ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೆಫರ್ಸನ್, ಥಾಮಸ್
ಜೆಫರ್ಸನ್, ಥಾಮಸ್ 1743-1826. ಅಮೆರಿಕ ಸಂಯುಕ್ತ ಸಂಸ್ಥಾನದ ಮೂರನೆಯ ಅಧ್ಯಕ್ಷ. ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ರಚಕ. ಸುಮಾರು ಅರ್ಧ ಶತಮಾನ ಅಮೆರಿಕದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ವ್ಯಕ್ತಿ. ವರ್ಜಿನೀಯದ ಶ್ಯಾಡ್ವೆಲ್ನಲ್ಲಿ ಪ್ಲ್ಯಾಂಟರನೊಬ್ಬನ ಮಗನಾಗಿ ಜನಿಸಿದ. ವಿದ್ಯಾಭ್ಯಾಸದ ಅನಂತರ ವಕೀಲ ವೃತ್ತಿಗಿಳಿದ. ಒಳ್ಳೆಯ ಭಾಷಣಕಾರನಾದ ಈತ ತನ್ನ 26ನೆಯ ವಯಸ್ಸಿನಲ್ಲೇ ವರ್ಜಿನೀಯದ ಬರ್ಜೆಸ್ (ವಿಧಾನ) ಸಭೆಗೆ ಆಯ್ಕೆಹೊಂದಿದ (1769). 1775ರಲ್ಲಿ ಕಾಂಟಿನೆಂಟಲ್ ಕಾಂಗ್ರೆಸ್ಸಿಗೆ ಚುನಾಯಿತನಾದ. ಸ್ವಾತಂತ್ರ್ಯ ಘೋಷಣೆಯನ್ನು ಈತ ಬರೆದದ್ದು ಇದೇ ಅವಧಿಯಲ್ಲಿ. 1779ರಲ್ಲಿ ವರ್ಜಿನೀಯದ ಗವರ್ನರನಾದ. ಅನಂತರ ಬೆಂಜಮಿನ್ ಫ್ರ್ಯಾಂಕ್ಲಿನನ ಸ್ಥಳದಲ್ಲಿ ಫ್ರಾನ್ಸಿನಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಈತನನ್ನು ವಾಷಿಂಗ್ಟನ್ ಅಧ್ಯಕ್ಷನಾದಾಗ ಸ್ಟೇಟ್ ಸೆಕ್ರೆಟರಿಯಾಗಿ ನಿಯಮಿಸಿದ.
1796ರಲ್ಲಿ ಫೆಡರಲಿಸ್ಟ್ ಪಕ್ಷದ ಆಡಮ್ಸ್ ಅಧ್ಯಕ್ಷನಾಗಿ ಚುನಾಯಿತನಾದಾಗ ಜೆಫರ್ಸನ್ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಉಪಾಧ್ಯಕ್ಷನಾಗಿ ಚುನಾಯಿತನಾದ. 1800ರ ಚುನಾವಣೆಯಲ್ಲಿ ಜೆಫರ್ಸನ್ ಅಧ್ಯಕ್ಷನಾಗಿ ಚುನಾಯಿತನಾದ. 1801ರಲ್ಲಿ ಅಧಿಕಾರವನ್ನು ಸ್ವೀಕರಿಸಿದ ಜೆಫರ್ಸನ್ನನಿಗೆ ಆಗಲೇ 25 ವರ್ಷಗಳ ರಾಜಕೀಯ ಅನುಭವವಿತ್ತು. ಸ್ವತಂತ್ರ ಗಣರಾಜ್ಯದ ಪ್ರಗತಿಗೆ ದುಂದುವೆಚ್ಚದ ಹಿರಿದಾದ ಸೈನ್ಯ ಅನಾವಶ್ಯಕವೆಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಜೆಫರ್ಸನ್ ಅಧಿಕಾರ ವಹಿಸಿಕೊಂಡ ಬಳಿಕ ಭೂಸೇನೆ ಮತ್ತು ನೌಕಾಬಲಗಳನ್ನು ಮಿತಿಗೊಳಿಸಿದ. ಇತರ ಅನೇಕ ವಿಧದ ಖರ್ಚುಗಳನ್ನು ಕಡಿಮೆ ಮಾಡಿ ಮಿತವ್ಯಯ ಧೋರಣೆಯನ್ನವಲಂಬಿಸಿ ದೇಶದ ಸಾಲದ ಹೊರೆಯನ್ನು ಇಳಿಸಿದ. ಈತನ ಅಧಿಕಾರಾವಧಿಯಲ್ಲಿ ನಡೆದ ದೊಡ್ಡ ಸಾಧನೆಯೆಂದರೆ ಲೂಯಿಸಿಯಾನವನ್ನು ಕೊಂಡು ದೇಶದ ವಿಸ್ತೀರ್ಣವನ್ನು ಹೆಚ್ಚಿಸಿದ್ದು. ಸು. 11,71,931 ಚ.ಮೈ. ವಿಸ್ತಾರದ ಈ ಪ್ರದೇಶವನ್ನು ನೆಪೋಲಿಯನ್ನನಿಂದ ಒಂದೊವರೆ ಕೋಟಿ ಡಾಲರಿಗೆ ಖರೀದಿಸಲಾಯಿತು. ಇದಕ್ಕಾಗಿ ಪ್ರಜೆಗಳಿಂದ ಸಾಲವೆತ್ತಲಾಯಿತು. ಈ ಖರೀದಿಯಿಂದ ಸಂಯುಕ್ತ ಸಂಸ್ಥಾನ ಪಶ್ಚಿಮಾಭಿಮುಖವಾಗಿ ರಾಕೀ ಪರ್ವತಗಳವರೆಗೊ ವಿಸ್ತರಿಸಿತು. 1804ರಲ್ಲಿ ಈತ ಎರಡನೆಯ ಬಾರಿ ಅಧ್ಯಕ್ಷನಾಗಿ ಚುನಾಯಿತನಾದ.
ಅಮೆರಿಕದ ಹಡಗುಗಳು ಕಡಲ್ಗಳ್ಳರ ದಾಳಿಗೆ ತುತ್ತಾಗದೆ ಮೆಡಿಟರೇನಿಯನ್ ಸಮುದ್ರದಲ್ಲಿ ಯಾನಮಾಡಲು ಮೊರಾಕೊ, ಅಲ್ಜಿಯರ್ಸ್, ಟ್ರಿಪೋಲಿ ಮತ್ತು ಟ್ಯುನಿಸ್ಗಳ ಅರಸರಿಗೆ ವಾರ್ಷಿಕವಾಗಿ ನಿಗದಿಗೊಳಿಸಿದ ಶುಲ್ಕವನ್ನು ತೆರಲಾಗುತ್ತಿತ್ತು. ಆದರೆ ಕ್ರಮೇಣ ಅವರು ಈ ಶುಲ್ಕದಿಂದ ತೃಪ್ತರಾಗದೆ ಮಿತಿಮೀರಿದ ಹಣವನ್ನು ಕೇಳಿ, ಅದಕ್ಕಾಗಿ ಅಮೆರಿಕದ ನಾವಿಕರನ್ನು, ನೌಕಾ ಅಧಿಕಾರಿಗಳನ್ನು ಬಂಧಿಸಿ ಬಲವಂತವಾಗಿ ಹಣ ಪಡೆಯಲು ಯತ್ನಿಸತೊಡಗಿದ್ದರು. ಇದರಿಂದ ಕೋಪಗೊಂಡ ಜೆಫರ್ಸನ್ ಆ ಸುಲ್ತಾನರ ವಿರುದ್ಧ ಸೈನ್ಯಾಚರಣೆ ಕೈಗೊಂಡು ಅವರನ್ನು ಸೋಲಿಸಿದ. ಅವರು ಮೊದಲಿನ ನಿಶ್ಚಿತ ಶುಲ್ಕ ಪಡೆದು ಅಮೆರಿಕದ ಹಡಗುಗಳ ರಕ್ಷಣೆಯ ಹೊರೆಯನ್ನು ಹೊರಬೇಕೆಂದು ತೀರ್ಮಾನಿಸಲಾಯಿತು. ಇದು ಈತನ ಇನ್ನೊಂದು ಮಹತ್ ಸಾಧನೆ. ಆರಂಭದಿಂದಲೊ ಜೆಫರ್ಸನ್ ವಿದ್ಯಾಭಿಮಾನಿ. ರಾಷ್ಟ್ರದ ಪ್ರಜೆಗಳೆಲ್ಲರೂ ವಿದ್ಯಾವಂತರಾಗಿರಬೇಕು. ವಿದ್ಯೆಯಿಲ್ಲದ ಜನರಿಗೆ ಮತದಾನದ ಹಕ್ಕನ್ನು ನೀಡುವುದು ಅಪಾಯಕರ. ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಾಡಳಿತ, ಪೌರನೀತಿಗಳ ಅರಿವಿಲ್ಲದ ಮತದಾರರು ಹಕ್ಕನ್ನು ಚಲಾಯಿಸಲು ಅನರ್ಹ-ಎಂಬುದು ಇವನ ಭಾವನೆ. ಈ ದಿಕ್ಕಿನಲ್ಲಿ ವರ್ಜಿನೀಯ ವಿಶ್ವವಿದ್ಯಾಲಯ (1825) ಈತನ ಕೊಡುಗೆಯಾಗಿ ಇಂದಿಗೂ ಉಳಿದಿದೆ. ರಾಷ್ಟ್ರದ ಪ್ರಗತಿಗೆ ರೈತನೇ ಬೆನ್ನೆಲುಬು ಎಂಬುದನ್ನು ಈತ ಮನಗಂಡಿದ್ದ. ನಗರಗಳು ಬೆಳೆದಷ್ಟೂ ಗುಂಪುಗಾರಿಕೆ ಹೆಚ್ಚಾಗುತ್ತದೆ. ತರ್ಕಬದ್ಧವಾದ ನಡವಳಿಕೆ ಇಲ್ಲವಾಗುತ್ತದೆ ಎಂಬುದು ಈತನ ಅಭಿಪ್ರಾಯವಾಗಿತ್ತು.
ಜೆಫರ್ಸನ್ ಅದ್ವಿತೀಯ ಪಂಡಿತ, ವಿಜ್ಞಾನಿ, ಸಂಗೀತವಿದ್ವಾಂಸ. ಲ್ಯಾಟಿನ್, ಗ್ರೀಕ್, ಫ್ರೆಂಚ್, ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಚೆನ್ನಾಗಿ ತಿಳಿದಿದ್ದ. ಈತನಿಗೆ ಸ್ವಲ್ಪಮಟ್ಟಿಗೆ ಶಿಲ್ಪಪ್ರತಿಭೆಯೂ ಇತ್ತು. ಮಾಂಟ್ ಸೆಲ್ಲೋದ ತನ್ನ ಮನೆಯ ನಕಾಸೆ ಈತನೇ ತಯಾರಿಸಿದ್ದು. ಅಮೆರಿಕದ ರಾಜಧಾನಿಯನ್ನು ವಾಷಿಂಗ್ಟನ್ನಿಗೆ ವರ್ಗಾಯಿಸಿದವನೂ ಈತನೇ. ಗುಲಾಮಗಿರಿಯಲ್ಲಿ ಈತನಿಗೆ ದ್ವೇಷವಿತ್ತು. ಗುಲಾಮರ ವ್ಯಾಪಾರವನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡ. ಆದರೂ ಈತ 200 ಜನ ನೀಗ್ರೋಗಳ ಒಡೆಯನಾಗಿದ್ದ. ವಾಷಿಂಗ್ಟನ್ ಮತ್ತು ಇಂಗ್ಲೆಂಡಿನ ಉತ್ತರ ವೇಲ್ಸಿನಲ್ಲಿ ಈತನ ಸ್ಮಾರಕಮಂದಿರಗಳಿವೆ.
(ವಿ.ಎಸ್.ಎಸ್.; ಬಿ.ಜಿ.ಆರ್.)
ಸಾಹಿತ್ಯ : ಪ್ರಾರಂಭದಿಂದಲೇ ಸ್ಪಷ್ಟವಾದ, ಲಲಿತವಾದ ಶೈಲಿಯನ್ನು ರೂಢಿಸಿಕೊಂಡನಾಗಿ ಜೆಫರ್ಸನ್ ಬಹಳ ಪ್ರಭಾವೀ ಲೇಖಕನೆನಿಸಿಕೊಂಡ. ಅಮೆರಿಕ ಸಂಯುಕ್ತಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯ, ಹೆಮ್ಮೆಯ ಕಾರ್ಯ ಇವನ ಪಾಲಿಗೆ ಬಂತು. 1774ರಲ್ಲಿ ಇವನು ಪ್ರಕಟಿಸಿದ ಎ ಸಮ್ಮರಿ ವ್ಯೂ ಆಫ್ ದಿ ರೈಟ್ಸ್ ಆಫ್ ಬ್ರಿಟಿಷ್ ಅಮೆರಿಕ ಎನ್ನುವ ಕೃತಿಯಲ್ಲಿಯೇ ಇವನ ಸ್ಪಷ್ಟವೂ ಲಲಿತವೂ ತರ್ಕಬದ್ಧವೂ ಆದ ಶೈಲಿ ಕಾಣುತ್ತದೆ. ನೋಟ್ಸ್ ಆನ್ ದಿ ಸ್ಟೇಟ್ ಆಫ್ ವರ್ಜಿನ್ಯ (1784-85) ಇವನ ಆಸಕ್ತಿಯನ್ನು ಸೆಳೆದ ಕ್ಷೇತ್ರಗಳ ವೈವಿಧ್ಯ ನಿರೂಪಣೆ, ಸ್ವತಂತ್ರವಾಗಿ ಯೋಚಿಸುವ ಶಕ್ತಿ ಇವುಗಳಿಗೆ ಸಾಕ್ಷಿಯಾಯಿತು; ವಿಶೇಷ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಲ್ಲದೆ ನಿಸರ್ಗವನ್ನು ತೆರೆದ ಕಣ್ಣಿನಿಂದ, ತೀರ ಸಣ್ಣಪುಟ್ಟ ವಿವರಗಳನ್ನೂ ಬಿಡದೆ ಲಕ್ಷಿಸುವ ವೈಜ್ಞಾನಿಕ ಮನೋಧರ್ಮವೂ ಈ ಕೃತಿಯಲ್ಲಿ ಕಾಣುತ್ತದೆ. ಏಳು ಅಧ್ಯಾಯಗಳಲ್ಲಿ ವರ್ಜಿನ್ಯ ಸಂಸ್ಥಾನದ ಭೂಗೋಳವನ್ನು ವಿವರಿಸಿ ಅನಂತರದ ಹದಿನಾರು ಅಧ್ಯಾಯಗಳಲ್ಲಿ ಆ ಸಂಸ್ಥಾನದ ಸಾಮಾಜಿಕ ಮತ್ತು ರಾಜಕೀಯ ಚರಿತ್ರೆಯನ್ನು ಇಲ್ಲಿ ನಿರೂಪಿಸಲಾಗಿದೆ. ನಿಸರ್ಗದ ಸಂಪತ್ತಿನಲ್ಲಾಗಲಿ ಮನುಷ್ಯರ ಸಾಮಥ್ರ್ಯದ ಸಂಪತ್ತಿನಲ್ಲಾಗಲಿ ವರ್ಜಿನ್ಯ ಅಮೆರಿಕದ ಇತರ ಭಾಗಗಳಿಗಿಂತ ಹಿಂದುಳಿದಿಲ್ಲ; ಅಮೆರಿಕವೂ ಯೂರೋಪಿಗಿಂತ ಹಿಂದುಳಿದಿಲ್ಲ; ಆಗಲೆ ಪ್ರತಿಭಾವಂತರನ್ನು ಮೆರೆದಿದೆ. ರೆಡ್ ಇಂಡಿಯನರು ಸಹ ದೇಹಸಾಮಥ್ರ್ಯ-ಬುದ್ಧಿಶಕ್ತಿಗಳಲ್ಲಿ ಯೂರೋಪಿನವರಿಗಿಂತ ಹಿಂದುಳಿದವರಲ್ಲ-ಎಂದು ಜೆಫರ್ಸನ್ ಪ್ರತಿಪಾದಿಸಿದ.
1820ರಲ್ಲಿ ಜೆಫರ್ಸನ್ ತನ್ನ ಆತ್ಮವೃತ್ತವನ್ನು ಬರೆದ. ಇದು ಬಹುಮಟ್ಟಿಗೆ ಸಾರ್ವಜನಿಕ ಜೀವನದಲ್ಲಿ ಅವನ ಪಾತ್ರವನ್ನು ವಿವರಿಸುತ್ತದೆ.
ಜೆಫರ್ಸನ್ನ ಪತ್ರಗಳದ್ದು ಒಂದು ಅಸಾಧಾರಣ ಸಂಗ್ರಹ. ಸುಮಾರು ಇಪ್ಪತೈದುಸಾವಿರ ಪತ್ರಗಳು ಇಪ್ಪತ್ತು ಸಂಪುಟಗಳಲ್ಲಿ ಅಡಕವಾಗಿ ಪ್ರಕಟವಾಗಿವೆ. ಜಾನ್ ಆಡಮ್ಸ್ಗೆ ಈತ ಬರೆದ ಪತ್ರಗಳಂತೂ ವಿಶಿಷ್ಟ ಮೌಲ್ಯವುಳ್ಳವು. ಜೆಫರ್ಸನ್ನನ ಪುಸ್ತಕಪ್ರೇಮ, ಜೀವನಾಸಕ್ತಿ ಅಸಾಧಾರಣವಾದವು. ಯೂರೋಪಿನಲ್ಲಿದ್ದಾಗ ವಿಶೇಷವಾಗಿ ಹಣ ಖರ್ಚುಮಾಡಿ ಈತ ಪುಸ್ತಕಗಳನ್ನು ಸಂಗ್ರಹಿಸಿದ. 1814ರಲ್ಲಿ ದಿವಾಳಿಯಾಗುವುದನ್ನು ತಪ್ಪಿಸಿಕೊಳ್ಳಲು ತನ್ನ ಪುಸ್ತಕಸಂಗ್ರಹವನ್ನು ಸರ್ಕಾರಕ್ಕೆ ಮಾರಬೇಕಾಯಿತು. ಇದೇ ಅಮೆರಿಕ ಕಾಂಗ್ರೆಸ್ ಪುಸ್ತಕ ಭಂಡಾರದ ಮೂಲವಾಯಿತು. ಜೆಫರ್ಸನ್ನನ ಆಸಕ್ತಿ ಸೆಳೆಯದ ಜ್ಞಾನಕ್ಷೇತ್ರವೇ ಇಲ್ಲ ಎನ್ನುವಂಥ ವೈವಿಧ್ಯ ಇವನ ಪುಸ್ತಕ ಸಂಗ್ರಹ ಕಾರ್ಯದಲ್ಲಿ, ಬರೆಹಗಳಲ್ಲಿ ಎದ್ದುಕಾಣುತ್ತದೆ. ತತ್ತ್ವಜ್ಞಾನಿ ಹಾಗೂ ರಾಜಕಾರಣಿಗಳ ಅಗ್ರಪಂಕ್ತಿಗೆ ಸೇರುವ ಲೇಖಕ, ಈತ. ಆದರೂ ಇವನ ಒಲವು ಇದ್ದುದು ಕಾರ್ಯಸಾಧ್ಯತೆಯತ್ತ. ಬರಿಯ ಚರ್ಚೆ, ಪಾಂಡಿತ್ಯ ಇವನಿಗೆ ಸೇರವು. ಬಾಳುತ್ತಿರುವ ಪೀಳಿಗೆಗೇ ಭೂಮಿ ಸೇರಿರುವುದು-ಎಂದು ಘೋಷಿಸಿದ ಈತ-ನಮ್ಮ ದೇಶದಲ್ಲಿ ಸಾಹಿತ್ಯ ಇನ್ನೂ ಸ್ವತಂತ್ರವೃತ್ತಿಯಾಗಿಲ್ಲ.... ಎಳೆಯ ಸಮಾಜಗಳ ಮೊದಲ ಗುರಿ ರೊಟ್ಟಿ, ಬಟ್ಟೆ ಎಂದೂ ಹೇಳಿದ. ಇಂಗ್ಲಿಷ್ ಅಲ್ಲದೆ ಲ್ಯಾಟಿನ್, ಗ್ರೀಕ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಇಷ್ಟು ಭಾವಗಳನ್ನು ಅಧ್ಯಯನ ಮಾಡಿದ ಈತನಿಗೆ ಪ್ರಾಚೀನ ಗ್ರೀಕರ ಮತ್ತು ಆಧುನಿಕ ಗ್ರೀಕರ ಉಚ್ಚಾರಣೆಗಳನ್ನು ವಿಮರ್ಶಿಸುವಷ್ಟು ಭಾಷಾಜ್ಞಾನವಿತ್ತು. ಯೇಸುವಿನ ಮಾತುಗಳನ್ನು ಉಪದೇಶಗಳನ್ನು ಖಚಿತವಾಗಿ ನಿರ್ಧರಿಸುವ ಉದ್ದೇಶದಿಂದ ಬೈಬಲಿನ ಹೊಸ ಒಡಂಬಡಿಕೆಯನ್ನು ಈತ ಅಭ್ಯಾಸ ಮಾಡಿದ. ನೋಟ್ಸ್ ಆನ್ ದಿ ಸ್ಟೇಟ್ ಆಫ್ ವರ್ಜಿನ್ಯ ಎಂಬ ತನ್ನ ಗ್ರಂಥದಲ್ಲಿ ಆ ಸಂಸ್ಥಾನದ ಸಸ್ಯಸಂಪತ್ತು ಮತ್ತು ಜೀವನಸಂಪತ್ತನ್ನು ಕುರಿತು ಈತ ಕೊಟ್ಟ ವಿವರಣೆ ವಿಜ್ಞಾನಿಗಳಿಗೆ ತುಂಬ ಸಹಾಯಮಾಡಿತು. ತತ್ತ್ವಜ್ಞಾನ, ವಿಜ್ಞಾನ, ಚಿಂತನೆ ಕಾರ್ಯಸಾಧ್ಯತೆಯ ಪ್ರಜ್ಞೆ, ಆದರ್ಶ, ಸ್ಪಷ್ಟ ಕಾರ್ಯರೀತಿಯ ಕಲ್ಪನೆ-ಇವು ಇವನ ಬರೆಹಗಳಲ್ಲಿ ಕಾಣುತ್ತವೆ. ಪ್ರಜಾಪ್ರಭುತ್ವವನ್ನು ಸ್ವೀಕರಿಸಿದ ನಾಡಿನಲ್ಲಿ ಭಾಷೆಯ ಮೂಲಕ ಜನರ ಮನ ಒಲಿಸುವ ಕಲೆ ಮುಖ್ಯವಾದ್ದು ಎಂದು ಹೇಳಿದ ಈತ ಪ್ರಾಚೀನ ಗ್ರೀಸ್ ಮತ್ತು ರೋಮಿನ ಪ್ರಸಿದ್ಧ ವಾಗ್ಮಿಗಳಿಗೆ ಭಾಷಣಗಳನ್ನು ಅಭ್ಯಾಸಮಾಡಿದ. ಇವನ ಬರೆಹಗಳಲ್ಲಿ ವಿದ್ವತ್ತು ಹೊರೆಯಾಗದೆ ಬರೆಹದ ಬೆನ್ನೆಲುಬಾಗಿದೆ. ಸ್ಪುಟತೆ ಲಾಲಿತ್ಯಗಳ ಜೊತೆಗೆ ವಿಚಾರರೀತಿಗೆ ಒತ್ತಾಸೆಯಾಗುವ ವಿಶಿಷ್ಟ ಗದ್ಯಲಯ ಇವನಲ್ಲಿ ಕಾಣುತ್ತದೆ. ಈ ಗದ್ಯಲಯ ಅಮೆರಿಕದ ರಾಜ್ಯಶಾಸ್ತ್ರದ ಮೇಲೆ ವಿಶೇಷ ಪ್ರಭಾವವನ್ನು ಬೀರಿತು.
ಹೊಸದಾಗಿ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದ ಅಮೆರಿಕದ ಜನ ಮಾನಸಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನೂ ಪಡೆದುಕೊಳ್ಳಲು ಅಗತ್ಯವಾದ ವೈಚಾರಿಕ ವಾತಾವರಣವನ್ನು ಸೃಷ್ಟಿಸಿದ ಪ್ರಮುಖರಲ್ಲಿ ಜೆಫರ್ಸನ್ನನೂ ಒಬ್ಬ. ತನ್ನ ದೇಶದ ನೈಸರ್ಗಿಕ ಸಂಪತ್ತು ಜನತೆಯ ದೈಹಿಕ ಮತ್ತು ಬೌದ್ಧಿಕ ಸಂಪತ್ತು-ಇವನು ಮತ್ತೆ ಮತ್ತೆ ತನ್ನ ದೇಶದವರಿಗೆ ಆತ ನೆನಪು ಮಾಡಿಕೊಟ್ಟ. ಹೊಸ ಸಮಾಜವೊಂದರ ಸೃಷ್ಟಿಯ ರೋಮಾಂಚಕಾರಕ ಅವಕಾಶ ಉತ್ಸಾಹ, ಚಾರಿತ್ರಿಕ-ಭೌಗೋಳಿಕ-ವೈಜ್ಞಾನಿಕ ವಿಷಯಗಳ ಗ್ರಹಣ ಸ್ಪಷ್ಟವಾದ ಮತ್ತು ಕಾರ್ಯಶೀಲವಾದ ಚಿಂತನೆ-ಇವು ಇವನ ಬರೆಹಗಳ ಮುಪ್ಪುರಿಗೊಂಡಿವೆ. ಇವನ ಭಾಷೆ ಶುದ್ಧ ಇಂಗ್ಲಿಷಿನ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಬ್ರಿಟಿಷ್ ವಿಮರ್ಶಕರು ಟೀಕಿಸಿದರು. ಯಾವ ಭಾಷೆಯಾದರೂ ಬೆಳೆಯುವುದು ಪ್ರಯೋಗಶೀಲತೆಯಿಂದಲೇ, ವಿವಿಧ ಪ್ರದೇಶಗಳನ್ನು ಒಳಗೊಂಡ ವಿಸ್ತಾರವಾದ ಅಮೆರಿಕ ಸಂಯುಕ್ತಸಂಸ್ಥಾನ ಬ್ರಿಟನ್ನಿನ ಶುದ್ಧ ಭಾಷೆಯ ವಾದಿಗಳ ಕಬ್ಬಿಣದ ಪೀಪಾಯಿಯಲ್ಲಿ ಸೆರೆಯಾಗುವುದಿಲ್ಲ ಎಂದು ಜೆಫರ್ಸನ್ ಉತ್ತರಿಸಿದ. ಶುದ್ಧತೆಯ ವಾದ ಭಾಷೆಯ ಪ್ರಗತಿಗೆ ಮಾನ ಎಂದು ಅವನ ಮತ.
ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ವೈಜ್ಞಾನಿಕ, ತಾತ್ತ್ವಿಕ ಮತ್ತು ರಾಜನ ಕೃತಿಗಳ ಶೈಲಿಯ ಮೇಲೆ ಜೆಫರ್ಸನ್ನನ ಪ್ರಭಾವ ಅಪಾರ. (ಎಲ್.ಎಸ್.ಎಸ್.)