ಮಹಾಕ್ಷತ್ರಿಯ/ಗೆಲುವಿನ ಗುಟ್ಟು

ವಿಕಿಸೋರ್ಸ್ದಿಂದ

೧೫.ಗೆಲುವಿನ ಗುಟ್ಟು



ಅಮರಾವತಿಯ ಕೋಟೆಯ ಆಚೆ, ಉದ್ಯಾನದಿಂದ ಅತ್ತಲಾಗಿ ಕಟ್ಟಿರುವ ಭವ್ಯಮಂದಿರದಲ್ಲಿ ಶುಕ್ರಾಚಾರ್ಯನು ತನ್ನ ಏಕಾಂತಗೃಹದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. “ಇದೇನು ? ಈಚೀಚೆಗೆ ವೃತ್ರೇಂದ್ರನ ವಿಚಾರವಾಗಿ ಕೆಟ್ಟಕೆಟ್ಟ ಯೋಚನೆಗಳೇ ಬರುತ್ತಿವೆ ? ಏನೋ ಸರ್ವನಾಶವಾಗಿಹೋಗಿರುವಂತೆ, ಮನಸ್ಸು ಬೇಡಬೇಡವೆಂದರೂ ಅಸುರೇಂದ್ರನ ವಿಪತ್ತನ್ನೇ ಕುರಿತು ಚಿಂತಿಸುತ್ತಿರುತ್ತದೆ. ಭವಿತವ್ಯವನ್ನು ಕುರಿತು ಚಿಂತಿಸಿದರೆ ಅದೇನೋ ಎಲ್ಲವೂ ಶೂನ್ಯವಾಗಿ ಕಾಣುತ್ತದೆ. ಶಚೀಪತಿಯೇನಾದರೂ ಒಳಸಂಚುಮಾಡಿರುವನೋ? ಅವನು ದಿನವೂ ಬೃಹಸ್ಪತಿಗೆಂತೋ ನನಗೂ ಅಂತೆಯೇ ಬಂದು ನಮಸ್ಕಾರ ಮಾಡುತ್ತಿರುತ್ತಾನೆ. ಆಗೇನಾದರೂ ಯಾವಾಗಲಾದರೂ ನಿನಗೆ ರಾಜ್ಯಪ್ರಾಪ್ತಿಯಾಗಲೆಂದು ಆಶೀರ್ವಾದ ಮಾಡಿದೆನೋ? ನನಗೆ ಈ ಸುರಾಪಾನದಿಂದ ಆಗಿರುವ ಅನರ್ಥವು ಅಷ್ಟಿಷ್ಟಲ್ಲ. ನಾನು ಏನೋ ಮಾಡಬೇಕು ಎಂದುಕೊಂಡಿರುತ್ತೇನೆ. ಈ ಸುರಾಪಾನವು ಇನ್ನೇನನ್ನೋ ಮಾಡಿಸುತ್ತದೆ. ಇದನ್ನು ಬಿಡಬೇಕು ಎಂದು ಎಷ್ಟೋ ಸಲ ಮನಸ್ಸು ಮಾಡಿದ್ದೇನೆ. ಆದರೆ, ಬಿಟ್ಟಿಲ್ಲ ಅಲ್ಲದೆ ನಿಜವಾಗಿಯೂ ನೋಡಿದರೆ, ಇದರಿಂದ ನನಗೆ ಎಷ್ಟು ಆನಂದವಿದೆ? ಸುಖದುಃಖಗಳೆರಡನ್ನೂ ಮೀರಿದ ಬ್ರಹ್ಮಾನಂದವುಂಟು. ಆದರೆ ಅಲ್ಲಿ ಮನಸ್ಸಿನ ರಾಗದ್ವೇಷಗಳಿಲ್ಲ. ಮನಸ್ಸೇ ಅಸ್ತವಾಗುವ ಆ ಸ್ಥಿತಿಯನ್ನು ಪಡೆದು, ಇಲ್ಲಿ ಅಸುರಗುರುವಾಗಿರುವುದೆಂತು? ಆಗ ದೇವತೆಗಳಾದರೇನು? ದಾನವರಾದರೇನು? ದೇವರಾಜಾಯ ಸ್ವಸ್ತಿ ದಾನವೇಂದ್ರಾಯ ಸ್ವಸ್ತಿ ಅಷ್ಟೇ! ಆಗಾಗ, ನಿದ್ದೆಗೆ ಸಂದು ದೇಹಕ್ಕೆ ಶಕ್ತಿಯನ್ನು ತಂದುಕೊಳ್ಳುವಂತೆ, ನಿರ್ಗುಣಕ್ಕೆ ಹೋಗಿ ಬೇಕಾದ ಶಕ್ತಿಯನ್ನು ತುಂಬಿಕೊಳ್ಳುವುದಕ್ಕೆ ನಿರ್ಗುಣೋಪಾಸನೆಯನ್ನು ಉಪಯೋಗಿಸಿಕೊಳ್ಳಬೇಕೇ ಹೊರತು, ದಿನದಿನದ ನಿತ್ಯಕರ್ಮಕಲಾಪಗಳಿಗೆಲ್ಲಾ ಸುರಾ ! ಸುರಾ ! ಸುರಾ ! ಅದರಿಂದಲೇ ಏನೋ? ಹೀಗೆ ತಗ್ಗಿದ ಹೃದಯವನ್ನು ಉಬ್ಬಿಸಲೆಂದೋ ಏನೋ ಈ ಸುರೆಯ ಸೃಷ್ಟಿಯಾದುದು! ಈ ಸುರೆಯನ್ನು ಬಿಡುವುದೇ? ಎಂತಹ ಅವಿವೇಕ! ಸುಗಂಧದ್ರವ್ಯದಿಂದ ಸುವಾಸಿತವಾಗಿ, ಭೂತ ಭವಿಷ್ಯತ್ತುಗಳೆಂಬುದನ್ನೆಲ್ಲಾ ಮರೆಸಿ, ವರ್ತಮಾನಕ್ಷಣವೊಂದನ್ನೇ ಮಹತ್ತರವಾಗಿ ಮಾಡುವ ಈ ಸುರೆಯ ಮುಂದೆ ಇನ್ನುಂಟೆ ?’ ಎಂದು ಯೋಚಿಸುತ್ತಾ ಆಳನ್ನು ಕರೆದು “ನಮಗಷ್ಟು ಪಾನವು ಬೇಕೆಂದು ಹೇಳು” ಎಂದನು. ವೃತ್ರನಿಗಾಗಿ ಮಾಡುತ್ತಿದ್ದ ಚಿಂತೆಯೆಲ್ಲವೂ ಪಾನದಲ್ಲಿ ಮುಳುಗಿಹೋಯಿತು. ಆಚಾರ್ಯನು ಅಂದು ವೃತ್ರನಿಗೆ ಇಂದ್ರತ್ವವು ಶಾಶ್ವತವಾಗಬೇಕಾದರೆ ಏನು ಮಾಡಬೇಕು ಎಂದು ಯೋಚಿಸಲು ಕುಳಿತಿದ್ದು. ಅದು ಮುಗಿದದ್ದು ಪಾನದಲ್ಲಿ.

ದಿನವೂ ಹೀಗೇ ಆಗುವುದು. ಆದರೂ ಅದೇನೋ ಶುಕ್ರಾಚಾರ್ಯನ ಮನಸ್ಸಿಗೆ ಬರಲೊಲ್ಲದು. ಈ ವಿಶ್ವವನ್ನೆಲ್ಲಾ ಆಡಿಸುವ ಶಕ್ತಿಯೊಂದಿದೆ. ಅದನ್ನು ಆರಾಧಿಸಬೇಕೆಂದು.

ಇತ್ತ ಅಮರಾವತಿಯಲ್ಲಿ ಆಚಾರ್ಯಮಂದಿರದಲ್ಲಿ ದೇವಗುರುವು ಕುಳಿತು ಯೋಚಿಸುತ್ತಿದ್ದಾನೆ “ಆಹಾ. ಆ ನಾರಾಯಣನ ದಯೆಯೆನ್ನುವುದು ಎಷ್ಟು ದೊಡ್ಡದು! ಆತನ ಕೃಪೆಯಿಂದ, ನಮಗೆ ಅವಮಾನಗಳಾಗಿಲ್ಲ. ಇಂದ್ರನಿಗೆ ಇಂದ್ರತ್ವ ಹೋಯಿತು! ಅಧಿಕಾರವು ತಪ್ಪಿಹೋಯಿತು. ಅದರೂ, ಆ ಮಹಾವಿಷ್ಣುವಿನ ಅನುಗ್ರಹದಿಂದ ನಾವು ನಾವು ಇನ್ನೂ ನಮ್ಮ ನಮ್ಮ ಮನೆಗಳಲ್ಲಿ ಇರುವೆವು. ಬಾಗಿಲಲ್ಲಿ ಕಾವಲಿದ್ದ ದೇವಪುರುಷರಿಗೆ ಪ್ರತಿಯಾಗಿ ದಾನವರು ಕಾವಲಿರುವರು. ನಾವು ಮತ್ತೆ ಸಭೆ ಸೇರುವಂತಿಲ್ಲ ಗೋಪ್ಯವಾಗಿ ವಿಚಾರ ವಿನಿಮಯ ಮಾಡುವಂತಿಲ್ಲ ಅದಷ್ಟು ಬಿಟ್ಟು ವೃತ್ರೇಂದ್ರನು ನಮ್ಮನ್ನು ಯಾವ ರೀತಿಯಲ್ಲೂ ಗೋಳುಗುಟ್ಟಿಸುತ್ತಿಲ್ಲ. ಆದರೆ, ಇದೇ ಸರಿಯೆಂದು ಇರಲಾದೀತೆ? ಕಡಿದ ಮರವು ಚಿಗುರುವುದು. ಕದಡಿದ ನೀರು ತಿಳಿಯಾಗುವುದು. ಹಾಗೆಯೆ, ಒಂದು ಸಹಜಸ್ಥಿತಿಯಿದೆಯಲ್ಲ ಅದು ಬರಬೇಡವೆ? ಬೆಂಕಿಯು ತನ್ನ ಆಹಾರವನ್ನೆಲ್ಲಾ ಮುಗಿಸುವಂತೆ, ದೇವತೆಯಲ್ಲದ ಇನ್ನು ಯಾರೇ ಆಗಲಿ, ಈ ಸ್ವರ್ಗಭೂಮಿಗೆ ಬಂದರೆ ತನ್ನ ಪುಣ್ಯವನ್ನೆಲ್ಲಾ ಸೂರೆಗೊಟ್ಟೇ ತೀರಬೇಕಲ್ಲವೆ? ಈ ವೃತ್ರನೂ ಸಹ ಈ ನಿಯಮದಂತೆ ಎಂದಾದರೊಂದು ದಿನ ತನ್ನ ಪುಣ್ಯವನ್ನೆಲ್ಲ ಮುಗಿಸಿಕೊಂಡು ತನ್ನ ವಸ್ತ್ರವನ್ನು ಝಾಡಿಸಿಕೊಂಡು ಹೊರಟುಬಿಡಬೇಡವೆ? ಅಥವಾ ಶುಕ್ರನೇನಾದರೂ ವೃತ್ರನಿಗೆ ಇಂದ್ರಪದವಿಯು ಈ ಮನ್ವಂತರದ ಕೊನೆಯವರೆಗೂ ಇರುವಂತೆ ಮಾಡಿರುವನೋ? ಹಾಗಾದರೆ ಅದು ಅಖಂಡವಾಗಿರುವಂತೆ ಮಾಡಿರಬೇಕು. ಇಲ್ಲ ಹಾಗಾಗಿಲ್ಲ ಹಾಗೆ ಆಗಬೇಕಾದರೆ ವೃತ್ರನು ಶಚೀಪತಿಯೂ ಆಗಬೇಕಾಗಿತ್ತು. ವೃತ್ರನು ಶಚಿಯನ್ನು ಪಡೆಯಲೂ ಯತ್ನಿಸಿಲ್ಲ. ಆದುದರಿಂದ, ಶುಕ್ರನು ಆ ಗುಟ್ಟನ್ನು ಭೇದಿಸಿಲ್ಲ. ಶಚಿಯನ್ನು ಪಡೆಯದೆ ಯಾವನೇ ಆಗಲಿ, ಇಂದ್ರತ್ವವನ್ನು ಪರಿಪೂರ್ಣವಾಗಿ ಅನುಭವಿಸುವುದೆಂತು. ಆದುದರಿಂದ, ಈ ವೃತ್ರನ ಪುಣ್ಯವು ಮುಗಿಯುತ್ತಾ ಬಂದಿರಬೇಕು. ಆಗಲಿ, ನಾವು ಏಕೆ ಅದನ್ನು ನೋಡಬಾರದು ? ಏಕಾಂತವಾಗಿ ನೋಡಬೇಕು, ನೋಡೋಣ ಎಂದು, ಪ್ರಹರಿಯನ್ನು ಕರೆದು ``ಯಾರಾದರೂ ಬಂದು ಕೇಳಿದರೆ, ನಾವು ಧ್ಯಾನದಲ್ಲಿರುವೆವು ಎಂದು ಹೇಳು. ಬಲವಂತವಾಗಿ ನೋಡಲೇಬೇಕಾಗಿ ಬಂದರೆ, ಬಾಗಿಲಲ್ಲಿ ಕಟ್ಟಿರುವ ಈ ಗಂಟೆಯನ್ನು ಮೃದುವಾಗಿ ಮೂರು ಸಲ ಬಾರಿಸು. ಆದರೆ ನಾವಾಗಿ ಹೊರಗೆ ಬರುವವರೆಗೆ ಬಾರಿಸದಿರುವುದು ಒಳ್ಳೆಯದು. ತಿಳಿಯಿತೆ ?” ಎಂದು ಅವನಿಗೆ ತಿಳಿಯಹೇಳಿ ತಾನು ಧ್ಯಾನಾಸಕ್ತನಾದನು.

ಧ್ಯಾನವು ಬಲಿಯಿತು. ಬಲಿತ ಧ್ಯಾನವು ಸುರಾಚಾರ್ಯನನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಯಿತು. ಬ್ರಹ್ಮನು ಗೌರವದಿಂದ, ವಿಶ್ವಾಸದಿಂದ ಆಚಾರ್ಯನನ್ನು ಬರಮಾಡಿಕೊಂಡನು. ಬಂದ ಕಾರ್ಯವೇನೆಂದು ಕೇಳಿದನು. ಆಚಾರ್ಯನು “ಚತುರ್ಮುಖನಿಗೆ ನಮಸ್ಕಾರವು ವಾಣೀಪತಿಗೆ ನಮಸ್ಕಾರವು. ಇಂದ್ರನು ಇಂದ್ರತ್ವವನ್ನು ಬಿಟ್ಟು ಅನಿಂದ್ರನಾಗಿರಬೇಕಾದ ಕಾಲವು ಇನ್ನು ಎಷ್ಟು ಇರುವುದು ? ವೃತ್ರನು ಇನ್ನೆಷ್ಟುಕಾಲ ಈ ಇಂದ್ರತ್ವವನ್ನು ಅನುಭವಿಸುವನು ? ಎಂದು ಯೋಚನೆಯಾಯಿತು. ಅದಕ್ಕಾಗಿ ಸನ್ನಿಧಾನದಲ್ಲಿ ಈ ವಿಷಯವನ್ನು ತಿಳಿದುಕೊಂಡು ಹೋಗಬೇಕೆಂದು ಬಂದೆ ? ಎಂದನು.

ಚತುರ್ಮುಖನು ನಗುತ್ತಾ “ನೀವು ದೇವತೆಗಳು, ನಿಮಗೆ ತಿಳಿಯದೆ ನಾವು ಯಾವ ಕೆಲಸವನ್ನು ತಾನೇ ಮಾಡಲಾಗುತ್ತದೆ ? ಅದಕ್ಕಾಗಿಯೇ, ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳುವುದಕ್ಕಾಗಿಯೇ, ನಾವು ಈ ಯೋಚನೆಯನ್ನು ನಿನಗೆ ಕಳುಹಿಸಿದೆವು. ಇಂಧ್ರನು ಮತ್ತೆ ಇಂದ್ರತ್ವವನ್ನು ಪಡೆದರೂ, ಇನ್ನೂ ಒಮ್ಮೆ ಅನಿಂದ್ರನಾಗಿರಬೇಕಾಗಿರುವುದು. ವರ್ಷಾಕಾಲದಲ್ಲಿ ಆದ ಸೂರ್ಯದರ್ಶನದಂತೆ ಅದು. ಅದನ್ನು ನೀನೇ ನೋಡುವೆ. ಆಗ, ಎಂದರೆ ಇಂದ್ರನು ಮತ್ತೆ ತಲೆತಪ್ಪಿಸಿಕೊಂಡಾಗ, ನೀನು ಬಹಳ ಕಾರ್ಯ ಮಾಡಬೇಕಾಗುವುದು. ಅದಿರಲಿ ಎರಡನೆಯ ಪ್ರಶ್ನಕ್ಕೆ ಉತ್ತರವಿದು. ವೃತ್ರನ ಕಾಲವು ಮುಗಿಯಿತು. ವೃತ್ರನು ಸಿಂಹಾಸನವನ್ನು ಬಿಡುವನು. ಆದರೂ ವೃತ್ರನಿಗ್ರಹವು ಅಷ್ಟು ಸುಲಭವಲ್ಲ ಆದುದರಿಂದ ನಿಮ್ಮ ಇಂದ್ರನು ಮೈಯೆಲ್ಲ ಕಣ್ಣಾಗಿ ವರ್ತಿಸಬೇಕು. ಕೊನೆಗೆ ನಿನ್ನ ಆಗ್ರಹದಿಂದ ಆಗಿರುವ ಆ ಅನರ್ಥವನ್ನೆಲ್ಲ ನೀನೇ ಸರಿಗಟ್ಟಬೇಕು. ಎಚ್ಚರವಿರಲಿ, ಕೊಂಚ ಅಂಕೆ ತಪ್ಪಿದರೂ ಅನರ್ಥವಾಗುವುದು. ಶ್ರೀ ಮಹಾವಿಷ್ಣುವು, ಎಲ್ಲೆಲ್ಲೂ ತುಂಬಿರುವ ವಿಷ್ಣುವು, ಸಕಾಲದಲ್ಲಿ ಪ್ರೇರಣೆ ಮಾಡಿ ವೃತ್ರವಧವನ್ನು ಮಾಡಿಸುವನು” ಎಂದನು. ಬೃಹಸ್ಪತಿಯು “ಸರಿ, ಸರಿ, ಈ ವೃತ್ರಸಖ್ಯವೂ ಆತನ ಅಪ್ಪಣೆಯಿಂದಲೇ ಆಗಿರುವುದು. ವಜ್ರವನ್ನು ಉಪಯೋಗಿಸಲು ಕಾಲವಿದೆ. ನಾನು ಹೇಳುವೆನು ಎಂದು ಆತನೇ ತಡೆದಿರುವನಲ್ಲ” ಎಂದನು. ಚತುರ್ಮುಖನು “ಹೋಗಿ ಬಾ” ಎನ್ನಲು ಇನ್ನೂ ಏನೇನೋ ಕೇಳಬೇಕು ಎಂದಿದ್ದವನು ಮರುಮಾತಾಡದೆ ಹೊರಟು ಬಂದುಬಿಟ್ಟನು. ಎಚ್ಚರವಾಯಿತು.

ಆಚಾರ್ಯನು ಎಚ್ಚರಗೊಂಡು ಪ್ರಹರಿಯನ್ನು ಕರೆದು “ಯಾರಾದರೂ ಬಂದಿರುವರೆ ?” ಎಂದು ವಿಚಾರಿಸಿದನು. ಪ್ರಹರಿಯು ದೇವರಾಜನೆನ್ನುವುದಕ್ಕೆ ಹೋಗಿದ್ದವನು ತಡೆದು, “ಶಚೀಪತಿಗಳು ದಯಮಾಡಿಸಿರುವರು” ಎಂದು ಬಿನ್ನವಿಸಿದನು. ಬೃಹಸ್ಪತಿಯು ನಗುತ್ತ ಮನಸ್ಸಿನಲ್ಲಿ “ಬ್ರಹ್ಮದೇವನು ಹೇಳಿರುವುದು ನಿಜವಾದರೆ ಮತ್ತೆ ದೇವರಾಜನಾಗಲು ಬಹಳ ಕಾಲವಿಲ್ಲ” ಎಂದುಕೊಂಡು ‘ಬರಹೇಳು’ ಎಂದನು.

ಆಚಾರ್ಯನೂ ಹಿಂದಿನ ಸುರೇಂದ್ರನೂ ಲೋಕಾಭಿರಾಮವಾಗಿ ಏನೇನೋ ಮಾತನಾಡುತ್ತಿದ್ದರು. ಆಚಾರ್ಯನು ಸಮಯವನ್ನು ಸಾಧಿಸಿ ಬ್ರಹ್ಮದೇವನು ಅಪ್ಪಣೆ ಕೊಡಿಸಿದುದನ್ನು ಆತನಿಗೆ ಹೇಳಿ, “ನೀನು ಶ್ರೀ ಮಹಾವಿಷ್ಣುವಿನ ಅರ್ಚನೆಯನ್ನು ಚೆನ್ನಾಗಿ ಮಾಡುತ್ತಿರು. ಎಲ್ಲವೂ ಒಳ್ಳೆಯದಾಗುವುದು” ಎಂದು ಆಶೀರ್ವದಿಸಿ ಕಳುಹಿಸಿದನು. ಏಕೋ ಏನೋ ಆಚಾರ್ಯನು ವೃತ್ರವಧವಾದ ಮೇಲೆ ಆಗುವ ಅನರ್ಥವನ್ನು ಅರಿತು ಮಾತ್ರ ಏನೂ ಹೇಳಲಿಲ್ಲ.

* * * *