ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರ್ವತಿ

ವಿಕಿಸೋರ್ಸ್ದಿಂದ

ಪಾರ್ವತಿ - ಪರ್ವತರಾಜ ಮೇನಕೆಯರ ಮಗಳು. ಈಶ್ವರನ ಹೆಂಡತಿ. ದಕ್ಷನ ಮಗಳಾದ ದಾಕ್ಷಾಯಿಣಿ ತನ್ನ ಪತಿಯಾದ ಶಿವ ಬೇಡವೆಂದರೂ ಕೇಳದೆ ದಕ್ಷ ಮಾಡುತ್ತಿದ್ದ ಯಜ್ಞಕ್ಕೆ ಹೋಗಿ ಅಲ್ಲಿ ಅವಮಾನಿತಳಾಗಿ ಯಜ್ಞಕುಂಡಕ್ಕೆ ಧುಮುಕಿ ದೇಹತ್ಯಾಗ ಮಾಡಿದ ಅನಂತರ ಪರ್ವತರಾಜನ ಮಗಳಾಗಿ ಹುಟ್ಟಿದಳು. ಪರ್ವತರಾಜನಿಗೆ ಮೂವರು ಹೆಣ್ಣುಮಕ್ಕಳು - ಪಾರ್ವತಿ, ಏಕಪರ್ಣಾ, ಏಕಪಾಟಲಾ ಎಂದು, ಒಬ್ಬ ಮಗ - ಮೈನಾಕಾ ಎಂದು. ಪಾರ್ವತಿ ಬಾಲ್ಯದಿಂದಲೇ ಶಿವನಲ್ಲಿ ಅನುರಕ್ತಳು, ಸದಾ ಶಿವಧ್ಯಾನ ನಿರತಳು. ದೇವಲೋಕದಲ್ಲಿ ತಾರಕಾಸುರನ ಬಾಧೆ ತಾಳಲಾರದಂತಾಗಿತ್ತು. ದೇವತೆಗಳು ತಮ್ಮ ದುಃಖವನ್ನು ಬ್ರಹ್ಮ, ವಿಷ್ಣುಗಳಲ್ಲಿ ತೋಡಿಕೊಂಡರು. ಎಲ್ಲರೂ ಯೋಚಿಸಿ ಶಿವಪಾರ್ವತಿಯರಲ್ಲಿ ಜನಿಸಿದವನಿಂದ ಮಾತ್ರ ತಾರಕಾಸುರ ಸಂಹಾರ ಸಾಧ್ಯ ಎಂಬ ತೀರ್ಮಾನಕ್ಕೆ ಬಂದರು. ಇದಕ್ಕಾಗಿ ಮುಂದಿನ ಕಾರ್ಯಗಳನ್ನು ಕೈಗೊಂಡರು. ಬೃಹಸ್ಪತಿ ಮನ್ಮಥನನ್ನು ಈ ಕಾರ್ಯಕ್ಕೆ ನಿಯೋಜಿಸಿದ. ಅಷ್ಟು ಹೊತ್ತಿಗಾಗಲೇ ಪಾರ್ವತಿ ಪ್ರಾಪ್ತ ವಯಸ್ಕಳಾಗಿದ್ದಳು. ಮನ್ಮಥ ವಸಂತನೊಡನೆ ಶಿವನ ಆಶ್ರಮಕ್ಕೆ ಬಂದ. ಶಿವ ಅಲ್ಲಿ ತಪಸ್ಸಿನಲ್ಲಿ ತಲ್ಲೀನನಾಗಿದ್ದ. ತನ್ನ ಮೇಲೆ ಹೂಬಾಣ ಬಿಟ್ಟ ಮನ್ಮಥನನ್ನು ಶಿವ ಮೂರನೇ ಕಣ್ದೆರೆದು ಸುಟ್ಟ. ರತಿದೇವಿಯ ದುಃಖವನ್ನು ಕಂಡ ಶಿವ ನಿನ್ನ ಪತಿ ಅನಂಗನಾಗಿದ್ದುಕೊಂಡೆ ಕ್ರಿಯಾತ್ಮಕವಾಗಿರುತ್ತಾನೆ. ಮುಂದೆ ಭೃಗು ಮಹರ್ಷಿ ವಿಷ್ಣುವಿಗೆ ಶಾಪ ಕೊಟ್ಟಾಗ ಆತ ಭೂಮಿಯಲ್ಲಿ ವಾಸುದೇವನ ಮಗನಾಗಿ ಹುಟ್ಟಿದಾಗ ಅವನಿಗೆ ನಿನ್ನ ಗಂಡ ಮಗನಾಗಿ ಹುಟ್ಟುತ್ತಾನೆ ಎಂದು ಸಮಾಧಾನ ಮಾಡಿದ. ಇಷ್ಟಾಗಿಯೂ ಒಲಿಯದ ಶಿವನನ್ನು ಪಾರ್ವತಿ ಉಗ್ರ ತಪಸ್ಸಿನಿಂದ ಒಲಿಸಲು ಯತ್ನಿಸಿದಳು. ಪಾರ್ವತಿ ತಪಸ್ಸು ಮಾಡುವಲ್ಲಿಗೆ ಶಿವಬ್ರಾಹ್ಮಣ ವಟುವಾಗಿ ಬಂದು ಅವಳನ್ನು ಪರೀಕ್ಷಿಸಿದ. ಆತನೇ ಶಿವನೆಂದು ಪಾರ್ವತಿ ಅರಿತಳು. ಅವಳನ್ನೇ ಮದುವೆಯಾಗುವುದಾಗಿ ತಿಳಿಸಿ ಶಿವ ಆಶ್ವಾಸನೆ ಕೊಟ್ಟು ಹಿಂದಿರುಗಿದ. ಹಿಮವಂತ ಮಗಳಿಗೆ ಸ್ವಯಂವರ ಏರ್ಪಡಿಸಿದ. ದೇವತೆಗಳೆಲ್ಲ ನೆರೆದರು. ಶಿವ ಶಿಶು ವೇಷಧಾರಿಯಾಗಿ ಪಾರ್ವತಿಯ ತೊಡೆಯ ಮೇಲೆ ಮಲಗಿದ. ಅಷ್ಟ ದಿಕ್ಪಾಲಕರೂ ತಮ್ಮ ದಿವ್ಯಾಯುಧಗಳಿಂದ ಮಗುವನ್ನು ಪಡೆಯಲು ಯತ್ನಿಸಿದರು. ಆದರೆ ಎಲ್ಲರೂ ಹಾಗೆಯೇ ಸ್ತಬ್ಧವಾಗಿ ನಿಂತುಬಿಟ್ಟರು. ವಿಷ್ಣು ಚಕ್ರವನ್ನು ಎತ್ತಿ ಹಾಗೆಯೇ ನಿಂತುಬಿಟ್ಟ. ಪೂಷ ಹಲ್ಲು ಕಡಿದ. ಅವನ ಹಲ್ಲುಗಳೇ ಉದುರಿ ಹೋದವು. ಬ್ರಹ್ಮ ನಿಜಾಂಶ ತಿಳಿದು ಶಿವನನ್ನು ಸ್ತೋತ್ರ ಮಾಡಿದ; ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸಿದರು. ಶಿವ ಅವರಿಗೆ ದಿವ್ಯದೃಷ್ಟಿ ನೀಡಿ ನಿಜರೂಪ ತೋರಿದ. ಅವರೆಲ್ಲ ಹೂ ಮಳೆಗರೆದರು. ಸಾಲಂಕೃತ ಪಾರ್ವತಿಯನ್ನು ವಿಷ್ಣು ತಾನೆ ಧಾರೆಯೆರೆದು ಶಿವನಿಗೆ ವಿವಾಹಮಾಡಿದ. ಪಾರ್ವತಿ ಶಿವನಿಂದ ಗಣಪತಿಯನ್ನು ಷಣ್ಮುಖನನ್ನು ಪಡೆದಳು. ಮುಂದೆ ಷಣ್ಮುಖ ತಾರಕಾಸುರರನ್ನು ಸಂಹಾರ ಮಾಡಿದ. ಒಮ್ಮೆ ಶಿವಪಾರ್ವತಿ ಕ್ರೀಡಾಸಕ್ತರಾಗಿದ್ದಾಗ ದೇವತೆಗಳು ಹೆದರಿ ಭೂದೇವಿಯನ್ನು ಮುಂದಿಟ್ಟುಕೊಂಡು ಬ್ರಹ್ಮನೇ ಮುಂತಾದವರು ದೇವ, ಪಾರ್ವತಿಯಲ್ಲಿ ಪಿಂಡೋತ್ಪತ್ತಿಯಾದರೆ ಯಾರೂ ತಡೆದುಕೊಳ್ಳಲಾರರು, ಈ ಕಾರ್ಯವನ್ನು ನಿಲ್ಲಿಸು, ತೇಜಸ್ಸನ್ನು ನಿನ್ನಲ್ಲಿಯೇ ಅಡಗಿಸಿಕೊ ಎಂದು ಪ್ರಾರ್ಥಿಸಿದರು. ಆಗ ಪಾರ್ವತಿ ತನಗೆ ಸಂತಾನವಾಗುವುದನ್ನು ತಡೆದಿದ್ದಕ್ಕಾಗಿ ದೇವತೆಗಳನ್ನು ಕುರಿತು ನಿಮಗೆ ನಿಮ್ಮ ಪತ್ನಿಯರಲ್ಲಿ ಸಂತಾನವಾಗದಿರಲಿ ಎಂದು ಭೂದೇವಿಗೆ ನೀನು ನನಗೆ ಸಂತಾನವಾಗದಂತೆ ಭಂಗಪಡಿಸಿದ್ದಕ್ಕಾಗಿ ನೀನು ಆನೇಕ ರೂಪಗಳನ್ನು ಪಡೆದು ಅನೇಕರಿಗೆ ಹೆಂಡತಿಯಾಗೂ ಎಂದು ಶಪಿಸಿದಳು.

ಶಿವನ ಕೋಪದಿಂದ ಲವಣ ಸಮುದ್ರದಲ್ಲಿ ಜನ್ಮತಾಳಿದ ಜಲಂಧರನೆಂಬ ರಕ್ಕಸ ಇಂದ್ರನ ಸಂಪತ್ತನ್ನೆಲ್ಲಾ ಸೂರೆ ಮಾಡಿ ಸುಂದರಿಯಾದ ಪಾರ್ವತಿಯನ್ನು ತನ್ನ ಮಡದಿಯನ್ನಾಗಿ ಮಾಡಿಕೊಳ್ಳಲು ಯತ್ನಿಸಿ ಶಿವನಿಂದ ನಾಶ ಹೊಂದಿದ. ಪಾರ್ವತಿಗೆ ಅಪರ್ಣೆ, ಉಮಾ, ಗಿರಿಜೆ ಎಂಬ ಹೆಸರುಗಳಿವೆ. (ಬಿ.ಎನ್.ಎನ್.ಬಿ.)