ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಥಾ1

ವಿಕಿಸೋರ್ಸ್ದಿಂದ

ಗಾಥಾ೧

[ಸಂಪಾದಿಸಿ]

ಈ ಶಬ್ದ ವೇದಗಳಲ್ಲಿ ಸ್ತೋತ್ರರೂಪ ಶ್ಲೋಕವೆಂಬ ಅರ್ಥದಲ್ಲಿಯೂ ಸಂಸ್ಕೃತದಲ್ಲಿ ಹಾಡುವ ಗಾದೆಯಂಥ ಸೂಕ್ತಿಯೆಂಬ ಅರ್ಥದಲ್ಲಿಯೂ ಪ್ರಾಕೃತದಲ್ಲಿ ಆರ್ಯಾವೃತ್ತಕ್ಕೆ ಸಮಾನವಾದ ಒಂದು ಮಾತ್ರಾವೃತ್ತದ ಛಂದೋಬಂಧವೆಂದೂ ಬಳಕೆಯಲ್ಲಿದೆ . ಆದರೆ ಇದು ಬಹಳಷ್ಟು ಪ್ರಸಿದ್ಧಿಗೆ ಬಂದುದು ಪ್ರಾಚೀನ ಪಾರಸಿಕರ ಪವಿತ್ರ ಗ್ರಂಥವಾದ ಜೆಡ್ ಅವೆಸ್ತದ ಒಂದು ಭಾಗವಾಗಿರುವುದ ರಿಂದಲೇ ಎನ್ನಬಹುದು.

ಪ್ರಚಲಿತ ಶಕ ಪೂರ್ವ 7ನೆಯ ಶತಮಾನದ ವೇಳೆಗೆ ಆಕಿಮೋನಿಯನ್ ಚಕ್ರವರ್ತಿಗಳಾದ ಡೇರಿಯಸ್ ಮುಂತಾದವರ ಕಾಲದಲ್ಲಿ ಈ ಪವಿತ್ರಗ್ರಂಥ ಸಾಕಷ್ಟು ಪ್ರಚಾರಗೊಂಡು ಅಲೆಕ್ಸಾಂಡರನ ದಂಡಯಾತ್ರೆಯ ಹೊತ್ತಿಗೆ ಪ್ರಸಿದ್ಧಿಗೆ ಬಂದಾಗಿತ್ತು. ಭಾರತದಲ್ಲಿ ವೇದಗಳಿರುವ ಮಹತ್ತ್ವದ ಸ್ಥಾನವೇ ಅವೆಸ್ತಕ್ಕೆ ಅಂದಿನಿಂದ ಇಂದಿನವರೆಗೂ ಪಾರಸಿಕರಿಂದ ದತ್ತವಾಗಿದೆ. ಈ ಗ್ರಂಥ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದು ಈಗ ಬಹು ವಿಸ್ತಾರವಾಗಿದೆ. ಅದರ ಪ್ರಾಚೀನತಮ ಭಾಗವೇ ಜೊರಾಸ್ಟರನ ಮೂಲ ಸಂದೇಶವನ್ನೊಳಗೊಂಡ ಪದ್ಯರೂಪವಾದ ಗಾಥೆಗಳೆಂದು ವಿದ್ವಾಂಸರು ಭಾವಿಸುತ್ತಾರೆ.

ಅವೆಸ್ತದ ಗಾಥೆಗಳು ಐದು ವೃತ್ತಜಾತಿಗಳನ್ನೊಳಗೊಳ್ಳುತ್ತವೆ :

  1. ಅಹುನ ವೈತಿ,
  2. ಉಷ್ತವೈತಿ,
  3. ಸ್ಪೆಂಟ ಮೆಯ್ನ್ಯು,
  4. ವೊಹುಕ್ಷಥ್ರ
  5. ವಹಿಸ್ಟೋಯಿಸ್ಟಿ.

ಮಿಕ್ಕ ಭಾಗಗಳಿಗಿಂತ ಗಾಥೆಗಳಲ್ಲಿ ಜೊರಾಸ್ಟರನ ವೈಯಕ್ತಿಕ ಉಪದೇಶಗಳೂ ಬೋಧನಗಳೂ ಎದ್ದು ಕಾಣುತ್ತವೆ. ಅಹುರಮಜ಼್ಡ (ಒಳ್ಳೆಯದರ ಅಧಿದೈವ) ಮತ್ತು ಅಹ್ರಿಮನ್ (ಕೆಟ್ಟದರ ಅಧಿದೈವ)-ಇವುಗಳ ನಿತ್ಯಸ್ಪರ್ಧೆ, ಇದರಲ್ಲಿ ಮನುಷ್ಯನ ಸಂಬಂಧ, ಕಟ್ಟಕಡೆಗೆ ಅಧರ್ಮ ನಾಯಕನಾದ ಅಹ್ರಿಮನ್ನನ ವಿನಾಶ-ಇವು ಗಾಥೆಗಳಲ್ಲಿ ಬರುವ ಮುಖ್ಯಾಂಶಗಳು.