ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರಿ
ಉರಿ ದಹಿಸುವ ಅನಿಲದ ಅಣುಗಳಿಂದ ಹೊರಸೂಸುವ ಬೆಳಕಿನ ಕಿರಣ ಸಮೂಹ (ಫ್ಲೇಮ್, ಜ್ವಾಲೆ). ದಹನ ಒಂದು ರಾಸಾಯನಿಕ ಕ್ರಿಯೆ. ಎರಡು ರಾಸಾಯನಿಕ ವಸ್ತುಗಳು ಪರಸ್ಪರ ಕ್ರಿಯೆಗಳಿಗೆ ಒಳಗಾದಾಗ ಅಂತರ್ಗತವಾದ ಉಷ್ಣ ಹೊರಬೀಳುವುದುಂಟು. ಇದರ ಪ್ರಮಾಣ ಸಾಕಷ್ಟಿದ್ದರೆ ಅನಿಲದ ಅಣುಗಳು ಕಾದು ಉಷ್ಣದೀಪ್ತ ಸ್ಥಿತಿಯನ್ನು ಮುಟ್ಟಿದಾಗ ಉರಿಯ ರೂಪದಲ್ಲಿ ಕಂಡುಬರುತ್ತವೆ. ದಹಿಸುವ ವಸ್ತುಗಳು ಮೂಲತಃ ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತವೆ. ಸೌದೆ, ಇದ್ದಲು, ಕರ್ಪೂರ, ಮೆಗ್ನೀಷಿಯಂ ಮುಂತಾದ ಘನ ಪದಾರ್ಥಗಳೂ ಪೆಟ್ರೋಲ್, ಸೀಮೆಎಣ್ಣೆ, ಮೆಥಿಲೇಟೆಡ್ ಸ್ಪಿರಿಟ್ ಮುಂತಾದ ದ್ರವ ಪದಾರ್ಥಗಳೂ ಜಲಜನಕ, ಅಸಿಟಲೀನ್, ಬುರ್ಷೇನ್ ಗ್ಯಾಸಿನಂಥ ಅನಿಲಗಳೂ ಗಾಳಿಯಲ್ಲಿ ಉರಿಯುವುದು ನಮಗೆ ನಿತ್ಯದ ಅನುಭವ. ಇಂಥ ವಸ್ತುಗಳು ಗಾಳಿಯಲ್ಲಿರುವ ಆಕ್ಸಿಜನ್ನಿನೊಂದಿಗೆ ರಾಸಾಯನಿಕ ಕ್ರಿಯೆಗೊಳಗಾಗಿ ಆಯಾ ವಸ್ತುಗಳ ಆಕ್ಸೈಡುಗಳನ್ನು ಉತ್ಪಾದಿಸುವುದೇ ಉರಿಗೆ ಕಾರಣ. ಈ ಆಕ್ಸೈಡುಗಳ ಶಕ್ತಿ ಕಡಿಮೆಯಾಗಿರುವುದರಿಂದ ಅವು ಉರಿಯ ರೂಪದಲ್ಲಿ ಕಂಡುಬರುವುದಿಲ್ಲ. ದಹನ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಉಷ್ಣಶಕ್ತಿ ಬೆಳಕಿನ ರೂಪದಲ್ಲಿಯೂ ಉಷ್ಣರೂಪದಲ್ಲಿಯೂ ಹೊರಬೀಳುತ್ತದೆ. ವಸ್ತುಗಳು ಉರಿಯಬೇಕಾದರೆ ಆಕ್ಸಿಜನ್ ಇರಬೇಕೆಂಬ ನಿಯಮವೇನೂ ಇಲ್ಲ, ಕ್ಲೋರಿನ್ ಅನಿಲದಲ್ಲಿ ಟರ್ಪಂಟೈನ್ ಹೊಗೆಯನ್ನು ಉಗುಳುತ್ತ ಉರಿಯುತ್ತದೆ. ಕ್ಲೋರಿನ್, ಅಮೋನಿಯ ಅನಿಲದೊಂದಿಗೆ ಸೇರುವಾಗ ಹಸಿರು-ನೀಲಿ ಬಣ್ಣದ ಉರಿ ಕಂಡುಬರುತ್ತದೆ. ಸೂರ್ಯನ ಉರಿ ಅದರಲ್ಲಿರುವ ಜಲಜನಕದ ಬೀಜಾಣುಗಳು ಒಂದಕ್ಕೊಂದು ಸೇರಿ, ಹೀಲಿಯಂ ಉತ್ಪಾದಿಸುವ ಕ್ರಿಯೆಯಲ್ಲಿ ಹೊರಬೀಳುವ ಉಷ್ಣದ ಫಲ.
ಉರಿಯ ಬಣ್ಣ ಕೆಂಪಗೆ, ಬೆಳ್ಳಗೆ ಅಥವಾ ನೇರಿಳೆಯಾಗಿ ಕಂಡುಬರುವುದು. ಉಷ್ಣತೆಯ ಪ್ರಮಾಣ ಹೆಚ್ಚಿದಂತೆಲ್ಲ ಉರಿ ಕೆಂಪುಬಣ್ಣದಿಂದ ನೇರಿಳೆಬಣ್ಣಕ್ಕೆ ತಿರುಗುವುದು. ಪ್ರಯೋಗಶಾಲೆಯಲ್ಲಿ ಉಪಯೋಗಿಸುವ ಬುನ್ಸೆನ್ ಬರ್ನರಿನಲ್ಲಿ ಉರಿಯುವ ಗ್ಯಾಸ್ ಆಕ್ಸಿಜನ್ನಿನ ಪ್ರಮಾಣ ಕಡಿಮೆಯಾದಾಗ ಕೆಂಪಗೆ ಉರಿಯುವುದೂ ಪ್ರಮಾಣ ಸರಿಯಾದಾಗ ನೇರಿಳೆಬಣ್ಣದ ಉರಿಯಂತೆ ಕಾಣುವುದೂ ವಿಜ್ಞಾನದ ವಿದ್ಯಾರ್ಥಿಗಳಿಗೆ ಪರಿಚಯವಾದ ವಿಷಯ. ಆಕ್ಸಿಅಸಿಟಲೀನ್ ಮಿಶ್ರಣ ಉರಿದಾಗ ನೇರಿಳೆಬಣ್ಣ ಕಂಡುಬರುವುದು. ಅದರ ಉಷ್ಣತೆ ಹೆಚ್ಚಿನ ಪ್ರಮಾಣದಲ್ಲಿರುವುದೇ (3600ಲಿ ಸೆ.) ಇದಕ್ಕೆ ಕಾರಣ. ಅನಿಲಗಳು ಉರಿಯುವಾಗ ಹೊರಸೂಸುವ ಉಷ್ಣಶಕ್ತಿಯನ್ನು ಅನೇಕ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಲೋಹ ಕೈಗಾರಿಕೆಯಲ್ಲಿ, ಬೆಸುಗೆಗೆ, ಕರಗಿಸಲು ಮತ್ತು ಕೊಯ್ಯಲು ಆಕ್ಸಿಅಸಿಟಲೀನ್, ಆಕ್ಸಿಹೈಡ್ರೋಜನ್ ಮುಂತಾದ ಅನಿಲ ಮಿಶ್ರಣಗಳನ್ನು ಉಪಯೋಗಿಸುತ್ತಾರೆ. ಪ್ರಯೋಗಶಾಲೆಯಲ್ಲಿ ಸೋಡಿಯಂ, ಪೊಟಾಸಿಯಂ ಮತ್ತು ಬೇರಿಯಂ ಮುಂತಾದ ಲೋಹಗಳನ್ನು, ಅತ್ಯಂತ ಅಲ್ಪಪ್ರಮಾಣದಲ್ಲಿದ್ದರೂ ಸಹ, ಬುನ್ಸೆನ್ ಬರ್ನರಿನ ಉರಿಯ ಸಹಾಯದಿಂದ ಪತ್ತೆ ಮಾಡಬಹುದು. (ನೋಡಿ- ಜ್ವಾಲೆ) (ಎಚ್.ಎಸ್.ಎಸ್.)