ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾಳಮದ್ದಳೆ

ವಿಕಿಸೋರ್ಸ್ದಿಂದ

ತಾಳಮದ್ದಳೆ - ಯಕ್ಷಗಾನದ ವೇಷಭೂಷಣಗಳಿಲ್ಲದೆ, ಅರ್ಥದಾರಿಗಳು ಒಂದು ಕಡೆ ಅರ್ಧವೃತ್ತಾಕಾರದಲ್ಲಿ ಕುಳಿತು ಆಯಾ ಪಾತ್ರದ ಮಾತುಗಳನ್ನು ಆಡಿ ಹಾಡುಗಳನ್ನು ಹೇಳಿ ಕಥೆಕಟ್ಟುವ ಒಂದು ಕಲೆ. ಇದಕ್ಕೆ ಪ್ರಸಂಗ, ಬೈಠಕ್, ಯಕ್ಷಗಾನ ಕೂಟ ಎಂದೂ ಶಿವಮೊಗ್ಗ ಜಿಲ್ಲೆಯಲ್ಲಿ ಜಾಗರ ಎಂದು ಹೇಳುವುದುಂಟು. ತಾಳ ಮತ್ತು ಮದ್ದಳೆ (ಮೃದಂಗ) ಇದರಲ್ಲಿ ಮುಖ್ಯವಾದ ವಾದನಸಾಮಗ್ರಿಗಳು, ದಕ್ಷಣ ಕನ್ನಡದ ತೆಂಕುತಿಟ್ಟಿನಲ್ಲಿ ತಾಳದ ಬದಲು ಜಾಗಟೆಯನ್ನೂ ಯುದ್ಧ ಮುಂತಾದ ಆರ್ಭಟದ ಸಂದರ್ಭಗಳಲ್ಲಿ ಚಂಡೆಯನ್ನೂ ಉಪಯೋಗಿಸುತ್ತಾರೆ.

ಸದ್ಯಕ್ಕೆ ಸುರತ್ಕಲ್ ವೆಂಕಟರಾಯಾಚಾರ್ಯರು ತಿಳಿಸಿರುವಂತೆ 16ನೆಯ ಶತಕದ ಮಧ್ಯಕಾಲದ ದಕ್ಷಿಣ ಭಾರತದ ಒಂದು ಶಾಸನದಲ್ಲಿ (1565) 'ಏಕಾದಶೀ ಜಾಗರ ಪಲ್ಲಕ್ಕಿ ಸೇವೆ ತಾಳ ಮದ್ದಳೆಯ ಸೇವೆಗೆ ಆಗಿ ಸಮರ್ಪಿಸಿದ ಮಾನ್ಯ ಎಂದು ಬರುವ ಮಾತು ತಾಳ ಮದ್ದಳೆಯ ತೀರ ಪ್ರಾಚೀನ ಉಲ್ಲೇಖವಾಗಿದೆ. ಹಬ್ಬ - ಹರಿದಿನ, ಮುಂಜಿ- ಮದುವೆ, ಹಾಗೂ ಇತರ ಸಾಂಸ್ಕøತಿಕ ಕಾರ್ಯ ಕ್ರಮಗಳಲ್ಲಿ ನಡೆಯುವ ಈ ಕಾರ್ಯಕ್ರಮ ಮಳೆಗಾಲ ರಾತ್ರಿಗಳಲ್ಲಿಯೂ ಕಟ್ಟಡಗಳ ಒಳಗೆ ಪ್ರಯೋಗಿಸಲೂ ಅನುಕೂಲವಾದುದು. ಮುಖ್ಯವಾಗಿ ಇದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪರಂಪರಾಗತವಾಗಿ ಜನಪ್ರಿಯವಾಗಿದೆ. ಇತ್ತೀಚೆಗೆ ಆಕಾಶವಾಣಿಯಲ್ಲೂ ಇದನ್ನು ಕೇಳಬಹುದಾಗಿದೆ.

ಇಲ್ಲಿ ಕುಣಿತವಿಲ್ಲದಿರುವುದುರಿಂದ ಭಾಗವತ ಕುಣಿತಕ್ಕೆ ಹೇಳುವ ಬಿಡ್ತಿಗೆ (ಬಡಿತ) ಅಂದರೆ ತಾಕಿಟ ತರಿಕಿಟ, ಧೇಂತತಾಸ್ತಿಕಿಟಧ ಮುಂತಾದ ಗತ್ತುಗಳನ್ನು ಕೊಡುವುದಿಲ್ಲ. ಮಾತಿನದೇ ಪ್ರಾಮುಖ್ಯವಿರುವುದರಿಂದ ಇಲ್ಲಿನ ಸಂಭಾಷಣೆಗಳು ಯಕ್ಷಗಾನದಲ್ಲಿರುವುದಕ್ಕಿಂತಲೂ ದೀರ್ಘವಾಗಿರುತ್ತವೆ. ಸಂವಾದಗಳು ವಾದ- ವಿವಾದಗಳು ತೀಕ್ಷ್ಣವಾಗಿ ಬೆಳೆಯುತ್ತವೆ. ಮುಂದಿನ ಪಾತ್ರಧಾರಿಯ ಮಾತಿಗೆ ಹಿನ್ನೆಲೆಯನ್ನು ಸಿದ್ದಮಾಡಿ, ಮುಂದೆ ಭಾಗವತ ಹೇಳುವ ಆ ಪಾತ್ರಧಾರಿಯ ಪದ್ಯಕ್ಕೂ ಅವನ ಅರ್ಥಕ್ಕೂ ಯೋಗ್ಯ ಅವಕಾಶ ಕಲ್ಪಿಸುವ ಜಾಣ್ಮೆ ಇಲ್ಲಿಯೂ ಬೇಕು. ರೌದ್ರ-ವೀರರಸಗಳಲ್ಲಿ ಇಲ್ಲಯೂ ಅರ್ಭಟೆಯುಂಟು. ಪ್ರಸಂಗದ ಪದ್ಯಗಳ ಅರಿವಿದ್ದು, ಕಾವ್ಯ ಪುರಾಣಗಳ ಪರಿಚಯವಿದ್ದು, ಪ್ರಸಂಗಾವಧಾನತೆಯಿಂದ ಕೂಡಿದ ವಾಕ್ಪಟುತ್ವ ಅರ್ಥದಾರಿಯಲ್ಲಿದ್ದರೆ ಸಂಭಾಷಣೆಗೆ ಕಳೆಯೇರುತ್ತದೆ.

ಇಲ್ಲಿಯ ಅರ್ಥಧಾರಿಗಳಲ್ಲಿ ಯಕ್ಷಗಾನರಂಗದ ಶ್ರೇಷ್ಠಪಾತ್ರಧಾರಿಗಳಲ್ಲದೆ, ಇತರ ವಿದ್ವಾಂಸರೂ ಹಲವರು ಸೇರುತ್ತಾರೆ. ಇಲ್ಲಿಯೂ ಪುರುಷರೇ ಅರ್ಥಧಾರಿಗಳು.

ವಿದ್ವಾಂಸರು ಈ ರಂಗದಲ್ಲಿ ಹೆಚ್ಚಾಗಿ ಸೇರುತ್ತಿರುವುದರಿಂದ ಹಿಂದಿನ ಅಶ್ಲೀಲ ಸಂಭಾಷಣೆ, ಅರ್ಥವಿಲ್ಲದ ಬೊಬ್ಬೆಗುಲ್ಲು ಕಡಿಮೆಯಾಗಿವೆ.

ಆದರೆ ಸ್ವಪ್ರತಿಷ್ಠೆಯನ್ನು ಮೆರೆಸಬೇಕೆಂಬ ಚಾಪಲ್ಯ ಹೆಚ್ಚಾಗಿ, ಸಂದರ್ಭಕ್ಕೆ ಹೊಂದದ ವ್ಯರ್ಥ ಚರ್ಚೆ, ರಸಭಂಗ ಮಾಡುವ ಉದ್ದುದ್ದ ಭಾಷಣಗಳು ಹೆಚ್ಚಾಗಿ ಕಾಣಬರುತ್ತವೆ. ಆಧುನಿಕ ಜೀವನದ ವಿಚಾರಗಳೂ ಇಂಗ್ಲಿಷ್ ಶಬ್ದಗಳೂ ಬಂದು ರಸಾಭಾಸವನ್ನುಂಟುಮಾಡುತ್ತವೆ.

ಒಟ್ಟಿನಲ್ಲಿ ಅಲ್ಪ ವೆಚ್ಚದಿಂದ ಅಧಿಕ ಮನೋರಂಜನೆಯನ್ನು ಉಂಟು ಮಾಡುವ ತಾಳಮದ್ದಳೆ ಸಂಸ್ಕøತಿಯ ಪ್ರಸಾರದಲ್ಲಿ ಮಹತ್ತ್ವ ಪಾತ್ರ ಪಡೆದಿದೆ. (ಎಲ್.ಆರ್.ಎಚ್.)