ಹರಿಕಥಾಮೃತಸಾರ/ಪಂಚತನ್ಮಾತ್ರ ಸಂಧಿ
ಭೂ ಸಲಿಲ ಶಿಖಿ ಪವನ ಭೂತಾ ಕಾಶದೊಳಗೈದೈದು ತನ್ಮಾ ತ್ರಾ ಸಹಿತವೊಂದಧಿಕ ಪಂಚಾಶದ್ವರಣ ವೇದ್ಯ | ಈ ಶರೀರದಿ ವ್ಯಾಪಿಸಿದ್ದು ಸು ರಾಸುರರಿಗೆ ನಿರಂತರದಲಿ ಸು ಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ || ೧ ||
ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗನಿರು ದ್ಧನು ತ್ರಿಪಂಛಕ ಏಕವಿಂಶತಿ ಚತುರವಿಂಶತಿಗ | ನೆನಿಸಿ ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸು ತಿನಗಭಸ್ಥಿಗ ಲೋಕದೊಳು ಸರ್ವತ್ರ ಬೆಳಗುವನು || ೨ ||
ಜೀವ ಲಿಂಗನಿರುದ್ಧ ಸ್ಥೂಲ ಕ ಳೇವರಗಳಲಿ ವಿಶ್ವ ತುರಗ ಗ್ರೀವ ಮೂಲೇಶಾಚ್ಯುತ ತ್ರಯ ಹಂಸಮೂರ್ತಿಗಳ | ಈ ವಿಧ ಚತುಸ್ಥಾನದಲಿ ಶಾಂ ತೀವರನ ಈರೆರಡು ರೂಪದಿ ಭಾವಿಸುವುದೇಕೋನವಿಂಶತಿ ಮೂರ್ತಿ ಸರ್ವತ್ರ || ೩ ||
ಕಲುಷವಿಲ್ಲದ ದರ್ಪಣದಿ ಪ್ರತಿ ಫಲಿಸಿ ಸರ್ವ ಪದಾರ್ಥಗಳು ಕಂ ಗೊಳಿಸುವಂದದಿ ಬಿಂಬ ಜಡ ಚೇತನಗಳೊಳಗಿದ್ದು | ಪೊಳೆವ ಬಹುರೂಪದಲಿ ಸಜ್ಜನ ರೊಳಗೆ ಮನ ದರ್ಪಣದಿ ತಾ ನಿ ಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ || ೪ ||
ಈ ಶರೀರ ಚತುಷ್ಟಯಗಳೊಳು ಕೋಶ ಧಾತಗ ಭಾರತೀಪತಿ ಪ್ರಾ ಣೇಶನಿಪ್ಪತ್ತೊಂದು ಸಾವಿರದಾರು ನೂರೆನಿಪ | ಶ್ವಾಸ ರೂಪಕ ಹಂಸ ಭಾಸ್ಕರ ಭೇಶರೊಳಗಿದ್ದವರ ಕೈವಿಡಿ ದೀ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು || ೫ ||
ಶಿರಗಳೈದೈದೆರಡು ಬಾಹುಗ ಳೆರಡು ಪಾದಗಳೊಂದು ಮಧ್ಯೋ ದರದಿ ಶೋಭಿಪ ವಾಜ್ಮನೋಮಯನೆನಿಸಿ ನಿತ್ಯದಲಿ | ಕರಣ ಧಾಮಗಳಲ್ಲಿ ಎಪ್ಪ ತ್ತೆರಡು ಸಾವಿರ ನಾಡಿಗಳಲಿ ಪ್ಪರವಿದೂರನು ಭಾರತ ಪ್ರತಿಪಾದ್ಯನೆಂದೆನಿಸಿ || ೬ ||
ಈರೆರಡು ದೇಹೋರ್ಮಿ ಭೂತಗ ಳಾರಧಿಕ ದಶ ಋಗ್ವಿನುತಲ ಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತುಃ ಷಷ್ಟಿಕಲಾ | ಧಾರಕನು ತಾನಾಗಿ ಬ್ರಹ್ಮ ಪು ರಾರಿ ಮುಖ್ಯರೊಳಿದ್ದು ಸತತ ವಿ ಹಾರ ಮಾಳ್ಪನು ಚತುಷ್ಪಾದಾಹ್ವಯದಿ ಲೋಕದೊಳು || ೭ ||
ತೃಣ ಮೊದಲು ಬ್ರಹ್ಮಾಂತ ಜೀವರ ತನು ಚತುಷ್ಟಯಗಳಲಿ ನಾರಾ ಯಣನ ಸಾವಿರದೈದು ನೂರಿಪ್ಪತ್ತು ಮೇಲಾರು | ಗಣನೆ ಮಾಳ್ಪುದು ಬುಧರು ರೂಪವ ಘೃಣಿಯು ಸೂರ್ಯಾದಿತ್ಯ ನಾಮಗ ಳನುದಿನದಿ ಜಪಿಸುವರಿಗೀವಾರೋಗ್ಯ ಸಂಪದವ || ೮ ||
ಐದು ನೂರೆಪ್ಪತ್ತು ನಾಲಕು ಆಧಿಭೌತಿಕದಲ್ಲಿ ತಿಳಿವುದು ಐದೆರಡು ಶತಏಕವಿಂಶತಿ ರೂಪವಧ್ಯಾತ್ಮ | ಭೇದಗಳಲಿನ್ನೂರು ಮೂವ ತ್ತಾದ ಮೇಲೊಂದಧಿಕ ಮೂರ್ತಿಗ ಳಾದರದಲಧಿ ದೈವದೊಳು ಚಿಂತಿಪುದು ಭೂಸುರರು || ೯ ||
ಸುರುಚಿ ಶಾರ್ವರೀಕರನೆನಿಸಿ ಸಂ ಕರುಷಣ ಪ್ರದ್ಯುಮ್ನ ಶಶಿ ಭಾ ಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ | ಕರೆಸಿಕೊಂಬನು ಅಹಸ್ಸಂವ ತ್ಸರನೆನಿಪನು ವಿಶಿಷ್ಟ ನಾಮದ ಲರಿತವರಿಗಾರೋಗ್ಯ ಭಾಗ್ಯವನೀವಾನಂದಮಯ || ೧೦ ||
ಏಕ ಪಂಚಾಶದ್ವರಣಗತ ಮಾ ಕಳತ್ರನು ಸರ್ವರೊಳಗ ವ್ಯಾಕೃತಕಾಶಾಂತ ವ್ಯಾಪಿಸಿ ನಿಗಮ ತತಿಗಳನು | ವ್ಯಾಕರಣ ಭಾರತ ಮುಖಾದ್ಯ ನೇಕ ಶಾಸ್ತ್ರ ಪುರಾಣ ಭಾಷ್ಯಾ ನೀಕಗಳ ಕಲ್ಪಿಸಿ ಮನೋವಾಜ್ಮಯನೆನಿಸಿಕೊಂಬ || ೧೧ ||
ಭಾರಭೃನ್ನಾಮಕನ ಸಾವಿರ ದಾರು ನೂರಿಪ್ಪತ್ತು ನಾಲುಕು ಮೂರ್ತಿಗಳು ಚರಾಚರದಿ ಸರ್ವತ್ರ ತುಂಬಿಹವು | ಆರು ನಾಲ್ಕು ಜಡಗಳಲ್ಲಿ ಹದಿ ನಾರು ಚೇತನಗಳಲಿ ಚಿಂತಿಸೆ ತೋರಿಕೊಂಬನು ತನ್ನ ರೂಪವ ಸರ್ವಠಾವಿನಲಿ || ೧೨ ||
ಮಿಸುನಿಯ ಮೇಲಿನ ಮಣಿಯವೋಲ್ ರಾ ಜಿಸುವ ಬ್ರಹ್ಮಾದಿಗಳ ಮನದಲಿ ಬಿಸಜಜಾಂಡಾಧಾರಕನು ಆಧೇಯನೆಂದೆನಿಸಿ | ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳಿಪ್ಪನು ಶಶದೊಳಗೆ ಶೋ ಭಿಸುವ ನಾಲ್ವತ್ತೆರಡಧಿಕ ಶತರೂಪದಲಿ ಬಿಡದೆ || ೧೩ ||
ಎರಡು ಸಾವಿರದೆಂಟು ರೂಪವ ನರಿತು ಸರ್ವ ಪದಾರ್ಥದಲ್ಲಿ ಸಿರಿ ವರನ ಪೂಜೆಯ ಮಾಡು ವರಗಳ ಬೇಡು ಕೊಂಡಾಡು | ಬರಿದೆ ಜಲದಲಿ ಮುಣುಗಿ ಬಿಸಿಲೊಳು ಬೆರಳನೆಣಿಸಿದರೇನು ಸದ್ಗುರು ಹಿರಿಯರನುಸರಿಸಿರದೆ ಮರ್ಮವನರಿಯದಿಹ ನರನು || ೧೪ ||
ಮತ್ತೆ ಚಿದ್ದೇಹದ ಒಳಗೆ ಎಂ ಭತ್ತು ಸಾವಿರದೇಳು ನೂರಿ ಪ್ಪತ್ತೈದು ನೃಸಿಂಹ ರೂಪದಲ್ಲಿದ್ದು ಜೀವರಿಗೆ | ನಿತ್ಯದಲಿ ಹರಲಿರುಳು ಬಪ್ಪಪ ಮೃತ್ಯುವಿಗೆ ತಾ ಮೃತ್ಯುವೆನಿಸುವ ಭೃತ್ಯ ವತ್ಸಲ ಭಯ ವಿನಾಶನ ಭಾಗ್ಯ ಸಂಪನ್ನ || ೧೫ ||
ವರನೊಳಿಪ್ಪತ್ತೇಳು ಹರನೊಳ ಗಿರುವ ಇಪ್ಪತ್ತೆಂಟು ರೂಪದಿ ಎರಡು ಸಾವಿರದೆಂಟು ನೂರಿಪ್ಪತ್ತರೇಳೆನಿಪ | ಜ್ವರಹರಾಹ್ವಯ ನಾರಸಿಂಹನ ಸ್ಮರಣೆ ಮಾತ್ರದಿ ದುರಿತರಾಶಿಗ ಳಿರದೆ ಪೋಪವು ತರಣಿಬಿಂಬವ ಕಂಡ ಹಿಮದಂತೆ || ೧೬ ||
ಮಾಸ ಪರಿಯಂತರವು ಬಿಡದೆ ನೃ ಕೇಸರಿಯ ಶುಭನಾಮ ಮಂತ್ರ ಜಿ ತಾಸನದ ಲೇಕಾಗ್ರ ಚಿತ್ತದಿ ನಿಷ್ಕಪಟದಿಂದ | ಬೇಸರದೆ ಜಪಿಸಲು ವೃಜಿನಗಳ ನಾಶಗೈಸಿ ಮನೋರಥಗಳ ಪ ರೇಶ ಪೂರ್ತಿಯ ಮಾಡಿಕೊಡುವನು ಕಡೆಗೆ ಪರಗತಿಯ || ೧೭ ||
ಚತುರ್ಮೂರ್ತ್ಯಾತ್ಮಕ ಹರಿಯು ತ್ರಿಂ ಶತಿ ಸ್ವರೂಪದಿ ಬ್ರಹ್ಂನೊಳು ಮಾ ರುತನೊಳಿಪ್ಪತ್ತೇಳು ರೂಪದೊಳಿಪ್ಪ ಪ್ರದ್ಯುಮ್ನ | ಸುತರೊಳಿಪ್ಪತ್ತೈದು ಹದಿನೆಂ ಟತುಳ ರೂಪಗಳಾಂತು ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದುವ || ೧೮ ||
ನೂರು ವರುಷಕೆ ದಿವಸ ಮೂವ ತ್ತಾರ ಸಾವಿರವಹವು ನಾಡಿ ಶ ರೀರದೊಳಗಿನಿತಿಹವು ಸ್ತ್ರೀಪುಂ ಭೇದದೈ ಹರಿಯ | ಈರಧಿಕ ಎಪ್ಪತ್ತು ಸಾವಿರ ಮೂರುತಿಗಳ ನೆನೆದು ಸರ್ವಾ ಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು || ೧೯ ||
ಕಾಲಕರ್ಮ ಗುಣ ಸ್ವಭಾವಗ ಳಾಲಯನು ತಾನಾಗಿ ಲಕುಮೀ ಲೋಲ ತತ್ತದ್ರೂಪ ನಾಮದಿ ಕರೆಸುತೊಳಗಿದ್ದು | ಲೀಲೆಯಿಂದಲಿ ಸರ್ವ ಜೀವರ ಪಾಲಿಸುವ ಸಂಹರಿಸಿ ಸೃಷ್ಟಿಪ ಮೂಲಕಾರಣ ಪ್ರಕೃತಿ ಗುಣ ಕಾರ್ಯಗಳೆ ಮನೆ ಮಾಡಿ || ೨೦ ||
ತಿಲಜವರ್ತಿಗಳನುಸರಿಸಿ ಪ್ರ ಜ್ವಲಿಸಿ ದೀಪಗಳಾಲಯದ ಕ ತ್ತಲೆಯ ಭಂಗಿಸಿ ತದ್ಗತ ಪದಾರ್ಥವತೋರುವಂದದಲಿ | ಜಲರುಹೇಕ್ಷಣ ತನ್ನವರ ಮನ ದೊಳಗೆ ಭಕ್ತಿ ಜ್ಞಾನ ಕರ್ಮಕೆ ಒಲಿದು ಪೊಳೆವುತ ತೋರುವನು ಗುಣ ರೂಪಕ್ತಿಯೆಗಳನು || ೨೧ ||
ಆವ ದೇಹವ ಕೊಡಲಿ ಹರಿ ಮ ತ್ತಾವ ಲೋಕದೊಳಿಡಲಿ ತಾಮ ತ್ತಾವ ದೇಶದೊಳಿರಲಿ ಆವಾವಸ್ಥೆಗಳು ಬರಲಿ | ಈ ವಿಧದ ಜಡ ಚೇತನರೊಳು ಪ ರಾವರೇಶನ ರೂಪ ಗುಣಗಳ ಭಾವಿಸುತ ಸುಜ್ಞಾನ ಭಕುತಿಯ ಬೇಡು ಕೊಂಡಾಡು || ೨೨ ||
ಒಂದರೊಳಗೊಂದೊಂದು ಬೆರೆದಿಹ ಇಂದಿರೇಶನ ರೂಪಗಳ ಮನ ಬಂದ ತೆರದಲಿ ಚಿಂತಿಸಿದಕನುಮಾನವಿನಿತಿಲ್ಲ | ಸಿಂಧು ರಾಜನೊಳಂಬರಾಲಯ ಬಂಧಿಸಲು ಪ್ರತಿತಂತುಗಳೊಳುದ ಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ || ೨೩ ||
ಒಂದು ರೂಪದೊಳೊಂದಾಯದೊ ಳೊಂದು ರೂಪದೊಳೊಂದು ದೇಶದಿ ಪೊಂದಿಯಿಪ್ಪವಜಾಂಡನಂತಾನಂತ ಕೋಟಿಗಳು | ಹಿಂದೆ ಮಾರ್ಕಾಂಡೇಯ ಕಾಣನೆ ಒಂದು ರೂಪದಿ ಸೃಷ್ಟಿ ಪ್ರಳಯವ ಇಂದಿರೇಶನೊಳೇನಿದಚ್ಚರಿ ಅಪ್ರಮೇಯ ಸದಾ || ೨೪ ||
ಒಂದನಂತಾನಂತ ರೂಪಗಳ ಳೊಂದು ರೂಪದಿಯಿಹವು ಲೋಕಗ ಳೊಂದೆ ರೂಪದಿ ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ | ಒಂದೆ ಕಾಲದಿ ಮಾಡಿ ತಿಳಿಸದೆ ಸಂದಣಿಸಿಕೊಂಡಿಪ್ಪ ಜಗದೊಳು ನಂದ ನಂದನ ಅಣದೊಳಿಂದ್ರಾತ್ಮಜಗೆ ತೋರಿಸನೆ || ೨೫ ||
ಶ್ರೀ ರಮೇಶನ ಮೂರ್ತಿಗಳು ನವ ನಾರಿ ಕುಂಜರದಂತೆಯೇಕಾ ಕಾರ ತೋರ್ಪವು ಅವಯವಾಹ್ವಯ ಅವಯವಗಳಲ್ಲಿ | ಬೇರೆ ಬೇರೆ ಕಂಗೊಳಿಸುವ ಶ ರೀರದೊಳು ನಾನಾ ಪ್ರಕಾರ ವಿ ಕಾರ ಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು || ೨೬ ||
ವಾರಿಜಭವಾಂಡದೊಳು ಲಕುಮೀ ನಾರಸಿಂಹನ ರೂಪಗುಣಗಳು ವಾರಿಧಿಯೊಳಿಹ ತೆರೆಗಳಂದದಿ ಸಂದಣಿಸಿ ಇಹವು | ಕಾರಣಾಂಶಾವೇಶ ವ್ಯಾಪ್ತವ ತಾರ ಕಾರ್ಯ ವ್ಯಕ್ತಾವ್ಯಕ್ತವು ಆರು ನಾಲ್ಕು ವಿಭೂತಿಯಂತರ್ಯಾಮಿ ರೂಪಗಳು || ೨೭ ||
ಮಣಿಗಳೊಳಗಿಹ ಸೂತ್ರದಂದದಿ ಪ್ರಣವಪಾದ್ಯನು ಚೇತನಾಚೇ ತನ ಜಗತ್ತಿನೊಳನುದಿನದಲಾಡುವನು ಸುಖಪೂರ್ಣ | ದಣಿವಿಕೆಯು ಇವಗಿಲ್ಲ ಬಹುಕಾ ರುಣಿಕನಂತಾನಂತ ಜೀವರ ಗಣದೊಳೇಕಾಂಶಾಂಶ ರೂಪದಿ ನಿಂತು ನೇಮಿಸುವ || ೨೮ ||
ಜೀವ ಜೀವರ ಭೇದ ಜಡ ಜಡ ಜೀವ ಜಡ ಜಡ ಜೀವರಿಂದಲಿ ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು ಲಕ್ಷ್ಮೀ | ಮೂವರಿಂದಲಿ ಪದುಮಜಾಂಡದಿ ತಾ ವಿಲಕ್ಷಣಳೆನಿಸುತಿಪ್ಪಳು ಸಾವಧಿಕ ಸಮಶನ್ಯಳೆಂದರಿತೀರ್ವರನು ಭಜಿಸು || ೨೯ ||
ಆದಿತೇಯರು ತಿಳಿಯದಿಹ ಗುಣ ವೇದ ಮಾನಿಗಳೆಂದೆನಿಪ ವಾ ಣ್ಯಾದಿಗಳು ಬಲ್ಲರವರರಿಯದ ಗುಣಗಣಂಗಳನು | ವೇಧಬಲ್ಲನು ಬೊಮ್ಮನರಿಯದ ಗಾಧ ಗುಣಗಳು ಲಕುಮಿ ಬಲ್ಲಳು ಶ್ರೀಧರೊಬ್ಬನುಪಾಸ್ಯ ಸದ್ಗುಣ ಪೂರ್ಣ ಹರಿಯೆಂದು || ೩೦ ||
ಇಂತನಂತಾನಂತ ಗುಣಗಳ ಪ್ರಾಂತಗಾಣದೆ ಮಹಲಕುಮಿ ಭಗ ವಂತಗಾಭರಣಾಯುಧಾಂಬರವಾಲಯಗಳಾಗಿ | ಸ್ವಾಂತದಲಿ ನೆಲೆಗೊಳಿಸಿ ಪರಮ ದು ರಂತ ಮಹಿಮನ ದೌತ್ಯ ಕರ್ಮನಿ ರಂತರದಿ ಮಾಡುತಲಿ ತದಧೀನತ್ವವೈದಿಹಳು || ೩೧ ||
ಪ್ರಳಯ ಜಲಧಿಯೊಳುಳ್ಳ ನಾವೆಯ ಹೊಲಬುಗಾಣದೆ ಸುತ್ತುವಂದದಿ ಜಲರುಹೇಕ್ಷಣನಮಲ ಗುಣ ರೂಪಗಳ ಚಿಂತಿಸುವ | ನೆಲೆಯಗಾಣದೆ ಮಹಲಕುಮಿ ಛಂ ಛಲವನೈದಿಹಳಲ್ಪ ಜೀವರಿ ಗಳವಡುವುದೇನಿವನ ಮಹಿಮೆಗಳೀ ಜಗತ್ರಯದಿ || ೩೨ ||
ಶ್ರೀನಿಕೇತನ ಸಾತ್ವತಾಂಪತಿ ಜ್ಞಾನಗಮ್ಯಗಯಾಸುರಾರ್ದನ ಮೌನಿ ಕುಲ ಸನ್ಮಾನ್ಯ ಮಾನದ ಮಾತುಳ ಧ್ವಂಸಿ | ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ ತಾನೆ ಗತಿಯೆಂದನುದಿನದಿ ನಂಬಿದವರನು ಪೊರೆವ || ೩೩ ||