ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಡಂಬನೆ

ವಿಕಿಸೋರ್ಸ್ದಿಂದ

ವಿಡಂಬನೆ - ವಕ್ರತೆ, ಅವಗುಣ, ವೈಪರೀತ್ಯ ಮುಂತಾದುವನ್ನು ಎತ್ತಿಹಿಡಿದು ಅಪಹಾಸ್ಯಕ್ಕೆ ಈಡುಮಾಡುವ ಸಾಹಿತ್ಯಕೃತಿಯೇ ವಿಡಂಬನೆ (ಸೆಟೈರ್). ಸಾಹಿತ್ಯಕೃತಿ ಎಂದ ಮೇಲೆ ಸಾಹಿತ್ಯಕ್ಕೆ ಅನುರೂಪವಾದ ಲಕ್ಷಣಗಳೂ ಸ್ವರೂಪವೂ ಅದಕ್ಕಿರಬೇಕು ಎಂದು ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲ ದೇಶಗಳ ಎಲ್ಲ ಕಾಲಮಾನಗಳಲ್ಲೂ ಅಷ್ಟಿಷ್ಟು ವಿಡಂಬನೆ ಇದ್ದೇ ಇದೆ. ಆದರೂ ಪ್ರಾಚೀನ ರೋಮನರು ಅದನ್ನು ಆಸಕ್ತಿಯಿಂದ ರೂಢಿಸಿಕೊಂಡು ಎತ್ತರಕ್ಕೆ ಏರಿಸಿದಂತೆ ಮತ್ತಾರೂ ಮಾಡಿದಂತೆ ತೋರುವುದಿಲ್ಲ. ಭರತಖಂಡದ ಸಾಹಿತ್ಯಗಳಲ್ಲಿ ಅವಹೇಳನೆ ಅಲ್ಲಲ್ಲಿ ತಲೆಯೆತ್ತಿದರೂ ರಸವತ್ತಾಗಿ ಕಂಡುಬಂದರೂ ಅದೇ ಪ್ರಧಾನವಾಗಿರುವ ಖಂಡಕಾವ್ಯಗಳು ವಿರಳ. “ಕಪಿವಿಡಂಬನೆ”ಯೇ ಅನ್ಯೋಕ್ತಿ ಕಾವ್ಯಗಳು ಮೊದಲಾದ ಸಂಸ್ಕøತದಲ್ಲೂ ಬ್ರಹ್ಮಶಿವ ನಯಸೇನ ಸರ್ವಜ್ಞ ಮುಂತಾದವರ ಹೇಳಿಕೆಗಳು ಕನ್ನಡದಲ್ಲೂ ಇವೆ, ನಿಜ. ಆದರೂ ಒಟ್ಟಿನಲ್ಲಿ ಮಹಾಕಾವ್ಯ ನಾಟಕಗಳ ಕಡೆಗೆ ಭಾರತೀಯ ಸಾಹಿತಿಗಳ ದೃಷ್ಟಿ ತಿರುಗಿದಂತೆ ವಿಡಂಬನಕಾವ್ಯದ ಕಡೆಗೆ ತಿರುಗಲಿಲ್ಲ.

ಚಿತ್ತರಂಜನೆಯೇ ವಿಡಂಬನೆಯ ಮುಖ್ಯ ಉದ್ದೇಶ; ನಾನಾ ವಿಧದ ಹಾಸ್ಯವೇ ಅದರ ಉಪಕರಣ. ಜೊತೆಗೆ, ವ್ಯಕ್ತಿಯ ಸುಧಾರಣೆಯೊ ಸಮಾಜದ ಸುಧಾರಣೆಯೊ ಅದರ ಇನ್ನೊಂದು ಉದ್ದೇಶವಾಗಿರಬಹುದು. ಅಲ್ಲದೆ, ತನ್ನ ಅಚ್ಚುಕಟ್ಟಾದ ವಿರಚನೆಯಿಂದ, ಅಂದ ಚಂದದಿಂದ, ಅದೂ ಒಂದು ಸಾಹಿತ್ಯ ಸೃಷ್ಟಿಯಾಗಿ ಶೋಭಿಸುವುದು ಸಾಧ್ಯ. ದೂಷಣೆ, ಮೂದಲಿಕೆ, ವ್ಯಂಗ್ಯೋಕ್ತಿ, ಕಟಕಿ, ಚುಚ್ಚುಮಾತು, ಕಹಿನಿಂದೆ-ಇವು ವಿಡಂಬನೆಯ ಪ್ರಮುಖ ಮಾದರಿಗಳು. ವಿಡಂಬನೆ ಮೃದುವಾಗಿರ ಬಹುದು, ಬಿರುಸಾಗಿರಬಹುದು: ರೋಮನರ ಹೊರೆಸ್ ಇಂಗ್ಲಿಷರ ಎಡಿಸನ್, ಗೋಲ್ಡ್‍ಸ್ಮಿತ್ ಮೊದಲನೆಯ ಗುಂಪಿಗೆ ಸೇರಿದವರು, ರೋಮನರ ಜುವೆನಲ್ ಇಂಗ್ಲಿಷರ ಸ್ವಿಫ್ಟ್ ಎರಡನೆಯ ಗುಂಪಿಗೆ ಸೇರಿದವರು. ಅತಿರೇಕ ಅತಿಶಯೋಕ್ತಿಗಳಿಂದ ತುಂಬಿಕೊಂಡಿರುವ ಒಂದು ಬಗೆಯ ವಿಲಕ್ಷಣ ವಿಡಂಬನೆಗೆ ಫ್ರೆಂಚರ ಚೆಲೇ ಹೆಸರಾಂತಿದ್ದಾನೆ. ಸರ್ವಾಂಟೀಸನ ಕಾದಂಬರಿ ತನ್ನದೇ ಆದ ಅಪೂರ್ವ ಗುಣಗಳಿಂದ ಮೆರೆಯುತ್ತ ವಿಶೇಷ ಖ್ಯಾತಿಯನ್ನು ಗಳಿಸಿದೆ, ಅಪೂರ್ವ ವಿಡಂಬನೆಯೆಂಬ ಪ್ರಶಸ್ತಿಗೆ ಯೋಗ್ಯವಾಗಿದೆ.

ಚಿಕ್ಕದಾಗಲಿ ದೊಡ್ಡದಾಗಲಿ ಕೃತಿಕರ್ತನ ಆಕಾಂಕ್ಷೆಯಿಂದ ಅವನ ಸ್ವಭಾವ ಮತ್ತು ಕಾವ್ಯಶಕ್ತಿಗಳ ಪರಿಣಾಮವಾಗಿ ನಿರ್ಮಿತವಾಗಿರುವ ವಿರಚನೆಗಳು ಹಲವು ಸಾಹಿತ್ಯ ಪ್ರಕಾರಗಳಾಗಿ ನಿಂತಿವೆ. ಅವುಗಳಲ್ಲಿ ಕೆಲವನ್ನು ಪಟ್ಟಿಮಾಡಿ ವಿವರಿಸಬಹುದು.

ನೋವನ್ನುಂಟುಮಾಡಿ ಕೋಪತಾಪಗಳನ್ನು ಎಬ್ಬಿಸುವ ಪ್ರಭೇದ ಒಂದಿದೆ: ಅದಕ್ಕೆ ಲೇವಡಿ ಬೈಗಳ ಬರೆಹ ಎಂದು ಹೆಸರು. ಮತ್ಸರವೂ ಅಸೂಯೆಯೂ ಅದರ ತಾಯಿ. ಅದು ಯಾವಾಗಲೂ ನಿಂದ್ಯವಾದದ್ದು, ಏಕೆಂದರೆ ಅದು ವಿಡಂಬನೆಯ ಉಪಯೋಗವಲ್ಲ, ದುರುಪಯೋಗ.

ವಿಕಟಾನುಕರಣವೆಂಬುದು ಗೇಲಿಗಿಂತ ಉನ್ನತಮಟ್ಟದ ವಿಡಂಬನೆ, ಎಷ್ಟೋ ವೇಳೆ ಅದು ಸತ್ಕಾರಕ್ಕೆ ಅರ್ಹವಾಗುತ್ತದೆ. ವ್ಯಕ್ತಿಯ ಅಥವಾ ಸಂಸ್ಥೆಯ ಕಣ್ಣಿಗೆ ಬಡಿಯುವ ಗುಣಲಕ್ಷಣವನ್ನು ಗುರುತಿಸಿ, ಅದನ್ನು ಬಹುವಾಗಿ ಉತ್ಪ್ರೇಕ್ಷಿಸಿಬಿಟ್ಟು, ಪರಿಹಾಸಮಾಡುವುದೇ ಅದರ ವಾಡಿಕೆ. ಉತ್ಪ್ರೇಕ್ಷೆ ಎರಡು ಬಗೆಯಲ್ಲಿ ನಡೆಯುತ್ತದೆ: ಗಂಭೀರ ವಿಷಯವನ್ನು ಅತಿ ಹಗುರವಾದ ಕುಚೋದ್ಯಕ್ಕೆ ಇಳಿಸಿಬಿಡಬಹುದು. ಅತಿಸಾಮಾನ್ಯ ಅಥವಾ ಕೀಳು ವಿಷಯವನ್ನು ಪ್ರೌಢ ಶೈಲಿಯಲ್ಲಿ ಪ್ರತಿಪಾದಿಸುತ್ತ ಅದಕ್ಕೆ ಪೊಳ್ಳು ಮಹಾತ್ಮೆಯನ್ನು ಅನ್ವಯಿಸಬಹುದು. ಅಂತೂ ಕಲಾನೈಪುಣ್ಯ ಆ ಕೆಲಸಕ್ಕೆ ಆವಶ್ಯಕ.

ಇದಕ್ಕೆ ಹತ್ತಿರವಾದ ಇನ್ನೊಂದು ಕಾವ್ಯರೀತಿ ಇದೆ: ನಕಲಿ. ನಕಲಿಯಲ್ಲಿ ಉತ್ಪ್ರೇಕ್ಷೆ ಅತಿಶಯವಾಗಿ ಬೆಳೆದು, ವಿಕಟವಾಗಿಬಿಡುತ್ತದೆ. ನಕಲಿಗೂ ವಿಡಂಬನಕ್ಕೂ ಇರುವ ಸಂಬಂಧ ಪ್ರಹಸನಕ್ಕೂ ವಿನೋದನಾಟಕಕ್ಕೂ ಇರುವ ಸಂಬಂಧದಂತೆ, ಅದೇ ತೆರದ ಸಂಬಂಧ ಅದೇ ತೆರದ ಅಂತರ. ನಗುವಿನ ಮಳೆ ಸುರಿಯುವುದೇ ಅದರ ಫಲ “ಕಂಬನಿಯಿಲ್ಲದ ವಿಡಂಬನೆ” ಯೆಂಬ ವರ್ಣನೆ ಅದಕ್ಕೆ ನ್ಯಾಯವಾದದ್ದು.

ಉತ್ಕøಷ್ಟ ವಿಡಂಬನೆ ರಚಿತವಾಗಬೇಕಾದರೆ ಕವಿಯ ಆಂತರ್ಯವು ದ್ವೇಷ ಈಷ್ರ್ಯೆ ರೋಷ ಕ್ರೌರ್ಯ ಇತ್ಯಾದಿ ರಾಗಾವೇಶಗಳಿಂದ ಬಿಡುಗಡೆ ಹೊಂದಿರಬೇಕು. ಬರಿ ಬುದ್ಧಿಶಕ್ತಿ, ಸಂವಿಧಾನ ಕೌಶಲ, ಶಬ್ದಗಳ ಮೇಲಣ ಆಧಿಪತ್ಯವಿದ್ದರೆ ಸಾಲದು. ಅವುಗಳಿದ್ದು ಹೃದಯದಲ್ಲಿ ಮರುಕವಿಲ್ಲದಿದ್ದರೆ ಅನರ್ಥ ಹೆಚ್ಚು. ಕಟು ಅಪಹಾಸ್ಯಕ್ಕೆ ಪಕ್ಕಾದ ಸ್ತ್ರೀ ಪುರುಷರಿಗೆ ತೇಜೋವಧೆ ಒಂದೇ ಅಲ್ಲ, ಆತ್ಮಹತ್ಯವೂ ಆಗಿದೆ. ವ್ಯಕ್ತಿಯ ಲೋಪದೋಷಗಳಿಗೆ ಕನ್ನಡಿ ಹಿಡಿಯುವಾಗ ವಿಡಂಬನಕಾರ ಅವು ಎಷ್ಟೇ ಆದರೂ ಅಲ್ಪವಿಚಾರ, ವ್ಯಕ್ತಿಯನ್ನು ಪೂರ್ಣ ದಂಡನೆಗೆ ಅವು ಒಯ್ಯಲಾರವು, ಎಂಬ ನಿಜಾಂಶವನ್ನು ಮರೆಯಬಾರದು. ನ್ಯೂನತೆಯಿಲ್ಲದ ಮಾನವನಾರು. ಅಲ್ಲದೆ, ನ್ಯೂನತೆಯ ಮೂಲಕ ವಿನೋದವನ್ನು ಒದಗಿಸುವ ಆ ವ್ಯಕ್ತಿ ಒಂದು ಬಗೆಯಲ್ಲಿ ಲೋಕೋಪಕಾರಿ ಅಲ್ಲವೆ. ಕಳಂಕಗಳನ್ನು ಕಳೆದುಕೊಂಡು ಬಾಳುವುದಕ್ಕೆ ಅವನು ಸ್ವಲ್ಪ ಪ್ರಯಾಸಪಟ್ಟರೆ ತೀರಿತು. ಇಂಥ ಪ್ರೀತಿಯೂ ಸಹಾನುಭೂತಿಯೂ ಯಾರಲ್ಲಿ ಮನೆಮಾಡಿಲ್ಲವೋ ಆತ ವಿಡಂಬನೆಗೆ ಕೈಹಾಕದಿದ್ದರೆ ಕ್ಷೇಮ.

ವಿಡಂಬನೆ ಪದ್ಯದಲ್ಲಿರಬಹುದು, ಗದ್ಯದಲ್ಲಿರಬಹುದು. ಮಿತವಾಕ್ಕಿನಿಂದ ಸಂಕ್ಷೇಪ ಹೆಚ್ಚು ಪರಿಣಾಮಕಾರಿ. ಹತ್ತು ಉಚ್ಚಾರಾಂಶಗಳ ದ್ವಿಪದಿ ವಿಡಂಬನೆಗೆ ತಕ್ಕುದೆಂದು ಕೀರ್ತಿ ಪಡೆದಿದೆ. ಮುಖ್ಯಾಂಶಗಳನ್ನು ಆರಿಸಿ ಇಟ್ಟುಕೊಳ್ಳುವುದರ ಮೂಲಕ ತೀಕ್ಷ್ಣತೆಯನ್ನೂ ಧ್ವನಿಯ ಮೂಲಕ ಸೂಕ್ಷ್ಮತೆಯನ್ನೂ ಸಾಧಿಸುವ ಇಚ್ಛೆ ಲೇಖಕನಿಗೆ ಇದ್ದರೆ ಪದ್ಯ ಹೆಚ್ಚು ಸೂಕ್ತ ಅವನಿಗೆ. ಆದರೆ ಅನೇಕ ವಿವರಗಳೂ ವಿಲಂಬ ಚಿತ್ರಣವೂ ಎಷ್ಟೋ ಸಾರಿ ಅಗತ್ಯವೆಂದು ತೋರುತ್ತವೆ, ಆಗ ಗದ್ಯದಲ್ಲೇ ಬರೆಯಬೇಕು ವಿಡಂಬನಕಾರ.

ವಿಡಂಬನೆ ಅನ್ಯ-ವಿಷಯಿಕ ಕಾವ್ಯ: ಆದ್ದರಿಂದ ನಿಷ್ಪಕ್ಷಪಾತ ದೃಷ್ಟಿ ಅದಕ್ಕೆ ಅತ್ಯಾವಶ್ಯಕ. ಮೃದುತ್ವ ಕನಿಕರಗಳಿಗೂ ಅದರಲ್ಲಿ ಜಾಗವನ್ನು ಒದಗಿಸಿಕೊಡುವುದು ಕವಿಯ ಜವಾಬ್ದಾರಿ, ಕವಿಯ ಕಷ್ಟ.

ಕೊನೆಯದಾಗಿ ಎರಡು ಪ್ರಶ್ನೆಗಳನ್ನು ಚರ್ಚಿಸಬೇಕು. ಬದುಕುವ ಅಪೇಕ್ಷೆಗೆ ಉತ್ಕರ್ಷವನ್ನು ಕೂಡಿಸುವ ಲೇಖನವೇ ಸಾಹಿತ್ಯವೆಂದು ಬರೆದಿದ್ದಾರೆ: ವಿಡಂಬನೆಯಿಂದ ಆ ಬಗೆಯ ಉತ್ಸಾಹ ಅಭಿವೃದ್ಧಿಗೊಳ್ಳು ತ್ತದೆಯೇ. ಮನುಷ್ಯ ಮನುಷ್ಯನಾಗಿರುವವರೆಗೂ ಎಂದರೆ ಪರಿಪೂರ್ಣತೆಯನ್ನು ಅವನು ನಿಲುಕುವವರೆಗೂ ಪರಿಹಾಸ್ಯಕ್ಕೆ ಸಾಮಗ್ರಿ ಇದ್ದೇ ಇರುತ್ತದೆ. ಪರಿಹಾಸ್ಯ ಸಾಹಿತ್ಯವಾಗಲಾರದೆಂಬ ಭೀತಿಗೆ ಕಾರಣವಿಲ್ಲ. ಹೋಗಲಿ ವಿಡಂಬನೆ ಮಹೋನ್ನತ ಕೃತಿಗಳ ಪಂಕ್ತಿಯಲ್ಲಿ ಮಂಡಿಸಬಲ್ಲದೆ. ಈ ಪ್ರಶ್ನೆ ಅಪ್ರಕೃತವೆಂದು ಭಾಸವಾಗಬಹುದು. ನೆಲದ ಮೇಲೆ ಸಂಚರಿಸುವ ಪ್ರಾಣಿಗಳೆಲ್ಲ ಆನೆಯಾಗಿರಬೇಕೆಂದು ವಿಧಿಸುವುದು ತರವೇ? ಆಡುಗಳೂ ಉಂಟು, ಜಿಂಕೆಗಳೂ ಉಂಟು, ಹುಲಿಗಳೂ ಉಂಟು. ಭೂಮಿತಾಯಿಯ ಮಕ್ಕಳಾಗಿ ತನ್ನ ಶಕ್ತಿ ಸಾಮಥ್ರ್ಯಗಳನ್ನು ಪೂರ್ತಿಯಾಗಿ ವಿಡಂಬನೆ ಪ್ರಕಾಶಗೊಳಿಸಿದರೆ ಅದೇ ಅದರ ಲಾವಣ್ಯ, ಅದರಿಂದಲೇ ಅದರ ಕಾವ್ಯಜೀವನ ಸಾರ್ಥಕ. (ಕೆ.ಡಿ.)

  *