ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶ್ಮಗಳು
'ಅಂಡಾಶ್ಮಗಳು-' ಊಲೈಟುಗಳೆಂಬ ಹೆಸರುಳ್ಳ ಇವು ಸಣ್ಣ ಸಣ್ಣ ಗುಂಡುಗಳು. ಸಾಮಾನ್ಯವಾಗಿ ಇವುಗಳ ವ್ಯಾಸ 1 ಮಿಮೀ. ಇವುಗಳ ಕೇಂದ್ರದಲ್ಲಿ ಗುರುತಿಸಬಹುದಾದೊಂದು ನ್ಯೂಕ್ಲಿಯಸ್ ಇರುತ್ತದೆ. ಒಂದು ಅವಸಾದನದಲ್ಲಿ ಇವು ಬಹಳವಾಗಿದ್ದರೆ ಅದಕ್ಕೊಂದು ವಿಶಿಷ್ಟ ಹೆಣಿಗೆಯನ್ನು ಕೊಡುತ್ತವೆ. ಏಕಕೇಂದ್ರೀಯಪದರಗಳಿಲ್ಲದ ಅಥವಾ ನ್ಯೂಕ್ಲಿಯಸ್ ಇಲ್ಲದ ಇವುಗಳಂಥ ಬೇರೆಯ ಕಲ್ಲುಗಳನ್ನು ಮತ್ತು ಕೆಲವು ಫೊರ್ಯಾಮಿನಿಫೆರಾಗಳನ್ನು ಅಂಡಾಶ್ಮಗಳೆಂದು ಭ್ರಮಿಸುವುದುಂಟು.
ಅನೇಕ ತರದ ಅಂಡಾಶ್ಮದಂಥ ಕಾಯಗಳು ಬೇರೆಬೇರೆ ತೆರನಾದ ಖನಿಜಗಳನ್ನು ಒಳಗೊಂಡಿರುವುವೆಂದೂ ಅವುಗಳು ಬೇರೆಬೇರೆ ರೀತಿಯಲ್ಲಿ ರಚಿತವಾಗಿವೆಯೆಂದೂ ವರದಿಯಾಗಿದೆ. ಕ್ಯಾಲ್ಸೈಟಿನ ಅಂಡಾಶ್ಮಗಳೇ ಸರ್ವಸಾಧಾರಣವಾಗಿರುವುವು. ಇವು ಸಾಗರ ನಿಕ್ಷೇಪಗಳಲ್ಲಿ ಸಿಕ್ಕುತ್ತವೆ. ಕೆಲವು ಜಾಗಗಳಲ್ಲಂತೂ ಅಲ್ಲಿನ ಸುಣ್ಣಕಲ್ಲುಗಳ ತುಂಬ ಇವೇ ತುಂಬಿಕೊಂಡಿವೆ. ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ ಅದಿರುಗಳು, ಕ್ಯಾಲ್ಸಿಯಂ ಕಾರ್ಬೊನೇಟಿನ ಸ್ಥಾನಪಲ್ಲಟದಿಂದ ಉಂಟಾದುವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಮಿಕ್ಕವುಗಳ ಉತ್ಪತ್ತಿಯ ವಿಷಯ ಚರ್ಚಾಸ್ಪದವಾಗಿದೆ.
ಕ್ಯಾಲ್ಸಿಯಂ ಕಾರ್ಬೊನೇಟ್ ಅಂಡಾಶ್ಮಗಳು ಸಾಮಾನ್ಯವಾಗಿ ತಮ್ಮ ಅಂತಃಕೇಂದ್ರದಲ್ಲಿ ಬಗೆಬಗೆಯ ಖನಿಜಗಳ ಕಣಗಳು, ಪಳೆಯುಳಿಕೆಗಳ ಚೂರುಗಳು, ಅಥವಾ ಇತರ ವಸ್ತುಗಳು_ಇವನ್ನು ಮೂಲದ್ರವ್ಯಗಳಾಗಿ ಹೊಂದಿವೆ. ಕೇಂದ್ರೀಯ ಮೂಲ ದ್ರವ್ಯಗಳು ಗಾತ್ರದಲ್ಲೂ ಆಕಾರದಲ್ಲೂ ವಿವಿಧತೆ ಉಂಟು. ಆದರೆ ಅವುಗಳ ಮೇಲೆ ಪದರಗಳು ಬೆಳೆದುಕೊಳ್ಳುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಗುಂಡಾದ ಆಕೃತಿಯನ್ನು ಪಡೆಯುತ್ತವೆ. ಈ ಆಕೃತಿಗಳು ಗಾತ್ರದಲ್ಲಿ ಒಂದೇ ಸಮವಾಗಿಲ್ಲ ಮತ್ತು ಬಣ್ಣ, ಅಪಾರಕತೆ ಮತ್ತು ಹರಳಿನ ರಚನೆಯಲ್ಲಿ ಒಂದಕ್ಕೊಂದಕ್ಕೆ ಸ್ವಲ್ಪ ವ್ಯತ್ಯಾಸವಿರುವುದರಿಂದ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಬಹುದು. ದಪ್ಪವಾಗಿರುವ ಅಂಥ ಕೆಲವು ಪದರಗಳಲ್ಲಿ ಕ್ಯಾಲ್ಸೈಟಿನ ನೇರವಾದ ಎಳೆಗಳಿರಬಹುದು. ಈ ಸೂಕ್ಷ್ಮ ಆಕೃತಿಗಳು ಮತ್ತೆ ಸ್ಫಟಿಕೀಕರಣಗೊಂಡು ಬದಲಾವಣೆ ಹೊಂದಿರಲೂಬಹುದು ಮತ್ತು ಕೆಲವು ಅಂಡಾಶ್ಮಗಳು ತಮ್ಮ ಏಕಕೇಂದ್ರೀಯ ಆಕಾರಗಳನ್ನು ಕಳೆದುಕೊಂಡಿರಲೂಬಹುದು.
ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪುರ್ವದ ಕಾಲದಿಂದ ಆಧುನಿಕ ಕಾಲದವರೆಗಿನ ಶಿಲೆಗಳಲ್ಲಿರುವುದು ಕಂಡುಬಂದಿದೆ.