ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹ್ಯಾನೋವರ್ ರಾಜರು
ವಿಗ್ ಪಕ್ಷ ಒಂದನೆಯ ಜಾರ್ಜ್ನನ್ನು ಇಂಗ್ಲೆಂಡಿನ ಸಿಂಹಾಸನದ ಮೇಲೆ ಕೂರಿಸಿತು. ಆವನಿಗೆ ಇಂಗ್ಲಿಷ್ ಜ್ಞಾನವಿರಲಿಲ್ಲ. ಪಾರ್ಲಿಮೆಂಟಿಗೆ ಇದರಿಂದ ಅನುಕೂಲವಾಯಿತು ರಾಜನ ಅಧಿಕಾರ ಮೊಟುಕುಗೊಳಿಸಲು ಅವಕಾಶವಾಯಿತು. ಕ್ಯಾಬಿನೆಟ್ ಪದ್ಧತಿ ಈ ಕಾಲದಲ್ಲಿ ಜಾರಿಗೆ ಬಂತು. ಪ್ರಬಲ ಮಂತ್ರ್ರಿಮಂಡಲ ಆಡಳಿತ ನಿರ್ವಹಿಸಿತು ಪಾರ್ಲಿಮೆಂಟ್ ಬಲವಾಗುತ್ತ ಬಂತು. ವಾಲ್ಪೋಲ್ ಇಂಗ್ಲೆಂಡಿನ ಮೊದಲ ಪ್ರಧಾನಮಂತ್ರಿ. ಈತ ರಾಜನಿಂದ ಅನುಜ್ಞೆ ಪಡೆದು ನಡೆದುಕೊಳ್ಳುತ್ತಿದ್ದ. ಅವನ ಕಾಲದಲ್ಲಿ ವಿಲಿಯಂ ಪಿಟ್ ಎಂಬ ಪ್ರಸಿದ್ಧ ವಾಗ್ಮಿಯಿದ್ದ. ವಾಲ್ಪೋಲ್ ಶಾಂತಿಪ್ರಿಯ. ಯುಟ್ರೆಕ್ಟ್ ಕರಾರಿನ ಪ್ರಕಾರ ಇಂಗ್ಲೆಂಡ್ ವಸಾಹತುಗಳಿಗೆ ನೀಗ್ರೊಗಳನ್ನು ಸಾಗಿಸುತ್ತಿತ್ತು. ಆ ಸಂದರ್ಭದಲ್ಲಿ ಸ್ಪೇನಿನವರು ಇಂಗ್ಲೆಂಡಿನ ಕ್ಯಾಪ್ಟನ್ ಜೆಂಕಿನ್ಸ್ನ ಕಿವಿಯನ್ನು ಕತ್ತರಿಸಿದರು. ಇದರ ಫಲವಾಗಿ 1739 ರಲ್ಲಿ ಜೆಂಕಿನ್ಸ್ ಕಿವಿಯ ಯುದ್ಧವಾಯಿತು. ವಾಲ್ಪೋಲ್ 1742ರಲ್ಲಿ ಮಂತ್ರಿಪದವಿಗೆ ರಾಜೀನಾಮೆ ನೀಡಿದ. ಇಂಗ್ಲೆಂಡ್ ಇವನ ಕಾಲದಲ್ಲಿ ಆರ್ಥಿಕವಾಗಿ ಸುಧಾರಿಸಿತು.
ಅಮೆರಿಕ ಮತ್ತು ಭಾರತಗಳೊಂದಿಗೆ ನಡೆಸುತ್ತಿದ್ದ ವ್ಯಾಪಾರದಲ್ಲಿ ಫ್ರಾನ್ಸ್ ಇಂಗ್ಲೆಂಡಿನೊಂದಿಗೆ ಸ್ಪರ್ಧಿಸಿತ್ತು. ಹದಿಮೂರು ವಸಾಹತುಗಳನ್ನು ನಿರ್ಮಿಸಿತ್ತು. ಇಂಗ್ಲೆಂಡಿನ ಈ ಮೇಲ್ಮೆಯಿಂದಾಗಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ಕಾದಾಟ ಸಾಮಾನ್ಯವಾಯಿತು. ಇದು ಏಳು ವರ್ಷಗಳ ಯುದ್ಧವೆಂದು ಹೆಸರಾಗಿದೆ. ಭಾರತದಲ್ಲಿ ಕ್ಲೈವ್ ಮತ್ತು ಡೂಪ್ಲೆ ರಾಜಕೀಯ ಕಣಕ್ಕಿಳಿದರು. ಫ್ರೆಂಚರ ವಸಾಹತುಗಳೆಲ್ಲ ಪುಡಿಪುಡಿಯಾದವು. 1763ರಲ್ಲಿ ಪ್ಯಾರಿಸ್ ಕೌಲಿನಿಂದ, ಏಳು ವರ್ಷಗಳ ಯುದ್ಧ ಕೊನೆಗೊಂಡು ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗೆ ಅನುವಾಯಿತು. ವಿಲಿಯಂ ಪಿಟ್ ಕ್ರಮಕ್ರಮವಾಗಿ ತನ್ನ ಪ್ರಾಮಾಣಿಕತೆಯಿಂದ ಇಂಗ್ಲೆಂಡನ್ನು ರಕ್ಷಿಸಿದ. ಇಂದಿಗೂ ಉತ್ತರ ಅಮೆರಿಕದಲ್ಲಿ ಅವನ ಹೆಸರಿನಲ್ಲಿ ನಿರ್ಮಾಣವಾದ ಪಿಟ್ಸ್ಬರ್ಗ್ ಇದೆ.
1775ರಲ್ಲಿ ಅಮೆರಿಕದಲ್ಲಿದ್ದ ಹದಿಮೂರು ಬ್ರಿಟಿಷ್ ವಸಾಹತುಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅದನ್ನು ಗಳಿಸಿದವು. ಅಮೆರಿಕದ ಸ್ವಾತಂತ್ರ್ಯದಿಂದ ಮೂರನೆಯ ಜಾರ್ಜ್ ತನ್ನ ಪ್ರಾಬಲ್ಯ ಕಳೆದುಕೊಂಡ. ಇವನ ಕಾಲದಲ್ಲಿ ಪ್ರಧಾನಿಯಾಗಿ ಬಂದ ಕಿರಿಯ ಪಿಟ್ ಇಂಗ್ಲೆಂಡನ್ನು 18ವರ್ಷಗಳ ಕಾಲ ರಕ್ಷಿಸಿದ. ಹಣಕಾಸಿನ ವಿಚಾರದಲ್ಲಿ ಇವನು ನಿಷ್ಣಾತ. ಹದಿನೆಂಟನೆಯ ಶತಮಾನದಲ್ಲಿ ಫ್ರಾನ್ಸಿನಲ್ಲಿ ಮಹಾಕ್ರಾಂತಿ ನಡೆದು ಇಂಗ್ಲೆಂಡಿಗೆ ಒಂದು ರೀತಿಯ ಪಾಠ ಕಲಿಸಿತು. ಅಮೆರಿಕದ ಸ್ವಾತಂತ್ರ್ಯ ಯುದ್ಧದಲ್ಲಿ ಫ್ರೆಂಚರ ಪಾತ್ರ ಬಲು ಮಹತ್ತ್ವದ್ದಾಗಿತ್ತು. ಮಹಾಕ್ರಾಂತಿಯ ಕಾಲದಲ್ಲಿ ಪಿಟ್ ಯುದ್ಧಮಂತ್ರಿಯಾಗಿ ಕೆಲಸ ಮಾಡಿದ. ಇಂಗ್ಲೆಂಡನ್ನು ಫ್ರೆಂಚರ ಆಕ್ರಮಣದಿಂದ ಕಾಪಾಡುವುದೇ ಅವನ ಮುಖ್ಯ ಕೆಲಸವಾಯಿತು. ಫ್ರಾನ್ಸಿನ ಸರ್ವಾಧಿಕಾರಿಯಾಗಿದ್ದ ನೆಪೋಲಿಯನ್ನನೊಂದಿಗೆ ಇಂಗ್ಲೆಂಡ್ ಆನಿವಾರ್ಯವಾಗಿ ಯುದ್ಧ ಮಾಡಬೇಕಾಗಿ ಬಂತು. ಇಂಗ್ಲಿಷ್ ನೌಕಾಪಡೆ ನೆಪೋಲಿಯನ್ ಸೇನೆಯನ್ನು ಚೂರು ಚೂರು ಮಾಡಿತು. ಪಿಟ್ ಯುರೋಪಿನಲ್ಲಿ ಮಿತ್ರರಾಷ್ಟ್ರಗಳ ಗುಂಪೊಂದನ್ನು ಕಟ್ಟಿದ. ಅವುಗಳ ಸಹಾಯದಿಂದ ಇಂಗ್ಲೆಂಡನ್ನು ರಕ್ಷಿಸಲು ಯತ್ನಿಸಿದ. ನೆಪೋಲಿಯನ್ ಕ್ಯೆಗೊಂಡ ಖಂಡಾಂತರ ಆರ್ಥಿಕ ದಿಗ್ಬಂಧನ ಇಂಗ್ಲೆಂಡಿನ ಮುಂದೆ ನಿಲ್ಲಲಾರದೆ ಹೋಯಿತು. ನೆಪೋಲಿಯನ್ ಮಿತ್ರರಾಷ್ಟ್ರಗಳ ಎದುರಿಗೆ ಸೋಲೊಪ್ಪಿಕೊಂಡ.