ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮ ನಡೆದದ್ದೇ ದಾರಿ


                             ಪ್ರಶ್ನೆ
     

ಮತ್ತೊಂದು ಭ್ರಮೆ ನಿರಸನವಾಯಿತು; ಕನಸು ಒಡೆಯಿತು;
-ಆನಿರೀಕ್ಷಿತವಾಗಿ ಅಲ್ಲ; ಗೊತ್ತಿದ್ದದ್ದೇ. ಆದರೆ ಇಷ್ಟು ಬೇಗ ಎಂದು
ಅನಿಸಿರಲಿಲ್ಲ ಅಷ್ಟೆ. ಇನ್ನು ಸ್ವಲ್ಪ ದಿನ ಈ ಕನಸಿನಲ್ಲೆ ಸುಖಿಸಬಹುದೆಂದು. ಈ
ಭ್ರಮೆಯಲ್ಲೆ ಮೈಮರೆತಿರಬಹುದೆಂದು ಆಸೆಯೊಂದಿತ್ತು. ಬರಿಯ ಆಸೆ. ಹಿಂದಿನ
ಆಸೆಗಳಂತೆಯೇ ಮಣ್ಣುಗೂಡಿದ- ಮಣ್ಣುಗೂಡಲೆಂದೇ ಮೈದಳೆದಿದ್ದ-ಆಸೆ. ಹಾಃ,
ಅಂದಹಾಗೆ ಇದರ ಸರದಿ ಎಷ್ಟನೆಯದು? ಇದರ ಕ್ರಮಾಂಕ,ಅಂದರೆ ನಂಬರು,
ಎಷ್ಟು? ಸ್ವಲ್ಪ ವಿರಾಮವಾಗಿ ಕೂತು ನೆನಪಿಸಿಕೊಳ್ಳಬೇಕು. ಯಾಕೋ ಇತ್ತೀಚೆ ಎಲ್ಲ
ಮರೆಯತೊಡಗಿತ್ತು. ಭೂತಕಾಲದ ಕರಿನೆರಳುಗಳ ಸತತ ಅಸ್ತಿತ್ವದ ಬಗೆಗೆ,
ಅಪರಿಹಾರ್ಯ ಬಾಧೆಯ ಬಗೆಗೆ, ಸ್ವಲ್ಪ-ಸ್ವಲ್ಪ ನಿರ್ಲಕ್ಷ ಬೆಳೆಯತೊಡಗಿತ್ತು. ಅವುಗಳ
ಕಪಿಮುಷ್ಟಿಯಿಂದ ಪಾರಾಗುವುದು ಸಾಧ್ಯವಾಗಬಹುದೇನೋ,
ಸಾಧ್ಯವಾಗತೊಡಗಿದೆಯೇನೋ ಎಂದು ಅನ್ನಿಸತೊಡಗಿತ್ತು. ಆದರೆ ಇದೆಲ್ಲಾ ಸುಳ್ಳು,
ಬರೇ ಭ್ರಮೆ ಎಂಬ ಸತ್ಯ-ಹಿಂದೆ ಅನೇಕ ಸಲ ತಿಳಿದು ಬಂದಂತೆ- ಈಗ ಮತ್ತೆ
ತಿಳಿದು ಬಂದಿತು. ಈ ಅನುಭವ ಹಿಂದಿನ ಅನುಭವಗಳಿಗಿಂತ ಬೇರೆಯದು ಎಂದು -
ಹಿಂದೆ ಪ್ರತಿಸಲ ಅಂದುಕೊಂಡ ಹಾಗೆ-ಅಂದುಕೊಂಡಿದ್ದು ಮತ್ತೊಂದು ಭ್ರಮೆ. ಇದು
ಯಾವ ಬಗೆಯಲ್ಲೂ ಬೇರೆಯದಲ್ಲವೆಂಬುದು ಕಹಿ ಸತ್ಯ;
ಬಹಳ ಕಹಿ,ಆದರೆ ಸತ್ಯ. ಇದೊಂದು ಹೊಸ ಅನುಭವ ಅಷ್ಟೆ.
ನಂಬರು-ಮೂರೆ? ನಾಲ್ಕೆ?
ಸರಿಯಾಗಿ ನೆನಪಿಸಿಕೊಳ್ಳಲೆಂದು ಆಕೆ ಮಲಗಿದ್ದಲ್ಲೇ ಆತ್ತಿತ್ತ ಹೊರಳಾಡಿ
ಚಡಪಡಿಸಿದಳು. ಯಾಕೋ ಈ ಅನುಭವಕ್ಕೂ ಒಂದು ನಂಬರು ಕೊಟ್ಟು ಬಿಟ್ಟು,
ಇದನ್ನೂ ಬರಿಯ 'ನೆನಪು'ಗಳ ಪಟ್ಟಿಯಲ್ಲಿ ಕೊನೆಯದನ್ನಾಗಿ ಸೇರಿಸಿ ದೂರವಾಗಿಸಲು
ಆಕೆಗೆ ಮನಸ್ಸು ಬರಲಿಲ್ಲ. ಇದರಲ್ಲಿ ಏನಾದರೂ ಸ್ವಲ್ಪ ಪ್ರತ್ಯೇಕತೆಯನ್ನು,
ವಿಶೇಷವನ್ನು ಕಂಡುಕೊಂಡು, ಕಳೆದುಹೋದ ಈ ಭವ್ಯ ಕನಸಿಗಾಗಿ ಕಣ್ಣೀರು ಸುರಿಸಿ
ಸಮಾಧಾನ ಹೊಂದಬೇಕೆಂದು ಅವಳಿಗೆ ತೀವ್ರ ಆಸೆಯಾಯಿತು. ಆದರೆ ಯಾಕೋ,
ಎಷ್ಟು ಪ್ರಯತ್ನಿಸಿದರೂ ಈ ಅನುಭವದಲ್ಲಿ ಹಿಂದಿನವುಗಳಿಗಿಂತ ಭಿನ್ನವಾದುದು.