ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದಲ್ಲಿ ಸಹಕಾರ ಚಳವಳಿ

ವಿಕಿಸೋರ್ಸ್ದಿಂದ

ಭಾರತದಲ್ಲಿ ಸಹಕಾರ ಚಳವಳಿ

`ಎಲ್ಲರೊಬ್ಬನಿಗೊಬ್ಬನೆಲ್ಲರಿಗೆ ಎಂಬುದಾಗಿ ಇಂಗ್ಲೆಂಡಿನಲ್ಲಿ ರಾಶ್‍ಡೇಲ್ ಮೊದಲಿಗರಿಂದ 19ನೆಯ ಶತಮಾನ ಪೂರ್ವರ್ಧದಲ್ಲಿ ಪ್ರವರ್ತಿಸಲ್ಪಟ್ಟ ಸಹಕಾರ ಚಳವಳಿಯ ಭಾರತೀಯ ಮುಖ. ಆರ್ಥಿಕವಾಗಿ ಹಿಂದುಳಿದು ಬಿಡಿ ಬಿಡಿಯಾಗಿರುವ ದುರ್ಬಲ ಜನರನ್ನು ಒಟ್ಟಾಗಿ ಸೇರಿಸಿ ಸಬಲರನ್ನಾಗಿ ಮಾಡುವ ಉದ್ದೇಶ ಸಹಕಾರದ್ದು. ವ್ಯಕ್ತಿಗೆ ಪ್ರಾಧಾನ್ಯ ಕೊಡುವ ಈ ಪದ್ಧತಿಯಲ್ಲಿ ಶುದ್ಧ ಪ್ರಜಾಂತಂತ್ರಕ್ಕೆ ಅವಕಾಶ.

ಹತ್ತೊಂಬತ್ತನೆಯ ಶತಮಾನದ ಕಡೆಯ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಕ್ಷಾಮ ಡಾಮರಗಳು ಕೃಷಿಕರನ್ನು ಉತ್ಕಟ ಸಂಕಟ ಪರಿಸ್ಥಿತಿಗೆ ಗುರಿಮಾಡಿದುವು. ಈ ಪರಿಸ್ಥಿತಿಯಲ್ಲಿ ರೈತರು ಜೀವನ ನಿರ್ವಹಣೆಗಾಗಿಯೂ ವ್ಯವಸಾಯದ ಕೆಲಸಗಳಿಗಾಗಿಯೂ ಸಾಹುಕಾರರುಗಳಿಂದ ಅಧಿಕ ಬಡ್ಡಿ ಕೊಟ್ಟು ಸಾಲ ಪಡೆಯಬೇಕಾಗಿತ್ತು. ಆದ್ದರಿಂದ ರೈತರ ಋಣಬಾಧೆ ಅಪರಿಮಿತವಾಗಿ ಬೆಳೆದು ಅವರು ಕಂಗಾಲಾದರು. ಈ ದೆಸೆಯಿಂದ ಅವರನ್ನು ಪಾರುಮಾಡಲು ಸರ್ಕಾರ ಯೋಚಿಸತೊಡಗಿತು. ಜಸ್ಟಿಸ್ ರಾನಡೆ, ವಿಲಿಯಮ್ ವೆದರ್‍ಬರ್ನ್ ಮತ್ತು ಫ್ರೆಡರಿಕ್ ನಿಕಲ್ಸನ್ ಮುಂತಾದವರು ರೈತರ ಋಣವಿಮೋಚನೆ ಹಾಗೂ ಅವರ ನೆರವಿಗೆ ಸಹಕಾರ ಸಂಘಗಳ ರಚನೆಯ ಆವಶ್ಯಕತೆಯನ್ನು ಒತ್ತಿ ಹೇಳಿದ್ದರು. ಅಗಿನ ಮದ್ರಾಸ್ ಸರ್ಕಾರ ಫ್ರೆಡರಿಕ್ ನಿಕಲ್ಸನ್‍ರನ್ನು ಜರ್ಮನಿಗೆ ಕಳುಹಿಸಿ ಅಲ್ಲಿ ಸಹಕಾರ ಸಂಘಗಳು ರೈತರ ಸಾಲದ ಆವಶ್ಯಕತೆಗಳನ್ನು ಹೇಗೆ ಪೂರೈಸುತ್ತಿವೆಯೆಂಬುವುದನ್ನು ಅಭ್ಯಾಸಮಾಡಿ ಬರಲು ನೇಮಿಸಿತು. ನಿಕಲ್ಸನ್ ಜರ್ಮನಿಯಿಂದ ಮರಳಿ ಬಂದಮೇಲೆ (1897) ಮದ್ರಾಸ್ ಸರ್ಕಾರಕ್ಕೆ ವರದಿ ಒಪ್ಪಿಸಿ ಜರ್ಮನಿಯಲ್ಲಿದ್ದಂತೆ ರೈಫೇಸನ್ ಮಾದರಿಯ ಸಹಕಾರ ಉದ್ದರಿ ಸಂಘಗಳನ್ನು ಗ್ರಾಮಂತರ ಪ್ರದೇಶಗಳಲ್ಲಿ ಸ್ಥಾಪಿಸಬೇಕೆಂದು ಸಲಹೆ ಮಾಡಿದರು. ಅದರಂತೆ ಕೆಲವು ಸಂಘಗಳು ಏರ್ಪಟ್ಟವು. ಅದೇ ವೇಳೆ ಸಂಯುಕ್ತ ಪ್ರಾಂತ್ಯದಲ್ಲೂ ಪಂಜಾಬಿನ ಕೆಲವು ಹಳ್ಳಿಗಳಲ್ಲೂ ಸಹಕಾರ ಉದ್ದರಿ ಸಂಘಗಳನ್ನು ಸ್ಥಾಪಿಸಿ ರೈತರಿಗೆ ಸುಲಭ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಪ್ರಯತ್ನ ನಡೆಸಲಾಯಿತು. 1901ರಲ್ಲಿ ಹೊರಬಿದ್ದ ಕ್ಷಾಮ ತನಿಖಾ ಸಮಿತಿಯ ವರದಿಯೂ ಸಹಕಾರ ಉದ್ದರಿ ಸಂಘಗಳನ್ನು ಸ್ಥಾಪಿಸುವ ಅವಶ್ಯಕತೆಯನ್ನು ಒತ್ತಿ ಹೇಳಿತು. ಇವೆಲ್ಲ ಪ್ರಯತ್ನಗಳ ಫಲವಾಗಿ ಕೇಂದ್ರ ಸರ್ಕಾರ ಸಹಕಾರಿ ಉದ್ದರಿ ಸಂಘಗಳ ಅಧಿನಿಯಮವನ್ನು ಜಾರಿಗೆ ತಂದಿತು (1904). ಇದರ ವ್ಯಾಪ್ತಿ ಮಿತವಾಗಿತ್ತು. ಉದ್ದರಿ ಸಹಕಾರ ಸಂಘಗಳಿಗೆ ಮಾನ್ಯತೆ ಕೊಡುವ ಅವಕಾಶ ಮಾತ್ರ ಇದರಲ್ಲಿತ್ತು. ಈ ಸಂಘಗಳನ್ನು ಗ್ರಾಮೀಣ ಸಂಘಗಳು ಮತ್ತು ನಗರ ಸಂಘಗಳು ಎಂಬುದಾಗಿ ವಿಭೇದೀಕರಿಸಲಾಯಿತು. ಗ್ರಾಮೀಣ ಸಹಕಾರ ಸಂಘಗಳು ರೈಫೇಸನ್ ಮಾದರಿಯವೂ ನಗರ ಸಂಘಗಳು ಷೊಲ್ಸ್-ಡೆಲಿಟ್ಷ್ ಮಾದರಿಯವೂ ಆಗಿದ್ದವು. ರೈಫೇಸನ್ ಸಂಘಗಳ ಮುಖ್ಯ ಲಕ್ಷಣಗಳೆಂದರೆ ಗ್ರಾಮೀಣ ಸಹಕಾರ ಸಂಘದ ವ್ಯಾಪ್ತಿ ಒಂದು ಗ್ರಾಮಕ್ಕೆ ಸೀಮಿತವಾಗಿರುವುದು. ಸಂಘದ ಸದಸ್ಯರ ಜವಾಬ್ದಾರಿ ಅಪರಿಮಿತ. ಅದರ ಎಲ್ಲ ಆಗುಹೋಗುಗಳಿಗೂ ಅವರು ಜವಾಬ್ದಾರರು. ಸದಸ್ಯರ ಸಾಮೂಹಿಕ ಜವಾಬ್ದಾರಿಯ ಮೇಲೆ ಸಂಘ ಸಹಕಾರ ಮತ್ತಿತರ ಸಂಸ್ಥೆಗಳಿಂದ ಸಾಲವೆತ್ತಿ ಸುಲಭ ಬಡ್ಡಿ ದರದಲ್ಲಿ ರೈತರಿಗೆ ಹಣ ಹಂಚಬೇಕು ಮತ್ತು ಅವರಿಂದ ಸಕಾಲದಲ್ಲಿ ಬಾಕಿ ವಸೂಲು ಮಾಡಬೇಕು. ಸಂಘದ ಅಧಿಕಾರ ವರ್ಗದವರು ವೇತನವಿಲ್ಲದೆ ಗೌರವಾಧಿಕಾರಿಗಳಾಗಿ ಕೆಲಸ ಮಾಡಬೇಕು. ಸಂಘಕ್ಕೆ ಬಂದ ಲಾಭವನ್ನು ಸದಸ್ಯರು ಹಂಚಿಕೊಳ್ಳದೆ ಅದನ್ನು ಗ್ರಾಮದ ಯಾವುದಾದರೂ ಸಾಮೂಹಿಕ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬೇಕು.

ನಗರ ಪ್ರದೇಶಗಳಲ್ಲಿ ಆರಂಭವಾದ ಷೊಲ್ಸ್-ಡೆಲಿಟ್ಷ್ ಮಾದರಿಯ ಸಹಕಾರ ಸಂಘಗಳ ಲಕ್ಷಣಗಳು ಇವು: ಇವು ಕೂಡ ಉದ್ದರಿ ನೀಡುವ ಸಂಘಗಳು. ಇವುಗಳಲ್ಲಿ ಸದಸ್ಯರ ಹೊಣೆಗಾರಿಕೆ ಪರಿಮಿತ. ಸದಸ್ಯರ ಸಂಖ್ಯೆ ಮತ್ತು ಕಾರ್ಯವ್ಯಾಪ್ತಿ ಅಧಿಕ. ಪದಾಧಿಕಾರಿಗಳು ವೇತನ ಪಡೆಯುವವರಾಗಿರಬಹುದಾಗಿತ್ತು. ಲಾಭವನ್ನು ಸದಸ್ಯರು ಹಂಚಿಕೊಳ್ಳಲು ಅಡ್ಡಿ ಇರದು.

1904ರ ಕಾನೂನಿನಲ್ಲಿ ಕೇಂದ್ರೀಯ ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಅವಕಾಶವಿರಲಿಲ್ಲ. ಅಲ್ಲದೆ ಸಾಲ ಕೊಡುವ ಉದ್ದೇಶಕ್ಕೆ ಹೊರತಾದ ಬೇರೆ ರೀತಿಯ ಸಹಕಾರ ಸಂಘಗಳನ್ನು ಸ್ಥಾಪಿಸಲು ಸಾಧ್ಯವಿರಲಿಲ್ಲ. ಈ ನ್ಯೂನತೆ ಪರಿಹರಿಸಲು ಸಹಕಾರ ಕಾನೂನನ್ನು ತಿದ್ದುಪಡಿ ಮಾಡಲಾಯಿತು (1912). ಅದರ ದೆಸೆಯಿಂದ ಸಹಕಾರ ಸಂಘಗಳ ಸಂಯುಕ್ತ ಸಂಸ್ಥೆಗಳನ್ನು ಜಿಲ್ಲಾ ಮತ್ತು ಪ್ರಾಂತೀಯ ಮಟ್ಟಗಳಲ್ಲಿ ಅನುಕ್ರಮವಾಗಿ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಂತೀಯ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಈ ಸಂಸ್ಥೆಗಳ ಸ್ಥಾಪನೆ ಗ್ರಾಮೀಣ ಸಹಕಾರಿ ಸಂಘಗಳ ಹಣಕಾಸಿನ ಬಲಸಂವರ್ಧನೆಗೆ ಸಹಾಯಕವಾಯಿತು ಮತ್ತು ಅವುಗಳ ಕಾರ್ಯಚಟುವಟಿಕೆಗಳ ವೀಕ್ಷಣೆ ಹಾಗೂ ಮಾರ್ಗದರ್ಶನಕ್ಕೆ ಅನುಕೂಲವಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಹಕಾರ ಉದ್ದರಿ ಸಂಘಗಳ ನಡುವಣ ಭೇಧವನ್ನು ತೊಡೆದುಹಾಕಲಾಯಿತ್ತು. ಆದರೆ ರೈತರೇ ಹೆಚ್ಚು ಸದ್ಯಸರಾಗಿರುವ ಗ್ರಾಮೀಣ ಉದ್ದರಿ ಸಹಕಾರ ಸಂಘಗಳಲ್ಲಿ ಸದಸ್ಯರ ಹೊಣೆಗಾರಿಕೆ ಅಪರಿಮಿತವಾಗಿಯೇ ಇಡುವ ವಿಧಿಯನ್ನು ಇಟ್ಟುಕೊಳ್ಳಲಾಯಿತು. ಅಷ್ಟೇ ಅಲ್ಲದೆ 1912ರ ಕಾನೂನಿನ ಪ್ರಕಾರ ಉದ್ದರಿ ಸಹಕಾರ ಸಂಘಗಳಲ್ಲದೆ ಗ್ರಾಹಕರ ಸಹಕಾರ ಸಂಘಗಳನ್ನೂ ಉತ್ಪಾದನ ಸಹಕಾರ ಸಂಘಗಳನ್ನು ಇತರ ಉದ್ದೇಶಗಳ ಸಂಘಗಳನ್ನೂ ಸ್ಥಾಪಿಸಲು ಅನುಕೂಲವಾಯಿತು. ಇದರಿಂದ ಸಹಕಾರ ಚಳವಳಿಯ ಬೆಳೆವಣಿಗೆಗೆ ಬಲುಮಟ್ಟಿಗೆ ಉತ್ತೇಜನ ದೊರೆಯಿತು. 1914ರಲ್ಲಿ ನೇಮಕಗೊಂಡ ಎಡ್ವರ್ಡ್ ಮ್ಯಾಕ್ಲಗನ್ ಸಮಿತಿ ಸಹಕಾರ ಚಳವಳಯ ಬೆಳೆವಣಿಗೆ ಬಗ್ಗೆ ಮೌಲಿಕ ಶಿಫಾರಸುಗಳನ್ನು ಮಾಡಿತು. ಸಹಕಾರಿ ಬೇಸಾಯ ಸಾಲಕ್ಕೆ ಆದ್ಯತೆ ಕೊಡಬೇಕಾದ ಅವಶ್ಯಕತೆಯನ್ನು ಈ ಸಮಿತಿ ಒತ್ತಿಹೇಳಿತು.

1919ರಲ್ಲಿ ಮಾಂಟಿಗೂ-ಚೆಮ್ಸ್‍ಫರ್ಡ್ ಸುಧಾರಣೆಗಳ ಫಲವಾಗಿ ಸಹಕಾರ ಪ್ರಾಂತ್ಯ ಸರ್ಕಾರಗಳ ಆಡಳಿತ ವ್ಯಾಪ್ತಿಗೆ ಬಂತು. ಇವು ಈ ಬಗ್ಗೆ ಹೆಚ್ಚು ಆಸ್ಥೆವಹಿಸಿದ್ದರಿಂದ ಸಹಕಾರ ಚಳವಳಿ ಗತಿ ತೀವ್ರವಾಯಿತು. ಪ್ರಾಂತ್ಯ ಸರ್ಕಾರಗಳು ಹಾಗೂ ಆಶ್ರಿತ ಸಂಸ್ಥಾನಗಳ ಕೆಲವು ಸರ್ಕಾರಗಳು ತಮ್ಮವೇ ಆದ ವಿಶಿಷ್ಟ ಕಾನೂನುಗಳನ್ನು ರಚಿಸಿಕೊಂಡು ಸಹಕಾರ ಚಳವಳಿಯ ಬೆಳೆವಣಿಗೆಗೆ ಉತ್ತೇಜನ ನೀಡಿದುವು. 1927ರಲ್ಲಿ ಕೃಷಿಗೆ ಸಂಬಂಧಿಸಿದಂತೆ ನೇಮಕಗೊಂಡ ರಾಯಲ್ ಆಯೋಗ ಸಹಕಾರದ ಪ್ರಾಮುಖ್ಯವನ್ನು ಒತ್ತಿಹೇಳಿ, ಸಹಕಾರ ವಿಫಲವಾದರೆ ಗ್ರಾಮೀಣ ಭಾರತದ ಅಂತಿಮ ಆಸೆ ಮಣ್ಣುಗೂಡಿದಂತೆ ಎದ್ದು ತಿಳಿಸಿತು.

1929-33ರ ಆರ್ಥಿಕ ಮುಗ್ಗಟ್ಟು ಸಹಕಾರ ಚಳವಳಿಯನ್ನೂ ತಟ್ಟಿತು ಸುಸ್ತಿ ಸಾಲಗಾರರ ಸಂಖ್ಯೆ ಬೆಳೆಯಿತು. ಸಾಲದ ವಸೂಲಿ ಅಸಾಧ್ಯವಾಯಿತು ಅನೇಕ ಸಹಕಾರ ಸಂಘಗಳೂ ಕೇಂದ್ರ ಬ್ಯಾಂಕುಗಳೂ ಸಂಕಟಕ್ಕೆ ಒಳಗಾದುವು. ಕೃಷಿ ಉತ್ಪನ್ನಗಳ ಬೆಲೆಗಳ ಕುಸಿತದಿಂದ ರೈತರು ಕಂಗಾಲಾದರು. ಸಾಹುಕಾರರ ಹಿಡಿತಕ್ಕೆ ಸಿಕ್ಕಿ ಋಣಭಾದೆಯಿಂದ ತೀವ್ರ ಕಷ್ಟಕ್ಕೆ ಒಳಗಾದರು. ಈ ಪರಿಸ್ಥಿತಿ ಸುಧಾರಿಸಲು ನೇಮಕೊಂಡ ಸಮಿತಿಗಳೆಲ್ಲ ಸಹಕಾರ ಸಂಘಗಳ ಬಲಸಂವರ್ಧನೆಗೆ ಗಮನಕೊಡಬೇಕೆಂದು ಒತ್ತಾಯ ಪಡಿಸಿದುವು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದಾಗ (1935) ಕೃಷಿ ಹಣಕಾಸು ಪೂರೈಕೆಯ ಜವಾಬ್ದಾರಿಯನ್ನು ಅದಕ್ಕೆ ವಹಿಸಿಕೊಡಲಾಯಿತು. ಇದಕ್ಕಾಗಿ ಸಹಕಾರ ಸಂಘಗಳಿಗೆ ಹಣ ಸಹಾಯ ನೀಡಬೇಕೆಂದು ವಿಧಿ ಜಾರಿಗೆ ಬಂತು. ಅಂದಿನಿಂದ ಸಹಕಾರ ಚಳವಳಿಯ ಬೆಳೆವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ಪ್ರಧಾನ ಪಾತ್ರ ವಹಿಸುತ್ತ ಬಂತು. ಈಗ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಹಕಾರ ಸಂಘಗಳಿಗೆ ಹಣಕಾಸು ಒದಗಿಸಲು ಕೃಷಿ ಹಾಗೂ ಗ್ರಾಮೀಣ ಅಭಿವೃಧ್ದಿಯ ರಾಷ್ಟ್ರೀಯ ಬ್ಯಾಂಕ್ ಸ್ಥಾಪಿತವಾಗಿದೆ. 1951ರಲ್ಲಿ ರಿಸರ್ವ್‍ಬ್ಯಾಂಕಿನಿಂದ ನಿಯೋಜಿತವಾದ ಅಖಿಲಭಾರತ ಗ್ರಾಮೀಣ ಉದ್ದರಿ ಸರ್ವೇಕ್ಷಣೆ ಸಹಕಾರ ಚಳವಳಿಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. 1954ರಲ್ಲಿ ಪ್ರಕಟವಾದ ಇದರ ವರದಿ ಸಹಕಾರ ಚಳವಳಿಯ ಬೆಳವಣಿಗೆಗೆ ನಿರ್ಣಾಯಕ ತಿರುವು ಕೊಟ್ಟಿತು.

1954ರ ತನಕ ಸಹಕಾರ ಸಂಘಗಳಿಗೆ ಅಷ್ಟಷ್ಟು ಮುಂಗಡ ನೀಡುವುದರಲ್ಲಿ ತೃಪ್ತವಾಗಿದ್ದ ರಿಸರ್ವ್‍ಬ್ಯಾಂಕ್ ಗ್ರಾಮೀಣ ಸಾಲದ ಸರ್ವೇಕ್ಷಣಿಯ ವರದಿಯ ಪ್ರಕಟಣೆಯ ಅನಂತರ ಸಹಕಾರ ಚಳವಳಿಯ ಬೆಳೆವಣಿಗೆಗೆ ಅಗತ್ಯವಾದ ನೀತಿ ನಿರೂಪಕ ಸೂತ್ರಗಳನ್ನು ರೂಪಿಸಲು ಹಾಗೂ ನಿರ್ದೇಶನ ನೀಡಲು ಆರಂಭಿಸಿತು. ಸರ್ವೇಕ್ಷಣೀಯ ವರದಿ ಮಾಡಿದ ಮುಖ್ಯ ಶಿಫಾರಸುಗಳು ಎರಡು: ಸಹಕಾರ ಸಂಸ್ಥೆಗಳಲ್ಲಿ ಸರ್ಕಾರದ ಸಹಭಾಗಿತ್ವ ಇರಬೇಕು ಮತ್ತು ಸಹಕಾರ ಸಂಘಗಳ ಗಾತ್ರ ದೊಡ್ಡದಾಗಿದ್ದು ಅವು ತಜ್ಞ ನೌಕರ ಸಿಬ್ಬಂದಿಯಿಂದ ನಡೆಯುವಷ್ಟು ಮಟ್ಟಿಗೆ ಆರ್ಥಿಕ ಬಲ ಹೊಂದಿರಬೇಕು. ಈ ಶಿಫಾರಸಿನ ಅನ್ವಯ ಒಂದೆರಡು ಗ್ರಾಮಗಳಿಗೆ ಸೀಮಿತವಾಗಿದ್ದ ಸಣ್ಣ ಪುಟ್ಟ ಸಹಕಾರ ಸಂಘಗಳು ದೊಡ್ಡ ಸಂಘಗಳಾಗಿ ಸಂಘಟಿತವಾಗಿ ಅವುಗಳ ವ್ಯಾಪ್ತಿ ಹಲವಾರು ಹಳ್ಳಿಗಳಿಗೆ ವಿಸ್ತರಿಸುವಂತಾಯಿತು. ಷೇರುಧನ, ಸದಸ್ಯತ್ವ, ಹಣಕಾಸು ವಹಿವಾಟು ಎಲ್ಲ ವಿಸ್ತøತಗೊಂಡಿವೆ. ಅಪರಿಮಿತ ಹೊಣೆಯ ಸಂಘಗಳು ಪರಿಮಿತ ಹೊಣೆಯ ಸಂಘಗಳಾಗಿ ಪರಿವರ್ತನೆಗೊಂಡಿವೆ.

ಭಾರತದಲ್ಲಿ ಆರ್ಥಿಕ ಯೋಜನೆಗಳ ಮನ್ವಂತರ ಆರಂಭವಾದ ಮೇಲೆ ಅದರಲ್ಲೂ ಎರಡನೆಯ ಪಂಚವಾರ್ಷಿಕ ಯೋಜನೆಯಿಂದ ಇಲ್ಲಿಯ ತನಕ ಅನುಷ್ಠಾನಕ್ಕೆ ಬಂದಿರುವ ಎಲ್ಲ ಪಂಚವಾರ್ಷಿಕ ಯೋಜನೆಗಳಲ್ಲೂ ಸಹಕಾರ ಚಳವಳಿಯ ಬೆಳೆವಣಿಗೆಗೆ ಪ್ರಾಧಾನ್ಯ ಕೊಡಲಾಗಿದೆ ರಾಷ್ಟ್ರದ ಬೆಳೆವಣಿಗೆಯ ಮುಖ್ಯ ಸಾಧನವಾಗಿ ಸಹಕಾರ ವ್ಯವಸ್ಥೆಯನ್ನು ಪರಿಗಣಿಸಲಾಗಿದೆ. ಜವಹರಲಾಲ್ ನೆಹರೂ ಅವರು ಯೋಜನಾ ಪದ್ಧತಿಯಲ್ಲಿ ಸಹಕಾರದ ಪ್ರಾಮುಖ್ಯ ವಿವರಿಸುತ್ತ, ಸಹಕಾರ ಸಂಸ್ಥೆ ಸಣ್ಣ ಘಟಕಗಳಿಗೂ ಆಧುನಿಕ ತಂತ್ರ ವಿದ್ಯೆಗೂ ಇರುವ ಅಂತರವನ್ನು ತುಂಬುತ್ತದೆ ಎಂದು ಹೇಳಿದ್ದಾರೆ.

ಭಾರತದ ಸಹಕಾರ ಚಳವಳಿ ಆರಂಭವಾಗಿ ಎಪ್ಪತ್ತೈದು ವರ್ಷ ತುಂಬಿದ ಸಲುವಾಗಿ ಪ್ಲಾಟಿನಮ್ ಮಹೋತ್ಸವ ಆಚರಿಸಲಾಯಿತು (1980). ಈ ಹೊತ್ತಿಗೆ ಭಾರತದ ಗ್ರಾಮಗಳ ಪೈಕಿ ಶೇಕಡಾ 96ರಷ್ಟರಲ್ಲಿ ಒಂದಲ್ಲ ಒಂದು ರೀತಿಯ ಸಹಕಾರ ಸಂಘದ ಸೇವೆ ಲಭ್ಯವಾಗಿತ್ತು. ಶೇಕಡಾ 50ರಷ್ಟು ಗ್ರಾಮೀಣ ಕುಟುಂಬಗಳು ಸಹಕಾರ ಸಂಘಗಳಿಗೆ ಒಳಪಟ್ಟಿದ್ದುವು. ಸಹಾಕಾರ ಸಂಘಗಳ ರೂಪ ರಚನೆ : ಸಹಕಾರ ಸಂಘಗಳಲ್ಲಿ ಅನೇಕ ವಿಧಗಳುಂಟು: 1 ಉದ್ದರಿ ಸಹಕಾರ ಸಂಘಗಳು, 2 ಉದ್ದರೀತರ ಸಹಕಾರ ಸಂಘಗಳು. ಉದ್ದರಿ ಸಹಕಾರ ಸಂಘಗಳಲ್ಲಿ ಬೇಸಾಯದ ಉದ್ದರಿ ಸಹಕಾರ ಸಂಘಗಳು ಮತ್ತು ಬೇಸಾಯೇತರ ಉದ್ದರಿ ಸಹಕಾರ ಸಂಘಗಳು ಎಂಬ ಉಪಭೇದಗಳುಂಟು. ಕೃಷಿ ಉದ್ದರಿ ಸಹಕಾರ ಸಂಘಗಳಲ್ಲಿ ಅಲ್ಪಾವಧಿ ಉದ್ದರಿ ಸಹಕಾರ ಸಂಘಗಳು, ದೀರ್ಘಾವಧಿ ಉದ್ದರಿ ಸಹಕಾರ ಸಂಘಗಳು ಎಂಬ ವರ್ಗಗಳಿವೆ. ಉದ್ದರೀತರ ಸಹಕಾರ ಸಂಘಗಳಲ್ಲಿ ಕೃಷಿಗೆ ಸಹಾಯಕವಾದ ಸೇವಾ ಸಹಕಾರ ಸಂಘಗಳು ಮತ್ತು ಕೃಷೀತರ ಸಹಕಾರ ಸಂಘಗಳಿವೆ. ಅಲ್ಲದೆ ಗ್ರಾಹಕರ ಸಂಘಗಳು. ಗೃಹನಿರ್ಮಾಣ ಸಹಕಾರ ಸಂಘಗಳು, ನೀರಾವರಿ ಸಂಘಗಳು, ಹೈನು ಉದ್ಯಮಗಳ ಸಹಕಾರ ಸಂಘಗಳು, ಕೈಗಾರಿಕಾ ಸಹಕಾರ ಸಂಘಗಳು ಹೀಗೆ ಅನೇಕ ಬಗೆಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಕೃಷಿ ಉದ್ದರಿ ಸಹಕಾರ ಸಂಘಗಳು : ಭಾರತದ ಸಹಕಾರ ಚಳವಳಿಯಲ್ಲಿ ಬೇಸಾಯಕ್ಕೆ ಸಾಲ ಕೊಡುವ ಸಹಕಾರ ಸಂಘಗಳು ಮುಖ್ಯ ಪಾತ್ರ ವಹಿಸಿವೆ. ದೇಶದ ಒಟ್ಟು ಸಹಕಾರ ಸಂಘಗಳಲ್ಲಿ ಶೇಕಡಾ ಎಂಬತ್ತರಷ್ಟು ಕೃಷಿ ಪ್ರಾಥಮಿಕ ಉದ್ದರಿ ಸಹಕಾರ ಸಂಘಗಳಾಗಿವೆ.

ವ್ಯವಸಾಯೋದ್ಯಮಕ್ಕೆ ಸಾಲಕೊಡುವ ಸಹಕಾರ ಸಂಘಗಳ ವ್ಯವಸ್ಥೆ ಸಂಯುಕ್ತ (ಫೆಡರಲ್) ಮಾದರಿಯದು. ಗ್ರಾಮಾಂತರ ಘಟ್ಟದಲ್ಲಿ ಪ್ರಾಥಮಿಕ ಸಹಕಾರ ಸಂಘಗಳು, ಜಿಲ್ಲೆಯ ಮಟ್ಟದಲ್ಲಿ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ರಾಜ್ಯಮಟ್ಟದಲ್ಲಿ ರಾಜ್ಯ ಸಹಕಾರಿ ಬ್ಯಾಂಕುಗಳು (ಆಪಕ್À್ಸ ಬ್ಯಾಂಕ್) ಇವೆ.

ಗ್ರಾಮಮಟ್ಟದಲ್ಲಿ ಪ್ರಾಥಮಿಕ ಸಹಕಾರಿ ಸಾಲದ ಸಂಘಗಳು ಕೆಲಸ ಮಾಡುತ್ತಿವೆ. ಸದಸ್ಯರುಗಳು ಸಲ್ಲಿಸುವ ಷೇರು ಹಣ, ಠೇವಣಿಗಳು ಮತ್ತು ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಬರುವ ಮುಂಗಡ-ಇವು ಸಂಘದ ದುಡಿಯುವ ಬಂಡವಾಳ. ಸದಸ್ಯರಿಗೆ ಚಾಲ್ತಿ ಬೇಸಾಯದ ಖರ್ಚಿಗೆ ಅಲ್ಪಾವಧಿ ಸಾಲವನ್ನು ಸುಲಭ ಬಡ್ಡಿ ದರದಲ್ಲಿ ಕೊಡುವ ಉದ್ದೇಶ ಸಹಕಾರ ಸಂಘದ್ದು. ಸಾಮಾನ್ಯವಾಗಿ ಅವರ ಭೂ ಆಸ್ತಿಯ ಆಧಾರದ ಮೇಲೆ ಅಥವಾ ಬೇರೊಬ್ಬರ ಜಾಮೀನಿನ ಮೇಲೆ ಅಥವಾ ಬೆಳೆಯ ಆಧಾರದ ಮೇಲೆ ಸಾಲ ಕೊಡಲಾಗುವುದು. ಈಚೆಗೆ ಭೂ ಆಸ್ತಿಯ ಆಧಾರಕ್ಕೆ ಬದಲಾಗಿ ವೈಯುಕ್ತಿಕ ಮುಚ್ಚಳಿಕೆ ಅಥವಾ ರೈತರು ಬೆಳೆಸುವ ಫಸಲಿನ ಆಧಾರದ ಮೇಲೆ ಸಾಲಕೊಡುವ ಪದ್ಧತಿ ಬರುತ್ತಿದೆ.

ಪ್ರಾಥಮಿಕ ಕೃಷಿ ಸಹಕಾರ ಉದ್ದರಿ ಸಂಘಗಳ ಗಾತ್ರವನ್ನು ಆರ್ಥಿಕ ಘಟಕಗಳಾಗಿ ಸಂಘಟಿಸುವ ದೃಷಿಯಿಂದ ಈಚಿನ ಕೆಲವು ವರ್ಷಗಳಲ್ಲಿ ಪ್ರಯತ್ನ ಮುಂದುವರಿದಿದೆ. ಸಣ್ಣ ಸಂಘಗಳನ್ನು ಒಂದುಗೂಡಿಸಿ ದೊಡ್ಡ ಪ್ರಾಥಮಿಕ ಸಹಕಾರಿ ಉದ್ದರಿ ಸಂಘಗಳಾಗಿ ರಚಿಸಲಾಗುತ್ತಿದೆ. ಅಲ್ಪಾವಧಿ ಸಾಲದ ಹೆಚ್ಚಿನ ಹಣ ರಿಸರ್ವ್ ಬ್ಯಾಂಕ್ ಮತ್ತು ಜಿಲ್ಲಾ ಕೆಂದ್ರೀಯ ಸಹಕಾರ ಬ್ಯಾಂಕುಗಳಿಂದ ಮುಂಗಡವಾಗಿ ಬಂದ ಹಣ ರೈತರಿಗೆ ಸುಲಭ ಬಡ್ಡಿ ದರದಲ್ಲಿ ಸಾಲ ಕೊಡಲು ಸಾಧ್ಯಬಾಗಲೆಂದು ರಿಸರ್ವ್ ಬ್ಯಾಂಕ್ ಅಧಿಕ ಪ್ರಮಾಣದಲ್ಲಿ ಈ ಮುಂಗಡ ಹಣವನ್ನು ಅತ್ಯಲ್ಪ ಬಡ್ಡಿ ದರದ ಮೇಲೆ ನೀಡುತ್ತದೆ.

ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಕೇಂದ್ರೀಯ ಸಹಕಾರ ಬ್ಯಾಂಕ್ ಏರ್ಪಟ್ಟಿದೆ. ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸಂಯುಕ್ತ ಸಂಘವೇ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್. ಗ್ರಾಮಾಂತರ ಪ್ರದೇಶಗಳಲ್ಲಿರುವ ಪ್ರಾಥಮಿಕ ಸಹಕಾರ ಸಂಘಗಳಿಗೆ ಪ್ರಧಾನವಾಗಿ ವ್ಯವಸಾಯೋದ್ಯಮಕ್ಕೆ ಅಲ್ಪಾವಧಿ ಸಾಲ ಕೊಡಲು ಹಣವನ್ನು ಮುಂಗಡವಾಗಿ ಒದಗಿಸುವುದು ಇದರ ಮುಖ್ಯೋದ್ದೇಶ. ಇದ್ದಕ್ಕಾಗಿ ರಾಜ್ಯದ ಅಪೆಕ್ಸ್ ಬ್ಯಾಂಕ್ ಮತ್ತು ರಿಸರ್ವ ಬ್ಯಾಂಕ್ (ಈಚೆಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮಾಭಿವೃದ್ಧಿ ಬ್ಯಾಂಕ್ : ನಬಾರ್ಡ್) ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕಿಗೆ ಹಣವನ್ನು ಮುಂಗಡವಾಗಿ ಒದಗಿಸುತ್ತಿವೆ. ಈ ಮೂಲಗಳಿಂದ ಬರುವ ಹಣದ ಜೊತೆಗೆ ಜಿಲ್ಲಾ ಕೇಂದ್ರೀಯ ಬ್ಯಾಂಕಿಗೆ ಷೇರುಧನದ ಮೂಲಕವೂ ಠೇವಣಿಗಳ ರೂಪದಲ್ಲೂ ಹಣಸಂಚಯವಾಗುತ್ತದೆ.

ರಾಜ್ಯ ಮಟ್ಟದ ಸಹಕಾರಿ ಬ್ಯಾಂಕುಗಳಿಗೆ ಅಪೆಕ್ಸ್ ಬ್ಯಾಂಕುಗಳೆಂದು ಹೆಸರು. ಪ್ರಾಥಮಿಕ ಸಹಕಾರ ಸಂಘಗಳಿಗೆ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕುಗಳ ಮೂಲಕ ಹಣ ಒದಗಿಸುವುದು ಇವುಗಳ ಮುಖ್ಯ ಕೆಲಸ. ಸದಸ್ಯರಿಂದ ಬರುವ ಷೇರು ಮೊಬಲಗು, ಠೇವಣಿ ಮತ್ತು ರಿಸರ್ವ್ ಬ್ಯಾಂಕ್ ( ಈಗ ನಬಾರ್ಡ್) ಮತ್ತು ರಾಜ್ಯ ಸರ್ಕಾರಗಳಿಂದ ಸಾಲವಾಗಿ ಪಡೆಯುವ ಹಣ ಇವು ಅಪೆಕ್ಸ್ ಬ್ಯಾಂಕಿನ ಸಂಪನ್ಮೂಲಗಳು. ಸಹಕಾರ ಸಂಘಗಳಿಗೆ ರಿಸರ್ವ್ ಬ್ಯಾಂಕ್ ಒದಗಿಸುತ್ತಿದ್ದ, ಈಗ ನಬಾರ್ಡ್ ಒದಗಿಸುವ ಮುಂಗಡ ಹಣವನ್ನು ವಿತರಣೆ ಮಾಡುವ ಹೊಣೆ ಅಪೆಕ್ಸ್ ಬ್ಯಾಂಕಿನದು.

ಪ್ರಾಥಮಿಕ ಸಹಕಾರ ಸಂಘಗಳಿಂದ ಹಿಡಿದು ಅಪೆಕ್ಸ್ ಬ್ಯಾಂಕಿನವರೆಗೆ ಆಂತರಿಕ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತಿಲ್ಲ. ಎರವಲು ಹಣದಿಂದಲೇ ವ್ಯವಹಾರ ನಡೆಸುವ ಪರಿಪಾಠ ಮೊದಲಿನಿಂದಲೂ ಬಂದಿದೆ. ಸಹಕಾರ ಚಳವಳಿ ದೃಢವಾಗಿ ಬೆಳೆಯದೆ ಇರುವುದಕ್ಕೆ ಇದು ಮುಖ್ಯ ಕಾರಣ.

ಉದ್ದರಿ ಸಹಕಾರ ಸಂಘಗಳನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಸಾಲದ ಮರುಪಾವತಿಯಲ್ಲಿ ಆಗುತ್ತಿರುವ ವಿಳಂಬ. ಅನೇಕ ಸಂಧರ್ಭಗಳಲ್ಲಿ ವರ್ಷಗಟ್ಟಲೆ ಅಲ್ಪಾವಧಿ ಸಾಲದ ವಾಪಸಾತಿ ಆಗುವುದಿಲ್ಲ.

1970ರ ದಶಕದಲ್ಲಿ ಸಹಕಾರ ಚಳವಳಿಗೆ ಕಾಯಕಲ್ಪ ಕೊಡುವ ಉದ್ದೇಶದಿಂದ ಹಲವಾರು ಕ್ರಮ ಕೈಗೊಳ್ಳಲಾಯಿತು. ಸಣ್ಣ ಸಹಕಾರ ಸಂಘಗಳನ್ನು ಒಂದುಗೂಡಿಸಿ ದೊಡ್ಡ ಸಹಕಾರ ಸಂಘಗಳಾಗಿ ಪರಿವರ್ತಿಸುವ ಕೆಲಸ ಮುಂದುವರಿಯಿತು. ಆರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸಮಗ್ರ ಗ್ರಾಮಾಭೀವೃದ್ಧಿಗೆ ಹಾಗೂ ಪೂರ್ಣ ಉದ್ಯೋಗ ಯೋಜನೆಯ ಯಶಸ್ಸಿಗೆ ಸಹಕಾರ ಸಂಘಗಳನ್ನು ವ್ಯಾಪಕವಾಗಿ ಬೆಳೆಸಲು ಯೋಜಿಸಲಾಗಿದೆ.

ಈಗಿನ ಸಹಕಾರ ಸಂಘಗಳನ್ನು ರೈತರ ಸಹಕಾರ ಸಂಘಗಳು ಸೇವಾ ಅಥವಾ ದೊಡ್ಡ ವಿವಿಧೋದ್ದೇಶ ಸಂಘಗಳಾಗಿ ಸಂಘಟಿಸಿ ಒಂದೇ ಸಂಘದಲ್ಲಿ ರೈತರಿಗೂ ಗ್ರಾಮೀಣ ಕುಶಲ ಕಾರ್ಮಿಕರಿಗೂ ಸ್ವಯಂ ಉದ್ಯೋಗದಲ್ಲಿ ನಿರತರಾಗಿರುವ ಇತರ ವರ್ಗದವರಿಗೂ ಅಗತ್ಯವಾದ ಸಾಲ, ಸಲಕರಣೆ, ಉತ್ಪಾದನ ಸಾಧನ, ಗ್ರಾಹಕ ಸರಕು ಇತ್ಯಾದಿ ಸಕಲವೂ ದೊರೆಯುವಂತೆ ಮಾಡುವ ಯೋಜನೆ ಇದೆ. ಪ್ರತಿಯೊಂದು ಸಂಘಕ್ಕೂ ಯುಕ್ತ ದಾಸ್ತಾನು ಮಳಿಗೆ ಒದಗಿಸಿ ವಿತರಣೆ ಮತ್ತು ವ್ಯಾಪಾರದ ಚಟುವಟಿಕೆಗಳಿಗೆ ಒತ್ತಾಸೆ ಕೊಡಲಾಗುವುದು. ದೀರ್ಘಾವಧಿಗೆ ಸಾಲಕೊಡುವ ಭೂಅಭಿವೃದ್ಧಿ ಸಹಕಾರ ಬ್ಯಾಂಕುಗಳು ಕೃಷಿ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಸಾಧನೆಯ ಕಾರ್ಯಕ್ರಮಗಳಿಗೆ ಸಾಲ ಕೊಡುತ್ತವೆ. 1977ರಲ್ಲಿ 19 ರಾಜ್ಯ ಮಟ್ಟದ ಭೂ ಅಭಿವೃದ್ಧಿ ಬ್ಯಾಂಕುಗಳೂ 1707 ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳೂ ಅಸ್ತಿತ್ವದಲ್ಲಿದ್ದುವು.

ಗ್ರಾಹಕರ ಸಹಕಾರ ಸಂಘಗಳು : ಬೆಲೆಗಳ ಏರಿಕೆಯ ಕಾಲದಲ್ಲಿ ಗ್ರಾಹಕರ ಸಹಕಾರ ಸಂಘಗಳ ಪಾತ್ರ ಮುಖ್ಯ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಚಿಗುರಿಕೊಂಡ ಗ್ರಾಹಕರ ಚಳವಳಿ ಸ್ವಾತಂತ್ರ್ಯೋತ್ತರದಲ್ಲಿ ಬೃಹತ್ತಾಗಿ ಬೆಳೆದಿದೆ. ಬೆಲೆಗಳನ್ನು ಸ್ಥಿರೀಕರಿಸಿ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ನ್ಯಾಯೋಚಿತ ವಿತರಣೆಯಾಗುವಂತೆ ಮಾಡಲು ಗ್ರಾಹಕರ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಕೈಗಾರಿಕೆ ಸಹಕಾರ ಸಂಘಗಳು : ಗ್ರಾಮೀಣ ಹಾಗೂ ಸಣ್ಣ ಕೈಗಾರಿಕೆಗಳನ್ನೂ ಕೃಷಿ ಆಧಾರಿತ ಉದ್ಯಮಗಳನ್ನೂ ಕುಶಲ ಕೈಗಾರಿಕೆಗಳನ್ನೂ ಬೆಳೆಸುವ ಉದ್ದೇಶದಿಂದ ಇವು ಸ್ಥಾಪಿತವಾಗಿವೆ. ಇವುಗಳ ಉತ್ಪನ್ನಗಳ ಮಾರಾಟಕ್ಕೆ ಸಹಾಯ ಮಾಡಲು ಹಾಗೂ ಇತರ ಸೌಲಭ್ಯಗಳನ್ನೊದಗಿಸಲು ರಾಷ್ಟ್ರಮಟ್ಟದಲ್ಲಿ ಕೈಗಾರಿಕಾ ಸಹಕಾರ ಸಂಘಗಳ ಮಹಾಸಂಘ (ಫೆಡರೇಷನ್) ಕೆಲಸ ಮಾಡುತ್ತಿದೆ. ಸಂಸ್ಕರಣ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬೆಳೆವಣಿಗೆ ಅದ್ಭುತವಾಗಿದೆ. ರಾಷ್ಟ್ರದ ಒಟ್ಟು ಸಕ್ಕರೆಯ ಉತ್ಪಾದನೆಯಲ್ಲಿ ಶೇಕಡಾ 48ರಷ್ಟು ಉತ್ಪಾದನೆ ಸಹಕಾರಿ ಕಾರ್ಖಾನೆಗಳಲ್ಲಿ ಆಗುತ್ತಿದೆ.

ಸಹಕಾರಿ ಮಾರಾಟ ಸಂಘಗಳು : ಕೃಷಿ ಉತ್ಪನ್ನಗಳಿಗೆ ನ್ಯಾಯ ಮೆಲೆ ದೊರಕಿಸುವ ಉದ್ದೇಶದಿಂದ ಈ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ 3127 ಪ್ರಾಥಮಿಕ ಸಹಕಾರಿ ಮಾರಾಟ ಸಂಘಗಳಿದ್ದು ಅವು ಎಲ್ಲ ಮುಖ್ಯ ಕೃಷಿ ಉತ್ಪನ್ನಗಳನ್ನು ತಮ್ಮ ವಾಪ್ತಿಯಲ್ಲಿ ಸೇರಿಸಿಕೊಂಡಿವೆ. ಇವಲ್ಲದೆ 25 ರಾಜ್ಯ ಸಹಕಾರಿ ಮಾರಾಟ ಫೆಡರೇಷನ್‍ಗಳೂ 170 ಜಿಲ್ಲಾ ಸಹಕಾರಿ ಮಾರಾಟ ಸಂಸ್ಥೆಗಳೂ ಇವೆ. ಇವೆಲ್ಲಕ್ಕೂ ಮಾರ್ಗದರ್ಶನ ನೀಡಿ ನೆರವು ನೀಡಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಫೆಡರೇಷನ್ ಇದೆ.

ರಾಷ್ಟ್ರಮಟ್ಟದಲ್ಲಿ ಇತರ ಸಹಕಾರ ಸಂಸ್ಥೆಗಳೂ ಕಾರ್ಯರ್ವಹಿಸುತ್ತಿವೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಹಲವು ಕಡೆಗಳಲ್ಲಿ ದಾಸ್ತಾನು ಮಳಿಗೆಗಳನ್ನು ವ್ಯವಸ್ಥೆ ಮಾಡುವುದರಲ್ಲಿ ನಿರತವಾಗಿದೆ.

ಭಾರತೀಯ ರೈತರ ರಸಗೊಬ್ಬರ ಸಹಕಾರ ಸಂಸ್ಥೆ ರಸಗೊಬ್ಬರದ ತಯಾರಿಕೆ ಮತ್ತು ಅದರ ಉಪಯೋಗದ ಬಗ್ಗೆ ತಂತ್ರವಿದ್ಯಾ ಪ್ರಸಾರದಲ್ಲಿ ತೊಡಗಿದೆ. ಹಾಗೆಯೇ ಹೈನು ಉದ್ಯಮ, ಮತ್ಸ್ಯೋದ್ಯಮ, ಗೃಹನಿರ್ಮಾಣ, ನೀರಾವರಿ ಇತ್ಯಾದಿ ಕ್ಷೇತ್ರಗಳಲ್ಲಿ ಸಹಸ್ರಾರು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ಸಹಕಾರ ಚಳವಳಿ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುತ್ತಿದ್ದರೂ ಅದರ ಗುಣಮಟ್ಟ ಸುಮಾಧಾನಕರವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಬಹು ಸಂಖ್ಯಾತ ಜನ ಇನ್ನೂ ಅವಿದ್ಯಾವಂತರಾಗಿರುವುದರಿಂದ ಈ ಚಳವಳಿಯಲ್ಲಿ ಅವರು ಬುದ್ಧಿಪೂರ್ವಕವಾಗಿ ಭಾಗವಹಿಸಲು ಆಗುತ್ತಿಲ್ಲ. ಇದೊಂದು ದೊಡ್ಡ ನ್ಯೂನತೆ. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪಟ್ಟಭದ್ರರು ಸಹಕಾರ ಸಂಘಗಳನ್ನು ತಮ್ಮ ತಕ್ಕೆಯಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿ ಕಾಣುತ್ತಿದೆ. ಸಹಕಾರ ಚಳವಳಿಯ ಮೇಲೆ ಅಧಿಕಾರ ಷಾಹಿಯ ಅಂಕುಶವೂ ಬಲವಾಗಿರುವುದರಿಂದ ನಿಜವಾದ ಜನತಂತ್ರ ಹಾಗೂ ಸ್ವಸಹಾಯದ ಆಧಾರದ ಮೇಲೆ ಸಹಕಾರ ಚಳವಳಿ ಬೆಳೆಯಲು ಸಾಧ್ಯವಾಗಿಲ್ಲ. (ಬಿ.ಆರ್.ಪಿ)