ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸ್ತಿತ್ವವಾದ

ವಿಕಿಸೋರ್ಸ್ದಿಂದ

ಅಸ್ತಿತ್ವವಾದ :- ಅಸ್ತಿತ್ವವಾದ 20ನೆಯ ಶತಮಾನದ ಪಾಶ್ಚಾತ್ಯ ಚಿಂತನೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಿರುವ ವಾದ (ಎಕ್ಸಿಸ್‍ಟೆನ್ಸಿಯಲಿಸಂ- Existentialism). ಇದು ಮನುಷ್ಯನ ಸಾಂಪ್ರದಾಯಿಕ, ನೈತಿಕ ಮತ್ತು ಆಧ್ಯಾತ್ಮಿಕ ಚೌಕಟ್ಟನ್ನೇ ಚೂರು ಚೂರು ಮಾಡಿದೆ; ಅಸ್ತಿತ್ವವಾದದ ಪ್ರತಿಪಾದಕರಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆಯುಳ್ಳವರೂ, ನಿರೀಶ್ವರವಾದಿಗಳೂ, ಮಾಕ್ರ್ಸವಾದಿಗಳೂ ಇದ್ದಾರೆ. ತತ್ವಶಾಸ್ತ್ರದ ಕ್ಲಾಸಿಕಲ್ ಸಂಪ್ರದಾಯದಿಂದಲೂ ಆಧುನಿಕ ವಿಶ್ಲೇಷಣಾತ್ಮಕ ವಿಚಾರಧಾರೆಯಿಂದಲೂ ಬೇರೆಯಾಗಿರುವ ಅಸ್ತಿತ್ವವನ್ನು ಕುರಿತ ಇದು ಒಂದು ಕ್ರಮಬದ್ಧವಾದ ಶಾಸ್ತ್ರ ಎನ್ನುವುದಕ್ಕಿಂತ, ಒಂದು ದೃಷ್ಟಿಕೋನ ಎನ್ನಬಹುದು ಎಂದು ಇದನ್ನು ಶಾಸ್ತ್ರವಾಗಿಸಲು ಇಚ್ಛಿಸದ ಅಸ್ತಿತ್ವವಾದಿಗಳು ಹೇಳುತ್ತಾರೆ.

ಕ್ರಿಶ್ಚಿಯನ್ ಅಸ್ತಿತ್ವವಾದ ಡೆನ್ಮಾರ್ಕಿನ ಸೊರೆನ್‍ಕೀರ್ಕೆಗಾರ್ಡ್‍ನಿಂದ (1813-55) ಪ್ರತಿಪಾದಿತವಾಯಿತು. ಇವನೇ ಅಸ್ತಿತ್ವ ಎನ್ನುವ ಪದಕ್ಕೆ ಅಸ್ತಿತ್ವವಾದದ ಎಲ್ಲ ವಿಶೇಷಾರ್ಥಗಳೂ ಬರುವಂತೆ ಪ್ರಥಮವಾಗಿ ಪಾರಿಭಾಷಿಕ ಪದವಾಗಿ ಬಳಸಿದವನು. ಇಂಗ್ಲಿಷಿನ ಎಕ್ಸಿಸ್‍ಟ್ಸೆನ್ಸಿಯಲಿಸಂ ಎಂಬ ಪದ ಜರ್ಮನ್ ಭಾಷೆಯ ಇxisಣeಟಿz Phiಟosoಠಿhie ಎಂಬುದಕ್ಕೆ ಸಮಾನಾರ್ಥಕವಾಗಿ ಬಳಕೆಯಾಯಿತು. ಇxisಣeಟಿz ತತ್ವಶಾಸ್ತ್ರದಲ್ಲಿ ಪಾರಿಭಾಷಿಕ ಪದವಾಗಿ ಒಂದನೇ ಮಹಾಯುದ್ಧದ ಅನಂತರ ಜರ್ಮನಿಯಲ್ಲಿ ಪ್ರಯೋಗವಾಗಲು ಪ್ರಾರಂಭವಾಯಿತು. ಸಾಮಾನ್ಯಾರ್ಥದಲ್ಲಿ ಮನುಷ್ಯ, ಪ್ರಾಣಿ, ವಸ್ತು_ಇವುಗಳ ಇರುವಿಕೆಯನ್ನು ಸೂಚಿಸಲು ಅಸ್ತಿತ್ವ ಎಂಬ ಪದ ಬಳಸುತ್ತೇವೆ. ಆದರೆ ಅಸ್ತಿತ್ವವಾದದ ಅರ್ಥದಲ್ಲಿ, ಮನುಷ್ಯ ಮಾತ್ರ ಅಸ್ತಿತ್ವ ಉಳ್ಳವನು: ಇಲ್ಲಿ ಈ ಪದ, ವ್ಯಕ್ತಿ ಅನನ್ಯ, ಮತ್ತು ಅವನನ್ನು ಶಾಸ್ತ್ರೀಯವಾಗಿ ತತ್ತ್ವಶಾಸ್ತ್ರದ ರೀತಿಯಲ್ಲಾಗಲಿ ವೈಜ್ಞಾನಿಕವಾಗಿಯೇ ಆಗಲಿ ವಿಶ್ಲೇಷಿಸಿ ವಿವರಿಸಲು ಸಾಧ್ಯವಿಲ್ಲ; ಅವನು ಆರಿಸಿಕೊಳ್ಳುವ ಮತ್ತು ಚಿಂತನೆ ಮಾಡುವ, ಪರಿಭಾವಿಸುವ ಶಕ್ತಿಯುಳ್ಳ ಜೀವಿ; ಅವನು ಸ್ವತಂತ್ರ, ಆದ್ದರಿಂದಲೇ ಅಸುಖಿ; ಅವನ ಭವಿಷ್ಯ ಅವನ ಸ್ವತಂತ್ರ ಆಯ್ಕೆಯ ಮೇಲೆ ನಿರೂಪಿತವಾಗುವಂಥಾದ್ದಾದ್ದರಿಂದ ಅದು ತರ್ಕರೀತಿಯ ವರ್ಗೀಕರಣಕ್ಕೆ ನಿಲುಕುವಂಥಾದ್ದಲ್ಲ; ಅಲ್ಲದೆ ಕೇವಲ ಪ್ರಪಂಚವನ್ನು ಪರಿಭಾವಿಸುವುದರಲ್ಲಿಯೇ ಕಾಲಕಳೆದ ವ್ಯಕ್ತಿ ಯಾವ ಒಂದು ನಿರ್ಧಾರಿತ ಕಾರ್ಯವನ್ನೂ ಮಾಡಲಾರ-ಇತ್ಯಾದಿ ವಿಶೇಷಾರ್ಥಗಳಲ್ಲಿ ಬಳಕೆಯಾಗುತ್ತದೆ.

ಕೀರ್ಕೆಗಾರ್ಡ್ ತನ್ನ ಕನ್‍ಕ್ಲೂಡಿಂಗ್ ಅನ್‍ಸೈಂಟಿಫಿಕ್ ಪೋಸ್ಟ್‍ಸ್ಕ್ರಿಪ್ಟ್‍ನಲ್ಲಿ (1846) ಹೆಗೆಲ್‍ನ ಪ್ರಪಂಚವೊಂದು ಕ್ರಮಬದ್ಧವಾದ ವ್ಯವಸ್ಥಿತ ಸ್ಥಿತಿ, ಸತ್ಯವೆ ವ್ಯವಸ್ಥಿತ ಕ್ರಮ, ವ್ಯವಸ್ಥಿತ ಕ್ರಮವೇ ಸತ್ಯ, ಎಂಬ ದುರಹಂಕಾರದಿಂದ ಕೂಡಿದಷ್ಟೇ ಅಲ್ಲ ಹಾಸ್ಯಸ್ಪದವಾದದ್ದೂ ಹೌದು ಎಂದು ಹೇಳುತ್ತಾನೆ. ಕೀರ್ಕೆಗಾರ್ಡ್‍ನ ಪ್ರಕಾರ ಈ ಅಸಂಬದ್ಧ ಪ್ರಪಂಚದಲ್ಲಿ ಯಾವ ವ್ಯಕ್ತಿಯೂ ತನ್ನ ಸ್ಥಾನವೇನೆಂದು ತಿಳಿಯಲಾರ; ಅವನ ಕರ್ತವ್ಯವೇನೆಂದು ನಿರ್ದಿಷ್ಟವಾಗಿ ಅರಿಯಲಾರ; ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಎಷ್ಟು ಸಾಧ್ಯವೋ ಅಷ್ಟು ಆರಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ದೇವರ ಸಮ್ಮುಖದಲ್ಲಿ ಅವನು ಒಂದನ್ನು ಆರಿಸಿಕೊಳ್ಳಲೇಬೇಕು. ಆದರೆ ಆ ಆಯ್ಕೆ ಅವನಿಗೆ ಮುಕ್ತಿ ತರಬಹುದು ಅಥವಾ ಅವನನ್ನು ನರಶಿಕ್ಷೆಗೆ ಗುರಿ ಮಾಡಬಹುದು. ಅದು ಅವನ ಅರಿವಿಗೆ ಬರದೇ ಇರುವ ವಿಷಯ. ಕೀರ್ಕೆಗಾರ್ಡ್‍ನ ಪ್ರಕಾರ ಈ ಒಂದು ಆಧ್ಯಾತ್ಮಿಕ ಆಯ್ಕೆಯಲ್ಲಿ ಒಂದು ವಿಶಿಷ್ಟತೆಯಿದೆ. ಏಕಾಕಿತನವಿದೆ; ಇದು ಸಮನಾದ ಪರಿಸ್ಥಿತಿಗಳಲ್ಲಿ ಬಹುಶಃ ಎಲ್ಲರೂ ಒಂದೇ ರೀತಿ ನಡೆದುಕೊಳ್ಳುವಂಥ ನೈತಿಕ ಕ್ಷೇತ್ರದಲ್ಲಿ ಇಲ್ಲದಿರುವಂಥದು. ಅಸ್ವಸ್ಥತೆಯೇ ಒಬ್ಬ ಕ್ರಿಶ್ಚಿಯನ್ನನ ಸ್ವಾಭಾವಿಕ ಸ್ಥಿತಿ ಎಂದು ಕೀರ್ಕೆಗಾರ್ಡ್ ಹೇಳುತ್ತಾನೆ. (ಸ್ಟೇಜಸ್ ಆನ್ ಲೈಫ್‍ಸ್ ವೇ, 1845).

ಸತ್ಯ ಆಂತರಿಕವಾಗಿ ಕಂಡುಕೊಳ್ಳುವಂಥದು, ಅಂದರೆ ಯಾರೇ ಆಗಲಿ ತಾನು ಏನೇ ಮಾಡಿದರೂ, ಅದು ವ್ಯಕ್ತ್ಯತೀತ ಸತ್ಯದ ಅನ್ವೇಷಣೆಯಾದರೂ ಅದಕ್ಕೆ ಒಂದು ಬೆಲೆ ಬರುವಂಥದ್ದು, ಅದನ್ನು ಅವನು ಯಾವ ರೀತಿ ನಿಶ್ಚಯಿಸಿದ ಮತ್ತು ನಿರ್ಧಾರ ಮಾಡಿದ ಎಂಬ ವ್ಯಕ್ತಿಗತ ಕ್ರಿಯೆಯ ಮೂಲಕವಾಗಿ ಎನ್ನುತ್ತಾನೆ; ಆದ್ದರಿಂದ ದೇವರ ಸಾಕ್ಷಾತ್ಕಾರವನ್ನು ಆಮೂರ್ತ ನಿದರ್ಶನದ ಮೂಲಕ ಪಡೆಯಲು ಸಾಧ್ಯವಿಲ್ಲ; ಧರ್ಮಶ್ರದ್ಧೆ ಎನ್ನುವಂಥದ್ದು ಆಂತರಂಗಿಕವಾದ ಆಯ್ಕೆ; ಕಲೆ, ವಿಜ್ಞಾನ, ಚರಿತ್ರೆ ಇವು ಯಾರ ಜೀವನದ ಭಾಗವಾಗಿವೆಯೋ ಅವರ ಜೀವನದ ಸಂದರ್ಭದಲ್ಲಿ ಅವಕ್ಕೆ ಬೆಲೆ ಬರುತ್ತದೆ. ಅರ್ಧ ಜ್ಞಾನದಲ್ಲಿ ಮಾನವರು ಆಯ್ಕೆಮಾಡಿಕೊಂಡಂಥ ನಿರ್ಧಾರಗಳನ್ನು ಅವರ ಜೀವನ ಒಳಗೊಂಡಿರುತ್ತದೆ; ಆದ್ದರಿಂದ ಮನುಷ್ಯ ಆತಂಕ ಸ್ಥಿತಿಯಲ್ಲಿದ್ದು ಆತ ಕ್ರಿಶ್ಚಿಯನ್ ಆಗಿದ್ದರೆ, ನಿರಾಶೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಕೀರ್ಕೆಗಾರ್ಡ್ ಬರೆದ ಕಾಲದಲ್ಲಿ ಸುಸಂಘಟಿತವಾದ ಚರ್ಚ್ ಭದ್ರವಾಗಿಯೂ ತಳವೂರಿತ್ತು; ಆದ್ದರಿಂದ ಅವನು ಪ್ರಾಪಂಚಿಕ ಕ್ರಿಶ್ಚಿಯನ್ ಅನುವರ್ತನೆಯ ವಿರುದ್ಧ, ಕ್ರಿಶ್ಚಿಯನ್‍ಡಮ್ ವಿರುದ್ಧ ಹೋರಾಡಿದ; ಬದುಕಿನ ಇರುವನ್ನು ಕುರಿತ ತಾತ್ತ್ವಿಕ ಚಿಂತನೆಯನ್ನು ವಸ್ತುನಿಷ್ಠೆಯಿಂದ ಆತ್ಮನಿಷ್ಠೆಗೆ ತಿರುಗಿಸಲು ಯತ್ನಿಸಿದ. ಕೀರ್ಕೆಗಾರ್ಡ್‍ನಿಗೆ ಅಸ್ತಿತ್ವವೆನ್ನುವುದು ನಿರಂತರ ಹೋರಾಟ. ಅವನಿಗೆ ಅತಿ ಹೆಚ್ಚಿನ ರಾಗಭಾವ (ಫ್ಯಾಶ್ಯನ್) ಅಂದರೆ ಶ್ರದ್ಧೆ. ಇದು ತಾರ್ಕಿಕ ನಿರ್ಣಯಗಳಿಗಿಂತ ಆಂತರಿಕ ಪ್ರೇರಣೆಯ ಮೇಲೆ ನಿಲ್ಲುತ್ತದೆ. ಒಂದು ವಿಷಯ ಬಾಹ್ಯದೃಷ್ಟಿಗೆ ಅಸಂಬದ್ಧವೆಂದು ಕಂಡರೂ ಆಂತರಿಕ ಪ್ರೇರಣೆ ಇದೇ ಸರಿ ಎಂದಾಗ ಅದರಂತೆಯೇ ನಡೆಯಬೇಕೆನ್ನುವುದು ಅವನ ವಾದ.

20ನೆಯ ಶತಮಾನದ ಅಸ್ತಿತ್ವವನ್ನು ಕುರಿತ ತಾತ್ವಿಕಚಿಂತನೆಗಳ ಮೂಲ ಕಾರ್ಲ್‍ಯಾಸ್ಪರ್ಸ್‍ನ (1883) ಬರವಣಿಗೆಗಳಲ್ಲಿದೆ. ಅವನ ಪ್ರಕಾರ 20ನೆಯ ಶತಮಾನದಲ್ಲಿ ವ್ಯಕ್ತಿವಿಶಿಷ್ಟತೆಗೆ ಅಪಾಯಕಾರಿಯಾದದ್ದು ಕ್ರಿಶ್ಚಿಯನ್‍ಡಮ್ ಅಲ್ಲ; ಆಧುನಿಕ ಔದ್ಯೋಗಿಕ ವಿಜ್ಞಾನದ ತಳಹದಿಯ ಮೇಲೆ ಅತ್ಯಂತ ಸಮರ್ಪಕವಾಗಿ, ಸಂಘಟಿತವಾಗಿ ನಿಂತಿರುವ ಸಮಾಜವ್ಯವಸ್ಥೆ (ಮ್ಯಾನ್ ಇನ್ ದಿ ಮಾಡರ್ನ್ ಏಜ್). ಯಾಸ್ಪರ್ಸ್ ಹೆಚ್ಚಾಗಿ ದೇವರನ್ನು ಕುರಿತು ಮಾತಾಡದೆ ಅತೀತವನ್ನು ಕುರಿತು ಮಾತಾಡುತ್ತಾನೆ. ನಮ್ಮ ಜ್ಞಾನದ ಅಪರಿಪೂರ್ಣತೆ ಮತ್ತು ನಮ್ಮ ಶಕ್ತಿಯ ಪರಿಮಿತಿ ತಿಳಿಯಲಸಾಧ್ಯವಾದ ಅಸ್ತಿತ್ವದ ಇರುವನ್ನು ಸೂಚಿಸುತ್ತದೆ (ಫಿಲಸಾಫಿಕ್, ಸಂಪುಟ iii) ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆನ್ನುವುದಕ್ಕೆ, ಯಾವ ಪರಂಪರಾನುಗತವಾಗಿ ಬಂದ ಜ್ಞಾನವೂ ಸಹಾಯಕವಾಗಲಾರದು; ಅದು ವಸ್ತುಗಳ ಮೂಲತತ್ವವನ್ನು ವಿಚಾರಮಾಡುವ ಶಾಸ್ತ್ರಕ್ಕೆ ನಿಲುಕದಂಥಾದ್ದು; ಸ್ವಾತಂತ್ರ್ಯ ವಸ್ತುನಿಷ್ಠ ಜ್ಞಾನಕ್ಕೆ ಅತೀತವಾದದ್ದು, ವೈಯಕ್ತಿಕವಾದದ್ದು; ಅದನ್ನು ತೀಕ್ಷ್ಣ ಪರಿಭಾವನೆಗೆ ಒಳಪಡಿಸಬಹುದು; ಆದರೆ ಅದು ವೈಜ್ಞಾನಿಕ ವಿಶ್ಲೇಷಣೆಗೆ ಗುರಿಪಡಿಸಲು ಸಾಧ್ಯವಿಲ್ಲದ್ದು-ಹೀಗೆ ಸಾತಂತ್ರ್ಯದ ವಿವೇಚನೆ ಮಾಡುತ್ತಾ ವ್ಯಕ್ತಿಯ ಆಂತರಂಗಿಕ ಅನುಭವದ ಮೇಲೆ ದೇವರ ಅಸ್ತಿತ್ವವನ್ನು ಪುನಃ ಶೋಧಿಸುವ ನಿಲುವಿನತ್ತ ಮುಂದುವರಿಯುತ್ತಾನೆ. ಅನಂತರದ ಅಸ್ತಿತ್ವವಾದಿಗಳ ಮೇಲೆ ಹೆಚ್ಚಿನ ಪ್ರಭಾವಬೀರಿದ ವ್ಯಕ್ತಿ ಮಾರ್ಟಿನ್ ಹೀಡೆಗರ್; ಈತ ಎಡ್‍ಮಂಡ್ ಹುಸರೆಲ್‍ನ ಶಿಷ್ಯ ಮತ್ತು ಫಿನೊಮಿನಾಲಜಿಯ ಆದ್ಯ ಪ್ರವರ್ತಕ. ತತ್ತ್ವಶಾಸ್ತ್ರಜ್ಞರು ಬಾಹ್ಯವಸ್ತುಗಳಿಂದ ಆಂತರಂಗಿಕ ಅನುಭವಗಳ ಕಡೆ ಹೊರಳಬೇಕು ಎಂದು ಹುಸರಲ್ ಹೇಳಿದ; ಏಕೆಂದರೆ ಆಂತರಂಗಿಕ ಅನುಭವಗಳೇ ಬಾಹ್ಯಪ್ರಪಂಚದ ಅರಿವಿಗೆ, ಅದರ ಪರಿಭಾವನೆಗೆ ಮೂಲ. ಹೀಡೆಗರ್ ಈ ವಾದವನ್ನೇ ಮುಂದುವರಿಸುತ್ತಾನೆ; ಮನುಷ್ಯ ಸಹಾನುಭೂತಿರಹಿತ ಪ್ರಪಂಚದಲ್ಲಿ ಉದ್ದೇಶಗಳನ್ನು ಸಾಧಿಸಲು ಯತ್ನಿಸುತ್ತ ಕೊನೆಗೆ ಅನಿವಾರ್ಯವಾದ ಸಾವಿನಲ್ಲಿ ಶೂನ್ಯವಾಗುತ್ತಾನೆ; ಅವನು ಜ್ಞೇಯಪ್ರಾಧಾನ್ಯವಾದ ಸಾಂಪ್ರದಾಯಿಕ ಸರ್ವಸಾಮಾನ್ಯ ಅಂಶಗಳಲ್ಲಿ ಬದುಕುತ್ತ ತನಗೆ ಬರಲಿರುವ ಅಳಿವನ್ನು ಮರೆತುಬಿಡುತ್ತಾನೆ; ಆದರೆ ತನಗೆ ಬರುವ ಅನಿವಾರ್ಯ ಸಾವಿನ ಪರಿವೆಯಲ್ಲಿ ಆತ ಬದುಕಿದರೆ ಆತ ಆತ್ಮವಂಚನೆಯಿಂದ (ಬ್ಯಾಡ್‍ಫೇತ್) ದೂರವಾಗುತ್ತಾನೆ. ಇವನ ಆಲೋಚನೆಗಳ ಮೂಲ ಕೀರ್ಕೆಗಾರ್ಡ್‍ನಲ್ಲಿದ್ದು, ಜಾನ್‍ಪಾಲ್ ಸಾತ್ರ್ರನಲ್ಲಿ ಮುಂದುವರಿದಿರುವುದನ್ನು ಕಾಣಬಹುದು.

ಜಾನ್ ಪಾಲ್ ಸಾತ್ರ್ರ (1905--), ತನ್ನ ಇಣಡಿe eಣಛಿeಟಿeಚಿಟಿಣ 1943 (ಇಂಗ್ಲಿಷ್ ಭಾಷಾಂತರ-ಬೀಯಿಂಗ್ ಅಂಡ್ ನತಿಂಗ್‍ನೆಸ್) ಈ ಪುಸ್ತಕದಲ್ಲಿ ನಾಸ್ತಿಕ ಅಸ್ತಿತ್ವವಾದದ ಕೂಲಂಕುಷ ವಿವೇಚನೆ ಮಾಡಿದ್ದಾನೆ. ಈ ಗ್ರಂಥದ ಮೂಲಕ, ತನ್ನ ಕಾದಂಬರಿಗಳು ನಾಟಕಗಳು ವಿಮರ್ಶೆಗಳ ಮೂಲಕ, ಅಸ್ತಿತ್ವವಾದವನ್ನು 20ನೆಯ ಶತಮಾನದ ಅತ್ಯಂತ ಪ್ರಭಾವೀಶಕ್ತಿಯನ್ನಾಗಿ ಮಾಡಿದ. ಸಾತ್ರ್ರನ ಪ್ರಕಾರ ಇರವು ಸತ್ತ್ವಕ್ಕಿಂತ ಮೊದಲ; ಮನುಷ್ಯ ತನ್ನ ಕಾರ್ಯಗಳಿಗೆ ತಾನೇ ಜವಾಬ್ದಾರ: ತಾನೇನಾಗಬೇಕೆಂದು ಆರಿಸಿಕೊಳ್ಳಲು ಮನುಷ್ಯ ಸ್ವತಂತ್ರ; ಈ ಸ್ವಾತಂತ್ರ್ಯ ವರವೂ ಹೌದು ಶಾಪವೂ ಹೌದು. ಮನುಷ್ಯನಿಗೆ ಆಧಾರವಾಗಿ ಯಾವ ಹೊರಗಿನ ಮೌಲ್ಯಗಳೂ ಇಲ್ಲ. ವ್ಯಕ್ತಿ ತನ್ನ ಅನಂತ ಜವಾಬ್ದಾರಿಗಳೊಂದಿಗೆ ಈ ಪ್ರಪಂಚಕ್ಕೆ ಬಂದವನು. ಯಾರ ನೆರವೂ ಅವನಿಗಿಲ್ಲ. ಪೂರ್ವನಿರ್ಮಿತ ಮೌಲ್ಯಗಳಾವುವನ್ನೂ ಒಪ್ಪದೆ ತನ್ನ ಅದೃಷ್ಟವನ್ನು ತಾನೇ ನಿರ್ಮಿಸಕೊಳ್ಳುವಂಥ ಪರಿಸ್ಥಿತಿ ಅವನದು; ಈ ಇರವು ವ್ಯಕ್ತಿನಿಷ್ಠವಾದದು. ಇದು ಸತ್ತ್ವಕ್ಕಿಂತ ಮೊದಲು ಇರುವಂಥದು. ಮನುಷ್ಯ ಸಂಪೂರ್ಣವಾಗಿ ಅಂಧಕಾರಮಯವಾದ ಮತ್ತು ಭಿನ್ನವಾದ ಅರ್ಥರಹಿತ ವಿಶ್ವದಲ್ಲಿ ಬರುತ್ತಾನೆ; ತನ್ನ ಅಲೌಕಿಕ ಪ್ರಜ್ಞೆಯಿಂದ (ಓeಚಿಟಿಣ) ಅದನ್ನು ಬದುಕಲು ಅರ್ಹವಾದ ಕ್ಷೇತ್ರವನ್ನಾಗಿ ಮಾಡುತ್ತಾನೆ. ಈ ಪ್ರಪಂಚದ ಅರ್ಥ ಅಥವಾ ಯಾವ ಮೌಲ್ಯವಾಗಲಿ ಅಸ್ತಿತ್ವದ ಆಯ್ಕೆಯಿಂದ ಬರುತ್ತದೆ. ತನ್ನ ಪರಿಸ್ಥಿತಿಗೆ ವ್ಯಕ್ತಿ ತಾನೇ ಜವಾಬ್ದಾರನಾಗುತ್ತಾನೆ. ವ್ಯಕ್ತಿಗಿರುವ ಈ ಒಂದು ಭಯಂಕರವಾದ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಹೆದರಿಕೆಯನ್ನುಂಟುಮಾಡುವಂಥದು. ತನ್ನ ಪ್ರಪಂಚವನ್ನು ತಾನೇ ಆರಿಸಿಕೊಳ್ಳಬೇಕಾದ ಆವಶ್ಯಕ ಪರಿಸ್ಥಿತಿ ಅಸಂಬದ್ಧತೆಯ, ನಿರಾಶೆಯ ಅನುಭವ ತರುತ್ತದೆ. ಯಾವ ಮೌಲ್ಯಗಳನ್ನಾರಿಸಿಕೊಳ್ಳಬೇಕು? ಇರುವ ತತ್ತ್ವಶಾಸ್ತ್ರಗಳು ತಾತ್ತ್ವಿಕ ಪಂಗಡಗಳು ಧಾರ್ಮಿಕ ನಂಬಿಕೆಗಳು ಮಧ್ಯಮ ವರ್ಗದ ನೈತಿಕ ದೃಷ್ಟಿ-ಇವುಗಳು ವ್ಯಕ್ತಿ ಸ್ವಾತಂತ್ರ್ಯದಿಂದ, ಕರ್ತವ್ಯದಿಂದ, ತಾನೇ ಮೌಲ್ಯಗಳನ್ನು ಕಂಡುಕೊಳ್ಳುವ ಜವಾಬ್ದಾರಿಯಿಂದ, ವ್ಯಕ್ತಿ ತಪ್ಪಿಸಿಕೊಳ್ಳುವ ಸಾಧನೆಗಳಾಗಿ ಪರಿಣಮಿಸುತ್ತವೆ; ವ್ಯಕ್ತಿಯನ್ನು ಆತ್ಮವಂಚನೆ ಎಂಬ ಪಾಪಕ್ಕೆ ಗುರಿ ಮಾಡುತ್ತವೆ. ಈ ಒಂದು ನಿಸ್ಸಹಾಯಕ ಅನಿರ್ಧಾರದಿಂದ ಒಂದು ಸ್ವತಂತ್ರವಾದ ನಿರ್ದಿಷ್ಟ ಆಯ್ಕೆಮಾಡಿ ಅದರಲ್ಲಿ ತೊಡಗುವುದರ ಮೂಲಕ, ತಪ್ಪಿಸಿಕೊಳ್ಳಲು ಸಾಧ್ಯ. ಈ ತೊಡಗುವಿಕೆ ಅನ್ಯವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ವ್ಯಕ್ತಿಯ ಅಸ್ತಿತ್ವಕ್ಕೆ ಒಂದು ರೂಪ ತಂದುಕೊಡುತ್ತದೆ. ದೇವರ ಇರುವಿಕೆಯನ್ನು ಸಾತ್ರ್ರ ಅಲ್ಲಗಳೆದರೂ ದೇವರ ಸ್ಥಾನದಲ್ಲಿ ಮನುಷ್ಯನನ್ನು ಕೂರಿಸಲು ಒಪ್ಪುವುದಿಲ್ಲ.

ಸಾತ್ರ್ರನ ನಾಸಿûಯಾ ಕಾದಂಬರಿಯಲ್ಲಿ ಬರುವ ಜಿಗುಪ್ಸೆ ಮನುಷ್ಯನ ಇರುವಿಕೆಯ ಜಿಗುಪ್ಸೆಯೇ ಆಗಿದೆ. ಮನುಷ್ಯ ತನ್ನ ಅಸ್ತಿತ್ವವನ್ನು ಜಿಗುಪ್ಸೆಯ ಮೂಲಕ ಎದುರಿಸುವುದು ಅದನ್ನು ಎದುರಿಸದೆ ಇರುವುದಕ್ಕಿಂತ ಉತ್ತಮವಾದದ್ದು. ಸಾತ್ರ್ರ ಮತ್ತು ಅವನ ತಲೆಮಾರಿನ ಜನಗಳಿಗೆ ಪ್ರತಿರೋಧ ಅಸ್ತಿತ್ವದ ಜಿಗುಪ್ಸೆಯಿಂದ ವೀರತ್ವಕ್ಕೆ ತಿರುಗಲು ಕಾರಣವಾಯಿತು. ಅದು ಕಾರ್ಯಪ್ರವೃತ್ತರಾಗಲು ಕರೆಯಾಗಿ ಪರಿಣಮಿಸಿತು: ಆಗ ಪ್ರತಿವ್ಯಕ್ತಿಯೂ ತಮ್ಮನ್ನು ಆಕ್ರಮಿಸಿದ್ದ ಜರ್ಮನರ ವಿರುದ್ಧ ಸ್ವಾತಂತ್ರ್ಯವನ್ನು ಕಂಡುಕೊಂಡ. ಈ ಸ್ವಾತಂತ್ರ್ಯವನ್ನು ಯಾರೂ ವ್ಯಕ್ತಿಯಿಂದ ಕಸಿದುಕೊಳ್ಳಲಾರರು. ಪ್ರಜ್ಞೆಯನ್ನೂ ಅವನಿಂದ ಕಸಿದುಕೊಂಡಾಗ ಅವನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದಷ್ಟೆ; ಇದು ವ್ಯಕ್ತಿಗೆ ಸ್ವಾಭಿಮಾನವನ್ನು ಕೊಡುವುದರ ಜೊತೆಗೆ ಅವನು ಮನುಷ್ಯನಾದದ್ದಕ್ಕೆ ಅರ್ಥವನ್ನೂ ತಂದುಕೊಡುತ್ತದೆ. ಇದು ತತ್ತ್ವಶಾಸ್ತ್ರಕ್ಕೆ ಹೊಸದೇನಲ್ಲ; ಡೇ ಕಾರ್ಟ್‍ನ ಸಿಸಮೇಟಿಕ್ ಡೌಟ್‍ನಲ್ಲಿ ಆಗಲೇ ಬಂದಿರುವಂಥದು; ಸಾತ್ರ್ರನಿಗೆ ಡೇ ಕಾರ್ಟ್ ಬೌದ್ಧಿಕ ನಾಯಕ. ಜರ್ಮನರ ವಿರುದ್ಧದ ಚಳವಳಿಯ ಸಂದರ್ಭದಲ್ಲಿ ಡೇ ಕಾರ್ಟ್‍ನ ತತ್ತ್ವ ಸಾತ್ರ್ರನಿಗೆ ಇನ್ನೂ ಅರ್ಥಪೂರ್ಣವಾಗಿ ಕಂಡಿತು. ಡೇ ಕಾರ್ಟ್ ತನಗೆ ಒಪ್ಪಿತವಾದದ್ದನ್ನು ಒಪ್ಪುವಂತೆ ಒತ್ತಾಯಿಸುವ ಕಾಲ್ಪನಿಕ ಭೂತದ ಬಗ್ಗೆ ನೇತಿ ಎಂದರೆ, ಇಲ್ಲಿ ಚಳುವಳಿಗಾರ ಸಾತ್ರ್ರ ಅಕ್ರಮಿಗಳ ಅಧಿಕಾರಕ್ಕೆ ಪ್ರತಿಭಟಿಸಿ ನೇತಿ ಎಂದ.

ಸಾತ್ರ್ರ ತೊಡಗುವಿಕೆಯ ಸಿದ್ಧಾಂತವನ್ನು ಮುಂದಿಟ್ಟರೂ, ಫ್ರಾಯ್ಡ್ ಮತ್ತು ಮಾಕ್ರ್ಸ್ ಸಿದ್ಧಾಂತಗಳನ್ನು ಅವುಗಳ ಪೂರ್ವನಿರ್ಣಾಯಕವಾದಕ್ಕಾಗಿ ವಿರೋಧಿಸಿದ; ಹಾಗೇ ತೀವ್ರ ಸುಧಾರಣಾವಾದಿಗಳನ್ನೂ ಅವರ (ರ್ಯಾಡಿಕಲ್ಸ್) ಅತಿ ಸರಳಗೊಳಿಸಲಾದ ನೈತಿಕತತ್ತ್ವಗಳಿಗಾಗಿ ವಿರೋಧಿಸಿದ; ಹಾಗೇ ಅವರಿಂದ ತಾನೂ ಟೀಕೆಗೊಳಗಾದ. ರೋಮನ್ ಕ್ಯಾಥೊಲಿಕ್ ಅಸ್ತಿತ್ವವಾದದ ಮಾರ್ಸೆಲ್ (1889-) ಕೇವಲ ಅಮೂರ್ತ ತತ್ತ್ವಗಳನ್ನು ಮೇಲೆತ್ತಿಹಿಡಿಯುವುದರಿಂದಾಗುವ ನೈತಿಕ ಪರಿಣಾಮಗಳನ್ನು ಕುರಿತು ಹೇಳಿದ. ರಷ್ಯದ ಆರ್ಥೊಡಾಕ್ಸ್ ಕ್ರಿಶ್ಚಿಯಾನಿಟಿಯ ಅಸ್ತಿತ್ವವಾದವನ್ನು ಪ್ರತಿಪಾದಿಸಿದವರು, ನಿಕೋಲಾಯ್ ಅಲೆಗ್ಸಾಂಡ್ರೊವಿಚ್ಚ್ ಬದ್ರ್ಯೇವ್ಟ್ ಮತ್ತು ಎಲ್ ಶಿಷ್ಟಾಫ್. ಯಹೂದಿ ಅಸ್ತಿತ್ವವಾದದ ಪ್ರತಿಪಾದಕ ಮಾರ್ಟಿನ್ ಬೂಬರ್.

(ಎಚ್.ಎಂ.ಸಿ.)