ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಾಲ

ವಿಕಿಸೋರ್ಸ್ದಿಂದ

ಅಂಬಾಲ[ಸಂಪಾದಿಸಿ]

ಹರಿಯಾಣ ರಾಜ್ಯದ ಒಂದು ಜಿಲ್ಲೆ ಮತ್ತು ಆಡಳಿತಗಳ ಕೇಂದ್ರ ನಗರ. ಜಿಲ್ಲೆಯ ವಿಸ್ತೀರ್ಣ ಸು. 1,574 ಚ.ಕಿ.ಮೀ. ಜನಸಂಖ್ಯೆ (2001). ಅಂಬಾಲ ಪಟ್ಟಣ ದಂಡು ಮತ್ತು ನಗರಭಾಗಗಳನ್ನು ಹೊಂದಿದೆ. ಇದರ ಜನಸಂಖ್ಯೆ : 1,68,316 (2001) ದಂಡಿನ ಭಾಗ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿತವಾಯಿತು. ಇದು ಅಂಬಾಲ ನಗರದ ಪುರ್ವಕ್ಕಿದ್ದು ಸು. 61,748 ಜನಸಂಖ್ಯೆಯಿಂದ ಕೂಡಿದೆ (2001).

ಅಂಬಾಲ ಕ್ಷೇತ್ರ 14ನೆಯ ಶತಮಾನದಲ್ಲಿ ಅಂಬಾ ರಜಪುತನಿಂದ ಸ್ಥಾಪಿತವಾಯಿತು. ಅನಂತರ ಪಟ್ಟಣವನ್ನು ಆತನ ಜ್ಞಾಪಕಾರ್ಥವಾಗಿ ಅಂಬಾಲವೆಂದು ಕರೆಯಲಾಯಿತು. ಈ ಹೆಸರು ಅಂಬಾಲದ ಸುತ್ತಮುತ್ತಲಿನ ಆವರಣದಲ್ಲಿ ಗೋಚರವಾಗುವ ಮಾವಿನತೋಪುಗಳಿಂದ ಬಂದಿರಲಿಕ್ಕೂ ಸಾಕು. ಅಂಬವಾಲ ಎಂಬುದಾಗಿ ಕರೆಯಲಾಗುತ್ತಿದ್ದುದು ಅನಂತರ ಅಶುದ್ಧವಾಗಿ ಅಂಬಾಲವಾಗಿರಬಹುದು. 1809ರಲ್ಲಿ ಒಡೆಯನಾಗಿದ್ದ ದಯಾಕಾರ್ ಸತ್ತಮೇಲೆ 1823ರಲ್ಲಿ ಅದು ಬ್ರಿಟಿಷರ ಕೈಸೇರಿತು; ಮುಂದೆ 1849ರಲ್ಲಿ ಜಿಲ್ಲೆಯ ಕೇಂದ್ರಕಚೇರಿ ಇಲ್ಲಿ ಸ್ಥಾಪಿತವಾಯಿತು.

ಭೌಗೋಳಿಕವಾಗಿ ಅಂಬಾಲ ಮೈದಾನ ಮತ್ತು ಬೆಟ್ಟಗುಡ್ಡಗಳು ಸೇರುವ ನೆಲೆಯಲ್ಲಿದೆ. ತನ್ನ ಹಿನ್ನೆಲೆಯ ಪ್ರಭಾವದಿಂದ ಒಂದು ಪ್ರಮುಖ ಕೈಗಾರಿಕಾ ಪಟ್ಟಣವಾಗಿ ಬೆಳೆದಿದೆ. ಕಾಗದ ತಯಾರಿಕೆ, ಹಣ್ಣುಗಳನ್ನು ಕೂಡಿಡುವುದು, ರೇಷ್ಮೆ ಕೈಗಾರಿಕೆ, ಗಾಜು ಮತ್ತು ವೈಜ್ಞಾನಿಕ ಸಲಕರಣೆಗಳು ಮತ್ತು ಆಟದ ಸಾಮಾನುಗಳ ತಯಾರಿಕೆ ಅಂಬಾಲದ ಪ್ರಮುಖ ಚಟುವಟಿಗೆಗಳು. ಅಂಬಾಲ ಇಂದಿಗೂ ಕೂಡ ಧಾರ್ಮಿಕತೆಗೆ ಹೆಸರುವಾಸಿ. ಸಿಖ್ಖರ ಒಂದು ಪ್ರಮುಖ ದೇವಸ್ಥಾನವಾದ ಗುರುದ್ವಾರ ಮಂಜಿ ಸಾಹಿಬ್ ಇಲ್ಲಿ ಇದ್ದು, ಪ್ರತಿ ವರ್ಷವೂ ಅನೇಕ ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.