ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪೬
ಕದಳಿಯ ಕರ್ಪೂರ


ಸಿದ್ಧರಾಮರು ವಿವರವಾಗಿ ಅದರ ವರ್ಣನೆಯನ್ನು ಮಾಡುವಾಗಲೂ ತಿಳಿಸಿದ್ದರು. ಅದನ್ನು ನೆನಸಿಕೊಳ್ಳುತ್ತಾ ಪ್ರಯಾಣದ ಕಷ್ಟಸುಖಗಳನ್ನು ಲೆಕ್ಕಿಸದೆ, ಆತ್ಮಕೂರನ್ನು ಸೇರುವ ಆತುರದಿಂದ ನಡೆಯುತ್ತಿದ್ದಳು ಮಹಾದೇವಿ. ಅನೇಕ ದಿನಗಳ ಪ್ರಯಾಣ ಕೊನೆಗೂ ಅವಳನ್ನು ಆತ್ಮಕೂರಿಗೆ ಕರೆದುತಂದಿತು.

ಶ್ರೀಶೈಲಕ್ಕೆ ಹೋಗಿ, ದುರ್ಗಮವಾದ ಕಾಡಿನ ಮಧ್ಯದಲ್ಲಿರುವ ಮಲ್ಲಿಕಾರ್ಜುನನನ್ನು ಕಾಣಲು ಅಸಾಧ್ಯವಾದವರಿಗಾಗಿ ಆತ್ಮಕೂರಿನಲ್ಲಿಯೂ ಮಲ್ಲಿಕಾರ್ಜುನನ ದೇವಾಲಯವಿರುವುದನ್ನು ಕೇಳಿದ್ದ ಮಹಾದೇವಿ ಅಲ್ಲಿಗೆ ಹೋದಳು. ಅಲ್ಲೊಂದು ದೊಡ್ಡ ಪರಿಷೆ ಬೀಡುಬಿಟ್ಟಿತ್ತು. ಮಹಾದೇವಿಗೆ ನೆನಪಾಯಿತು, ತಾನು ಇಲ್ಲಿಗೆ ಬಂದಿರುವುದು ಈಗ ಶಿವರಾತ್ರಿಯ ಸಮಯವೆಂದು.

ಶಿವರಾತ್ರಿಯ ವೇಳೆಯಲ್ಲಿ ಸಾವಿರಾರು ಜನ ಭಕ್ತರು ಬಂದು ಜ್ಯೋತಿರ್ಲಿಂಗದ ದರ್ಶನವನ್ನು ಪಡೆಯುತ್ತಾರೆ. ಹಾಗೆ ಶ್ರೀಶೈಲಕ್ಕೆ ಹೋಗಲು ಬಂದ ಪರಿಷೆಯೊಂದು ಅಲ್ಲಿ ಬೀಡುಬಿಟ್ಟಿತ್ತು.

ಮಹಾದೇವಿ ಬಳಿಗೆ ಹೋಗುತ್ತಿದ್ದಂತೆಯೇ ಅವಳ ವ್ಯಕ್ತಿತ್ವದಿಂದ ಆಕರ್ಷಿತರಾದ ಪರಿಷೆಯ ಮುಖಂಡರು ಸಮೀಪಕ್ಕೆ ಬಂದು ಮಾತನಾಡಿಸಿದರು. ಆ ಮಾತುಗಳನ್ನು ಕೇಳಿ ಮಹಾದೇವಿಯ ಕಿವಿ ನಿಮಿರಿದುವು. ಅವರು ಮಾತನಾಡುತ್ತಿದ್ದುದು ಕನ್ನಡ ! ಅದು ಕನ್ನಡನಾಡಿನಿಂದ ಬಂದ ಯಾತ್ರಾರ್ಥಿ ಸಮೂಹವಾಗಿತ್ತು. ಮತ್ತೊಮ್ಮೆ ಕನ್ನಡ ತಾಯ್ನುಡಿಯನ್ನು ಕೇಳುವ ಭಾಗ್ಯ ಬಂದುದಕ್ಕಾಗಿ ಸಂತೋಷಗೊಂಡಳು.

ಶಿವರಾತ್ರಿಯ ವೇಳೆಗೆ ಸರಿಯಾಗಿ ಶ್ರೀಶೈಲವನ್ನು ಸೇರಬೇಕೆಂಬ ಭಾವನೆಯಿಂದ ಪರಿಷೆ ; ಆತ್ಮ ಕೂರಿನಲ್ಲಿಯೇ ಇನ್ನೂ ನಾಲ್ಕಾರು ದಿನ ನಿಂತಿತು. ಮಹಾದೇವಿಯನ್ನು ತಮ್ಮೊಡನೆ ಇರುವಂತೆ ಬೇಡಿಕೊಂಡು ಅವಳನ್ನು ಒಪ್ಪಿಸಿದರು. ಅವಳು ಒಪ್ಪಿದುದು ತಮ್ಮ ಭಾಗ್ಯವೆಂದೇ ಬಗೆದು ಅವಳನ್ನು ಗೌರವದಿಂದ ಉಪಚರಿಸುತ್ತಿದ್ದರು.

ಶಿವರಾತ್ರಿ ಇನ್ನು ಮೂರು ನಾಲ್ಕು ದಿನಗಳಿರುವಾಗ ಪರಿಷೆ, ಶ್ರೀಶೈಲದತ್ತ ಪ್ರಯಾಣವನ್ನು ಕೈಗೊಂಡಿತು. ಈ ವೇಳೆಗಾಗಲೇ ಶ್ರೀಶೈಲಕ್ಕೆ ಹೋಗುವ ಜನರ ಜಾತ್ರೆ, ಒಂದೇ ಸಮನೆ ಏರತೊಡಗಿತ್ತು. ಮಲ್ಲಿಕಾರ್ಜುನನ ಜಯಘೋಷಗಳು, ಭಜನೆಗಳು, ಕೀರ್ತನೆಗಳು, ಎಡೆಬಿಡದೆ ನಡೆಯುತ್ತಿದ್ದವು.

ಶ್ರೀಶೈಲಪರ್ವತ ಶ್ರೇಣಿಗಳು ಪ್ರಾರಂಭವಾದ ಮೇಲಂತೂ, ಜನರ ಉತ್ಸಾಹ ಇಮ್ಮಡಿಸಿತು. ಬಿಸಿಲಿನ ತಾಪವನ್ನು ಲೆಕ್ಕಿಸಿದೆ, ಬೆಟ್ಟವನ್ನು ಹತ್ತಿ ಇಳಿಯುವ