ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಳಪ್ಪ ಏಣಗಿ

ವಿಕಿಸೋರ್ಸ್ದಿಂದ

ಬಾಳಪ್ಪ ಏಣಗಿ (1914- ). ಕನಾಟಕದ ವೃತ್ತಿರಂಗಭೂಮಿ ಕಲಾವಿದರಲ್ಲಿ ನಾಟ್ಯಭೂಷಣ ರೆಂಬ ಗೌರವಕ್ಕೆ ಪಾತ್ರರಾದವರು ಏಣಗಿ ಬಾಳಪ್ಪ. ಏಣಗಿ ಎಂಬುದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಬಾಳಪ್ಪನವರು ಹುಟ್ಟಿ ಬೆಳೆದದ್ದು ಇಲ್ಲಿಯೇ. ವಯಸ್ಸಿನ ಆಧಾರದ ಮೇಲೆ ಹೇಳುವುದಾದರೆ ಇವರು ಹುಟ್ಟಿದ್ದು 1914ರಲ್ಲಿ. ತಂದೆ ಕರಿಬಸಪ್ಪ, ತಾಯಿ ಬಾಳಮ್ಮ. ಮನೆತನದ ಹೆಸರು ಲೋಕೂರ. ಇವರು ಓದಿದ್ದು ನಾಲ್ಕನೆಯ ಇಯತ್ತೆವರೆಗೆ. ಇನ್ನೂ ಓದಬೇಕೆನ್ನುವಾಗಲೇ ಬರಸಿಡಿಲಿನಂತೆ ಎರಗಿದ್ದ ತಂದೆಯ ಸಾವು, ಹಾಗೂ ಅಣ್ಣನ ಸಾವುಗಳಿಂದ ಓದು ಮುಂದುವರೆಸಲು ಆಗಲಿಲ್ಲ. ಹಿರಿಯರಿಲ್ಲದ ಮನೆಯಂತಾಗಿ ತಾಯಿ ಮತ್ತು ಮಗನ ಪರಿಸ್ಥಿತಿ ಹೌಹಾರಿತು. ಕೆಲವು ದಿನ ಕಣ್ಣೀರು ಹಾಕುವುದೇ ಗತಿಯಾಯಿತು. ಅಳುತ್ತ ಕುಳಿತರೆ ಇದ್ದೊಬ್ಬ ಮಗನ ಭವಿಷ್ಯವೂ ಹಾಳಾಗಬಹುದೆಂದು ಜನರು ಎಚ್ಚರಿಸಲು ತಾಯಿ ಬಾಳಮ್ಮ ಎಚ್ಚೆತ್ತುಕೊಂಡಳು. ಮನಸ್ಸು ರಮಿಸುವಂಥ ಆಟ-ಬಯಲಾಟ-ಭಜನೆಗಳಲ್ಲಾದರೂ ಈ ಸುಂದರ ಮುಖದ ಮಧುರ ಕಂಠದ ಮಗ ತೊಡಗಿಕೊಂಡಿರಲಿ ಎಂದು ಬೆನ್ನುತಟ್ಟಿದಳು. 8-10ವರ್ಷದವರಿದ್ದಾಗಲೇ ಬಾಳಪ್ಪನವರು ಮುಖಕ್ಕೆ ಬಣ್ಣ ಹಚ್ಚಿದರು. ಲವ-ಕುಶ ದೊಡ್ಡಾಟದಲ್ಲಿ ಗಣಪತಿ ಪಾತ್ರದ ಮೂಲಕ ಅವರು ಬಣ್ಣದ ಬದುಕಿಗೆ ನಾಂದಿ ಹಾಡಿದರು. ಒಂದೆರಡು ವರ್ಷಗಳಲ್ಲಿ ನಾಟಕಗಳಲ್ಲಿಯೂ ಪಾತ್ರವಹಿಸುವ ಅವಕಾಶ ಸಿಕ್ಕಿತು. ಸಂಗ್ರೇಶಕೊಪ್ಪದ ದೇಸಾಯಿ ಅವರು ಸಂಘಟಿಸಿದ್ದ ಗರೂಡರ ಶ್ರೀ ಪಾದುಕಾ ಪಟ್ಟಾಭಿಷೇಕದಲ್ಲಿ ಭರತನ ಸೇವಕನಾಗಿ ಮತ್ತು ಭರತನಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಹುಕ್ಕೇರಿ ನಾಯಕರ ಕಂಪನಿ ಬೈಲಹೊಂಗಲದಲ್ಲಿ ಕ್ಯಾಂಪ ಮಾಡಿದ್ದಾಗ ಭರತನ ಪಾತ್ರಕ್ಕಾಗಿಯೇ ಬಣ್ಣ ಹಚ್ಚುವ ಪ್ರಸಂಗ ಎದುರಾಯಿತು. ಅಂದಿನ ನಾಟಕದಲ್ಲಿ ಶ್ರೇಷ್ಠ ನಾಟಕಕಾರ ಚಿಕ್ಕೋಡಿ ಶಿವಲಿಂಗಸ್ವಾಮಿಗಳು ದಶರಥನ ಪಾತ್ರ ವಹಿಸಿದ್ದರು. ಬಾಳಪ್ಪನವರ ಭರತನ ಪಾತ್ರ ನೋಡಿ ಅವರು ಮೆಚ್ಚಿದರು. ಮತ್ತು ತಾವು ನಾಟಕ ಕಂಪನಿ ಕಟ್ಟಿದಾಗ ಕರೆಸುವದಾಗಿಯೂ ಹೇಳಿದರು. 1928ರಲ್ಲಿ ಧಾರವಾಡದಲ್ಲಿ ಲಿಂಗರಾಜ ನಾಟಕ ಮಂಡಳಿ ಹುಟ್ಟು ಹಾಕಿದಾಗ ಬಾಳಪ್ಪನವರನ್ನು ಕರೆಸಿದರು. ಹೀಗೆ ಬಾಳಪ್ಪನವರು ವೃತ್ತಿರಂಗಭೂಮಿಯನ್ನು ಪ್ರವೇಶಿಸಿದರು. ಆಮೇಲೆ ಅವರು ಹಿಂತಿರುಗಿ ನೋಡಲಿಲ್ಲ. ಬಣ್ಣದ ಬದುಕಿನ ಏಣಿಯನ್ನು ಏರುತ್ತಲೇ ಹೋದರು. ನಾಟ್ಯಭೂಷಣ ಗೌರವಕ್ಕೆ ಪಾತ್ರರಾದರು.

ಗುರುಗಳು ಕಟ್ಟಿದ ಕಂಪನಿ ನಿಂತ ಮೇಲೆ ಅವರ ಶಿಫಾರಸಿನ ಮೇಲೆ ಲಕ್ಷ್ಮೇಶ್ವರದ ಬಚ್ಚಾಸಾನಿಯ ಸ್ತ್ರೀ ನಾಟಕ ಮಂಡಳಿ, ಅಬ್ಬಿಗೇರಿ ಬಸನಗೌಡರ ಸಾಹಿತ್ಯ ಸಾಮ್ರಾಜ್ಯ ಸಂಗೀತ ನಾಟಕ ಮಂಡಳಿ ಗಳಲ್ಲಿ ಕೆಲ ಕಾಲ ಅಭಿನಯಿಸಿ ಅಭಿನಯದ ಶಿಕ್ಷಣ ಪಡೆದರು. 1931 ರಲ್ಲಿ ಶಿವಲಿಂಗಸ್ವಾಮಿಗಳು ಮತ್ತೆ ಸಂಘಟಿಸಿದ್ದ ಶಿರಸಿ ಮಾರಿಕಾಂಬಾ ಕಂಪನಿಗೆ ಹೋಗಿ, ರಾಣಿ ರುದ್ರಮ್ಮ ನಾಟಕದಲ್ಲಿ ರುದ್ರಮ್ಮ ಪಾತ್ರವಹಿಸಬೇಕಾಗಿ ಬಂದಾಗ ಅದನ್ನೂ ನಿರ್ವಹಿಸಿ ಸೈ ಎನಿಸಿಕೊಂಡರು. ಅಲ್ಲಿಂದ ಸ್ತ್ರೀಪಾತ್ರಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತ, ರಂಗಗೀತೆಗಳನ್ನು ಹಾಡಿ ರಂಜಿಸುತ್ತ ಬೆಳೆದರು. ಒಂದು ವರುಷದಲ್ಲಿ ಈ ಕಂಪನಿ ನಿಲ್ಲಲು ಇದನ್ನೇ ಸಹಕಲಾವಿದ ಸೂಡಿ ಹುಚ್ಚಪ್ಪನವರೊಂದಿಗೆ ಕೂಡಿ ಗುರು ಸೇವಾ ಸಂಗೀತ ನಾಟಕ ಮಂಡಳಿ ಹೆಸರಿನಿಂದ ಕಂಪನಿಯನ್ನು ಪ್ರಾರಂಭಿಸಿದರು.

ಈ ಕಂಪನಿಯಲ್ಲಿಯೇ ಬೇವೂರ ಬಾದಷಹಾ ಮಾಸ್ತರರಿಂದ ರಂಗಸಂಗೀತದ ಬಗ್ಗೆ ವಿಶೇಷ ತರಬೇತಿ ಸಿಕ್ಕಿತು. ಅನುಕರಣೆಯೆಂಬುದು ಬಾಳಪ್ಪನವರಿಗೆ ದೇವರಿಂದ ಸಿಕ್ಕ ದೊಡ್ಡ ದೇಣಿಗೆಯಾಗಿತ್ತು. ಮಾತಿರಲಿ, ಹಾಡಿರಲಿ, ಹಾವ ಭಾವ, ಆಂಗಿಕ ಅಭಿನಯವಿರಲಿ ಪ್ರೇಕ್ಷಕರನ್ನು ತಲೆದೂಗಿಸುವ, ಹೌದೆನ್ನಿಸಿಕೊಳ್ಳುವ ಕೌಶಲ್ಯ ಅವರಿಗೆ ಸಹಜವಾಗಿತ್ತು.

ಕೆಲವು ಕಾಲ ಜಮಖಂಡಿ ಕಂಪನಿ, ಸಂಪಗಾವಿ ಕಂಪನಿ, ಗೋಕಾಕ ಕಂಪನಿಗಳಲ್ಲಿಯೂ ಒಪ್ಪಂದದ ಆಧಾರದ ಮೇಲೆ ಪಾತ್ರಗಳನ್ನು ನಿರ್ವಹಿಸಿದರು. ಗೋಕಾಕ ಕಂಪನಿಯಿಂದ ಹೊರ ಬಂದ ಮೇಲೆ 1940ರಲ್ಲಿ ಶಾಂತಪ್ಪ ಹಾವೇರಿ, ರಾವ ಸಾಹೇಬ ಅಮ್ಮಣಗಿ, ಎಲ್, ಎಸ್. ಇನಾಮದಾರರ ಜೊತೆಗೂಡಿ ವೈಭವಶಾಲಿ ನಾಟ್ಯಸಂಘ ವನ್ನು ಪ್ರಾರಂಭಿಸಿದರು. ಒಂದು ವರ್ಷದಲ್ಲಿ ಶಾಂತಪ್ಪನವರು, ರಾವಸಾಹೇಬರು ತಮ್ಮ ಪಾಲು ಪಡೆದು ಬೇರೆಯಾದರು ಆಗ ಇನಾಮದಾರರೊಂದಿಗೆ ವೈಭವಶಾಲಿಯನ್ನು ಐದಾರು ವರ್ಷ ಮುನ್ನಡೆಸಿದರು. ಆ ಮೇಲೆ 1947ರಲ್ಲಿ ಸ್ವಂತ ಒಡೆತನದಲ್ಲಿ 'ಕಲಾವೈಭವ ನಾಟ್ಯಸಂಘ ಬೆಳಗಾವಿ, ಹುಟ್ಟು ಹಾಕಿದರು.

ನಾಟಕಗಳ ಆಯ್ಕೆ, ಕಲಾವಿದರ ಆಯ್ಕೆ, ಕಂಪನಿಯ ಶಿಸ್ತು ಮುಂತಾದ ವಿಷಯಗಳ ಬಗ್ಗೆ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತಾಗಲು ಬಾಳಪ್ಪನವರು ಹಲವಾರು ಬದಲಾವಣೆ ಮಾಡಿಕೊಂಡರು. ಹೊಸ ಹೊಸ ಪ್ರಯೋಗಗಳನ್ನು ನಡೆಸಿದರು. ಮಹಾಂತೇಶ ಶಾಸ್ತ್ರಿಗಳಿಂದ ಒಂದೇ ದೃಶ್ಯದ ಕುಂಕುಮ ನಾಟಕ ಬರೆಸಿ ಆಡಿದರು. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅದೇ ಹೆಸರಿನ ನಾಟಕ ಬರೆಯಿಸಿ ಆಡಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ತಂಟೆ ಶುರುವಾಗಲು ಮಾವ ಬಂದ್ನಪೋ ಮಾವ ಎಂಬ ಹಾಸ್ಯಪ್ರಧಾನ ನಾಟಕವನ್ನು ಆಡಿದರು. ಜೊತೆಗೆ ಶಿಕ್ಷಣ, ಸಮಾಜಕಾರಣ, ರಾಜಕಾರಣದ ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನಾಟಕಗಳನ್ನಂತೂ ಆಡುತ್ತಲೇ ಇದ್ದರು. ಇವುಗಳಲ್ಲಿ ಡಾಕ್ಟರ್, ದೇವರ ಮಗು, ಶಾಲಾ ಮಾಸ್ತರ, ಪಠಾಣಿಪಾಶÀ, ಅತ್ತಿಗೆ, ಹಳ್ಳಿ ಹುಡುಗಿ ನಾಟಕಗಳು ಜನಮೆಚ್ಚುಗೆ ಪಡೆದವು. 1955ರಲ್ಲಿ ಪ್ರದರ್ಶನಕ್ಕೆ ಸಿದ್ಧವಾದ ಜಗಜ್ಯೋತಿ ಬಸವೇಶ್ವರ ನಾಟಕದೊಂದಿಗೆ ಕಲಾವೈಭವದ ವೈಭವಪರಂಪರೆ ಶುರುವಾಯಿತು. ಬಾಳಪ್ಪನವರ ಬಸವಣ್ಣನ ಪಾತ್ರ ಭಾವುಕ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿತು. ಬಾಳಪ್ಪನವರ ಬಣ್ಣದ ಬದುಕಿನಲ್ಲಿ ಈ ಪಾತ್ರ ಒಂದು ಮೈಲಿಗಲ್ಲಾಯಿತು. ಈ ನಾಟಕದಿಂದ ಬಾಳಪ್ಪನವರಿಗೆ ಕೀರ್ತಿ ಸಂಪತ್ತು ಧಾರಾಳವಾಗಿ ಹರಿದು ಬಂದವು. ಬಳ್ಳಾರಿ ವಿರುಪಾಕ್ಷಪ್ಪ, ಬಳ್ಳಾರಿ ಕೃಷ್ಣಚಂದ, ಲಕ್ಷ್ಮಣರಾವ ಪುರಿ, ಸದಾಶಿವ ಬ್ರಹ್ಮಾವರ, ಡಿ. ದುರ್ಗಾದಾಸ, ಗರುಡ ಶ್ರೀಪಾದರಾವ, ಪಂಚಯ್ಯಸ್ವಾಮಿ ಮೆಳ್ಳಿಗೇರಿ, ಸಿರ್ಸಿ ಪೇಂಟರ, ರಾಯಚೂರ ಪೇಂಟರ, ಗಂಗಯ್ಯಸ್ವಾಮಿ ಶಿರೂರ, ಎಚ್.ಟಿ.ಅರಸ, ಶಂಕರ ಪಾಟೀಲ, ನಟರಾಜ ಏಣಗಿ ಮೊದಲಾದ ನಟರಿಂದ, ಬಳ್ಳಾರಿ ಲಕ್ಷ್ಮೀದೇವಿ, ಹೀರಾಬಾಯಿ ಪಾಟೀಲ, ಶಿವೂಬಾಯಿ ಹುಕ್ಕೇರಿ, ತಾರಾಬಾಯಿ ಜಂಬಲದಿನ್ನಿ, ಕೆರೂರ ಶಾಂತವ್ವ, ಸುಭದ್ರಮ್ಮ ಮನಸೂರ ಮೊದಲಾದ ನಟಿಯರಿಂದ ಕಲಾವೈಭವ ಕಂಪನಿಯ ನಾಟಕಗಳು ತುಂಬ ಜನಪ್ರಿಯತೆ ಗಳಿಸಿದವು. ರಂಗಕಲೆಯ ಬಗ್ಗೆ ಕನಸು ಕಾಣುತ್ತ, ನನಸು ಮಾಡುತ್ತ ಬಾಳಪ್ಪನವರು 1983ರವರೆಗೆ ಕಲಾವೈಭವ ನಡೆಸಿದರು. ಕಂಪನಿ ನಿಂತ ಮೇಲೂ ಅವರ ರಂಗ ಚಟುವಟಿಕೆಗಳು ನಿಲ್ಲಲಿಲ್ಲ. ತರುಣ ಕಲಾವಿದರನ್ನು ಬೆಳೆಸುತ್ತ, ಹಳೆ-ಹೊಸ ನಾಟಕಗಳನ್ನು ಆಡಿಸುತ್ತ, ರಂಗಸಂಗೀತಕ್ಕೆ ಕಾರ್ಯಕಲ್ಪ ಒದಗಿಸುತ್ತ ಏಣಗಿ ಬಾಳಪ್ಪನವರು ಆಗಾಗ ಚಲನಚಿತ್ರಗಳಲ್ಲಿಯೂ ಅಭಿನಯಿಸುತ್ತ ಬಣ್ಣದ ಬದುಕಿನಲ್ಲಿ ಸಾರ್ಥಕತೆ ಪಡೆದಿದ್ದಾರೆ.

ಸುಮಾರು ಅರವತ್ತು ವರ್ಷಗಳ ರಂಗ ಸೇವೆಯಲ್ಲಿ ಬಾಳಪ್ಪನವರು ನಟರನ್ನು, ನಟಿಯರನ್ನು, ನಾಟಕಕಾರರನ್ನು, ರಂಗಕರ್ಮಿಗಳನ್ನು, ಪ್ರೇಕ್ಷಕರನ್ನು ಬೆಳೆಸಿದ್ದಾರೆ. ಜೊತೆಗೆ ತಾವೂ ಬೆಳೆದಿದ್ದಾರೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರ ಜನರಿಂದ, ಸರಕಾರಗಳಿಂದ ಪಡೆದುಕೊಂಡಿರುವ ಗೌರವ-ಪ್ರಶಸ್ತಿಗಳು ಹೀಗಿವೆ. ಕರ್ನಾಟಕ ರಾಜ್ಯ ಪ್ರಶಸ್ತಿ (1973), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1976), ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಾಟಕ ಕಲಾ ನಿಪುಣ ಪ್ರಶಸ್ತಿ (1978), ಮಹಾರಾಷ್ಟ್ರ ಬಸವ ಸಮಿತಿಯಿಂದ ಬಸವ ಭೂಷಣ ಪದವಿ, ಮೂರು ಸಾವಿರ ಮಠ ಹುಬ್ಬಳ್ಳಿ ಇವರಿಂದ ನಾಟ್ಯಗಂಧರ್ವ ಬಿರುದು (1979), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಸರಕಾರದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (1995).

ಇವಲ್ಲದೆ ಸ್ಥಳೀಯ ಸಂಸ್ಥೆಗಳು- ಶಾಲೆ ಕಾಲೇಜುಗಳು ಇವರ ರಂಗಸಾಧÀನೆ ಮೆಚ್ಚಿ ನೀಡಿದ ಪ್ರಶಸ್ತಿ ಸನ್ಮಾನಗಳಿಗೆ ಲೆಕ್ಕವಿಲ್ಲ. ತೊಂಬತ್ತು ವಸಂತಗಳನ್ನು ಕಂಡ ತುಂಬು ಜೀವನದ ಬಾಳಪ್ಪನವರ ರಂಗಭೂಮಿ ಸಾಧನೆಯು ಅತ್ಯಮೂಲ್ಯವಾದುದು. ಮತ್ತು ಅದರಿಂದ ಅವರು ಪಡೆದಿರುವ ಅನುಭವ ಅದ್ಭುತವಾದುದು. (ಎಸ್.ಕೆ.ಬಿ.; ಡಾ.ರಾಮಕೃಷ್ಣ ಮರಾಠೆ)