ಮೊದಲು ಇಳಿದವಳು ಸ್ವಲ್ಪ ಹೆಚ್ಚು ಕಡಿಮೆ ತನ್ನ ಸಮವಯಸ್ಕಳಾದ ತರುಣಿ. ಹಸಿರು ರೇಶ್ಮೆಯ ಸೀರೆಯನ್ನುಟ್ಟಿದ್ದಾಳೆ. ಚಿನ್ನದ ಒಡವೆಗಳು ದೇಹವನ್ನು ಅಲಂಕರಿಸಿವೆ. ಕೈತುಂಬ ಬಳೆಗಳು; ತಲೆಯ ತುಂಬಾ ಮುಸುಗು. ಬಹುಶಃ ಹೊಸ ಮದುವಣಗಿತ್ತಿಯೆಂದು ಹೇಳಬಹುದಾದ ಕಾಂತಿ ಮುಖದಲ್ಲಿ ಮಿನುಗುತ್ತಿದೆ.
ಅನಂತರ ಇಳಿದವಳು ಬಹುಶಃ ಈಕೆಯ ತಾಯಿಯೆಂದು ಹೇಳಬಹುದಾದ ಮಧ್ಯವಯಸ್ಸಿನ ಮಹಿಳೆ. ವಿಶೇಷ ಅಲಂಕಾರಗಳು ಇಲ್ಲದಿದ್ದರೂ ತಕ್ಕ ಮಟ್ಟಿಗೆ ಶ್ರೀಮಂತಿಕೆಯ ಲಕ್ಷಣಗಳಿದ್ದವು ಅವಳಲ್ಲಿ. ಇಳಿದು ಆಕೆ ಹಣ್ಣು ಕಾಯಿಗಳ ಚೀಲವನ್ನು ಕೈಗೆ ತೆಗೆದುಕೊಂಡಳು.
ಅಷ್ಟರಲ್ಲಿ ಮೊದಲೇ ಗಾಡಿಯಿಂದ ಇಳಿದಿದ್ದ ಸ್ಥೂಲಕಾಯದ ಶಿವಯ್ಯನವರು, ಗಾಡಿ ಹೊಡೆಯುವವನನ್ನು ಕುರಿತು :
``ಏ ಸಿದ್ದಾ, ಗಾಡಿ ಬಿಟ್ಟು ಎತ್ತುಗಳಿಗೆ ನೀರು ಕುಡಿಸೋ. ಅಷ್ಟರಲ್ಲಿ ಪೂಜೆ ಮುಗಿಸಿಕೊಂಡು ಬಂದುಬಿಡುತ್ತೇವೆ. ಜಾಗ್ರತೆಯಾಗಿ ಹೊರಟುಬಿಡೋಣ ಎಂದು ಹೇಳಿ, ಮುಂದೆ ಮುಂದೆ ನಡೆಯತೊಡಗಿದರು ತಮ್ಮ ಅಳಿಯನೊಡನೆ.
ಹೆಂಗಸರು ಹಿಂಬಾಲಿಸಿದರು. ಮಹಾದೇವಿಯ ತೀರ ಸಮೀಪದಲ್ಲಿಯೇ ಅವರು ಹಾದುಹೋಗಬೇಕಾಗಿತ್ತು. ಮಹಾದೇವಿ ಅವರನ್ನೇ ನೋಡುತ್ತಿದ್ದಳು. ಆ ಇಬ್ಬರೂ ನೋಡಿದರು ಮಹಾದೇವಿಯನ್ನು.
ತಾರುಣ್ಯದ ಭರದಲ್ಲಿರುವ ಅಪೂರ್ವ ಸೌಂದರ್ಯರಾಶಿ; ಸತ್ಕುಲ ಪ್ರಸೂತಳಂತೆ ಕಾಣುವ ಸುಸಂಸ್ಕತ ಮನೋಭಾವನೆಯನ್ನು ಪ್ರತಿಬಿಂಬಿಸುತ್ತಿರುವ ಮುಖ ! ಆದರೆ ಉಟ್ಟಿರುವ ವೇಷ ಮಾತ್ರ ತೀರ ಸಾಮಾನ್ಯವಾದುದು. ಅವಳ ಸೌಂದರ್ಯದ ಗೌರವವನ್ನು ಮುಚ್ಚಲೂ ಕೂಡ ಅರ್ಹವಾದುದಲ್ಲವೆಂದೆನಿಸಿತು. ಬಹುಶಃ ಅನಿರೀಕ್ಷಿತವಾಗಿ ಬಂದ ಬಡತನದ ಸಂಕಷ್ಟವೇ ಅದಕ್ಕೆ ಕಾರಣವೆಂದು ಭಾವಿಸಿದರೇನೋ ಆ ತಾಯಿ-ಮಗಳು. ಒಬ್ಬರ ಮುಖವನ್ನೊಬ್ಬರು ನೋಡಿದರು. ಇಬ್ಬರೂ ನಿಂತರು. ತಾಯಿಯೇ ಮಹಾದೇವಿಯನ್ನು ಕುರಿತು ಕೇಳಿದಳು :
``ನೀನಾರಮ್ಮ ?
``ಏಕೆ ತಾಯಿ ? ಶಿವಾಲಯಕ್ಕೆ ಹೋಗಿದ್ದೆ. ಸ್ವಲ್ಪ ವಿಶ್ರಾಂತಿಯನ್ನು ಪಡೆಯಲೆಂದು ಇಲ್ಲಿ ನಿಂತಿದ್ದೇನೆ ಅಷ್ಟೆ - ಇಲ್ಲಿ ನಿಂತಿದ್ದೇ ತಪ್ಪಾಯಿತೇ ಎಂದು ಕೇಳುವಂತಿತ್ತು ಮಹಾದೇವಿಯ ಉತ್ತರ.
``ಹಾಗಲ್ಲಮ್ಮ, ನೀನೊಬ್ಬಳೇ ನಿಂತಿದ್ದೆಯಲ್ಲ ಈ ಬಿಸಿಲಿನಲ್ಲಿ ಅಂತ ಕೇಳಿದೆ ಅಷ್ಟೆ. ಯಾವ ಊರಮ್ಮ ನಿನ್ನದು ? ಮತ್ತೆ ಕೇಳಿದಳು ತಾಯಿ ಶಿವಮ್ಮ.