ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಂದರಬನ

ವಿಕಿಸೋರ್ಸ್ದಿಂದ

ಸುಂದರಬನ ಪ್ರಪಂಚದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ. ಇದು ಭಾರತ ಹಾಗೂ ಬಾಂಗ್ಲಾದೇಶಗಳಲ್ಲಿ ಹರಡಿದೆ. ಪ್ರಪಂಚದಲ್ಲೇ ವಿಸ್ತಾರವಾದ ನದಿ ಮುಖಜಭೂಮಿ ಭಾಗ. ಇದರ ವ್ಯಾಪ್ತಿ ಗಂಗಾ, ಬ್ರಹ್ಮಪುತ್ರಾ ಮತ್ತು ಮೇಘನಾ ನದಿ ಮುಖಜಭೂಮಿಯಿಂದ ಹೂಗ್ಲಿ ನದಿಯವರೆಗೆ ವಿಸ್ತರಿಸಿದೆ. ಇದು ಪ್ರಪಂಚದಲ್ಲೇ ವಿಸ್ತಾರವಾದ ಮ್ಯಾಂಗ್ರೋವ್ ಸಸ್ಯವರ್ಗ ಹೊಂದಿರುವ ಏಕೈಕ ಪ್ರದೇಶ. ಇದು 210 31` ದಿಂದ 220 30` ಉತ್ತರ ಅಕ್ಷಾಂಶದಲ್ಲಿ ಹಾಗೂ ರೇಖಾಂಶಿಕವಾಗಿ 890 ಯಿಂದ 890 55` ಪೂರ್ವ ರೇಖಾಂಶದಲ್ಲಿದೆ. ಇದು ಸು.10,000 ಚ.ಕಿಮೀ ಭೂ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಸೇ. 62% ರಷ್ಟು ಭೂ ಭಾಗ ಬಾಂಗ್ಲಾ ದೇಶದಲ್ಲಿ ಹಾಗೂ ಉಳಿದ ಸೇ. 38% ರಷ್ಟು ಭೂ ಭಾಗ ಭಾರತದಲ್ಲಿ ಕಂಡುಬರುತ್ತದೆ.

ಇದು ಕೋಲ್ಕತ್ತದಿಂದ 131 ಕಿಮೀ ದೂರದಲ್ಲಿದೆ. ಈ ಪ್ರದೇಶ ಭಾರತದಲ್ಲಿ ಸು. 2585 ಕಿಮೀ ಭೂ ಪ್ರದೇಶವನ್ನು ಒಳಗೊಂಡಿದೆ. ಇದನ್ನು ರಾಷ್ಟ್ರೀಯ ಉದ್ಯಾನವನವೆಂದು 1984ರಲ್ಲಿ ಘೋಷಿಸಲಾಯಿತು. ಇದು ಮ್ಯಾಂಗ್ರೋವ್ ಜೌಗುಪ್ರದೇಶ, ಹುಲುಸಾಗಿ ಬೆಳೆದಿರುವ ಕಾಡುಗಳ ದ್ವೀಪ ಪ್ರದೇಶ ಹಾಗೂ ಬಂಗಾಲಕೊಲ್ಲಿಯ ಹತ್ತಿರದ ಸಣ್ಣ ನದಿಗಳನ್ನು ಒಳಗೊಂಡಿದೆ. ಇಲ್ಲಿನ ಹೆಚ್ಚಿನ ಪ್ರದೇಶ ಮ್ಯಾಂಗ್ರೋವ್ ಕಾಡುಗಳು ಹಾಗೂ ಜೌಗುಪ್ರದೇಶಗಳನ್ನು ಒಳಗೊಂಡಿದ್ದು, ಇಲ್ಲಿ ಲವಣತೆ ಹೊಂದಿರುವ ವಿಶಿಷ್ಟ ಜೈವಿಕ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ.

ಈ ಪ್ರದೇಶದಲ್ಲಿ ಸುಂದರಿ ಎಂಬ ಮರಗಳು ಹೆಚ್ಚಾಗಿ ಕಂಡುಬರುವುದರಿಂದ ಇವುಗಳನ್ನು ಸುಂದರಬನ ಎಂದು ಕರೆಯಲಾಗುತ್ತದೆ. ಈ ಮರಗಳು ಉಪ್ಪಿನ ಅಂಶವನ್ನು ಹೀರಿ ಬೆಳೆಯುವ ಮರಗಳಾಗಿವೆ. ಇಲ್ಲಿನ ಸಸ್ಯವರ್ಗ ಪ್ರಾದೇಶಿಕ ಪರಿಸರದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಈ ಭಾಗದಲ್ಲಿ ಆಳ ಹಾಗೂ ಅಂಟಾದ ಕೆಸರು ಮಣ್ಣು ಇರುವುದರಿಂದ ಗಿಡಗಳು ನೇರವಾಗಿ ಬೆಳೆಯಲು ಸಹಕಾರಿಯಾಗಿದೆ. ಇಲ್ಲಿ ನಿತ್ಯಹರಿದ್ವರ್ಣ ಅರಣ್ಯಗಳಿದ್ದು, ಇವುಗಳ ರೆಂಬೆಗಳು ಬಹು ಉದ್ದವಾಗಿ ಚಾಚಿಕೊಂಡಿರುತ್ತವೆ. ಇವುಗಳು ಅಸಂಖ್ಯಾತ ಬೇರಿನಂತಿರುವ ಬಿಳಿಲುಗಳಿಂದ ಕೂಡಿರುತ್ತವೆ. ಈ ಬಿಳಿಲುಗಳೇ ಮ್ಯಾಂಗ್ರೋವ್ ಅರಣ್ಯಗಳ ಮುಖ್ಯ ಲಕ್ಷಣಗಳು.

ಈ ಮರಗಳು ಭೂಮಿಯ ಒಳಭಾಗದಲ್ಲಿನ ಬೇರುಗಳ ಸಂಪರ್ಕ ಪಡೆದಿವೆ. ಇವು ಕೊಳವೆಯಂತಿದ್ದು ಗಾಳಿಯನ್ನು ಭೂಮಿಯ ಒಳಭಾಗದ ಬೇರುಗಳಿಗೆ ಒದಗಿಸುತ್ತವೆ. ಈ ಪ್ರದೇಶದಲ್ಲಿನ ಗಿಡ ಮರಗಳ ಮೇಲ್ಭಾಗದಲ್ಲಿ ಕೆಲವು ಗಿಡಗಳು ಚಿಗುರುತ್ತವೆ (ಪರಾವಲಂಬಿ ಸಸ್ಯಗಳು). ಈ ಚಿಕ್ಕ ಗಿಡಗಳು ಮರದ ಮೇಲ್ಭಾಗದಲ್ಲಿ ಆಳವಾದ ಬೇರುಗಳನ್ನು ಬಿಟ್ಟು ತಾಯಿ ಮರದ ಮೇಲೆ ಬೆಳೆಯುತ್ತವೆ. ಈ ಪ್ರದೇಶದಲ್ಲಿ ಕಂಡು ಬರುವ ಇತರ ಮರಗಳೆಂದರೆ ಗೋರಾನ್, ಗೇವ, ಬಯಿನ್ ಮತ್ತು ದುಂಡಾಲ್. ಉಪ್ಪು ನೀರಿನ ತೀರ ಪ್ರದೇಶಗಳಲ್ಲಿ ನೀಪಾ ಜಾತಿಯ ಮರಗಳು ಬೆಳೆಯುತ್ತವೆ.

ಇದು ಅತ್ಯಧಿಕ ಸಸ್ಯವರ್ಗಗಳ ವೈವಿಧ್ಯವನ್ನು ಒಳಗೊಂಡಿದ್ದು ಸು. 334 ಸಸ್ಯ ಪ್ರಭೇದಗಳನ್ನು ಹೊಂದಿದೆ (1903). ಇಂದಿನ ದಿನಗಳಲ್ಲಿ ಪ್ರಸ್ತುತ ಇದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿನ ನೀರು ಮತ್ತು ಮಣ್ಣಿನಲ್ಲಿ ಅತ್ಯಧಿಕ ಲವಣತೆ ಇರುವುದರಿಂದ ಹೆರಿಟಿಯೆರಾ ಪೋಮ್ಸ್ ಎಂಬ ಪ್ರಮುಖ ಸಸ್ಯ ಪ್ರಭೇದ ಟಾಪ್ ಡೈಯಿಂಗ್ ರೋಗಕ್ಕೆ ತುತ್ತಾಗಿ ವಿನಾಶದ ಅಂಚಿನಲ್ಲಿದೆ. ಹಿಂದೆ ನದಿಗಳ ಸಿಹಿ ನೀರು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರದೇಶವನ್ನು ಸೇರುತ್ತಿತ್ತು. ಆದರೆ ಇಂದು ಬಂಗಾಲಕೊಲ್ಲಿಯ ಉಪ್ಪು ನೀರು ಒಳಭಾಗಕ್ಕೆ ವಿಸ್ತರಿಸಿದೆ. ನದಿಗಳಿಗೆ ಅಣೆಕಟ್ಟು ಹಾಗೂ ಒಡ್ಡುಗಳನ್ನು ನಿರ್ಮಿಸಿರುವುದರಿಂದ ಸಿಹಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೆಳ ಸಸ್ಯವರ್ಗಗಳಿಗೆ ನೀರಿಲ್ಲದೆ ಒಣಗುತ್ತಿವೆ. ಇದು ಪರಿಸರ ಸಮತೋಲನದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತಿದೆ.

ಇದು ಕಾಡುಪ್ರಾಣಿ ಪಕ್ಷಿಗಳ ತಾಣವಾಗಿದೆ. 425 ವನ್ಯಮೃಗ ಪ್ರಭೇದಗಳು ಕಂಡುಬರುತ್ತವೆ. ಇದರಲ್ಲಿ 49 ಸ್ತನಿ, 315 ಪಕ್ಷಿ, 53 ಹಾವು ಮತ್ತು 8 ಜಲಚರ ಪ್ರಾಣಿ ಪ್ರಭೇದಗಳಿವೆ. ಜಿಂಕೆ, ಕಾಡುಹಂದಿ, ಮಂಗ, ಕೊಕ್ಕರೆ, ಮೀಂಚುಳ್ಳಿ, ಬಿಳಿಯ ಹದ್ದು ಹಾಗೂ ಬಂಗಾಲ ಹುಲಿ ಇವೆ. ಚಂಡಮಾರುತದ ಪ್ರಭಾವದಿಂದ ಈ ಪ್ರದೇಶದಲ್ಲಿ ಆಗಾಗ ಸಾವು ನೋವುಗಳು ಸಂಭವಿಸುತ್ತದೆ.

ಸುಜನೆಕಾಲಿ ಪ್ರವಾಸಿ ಕೇಂದ್ರ. ಮೊಸಳೆಗಳ ಕೊಳ, ಶಾರ್ಕ್‍ಗಳ ಕೊಳ, ಪಾರಿವಾಳ ಮರಿ ಮಾಡುವ ಸ್ಥಳ ಮುಂತಾದವು ಇಲ್ಲಿನ ವಿಹಾರ ಕೇಂದ್ರಗಳು. ಇಲ್ಲಿ “ಹುಲಿಗಳು ನಿಮ್ಮನ್ನು ಯಾವಾಗಲು ಹುಡುಕುತ್ತಿರುತ್ತವೆ” ಎಂಬ ನಾಮಫಲಕವಿದೆ. ಇಲ್ಲಿನ ಸ್ಥಳೀಯರ ಬಾನ್‍ಬಿಬಿ ಎಂಬ ದೇವತೆ ಈ ಕಾಡನ್ನು, ಜೇನು ಸಂಗ್ರಾಹಕರನ್ನು ಹಾಗೂ ಮೀನುಗಾರರನ್ನು ಅಪಾಯಕಾರಿ ಜೀವನದಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ.

ಬಾಂಗ್ಲಾದೇಶ ಪ್ರಪಂಚದಲ್ಲೇ ವಿಸ್ತಾರ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿದ್ದು, ಸುಂದರಬನದ 2/3 ಭಾಗ ಬಾಂಗ್ಲಾ ದೇಶದ ನೈಋತ್ಯ ಮುಖಜಭೂಮಿಯಲ್ಲಿ ಕಂಡು ಬರುತ್ತದೆ. ಬಾಂಗ್ಲಾ ದೇಶದ ಅರಣ್ಯ ಪ್ರದೇಶದ ವಿಸ್ತೀರ್ಣ 6017 ಚ.ಕಿಮೀ ಗಳಿದ್ದು, ಇದರಲ್ಲಿ 4,143 ಚ.ಕಿಮೀ ಪ್ರದೇಶ ಕಾಯ್ದಿರಿಸಿದ ಅರಣ್ಯವಾಗಿದೆ. ಈ ಪ್ರದೇಶದಲ್ಲಿ ಮೊಸಳೆ, ಶಾರ್ಕ್, ವಿಷಭರಿತ ಹಾವುಗಳು ಹಾಗೂ ಹುಲಿಗಳು ಕಂಡುಬರುತ್ತವೆ.

ಬಾಂಗ್ಲಾದೇಶದ ರಾಷ್ಟ್ರೀಯ ಚಿಹ್ನೆ ಬಂಗಾಲದ ಹುಲಿ. ಆದರೆ ಹಂತಕರಿಂದ ಹುಲಿ ಸಂತತಿ ದಿನೇ ದಿನೇ ಕ್ಷೀಣಿಸುತ್ತಿದೆ. ಒಂದು ಅಂದಾಜಿನಂತೆ ಪ್ರತಿ ವರ್ಷ ಸು. 34 ಜನರು ಹುಲಿಗಳಿಗೆ ತುತ್ತಾಗುತ್ತಾರೆನ್ನಲಾಗಿದೆ. ಪ್ರಪಂಚದಲ್ಲೇ ಅವನತಿಯ ಹಂತದಲ್ಲಿ ಉಪ್ಪು ನೀರಿನ ಮೊಸಳೆಗಳಿಗೆ ಇದು ವಾಸಸ್ಥಾನವೂ ಹೌದು. ಸುಂದರಬನದ ಮರಗಳನ್ನು ಪೀಠೋಪಕರಣ, ದೋಣಿಗಳ ತಯಾರಿಕೆ ಮತ್ತು ಹಡಗುಗಳ ನಿರ್ಮಾಣಕ್ಕೆ ಹೆಚ್ಚು ಉಪಯೋಗಿಸಲಾಗುತ್ತದೆ. (ಡಿ.ಐ.)