ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉದ್ದಂಡ ಷಟ್ಪದಿ
ಉದ್ದಂಡ ಷಟ್ಪದಿ: - ಷಟ್ಪದಿಗಳಲ್ಲೊಂದು. ಕನ್ನಡದಲ್ಲಿ ಪ್ರಸಿದ್ಧವಿರುವ ಶರ ಕುಸುಮ ಭೋಗ ಭಾಮಿನಿ ಪರಿವರ್ಧಿನಿ ವಾರ್ಧಕ-ಎಂಬ ಆರಕ್ಕಿಂತ ಇದರ ಸ್ವರೂಪವನ್ನು ಈವರೆಗೆ ತಿಳಿದುಬಂದಿರುವ ಕನ್ನಡ ಭಿನ್ನವಾದದ್ದು. ಛಂದೋಗ್ರಂಥಗಳಲ್ಲಿ ಎಲ್ಲಿಯೂ ಇದನ್ನು ವಿವರಿಸಿಲ್ಲ. ರಾಘವಾಂಕ ಕವಿ (ಸು. 1230) ವೀರೇಶಚರಿತೆ ಎಂಬ ತನ್ನ ಕಾವ್ಯದ ರಚನೆಗೆ ಬಳಸಿರುವ ಷಟ್ಪದಿಯನ್ನು ಉದ್ದಂಡ ಷಟ್ಪದಿ ಎಂಬುದಾಗಿ ಕರೆಯುವುದು ರೂಢಿಯಾಗಿದೆ. ಈ ಹೆಸರನ್ನು ಈ ರೀತಿಯ ಷಟ್ಪದಿಗೆ ಆತನೇ ಕೊಟ್ಟಿರುವುದಕ್ಕೆ ದೃಢವಾದ ಯಾವ ಪ್ರಮಾಣವೂ ಕಾವ್ಯದಲ್ಲಿ ದೊರೆಯುವುದಿಲ್ಲ. ಆ ಗ್ರಂಥದ ಒಂದು ಹಸ್ತಪ್ರತಿಯಲ್ಲಿ (ರಾಯಚೂರಿನ ಪ್ರತಿ) ಮಾತ್ರ ಇದರ ಹೆಸರು ಪ್ರಾಯಃ ಪ್ರತಿಕಾರರ ಲಿಖಿತವಾಗಿ ಗೋಚರವಾಗುತ್ತದೆ. ಪ್ರತಿಯ ಕಾಲವೂ ಲಿಪಿಕಾರನೂ ತಿಳಿದಿಲ್ಲ.
ರಾಘವಾಂಕ ಕವಿಯ ವೀರೇಶಚರಿತೆಯ ಷಟ್ಪದಿ ಮೇಲುನೋಟಕ್ಕೆ ವಾರ್ಧಕ ಷಟ್ಪದಿಯನ್ನು ಹೋಲುತ್ತದೆ. ಆದರೆ ಕ್ರಮವಾಗಿ ಪರಿಶೀಲಿಸಿದರೆ ವಾರ್ಧಕದ ಲಕ್ಷಣ ಅಲ್ಲಿಗೆ ಹೊಂದುವುದಿಲ್ಲ. ವಾರ್ಧಕದಲ್ಲಿರುವಷ್ಟೇ ಮಾತ್ರಾ ಸಂಖ್ಯೆಯೇನೋ ಪ್ರತಿ ಪಾದದಲ್ಲೂ ಇದೆ. ಆದರೆ ಗಣ ವಿಭಜನೆ ಅಲ್ಲಿಯ ಹಾಗಿರದೆ ಬೇರೆ ರೀತಿಯಾಗಿದೆ. ವಾರ್ಧಕದಲ್ಲಿ ಐದು ಮಾತ್ರೆಗಳ ಗಣಗಳು ಬಂದರೆ, ವೀರೇಶಚರಿತೆಯ ಷಟ್ಪದಿಯಲ್ಲಿ ನಾಲ್ಕು ಮಾತ್ರೆಗಳ ಗಣಗಳು ಬರುತ್ತವೆ. ರಾಘವಾಂಕ ಷಟ್ಪದಿ ನಿರ್ಮಾಪಕನೆಂಬುದಾಗಿ ಪ್ರತೀತಿಯಿದೆ; ವಾರ್ಧಕ ಷಟ್ಪದಿಯಲ್ಲೂ ಶರಷಟ್ಪದಿಯಲ್ಲೂ ಕೃತಿರಚನೆ ಮಾಡಿದ್ದಾನೆಂದು ಉಲ್ಲೇಖವಿದೆ; ಆದ್ದರಿಂದ ಪ್ರಯೋಗ ಕುತೂಹಲಿಯಾಗಿಯೋ ವೈವಿಧ್ಯಕ್ಕಾಗಿಯೋ ಆತ ಮೊದಲು ವೀರೇಶಚರಿತೆಯನ್ನು ಒಂದು ಬಗೆಯ ಷಟ್ಪದಿಯಲ್ಲಿ ರಚಿಸಿರಬಹುದು. ಈ ಗ್ರಂಥ ಆತನ ಮೊದಲ ಕೃತಿಯಾಗಿರಬಹುದೆಂಬ ಊಹೆಯಿದೆ. ಅಂತೂ ಈ ಗ್ರಂಥದಲ್ಲಿ ಬಳಸಿರುವ ಷಟ್ಪದಿ ವಾರ್ಧಕದ ಪೂರ್ವರೂಪವೋ ಪ್ರಭೇದವೋ ಆಗಿದ್ದು ಪ್ರತ್ಯೇಕವಾದ ಗಣನೆಗೆ ಅರ್ಹವಾಗಿದೆ. ಅದಕ್ಕೆ ಯಾವಾಗಲೋ ಏನೋ ಉದ್ದಂಡ ಷಟ್ಪದಿ ಎಂಬ ಹೆಸರು ಸೇರಿ ಅದು ರೂಢಿಗೂ ಬಂದಿದೆ.
ಈ ವಿಶಿಷ್ಟ ಧಾಟಿಯಲ್ಲಿ ಬಸವಾಂಕನೆಂಬ (1550) ಕವಿಯ ಉದ್ಭಟ ದೇವಚರಿತೆಯಲ್ಲಿ ಕೆಲವು ಪದ್ಯಗಳು ರಚಿತವಾಗಿವೆ. ಈ ಪದ್ಯಗಳಿಗೆ ಉದ್ದಂಡವೆಂಬ ಹೆಸರನ್ನು ಹಾಕಿರುವಂತಿದೆ. ಚಿಕ್ಕನಂಜೇಶನ (ಸು. 1650) ರಾಘವಾಂಕ ಚರಿತೆಯಲ್ಲಿ ಪ್ರಾಯಃ ಕವಿಕೃತವೇ ಆಗಿರಬಹು ದಾದ ಏಳುಬಗೆಯ ಷಟ್ಪದಿ ಅಡಕವಾದ ವಾರ್ಧಕ ಷಟ್ಪದಿ ಎಂಬುದಾಗಿ ಒಂದು ಗದ್ಯಭಾಗವೂ ಸರ್ವಲಘುವಾಗಿರುವ ವಾರ್ಧಕದ ಒಂದು ಪದ್ಯವೂ ಇದ್ದು ಏಳನೆಯದರ ಲಕ್ಷ್ಯವಾಗಿ ಉದ್ದಂಡ ಷಟ್ಪದಿ ಎಂಬ ಹೆಸರಿಗೆ ಅದೇ ಪದ್ಯವನ್ನು ಉದ್ಧರಿಸಿದೆ. ಇದನ್ನು ಗಮನಿಸಿದರೆ ವೀರೇಶ ಚರಿತೆಯಲ್ಲಿ ಕಂಡುಬರುವಂಥ ಷಟ್ಪದಿಯ ಛಂದಸ್ಸಿಗೆ ಉದ್ದಂಡ ಷಟ್ಪದಿ ಎಂಬ ಹೆಸರು ರೂಢಿಯಲ್ಲಿದ್ದುದು ಗೋಚರವಾಗುತ್ತದೆ.
ಈ ಸಂಗತಿಯನ್ನು ನಿಶ್ಚಯವಾಗಿ ಒಪ್ಪಿಕೊಳ್ಳುವುದರಲ್ಲಿ ಸ್ವಲ್ಪಮಟ್ಟಿಗೆ ತೊಡಕುಂಟು. ಸೂಪಶಾಸ್ತ್ರವನ್ನು ವಾರ್ಧಕದಲ್ಲಿ ರಚಿಸಿರುವ ಮಂಗರಸ ಕವಿ (1508) ತನ್ನ ಇನ್ನೊಂದು ಕೃತಿ ಸಮ್ಯಕ್ತ್ವಕೌಮುದಿಯನ್ನು ಉದ್ದಂಡ ಷಟ್ಪದಿಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾನೆ. ತಿರುಮಲಭಟ್ಟ (ಸು. 1620) ತನ್ನ ಶಿವಗೀತೆಯನ್ನು ಕೆಳದಿ ವೆಂಕಟಪ್ಪನಾಯಕ ಸೂಚನೆಯಂತೆ ಉದ್ದಂಡ ಷಟ್ಪದಿಯಲ್ಲಿ ಕನ್ನಡಿಸಿರುವುದಾಗಿ ಹೇಳಿಕೊಂಡಿದ್ದಾನೆ. ಸಾಳ್ವಕವಿ (ಸು. 1550) ತನ್ನ ನೇಮಿನಾಥ ಪುರಾಣದ (ಸಾಳ್ವಭಾರತ) ಅಭ್ಯುದಯ ಪರ್ವವನ್ನು ಮಾತ್ರ ಉದ್ದಂಡ ಷಟ್ಪದಿಯಲ್ಲಿ ಬರೆದಿರುವಂತೆ ಸೂಚನಾ ಪದ್ಯದ ಮೊದಲಿಗೆ ಸೂಚಿತವಾದ ಆ ಹೆಸರಿನಿಂದ ಭಾವಿಸಬಹುದುದಾಗಿದೆ. ಈ ಮೂರು ಸಂದರ್ಭಗಳಲ್ಲೂ ಷಟ್ಪದಿಯ ರಚನೆ ವೀರೇಶಚರಿತೆಯ ಷಟ್ಪದಿಯ ವಿಶಿಷ್ಟ ಧಾಟಿಯಲ್ಲಿರುವ ವಾರ್ಧಕ ಷಟ್ಪದಿಯಲ್ಲಿಯೇ ಇರುವಂತೆ ಕಾಣುತ್ತದೆ. ಆ ಕವಿಗಳು ಸುಪರಿಚಿತವಾದ ವಾರ್ಧಕವನ್ನು ಬಲ್ಲವರಾಗಿಯೂ ಅದರಲ್ಲಿಯೇ ಕೃತಿರಚನೆ ಯನ್ನು ಮಾಡಿಯೂ ವಾರ್ಧಕದಿಂದ ವಿಭಿನ್ನವಾಗಿಯೇ ತೋರುವ ಷಟ್ಪದಿಗೆ ಉದ್ದಂಡವೆಂಬ ಮಾತನ್ನು ಏಕೆ ಬಳಸಿದರು ? ಸಾಳ್ವಭಾರತದ ಸೂಚನೆಯಿರಲಿ; ಮಂಗರಸ ತಿರುಮಲಭಟ್ಟರ ಗ್ರಹಿಕೆಯ ಅಭಿಪ್ರಾಯವೇನು ? ಷಟ್ಪದಿಗಳ ಗುಂಪಿನಲ್ಲಿ ವಾರ್ಧಕ ವಿಸ್ತಾರವಾದುದು, ಅತಿಶಯವಾದುದು, ಘನವಾದುದು-ಎಂಬುದಾಗಿ ತಿಳಿದು ಅದನ್ನೇ ಉದ್ದಂಡವೆಂದು ಕರೆದರೆ ? ಈ ಸಮಸ್ಯೆಗೆ ಖಚಿತವಾದ ಉತ್ತರ ದೊರೆಯುವುದು ಕಷ್ಟ. ವಾರ್ಧಕ ಮತ್ತು ಉದ್ದಂಡಗಳನ್ನು ಪರ್ಯಾಯ ವಾಚಕವಾಗಿ ತಿಳಿಯುತ್ತಿದ್ದಿರಬಹುದು ಎಂಬುದಕ್ಕೆ ಕೆಳದಿ ನೃಪವಿಜಯದ (ಸು. 18ನೆಯ ಶತಮಾನ)... ... ಶಿವಗೀತೆಯಂ ಲೋಕೋಪಕಾರಾರ್ಥಮಾಗಿ ಕವಿ ತಿರುಮಲಭಟ್ಟರಿಂ ವಾರ್ಧಕ ಷಟ್ಪದಿಯೊಳ್ ಕರ್ಣಾಟಕ ಕಾವ್ಯಮನಾಗಿಸಿ... ...ಎಂಬ ಉಕ್ತಿ ಸ್ವಲ್ಪಮಟ್ಟಿಗೆ ಪೋಷಣೆಯನ್ನು ಕೊಡುತ್ತದೆ. ರಾಘವಾಂಕ ಕವಿಯ ವೀರೇಶಚರಿತೆಯಲ್ಲಿ ಬಳಸಿರುವಂಥ ವಿಶಿಷ್ಟ ರೀತಿಯ ಷಟ್ಪದಿಗೆ ಉದ್ದಂಡ ಷಟ್ಪದಿ ಎಂಬ ಹೆಸರು-ಅದು ಯಾರೇ ಸೇರಿಸಿದ್ದಿರಲಿ, ಎಂದೇ ಸೇರಿಸಿದ್ದಿರಲಿ-ಇಂದು ಸ್ವೀಕೃತವಾಗಿದೆ. ಆ ಹೆಸರಿನ ಷಟ್ಪದಿಗೆ ಅದೇ ಮೊದಲನೆಯ ಲಕ್ಷ್ಯವಾಗಿಯೂ ಮಾದರಿಯಾಗಿಯೂ ಗ್ರಾಹ್ಯವಾಗಿದೆ. ಆದ್ದರಿಂದ ಆ ಷಟ್ಪದಿಯ ಲಕ್ಷಣವನ್ನು ಉದ್ದಂಡ ಷಟ್ಪದಿಯ ಲಕ್ಷಣವೆಂಬುದಾಗಿ ಇಟ್ಟುಕೊಳ್ಳಬೇಕು. ರಾಘವಾಂಕ, ಬಸವಾಂಕರ ತರುವಾಯದಲ್ಲಿ ಈ ಷಟ್ಪದಿಯ ರಚನೆಯಲ್ಲಿ ಕೃಷಿ ನಡೆದಂತೆ ತೋರುವುದಿಲ್ಲ.
ಉದ್ದಂಡ ಷಟ್ಪದಿಯ ಲಕ್ಷಣವನ್ನು ಹೀಗೆ ಹೇಳಬಹುದು: ಇದು ವಾರ್ಧಕ ಷಟ್ಪದಿಯನ್ನು ಹೋಲುತ್ತದೆ. ಪ್ರತಿಚರಣದಲ್ಲೂ ವಾರ್ಧಕದಲ್ಲಿರುವಷ್ಟೇ ಮಾತ್ರಾ ಸಂಖ್ಯೆಯಿರುತ್ತದೆ. ಆದರೆ ಗಣವಿನ್ಯಾಸದಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲಿ ಐದು ಮಾತ್ರೆಗಳ ಗಣವಿನ್ಯಾಸ ಬಂದರೆ, ಇಲ್ಲಿ ನಾಲ್ಕು ಮಾತ್ರೆಗಳ ಗಣವಿನ್ಯಾಸ ಬರುತ್ತದೆ. ಈ ಷಟ್ಪದಿಯ 1,2 ಮತ್ತು 4,5 ನೆಯ ಚರಣಗಳಲ್ಲಿ ಪ್ರತಿ ಚರಣಕ್ಕೆ ನಾಲ್ಕು ಮಾತ್ರೆಗಳ ಐದು ಗಣಗಳೂ(4+4+4+4+4) 3 ಮತ್ತು 6ನೆಯ ಚರಣಗಳಲ್ಲಿ ಪ್ರತಿಚರಣಕ್ಕೆ 4 ಮಾತ್ರೆಗಳ ಎಂಟು ಗಣಗಳೂ ಬರುತ್ತವೆ.(4+4+4+4+4+4+4+4) 3 ಮತ್ತು 6ನೆಯ ಚರಣಗಳ ಕೊನೆಯ ಲಘುವನ್ನು ಗುರುವಾಗಿ ಗ್ರಹಿಸಬೇಕು. ಈ ಲಕ್ಷಣ ಷಟ್ಪದಿಗಳ ಸಾಮಾನ್ಯ ಲಕ್ಷಣಕ್ಕೆ ಹೊಂದುವುದಿಲ್ಲವೆಂಬುದರಿಂದ, 1,2 ಮತ್ತು 4,5 ನೆಯ ಚರಣಗಳಲ್ಲಿ ಪ್ರತಿಚರಣಕ್ಕೆ 4-6-4-6 ಮಾತ್ರೆಗಳ ನಾಲ್ಕು ಗಣಗಳೂ 3 ಮತ್ತು 6ನೆಯ ಚರಣಗಳಲ್ಲಿ ಅದೇ ವಿನ್ಯಾಸದ ಆರು ಗಣಗಳೂ ಒಂದು ಗುರುವೂ ಬರುತ್ತವೆ ಎಂದು ಗ್ರಹಿಸಬೇಕೆಂಬ ಸೂಚನೆಯೂ ಇದೆ. ಷಟ್ಪದಿ ಸಾಮಾನ್ಯದ ಚೌಕಟ್ಟಿನ ದೃಷ್ಟಿಯಿಂದ ಹೀಗೆ ಹೇಳಬಹುದಾದರೂ ಲಯಪ್ರತೀತಿಯ ಮತ್ತು ಅರ್ಥಪ್ರತೀತಿಯ ದೃಷ್ಟಿಯಿಂದ ಸರ್ವತ್ರ ಚತುರ್ಮಾತ್ರಾಗಣ ವಿನ್ಯಾಸದ ಗಣನೆಯೇ ಸಹಜವಾಗಿ ತೋರುತ್ತದೆ. ಉದ್ದಂಡ ಷಟ್ಪದಿಯ ಸಾಮಾನ್ಯ ಸ್ವರೂಪವನ್ನೂ ಲಕ್ಷಣವನ್ನೂ ತಿಳಿಯುವುದಕ್ಕೆ ಇಲ್ಲಿ ರಾಘವಾಂಕನ ವೀರೇಶಚರಿತೆಯ ಒಂದು ಪದ್ಯದ ಅರ್ಧವನ್ನು ಪ್ರಸ್ತಾರ ಹಾಕಿ ತೋರಿಸಿದೆ:- "ಪರಿಕಿಪೊ | ಡೀಕೃತಿ | ಗಾವುದು | ಮೊದಲೆನೆ |ಹಳಚಂ| ತೆರೆಯೊಳು | ತಿರುಗುವ | ಕರಿಮಕ | ರಂಗಳ | ಪುಚ್ಛೋ | ತ್ಕರಹತಿ | ಯಿಂ ಚೆ | ಲ್ಲಿದ ಮಣಿ | ಗಳ ಬೆಳ | ಗಿಂ ಶ್ವೇ| ತದ್ವೀ | ಪವನಣ | ಕಿಸುತ ||"
ಉದ್ದಂಡ ಷಟ್ಪದಿ ಎಂಬ ಹೆಸರಿನ ಔಚಿತ್ಯವೇನು ? ಈ ಷಟ್ಪದಿಯಲ್ಲಿ ಮಾತ್ರಾ ಗಣಗಳು ಗಣದಿಂದ ಗಣಕ್ಕೆ ಒಂದೇ ಸಮನೆ ಉದ್ದಂಡವಾಗಿ ಉರುಳುತ್ತ ಹೋಗುತ್ತವೆ. ಅಧಿಕಮಾತ್ರೆಗಳುಳ್ಳ ಗಣಗಳು ಬರುತ್ತವೆ, ಗಣಗಳು ದುಂಡಾಕಾರವಾಗಿ ಉರುಳುತ್ತ ಪಾದಾಂತ್ಯದಲ್ಲಿ ಕೂಡ ನಿಲ್ಲದೆ ಅವಿರತವಾಗಿ ಹರಿಯುತ್ತವೆ-ಎಂದು ಮುಂತಾಗಿ ಔಚಿತ್ಯವನ್ನು ಗುರುತಿಸುವ ಪ್ರಯತ್ನಗಳನ್ನು ಮಾಡಿದೆ. ವೀರೇಶಚರಿತೆಯ ಕೃತಿವಸ್ತು ಉದ್ದಂಡವಾದದ್ದು (ಎಂದರೆ ಉಗ್ರ, ಪ್ರಚಂಡ, ಭಯೋತ್ಪಾದಕ ಎನ್ನುವಂಥದು) ಎಂದುಕೊಂಡು ಉದ್ದಂಡ ಷಟ್ಪದಿ ಎಂಬ ಹೆಸರನ್ನು ಅಲ್ಲಿಯ ಷಟ್ಪದಿಗೆ ಯಾರೋ ಸೇರಿಸಿದ್ದಿರಬಹುದು ಅಥವಾ ಅತಿಶಯಾರ್ಥದಲ್ಲಿ ಹಾಗೆಂದಿರಬಹುದು. ಇದು ಬರಿಯ ಊಹೆಯಷ್ಟೆ. ಇತರ ಎಷ್ಟೋ ಛಂದಸ್ಸುಗಳ ಹೆಸರುಗಳ ಹಾಗೆ ಇಲ್ಲೂ ನಿಷ್ಕೃಷ್ಟವಾಗಿ ಹೆಸರಿನ ಔಚಿತ್ಯವನ್ನು ಗುರುತಿಸುವುದು ಕಷ್ಟ. (ಟಿ.ವಿ.ವಿ.)