ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಥಿಕ ಸ್ವಾತಂತ್ರ್ಯ

ವಿಕಿಸೋರ್ಸ್ದಿಂದ

ಆರ್ಥಿಕ ಕ್ಷೇತ್ರದಲ್ಲಿ ಯಾವುದೇ ರೀತಿಯ ಪಾತ್ರವಹಿಸುವವರಿಗೆ ವ್ಯವಸ್ಥಿತ ಸಮಾಜದ ಚೌಕಟ್ಟಿನೊಳಗೆ ಅವರವರ ಇಷ್ಟಾನುಸಾರವಾಗಿ ವರ್ತಿಸಲು ಇರುವ ಅವಕಾಶವನ್ನು ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯ (ಎಕನಾಮಿಕ್ ಫ್ರೀಡಂ) ಎಂದು ಹೇಳಬಹುದು.

ಆರ್ಥಿಕ ಸ್ವತಂತ್ರತೆಯಲ್ಲಿ ಅಡಕವಾಗಿರುವ ಮುಖ್ಯ ಅಂಶಗಳನ್ನು ಕೆಳಕಂಡಂತೆ ವಿಂಗಡಿಸಿ ವಿಶದಪಡಿಸಲಾಗುವುದು:

  1. ಉದ್ಯಮಶೀಲತೆಯ ಸ್ವತಂತ್ರತೆ.
  2. ಅಪೇಕ್ಷಿತ ಉದ್ಯೋಗ ಕೈಗೊಳ್ಳಲು ಜನರಿಗೆ ಇರುವ ಸ್ವತಂತ್ರತೆ.
  3. ಸಂಘ ಸ್ಥಾಪನೆ ಹಾಗೂ ಸಂಘಬಲದ ಮೂಲಕ ಆರ್ಥಿಕ ಷರತ್ತುಗಳನ್ನು ಸರಿಪಡಿಸಿಕೊಳ್ಳುವ ಸ್ವತಂತ್ರತೆ.
  4. ಅನುಭೋಗಿಗಳಿಗೆ ಆಯ್ಕೆಯ ಸ್ವತಂತ್ರತೆ.
  5. ರಾಷ್ಟ್ರದ ಆರ್ಥಿಕ ಸ್ವತಂತ್ರತೆ.


ಅವರವರ ಇಷ್ಟಾನುಸಾರವಾಗಿ ಉದ್ಯಮಗಳನ್ನು ಆರಂಭಿಸುವ, ವ್ಯವಸ್ಥೆಗೊಳಿಸುವ ಮತ್ತು ನಡೆಸುವ ಸ್ವಾತಂತ್ರ್ಯ ಆರ್ಥಿಕ ಸ್ವಾತಂತ್ರ್ಯದ ಒಂದು ಮುಖ. ಈ ವಿಧದ ಸ್ವತಂತ್ರತೆ ಸಮಾಜದ ರಾಜಕೀಯ ಆರ್ಥಿಕ ಪದ್ಧತಿಯನ್ನು ಅವಲಂಬಿಸಿದೆ. ಬಂಡವಾಳಶಾಹಿ ರಾಷ್ಟ್ರದಲ್ಲಿ ಭೂಮಿ, ಬಂಡವಾಳ ಮತ್ತು ಇತರ ರೂಪದ ಆಸ್ತಿಗಳನ್ನು ಕೂಡಿಸುವ ಮತ್ತು ಅವರವರ ಇಷ್ಟಾನುಸಾರ (ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಲಾಗುವ ಕೆಲವು ನಿಯಮಗಳಿಗೆ ಒಳಪಟ್ಟು) ಉಪಯೋಗಿಸುವ ಹಕ್ಕು, ಕ್ರಿಯಾಸ್ವಾತಂತ್ರ್ಯದ ಖಾಸಗಿ ವ್ಯಕ್ತಿಗಳಿಗೆ ಹೆಚ್ಚು ಹೆಚ್ಚಾಗಿರುತ್ತದೆ. ಖಾಸಗಿ ಆಸ್ತಿ ಪದ್ಧತಿಯನ್ನು ರದ್ದುಮಾಡಿ, ಉತ್ಪಾದನಾಂಗ ಗಳಾದ ಭೂಮಿ ಹಾಗೂ ಬಂಡವಾಳಗಳನ್ನು ರಾಷ್ಟ್ರೀಕರಣಮಾಡಿ ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪದ್ಧತಿಗಳಲ್ಲಿ ಖಾಸಗಿ ಉದ್ಯಮ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲ. ಹೀಗೆ ಉತ್ಪಾದನಾಂಗಗಳ ರಾಷ್ಟ್ರೀಕರಣವಾಗದೆ ಆಸ್ತಿಯ ಖಾಸಗಿ ಒಡೆತನವಿರುವ ರಾಷ್ಟ್ರಗಳಲ್ಲೂ ಆರ್ಥಿಕ ಯೋಜನಾ ಪದ್ಧತಿ ಅನುಷ್ಠಾನದಲ್ಲಿ ಇರುವುದಾದರೆ ಉದ್ಯಮ ಸ್ವಾತಂತ್ರ್ಯ ಮೊಟಕಾಗುವುದು ಖಂಡಿತ. ಇಂದಿನ ಪ್ರಪಂಚದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪದ್ಧತಿಯ ರಾಷ್ಟ್ರಗಳನ್ನು ಬಿಟ್ಟರೂ ಇತರ ಅನೇಕ ರಾಷ್ಟ್ರಗಳು ಆರ್ಥಿಕಯೋಜನೆಯನ್ನು ಅನುಸರಿಸುವುದರಿಂದ ಉದ್ಯಮ ಸ್ವಾತಂತ್ರ್ಯವನ್ನು ಮಿತಿಗೊಳಿಸಿದಂತಾಗಿದೆ. ಉದಾಹರಣೆಗೆ ಭಾರತದಲ್ಲಿ ೧೯೫೬ರಲ್ಲಿ ಘೋಷಿತವಾದ ಕೈಗಾರಿಕಾನೀತಿಯ ಪ್ರಕಾರ ಅನೇಕ ಹಿರಿಯ ಕೈಗಾರಿಕೆಗಳಲ್ಲಿ ಖಾಸಗಿ ಉದ್ಯಮಿಗಳಿಗೆ ಪ್ರವೇಶವಿಲ್ಲದಂತಾಗಿದೆ. ಇತರ ಕೈಗಾರಿಕೆಗಳ ಬಗ್ಗೆಯೂ ಯೋಜನೆಯ ಉದ್ದೇಶ ಹಾಗೂ ಆವಶ್ಯಕತೆಗಳಿಗೆ ಅನುಸಾರವಾಗಿ ವಿವಿಧ ನಿಯಂತ್ರಣಗಳು ಇರುವುದರಿಂದ ಈ ಕ್ಷೇತ್ರದಲ್ಲಿಯೂ ಪುರ್ಣ ಉದ್ಯಮ ಸ್ವಾತಂತ್ರ್ಯವಿರುವು ದಿಲ್ಲ. ಆದರೆ ಇಂಥ ಯೋಜಿತ ನಿಯಂತ್ರಣಗಳಿಂದ ಉಂಟಾಗುವ ಇತಿಮಿತಿಗಳು ಒಂದು ಹಿರಿಯ ಉದ್ದೇಶದ ಸಾಧನೆಗಾಗಿ ವಿಧಿಸಲಾಗುವುದರಿಂದ ಉದ್ಯಮ ಸ್ವಾತಂತ್ರ್ಯ ಈ ರೀತಿ ಕಡಿಮೆಯಾದುದರ ಬಗ್ಗೆ ಸಮಾಜ ವಿಷಾದಿಸಬೇಕಾಗಿಲ್ಲ ಎಂದು ಹೇಳುವುದು ಒಂದು ವಾದ. ಆದರೆ ಇದೇ ಉದ್ದೇಶಗಳ ಸಾಧನೆಗೆ ಉದ್ಯಮ ಸ್ವಾತಂತ್ರ್ಯದ ಇಷ್ಟುಮಟ್ಟಿನ ನಿಯಂತ್ರಣ ಅನಾವಶ್ಯಕ ಎಂಬುದು ಇನ್ನೊಂದು ವಾದ. ಎಷ್ಟುಮಟ್ಟಿನ ಮತ್ತು ಯಾವ ರೀತಿಯ ಉದ್ಯಮ ಸ್ವಾತಂತ್ರ್ಯ ಅಪೇಕ್ಷಣೀಯ ಎಂಬುದು ಹೀಗೆ ಒಂದು ವಿವಾದಾಸ್ಪದ ಪ್ರಶ್ನೆಯಾಗಿ ಉಳಿದಿದೆ.


ಅಪೇಕ್ಷಿತ ಉದ್ಯೋಗ ಕೈಗೊಳ್ಳುವ ಸ್ವಾತಂತ್ರ್ಯ ಜನರ ಆರ್ಥಿಕ ಸ್ವಾತಂತ್ರ್ಯದ ಇನ್ನೊಂದು ಮುಖ್ಯ ಭಾಗ. ಯಾವುದೇ ಆಧುನಿಕ ಸಮಾಜ ವ್ಯವಸ್ಥೆಯಲ್ಲಿಯೇ ಆಗಲಿ ಪ್ರತಿಯೊಬ್ಬರಿಗೂ ಅವರವರ ಇಷ್ಟಾನುಸಾರವಾದ ಉದ್ಯೋಗ ಲಭಿಸುವ ಅವಕಾಶವಿರುವುದು ಅಸಂಭವ. ಸಂದರ್ಭಗಳ ಆವಶ್ಯಕತೆಗೆ ಕಟ್ಟುಬಿದ್ದು, ಅವರ ವಾಸ್ತವ ಅಭಿರುಚಿಗೆ ಅನುಗುಣವಾಗಿಲ್ಲದಿದ್ದರೂ ಸಂಪಾದನೆಗೋಸ್ಕರ ಒಂದು ಉದ್ಯೋಗ ಹಿಡಿಯಬೇಕಾಗಿ ಬರುವುದು ಲೋಕದ ಅನುಭವ. ವೈದ್ಯನಾಗಬಯಸಿದವ ಕೇವಲ ಗುಮಾಸ್ತನಾಗಿಯೂ ಎಂಜಿನಿಯರಾಗಬಯಸಿದವ ಉಪಾಧ್ಯಾಯನಾಗಿಯೂ ಜೀವನ ಕಳೆಯುವಂಥ ಅನೇಕ ನಿದರ್ಶನಗಳಿರಬಹುದು. ಹೀಗೆ ಕೇವಲ ಆರ್ಥಿಕ ಸಂದರ್ಭಗಳ ಒತ್ತಡಗಳಿಗೆ ಒಳಗಾಗಬೇಕಾಗಿ ಬರುವುದರಿಂದ ಉದ್ಯೋಗ ಆಯ್ಕೆ ಸ್ವಾತಂತ್ರ್ಯ ಮೂಲತಃ ಒಂದು ಮಿತಿಗೆ ಒಳಗಾಗಿರುವುದು. ಎಲ್ಲರಿಗೂ ಸಮಾನಾವಕಾಶ ಒದಗಿಸುವಂತೆ ವಿಕಾಸವಾಗುವ ಸಂಪದ್ಯುಕ್ತ ಸಮಾಜಗಳಲ್ಲಿ ಇಂಥ ಒತ್ತಡಗಳು ಕಡಿಮೆಯಾಗುವುವು. ಉದ್ಯೋಗ ಆಯ್ಕೆಯ ಸ್ವಾತಂತ್ರ್ಯದ ಮೇಲಿನ ಇನ್ನೊಂದು ರೀತಿಯ ಮಿತಿ ಕಾನೂನು ನಿರ್ಮಿತವಾದುದು. ಸಾಮಾನ್ಯವಾಗಿ ಯುದ್ಧಕಾಲದಲ್ಲಿ ಸೈನ್ಯ ಹಾಗೂ ಇತರ ಜರೂರು ಸೇವೆಗಳಿಗೆ ಒತ್ತಾಯಪುರ್ವಕವಾಗಿ ಜನರನ್ನು ಸೇರಿಸಿಕೊಳ್ಳಬೇಕಾಗಿ ಬರುವುದು. ಆದರೆ ಇಂಥ ಸಂದರ್ಭಗಳು ವಿಶೇಷ ಹಾಗೂ ತಾತ್ಕಾಲಿಕ. ಇವುಗಳಿಂದ ಉಂಟಾಗುವ ಆಯ್ಕೆಯ ಸ್ವಾತಂತ್ರ್ಯ ಮಿತಿಯನ್ನು ರಾಷ್ಟ್ರೀಯ ರಕ್ಷಣೆ ಹಾಗೂ ಹಿತದೃಷ್ಟಿಯಿಂದ ಜನರು ತಾತ್ಕಾಲಿಕವಾಗಿ ಸಹಿಸಬೇಕಾಗುವುದು. ಜನಬಲವನ್ನು ವಿವಿಧ ಉದ್ಯೋಗಗಳಿಗೆ ಈ ರೀತಿ ಒತ್ತಾಯಪುರ್ವಕವಾಗಿ ಹಂಚುವ ಏರ್ಪಾಡು ಶಾಂತಿಕಾಲದಲ್ಲೂ ಇರುವುದಾದರೆ ಅದು ಅಸಹನೀಯವೇ ಸರಿ. ಈ ರೀತಿ ಜನರನ್ನು ಪ್ರತಿಯೊಂದು ಉದ್ಯೋಗಕ್ಕೂ ಬಲವಂತದಿಂದ ಸೇರಿಸುವ ಆವಶ್ಯಕತೆ ಇಲ್ಲದಿರುವುದಾದರೂ ಸಮಾಜವಾದಿ, ಕಮ್ಯುನಿಸ್ಟ್ ಮತ್ತು ಇತರ ಆರ್ಥಿಕ ಯೋಜಿತಪದ್ಧತಿಗಳಲ್ಲಿ ಜನರ ಉದ್ಯೋಗ ಸ್ವಾತಂತ್ರ್ಯವನ್ನು ಒಂದು ರೀತಿಯಲ್ಲಿ ಮಿತಿಗೊಳಿಸುವುದು ಅನಿವಾರ್ಯವಾಗುವುದು. ಯೋಜಿತ ಗುರಿಗಳ ಸಾಧನೆಗೆ ಉಪಯುಕ್ತವಾಗುವಂತೆ ದೇಶದ ಜನಬಲವನ್ನು ರೂಢಿಸಬೇಕಾದರೆ ಒಂದು ನಿಯಮಿತ ರೀತಿಯಲ್ಲಿ ಶ್ರಮಬಲವನ್ನು ಹಂಚಬೇಕಾಗಿ ಬರುವುದು. ವಿವಿಧ ಉದ್ಯೋಗ ಕ್ಷೇತ್ರಗಳಿಗೆ ಪ್ರವೇಶಿಸುವ ಜನಸಂಖ್ಯೆಯನ್ನು ಸ್ಥೂಲವಾಗಿಯಾದರೂ ನಿಯಂತ್ರಿಸಬೇಕಾಗು ವುದು. ಈ ಪ್ರಕಾರವಾಗಿ ಜನಬಲ ಹಂಚಿಕೆಯಾಗಲು ಅನುಕೂಲವಾಗುವಂತೆ ವಿದ್ಯಾಭ್ಯಾಸ, ಶಿಕ್ಷಣ ಮತ್ತು ವಿವಿಧ ಪ್ರೇರಕಶಕ್ತಿಗಳೂ ರೂಪಿಸಲ್ಪಡಬೇಕಾಗುವುವು. ಇವೆಲ್ಲವೂ ಜನಬಲದ ಯೋಜನೆಗೆ ಸಂಬಂಧಿಸಿದ ವಿಷಯಗಳು. ಇಂಥ ಯೋಜನೆಗಳು ಇರುವಲ್ಲಿ ಉದ್ಯೋಗ ಆಯ್ಕೆಯ ಸ್ವಾತಂತ್ರ್ಯಕ್ಕೆ ಸಮಾಜ ಒಂದು ವ್ಯವಸ್ಥಿತ ನಿರ್ದಿಷ್ಟಚೌಕಟ್ಟನ್ನು ನಿರ್ಮಿಸಿದಂತೆ ಆಗುವುದು.


ಯೋಜನಾಪದ್ಧತಿಯನ್ನು ಅನುಸರಿಸಿದ ಅಥವಾ ಸುಲಭರೂಪದ ಯೋಜನೆ ಹೊಂದಿರುವ ರಾಷ್ಟ್ರಗಳಲ್ಲಿ ಮಾರುಕಟ್ಟೆಯ ಬೇಡಿಕೆ ನೀಡಿಕೆ ಶಕ್ತಿಗಳಿಗೆ ಅನುಸಾರವಾಗಿ ಜನಬಲ ತಾನಾಗಿಯೇ ಹಂಚಿಕೊಳ್ಳುವುದು. ಇಂಥ ವ್ಯವಸ್ಥೆಯಲ್ಲಿ ಜನರ ಉದ್ಯೋಗ ಆಯ್ಕೆಗೆ ಕಾನೂನುನಿರ್ಮಿತ ಮಿತಿ ಅಷ್ಟಾಗಿ ಇರುವುದಿಲ್ಲ.

ಕಾರ್ಮಿಕರು ಮತ್ತು ಮಾಲೀಕರು ಅವರವರ ಹಿತಾಸಕ್ತಿಗಳ ಪೋಷಣೆಗಾಗಿ ಸಂಘಗಳನ್ನು ಏರ್ಪಡಿಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದುದು ಆಧುನಿಕ ಆರ್ಥಿಕ ವ್ಯವಸ್ಥೆಯ ಒಂದು ಅಂಶ. ಇಂಥ ಪ್ರವೃತ್ತಿಗಳು ಅನೇಕ ಸಾರ್ವಜನಿಕ ಸಮಸ್ಯೆಗಳಿಗೆ ಕಾರಣವಾದುದರಿಂದ ಸಂಘಗಳನ್ನು ಒಂದು ಶಿಸ್ತಿಗೆ ಒಳಪಡಿಸುವ ಆವಶ್ಯಕತೆ ಕಂಡುಬಂದಿತು. ಆದುದರಿಂದ ಉತ್ಪಾದಕರ ಹಾಗೂ ವಿವಿಧ ಸಂಘಗಳ ಸ್ಥಾಪನೆ ಹಾಗೂ ನಡೆವಳಿಕೆಗಳ ಬಗ್ಗೆ ಆಧುನಿಕ ಸರ್ಕಾರ ಕಾನೂನುಗಳ ಮೂಲಕ ಒಂದು ಕ್ರಮಬದ್ಧ ಮಾರ್ಗವನ್ನು ನಿರ್ಮಿಸಿದೆ. ಉತ್ಪಾದಕರ ಗುಂಪಿಗೆ ಸೇರುವ ವಿವಿಧಪಂಗಡಗಳಲ್ಲಿ ಸೌಹಾರ್ದವಿರುವಂತೆ ಮಾಡುವುದೇ ಈ ಕಾನೂನು ನಿಬಂಧನೆಗಳ ಉದ್ದೇಶವಾಗಿರುವುದರಿಂದ ಇಂಥ ಮಿತಿಗಳು ಆದರಣೀಯವಾದುವೆಂದು ಹೇಳಬಹುದು.


ಅನುಭೋಗಸ್ವಾತಂತ್ರ್ಯ ಇತರ ವಿವಿಧ ಆರ್ಥಿಕ ಸ್ವಾತಂತ್ರ್ಯಗಳಿಗಿಂತ ಹೆಚ್ಚು ನೇರವಾಗಿ ಸಾರ್ವಜನಿಕರೆಲ್ಲರ ಜೀವನಕ್ಕೂ ಸಂಬಂಧಿಸಿದ ವಿಷಯ. ಸಂಪಾದಿಸುವ ವರಮಾನದಲ್ಲಿ ವೆಚ್ಚ ಹಾಗೂ ಉಳಿತಾಯಗಳ ಭಾಗ ನಿರ್ಣಯಿಸುವ ಮತ್ತು ಬಯಸಿದುದನ್ನು ಬೇಕೆನ್ನಿಸಿದಾಗ ವಿನಿಮಯದ ಮೂಲಕ ಪಡೆಯುವ ಅವಕಾಶವೇ ಅನುಭೋಗಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶವಿರುವುದು. ಅಂದಮೇಲೆ ಇಂಥ ಸಮಾಜಗಳಲ್ಲಿ ಬೇಡಿಕೆಗಳ ಸ್ವರೂಪ ಅನುಭೋಗಿಗಳ ನಿರ್ಣಯಗಳನ್ನೇ ಪ್ರಧಾನವಾಗಿ ಅವಲಂಬಿಸಿರುವುವು. ಈ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪಾದಕರು ಅವರ ಉತ್ಪಾದನಾಕಾರ್ಯವನ್ನು ವ್ಯವಸ್ಥೆಗೊಳಿಸುವರು. ಆದುದರಿಂದ ಬಂಡವಾಳಶಾಹಿ ಪದ್ಧತಿಯಲ್ಲಿ ಅನುಭೋಗಿಯೇ ಸಾರ್ವಭೌಮ ಎಂಬ ನಾಣ್ನುಡಿ ಹುಟ್ಟಿತು. ಆದರೆ ಈ ಅನುಭೋಗಿಯ ಸಾರ್ವಭೌಮತ್ವದ ಬಗ್ಗೆ ಸಮಾಜವಾದಿ ಅರ್ಥಶಾಸ್ತ್ರಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ. ಅನುಭೋಗಿಗಳ ಆಯ್ಕೆಯ ಸ್ವಾತಂತ್ರ್ಯ ವಾಸ್ತವವಾದದಲ್ಲ, ಕೇವಲ ಕಾಲ್ಪನಿಕ ಎಂಬುದು ಅವರ ಅಭಿಪ್ರಾಯ. ಜಾಹೀರಾತುಗಳು, ಸರಕುಗಳಲ್ಲಿ ಪ್ರಭೇದವಿರುವಂತೆ ತೋರಿಸುವ ಜಾಣತನ ಇತ್ಯಾದಿಗಳ ಮೂಲಕ ಉತ್ಪಾದಕರು ಅನುಭೋಗಿಗಳ ಆಯ್ಕೆ ನಿರ್ಣಯಗಳ ಮೇಲೆ ವಿಶೇಷ ಪ್ರಭಾವ ಬೀರುತ್ತಾರೆ. ಕೇವಲ ಆಸಕ್ತಿ ಹುಟ್ಟಿಸುವ ಹಾಗೂ ವಿಷಯ ತಿಳಿಸುವ ಜಾಹೀರಾತುಗಳಿಂದ ಅನುಭೋಗಿಗಳಿಗೆ ಅನುಕೂಲವಾಗುವುದಾದರೂ ಸ್ಪರ್ಧೆ ನಡೆಸುವ ಭರದಲ್ಲಿ ಉತ್ಪಾದಕರು ಯಾವುದೇ ರೀತಿಯಿಂದಾದರೂ ಸರಿ ಗ್ರಾಹಕರನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೈಗೊಳ್ಳುವ ಜಾಹಿರಾತು ಕ್ರಮಗಳು ಉಚಿತ ಎಂದು ಹೇಳಲಾಗದು; ಮತ್ತು ಪ್ರತಿ ಸರಕಿನ ಬಗ್ಗೆಯೂ ಅನಾವಶ್ಯಕ ಪ್ರಭೇದಗಳನ್ನು ದ್ವಿಗುಣಿಸಿರುವುದು ಅನುಭೋಗಿಗಳನ್ನು ಗೊಂದಲಕ್ಕೆ ಸಿಕ್ಕಿಸಿ ಆಲೋಚನಾಯುತ ಆಯ್ಕೆಗೆ ಅಡ್ಡಿಯಾಗಿದೆ ಎಂದೂ ಹೇಳಲಾಗಿದೆ.


ಬಂಡವಾಳಶಾಹಿ ಪದ್ಧತಿಯಲ್ಲಿ ವರಮಾನ ಅಸಮಾನತೆ ಹೆಚ್ಚಾಗಿರುವುದರಿಂದಲೂ ಕಡಿಮೆ ವರಮಾನ ವರ್ಗದ ಜನ ಅಧಿಕ ಪ್ರಮಾಣದಲ್ಲಿ ಇರುವುದರಿಂದಲೂ ಅನುಭೋಗಿಯ ಆಯ್ಕೆಯ ಸ್ವಾತಂತ್ರ್ಯದಲ್ಲಿ ನಿಜವಾಗಿ ಹುರುಳಿಲ್ಲ ಎಂಬುದು ಸಮಾಜವಾದಿಗಳ ಇನ್ನೊಂದು ವಾದ. ಏಕೆಂದರೆ ಇಂಥ ಸನ್ನಿವೇಶದಲ್ಲಿ ಕೆಲವೇ ಧನಿಕರ ಬಯಕೆಗಳೆಲ್ಲವೂ ತೃಪ್ತಿಯಾಗ ಬಹುದಾದರೂ ಬಹುಮಂದಿಯ ಬಯಕೆಗಳು ವರಮಾನ ಮತ್ತು ಎಲ್ಲರ ಹಿತಾಸಕ್ತಿಗಳನ್ನೂ ಪರಮಾವಧಿಯಲ್ಲಿ ರಕ್ಷಿಸಬಲ್ಲ ಸನ್ನಿವೇಶದಲ್ಲಿ ಮಾತ್ರ ಅನುಭೋಗಿಯ ಆಯ್ಕೆಯ ಸ್ವಾತಂತ್ರ್ಯಕ್ಕೆ ಸಹಜವಾದ ಅರ್ಥ ಸಲ್ಲುವುದು ಮತ್ತು ಇಂಥ ಸನ್ನಿವೇಶದಲ್ಲಿ ಸಮಾಜವಾದ ಪದ್ಧತಿ ಉಂಟುಮಾಡುವುದರಿಂದ ಈ ಪದ್ಧತಿಯಲ್ಲಿ ಅನುಭೋಗಿಗಳ ಆಯ್ಕೆಸ್ವಾತಂತ್ರ್ಯ ವಾಸ್ತವವಾಗಿರುವುದು ಎಂದು ವಾದಿಸಲಾಗಿದೆ. ಬಂಡವಾಳಶಾಹಿ ಪದ್ಧತಿ ನೀಡುವ ಅನುಭೋಗಿಗಳ ಆಯ್ಕೆಯ ಸ್ವಾತಂತ್ರ್ಯದ ವಿರುದ್ಧ ಹೂಡಿರುವ ಮೇಲಿನ ಆಕ್ಷೇಪಣೆಗಳು ಇಂದಿನ ಸುಧಾರಿತ ಬಂಡವಾಳಶಾಹಿ ಪದ್ಧತಿಗೆ ಹೆಚ್ಚಾಗಿ ಅನ್ವಯಿಸಲಾರವು ಎಂಬುದು ಇನ್ನೊಂದು ಅಭಿಪ್ರಾಯ. ಈ ಪದ್ಧತಿಯ ಮೂಲಲಕ್ಷಣಗಳನ್ನು ಹೊಂದಿರುವ ಅಮೆರಿಕದಂಥ ರಾಷ್ಟ್ರಗಳಲ್ಲಿ ಕೆಲವು ಮುಖ್ಯ ಬದಲಾವಣೆಗಳಾಗಿವೆ. ಎಲ್ಲರ ವರಮಾನ ಮಟ್ಟ ಹೆಚ್ಚಿರುವುದು, ವರಮಾನ ಹಂಚಿಕೆಯಲ್ಲಿ ಅಸಮಾನತೆ ಕಡಿಮೆಯಾಗಿರುವುದು, ಜಾಹೀರಾತು ನಿಯಂತ್ರಣ, ಸಾರ್ವಜನಿಕ ಕ್ಷೇಮಾಭ್ಯುದಯಕ್ಕೆ ಸರ್ಕಾರದ ತೀವ್ರ ಗಮನ-ಇತ್ಯಾದಿ ಅಂಶಗಳು ಮೇಲೆ ಹೇಳಿದ ಆಕ್ಷೇಪಣೆಗಳ ತೀವ್ರತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಿವೆ ಎಂದು ಹೇಳಬಹುದು.


ಯುದ್ಧ ಮತ್ತು ಅಭಾವವಿರುವ ಇತರ ಕಾಲದಲ್ಲಿ ನ್ಯಾಯರೀತಿಯಲ್ಲಿ ಸರಕುಗಳನ್ನು ಹಂಚುವುದಕ್ಕಾಗಿ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಬಹುದು. ಇಂಥ ವಿಶೇಷ ಸಂದರ್ಭಗಳಲ್ಲಿ ಅನುಭೋಗಿಗಳ ಆಯ್ಕೆ ಸ್ವಾತಂತ್ರ್ಯವನ್ನು ತಾತ್ಕಾಲಿಕವಾಗಿ ಮಿತಿಗೊಳಿಸಿದಂತೆ ಆಗುವುದು. ಅಭಾವ ಪರಿಸ್ಥಿತಿ ಕೊನೆಯಾದೊಡನೆಯೇ ಪಡಿತರ ರದ್ದು ಮಾಡುವುದರಿಂದ ಅನುಭೋಗಿಗಳ ಆಯ್ಕೆ ಹಕ್ಕನ್ನು ಪುನಃ ಸ್ಥಾಪನೆಗೊಳಿಸಿದಂತೆ ಆಗುವುದು. ಆದರೆ ಪಡಿತರ ಪದ್ಧತಿ ಶಾಶ್ವತವಾಗಿರುವ ಕಮ್ಯುನಿಸ್ಟ್ ಪದ್ಧತಿಯಂಥ ಸಮಾಜ ವ್ಯವಸ್ಥೆಗಳಲ್ಲಿ ಅನುಭೋಗಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಶಾಶ್ವತವಾಗಿಯೇ ಮಿತಿಗೊಳಿಸಿದಂತೆ ಆಗುವುದು. ಇಂಥ ಪಡಿತರ ಪದ್ಧತಿಯ ಮೂಲಕ ಜನರಿಗೆ ಬೇಕಾಗುವಷ್ಟು ಸರಕುಗಳು ದೊರೆಯಬಹುದಾದ ಸಮೃದ್ಧ ಸಮಾಜದಲ್ಲಿ ಹೀಗೆ ನಿರ್ಮಿತವಾಗುವ ಮಿತಿ ನಿಬಂಧನೆ ವಾಸ್ತವವಾಗಿ ಜನರ ಕ್ಷೇಮಾಭ್ಯುದಯಕ್ಕೆ ವಿರೋಧವಾಗುವುದಿಲ್ಲ.


ಒಟ್ಟಿನಲ್ಲಿ ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯಕ್ಕೆ ಮೇಲೆ ವಿವರಿಸಿರುವಂತೆ ಅನೇಕ ಮುಖಗಳಿವೆ. ವಿವಿಧ ಭಾಗಗಳಲ್ಲಿ ಎಷ್ಟು ಮಟ್ಟಿನ ವೈಯಕ್ತಿಕ ಸ್ವಾತಂತ್ರ್ಯವಿರುವುದು ಎಂಬುದು ಆಯಾ ಸಮಾಜ ವ್ಯವಸ್ಥೆಯ ಸ್ವರೂಪವನ್ನು ಅವಲಂಬಿಸಿದೆ.

ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕುರಿತ ಅನೇಕ ಸೂಕ್ಷ್ಮ ಪ್ರಶ್ನೆಗಳನ್ನು ಒಳಗೊಳ್ಳುವುದು. ಶತಮಾನಕ್ಕೂ ಹೆಚ್ಚು ಕಾಲ ನಡೆದು ಬಂದ ಸಾಮ್ರಾಜ್ಯಶಾಹಿ ಪ್ರಪಂಚದಲ್ಲಿ ಅಧೀನ ರಾಷ್ಟ್ರಗಳಿಗೂ ವಸಾಹತುಗಳಿಗೂ ರಾಜಕೀಯ ಸ್ವಾತಂತ್ರ್ಯವಿಲ್ಲದುದರ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಇರಲಿಲ್ಲ. ಎರಡನೆಯ ಮಹಾಯುದ್ಧದ ತರುವಾಯ ಸಾಮ್ರಾಜ್ಯಶಾಹಿ ಕೊನೆಗೊಂಡಿರುವುದರಿಂದ ಉದ್ಭವಿಸಿರುವ ಹೊಸ ಸ್ವತಂತ್ರರಾಷ್ಟ್ರಗಳು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವಂತೆಯೇ, ಆರ್ಥಿಕ ಸ್ವಾತಂತ್ರ್ಯಕ್ಕೂ ಹಂಬಲಿಸುತ್ತಿವೆ. ವಿದೇಶಿಯರು ಹೊಂದಿರುವ ಅಥವಾ ಸ್ಥಾಪಿಸಬಹುದಾದ ಪಟ್ಟಭದ್ರಹಿತಗಳ ಮೂಲಕ ಒಂದು ರಾಷ್ಟ್ರದ ಆರ್ಥಿಕ ಆಗುಹೋಗುಗಳ ಮೇಲೆ ಸಲ್ಲದ ಪ್ರಭಾವ ಬೀರುವುದನ್ನು ತಪ್ಪಿಸುವುದೂ ಇತರ ಯಾವುದೇ ರೀತಿಯಲ್ಲಿ ರಾಷ್ಟ್ರಗಳ ಸಲ್ಲದ ಪ್ರಭಾವಕ್ಕೆ ಸಿಕ್ಕಿಬೀಳದೆ, ಸ್ವಯಂ ನಿರ್ಣಯಾಧಿಕಾರದಿಂದ ಒಂದು ರಾಷ್ಟ್ರ ಅದರ ಇಷ್ಟಾನುಸಾರವಾಗಿ ಇತರ ರಾಷ್ಟ್ರಗಳೊಡನೆ ಆರ್ಥಿಕ ಸಂಬಂಧಗಳನ್ನು ಏರ್ಪಡಿಸಿಕೊಳ್ಳು ವುದೂ ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯ ಎಂದು ಹೇಳಬಹುದು. ಅಂತಾರಾಷ್ಟ್ರೀಯ ವ್ಯಾಪಾರ, ಬಂಡವಾಳ ಚಾಲನೆ, ತಾಂತ್ರಿಕ ಜ್ಞಾನ ಪ್ರಸರಣೆ-ಇವುಗಳು ಒಂದು ಪ್ರಬಲ ರಾಷ್ಟ್ರ ನಿರ್ಬಲ ಹಾಗೂ ದೀನರಾಷ್ಟ್ರಗಳ ಮೇಲೆ ಒಂದು ನಿರ್ದಿಷ್ಟ ನೀತಿಯನ್ನು ಹೇರುವ ಸಾಧನಗಳಾಗುವುದಾದರೆ ಈ ರಾಷ್ಟ್ರಗಳ ಸಂಬಂಧದಲ್ಲಿ ಒಂದು ರೀತಿಯ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ಕಾಣಬಹುದು. ಹೀಗಿರದೆ ಅಂತಾರಾಷ್ಟ್ರೀಯ ಶ್ರಮವಿಭಜನೆ ತತ್ತ್ವದ ಅನುಸಾರವಾಗಿಯೂ ಸ್ವರಾಷ್ಟ್ರಹಿತವನ್ನು ಸಾರ್ವತ್ರಿಕ ಹಿತದೊಡನೆ ಸಮ್ಮಿಳನವಾಗು ವಂತೆಯೂ ಎಲ್ಲ ರಾಷ್ಟ್ರಗಳೂ ಅಂತಾರಾಷ್ಟ್ರೀಯ ಆರ್ಥಿಕ ವಹಿವಾಟುಗಳನ್ನು ನಡೆಸುವುದಾದರೆ ಪ್ರತಿಯೊಂದು ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯವನ್ನು ರಕ್ಷಿಸಿದಂತೆ ಆಗುವುದು. ಅಂದಮೇಲೆ ಕೇವಲ ಉಜ್ವಲ ರಾಷ್ಟ್ರೀಯತಾ ಭಾವನೆಯಿಂದಾಗಲಿ ಅಥವಾ ಕೇವಲ ಆರ್ಥಿಕ ಸ್ವಸಂಪುರ್ಣ ತೆಯನ್ನೇ ಪ್ರಧಾನ ಗುರಿಯಾಗಿಟ್ಟುಕೊಂಡಾಗಲಿ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗ ಳಿಂದ ಲಭಿಸಬಲ್ಲ ಪ್ರಯೋಜನಗಳನ್ನು ಅಲಕ್ಷಿಸಿ ಆರ್ಥಿಕ ಪ್ರತ್ಯೇಕತೆಯತ್ತ ಸಾಗುವುದು ವಾಸ್ತವವಾದ ಆರ್ಥಿಕ ಸ್ವಾತಂತ್ರ್ಯಕ್ಕೆ ಅನುಸಾರವಾದ ಮಾರ್ಗವಾಗಲಾರದು.