ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಬಿ ಮೀನು

ವಿಕಿಸೋರ್ಸ್ದಿಂದ
ಗೋಬಿ ಮೀನು

ಪರ್ಸಿಫಾರ್ಮೀಸ್ ಗಣದ ಗೋಬಿಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಮೀನುಗಳಿಗೆ ಇರುವ ಸಾಮಾನ್ಯ ಹೆಸರು. ಈ ಕುಟುಂಬದಲ್ಲಿ ನೂರಾರು ಪ್ರಭೇದಗಳಿವೆ. ಇವು ಉಷ್ಣವಲಯದ ಕಡಲುಗಳು ಇಲ್ಲವೇ ಸರೋವರಗಳ ತಳದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಇವು ಚಿಕ್ಕ ಗಾತ್ರದವು. ಫಿಲಿಪೀನ್ಸ್‌ನಲ್ಲಿನ ಲುಜಾ಼ನ್ ಎಂಬಲ್ಲಿರುವ ಒಂದು ಸರೋವರದಲ್ಲಿ ಕಂಡುಬರುವ ಪಂಡಾಕ ಪಿಗ್ಮೀಯ ಎಂಬ ಗೋಬಿ ಮೀನು ಕೇವಲ 12 ಮಿಮೀ ಉದ್ದ ಇದ್ದು ಅತ್ಯಂತ ಚಿಕ್ಕ ಕಶೇರುಕ ಎನಿಸಿಕೊಂಡಿದೆ. ಉಳಿದವು ಸುಮಾರು 8 ರಿಂದ 30 ಸೆಂಮೀ ವರೆಗೆ ಬೆಳೆಯಬಲ್ಲವು.


ಭಾರತದಲ್ಲಿ ಸಾಮಾನ್ಯವಾಗಿ ಸಿಹಿನೀರು ಪ್ರದೇಶಗಳಲ್ಲಿ ಕಾಣಸಿಗುವ ಗೋಬಿ ಮೀನು ಎಂದರೆ ಗ್ಲಾಸೊಗೋಬಿಯಸ್ ಗೈಯುರಿಸ್ (ಟ್ಯಾಂಕ್ ಗೋಬಿ). ಬಹುತೇಕ ಕೆರೆ, ಕೊಳಗಳು, ಅಳಿವೆಗಳು, ಹಿನ್ನೀರು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮೀನು. ಮರಳು, ಜಲ್ಲಿ, ಬಂಡೆಗಳಿಂದ ಕೂಡಿದ ಝರಿಗಳಲ್ಲೂ ಕಾಣಸಿಗುತ್ತವೆ. ಕೆಲವೊಮ್ಮೆ ಸಮುದ್ರಕ್ಕೂ ಪ್ರವೇಶಿಸುತ್ತವೆ. ಈ ಪ್ರಭೇದದ ಗಂಡು ಮೀನು ಕಂದುಬಣ್ಣವಿರುತ್ತದೆ, ಹೆಣ್ಣು ಹಳದಿ. ಹೆಣ್ಣಿನಲ್ಲಿ ಬೂದು ಮತ್ತು ಕಪ್ಪು ಚುಕ್ಕೆಗಳು ಇರುತ್ತವೆ. ಸುಮಾರು 30 ಸೆಂಮೀ ವರೆಗೆ ಬೆಳೆಯುತ್ತದೆ. ಗೋಬಿ ಮೀನುಗಳಿಗೆ ಚಪ್ಪಟೆಯಾದ ತಲೆ, ದುಂಡಾದ ಮೂತಿ, ತಲೆಯ ಮೇಲ್ಭಾಗಕ್ಕಿರುವ ದೊಡ್ಡ ಕಣ್ಣುಗಳು, ದಪ್ಪ ತುಟಿಗಳು, ಹಲವಾರು ಸಾಲುಗಳಲ್ಲಿರುವ ಸಣ್ಣ ಹಲ್ಲುಗಳು, ದುಂಡಾದ ಬಾಲದ ಈಜುರೆಕ್ಕೆಗಳಿವೆ. ಗುದದ ಈಜುರೆಕ್ಕೆಗಳು ದೇಹದ ಅಧೋಭಾಗದಲ್ಲಿ ಒಂದುಗೂಡಿ ಒಂದು ರೀತಿಯ ಹೀರು ಬಟ್ಟಲಾಗಿ ಪರಿವರ್ತನೆಯಾಗಿವೆ. ಇದರ ಸಹಾಯದಿಂದ ಗೋಬಿ ಬಂಡೆಗಳಿಗೆ, ಮರಳಿಗೆ ಅಂಟಿಕೊಂಡಿರುತ್ತದೆ. ಇವು ಸಣ್ಣ ಕೀಟಗಳು, ಇತರೆ ಸಣ್ಣ ಜಲಚರಗಳು ಹಾಗೂ ಮೀನುಗಳನ್ನು ತಿನ್ನುತ್ತವೆ.


ವಸಂತ ಋತುವಿನ ಪ್ರಾರಂಭದಲ್ಲಿ ಗೋಬಿಗಳು ಪ್ರಜನನ ಕ್ರಿಯೆಯಲ್ಲಿ ತೊಡಗುತ್ತವೆ. ಹೆಣ್ಣು ಮೊಟ್ಟೆಗಳನ್ನು ಇಟ್ಟ ಮೇಲೆ ಗಂಡು ಮೀನು ಕಾವಲಿರುತ್ತದೆ. ಇದು ಮೊಟ್ಟೆಗಳನ್ನು ತಿನ್ನಲು ಬರುವ ಇತರೆ ಮೀನುಗಳೊಡನೆ ಕಾದಾಡಿ ರಕ್ಷಣೆ ನೀಡುವುದಲ್ಲದೆ, ತನ್ನ ಭುಜದ ಈಜು ರೆಕ್ಕೆಗಳಿಂದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಬೆಳೆಯುವ ಮರಿಗಳಿಗೆ ಅನುಕೂಲ ವಾತಾವರಣವನ್ನು ಕಲ್ಪಿಸುತ್ತದೆ.


ವಾಣಿಜ್ಯವಾಗಿ ಅಷ್ಟು ಪ್ರಾಮುಖ್ಯವಲ್ಲದಿದ್ದರೂ ಈ ಮೀನು ತಿನ್ನಲು ಯೋಗ್ಯವಾಗಿವೆ.