ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯ
[ಸಂಪಾದಿಸಿ]12ನೆಯ ಶತಮಾನದ ಬಸವಣ್ಣನವರ ಕಾಲದ ಒಬ್ಬ ವಚನಕಾರ. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವಮಂಟಪದಲ್ಲಿ ಸಮಾನಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ. ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ.
ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವನಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು. ಅವನ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವನೊಬ್ಬ ಕೆಚ್ಚೆದೆಯ, ನಿಷ್ಠುರಪ್ರಕೃತಿಯ, ಗ್ರಾಮ್ಯಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವನು ನ್ಯಾಯನಿಷ್ಠುರ, ದಯಾದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದೆ ಬಿಡುವುದಿಲ್ಲ. ಅವನು ಮೃದುವಾಗಿ ಮಾತನಾಡುವುದು ಅಪುರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು. ‘ಕೇಳಿರಯ್ಯ ಮಾನವರೇ’, ‘ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೋ’, ‘ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭುಂಜಕರು ನೀವು ಕೇಳಿರೋ’, ‘ಪರಪುರುಷಾರ್ಥವನರಿಯದೆ ಕೆಟ್ಟನರ ಕುರಿಗಳು ನೀವು ಕೇಳಿರೋ’ ಎಂದು ಆರಂಭವಾಗಿ ‘ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದ’, ‘ಪಡಿಹಾರ ಉತ್ತಣ್ಣನ ಎಡಪಾದರಕ್ಷೆಯಿಂದ ಪಟಪಟನೆ ಹೊಡೆಯೆಂದ’, ‘ಮೂಗ ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ ಹಿಟ್ಟಿನ ತಳಿದು ಮೇಲೆ ನಿಂಬೆಯ ಹುಳಿಯನೆ ಹಿಂಡಿ ಪಡುವಲ ಗಾಳಿಗೆ ಹಿಡಿ’-ಹೀಗೆ ಮುಕ್ತಾಯವಾಗುತ್ತದೆ, ಇವನ ವಚನಗಳ ಶೈಲಿ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ಸರ್ವಜ್ಞ; ಇನ್ನೊಬ್ಬ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ.