ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬುಳ

ವಿಕಿಸೋರ್ಸ್ದಿಂದ

ಅಂಬುಳ

ಅಂಬುಳ (ಆರೊವರ್ಮ್), ಎಂಬುದು ಕೀಟೋಗ್ನಾತಾ ಎಂಬ ವಂಶದ ಕಡಲಜೀವಿ. ಈ ವಂಶದಲ್ಲಿ 9 ಜಾತಿಗಳೂ 40 ಪ್ರಭೇದಗಳೂ ಇವೆ. ಇವುಗಳಲ್ಲಿ ಸಜಿಟ್ಟ ಎಂಬುದು ಇತರ ಪ್ರಭೇದಗಳಿಗಿಂತ ದೊಡ್ಡದು. ಸಮುದ್ರದಲ್ಲಿ ಬೇರೆ ಬೇರೆ ಆಳಗಳಲ್ಲಿ ಜೀವಿಸುವ ಈ ಹುಳು ನೀರಿನ ಮೇಲೆ ಈಜುವುದುಂಟು. ಕೆಲವು 6,000 ಮೀ. ಆಳದಲ್ಲಿಯೂ ಉಳಿದವು ಸಾಧಾರಣವಾಗಿ 200-300 ಮೀ. ಆಳದಲ್ಲಿಯೂ ಜೀವಿಸುವುವು. ಸ್ಪಡೆಲ್ಲ ಎಂಬುದು ಅತಿ ಆಳದಲ್ಲಿ ಜೀವಿಸುತ್ತದೆ. ಸ್ಟಡೆಲ್ಲಪೈಜಾಪ್ಟೆರ ಎಂಬುದು ಸೂಕ್ಷ್ಮವಾದ ಬೆರಳಿನಾಕಾರದ ರಚನೆಗಳ ಸಹಾಯದಿಂದ ಇತರ ವಸ್ತುಗಳಿಗೆ ಅಂಟಿರುವುದು. ಇತರ ಜಾತಿಯವು ತೇಲು ಜೀವಿಗಳು, ಹಲವು ಸಮುದ್ರದಲ್ಲಿ ಈಜಿ ಜೀವಿಸುತ್ತವೆ. ಇವು ಮುಖ್ಯವಾಗಿ ಮಾಂಸಹಾರಿಗಳು. ಇತರ ಜಾತಿಯ ಸಣ್ಣ ಜೀವಿಗಳೇ ಇವಕ್ಕೆ ಆಹಾರ. ಕೆಲವು ವೇಳೆ ಇತರ ಪ್ರಾಣಿಗಳಿಗೆ ಇವೇ ಆಹಾರವಾಗುವುದೂ ಉಂಟು. ಇದರ ದೇಹ ಪಾರದರ್ಶಕವಾಗಿರುವುದು. ಪ್ರೌಢಜೀವಿ 12-25 ಮಿ.ಮೀ. ಉದ್ದವಿರುವುದು. ದೇಹ ತಲೆ ಮೈ ಮತ್ತು ಬಾಲದಿಂದ ಕೂಡಿದೆ. ತಲೆಯ ತಳದಲ್ಲಿರುವ ಬಾಯಿಯ ಸುತ್ತಲೂ ತೆಳುವಾದ ಮುಳ್ಳುಗಳಂತಿರುವ ರಚನೆಗಳಿವೆ. ಮೈಭಾಗದ ಇಕ್ಕೆಡೆಯಲ್ಲಿಯೂ ಈಜುರೆಕ್ಕೆಗಳಿವೆ. ಬಾಲ ಕರಣೆಯಾಕಾರವಾಗಿದೆ. ದೇಹಾಂತರಾವಕಾಶ ವಿಶಾಲವಾಗಿದೆ. ಅದಕ್ಕೆ ಶಿಲಕೆಗಳುಳ್ಳ ಅನುಲೇಪಕ ಕಣಗಳ ಹೊದಿಕೆಯಿದೆ. ಜೀರ್ಣನಾಳದ ಮುಂದಿನ ತುದಿಯಲ್ಲಿ ಬಾಯಿಯೂ ಹಿಂದಿನ ತುದಿಯಲ್ಲಿ ಆಸನವೂ ಇವೆ. ತಲೆಯಲ್ಲಿ ಗಂಟಲಿನ ಮೇಲೆ ನರಮುಡಿ ಇರುವುದು. ಮೈ ಉದ್ದವಾದ ನರತಂತುಗಳು ಸಂಬಂಧವನ್ನು ಕಲ್ಪಿಸುತ್ತವೆ. ಎರಡು ನರಮುಡಿ ದೇಹಾಂತರಾವಕಾಶ ಅಡ್ಡಗೋಡೆಗಳಿಂದ 3 ಭಾಗಗಳಾಗಿ ವಿಭಾಗವಾಗಿದೆ: ನೀಳ ಅಚ್ಚಿನಲ್ಲಿ ಅದರ ಉದ್ದಕ್ಕೂ ಹರಿಯುವ ತೆಳುವಾದ ಪದರ ಜೀರ್ಣಾಂಗಗಳನ್ನು ದೇಹದ ಗೋಡೆಯಿಂದ ಪ್ರತ್ಯೇಕಿಸಿ, ಅದರ ಸ್ಥಳದಲ್ಲಿರಿಸುವುದು; ಜೊತೆಗೆ ದೇಹಾಂತರಾವಕಾಶದ ವಿಭಾಗಗಳನ್ನು ಎಡಬಲ ಭಾಗಗಳಾಗಿ ವಿಂಗಡಿಸುವುದು. ಈ ಜೀವಿಯಲ್ಲಿ ರಕ್ತಪರಿಚಲನಾಂಗಗಳಿಲ್ಲ; ನಿರ್ದಿಷ್ಟವಾದ ವಿಸರ್ಜನಾಂಗ ಶ್ವಾಸಾಂಗಗಳೂ ಇಲ್ಲ.

ದ್ವಿಲಿಂಗಿಗಳು; ಜನನೇಂದ್ರಿಯಗಳು ದೇಹಾಂತರಾವಕಾಶದ ಹಿಂಭಾಗದಲ್ಲಿ ಒಂದರ ಹಿಂದೆ ಇನ್ನೊಂದು ಇರುವುವು. ಅಂಡಾಶಯಗಳು ಮೈ ಭಾಗದ ದೇಹಾಂತರಾವಕಾಶದಲ್ಲಿವೆ; ಇವುಗಳ ನಾಳಗಳು ಮೈಭಾಗ ಮತ್ತು ಜಾಲ ಇವೆರಡಕ್ಕೂ ಮಧ್ಯೆ ಹೊರತೆರೆಯುತ್ತವೆ. ಬೀಜಾಶಯಗಳು ಬಾಲದ ದೇಹಾಂತರಾವಕಾಶದಲ್ಲಿವೆ. ಬೀಜಾಶಯನಾಳಗಳ ಒಳ ತುದಿಯಲ್ಲಿ ಶಿಲಕೆಗಳುಳ್ಳ ಆಲಿಕೆಗಳಿವೆ. ಇವು ಹಿಂದೆ ಬಾಲದ ಮೇಲೆ ಹೊರಕ್ಕೆ ತೆರೆಯುತ್ತವೆ. ನಿಶೇಚನ ಜೀವಿಯ ದೇಹದೊಳಗಾಗುತ್ತದೆ. ಅನಂತರ ತತ್ತಿಗಳು ಬೆಳೆದು ಮರಿಗಳಾಗಿ ಹೊರಬರುವುವು. ಡಿಂಭಾವಸ್ಥೆಯಿರುವುದಿಲ್ಲ. ಮರಿ ಗಾತ್ರದಲ್ಲಿ ಸಣ್ಣದಾದರೂ ಪ್ರೌಢ ಜೀವಿಯನ್ನು ಹೋಲುವುದು. ಬೆಳೆವಣಿಗೆ ಪ್ರಾರಂಭವಾದ ಅನಂತರ ಸಂಯೋಗಿಕಣ ಎರಡು ಪ್ರಜನನ ಜೀವಕಣಗಳಾಗಿ ಸ್ಫುಟನಾವಸ್ಥೆಯಲ್ಲಿಯೇ ಬೇರ್ಪಡುತ್ತವೆ. ಇವುಗಳಲ್ಲಿ ಒಂದು ಜೀವಕಣ ಅನೇಕ ಬಾರಿ ವಿಭಜನೆಯಾಗಿ ಅಂಡಾಶಯವಾಗಿಯೂ ಎರಡನೆಯ ಜೀವಕಣ ವೃಷಣವಾಗಿಯೂ ರೂಪುಗೊಳ್ಳುವುವು.

ಸಜಿಟ್ಟ, ಸ್ಟಡೆಲ್ಲ, ಕ್ರೊಹ್ನಿಯ-ಇವು ಉದಾಹರಣೆಗಳು. ಕೆಲವು ಸ್ವತಂತ್ರ ಏಕಕಣಜೀವಿಗಳೂ ಕೆಲವು ಬಹುಕಣಜೀವಿಗಳೂ ಉಪಜೀವಿಗಳಾಗಿ ವಾಸಿಸುತ್ತವೆ. ಈ ಜೀವಿಗಳನ್ನು ಸಮುದ್ರದ ನೀರಿನ ಚಲನೆಯ ಅಥವಾ ಪ್ರವಾಹದ ದಿಕ್ಕುಸೂಚಕಗಳಾಗಿ ಬಳಸಬಹುದು. ಅಮಿಸ್ಕೂರಿಯ ಎಂಬ ಕೀಟೊಗ್ನಾತಾ ಮಧ್ಯಕೇಂಬ್ರಿಯನ್ ಯುಗದ ಬರ್ಗಸ್‍ಷೇಲಿನಲ್ಲಿ ಪಳೆಯುಳಿಕೆಗಳನ್ನು ಬಿಟ್ಟಿರುವುದನ್ನು ಇತ್ತೀಚೆಗೆ ವಿವರಿಸಲಾಗಿದೆ.

(ಪಿ.ಎ.ಆರ್.)