ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಂಗ್ಲಾದೇಶ
ಬಾಂಗ್ಲಾದೇಶ ದಕ್ಷಿಣ ಏಷ್ಯದ ಒಂದು ಗಣರಾಜ್ಯ. ಗಂಗಾ-ಬ್ರಹ್ಮಪುತ್ರ ನದೀ ಮುಖಜ ಭೂಪ್ರದೇಶದಲ್ಲಿದೆ. ಪಶ್ಚಿಮಕ್ಕೆ ಭಾರತದ ಪಶ್ಚಿಮ ಬಂಗಾಲ ರಾಜ್ಯ, ಉತ್ತರಕ್ಕೆ ಪಶ್ಚಿಮ ಬಂಗಾಲ, ಅಸ್ಸಾಮ್ ಮತ್ತು ಮೇಘಾಲಯ, ಈಶಾನ್ಯಕ್ಕೆ ಮೇಘಾಲಯ, ಪೂರ್ವಕ್ಕೆ ತ್ರಿಪುರ ಮತ್ತು ಮಿಜûರಾಮ್, ಆಗ್ನೇಯಕ್ಕೆ ಬರ್ಮ ಮತ್ತು ದಕ್ಷಿಣಕ್ಕೆ ಬಂಗಾಳಕೊಲ್ಲಿ ಇವೆ. ಉತ್ತರದಿಂದ ದಕ್ಷಿಣಕ್ಕೆ 747 ಕಿ.ಮೀ. ಪೂರ್ವದಿಂದ ಪಶ್ಚಿಮಕ್ಕೆ 463ಕಿ.ಮೀ. ಇರುವ ಇದರ ಒಟ್ಟು ವಿಸ್ತೀರ್ಣ 1,42,776 ಚಕಿಮೀ. ಜನಸಂಖ್ಯೆ, 793,100,00(1981) ರಾಜಧಾನಿ ಢಾಕಾ (ನೋಡಿ- ಢಾಕಾ) ನಗರ ಜನಸಂಖ್ಯೆ 1,310,976 (1974). ಭೌತಲಕ್ಷಣ: ಈ ದೇಶದ ಮುಖ್ಯ ಮೇಲ್ಮೈ ಲಕ್ಷಣವೆಂದರೆ ಅದರ ನದೀ ವ್ಯವಸ್ಥೆ. ಅಲ್ಲಿಯ ಭೌತಲಕ್ಷಣವನ್ನೇ ಅಲ್ಲದೆ ಜನಜೀವನದ ಮೇಲೂ ಈ ವ್ಯವಸ್ಥೆ ವಿಶೇಷ ಪ್ರಭಾವ ಬೀರಿದೆ. 1. ಗಂಗಾ ಅಥವಾ ಪದ್ಮಾ, 2. ಮೇಘ್ನಾ ಮತ್ತು ಸುರ್ಮಾ, 3. ಬ್ರಹ್ಮಪುತ್ರ ಮತ್ತು ಅದರ ಕವಲುಗಳು, 4. ಉತ್ತರದ ನದಿಗಳು ಮತ್ತು 5. ಚಿತ್ತಗಾಂಗ್ ಬೆಟ್ಟಗಾಡಿನ ಹಾಗೂ ಬಯಲು ಸೀಮೆಯ ನದಿಗಳು ಎಂದು ಇಲ್ಲಿಯ ನದಿಗಳನ್ನು ಐದು ಭಾಗಗಳಾಗಿ ವಿಂಗಡಿಸಬಹುದು.
ಗಂಗಾನದಿ ಬಂಗಾಲದ ನದೀಮುಖಜ ಭೂಪ್ರದೇಶದ ಶಿಖೆಯಂತಿದೆ. ಇದು ಬ್ರಹ್ಮಪುತ್ರ ನದಿಯ ಕವಲೊಂದಿಗೆ ಸೇರಿ ಪದ್ಮಾ ಎನಿಸಿದೆ. ಈ ನದಿಯೂ ಇದರ ಉಪನದಿಗಳೂ ಪಶ್ಚಿಮ ಬಂಗಾಲದ ಕುಷ್ಟಿಯಾ, ಜೆಸ್ಸೂರ್, ಖುಲ್ನಾ, ಫರೀದ್‍ಪುರ, ಪಟುವಾಖಾಲಿ ಮತ್ತು ಬೇಕರ್‍ಗಂಜ್ ಜಿಲ್ಲೆಗಳಲ್ಲಿ ಹರಿಯುತ್ತವೆ. ಈ ನದಿ ರಾಜಶಾಹಿ ಜಿಲ್ಲೆಯ ಪಶ್ಚಿಮದ ತುದಿಯಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿ ಸುಮಾರು 150ಕಿಮೀ ದೂರ ಭಾರತ-ಬಾಂಗ್ಲಾ ದೇಶಗಳ ನಡುವಣ ಗಡಿಯಾಗಿ ಹರಿಯುತ್ತದೆ. ಸಿಲ್ಹೆಟ್-ಸುರ್ಮಾ ಮತ್ತು ಕುಸಿಯಾರ ನದಿಗಳು ಕೂಡಿ ಮೇಘ್ನಾ ಆಗಿದೆ. ಇವೆರಡೂ ನದಿಗಳು ಬರಾಕ್ ನದಿಯ ಕವಲುಗಳು. ಇವು ಭಾರತದ ಮಣಿಪುರ ಪ್ರದೇಶದಲ್ಲಿ ಹುಟ್ಟುತ್ತವೆ. ಇದರ ಮುಖ್ಯ ಕವಲಾದ ಸುರ್ಮಾ ನದಿಯನ್ನು ಸಿಲ್ಹೆಟ್ ಜಿಲ್ಲೆಯಲ್ಲಿ ಕಾಳಿನಿ ನದಿ ಕೂಡುತ್ತದೆ. ಇನ್ನೂ ಕೆಳಗೆ ಕುಸಿಯಾರ ಸಂಗಮಿಸುತ್ತದೆ. ಜಮುನಾ ನದಿಯ ಒಂದು ಶಾಖೆಯಾದ ಧವಳೇಶ್ವರಿ ನದಿಯನ್ನು ಕೂಡಿಕೊಂಡ ಮೇಲೆ ಮೇಘ್ನಾ ನದಿ ಗಂಗೆಯೊಂದಿಗೆ ಸೇರಿ ಮುಂದುವರಿದು, ಬುರ್ಹಿ ಗಂಗಾ ಮುಂತಾದ ಅನೇಕ ನದಿಗಳನ್ನು ಕೂಡಿ ವಿಶಾಲವಾಗಿ ಪ್ರವಹಿಸುತ್ತದೆ.
ಬ್ರಹ್ಮಪುತ್ರ ಮತ್ತು ಅದರ ಹಲವು ಕವಲುಗಳು ಉತ್ತರ ಬಂಗಾಲದ ಜಿಲ್ಲೆಗಳ ಪೂರ್ವಭಾಗಗಳಿಂದ ಹಿಡಿದು ಆಗ್ನೇಯದ ಮೇಘ್ನಾ ನದಿಯವರೆಗೆ ವಿಶಾಲವಾದ ಪ್ರದೇಶವನ್ನು ಆವರಿಸಿಕೊಂಡಿವೆ. ಬ್ರಹ್ಮಪುತ್ರದ ದಕ್ಷಿಣದ ಭಾಗಕ್ಕೆ ಜಮುನಾ ಎಂಬ ಹೆಸರಿದೆ. ಪೂರ್ವ ಭಾಗದಿಂದ ಹಲವಾರು ನದಿಗಳು ಇದನ್ನು ಸೇರಿಕೊಳ್ಳುತ್ತವೆ. ಪದೇ ಪದೇ ದಡಮೀರಿ ಹರಿದು ಪಾತ್ರವನ್ನು ಬದಲಿಸುವ ಬ್ರಹ್ಮಪುತ್ರದಿಂದ ಬಾಂಗ್ಲಾದೇಶದ ಉತ್ತರ-ದಕ್ಷಿಣ ಭಾಗಗಳ ನಡುವಣ ಸಂಪರ್ಕಕ್ಕೆ ತೊಡಕು ಉಂಟಾಗುತ್ತಿರುತ್ತದೆ. ಬಾಂಗ್ಲಾದೇಶದ ಉತ್ತರ ಜಿಲ್ಲೆಗಳಿಗೆ ನೀರುಣಿಸುವ ಪ್ರಮುಖ ನದಿ ತಿಸ್ತ. ಭಾರತದ ಡಾರ್ಜಿಲಿಂಗ್ ಬಳಿ ಹಿಮಾಲಯದಲ್ಲಿ ಉಗಮಿಸುವ ಈ ನದಿ ದಕ್ಷಿಣಾಭಿಮುಖವಾಗಿ ಪ್ರವಹಿಸುತ್ತದೆ. 1787ರಲ್ಲಿ ಇದು ಪಾತ್ರ ಬದಲಿಸಿದ್ದರಿಂದ ಉತ್ತರ ಬಂಗಾಲದ ಹಲವು ನದಿಗಳಿಗೆ ನೀರಿನ ಆಕರಗಳು ಕಡಿದುಹೋದವು. ಇದರ ಫಲವಾಗಿ ಆ ಪ್ರದೇಶದ ಜಲೋತ್ಸಾರಣ ವ್ಯವಸ್ಥೆ ಹದಗೆಟ್ಟಿತು. ಈ ನದಿಗಳ ಪಾತ್ರಗಳಲ್ಲಿ ಮರಳು ತುಂಬಿಕೊಳ್ಳುತ್ತಿದೆ. ನೈಋತ್ಯ ಭಾಗದ ಅನೇಕ ಸಣ್ಣ ಹಾಗೂ ಮಧ್ಯಮ ಗಾತ್ರದ ನದಿಗಳ ಪಾತ್ರಗಳೂ ಮುಚ್ಚಿಹೋಗುತ್ತಿವೆ. ಚಿತ್ತಗಾಂಗ್ ಗುಡ್ಡಗಾಡು ಮತ್ತು ನೆರೆಯ ಬಯಲುಸೀಮೆಯ ನದೀ ವ್ಯವಸ್ಥೆಯ ಪ್ರಮುಖ ನದಿಗಳು ನಾಲ್ಕು : ಫೇನಿ, ಕರ್ಣಫುಲಿ, ಸಾಂಗು ಮತ್ತು ಮಾತಾ ಮುಹರಿ. ಇವು ಪಶ್ಚಿಮ ಹಾಗೂ ನೈಋತ್ಯಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ.
ಬಾಂಗ್ಲಾ ದೇಶವನ್ನು 20 ಸ್ವಾಭಾವಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಮುಖ್ಯವೆನಿಸುವ 11 ಪ್ರದೇಶಗಳನ್ನು ಮುಂದೆ ವಿವರಿಸಲಾಗಿದೆ.
ಬಾರಿಂದ್ ಪ್ರದೇಶ: ಗಂಗಾ-ಬ್ರಹ್ಮಪುತ್ರ ನದಿಗಳ ನಡುವಣ ಈಗಿನ ರಾಜಶಾಹಿ ವಿಭಾಗ. ಈ ಪ್ರದೇಶದ ನೆಲ ಸ್ವಲ್ಪ ಎತ್ತರಕ್ಕಿದೆ. ಗಟ್ಟಿಯಾದ ಕೆಂಪು ಜೇಡಿ ಮಣ್ಣಿನಿಂದ ಕೂಡಿದೆ.
ಭಾರ್‍ಕೊಳ್ಳ: ಬಾರಿಂದ್ ಪ್ರದೇಶದ ಆಗ್ನೇಯಕ್ಕಿರುವ ತಗ್ಗಿನ ಭಾಗ ರಾಜಶಾಹಿ ಮತ್ತು ಪಾಬ್ನ ಜಿಲ್ಲೆಗಳ ಭಾಗಗಳನ್ನೊಳಗೊಂಡಿದೆ. ಇದರ ನಡುವೆ ಇರುವ ವಿಶಾಲವಾದ ಜವುಗು ನೆಲಕ್ಕೆ ಚಲನ್ ಬೀಲ್ ಎಂದು ಹೆಸರು. ಬ್ರಹ್ಮಪುತ್ರ ಪ್ರವಾಹದ ಬಯಲು: ಉತ್ತರದಲ್ಲಿ ರಂಗಪುರ ಜಿಲ್ಲೆಯ ಭುರುಂಗಮಾರಿಯಿಂದ ದಕ್ಷಿಣದಲ್ಲಿ ಪಾಬ್ನ ಜಿಲ್ಲೆಯ ಬೇರಾವರೆಗೂ ಪೂರ್ವಪಶ್ಚಿಮವಾಗಿ ಮೈಮೆನ್‍ಸಿಂಗ್ ಜಿಲ್ಲೆಯ ದೇವಗಂಜ್ ಜಮಾಲ್‍ಪುರ ಪ್ರದೇಶದಿಂದ ಭಾರತದ ಗಡಿಯವರೆಗೂ ಹಬ್ಬಿದೆ. ಬ್ರಹ್ಮಪುತ್ರ ನದಿ ಇಲ್ಲಿ ಆಗಾಗ್ಗೆ ದಡಮೀರಿ ಹರಿದು ಈ ಪ್ರದೇಶವನ್ನು ಆವರಿಸುತ್ತದೆ. ಮಧುಪುರ ಪ್ರದೇಶ: ಪೂರ್ವದಲ್ಲಿರುವ ಈ ಪ್ರದೇಶ ಪ್ರಸ್ಥಭೂಮಿಗಳಿಂದಲೂ ಬೆಟ್ಟಗುಡ್ಡಗಳಿಂದಲೂ ಕೂಡಿದೆ. ಇಲ್ಲಿಯ ಕಾಡಿನಲ್ಲಿ ಸಾಲು ವೃಕ್ಷಗಳಿವೆ.
ಈಶಾನ್ಯ ತಗ್ಗುನೆಲ: ಸಿಲ್ಹೆಟ್ ಜಿಲ್ಲೆಯ ದಕ್ಷಿಣ ಹಾಗೂ ನೈಋತ್ಯ ಭಾಗಗಳು ಮತ್ತು ವೈಮೆನ್‍ಸಿಂಗ್ ಜಿಲ್ಲೆಯ ಉತ್ತರಭಾಗ. ಇಲ್ಲಿ ಚಿಕ್ಕ ದೊಡ್ಡ ಅನೇಕ ಸರೋವರಗಳಿವೆ.
ಸಿಲ್ಹೆಟ್ ಬೆಟ್ಟ ಸೀಮೆ: ಇಲ್ಲಿ ಸುಮಾರು 31 ಮೀಟರಿನಿಂದ ಸುಮಾರು 332 ಮೀಟರ್‍ವರೆಗಿನ ಎತ್ತರಗಳ ಹಲವಾರು ಬೆಟ್ಟಗಳಿವೆ. ಕೆಲವು ಬೆಟ್ಟಗಳು ಭಾರತದ ಗಡಿಯೊಳಕ್ಕೆ ಚಾಚಿಕೊಂಡಿವೆ. ಮೇಘ್ನಾಕೊಳ್ಳ; ಬ್ರಹ್ಮಪುತ್ರ ನದಿಯ ಹಳೆಯ ಪಾತ್ರ ಮೇಘ್ನಾ ನದಿಯ ಪ್ರವಾಹದ ಕೊಳ್ಳವಾಗಿ ಪರಿಣಮಿಸಿದೆ. ಇಲ್ಲಿ ಫಲವತ್ತಾದ ಭೂಪ್ರದೇಶವಿದೆ.
ಮಧ್ಯದ ಮುಖಜಭೂಮಿ ಪ್ರದೇಶ: ಹಲವು ಸರೋವರಗಳಿಂದ ಕೂಡಿದ್ದು ಫರೀದ್‍ಪುರ್ ಜಿಲ್ಲೆಯಲ್ಲಿದೆ. ಅಸ್ಥಿರ ಮುಖಜಭೂಮಿ: ದಕ್ಷಿಣ ಬಾಂಗ್ಲಾದೇಶದ ಭೂಪಟ್ಟೆ ಬಂಗಾಳ ಕೊಲ್ಲಿಯ ಅಂಚಿನಲ್ಲಿದೆ. ಸುಮಾರು 3,000 ಚ.ಕಿ.ಮೀ ವಿಸ್ತೀರ್ಣದ ಈ ತಗ್ಗು ನೆಲದಲ್ಲಿ ಸುಂದರಬನಗಳೆಂಬ ದೊಡ್ಡ ಕಾಡಿದೆ. ಇದರ ಉತ್ತರಕ್ಕಿರುವ ನೆಲ ಕೃಷಿ ಭೂಮಿ. ದಕ್ಷಿಣ ಖುಲ್ನಾ ಮತ್ತು ನೈಋತ್ಯ ಬೇಕರ್‍ಗಂಜ್ ಭಾಗದಲ್ಲಿ ಹರಿಯುವ ಅನೇಕ ತೊರೆಗಳು ಬಲೆಗಳಂತೆ ಹೆಣೆದುಕೊಂಡು ಹಲವಾರು ಪುಟ್ಟ ದ್ವೀಪಗಳನ್ನು ರಚಿಸಿವೆ.
ಕ್ರಿಯಾಶೀಲ ಮುಖಜಭೂಮಿ: ಧವಳೇಶ್ವರಿ, ಪದ್ಮಾ ನದಿಗಳ ನಡುವಣ ನೆಲ ಮತ್ತು ಅಳಿವೆಯೊಳಗಿನ ದ್ವೀಪಗಳ ಪ್ರದೇಶ. ಪಶ್ಚಿಮದಲ್ಲಿ ಖುಲ್ನಾ ಜಿಲ್ಲೆಯ ಪುಸುರ್ ನದಿಯಿಂದ ಪೂರ್ವದಲ್ಲಿ ಚಿತ್ತಗಾಂಗ್ ಜಿಲ್ಲೆಯ ಸಂದ್ವೀಪ್‍ವರೆಗೆ ಹಬ್ಬಿದೆ.
ಚಿತ್ತಗಾಂಗ್ ಪ್ರದೇಶ: ಫೇನಿ ನದಿಯ ದಕ್ಷಿಣದಿಂದ ಕಾಕ್ಸ್‍ಬಜಾರ್‍ವರೆಗೆ ಹರಡಿದೆ. ಈ ಪ್ರದೇಶದಲ್ಲಿ ಅನೇಕ ಬೆಟ್ಟಗುಡ್ಡಗಳೂ ಕಣಿವೆಗಳೂ ಕಾಡುಗಳೂ ಇವೆ. ಇದು ಬಾಂಗ್ಲಾದೇಶದ ಇತರ ಕಡೆಗಳಿಗಿಂತ ಭಿನ್ನ. ಕರಾವಳಿ ಬಯಲು ಮರಳು ಮತ್ತು ಚೆವುಳು ಮಣ್ಣಿನಿಂದ ಕೂಡಿದ್ದು ಇದರ ತೀರದಲ್ಲಿ ಹಲವು ದ್ವೀಪಗಳಿವೆ. ಇವುಗಳ ಪೈಕಿ ಒಂದು ಹವಳ ದ್ವೀಪ.
ವಾಯುಗುಣ: ಇಲ್ಲಿಯದು ಮಾನ್‍ಸೂನ್ ವಾಯುಗುಣ ತಕ್ಕಮಟ್ಟಿಗೆ ಬೆಚ್ಚಗಿನ ಹವೆ. ಏಪ್ರಿಲ್‍ನಿಂದ ಸೆಪ್ಟಂಬರ್ ತನಕದ ಬೇಸಗೆಯ ದಿನಗಳಲ್ಲಿ ಗರಿಷ್ಠ ಉಷ್ಣತೆ 33 ಡಿಗ್ರಿ ಸೆ. ಯಿಂದ 36 ಡಿಗ್ರಿ ಸೆ. ನಡುವೆ ವ್ಯತ್ಯಾಸವಾಗುತ್ತಿರುತ್ತದೆ. ಏಪ್ರಿಲ್ ಹೆಚ್ಚು ಉಷ್ಣತೆಯ (28 ಡಿಗ್ರಿ ಸೆ.) ತಿಂಗಳು. ಜನವರಿ ಹೆಚ್ಚು ತಂಪಿನ (18 ಡಿಗ್ರಿ ಸೆ.) ಮಾಸ. ಅಕ್ಟೋಬರಿನಿಂದ ಮಾರ್ಚ್ ತನಕ ಚಳಿಗಾಲ. ಜೂನ್ - ಜುಲೈ ತಿಂಗಳುಗಳಲ್ಲಿ ಬಾಂಗ್ಲಾ ದೇಶದಲ್ಲಿ ಅತ್ಯಂತ ಕಡಿಮೆ ಒತ್ತಡವಿರುತ್ತದೆ. ಚಳಿಗಾಲದಲ್ಲಿ ಉತ್ತರ ಹಾಗೂ ಈಶಾನ್ಯ ದಿಕ್ಕುಗಳಿಂದ ಗಾಳಿ ಬೀಸುತ್ತದೆ. ಮಾರ್ಚ್ - ಮೇ ಅವಧಿಯಲ್ಲಿ ವಾಯವ್ಯದಿಂದ ಬೀಸುವ ಗಾಳಿಯ ವೇಗ ಅಧಿಕ. ಮಾರ್ಚಿಯಿಂದ ಅಕ್ಟೋಬರ್ ತನಕ ಬಾಂಗ್ಲಾ ದೇಶದಲ್ಲಿ ವಾರ್ಷಿಕ ಸರಾಸರಿ 250 ಸೆಂ.ಮೀ. ಮಳೆಯಾಗುತ್ತದೆ. ದೇಶದ ಪಶ್ಚಿಮ ಭಾಗದಲ್ಲಿ ಸರಾಸರಿ 165 ಸೆಂ.ಮೀ. ಈಶಾನ್ಯ ಭಾಗದಲ್ಲಿ 635 ಸೆ.ಮೀ.ವರೆಗೂ ಮಳೆಯಾಗುವುದುಂಟು, ಈ ಕಾಲದಲ್ಲಿ ನದಿಗಳು ದಡ ಮೀರಿ ಹರಿದು ಸುತ್ತಲ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಬೇಸಗೆಯ ಆರಂಭದಲ್ಲಿ ಅಥವಾ ಮಾನ್ಸೂನಿನ ಕೊನೆಗಾಲದಲ್ಲಿ ವೇಗವಾಗಿ ಗಾಳಿ ಬೀಸುವುದುಂಟು. ಕೆಲವೇಳೆ ಗಂಟೆಗೆ 161ಕಿ.ಮೀ.ಗಳಿಗಿಂತ ಹೆಚ್ಚು ವೇಗದಲ್ಲಿ ಬೀಸುವ ಗಾಳಿಯಿಂದ ಬಂಗಾಳ ಕೊಲ್ಲಿಯ ನೀರು ಸುಮಾರು 5.5 ಮೀಟರುಗಳಿಗಿಂತ ಹೆಚ್ಚಾಗಿ ಮೇಲೆದ್ದು ಕರಾವಳಿಯ ಹಾಗೂ ತೀರದ ದ್ವೀಪಗಳ ಮೇಲೆ ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲ ಕೊಚ್ಚಿಕೊಂಡು ಹೋಗುವುದು.
ಸಸ್ಯ, ಪ್ರಾಣಿ ವರ್ಗ: ಬಾಂಗ್ಲಾದೇಶ ಶೇಕಡಾ 16 ರಷ್ಟು ಅರಣ್ಯಾವೃತ, ಇದು ಹೆಚ್ಚಾಗಿ ಚಿತ್ತಗಾಂಗ್, ಚಿತ್ತಗಾಂಗ್‍ಬೆಟ್ಟಗಾಡು, ಸಿಲ್ಹೆಟ್ ಮತ್ತು ಖುಲ್ನಾ ಜಿಲ್ಲೆಗಳಲ್ಲಿದೆ. ಢಾಕಾ, ಮೈಮೆನ್‍ಸಿಂಗ್ ಜಿಲ್ಲೆಗಳಲ್ಲೂ ಕಾಡುಗಳುಂಟು. ದೇಶದಲ್ಲಿ ಗಿಡಮರಗಳು ಸಮೃದ್ಧವಾಗಿ ಬೆಳೆಯುತ್ತವೆ. ಇಲ್ಲಿಯ ಗ್ರಾಮಗಳು ಮಾವು, ಹಲಸು, ಬಿದಿರು, ಅಡಕೆ, ತಾಳೆ ಮರಗಳಿಂದ ಸುತ್ತುವರಿದಿವೆ.
ಸಸ್ಯ ಪ್ರರೂಪಗಳಿಗೆ ಅನುಗುಣವಾಗಿ ಬಾಂಗ್ಲಾದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಬಹುದು.
ಸಿಲ್ಹೆಟ್ ಮತ್ತು ಚಿತ್ತಗಾಂಗ್ ಜಿಲ್ಲೆಗಳ ಭಾಗಗಳನ್ನೊಳಗೊಂಡ ಉತ್ತರ ವಲಯ: ಈ ವಲಯದ ಹಲವು ತಗ್ಗು ಬೆಟ್ಟಗಳನ್ನು ದಟ್ಟ ಹಸಿರು ಕವಿದಿದೆ. ಇಲ್ಲಿ ಬಿದಿರು ಮತ್ತು ಬೆತ್ತ ಅಧಿಕ.
ಢಾಕಾ ಮತ್ತು ಮೈಮೆನ್‍ಸಿಂಗ್ ಜಿಲ್ಲೆಗಳ ಭಾಗಗಳನ್ನೊಳಗೊಂಡ ಮಧ್ಯ ವಲಯ: ಈ ವಲಯದಲ್ಲಿ ಸರೋವರಗಳು ಹೆಚ್ಚು. ಬಹಳಷ್ಟು ನೆಲಜವುಗು. ಮಧುಪುರ ಕಾಡುಗಳಿಂದ ಕೂಡಿದೆ.
ಬ್ರಹ್ಮಪುತ್ರದ ವಾಯವ್ಯಕ್ಕೆ ಮತ್ತು ಪದ್ಮಾ ನದಿಯ ನೈಋತ್ಯಕ್ಕೆ ಇರುವ ಪ್ರದೇಶ ಚಪ್ಪಟೆಯಾದ ಬಯಲು. ಸಾಗುವಳಿಗೆ ಒಳಪಟ್ಟಿರುವ ಈ ಬಯಲು ಹಲವು ಪೈರುಗಳಿಂದಲೂ ತೋಡತುಡಿಕೆಗಳಿಂದಲೂ ಕೂಡಿದೆ. ಬಾಬುಲ್ ಇಲ್ಲಿನ ಪ್ರಮುಖವಾದ ಮರ.
ಖುಲ್ನಾ ಮತ್ತು ಬರಿಸಾಲ್ ಜಿಲ್ಲೆಗಳ ದಕ್ಷಿಣ ವಲಯದಲ್ಲಿ ಗುಲ್ಮ ವೃಕ್ಷ ಪ್ರಧಾನ. ಇಲ್ಲಿ ಸುಂದರಬನ ಅರಣ್ಯ ಪ್ರದೇಶವಿದೆ. ವಾಣಿಜ್ಯ ದೃಷ್ಟಿಯಿಂದ ಉಪಯುಕ್ತವಾದ ಅನೇಕ ಮರಗಳು ಇಲ್ಲಿ ಬೆಳೆಯುತ್ತವೆ. ಬಾಂಗ್ಲಾ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಮರಗಳೆಂದರೆ ಮಾವು, ಅಡಕೆ, ತೆಂಗು, ತಾಳೆ, ಅರಳಿ, ಇಲ್ಲಿ ಚೆಂಡುಮಲ್ಲಿಗೆ, ಬಂಗಾಲ ಗುಲಾಬಿ, ನೈದಿಲೆ, ಗಂಧರಾಜ, ಬೋಕುಲ್ ಮತ್ತು ಕಾಮಿನಿ ಇವುಗಳ ಜೊತೆಗೆ ಇತರ ಹೂವುಗಳನ್ನೂ ಕಾಣಬಹುದು. ಬಾಂಗ್ಲಾದೇಶದಲ್ಲಿ ಸುಮಾರು 200 ಬಗೆಯ ಸ್ತನಿಗಳೂ 750 ಬಗೆಯ ಹಕ್ಕಿಗಳೂ 150 ಬಗೆಯ ಸರೀಸೃಪಗಳೂ 200 ಬಗೆಯ ಮೀನುಗಳು ಇವೆ. ಚಿತ್ತಗಾಂಗ್ ಬೆಟ್ಟಗಾಡು ಪ್ರದೇಶದಲ್ಲಿ ಹಿಂಡು ಹಿಂಡಾಗಿ ಆನೆ, ಎಮ್ಮೆ, ಕಾಡುಕೋಣ, ಕಾಡೆಮ್ಮೆ, ಜಿಂಕೆ, ಸಾಂಗ ಸಾಂಬರ್ ಮುಂತಾದ ಸಸ್ಯಾಹಾರಿ ಪ್ರಾಣಿಗಳೂ: ಹುಲಿ, ಚಿರತೆ, ಕಿರುಬ ಮುಂತಾದ ಮಾಂಸಾಹಾರಿಗಳೂ ಇವೆ. ಕರಡಿ, ಮುಂಗುಸಿ, ರ್ಹಿಸಸ್ ಕೋತಿ ಇವು ಇತರ ಮೃಗಗಳು. ಬುಲ್ಬುಲ್, ರಾಬಿನ್, ಕೋಗಿಲೆ, ನೊಣ ಹಿಡುಕ, ಗೊರವಂಕ, ಹದ್ದು, ಗೂಬೆ, ಮಿಂಚುಳ್ಳಿ ಕೊಂಬುಕೊಕ್ಕಿನ ಹಕ್ಕಿ, ಮರಕುಟಕ, ಹೆರನ್ ಕೊಕ್ಕರೆ, ಬಾತು, ಕಾಡುವರಟೆ ಮುಂತಾದ ಪಕ್ಷಿಗಳಿವೆ.
ಜನ: ನಾನಾ ಜನಾಂಗಗಳ ಮತ್ತು ಬುಡಕಟ್ಟುಗಳ ಸಂಯುಕ್ತ ಬಾಂಗ್ಲಾದೇಶ. ಈ ಪ್ರದೇಶವನ್ನು ಅತ್ಯಂತ ಹಿಂದೆ ಪ್ರವೇಶಿಸಿದ ಗುಂಪುಗಳಲ್ಲಿ ಒಂದಾದ್ದು ಪ್ರೋಟೊ ಆಸ್ಟ್ರಲಾಯ್ಡ್‍ಗಳು ಅಥವಾ ವೆಡ್ಡಾಗಳು. ಇವರದು ಉದ್ದ ತಲೆ, ಚಪ್ಪಟೆ ಮೂಗು, ಕಪ್ಪು ಕಂದು ಬಣ್ಣ, ಅನಂತರ ಮೆಡಿಟರೇನಿಯನ್ ಕಾಕಾಸಾಯ್ಡರು ಬಂದರೆಂಬುದು ಕೆಲವು ವಿದ್ವಾಂಸರ ಮತ. ಇವರು ಆರ್ಯರು. ಅನಂತರ ಇಂಡೋ-ಯೂರೊಪಿಯನ್ ಬುಡಕಟ್ಟಿನ ಅರ್ಮೆನಾಯ್ಡರು ಬಂದರೆಂದು ನಂಬಲಾಗಿದೆ. ಕ್ರಿ. ಪೂ. ಒಂದನೆಯ ಸಹಸ್ರಮಾನದಲ್ಲಿ ಈ ಪ್ರದೇಶ ಆರ್ಯಮಯವಾಗತೊಡಗಿತು. 8 ನೆಯ ಶತಮಾನದಲ್ಲಿ ಮುಸ್ಲಿಮರ ಆಗಮನದೊಂದಿಗೆ ಹೊಸ ಪ್ರಕ್ರಿಯೆಗಳು ಆರಂಭವಾದುವು. ಅರಬ್, ಪರ್ಷಿಯನ್ ಹಾಗೂ ತುರ್ಕಿ ಮೂಲಕ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದರು. ಜೊತೆಗೆ ಸ್ಥಳೀಯರನೇಕರು ಮುಸ್ಲಿಮರಾದರು.
ಪ್ರೋಟೊ-ಅಸ್ಟ್ರಲಾಯ್ಡ್ ಗುಂಪಿಗೆ ಸೇರಿದವರೆನ್ನಲಾದ ಸಂತಾಲರು ರಾಜ್‍ಶಾಹಿ ಮತ್ತು ದಿನಾಜ್‍ಪುರ್ ಜಿಲ್ಲೆಗಳ ಬಾರಿಂದ್ ಪ್ರದೇಶದಲ್ಲೂ ಅಸ್ಸಾಮ್ ಗಡಿ ಬಳಿಯ ಖಾಸಿ ಬೆಟ್ಟಗಳಲ್ಲಿ ಖಾಸಿಗಳೂ ವಾಸಿಸುತ್ತಾರೆ. ಗಾರೊ, ಹಜಾಂಗ್, ಕಚಾರಿ ಮತ್ತು ತಿಪೆರಿಗಳಲ್ಲಿ ಮಂಗೊಲಾಯ್ಡ್ ಅಂಶವಿದೆ. ಗಾರೊ ಮತ್ತು ಹಜಾಂಗ್‍ಗಳು ಸುಸಾಂಗ್ ಬೆಟ್ಟ ಸೀಮೆಯಲ್ಲೂ ಕಚಾರಿಗಳು ಸಿಲ್ಹೆಟ್‍ನಲ್ಲೂ ತಿಪೆರಿಗಳು ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲೂ ಇದ್ದಾರೆ. ಈ ಬುಡಕಟ್ಟುಗಳವರಲ್ಲದೆ ಉಳಿದವರು ಬಂಗಾಲಿಗಳು. ಜನಾಂಗೀಯವಾಗಿ ಹಾಗೂ ಭಾಷಿಕವಾಗಿ ಇವರು ವಿಶಿಷ್ಟ ಜನ. ಆದರೆ ಇವರು ವಿಭಿನ್ನ ಮೂಲದವರು. ಇವರಲ್ಲಿ ಹಲವು ಜನಾಂಗಗಳು ಬೆರೆತಿವೆ. ಬಂಗಾಲಿ ಇಲ್ಲಿಯ ಜನರ ಭಾಷೆ. ಶೇಕಡಾ 98 ರಷ್ಟು ಜನ ಈ ಭಾಷೆ ಆಡುತ್ತಾರೆ. 1947ರ ಭಾರತ ವಿಭಜನೆಯ ಅನಂತರ ಇಲ್ಲಿಗೆ ಹೆಚ್ಚಾಗಿ ವಲಸೆ ಬಂದವರ ಭಾಷೆ ಸಾಮಾನ್ಯವಾಗಿ ಉರ್ದು. ಇಂಗ್ಲಿಷ್ ಬಲ್ಲವರೂ ಇದ್ದಾರೆ.
ಬಾಂಗ್ಲಾದೇಶದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಜನ ಮುಸ್ಲಿಮರು. 13ನೆಯ ಶತಮಾನದ ಆದಿಯಲ್ಲಿ ಇಲ್ಲಿಗೆ ಬಂದ ಕೆಲವು ಮುಸ್ಲಿಮರು ಕ್ರಮೇಣ ಇಲ್ಲಿ ಬಲಿಷ್ಠರಾಗಿ ತಮ್ಮ ಅಧಿಕಾರ ಬೆಳೆಸಿಕೊಂಡರು. ಇದರಿಂದಾಗಿ ಇಡೀ ಪ್ರದೇಶದ ಸಂಸ್ಕøತಿಯೇ ತೀವ್ರ ಬದಲಾವಣೆಗೆ ಒಳಗಾಯಿತು. ಇವರ ಆಗಮನಕ್ಕೆ ಹಿಂದೆ ಇಲ್ಲಿ ಹಿಂದುಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೌದ್ಧಮತವೂ ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿತ್ತು. 1872ರ ತನಕವೂ ಹಿಂದೂಗಳದೇ ಬಹುಮತವಾಗಿತ್ತು. 1890ರಿಂದ ಈಚೆಗೆ ಮುಸ್ಲಿಮರ ಸಂಖ್ಯೆ ತೀವ್ರವಾಗಿ ಬೆಳೆಯತೊಡಗಿತು. ಮುಸ್ಲಿಮ್ ಮತದ ಸೂಫಿಗಳೆಂಬವರು ಕೆಳವರ್ಗಗಳ ಹಿಂದೂಗಳಲ್ಲಿ ಪ್ರಭಾವಗಳಿಸಿ ಅವರನ್ನು ಮುಸ್ಲಿಮರಾಗಿ ಪರಿವರ್ತಿಸಿದರು. ಅಲ್ಲದೆ ಉತ್ತರ ಭಾರತದಿಂದಲೂ ಹೊರ ದೇಶಗಳಿಂದಲೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಮುಸ್ಲಿಮರಲ್ಲಿ ಜನನ ದರ ಹಿಂದುಗಳಿಗಿಂತ ಅಧಿಕವಾಗಿದ್ದುದು ಇನ್ನೊಂದು ಕಾರಣ. ಮುಸ್ಲಿಮರಲ್ಲಿ ಬಹುಸಂಖ್ಯಾತರು ಸುನ್ನಿಗಳು, ಷಿಯಗಳು ಅಲ್ಪಸಂಖ್ಯೆಯಲ್ಲಿದ್ದಾರೆ. ಇವರು ಬಹುತೇಕ ಪರ್ಷಿಯದಿಂದ ಬಂದವರ ವಂಶಸ್ಥರು. ಅಲ್ಪಸಂಖ್ಯಾತರಾದ ಹಿಂದೂಗಳಲ್ಲದೆ ಬೌದ್ಧರೂ, ಕ್ರೈಸ್ತರೂ ಇದ್ದಾರೆ. ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲಿರುವ ಚಕ್ಮಾ, ಚೌಕ್, ಮಾಘ ಮತ್ತು ಮ್ರುಗಳು ಬಹುತೇಕ ಬೌದ್ಧರು. ಕುಮಿಗಳೂ ಕೆಲವು ಮ್ರುಗಳೂ ಸರ್ವಚೇತನವಾದಿಗಳು. ಲುಷಾಯಿಗಳು, ಕ್ರೈಸ್ತರು, ತಿಪೆರಿಗಳು ಸಾಮಾನ್ಯವಾಗಿ ಮೇಲಣ ವರ್ಗಗಳ ಹಿಂದೂಗಳು, ಷಿಯಂಗರು ಸಾಮಾನ್ಯವಾಗಿ ಕೆಳವರ್ಣಗಳವರು. ಬಾಂಗ್ಲಾದಲ್ಲಿ ಹೆಚ್ಚು ಸಂಖ್ಯೆಯಲ್ಲಿ ನಗರ ಪಟ್ಟಣಗಳಿಲ್ಲ. ನಗರಗಳು 3 ಮಾತ್ರ. 80 ಚಿಕ್ಕ ದೊಡ್ಡ ಪಟ್ಟಣಗಳಿವೆ. ಬಾಂಗ್ಲಾ ದೇಶದ ಜನಸಂಖ್ಯೆಯಲ್ಲಿ ಪಟ್ಟಣವಾಸಿಗಳು ಶೇಕಡಾ 4 ರಷ್ಟು ಮಾತ್ರ. ಢಾಕಾ ಬಾಂಗ್ಲಾ ದೇಶದ ರಾಜಧಾನಿ. ಅತ್ಯಂತ ದೊಡ್ಡ ನಗರ. ಢಾಕಾದಿಂದ ಸುಮಾರು 19 ಕಿ.ಮೀ. ದೂರದಲ್ಲಿರುವ ನಾರಾಯಣಗಂಜ್ ಸೆಣಬು, ಮತ್ತು ಚರ್ಮೋದ್ಯೋಗ ಕೇಂದ್ರ. ಢಾಕಾ ನಾರಾಯಣಗಂಜ್‍ಗಳನ್ನು ಒಂದಾಗಿ ಸೇರಿಸಿ ಮಹಾ ಢಾಕಾ ನಗರವೆಂದು ವ್ಯವಹರಿಸುವುದೂ ಉಂಟು.
ಚಿತ್ತಗಾಂಗ್ ಎರಡನೆಯ ಮುಖ್ಯ ನಗರ. ಜನಸಂಖ್ಯೆ 889.760 (1976). ಇದೊಂದು ಪ್ರಮುಖ ಬಂದರು ಕೂಡ. 1947 ರಿಂದ ಈಚೆಗೆ ಇದು ಬೆಳೆಯುತ್ತಿದೆ. ಇದರ ಸುತ್ತ ಕಾಲೂರ್‍ಘಾಟ್, ಷೋಲಾಷ್‍ಪುರ್, ಫೌಜ್‍ದಾರ್ ಹಟ್ ಮುಂತಾದ ಕೈಗಾರಿಕಾ ಕ್ಷೇತ್ರಗಳು ತಲೆಯೆತ್ತಿವೆ. ಖುಲ್ನಾ ನೈಋತ್ಯದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರ. ಜನಸಂಖ್ಯೆ 437.304 (1976). ಇದರ ಬಳಿ ಚಾಲ್ನ ಬಂದರು ಸ್ಥಾಪಿತವಾಗಿದೆ. ಬಳಿಯಲ್ಲೇ ದೌಲತ್‍ಪುರ್ ಕೈಗಾರಿಕಾ ಕ್ಷೇತ್ರ ಬೆಳೆದಿದೆ.
ಬಾಂಗ್ಲಾದೇಶದ ಹಳ್ಳಿಗಳು ದಟ್ಟವಾದ ಜನಸಂದಣಿಯಿಂದ ಕೂಡಿದೆ. ಆಗಾಗ್ಗೆ ನದಿಗಳ ಪ್ರವಾಹದ ನೀರು ತಗ್ಗಿನಲ್ಲೆಲ್ಲ ನಿಲ್ಲುವುದರಿಂದ ಹಳ್ಳಿಗಳನ್ನು ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ರಸ್ತೆಗಳ ಬದಿಗಳಲ್ಲಿ ಉದ್ದಕ್ಕೂ ಹಳ್ಳಿಗಳು ಹಬ್ಬಿವೆ. ಕುಷ್ಟಿಯಾ, ಜೆಸ್ಸೂರ್, ಫರೀದ್‍ಪುರ್ ಜಿಲ್ಲೆಗಳಲ್ಲೂ ಖುಲ್ನಾ, ಬೇಕರ್ಗಂಜ್, ಪಟುವಾಖಾಲಿ ಮುಂತಾದ ಜಿಲ್ಲೆಗಳ ಭಾಗಗಳಲ್ಲೂ ಇದು ಸಾಮಾನ್ಯ ನೋಟ, ಬಾಂಗ್ಲಾದೇಶದಲ್ಲಿ 4 ಆಡಳಿತ ವಿಭಾಗಗಳೂ 19 ಜಿಲ್ಲೆಗಳು ಇವೆ. ಚಿತ್ತಗಾಂಗ್, ಚಿತ್ತಗಾಂಗ್ ಬೆಟ್ಟ ಸೀಮೆ, ಕೊಮಿಲ್ಲಾ, ನೌಖಾಲಿ, ಸಿಲ್ಹೆಟ್ ಜಿಲ್ಲೆಗಳು ಚಿತ್ತಗಾಂಗ್ ವಿಭಾಗದಲ್ಲೂ ಢಾಕಾ, ಫರೀದ್ ಪುರ್, ಮೈಮೆನ್‍ಸಿಂಗ್, ತಂಗೇಲ್ ಜಿಲ್ಲೆಗಳು ಢಾಕಾ ವಿಭಾಗದಲ್ಲೂ ಬೇಕರ್ಗಂಜ್ (ಬರಿಸಾಲ್), ಜೆಸ್ಸೊರ್, ಖುಲ್ನಾ ವಿಭಾಗದಲ್ಲೂ ಬೋಗ್ರಾ, ದಿನಾಜ್‍ಪುರ್, ದಾಬ್ನಾ, ರಾಜ್‍ಶಾಹಿ, ರಂಗ್‍ಪುರ್ ಜಿಲ್ಲೆಗಳು ರಾಜ್‍ಶಾಹಿ ವಿಭಾಗದಲ್ಲೂ ಇವೆ.
ಆರ್ಥಿಕತೆ: ಇಲ್ಲಿಯದು ಕೃಷಿ ಪ್ರಧಾನ ಆರ್ಥಿಕತೆ. ಶೆಕಡಾ 80ಕ್ಕಿಂತ ಹೆಚ್ಚು ಜನ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬಾಂಗ್ಲಾದೇಶದ ಒಟ್ಟು ಭೂಪ್ರದೇಶವಾದ 1,50,00,000 ಹೆಕ್ಟೇರುಗಳಲ್ಲಿ ಸುಮಾರು 10,28,100 ಹೆಕ್ಟೇರ್ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ. ಮಣ್ಣು ಸಾರಯುಕ್ತವಾದ್ದು.
ಬಾಂಗ್ಲಾ ಬಹಳ ಫಲವತ್ತಾದ ನಾಡೆಂದು ಪ್ರಸಿದ್ಧವಾಗಿದೆ. ಸೆಣಬು, ಭತ್ತ ಬಹು ಮುಖ್ಯವಾದ ಬೆಳೆಗಳು. ಇತರ ಕೃಷಿ ಉತ್ಪನ್ನಗಳು ಬೇಳೆಕಾಳು, ಆಲೂಗೆಡ್ಡೆ, ಎಣ್ಣೆ, ಬೀಜ, ಕಬ್ಬು, ಹೊಗೆಸೊಪ್ಪು ಮತ್ತು ಹಣ್ಣುಗಳು, ಇಲ್ಲಿಯ ಕೃಷಿ ಮಳೆಯನ್ನೇ ಆಧರಿಸಿದೆ. ಈಚೆಗೆ ಹಲವು ನೀರಾವರಿ ಯೋಜನೆಗಳು ಕಾರ್ಯಗತವಾಗಿವೆ. ಕರ್ಣಫುಲಿ ವಿವಿಧೋದ್ದೇಶ ಯೋಜನೆ, ತೀಸ್ತ ಕಟ್ಟೆ ಯೋಜನೆ, ಗಂಗಾ-ಕೋಬಡಾಕ್ ಯೋಜನೆ ಮುಖ್ಯವಾದುವು. ಕರ್ಣಪುಲಿ ಯೋಜನೆ ಚಿತ್ತಗಾಂಗ್ ಜಿಲ್ಲೆಯ ಆಗ್ನೇಯ ಭಾಗದಲ್ಲೂ, ತೀಸ್ತಾ ಯೋಜನೆ ಉತ್ತರದಲ್ಲೂ ಇವೆ. ಗಂಗಾ- ಕೋಬಡಾಕ್ ಯೋಜನೆಯಿಂದ ಕುಷ್ಟಿಯಾ ಜೆಸೂರ್ ಮತ್ತು ಖುಲ್ನಾ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಿದೆ.
ಬಾಂಗ್ಲಾದೇಶದ ಹೊಳೆಗಳಲ್ಲೂ ಕರಾವಳಿಯ ಅಳಿವೆಗಳಲ್ಲೂ ಮೀನುಗಳು ಯಥೇಚ್ಛವಾಗಿ ದೊರಕುತ್ತವೆ. ಆದ್ದರಿಂದ ಮೀನುಗಾರಿಕೆ ಇಲ್ಲಿಯ ಒಂದು ಮುಖ್ಯ ಕಸುಬು. ಕಡಲು ನೀರಿನ ರೂಪ ಚಂದಾ, ನದೀ ನೀರಿನ ಹಿಲ್ಸಾ ಇವು ಮುಖ್ಯವಾದ ಮೀನು ಜಾತಿಗಳು.
ಕೃಷಿಯನ್ನೇ ಅವಲಂಬಿಸಿರುವವರು ವರ್ಷದ ಕೆಲವು ತಿಂಗಳುಗಳಲ್ಲಿ ನಿರುದ್ಯೋಗಿಗಳಾಗಿರಬೇಕಾಗುತ್ತದೆ. ಅವರ ಜೀವನ ಮಟ್ಟ ಬಹಳ ಕೆಳಗಿನದು. ನಿರುದ್ಯೋಗವನ್ನು ತಪ್ಪಿಸಿ ಜೀವನ ಮಟ್ಟವನ್ನು ಸುಧಾರಿಸಲು ಕೈಗಾರಿಕೆಗಳ ಬೆಳವಣಿಗೆ ಅಗತ್ಯವೆನಿಸಿದೆ. ಆದರೆ ಮುಖ್ಯವಾದ ಅಡಚಣೆಯೆಂದರೆ ಖನಿಜಗಳ ಅಭಾವ.
ಬಾಂಗ್ಲಾದೇಶದಲ್ಲಿ ಹೇಳಿಕೊಳ್ಳುವಂಥ ತೈಲ ನಿಕ್ಷೇಪಗಳೇನೂ ಇಲ್ಲ. ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಸಿಲ್ಹೆಟ್ ಮತ್ತು ಬೋಗ್ರಾಗಳಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಪತ್ತೆಯಾಗಿವೆ. ನೈಸರ್ಗಿಕ ಅನಿಲ ಸಿಲ್ಹೆಟ್ ಜಿಲ್ಲೆಯ ಹರೀಪುರ, ಛಾತಕ್, ಕೈಲಾಷ್-ತಿಲ, ರಷೀದ್‍ಪುರ್, ಷಾಹಿ ಬಜಾರ್‍ಗಳಲ್ಲೂ ಕೊಮಿಲ್ಲಾ ಜಿಲ್ಲೆಯ ಬ್ರಾಹ್ಮಣಬಾರಿಯಾ ಮತ್ತು ಬೇಕರಾಬಾದ್‍ಗಳಲ್ಲೂ ದೊರಕುತ್ತದೆ. ಸಿಲ್ಹೆಟ್‍ನ ನೈಸರ್ಗಿಕ ಅನಿಲ ರಸಗೊಬ್ಬರ ಕಾರ್ಖಾನೆಗೆ ತಿಲದಿಂದ ನೈಸರ್ಗಿಕ ಅನಿಲ ಪೂರೈಕೆಯಾಗುತ್ತದೆ. ಢಾಕಾ ಮತ್ತು ಅದರ ಉಪನಗರಗಳ ಕೈಗಾರಿಕೆಗಳಿಗೆ ಬ್ರಾಹಣಬಾರಿಯಾ ಗಣಿಗಳಿಂದ ಅನಿಲ ಒದಗುತ್ತದೆ. ಢಾಕಾ ಜಿಲ್ಲೆಯ ಘೋರಾ ಸಾಲ್‍ನಲ್ಲೂ ಚಿತ್ತಗಾಂಗಿನಲ್ಲೂ ಶಾಖ ವಿದ್ಯುತ್ತು ಉತ್ಪಾದನೆಯಾಗುತ್ತದೆ. ರೂಪ್‍ಪುರದಲ್ಲಿ ಪರಮಾಣು ವಿದ್ಯುತ್ ಕೇಂದ್ರವಿದೆ.
ಕಚ್ಚಾ ಸೆಣಬಿನ ರಫ್ತು ಲಾಭದಾಯಕವಲ್ಲವಾದ್ದರಿಂದ ದೇಶದಲ್ಲೇ ಸೆಣಬಿನ ಕೈಗಾರಿಕೆಯನ್ನು ವಿಸ್ತರಿಸುವ ಪ್ರಯತ್ನ ನಡೆದಿದೆ. ಸುಮಾರು ಅರ್ಧದಷ್ಟು ಕಚ್ಚಾ ಸಾಮಗ್ರಿಯನ್ನು ಬಳಸಿಕೊಳ್ಳುವ ಮಟ್ಟಿಗೆ ಸೆಣಬು ಗಿರಣಿಗಳು ಬೆಳೆದಿವೆ. ಉಳಿದದ್ದು ರಫ್ತಾಗುತ್ತದೆ.
ಚಿತ್ತಗಾಂಗ್ ಬೆಟ್ಟ ಸೀಮೆಯ ಬಿದಿರನ್ನೂ ಸುಂದರಬನಗಳ ಮೆದುಮರಗಳನ್ನೂ ಬಳಸಿಕೊಂಡು ಕಾಗದವನ್ನು ತಯಾರಿಸಲು ಅವಕಾಶಗಳಿವೆ. ಚೆಂದ್ರಘೋನಾ, ಪಾಕ್ಸೆಗಳಲ್ಲಿ (ಚಿತ್ತಗಾಂಗ್) ಕಾಗದದ ಕಾರ್ಖಾನೆಗಳಿವೆ. ಖುಲ್ನಾದಲ್ಲಿ ಕಾಗದ ಮತ್ತು ರಟ್ಟಿನ ಕಾರ್ಖಾನೆಯಿದೆ. ಹಲವು ರಸಗೊಬ್ಬರ ಕಾರ್ಖಾನೆಗಳು ಒಂದು ಸಿಮೆಂಟ್ ಕಾರ್ಖಾನೆಯೂ (ಛಾಕತ್) ಇವೆ. ಚಿತ್ತಗಾಂಗ್ ಖುಲ್ನಾಗಳಲ್ಲಿ ಹಡಗು ರಿಪೇರಿ ಹಾಗೂ ನಿರ್ಮಾಣಕ್ಕೆ ಅನುಕೂಲಿಸುವ ಸಲುವಾಗಿ ಬೇಕಾದಾಗ ನೀರನ್ನು ಹೊರಹಾಕುವ ಒಣಬಂದರು (ಡ್ರೈಡಾಕ್) ಕಟ್ಟೆಗಳನ್ನು ನಿರ್ಮಿಸಿದ್ದಾರೆ.
ಇಲ್ಲಿಯ ಅತ್ಯಂತ ಮುಖ್ಯ ಗುಡಿಸಲು ಕೈಗಾರಿಕೆ ಬಟ್ಟೆ ನೇಯ್ಗೆ, ಇದನ್ನೇ ಅವಲಂಬಿಸಿರುವ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ನೇಕಾರರಿದ್ದಾರೆಂದು ಅಂದಾಜು. ಬೀಡಿ ತಯಾರಿಕೆ, ಜಮಾಖಾನೆ ನೇಯ್ಗೆ, ಮಣ್ಣಿನ ಪದಾರ್ಥಗಳ ಹಾಗೂ ಬೆತ್ತದ ಕುರ್ಚಿಗಳೇ ಮುಂತಾದವುಗಳ ತಯಾರಿಕೆ ಇಲ್ಲಿಯ ಇತರ ಕಸುಬುಗಳು. ಪ್ರಾಗಿತಿಹಾಸ: (ನೋಡಿ- ಪಶ್ಚಿಮ-ಬಂಗಾಲ)
ಈಚಿನ ಇತಿಹಾಸ: ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಬಾಂಗ್ಲಾದೇಶ ಬಂಗಾಲ ಪ್ರಾಂತ್ಯದ ಪೂರ್ವಭಾಗವಾಗಿದ್ದು ಭಾರತಕ್ಕೆ ಸೇರಿತ್ತು. 1947ರಲ್ಲಿ ಭಾರತದ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಸೇರಿ ಪೂರ್ವಪಾಕಿಸ್ತಾನ ಎನಿಸಿಕೊಂಡಿತು. ಪೂರ್ವ ಪಾಕಿಸ್ತಾನಕ್ಕೆ ಸ್ವಾಯತ್ತೆತೆ ಬೇಕೆಂದು ಅವಾಮಿ ಲೀಗ್ ಎಂಬ ಸಂಸ್ಥೆಯಿಂದ ಚಳುವಳಿ ಆರಂಭವಾಯಿತು. ಇದಕ್ಕೆ ಷೇಕ್ ಮುಜೀಬುರ್ ರಹಮಾನ ನಾಯಕರಾಗಿದ್ದರು. 1971ರಲ್ಲಿ ಈ ಚಳವಳಿ ಉಲ್ಬಣಗೊಂಡು ಬಾಂಗ್ಲಾ ಸ್ವಾತಂತ್ರ್ಯ ಸಮರವಾಗಿ ಪರಿಣಮಿಸಿ ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ಭಾರತಕ್ಕೆ ಬರತೊಡಗಿದರು. ಭಾರತ-ಪಾಕಿಸ್ತಾನಗಳ ನಡುವೆ ಹದಿನಾರು ದಿನಗಳ ಕಾಲ ಯುದ್ಧ ನಡೆಯಿತು. ಬಾಂಗ್ಲಾ ವಿಮೋಚನಾ ಸೇವೆಯ (ಮುಕ್ತಿ ಬಾಹಿನಿ) ನೆರವಿಗೆ ಹೋದ ಭಾರತ ಸೇನೆ ಆ ದೇಶವನ್ನು ಪಾಕಿಸ್ತಾನದಿಂದ ವಿಮೋಚನೆಗೊಳಿಸಿತು. 1971ರ ಡಿಸೆಂಬರ್ 16 ರಂದು ಸ್ವಾತಂತ್ರ ಬಾಂಗ್ಲಾದೇಶದ ಉದಯವಾಯಿತು.
ಪಾಕಿಸ್ತಾನದಲ್ಲಿ ಬಂಧನದಲ್ಲಿರಿಸಿದ್ದ ಷೇಖ್ ಮುಜೀಬುರ್ ರಹಮಾನ್‍ರವರ ಬಿಡುಗಡೆಯಾಗಿ 1972ರ ಜನವರಿಯಲ್ಲಿ ಅವರು ಬಾಂಗ್ಲಾದೇಶದ ಪ್ರಥಮ ಪ್ರಧಾನಿಯಾದರು. ಆ ವರ್ಷದ ನವೆಂಬರ್ 4 ರಂದು ಅಲ್ಲಿಯ ಸಂವಿಧಾನ ಸಭೆಯಲ್ಲಿ ಸಂಸದೀಯ ಪ್ರರೂಪಿ ಪ್ರಜಾಪ್ರಭುತ್ವ ಸಂವಿಧಾನದ ಸ್ವೀಕಾರವಾಯಿತು. ಡಿಸೆಂಬರ್ 16 ರಂದು ಹೊಸ ಸಂವಿಧಾನ ಜಾರಿಗೆ ಬಂತು. 1975ರಲ್ಲಿ ಮಹತ್ತ್ವದ ಬದಲಾವಣೆಗಳಾದುವು. ಹಳೆಯ ಸಂವಿಧಾನವನ್ನು ರದ್ದು ಮಾಡಿ ಅಧ್ಯಕ್ಷೀಯ ಮಾದರಿಯ ಸರಕಾರದ ಸಂವಿಧಾನವನ್ನು ಜಾರಿಗೆ ತರಲಾಯಿತು. ಜನವರಿ 26ರಂದು ಷೇಖ್ ಮುಜೀಬುರ್ ರಹಮಾನರೇ ಅಧ್ಯಕ್ಷರಾದರು. ಷೇಖ್ ಅಧ್ಯಕ್ಷತೆಯ ಬಾಂಗ್ಲಾ ದೇಶ್ ಕೃಷಿಕ ಶ್ರಮಿಕ ಅವಾಮಿ ಲೀಗ್ ವಿನಾ ಉಳಿದೆಲ್ಲ ರಾಜಕೀಯ ಪಕ್ಷಗಳನ್ನೂ ನಿಷೇಧಿಸಲಾಯಿತು. 1975 ಆಗಸ್ಟ್ 15 ರಂದು ಸೇನಾ ಕ್ಷಿಪ್ರಾಕ್ರಮಣವಾಗಿ ಬಾಂಗ್ಲಾ ದೇಶದ ಅಧ್ಯಕ್ಷ ಷೇಖ್ ಮುಜೀಬುರ್ ರಹಮಾನರೂ ಪ್ರಧಾನಿ ಮೊಹಮದ್ ಮನ್ಸೂರ್ ಆಲಿಯೂ ಷೇಖರ ಕುಟುಂಬದ ಬಹುತೇಕ ಸದಸ್ಯರೂ ಕೊಲೆಯಾದರು. ಖಂಡೇಕರ್ ಮುಷ್ಟಾಕ್ ಅಹಮದ್‍ರನ್ನು ಅಧ್ಯಕ್ಷರಾಗಿ ನೇಮಿಸಲಾಯಿತು. ನವೆಂಬರಿನಲ್ಲಿ ಅಹಮದರನ್ನು ಜನರಲ್ ಜಿಯ-ಉರ್ ರಹಮಾನರು ಅಧ್ಯಕ್ಷತೆಯಿಂದ ಇಳಿಸಿ ತಾವೇ ಅಧಿಕಾರ ಸೂತ್ರ ವಹಿಸಿಕೊಂಡರು. 1977ರ ಏಪ್ರಿಲಿನಲ್ಲಿ ಅವರೇ ಅಧ್ಯಕ್ಷರಾದರು. ಮೇ ತಿಂಗಳಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವರಿಗೆ ಬಹುಮತ ಬಂತು. 1979ರ ಫಬ್ರುವರಿಯ ಚುನಾವಣೆಯಲ್ಲಿ ಜನರಲ್ ಜಿಯಾ-ಉರ್ ರಹಮಾನರ ಬಾಂಗ್ಲಾದೇಶ್ ನ್ಯಾಷನಲಿಷ್ಟ್ ಪಾರ್ಟಿಯೇ ಆಡಳಿತ ಪಕ್ಷವಾಗಿ ಚುನಾಯಿತವಾಯಿತು.
1981 ಮೇ 30 ರಂದು ಅಧ್ಯಕ್ಷ ಜಿಯಾ-ಉರ್ ರಹಮಾನ ಕೊಲೆಯಾದರು. ಅಬ್ದುಲ್ ಸತ್ತಾರ್ ತಾತ್ಕಾಲಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ನವೆಂಬರ್ 15ರ ಚುನಾವಣೆಯಲ್ಲಿ ಅವರೇ ಆಯ್ಕೆಯಾದರು.
1982 ಮಾರ್ಚ್ 24ರಂದು ಇನ್ನೊಂದು ಸೇನಾಕ್ಷಿಪ್ರಾಕ್ರಮಣ ನಡೆಯಿತು. ಅಬ್ದುಲ್ ಸತ್ತಾರ್ ಉಚ್ಚಾಟನೆಗೊಂಡರು. ಮುಖ್ಯ ಲಷ್ಕರಿ ಶಾಸನ ಆಡಳಿತಗಾರನಾದ ಲೆ.ಜ.ಎಚ್.ಎಂ. ಎರ್ಷಾದರು ರಾಜಕಾರಣವನ್ನು ಶುದ್ಧೀಕರಿಸುವ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳನ್ನೂ ನಿಷೇಧಿಸಿದರಲ್ಲದೆ ರಾಜಕೀಯ ಅಪರಾಧಗಳ ವಿಚಾರಣೆಗಾಗಿ ಲಷ್ಕರಿ ನ್ಯಾಯಾಲಯಗಳನ್ನು ಸ್ಥಾಪಿಸಿದರು. ಬಾಂಗ್ಲಾ ದೇಶದ ಕೈಗಾರಿಕೆಗಳ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಎಂಟು ಅಂಶಗಳ ಆರ್ಥಿಕ ಕಾರ್ಯಕ್ರಮವೊಂದನ್ನು ಘೋಷಿಸಲಾಯಿತು. ಲೆ.ಜ.ಎಚ್.ಎಂ. ಎರ್ಷಾದರನ್ನು ಸೇನಾ ಮುಖ್ಯಸ್ಥರನ್ನಾಗಿ ಅವರ ಅಧಿಕಾರಾವಧಿಯನ್ನು 1984 ನವೆಂಬರ್ ಕೊನೆಯತನಕ ವಿಸ್ತರಿಸಲಾಯಿತು. (ಎಚ್.ಎಸ್.ಕೆ.)