ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂಗರು, ತಲಕಾಡಿನ

ವಿಕಿಸೋರ್ಸ್ದಿಂದ

ಗಂಗರು, ತಲಕಾಡಿನ

	ದಕ್ಷಿಣ ಭಾರತದ ಒಂದು ಪ್ರಸಿದ್ಧ ರಾಜಮನೆತನದ ಅರಸರು. ಪಶ್ಚಿಮ ಗಂಗರೆಂದೂ ಪ್ರಸಿದ್ಧರಾಗಿದ್ದಾರೆ. ಇವರು ಕನ್ನಡನಾಡಿನ ದಕ್ಷಿಣ ಭಾಗ ಹಾಗೂ ಸುತ್ತಮುತ್ತಣ ಪ್ರದೇಶದ ಮೇಲೆ ಸುಮಾರು 700 ವರ್ಷಗಳ ಕಾಲ ಪಭುತ್ವ ನಡೆಸಿದರು. ಇವರು ಮೊದಲು ಗಂಗ ¾ುಸಾಸಿರ ಅಂದರೆ ಗಂಗ 6000 ಪ್ರಾಂತ್ಯದ ಅಧಿಪತಿಗಳಾಗಿದ್ದರು. ಕುವಳಾಲ (ಈಗಿನ ಕೋಲಾರ) ಇವರ ರಾಜಧಾನಿಯಾಗಿತ್ತು. ಈ ಪ್ರಾಂತ್ಯ ಆಂಧ್ರಪದೇಶದ ಅನಂತಪುರ ಹಾಗೂ ಕಡಪ ಜಿಲ್ಲೆಗಳನ್ನೊಳಗೊಂಡಿತ್ತು. ಕ್ರಮೇಣ ಇವರ ರಾಜ್ಯ ವಿಸ್ತಾರವಾಯಿತು. ಅದಕ್ಕೆ ಗಂಗವಾಡಿ 96000 ಎಂಬ ಹೆಸರು ಬಂತು. ಆದರೆ ಆ ವೇಳಗೆ ಗಂಗರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಕರ್ನಾಟಕದ ಅರಸು ಮನೆತನದ ಮಾಂಡಲಿಕರಾಗಿದ್ದರು. ಕರ್ನಾಟಕದ ತುಮಕೂರು, ಬೆಂಗಳೂರು, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳನ್ನಲ್ಲದೆ, ತಮಿಳುನಾಡಿನ ಸೇಲಂ, ಕೊಯಮತ್ತೂರು, ಉತ್ತರ ಅರ್ಕಾಟ್ ಜಿಲ್ಲೆಗಳ ಕೆಲವು ಭಾಗಗಳೂ ಇವರ ರಾಜ್ಯಕ್ಕೆ ಸೇರಿದ್ದವು. ಆಗ ಮೈಸೂರು ಜಿಲ್ಲೆಯ ತಲವನಪುರ (ಈಗಿನ ತಲಕಾಡು) ಇವರ ರಾಜಧಾನಿಯಾಯಿತು. ಚನ್ನಪಟ್ಟಣದ ಸಮೀಪದ ಮಂಕುಂದ ಮತ್ತು ನೆಲಮಂಗಲ ತಾಲ್ಲೂಕಿನಲ್ಲಿರುವ ಮಣ್ಣೆ (ಮಾನ್ಯಪುರ) ಇವರ ನೆಲೆವೀಡುಗಳಾಗಿದ್ದವು.

ಈ ಗಂಗರು ಯಾರು ಎಂಬ ಪ್ರಶ್ನೆಗೆ ಸದ್ಯದಲ್ಲಿ ಲಭ್ಯವಿರುವ ಆಧಾರಗಳ ಮೇಲೆ ಖಚಿತವಾದ ಉತ್ತರ ಹೇಳಲಾಗದು 11-12ನೆಯ ಶತಮಾನದ ಅನಂತರದ ಇವರ ಶಾಸನಗಳಲ್ಲಿ ಈ ಮನೆತನದ ಮೂಲಪುರುಷರನ್ನು ಕುರಿತು ಕೆಲವು ಕತೆಗಳಿವೆ. ಇವರು ಮೊದಲು ಉತ್ತರ ಭಾರತದಲ್ಲಿ ಅಯೋಧ್ಯಾಪುರದಲ್ಲೂ ಅನಂತರ ಅಹಿಚ್ಛತ್ರಪುರದಲ್ಲೂ ಆಳುತ್ತಿದ್ದರು. ಕಾರಣಾಂತರಗಳಿಂದ ಈ ವಂಶದ ದಡಿಗ ಮತ್ತು ಮಾಧವರೆಂಬ ಇಬ್ಬರು ರಾಜಕುಮಾರರು ದಕ್ಷಿಣ ಭಾರತದ ಗಂಗಪೇರೂರಿಗೆ ವಲಸೆಬಂದು ಅಲ್ಲಿ ಗಂಗವಾಡಿ 96000 ರಾಜ್ಯವನ್ನು ಸ್ಥಾಪಿಸಿದರು. ನಂದಗಿರಿ (ನಂದಿಬೆಟ್ಟ) ಇವರ ಪ್ರಮುಖ ಕೋಟೆಗಳಲ್ಲಿ ಒಂದು. ಕುವಳಾಲ ಇವರ ರಾಜಧಾನಿ. ಗಂಗ ಪೇರೂರು ಎಂಬ ಹೆಸರಿನ ಗ್ರಾಮವೊಂದು ಆಂಧ್ರಪದೇಶದ ಕಡಪ ಜಿಲ್ಲೆಯಲ್ಲಿದೆ. ಇದೇ ಶಾಸನೋಕ್ತ ಗಂಗ ಪೇರೂರು ಗ್ರಾಮವೆಂದು ಊಹಿಸಲಾಗಿದೆ.

ಸೂರ್ಯವಂಶದ, ಇಕ್ಷ್ವಾನು ಕುಲದ ಧನಂಜಯ ಈ ವಂಶದ ಮೂಲಪುರುಷನೆಂದು 11ನೆಯ ಶತಮಾನದ ಒಂದು ಶಾಸನದಲ್ಲಿ ಹೇಳಿದೆ. ಈತನ ಮಗ ಹರಿಶ್ಚಂದ್ರನಿಗೆ ದಡಿಗ ಮಾಧವರೆಂಬಿಬ್ಬರು ಮಕ್ಕಳಿದ್ದರು. ಇನ್ನೊಂದು ಶಾಸನದಲ್ಲಿ ಹರಿಶ್ಚಂದ್ರನ ಮಗನ ಹೆಸರು ಭರತನೆಂದಿದೆ. ಇವನಿಗೆ ವಿಜಯ ಮಹಾದೇವಿ ಎಂಬ ಪತ್ನಿಯಿದ್ದು, ಆಕೆ ಗಂಗಾನದಿಯಲ್ಲಿ ಸ್ನಾನಮಾಡಿ ಪೂರ್ಣಮನೋರಥಳಾದ ಕಾರಣ ಅವಳ ಮಗನಿಗೆ ಗಂಗಾದತ್ತ ಎಂಬ ಹೆಸರಾಯಿತು. ಇವನ ವಂಶದಲ್ಲಿ ವಿಷ್ಣುಗುಪ್ತನೆಂಬಾತ ಇಂದ್ರನನ್ನು ಸಂಪ್ರೀತಿಗೊಳಿಸಿ ಒಂದು ಆನೆಯನ್ನು ಪಾರಿತೋಷಕವಾಗಿ ಪಡೆದ. ಇವನ ಮಕ್ಕಳು ಭಗದತ್ತ ಮತ್ತು ಶ್ರೀದತ್ತ. ಭಗದತ್ತ ಕಳಿಂಗದೇಶಾಧಿಪತಿಯಾದ. ಶ್ರೀದತ್ತ ವಂಶಾನುಗತವಾದ ರಾಜ್ಯವನ್ನು ಆನೆಯನ್ನು ಪಡೆದ. ಇವನ ವಂಶಜ ಪದ್ಮನಾಭ. ಇವನಿಗೆ ಇಬ್ಬರು ಗಂಡುಮಕ್ಕಳು ಉಜ್ಜಯಿನಿಯ ಮಹೀಪಾಲ ಇವನ ವಿರುದ್ದ ದಂಡೆತ್ತಿ ಬಂದಾಗ ಇವನು ತನ್ನ ಮಕ್ಕಳನ್ನು ದಕ್ಷಿಣದೇಶಕ್ಕೆ ಕಳುಹಿಸಿದ. ಅದಕ್ಕೆ ಮೊದಲು ಆ ಇಬ್ಬರು ಗಂಡುಮಕ್ಕಳಿಗೆ ದಡಿಗ ಮತ್ತು ಮಾಧವ ಎಂದು ಹೆಸರುಗಳನ್ನು ಬದಲಿಸಿದ. ಇವರು ಪೇರೂರಿಗೆ ಬಂದಾಗ ಸಿಂಹನಂದಿ ಆಚಾರ್ಯರನ್ನು ಕಂಡರು. ಅವರಿಂದ ಶಿಕ್ಷಣ ಪಡೆದರು. ಪದ್ಮಾವತಿ ದೇವಿಯ ಪ್ರಸಾದದಿಂದ ಒಂದು ಖಡ್ಗವನ್ನು ಪಡೆದು, ಅದರ ಪ್ರಭಾವದಿಂದ ಒಂದು ರಾಜ್ಯಾಧಿಪತ್ಯವನ್ನು ಸ್ಥಾಪಿಸಿದರು-ಎಂಬುದು ಇವರ ಮೂಲಕ್ಕೆ ಸಂಬಂಧಿಸಿದಂತೆ ಶಾಸನಗಳಲ್ಲಿ ಹೇಳಲಾದ ಇನ್ನೊಂದು ಕಥೆ.

ಆದರೆ ಇದಕ್ಕೂ ಹಿಂದಿನ ಕಾಲದ ಶಾಸನಗಳಲ್ಲಿ ಈ ಪ್ರಸ್ತಾಪ ಬರುವುದಿಲ್ಲ. ಅವುಗಳಲ್ಲಿ ಹೇಳಿದಂತೆ ಮನೆತನದ ಮೊದಲ ಅರಸ ಕೊಂಗುಣಿವರ್ಮ, ಈತ ಜಾಹ್ನವೇಯಕುಲಸಂಭೂತ, ಕಾಣ್ವಾಯನ ಗೋತ್ರಕ್ಕೆ ಸೇರಿದವ. ಸ್ವಬಲದಿಂದ ರಾಜ್ಯವನ್ನು ಸ್ಥಾಪಿಸಿದ. ಜೈನಗುರುವಾದ ಸಿಂಹನದಿ ಆಚಾರ್ಯ ಈತನಿಗೆ ಖಡ್ಗವೊಂದನ್ನಿತ್ತಾಗ ಅದರಿಂದ ಮಹಾಶಿಲಾಸ್ತಂಭವೊಂದನ್ನು ತುಂಡರಿಸಿದ. ಇದು ಅವನ ಶೌರ್ಯದ ಪ್ರತೀಕ. ಸಿಂಹನಂದಿಯ ಆಶೀರ್ವಾದಬಲದಿಂದ ಇವನು ಅನಂತರ ರಾಜ್ಯವೊಂದನ್ನು ಸ್ಥಾಪಿಸಿದ.

ಈ ಎರಡೂ ಹೇಳಿಕೆಗಳಲ್ಲಿಯ ವ್ಯತ್ಯಾಸವನ್ನು ಗಮನಿಸಬಹುದು. ಮೊದಲಿನ ಶಾಸನಗಳಲ್ಲಿ ಇವರು ಉತ್ತರದ ಅಯೋಧ್ಯೆಯಿಂದಾಗಲಿ, ಅಹಿಚ್ಛತ್ರದಿಂದಾಗಲಿ ಬಂದವರೆಂದು ಹೇಳಿಲ್ಲ. ಅಲ್ಲದೆ ಆ ಶಾಸನಗಳಲ್ಲಿ ದಡಿಗನ ಹೆಸರೂ ಇಲ್ಲ. ಇವರ ರಾಜಧಾನಿ ಮೊದಲು ಕುವಳಾಲವಾಗಿದ್ದು ಅನಂತರ ತಲಕಾಡಾಯಿತು. ಇವರ ರಾಜ್ಯ ಕರ್ನಾಟಕದ ದಕ್ಷಿಣ ಭಾಗಕ್ಕೆ ಸೀಮಿತವಾಗಿತ್ತು-ಎಂಬ ಅಂಶಗಳು ಎಲ್ಲ ಶಾಸನಗಳಲ್ಲೂ ಉಕ್ತವಾಗಿವೆ. 10-12ನೆಯ ಶತಮಾನಗಳಲ್ಲಿ ಎಲ್ಲ ಅರಸು ಮನೆತನಗಳ ಮೂಲಪುರುಷರನ್ನೂ ಕುರಿತು ಇಂಥವೇ ಕಥೆಗಳನ್ನು ಹೆಣೆದಿದೆ. ಅವುಗಳನ್ನು ನಂಬಲು ಆಧಾರಗಳಿಲ್ಲ. ಗಂಗರು ಮೂಲತಃ ಹಳೆಯ ಮೈಸೂರು ಸಂಸ್ಥಾನದ ಭಾಗಕ್ಕೆ ಸೇರಿದವರೆಂಬುದರಲ್ಲಿ ಸಂದೇಹವಿಲ್ಲ. ಇವರ ಶಿಲಾಶಾಸನಗಳು ಹಳಗನ್ನಡ ಮತ್ತು ನಡುಗನ್ನಡ ಭಾಷೆಯಲ್ಲಿವೆ. ಇವರು ಆಳಿದ ರಾಜ್ಯ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿತ್ತು ಇವರು ಧರಿಸಿದ ಬಿರುದುಗಳೂ ಮುತ್ತರಸ ಮುಂತಾದ ನಾಮಧೇಯಗಳೂ ಇವರು ಕನ್ನಡಿಗರೆಂಬುದನ್ನು ಸಾರಿಹೇಳುತ್ತವೆ. ದುರ್ವಿನೀತಾದಿ ಅರಸರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಚಿರಸ್ಮರಣೀಯವಾದ್ದು. ಈ ಎಲ್ಲ ಕಾರಣಗಳಿಂದ ಇವರು ಮೂಲತಃ ಕನ್ನಡಿಗರೆಂಬುದರಲ್ಲಿ ಸಂದೇಹವಿಲ್ಲ. ಈಗ ಈ ಭಾಗದಲ್ಲಿರುವ ಗಂಗಡಿಕಾರ ವಕ್ಕಲಿಗರು ಈ ಮನೆತನದವರೆಂದು ಹಲವರ ಊಹೆ. ಇದು ಸರಿಯೆಂದು ಹೇಳಲು ಖಚಿತ ಆಧಾರಗಳಿಲ್ಲದಿದ್ದರೂ ಈ ಊಹೆಯನ್ನು ಅಲ್ಲಗೆಳೆಯಲಾಗದು.

ಈ ಮನೆತನದ ಮೊದಲ ಕೆಲವು ಅರಸರ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಲವು ತೊಡಕುಗಳಿವೆ. ಆ ಅರಸರವೆಂದು ಹೇಳಲಾದ ತಾಮ್ರ ಶಾಸನಗಳೆಲ್ಲ ಕೂಟ ಶಾಸನಗಳೆಂದು ಫ್ಲೀಟನ ಅಭಿಪ್ರಾಯವಾಗಿತ್ತು. ಹೀಗೆ ಆ ಅರಸರ ಅಸ್ತಿತ್ವವೇ ಮೊದಲು ಪ್ರಶ್ನೆಗೆ ಒಳಗಾಯಿತು. ದುರ್ವಿನೀತ ಹಾಗೂ ಅವನ ಅನಂತರದ ಅರಸರು ಮಾತ್ರ ಐತಿಹಾಸಿಕ ಪುರುಷರೆಂಬುದಾಗಿ ಅನಂತರ ಫ್ಲೀಟ್ ಒಪ್ಪಿಕೊಂಡಿದ್ದಾನೆ. ಅವರ ಎಲ್ಲ ಶಾಸನಗಳೂ ನೈಜವೆಂಬುದು ರೈಸ್ ಅಭಿಪ್ರಾಯ. ಇವೆರಡು ಅಭಿಪ್ರಾಯಗಳೂ ಸರಿಯಲ್ಲ. ಆ ಅರಸರ ಕೆಲವು ಶಾಸನಗಳು ಕೂಟವೆಂಬುದು ನಿಜ. ಆದರೆ ಲಿಪಿಯ ಆಧಾರದ ಮೇಲೆ ಹಾಗೂ ಆಂತರಿಕ ವಿಷಯಗಳನ್ನವಲಂಬಿಸಿ, ಇವರ ಅನೇಕ ಶಾಸನಗಳು ನೈಜವೆಂದು ಈಗ ಹೇಳಬಹುದು.

ಈ ರಾಜರ ಆಳ್ವಿಕೆಯ ಕಾಲವನ್ನು ಸಹ ಖಚಿತವಾಗಿ ಗೊತ್ತುಪಡಿಸಲು ಸಾಧ್ಯವಾಗಿಲ್ಲ. ಪಲ್ಲವರ ಸಿಂಹವರ್ಮ ಗಂಗ ಹರಿವರ್ಮನನ್ನು ಪಟ್ಟಕ್ಕೆ ತಂದನೆಂದು ಹೇಳಲಾಗಿದೆ. ಲೋಕವಿಭಾಗವೆಂಬ ಜೈನಗ್ರಂಥದಲ್ಲಿ ಶಕ 380ನೆಯ ವರ್ಷ, ಎಂದರೆ ಕ್ರಿ.ಶ. 458, ಸಿಂಹವರ್ಮನ ಆಳ್ವಿಕೆಯ 22ನೆಯ ವರ್ಷಕ್ಕೆ ಸಮನೆಂದು ಹೇಳಿದೆ. ಸಿಂಹವರ್ಮನ ಆಳ್ವಿಕೆ ಕ್ರಿ.ಶ 436ರಲ್ಲಿ ಆರಂಭವಾಯಿತೆಂದೂ ಸುಮಾರು 440ರಲ್ಲಿ ಹರಿವರ್ಮ ಪಟ್ಟಾಭಿಷಿಕ್ತನಾದನೆಂದು ಊಹಿಸಲಾಗಿದೆ. ಆದರೆ ಲೋಕವಿಭಾಗದಲ್ಲಿ ಹೇಳಿರುವ ಕಾಲವೇ ಸಂದೇಹಾಸ್ಪದವಾಗಿದೆಯೆಂಬ ಇನ್ನೊಂದು ವಾದವೂ ಉಂಟು. ಇದಲ್ಲದೆ ಗಂಗ ಮುಮ್ಮಡಿ ಮಾಧವನ ಪತ್ನಿ, ಕದಂಬ 1ನೆಯ ಕೃಷ್ಣವರ್ಮನ ಸೋದರಿಯೆಂದು ಹೇಳಿದೆಯಾದ ಕಾರಣ ಮುಮ್ಮಡಿ ಮಾಧವನ ಆಳ್ವಿಕೆಯ ಕಾಲವನ್ನು ಕೃಷ್ಣವರ್ಮನ ಆಳ್ವಿಕೆಯ ಕಾಲದ ಆಧಾರದ ಮೇಲೆ ನಿರ್ಧರಿಸಬೇಕಾದ್ದು ಅವಶ್ಯಕ, ಇತ್ತೀಚಿನ ಗ್ರಂಥವೊಂದರಲ್ಲಿ (ಎ ಹಿಸ್ಟೊರಿ ಆಫ್ ಕರ್ನಾಟಕ, ಸಂ.ಪಿ.ಬಿ.ದೇಸಾಯಿ) ಈ ವಿಷಯವನ್ನು ಚರ್ಚಿಸಿ, ಗಂಗರ ಹರಿವರ್ಮ ಅಥವಾ 1ನೆಯ ಕೃಷ್ಣವರ್ಮನ ಕಾಲವನ್ನು ಕ್ರಿ.ಶ.375ರಿಂದ 400ರ ವರೆಗೆ ಎಂದು ಸೂಚಿಸಲಾಗಿದೆ. ಗಂಗವಂಶದ ಅರಸರ ಆಳ್ವಿಕೆಯ ಕಾಲಸೂಚಿಗಳನ್ನು ಕುರಿತು ಮಾಡಲಾದ ಹಲವಾರು ಊಹೆಗಳಲ್ಲಿ ಇದೂ ಒಂದು. ಇದಮಿತ್ಥಂ ಎಂದು ಹೇಳಲಾಗದಿದ್ದರೂ ಈ ಸೂಚನೆಯನ್ನು ಒಮ್ಮೆಲೇ ತಿರಸ್ಕರಿಸಲಾಗದು. ಇಲ್ಲಿ ಇದೇ ಸೂಚನೆಯನ್ನು ಆಧರಿಸಲಾಗಿದೆ.

ಇನ್ನು ಇವರ ವಂಶಾವಳಿಯಲ್ಲಿ ಮೊದಲ ಅರಸರನ್ನು ಕುರಿತು ಸಹ ಭಿನ್ನಾಭಿಪ್ರಾಯಗಳಿವೆ. ವಂಶದ ಮೂಲಪುರುಷನ ಹೆಸರು ಕೊಂಗುಣಿವರ್ಮ, ಈತನ ಮಗ 1ನೆಯ ಮಾಧವ ಎಂದು ಸಾಮಾನ್ಯವಾಗಿ ಇತಿಹಾಸಕಾರರು ಒಪ್ಪಿದ್ದಾರೆ. ಆದರೂ ಕೊಂಗುಣಿವರ್ಮ ಎಂಬುದು ಮಾಧವನ ಬಿರುದೆಂದೂ ಮಾಧವ-ಕೊಂಗಣಿವರ್ಮರು ಇಬ್ಬರು ಭಿನ್ನ ವ್ಯಕ್ತಿಗಳಲ್ಲವೆಂದೂ ಒಂದು ವಾದವಿದೆ. ಮಾಧವನಿಗೆ ಮೂವರು ಮಕ್ಕಳು-ಆರ್ಯವರ್ಮ, ಹರಿವರ್ಮ ಮತ್ತು ಕೃಷ್ಣವರ್ಮ, ಇವರು ಮೂವರು ಬೇರೆಬೇರೆ ಕಡೆ-ಪರುವಿ, ಕೈವಾರ ಮತ್ತು ತಲಕಾಡುಗಳಿಂದ-ಸ್ವತಂತ್ರವಾಗಿ ಆಳತೊಡಗಿದರೆಂದರೆ ಶ್ರೀಕಂಠಶಾಸ್ತ್ರಿ ಮುಂತಾದ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇವರ ಶಾಸನಗಳಲ್ಲಿ ಕೊಟ್ಟಿರುವ ವಂಶಾವಳಿಗಳ ತೌಲನಿಕ ಪರೀಕ್ಷೆಯಿಂದ ಮೂರು ಹೆಸರುಗಳೂ ಒಬ್ಬನವೇ ಆಗಿವೆ-ಎಂದು ಲಕ್ಷ್ಮೀನಾರಾಯಣರಾಯರು ತೋರಿಸಿದ್ದಾರೆ. ಇದನ್ನು ಇಲ್ಲಿ ಒಪ್ಪಲಾಗಿದೆ. ಕೃಷ್ಣ ವರ್ಮನಿಗೆ, ಸಿಂಹವರ್ಮಾಪರನಾಮಧೇಯನಾದ ಇಮ್ಮಡಿಮಾಧವ ವಿಷ್ಣುಗೋಪ ಮತ್ತು ವೀರವರ್ಮನೆಂಬ ಮೂವರು ತನಯರು. ವಿಷ್ಣುಗೋಪನ ಮಗ ಮುಮ್ಮಡಿ ಮಾಧವ. ಈತ ತಡಂಗಾಲ ಮಾಧವನೆಂದೂ ಪರಿಚಿತನಾಗಿದ್ದಾನೆ. ಇವನ ಮಗ ಅವಿನೀತ. ಅವಿನೀತ ಅನಂತರದ ಗಂಗರ ವಂಶಾವಳಿಯಲ್ಲಿ ಹೆಚ್ಚಿನ ಬಿಕ್ಕಟ್ಟುಗಳಿಲ್ಲ.

ಕೊಂಗುಣಿವರ್ಮ ವಂಶದ ಸ್ಥಾಪಕ, ಜೈನಮುನಿಯ ಆಶೀರ್ವಾದ ಬೆಂಬಲಗಳಿಂದ ರಾಜ್ಯವೊಂದನ್ನು ಸ್ಥಾಪಿಸಿದ. ಆದರೆ ಇದನ್ನು ಕುರಿತಾದ ವಿವರಗಳೂ ಲಭ್ಯವಿಲ್ಲ ಅನಂತರ ಆಳಿದ ಕೆಲವು ಗಂಗ ಅರಸರು ಬಹುಶಃ ಈತನ ನೆನಪಿಗಾಗಿ ಕೊಂಗುಣಿವರ್ಮ ಎಂಬುದನ್ನು ಒಂದು ಬಿರುದಾಗಿ ತಮ್ಮ ಹೆಸರುಗಳಿಗೆ ಸೇರಿಸಿಕೊಳ್ಳುತ್ತಿದ್ದರು. ಇವನ ಮಗ ಮಾಧವನ ಶಾಸನ ಕೋಟ ತಾಮ್ರ ಶಾಸನ ಈ ಮನೆತನದ ಪ್ರಾಚೀನ ಹಾಗೂ ನೈಜ ಶಾಸನವೆನ್ನಲಾಗಿದೆ. ಈತನಿಗೆ ಕೃಷ್ಣವರ್ಮನೆಂಬ ಮಗನಿದ್ದ. ಈತನನ್ನು ಪಟ್ಟಕ್ಕೆ ತರುವುದರಲ್ಲಿ ಪಲ್ಲವ ಸಿಂಹವರ್ಮ ಪ್ರಮುಖಪಾತ್ರ ವಹಿಸಿದನಂತೆ. ಇದೇ ಸುಮಾರಿಗೆ ಉತ್ತರ ಕರ್ನಾಟಕದ ಕಾರವಾರ, ಬೆಳಗಾಂವಿ, ಧಾರವಾಡ ಜಿಲ್ಲೆಗಳನ್ನೊಳಗೊಂಡ ಪ್ರದೇಶದಲ್ಲಿ ಕದಂಬ ರಾಜ್ಯದ ಸ್ಥಾಪನೆಯಾಗಿತ್ತು. ಕದಂಬರಿಗೂ ಪಲ್ಲವರಿಗೂ ನಡುವೆ ವೈರವಿದ್ದು, ಸಹಜವಾಗಿಯೇ ಪಲ್ಲವರು ಗಂಗರನ್ನು ಪ್ರೋತ್ಸಾಹಿಸಿ ಅವರಿಗೆ ಸಹಾಯಕರಾದರು. ಗಂಗ ಇಮ್ಮಡಿ ಮಾಧವ ಸಹ ಪಲ್ಲವ ಸ್ಕಂದವರ್ಮನ ಸಹಾಯದಿಂದ ರಾಜ್ಯಾಭಿಷಿಕ್ತನಾದನೆಂದಿದೆ. ಇವರು ಎದುರಿಸಿದ ತೊಡಕುಗಳಾವುವು. ಪಲ್ಲವರ ಸಹಾಯ ಇವರಿಗೆ ಬೇಕಾಗಲು ಆಗ ನಡೆದಿರಬಹುದಾದ ಘಟನೆಗಳೆಂಥವು ಎಂಬ ಯಾವ ಪ್ರಶ್ನೆಗಳಿಗೂ ಇದುವರೆಗೂ ಸೂಕ್ತವಾದ ಸಮಾಧಾನ ದೊರೆತಿಲ್ಲ. ವಿಷ್ಣುಗೋಪ ಈ ಮಾಧವನ ಅನುಜ. ವೀರವರ್ಮನೆಂಬ ಇನ್ನೊಬ್ಬ ಸೋದರ ಅಲ್ಪವಯಸ್ಕನಾಗಿದ್ದಾಗಲೇ ಮರಣಿಸಿರಬಹದು. ಮಾಧವನಿಗೆ ಸಂತತಿಯಿರಲಿಲ್ಲ. ಆದ್ದರಿಂದ ವಿಷ್ಣುಗೋಪನ ಮಗನಾದ ಮುಮ್ಮಡಿ ಮಾಧವ ಇವನ ಉತ್ತರಾಧಿಕಾರಿಯಾದ. ಈ ವೇಳೆಗೆ ಕದಂಬರೊಡನೆ ಇವರಿಗೆ ಇದ್ದ ವೈಷಮ್ಯ ಹೆಚ್ಚಾಗಿ ಬಹುಶಃ ಅದನ್ನು ಕೊನೆಗಾಣಿಸಲೆಂದು ಕದಂಬ ಕಾಕುತ್ಸ್ಥವರ್ಮ ತನ್ನ ಮಗಳನ್ನು ಮಾಧವನಿಗೆ ಲಗ್ನಮಾಡಿ ಕೊಟ್ಟಂತೆ ತೋರುತ್ತದೆ.

ಈ ಮಾಧವನ ಮಗ ಅವಿನೀತ. ತಾಯಿಯ ತೊಡೆಯ ಮೇಲಿದ್ದಾಗಲೇ ಇವನಿಗೆ ರಾಜ್ಯಾಭಿಷೇಕವಾಯಿತೆಂದು ಒಂದು ಶಾಸನದಲ್ಲಿ ಹೇಳಿದೆ. ಆದರೆ ಈತ ಪ್ರಾಪ್ತ ವಯಸ್ಕನಾಗಿ ಅಧಿಕಾರಸೂತ್ರಗಳನ್ನು ಸ್ವತಃ ಪಡೆದಂದಿನಿಂದಲೇ ಇವನ ಆಳ್ವಿಕೆಯ ವರ್ಷಗಳನ್ನು ಗಣಿಸಲಾಗಿದೆ. ಇವನ ಹೊಸಕೋಟೆ ತಾಮ್ರಶಾಸನದಲ್ಲಿ ಪಲ್ಲವ ಅರಸನಾದ ಸಿಂಹವಿಷ್ಣುವಿನ ತಾಯಿ ಕಟ್ಟಿಸಿದ ಬಸದಿಗೆ ಈತ ದತ್ತಿಯನ್ನು ಬಿಟ್ಟ ವಿಷಯ ಹೇಳಿದ. ಗಂಗರ ರಾಜ್ಯದಲ್ಲಿ ಆಕೆ ಬಸದಿಯನ್ನು ಕಟ್ಟಿಸಿರುವುದನ್ನು ಗಮನಿಸಿದರೆ ಆಕೆ ಗಂಗ ಮನೆತನಕ್ಕೆ ಸೇರಿದವಳಾಗಿರಬಹುದೆಂದು ಹೇಳಿದ. ಇವನ ಆಳ್ವಿಕೆಯ ಆರಂಭದಲ್ಲಿ ಕಲುಷಿತಗೊಂಡಿದ್ದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ದಂಗೆ ಎದ್ದ ಹಲವಾರು ಸಾಮಂತರನ್ನು ಈತ ಸದೆಬಡೆದ.

ಇವನ ಅನಂತರ ಮಗನಾದ ದುರ್ವಿನೀತ ಆಳತೊಡಗಿದ ಪುನ್ನಾಟ ದೇಶದ ರಾಜಪುತ್ರಿಯಾದ ಜ್ಯೇಷ್ಠಾದೇವಿ ಈತನ ತಾಯಿ. ಈತ ಹಿರಿಯ ಮಗನಾಗಿದ್ದರೂ ಇವನ ತಂದೆ ತನ್ನ ಉತ್ತಾರಾಧಿಕಾರವನ್ನು ಕಿರಿಯ ಮಗನೊಬ್ಬನಿಗೆ ವಹಿಸಿದ ಕಾರಣ ಈತ ತನ್ನ ಹಕ್ಕನ್ನು ಸ್ಥಾಪಿಸಲು ಹೆಣಗಬೇಕಾಯಿತು. ಅಂದರಿ, ಆಲತ್ತೂರು, ಪೊರುಳ¾õÉ ಮತ್ತು ಪೆರ್ನಗರಗಳಲ್ಲಿ ನಡೆದ ತೀವ್ರ ಕದನಗಳಲ್ಲಿ ಇವನು ಶತ್ರುಗಳನ್ನು ಸೋಲಿಸಿದ. ಪುನ್ನಾಟ ರಾಜ್ಯದ ಅರಸನಿಗೆ ಗಂಡುಮಕ್ಕಳಿಲ್ಲದ ಕಾರಣ ಆ ರಾಜ್ಯ ಸಹ ಇವನಿಗೆ ದಕ್ಕಿತು; ಪುನ್ನಾಟ ಎಂಬುದು ಮೈಸೂರು ಜಿಲ್ಲೆಯ ಕಾವೇರಿ ಮತ್ತು ಕಪಿಲಾ ನದಿಗಳ ನಡುವಣ ಪ್ರದೇಶವಾಗಿತ್ತು. ಇದರ ರಾಜಧಾನಿ ಕೀರ್ತಿಪುರ-ಈಗಿನ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಿತ್ತೂರು. ಇವನ ವಿರುದ್ಧ ಯುದ್ಧಮಾಡಿದ ವೈರಿಗಳಾರೆಂಬುದು ತಿಳಿಯದು; ಚಾಳುಕ್ಯ ವಂಶದ ಒಂದನೆಯ ಕೀರ್ತಿವರ್ಮ ಅವರಲ್ಲಿ ಒಬ್ಬನೆಂದು ಹಲವಾರು ಹೇಳಿದ್ದಾರಾದರೂ ಇದು ಇನ್ನೂ ದೃಢಪಟ್ಟಿಲ್ಲ. ಇವನು ಪಾಣ್ಣಾದ ದೇಶವನ್ನು ಸಹ ಆಳುತ್ತಿದ್ದನೆಂದು ಶಾಸನಗಳಲ್ಲಿ ಹೇಳಿದೆ. ಆ ದೇಶವನ್ನು ಗುರುತಿಸಲಾಗಿಲ್ಲ. ಇದು ಬಾಣನಾಡಾಗಿರಬಹುದೆಂದು ಸೂಚಿಸಲಾಗಿದೆ. ಇವನ ಕಾಲದಲ್ಲಿ ರಾಜ್ಯ ಆರ್ಥಿಕವಾಗಿ ಧನಾಢ್ಯನಾಗಿದ್ದು ಪ್ರಜೆಗಳು ಸುಖ-ಸಮೃದ್ಧಿಗಳಿಂದ ತುಷ್ಟರಾಗಿದ್ದರು. ಸ್ವತಃ ಕವಿಯೂ ಪಂಡಿತನೂ ಆದ ಅರಸ. ಕಲೆ-ಸಾಹಿತ್ಯಗಳಿಗೆ ಆಶ್ರಯದಾತನಾಗಿದ್ದ. ಭಾರವಿ ಇವನ ಆಸ್ಥಾನದಲ್ಲಿ ಕೆಲಕಾಲ ಇದ್ದಂತೆ ತೋರುತ್ತದೆ. ಭಾರವಿ ರಚಿಸಿದ ಕಿರಾತಾರ್ಜುನೀಯದ 15ನೆಯ ಸರ್ಗಕ್ಕೆ ಟೀಕೆಯನ್ನು ರಚಿಸಿದವನೂ ಗುಣಾಢ್ಯ, ಪೈಶಾಚಿ ಭಾಷೆಯಲ್ಲಿ ಬರೆದ ವಡ್ಡಕಥೆಯನ್ನು ಸಂಸ್ಕøತದಲ್ಲಿ ಬರೆದವನೂ ಶಬ್ದಾವತಾರವೆಂಬ ವ್ಯಾಕರಣ ಗ್ರಂಥವನ್ನು ರಚಿಸಿದವನೂ ಈತನೇ. ಇವನ ಗುರುಗಳಾದ ಪೂಜ್ಯಪಾದರು ಶಬ್ದಾವತಾರವೆಂಬ ಪಾಣಿನೀಸೂತ್ರವೃತ್ತಿಯನ್ನು ಬರೆದಿದ್ದು ಅದಕ್ಕೆ ಟೀಕೆಯಾಗಿ ದುರ್ವಿನೀತ ಅದೇ ಹೆಸರಿನ ಗ್ರಂಥವನ್ನು ಬಹುಶಃ ಕನ್ನಡದಲ್ಲಿ ರಚಿಸಿದನೆಂದು ಹೇಳಲಾಗಿದೆ. ಶಾಸನಗಳಲ್ಲಿ ಈತನನ್ನು ನೀತಿಶಾಸ್ತ್ರ ಪ್ರವಚನ ಹಾಗೂ ಪ್ರಯೋಗಗಳಲ್ಲಿ ಸಾಕ್ಷಾತ್ ವಿಷ್ಣುಗುಪ್ತನೆಂದೂ ಗಾಂಧರ್ವವಿಧ್ಯೆ, ನಾಟ್ಯಶಾಸ್ತ್ರ ಇತ್ಯಾದಿಗಳಲ್ಲಿ ತುಂಬುರು ನಾರದ, ಭರತ, ಕಂಬಲಾಚಾರ್ಯ ಇವರೆನ್ನಲ್ಲಾ ಮೀರಿಸಿದ್ದನೆಂದೂ ಪ್ರಶಂಸಿಸಲಾಗಿದೆ. ಗಂಗ ಮನೆತನದ ಪ್ರಖ್ಯಾತ ಅರಸರಲ್ಲಿ ಈತ ಮೊದಲಿಗ.

ದುರ್ವಿನೀತನ ಅನಂತರ ಅಕ್ರಮವಾಗಿ ಅವನ ಇಬ್ಬರು ಮಕ್ಕಳಾದ ಮುಷ್ಕರ ಮತ್ತು ಪೊಲವೀರರು ರಾಜ್ಯವಾಳಿದರು. ಇವರಿಗೂ ಕಿರಿಯನಾದ ಇನ್ನೊಬ್ಬ ಸೋದರನಿದ್ದಂತೆ ತೋರುತ್ತದೆ. ಆದರೆ ಅವನ ಹೆಸರು ಗೊತ್ತಿಲ್ಲ; ಅವನು ರಾಜ್ಯವಾಳಲೂ ಇಲ್ಲ. ಮುಷ್ಕರ ಸಿಂಧು ರಾಜನ ಮಗಳನ್ನು ಮದುವೆಯಾಗಿದ್ದ ಪೊಲವೀರ ಕಾಡುವೆಟ್ಟಿ ಹಾಗು ವಲ್ಲವರಸರ ಸಹಾಯದಿಂದ ರಾಜ್ಯವನ್ನು ಪಡೆದನೆಂದು ಒಂದು ಶಾಸನ ಸೂಚಿಸಿದೆ. ಆದರೆ ಇವರಿಬ್ಬರು ಯಾರು ಎಂದು ಹೇಳಲು ಸಾಧ್ಯವಾಗಿಲ್ಲ. ಬಹುಶಃ ಪಲ್ಲವ ಹಾಗೂ ಚಾಳುಕ್ಯವಂಶದ ಅರಸರಾಗಿರಬಹುದು. ಪೊಲವೀರನ ಅನಂತರ ಮುಷ್ಕರನ ಮಗನಾದ ಶ್ರೀವಿಕ್ರಮ 629ರಿಂದ 654ರವರೆಗೂ ಅವನ ಮಗ ಭೂವಿಕ್ರಮ 654ರಿಂದ 679ರವರೆಗೂ ಆಳಿದರು. ಶ್ರೀವಲ್ಲಭ, ಮನೋವಿನೀತ ಎಂಬ ಬಿರುದುಗಳನ್ನು ಪಡೆದಿದ್ದ ಭೂವಿಕ್ರಮ ವಿಳಂದೆ ಎಂಬಲ್ಲಿ ನಡೆದ ಘೋರಕದನದಲ್ಲಿ ಪಲ್ಲವರನ್ನು ಸೋಲಿಸಿದನೆಂದು ಹೆಬ್ಬೂರು ಶಾಸನದಲ್ಲಿ ಹೇಳಿದೆ. ಈ ವೇಳೆಗೆ ಗಂಗರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಆಗ ಪ್ರಬಲರಾಗಿದ್ದ ಚಾಳುಕ್ಯರ ಅಧೀನರಾಗಿದ್ದು, ಬಹುಶಃ ಚಾಳುಕ್ಯ 1ನೆಯ ವಿಕ್ರಮಾದಿತ್ಯ ಪಲ್ಲವರೊಡನೆ ನಡೆಸಿದ ಕದನಗಳಲ್ಲೊಂದರಲ್ಲಿ ಗಂಗರ ಈ ಅರಸ ಪ್ರಮುಖ ಪಾತ್ರವಹಿಸಿದ್ದಿರಬಹುದೆಂದು ಊಹಿಸಲಾಗಿದೆ.

ಭೂವಿಕ್ರಮ ಬಳಿಕ ಅವನ ತಮ್ಮನಾದ 1ನೆಯ ಶಿವಮಾರ ಪಟ್ಟಕ್ಕೆ ಬಂದ. ಇವನ ಹಳ್ಳಿಗೇರಿ ತಾಮ್ರಶಾಸನದ ಕಾಲ ಶಕ 635. ಇದು ಇವನ ಆಳ್ವಿಕೆಯ 34ನೆಯ ವರ್ಷವೆಂದು ಹೇಳಿರುವ ಕಾರಣ ಇವನು ಶಕ 601ರಲ್ಲಿ. ಎಂದರೆ ಕ್ರಿ.ಶ. 679ರಲ್ಲಿ, ಪಟ್ಟಕ್ಕೆ ಬಂದ. ಲಕ್ಷ್ಮಿ ಈತನನ್ನು ಒಲಿದುಬಂದಳೆಂಬ ಹೇಳಿಕೆಯನ್ನು ಗಮನಿಸಿದರೆ ಬಹುಶಃ ಭೂವಿಕ್ರಮನಿಗೆ ಮಕ್ಕಳಿಲ್ಲದ್ದರಿಂದ ರಾಜ್ಯ ಇವನಿಗೆ ದಕ್ಕಿತೆಂದು ಊಹಿಸ ಬಹುದು. ಪಲ್ಲವ ಯುವರಾಜನ ಮಕ್ಕಳಾದ ಪಲ್ಲವಾಧಿರಾಜ ಜಯ ಮತ್ತು ವೃದ್ಧ ಎಂಬವನು, ಪಲ್ಲವೇಳಾರಸ ಮತ್ತು ತುಪ್ಪುರಾಳರಸರು ಈತನ ಮಾಂಡಲಿಕರಾಗಿದ್ದರು. ಕೊಂಗಲ್ನಾಡು 2000, ತೊ¾õÉನಾಡು 500 ಮತ್ತು ಮಲೆ 1000 ಪ್ರಾಂತ್ಯಗಳನ್ನು ಇನ್ನೊಬ್ಬ ಮಾಂಡಲಿಕನಾದ ಎ¾õÉಗಂಗ ಆಳುತ್ತಿದ್ದ. ಶಿವಮಾರನಿಗೆ ಶಿಷ್ಟಪ್ರಿಯ, ನವಕಾಮ, ಅವನಿಮಹೇಂದ್ರ, ಸ್ಥಿರವಿನೀತ, ದೇವರಾಜ ಮೊದಲಾದ ಬಿರುದುಗಳಿದ್ದವು.

ಶಿವಮಾರನ ಅನಂತರ ಅವನ ಮೊಮ್ಮಗನಾದ ಶ್ರೀಪುರುಷ ರಾಜನಾದ. ಶಿವಮಾರನ ಮಗನೂ ಶ್ರೀಪುರುಷನ ತಂದೆಯೂ ಆಗಿದ್ದ ರಾಜಕುಮಾರ ತನ್ನ ತಂದೆ ಜೀವಿಸಿದ್ದಾಗಲೇ ಮೃತಪಟ್ಟಿರಬಹುದು. ಕ್ರಿ.ಶ.725ರಿಂದ 788ರ ವರೆಗೆ 60 ವರ್ಷಗಳ ಕಾಲ ಆಳಿದ ಶ್ರೀಪುರಷನಿಗೆ ಮುತ್ತರಸ ಎಂಬ ಇನ್ನೊಂದು ಹೆಸರೂ ರಾಜಕೇಸರಿ ಭೀಮಕೋಪ, ರಣಭಾಜನ ಇತ್ಯಾದಿ ಬಿರುದುಗಳೂ ಇದ್ದುವು. ಶ್ರೀಪುರುಷನ ಆಳ್ವಿಕೆಯ ಪ್ರಾರಂಭದಲ್ಲಿ ಪಲ್ಲವರಿಗೂ ಗಂಗರಿಗೂ ಘೋರಕದನಗಳು ನಡೆದುವು. ಪಲ್ಲವ ಅರಸನಾದ ನಂದವರ್ಮ ಪಲ್ಲವಮಲ್ಲ ಇವನ ಸಮಕಾಲೀನನಾಗಿದ್ದು. ಇವನ ತಾಮ್ರಶಾಸನವೊಂದರಲ್ಲಿ ಉಗ್ರೋದಯವೆಂಬ ರತ್ನ ಖಚಿತ ಕಂಠಾಭರಣವನ್ನು ಇವನು ಗಂಗರಾಜನಿಂದ ಕಿತ್ತುಕೊಂಡನೆಂದು ಹೇಳಿದೆ ಇವರು ಗಂಗರಾಜ್ಯದ ಕೂವಳಾಲದವರೆಗೂ ಮುನ್ನಡೆದಿದ್ದರೆಂದು ಆ ಪ್ರದೇಶದಲ್ಲಿ ದೊರೆತ ವೀರಗಲ್ಲುಗಳಿಂದ ಖಚಿತ ಪಡುತ್ತದೆ. ಆದರೆ ಶ್ರೀಪುರುಷನ ಆಳ್ವಿಕೆಯ ಕೊನೆಯ ವರೆಗೂ ಈ ಪ್ರದೇಶಗಳು ಅವನ ರಾಜ್ಯದ ಭಾಗಗಳಾಗಿದ್ದುವೆಂಬುದು ಅವನ ಶಾಸನಗಳಿಂದ ತಿಳಿದಿದೆಯಾದ ಕಾರಣ, ಹೀಗೆ ದಂಡೆತ್ತಿಬಂದ ಪಲ್ಲವರನ್ನು ಶ್ರೀಪುರುಷ ಧೈರ್ಯದಿಂದ ಎದುರಿಸಿ, ಉಗ್ರವಾದ ಕದನಗಳಲ್ಲಿ ಸೋಲಿಸಿದನೆಂಬುದು ಸ್ಪಷ್ಟವಾಗುತ್ತದೆ. ಇದೇ ಸಮಯದಲ್ಲಿ ಚಾಳುಕ್ಯ ಇಮ್ಮಡಿ ವಿಕ್ರಮಾದಿತ್ಯನೂ ಪಲ್ಲವನಂದಿವರ್ಮನನ್ನು ಸೋಲಿಸಿದ. ಆದರೆ ಇವರಿಬ್ಬರೂ ಕೂಡಿ ಪಲ್ಲವರನ್ನು ಸೋಲಿಸಿದರೋ ಅಥವಾ ಪ್ರತ್ಯೇಕವಾಗಿ ವಿಜಯವನ್ನು ಸಾಧಿಸಿದರೋ ಹೇಳಲಾಗುವುದಿಲ್ಲ.

ಕ್ರಿ.ಶ 757ರ ವೇಳೆಗೆ ಬಾದಾಮಿ ಚಾಳುಕ್ಯರ ರಾಜ್ಯ ರಾಷ್ಟ್ರಕೂಟದ ವಶವಾಯಿತು. ಗಂಗ ಶ್ರೀಪುರುಷ ತನ್ನ ಸಾರ್ವಭೌಮತ್ವವನ್ನು ಒಪ್ಪುವನೆಂದು ರಾಷ್ಟ್ರಕೂಟ ಕೃಷ್ಣ ಆಶಿಸಿದ್ದ. ಆದರೆ ಶ್ರೀಪುರುಷ ರಾಷ್ಟ್ರಕೂಟರ ಅಸ್ತಿತ್ವವನ್ನೇ ಗಮನಕ್ಕೆ ತಂದು ಕೊಳ್ಳಲಿಲ್ಲ. ಆದ್ದರಿಂದ ಇವರಿಬ್ಬರ ನಡುವೆ ಕದನಗಳಾದುವು. ಕೃಷ್ಣ ಮಣ್ಣೆಯಲ್ಲಿ ಸ್ಯೆನ್ಯಸಮೇತ ಬೀಡುಬಿಟ್ಟಿದ್ದ (768). ಆದರೆ ಪಿಂಚನೂರು. ಬಾಗೆಯವಾರು ಮುಂತಾದ ಕಡೆಗಳಲ್ಲಿ ನಡೆದ ಕದನಗಳಲ್ಲಿ ಶ್ರೀಪುರುಷ ಶತ್ರುಗಳನ್ನು ಸೋಲಿಸಿ ಹೊರದೂಡಿದನ್ನಲ್ಲದೆ ಅವರನ್ನು ಬಳ್ಳಾರಿ ಜಿಲ್ಲೆಯ ಕಂಪಲಿಯ ವರಗೂ ಅಟ್ಟಿಸಿಕೊಂಡು ಹೋದ. ಆದರೂ ಗಂಗರಾಜ್ಯದ ಉತ್ತರದ ಸ್ವಲ್ಪ ಭಾಗ ಕೆಲವು ಕಾಲ ಶ್ರೀಪುರುಷನ ಕೈತಪ್ಪಿತ್ತು.

ಶ್ರೀಪುರುಷನ ಆಳ್ವಿಕೆಯ ಕಾಲಕ್ಕೆ ಗಂಗರಾಜ್ಯ ಷಣ್ನವತಿ ಸಹಸ್ರ (96.000) ಎನಿಸಿಕೊಂಡಿತ್ತು. ಇಷ್ಟು ವಿಸ್ತಾರವಾದ ರಾಜ್ಯವನ್ನು ಶ್ರೀರಾಜ್ಯವೆಂದೂ ಕರೆಯಲಾಗಿದೆ. ನೊಳಂಬರು ಗಂಗರ ಸಾಮಂತರಾಗಿದ್ದರು. ಆದರೆ ಇವರು ಸ್ವಲ್ಪಕಾಲ ರಾಷ್ಟ್ರಕೂಟರ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಕೃಷ್ಣನ ಅನಂತರ ಅವನ ಮಕ್ಕಳಾದ ಇಮ್ಮಡಿ ಗೋವಿಂದ ಮತ್ತು ಧ್ರುವರ ನಡುವಣ ಕಲಹಗಳ ಸಮಯದಲ್ಲಿ ಇವರು ಪುನಃ ಗಂಗರ ಪಕ್ಷವನ್ನೇ ಸೇರಿದರು. ಈ ಮನೆತನದ ನೊಳಂಬ ಮಾರವೆಯನ್ನು ಶ್ರೀಪುರುಷ ವಿವಾಹವಾಗಿದ್ದ. ಈಕೆಯಲ್ಲದೆ ವಿಜಯಮಹಾದೇವಿ ಮತ್ತು ಇನ್ನೊಬ್ಬಳು ಇವನ ಪತ್ನಿಯರು. ದುಗ್ಗಮಾರ ಎ¾õÀುಯಪ್ಪ, ಇಮ್ಮಡಿ ಶಿವಮಾರ ಹಾಗು ವಿಜಯಾದಿತ್ಯರೆಂಬ ಮೂವರು ಮಕ್ಕಳಿದ್ದರೂ. ಶ್ರೀಪುರುಷ ಗಜಶಾಸ್ತ್ರವೆಂಬ ಗ್ರಂಥದ ಕರ್ತೃವೆಂದು ಅನಂತರದ ಶಾಸನಗಳಲ್ಲಿ ಹೇಳಿದೆ. ಭೇದಭಾವನೆಯಿಲ್ಲದೆ ಬಸದಿಗಳಿಗೂ ದೇವಾಲಯಗಳಿಗೂ ಈ ಅರಸ ದತ್ತಿಗಳನ್ನು ನೀಡಿದ. ಬದುಕಿರುವ ವರೆಗೂ ರಾಷ್ಟ್ರಕೂಟರು ಗಂಗರಾಜ್ಯವನ್ನು ಆಕ್ರಮಿಸಲು ಅಶಕ್ತರಾದರು.

2ನೆಯ ಶಿವಮಾರ ಪಟ್ಟಕ್ಕೆ ಬಂದಕೂಡಲೇ ರಾಷ್ಟ್ರಕೂಟರು ಪುನಃ ಗಂಗರಾಜ್ಯವನ್ನು ಮುತ್ತಿದರು. ಮುದುಗುಂದೂರಿನ ಕದನದಲ್ಲಿ ಶಿವಮಾರ ಸೋತು ಶತ್ರುಗಳಿಗೆ ಸೆರೆಸಿಕ್ಕಿದ. ಗಂಗರಾಜ್ಯದಲ್ಲಿ ಧ್ರುವನ ಮಗನಾದ ಕಂಬಯ್ಯ ಸ್ಥಾಪಿತನಾದ. ಆದರೆ ಧ್ರುವನ ಮರಣಾಂತರ ಕಂಬಯ್ಯನಿಗೂ ಮುಮ್ಮಡಿ ಗೋವಿಂದನಿಗೂ ಸಿಂಹಾಸನಕ್ಕಾಗಿ ನಡೆದ ಅಂತಃಕಲಹಗಳು ಪರಿಣಾಮವಾಗಿ ಶಿವಮಾರ ಸೆರೆಯಿಂದ ಮುಕ್ತನಾಗಿ ಸ್ವದೇಶಕ್ಕೆ ಹಿಂದಿರುಗಿನಾದರೂ 3ನೆಯ ಗೋವಿಂದ ಆಳತೊಡಗಿದಾಗ ಪುನಃ ಬಂಧಿತನಾದ. ಸ್ವಲ್ಪಕಾಲ ಅವನ ಮಗ ಮಾರಸಿಂಹ ಗಂಗಮಂಡಲದ ಅಧಿಪತಿಯಾದನಾದರೂ ಅನಂತರ ಅವನ ಗತಿ ಏನಾಯಿತೆಂಬುದು ತಿಳಿಯದು. ಗೋವಿಂದನು ಆಳ್ವಿಕೆಯ ವರ್ಷಗಳಲ್ಲಿ ಬಹಳ ಕಾಲವನ್ನು ಶಿವಮಾರ ಸೆರೆಮನೆಯಲ್ಲೇ ಕಳೆದ. ಆದರೆ ಗೋವಿಂದನ ಕೊನೆಯ ವರ್ಷಗಳಲ್ಲಿ ಸುಮಾರು 813ರಲ್ಲಿ ಶಿವಮಾರ ಗಂಗಮಂಡಲದ ಅಧಿಪತಿಯಾಗಿ ಪಲ್ಲವ ನಂದಿವರ್ಮನಿಂದ ಅಭಿಷಕ್ತನಾದ. ಆದರೆ ರಾಷ್ಟ್ರಕೂಟರ ಸಾಮಂತನೆಂದೇ ಈ ಪದವಿಯನ್ನು ಅವನು ಪಡೆಯಬೇಕಾಯಿತು. ಗೋವಿಂದನ ಬಳಿಕ 1ನೆಯ ಅಮೋಘವರ್ಷನ ಕಾಲದಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಅಶಾಂತಿಯುತ ವಾತಾವರಣ ಉಪಯೋಗ ಪಡೆದು ಸ್ವತಂತ್ರನಾಗಲು ಹವಣಿಸಿದಾಗ ರಾಷ್ಟ್ರಕೂಟನ ಸೈನ್ಯ ಅವನ ವಿರುದ್ಧ ಬಂದು, ಕಾಗಿಮೊಗೆಯೂರಿನಲ್ಲಿ (ತುಮಕೂರು ಜಿಲ್ಲೆ) ನಡೆದ ಕದನದಲ್ಲಿ ವೀರಮರಣವನ್ನಪ್ಪಿದ. ಜೀವಮಾನವಿಡೀ ಸಂಕಟಗಳನ್ನೆದುರಿಸಿದರೂ ಸ್ವಾತಂತ್ರ್ಯವನ್ನುಳಿಸಿಕೊಳ್ಳಲು ಇವನು ಮಾಡಿದ ಸಾಹಸಗಳೆಲ್ಲ ವಿಫಲವಾದವು. ಶಿವಮಾರನ ಬಳಿಕ ಗಂಗಮಂಡಲದ ಅಧಿಪತ್ಯವನ್ನು ಅವನ ಸೋದರನಾದ ವಿಜಯಾದಿತ್ಯನಿಗೆ ಕೊಡಲಾಯಿತಾದರೂ ಅವನು ಅದನ್ನು ತನ್ನ ಮಗನಾದ ರಾಜಮಲ್ಲನಿಗೆ ವಹಿಸಿಕೊಟ್ಟ. ಈ ವೇಳೆಗೆ ರಾಜ್ಯದ ಸ್ವಲ್ಪಭಾಗ ರಾಷ್ಟ್ರಕೂಟದ ಸೇನಾನಿಯಾದ ಬಂಕೇಶನ ಅಧೀನದಲ್ಲಿ ಉಳಿಯಿತು. ಇವನೂ ಇವನ ಬಳಿಕ ಆಳಿದ ಇವನ ಮಗ ನೀತಿಮಾರ್ಗ ಎ¾õÉಗಂಗನೂ ಸ್ವಾತಂತ್ರ್ಯಕ್ಕಾಗಿ ಯತ್ನಿಸಿದರಾದರೂ ಯಶಸ್ವಿಗಳಾಗಲಿಲ್ಲ. ಈ ಪ್ರಯತ್ನಗಳ ಅಂಗವಾಗಿ ರಾಜಮಲ್ಲ ತನ್ನ ಮಗಳಾದ ಜಾಯಬ್ಬೆಯನ್ನು ನೊಳಂಬಕುಲದ ಪೊಳಲ್ಚೋರನಿಗಿತ್ತು ವಿವಾಹ ಮಾಡಿಕೊಟ್ಟ. ಇವರ ವಿಧೇಯತೆಯನ್ನು ಶಂಕಿಸಿದ ಅಮೋಘವರ್ಷ ಇವರ ವಿರುದ್ಧ ಬಂಕೇಶನನ್ನು ದೊಡ್ಡ ಸೈನ್ಯದೊಡನೆ ಕಳುಹಿಸಿದ. ರಾಜಾ¾ೂಮಡು ಎಂಬಲ್ಲಿ ಭೀಕರ ಕದನವಾಯಿತಾದರೂ ಪರಿಣಾಮ ಇಬ್ಬರಿಗೂ ಹಿತಕರವಾಗಿರಲಿಲ್ಲ. ದಂಡಿಸಿ ಗೆಲ್ಲುವ ಬದಲು ಒಲವಿನಿಂದ ಇವನನ್ನು ತನ್ನ ಅಧೀನಕ್ಕೆ ತರಲು ರಾಷ್ಟ್ರಕೂಟ ಅರಸ ತನ್ನ ಮಗಳಾದ ಚಂದ್ರೊಬ್ಬಲಬ್ಬೆಯನ್ನು ಎ¾õÉಗಂಗನ ಕಿರಿಯ ಮಗನಾದ ಒಂದನೆಯ ಬೂತುಗನಿಗೆ ಮದುವೆ ಮಾಡಿಕೊಟ್ಟ.

ಚಿತ್ರ-1

ಇಮ್ಮಡಿ ಶಿವಮಾರನಿಗೆ ಪೃಥ್ವೀಪತಿಯೆಂಬ ಮಗನಿದ್ದ. ಶಿವಮಾರನ ಬಳಿಕ ನ್ಯಾಯವಾಗಿ ಅವನು ಅಧಿಕಾರಕ್ಕೆ ಬರಬೇಕಿತ್ತು. ಆದರೆ ಅಲ್ಪವಯಸ್ಕನೆಂಬ ಕಾರಣದಿಂದ ಅದು ಅವನಿಗೆ ದಕ್ಕಲಿಲ್ಲ. ಅವನ ಮಗನಾದ ಗಂಗನೆಂಬುವನು ರಾಜಮಲ್ಲನ ವಿರುದ್ಧ ಬಂಡೆದ್ದ. ನನ್ನಿಯಗಂಗನ ಸೋದರಿಯಾದ ಕುಂದವ್ವೆ ಬಾಣವಿದ್ಯಾಧರನ ಪತ್ನಿಯಾಗಿದ್ದಳು. ಅವರಿಗೆ ಜನಿಸಿದವನೇ ಪ್ರಭುಮೇರುವಿಜಯಾದಿತ್ಯ. ಬಾಣಕುಲದ ಅರಸ ನನ್ನಿಯಗಂಗನಿಗೆ ಬೆಂಬಲವಾಗಿ ನಿಂತದ್ದು ಆಶ್ಚರ್ಯವೇನಿಲ್ಲ. ಈ ವೇಳೆಗೆ ಗಂಗರು ಹಾಗೂ ಮೈದುಂಬರ ಸಹಾಯಪಡೆದ ನನ್ನಿಯಗಂಗ ಪುಲಿನಾಡನ್ನು ನೊಳಂಬರಿಂದ ಕಸಿದು, ತಲಕಾಡಿನಲ್ಲಿ ಮಣ್ಣೆ 200 ಮತ್ತು ಗಂಗ 6000 ಪ್ರಾಂತ್ಯಗಳನ್ನು ಗೆದ್ದು, ತಲಕಾಡನ್ನು ಸಹ ಅಕ್ರಮಿಸಿದ. ಆದರೆ ಸೋದೆಮಡಿ ಎಂಬಲ್ಲಿ ನಡೆದ ಘೋರ ಕದನದಲ್ಲಿ ನೊಳಂಗ ಮಹೇಂದ್ರ ಈ ಮೂರು ಮನೆತನಗಳ ಸೈನ್ಯವನ್ನು ಸೋಲಿಸಿದ. ನನ್ನಿಯ ಗಂಗನೂ ಅವನ ಸಹಾಯಕರೂ ಓಡಿಹೋದರು. ಅನಂತರ ಆ ಗಂಗನ ಗತಿ ಏನಾಯಿತು ಎಂಬುದು ತಿಳಿಯದು. ಅವನ ಮಗನಾದ ಇಮ್ಮಡಿ ಪೃಥ್ವೀಪತಿ ಚೋಳಪರಾಂತಕನಿಂದ ಸೆಂಬಿಯ ಮಹಾಬಲಿ ಬಾಣರಸ ಎಂಬ ಬಿರುದನ್ನು ಪಡೆದನೆಂದು ತಿಳಿದಿದೆ.

ಹೀಗೆ ರಾಜಮಲ್ಲನಿಗೆ ಬೆಂಬಲವಾಗಿ ನಿಂತು ಅವನ ರಾಜ್ಯವನ್ನು ಉಳಿಸಿಕೊಟ್ಟ ಮಹೇಂದ್ರ ಕ್ರಮೇಣ ಪ್ರಬಲನಾಗಿ ಅವನ ವಿರುದ್ಧವಾಗಿ ಮಲೆತು ನಿಂತ. ರಾಜಮಲ್ಲನ ಸೋದರನಾದ ಬೂತಂಗ ಅಣ್ಣನ ನೆರವಿಗೆ ಬಂದು ಹಿರಿಯೂರು, ಸೂಳೂರು, ಸಾಮಿಯೂರುಗಳಲ್ಲಿ ನಡೆದ ಕದನಗಳಲ್ಲಿ ಮಹೇಂದ್ರನನ್ನು ಸೋಲಿಸಿದ. ಆದರೂ ಗಂಗ 96000 ಪ್ರಾಂತ್ಯದ ಅಧಿಕಾರವನ್ನು ಮಹೇಂದ್ರ ಸುಲಭವಾಗಿ ಬಿಡಲಿಲ್ಲ. ಬೂತುಗನ ಅನಂತರ ಅವನ ಮಗ ಎ¾õÉಗಂಗ ಅಥವಾ ಎ¾ುಯಪ್ಪ ಮಹೇಂದ್ರನನ್ನು ಸೋಲಿಸಿ ಕೊಂದ. ಇದರ ಅನಂತರ ನೊಳಂಬರು ಪುನಃ ಗಂಗರಿಗೆ ನಿಷ್ಠೆಯನ್ನು ತೋರಿಸಿ ಅವರ ಸಾಮಂತರೆನಿಸಿಕೊಂಡರು. ಎ¾õÉಯಪ್ಪನಿಗೆ ಇದರ ಫಲವಾಗಿ ಮಹೇಂದ್ರಾಂತಕನೆಂಬ ಬಿರುದು ಸಂದಿತು. ಈತ ಮಕ್ಕಳಿಲ್ಲದ ದೊಡ್ಡಪ್ಪನೊಡನೆ 886ರಿಂದ 919ರವರೆಗೂ ಜೊತೆಯಾಗಿ ಆಳಿದ. ಇವನ ಕಾಲದಲ್ಲಿ ಪೂರ್ವ ಚಾಳುಕ್ಯ ಮನೆತನದ ಅಮ್ಮರಾಜ ನೊಳಂಬರ ವಿರುದ್ಧ ದಂಡೆತ್ತಿ ಬಂದಾಗ ಇವರು ನೊಳಂಬರಿಗೆ ಸಹಾಯ ಮಾಡಬೇಕಾಯಿತು. ಇವನ ಬಳಿಕ ನರಸಿಂಹ ಮತ್ತು ಮುಮ್ಮಡಿ ರಾಚಮಲ್ಲರು ಆಳಿದರು. ಇವರು ನೊಳಂಬರ ಹಾಗೂ ರಾಷ್ಟ್ರಕೂಟರ ವಿರುದ್ಧ ಕೆಲವು ಬಾರಿ ಹೋರಾಡಿದರು. ರಾಚಮಲ್ಲನ ತಮ್ಮನಾದ ಇಮ್ಮಡಿ ಬೂತುಗ ಗಂಗ ಸಿಂಹಾಸನವನ್ನೇರಬಯಸಿ. ಅದಕ್ಕಾಗಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮಿತ್ರನಾಗಿ ಅವನ ಕದನಗಳಲ್ಲಿ ನೆರವು ನೀಡಿದ. ಕೃಷ್ಣನ ಸೋದರಿಯಾದ ರೇವಕನಿಮ್ಮಡಿಯನ್ನು ಸುಮಾರು 936ರಲ್ಲಿ ಮದುವೆಯಾದ. ಆಗ ಇವನಿಗೆ ಬೆಳ್ವಲ ಪುರಿಗೆ¾ುನಾಡುಗಳು, ಬಾಗೆನಾಡು 70, ಕಿಸುಕಾಡು 70 ಪ್ರಾಂತ್ಯಗಳನ್ನು ಬಳುವಳಿಯಾಗಿ ಕೊಡಲಾಗಿತ್ತು. ಕೃಷ್ಣನಿಗೆ ಸಹಾಯಕನಾಗಿ ಅವನು ಚೋಳಾರಾಜಾದಿತ್ಯನೊಡನೆ ಕಾದಿದ ತಕ್ಕೋಲಿಂ ಕದನzಲ್ಲಿ ಪ್ರಮುಖಪಾತ್ರ ವಹಿಸಿ ರಾಜಾದಿತ್ಯನ ಅಳಿವಿಗೆ ಕಾರಣನಾದ (847-48). ಬನವಾಸಿ 12000 ಪ್ರಾಂತ್ಯದ ಅಧಿಪತ್ಯವನ್ನು ಸಹ ಬೂತುಗನಿಗೆ ಕೃಷ್ಣ ವಹಿಸಿದ. ಈ ವೇಳೆಗೆ ಬೂತುಗ ತನ್ನ ಸ್ವಾಮಿಯ ನೆರವಿನಿಂದ ಸೋದರರನ್ನು ಸೋಲಿಸಿ ಗಂಗರಾಜ್ಯವನ್ನು ಸಹ ತನ್ನದಾಗಿ ಮಾಡಿಕೊಂಡಿದ್ದ. ಇವನ ಕಾಲದಿಂದಾರಂಭಿಸಿ ಗಂಗರು ರಾಷ್ಟ್ರಕೂಟರ ಮೆಚ್ಚಿನ ಸಾಮಂತರಾಗಿ ಮುಂದುವರಿದರು. ಸತ್ಯವಾಕ್ಯ, ಗಂಗಗಾಂಗೇಯ, ಗಂಗನಾರಾಯಣ, ಜಯದುತ್ತರಂಗ-ಇವೆಲ್ಲ ಬೂತುಗನ ಬಿರುದುಗಳು. ಇವನ ಪತ್ನಿ ರೇವಕನಿಮ್ಮಡಿ ಜಾಗವೆಡಂಗಿ ಎಂದು ಪ್ರಸಿದ್ದಳಾಗಿದ್ದಳು. ಈಕೆಯ ಮಗ ಮರುಳ. ಬೂತುಗನ ಇನ್ನೊಬ್ಬ ಹೆಂಡತಿಯಾದ ಕಲ್ಲಬ್ಬರಸಿ ಇಮ್ಮಡಿ ಮಾರಸಿಂಹನ ತಾಯಿ.

ಬೂತುಗನ ಬಳಿಕ 961ರಲ್ಲಿ ಮರುಳ ಅಧಿಕಾರಕ್ಕೆ ಬಂದ. ಇವನು ರಾಷ್ಟ್ರಕೂಟ ಕೃಷ್ಣನ ಮಗಳನ್ನು ಮದುವೆಯಾಗಿದ್ದ. ಇವನು ಪರಮ ಜಿನಭಕ್ತ. ಗಂಗಮಾತ್ರ್ತಂಡ. ಗಂಗಚಕ್ರಯುಧ, ಕೀರ್ತಿಮನೋಭವ ಇತ್ಯಾದಿ ಬಿರುದಾಂಕಿತನಾಗಿದ್ದ ಈತ ಕೇವಲ 2 ವರ್ಷಗಳ ಕಾಲ ಆಳಿದ. ಅನಂತರ ಇವನ ಸೋದರನಾದ ಇಮ್ಮಡಿ ಮಾರಸಿಂಹ ಅಧಿಕಾರರೂಢನಾದ. ಇವರೆಲ್ಲ ರಾಷ್ಟ್ರಕೂಟರಿಗೆ ನಿಷ್ಠಾವಂತರಾದ ಸಾಮಂತರಾಗಿದ್ದ ಕಾರಣ ಇವರ ಇತಿಹಾಸ ರಾಷ್ಟ್ರಕೂಟರ ಇತಿಹಾಸದ ಒಂದು ಭಾಗವಿದ್ದಂತಾಗುತ್ತದೆ. ಅಧಿಕಾರಕ್ಕೆ ಬಂದಾಗ ಕೃಷ್ಣ ದಕ್ಷಿಣ ಭಾರತದಲ್ಲಿ ಅತಿಪರಾಕ್ರಮಶಾಲಿಯಾದ ಅರಸ ಎನಿಸಿಕೊಂಡಿದ್ದ ಉತ್ತರದಲ್ಲಿ ಇವನು ನಡೆಸಿದ ಕದನಗಳಲ್ಲಿ ಮಾರಸಿಂಹ ಪ್ರಮುಖ ಪಾತ್ರವಹಿಸಿ ಗೂರ್ಜರಾಧಿರಾಜನೆನಿಸಿಕೊಂಡ ಅನೇಕ ಕಾಳಗಗಳಲ್ಲಿ ಹೋರಾಡಿ ಶತ್ರುಗಳನ್ನು ಸದೆಬಡೆದ. 967ರಲ್ಲಿ ಕೃಷ್ಣನ ನಿಧನದ ಬಳಿಕ ರಾಷ್ಟ್ರಕೂಟರಾಜ್ಯ ಅವನತಿಯ ಮಾರ್ಗವನ್ನು ಹಿಡಿದಾಗ, ಅದನ್ನು ಉಳಿಸಲು ಬಹಳ ಶ್ರಮಿಸಿದ. ಖೊಟ್ಟೆಗೆನನ್ನು ಸೋಲಿಸಿ ಮಾನ್ಯಖೇಟವನ್ನು ಆಕ್ರಮಿಸಿದ್ದ ಪರಮಾರ ಸೀಯಕನೊಡನೆ ಶ್ರಮದಿಂದ ಹೋರಾಡಿ ಅವನನ್ನು ಓಡಿಸಿದ. ಆದರೂ ರಾಷ್ಟ್ರಕೂಟ ರಾಜ್ಯ ಚಾಳುಕ್ಯ ಇಮ್ಮಡಿ ತೈಲಪನ ಆಕ್ರಮಣವನ್ನು ತಾಳಲಾರದೆ ಅಸ್ತಂಗತವಾದಾಗ ಕೃಷ್ಣನ ಮೊಮ್ಮ್ಮಗನೂ ತನ್ನ ಸೋದರಳಿಯನೂ ಆದ ನಾಲ್ವಡಿ ಇಂದ್ರನಿಗೆ ಬೆಂಬಲವಾಗಿ ನಿಂತು ಅವನಿಗೆ ಬಂಕಾಪುರದಲ್ಲಿ ಪಟ್ಟಗಟ್ಟಿದ. ಗೋಣೂರು ಕದನದಲ್ಲಿ ನೊಳಂಬಾಂತಕನೆನಿಸಿಕೊಂಡ. ಇಷ್ಟಾದರೂ ವಿಧಿ ಇವನಿಗೆ ವಿರೋಧವಾಗಿದ್ದು, ಇವನ ಶ್ರಮಗಳು ವ್ಯರ್ಥವಾಗಿ ಮತ್ತೊಮ್ಮೆ ಚಾಳುಕ್ಯ ರಾಜ್ಯ ತಲೆಯೆತ್ತಿತ್ತು. ಕೊನೆಗೆ ಹತಾಶನಾದ ಮಾರಸಿಂಹ ಸಲ್ಲೇಖನ ವಿಧಿಯಿಂದ ಶ್ರವಣಬೆಳಗೊಳದಲ್ಲಿ ನಿಧನಹೊಂದಿದ.

ಇವನ ಅನಂತರ ಗಂಗರಲ್ಲಿ ಅಂತಃಕಲಹಗಳುಂಟಾದುವು. ಮಾರಸಿಂಹಮಂತ್ರಿಯಾದ ಚಾವುಂಡರಾಯ ತನ್ನ ಸ್ವಾಮಿಯ ಮಗನಾದ ರಾಚಮಲ್ಲನ ಪಕ್ಷವನ್ನು ಸೇರಿ ಮಾರಸಿಂಹನ ಸೋದರನಾದ ನೀತಿಮಾರ್ಗ ಗೋವಿಂದರಸನ ವಿರುದ್ಧ ಹೋರಾಡಿದ. ಆದರೆ ಚಾಳುಕ್ಯತೈಲಪ ಅಳಿದುಳಿದ ಗಂಗರನ್ನೆಲ್ಲ ನಿರ್ಮೂಲಮಾಡಲು ನಿಶ್ಚಯಿಸಿ ಇವರಿಬ್ಬರನ್ನು ಅಡಗಿಸಿದ. ಗಂಗವಾಡಿಯ ಉತ್ತರದ ಭಾಗ ತೈಲಪನ ವಶವಾಯಿತು. ರಾಜಮಲ್ಲ ದಕ್ಷಿಣಭಾಗವನ್ನು 999ರ ವರೆಗೆ ಆಳಿದ. ಆದರೆ ಆ ವೇಳೆಗ ದಕ್ಷಿಣದಲ್ಲಿ ಚೋಳರು ಪ್ರಬಲರಾಗಿ ಚಾಳುಕ್ಯರು ವಿರುದ್ಧ ದಂಡೆತ್ತಿ ಬರಲು ಸಿದ್ಧರಾಗುತ್ತಿದ್ದರು. ಅದಕ್ಕೆ ನಾಂದಿಯಾಗಿ ಅವರು ಗಂಗರ ಪ್ರಾಂತ್ಯವನ್ನು ತಮ್ಮ ವಶಕ್ಕೆ ತಂದುಕೊಂಡರು ಗಂಗ ಮನೆತನಕ್ಕೆ ಸೇರಿದ ಕೆಲವರು-ಕಂಚರಸ, ಉದಯಾದಿತ್ಯ ಇತ್ಯಾದಿ-ಅನಂತರ ಚಾಲುಕ್ಯರ ಅಧೀನದಲ್ಲಿ ಅಲ್ಲಲ್ಲಿ ಪ್ರಾಂತ್ಯಾಧಿಕಾರಿಗಳಾದುದನ್ನು ಕಾಣುತ್ತೇವೆ.

ಸುಮಾರು ಏಳು ಶತಮಾನಗಳ ಕಾಲ ಅಧಿಕಾರದಲ್ಲಿದ್ದ. ತಲಕಾಡಿನ ಗಂಗರೆಂದು ಪ್ರಸಿದ್ಧರಾಗಿರುವ ಈ ಮನೆತನದ ಮೊದಲ ಅರಸರು ಸ್ವತಂತ್ರವಾಗಿ ಮೊದಲ ಸುಮಾರು 300 ವರ್ಷಗಳನ್ನು, ಅನಂತರ ಬಾದಾಮಿಯ ಚಾಳುಕ್ಯರ ಹಾಗೂ ರಾಷ್ಟ್ರಕೂಟರ ಸಾಮಂತರಾಗಿ ಉಳಿದ 400 ವರ್ಷಗಳನ್ನು ಕಳೆದರು. ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮೊದಲು ಮತ್ತು ಹೊಸದಾಗಿ ಅಧಿಕಾರಕ್ಕೆ ಬಂದ ರಾಷ್ಟ್ರಕೂಟರ ಸಾಮಂತಿಕೆಯನ್ನು ಒಪ್ಪುವ ಮೊದಲು, ಇವರು ನಡೆಸಿದ ಹೋರಾಟಗಳು ಪ್ರಶಂಸನೀಯ, ಇದು ಇವರ ಸ್ವತಾಂತ್ರ್ಯಾಪೇಕ್ಷೆಗೆ ಸ್ವಾಮಿನಿಷ್ಠೆಗೂ ಅಪೂರ್ವನಿದರ್ಶನಗಳಾಗಿವೆ. ಇಮ್ಮಡಿ ಶಿವಮಾರನ ಹಾಗೂ ಇಮ್ಮಡಿ ಮಾರಸಿಂಹರು ಈ ದಿಶೆಯಲ್ಲಿ ನಡೆಸಿದ ಯತ್ನಗಳು ಇತಿಹಾಸ ಪ್ರಸಿದ್ಧವಾಗಿವೆ. ಒಮ್ಮೆ ಒಪ್ಪಿದ ಬಳಿಕ ಸ್ವಾಮಿಗೆ ಯಾವಜ್ಜೀವ ನಿಷ್ಠರಾಗಿದ್ದರು. ಆ ನಿಷ್ಠೆಗಾಗಿ ಪ್ರಾಣತ್ಯಾಗಮಾಡಲು ಸಹ ಇವರು ಹಿಂಜರಿಯಲಿಲ್ಲ. ಈ ಅರಸರು ಜಿನಭಕ್ತರು ಇವರ ಕಾಲದಲ್ಲಿ ಕರ್ನಾಟಕದಲ್ಲಿ ಗಂಗರ ರಾಜ್ಯದಲ್ಲಿ ಅನೇಕ ಬಸದಿಗಳು ನಿರ್ಮಿತವಾದವು ಪ್ರಪಂಚದಲ್ಲಿಯೇ ಪ್ರಖ್ಯಾತವಾದ, ಶ್ರವಣಬೆಳಗೊಳದ ಗೊಮ್ಮಟಮೂರ್ತಿಯನ್ನು ಸ್ಥಾಪಿಸಿದ ಕೀರ್ತಿ ಮಾರಸಿಂಹನ ಮಂತ್ರಿಯಾದ ಚಾಮುಂಡರಾಯನಿಗೆ ಸಂದಿದೆ. ಇವರು ಇತರ ಮತಗಳನ್ನು ಹೀಯಾಳಿಸಲಿಲ್ಲ. ಸಮದರ್ಶಿಗಳಂತೆ ಸರ್ವಧರ್ಮಗಳಿಗೂ ಆಶ್ರಯವನ್ನಿತ್ತಿದ್ದರು. ಇವರಲ್ಲಿ ಅನೇಕರು ಸ್ವತಃ ಪಂಡಿತರು. ಕವಿಗಳು, ಸಹಜವಾಗಿಯೇ ಈ ಕಾಲದಲ್ಲಿ ಸಾಹಿತ್ಯ-ಕಲೆಗಳಿಗೆ ಬಹಳ ಪ್ರೋತ್ಸಾಹ ದೊರೆಯಿತು. ಸದಾ ಯುದ್ಧನಿರತರಾದರೂ ಆಡಳಿತವನ್ನು ಕಡೆಗಣಿಸದೆ ಪ್ರಜೆಗಳ ಕ್ಷೇಮಾಭ್ಯುದಯಗಳಿಗಾಗಿ ಅನೇಕ ಕಾರ್ಯಗಳನ್ನು ಮಾಡಿದರು. ನೀರಾವರಿ ಸೌಲಭ್ಯಕ್ಕಾಗಿ ಕೆರೆಗಳನ್ನು ತೋಡಿಸಿದರು. ಬಾವಿಗಳನ್ನು ಅಗೆಸಿದರು. ಕಾಲುವೆಗಳನ್ನು ಕಟ್ಟಿಸಿದರು. ಎಂತಲೇ ಗಂಗರಾಜ್ಯ ಸಮೃದ್ಧವಾಗಿತ್ತು. (ಜಿ.ಆರ್.ಆರ್.; ಜಿ.ಬಿ.ಆರ್.)