡೆನುಡಿಯಲ್ಲಿಯ ಈ ಬಗೆಯ ವಿನಯದ ಜೊತೆಯಲ್ಲಿ ಭಕ್ತನಲ್ಲಿ ಛಲವಿರಬೇಕು, ಸದಾಗ್ರಹಬೇಕು, ಹಿಡಿದ ನೇಮವನ್ನು ಕೊನೆಯವರೆಗೆ ನಡೆಯಿಸುವ ಹಟ ಬೇಕು.

ಛಲ ಬೇಕು ಶರಣಂಗೆ 'ಪರಧನವನೊಲ್ಲೆನೆಂಬ
ಛಲ ಬೇಕು ಶರಣಂಗೆ 'ಪರಸತಿಯನೊಲ್ಲೆನೆಂಬ
vಛಲ ಬೇಕು ಶರಣಂಗೆ 'ಪರದೈವವನೊಲ್ಲೆನೆಂಬ
ಛಲ ಬೇಕು ಶರಣಂಗೆ 'ಲಿಂಗಜಂಗಮ ಒಂದೇ' ಎಂಬ

124

ಛಲ ಬೇಕು ಶರಣಂಗೆ 'ಪ್ರಸಾದ ದಿಟವೆಂಬ.
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ.

ಛಲವಿಲ್ಲದಿದ್ದರೆ ಭಕ್ತಿಯ ಸಾಧನವು ಕೊನೆಗೊಳ್ಳುವುದು, ಅದಕ್ಕೆ ಸರಿಯಾದ ಫಲವು ಲಭಿಸದು, ಎಂಬುದು ಬಸವಣ್ಣನವರ ಹೇಳಿಕೆ :

ಬರ ಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ
ಮೊದಲ ದಿನ ಹಣೆ ಮುಟ್ಟಿ ಮರುದಿನ ಕೈಯ ಮುಟ್ಟಿ
ಮೂರೆಂಬ ದಿನಕ್ಕೆ ತೂಕಡಿಗೆ ಕಾಣಿರಣ್ಣಾ
ಹಿಡಿದುದ ಬಿಡದಿದ್ದರೆ, ಕಡೆಗೆ ಚಾಚುವ,
ಅಲ್ಲದಿದ್ದರೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ

ಅಂತೂ ಈ ಪ್ರಧಾನ ಸದ್ಗುಣಗಳನ್ನು ಮನಕ್ಕೆ ಸಾಕ್ಷಿ ಇಟ್ಟು ಸಂಪಾದಿಸಬೇಕು. 'ಹೇಂಗೆ ಮನ, ಹಾಂಗೆ ಘನ' ಎಂಬುದನ್ನು ಮರೆಯಬಾರದು. ಈ ಬಗೆಯಾಗಿ ತಮ್ಮ ಅಂತರಂಗ-ಬಹಿರಂಗ ಶುದ್ಧಿಯನ್ನು ಮಾಡಿಕೊಂಡರೆ ಸಂಗನೊಲಿವ ಎಂದು ಅವರು ಬೋಧಿ ತವರು :

ಕಳಬೇಡ ; ಕೊಲಬೇಡ ; ಹುಸಿಯ ನುಡಿಯಲು ಬೇಡ ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ;
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸವ ಪರಿ.

ತ್ರಿವಿಧ ದಾಸ್ಯ :
'ತ್ರಿವಿಧ ದಾಸೋಹ'ವು ಬಸವಣ್ಣನವರ ಭಕ್ತಿಯ ಪ್ರಧಾನ ವಿಷಯ. ಅವರದು ದಾಸ್ಯಭಕ್ತಿ, 'ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ' ಎಂದು ಅವರು ಸಂಗನನ್ನು ಬೇಡಿಕೊಂಡರು. ಭಗವಂತನ ಪ್ರತೀಕಗಳಾದ "ಗುರು-ಲಿಂಗ-ಜಂಗಮ'ರನ್ನು ತನು-ಮನ-ಧನಗಳಿಂದ ಆರಾಧಿಸುವುದೇ ತ್ರಿವಿಧ ದಾಸೋಹ. ಅದನ್ನು

ಮಾಡಿದಾಗಲೇ ಭಕ್ತಿಯು ಸಫಲವಾಗುವುದು. ಇಲ್ಲದಿದ್ದರೆ ಅದು ಫಲಿಸಲಿಕ್ಕಿಲ್ಲ ಎಂದು ಅವರು ಪದೇ ಪದೇ ಸಾರಿರುವರು :

ಆಡಿದರೇನೋ, ಹಾಡಿದರೇನೋ, ಓದಿದರೇನೋ
ತ್ರಿವಿಧ ದಾಸೋಹವಿಲ್ಲದನ್ನಕ್ಕೆ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
ಮಾತಿನ ಮಾತಿನಲ್ಲಪ್ಪುದೆ ಭಕ್ತಿ?
ಮಾಡಿ ತನು ಸವೆಯದನ್ನಕ್ಕ
ಮನ ಸವೆಯದನ್ನಕ್ಕ
ಧನ ಸವೆಯದನ್ನು ಅಪ್ಪುದೇ ಭಕ್ತಿ?
ಕೂಡಲಸಂಗಮದೇವ, ಎಲುದೋರಿ ಸರಸವಾಡುವದನು
ಸೈರಿಸದನ್ನಕ್ಕ ಅಪ್ಪುದೇ ಭಕ್ತಿ?
ತನುವ ಕೊಟ್ಟು ಗುರುವನೊಲಿಸಬೇಕು
ಮನವ ಕೊಟ್ಟು ಲಿಂಗವನೊಲಿಸಬೇಕು.
ಧನವ ಕೊಟ್ಟು ಜಂಗಮನೊಲಿಸಬೇಕು.
ಈ ತ್ರಿವಿಧ ಹೊರಗುಮಾಡಿ, ಹರೆಯ ಹೊಯಿಸಿ,
ಕುರುಹ ಪೂಜಿಸುವರ ಮೆಚ್ಚ ಕೂಡಲಸಂಗಮದೇವ.

ಆದರೆ ಈ ಭಕ್ತಿಯನ್ನು ತೋರಿಕೆಗಾಗಿ ಮಾಡಕೂಡದು, ಮನಸ್ಸಿನಿಂದ ಮಾಡಬೇಕು:

ಮಾಡಿ ನೀಡಿ ಲಿಂಗವ ಪೂಜಿಸಿಹೆನು!
ಎಂಬುವರು ನೀವೆಲ್ಲ ಕೇಳಿರಣ್ಣಾ!
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲಾ!

ಹೀಗಾಗಕೂಡದು. ಅದೇ ಮೇರೆಗೆ :

ಓಡಲಾರದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ.
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ.
ತನುವು ಮನುವು ಮಾಡಬೇಕು ಭಕ್ತಿಯ.
ಮಾಡಿಸಿಕೊಳ್ಳಬೇಕು ಜಂಗಮ

ಕೂಡಲಸಂಗಮದೇವಾ. ಆದರೆ 'ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು' ಎಂಬುದನ್ನು ಮರೆಯಬಾರದು. ಏಕೆಂದರೆ -

ಮಾಡಿದೆನೆಂಬುದು ಮನದಲ್ಲಿ ಮೂಡಿದರೆ,
ಏಡಿಸಿ ಕಾಡಿತ್ತು ಶಿವನ ಡಂಗುರ!
ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದ್ದರೆ,
ಬೇಡಿತನೀವ ಕೂಡಲಸಂಗಮದೇವ.

ಭಕ್ತಿಯ ಉತ್ಕಟತೆ :
ಭಕ್ತಿಯಲ್ಲಿಯ ಉತ್ಕಟತೆಯು ಬೆಳೆಯಬೇಕಾದರೆ ಅದನ್ನು ತಾವೇ ಮಾಡಬೇಕು, ನಂಬಿ ಮಾಡಬೇಕು. ಪೂಜಾಧ್ಯಾನಗಳನ್ನು ಒಲವಿನಿಂದ ಮಾಡಬೇಕು. ಭಾವಪೂರ್ಣತೆಯಿಂದಲೂ ಏಕಾಗ್ರತೆಯಿಂದಲೂ ಆನಂದದಿಂದಲೂ ಮಾಡಬೇಕು. ಅದು ಈ ಬಗೆಯಾಗಿ ನಡೆದರೇನೆ ಅದರ ಉತ್ಕಟತೆ ಬೆಳೆಯಿತೆಂದು ಭಾವಿಸಬೇಕು. ಬಸವಣ್ಣನವರು ಇವನ್ನೆಲ್ಲ ತಮ್ಮ ಬೇರೆ ಬೇರೆ ವಚನಗಳಲ್ಲಿ ಅರುಹಿರುವರು. ಅವನ್ನು ಕ್ರಮಶಃ ಅರಿತುಕೊಳ್ಳುವಾ. ತಮ್ಮ ಭಕ್ತಿಯನ್ನು ತಾವೇ ಮಾಡಬೇಕೆಂಬುದನ್ನು ಅವರು ಈ ರೀತಿ ಅರುಹಿರುವರು :

ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
ನಂಬಿಕೆಯನ್ನು ಕುರಿತು ಅವರು ಹೇಳಿರುವುದೇನೆಂದರೆ :
ನಂಬರು ನೆಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು.
ನಂಬಿ ಕರೆದೊಡೆ 'ಓ' ಎನ್ನನೆ ಶಿವನು?
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ' ನಮ್ಮ ಕೂಡಲಸಂಗಮದೇವ
ನಮ್ಮ ಪೂಜಾಧ್ಯಾನಗಳು ಒಲವಿನಿಂದ ಮಾಡಲಾಗಬೇಕು. ಒಲವಿಲ್ಲದ
ಪೂಜೆ ಯಾಂತ್ರಿಕವಾದುದು. ಅದು ಫಲಕಾರಿಯಾಗಲರಿಯದು,
ಭಗವಂತನ ಒಲವನ್ನು ಪಡೆಯಲರಿಯದು. ಅದನ್ನು ಕುರಿತು
ಬಸವಣ್ಣನವರು ಈ ರೀತಿ ಹೇಳಿರುವರು.
ಒಲವಿಲ್ಲದ ಪೂಜೆ! ನೇಹವಿಲ್ಲದ ಮಾಟ!
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದರೆ ಸುಖವಿಲ್ಲ ; ಮೆಲಿದರೆ ರುಚಿಯಿಲ್ಲ
ಕೂಡಲಸಂಗಮದೇವಾ ನಿಜವಿಲ್ಲದವರ ಭಕ್ತಿ!
ಅದೇ ಮೇರೆಗೆ ನಮ್ಮ ಧ್ಯಾನವು ತುಂಬ ಏಕಾಗ್ರವಾಗಿರಬೇಕು ;
ಮನವು ಘನದಲ್ಲಿ ಬೆರೆಯಬೇಕು.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನವೊಂದಾಗಿ
ನಚ್ಚಿನ ಮಟ್ಟು ಅಚೊತ್ತಿದಂತಿರಬೇಕು.
ಚಿತ್ರ ಮನ ಬುದ್ದಿ ಒಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ ಮೆಚ್ಚುವ
ನಮ್ಮ ಕೂಡಲಸಂಗಮದೇವ!

128
ಮನ ಮನ ಬೆರೆಸಿದಲ್ಲಿ ತನು ಕರಗಬೇಕು. ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮಬೇಕು. ಕಂಗಳಲ್ಲಿ ಅಶ್ರುಜಲಂಗಳು ಸುರಿಯಬೇಕು. ಇದೇ ಉತ್ಕಟಭಕ್ತಿಯ ಹಿರಿದಾದ ಕುರುಹು. ಇಂಥ ಭಕ್ತಿಯೇ ಭಗವಂತನ ಕರುಣವನ್ನು ಪಡೆಯಬಲ್ಲುದು. ಆತನ ದಿವ್ಯರೂಪವನ್ನು ಕಾಣಿಸಬಲ್ಲದು. ಆತನ ಪರಮಾನಂದವನ್ನು ಉಣಿಸಬಲ್ಲದು.
ಆದರ್ಶ ಜೀವನ :
ಈ ಬಗೆಯ ದಿವ್ಯ ಅನುಭಾವ- ಆನಂದಗಳನ್ನು ಪಡೆದ ಶರಣರ ಪಾವನ ಜೀವನವೇ ನಿಜವಾದ ಆದರ್ಶಜೀವನ, ಸದೈವ ಆತ್ಮಾನಂದದಲ್ಲಿ ಮುಳುಗಿರುವ ಮೂಲಕ ಶರಣನು ನಿರ್ಭಯನಿರುವ, ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚ ನ. ಬ್ರಹ್ಮಾನಂದವನ್ನು ಪಡೆದವನು ಏತರಿಂದಲೂ ಭಯ ಪಡುವದಿಲ್ಲ. ಅವನು ಧೀರನಿರುವ, ವೀರನಿರುವ !
ಎಲ್ಲರೂ ವೀರರು, ಎಲ್ಲರೂ ಧೀರರು :
ಎಲ್ಲರೂ ಮಹಿಮರು, ಎಲ್ಲರೂ ಪ್ರಥಮರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು !
ನಮ್ಮ ಕೂಡಲಸಂಗನ ಶರಣರು ಧೀರರು,
ಉಳಿದವರೆಲ್ಲಾ ಅಧೀರರು !
ಶರಣರು ಅಳಿಯದ ಆನಂದವನ್ನೇ ಸೇವಿಸುತ್ತಿರುವುದರಿಂದ ಅವರಲ್ಲಿ ಬೇರಾವ ಕಾಮನೆಯೂ ಇರುವುದಿಲ್ಲ. ಅವರು 'ಕಾಮವ ತೊರೆವರು, ಹೇಮವ ಜರೆವರು !' ಅವರಲ್ಲಿ ಮಾನವಸಹಜವಾದ ಯಾವ ಕಾಮನೆಯೂ ನೆಲೆಸಿ ಇರುವುದಿಲ್ಲ. 'ಆಪ್ತಕಾಮೋ ಅವಾಪ್ತಕಾಮೋ ಆತ್ಮಕಾಮೋ ಅಕಾಮೋ ಭವತಿ.' ಆತ್ಮಕಾಮರು ಆತ್ಮನನ್ನೇ ಪಡೆದು ಅಕಾಮರಾಗುವರು. ಅವರು ಮರಳಿ ಕಾಮಜಾಲದಲ್ಲಿ ಸಿಲುಕುವದಿಲ್ಲ. ಆದುದರಿಂದ ಅವರ,

ಮನೆ ನೋಡಾ ಬಡವರು : ಮನ ನೋಡಾ ಘನ.
ಸೋಂಕಿನಲ್ಲಿ ಸುಖ ; ಸರ್ವಾಂಗಕಲಿಗಳು ;
ಪಸಾರಕ್ಕವಸರವಿಲ್ಲ ; ಬಂದ ತತ್ಕಾಲಕುಂಟು
ಕೂಡಲಸಂಗನ ಶರಣರು ಸ್ವತಂತ್ರಧೀರರು.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು.
ಬೆಣ್ಣೆ ಕರಗಿ ತುಪ್ಪವಾಗಿ ಮರಳಿ
ತುಪ್ಪ ಬೆಣ್ಣೆಯಾಗದು ಕ್ರೀಯಳಿದು.
ಹೊನ್ನು ಕಬ್ಬುನವಾಗದು ಕ್ರೀಯಳಿದು.
ಮುತ್ತು ನೀರಲ್ಲಿ ಹುಟ್ಟಿ
ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗುವನು ಕ್ರೀಯಳಿದು.

ಭಗವಂತನಲ್ಲಿ ಬೆರೆತ ಶರಣನು ಜೀವನುಕನು. ಅವನು ಜನನ ಮರಣದ ತಿರುಗಣೆಯಲ್ಲಿ ಮರಳಿ ಸಿಲುಕಲರಿಯನು. ಅವನು ನಿಃಸಂದೇಹಿಯು, ನಿರ್ಮಲನು, ಸಹಜನು, ಅವನು ಉಪಮಾತೀತನು, ಎಂದು ಬಸವಣ್ಣನವರು ಹೇಳಿರುವರು :

ಸತ್ತು ಹುಟ್ಟುವನಲ್ಲ ಸಂದೇಹಿ ಸೂತಕಿಯಲ್ಲ
ಆಕಾರ ನಿರಾಕಾರನ ನೋಡಯ್ಯಾ!
ಕಾಯವಂಚಕನಲ್ಲ ಜೀವವಂಚಕನಲ್ಲ
ನಿರಂತರ ಸಹಜ, ನೋಡಯ್ಯಾ!
ಶಂಕೆಯಿಲ್ಲದ ಮಹಾಮಹಿಮನು ನೋಡಯ್ಯಾ!
ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ!

ಜೀವನ್ಮುಕ್ತರಾದ ಇಂಥ ಶರಣರು ಮು೦ದೆ ಲೋಕ ಕಲ್ಯಾಣಕಾರ್ಯದಲ್ಲಿ ತೊಡಗುವರು. ಅದೇ ಅವರ ಜೀವಿತಕಾರ್ಯವಾಗುವದು. 'ಸಕಲ ಜೀವಾತ್ಮರ ಲೇಸನೇ ಬಯಸುವ' ಅವರ ಹೃದಯವು ಬೆಣ್ಣೆಗಿಂತ ಮೃದು. ತನಗೆ ತಗಲಿದ ತಾಪದಿಂದ

ಬೆಣ್ಣೆಯು ಕರಗಿದರೆ, ಅನ್ಯರಿಗೆ ತಗಲಿದ ತಾಪದಿಂದ ಶರಣರ ಹೃದಯವು ಕರಗುವುದು. ಆದರೆ ಅದು ಅದು ಹೂವಿಗಿಂತ ಮಿದುವಾದುದಾದರೂ, ಹರಳಿಗಿಂತ ಬಿರುಸಾದುದೂ ಇರುವುದು ಎಂಬುದನ್ನು ಮರೆಯಲೇ ಕೂಡದು. ಆದುದರಿಂದ ಅವರೊಡನೆ ಭಕ್ತಿಭಾವದಿಂದಲೆ ನಡೆಯಬೇಕಲ್ಲದೆ ಅಂಥವರಲ್ಲಿ ಸಲಿಗೆಯ ಸರಸ ಸಲ್ಲದು. ಅದು ಕೂಡಲೇ ವಿರಸಕ್ಕಿಳಿಯದಿರದು. ಬಸವಣ್ಣನವರು ಇದನ್ನು ಕುರಿತು ಈ ಬಗೆಯ ಎಚ್ಚರಿಕೆಯನ್ನಿತ್ತಿರುವರು :

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು
ಒಲಿದುಯ್ಯಲೆಯಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದ ಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.

ಶರಣ- ಭಗವಂತರಲ್ಲಿ ಸಾಮರಸ್ಯ ಉಂಟಾಗಿರುವ ಮೂಲಕ ಅವರ ಜೀವನವು ಭಗವದ್ಭರಿತವಾಗುವುದು. ಅದನ್ನು ಬಸವಣ್ಣನವರು ಈ ರೀತಿ ಬಣ್ಣಿಸಿರುವರು :

ಶರಣ ನಿದ್ರೆಗೈದರೆ ಜಪ ಕಾಣಿರೊ,
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೆ ಪಾವನ ಕಾಣಿರೋ
ಶರಣ ನುಡಿದುದೆ ಶಿವತತ್ವ ಕಾಣಿರೋ
ಕೂಡಲಸಂಗನ ಶರಣರ
vಕಾಯಕವೇ ಕೈಲಾಸ ಕಾಣಿರೋ!

ಶರಣ ಶಿಖಾಮಣಿಗಳಾದ ಪ್ರಭುದೇವರು ತಮ್ಮ ಒಂದು ವಚನದಲ್ಲಿ ಇಂಥ ಶರಣರೇ ನಿಜವಾದ ಜಗುದುದ್ಧಾರಕರು ಎಂದು ಸಾರಿರುವರು. ಬಸವಣ್ಣನವರಂತೆ ಅವರ ನುಡಿಯೂ ಸ್ವಂತ ಅನುಭಾವದ ಆಳದಿಂದ ಹೊರಹೊರಟ ಮೂಲಕ ತುಂಬ ಅಮೂಲ್ಯ

ಆದುದು. ಅದು ಭಕ್ತವರರು ಆದ ನಾರದಮುನಿಗಳ ಏಕಾಂತಭಕ್ತರ ಬಣ್ಣನೆಯನ್ನು ತುಂಬ ಹೋಲುವದು. ಅನುಭಾವಿಗಳೆಲ್ಲರು ಒಂದೇ ಬಳಗದವರಿರುವದರಿಂದ ಅವರ ಮಾತು ಒಂದೇ ಬಗೆಯದಿರುವುದು ಸಹಜವಲ್ಲವೇ ?

ಕಂಡುದೆಲ್ಲ ಪಾವನ ; ಹೇಳಿದೆಲ್ಲ ಪರಮಬೋಧೆ
ಮುಟ್ಟಿತೆಲ್ಲವೋ ಪರುಷದ ಸೋಂಕು.
ಒಡನೆ ಕೂಡಿದವರೆಲ್ಲರು ಸದ್ಯೋನ್ಮುಕ್ತರು.
ಸುಳಿದ ಸುಳುಹೆಲ್ಲ ಜಗತ್ಪಾವನ
ಮೆಟ್ಟಿದ ಧರೆಯೆಲ್ಲವು ಅವಿಮುಕ್ತ ಕ್ಷೇತ್ರ,
ಸೋಂಕಿದ ಜಲಂಗಳೆಲ್ಲವು ಪುಣ್ಯತೀರ್ಥಂಗಳು
ಶರಣೆಂದು ಭಕ್ತಿಮಾಡಿದವರೆಲ್ಲರು ಸಾಯುಜ್ಯರು.
ಗುಹೇಶ್ವರ ! ನಿಮ್ಮ ಸುಳುಹಿನ ಸೊಗಸ
ಉಪಮಿಸಬಾರದು !

ಭಕ್ತಾಗ್ರಣಿಗಳಾದ ನಾರದರು ಭಕ್ತವರರ ಬಳಗವನ್ನು ಈ ಬಗೆ ಬಣ್ಣಿಸಿರುವರು :

“ಭಕ್ತಾ: ಏಕಾಂತಿನೋ ಮುಖ್ಯಾಃ । ಕಂಠಾವರೋಧ
ರೊಮಾಂಚಾಶ್ರುಭಿ: ಪರಸ್ಪರಂ ಲಪಮಾನಾಃ ಪಾವಯಂತಿ
ಕುಲಾನಿ ಪೃಥಿವೀಂ ಚ । ತೀರ್ಥಿಕುರ್ವಂತಿ ತೀರ್ಥಾನಿ ।
ಸುಕರ್ಮೀ ಕುರ್ವಂತಿ ಕರ್ಮಾಣಿ । ಸಚ್ಛಾಸೀ ಕುರ್ವಂತಿ
ಶಾಸ್ತ್ರಾಣಿ । ತನ್ಮಯಾಃ । ಮೋದಂತೇ ಪಿತರೋ ನೃತ್ಯಂತಿ
ದೇವತಾಃ । ಸನಾಥಾ ಚೇಯಂ ಭೂರ್ಭವತಿ ನಾಸ್ತಿ ತೇಷು
ಜಾತಿವಿದ್ಯಾರೂಪಧನಕ್ರಿಯಾದಿ ಭೇದ: । ಯತಸದೀಯಾಃ ॥

“ಭಕ್ತರಲ್ಲಿ ಅನನ್ಯ ಭಕ್ತರೇ ಎಲ್ಲಕ್ಕೂ ಶ್ರೇಷ್ಠರು. (ಭಕ್ತಿಭಾವನೆಯ ಮೂಲಕ) ಕುತ್ತಿಗೆ ಶಿರಗಳು ಬಿಗಿದು, ಮೈಮೇಲೆ ರೋಮಾಂಚನಗಳೆದ್ದು ಕಳವಳದಿಂದ ಕಣ್ಣೀರು ತುಂಬಿ, ಭಗವಂತನನ್ನು ಕುರಿತು ಒಡನೊಡನೆ ಸಂಭಾಷಣೆ ಮಾಡುವ ಭಕ್ತರು ತಮ್ಮ ಸಕಲ ಕುಲಗಳನ್ನೂ ಈ

132
ಪೃಥ್ವಿಯನ್ನೂ ಪಾವನ ಮಾಡುವರು. ಅವರು ತೀರ್ಥಗಳನ್ನು ಹೆಚ್ಚಿನ ತೀರ್ಥಗಳನ್ನಾಗಿ ಮಾಡಿಬಿಡುವರು. ಏಕೆಂದರೆ ಅವರು ಭಗವನ್ಮಯರು, ಭಗವಂತನ ಸಾಕ್ಷಾತ್ಕಾರ ಪಡೆದವರು. ಇಂಥ ಭಕ್ತರ ಪಿತರರು ಆನಂದ ಪಡುವರು. ಅವರನ್ನು ನೋಡಿ ದೇವತೆಗಳು ಆನಂದದಿಂದ ಕುಣಿಯುವರು. ಇದರಿಂದ ಪೃಥ್ವಿಯು ಸನಾಥವಾಗುವದು (ಸಂರಕ್ಷಿಸಲ್ಪಡುವದು). ಅವರಲ್ಲಿ ಜಾತಿ, ವಿದ್ಯಾ, ರೂಪ, ಕುಲ, ಧನ, ಕ್ರಿಯೆ ಇತ್ಯಾದಿಗಳ ಭೇದಗಳು ಇರುವದಿಲ್ಲ, ಏಕೆಂದರೆ ಅವರೆಲ್ಲ ಭಗವಂತನ ಮಕ್ಕಳೇ ಇರುವರು.'೨೮
ಈ ಹಿರಿಯರ ಮಾತುಗಳಲ್ಲಿ ಅಪ್ರತಿಮವಾದ ಸಾಮ್ಯವಿರುವದು. ಏಕೆ ಅಂದರೆ ಶ್ರೀ ಗುರುದೇವ ರಾನಡೆಯವರು ಅರುಹಿದ ಮೇರೆಗೆ
“ಎಲ್ಲ ದೇಶಕಾಲಗಳ ಅನುಭಾವಿಗಳು ಒಂದೇ ಅಧ್ಯಾತ್ಮಿಕ ಜಗತ್ತಿನ ನಿವಾಸಿಗಳಿರುವದರಿಂದ ಅವರು ಒಂದೇ ಬಗೆಯ ಮಾತನ್ನು ಆಡುವರು. ಅವರಲ್ಲಿ ಜಾತೀಯ, ಮತೀಯ, ಹಾಗೂ ರಾಷ್ಟ್ರೀಯ ಪೂರ್ವಗ್ರಹಗಳು ನೆಲೆಸಿರುವದಿಲ್ಲ' The Mystics of all ages and countries have spoken the same language, as they are denizens of the same spiritual world. There are no racial, no communal, no national prejudices among them.
————
೨೮. ಭಸೂ, ಪು. ೨೧
9. P.G.H. Intro. P.2

ಅಲೆ : ಎಂಟು

ಉಪಸಂಹಾರ

ಹಿನ್ನೋಟ :
ಬಸವಣ್ಣನವರ “ದಿವ್ಯಜೀವನ' ದ ವೈಭವವನ್ನು ಈವರೆಗೆ ಯಥಾಶಕ್ತಿ ಕಾಣಿಸಲು ಯತ್ನಿಸಲಾಗಿದೆ. ಬಸವಣ್ಣನವರ ದಿವ್ಯ ಜೀವನದ ಹಿನ್ನೆಲೆಯಾದ ಈಶೇಚ್ಛೆಯನ್ನೂ ಅಂದಿನ ಪರಿಸ್ಥಿತಿಯನ್ನೂ ಅದನ್ನು ಕಾಣುವ ನಮ್ಮ ದೃಷ್ಟಿಯನ್ನೂ ಪೀಠಿಕೆಯಲ್ಲಿ ಕಾಣಿಸಲಾಯಿತು. ತರುವಾಯ ಅವರ ಬಾಹ್ಯ ಜೀವನದ, ಆತ್ಮೋದ್ಧಾರದ ಪೂರ್ವಸಿದ್ಧತೆಯನ್ನು 'ಪೂರ್ವರಂಗ' ದಲ್ಲಿಯೂ ಅವರು ನೆರವೇರಿಸಿದ ಲೋಕೋದ್ಧಾರದ ಮಹಾಕಾರ್ಯವನ್ನು ಉತ್ತರರಂಗ' ದಲ್ಲಿಯೂ ವಿವರಿಸಲಾಯಿತು. ಆಮೇಲೆ ಅವರ ಆಂತರಿಕ ಜೀವನದಲ್ಲಿಯ ಆಧ್ಯಾತ್ಮಿಕ ವಿಕಾಸವನ್ನು 'ಭಕ್ತಿಯ ಬೆಳೆ' ಯಲ್ಲಿಯೂ ಅವರು ಜನರಿಗೆ ಸಲ್ಲಿಸಿದ ದಿವ್ಯಸಂದೇಶವನ್ನು ಉಜ್ವಲ ಬೋಧೆಯನ್ನು 'ಬೋಧಸುಧೆ' ಯಲ್ಲಿಯೂ ವಿಶದೀಕರಿಸಲಾಗಿದೆ. ಈ ರೀತಿ ಬಹಿರಂಗ- ಅಂತರಂಗ ಜೀವನದ ಸಮಗ್ರ ದರ್ಶನವನ್ನು ಭಾವಿಕರಿಗೆ ನೀಡಲಾಗಿದೆ. ಈ “ಉಪಸಂಹಾರ' ದಲ್ಲಿ ಅವರ ಅಲೌಕಿಕ ಹಿರಿಮೆಯ ಕಿರಿನೋಡವನ್ನು ಅರುಹಿ ವಿರಮಿಸುವೆ. ಈ 'ದಿವ್ಯ ಜೀವನ'ವು ನಮ್ಮ ಬೆಳೆಯಲಿರುವ ಯುವಕರ ಜೀವನಕ್ಕೆ ದಿವ್ಯವೈಭವದ ಕೊಡುಗೆಯನ್ನು ನೀಡಲಿ ! ಅವರ ಬಾಳು ಹೊಸ ಬೆಳಕಿನಿಂದ ಹೊಳೆಯಲಿ ! !
ಅಲೌಕಿಕ ಹಿರಿಮೆ :
ಬಸವಣ್ಣನವರು ನಮ್ಮ ಕನ್ನಡ ಜನಾಂಗವನ್ನು ಉದ್ದರಿಸಲು ಆಗಾಗ ಹೆಣಗಿದ ಅಲೌಕಿಕರಾದ ಹಿರಿಯ ಮಹಾತ್ಮರಲ್ಲಿ ಒಬ್ಬರು. ಅವರದು ಉತ್ಕಟಬುದ್ದಿ, ಉತ್ಕಟಭಾವ, ಉತ್ಕಟಸಂಕಲ್ಪ. ತಮ್ಮ

134
ಸ್ವತಂತ್ರ ಬುದ್ಧಿಯಿಂದ ಅವರು ದೇವನೊಬ್ಬ, ನಾಮ ಹಲವು ಎಂಬ ಮಹಾತತ್ತ್ವವನ್ನು ಚೆನ್ನಾಗಿ ಅರಿತರು ; ತಮ್ಮ ವಿಮಲವಾದ ಭಾವದಿಂದ ಆತನನ್ನು ಪ್ರೀತಿಸಿದರು ; ಹಾಗೂ ಪ್ರಬಲವಾದ ಸಾಧನದಿಂದ ಆತನನ್ನು ಕಂಡರು, ಆತನ ಆನಂದವನ್ನು ಉಂಡರು, ಆತನಲ್ಲಿ ಬೆರೆತು ಸಮರಸರಾದರು. ಇದಾಯಿತು ಅವರ ಆತ್ಮೋದ್ದಾರದ ಮಾತು. ಭಗವಂತನ ಆದೇಶದಿಂದ ಕೈಕೊಂಡ ಲೋಕೋದ್ಧಾರದ ಕಾರ್ಯದಲ್ಲಿಯೂ ಅವರು ತಮ್ಮ ಈ ತ್ರಿವಿಧ ಶಕ್ತಿಗಳನ್ನು ಚೆನ್ನಾಗಿ ಬಳಸಿದರು. ಅವರ ಸ್ವತಂತ್ರ ಬುದ್ಧಿಯು ಅವರಿಗೆ 'ಭಗವಂತನ ಸಾಮ್ರಾಜ್ಯದಲ್ಲಿಯ ಸಮತೆ' ಯನ್ನು ಕಾಣಿಸಿತು. ಅದನ್ನವರ ವಿಶಾಲಭಾವವು ಕೂಡಲೇ ಪ್ರಬಲವಾಗಿ ಪ್ರೀತಿಸತೊಡಗಿತು, ಹಾಗೂ ಅದನ್ನು ಸಮಾಜದಲ್ಲಿ ನೆಲೆಗೊಳಿಸಲು ಬಯಸಿತು. ಅವರ ಸಮರ್ಥವಾದ ಸಂಕಲ್ಪವು-ಕ್ರಿಯಾಶಕ್ತಿಯು ಅದನ್ನು ಕಾರ್ಯ -ರಂಗಕ್ಕಿಳಿಸಲು ತುಂಬ ಅವಿರತವಾಗಿ ಹೆಣಗಿತು. ಅದರ ಫಲವಾಗಿ ಅವರ ಕನಸು ನನಾಯಿತು. ಅಧ್ಯಾತ್ಮದ ತಳಹದಿಯ ಮೇಲೆ ನಿಲ್ಲಿಸಲಾದ ವೀರಶೈವಬಾಂಧವ್ಯವು ಕನ್ನಡನಾಡಿನಲ್ಲಿ ನೆಲೆಕೊಂಡಿತು. ತಮ್ಮ ಕಾರ್ಯವು ಮೂರ್ತಸ್ವರೂಪ ತಳೆದುದನ್ನು ಕಂಡು ಬಸವಣ್ಣನವರಿಗೆ ಅದೆಷ್ಟು ಆನಂದವಾಗಿರಬೇಡ ? ಆದರೆ ಆ ಆನಂದವನ್ನು ಸವಿಯುವ ಭಾಗ್ಯ ಮಾತ್ರ ಅವರಿಗೆ ಬಹುಕಾಲ ಲಭಿಸಲಿಲ್ಲ. ತಿಳುವಳಿಕೆ ಸಾಲದ ಅವರ ಕೆಲ ಭಕ್ತರು ತಾಳ್ಮೆಗೆಟ್ಟರು. ಅವರ ತೂಕ ತಪ್ಪಿತು. ಅದರ ಫಲವಾಗಿ ಎಲ್ಲರಿಗೂ ಶೋಕವಾಯಿತು. ತಾತ್ಕಾಲಿಕವಾಗಿ ಬಸವಣ್ಣನವರ ಮಹಾಕಾರ್ಯವು ಅಳಿಯುವ ಗುಂಡಾಂತರವನ್ನು ಎದುರಿಸಬೇಕಾಯಿತು. ಆದರೆ ಅವರ ಪುಣ್ಯದ ಬಲದಿಂದ ವೀರಶೈವಬಾಂಧವ್ಯವು ಇಂದಿನವರೆಗೆ ಬಸವಣ್ಣನವರ ದಿವ್ಯ ಭವ್ಯ ಸ್ಮಾರಕವಾಗಿ ಉಳಿದಿದೆ. ಇಂಥ ಉಜ್ವಲ ಸ್ಮಾರಕವನ್ನು ಪಡೆವ ಸೌಭಾಗ್ಯ ಪ್ರಪಂಚದಲ್ಲಿ ಅದೆಷ್ಟು ಮಹಾತ್ಮರಿಗೆ ಲಭಿಸಿರುವುದು?
ಬಸವಣ್ಣನವರು ತಮ್ಮ ಅದ್ಭುತ ಪ್ರಭಾವದಿಂದ ಧಾರ್ಮಿಕ ಕ್ಷೇತ್ರದಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿಯೂ ಮಾಡಿದ ಕ್ರಾಂತಿಕಾರಕ

135

ಸುಧಾರಣೆಗಳು ಅವರ ಮಹಾಕಾರ್ಯದ ಒಂದು ಪ್ರಧಾನ ಅಂಗವಾದರೆ, ಜನರ ಬೌದ್ಧಿಕ ಜೀವನದಲ್ಲಿ ಕ್ರಾಂತಿಯನ್ನು ಎಸಗಬಲ್ಲ ಅವರ ಉಜ್ವಲ ಸ್ಫೂರ್ತಿಪ್ರದ ಸಾಹಿತ್ಯ ನಿರ್ಮಿತಿಯು ಅದರ ಇನ್ನೊಂದು ಪ್ರಧಾನ ಅಂಶ, ಪ್ರಭುವಿನ ಸಾಹಿತ್ಯದಂತೆ ಬಸವಣ್ಣನವರ ಸಾಹಿತ್ಯವೂ “ಒಂದು ಕಲ್ಪವೃಕ್ಷ'. ಅದು ಅನುಭಾವದ ಅಮೃತಸಾಗರದಲ್ಲಿ ನಿಂತಿದೆ. ಅಲ್ಲಿಂದ ಭಕ್ತಿಯುತ ಶಾಂತಿರಸವನ್ನು ಹೀರಿದೆ. ಅದಕ್ಕೆ ದಿವ್ಯ ಕಲ್ಪನೆಯ ಬಗೆಬಗೆಯ ರೆಂಬೆಗಳಿವೆ. ಅಲಂಕಾರಗಳ ಬಣ್ಣ ಬಣ್ಣದ ಪಲ್ಲವವಿದೆ. ಅದರಲ್ಲಿಯ ಸದ್ಭಾವದ ಸದ್ಗುಣದ ದೇಟುಗಳಿಗೆ ಅಂಟಿಕೊಂಡ ಸುಜ್ಞಾನದಲಗಳ ಪುಷ್ಪಗಳು, ಭಕ್ತಿಮಕರಂದವನ್ನು ಎಲ್ಲೆಲ್ಲಿಯೂ ಬೀರಲಿವೆ ಮತ್ತು ಆನಂದಾಮೃತದಿಂದ ನಳನಳಿಸುವ ಅನುಭಾವದ ತನಿವಣ್ಣುಗಳನ್ನು ಅದು ಭಕ್ತರಿಗೆ ವಿಪುಲವಾಗಿ ನೀಡಲಿದೆ. ಆದರೆ ಅವನ್ನು ಬೇಡಲು ಬಗೆಯು ಬಯಸಬೇಕು, ಪಡೆಯಲು ಕೈಗಳು ಹೆಣಗಬೇಕು. ಅಂದರೆ ಆ ಅಮೃತ ಫಲವು ಎಲ್ಲರಿಗೆ ಆ ಅಮರ ಆನಂದವನ್ನು ನೀಡದಿರದು. ಎಲ್ಲರೂ ಅದನ್ನೆಯೇ ಬಲವಾಗಿ ಬಯಸಬೇಕು, ಪಡೆಯಲು ಹಗಲಿರುಳು ಹೆಣಗಬೇಕು. ಅದನ್ನು ದಯಪಾಲಿಸುವ ಸಾಮರ್ಥ್ಯವನ್ನು ಈ ಸುರತರುವು ಪಡೆದಿರುವದು.
ಹಿರಿಯರ ಹಿರಿಮೆಯನ್ನು ಹಿರಿಯರೇ ಚೆನ್ನಾಗಿ ಅರಿಯಬಲ್ಲರು, ಅರುಹಬಲ್ಲರು. ಆದುದರಿಂದ ಅಂಥ ಕೆಲ ಹಿರಿಯರು ಅರುಹಿದ ಬಸವಣ್ಣನವರ ಹಿರಿಮೆಯನ್ನು ಮುಂದೆ ಕಾಣಿಸಲಿರುವೆ. ಮೊದಲು ಸಂತಕವಿ ಹರಿಹರನು, ಶರಣರ ಮುಖಾಂತರ ಅರುಹಿದ ಬಸವಣ್ಣನವರ ಹಿರಿಮೆಯನ್ನು ಅರಿತುಕೊಳ್ಳುವಾ ! ಅದರಲ್ಲಿ ಬಸವಣ್ಣನವರ ಹಿರಿಯ ವ್ಯಕ್ತಿತ್ವದ ಯಥಾರ್ಥ ದರ್ಶನವಾಗದಿರದು. ಶರಣರು ಬಸವಣ್ಣನವರನ್ನು ಹೀಗೆ ಕೊಂಡಾಡುವರು :
"ಎಲೆ ಬಸವ, ಬಸವಣ್ಣ... ಕೇಳಯ್ಯ, ನಿಮ್ಮ ನೇಮವಿದಾರ್ಗುಂಟು! ಗುರುಲಿಂಗದೊಳೆರಡಿಲ್ಲದಿಪ್ಪೆ, ಶರಣಂ ಸಂಗನೆಂದೆ ಕಾಣ್ಪೆ ಬಂದ ಭಕ್ತರಂ ಅತ್ಯಾದರಿಪೆ. ಬಪ್ಪ ಭಕ್ತರಂ

136

ಹರುಷದೊಳಿದಿರ್ಗೊಂಬೆ. ಬೇಡಿದುದ ಶರಣರ್ಗ ಇಲ್ಲೇನ್ನದೀವೆ. ಬೇಡಲೊಲ್ಲದವರ್ಗೆ ಮಿಗಿಲಾಗಿ ಆರಾಧಿಪೆ... ಜಂಗಮ ಪ್ರಾಣಿಯಾಗಿಪ್ಪೆ, ಶಿವಲಿಂಗಾರ್ಚಿತವಲ್ಲುದುದನಾಘ್ರಾಣಿಸಿ, ನೋಡೆ, ಕೇಳ, ನುಡಿಯ, ಮುಟ್ಟೆ ಶಿವಸಮಯನನುದ್ಧರಿಸುವೆ. ಪರಸಮಯಂ ಸಂಹರಿಸುವೆ. ಲಿಂಗದಲ್ಲಿ ಕಠಿಣಮಂ ಕೇಳೆ, ಜಂಗಮದಲ್ಲಿ ಜಾತಿಯನರಸೆ, ಪ್ರಸಾದದಲ್ಲಿ ಅಪವಿತ್ರತೆಯನ್ನರಿಯೆ, ಪರಾಂಗನೆಯರಂ ಹೆತ್ತ ತಾಯೆಗಳೆಂಬೆ, ಪರದ್ರವ್ಯಮಂ ಕಿಲ್ಪಿಷವೆಂದು ಮುಟ್ಟಿ ನುಡಿದು ಹುಸಿಯ, ಹಿಡಿದು ಬಿಡೆ, ಬಿಟ್ಟು ಹಿಂಗಲೀಯೇ, ಕೊಟ್ಟಂ ನೆನೆಯೆ, ನಟ್ಟಂ ಕೇಳೆ, ಮುಟ್ಟೆ ಪೆರಪಿಂಗೆ, ಕೂಡಿ ತಪ್ಪೆ ನೋಡಿ ನಿರಾಕರಿಸಿ, ನೆನೆದು ಮರೆಯೆ, ಮನದೊಳೊವರಿಯಿಲ್ಲ, ಬುದ್ಧಿಯೊಳು ವಿಸಂಚವಿಲ್ಲ, ಅಹಂಕಾರದೊಳು ಗರ್ವವಿಲ್ಲ ಚಿತ್ತದೊಳು ಹೊರೆ ಇಲ್ಲ ಕಾಮವಿಲ್ಲ ಕೋಪದ ಮಾತೇಕೆ ? ಲೋಭದ ಗಾಳಿ ತೀಡದು, ಮೋಹಕ್ಕೆ ತೆರಹಿಲ್ಲ. ಮದದ ಸಂಗಡ ಸೊಗಡು ಹೋದ್ದದು. ಮತ್ಸರಕ್ಕೆ ಇಂಬಿಲ್ಲ. ಬಸವರಾಜ ! ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ, ಈಶನ ಮೀಸಲಪ್ಪ ಭಕ್ತ ನಿನಗೆಣೆಯಲ್ಲ ಪಡಿಯಿಲ್ಲ. ಪಾಸಟಿಯಾವಂ? ಪಾಷಂಢಭೂಮಿಯೊಳು ಶಿವಭಕ್ತಿಯನು ಆರಂಭಿಸಿ, ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು, ಗಣಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವ ! ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು !೩೦
ಹರಿಹರನು ಬಸವಣ್ಣನವರ ಸದ್ಭಕ್ತಿ-ಸದಾಚಾರಗಳನ್ನು ಮನವಾರೆ ಕೊಂಡಾಡಿರುವ. ಬಸವಣ್ಣನವರ ಭಕ್ತಿ ನಿಷ್ಠೆ, ಅನನ್ಯತೆ, ಆತ್ಮಾರ್ಪಣಗಳು, ಅವರ ಸತ್ಯ, ಶೀಲ- ಛಲ, ಸರಲತೆ-ಸಮತೆ- ಔದಾರ್ಯ, ಆತಿಥ್ಯಗಳು ತುಂಬ ಅಪ್ರತಿಮವಾದವುಗಳು. ಅವರಲ್ಲಿ ಕಾಮವಿರಲಿಲ್ಲ. ಅವರು 'ಈಶನ ಮೀಸಲಪ್ಪ ಭಕ್ತರು. ಅವರು ಶಿವಸಮಯವನ್ನು ಶೈವಧರ್ಮವನ್ನು ಉದ್ದರಿಸಿದ ಕಾರಣಿಕ ಪವಾಡ
——
೩೦. ಬ. ರ. ಪು. ೫೦-೧೧

137

ಪುರುಷರು. ಅವರಿಗೆ 'ಪಾಸಟಿಯಾವಂ' ಸಮಾನರು ಯಾರು? ಎಂದು ಹರಿಹರನು ಕೇಳುವ.
ಇದಾಯಿತು ಹಿಂದಿನ ಹಿರಿಯರು ಬಸವಣ್ಣನವರಿಗೆ ಸಲ್ಲಿಸಿದ ಆದರದ ಅಂಜಲ. ಇನ್ನು ಇಂದಿನ ಹಿರಿಯರಿಬ್ಬರು, ಅವರ ಪುಣ್ಯಸ್ಮೃತಿಗೆ ಅರ್ಪಿಸಿದ ಸಾದರ ಕಾಣಿಕೆಯನ್ನು ನೋಡಿ. ಮೇಲ್ಕಾಣಿಸಿದ ಬಣ್ಣನೆಯು ಬಸವಣ್ಣನವರ ಉನ್ನತ ಜೀವನವನ್ನು ಬೆಳಗುವಂತೆ - ಮುಂದಿನದು ಅವರ ಮಹಾಕಾರ್ಯದ ಅಲೌಕಿಕತೆಯನ್ನು ಎತ್ತಿ ತೋರಿಸುವದು.

“ಬಸವಣ್ಣನವರು ಕೈ ಹಿಡಿದು ಧೈರ್ಯವನ್ನೂ ತಿಳಿವಳಿಕೆಯನ್ನೂ ತುಂಬ ನೈಜಶಕ್ತಿಯನ್ನೂ ನೈಜಸ್ವರೂಪವನ್ನೂ ತಿಳಿಯಪಡಿಸಿದ್ದರಿಂದ ಅನೇಕರಲ್ಲಿ ಚಿಜ್ಯೋತಿಯು ಬೆಳಗಿ ಅಜ್ಞಾನಾಂಧಕಾರವು ತೊಲಗಿತು. ಕರ್ಮಪಾಶಗಳು ಉರಿದುಹೋದವು. ಈ ಮಾನವ ಶರೀರದಲ್ಲಿ ಅಡಗಿರುವ, ನಾನಾ ಕರ್ಮ ಬಂಧನಗಳಿಂದ ಬಿಗಿವಡೆದಿರುವ, ಅನೇಕ ದೌರ್ಬಲ್ಯಗಳಿಂದ ಕುಗ್ಗಿ ಹೋಗಿರುವ, ಅಂತರಾತ್ಮನನ್ನು ಅವರು ಹೀಗೆ ಬಿಡುಗಡೆ ಮಾಡಿದರು. ಆ ಅಂತರಾತ್ಮನನ್ನು ಸ್ವಯಂಪ್ರಕಾಶಕನೆಂಬುದು ಲಕ್ಷಾಂತರ ಜನಗಳಿಗೆ ಗೋಚರಿಸಿತು. ಅವರೆಲ್ಲರೂ ಭೂಲೋಕದಲ್ಲಿದ್ದು ಮುಕ್ತಜೀವರಾದರು. ಆ ಮಹಾನುಭಾವರೆಲ್ಲರೂ ತಾವು ಕಂಡುಕೊಂಡ ಸತ್ಯವನ್ನು ಇಲ್ಲಿ ಪ್ರಸಾರಮಾಡತೊಡಗಿದರು... ತಮ್ಮಲ್ಲಿದ್ದ ಅವಲೋಹವನ್ನು ಕಳೆದು ಅಪರಂಜಿಗಳನ್ನಾಗಿ ಮಾಡಿದ 'ಬಸವಣ್ಣನವರಿಗೆ, ಅವರು ಕೃತಜ್ಞರಾಗಿರರೇಕೆ !... ನೂರಾರು ವರ್ಷಗಳಾದರೂ ಲಕ್ಷಾಂತರ ಜನರ ಮೇಲೆ ಬಸವಣ್ಣನವರ ಪ್ರಭಾವಮುದ್ರೆಯು ಮಾಸದಿರಬೇಕಾದರೆ, ಆ ಮಹಾನುಭಾವರಲ್ಲಿ ಅದ್ಭುತ ಮೂರ್ತಿಸ್ವರೂಪವಿದ್ದಿರಬೇಕು. ಅವರಲ್ಲಿ ದಿವ್ಯ ತೇಜಸ್ಸು ಇದ್ದಿರಬೇಕು.

“ಬಸವಣ್ಣನವರ ಜೀವನ ಚರಿತ್ರೆಯು ಇಂತಹದು. ಅಭಿಮಾನಶಾಲಿಗಳಾದ ವೀರಶೈವ ಮಹಾಜನಗಳು ಬಸವಣ್ಣನವರನ್ನು ಕೇವಲ ನಂದೀಶ್ವರನ ಅವತಾರವೆಂದು ಭಾವಿಸಲಿ, ಅಭಿಜ್ಞರು ಅವರನ್ನು

138
ಮಾನವರಾಗಿ ಜನಸಿ ದೇವತ್ವಕ್ಕೆ ಏರಿದ ಮಹಿಮಾಪುರುಷರೆಂದೇ ಭಾವಿಸಲಿ, ಬಸವಣ್ಣನವರು ಮಾಡಿದ ಕಾರ್ಯನಿರ್ವಾಹದಿಂದ ಅವರನ್ನು ನಾವು ಕಾರಣಪುರುಷರೆಂದು ಹೇಳಲೇಬೇಕು. ಪ್ರಪಂಚದ ಇತಿಹಾಸದಲ್ಲಿ ಮತಸ್ಥಾಪಕರೂ ಮತೋದ್ಧಾರಕರೂ ಯಾವುದೊಂದು ಚಿತ್ಕಳೆಯನ್ನು ಪಡೆದು ಭಗವಂತನ ಸಂಕಲ್ಪಕ್ಕಾಗಿ ಅವತರಿಸಿದರೋ, ಅದೇ ಚಿತ್ಕಳೆಯನ್ನು ಪಡೆದು ಬಸವಣ್ಣನವರ ಅವತಾರ ಮಾಡಿದರು. ಮತಪ್ರಚಾರಕರಾಗಿ ಅವರ ಸ್ಥಾನವು ಅತಿ ಉನ್ನತವಾಗಿದೆ. ತತ್ತ್ವಬೋಧಕರಾಗಿ ಅವರ ಸ್ಥಾನ ಇನ್ನೂ ಉನ್ನತವಾಗಿದೆ. ಭಕ್ತರಾಗಿ ಅವರ ಸ್ಥಾನ ಅತ್ಯುನ್ನತವಾಗಿದೆ. ಇಂತಹ ಮಹಾತ್ಮರು ಕರ್ನಾಟಕದಲ್ಲಿ ಅವತರಿಸಿದರು. ಕರ್ನಾಟಕದ ಕೀರ್ತಿ ಅವರಿಂದಲೂ ಹೆಚ್ಚಿರುವದು. ಸಮಾಜಸುಧಾರಣೆಗಾಗಲಿ, ರಾಷ್ಟ್ರಸುಧಾರಣೆಗಾಗಲಿ, ಅವರು ಹಾಕಿರುವ ಮೇಲ್ಪಜ್‌ಯನ್ನು ಇಂದಿಗೂ ನಾವು ಅನುಸರಿಸಬೇಕಾಗಿದೆ. ಅವರ ವಚನಗಳಿಂದ ಅವರ ಮೂರ್ತ ಸ್ವರೂಪವನ್ನು ಚಿತ್ರಿಸಿ, ಅವರ ಕಾರ್ಯಕಲಾಪಗಳಿಂದ ಅವರ ಮಹಿಮೆಯನ್ನು ರೂಪಿಸಿ, ಲೋಕದ ಮುಂದೆ ನಿಜವಾದ ಬಸವಣ್ಣನವರನ್ನು ಸ್ಥಾಪಿಸುವದೊಂದೇ ಅವರಿಗೆ ನಾವು ನ್ಯಾಯವಾಗಿ ಸಲ್ಲಿಸುವ ಭಕ್ತಿಯ ಕಾಣಿಕೆಯಾಗಿರುತ್ತದೆ. ಬಸವಣ್ಣನವರು ವೀರಶೈವರಿಗೆ ಮಾತ್ರ ಸಂಬಂಧಪಟ್ಟವರಲ್ಲ; ಅವರು ಇಡೀ ಭರತಖಂಡಕ್ಕೆ, ಇಡಿ ಪ್ರಪಂಚಕ್ಕೆ ಸಂಬಂಧಪಟ್ಟ ಮಹಾಪುರುಷರು.೩೧
ಬಸವಣ್ಣನವರ ವ್ಯಕ್ತಿತ್ವದ ಹಾಗೂ ಅವರ ವಚನಗಳ ಅಲೌಕಿಕ ಹಿರಿಮೆಯನ್ನು ಕುರಿತು, ಇನ್ನೊಬ್ಬ ಹಿರಿಯರ ಅಭಿಮತವನ್ನು ಅರುಹಿ ಮುಂದುವರಿಯುವೆ.
ಪ್ರಭುದೇವನು ಹಿರಿಯ ಜ್ಞಾನಿಯಾದರೆ, ಬಸವೇಶ್ವರನು ಹಿರಿಯ ಭಕ್ತ ಬೇರೆಬೇರೆಯಾಗಿ ಬೆಳೆದು ಎತ್ತರದಲ್ಲಿ ಬೆರೆತ ಮರಗಳಂತೆ ಅವರು
————
೩೧. ಭ.ಬ. ಪು. ೧೭೫-೧೭೬

139

ಕೂಡಿಕೊಂಡರು. ಬಸವೇಶ್ವರನು ಕ್ರಾಂತಿಕಾರಕವಾದ ಒಂದು ಮಾರ್ಗದ, ಮತದ ಸಂಘಟನಕಾರನಾದನು. ಅವನ ಭಕ್ತಿ ಕರ್ಮಗಳು ಸಂಘಟನೆಯ ಭರದಲ್ಲಿದೂಷಿತವಾಗಬಾರದೆಂದು ಪ್ರಭುದೇವನು ತನ್ನ ಜ್ಞಾನ-ವಿರಕ್ತಿಗಳ ಒರೆಗಲ್ಲನ್ನು ಒದಗಿಸಿದನು. ಪ್ರಭುದೇವನ ಜ್ಞಾನದೆತ್ತರವು ಲೋಕದಿಂದ ಅಲಿಪ್ತವಾಗಕೂಡದೆಂದು ಬಸವೇಶ್ವರನು ಅವನಿಗೆ ನಾಯಕಪದವಿಯನ್ನಿತ್ತನು. ಬಸವಣ್ಣನ ವ್ಯಕ್ತಿತ್ವ ಎಷ್ಟು ಹಿರಿದೋ ಅಷ್ಟು ಮಾನವೀಯ, ಅದರ ಸ್ಪಂದನವನ್ನೂ ಹೋರಾಟವನ್ನೂ ನಾವು ಅರ್ಥಮಾಡಿಕೊಂಡು ಅನುಭವಿಸಬಲ್ಲೆವು. ಅವನ ಆರ್ತಭಕ್ತಿ ಕರ್ಮಜೀವನದ ತೊಡಕು, ಸಮಾಜದೂಷಣೆ ಎಲ್ಲವೂ ಒಂದು ಬೆಳೆಯುತ್ತಲಿರುವ ಪ್ರತಿಕೂಲ ಪರಿಸ್ಥಿತಿಯ ಕೂಡ ಹೋಗುತ್ತ ಏರುತ್ತಲಿರುವ, ಮಹಾಜೀವನದ ಸಹಜರಮ್ಯವಾದ ಅಭಿವ್ಯಕ್ತಿ, ಈ ಸೂತ್ರವನ್ನು ಮನದಂದು ಅವನ ವಚನಗಳನ್ನು ಓದಿದರೆ, ಅವನ ವಿಕಾಸಶೀಲವಾದ ಮಹಾ ವ್ಯಕ್ತಿತ್ವ, ಅದನ್ನು ಪರಿಪರಿಯಾಗಿ ಒಡಮೂಡಿಸಿದ ವಚನಸಂಪತ್ತಿ ಇವನ್ನು ಅರಿತುಕೊಳ್ಳಬಹುದು.
“ಬಸವೇಶ್ವರನು ಹಿರಿಯ ಭಕ್ತ ಭಕ್ತಿಭಾಂಡಾರಿ ಎಂದು ಹೆಸರಾಗಿದ್ದಾನೆ. ಆದರೆ ಅವನು ಬೆಳೆಬೆಳೆಯುತ್ತಲೇ ಈ ನೆಲೆಗೆ ಮುಟ್ಟಿದನು. ಇದನ್ನು ಅವನ ವಚನಗಳಲ್ಲಿ ಹೆಜ್ಜೆ ಹೆಜ್ಜೆಗೆ ಕಾಣುತ್ತೇವೆ. ಅವನ ಬೆಳವಣಿಗೆ ಅವನ ರೀತಿಯಲ್ಲಿ ಎಂಬುದನ್ನು ಮಾತ್ರ ಮರೆಯಕೂಡದು. ಯಾವದನ್ನೂ ಯಾರಿಂದಲೂ ಬಚ್ಚಿಡದೆ, ಅವನು ತನ್ನ ಅಂತರಂಗವನ್ನು ತೆರೆದಿಡುತ್ತಾನೆ. ತನ್ನ ದುಃಖವನ್ನು ತಿರುತಿರುವಿ ತೋಡಿಕೊಳ್ಳುತ್ತಾನೆ. ತನ್ನ ಕುಂದುಕೊರತೆಗಳನ್ನು ಆಡಿಕೊಳ್ಳುತ್ತಾನೆ. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೆ. ಉಳಿದೆಲ್ಲ ವಚನಕಾರರಿಗಿಂತ ಹೆಚ್ಚಾಗಿ ಅವನಲ್ಲಿ ಆತ್ಮನಿರೀಕ್ಷಣೆಯ ಪ್ರವೃತ್ತಿಯಿದೆ... ಅವನ ಈ ವಚನಗಳಲ್ಲಿ ಎಲ್ಲ ಸಾಮಾನ್ಯ ಮಾನವರು ತಮ್ಮ ಎದೆಯ ಮಿಡಿತವನ್ನು ಕೇಳುತ್ತಾರೆ. ಆದರೆ ತಮಗಿಂತ ಏನೋ ಬೇರೆ ಎಂಬುದನ್ನು ಅನುಭವಿಸುತ್ತಾರೆ.
————
೩೨. ಕ.ಸಾ.ಚ. ಪು. ೧೫೮

140
વ ಮಹಾವ್ಯಕ್ತಿಗಳು ತಮ್ಮ ಕಣ್ಣ ಮುಂದಿನ ಹಿರಿಯ ಗುರಿಯನ್ನು ಯಾವಾಗಲೂ ನೆನೆದು, ಅದಕ್ಕೆ ಅನುಗುಣವಾಗಿ ತಾವು ಹದಿನಾರಾಣೆ ಬಾಳಿಲ್ಲವೆಂದು ಕೊರಗುತ್ತಾರೆ. ಅಂದಂದಿನ ಕಿರಿಯ ಕೊರತೆಗಳು ಅವರಿಗೆ ಹಿರಿಯವಾಗಿ ತೋರುತ್ತವೆ. ಅವನ್ನು ಅವರು ಅತಿಶಯೋಕ್ತಿಯ ಭಾಷೆಯಲ್ಲಿ ಕೆಲವು ಸಲ ಬಣ್ಣಿಸುತ್ತಾರೆ. ಅವರ ಪ್ರಗತಿಗೆ ಅದೇ ಪ್ರೇರಣೆಯಾಗುತ್ತದೆ. ಅವರ ಆತ್ಮದೂಷಣೆ ಸಾಮಾನ್ಯ ಮನುಷ್ಯನ ಆತ್ಮದೂಷಣೆಗಿಂತ ಬೇರೆ ಎಂಬುದನ್ನು ನೆನೆಯಬೇಕು... ಆತ್ಮಭಕ್ತಿಯಿಂದ ಮುಂದೆ ಸಾಧನೆ ಮಾಡುತ್ತ ಬಸವೇಶ್ವರನು ಭಕ್ತಿಯಲ್ಲಿ ಪರಿಣತನಾದನು, ಶಿವನಲ್ಲಿ ತನ್ನದೆಲ್ಲವನ್ನು ಅರ್ಪಿಸಿದನು. ಅವನ ದೇಹ-ಮನ-ಪ್ರಾಣಗಳ ತ್ರಿವಿಧವು 'ನಾನು ನಿನ್ನ ದಾಸ' ಎಂಬ ದಾಸೋಹ ಭಾವದಲ್ಲಿ ಮುಳುಗಿ ಏಳುತ್ತಿತ್ತು.
“ಬಸವೇಶ್ವರನು ತನ್ನ ಅಂತರಂಗವನ್ನು ತಿಳಿಗೊಳದಂತೆ ತೋರಿಸಿರುವಂತೆ ಸಮಾಜದ ಅಂತರಂಗವನ್ನೂ ಸಮರ್ಪಕವಾಗಿ ತನ್ನ ವಚನಗಳಲ್ಲಿ ಮೂಡಿಸಿದ್ದಾನೆ. ಅ೦ದಿನ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ತೋರಿಸಿಕೊಟ್ಟಿದ್ದಾನೆ. ಹೊಸ ಸಮಾಜದ ಸೂತ್ರಗಳನ್ನು ಸಾರಿದ್ದಾನೆ... ಸಮಾಜದಲ್ಲಿ ಅಂದು ಬಸವಣ್ಣನಿಗೆ ಕಂಡುಬಂದ ದೋಷವೆಂದರೆ ತನ್ನನ್ನು ಬಿಟ್ಟು ಉಳಿದವರು ಡೊಂಕು ತಿದ್ದುವ ಹವ್ಯಾಸ, ಭೀತಿಗ್ರಸ್ತವೂ ದಾಂಭಿಕವೂ ಆದ ಸಮಾಜದಲ್ಲಿ ಈ ಆತ್ಮವಿಮರ್ಶೆಯ ಅಭಾವವು ಅಥವಾ ತನ್ನದನ್ನು ಮುಚ್ಚಿಟ್ಟು ಇತರರ ಹುಳುಕು ತೆಗೆಯುವ ಪ್ರವೃತ್ತಿ ಬೆಳೆಯುತ್ತ ಹೋಗುತ್ತದೆ. ಸಮಾಜದ ಮೂಲ್ಯಗಳು ತಿರುವುಮುರುವಾಗುತ್ತವೆ. ಈ ರೋಗನಿದಾನವನ್ನು ಬಸವಣ್ಣನು ಬಹಳ ಸಮರ್ಥವಾದ ರೀತಿಯಲ್ಲಿ ಮಾಡಿದ್ದಾನೆ... ಈ ಸಮಾಜ ಟೀಕೆ ಅಲ್ಲಲ್ಲಿ ಕಟುವಾಗಿದೆ, ನಿಜ. ಆದರೆ ಅದು ಸಾತ್ವಿಕ ಸಂತಾಪದಿಂದ ಪ್ರೇರಿತವಾದುದು. ವೈದಿಕರು-ಅವೈದಿಕರು, ಭವಿಗಳು- ಭಕ್ತರು ಯಾರೇ ಇರತಿ, ಅವರಲ್ಲಿಯ ಹುಸಿ-ಮೋಸಗಳನ್ನು ಅದು ಬಯಲಿಗೆಳೆಯುತ್ತದೆ. ಯಾವದೊಂದು ವ್ಯಕ್ತಿಯ ಅಥವಾ ಗುಂಪಿನ ದ್ವೇಷವಲ್ಲ ಆದರೆ ಅನ್ಯಾಯ ವೈಷಮ್ಯಗಳಿಂದ ಕೂಡಿದ

141

ಅಂದಿನ ಸಮಾಜವ್ಯವಸ್ಥೆಯ ಬಗ್ಗೆ ತಾತ್ಸಾರ, ಅದಕ್ಕೆ ಸ್ಥಾಯಿ. ಭೂತದಯೆ, ಸಮಾನತೆಯ ತಳಹದಿಯ ಮೇಲೆ ನವಸಮಾಜವನ್ನು ಕಟ್ಟಬೇಕೆಂಬುದೇ ಬಸವಣ್ಣನ ದರ್ಶನವಾಯಿತು. ಅಂತೆಯೇ ಅರ್ಥರಹಿತವಾದ ಹಿಂಸೆಯನ್ನು ಬೋಧಿಸುವ ಯಜ್ಞಸಂಸ್ಥೆಯನ್ನು ಪ್ರಾಣಬಲಿಯನ್ನು ಅವನು ಖಂಡಿಸಿದನು. ವೈಷಮ್ಯಕ್ಕೆ ಕಾರಣವಾದ ವರ್ಣಾಶ್ರಮಪದ್ಧತಿಯನ್ನು ನಿರಾಕರಿಸಿದನು. ಮೂಲತಃ ಅವುಗಳಲ್ಲಿಯ ಗುಣಗಳೇನೇ ಇದ್ದರೂ, ಮಧ್ಯ ಯುಗದಲ್ಲಿ ಅವು ಕುರುಡುಸಂಪ್ರದಾಯಗಳಾಗಿ ಅಧರ್ಮ- ಅನೀತಿಗಳ ಪ್ರಸಾರ ಕೇಂದ್ರಗಳಾಗಿದ್ದವು. ಅವುಗಳನ್ನು ಪ್ರತಿಭಟಿಸುವುದು ಅವಶ್ಯವಾಗಿತ್ತು.
ಸಾಹಿತ್ಯ ದೃಷ್ಟಿಯಿಂದ ಈ ವಚನಗಳ ಗುಣಾತಿಶಯವನ್ನು ಈವರೆಗೆ ಸೂಚಿಸಲಾಗಿದೆ. ಪ್ರತ್ಯೇಕವಾಗಿ ನೋಡಿದರೂ ಅವುಗಳ ಸಹಜಸ್ಪೂ ರ್ತವಾದ ಚಿತ್ರಶಕ್ತಿ ಭಾವಶಕ್ತಿ ಮತ್ತು ಶಬ್ದಶಕ್ತಿಗಳು ಅಚ್ಚರಿಗೊಳಿಸುತ್ತವೆ... ಪ್ರಭುದೇವನ ವಚನಗಳಂತೆ ಕ್ವಚಿತ್ತಾಗಿ ಇಲ್ಲಿ ಬೆಡಗಿನ ವಚನದ ಕ್ಲಿಷ್ಟತೆ ಬಂದಿದೆ. ಆದರೆ ಸಾಮಾನ್ಯವಾಗಿ ಬಸವೇಶ್ವರನ ವಚನಗಳು ಪ್ರಸನ್ನವಾಗಿವೆ, ಲಲಿತವಾಗಿವೆ. ಹಿರಿಯ ಸಾಹಿತ್ಯದ ಒಂದು ವಿಶೇಷಸ್ವರೂಪವು ಅವುಗಳಲ್ಲಿದೆ. ಬಸವೇಶ್ವರನು ಕರ್ನಾಟಕದ ಮಹಾವ್ಯಕ್ತಿಯಾಗಿರುವಂತೆ ಭಾರತೀಯ ಮಹಾಪುರುಷರಲ್ಲಿ ಒಬ್ಬನಾಗಿದ್ದಾನೆ. ಅವನ ವಚನಗಳು ವೀರಶೈವ ಧರ್ಮದ ಹಾಗೂ ವಿಶ್ವಧರ್ಮದ ಕನ್ನಡಿಯಾಗಿದ್ದು ಭಾರತೀಯ ಸಾಹಿತ್ಯಕ್ಕೆ ಕನ್ನಡದ ಹಿರಿಯ ಕೊಡುಗೆಯಾಗಿದೆ. ೩೩
,, ಸನಾತನ ಸಂದೇಶ :
ಎಲ್ಲ ಸಂತರ, ಶರಣರ ಸಂದೇಶದಲ್ಲಿ ಎರಡು ಅಂಶಗಳು ಇರುವವು. ಒಂದು ತನಾತನ, ಇನ್ನೊಂದು ಸನಾತನ. ಒಂದು ತಾತ್ಕಾಲಿಕ, ಇನ್ನೊಂದು ಸಾರ್ವಕಾಲಿಕ. ಒಂದು ನಾಡಿಗಾಗಿ, ಇನ್ನೊಂದು ಎಲ್ಲ
————
೩೩. ಕ.ಸಾ.ಇ, ಪು. ೭೮-೮೩

142
ನಾಡುಗಳಿಗಾಗಿ, ಎಲ್ಲ ಸಂತರು ಜನಿಸಿದುದು ಒಂದು ಕಾಲದಲ್ಲಿ ಒಂದು ದೇಶದಲ್ಲಿ ಒಂದು ಸಮಾಜದಲ್ಲಿ ಭಗವಂತನು ಅವರನ್ನು ಆಯಾ ಕಾಲದ, ಆಯಾ ದೇಶದ, ಜನರಿಗೆ ತೀರ ಅವಶ್ಯವಾದ ಸಂದೇಶವನ್ನು ಸಲ್ಲಿಸಿ, ಅವರನ್ನು ಉದ್ಧರಿಸಲು ಕಳುಹಿಸಿರುವ, ಅವರು ಪರಮಾತ್ಮನ ಆದೇಶದ ಮೇರೆಗೆ ಅವತರಿಸಿ, ತಮ್ಮ ಲೋಕೋದ್ಧಾರದ ಕಾರ್ಯವನ್ನು ನೆರವೇರಿಸಿ, ತೆರಳುವರು. ಆಯಾ ಜನಾಂಗದವರಲ್ಲಿ ಅವರವರ ಸಂಸ್ಕಾರಗಳಿಗೆ ಸರಿಹೋಗುವ ರೀತಿಯಲ್ಲಿ ನೀತಿಯ ಸಂದೇಶವನ್ನೂ ಭಗವಂತನ ಭಕ್ತಿ-ಅನುಭಾವಗಳ ಸಂದೇಶವನ್ನೂ ಬೀರಿರುವರು. ನೀತಿಯು ಸನಾತನವಾದುದು, ಭಕ್ತಿಯು ಸನಾತನವಾದುದು, ಅನುಭಾವವು ಸನಾತನವಾದುದು. ಅವನ್ನು ಅರುಹಿದ ರೀತಿಯು, ಭಾಷೆಯು ತನಾತನವಾದುದು, ತಾತ್ಕಾಲಿಕವಾದುದು.
ಶ್ರೀ ಬಸವಣ್ಣನವರು ಇದಕ್ಕೆ ಅಪವಾದವಾಗುವದೆಂತು? ಅವರು ಕನ್ನಡಿಗರನ್ನು ಉದ್ದರಿಸಲು, ಕನ್ನಡ ನಾಡಿನಲ್ಲಿ ಅವತರಿಸಿದರು. ಅಂದಿನ ಸಮಾಜಕ್ಕೆ-ವಸ್ತುಸ್ಥಿತಿಗೆ ಸರಿಹೋಗುವ ರೀತಿಯಲ್ಲಿ ತಮ್ಮ ಪರಶಿವನ ಭಕ್ತಿ ಅನುಭಾವಗಳ ಬೋಧೆಯನ್ನು ನೀಡಿದರು. ಅದಕ್ಕೆ ಪೋಷಕವಾದ ನೀತಿ ಧರ್ಮವನ್ನು ಅರುಹಿದರು. ಜನರಲ್ಲಿ ನೀತಿಜೀವನದ ಹಾಗೂ ಭಕ್ತಿಜೀವನದ ಹೊಳೆಯನ್ನು ಹರಿಯಿಸಿದರು. ಭಕ್ತಿಜನಿತ ಸಮತೆಯ ತಳಹದಿಯ ಮೇಲೆ ಒಂದು ಅಂದವಾದ ವೀರಶೈವಬಾಂಧವ್ಯವನ್ನು ನಿರ್ಮಿಸಿದರು. ಸಂಕುಚಿತ ವೃತ್ತಿಯ ಕುರುಡುನಂಬಿಕೆಯ ಕತ್ತಲಲ್ಲಿ ತಡವರಿಸುತ್ತಿರುವ ಕನ್ನಡಿಗರಿಗೆ ನೀತಿ-ಭಕ್ತಿಗಳ ಬೆಳಕನ್ನು ಕಾಣಿಸಿ, ಕನ್ನಡ ಕುಲದೀಪಕರಾದರು. ಅಂದು ಅವರು ಕಾಣಿಸಿದ ಹಿರಿಯ ಬೆಳಕು, ಸಲ್ಲಿಸಿದ ದಿವ್ಯಸಂದೇಶವು, ಇಂದಿನವರಿಗೂ ಬೆಳಕಿನ ಹೊನಲಾಗಿ, ಸ್ಪೂ ರ್ತಿಯ ಸೆಲೆಯಾಗಿ ಪರಿಣಮಿಸದಿರದು. ಬಸವಣ್ಣನವರಿಂದ ಅಂಥ ಬೆಳಕನ್ನೂ ಚೈತನ್ಯವನ್ನೂ ಪಡೆದು ನಾವು ಇಂದು ಚೆನ್ನಾಗಿ ಬಾಳಿದರೆ, ನಮ್ಮ ನವಚೈತನ್ಯದಿಂದ ತುಂಬಿದ ಬೆಳಗುವ ಬಾಳು ಬಸವಣ್ಣನವರನ್ನು ಭಾರತಜ್ಯೋತಿಯನ್ನಾಗಿ ಮಾಡುವದಲ್ಲದೆ, ಜಗಜ್ಯೋತಿಯನ್ನು ಆಗಿಯೂ ಮಾಡಬಲ್ಲದು. ಶಿಷ್ಯರ ಬೆಳಕಿನ ಬಾಳೇ ಅವರ ಗುರುಗಳ ત્ર

143

ಹಿರಿಮೆಯನ್ನು ಕಾಣಿಸುವ ಹಿರಿದಾದ ಕುರುಹು, ಅವರ ಮಹಿಮೆಯನ್ನು ಮಹಿಯಲ್ಲಿ ಮೆರೆಯಿಸುವ ಭವ್ಯವಾದ, ದಿವ್ಯವಾದ ಬಾವುಟ !

ಶ್ರೀ ಬಸವಣ್ಣನವರು ನಮಗೆ ಅದಾವ ಸಂದೇಶವನ್ನು ಸಲ್ಲಿಸಿರುವರು? ಅವರ ಸಂದೇಶದಲ್ಲಯ ಸನಾತನ ಅಂಶಗಳಾವವು? “ಅರಿತರೆ ಶರಣ, ಮರೆತರೆ ಮಾನವ ಎಂಬುದು ಅವರ ಸಂದೇಶದಲ್ಲಿ ಮೊದಲನೆಯ ಸನಾತನ ಅಂಶ. ಅರಿವು ಅಂದರೆ ಜ್ಞಾನ, ಮರವು ಅಂದರೆ ಅಜ್ಞಾನ, ಶರಣನು ಏನನ್ನು ಅರಿತಿರುವ ? ಮಾನವನು ಏನನ್ನು ಮರೆತಿರುವ ? ಶರಣನು ತನ್ನನ್ನು ಅರಿತಿರುವ ತನ್ನ ನಿಜಸ್ವರೂಪವನ್ನು ಅರಿತಿರುವ. ತನ್ನ ಆತ್ಮನನ್ನು ಅರಿತಿರುವ. ಮಾನವನು ಅದನ್ನೆಯ ಮರೆತಿರುವ. ಅವನಿಗೆ ತಾನಾರು ? ತನ್ನ ನಿಜರೂಪ ಎಂತಹದು ? ಎಂಬುದರ ಅರಿವು ಇರುವುದಿಲ್ಲ. ಅವನು ತನ್ನ ದೇಹವೇ ತಾನೆಂದು ಬಗೆದಿರುವ. ಅದರ ಆರೈಕೆಯಲ್ಲಿಯೇ ತನ್ನ ಕಾಲವನ್ನು ಕಳೆಯುತ್ತಿರುವ ತನ್ನಲ್ಲಿರುವ ಆತ್ಮನ ಅರಿವೇ ಆತನಿಗಿರುವದಿಲ್ಲ. ಆದುದರಿಂದ ಈ ಮರೆವನ್ನು ತೊರೆದು, ತನ್ನ ತಾನರಿತು, ಅವನು ಶರಣಾಗಬೇಕೆಂದು ಬಸವಣ್ಣನವರು ಬೋಧಿಸಿದರು.
ಈ ಬಗೆಯ 'ಆತ್ಮನ ಜ್ಞಾನ'ವು 'ಅರಿವಿ'ನ ತಿರುಳು. ಆದರೆ “ಆತ್ಮಜ್ಞಾನ' ಇಲ್ಲವೇ 'ತನ್ನ ತಾನರಿ!' ಎಂಬ ಅರ್ಥಪೂರ್ಣವಾದ ಸೂತ್ರ ಮತ್ತೂ ಕೆಲ ಮಾತುಗಳನ್ನು ಒಳಗೊಂಡಿರುವದು. ತನ್ನ ತಾನರಿಯುವದೆಂದರೆ, ತನ್ನ ದೇಹ, ಮನ, ಬುದ್ದಿ ಆತ್ಮ ಇವೆಲ್ಲವುಗಳನ್ನು ಅರಿವುದು. ಇವುಗಳ ಸ್ವರೂಪವೇನು? ಇವುಗಳ ಪರಸ್ಪರ ಸಂಬಂಧವೇನು? ಇವುಗಳಲ್ಲಿಯ ನಿತ್ಯವಾವುದು? ಅನಿತ್ಯವಾವುದು? ತನ್ನ ಶಾಶ್ವತವಾದ ನಿಜರೂಪವಾವುದು? ಎಂಬುದನ್ನು ಅರಿಯುವುದು. ಇದು ಬೌದ್ಧಿಕ ವಿಚಾರ, ಬೌದ್ಧಿಕ ಜ್ಞಾನ. ಇದು ದರ್ಶನಕ್ಕೆ ಸಂಬಂಧಿ ಸಿದುದು. ಇದಕ್ಕೆ ವಿವೇಕಜಾಗೃತಿಯು ಬೇಕು. ದೇಹೇಂದ್ರಿಯಗಳು ಅನಿತ್ಯ, ಅಸಾರ ; ಆತ್ಮನು- ಪರಮಾತ್ಮನು ನಿತ್ಯನು, ಸಾರಭೂತನು. ಆದುದರಿಂದ ಮಾನವನು ಅಸಾರವನ್ನು ತೊರೆದು ಸಾರವನ್ನು

144
ಸೇವಿಸಬೇಕೆಂಬ ಬಸವಣ್ಣನವರ ಬೋಧೆಯ ತಿರುಳನ್ನು ಅವರ ಪರಂಪರೆಯಲ್ಲಿಯ ಸರ್ವಜ್ಞನ ಕೆಳಗಿನ ವಚನದಲ್ಲಿ ಚೆನ್ನಾಗಿ ಅರುಹಲಾಗಿರುವದು :

ನೀರ ಬೊಬ್ಬುಳಿ ನೆಚ್ಚಿ ಸಾರಿ ಕೆಡದಿರು ಮರುಳೇ !.
ಸಾರಗುಣಿಯಾಗು, ನಿಜ ತಿಳಿ, ಸರುವರೊಳು.
ಕಾರಣಿಕನಾಗು, ಸರ್ವಜ್ಞ.

.

ದೇಹವು ನೀರ ಗುಳ್ಳೆಯಂತೆ ಅನಿತ್ಯ-ಕ್ಷಣಭಂಗುರ. ಅದನ್ನು ನೆಚ್ಚಿ ಅದರಿಂದ ಲಭಿಸುವ ಸುಖದುಃಖಗಳ ಜಾಲದಲ್ಲಿ ಸಿಲುಕಿ ಕೆಡಬಾರದು. ಸಾರಭೂತವಾದ ಆತ್ಮನನ್ನು ಅರಿಯಬೇಕು. ಸಾರಗುಣಗಳನ್ನು ಪಡೆಯಬೇಕು. ಅದರಿಂದ ತನ್ನ ಹಾಗೂ ಅನ್ಯರ ಶಾಶ್ವತ ಕಲ್ಯಾಣವನ್ನು ಸಾಧಿಸಬೇಕು.

ತನ್ನ ಗುಣದೋಷಗಳನ್ನು ಅರಿಯುವದು, ತನ್ನ ತಾನರಿಯುವುದ' ರ ಎರಡನೆಯ ಅರ್ಥ. ತನ್ನಲ್ಲಿ ಅದಾವ ಗುಣಗಳು ನೆಲೆಸಿರುವವು? ಅದಾವ ಅವಗುಣಗಳು ನೆಲೆಸಿರುವವು? ಗುಣಗಳನ್ನು ಬೆಳೆಸುವದೆಂತು? ಅವಗುಣಗಳನ್ನು ಅಳಿಸುವದೆಂತು? ಎಂಬುದನ್ನು ನಾವು ಅರಿಯಬೇಕು. ಇದಕ್ಕೆ ಸರಿಯಾದ ಅಂತರ್ನಿರೀಕ್ಷಣವು ಅಗತ್ಯ. ಮಾನವರು ಸಾಮಾನ್ಯವಾಗಿ ಹೊರನೋಟವುಳ್ಳವರು. ಒಳನೋಟವುಳ್ಳವರು ಅವರಲ್ಲಿ ವಿರಲ. ಏಕೆಂದರೆ ಕಠೋಪನಿಷತ್ತು ಅರುಹುವ ಮೇರೆಗೆ -

ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ -
ತಸ್ಮಾತ್ ಪರಾಶ್ವತಿ ನಾಂತರಾತ್ಮನ್ |
ಕಶ್ಚಿತ್ ಧೀರ: ಪ್ರತ್ಯಗಾತ್ಮಾನಮೈಕ್ಷತ್
ಆವೃತ್ತ ಚಕ್ಷುರಮೃತತ್ವಮಿಚ್ಛನ್ ||

ಐಐ4-1

“ಭಗವಂತನು ನಮ್ಮ ಇಂದ್ರಿಯಗಳನ್ನು ಹೊರನೋಟ-ಹೊರ ಓಟವುಳ್ಳವುಗಳನ್ನಾಗಿ ನಿರ್ಮಿಸಿರುವ, ಆದುದರಿಂದ ಮನುಜನು ಒಳಗೆ ನೋಡುವದನ್ನುಳಿದು ಹೊರಗೆ ನೋಡುವ, ಅಮರಜೀವನವನ್ನು

145

ಬಯಸುವ ಒಬ್ಬಿಬ್ಬ ಜಾಣರು ಒಳನೋಟದಿಂದ ಅಂತರಾತ್ಮನನ್ನು ಕಾಣುವರು.

ಈ ಒಳನೋಟವು ಮೊದಲು ನಮಗೆ ನಮ್ಮ ಗುಣದೋಷಗಳನ್ನು ಕಾಣಿಸುವುದು. ಅದರ ನೆರವಿನಿಂದ ಅವನ್ನು ಕಂಡು, ಆನಂತರ ನಮ್ಮಲ್ಲಿಯ ದೋಷಗಳನ್ನು ಅಳಿಸಲು, ಹಾಗೂ ಗುಣಗಳನ್ನು ಬೆಳೆಸಲು ನಾವು ಸತತವಾಗಿ ಯತ್ನಿಸಬೇಕು. ಅಂದರೆ ಅದರಿಂದ ನಮ್ಮ ನೈತಿಕ ಉನ್ನತಿಯು ಸಾಧ್ಯ ಆಗುವದು.

ಬಸವಣ್ಣನವರು ಕೆಲ ಪ್ರಧಾನ ಅವಗುಣಗಳನ್ನು ತೊರೆಯಲು, ಕೆಲ ಪ್ರಧಾನ ಗುಣಗಳನ್ನು ಪೊರೆಯಲು ಬೋಧಿಸಿರುವರು. ಅವರು ತೊರೆಯ ಹೇಳಿದ ಅವಗುಣಗಳನ್ನು ಕೆಳಗಿನ ಅವರ ನುಡಿಗಳಲ್ಲಿ ಕಾಣಬಹುದು :

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಪರಧನವ ಬಯಸದಿರು, ಪರನಾರಿಗೆ ಹೆದರುತಿರು.

ಈ ಬಗೆಯಾಗಿ ಕಾಮಕ್ರೋಧಗಳನ್ನೂ ಅವುಗಳ ಸಂತಾನಗಳು ಆದ ಅನ್ಯ ಅವಗುಣಗಳನ್ನೂ ಅವರ ತೊರೆಯಲು ಬೋಧಿಸಿದರು. ಬಸವಣ್ಣನವರು ಬೆಳೆಸ ಹೇಳಿದ ಪ್ರಧಾನ ಸದ್ಗುಣಗಳಲ್ಲಿ ಸತ್ಯವು ಮೊದಲನೆಯದು.

ದಿಟವ ನುಡಿಯಿರಿ, ನುಡಿದಂತೆ ನಡೆಯಿರಿ' ಎಂಬುದು ಅವರ ಸತ್ಯ ಧರ್ಮದ ಸಂದೇಶ, ಮತಿ-ಮಾತು- ಕೃತಿಗಳಲ್ಲಿ ಏಕರೂಪತೆಯೇ ಸತ್ಯ. ಪವಿತ್ರವಾದ ಮತಿಗೆ ದೊರೆತ ಸತ್ಯದ ಕಾಣ್ಣೆಯು ಮಾತಿನಲ್ಲಿ ಹೊಳೆಯಬೇಕು, ಕೃತಿಯಲ್ಲಿ ಇಳಿಯಬೇಕು. ಅಂದರೆ ಸತ್ಯಧರ್ಮ ನೆರವೇರುವದು. 'ಚಿತ್ತೇ ವಾಚಿ ಕ್ರಿಯಾಯಾಂ ಚ ಸಾಧೂನಾಮೇಕರೂಪತಾ' ಎಂಬುದನ್ನು ನೆನೆಯಬೇಕು.

ನಮ್ಮ ನುಡಿಯು ಸತ್ಯವಾದುದಿರುವಂತೆ, ಪ್ರಿಯವಾದುದೂ ಇರಬೇಕು. ಅಪ್ರಿಯವಾದುದು-ಕಠೋರವಾದುದು ಇರಕೂಡದು.

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ।
ನ ಬ್ರೂಯಾತ್ ಸತ್ಯಮಪ್ರಿಯಮ್ ॥
ಪ್ರಿಯಂ ಚ ನಾನೃತಂ ಬ್ರೂಯಾತ್ ।
ಏಷ ಧರ್ಮ: ಸನಾತನ ॥

ಸತ್ಯವನ್ನು ನುಡಿಯಿರಿ. ಪ್ರಿಯವನ್ನು ನುಡಿಯಿರಿ. ಅಪ್ರಿಯವಾದ ಸತ್ಯವನ್ನೂ ಪ್ರಿಯವನ್ನೂ ಅಸತ್ಯವನ್ನೂ ನುಡಿಯದಿರಿ. ಇದೇ ಸನಾತನ ಧರ್ಮ ! ಬಸವಣ್ಣನವರು ತಮ್ಮ ವಚನವೊಂದರಲ್ಲಿ ಇದನ್ನೇ ಉಸುರಿರುವರು :

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ಅಹುದಹುದೆ'ನಬೇಕು.

ನಮ್ಮ ನುಡಿಯಲ್ಲಿ ಮುತ್ತಿನ ಸೌಂದರ್ಯ, ಮಾಣಿಕ್ಯದ ತೇಜ, ಸ್ಪಟಿಕದ ನಿರ್ಮಲತನ, ಭಾವಪೂರ್ಣತೆ ಇವೆಲ್ಲ ಗುಣಗಳಿರಬೇಕು. ಅದು ಸತ್ಯವೂ ಪ್ರಿಯವೂ ಹಿತಕರವೂ ಇರಬೇಕು. ಆದರೆ ನಡೆಯಿಲ್ಲದ ನುಡಿ ಭಗವಂತನಿಗೆ ಸೇರುವದಿಲ್ಲ. ಅವನು ನಡೆಯನ್ನು ನೋಡುವ, ಬರೀ ನುಡಿಯನ್ನಲ್ಲ. ಸರ್ವಜ್ಞನು ಉಸುರಿದ ಮೇರೆಗೆ :

ಮಾತೆ ಮಾಣಿಕ ಮತ್ತು ಮಾತಿನಿಂ ಸದರವು ।
ಮಾತಾಡಿದಂತೆ ನಡೆದಾತ, ಜಗವೆಲ್ಲ ।
ಕೂತಲ್ಲಿ ಆಳ್ವ, ಸರ್ವಜ್ಞ ॥

ನುಡಿಗಿಂತ ನಡೆ ಮೇಲು, ನಡೆಗಿಂತ ಇರುವು ಮೇಲು. 'Being is better than doing' ಆದುದರಿಂದ ಒಳ್ಳೆಯ ಬಾಳನ್ನು ಬಾಳಿರಿ ; ಒಳ್ಳೆಯ

147

ಮಾತನ್ನು ಆಡಿರಿ ; ಒಳ್ಳೆಯ ಕೃತಿಯನ್ನು ಮಾಡಿರಿ ! ಎಂಬುದು ಬಸವಣ್ಣನವರ ಹಿರಿದಾದ ಬೋಧೆ !
“ತನ್ನಂತೆ ಪರರ ಬಗೆಯಿರಿ' ಎಂಬುದು ಬಸವಣ್ಣನವರ ಸಮತ್ವಧರ್ಮ, ಪ್ರೇಮಧರ್ಮ. 'ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಣವಕ್ಕು' ಎಂದು ಸರ್ವಜ್ಞನು ಸಾರಿರುವ. 'ತನ್ನಂತೆ ಪರರು' ಎಂಬ ಸೂತ್ರದಲ್ಲಿ ಮೂರು ಬಗೆಯ ಸಮತೆಯು ಒಳಗೊಂಡಿರುವುದು : ಒಂದು ಬೌದ್ಧಿಕ ಸಮತೆ, ನೈತಿಕ ಸಮತೆ ಎರಡನೆಯದು, ಮೂರನೆಯದು ಪಾರಮಾರ್ಥಿಕ ಸಮತೆ, ತಾನೂ ಮಾನವ, ಪರರೂ ಮಾನವರು. ತನಗೆ ದೇಹೇಂದ್ರಿಯಗಳು, ಮನಸ್ಸು-ಬುದ್ದಿಗಳು ಇರುವಂತೆ ಅವರಿಗೂ ಇರುವವು. ತಾನು ಜನಿಸಿ, ಬಾಳಿ ಅಳಿಯುವಂತೆ, ಅವರೂ ಜನಿಸಿ ಬಾಳಿ ಅಳಿಯುವರು. ಸುಖವಾದಾಗ ತನ್ನಂತೆ ಅವರೂ ಆಡುವರು, ಹಾಡುವರು, ನಗುವರು, ಕಲೆಯುವರು. ದುಃಖವಾದಾಗ ಅವರು ತೊಳಲುವರು, ಬಳಲುವರು, ಅಳುವರು, ಕರೆಯುವರು. ಆದುದರಿಂದ ತನ್ನಲ್ಲಿ ಪರರಲ್ಲಿ ಅದಾವ ಭೇದ ? ಎಂಬುದೇ ಬೌದ್ಧಿಕ ಸಮತೆ. ಅದೇ ಮೇರೆಗೆ ತನ್ನಂತೆ ಪರರಿಗೂ ಒಳತಿನಿಂದ ಸುಖವಾಗುವದು, ಕೆಡಕಿನಿಂತ ದುಃಖವಾಗುವದು ; ಹೊಗಳಿಕೆಯಿಂದ ತನ್ನಂತೆ ಅವರೂ ನಲಿಯುವರು, ತೆಗಳಿಕೆಯಿಂದ ನವೆಯುವರು. ತನಗೆ ಸುಖವು ಬೇಕಾಗುವಂತೆ ಹಾಗೂ ದುಃಖವು ಬೇಡ ಆದಂತೆ, ಅವರಿಗೂ ಹಾಗೆಯೇ ಅನಿಸುವದು. ತನಗೆ ಅನ್ಯರು ಸುಖ ಕೊಡಬೇಕೆಂದು ತಾನು ಬಯಸಿದರೆ, ತಾನೂ ಅನ್ಯರಿಗೆ ಸುಖವನ್ನೆಯೇ ಕೊಡಬೇಡವೆ? ಅದು ತನ್ನ ಕರ್ತವ್ಯವಲ್ಲವೇ ? ಎಂಬ ವಿಚಾರವು ನೈತಿಕ ಸಮತೆಯ ನೆಲೆ. ಎಲ್ಲರ ಹೃದಯದಲ್ಲಿ ಭಗವಂತ ನೆಲೆಸಿರುವ. ಎಲ್ಲರಲ್ಲಿ ನೆಲೆಸಿರುವ ಆತ್ಮನು ಒಬ್ಬನೇ. ಈ ಬಗೆಯ ಅನುಭವ ಬಂದು, ಅದರ ಫಲವಾಗಿ ಉಂಟಾದ ಸಮತೆಯು ಪಾರಮಾರ್ಥಿಕ ಸಮತೆ, ಅದೇ ಸರ್ವಶ್ರೇಷ್ಠವಾದ ಸಮತೆ. ಎಲ್ಲರಲ್ಲಿ ಒಬ್ಬ ಆತ್ಮನನ್ನೇ, ಒಬ್ಬ ಭಗವಂತನನ್ನೆ ಸಾಕ್ಷಾತ್ಕರಿಸಿಕೊಂಡ ಹಿರಿಯರೇ ಈ ಬಗೆಯ ಆತ್ಮನ ಅಸ್ತಿತ್ವವೇ ಪರಸ್ಪರರಲ್ಲಿಯ ಪ್ರೀತಿಯ ಸೆಲೆ ಎಂದು ಉಸಿರಿರುವರು :

ನ ವಾ ಅರೇ ಸರ್ವಸ್ಯ ಕಾಮಾಯ ಸರ್ವ೦ ಪ್ರಿಯಂ ಭವತಿ |
ಆತ್ಮನಸ್ತು ಕಾಮಾಯ ಸರ್ವ೦ ಪ್ರಿಯಂ ಭವತಿ ||

ನಮಗೆ ಹೆಂಡಿರು, ಮಕ್ಕಳು ಇತ್ಯಾದಿ ಎಲ್ಲ ವ್ಯಕ್ತಿಗಳು ಪ್ರಿಯವಾಗುವದು, ಅವರಲ್ಲಿ ನೆಲೆಸಿರುವ ಆತ್ಮನ ಮೂಲಕವೇ, ಅವರ ದೇಹದ ಮೂಲಕವಲ್ಲ. ನಮ್ಮೆಲ್ಲರಲ್ಲಿ ಆತ್ಮನೊಬ್ಬನೇ ನೆಲೆಸಿರುವ. ನಮ್ಮಲ್ಲಿಯ ಆತ್ಮನು ಅನ್ಯರಲ್ಲಿಯ ಆತ್ಮನನ್ನು ಆಕರ್ಷಿಸುವ, ಅವರಲ್ಲಿಯ ಆತ್ಮನು ನಮ್ಮಲ್ಲಿಯ ಆತ್ಮನನ್ನು ಆಕರ್ಷಿಸುವ. ಪರಸ್ಪರರಲ್ಲಿಯ ಆಕರ್ಷಣವೇ ಪ್ರೀತಿಯ ಮೂಲ.

ಓರ್ವ ಹಿರಿಯರು ಅರುಹಿದ ಮೇರೆಗೆ :

"Love is the simplest manifestation of the oneness of the Absolute. Everyone who has loved knows that man forgets himself in loving others, nay, that for the time being there is the complete absence of another.... To the Supreme Lover, there is not other, no world outside the range and scope of his all embracing. Love... We should love our neighbours because they are ourselves. It is a simple awareness of an existing unity in Nature, a unity in Being. Love, then, is not different from or other than Truth. It is the Truth of the oneness of Life, apprehended through our emotions. Love is utterly spontaneous. There can be no compulsion, no duty in Love."

ಪ್ರೇಮವು ಪರಮಾತ್ಮನ ಏಕತೆಯ ಅತಿ ಸುಲಭವಾದ ಕುರುಹು. ಮನುಜನು ಅನ್ಯರನ್ನು ಪ್ರೀತಿಸುವಾಗ ತನ್ನನ್ನು ಮರೆಯುವನು ಎಂಬುದನ್ನು ಪ್ರೀತಿಸಿದ ಪ್ರತಿಯೊಬ್ಬರು ಬಲ್ಲರು. ಇಷ್ಟೇ ಅಲ್ಲ ಕೆಲ ಸಮಯದವರೆಗೆ ಅಂಥ ಮನುಜನಿಗೆ ಅನ್ಯರ ಅಸ್ತಿತ್ವದ ಅರಿವೇ ಇರುವದಿಲ್ಲ... ಪರಮ ಪ್ರೇಮ ಮೂರ್ತಿಯು ತನ್ನ ಸರ್ವಗತ ಪ್ರೀತಿಯ ಕ್ಷೇತ್ರದ ಆಚೆ ಬೇರೆ

149

ಜಗತ್ತನ್ನೇ ಕಾಣುವದಿಲ್ಲ.. ನಮ್ಮ ನೆರೆಯವರೆಂದರೆ ನಾವೇ ಇರುವ ಮೂಲಕ, ಅವರನ್ನು ನಾವು ಪ್ರೀತಿಸಬೇಕು. ಈ ಪ್ರೀತಿಯು ಪ್ರಕೃತಿಯಲ್ಲಿಯ ಹಾಗೂ ಸದ್ರೂಪದಲ್ಲಿಯ ಏಕತೆಯ ಅರಿವಿನ ಫಲ - ಕುರುಹು, ಆದುದರಿಂದ ಪ್ರೇಮವು ಸತ್ಯದಿಂದ ಭಿನ್ನವಾದ, ಬೇರೆಯಾದ ಮಾತಲ್ಲ, ಅದು ಜೀವನದಲ್ಲಿ ಏಕತೆಯಿದೆ ಎಂಬ ಸತ್ಯದ, ಭಾವನೆಯ ಮುಖಾಂತರ ಪ್ರತೀತವಾದ ಅರಿವು, ಪ್ರೇಮವು ತೀರ ಸಹಜವಾದುದು. ಪ್ರೇಮದಲ್ಲಿ ಒತ್ತಾಯಕ್ಕೆ, ಕರ್ತವ್ಯಬುದ್ಧಿಗೆ ಎಡೆಯಿಲ್ಲ.
ಮಾನವನಲ್ಲಿಯ ಈ ಪ್ರೀತಿಯ ಹೊನಲು ಭಗವಂತನೆಡೆ ಹರಿಯಿತೆಂದರೆ, ಅದು ಭಕ್ತಿಯಾಗಿ ಪರಿಣಮಿಸುವದು. ಭಕ್ತವರರಾದ ಬಸವಣ್ಣನವರು ಅಂಥ ಭಕ್ತಿಯನ್ನು ಬಲವಾಗಿ ಬೋಧಿಸಿರುವರು. ಭಗವಂತನು ಅದೆಂತಹನು? ಅವನು ಅದೆಲ್ಲಿರುವ? ಭಗವಂತನು “ಏಕೋದೇವನು', 'ದೇವನೊಬ್ಬ ನಾಮ ಹಲವು ಎಂಬುದು ಬಸವಣ್ಣನವರ ಹೇಳಿಕೆ. ಇದು 'ಏಕಂ ಸತ್ ವಿಪ್ರಾ ಬಹುಧಾ ವದಂತಿ', ಸಚ್ಚಿದಾನಂದ ಪರಮಾತ್ಮನು ಒಬ್ಬನು, ಹಿರಿಯರು ಆತನನ್ನು ಬಗೆಬಗೆಯ ಹೆಸರುಗಳಿಂದ ಕರೆದಿರುವರು ಎಂಬ ನಮ್ಮ ಋಷಿಗಳ ವಚನದ ಅನುವಾದವೇ ಸರಿ! ಬಸವಣ್ಣನವರ ಈ ಮಾತನ್ನು ಅವರ ಪರಂಪರೆಯಲ್ಲಿ ಬೆಳೆದ ಮುಂದಿನ ಶರಣರು ಚೆನ್ನಾಗಿ ವಿಶದೀಕರಿಸಿರುವರು. ಅವರಲ್ಲಿ ಸರ್ವಜ್ಞನು ಅರುಹುದೇನೆಂದರೆ :
ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ಮತ್ತೆ ।
ಒಬ್ಬ ಸರ್ವಜ್ಞ ಕರ್ತನು, ಜಗಕೆಲ್ಲ ।
ಒಬ್ಬನೇ ದೈವ ಸರ್ವಜ್ಞ ॥
ಆ ದೇವ ಈ ದೇವ ಮಾದೇವನೆನಬೇಡ ।
ಆ ದೇವರ ದೇವ ಭುವನ ಪ್ರಾಣಿಗಳ ।
ಗಾದವನೆ ದೇವ ಸರ್ವಜ್ಞ ॥
ದೇವನು ಒಬ್ಬ. ಆತನೇ ದೇವರ ದೇವ. ಆತನೇ ಭುವನಕ್ಕೂ ಪ್ರಾಣಿಗಳಿಗೂ 'ಆದವನು' ಅಂದರೆ ಅವರ ಸೃಷ್ಟಿ-ಸ್ಥಿತಿ-ಲಯಗಳಿಗೆ

150

ಕಾರಣನಾದವನು. ಅವೆಲ್ಲ ಆತನಲ್ಲಿಯೇ ಮೊಳೆಯುವವು, ಆತನಲ್ಲಿಯೇ ಬಾಳುವವು, ಬೆಳೆಯುವವು. ಆತನಲ್ಲಿಯೇ ಅಳಿಯುವವು. ಆತನನ್ನು ಯಾವ ರೂಪದಲ್ಲಿಯೂ ಪೂಜಿಸಬಹುದು. ಯಾವ ನಾಮದಿಂದಲೂ ನೆನೆಯಬಹುದು. ಬೇರೆ ಬೇರೆ ಭಕ್ತರ ಭಾವದೊಲು, 'ಅವರವರ ದರುಶನಕೆ, ಅವರವರ ವೇಷದಲಿ, ಆತನೇ ನಿಲ್ಲುವ' ಎಂಬ ಮಹೋನ್ನತ ಸಂದೇಶವನ್ನು ಬೇರೆ ಒಬ್ಬ ಹಿರಿಯ ಶರಣರು ಸಲ್ಲಿಸಿ ಇರುವರು.
ಶ್ರೀ ಬಸವಣ್ಣನವರು ಸಾಕ್ಷಾತ್ಕರಿಸಿಕೊಂಡ ಪರಮಶಿವನು- ಭಗವಂತನು ಸಚ್ಚಿದಾನಂದನು, ಜ್ಯೋತಿರ್ಮಯನು, ಪರಮಾನಂದ- ಮಯನು. ಆತನು ಅಣೋರಣೀಯಾನ್, ಮಹತೋ ಮಹೀಯಾನ್' “ಕಿರಿಯದಕ್ಕಿಂತ ಕಿರಿಯ, ಹಿರಿಯದಕ್ಕಿಂತ ಹಿರಿಯ !' ಓರ್ವ ಕವಿಯು ಬಣ್ಣಿಸಿದ ಮೇರೆಗೆ ಆತನು :
ಕಾಂತಿಸಾಗರ, ನಾದಸಾಗರ, ಅಮೃತಸಾಗರ ।
ಜ್ಞಾನ-ಬಲ-ಕಾರುಣ್ಯಸಾಗರ, ಶಾಂತಿಸಾಗರ ।
ಇರುವನು ! ಭಗವಂತನು ಇರುವದೆಲ್ಲಿ? ಎಲ್ಲೆಡೆಯಲ್ಲಿ ವಿಶೇಷವಾಗಿ ಶರಣರ ಹೃದಯದಲ್ಲಿ ದೇಹದೇಗುಲದಲ್ಲಿ 'ಎನ್ನದೇಹವೇ ದೇಗುಲ, ಕಾಲೇ ಕಂಭಗಳು, ಸಿರ ಹೊನ್ನ ಕಳಸವಯ್ಯಾ' ಎಂದು ಬಸವಣ್ಣನವರು ಉಸುರಿರುವರು. ಅವರ ಈ ಮಾತನ್ನೇ ಸರ್ವಜ್ಞನು ಈ ಬಗೆಯಾಗಿ ವಿಶದಗೊಳಿಸಿರುವ :
ದೇಹ ದೇವಾಲಯವು ಜೀವವೇ ಶಿವಲಿಂಗ ।
ಭಾವಪುಷ್ಪದಿ ಭಜಿಸಲು ಮುಕ್ತಿಸಂ ।
ದೇಹ ಬೇಡೆಂದ ಸರ್ವಜ್ಞ ॥
ದೇಹದೇವಾಲಯದಲ್ಲಿಯ ಆತ್ಮಲಿಂಗವನ್ನು ಭಾವಪುಷ್ಪಗಳಿಂದ ಭಜಿಸಿ ಮುಕ್ತಿಯನ್ನು ಪಡೆಯಲು ಅವನು ಬೋಧಿಸಿರುವ, ಭಕ್ತಿಯಿಂದ ಆತ್ಮನನ್ನು ಪರಮಾತ್ಮನನ್ನು ಭಜಿಸಿದರೆ ಮುಕ್ತಿಯು ನಿಸ್ಸಂದೇಹವಾಗಿ ಲಭಿಸುವದು ಎಂಬುದಾಗಿ ಆತನು ಬಸವಣ್ಣನವರ ಸಂದೇಶವನ್ನು ಅರುಹುವನು.

151

ಇನ್ನು ಈ ಭಕ್ತಿಯ ಸ್ವರೂಪವೇನು ? ಅದರ ಪ್ರಧಾನ ಅಂಗಗಳಾವವು ? ಭಗವಂತನಲ್ಲಿಯ ಪರಮಪ್ರೀತಿಯೇ ಭಕ್ತಿ, ಅದು ಪ್ರಖರ ವೈರಾಗ್ಯದಲ್ಲಿಯೂ ಸೇವೆಯಲ್ಲಿಯೂ ಅನನ್ಯ ಚಿಂತನದಲ್ಲಿಯೂ ಉತ್ಕಟ ಶರಣಾಗತಿಯಲ್ಲಿಯೂ ಪರಿಣಿತವಾಗಬೇಕು. ವಿಷಯ ಪ್ರೀತಿಯೂ ಭಗವಂತನ ಭಕ್ತಿಯೂ ಒಂದೆಡೆ ನಿಲ್ಲಲರಿಯವು. ಓರ್ವ ಹಿಂದೀ ಸಂತ ಕವಿಯು ಉಸುರಿದ ಮೇರೆಗೆ
ಚಾಖೇ ಚಾಹೇ ಪ್ರೇಮರಸ, ಚಾಖೇ ಚಾಹೇ ಮಾನ ।
ಏಕ ಮ್ಯಾನಮ್ ದೋ ಖಡ್ಗ ದೇಖಾ ಸುನಾ ನ ಕಾನ ॥

“ಬೇಕಾದರೆ ಭಕ್ತಿರಸವನ್ನು ಸವಿ, ಇಲ್ಲವೇ ಕೀರ್ತಿಯನ್ನು ಪಡೆ. ಎರಡೂ ಏಕಕಾಲಕ್ಕೆ ನಿನಗೆ ದೊರೆಯಲರಿಯವು. ಒಂದು ಒರೆಯಲ್ಲಿ ಎರಡು ಕತ್ತಿಗಳನ್ನಿಡಬಹುದೇ ? ಹಾಗೆ ಮಾಡಿದುದನ್ನು ನಾನು ಕಂಡಿಲ್ಲ ಕೇಳಿಲ್ಲ. ಇಲ್ಲಿ ಕೀರ್ತಿ-ಮಾನಮರ್ಯಾದೆ - ಇವು ವಿಷಯಸುಖದ ಪ್ರತೀಕಗಳು. ಅದಕ್ಕಾಗಿಯೇ ಬಸವಣ್ಣನವರು 'ವಿಷಯರಹಿತನ ಮಾಡಲು ಪರಶಿವನನ್ನು ಬೇಡಿಕೊಂಡರು. ಮುಕ್ತಿಮಿಚ್ಛಸಿ ಚೇತ್ ತಾತ, ವಿಷಯಾನ್ ವಿಷವತ್ ತ್ಯಜ !" "ಮುಕ್ತಿಯನ್ನು ಬಯಸುವಿಯಾದರೆ ವಿಷಯಗಳನ್ನು ವಿಷವೆಂದು ಬಗೆದು ಅವನ್ನು ತೊರೆ ಎಂದು ಬೇರೆ ಹಿರಿಯರೂ ಬೋಧಿಸಿರುವರು. ಶ್ರೀ ಸಮರ್ಥ ರಾಮದಾಸರೂ ಕೂಡ ಇದನ್ನೆಯೆ ಹೇಳಿರುವರು :

ವಿಷಯಜನಿತ ಜೇಖೇ ಸುಖ ತೇಥೇಚ ಹೋತೇ ಪರಮದುಃಖ
ಆಧೀ ಗೋಡ ಅಂತೀ ಶೋಕ । ನೇಮಸ್ತ ಆಹೇ ॥
ಜಯಾಸಿ ವಾಟೇ ಸುಖಚಿ ಅಸಾವೇ । ತೇಣೇ ರಘುನಾಥ ಭಜನೀ
ಲಾಗಾವೇ ।
ವಿಷಯ ಸಕಳ ಹಿ ತ್ಯಾಗಾವೇ । ದುಃಖಮೂಳ ಜೇ ॥
ವಿಷಯಜನಿತ ಸುಖವೇ ಹಿರಿಯ ದುಃಖವನ್ನು ನೀಡುವದು. ಅದು ಆದಿಯಲ್ಲಿ ಸಿಹಿ, ಕೊನೆಗೆ ಕಹಿಯಾಗಿರುವದು. ಆದುದರಿಂದ ನಿಜವಾದ

152
ಸುಖವನ್ನು ಬಯಸುವವರು ಭಗವಂತನನ್ನು ಭಜಿಸಬೇಕು. ದುಃಖಮೂಲವಾದ ವಿಷಯಗಳನ್ನೆಲ್ಲ ತ್ಯಜಿಸಬೇಕು."
ತರುವಾಯ ಭಕ್ತರು ಆದರಯುತರಾಗಿ ಸಂತರ-ಶರಣರ ಸೇವೆಯಲ್ಲಿ ನಿರತರಾಗಬೇಕು. ಶರಣರು ದೇವಮಾನವರು. ದೇವರನ್ನು ಕಂಡು, ದೇವರ ಆನಂದವನ್ನುಂಡು ದೇವರಲ್ಲಿ ಬೆರೆತವರು. ಅವರೇ ದೇವರನ್ನು ಕಾಣಿಸಬಲ್ಲರು. ಆತನನ್ನು ಕಾಣುವ ದಾರಿಯನ್ನು ತೋರಬಲ್ಲರು. ಶರಣರಿಗೆ ತನು-ಮನ-ಧನವನ್ನು ಅರ್ಪಿಸುವದು ಅವರ ಸೇವೆ. ಅವರು ಬೋಧಿಸಿದಂತೆ ನಡೆಯುವದು ಅವರ ಸೇವೆ. ಈ ಸೇವೆಯನ್ನು ತನು ಉಕ್ಕಿ ಮನ ಉಕ್ಕಿ ಮಾಡಬೇಕು. ಅಂದರೆ ಅವರ ಕರುಣವು ಲಭಿಸಿ, ಭಗವಂತನ ದರುಶನವು ದೊರೆಯುವದು. "ಚಂದಿರನ ಬಳಿ ನಿಲ್ಲುವವನಿಗೆ ಬೆಳದಿಂಗಳು ತಾನಾಗಿಯೇ ದೊರೆಯುವಂತೆ ಶರಣರ ನೆರೆಯಲ್ಲಿ ಭಗವಂತನು ತಾನಾಗಿಯೇ ದೊರೆಯುವನು" ಎಂದು ಬಸವಣ್ಣನವರು ಹೇಳಿರುವರು.
ಶರಣರ ಇಂಥ ದಿವ್ಯ ಸನ್ನಿಧಿಯಲ್ಲಿ ಭಗವಂತನನ್ನು ಅನನ್ಯಭಾವದಿಂದ ನೆನೆಯಬೇಕು. ಚಕೋರನು ಚಂದ್ರಮನನ್ನು ಚಿಂತಿಸುವಂತೆ, ಅಂಬುಜವು ಭಾನುವನ್ನು ಚಿಂತಿಸುವಂತೆ, ಭ್ರಮರವು ಬಂಡನ್ನು ಚಿಂತಿಸುವಂತೆ, ಭಕ್ತನು ಭಗವಂತನನ್ನು ಚಿಂತಿಸಬೇಕು. ಅವನು ತನ್ನ ಭಾವವನ್ನು ಬೆಳೆಸಿ, ತನ್ನ ಜೀವನದಲ್ಲಿ ಭಗವಂತನನ್ನು ತುಂಬಿಕೊಳ್ಳಬೇಕು. ತನ್ನ ವಚನದಲ್ಲಿ ಭಗವಂತನ ನಾಮಾಮೃತವನ್ನು ತುಂಬಿ, ನಯನದಲ್ಲಿ ಆತನ ಮೂರುತಿಯನ್ನು ತುಂಬಿ, ಕಿವಿಯಲ್ಲಿ ಕೀರುತಿಯನ್ನು ತುಂಬಿ, ಮನದಲ್ಲಿ ಆತನ ನೆನಹು ತುಂಬಿ, ಅವನು ಭಗವಂತನ ಚರಣಕಮದಲ್ಲಿ ತುಂಬಿಯಾಗಬೇಕು. ಮನವು ಆತನಲ್ಲಿ ಬೆರೆತು ತನು ಕರಗಬೇಕು. ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮಬೇಕು, ಕಂಗಳಲ್ಲಿ ಅಶ್ರುಜಲಂಗಳು ಸುರಿಯಬೇಕು, ಗದ್ಗದಂಗಳು ಹೊರಹೊಮ್ಮಬೇಕು. ಈ ಬಗೆಯ ಸಾತ್ವಿಕ ಭಾವಗಳು ಆತನಲ್ಲಿ ಮೈದಳೆಯಬೇಕು. ಇಂಥ ಭಕ್ತಿಪರವಶತೆಯಲ್ಲಿ ಮೈಮರೆತಾಗ

ಭಕ್ತನು ಭಗವಂತನಲ್ಲಿ ಅನನ್ಯವಾಗುವ, ಆತನಿಗೆ ಪೂರ್ಣ ಶರಣಾಗತನಾಗುವ!

ಕೊನೆಯ ಭಕ್ತನು ಭಗವಂತನ ದಿವ್ಯ ದರ್ಶನವನ್ನು ಪಡೆಯುವ. ಆತನ ಅದ್ಭುತ ನೋಟದಿಂದ ಭಕ್ತನಿಗೆ "ಅನಂತ ಸುಖ' ಆಗುವದು. ಆತನ ಅನುಪಮ ಕೂಟದಿಂದ ಭಕ್ತನಿಗೆ ಪರಮಾನಂದವಾಗುವದು. ಅವನ ರೋಮ ರೋಮಗಳೆಲ್ಲ ಕಂಗಳಾಗಿ ಭಗವಂತನನ್ನು ನೋಡತೊಡಗುವವು. ಭಕ್ತನು ಅಂಬುಧಿಯೊಳಗೆ ಬಿದ್ದ ಆಲಿಕಲ್ಲಿನಂತೆ, ಈ ಪರಮಾನಂದದಲ್ಲಿ ಭಿನ್ನಭಾವ ಅರಿಯದೆ ತಲ್ಲೀನನಾಗುವನು. ಇಂಥ ಅನುಭಾವದ ದಿವ್ಯ ಅಂಶವನ್ನೂ ಧನ್ಯತೆಯನ್ನೂ ತಾವು ಪಡೆದು ಬಸವಣ್ಣನವರು ಅದನ್ನು ಪಡೆಯಲು ನಮಗೂ ಹೇಳಿರುವರು. ಅದರಲ್ಲಿಯೇ ಆತ್ಮಕಲ್ಯಾಣ! ಅದರಿಂದಲೇ ವಿಶ್ವಕಲ್ಯಾಣ! 'ನಾನ್ಯಃ ಪಂಥಾ ವಿದ್ಯತೇ ಅಯನಾಯ. ಇದನ್ನುಳಿದು ಅನ್ಯಪಥವಿಲ್ಲ.

ಬಸವಣ್ಣನವರು ನಮಗಿತ್ತ ಸಂದೇಶವು ಇದೇ! ಇಂದು ಕೂಡ ಅದು ನಮಗೆ ಹೊಸ ಬೆಳಕನ್ನು ನೀಡದಿರದು. ಆದರೆ ಆ ಬೆಳಕನ್ನು ಅರಿಯುವ ಬುದ್ದಿ ಬೇಕು! ಪಡೆಯುವ ಯತ್ನ ಬೇಕು!

ಸಂದರ್ಭ ಗ್ರಂಥಗಳು
ಹೆಸರು ಲೇಖಕರು ಸಂಕ್ಷೇಪ
(೧) ಪುರಾಣಗಳು :
೧. ಬಸವರಾಜದೇವರ ರಗಳೆ ಹರಿಹರ ಬ.ರ.
೨. ಬಸವಪುರಾಣ ಭೀಮಕವಿ ಬ.ಪು.
೩. ಸಿಂಗಿರಾಜಪುರಾಣ ಸಿಂಗಿರಾಜ ಸಿ.ಪು.
೪. ಶೂನ್ಯಸಂಪಾದನೆ ಗೂ.ಸಿದ್ಧವೀರಣಾಚಾರ್ಯ ಶೂ.ಸ.
(೨) ಚರಿತ್ರಗಳು :
೧. ಭಕ್ತಿಭಾಂಡಾರಿ ಬಸವಣ್ಣನವರು ಎಂ.ಆರ್.ಶ್ರೀ. ಭ.ಬ.
೨. ಧರ್ಮಭಾಂಡಾರಿ ಬಸವಣ್ಣನವರು ಬ.ಚೆ.ಜವಳಿ ಧ.ಬ.
೩. ಕನ್ನಡ ಕುಲದೀಪಕ ಬಸವಣ್ಣನವರ ಜೀವನ ಸಿಂಪಿ ಲಿಂಗಣ್ಣ ಕ.ಬ.ಜೀ.
೪. ಬಸವಣ್ಣನವರ ಅಮೃತವಾಣಿ ಅ.ನ.ಕೃಷ್ಣರಾಯ ಬ.ಅ.
೫. ಮಹಾನುಭಾವ ಬಸವಣ್ಣನವರು ಸ.ವಿ.ಹಂಜಿ ಮ.ಬ.
೬. ಬಸವತತ್ವ ರತ್ನಾಕರ ಚಂದ್ರಶೇಖರಶಾಸ್ತ್ರಿ ಬ.ತ.ರ.
(೩) ಬೇರೆ ಗ್ರಂಥಗಳು :
೧. ಬಸವಣ್ಣನವರ ಷಟ್‌ ಸ್ಥಲವಚನಗಳು ಬಸವನಾಳ ಶಿವಲಿಂಗಪ್ಪನವರು ಬ.ಷ.ವ.
೨. ವಚನಶಾಸ್ತ್ರ ರಹಸ್ತ ರಂ.ರಾ. ದಿವಾಕರ ವ.ಶಾರ.
೩. ವಚನಧರ್ಮಸಾರ ಎಂ.ಆರ್.ಶ್ರೀ. ವ.ದ.ಸಾ.
೪. ಭಾರತದ ಶಾಂತಿದೂತರು ಮ.ಶ್ರೀ.ದೇಶಪಾಂಡೆ ಭಾ.ಶಾ.
೫. ಪ್ರಭುವಿನ ಪ್ರಭೆ ಮ.ಶ್ರೀ.ದೇಶಪಾಂಡೆ ಭಾ.ಶಾ.
೬. ಕನ್ನಡ ಸಾಹಿತ್ಯ ಚರಿತ್ರೆ ರಂ. ಶ್ರೀ. ಮುಗಳಿ ಕ.ಸಾ.ಚ.
೭. ಕನ್ನಡಸಾಹಿತ್ಯ ಇತಿಹಾಸ ರಂ. ಶ್ರೀ. ಮುಗಳಿ ಕ.ಸಾ.ಚ.
೮. ನಾರದ ಭಕ್ತಿ ಸೂತ್ರಗಳು
9. Pathway to God in Kannada Literature R.D. Ranade P.G.K.
10. Pathway to God in Hindi Literature R.D. Ranade P.G.H.
11. Heritage of Kamatak R.S. Mugali H.K.

ಶ್ರೀ ಮ. ಶ್ರೀ ದೇಶಪಾಂಡೆಯವರ ಇನ್ನಿತರ ಕೆಲವು ಗ್ರಂಥಗಳು
(ಅ) ಕನ್ನಡ ಗ್ರಂಥಗಳು :

೧. ಸರ್ವಜ್ಞನ ಸಂದೇಶ
೨. ಬೆಳಕಿನ ಬಾಳು
೩. ಭಕ್ತಿಸುಮನಾಂಜಲಿ
೪. ಶ್ರೀ ಗುರುದೇವ ರಾನಡೆಯವರ ಜೀವನ ಜ್ಯೋತಿ
೫. ಭಾರತದ ಶಾಂತಿ ದೂತರು
೬. ಪ್ರಭುವಿನ ಪ್ರಭೆ
೭. ಶ್ರೀ ನಿಂಬರಗಿ ಮಹಾರಾಜರ ಬೋಧಸುಧೆ (ಪದ್ಯರೂಪದಲ್ಲಿ)
೮. ಶ್ರೀ ಭಾವುಸಾಹೇಬ ಮಹಾರಾಜರ ಜೀವನ ಗಂಗ
೯. ಮಹಿಪತಿರಾಯರ ಸ್ವಾನಂದ ಸಾಮ್ರಾಜ್ಯ
೧೦. ಜೀವನ ಕಲೆ
೧. ಅಕ್ಕರದ ಅಂಜಲಿಗಳು (ಕವನ ಸಂಗ್ರಹ)
೧೨. ಕನ್ನಡ ಸಂತರ ಪರಮಾರ್ಥಪಥ (ಅನುವಾದ)
೧೩. ಗುರುದೇವ ರಾನಡೆಯವರ ಸಮನ್ವಯ ದರ್ಶನ
೧೪. ಭಗವದ್ಗೀತೆಯ ಸಾಕ್ಷಾತ್ಕಾರ ದರ್ಶನ

(ಬ) ಮರಾಠಿ ಗ್ರಂಥಗಳು :

೧. सर्वज्ञाचा अभंग संदेश
೨. श्री निंबरगी महाराजांची बोधसुधा (अनुवाद)
೩. श्री भाऊसाहेब महाराजांची जीवन गंगा
೪. श्री गुरुदेव चरित्रामृत (ओवीबद्ध)
೫. श्री अंबुराव महाराज चरित्रामृत (अनुवाद)
೬. गीत गुरुदेव (गुरुदेवांचे गीतमय जीवन चरित्र)

(ಕ) ಇಂಗ್ಲೀಷ ಗ್ರಂಥಗಳು

೧. Light of India (Message of Mahatmaji)
9. Dr. Ranade's Life of Light
೩. Dr. Ranade's Gospel of God-realization
೪. Dr. Ranade's Dhyana Gita
೫. St.Eknatha's Gospel of God Devotion
೬. Thus Spake Gurudev
೭. Shri Gita Sara
೮. Gandhiji's Pathway to God

ಗ್ರಂಥ ಪರಿಚಯ

“ಬಸವಣ್ಣನವರು ಸಾಧಕರಾಗಿದ್ದಾಗ ಅವರ ಅಂತರಂಗದಲ್ಲಿ ಉದಿಸಿದ ಭಾವ ಲಹರಿಗಳನ್ನೂ, ಅನುಭಾವಿಗಳಾದಾಗ ಅವರು ಪಡೆದ ಆನಂದ-ತೃಪ್ತಿಗಳನ್ನೂ, ಅವರು ತಮ್ಮ ಅಮೃತ ವಚನಗಳಲ್ಲಿ ಹೇಗೆ ಎರಕಹೊಯ್ದಿದ್ದಾರೆ ಎಂಬುದನ್ನೂ ಇಲ್ಲಿ ನೋಡಬಹುದು. ಮುಂದೆ ಬಸವಣ್ಣನವರು ಪರಮಾತ್ಮನ ಆಣಿತಿಯ ಮೇರೆಗೆ ಭಕ್ತ ವೃಂದಕ್ಕೆ ಬೋಧೆ ಮಾಡಿ ಅವರನ್ನು ಹೇಗೆ ಉದ್ಧರಿಸಿದರೆಂಬುದನ್ನೂ ಅವರ ಪ್ರತ್ಯಕ್ಷ ವಚನಗಳ ಉದಾಹರಣೆಯಿಂದ, ಅವರದೇ ಆದ ಆವೇಶಪೂರ್ಣ ಶೈಲಿಯಲ್ಲಿ ಶ್ರೀ ದೇಶಪಾಂಡೆಯವರು ವಿವರಿಸಿದ್ದಾರೆ.
ಹರಿಹರ ಮಹಾಕವಿಯ 'ಬಸವರಾಜದೇವರ ರಗಳೆ'ಯ ಚಾರಿತ್ರಿಕ ಹಿನ್ನೆಲೆಯ ಮೇಲೆ, ಬಸವಣ್ಣನವರ ಅಂತರಂಗ ನಿರೂಪಕ ವಚನಗಳ ಮೇಳದಿಂದ, ಬಸವಣ್ಣನವರನ್ನು ಕುರಿತಾದ ಪುರಾಣ ಹಾಗೂ ಐತಿಹ್ಯ ಕಥನಗಳ ನೆರವಿನಿಂದ, ಕವಿಸಹಜವಾದ ಭಾವಪೂರ್ಣ ಕಲ್ಪನಾ ಸೂತ್ರದಿಂದ ಹೆಣೆದು ಶ್ರೀ ದೇಶಪಾಂಡೆಯವರು ಈ ಕೃತಿಯನ್ನು ರೂಪಿಸಿದ್ದಾರೆ.
ಈ ಗ್ರಂಥ ರಚನೆಯಲ್ಲಿ ಶ್ರೀ ದೇಶಪಾಂಡೆಯವರ ಶ್ರಮ ಸಾರ್ಥಕವಾಗಿದೆಯೆಂದು ಹೇಳಲು ಸಂಶಯವಿಲ್ಲ. ಬಸವಣ್ಣನವರಂಥ ಅನುಭಾವಿಗಳ ಜೀವನಚರಿತ್ರೆಗಳನ್ನು ಚಿತ್ರಿಸುವುದು ಎಷ್ಟೊಂದು ಕಷ್ಟವೆಂಬುದನ್ನು ಅರಿತರೆ, ಶ್ರೀ ದೇಶಪಾಂಡೆಯವರು ಈ ಕೆಲಸವನ್ನು ಸಾಮರ್ಥ್ಯದಿಂದ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಈ ಪ್ರಯತ್ನವು ಶ್ಲಾಘನೀಯವಾಗಿದೆ.

ಶ್ರೀ ಬಿ. ಡಿ. ಜತ್ತಿ
ಅಧ್ಯಕ್ಷರು,
ಬಸವಸಮಿತಿ, ಬೆಂಗಳೂರು,
(ಗ್ರಂಥಕ್ಕೆ ಬರೆದ 'ಮುನ್ನುಡಿ' ಯಲ್ಲಿ)