ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಟಕ

ವಿಕಿಸೋರ್ಸ್ದಿಂದ

ನಾಟಕ ದೃಶ್ಯಕಾವ್ಯಕ್ಕೆ ಈಗ ಬಳಕೆಯಲ್ಲಿರುವ ಹೆಸರು (ಡ್ರಾಮ). ಇದನ್ನು ಹಿಂದೆ ರೂಪಕ ಎಂದು ಕರೆಯುತ್ತಿದ್ದರು. ದಶಕರೂಪಗಳಲ್ಲೊಂದಾದ ನಾಟಕ ಎಂಬುದಕ್ಕೆ ಅಂದು ಸಂಕುಚಿತವಾದ ವಿಶಿಷ್ಟಾರ್ಥಕವಿತ್ತು. ಈ ಲೇಖನದಲ್ಲಿ ನಾಟಕ ಎಂಬ ಪದವನ್ನು ಇಂದಿನ ವಿಶಾಲಾರ್ಥದಲ್ಲಿ ಬಳಸಲಾಗಿದೆ.

ನಾಟಕದ ಸ್ವರೂಪ ಹೇಗೆ ಸಿದ್ಧಗೊಂಡಿತು ಎಂಬುದರ ಬಗ್ಗೆ ಏಕಾಭಿಪ್ರಾಯವಿಲ್ಲ. ಪಶುಪಕ್ಷಿ ಮೊದಲಾದುವನ್ನೊಳಗೊಂಡು ತನ್ನ ಸುತ್ತಲಿನ ಸೃಷ್ಟಿಯನ್ನು ಅನುಕರಿಸುವ ಮಾನವ ಪೃವೃತ್ತಿಯಿಂದ ನಾಟಕ ಹುಟ್ಟಿತೆ? ಮನೆಯಲ್ಲಿ ಮಿಕ್ಕವರನ್ನು, ಬೆಳೆದವರನ್ನು ಅನುಕರಿಸುವ ಹುಟ್ಟುಗುಣ ಮಕ್ಕಳಲ್ಲಿ ಇದ್ದುದರಿಂದ ನಾಟಕ ಮಾನವ ಸಮಾಜದಲ್ಲಿ ಸಹಜವಾಗಿ ಬೆಳೆದು ಬಂತೆ? ಇಲ್ಲವೆ ವಕ್ರತೆ, ಊನ, ತೊದಲು ಮುಂತಾದ ವಿಕ್ಷಿಪ್ತತೆ, ವಿಕೃತಿಗಳನ್ನು ಅಣಕಿಸುವ ಮನುಷ್ಯ ಸ್ವಭಾವದಿಂದ ನಾಟಕ ಹುಟ್ಟಿತೆ? ಅಥವಾ ಮಾನವೇತಿಹಾಸದ ಮೊದಲ ಕಾಲದಲ್ಲಿ ಅನಿವಾರ್ಯವಾಗಿದ್ದ ಬೇಟೆಕಾಳಗಗಳಲ್ಲಿ ನಾಟಕದ ಮೂಲವನ್ನು ಕಾಣಬಹುದೆ ? ಅತ್ಯಂತ ಸಂತೋಷ ಇಲ್ಲವೇ ತೀವ್ರ ವೇದನೆಯಾದಾಗ ಮೈಕೈ ಹಾವಭಾವಗಳಿಂದಲೇ ಅದನ್ನು ವ್ಯಕ್ತಪಡಿಸುವ ಮಾನವನ ಸ್ವಭಾವದಿಂದ ನಾಟಕ ಮೂಡಿ ಬಂತೆ ? ಹೆದರಿದಾಗ, ಹರ್ಷದಲ್ಲಿದ್ದಾಗ ಧ್ವನಿಯನ್ನು ರಾಗವಾಗಿ ಎಳೆಯುವ ಸಹಜ ಪ್ರವೃತ್ತಿಯಲ್ಲಿ ನಾಟಕದ ಬೀಜವಿದೆಯೆ ?

ಈ ಮತ್ತು ಇಂಥ ಅನೇಕ ಊಹೆಗಳು ಮಾಡಿದ ಪಂಡಿತರು ನಾಟಕದ ಹುಟ್ಟು ನಮಗೆ ನಿಶ್ಚಿತವಾಗಿ ತಿಳಿಯದು ಎಂಬುದನ್ನು ತೋರಿಸಿಕೊಡುತ್ತಾರೆ. ಕ್ರಿಸ್ತಪೂರ್ವದ ಆರೇಳು ಶತಕಗಳಿಗೆ ಮುಂಚಿತವಾಗಿಯೇ ಗ್ರೀಸಿನಲ್ಲಿ ನಾಟಕ ಬರೆಯುವ ಮತ್ತು ಆಡಿ ತೋರಿಸುವ ಕಲೆ ಮುಂದುವರಿದಿತ್ತು. ನಾಟಕದ ಬಗ್ಗೆ ನಿಶ್ಚಿತವಾಗಿ ಅಭ್ಯಾಸ ಮಾಡಿ ಅಭಿಪ್ರಾಯ ಕೊಡುವುದು ಮೊದಲು ಶಕ್ಯವಾದುದು ಈ ಕಾಲದಿಂದಲೇ. ಗ್ರೀಕ್ ನಾಟಕ ಹೇಗೆ ಹುಟ್ಟಿತು ಎಂಬುದರ ಬಗ್ಗೆ ನಾಟಕದ ಹುಟ್ಟು ಬೆಳವಣಿಗೆಗಳನ್ನು ಆಳವಾಗಿ ಅಭ್ಯಸಿಸಿ ಅಧಿಕಾರದಿಂದ ಹೇಳಲು ಸಮರ್ಥನಾದ ಎಲರ್ಡಿಸ್ ಎಂಬಾತ ಹೀಗೆ ಹೇಳಿದ್ದಾನೆ.

ಬೇರೆ ಅನೇಕ ದೇಶಗಳಂತೆ ಗ್ರೀಸಿನಲ್ಲಿಯೂ ಕಾಮಿಡಿ ಟ್ರಾಜಿಡಿಗಳು ಆವಿರ್ಭವಿಸಿದ್ದು ಅಂದಿನ ಧಾರ್ಮಿಕ ಆಚರಣೆಗಳಿಂದಲೆ ಡೈಯನೈಸಸ್ ದೇವತೆಯ ವಾರ್ಷಿಕ ಜಾತ್ರೆಯ ಸಮಾರಂಭದಲ್ಲಿ ಸಾಂಕೇತಿಕ ಉಡುಪುಗಳನ್ನು ಧರಿಸಿದ ಮೇಳದವರು ವಾದ್ಯಗಳೊಡನೆ ಹಾಡಿ ಕುಣಿದು ದೇವದೇವತೆಗಳ ಕತೆಗಳನ್ನು ಪ್ರಸಂಗಗಳನ್ನು ಅಭಿನಯಿಸುತ್ತಿದ್ದರು. ಅಲ್ಲಿನ ನೃತ್ಯ, ಹಾವಭಾವ ವಿಲಾಸ, ಸಂಗೀತ ಯುಗಳಗೀತ- ಇವುಗಳಿಂದ ನಿಧಾನವಾಗಿ ನಾಟಕದ ಅವಿರ್ಭಾವವಾಯಿತು ಹೀಗೆಂದು-ಡಾಕ್ಟರ್ ನಿಕಲ್ ಧಾರ್ಮಿಕ ಆಚರಣೆಯ ವಿಧಾನಗಳಲ್ಲಿಯೇ ನಾಟಕ ಹುಟ್ಟಿತೆಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಈ ಅಭಿಪ್ರಾಯನ್ನು ಎಲ್ಲರೂ ಒಪ್ಪಕೊಂಡಿದ್ದಾರೆ. ಆದರೂ ಬೇರೆ ದೇಶಗಳ ನಾಟಕದ ಹುಟ್ಟು ಬೆಳವಣಿಗೆಗಳ ಬಗ್ಗೆ ಇನ್ನೂ ಆಳವಾದ, ದೀರ್ಘವಾದ, ಆಧಾರಿತವಾದ ಅಭ್ಯಾಸ ಆಗದ ಹೊರತು ಏನನ್ನೂ ಖಚಿತವಾಗಿ ಹೇಳಲುಬಾರದು.

ಮಾನವನ ಸ್ವಭಾವದ, ಸಮಾಜದ ಮತ್ತು ಅನುಭವ ವಿಚಾರಗಳ ಚಿತ್ರವನ್ನು ರೂಪಿಸುವ ನಾಟಕದ ಹುಟ್ಟಿನ ಬಗ್ಗೆ ನಿಶ್ಚಿತ ಇಲ್ಲವೆ ಏಕಮಾತ್ರ ಅಭಿಪ್ರಾಯವಿಲ್ಲದಿದ್ದರೂ ಅದರ ಬೆಳವಣಿಗೆಯ ಬಗ್ಗೆ ಹೆಚ್ಚಿನ ಅಭ್ಯಾಸ ಅಗತ್ಯವಿದ್ದರೂ ಸ್ಪಷ್ಟವಾದ ಚರಿತ್ರೆ ಇದೆ. ನಾಟಕವೆಂದಾಗ ಸಂಭಾಷಣೆಯ, ಎಂದರೆ ಭಾಷೆಯ ಮಾಧ್ಯಮವಾದ ನಾಟಕದ ಕಲ್ಪನೆಯೆ ಸಾಮಾನ್ಯವಾಗಿದ್ದರೂ ನಾಟಕಕ್ಕೆ ಅದೊಂದೆ ರೂಪ ಉಳಿದಿಲ್ಲ. ನಾಟಕದ ವೈಶಿಷ್ಟ್ಯವೆಂದರೆ ಕಣ್ಣು, ಕಿವಿ ಎರಡರಿಂದಲೂ ಏಕಕಾಲಕ್ಕೆ ಅನುಭವಿಸಬಹುದಾದ ಒಂದು ರೂಪಕತೆ. ಇದನ್ನು ಸಂಭಾಷಣೆಯಿಂದಲೇ ರೂಪಿಸಬೇಕೆಂದೇನಿಲ್ಲ. ಇಲ್ಲವೇ ನಟನಟಿಯರಿಂದಲೇ ರೂಪಿಸಬೇಕೆಂಬುದೂ ಇಲ್ಲ. ಮೊದಲನೆಯದಾಗಿ ಪೂರ್ತಿ ಗೀತದಿಂದಲೇ ಕತೆಯನ್ನು ನಟಿಸಲು ಶಕ್ಯವಿದೆ; ಪಾಶ್ಚಾತ್ಯ ದೇಶದಲ್ಲಿ ಈ ಪ್ರಕಾರ ಹೆಚ್ಚಾಗಿ ಬೆಳೆದುಬಂದಿದೆ; ಇದಕ್ಕೆ ಅಪೆರಾ ಎನ್ನುವರು. ಅಥವಾ ಪೂರ್ತಿಯಾಗಿ ನೃತ್ಯರೂಪದಿಂದಲೇ ತೋರಿಸಲು ಶಕ್ಯವಿದೆ. ಪಾಶ್ಚಾತ್ಯ ದೇಶಗಳಲ್ಲಿ ಬ್ಯಾಲೆ ಎಂಬ ರೂಪದಲ್ಲಿ ನೃತ್ಯನಾಟಕ ಹೃದಯಂಗಮವಾಗಿ ಬೆಳೆದು ಬಂದಿದೆ. ಇವೆಲ್ಲಾ ರೂಪಗಳಲ್ಲಿ ನಟನಟಿಯರು ಪಾತ್ರ ವಹಿಸುವರು. ಆದರೆ ಮನುಷ್ಯರೇ ಪಾತ್ರವಹಿಸುವುದಗತ್ಯವಿಲ್ಲ ಎಂಬುದನ್ನು ಪಪೆಟ್ ಷೋ ಎಂದರೆ ಗೊಂಬೆಯಾಟದಲ್ಲಿ ಕಾಣಬಹುದು. ಪ್ರಾಚೀನ ಕಾಲದಿಂದಲೂ ಬಣ್ಣದ ಇಲ್ಲವೇ ವೇಷಭೂಷಣಗಳ ಗೊಂಬೆಗಳನ್ನು ಸೂತ್ರದಿಂದ ಆಡಿಸುತ್ತ ಹಿಂದಿನಿಂದ ಬೇರೊಂದು ವ್ಯಕ್ತಿ ಮಾತುಗೂಡಿಸುವುದು ಇಲ್ಲಿನ ಕಲೆ. ನಾಟಕ ತನ್ನ ಬೆಳವಣಿಗೆಯಲ್ಲಿ ಅನೇಕ ವಿಧಗಳನ್ನು ತಾಳಿದೆ. ನಟ- ನಟಿ ಗೊಂಬೆ ಮಾತು, ಹಾಡು, ಕುಣಿತ ಮೊದಲಾಗಿ ಪ್ರದರ್ಶನದ ಮಾಧ್ಯಮದ ದೃಷ್ಟಿಯಿಂದ ಕೆಲವು ರೂಪಗಳನ್ನು ತಾಳಿದರೆ ಕತೆಯ ಬೆಳವಣಿಗೆಯ ದೃಷ್ಟಿಯಿಂದ ಇನ್ನೂ ಬೇರೆ ರೂಪಗಳನ್ನು ತಾಳಿದೆ. ಪ್ರಾಚೀನ ಗ್ರೀಕ್ ನಾಟಕಗಳಲ್ಲಿ ಶ್ರೇಷ್ಠನಾದ ಮನುಷ್ಯ ಸೃಷ್ಟಿಯ ಶಕ್ತಿಯೆದುರು ಹೋರಾಡಿ ಸೋಲುವ ಕತೆಗಳು ಗಂಭಿರ ನಾಟಕ (ಟ್ರ್ಯಾಜಿಡಿ) ಎನ್ನಿಸುತ್ತಿದ್ದವು. ದುಷ್ಟನಿಗೆ ಶಿಕ್ಷೆಯಾಗುವುದು ಬೇರೆ, ದುರಂತ ನಾಟಕದ ನಾಯಕನಿಗೆ ಶಿಕ್ಷೆಯಾಗುವುದು ಬೇರೆ. ಮೊದಲನೆಯದರಿಂದ ನಮಗೆ ಆನಂದವೆನ್ನಿಸಿದರೆ, ಎರಡನೆಯದರಿಂದ ನಮ್ಮಲ್ಲಿ ಕನಿಕರ ಮೂಡುವುದು; ಏಕೆಂದರೆ ಇಲ್ಲಿ ನಾಯಕ ದುಷ್ಟನಲ್ಲ, ದುರ್ದೈವಿ ಎನ್ನಬಹುದು. ಸೋಫೋಕ್ಲೀಸ್ ಎಂಬ ಗ್ರೀಕನಿಂದ ಷೇಕ್ಸ್‍ಪೀಯರನವರೆಗೂ ಟ್ರ್ಯಾಜಿಡಿಗಳ ಉತ್ತಮ ದೃಷ್ಟಾಂತಗಳನ್ನು ಕಾಣಬಹುದು.

ಟ್ರ್ಯಾಜಿಡಿಗೆ ಎದುರಾಗಿ ಕಾಮಿಡಿ (ಹರ್ಷ ನಾಟಕ). ಇದರಲ್ಲೂ ಅನೇಕ ವಿಧಗಳನ್ನು ಕಾಣಬಹುದು. ಗ್ರೀಕ್ ನಾಟಕಕಾರನಾದ ಅರಿಸ್ಟೋಫನೀಸ್ ಎಂಬವನ ಅಣಕ ವಿಡಂಬನೆಗಳಿಂದ ಷೇಕ್ಸ್‍ಪಿಯರ್‍ನ ಕಾಮಿಡಿಗಳವರೆಗೆ ಸುಖಾಂತ ವಿನೋದ ನಾಟಕಗಳಿವೆ. ಟ್ರ್ಯಾಜಿಡಿಯೇ ಆಗಲಿ ಕಾಮಿಡಿಯೇ ಆಗಲಿ ಕಟ್ಟುಕತೆಯನ್ನು ಅವಲಂಬಿಸಿರುತ್ತದೆ. ಈ ಸನ್ನಿವೇಶವನ್ನು ನಾಟಕಕಾರ ತನ್ನ ಕಲ್ಪನಾಶಕ್ತಿಯಿಂದ ಬೆಳೆಯಿಸಿಕೊಳ್ಳುವಾಗ ಪ್ರೇಕ್ಷಕರ ಮನಸ್ಸಿಗೆ ಅತ್ಯಂತ ರಂಜಕವಾಗುವಂತೆ ಪ್ರಯತ್ನಿಸುವುದು ಸಹಜ. ಇದಲ್ಲದೆ ಭಾಷೆಯಿಂದಲೂ ಪ್ರೇಕ್ಷಕರನ್ನು ಪ್ರಭಾವಿತಗೊಳಿಸುವುದು ಅವನ ಇಚ್ಛೆ. ಇಂಥ ಕಾರಣಗಳಿಂದಾಗಿ ಅಲ್ಲಿಯ ಪಾತ್ರಗಳಂತೆ ಅಲ್ಲಿಯ ಸಂದರ್ಭ ಸನ್ನಿವೇಶಗಳೂ ಕಲ್ಪನಾರಮ್ಯವಾಗಿರುತ್ತಿದ್ದುವು. ಪಾಶ್ಚಾತ್ಯ ದೇಶಗಳಲ್ಲಿ ಈ ತರದ ನಾಟಕಗಳೇ ಕಳೆದ ಶತಮಾನದವರೆಗೆ ಜನಪ್ರಿಯವಾಗಿದ್ದುವು. ತಾತ್ಕಾಲಿಕ ಸಮಾಜವನ್ನು ಕುರಿತು ಇಂಗ್ಲೆಂಡಿನ ಷೆರಿಡನ್ ಫ್ರಾನ್ಸಿಸ್ ಮೋಲ್ಯೇರ್ ಮೊದಲಾದವರು ಹೊಸ ದೃಷ್ಟಿಯಿಂದ ಬರೆದರೂ ಇಲ್ಲಿಯೂ ಅತಿಶಯೋಕ್ತಿಯ ಕಲ್ಪಕತೆ ಇರುತ್ತಿತ್ತು.

19ನೆಯ ಶತಕದ ಕೊನೆಯ ಸುಮಾರಿಗೆ ನಾರ್ವೆಯ ಇಬ್ಸನ್ ಎಂಬಾತ ಯೂರೋಪಿನ ರಂಗಭೂಮಿಯಲ್ಲಿ ಕ್ರಾಂತಿಯನ್ನುಂಟು ಮಾಡಿದ. ಇಂಗ್ಲೆಂಡಿನ ಹೆಸರಾಂತ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಇದೇ ಪ್ರಭಾವದಲ್ಲಿ ನಾಟಕಗಳನ್ನು ಬರೆದ; ಅಮೇರಿಕಾದಲ್ಲಿ ಯುಜೀನ್ ಓನೀಲ್ ಎಂಬಾತನು ಇದೇ ಶೈಲಿಯನ್ನು ಮುಂದುವರಿಸಿದ.

ಇಂದು ಯೂರೋಪಿನಲ್ಲಿ ಈ ವಿಧದ ನಾಟಕದ ಪ್ರಭಾವ ಕಡಿಮೆಯಾಗುತ್ತಲಿದೆ. ವಾಸ್ತವಿಕತೆ ಎಂದರೆ ಸಹಜತೆ ಅಲ್ಲ; ಎಷ್ಟಾದರೂ ನಾಟಕವೆಂಬುದು ಅಸಹಜ. ಆದ್ದರಿಂದ ನಾಟಕದ ಉದ್ದೇಶ ಬರಿಯ ಸಂಧರ್ಭಚಿತ್ರಣವಲ್ಲ; ಪ್ರೇಕ್ಷಕರ ಅಂತರಂಗದೊಳಗಿನ ಭಾವನೆಗಳನ್ನು ಹೊಡೆದೆಬ್ಬಿಸುವುದು; ಅದನ್ನು ಕಾವ್ಯಶೈಲಿಯಲ್ಲಿಯೇ ಸಮರ್ಪಕವಾಗಿ ಮಾಡಬಹುದು ಎಂಬ ಕೆಲವರು ಇಂಗ್ಲೆಂಡಿನ ಟಿ. ಎಸ್. ಇಲಿಯಟ್ಟನ ಪ್ರಭಾವದಲ್ಲಿ ಕಾವ್ಯನಾಟಕಗಳನ್ನು ಬರೆಯುತ್ತಿದ್ದಾರೆ. ವಾಸ್ತವಿಕತೆ ಎಂದರೆ ಸಹಜತೆಯಲ್ಲ ಎಂಬುದನ್ನೊಪ್ಪಿ ಇನ್ನು ಕೆಲವರು ನಾಟಕದಲ್ಲಿ ಸಹಜತೆಯೆ ಅಗತ್ಯ ಎಂಬ ಹಟದಿಂದ ಪ್ರೇಕ್ಷಕರು ಒಪ್ಪಲಿ ಒಪ್ಪದಿರಲಿ-ತೀರ ಸಹಜವೆನ್ನಿಸುವಂಥ ಪಾತ್ರ, ಶೈಲಿ ರಂಗಸಂವಿಧಾನಗಳನ್ನು ಬಳಸುತ್ತಿದ್ದಾರೆ; ಆರ್ತರ್ ಮಿಲರ್, ಟೆನೆಸಿ ವಿಲಿಯಮ್ಸ್‍ರಂಥ ಕೆಲವರು ಈ ಎರಡೂ ವಿಧಗಳ ಮಿಶ್ರಣ ಶೈಲಿಯೊಂದನ್ನು ಬಳಸುತ್ತಿದ್ದಾರೆ. ಅಂತೂ ನಾಟಕದ ಬಗ್ಗೆ ಕೊನೆಯ ಮಾತನ್ನು ಹೇಳುವ ಕಾಲ ಇನ್ನೂ ಒದಗಿಲ್ಲ ಎಂಬುದು ಸ್ಪಷ್ಟವಿದೆ. (ಕೆ.ಆರ್.ಎ.ಎನ್.)

ಇಷ್ಟು ನಾಟಕದ ಬಗೆಗಿನ ಸಮಾಲೋಕನವಾಯಿತು. ಇನ್ನು ಮುಂದೆ 1. ಗಂಭೀರ ನಾಟಕ 2. ಹರ್ಷನಾಟಕ 3. ನೀತಿ ನಾಟಕ 4. ಪ್ರಹಸನ 5. ಮತಸಂಸ್ಕಾರ ನಾಟಕ 6. ವಾಸ್ತವಿಕ ನಾಟಕ 7. ಬೋಧಕ ನಾಟಕ 8. ಪವಾಡ ನಾಟಕ 9. ಅಭಿವ್ಯಕ್ತಿ ಪಂಥದ ನಾಟಕ 10. ಫೌಜುನಾಟಕ 11. ಸಾಂಘಿಕ ವಿನೋದ ನಾಟಕ 12. ಮೂಕನಾಟಕ 13. ಹಗುರ ನಾಟಕ 14. ಸುಸಂಘಟಿತ ನಾಟಕ 15. ದಾರುಣ ಸಂಕಟದ ನಾಟಕ 16. ರೌದ್ರ ನಾಟಕ 17. ರೇಡಿಯೋ ನಾಟಕ 18. ದಶರೂಪಕಗಳು-ಹೀಗೆ ಹದಿನೆಂಟು ಭಾಗಗಳಲ್ಲಿ ನಾಟಕ ಪ್ರಕಾರದ ಮುಖ್ಯ ವಿಭಾಗಗಳನ್ನು ಪರಿಚಯ ಮಾಡಿಕೊಟ್ಟಿದೆ. ಗಂಭೀರ ನಾಟಕ: ನಾಟಕದ ನಾಯಕನ ಸಂಕಟ, ಅನೇಕ ವೇಳೆ ಸಾವು ಮುಂತಾಗಿ ದುಃಖವನ್ನು ಕೆರಳಿಸುವಂಥ ನಾಟಕಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೀಷಿನಲ್ಲಿದು ಟ್ರ್ಯಾಜಿಡಿ. ಟ್ರ್ಯಾಜಿಡಿ ಎಂಬುದು ಕಾಮಿಡಿ ಎಂಬ ಪ್ರಕಾರಕ್ಕೆ ವಿರುದ್ದವಾದ್ದು. ಟ್ರ್ಯಾಜಿಡಿಯ ಮೂಲ ಗ್ರೀಕರ ಧಾರ್ಮಿಕ ಆಚರಣೆಯಲ್ಲಿದೆ. ಆದರೆ ನಾಟಕಕಾರರಾಗಿ ಖ್ಯಾತರಾಗಿರುವ ಈಸ್ಕಿಲಸ್ ಸೊಫೋಕ್ಲೀಸ್ ಮತ್ತು ಯುರೋಪೀಡಿಸರ ನಾಟಕಗಳು ಧಾರ್ಮಿಕ ಮೂಲದವಲ್ಲ. ಅವುಗಳಲ್ಲಿ ಖ್ಯಾತ ಪೌರಾಣಿಕ ವಿಷಯಗಳಿವೆ. ಸಾಹಿತ್ಯಾಂಶ ವಿಪುಲವಾಗಿದೆ. ಹದಿನೇಳನೆಯ ಶತಮಾನದ ಫ್ರಾನ್ಸಿನಲ್ಲಿ ಹುಟ್ಟಿದ ಟ್ರಾಜಿಡಿ ಅಭಿಜಾತ ಗಂಭೀರ ನಾಟಕದ ಎಲ್ಲ ನಿಯಮಗಳನ್ನೂ ಪಾಲಿಸುತ್ತಿತ್ತು. ಕಾಲ, ದೇಶ ಮತ್ತು ಕ್ರಿಯೆಗಳ ಐಕ್ಯವನ್ನಂತು ಚಾಚೂ ತಪ್ಪದೆ ಪಾಲಿಸುತ್ತಿತ್ತು. ಇದನ್ನು ರಾಸೀನ್ ಎಂಬ ಕಾರ್ನೀಲರ ನಾಟಕಗಳಲ್ಲಿ ಕಾಣಬಹುದು. ಅಭಿಜಾತ ಗಂಭೀರ ನಾಟಕದ ಕಟ್ಟುನಿಟ್ಟಾದ ನಿಯಮಗಳನ್ನು ಮುರಿದವ ಷೇಕ್ಸ್‍ಪಿಯರ್. ಈಗ ಟ್ರ್ಯಾಜಿಡಿ ತನ್ನ ಅಭಿಜಾತ ರೂಪವನ್ನು ಕಳೆದುಕೊಂಡಿದೆ. ಇಬ್ಸನ್ನನ ಗಂಭೀರ ನಾಟಕಗಳ ವಸ್ತು ಸಾಮಾಜಿಕ ಇಲ್ಲವೇ ರಾಜಕೀಯ. ಚೆಕಾಫ್, ಸ್ಟ್ರಿಂಡ್‍ಬರ್ಗ್, ಸಿಂಗ್, ಯೂಜಿನ್, ಓನೀಲ್ ಮತ್ತು ಮ್ಯಾಕ್ಸ್‍ವೆಲ್ ಆ್ಯಂಡರ್‍ಸನ್ ಮೊದಲಾದವರು ಇಂದಿನ ಖ್ಯಾತ ಗಂಭೀರ ನಾಟಕಕಾರರು. * ಹರ್ಷನಾಟಕ: ಸುಖ ಸಂತೋಷ ಪ್ರಣಯ ವಿನೋದಗಳಿಂದ ಕೂಡಿದ ನಾಟಕ. ಇಂಗ್ಲೀಷಿನಲ್ಲಿ ಕಾಮಿಡಿ ಎನ್ನುತ್ತಾರೆ. ಯೂರೋಪಿನ ಹರ್ಷನಾಟಕಕ್ಕೆ ಪ್ರೇರಕವಾದ್ದು ಗ್ರೀಕರ ಮೇಳ ಗೀತಗಳು, ಮೇಳಕುಣಿತಗಳು. ಡೈಯನೈಸಸ್ ದೇವತೆಯ ವಾರ್ಷಿಕ ಜಾತ್ರೆಯಲ್ಲಿ ಗ್ರೀಕರು ಇಂಥÀ ವಿನೋದ ಪ್ರದರ್ಶನ ನಡೆಸುತ್ತಿದ್ದರು. ಹಳೆಯ ಕಾಮಿಡಿಗೆ ಖ್ಯಾತನಾದವ ಅರಿಸ್ಟೋಫೆನಿಸ್. ಹೊಸ ಕಾಮಿಡಿಗೆ ಖ್ಯಾತನಾದವ ಮಿನ್ಯಾಂಡರ್. ಇವನನ್ನು ಪ್ಲಾಟಸ್ ಮತ್ತು ಟೆರನ್ಸ್ ಅನುಕರಣೆ ಮಾಡಿದರು. ಇಂಗ್ಲೇಂಡಿನಲ್ಲಿ ದೊಡ್ಡ ನಾಟಕದ ನಡುವಣ ಉಪನಾಟಕವಾಗಿ ಕಾಮಿಡಿ ಜನ್ಮತಾಳಿತು. ಅನಂತರ ಅದು 16 ನೆಯ ಶತಮಾನದ ಹೊತ್ತಿಗೆ ಲ್ಯಾಟಿನ್ ಅಭಿಜಾತ ಕಾಮಿಡಿಗಳ ಮಾದರಿಯಲ್ಲಿ ಬೆಳೆಯಿತು. ರೊಮ್ಯಾಂಟಿಕ್ ಕಾಮಿಡಿ ಪರಾಕಾಷ್ಠೆಗೆ ತಲುಪಿದ್ದು ಷೇಕ್ಸ್‍ಪಿಯರ್ ಮಹಾಕವಿಯಿಂದ. ಫ್ರಾನ್ಸಿನಲ್ಲಿ ಮೊಲ್ಯೇರ್ ಕಾಮಿಡಿಯನ್ನು ಬೆಳೆಸಿದ. ಇಂಗ್ಲೀಷ್ ರೆಸ್ಟೋರೆಷನ್ ಕಾಮಿಡಿಯನ್ನು ಬೆಳೆಸಿದವರು ಕಾಂಗ್ರೀವ್ ವಿಚರ್ಲಿ ಮತ್ತು ಇತರರು. ಅನಂತರ 18ನೆಯ ಶತಮಾನದಲ್ಲಿ ಗೋಲ್ಡ್‍ಸ್ಮಿತ್ ಮತ್ತು ಷೆರಿಡನ್ನರ ವ್ಯಂಗ್ಯ ಪ್ರಧಾನವಾದ ಕಾಮಿಡಿಗಳು ಬಂದವು. ಅಸ್ಕರ್ ವೈಲ್ಡ್ ಕೆಲವು ಖ್ಯಾತ ಕಾಇಡಿಗಳನ್ನು ರಚಿಸಿದ. ಆಧುನಿಕ ಕಾಮಿಡಿಯಲ್ಲಿ ಹೆಸರಾದವರು ಪಿನೇರೊ, ಜಿ.ಬಿ.ಷಾ, ಸಾಮರ್‍ಸೆಟ್ ಮಾಮ್ ಮತ್ತು ನೋಯೆಲ್ ಕವರ್ಡ್. * ನೀತಿನಾಟಕ : ಈ ಬಗೆಯ ನಾಟಕಗಳು (ಮೊರಾಲಿಟಿ ಪ್ಲೇಸ್) ಪ್ರಾಯಶಃ ಪವಾಡ ನಾಟಕಗಳಿಂದ (ಮಿರಕಲ್ ಮತ್ತು ಮಿಸ್ಟರಿ ನಾಟಕಗಳು) ವಿಕಾಸಗೊಂಡಿರಬಹುದೆಂದು ವಿಮರ್ಶಕರ ಅಭಿಪ್ರಾಯ. ಲೌಕಿಕ ಜೀವನದಲ್ಲಿ ಕಾಣುವ ಮಾನವ ವರ್ತನೆಯನ್ನು ಚಿತ್ರಿಸುವ ಈ ನಾಟಕಗಳು 15 ಶತಮಾನದಲ್ಲಿ ಚಾಲತಿಯಲ್ಲಿದ್ದವು. ಮಾನವನ ಪ್ರವೃತ್ತಿಗಳೂ ಕರ್ತವ್ಯಗಳೂ ಆಸಕ್ತಿಗಳೂ ಅವನ ಸದ್ಗುಣ ದುರ್ಗುಣಗಳೂ ರಂಗಭೂಮಿಯ ಮೇಲೆ ನಟರಂತೆ ಮೂರ್ತಿಮತ್ತಾಗಿ ಈ ಬಗೆಯ ನಾಟಕಗಳಲ್ಲಿ ಕಾಣಿಸಿಕೊಳ್ಳುವುವು.

   ನೀತಿ ನಾಟಕಗಳಲ್ಲಿ ಆಗಾಗ ಬರುವ ವಿಶಿಷ್ಟ ದೃಶ್ಯವೆಂದರೆ, ಮಾನವನ ಆತ್ಮವನ್ನು ತಮ್ಮ ಸ್ವಾಧೀನ ಮಾಡಿಕೊಳ್ಳಲು ಸದ್ಗುಣ ದುರ್ಗುಣಗಳ ನಡುವೆ ನಡೆಯುವ ಚುರುಕಾದ ಕದನಗಳು; ಮೃತ್ಯವಿನಿಂದ ಕರೆಬಂದಾಗ ಮಾನವ ತಾನು ನರಕಕ್ಕೆ ಹೋಗಲು ಯೋಗ್ಯನೋ, ಸ್ವರ್ಗಯೋಗ್ಯನೋ ಎಂದು ತನ್ನ ಅಂತರಾಳವನ್ನು ಪರಿಶೋಧಿಸಿಕೊಳ್ಳುವುದು- ಮುಂತಾದ ದೃಶ್ಯಗಳು. ಕಾಲಕ್ರಮೇಣ ನೀತಿನಾಟಕ ತನ್ನ ಸರಳತೆಯನ್ನು ಕಳೆದುಕೊಂಡು ಸಂಕೀರ್ಣ ರೂಪತಾಳಿತು. ದಿ ಕ್ಯಾಸೆಲ್ ಆಫ್ ಪರ್ಸಿವರೆನ್ಸ್(ಸತತ ಪ್ರಯತ್ನವೆಂಬ ಕೋಟೆ ) ಎಂಬ ನೀತಿ ನಾಟಕದಲ್ಲಿ 34 ಪಾತ್ರಗಳಿವೆ. ಈ ನಾಟಕದ ಮುಖ್ಯ ಪಾತ್ರ- ಮ್ಯಾನ್‍ಕೈಂಡ್ (ಮಾನವ ವರ್ಗ ಎಂಬಾತ) ಸಪ್ತ ದುವ್ಯಸನಗಳು (ಸವೆನ್ ಡೆಡ್ಲಿ ಸೀನ್ಸ್) ಎಂಬ ದುಷ್ಟರೊಡನೆ ಈತ ಸ್ನೇಹ ಬೆಳೆÉಸಿ ಪ್ರಾಪಂಚಿಕ ಸುಖ (ವರ್ಡ್‍ಲಿ ಪ್ಲೆಜರ್) ಎಂಬವುಗಳಲ್ಲಿ ಅನುರಕ್ತನಾಗಿ ಅವಳನ್ನು ಹಿಂಬಾಲಿಸುತ್ತಾನೆ. ದಾರಿಯಲ್ಲಿ ಪಶ್ಚಾತ್ತಾಪನೆಂಬ ವ್ಯಕ್ತಿ ಮಾನವವರ್ಗವನ್ನು ರಕ್ಷಿಸಿ ಸತತ ಪ್ರಯತ್ನವೆಂಬ ದುರ್ಗಕ್ಕೆ ತಂದುಬಿಡುತ್ತಾನೆ. ಅನಂತರ ಮಾನವ ವರ್ಗದ ದುಷ್ಟ ಸ್ನೇಹಿತರು ಆ ದುರ್ಗದ ಮೇಲೆ ಹಲ್ಲೆ ನಡೆಸುತ್ತಾರೆ. ಅವನಿಗೆ ಮೃತ್ಯುವಿನ ಕರೆ ಬರುತ್ತದೆ. ಕೊನೆಯಲ್ಲಿ ಅವನಿಗೆ ದಯೆಯೆಂಬ ದಿವ್ಯವ್ಯಕ್ತಿಯ ದರ್ಶನವಾಗಿ ದೇವವಾಣಿ ಬಂದು ಅವನನ್ನು ಹರಸುವ ದೃಶ್ಯದಲ್ಲಿ ನಾಟಕ ಅಂತ್ಯವಾಗುತ್ತದೆ.
   ನೀತಿನಾಟಕಗಳಲ್ಲಿ ಅತ್ಯುತ್ತಮ ಹಾಗೂ ಸರಳವಾದುದೆಂದು ಹೇಳಲಾದ ಕೃತಿ- ಎವೆರಿ ಮ್ಯಾನ್ (ಪ್ರತಿಯೊಬ್ಬ ಮನುಷ್ಯ) ಎಂಬುದು. ಇದು ಏಲ್ಕರ್ ಲೆಜ್ ಎಂಬ ಡಚ್ ಮೂಲಕೃತಿಯ ಅನುವಾದ ಅಥವಾ ಅದರ ಮೂಲಕೃತಿ ಆಗಿರಬೇಕೆಂದು ಹೇಳುತ್ತಾರೆ. ತೀರ್ಥಯಾತ್ರೆಗೆಂದು ನಾಟಕದ ನಾಯಕನಾದ ಮಾನವನನ್ನು ಕರೆತರಲು ದೇವರು ಮೃತ್ಯುವನ್ನು ಕಳಿಸುತ್ತಾನೆ. ಮೃತ್ಯು ಮಾನವನನ್ನು ಸಂಧಿಸಿ, ` ಮಾನವ, ನಿಲ್ಲು ಸುಮ್ಮನೆ, ಇಷ್ಟೊಂದು ಉಲ್ಲಾಸದಿಂದ ಎಲ್ಲಿಗೆ ಹೋಗುತ್ತಿರುವೆ ? ಸೃಷ್ಟಿಕರ್ತನನ್ನು ಮರೆತುಬಿಟ್ಟೆಯಾ? ಎಂದು ಕೇಳುತ್ತದೆ. ಭಯಂಕರವಾದ ಈ ಮರಣಯಾತ್ರೆಗೆ ಹೆದರಿದ ಮಾನವ ತನ್ನ ಸಂಗಡ ಬರಬೇಕೆಂದು ಸಕಲ ಸದ್ಗುಣಗಳನ್ನು ಕೇಳುತ್ತಾನೆ. ಅವು ನಿರಾಕರಿಸುತ್ತವೆ. ಮಾನವನ ಪುಣ್ಯಕ್ರಿಯೆ ಅವನೊಡನ್ ಬರಲಿಚ್ಛಿಸುತ್ತಾಳೆ. ಆದರೆ ಅವಳಿಗೆ ನಿಲ್ಲುವಷ್ಟೂ ತ್ರಾಣವಿಲ್ಲ. ಮಾನವ ಪಶ್ಚಾತ್ತಾಪದ ತಪ್ಪೊಪ್ಪಿಗೆಯನ್ನು ಸಂದರ್ಶಿಸಿದಾಗ ಅವನ ಪುಣ್ಯಕ್ರಿಯೆಗೆ ಚೇತನ ಮೂಡಿ, ಕೊನೆಯಲ್ಲಿ ಅವಳೊಡನೆ ಜ್ಞಾನ, ಸೌಂದರ್ಯ, ಶಕ್ತಿ, ವಿವೇಚನೆ, ಪಂಚಕುಶಲೋಪಾಯಗಳು ಎಲ್ಲವೂ ಮಾನವನೊಡನೆ ಪ್ರಯಾಣ ಹೊರಡುತ್ತವೆ. ಜ್ಞಾನ ಮತ್ತು ಪುಣ್ಯಕ್ರಿಯೆ ಕಡೆಯವರೆಗೂ ಅವನ ಕೈಬಿಡದೆ ಬೆಂಗಾವಲಾಗಿ ನಡೆಯುತ್ತವೆ. ಕಟ್ಟಕಡೆಯಲ್ಲಿ ಸಾವಿನಂಚಿನಲ್ಲಿ ಜ್ಞಾನವೂ ಸಹ ಅವನಿಂದ ಬೇರ್ಪಟ್ಟಾಗ ಜ್ಞಾನ ಹೀಗೆ ಹೇಳುತ್ತದೆ:
                    ನಮ್ಮೆಲ್ಲರ ಒಳ್ಳೆಯದಕ್ಕೆ ಅವನು ಸಂಕಟಪಡಬೇಕಾಯಿತು.
                    ಮನುಷ್ಯ ತಾನು ಮಾಡಿದ ಪುಣ್ಯಕರ್ಮಗಳಿಂದ ರಕ್ಷಣೆ ಪಡೆಯುತ್ತಾನೆ.
                    ಈಗ ಆತ ಸಾಯುತ್ತಿದ್ದಾನೆ. ಆದರೆ ಪಶ್ಚಾತ್ತಾಪದಿಂದ ಬೆಂದಿರುವ
                    ಅವನಿಗೆ ದೇವರ ದಯೆ, ರಕ್ಷಣೆ ಖಂಡಿತ.    
   ಆ ಕಾಲದ ಲೋಕಸಹಜವಾದ ಈ ನಂಬಿಕೆಗೆ ನೀತಿನಾಟಕ ಹೀಗೆ ಅನ್ಯಾರ್ಥ ದ್ಯೋತಕವಾದ ರೂಪ ಕೊಡುತ್ತದೆ. ಅಮೂರ್ತವಾದ ಭಾವನೆಗಳೇ ಪಾತ್ರಗಳಾಗುತ್ತವೆ. ಈ ಪಾತ್ರಗಳಾಡುವ ಮಾತಿನಲ್ಲಿ ವೈವಿಧ್ಯವಿದೆ. ಜೀವಸ್ಪಂದನವಿದೆ. ಒಮ್ಮೊಮ್ಮೆ ಚಿತ್ತಾಕರ್ಷಕ ಮೋಹಕತೆಯಿದೆ. ಕಾವ್ಯಶೈಲಿ ಒರಟಾದರೂ ಶಕ್ತಿಯುತವಾಗಿದೆ. ನಾಟಕದ ವಸ್ತು, ಸನ್ನಿವೇಶಗಳು ಸ್ವಾರಸ್ಯವಾಗಿದೆ. ಮೇಲೆ ಹೇಳಿದ ನೀತಿನಾಟಕ, ನಾನಾಭಾಷೆಗಳಿಗೆ ಅನುವಾದವಾಗಿ, ಆಧುನಿಕ ನಾಟಕಕಾರರಿಗೆ ಹೊಸ ದಾರಿ ತೋರಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ನಾಟಕಗಳು ಇಂಗ್ಲಿಷ್ ನಾಟಕದ ಮೂಲ ಇತಿಹಾಸದ ಮೇಲೆ ಸಾಕಷ್ಟು ಬೆಳಕು ಚೆಲ್ಲಿವೆ.
   ಪ್ರಹಸನ: ಇದೊಂದು ತರದ ಕೆಳದರ್ಜೆಯ ವಿನೋದ ನಾಟಕ (ಫಾರ್ಸ್). ಅಂಗಚೇಷ್ಟೆ ಕಮಂಗಿಯಾಟ ಅಸಂಬದ್ಧ ಸನ್ನಿವೇಶ ಹಾಗೂ ಘಟನೆಗಳಿಂದ ನಗೆಯನ್ನುಂಟುಮಾಡುವುದೇ ಇದರ ಉದ್ದೇಶ. ವಿನೋದ ನಾಟಕದಲ್ಲಿ ಹಲವು ವೇಳೆ ಪ್ರಹಸನವೂ ಬೆರೆತಿರುತ್ತದೆ. ಇದನ್ನು ನಾವು ಷೇಕ್ಸ್‍ಪಿಯರ್‍ನ ರಮ್ಯ ವಿನೋದನಾಟಕಗಳಲ್ಲಿ (ರೋಮ್ಯಾಂಟಿಕ್ ಕಾಮಿಡಿ) ಕಾಣಬಹುದು. ಪ್ರಹಸನಕ್ಕೆ ಕಾಲದೇಶಗಳ ನಿರ್ಬಂಧವಿಲ್ಲ. ಉತ್ತಮ ತರದ ವಿನೋದ ನಾಟಕಕ್ಕೆ (ಕಾಮಿಡಿ) ಬೇಕಾದ ಸೂಕ್ಷ್ಮಪಾತ್ರ ಸೃಷ್ಟಿ, ವಸ್ತುವಿನ್ಯಾಸಗಳು ಪ್ರಹಸನದಲ್ಲಿರುವುದಿಲ್ಲ. ಇಂಥ ನಾಟಕಗಳಲ್ಲಿನ ವಸ್ತು ಸೂಕ್ಷ್ಮವಾದಂತೆ ಅದರ ಪ್ರೇಕ್ಷಕರೂ ವಿರಳವಾಗುತ್ತಾರೆ. ಅಂಗವಿಕ್ಷೇಪದ ಬದಲು ಮಾತುಗಳಿಗೂ ಪಾತ್ರಗಳಿಗೂ ಪ್ರಾಧಾನ್ಯ ದೊರೆತರೆ, ಅವಿಚಾರವಾದ ಹುಚ್ಚುನಗೆ ಕಡಿಮೆಯಾಗಿ ತಿಳಿಯಾದ ನವುರಾದ ಹಾಸ್ಯ ಉದ್ಭವಿಸುತ್ತದೆ.
   ಫಾರ್ಸ್ ಎಂದರೆ ಅಡಜಿ ತುಂಬಿಸು ತುರುಕು ಎಂದರ್ಥ. ಮಧ್ಯಯುಗದ ಚರ್ಚಿನ ವ್ರತ ಹಾಗೂ ಪ್ರಾರ್ಥನಾ ವಿಧಿಯಾಳಕ್ಕೆ ಹೊಸದಾಗಿ ತುರುಕಿದ ಪ್ರಕ್ಷಿಪ್ತ ಪ್ರಸಂಗಗಳಿಗೆ ಮೊಟ್ಟಮೊದಲು ಈ ಹೆಸರು ಬಂತು. ಕೆಲವು ಕಾಲದ ಮೇಲೆ ಚರ್ಚಿನಲ್ಲಿ ಅಭಿನಯಿಸಲಾಗುತ್ತಿದ್ದ ಪವಾಡ ನಾಟಕಗಳಿಗೆ (ಮೊರಾಲಿಟಿ ಪ್ಲೇಸ್) ಸೇರಿಸಿದ ವಿಕಟ ಹಾಸ್ಯದ ದೃಶ್ಯಗಳನ್ನು ಈ ಹೆಸರಿನಿಂದ ಕರೆದರು. 16ನೆಯ ಶತಮಾನದಲ್ಲಿ ಪ್ಯೂರಿಟನ್ನರು ಪವಾಡನಾಟಕಗಳನ್ನು ಹತ್ತಿಕ್ಕಿದಾಗ ಪ್ರಹಸನಗಳೂ ವಿಕಟಹಾಸ್ಯದ ಪ್ರಸಂಗಗಳೂ ಸಣ್ಣ ನಕಲಿ ದೃಶ್ಯಗಳಾಗಿ ಗಂಭೀರ ನಾಟಕದೊಳಕ್ಕೆ ( ಟ್ರ್ಯಾಜಿಡಿ) ಸೇರಿಕೊಂಡವು.
   1800ರಿಂದ ಈಚೆಗೆ ಮುಖ್ಯನಾಟಕ ಮುಗಿದ ಮೇಲೆ ಅಭಿನಯಿಸುತ್ತಿದ್ದ ಸಣ್ಣ ದೃಶ್ಯಗಳನ್ನು ಫಾರ್ಸ್‍ಗಳೆಂದು ಕರೆದರು. 19ನೆಯ ಶತಮಾನದಲ್ಲಿ ನಾಟಕದ ಪರಿಭಾಷೆಯಲ್ಲುಂಟಾದ ಗೊಂದಲದಿಂದ ಪಾರ್ಸ್ ಎಂಬ ಪದದ ಅರ್ಥ ವಾದ್‍ವಿಲ್ (ಹಗುರು ನಾಟಕ) ಪ್ಯಾಂಟೊಮೈಮ್ (ಮೂಕಾಭಿನಯ) ಬರ್ಲೆಸ್ಕ್ (ಹುಚ್ಚು ಪ್ರಹಸನ)- ಇವುಗಳೊಡನೆ ಮಿಶ್ರವಾಯಿತು.
   ಪ್ರಹಸನವನ್ನು ರಚಿಸುವವರು ನಕಲಿಕಾರರ ಹುಚ್ಚಾಟ, ವಿಚಿತ್ರವೇಷ, ಅಂಗಚೇಷ್ಟೆಗಳಿಗೇ ಹೆಚ್ಚು ಗಮನವಿತ್ತಿರುವಂತೆ ಕಾಣುತ್ತದೆ. ವಕ್ರೋಕ್ತಿ ಪರೋಕ್ಷ ಸೂಚನೆಗಳಿಂದ (ಇನುಯೆಂಡೋ) ಕೂಡಿದ ಸಂಭಾಷಣೆಯನ್ನು ಸೇರಿಸಿದಾಗ ಪ್ರಹಸನದ ಸ್ವಾರಸ್ಯ ಹೆಚ್ಚುತ್ತದೆ. 19ನೆಯ ಮತ್ತು 20ನೆಯ ಶತಮಾನಗಳಲ್ಲಿ ಪ್ರಹಸನವೆಂದರೆ ಅಂಗಚೇಷ್ಟೆಯಿಂದ ಕೂಡಿದ ನಕಲಿನಾಟಕವೆಂದೇ ಅರ್ಥ ಬರುವಂತಾಯಿತು. ಪ್ರಹಸನದ ನಕಲಿ ಪ್ರಸಂಗಗಳನ್ನು ಮೂರು ಬಗೆಯಾಗಿ ವಿಂಗಡಿಸುತ್ತಾರೆ. 1. ಆತ್ಮಹತ್ಯಾ ರೀತಿ: ನಟ ತಾನು ಮಾಡುವ ನಕಲಿ ಅಥವಾ ಕೊಂಗಾಟಕ್ಕೆ ತಾನೇ ಬಲಿಯಾಗುವುದು. 2. ಭ್ರಾತೃಹತ್ಯಾ ರೀತಿ: ನಕಲಿಗಾರನ ಸಂಗಡಿಗ ಮೋಸದ ಬಲೆಗೆ ಸಿಕ್ಕುವುದು. 3. ಪರಹತ್ಯಾ ರೀತಿ: ನಕಲಿಗಾರನ ಸಂಗಡಿಗನ ಜೊತೆ ಪ್ರೇಕ್ಷಕರನ್ನು ಹಾಸ್ಯದ ಬಲೆಗೆ ಸಿಕ್ಕಿಸುವುದು.
   ಈ ತೆರನಾದ ಪ್ರಸಂಗಗಳನ್ನುಳ್ಳ ನಾಟಕಗಳು ಅಷ್ಟೊಂದು ಉತ್ತಮ ದರ್ಜೆಗೆ ಸೇರುವುದಿಲ್ಲ. ಪ್ರಹಸನಕ್ಕೂ ವಿನೋದ ನಾಟಕಕ್ಕೂ ಇರುವ ಅಂತರ ವಾನರನಿಗೂ ಮನುಷ್ಯನಿಗೂ ಇರುವಷ್ಟೇ ವಿಶಾಲವಾದುದು.
   ಮತಸಂಸ್ಕಾರ ನಾಟಕ: ಇದೊಂದು ವಿಶಿಷ್ಟ ರೀತಿಯ ಧಾರ್ಮಿಕ ನಾಟಕ. ಚರ್ಚಿನಲ್ಲಿ ನಡೆಯುವ ವ್ರತವಿಧಿಗಳಿಗೆ (ಸ್ಯಾಕ್ರಮೆಂಟ್) ಸಂಬಂಧವಾದ ಒಂದು ರೀತಿಯ ಸಾಂಕೇತಿಕ, ಏಕಾಂತ ನಾಟಕವಿದು (ಆಟೋಸ್ಯಾಕ್ರಮೆಂಟಲ್). ಕ್ರಿ.ಶ. 14ನೆಯ ಶತಮಾನದಿಂದ 17ನೆಯ ಶತಮಾನದವರೆಗೆ ಸ್ಪೇನಿನ ನಗರಗಳಲ್ಲಿದು ಚಾಲನೆಯಲ್ಲಿತ್ತು. ಇದನ್ನು ಕಾರ್ಪಸ್ ಕ್ರಿಸ್ಟಿ ಹಬ್ಬದ ದಿನ ಅಭಿನಯಿಸುತ್ತಿದ್ದರು. ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಹಾಗೂ ಅನ್ಯಾರ್ಥಸೂಚಕ (ಅಲಿಗಾರಿಕಲ್) ಕತೆಗಳನ್ನು ಅಳವಡಿಸಿಕೊಂಡು ಇಂಥ ಸಾಂಕೇತಿಕ ನಾಟಕಗಳನ್ನು ರಚಿಸುತ್ತಿದ್ದರು. ಈ ನಾಟಕದ ತನ್ನದೇ ಆದ ಸಂಪ್ರದಾಯವೆಂದರೆ ನಾಟಕದ ವಸ್ತು ಚರ್ಚಿತ ಮತ ಸಂಸ್ಕಾರ ಅಥವಾ ದಿವ್ಯಪ್ರಸಾದ (ಸ್ಯಾಕ್ರಮೆಂಟ್) ವ್ರತವನ್ನು ಸಾಂಕೇತಿಕವಾಗಿ ಸೂಚಿಸುವಂತಿರಬೇಕೆಂಬುದು. ಅಲ್ಲದೆ ದಿವ್ಯಪ್ರಸಾದ ವ್ರತದ ಶ್ಲಾಘನೆಯೊಡನೆ ನಾಟಕ ಮುಗಿಯಬೇಕು.
   ಸ್ಪೇನಿನ ಪ್ರಖ್ಯಾತ ನಾಟಕಕಾರನಾದ ಪೇಥ್ರೊ ಕಾಲ್ಡೆರೋನ್ ಎಂಬಾತ ಆಟೋಸ್ಯಾಕ್ರಮೆಂಟಟೀಸ್ ಎಂಬ ಈ ರೀತಿಯ 70ಕ್ಕೂ ಹೆಚ್ಚಿನ ನಾಟಕಗಳನ್ನು ರಚಿಸಿದ್ದಾನೆ.
   (ನೋಡಿ- ಕಾಲ್ಡೆರೋನ್,-(ಡೇ-ಲಾ-ಬಾರ್ಕಾ)-ಪೇಧ್ರೋ)
   ವಾಸ್ತವಿಕ ನಾಟಕ: ಹತ್ತೊಂಬತ್ತನೆಯ ಶತಮಾನದಲ್ಲಿ ರಚಿತವಾದ ಒಂದು ರೀತಿಯ ನಾಟಕ (ರಿಯಲಿಸ್ಟಿಕ್ ಡ್ರಾಮ). ಹದಿನೆಂಟನೆಯ ಶತಮಾನದಲ್ಲಿ ಉತ್ತರ ಭಾಗದಲ್ಲಿ ಅತಿಯಾದ ಜನಪ್ರಿಯತೆ ಗಳಿಸಿದ ಭಾವಾತಿರೇಕದ ನಾಟಕಗಳಿಗೆ ಪ್ರತಿಕ್ರಿಯೆಯಾಗಿ ವಾಸ್ತವಿಕತೆಯ ಚಳವಳಿಯೊಂದು ಪ್ರಾರಂಭವಾಯಿತು. ಎಷ್ಟೇ ಸಹಜವಾಗಿದ್ದರೂ ನಾಟಕವೂ ಅದರೊಳಗಿನ ಪಾತ್ರಗಳು ನಿತ್ಯಜೀವನದ ಘಟನೆಗಳಿಂದ ವ್ಯಕ್ತಿಗಳಿಂದ ವಿಭಿನ್ನವಾಗಿರುತ್ತವೆ. ಪಾತ್ರಗಳಾಡುವ ಮಾತುಗಳೂ ನಾಟಕದ ಘಟನೆಗಳಿಂದ ವ್ಯಕ್ತಿಗಳಿಂದ ವಿಭಿನ್ನವಾಗಿರುತ್ತವೆ. ಪಾತ್ರಗಳಾಡುವ ಮಾತುಗಳೂ ನಾಟಕದ ಘಟನಾವಳಿಗಳೂ ಉಜ್ವಲ ಹಾಗೂ ತ್ವರಿತಗತಿಯಿಂದ ಸಾಗುತ್ತವೆ. ಆದರೆ ನಿತ್ಯಜೀವನದ ಸಾಮಾನ್ಯ ಅನುಭವಕ್ಕೆ ಸಹವಾಗಿ ಹೊಂದಿಕೊಳ್ಳುವಂಥ ಕಥೆಯನ್ನೂ ಪಾತ್ರಗಳನ್ನೂ ರಚಿಸಿದರೆ ನಾಟಕದಲ್ಲಿ ಸಹಜತೆಯ ಭ್ರಮೆಯನ್ನು ಕಲ್ಪಿಸಬಹುದು. ಇದೇ ಈ ವಾಸ್ತವಿಕೆಯ ಚಳವಳಿಯ ಮುಖ್ಯ ತತ್ತ್ವಗಳು. ಷೇಕ್ಸ್‍ಪಿಯರ್ ಕಾಲದ ನಾಟಕಗಳು ಪ್ರೇಕ್ಷಕರ ವಿಭಾವನೆಯನ್ನು ಕೆರಳಿಸಿ ಅವರನ್ನು ದೂರದ ಅಲೌಕಿಕ ಪ್ರಪಂಚಕ್ಕೆ ಒಯ್ಯುತ್ತಿದ್ದವು. ಪ್ರೇಕ್ಷಕರು ಕಲ್ಪನೆಯ ಮೂಲಕ ತಾವೇ ಪಾತ್ರಗಳಾಗಬಲ್ಲ ತನ್ಮಯತೆಯನ್ನು ಸಾಧಿಸಿಕೊಂಡಿದ್ದರು. ಆದರೆ ಸಹಜತೆಯನ್ನು ಮೂಡಿಸುವ ಈ ನಾಟಕಗಳು ತೀರ ಬೇರೆಯಾದ ವಸ್ತುನಿಷ್ಠೆಯನ್ನು ಸಾಧಿಸಲು ಯತ್ನಿಸಿದವು.
   ಹೀಗೆ ನಿತ್ಯಜೀವನದ ವಾಸ್ತವಿಕತೆಯ ಕಲ್ಪನೆಯನ್ನು ನಾಟಕಕ್ಕೆ ಅಳವಡಿಸಿಕೊಂಡು ನಾರ್ವೆಯ ಇಬ್ಸನ್ ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ಗಾಲ್ಸ್‍ವರ್ದಿ ಮುಂತಾದವರು ತಮ್ಮ ಕೃತಿಗಳನ್ನು ರಚಿಸಿದರು. ಗಾಲ್ಸ್‍ವರ್ದಿಯ ನಾಟಕಗಳಲ್ಲಿ ಅಲೌಕಿಕ ಘಟನೆಗಳು ವಿರಳ. ಮಧ್ಯಮ ವರ್ಗದ ಸಾಧಾರಣ ವ್ಯಕ್ತಿಗಳ ನಿತ್ಯಜೀವನವೇ ನಾಟಕದ ವಸ್ತುವಿನ್ಯಾಸದ ಹಿನ್ನೆಲೆಯಾಗುತ್ತದೆ. ಸಾಮಾನ್ಯ ವ್ಯಕ್ತಿಜೀವನದ ಘಟನೆಗಳಲ್ಲಿ ಅಡಗಿರಬಹುದಾದ ಅಸಾಮಾನ್ಯ ಕರಾಳತೆ ಗಂಭೀರತೆಯನ್ನು ಗಾಲ್ಸ್‍ವರ್ದಿಯ ನಾಟಕಗಳು ಚಿತ್ರಿಸುತ್ತವೆ. ಇಬ್ಸನ್ ನಾಟಕಗಳಲ್ಲಿಯೂ ಈ ತೆರನಾದ ಜೀವನದ ಸಹಜ ಚಿತ್ರಣ ದೊರೆಯುತ್ತದೆ. ಪಾತ್ರಗಳು ಮತ್ತು ಭಾಷೆಯ ಸಹಜತೆಯೇ ಇಂಥ ನಾಟಕದ ಮುಖ್ಯ ಲಕ್ಷಣಗಳು.
   ಉದಾಹರಣೆಗೆ ಗಾಲ್ಸ್‍ವರ್ದಿಯ `ಬೆಳ್ಳಿಯ ಪೆಟ್ಟಿಗೆ (ದಿ ಸಿಲ್ವರ್ ಬಾಕ್ಸ್) ಎಂಬ ನಾಟಕ ಶ್ರೀಮಂತ ವರ್ಗದ ಜನ ಬಡಜನರ ಮೇಲೆಸಗುವ ಅನ್ಯಾಯವನ್ನು ಚಿತ್ರಿಸುತ್ತದೆ. ಇಲ್ಲಿನ ಪಾತ್ರಗಳೂ ಅದರ ಮಾತುಕತೆಯೂ ನಿತ್ಯಜೀವನವನ್ನು ವಾಸ್ತವಿಕವಾಗಿ ಪ್ರತಿಬಿಂಬಿಸುತ್ತವೆ. ಗಾಢವಾದ ಕರಾಳವಾದ ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಗಾಲ್ಸ್‍ವರ್ದಿ ಸಹಜವಾದ ಪಾತ್ರಗಳು ಮತ್ತು ಸಂಭಾಷಣೆಗಳ ಮೂಲಕ ಚಿತ್ರಿಸುತ್ತಾನೆ.
   ಈ ತೆರನಾದ ವಾಸ್ತವಿಕ ಚಿತ್ರಣವನ್ನು ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಕಾಣಬಹುದು. ಟಿ.ಪಿ.ಕೈಲಾಸಂ ಹಾಗೂ ಶ್ರೀರಂಗರ ನಾಟಕಗಳಲ್ಲಿ ಈ ವಿಧವಾದ ಸಾಮಾಜಿಕ ಪ್ರಜ್ಞೆಯಿದೆ.
   ಭೋದಕ ನಾಟಕ: ಜರ್ಮನಿಯಲ್ಲಿ 1925ರ ಸುಮಾರಿನಲ್ಲಿ ಉಗ್ರವಾಗಿ ಬೆಳೆದ ಅಭಿವ್ಯಕ್ತಿಪಂಥದ (ಎಕ್ಸ್‍ಪ್ರೆಷನಿಸಂ) ವಿರುದ್ಧವಾಗಿ ಬ್ರೆಖ್ಟ್ ಮತ್ತು ಪಿಸ್ಕೇಟರ್ ಎಂಬ ಪ್ರಸಿದ್ಧ ನಾಟಕಕಾರರು, ಹೊಸ ರೀತಿಯ ನಾಟಕಗಳನ್ನು ರಚಿಸಿದರು. ಭಾವಪ್ರಚೋದನೆಗಿಂತ ಮಿಗಿಲಾಗಿ, ರಂಗಭೂಮಿಯು ಪ್ರೇಕ್ಷಕರಿಗೆ ಜ್ಞಾನಭೋದನೆ ಮಾಡಬೇಕು- ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಭವ್ಯವಾದ ಉಜ್ವಲವಾದ ದೃಶ್ಯಗಳ ರೂಪದಲ್ಲಿ ಅಭಿವ್ಯಕ್ತಗೊಳಿಸಿ ಪ್ರೇಕ್ಷಕರ ಬುದ್ಧಿಯನ್ನು ಕೆರಳಿಸಬೇಕು-ಇವು ಈ ಹೊಸ ನಾಟಕಗಳ ಮೂಲತತ್ತ್ವಗಳು.
   ಈ ತತ್ತ್ವಗಳನ್ನು ಅನುಸರಿಸಿ ಅಮೆರಿಕನ್ ಫೆಡರಲ್ ತಿಯೇಟರ್ ಸಂಸ್ಥೆ ನಿರ್ಮಿಸಿದ ನಾಟಕಗಳನ್ನು ಜೀವಂತ ವರ್ತಮಾನ ಪತ್ರಿಕೆಗಳೆಂದು ಕರೆದರು. ಆರ್ಥಿಕ, ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ರಂಗಭೂಮಿಯ ಮೇಲೆ ವ್ಯಕ್ತಗೊಳಿಸತೊಡಗಿದುದರಿಂದ ನಾಟಕಕ್ಕೆ ಹೊಸ ರೂಪ ಬಂದಂತಾಯಿತು.
   ಬ್ರೆಖ್ಟ್ ನಡೆಸಿದ ಪ್ರಯೋಗಗಳಿಂದ ಪ್ರಭಾವಿತನಾಗಿ ಎರ್ವಿನ್ ಪಿಸ್ಕೇಟರ್ ರಂಗಭೂಮಿಯಲ್ಲಿ ಅತ್ಯಂತ ಕ್ರಾಂತಿಕಾರನಾದ ಮಾರ್ಪಾಡುಗಳನ್ನು ಮಾಡಿದ. ನಾಟಕಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಮಾಯಾಲಾಂದ್ರದ ಚಿತ್ರಗಳು, ವೀಕ್ಷಕ ವಿವರಣೆಗಳು, ತಿರುಗುವ ವೇದಿಕೆ ನೂತನ ರೀತಿಯ ಬೆಳಕಿನ ವ್ಯವಸ್ಥೆಗಳ ಮೂಲಕ ಚಿತ್ರಿಸಿ, ಆಧುನಿಕ ತಂತ್ರಗಳನ್ನು ನಾಟಕಕ್ಕೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದ. ರಂಗಭೂಮಿಯ ಮೇಲೆ ನಡೆಸಿದ ಈ ಪ್ರಯೋಗಗಳು ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾದರೂ ಆಮೇಲೆ ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಅನಂತರ ಜರ್ಮನಿಯ ರಂಗಭೂಮಿ ನಾಟ್ಜಿ ರಾಜಕೀಯ ಮುಖಂಡರ ಕೈಗೆ ಸಿಕ್ಕು ತನ್ನ ಉಜ್ಜ್ವಲ ಪರಂಪರೆಯನ್ನು ಅನನ್ಯವಾದ ತನ್ನತನವನ್ನು ಕಳೆದುಕೊಂಡು ಅವನತಿಯ ದಾರಿ ಹಿಡಿಯಿತು.
   ಪವಾಡ ನಾಟಕ: ಇದು ಪ್ರಾಚೀನ ಪಾಶ್ಚಾತ್ಯ ನಾಟಕದ ಒಂದು ಮೂಲ ಸ್ವರೂಪ (ಮಿಸ್ಟರಿ ಅಂಡ್ ಮಿರಕಲ್ ಲ್ಲೇ) ಬೈಬಲ್‍ನಿಂದ ಆರಿಸಿದ ಕಥೆಗಳ ಆಧಾರದ ಮೇಲೆ ಮೊಟ್ಟಮೊದಲ ಲ್ಯಾಟಿನ್ ಭಾಷೆಯಲ್ಲಿ ರಚಿತವಾದ ಈ ಕೃತಿಗಳು ಕ್ರಿ.ಶ. 13 ಮತ್ತು 14ನೆಯ ಶತಮಾನದಲ್ಲಿ ಬಹಳಷ್ಟು ಜನಪ್ರಿಯವಾಗಿದ್ದವು. ಚರ್ಚಿನಲ್ಲಿ ನಡೆಯುವ ವ್ರತ ವಿಧಾನಗಳು ಪ್ರಾರ್ಥನೆ ಮತ್ತು ಧರ್ಮಬೋಧೆಯ ಅಂಗವಾಗಿ, ಸಂತರುಗಳು ಮತ್ತು ಯೇಸುಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಈ ದೃಶ್ಯಾವಳಿಗಳು ನಾಟಕಗಳಾಗಿ ಪರಿವರ್ತನೆ ಹೊಂದಿ ಚರ್ಚಿನ ಆವರಣದಿಂದ ಹೊರಗಡೆಯೂ ಅಭಿನಯಿಸಲ್ಪಡುತ್ತಿದ್ದವು. ಇವನ್ನು ಚರ್ಚಿನ ಧರ್ಮಾಧಿಕಾರಿಗಳೇ ರಚಿಸುತ್ತಿದ್ದರು. ಕೆಲವು ಮುಖ್ಯ ಪಟ್ಟಣಗಳ ವೃತ್ತಿಸಂಘಗಳ ಸದಸ್ಯರು ಈ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಪ್ರತಿ ಊರಿನಲ್ಲೂ ಬೇರೆ ಬೇರೆ ವೃತ್ತಿಯ ಜನ ತಮ್ಮದೇ ಆದ ನಾಟಕ ಚಕ್ರಗಳನ್ನು ಏರ್ಪಡಿಸುತ್ತಿದ್ದರು. ಕಾರ್ಪಸ್ ಕ್ರಿಸ್ಟಿ ಮತ್ತು ಈಸ್ಟರ್ ಹಬ್ಬಗಳಲ್ಲಿ ಪ್ರತಿ ವೃತ್ತಿಸಂಘವೂ ಈ ನಾಟಕ ಚಕ್ರದ ಒಂದು ಭಾಗವನ್ನು ಅಭಿನಯಿಸುವ ವಾಡಿಕೆ ಇತ್ತು. ಅಂದು ಆಯಾ ಸಂಘದವರು ಯಾವುದಾದರೊಂದು ದೃಶ್ಯವನ್ನು( ನರಕದ ಹೆಬ್ಬಾಗಿಲಿನಿಂದ ದೆವ್ವಗಳು ಬರುವುದು, ಇತ್ಯಾದಿ) ಸೂಚಿಸುವ ಉಚಿತ ರಂಗಸಲಕರಣೆಗಳೊಂಡನೆ ಎರಡು ಅಂತಸ್ತಿನ ಅಟ್ಟಣೆಯ ಗಾಡಿಗಳ ಮೇಲೆ ಬೈಬಲ್ಲಿನ ಯಾವುದಾದರೊಂದು ಭಾಗದ ಕಥೆಯನ್ನು ಅಭಿನಯಿಸುತ್ತ ಊರಿನ ಗೊತ್ತಾದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಇವನ್ನು ಕೊಂಡೊಯ್ಯುತ್ತಿದ್ದರು. ಆಯಾ ಸಂಘದವರು ತಮ್ಮ ವೃತ್ತಿಗೆ ಸಂಬಂಧಿಸಿದ ದೃಶ್ಯಗಳನ್ನು ನಿರೂಪಿಸುವ ಸಂಪ್ರದಾಯವಿತ್ತು. ಉದಾಹರಣೆಗೆ ಬಡಗಿಗಳು ನೋವ ತನ್ನ ಹಡಗನ್ನು ನಿರ್ಮಿಸುವ ದೃಶ್ಯವನ್ನು ನಾಪಿತರು ಐಸ್ಯಾಕನ ಬಲಿಯ ಕಥೆಯನ್ನೂ ಅಭಿನಯಿಸುತ್ತಿದ್ದರು.
   ಜನಸಾಮಾನ್ಯರಿಗೆ ಧರ್ಮ ಮತ್ತು ನೀತಿಬೋಧೆ ಮಾಡುವುದು ಈ ರೂಪಕಗಳ ಉದ್ದೇಶ. ಈ ದೃಶ್ಯಗಳನ್ನು ಅಭಿನಯಿಸುವಾಗ ನಟರು ತಮ್ಮ ಪ್ರತಿದಿನದ ಉಡುಪನ್ನು ಧರಿಸುತ್ತಿದ್ದುದರಿಂದ ಈ ದೃಶ್ಯಗಳು ಜನರ ಮೇಲೆ ಹೆಚ್ಚು ಪ್ರಭಾವವನ್ನುಂಟುಮಾಡುತ್ತಿದ್ದವು; ಸಾಮಾನ್ಯ ಜನರ ಮನರಂಜನೆಗಾಗಿ ಒಂದು ರೀತಿಯ ಒರಟು ಹಾಸ್ಯವನ್ನೂ ಬೆರೆಸುತ್ತಿದ್ದರು. ಉದಾಹರಣೆಗಾಗಿ ನೋವ, ಅವನ ಗಯ್ಯಾಳಿ ಹೆಂಡತಿ ವ್ಯಾಜ್ಯ ಮಾಡುವುದು. ಹೆರಾಡ್ ಬಡಾಯಿ ಕೊಚ್ಚುವುದು, ಸೈತಾನ ಬಂದು ವಿದೂಷಕನಂತೆ ಮಂಗಚೇಷ್ಟೆಯನ್ನಾಡುವುದು ಇತ್ಯಾದಿ. ಕಾಲಕ್ರಮೇಣ ಜನ ನೀತಿಯನ್ನೂ ಧರ್ಮಬೋಧೆಯನ್ನೂ ಮರೆತು ಒರಟು ಹಾಸ್ಯದಿಂದ ಕೂಡಿದ ದೃಶ್ಯಗಳನ್ನೇ ಹೆಚ್ಚಾಗಿ ಮೆಚ್ಚಿಕೊಂಡರು. ಇದು ಒಂದು ರೀತಿಯಲ್ಲಿ ನಾಟಕದ ಬೆಳವಣಿಗೆಗೆ ಸಹಕಾರಿಯಾಯಿತು.
   ಈಗ ಉಪಲಬ್ಧವಾಗಿರುವ ಪವಾಡ ನಾಟಕಗಳಲ್ಲಿ ಅತಿ ಪ್ರಾಚೀನವಾದುದೆಂದು ಹೇಳಲಾದ 25 ನಾಟಕಗಳು (ಚೆಸ್ಟರ್ ನಾಟಕ ಚಕ್ರ) ಭಕ್ತಿಪ್ರಧಾನವಾಗಿದೆ; ಇವುಗಳಲ್ಲಿ ಕೀಳು ಹಾಸ್ಯ ವಿರಳ. ಸ್ಯಾಕ್ರಿಫೈಸ್ ಆಫ್ ಐಸ್ಯಾಕ್ ಎಂಬುದು ಕರುಣಾರಸದಿಂದ ಕೂಡಿದ ಗಂಭೀರ ನಾಟಕ. ಪ್ಯಾಷನ್ ಆಫ್ ಕ್ರೈಸ್ಟ್ ಎನ್ನುವ ನಾಟಕದಲ್ಲಿ ಸೊಗಸಾದ ಪಾತ್ರಚಿತ್ರಣವಿದೆ. ಟೌನ್‍ಲೇ ಅಥವಾ ವೇಕ್‍ಫೀಲ್ಡ್ ನಾಟಕ ಚಕ್ರವೆಂದು ಹೇಳುವ 32 ನಾಟಕಗಳಲ್ಲಿ ಷಪರ್ಡ್ಸ್ ಪ್ಲೇ ಅತ್ಯಂತ ಉತ್ತಮವಾದುದೆಂದು ಸಾಹಿತಿಗಳ ಅಭಿಪ್ರಾಯ. ಈ ನಾಟಕದ ಮೊದಲ ಭಾಗ ಹಗುರವಾದ ವಿನೋದದಿಂದ ಕೂಡಿ ಅನಂತರ ಬಾಲಕ್ರಿಸ್ತನ ವೃತ್ತಾಂತದಿಂದ ತೊಡಗೆ ನಾಟಕದ ಉದ್ದಕ್ಕೂ ಮಧುರವಾದ ಭಕ್ತಿಭಾವವನ್ನುಕ್ಕಿಸುತ್ತದೆ. ಮೊದಲ ಭಾಗದಲ್ಲಿ ಬರುವ ಒರಟು ಹಾಸ್ಯದ ಪ್ರಸಂಗಗಳೂ ವಾಸ್ತವಿಕ ದೃಶ್ಯಗಳೂ ನಾಟಕೀಯ ಘಟನೆಗಳೂ ಎರಡನೆಯ ಭಾಗದಲ್ಲಿ ಕಲ್ಪಿತವಾಗುವ ಭಕ್ತಿಯ ವಾತಾವರಣವೂ-ಪವಾಡ ನಾಟಕದ ಮುಖ್ಯ ಗುಣಗಳನ್ನು ತೋರಿಸುತ್ತವೆ.
   ಒಟ್ಟಿನಲ್ಲಿ, ಪವಾಡ ನಾಟಕದಲ್ಲಿ ಗಹನವಾದ ಪಾತ್ರ ಸೃಷ್ಟಿಯಿಲ್ಲ, ಪ್ರತೀಕ್ಷೆಯಿಲ್ಲ, ಉತ್ಕøಷ್ಟವಾದ ಕಾವ್ಯಗುಣಗಳು ಕಡಿಮೆ. ಪಾತ್ರಗಳು, ಕೆಟ್ಟವರು ಒಳ್ಳೆಯವರು ಎಂಬ ಎರಡೇ ಗುಂಪಿಗೆ ಸೇರಿದವರು. ಲೋಕ ಸಹಜವಾಗಿ ಎಲ್ಲರಲ್ಲೂ ಕಂಡು ಬರುವ ಒಳ್ಳೆಯದು ಕೆಟ್ಟುದರ ಮಿಶ್ರಣವಿಲ್ಲ. ಆದರೆ ಹಾಸ್ಯ, ಭಕ್ತಿ, ನಾಟಕೀಯ ಘಟನೆಗಳು, ಒಂದು ರೀತಿಯ ಸರಳತೆ ಚೈತನ್ಯಗಳನ್ನು ನಾವು ಪವಾಡ ನಾಟಕಗಳಲ್ಲಿ ಕಾಣಬಹುದು. ಈ ನಾಟಕಗಳೂ ಅಧ್ಯಕ್ಷರ ಪ್ರಾಸದಿಂದ ಕೂಡಿದ ವಿವಿಧ ಛಂದಸ್ಸಿನಲ್ಲಿ ರಚಿತವಾಗಿದೆ. ಈಗ ಉಪಲಬ್ಧವಾಗಿರುವ ಮೂಲಗ್ರಂಥಗಳು ಅನೇಕ ಪ್ರಕ್ಷಿಪ್ತ ಭಾಗಗಳಿಂದ ಕೂಡಿ, ಓದಲು ತೊಡಕನ್ನುಂಟುಮಾಡುತ್ತವೆ.
  ಇಂಗ್ಲೆಂಡ್ ಮತ್ತು ಯುರೋಪಿನ ಇತರ ಭಾಗಗಳಲ್ಲಿ ಬಂದ ಧಾರ್ಮಿಕ ಸುಧಾರಣೆಯ ಚಳವಳಿ ಈ ನಾಟಕಗಳಿಗೆ ಅಡ್ಡಿ ತಂತು. ಈ ಕಾರಣದಿಂದಾಗಿ, ಪವಾಡ ನಾಟಕಗಳು ಇನ್ನೂ ವಿಸ್ತøತವಾದ ನಾಟಕಗಳಿಗೂ ಉಪನಾಟಕಗಳಿಗೂ ಎಡೆಕೊಟ್ಟವು.
 ಅಭಿವ್ಯಕ್ತಿ ಪಂಥದ ನಾಟಕ: ಈ ಶತಮಾನದ ಪೂರ್ವಭಾಗದಲ್ಲಿ ನಿತ್ಯಜೀವನದ ಸಹಜತೆಯನ್ನು ಚಿತ್ರಿಸಲು ಹೊರಟ ನಾಟಕಗಳಿಗೆ ವಿರುದ್ಧವಾಗಿ ಮತ್ತೊಂದು ರೀತಿಯ ಹೊಸ ಚಳವಳಿ ಆರಂಭವಾಗಿ ಅಭಿವ್ಯಕ್ತಿ ಪಂಥದ ನಾಟಕಗಳು ರಚಿತವಾದುವು ಇವು ನಿತ್ಯಜೀವನವನ್ನು ಸಹಜವಾಗಿ ವೀಕ್ಷಿಸುವುದರ ಬದಲು ಜೀವನದ ಕೆಲವು ಮುಖಗಳನ್ನು ಉತ್ಪ್ರೇಕ್ಷಿಸಿ, ವಿಕೃತಗೊಳಿಸಿ ತೋರಿಸುತ್ತವೆ. ವಸ್ತು ಪ್ರಪಂಚದ ಸಹಜ ಚಿತ್ರಣಕ್ಕಿಂತಲೂ ಆಂತರಿಕ ಭಾವನೆಗಳನ್ನು ಇತ್ತಿ ತೋರಿಸುವುದೇ ಈ ನಾಟಕಗಳ ಪರಮ ಗುರಿ. ನೀರಸವಾದ, ಯಾಂತ್ರಿಕವಾದ, ಏಕನಾದವುಳ್ಳ ನಿತ್ಯ ಜೀವನದಲ್ಲಿ ತೊಡಗಿದ, ಆಧುನಿಕ ಪ್ರಪಂಚದ ಮಾನವ ಕೋಟಿಯ ಯೋಚನೆಯಲ್ಲಾಗಲಿ ನಿತ್ಯಜೀವನದ ಕಾರ್ಯಕ್ರಮದಲ್ಲಾಗಲಿ ಯಾವ ವೈವಿಧ್ಯವೂ ಇಲ್ಲ. ಅವರಿಗ ಅರಿವಿಲ್ಲದಂತೆ ಅವರ ಬಾಳು ಒಂದೇ ಜಾಡನ್ನು ಹಿಡಿದು ಸಾಗುತ್ತಿದೆ. ಮನುಷ್ಯ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡು ಗುಂಪಿನಲ್ಲಿ ಒಬ್ಬನಾಗಿದ್ದಾನೆ. ಯಾವನೊಬ್ಬ ವ್ಯಕ್ತಿಯನ್ನೂ ಮಂದಿಯಿಂದ ಬೇರ್ಪಡಿಸಿ ಇನ್ನೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅವನ ಜೀವನದ ಶುಷ್ಕತೆಯ ಅರಿವನ್ನುಂಟುಮಾಡುವುದು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಯಾಂತ್ರಿಕ ವ್ಯಕ್ತಿಗಳಾಗಿದ್ದಾರೆ. ಈ ಜನ ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ತಿಳಿಯಲು ನಾವು ದೇವತೆಗಳಂತೆ ಮೇಲೇರಿ ಲೋಕವೊಂದರಿಂದ ಈ ಲೋಕವನ್ನು ವೀಕ್ಷಿಸಬೇಕು. ಅಭಿವ್ಯಕ್ತಿ ಪಂಥದ ಕೆಲವು ನಾಟಕಗಳನ್ನು ವೀಕ್ಷಿಸುವಾಗ ನಮಗೆ ಈ ಅಂತರಿಕ್ಷಲೋಕದ ಅನುಭವವಾಗುತ್ತದೆ. ಗಂಭೀರ ನಾಟಕ ವ್ಯಕ್ತಿಸ್ವಾರ್ಥವನ್ನು ತ್ಯಜಿಸಿ ಸಾಮರಸ್ಯವನ್ನು ಸಾಧಿಸುವುದನ್ನು ಚಿತ್ರಿಸಿದರೆ ಈ ನಾಟಕ ಮಾನವ ಲೋಕವನ್ನು ವಸ್ತುನಿಷ್ಠೆಯ ದೃಷ್ಟಿಕೋನದಿಮದ ವ್ಯಕ್ತಿ ಅವಲೋಕಿಸುವುದನ್ನು ಕಾಣಬಹುದು. ಆಂತರಿಕ ಭಾವನೆಗಳ ಅಭಿವ್ಯಕ್ತಿಯ ಮೂಲಕ ಬುದ್ಧಿಯನ್ನು ಪ್ರಚೋದಿಸುವುದೇ ಈ ನಾಟಕಗಳ ತಂತ್ರ.
   ಫ್ರಾಯ್ಡ್ ಹಾಗೂ ಬರ್ಗಸನ್ ಉಲ್ಲೇಖಿಸಿದ ಮನೋವಿಶ್ಲೇಷಣಾತ್ಮಕ ವಿಚಾರಗಳನ್ನು ಮೊದಲು ಡಾಸ್ಟಾವಸ್ಕಿ, ವಾಡ್ಕಿಂಟ್, ವೆರ್ಫಲ್, ಕಾಪ್ಕ, ಮುಂತಾದವರು ತಮ್ಮ ಕಥೆ, ಕಾದಂಬರಿಗಳಲ್ಲಿ ಅಭಿವ್ಯಕ್ತಿಗೊಳಿಸಿದರು. ಜರ್ಮನಿಯಲ್ಲಿ ಉಗ್ರವಾಗಿ ಬೆಳೆದ ಈ ವಿಚಾರ ಚಳವಳಿ ಅನೇಕ ನಾಟಕಕಾರರನ್ನು ಪ್ರಚೋದಿಸಿತು. ಈ ಭಾವಚಿತ್ರಕ ತಂತ್ರವನ್ನು ಜಾರ್ಗೆ ಕೃತ `ಭಿಕ್ಷುಕರು (ದಿ ಬೆಗರ್ಸ್), ಹ್ಯಾಸನ್‍ಕ್ಲೆವರ್‍ನ್ `ಮಗ (ದಿ ಸನ್), ಕೈಸರ್‍ನ `ಮುಂಜಾವಿನಿಂದ ಮಧ್ಯರಾತ್ರಿಯವರೆಗೆ (ಫ್ರಂ ಮಾರ್ನಿಂಗ್ ಟು ಮಿಡ್‍ನೈಟ್) ಮುಂತಾದ ಸುಪ್ರಸಿದ್ಧ ನಾಟಕಗಳಲ್ಲಿ ಬಳಸಲಾಯಿತು. ಈ ನಾಟಕಗಳಲ್ಲಿ ನಾಟಕಕಾರ ವ್ಯಕ್ತಿಗಳ ಮನೋವಿಶ್ಲೇಷಣೆ ಮಾಡುವುದರ ಬದಲು ವ್ಯಕ್ತಿಗಳ ಬೇರೆ ಬೇರೆ ನಮೂನೆಗಳನ್ನು ಸೃಷ್ಟಿಸುತ್ತಾರೆ. ವ್ಯಕ್ತಿ ಮತ್ತು ಸಮಾಜ, ವ್ಯಕ್ತಿ ಮತ್ತು ಲೋಕ, ವ್ಯಕ್ತಿ ಮತ್ತು ದೇವರು-ಇವರ ನಡುವೆ ಉದ್ಭವಿಸುವ ಮೂಲಭೂತ ಆಸೆ ಆತಂಕಗಳನ್ನು ಹಂಬಲಗಳನ್ನು ಈ ನಮೂನೆಗಳು ಅಭಿವ್ಯಕ್ತಿಗೊಳಿಸುತ್ತವೆ. ಈ ನಾಟಕಗಳು ಬಹುಮಟ್ಟಿಗೆ ಮಧ್ಯಯುಗದ ನೀತಿನಾಟಕಗಳನ್ನು ಹೋಲುತ್ತವೆ. ನಾಟಕದ ಸಾಂಪ್ರದಾಯಿಕವಾದ ದೃಶ್ಯಗಳು ವಿಸ್ತøತ ನಿಶ್ಚಲ ದೃಶ್ಯಗಳಾಗುತ್ತವೆ. ದೃಶ್ಯಗಳು ಯಾವುದೊಂದು ಕಾಲದೇಶಗಳ ನಿಶ್ಚಿತ ಪರಿಮಿತಿಗೊಳಪಡದೆ ವಿವಿಧ ಭಾವನೆಗಳನ್ನು ಸೂಚಿಸುವ ಸಂಕೇತಗಳಾಗಿ ಪರಿಣಮಿಸುತ್ತವೆ. ನಟ ಸಂಕೀರ್ಣ ವಿಚಾರಗಳನ್ನು ವ್ಯಕ್ತಪಡಿಸುವ ಸಾಂಕೇತಿಕ ಪ್ರತಿನಿಧಿಯಾಗುತ್ತಾನೆ.
   ಗಹನವಾದ ಮೂಲಭೂತವಾದ ತತ್ತ್ವಗಳನ್ನು ಕೆರಳಿಸುವ ಉದಾತ್ತ ಉದ್ದೇಶದಿಂದ ಬರೆದ ಈ ರೀತಿಯ ನಾಟಕಗಳು ಕಾಲಕ್ರಮೇಣ ವಿಕ್ರಿತವಾದ ಅಮೂರ್ತವಾದ ಸ್ವರೂಫ ಪಡೆದು ನೆರಳಿನ ಗೊಂಬೆಯಾಟವಾಗಿ ಮಾರ್ಪಾಡಾದವು. ಅತ್ಯಂತ ಜಯಪ್ರದವಾದ ರೀತಿಯಲ್ಲಿ ಈ ತಂತ್ರವನ್ನಳವಡಿಸಿಕೊಂಡು ರಚಿತವಾದ ಕೃತಿಯೆಂದರೆ ಜೆಕಸ್ಲವಾಕಿಯದ ನಾಟಕಕಾರರಾದ ಕಾರ್ಲೆ ಮತ್ತು ಜೋಸೆಫ್ ಕಾಪೆಕ್ ಸಹೋದರರು ರಚಿಸಿದ ಕೀಟನಾಟಕವೆಂದು (ಆ್ಯಡ್ ಇನ್‍ಪಿನಿಟಿಸಂ ಅಥವಾ ದಿ ಇನ್ಸೆಕ್ಟ್ ಪ್ಲೇ) ಹೇಳಬಹುದು. ಕಾರಲ್‍ಕಾಪೆಕ್‍ನ `ಸ್ವಯಂಚಾಲಿತ ಯಂತ್ರ ಮಾನವ (ಆರ್ ಯು ಆರ್), ಎಲ್ಮರ್ ರೈಸ್‍ನ `ಸಂಕಲನ ಯಂತ್ರ (ದಿ ಆ್ಯಡಿಂಗ್ ಮೆಷಿನ್) - ಇವೂ ಈ ಪ್ರಸಿದ್ಧ ನಾಟಕಗಳು.
   ಫೌಜು ನಾಟಕ: ಇದೊಂದು ರೀತಿಯ ತುರ್ಕಿ ದೇಶದ ನಾಟಕ (ಓರ್ಟ ಒಯೂನು). ತುರ್ಕಿ ಭಾಷೆಯಲ್ಲಿ ಓರ್ಟ ಎಂದರೆ ದಂಡು ಅಥವಾ ಫೌಜು ಎಂದರ್ಥ. ಇಂಥ ನಾಟಕವನ್ನು ಅಭಿನಯಿಸುವ ಕಂಪೆನಿಗಳೂ 1908ರವರೆಗೂ ಜನಪ್ರಿಯವಾಗಿದ್ದವು. ಈಗಲೂ ತುರ್ಕಿಯ ಹಳ್ಳಿಗಳಲ್ಲಿ ಈ ನಾಟಕಗಳನ್ನು ಅಭಿನಯಿಸುತ್ತಾರೆ. ಆದರೆ ಚಲಚ್ಚಿತ್ರ ಹಾಗೂ ಆಧುನಿಕ ನಾಟಕಗಳ ದೆಸೆಯಿಂದ ಈ ಹಳೆಯ ನಾಟಕಗಳು ಅವನತಿ ಹೊಂದಿವೆ. ಸೈನಿಕ ಶಿಬಿರಗಳಲ್ಲಿ ಅಭಿನಯಿಸುತ್ತಿದ್ದ ಮನರಂಜಕ ದೃಶ್ಯಗಳು ಕಾಲಕ್ರಮೇಣ ಈ ನಾಟಕಗಳಾಗಿ ರೂಪಾಂತರ ಹೊಂದಿದವು. ಈ ನಾಟಕಕ್ಕೆ ಬೇಕಾದ ಕಥಾವಸ್ತುವನ್ನೂ ವೇಷಭೂಷಣಗಳನ್ನೂ ತುರ್ಕಿಯ ಕರಗಜ್ ಎಂಬ ಕೀಲುಗೊಂಬೆಯ ಆಟದಿಂದ ಅಳವಡಿಸಿಕೊಂಡರು. ಫೌಜು ನಾಟಕದ ಮುಖ್ಯ ಪಾತ್ರ ಕಾವುಕ್ಲು ಫೌಜಿನವರು ಧರಿಸುವ ಸಾಂಪ್ರದಾಯಿಕವಾದ ಕೆಂಪಂಗಿಯನ್ನು ತೊಟ್ಟು ಹದಿನೆಂಟನೆಯ ಶತಮಾನದ ಸೈನಿಕ ಅಧಿಕಾರಿಗಳು ಧರಿಸುವ ಟೊಪ್ಪಿಯನ್ನು ಧರಿಸುತ್ತಿದ್ದ. ಈ ನಾಟಕಗಳಲ್ಲಿ ಸಾಮಾನ್ಯವಾಗಿ ಸ್ತ್ರೀ ಪಾತ್ರಗಳಿಲ್ಲ. ಸಾಂಪ್ರದಾಯಿಕವಾದ ಕಥಾವಸ್ತುಗಳನ್ನು ಆರಿಸಿಕೊಂಡು, ಹಳೆಯ ಶೈಲಿಯಲ್ಲೇ ಈ ನಾಟಕಗಳನ್ನು ರಚಿಸುತ್ತಿದ್ದರು. ಆದರೆ ಆಗಾಗ ಆದುನಿಕ ಸಮಾಜದ ರೀತಿನೀತಿಗಳನ್ನು ಟೀಕಿಸುವ ಮಾತುಗಳೂ ವಿಡಂಬನ ಮಾಡುವ ಘಟನೆಗಳೂ ಬರುವುದುಂಟು. ನಾಟಕದಲ್ಲಿನ ಮಾತುಕತೆಗಳು ಒಂದು ರೀತಿ ಕ್ರಮವಿಲ್ಲದ, ಆದರೆ ಪ್ರಾಸಬದ್ಧವಾದ ಗ್ರಂಥಶೈಲಿಯಲ್ಲಿರುತ್ತದೆ. ಪ್ರತಿದೃಶ್ಯದಲ್ಲೂ ಕ್ರಮವಾಗಿ ಎರಡೇ ಪಾತ್ರಗಳು ರಂಗಸ್ಥಳವನ್ನು ಪ್ರವೇಶಿಸುವ ಈ ನಾಟಕದ ಸಂಪ್ರದಾಯ ಆ ದೇಶದ ಕೀಲುಗೊಂಬೆಯ ಆಟದಿಂದಲೇ ಬಂದದ್ದು. ಕಥಾನಾಯಕ ಕಾವುಕ್ಲು ಕೀಲುಗೊಂಬೆಯಾಟಕ ಪ್ರಮುಖ ಕೀಲುಗೊಂಬೆಗೆ ಸರಿಸಮನಾಗುತ್ತಾನೆ. ಅವನ ಜೊತೆಗಾರ ಪಿಜೇóಕರ್ ಪ್ರವೇಶಿಸಿ ದೂರದಿಂದ ಅವನನ್ನು ಯಾವುದೋ ಪ್ರಾಣಿಯೆಂದು ಭ್ರಮಿಸಿ ಕೋಲಿನಿಂದ ತಿವಿಯುತ್ತಾನೆ. ಅವನು ಹಿಂದಿರುಗಿ ನೋಡಿ ಇಬ್ಬರೂ ಹಳೆಯ ಗೆಳೆಯರೆಂದು ತಿಳಿದಾಗ ಅವರು ತಮ್ಮ ನಕಲಿ ಚೇಷ್ಟೆಗಳಿಂದ ಪ್ರೇಕ್ಷಕರನ್ನು ನಗಿಸಲು ಪ್ರಾರಂಭಿಸುತ್ತಾರೆ. ಹೀಗೆ ಪ್ರತಿ ದೃಶ್ಯವೂ ಒಂದೇ ಕ್ರಮದಲ್ಲಿ ಪ್ರಾರಂಭವಾಗಿ ವಿನೋದದಿಂದ ಕೂಡಿರುತ್ತದೆ. ಕಥಾವಸ್ತುವಿನ ಪರಿಚಯ ಎಲ್ಲರಿಗೂ ಇರುವುದರಿಂದ ನಾಟಕದ ವಸ್ತುವಿನ ಬೆಳವಣಿಗೆ ಹಾಗೂ ಕ್ರಿಯೆಗಳಿಗಿಂತಲೂ ವಿನೋದ, ನಕಲಿ- ಇವಕ್ಕೇ ಪ್ರಾಧಾನ್ಯ ಹೆಚ್ಚು.
   ಸಾಂಘಿಕ ವಿನೋದ ನಾಟಕ: 15ನೆಯ ಮತ್ತು 16ನೆಯ ಶತಮಾನದ ಇಟಲಿಯಲ್ಲಿ ಪ್ರಚಲಿತವಾಗಿದ್ದ ಒಂದು ರೀತಿಯ ವಿನೋದ ನಾಟಕ (ಕಾಮಿಡಿ ಆಫ್ ದಿ ಗಿಲ್ಡ್). ನಾಟಕವನ್ನು ವೃತ್ತಿಯನ್ನಾಗಿ ಅವಲಂಬಿಸಿದ್ದ ನಟರು ಶ್ರೀಮಂತರ ಅಥವಾ ವಿದ್ವಾಂಸರ ಆಶ್ರಯದಲ್ಲಿ ಸಣ್ಣಪುಟ್ಟ ಸಂಘಗಳನ್ನು ಮಾಡಿಕೊಂಡು ಅವುಗಳ ಮೂಲಕ ಈ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಈ ನಟರು ಮುಖ್ಯವಾಗಿ ರಾಜಸ್ಥಾನಗಳಲ್ಲಿ ಆರೀಓಸ್ಟೋ ಮುಂತಾದವರ ನಾಟಕಗಳನ್ನು ತಮಗೆ ಬೇಕಾದಂತೆ ಅಳವಡಿಸಿಕೊಳ್ಳುತ್ತಿದ್ದರು. ಯಾವುದೋ ಕಥಾವಸ್ತುವಿಗೆ ತವiಗೆ ಬೇಕಾದ ಮಾತು, ತಮಾಷೆ, ನಕಲಿ ಚೇಷ್ಟೆಗಳನ್ನು ಸೇರಿಸಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಸಾಹಿತ್ಯ ಮೂಲದಿಂದ ಹಾಡು, ಭಾಷಣಗಳನ್ನು ನಾಟಕದೊಳಕ್ಕೆ ತುರುಕುತ್ತಿದ್ದರು. ಪ್ರತಿ ಸಂಘ ಅಥವಾ ನಾಟಕ ಕಂಪನಿಯಲ್ಲಿ 8-9 ನಟರೂ 3-4 ನಟಿಯರೂ ಇರುತ್ತಿದ್ದರು. ಪಾತ್ರಗಳ ವಯಸ್ಸು, ವರ್ಣನೆ, ರೂಪಗಳಿಗೆ ಸರಿಹೊಂದುವ ನಟ ನಟಿಯರನ್ನು ಮಾತ್ರ ಆಯಾ ಸಂಘಗಳಿಗೆ ಸೇರಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಪ್ರತಿ ಸಂಘದಲ್ಲಿ ಇಬ್ಬರು ಮೂವರು ಮುದುಕರು, ಇಬ್ಬರು ಪ್ರಮುಖ ಹಾಸ್ಯಗಾರರು, ಇಬ್ಬರು ಮೂವರು ಚಿಕ್ಕವಯಸ್ಸಿನ ಪ್ರಣಯಿಗಳು ಇಬ್ಬರು ಮೂವರು ವಿದೂಷಕರು, ಒಬ್ಬ ವೀರಾವೇಶದ ನಾಯಕ, ಒಬ್ಬ ಬೆಪ್ಪ, ಒಬ್ಬ ಬೊಗಳೆ ಹೊಡೆಯುವ ಉತ್ತರಕುಮಾರ, ಎರಡು ಜೊತೆ ಗಂಡಹೆಂಡಿರು ಇರುತ್ತಿದ್ದರು. ಈ ಸಂಘಗಳು ಸಾಮಾನ್ಯವಾಗಿ ಪ್ಲಾಟಸ್ ಮತ್ತು ಟೆರೆನ್ಸರ ವಿನೋದ ನಾಟಕಗಳನ್ನು ಅಭಿನಯಿಸುತ್ತಿದ್ದರು.
   ಮೂಕ ನಾಟಕ: ನಟ ಮಾತುಗಳನ್ನು ಆಡದೆ ಕೇವಲ ಅಭಿನಯ, ಚಲನೆ ಮತ್ತು ಮುಖದ ಹಾವಭಾವಗಳಿಂದ ತನ್ನ ಭಾವನೆಗಳನ್ನು ವ್ಯಕ್ತ ಮಾಡುವ ಒಂದು ರೀತಿಯ ಚಿಕ್ಕ ನಾಟಕ. ಇದನ್ನು ನೃತ್ಯ ಮತ್ತು ಅಭಿನಯಗಳಿಗೆ ನಡುವೆ ಇರುವ ಒಂದು ರೂಪಕ ವಿಶೇಷವೆನ್ನಬಹುದು. ಇದರಲ್ಲಿ ಸಾಂಪ್ರದಾಯಿಕವಾದ ಕೆಲವು ಸಂಜ್ಞೆಗಳೂ ಹಾವಭಾವಗಳೂ ಇವೆ. ನೃತ್ಯದಲ್ಲಿನ ಮುದ್ರೆಗಳಂತೆ, ಉದಾಹರಣೆಗಾಗಿ, ಮುಖದ ಸುತ್ತಲೂ ಹಸ್ತವನ್ನು ಬಳಸಿ ತೋರಿಸಿದರೆ ಹೆಂಗಸನ್ನು ಸೂಚಿಸುವುದೆಂದರ್ಥ. ಹಾಗೆಯೇ ಎದೆಯ ಮೇಲೆ ಎರಡು ಕೈಗಳನ್ನು ಇಟ್ಟುಕೊಂಡರೆ ಪ್ರಣಯವೆಂದೂ, ಎಡ ಕೈಯ ಉಂಗುರದ ಬೆರಳನ್ನು ತೋರಿಸಿದರೆ ಮದುವೆಯೆಂದೂ ಅರ್ಥ.
   ಮೂಕ ನಾಟಕದ ಮೂಲವನ್ನು ನಾವು ಪೌರಸ್ತ್ಯ ದೇಶಗಳಲ್ಲಿನ ನೃತ್ಯಗಳಲ್ಲಿಯೂ ಕಾಣಬಹುದು. ಪ್ರಾಚೀನ ಗ್ರೀಸ್ ಮತ್ತು ರೋಮ್‍ಗಳ ನೃತ್ಯ ನಾಟಕಗಳಲ್ಲೂ ಇಟಲಿಯ ಸಂಘಿಕ ವಿನೋದ ನಾಟಕಗಳಲ್ಲೂ ಇಂಗ್ಲೆಂಡಿನ ಪವಾಡ ನಾಟಕಗಳಲ್ಲೂ ಮೂಕನಾಟಕದ ಮೂಲಾಂಶಗಳು ಸಿಕ್ಕುತ್ತವೆ. ಈ ಕಾಲದ ಬ್ಯಾಲೆ ಎಂಬ ನೃತ್ಯನಾಟಕ ಬಹುಮಟ್ಟಿಗೆ ಇದರ ಸ್ವರೂಪವನ್ನು ಅಳವಡಿಸಿಕೊಂಡಿದೆ.
   ಹಗುರ ನಾಟಕ: 17ನೆಯ ಮತ್ತು 18ನೆಯ ಶತಮಾನಗಳಿಂದೇಚೆಗೆ ರಸ್ತೆಯ ಪಕ್ಕದಲ್ಲಿ ಸೇರಿದ ಗುಂಪಿನ ಮುಂದೆ ಹಾಸ್ಯದ ಹಾಡುಗಳನ್ನು ಹೇಳಿ ಕೆಲವು ನಕಲಿ ಚೇಷ್ಟೆಗಳಿಂದ ಯಾವುದಾದರೊಂದು ಪಾತ್ರವನ್ನು ಅಥವಾ ಜೀವಿತ ವ್ಯಕ್ತಿಯನ್ನು ಅನುಕರಣೆ ಮಾಡಿ ಜನರನ್ನು ನಗಿಸುವುದು ವಾಡಿಕೆಯಾಗಿತ್ತು. ಇಂಥ ಸಣ್ಣ ನಾಟಕಗಳನ್ನು ಹಗುರ ನಾಟಕ ಎನ್ನುತ್ತಾರೆ (ವಾದ್‍ವಿಲ್). ವಾದ್‍ವಿಲ್ ಎಂಬ ಪದಕ್ಕೆ ಫ್ರೆಂಚ್ ಭಾಷೆಯಲ್ಲಿ ಹಗುರವಾದ ಬೀದಿಯ ಹಾಡು ಎಂದರ್ಥ. ಉಪಾಹಾರ ಗೃಹಗಳಲ್ಲಿ ಜನ ಸೇರಿದಾಗ ಅವರ ಮನರಂಜನೆಗಾಗಿ ಹಾಡು, ಕುಣಿತ, ದೊಂಬರಾಟ, ಯಕ್ಷಿಣಿ ಆಟ-ಇವೆಲ್ಲವೂ ಮಿಶ್ರಿತವಾದ ವಿವಿಧ ವಿನೋದಾವಳಿಯನ್ನು ಏರ್ಪಡಿಸುತ್ತಿದ್ದರು. ವಾದ್‍ವಿಲ್ ಕ್ರಮೇಣ ಈ ರೂಪವನ್ನು ತಾಳಿತು. ಇದೇ ಮುಂದೆ ವಿನೋದಕರ ಸಂಗೀತನಾಟಕ (ಮ್ಯೂಸಿಕಲ್ ಕಾಮಿಡಿ)ಆಗಿ ಮಾರ್ಪಟ್ಟಿತು.
   ಸುಸಂಘಟಿತ ನಾಟಕ: 19ನೆಯ ಶತಮಾನದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಂದು ರೀತಿಯ ನಾಟಕ (ವೆಲ್ ಮೇಡ್ ಪ್ಲೇ). ಫ್ರಾನ್ಸಿನ ಸ್ಕೈಬ್ ಮತ್ತು ಸಾರ್ದೂ, ಇಂಗ್ಲೆಂಡಿನ ಜೋನ್ಸ್ ಮತ್ತು ಪಿನ್‍ರೊ ಇವರುಗಳಿಂದ ರಚಿತವಾದ ನಾಟಕಗಳನ್ನು ಗೇಲೆ ಮಾಡಲು ಈ ಹೆಸರಿನಿಂದ ಕರೆದರು. ಈ ನಾಟಕಗಳಲ್ಲಿ ಅಚ್ಚುಕಟ್ಟಾದ, ನವೀನವಾದ ವಸ್ತುರಚನೆ, ಕಥಾನಿರೂಪಣೆ, ದೃಶ್ಯಗಳ ಸಮರ್ಪಕ ಜೋಡಣೆ- ಇದ್ದರೂ ಒಟ್ಟಿನಲ್ಲಿ ಇವು ನೀರಸವಾದ ಕೃತಿಗಳು. ಈ ನಾಟಕಕಾರರಲ್ಲಿ ರಂಗಭೂಮಿಯ ಪ್ರಜ್ಞೆ, ತಾಂತ್ರಿಕ ಜ್ಞಾನ, ನಿರೂಪಣಾಶಕ್ತಿಗಳಿದ್ದರೂ ಉತ್ತಮ ಕೃತಿಯ ರಚನೆಗೆ ಅವಶ್ಯವಾದ ಕಾವ್ಯಸ್ಫೂರ್ತಿಯ ಅಭಾವವಿದೆಯೆನ್ನಿಸುತ್ತದೆ. ಇಂಥ ನಾಟಕಗಳು ಪ್ರಥಮತಃ ಜನಪ್ರಿಯತೆ ಗಳಿಸಿದರೂ ಕಾಲಕ್ರಮೇಣ, ಕೇವಲ ಹೊರಗಿನ ಅಲಂಕಾರದಿಂದ ರಂಜಿಸುವ ಯಾಂತ್ರಿಕ ಕೃತಿಗಳಾಗಿ ಪರಿಣಮಿಸಿದವು.
   ದಾರುಣ ಸಂಕಟದ ನಾಟಕ: ಪುರಾತನ ಈಜಿಪ್ಟ್, ಸಿರಿಯ, ಮೆಸಪೊಟೇಮಿಯಾ ದೇಶಗಳಲ್ಲಿ ಹುಟ್ಟಿ ಬೆಳೆದು, ಮಧ್ಯಯುಗದ ಚರ್ಚಿನಲ್ಲಿ ಕ್ರೈಸ್ತಧರ್ಮದ ಪ್ರಚಾರಕ್ಕೆ ಅನುವಾದ ಒಂದು ರೀತಿಯ ಜಾನಪದ ರೂಪಕ (ಫ್ಯಾಷನ್ ಪ್ಲೇ). ಪ್ರಕೃತಿದೇವತೆ ಆಸಿರಿಸನ ಹುಟ್ಟು ಸಾವುಗಳ ಕಥೆಯನ್ನು ಪುರಾತನ ಮೂರು ನಾಟಕಗಳು ನಿರೂಪಿಸುತ್ತಿದ್ದುವು. ಅನಂತರ ಈ ನಾಟಕಗಳ ರಚನಾತಂತ್ರವನ್ನು ಮಧ್ಯಯುಗದ ಕ್ರೈಸ್ತಧರ್ಮ ಸಂಸ್ಥೆಗಳು ಅಳವಡಿಸಿಕೊಂಡವು. ಈಸ್ಟರ್ ಹಬ್ಬದ ದಿನಗಳಲ್ಲಿ ಧರ್ಮಪ್ರಸಾರಕ್ಕಾಗಿ ಯೇಸುಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ಚರ್ಚಿನಲ್ಲಿ ನಾಟಕೀಯವಾಗಿ ನಿರೂಪಿಸುತ್ತಿದ್ದರು. ಯೇಸುವಿನ ಜನ್ಮ, ಶಿಲುಬೆಗೇರಿದ ಘಟನೆ- ಇವೇ ಮೂರುನಾಟಕಗಳ ಮುಖ್ಯವಸ್ತು. ದಕ್ಷಿಣ ಜರ್ಮನಿಯ ಒಬೆರ್‍ಮರ್‍ಗಾ ಎಂಬಲ್ಲಿ ಇಂದಿಗೂ ಹತ್ತು ವರ್ಷಕ್ಕೊಮ್ಮೆ ಪ್ರದರ್ಶಿತವಾಗುವ ನಾಟಕಗಳೇ ಈ ಪ್ರಕಾರಕ್ಕೆ ಮುಖ್ಯ ಉದಾಹರಣೆ. ಕ್ರಮೇಣ 9ನೆಯ ಶತಮಾನದ ವೇಳೆಗೆ ಮೂರು ನಾಟಕಗಳು ನೃತ್ಯ, ಗೀತೆ, ಸಂಭಾಷಣೆಗಳನ್ನು ಅಳವಡಿಸಿಕೊಂಡವು. ಈ ನಾಟಕಗಳಲ್ಲಿನ ಮುಖ್ಯ ದೃಶ್ಯ ಕ್ರಿಸ್ತನ ಸಮಾಧಿ. ಬಿಳಿಯ ರೆಕ್ಕೆಯ ದೇವತೆಗಳು ಸಮಾಧಿಯ ಒಂದೆಡೆ ಕಾವಲು ನಿಂತಾಗ ಕ್ರಿಸ್ತನ ದಿವ್ಯ ಪಾರ್ಥಿವ ಶರೀರವನ್ನು ಹುಡುಕಿಕೊಂಡು ಬರುವ ಸ್ತ್ರೀ ವೃಂದ ಸಮಾಧಿಯ ಇನ್ನೊಂದೆಡೆ ನಿಂತು ಸಮಾಧಿಯ ಸುತ್ತಲೂ ತಡಕಾಡುವರು. ದೇವತೆಗಳ ಗುಂಪು " ಓ ಕ್ರಿಸ್ತನ ಅನುಯಾಯಿಗಳೇ, ಈ ಸಮಾಧಿಯಲ್ಲಿ ಯಾರನ್ನರಸುತ್ತಿರುವಿರಿ?" ಎಂದು ಹಾಡಿದಾಗ ಸ್ತ್ರೀ ವೃಂದ " ಶಿಲುಬೆಗೇರಿದ ಯೇಸುವನ್ನರಸುತ್ತಲಿರುವೆವು" ಎಂದು ಪ್ರತ್ಯುತ್ತರ ಕೊಡುವರು. ಆಗ ದೇವತೆಗಳು ಕ್ರಿಸ್ತ ಅಲ್ಲಿಲ್ಲವೆಂದೂ ದೇವವಾಣಿಗನುಸಾರವಾಗಿ ಅಲ್ಲಿಂದ ಮೇಲೇರಿ ಹೊರಟನೆಂದೂ ಹೇಳಿ, `ನೀವೆಲ್ಲರೂ ಹೊರಡಿ; ಹೋಗಿ ಲೋಕಕ್ಕೆಲ್ಲ ತಿಳಿಸಿ, ಆ ದಿವ್ಯಪುರುಷ ಸಮಾಧಿಯಿಂದ ಮೇಲೇರಿ ಹೊರಟನೆಂದು ಎನ್ನುತ್ತಾರೆ. ಈ ಸಂತಸ ವಾರ್ತೆಯಿಂದ ಆನಂದಪರವಶನಾದ ಅವರೆಲ್ಲರೂ ಸೇರಿ ದೇವರನ್ನು ಕುರಿತು ಪ್ರಾರ್ಥನಾಗೀತೆಯನ್ನು ಹಾಡುತ್ತಾರೆ.
   ಈ ಪುಟ್ಟದೃಶ್ಯವೇ ಮಧ್ಯಯುಗದ ನಾಟಕದ ಬೀಜಾಣುವಾಗಿ ಪರಿಣಮಿಸಿತು. ಇದರಿಂದ ಪವಾಡ ನಾಟಕಗಳೂ ನೀತಿನಾಟಕಗಳೂ ಹುಟ್ಟಿದವೆಂದು ಹೇಳಬಹುದು.
   ರೌದ್ರ ನಾಟಕ: ಮೆಲೊಡ್ರಾಮ ಎಂಬ ನಾಟಕ ಪ್ರಕಾರಕ್ಕೆ ಕನ್ನಡದಲ್ಲಿ ಈ ಹೆಸರು. ಮೆಲೊಡ್ರಾಮ ಎಂಬ ಪದಕ್ಕೆ ಸಂಗೀತ ಬೆರೆತ ನಾಟಕ ಎಂದು ಮೂಲ ಅರ್ಥ. ಅನಂತರ ಸಂಗೀತದಿಂದ ಕೂಡಿದ, ಆರ್ಭಟವಾದ ಶೈಲಿಯಲ್ಲಿ ರಚಿವಾದ ರಂಗಭೂಮಿಯ ಕೃತಿಗಳನ್ನು ಮೆಲೋಡ್ರಾಮವೆಂದು ಕರೆದರು. 1599ರಲ್ಲಿ ಇಟಲಿಯ ರಿನುಚಿನಿ ಎಂಬಾತ ಕ್ಲಾಸಿಕಲ್ ನಾಟಕ ಪದ್ದತಿಯನ್ನು ಪುನರುಜ್ಜೀವಗೊಳಿಸಲು ಇಂಥ ಕೃತಿಗಳನ್ನು ರಚಿಸಿದ. ಅನಂತರ ಒಂದು ಶತಮಾನದ ವರೆಗೂ ಮೆಲೊಡ್ರಾಮಗಳಿಗೂ ಗೇಯನಾಟಕಗಳಿಗೂ (ಅಪೇರಾ) ಯಾವ ವ್ಯತ್ಯಾಸವೂ ಇರಲಿಲ್ಲ. 1710ರ ಅನಂತರ ಇಂಗ್ಲೆಂಡಿನಲ್ಲಿ ನೆಲೆಸಿದ ಹ್ಯಾಂಡಲ್ ತಾನು ರಚಿಸಿದ ನಾಟಕಗಳನ್ನು ಅಪೆರಾ-ಮೆಲೋಡ್ರಾಮ ಎಂದು ಕರೆದ. ರುಸೋ ಬರೆದ ಪಿಗ್‍ಮ್ಯಾಲಿಯನ್ ಎಂಬ ನಾಟಕವನ್ನು ವರ್ಣಿಸುತ್ತ ವಿಮರ್ಶಕನೊಬ್ಬ ಇದು, ಜನಸಾಮಾನ್ಯರನ್ನು ರಂಜಿಸುವ, ಪಂಡಿತರನ್ನು ಅಸಹ್ಯಪಡಿಸುವ ವಿಕಟಕೃತಿ ಎಂದ. ಇದರಿಂದ ಇಂಥ ನಾಟಕಗಳು ಆ ಕಾಲದಲ್ಲಿ ಉತ್ತಮ ಅಭಿರುಚಿಯುಳ್ಳ ಜನರಿಗೆ ಹಿಡಿಸಲಿಲ್ಲ ಎಂದು ತಿಳಿಯುತ್ತದೆ.
  ಅನಂತರ ಬಂದ ನಾಟಕಕಾರರು ಪಾತ್ರಗಳನ್ನೂ ದೃಶ್ಯಗಳನ್ನೂ ಹಿಗ್ಗಲಿಸಿ ಸಂಭಾಷಣೆಯನ್ನು ದೀರ್ಘಗೊಳಿಸಿ, ಸಂಗೀತಕ್ಕೆ ಮತ್ತಷ್ಟು ಪ್ರಾಮುಖ್ಯ ಕೊಟ್ಟರು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ರೌದ್ರಧೃಶ್ಯಗಳಿಂದ, ರೋಮಾಂಚಕಾರಿ ಕೌತುಕಭರಿತ ಸನ್ನಿವೇಶಗಳಿಂದ ಕೂಡಿದ ಸುಖಾಂತ ರೌದ್ರನಾಟಕಗಳು ರಚಿತವಾದವು. ಇಟಲಿಯಲ್ಲಿ ಹುಟ್ಟಿ ಬೆಳೆದ ಈ ನಾಟಕ ರೂಪ ಇಂಗ್ಲೆಂಡಿನಲ್ಲಿ ತಳವೂರಿತು. ಇಂಗ್ಲಿಷ್ ರಂಗಭೂಮಿಯ ಮೇಲೆ ಅಭಿನಯಿಸಿದ (1802) ಪ್ರಪ್ರಥಮ ರೌದ್ರನಾಟಕ-ಕಾವೆಂಟ್‍ಗಾರ್ಡನ್ ನಾಟಕ ಮಂದಿರದಲ್ಲಿ ಪ್ರದೆರ್ಶಿಸಿದ ಸೈಲಿನಾ ಎಂಬ ಇಟಾಲಿಯನ್ ನಾಟಕದ ಇಂಗ್ಲಿಷ್ ಬಾಷಾಂತರವಾದ ಎ ಟೇಲ್ ಆಫ್ ಮಿಸ್ಟರಿ ನಾಟಕದ ಹೆಸರೇ ಸೂಚಿಸುವಂತೆ ಇದು ಒಂದು ರಹಸ್ಯಮಯವಾದ ಕಥಾವಸ್ತುವನ್ನೊಳಗೊಂಡಿದೆ. ಇದರಲ್ಲಿ ಬರುವ ಕೌತುಕಭರಿತ ರೋಮಾಂಚಕಾರಿ ದೃಶ್ಯಗಳನ್ನು ನಾವು ಎಲಿಜûಬೆತ್ ಹಾಗೂ ಜೇಮ್ಸ್ ಯುಗದ ನಾಟಕಗಳಲ್ಲಿಯೇ ಕಾಣಬಹುದುದಾದರೂ ಇಂಗ್ಲಿಷ್ ಮೊದಲ ರೌದ್ರನಾಟಕ ಇದೇ.
 ವಿನೋದ ನಾಟಕದಿಂದ ಪ್ರಹಸನ ಎಷ್ಟು ವಿಭಿನ್ನವೋ ರೌದ್ರನಾಟಕ ಗಂಭೀರ ನಾಟಕದಿಂದ ಅಷ್ಟೇ ಭಿನ್ನ. ಇದರಲ್ಲಿನ ನಾಟಕೀಯತೆ ಕೇಂದ್ರೀಕೃತವಾಗಿರುವುದು-ವಿಚಿತ್ರ ಘಟನೆಗಳು, ವಿಕಟ ಸನ್ನಿವೇಶಗಳಲ್ಲಿ. ಬೆಳಂದಿಗಳಿನಲ್ಲಿ ಚರ್ಚಿವ ಪಿತೃವನದಲ್ಲಿ ಅಸ್ಥಿಪಂಜರಗಳೆದ್ದು ನೃತ್ಯ ಮಾಡುವುದು, ಮಾನುಷ ಕನ್ನಿಕೆಯರು ಅಸ್ಥಿ ಪಂಜರವಾಗುವುದು, ದೆವ್ವಗಳು ಬರುವುದು, ಮಾಟಗಾತಿಯರು ಮಂತ್ರವಾದಿಗಳು ವನದೇವತೆಗಳು ಪ್ರವೇಶಿಸುವುದು-ಇವು ರೌದ್ರನಾಟಕದಲ್ಲಿ ಬರುವ ಅತಿ ಸಾಧಾರಣ ದೃಶ್ಯಗಳು. 
 ಇನ್ನೊಂದು ರೀತಿಯ ರವದ್ರನಾಟಕಗಳಲ್ಲಿ ಸಾಮಾನ್ಯ ಜೀವನದ ಹಿನ್ನೆಲೆಯಲ್ಲಿ ಇಂಥ ರೋಮಾಂಚಕಾರಿ ಘಟನೆಗಳನ್ನು ಕಾಣಬಹುದು. 1843ರಲ್ಲಿ ಡಬ್ಲ್ಯು.ಜೆ. ಮಾನ್‍ಕ್ರಿಫ್ ಬರೆದ ಸ್ಕ್ಯಾಂಪ್ಸ್ ಆಫ್ ಲಂಡನ್ ಇದಕ್ಕೆ ಉದಾಹರಣೆ. ಇಂತಹ ನಾಟಕಗಳಲ್ಲಿ ಹಂತ ಹಂತವಾಗಿ ಕಥೆಯನ್ನು ಒಂದು ರೋಮಾಂಚಕಾರಿ ಶಿಖರಕ್ಕೆ ಒಯ್ಯುವುದು ಉದ್ದೇಶ. ಮುಖ್ಯವಾಗಿ ಯಾವಳೋ ಒಬ್ಬಳು ಸ್ತ್ರೀಯನ್ನು ಅಪಾಯದಿಂದ ರಕ್ಷಿಸುವ ಸನ್ನಿವೇಶಗಳೇ ಹೆಚ್ಚು.
 ರೌದ್ರನಾಟಕÀದ ತಂತ್ರವನ್ನು  ಕಾಲ ಕ್ರಮೇಣ ಉತ್ತಮ ನಾಟಕಕಾರರೂ ಬಳಸಿಕೊಂಡರು. ಅಂಥವರಲ್ಲಿ ಫ್ರಾನ್ಸ್‍ನಲ್ಲಿ ಹ್ಯೂಗೋ, ಡ್ಯೂಮಾ ಮತ್ತು ಸ್ಕೈಬ್ ಮುಂತಾದವರು ಮುಖ್ಯರು. 19ನೇ ಶತಮಾನದಲ್ಲಂತೂ ಪ್ರತಿಭಾಶಾಲಿ ನಾಟಕಕಾರರು ವಿರಳವಾಗಿ, ಪ್ರೇಕ್ಷಕರ ಅಭಿರುಚಿ ಕೆಟ್ಟು, ಇಂಥ ಅಗ್ಗವಾದ ಗಾಬರಿಗೊಳಿಸುವ ಕಥೆಯನ್ನುಳ್ಳ ನಾಟಕಗಳು ಹೆಚ್ಚು ಹೆಚ್ಚಾಗಿ ಜನಪ್ರಿಯವಾದವು. ಈಗ ಇಂಥ ನಾಟಕಗಳು ಅವನತಿ ಹೊಂದಿವೆ. ಕಲೆಯ ದೃಷ್ಟಿಯಿಂದ ಇವು ನಾಟಕಗಳೇ ಅಲ್ಲ ಎನ್ನುವವರಿದ್ದಾರೆ. 		

(ಎಚ್.ಕೆ.ಆರ್)

 ರೇಡಿಯೋ ನಾಟಕ: ರಂಗಭೂಮಿಯ ನಾಟಕ ಇರುವುದು ಪ್ರೇಕ್ಷಕರಿಗಾಗಿ. ಅದೊಂದು ದೃಶ್ಯ ಕಾವ್ಯ. ರೇಡಿಯೋ ನಾಟಕ ಇರುವುದು ಪ್ರೇಕ್ಷನಲ್ಲದ ಶ್ರೋತೃಗಾಗಿ. ಇಲ್ಲಿ ದೃಶ್ಯವಾದುದನ್ನೆಲ್ಲ ಶ್ರಾವ್ಯವಾಗಿ ಪರಿವರ್ತಿಸಬೇಕಾಗುತ್ತದೆ. ಅಲಂಕಾರಿಕವಾಗಿ ಹೇಳಬಹುದಾದರೆ ರೇಡಿಯೋ ನಾಟಕವೆಂದರೆ, ಕುರುಡರ ರಂಗಭೂಮಿ. ದೃಶ್ಯವೆಲ್ಲ ಶ್ರಾವ್ಯವಾಗಿ ಮಾರ್ಪಡುವಾಗ ಗಮನಿಸಬೇಕಾದುದು ಬಹಳಷ್ಟು ಇದೆ. ಶ್ರೋತೃ ಪಾತ್ರಗಳನ್ನು ದ್ವನಿಗಳ ವಿಭಿನ್ನತೆಯಿಂದ ಗುರುತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮೂರು ನಾಲ್ಕು ಸ್ತ್ರೀ-ಪುರುಷ ಪಾತ್ರಗಳಿಗಿಂತ ಹೆಚ್ಚಿನ ಪಾತ್ರಗಳು ಪ್ರವೇಶ ಮಾಡಿದರೆ, ಶ್ರೋತೃ ಗೊಂದಲಕ್ಕೀಡಾಗುವ ಸಂಭವ ಹೆಚ್ಚು. ನಾಟಕ ತೀರ ಕಾವ್ಯಮಯವಾಗಿ ಕ್ಲಿಷ್ಟ ಪದಸಮುಚ್ಚಯಗಳಿಂದ ಸಮಸ್ತ ವಾಕ್ಯಗಳಿಂದ ಕೂಡಿದ್ದರೆ. ಕೇಳುಗನಿಗೆ ಕಥೆಯ ಸರಣಿಯನ್ನನುಸರಿಸಿಕೊಂಡು ಹೋಗುವುದು ಕಠಿಣವಾಗಬಹುದು. ಸಂಭಾಷಣೆಯಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಿರುವುದು ರೇಡಿಯೋ ನಾಟಕದ ಮೊದಲ ಲಕ್ಷಣ. ವಾಕ್ಯಗಳು ಸುಭಾಷಿತಗಳಂತೆ ಅರ್ಥ ಸ್ವಾರಸ್ಯದಿಂದ, ಕಾವ್ಯ ಸ್ವಾರಸ್ಯದಿಂದ ಕೂಡಿ ಶ್ರುತಿ ಸುಲಭವಾಗಿದ್ದರೆ ಅನುಕೂಲ.
 ರಂಗನಾಟಕವನ್ನು ರೇಡಿಯೋ ನಾಟಕವನ್ನಾಗಿಸುವಾಗ ಮೂರು ಸಾಧನಗಳನ್ನು ಬಳಸಿಕೊಳ್ಳಬಹುದು- ಮಾತು, ಸಂಗೀತ, ಶಬ್ದ. ಹಾಗೇ ನೋಡಿದರೆ, ಈ ಮೂರೂ ಶಬ್ದವೇ. ರಂಗಭೂಮಿಯ ಮೇಲೆ ನಮ್ಮ ಎದುರಿಗೆ ಜೀವಂತ ಪಾತ್ರಗಳಿರುವುದರಿಂದ ಐದು ನಿಮಿಷಗಳಿಂದ ಅರ್ಧ ಗಂಟೆಯ ವರೆಗೂ ಸಂಭಾಷಣೆ ನಡೆದರೆ ನಮಗೆ ಭಾರವೆನಿಸುವುದಿಲ್ಲ. ರೇಡಿಯೋ ನಾಟಕದಲ್ಲಾದರೋ ಮಾತು ಒಂದೂವರೆ ನಿಮಿಷ ಮಿಕ್ಕಿ ಎರಡು ನಿಮಿಷಕ್ಕೆ ಬಂತೋ ಸಂಭಾಷಣೆ ನಿಂತು ಏನಾದರೂ ವಾದ್ಯ ದ್ವನಿಯನ್ನೋ, ಸಂಗೀತ ದ್ವನಿಯನ್ನೋ, ಯಾವುದಾದರೂ ಶಬ್ದ ವಿಶೇಷವನ್ನು ಕೇಳಲು ನಮ್ಮ ಕಿವಿ ಹಾತೊರೆಯುತ್ತದೆ. ರಂಗಭೂಮಿಯ ಮೇಲೆ ಉಪವನದ ದೃಶ್ಯವನ್ನು ನಯನ ರಂಜಕವಾಗಿ ಪ್ರದರ್ಶಿಸಬಹುದು. ರೇಡಿಯೋದಲ್ಲಿ ಉಪವನದ ದೃಶ್ಯವನ್ನು ಕಾಣಿಸಲಾಗುವುದಿಲ್ಲವಾದ್ದರಿಂದ ಪಕ್ಷಿಗಳ ಕಲಕಲ, ಕೋಗಿಲೆಯ ಕಲರವ, ವೀಣಾಗಾನ ಮುಂತಾದವುಗಳಿಂದ ಆ ಭಾವವನ್ನು ಮೂಡಿಸಬೇಕಾಗುವುದು. ಸೈನಿಕನೊಬ್ಬ ಯೋಧನ ಸಮವಸ್ತ್ರದಲ್ಲಿ ರಂಗಭೂಮಿಯನ್ನು ಪ್ರವೇಶ ಮಾಡಿದರೆ, ಅವನ ಮಿಲಿಟರಿ ಬೂಟಿನ ಸಪ್ಪಳ ಮಾತ್ರದಿಂದಲೇ ಅವನ ಪ್ರವೇಶವನ್ನು ಧ್ವನಿಸಬೇಕಾಗುವುದು.
 ರೇಡಿಯೋ ನಾಟಕ ಕನ್ನಡ ಸಾಹಿತ್ಯಕ್ಕೆ ತೀರಾ ಹೊಸದು. ಗ್ರಂಥಸ್ಥ ರೇಡಿಯೋ ನಾಟಕಗಳು ಕನ್ನಡದಲ್ಲಿ ಅತ್ಯಂತ ಕಡಿಮೆ. ನಮ್ಮ ದೇಶದಲ್ಲಿ ಅವತಾರವಾಗಿ 45 ವರ್ಷಗಳು ಸಂದಿವೆ. ಭಾರತದ ಇತರ ಭಾಷೆಗಳೊಡನೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ರೇಡಿಯೋ ನಾಟಕ ಪ್ರಸಾರ, ಸಾಹಿತ್ಯ ಪ್ರಕಾಶನ ಇತ್ತೀಚಿನದು ಮಾತ್ರ, ಹತ್ತು-ಹನ್ನೆರಡು ವರ್ಷಗಳದ್ದು. ತತ್ಪೂರ್ವದಲ್ಲಿ ಮೈಸೂರು ಆಕಾಶವಾಣಿ ಸ್ವತಂತ್ರವಾಗಿ ಪ್ರಸಾರ ಮಾಡುತ್ತಿತ್ತು. ಆಗಲೂ ಕೆಲವೊಂದು ಮುಖ್ಯ ಮಾದರಿಯ ನಾಟಕಗಳು ಪ್ರಸಾರವಾಗಿವೆ; ಪ್ರಕಾಶಗೊಂಡಿವೆ. 
 ಆಧುನಿಕ ಭಾರತೀಯ ಸಾಹಿತ್ಯ ವಿವಿಧ ಮುಖವಾಗಿ ಪಾಶ್ಚಾತ್ಯ ಸಾಹಿತ್ಯದಿಂದ ಸ್ಪೂರ್ತಿ ಪಡೆದಂತೆ ಭಾರತೀಯ ರೇಡಿಯೋ ನಾಟಕ ಕೂಡ, ತಂತ್ರದಲ್ಲಿ, ವಸ್ತು ವಿನ್ಯಾಸ ಕ್ರಮದಲ್ಲಿ ಪಾಶ್ಚಾತ್ಯ ರೇಡಿಯೋದಿಂದಲೆ ಸ್ಪೂರ್ತಿ ಪಡೆದಿದೆ. ಪಾಶ್ಚಾತ್ಯ ಪ್ರಸಾರ ನಾಟಕದ ಇತಿಹಾಸ ಕೂಡ ಇಪ್ಪತೈದು ವರ್ಷಗಳ ಅವಧಿಯದು. ಪಾಶ್ಚಾತ್ಯ ರೇಡಿಯೋ ನಾಟಕದ ಇತಿಹಾಸವನ್ನು ವಿವೇಚಿಸುವಾಗ ನಾವು ಮುಖ್ಯವಾಗಿ ವಾಯ್ಸ್ ಆಫ್ ಅಮೆರಿಕ ಹಾಗೂ ಬಿ.ಬಿ.ಸಿ. ಪ್ರಸಾರಗಳನ್ನು ಗುರಿಯಾಗಿಟ್ಟುಕೊಂಡು ಅವಲೋಕನ ಮಾಡಬಹುದಾಗಿದೆ. ಅರ್ಬೇಬಾರ್ಡ್ ಮ್ಯಾಕ್‍ಲೀಷ್‍ನ ಫಾಲ್ ಆಫ್ ದ ಸಿಟಿ ಎಂಬ ನಾಟಕದಿಂದ ನಿಜವಾದ ರೇಡಿಯೋ ನಾಟಕ ರೂಪ ತಾಳಿತು ಎಂದು ಹೇಳುತ್ತಾರೆ. ಇದು ನಡೆದುದು                      1937 ರಲ್ಲಿ. ಈ ನಾಟಕ ತನ್ನ ಸತ್ವ ಶಕ್ತಿಗಳಿಂದಾಗಿ , ವಿಶಿಷ್ಟ ತಂತ್ರಗಳಿಂದಾಗಿ ಪಾಶ್ಚಾತ್ಯ ಪ್ರಸಾರ ನಾಟಕವನ್ನು ರೂಪಿಸಿ ಬೆಳೆಸಲು ದಾರಿದೇವಿಗೆಯಾದುದಲ್ಲದೆ ಪ್ರಸಾರನಾಟಕಕ್ಕೂ ರಂಗನಾಟಕಕ್ಕೂ ಇರುವ ಭೇದವನ್ನು ನಿಚ್ಚಳವಾಗಿ ತೋರಿಸಿಕೊಟ್ಟಿತು. ಮ್ಯಾನ್ ಫ್ರಮ್ ಮಾರ್ಸ್ ಎಂಬ ಅದ್ಭುತರಮ್ಯ ಕಲ್ಪನಾನಾಟಕವನ್ನು ಆರ್ಸನ್ ವೆಲ್ಸ್ ಅಮೆರಿಕದಲ್ಲಿ ಪ್ರಸಾರ ಮಾಡಿದಾಗ ಅದರ ಅದ್ಭುತಕ್ಕೆ ಬೆರಗಾಗಿ ದಿಕ್ಕೆಟ್ಟ ಜನ ಪ್ರಸಾರಕೇಂದ್ರವನ್ನೇ ಮುತ್ತಿ ಹಾವಳಿ ಮಾಡಿದರಂತೆ. ಪಾಶ್ಚಾತ್ಯ ಪ್ರಸಾರ ನಾಟಕ ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಬೆಳೆದಿದೆ. ರೇಡಿಯೊ ಬರೆಹಗಾರರಿಗೆ ಉತ್ತಮ ಗಳಿಕೆಯ ಸಾಧನವಾಗಿದೆ. ಗಾರ್ಮಿನ್ ತಾರ್ವಿನ್ ಕೂಡ ಪ್ರತಿಭಾವಂತ ರೇಡಿಯೊ ನಾಟಕಕಾರನೆಂದು ಹೆಸರಾಗಿದ್ದಾನೆ. ಬಿ.ಬಿ.ಸಿ.ಯಿಂದ ಪ್ರಸಾರವಾದ ಟಾಯರಾನ್ ಗಥ್ರೀ ಅವರ ದಿ ಫ್ಲವರ್ಸ್ ಆರ್ ನಾಟ್ ಫಾರ್ ಯು ಟು ಪಿಕ್ ಎಂಬ ನಾಟಕದ ತಂತ್ರ ಬಹಳ ಚುರುಕಾದದ್ದು. ಆರ್ಸನ್ ವೆಲ್ಸ್, ಫೆಲಿಕ್ಸ ಫೆಲ್‍ತನ್, ನಾಲ್ ಗೀಲ್ ಗುಡ್ ಮೊದಲಾದ ಶ್ರೇಷ್ಠ ದರ್ಜೆಯ ನಿರ್ದೇಶಕರನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಾತ್ರ್ರ್, ಓನೀಲ್, ಮಾಮ್, ಆಸ್ಬರ್ನ್ ಮೊದಲಾದ ಹೆಸರಾಂತ ರಂಗಭೂಮಿಯ ನಾಟಕಕಾರರ ಕೃತಿಗಳನ್ನು ಈ ನಿರ್ದೇಶಕರು ಪ್ರಸಾರಕ್ಕೆ ಅಳವಡಿಸಿ ಬಿತ್ತರಿಸಿದ್ದಾರೆ.
   ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ನೀರಗಂಟಿ ಮಾರ ಎಂಬ ರೇಡಿಯೊ ನಾಟಕ ಕನ್ನಡದ ಮೊದಲನೆಯ ರೇಡಿಯೊ ನಾಟಕವೆಂದು ಹೇಳಬಹುದು ಎಂಬುದಾಗಿ ಎಚ್.ಕೆ. ರಂಗನಾಥ್ ಅವರು ತಮ್ಮ ಪ್ರಸಾರ ನಾಟಕ ಪ್ರಬಂಧವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ನೀರಗಂಟಿ ಮಾರ, ಆರ್.ಕೆ.ನಾರಾಯಣ ಅವರ ವಾಚ್‍ಮನ್ ಆಫ್ ದಿ ಲೇಕ್ ಎಂಬ ನಾಟಕದ ಅನುವಾದ. ಅನುವಾದಿಸಿದವರು ವಿ.ಕೆ.ಶ್ರೀನಿವಾಸನ್. ರೇಡಿಯೊ ನಾಟಕದಲ್ಲಿ ನಾಟಕದ ತಂತ್ರದ ದೃಷ್ಟಿಯಿಂದ ಯಶಸ್ವಿ ನಾಟಕಕಾರರಲ್ಲಿ ಶ್ರೀರಂಗ, ಶಿವರಾಮ ಕಾರಂತ, ಚದುರಂಗ, ಎಚ್.ಕೆ.ರಂಗನಾಥ್, ಸಮೇತಹಳ್ಳಿ ರಾಮರಾವ್, ನಾ.ಕಸ್ತೂರಿ, ಶಿವಸ್ವಾಮಿ, ಬೀಚಿ, ಎ.ಕೆ. ರಾಮಾನುಜನ್, ಬಿ.ಸಿ. ರಾಮಚಂದ್ರ ಶರ್ಮ, ಪರ್ವತವಾಣಿ ಮೊದಲಾದವರನ್ನು ಇಲ್ಲಿ ನೆನೆಯಬಹುದಾಗಿದೆ. ಶ್ರೀರಂಗರ ಪ್ರಾರಬ್ಧ, ರಾಮಚಂದ್ರ ಶರ್ಮರ ಸೆರಗಿನ ಕೆಂಡಗಳಲ್ಲಿ ತಂತ್ರ ಯಶಸ್ವಿಯಾಗಿ ಬಳಸಲ್ಪಟ್ಟಿದೆ. ವಾದ್ಯಗಳ ಸಹಾಯದಿಂದ ರ್ಧವನಿವಿಶೇಷಗಳ ಸಹಾಯದಿಂದ ವಾತಾವರಣವನ್ನು ಕಟ್ಟಿ ನಾಟಕವನ್ನು ಹೇಗೆ ಯಶಸ್ವಿಯಾಗಿಸಬಹುದು ಎಂಬುದಕ್ಕೆ ಚದುರಂಗರ ಶವದ ಮನೆ ತಕ್ಕ ನಿದರ್ಶನವಾಗಿದೆ. ತಂದೆತಾಯಿಗಳು ವಿವಾಹ ವಿಷಯದಲ್ಲಿ ಮಗನ ಹೃದ್ಗತವನ್ನರಿಯಲು ಅವನ ಹೃದಯಾಂತರಾಳವನ್ನೇ ಪ್ರತ್ಯಕ್ಷವಾಗಿ ಪ್ರವೇಶಿಸುವ ತಂತ್ರ ಶಿವಸ್ವಾಮಿಯವರ ಹೃದಯಾಂತರಾಳ ಎಂಬುದರಲ್ಲಿದೆ.
  ಭಾರತೀಯ ಇತರ ಭಾಷೆಗಳಲ್ಲಿಯೂ ರೇಡಿಯೋ ನಾಟಕ ಪ್ರಗತಿಪರವಾಗಿ ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸಿ ಮುಂದುವರಿಯುತ್ತಿದೆ. ಪು.ಲ. ದೇಶಪಾಂಡೆ ಉಪೇಂದ್ರ ಅಶ್ಕ್, ರವೀಂದ್ರನಾಥ್ ಷಿಗೆ, ವಿಜಯ ತೆಂಡೂಲಕರ್, ಸೋಮಸುಂದರಂ, ಜನಾರ್ದನ ಮೆನನ್, ಎ.ಸಿ.ಮೊಹಾಂತಿ, ರಾಜಮನ್ನಾರ್ ಮೊದಲಾದವರು ಈ ದಿಸೆಯಲ್ಲಿ ಯಶಸ್ವಿ ರೇಡಿಯೊ ನಾಟಕಗಳನ್ನು ಬರೆದಿದ್ದಾರೆ.
   ಇವಲ್ಲದೆ ಸಂಗೀತರೂಪಕ, ಗೇಯ ನಾಟಕಗಳು ರೇಡಿಯೊ ಪ್ರಕಾರದ ಮುಖ್ಯ ಅಂಗಗಳಾಗಿವೆ. ವಿಜಯದಶಮಿ, ದೀಪಾವಳಿ, ಶಿವರಾತ್ರಿ, ಕೃಷ್ಣಾಷ್ಟಮಿಗಳಂಥ ಹಬ್ಬಗಳನ್ನು ಕುರಿತು ಲೋಕಗೀತಗಳನ್ನೂ ಲೋಕಕತೆಗಳನ್ನೂ ಶೇಖರಿಸಿ ಇವುಗಳ ಮಹತ್ತ್ವವನ್ನು ತಿಳಿಸಿ ಹೇಳುವ ಸಂಗೀತ ರೂಪಕಗಳು  ಒಂದು ಪ್ರಕಾರವಾದರೆ ಯಾವ ವಾಚ್ಯಶಬ್ದವೂ ಇಲ್ಲದೆ ಕೇವಲ ಗೀತಗಳ ಮೂಲಕವೆ ಹೆಣೆಯಲ್ಪಟ್ಟ ವಿಶೇಷ ಶುದ್ಧಸಂಗೀತ ನಾಟಕ ಗೇಯನಾಟಕವೆಂದು ಕರೆಯಲ್ಪಡುತ್ತವೆ. ಗೇಯನಾಟಕದ ಪ್ರಥಮ ಪ್ರಯೋಗದ ನಡೆದುದು ಕನ್ನಡದ ಮಟ್ಟಿಗಾದರೂ ಶಿವರಾಮ ಕಾರಂತರಿಂದ. ರಂಗಭೂಮಿಯ ಮೇಲೆ ಮೊದಲು ಯಶಸ್ವಿಯಾಗಿ ಪ್ರಯೋಗಿಸಿ ಆಮೇಲೆ ರೇಡಿಯೊದಲ್ಲಿ ಅವನ್ನು ಸಾದರಪಡಿಸಲಾಯಿತು. ಕಿಸಾಗೌತಮಿ, ಸೋಮಿಯ ಭಾಗ್ಯ, ಮದುವೆಗಿಂತ ಮಸಣವೇ ಲೇಸು ಇವೇ ಮೊದಲಾದವು ತುಂಬ ಯಶಸ್ವಿಯಾದವು. ಪು.ತಿ. ನರಸಿಂಹಾಚಾರ್ಯರ ಗೋಕುಲ ನಿರ್ಗಮನ, ಹರಿಣಾಭಿಸರಣಗಳು ಚಿರಸ್ಮರಣೀಯವಾದ ಗೇಯನಾಟಕಗಳು. ಕಾರಂತರ ನದೀದರ್ಶನ ಮಾತ್ರ ಶಬ್ದ-ವಾದ್ಯಗಳಲ್ಲದೆ ಕೇವಲ ವಾದ್ಯಸಂಗೀತದಿಂದ ನಿರೂಪಿಸಲ್ಪಟ್ಟ ಸಾಂಕೇತಿಕ ಗೇಯನಾಟಕ.                      
   (ಎನ್.ಕೆ.ಕೆ.)
   ದಶರೂಪಕಗಳು: ದಶರೂಪಕಗಳಲ್ಲಿ ನಾಟಕ ಉಳಿದೆಲ್ಲ ರೂಪಕಕ್ಕಿಂತ ಶ್ರೇಷ್ಠವಾದದ್ದು. ಇದರ ವಸ್ತು ಪ್ರಸಿದ್ಧ. ನಾಯಕ ಧೀರೋದಾತ್ತ. ರಸಗಳಲ್ಲಿ ವೀರ ಶೃಂಗಾರ ಮುಖ್ಯ. ಒಳ್ಳೆಯ ನಾಟಕಗಳಲ್ಲಿ ಅಭಿಜ್ಞಾನಶಾಕುಂತಳ, ಉತ್ತರ ರಾಮಚರಿತೆ, ನಾಗನಂದ ಉದಾಹರಣೆಗಳು.
   ಪ್ರಕರಣ: ಬಹುಮಟ್ಟಿಗೆ ನಾಟಕಾಂಗಗಳಲ್ಲಿ ಇದು ನಾಟಕವನ್ನೇ ಹೋಲುತ್ತದೆ. ಇದರ ವಸ್ತು ಕಲ್ಪಿತ, ಸಾಮಾನ್ಯ ಅಥವಾ ಸಾಧಾರಣ. ಶೃಂಗಾರವೇ ಮುಖ್ಯ ರಸ. ನಾಯಕ ಧೀರ ಪ್ರಶಾಂತ. ಮೃಚ್ಫಕಟಿಕ, ಮಾಲತೀಮಾಧವ ಇವು ಒಳ್ಳೆಯ ಪ್ರಕರಣಗಳು.
   ಭಾಣ: ಇದರ ವ್ಯಾಪ್ತಿ ಒಂದೇ ಅಂಕ. ಅಸಂಬದ್ಧ ಸ್ವಾರಸ್ಯಕರ ಸಂಗತಿಗಳ ಮಧುರ ಸಮ್ಮೇಳನವಿರಬೇಕು. ಕಥೆ ಕಲ್ಪಿತ. ಉದಾ.-- ಲೀಲಾಮಧುಕರ.
   ಪ್ರಹಸನ: ಕಲ್ಪಿತ ವಸ್ತುವನ್ನುಳ್ಳದ್ದು. ಕೀಳು ಜನರ ಚರಿತ್ರೆಯೇ ಸಾಮಾನ್ಯ. ಪ್ರಧಾನ ರಸ ಹಾಸ್ಯ.
   ಡಿಮ: ವಸ್ತು ಪ್ರಸಿದ್ಧವಾದ್ದು. ಮಾಯೆ ಇಂದ್ರಜಾಲ ಜಗಳ ಇವುಗಳಿಂದ ಕೂಡಿದ್ದು. ಪ್ರಧಾನ ರಸ ರೌದ್ರ. ಉದಾ.-ತ್ರಿಪುರಸಂಹಾರ.
   ವ್ಯಾಯೋಗ: ಪ್ರಖ್ಯಾತ ವಸ್ತುವನ್ನುಳ್ಳದ್ದು; ಒಂದು ದಿನದ ಯುದ್ಧ ವಿಚಾರ ಬರುವುದು ಸಾಮಾನ್ಯ. ನರಕಾಸುರವ್ಯಾಯೋಗ, ಮಧ್ಯಮವ್ಯಾಯೋಗ ಒಳ್ಳೆಯ ಉದಾಹರಣೆಗಳು.
   ಸಮವಾಕರ: ವಸ್ತುಪ್ರಖ್ಯಾತ: ದೇವ ಅಥವಾ ಅಸುರರಿಗೆ ಸಂಬಂಧಿಸಿದ್ದು. ನಾಯಕರು ಪ್ರಖ್ಯಾತ ದೇವದಾನವರು. ಪ್ರಧಾನ ರಸ ವೀರ. ಉದಾ.- ಸಮುದ್ರ ಮಥನ.
   ವೀಥಿ: ಪಾತ್ರಗಳು ಒಂದೆರಡು ಅಷ್ಟೆ.. ಪ್ರಧಾನ ರಸ ಶೃಂಗಾರ.
   ಅಂಕ: ಪಾಮರಜನರೇ ಪಾತ್ರದಾರಿಗಳು. ಕರುಣರಸ ಪ್ರಧಾನ.
   ಈಹಾಮೃಗ: ಮಿಶ್ರವಸ್ತುವನ್ನುಳ್ಳದ್ದು. ಅಂದರೆ ಸ್ವಲ್ಪ ಪ್ರಖ್ಯಾತ. ಸ್ವಲ್ಪ ಕಲ್ಪಿತ. ನಾಯಕರು ಪ್ರತಿನಾಯಕರು ಧೀರೋದಾತ್ತರು.   
                                                       (ಜಿ.ಎಂ.)