ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀವ ಬಲವಿಜ್ಞಾನ

ವಿಕಿಸೋರ್ಸ್ದಿಂದ

ಜೀವ ಬಲವಿಜ್ಞಾನ - ಜೀವಂತ ವಸ್ತುಗಳ ಬಲವಿಜ್ಞಾನದ ಅಧ್ಯಯನ (ಬಯೋಮೆಕ್ಯಾನಿಕ್ಸ್). ಜೀವವಿಜ್ಞಾನ ಹಾಗೂ ಬಲವಿಜ್ಞಾನದ ಘಟಕಗಳಾಗಿರುವ ಭೌತವಿಜ್ಞಾನ ಮತ್ತು ಎಂಜಿನಿಯರಿಂಗಿನ ವಿವಿಧ ಶಾಖೆಗಳ ಖಚಿತ ಜ್ಞಾನ ಇಲ್ಲಿ ಅಗತ್ಯ. ಈ ವಿಜ್ಞಾನ ಪ್ರಕಾರಕ್ಕೆ ಅಂತಸ್ತನ್ನು ನೀಡಿದ ಅಗ್ರಮಾನ್ಯರಲ್ಲಿ ಆಲ್ಫೋನ್ಸೊ ಬೊರೆಲಿ (1608-1679. ನೋಡಿ-ಬೊರೆಲಿ, ಜೋವಾನೀ ಆಲ್ಫೋನ್ಸೊ) ಎಂಬಾತನ ಹೆಸರು ಬಲು ಪ್ರಮುಖವಾದದ್ದು. ಪ್ರಾಣಿಯನ್ನು ಒಂದು ಬಲವೈಜ್ಞಾನಿಕ ಪ್ರತಿರೂಪವಾಗಿ ಪರಿಗಣಿಸಿ ದೇಹಚಲನೆಯನ್ನು ಬಲವೈಜ್ಞಾನಿಕ ನಿಯಮಗಳ ಅನುಸಾರ ಅಧ್ಯಯಿಸಿ ಪಡೆದ ಫಲಿತಾಂಶಗಳನ್ನು ಈತ ದ ಮೋಟು ಆನಿಮ್ಯಾಲಿಯಮ್ (ಪ್ರಾಣಿಗಳ ಚಲನೆಯ ವಿಚಾರ) ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ.

ಜೀವ ಬಲವಿಜ್ಞಾನದ ಒಂದು ಮುಖ್ಯ ಶಾಖೆ ವೈದ್ಯವಿಭಾಗದಲ್ಲಿ ಪ್ರಬಲವಾಗಿ ವಿಕಸಿಸಿದೆ. ಮನುಷ್ಯನ ಮೂಳೆಗಳ ತ್ರಾಣ, ಸಾಧಾರಣ ಚಟುವಟಿಕೆಗಳಲ್ಲಿ ಇವುಗಳ ಮೇಲೆ ಬೀಳುವ ಒತ್ತಾಯಗಳು, ಸಂಧಿಗಳ ಕ್ರಿಯೆ ಇವೇ ಮುಂತಾದವನ್ನು ಇಲ್ಲಿ ವ್ಯಾಪಕವಾಗಿ ಅಭ್ಯಸಿಸಲಾಗಿದೆ. ಇಲ್ಲಿ ದೊರೆತ ಫಲಿತಾಂಶಗಳು, ಉದಾಹರಣೆಗೆ, ಅಸ್ಥಿಶಸ್ತ್ರಚಿಕಿತ್ಸಾವಿಜ್ಞಾನದಲ್ಲಿ (ಆರ್ಥೋಪೆಡಿಕ್ ಸರ್ಜರಿ) ಕೃತಕ ಸಂಧಿಗಳ ಅಲೇಖ್ಯ ಹಾಗೂ ರಚನೆಗೆ ಉಪಯುಕ್ತವಾಗುತ್ತವೆ. ಜೀವಬಲವಿಜ್ಞಾನದ ಇನ್ನೊಂದು ಪ್ರಧಾನ ಶಾಖೆ ಪ್ರಾಣಿಗಳ ಚಾಲನೆಯನ್ನು ಕುರಿತು ಇದೆ. 1933ರಿಂದ ಈಚೆಗೆ, ಸರ್ ಜೇಮ್ಸ್ ಗ್ರೇ ಎಂಬಾತನ ಆವಿಷ್ಕಾರಗಳಿಂದ ತೊಡಗಿ, ಈ ಶಾಖೆಯ ಮೇಲೆ ಸಾಕಷ್ಟು ವ್ಯಾಪಕ ಕಾರ್ಯ ನಡೆದಿದೆ.

ಫಾಸಿಲ್ ಸರೀಸೃಪಗಳ (ಫಾಸಿಲ್ ರೆಪ್ಟೈಲ್ಸ್) ವಿಕಾಸವನ್ನು ಕುರಿತು ಒಂದು ವಿರೋಧಾಭಾಸವನ್ನು ಜೀವಬಲವಿಜ್ಞಾನದ ವಿಭಾಗವಾಗಿರುವ ಜೀವ ಸ್ಥಿತಿವಿಜ್ಞಾನ (ಬಯೋ ಸ್ಟ್ಯಾಟಿಕ್ಸ್) ಪರಿಹರಿಸಿದೆ. ಸೈನ್ಯಾಪ್ಸಿಡ ಗುಂಪಿನ ಸರೀಸೃಪಗಳು ವಿಕಾಸಗೊಂಡು ಸಸ್ತನಿಗಳು ಮೈದಳೆದುವು. ಈ ವಿಕಾಸ ಮುಂದುವರಿದಂತೆ ದವಡೆ ಮಾಂಸಖಂಡಗಳು ಹಲವಾರು ಭಾಗಗಳಾಗಿ ವಿಭಾಗಗೊಂಡವು ಮತ್ತು ದೊಡ್ಡದು ಆದವು. ಆದರೆ ದವಡೆ ಸಂಧಿ ದುರ್ಬಲವಾಗುತ್ತ ಹೋಯಿತು. ಫಾಸಿಲುಗಳಲ್ಲಿ ಮಾಂಸಖಂಡಗಳು ಉಳಿದಿಲ್ಲ, ನಿಜ. ಆದರೆ ಇವುಗಳ ರೂಪ ಮತ್ತು ಗಾತ್ರವನ್ನು ತಲೆಬುರುಡೆಯ ಆಕಾರದಿಂದ ನಿರ್ಧರಿಸಬಹುದು. ಕಚ್ಚುವಾಗ ಪ್ರಯುಕ್ತವಾಗುವ ಬಲಗಳ ಸಮತೋಲನವನ್ನು ಪರಿಗಣಿಸಲಾಯಿತು. ಮಾಂಸಖಂಡಗಳ ಅಳವಡಿಕೆಯಲ್ಲಿ ಆದ ಬದಲಾವಣೆಯ ಪರಿಣಾಮವಾಗಿ ಸಂಧಿಯಲ್ಲಿ ವರ್ತಿಸುತ್ತಿದ್ದ ಬಲಗಳು, ಮಾಂಸಖಂಡಗಳು ಹೆಚ್ಚು ಬಲಯುತವಾಗಿ ಉಣಿಸನ್ನು ಇನ್ನಷ್ಟು ಗಟ್ಟಿಯಾಗಿ ಕಚ್ಚಬಲ್ಲವಾಗಿದ್ದರೂ ಪ್ರಾಯಶಃ ಕಡಿಮೆ ಆದವು ಎಂದು ಈ ಪರಿಗಣನೆಯಿಂದ ತಿಳಿದಿದೆ. ಆದ್ದರಿಂದ ದುರ್ಬಲ ದವಡೆ ಸಾಕಾಯಿತು.

ಚಿಗಟಗಳ ನೆಗೆತವನ್ನು ಅಧ್ಯಯಿಸುವಲ್ಲಿ ಜೀವಗತಿವಿಜ್ಞಾನವನ್ನೂ (ಬಯೋಡೈನಮಿಕ್ಸ್) ಪದಾರ್ಥಗಳ ವಿಜ್ಞಾನವನ್ನೂ ಅನ್ವಯಿಸಲಾಗಿದೆ. 1.5 mm ಉದ್ದ ಕುಂದಿಲಿ ಚಿಗಟ 3.5 ಛಿm ಎತ್ತರವನ್ನು ನೆಗೆಯಬಲ್ಲುದು. ಈ ನೆಗೆತದ ಪಥವನ್ನು ಚಲಚ್ಚಿತ್ರೀಕರಿಸಿ ಬಿಡಿಚಿತ್ರಗಳನ್ನು ಕೂಲಂಕಷವಾಗಿ ಅಧ್ಯಯಿಸಿ ನೆಗೆತದ ಮುನ್ನ ಚಿಗಟದ ಕಾಲುಗಳು ನೆಲಕ್ಕೆ ಪ್ರಯುಕ್ತಿಸಬೇಕಾದ ಬಲ ಎಷ್ಟು ಮತ್ತು ನೆಗೆತಕ್ಕೆ ಅವಶ್ಯವಾದ ಶಕ್ತಿ ಎಷ್ಟು ಎಂಬುದನ್ನು ಗಣಿಸಲಾಗಿದೆ. ಚಿಗಟಗಳು ನೆಗೆಯುವುದು ಒಂದು ವಿಧದ ಕವಣೆ ವಿನ್ಯಾಸದಿಂದ (ಕ್ಯಟಪಲ್ಟ್ ಮೆಕ್ಯಾನಿಸಮ್), ರೆಸಿಲಿನ್ ಎಂಬ ಪುಟಿತ ಪ್ರೋಟೀನಿನ ಚಪ್ಪಡಿಗಳನ್ನು ಕಾಲಿನ ಮಾಂಸಖಂಡಗಳು ಅದುಮಿ ಮತ್ತೆ ಅವು ಹಿಂದೊದೆತವನ್ನು ಝಾಡಿಸುವಂತೆ ಪಕ್ಕನೆ ಬಿಡಲಾಗುತ್ತದೆ. ಹೀಗೆ ಕಾಲಿನ ಅತಿಶೀಘ್ರ ಚಲನೆಗಳು ಉಂಟಾಗುತ್ತವೆ. ರೆಸಿಲಿನ್ನಿನ ತ್ರಾಣ ಹಾಗೂ ಪುಟಿತತೆಗಳನ್ನು ಆಧರಿಸಿ ಗಣನೆಗಳನ್ನು ಮಾಡಲಾಯಿತು. ಚಿಗಟಗಳಲ್ಲಿ ಇರುವ ರೆಸಿಲಿನ್ನಿನ ಚಪ್ಪಡಿಗಳು ನೆಗೆತಕ್ಕೆ ಅವಶ್ಯವಾಗುವ ಪುಟಿತ ಶಕ್ತಿಯನ್ನು ಸಂಚಯಿಸಿ ಇರುವಷ್ಟು ದೊಡ್ಡವಾಗಿವೆ ಎಂದು ಈ ಗಣನೆಗಳು ಶ್ರುತಪಡಿಸಿವೆ.

ಜೀವಬಲವಿಜ್ಞಾನದ ಅನ್ವಯಗಳು ವಾಯುಗತಿ ವಿಜ್ಞಾನದಲ್ಲೂ (ಏರೋಡೈನಮಿಕ್ಸ್) ಇವೆ. ಮೇಪಲ್ ಮತ್ತು ಇತರ ಕೆಲವು ಮರಗಳ ಬೀಜಗಳಿಗೆ ರೆಕ್ಕೆಗಳಿವೆ. ಈ ಬೀಜಗಳು ಮರದಿಂದ ಬೀಳುತ್ತಿದ್ದಂತೆ ರೆಕ್ಕೆಗಳ ಕಾರಣವಾಗಿ ಬೀಜಗಳು ಹೆಲಿಕಾಪ್ಟರಿನ ರಾಟರುಗಳಂತೆ ಆವರ್ತಿಸಲು ತೊಡಗುವುವು. ಹೀಗಾಗಿ ಇವು ಆವರ್ತನೆ ಇಲ್ಲದಿದ್ದರೆ ಬೀಳಬಹುದಾಗಿದ್ದ ಜಾಗಗಳಿಗಿಂತ ಬಲು ದೂರ ದೂರ ಸಾಗಿ ಹೋಗುತ್ತವೆ ; ಅಂದರೆ ತಾಯಿ ಮರಕ್ಕಿಂತ ಆದಷ್ಟು ಹೆಚ್ಚು ದೂರಗಳಿಗೆ ಬೀಜ ಪ್ರಸಾರವಾಗುತ್ತದೆ. ಈ ತೆರನಾದ ಬೀಜಗಳು ಬೀಳುವ ಜವಗಳನ್ನು ನಿರ್ಧರಿಸಿ ಇವನ್ನು ಇದೇ ತೂಕದ ಹಾಗೂ ಉದ್ದದ ಬೀಜಗಳಿಗೆ ನೋದಕಗಳ ಸಿದ್ಧಾಂತದ (ಥಿಯರಿ ಆಫ್ ಪ್ರೊಪೆಲರ್ಸ್) ರೀತ್ಯ ಒದಗಬಹುದಾದ ಕನಿಷ್ಠ ಸಾಧ್ಯ ಬೆಲೆಗಳೊಡನೆ ಹೋಲಿಸಲಾಗಿದೆ. ವಾಸ್ತವ ಜವಗಳು ಸೈದ್ಧಾಂತಿಕ ಕನಿಷ್ಟ ಜವಗಳಿಗಿಂತ ಕೇವಲ 1.2 ಪಟ್ಟು ಜಾಸ್ತಿ ಇದ್ದುದು ತಿಳಿಯಿತು. ಅಂದರೆ ರೆಕ್ಕೆಗಳು ಬಲು ಪರಿಣಾಮಕಾರಿ ಎಂಬುದು ಸಿದ್ಧವಾಯಿತು. ಹೋಲಿಕೆಯಿಂದ ಹೇಳುವುದಾದರೆ ಜವವನ್ನು ಮಂದಗೊಳಿಸುವುದರಲ್ಲಿ ಈ ರೆಕ್ಕೆಗಳು ಸಮಸಲೆಯ ಪ್ಯಾರಾಶೂಟುಗಳಿಗಿಂತ ಎಷ್ಟೋ ಪಟ್ಟು ಅಧಿಕ ಪರಿಣಾಮಕಾರಿಗಳು. *