ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಷಾಣರು

ವಿಕಿಸೋರ್ಸ್ದಿಂದ

ಕುಷಾಣರು

ಮಧ್ಯ ಏಷ್ಯದಿಂದ ಪ್ರಾಚೀನ ಭಾರತಕ್ಕೆ ವಲಸೆ ಬಂದ, ವಾಯುವ್ಯ ಭಾಗದಲ್ಲಿ ನೆಲಸಿದ ಒಂದು ರಾಜವಂಶ. ಭಾರತದ ರಾಜಕೀಯ, ಆರ್ಥಿಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಇತಿಹಾಸದಲ್ಲಿ ಇವರ ಪಾತ್ರ ಗಮನಾರ್ಹ. ಇವರು ಯೂ-ಚಿ ಕುಲದವರು (ಚಂದ್ರವಂಶದವರು). ಈ ಅಲೆಮಾರಿ ತಂಡ ಕ್ರಿ.ಪೂ. 2ನೆಯ ಶತಮಾನದಲ್ಲಿ ಮಧ್ಯೆ ಏಷ್ಯದಲ್ಲಿ ಉದಯಿಸಿತೆಂದು ಚೀನೀ ಇತಿಹಾಸಕಾರರು ಹೇಳಿದ್ದಾರೆ. ಆದರೆ ಕ್ರಿ.ಪೂ. 165ರ ಸುಮಾರಿಗೆ ಮಧ್ಯ ಏಷ್ಯದ ಮತ್ತೊಂದು ಗಣಕ್ಕೆ ಸೇರಿದ ಮತ್ತು ಇವರ ನೆರೆಯವರಾದ ಹ್ಯೂಂಗ್ ನುಗಳು ಇವರನ್ನು ಸೋಲಿಸಿದ್ದರಿಂದ ಯೂ-ಚಿಗಳು ತಮ್ಮ ನೆಲೆಯಾದ `ಹುಲ್ಲುಗಾವಲನ್ನು ಬಿಟ್ಟು ಪಶ್ಚಿಮದ ಕಡೆಗೆ ಸರಿದರು. ಹೀಗೆ ನೆಲೆಗಾಗಿ ಅಲೆಯುತ್ತಿದ್ದ ಯೂ-ಚಿಗಳು ಇಲ್ಲಿ ನದೀಪ್ರದೇಶದ ಸನ್ ಜನಾಂಗವನ್ನು ಸೋಲಿಸಿದರು. ಇಷ್ಟರಲ್ಲಿ ಯೂ-ಚಿಗಳ ತಂಡದಲ್ಲಿ ಇಬ್ಭಾಗವಾಗಿ ಅವರ ಸಣ್ಣ ತಂಡ ದಕ್ಷಿಣಕ್ಕೆ ಸರಿದು ಟಿಬೆಟಿನತ್ತ ವಲಸೆ ಹೋಯಿತು. ಪ್ರಧಾನ ತಂಡ (ಟಯೂ-ಚಿ) ಪಶ್ಚಿಮಕ್ಕೆ ಪ್ರಯಾಣ ಬೆಳೆಸಿ ವು-ಸನ್ ರಾಜ್ಯದ ಪಶ್ಚಿಮದ ಮತ್ತು ಜಕ್ಸಾರ್ಟಿಸ್ ನದಿಯ ಉತ್ತರದ ಭಾಗಗಳನ್ನು ಆಕ್ರಮಿಸಿಕೊಂಡು ಶಕರನ್ನು ಸೋಲಿಸಿತು. ಶಕರು ಆಘ್ಘಾನಿಸ್ತಾನದ ದಕ್ಷಿಣ ಭಾಗಕ್ಕೆ ಹೋಗಿ ನೆಲೆಸಿದರು. ಇಷ್ಟರಲ್ಲಿ ಶತ್ರುಗಳು ಕೈಯಿಂದ ಪಾರಾಗಿದ್ದ ವು-ಸನ್ ರಾಜಪುತ್ರ ಹ್ಯೂಂಗ್-ನುಗಳ ಸಹಾಯದಿಂದ ಯೂ-ಚಿಗಳನ್ನು ಸೋಲಿಸಿ ಅವರನ್ನು ತನ್ನ ಮತ್ತು ಶಕರ ಪ್ರದೇಶಗಳಿಂದ ತರುಬಿದ. ಅನಂತರ ಪ್ರಧಾನ ಯೂ-ಚಿ ತಂಡ ಅಲೆಯುತ್ತ ಬ್ಯಾಕ್ಟ್ರಿಯದ ಆಕ್ಸಸ್ ನದೀ ಪ್ರದೇಶವನ್ನು ತಲುಪಿ ಅಲ್ಲಿ ನೆಲಸಿದ್ದ ಶಕರನ್ನು ಮತ್ತೆ ಓಡಿಸಿ ಹಲವಾರು ನೆರೆಹೊರೆಯ ಪ್ರದೇಶವನ್ನು ಗೆದ್ದುಕೊಂಡು ರಾಜ್ಯ ವಿಸ್ತಾರ ಮಾಡಿದರು. ಆಗ ಅವರ ಆಡಳಿತ ಬ್ಯಾಕ್ಟ್ರಿಯದಿಂದ ಆಕ್ಸಸ್‍ನ ದಕ್ಷಿಣದವರೆಗೂ ಹಬ್ಬಿತ್ತು. ಅವರ ರಾಜಧಾನಿ ಆಕ್ಸಸ್ ನದಿಯ ಉತ್ತರಕ್ಕಿದ್ದ ಕಿಯೆನ್-ಚಿ ಎಂದೂ ಅವರ ರಾಜ್ಯದ ದಕ್ಷಿಣದ ಗಡಿ ಕಿ-ಪಿನ್ ಬಳಿಯಿತ್ತೆಂದೂ ಕ್ರಿ.ಶ. 24ರವರೆಗಿನ ಇತಿಹಾಸವನ್ನು ತಿಳಿಸುವ ಚೀನೀ ಚರಿತ್ರಕಾರ ಪಾನ್-ಕುವಿನ ಬರಹಗಳಿಂದ ತಿಳಿದು ಬರುತ್ತದೆ. ಐದು ಗುಂಪುಗಳನ್ನೊಳಗೊಂಡಿದ್ದ ಯೂ-ಚಿ ಪಂಗಡದಲ್ಲಿ ಕಾಲಕ್ರಮದಲ್ಲಿ ಒಂದು ಪಂಗಡ ಪ್ರಬಲವಾಗಿ ಇತರ ಗುಂಪುಗಳನ್ನು ಗೆದ್ದು ಕೊಂಡಿತೆಂದು ಇನ್ನೊಬ್ಬ ಚೀನೀ ಚರಿತ್ರಕಾರ ಫಾನ್-ಯೆ ತಿಳಿಸಿದ್ದಾನೆ. ಅನಂತರ ಯೆನ್-ಕಾವೊ-ಚೆನ್ ಎಂಬ ನಾಯಕನ ಆಳ್ವಿಕೆಯಲ್ಲಿ ಭಾರತದ ಪಂಜಾಬ್ ಪ್ರದೇಶ ಇವರ ವಶವಾಯಿತು. ಪ್ರಬಲರಾದ ಯೂ-ಚಿಯರಿಗೆ ಆಗಿನಿಂದ ಕುಷಾಣರೆಂದು ಹೆಸರಾಯಿತು.

ಭಾರತದಲ್ಲಿ ಆ ವಂಶದ ಮೊದಲ ದೊರೆ 1ನೆಯ ಕುಸುಲುಕ ಅಥವಾ ಕುಜುಲ ಕಡ್‍ಫೀಸಿಸ್. ಈತ ಉಳಿದ ಯೂ-ಚಿ ಬಣಗಳ ನೇತೃತ್ವವನ್ನು ಕ್ರಿ.ಶ. 40ರ ಸುಮಾರಿನಲ್ಲಿ ಪಡೆದನೆಂದು ತಿಳಿದುಬರುತ್ತದೆ. ಬಹುಶಃ ಈತ 15ರಿಂದ 65ರವರೆಗೆ ಅಧಿಕಾರದಲ್ಲಿದ್ದಿರಬಹುದು. ಪಾರ್ಥಿಯದ ಗಡಿಯಿಂದ ಸಿಂಧ್‍ವರೆಗೆ ಇವನ ರಾಜ್ಯ ವಿಸ್ತರಿಸಿದ್ದಿರಬಹುದು. ಇವನ ನಾಣ್ಯಗಳು ಅಧಿಕ ಸಂಖ್ಯೆಯಲ್ಲಿ ದೊರಕಿವೆ. ಈತ ತನ್ನ ಜೀವಿತ ಕಾಲದ ಕೊನೆಯ ಭಾಗದಲ್ಲಿ ಬೌದ್ಧಮತ ಸ್ವೀಕಾರ ಮಾಡಿದ್ದಿರಬಹುದೆಂದು ಹೇಳಲಾಗಿದೆ.

ಮೊದಲನೆಯ ಕಡ್‍ಫೀಸಿಸನ ತರುವಾಯ ಅವನ ಮಗ ವಿಮ ಕಡ್‍ಫೀಸಿಸ್ ಪಟ್ಟಕ್ಕೆ ಬಂದ. ಇವನ ಆಳ್ವಿಕೆಯ ಕಾಲ ಸು. 65-75. ಈ ವಿಷಯ ಅವನ ನಾಣ್ಯಗಳನ್ನು ಬಳಕೆಗೆ ತಂದ ಕುಷಾಣರ ಮೊದಲನೆ ದೊರೆ ಈತ. ಇತರ ಕುಷಾಣರೂ ಅನಂತರ ಕಾಲದ ಭಾರತೀಯ ರಾಜರೂ ಚಿನ್ನದ ನಾಣ್ಯಪದ್ಧತಿಯನ್ನು ಮುಂದುವರಿಸಿದರು. ತಾಮ್ರದ ನಾಣ್ಯಗಳೂ ಚಲಾವಣೆಯಲ್ಲಿದ್ದುವು. ಇವನ ನಾಣ್ಯಗಳ ಮೇಲೆ ಶಿವನ ಮತ್ತು ತ್ರಿಶೂಲದ ಚಿತ್ರಗಳಿರುವುದರಿಂದ ಈತ ಶೈವಮತಾನುಯಾಯಿಯಾಗಿದ್ದನೆಂದು ಹೇಳಬಹುದು. ಈತ ಭಾರತದ ಹಲವಾರು ಪ್ರದೇಶಗಳನ್ನು ಗೆದ್ದು ರಾಜ್ಯವಿಸ್ತಾರ ಮಾಡಿದಂತೆ ತಿಳಿದುಬರುತ್ತದೆ. ಪಂಜಾಬ್, ಕಾಂದಹಾರ್ ಹಾಗೂ ಕಾಬೂಲ್ ಕಣಿವೆಗಳಲ್ಲಿ ದೊರೆತ ನಾಣ್ಯಗಳ ವೇಲೆ ಗ್ರೀಕ್ ಮತ್ತು ರೋಮನರ ಪ್ರಭಾವ ಎದ್ದುಕಾಣುತ್ತದೆ. ಎರಡನೆಯ ಕಡ್‍ಫೀಸಿಸನಿಗೆ ಮಹಾರಾಜ , ರಾಜಾಧಿರಾಜ, ಸರ್ವಲೋಗ ಈಶ್ವರ, ಮಹೇಶ್ವರ ಹಾಗೂ ಮಹಾರಕ್ಷಕ ಎಂಬ ಬಿರುದುಗಳಿದ್ದುವೆಂಬುದು ನಾಣ್ಯಗಳಿಂದ ತಿಳಿಯುತ್ತದೆ. ನಾಣ್ಯದ ಮುಂಭಾಗದಲ್ಲಿ ಅರಸರ ಸುಂದರ ಚಿತ್ರವೂ ಹಿಂಭಾಗದಲ್ಲಿ ನಂದಿಯೊಡನಿದ್ದ ಜಟಧಾರಿ ಶಿವನ ಚಿತ್ರವೂ ಇರುವುದು ಇವನ ನಾಣ್ಯಗಳ ವೈಶಿಷ್ಟ್ಯ. ನಾಣ್ಯಗಳ ಮೇಲ್ಮುಖದಲ್ಲಿ ಗ್ರೀಕ್ ಲಿಪಿಯ ಹಾಗೂ ಹಿಂಭಾಗದಲ್ಲಿ ಖರೋಷ್ಠೀ ಲಿಪಿಯ ಶಾಸನಗಳಿವೆ. ಈ ನಾಣ್ಯಗಳು ಗಾಂಧಾರ ಇಲ್ಲವೆ ಬ್ಯಾಕ್ಟ್ರಿಯದಲ್ಲಿ ಮುದ್ರಿತವಾದುವು. ರೋಂ ಸಾಮ್ರಾಜ್ಯದ ಟ್ರಾಜನನ (ಆಳ್ವಿಕೆ: 98-117) ಆಸ್ಥಾನಕ್ಕೆ ಕುಷಾನರ ರಾಯಭಾರಿಗಳು ಹೋಗಿದ್ದು, ತಮ್ಮೆರಡು ರಾಜ್ಯಗಳ ನಡುವೆ ಬೆಳೆಯುತ್ತಿದ್ದ ವ್ಯಾಪಾರ ಸಂಬಂಧವನ್ನು ಬಲಗೊಳಿಸಿದರು. ಭಾರತದಿಂದ ರೋಂ ಸಾಮ್ರಾಜ್ಯಕ್ಕೆ ಮೆಣಸು, ರೇಷ್ಮೆ, ಜರಿಬಟ್ಟೆ, ವಜ್ರ ವೈಡೂರ್ಯ ಮತ್ತು ಪರಿಮಳ ದ್ರವ್ಯಗಳು ಹೋಗುತ್ತಿದ್ದುವು. ಆ ದೇಶದಿಂದ ವಿಪುಲ ಸಂಪತ್ತು ಭಾರತಕ್ಕೆ ಬರುತ್ತಿತ್ತು.

ಕುಷಾಣರ ರಾಜವಂಶದಲ್ಲಿ ಅತ್ಯುನ್ನತ ಕೀರ್ತಿ ಗಳಿಸಿದ ಪ್ರಭಾವಶಾಲಿ ಚಕ್ರವರ್ತಿ ಕನಿಷ್ಕ. ಇವನು 78 ರಿಂದ 120 ರವರೆಗೆ ಆಳಿದ. ಇವನ ಕಾಲದಲ್ಲಿ ಸಾಮ್ರಾಜ್ಯ ವಿಸ್ತಾರವೂ ಬಲಾಢ್ಯವೂ ಆಗಿತ್ತು ; ಉತ್ತರದಲ್ಲಿ ಖೋಟಾನ್ ಹಾಗೂ ದಕ್ಷಿಣದಲ್ಲಿ ಕೊಂಕಣ, ಪೂರ್ವದಲ್ಲಿ ಬಿಹಾರ ಹಾಗೂ ಪಶ್ಚಿಮದಲ್ಲಿ ಖೋರಾಸಾನ್‍ವರೆಗೆ ಹರಡಿತ್ತೆಂದು ಇವನ ಶಾಸನಗಳಿಂದ ತಿಳಿದುಬರುತ್ತ್ತದೆ. ಎರಡನೆಯ ಕಡ್‍ಫೀಸಿಸ್ ಹಾಗೂ ಅನಂತರ ಪಟ್ಟಕ್ಕೆ ಬಂದ ಕನಿಷ್ಕರ ಮಧ್ಯೆ ಸ್ವಲ್ಪ ಕಾಲಾಂತರವಿದ್ದರೂ ಕನಿಷ್ಕನೇ ಎರಡನೆಯ ಕಡ್‍ಫೀಸಿಸನ ತರುವಾಯದ ಕುಷಾಣ ದೊರೆಯೆಂಬುದು ಖಚಿತವಾಗಿದೆ. ಈತ ಕಾಶ್ಮೀರವನ್ನು ಗೆದ್ದು ಅಲ್ಲಿ ಕನಿಷ್ಕಪುರವನ್ನು ಕಟ್ಟಿಸಿದ ಬುದ್ಧಗಯೆ ಹಾಗೂ ಪಾಟಲೀಪುತ್ರವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡ. ಬೌದ್ಧಪಂಡಿತ ಅಶ್ವಘೋಷವನ್ನು ಕನಿಷ್ಕ ಪಾಟಲೀಪುತ್ರದಿಂದ ತನ್ನಲ್ಲಿಗೆ ಆಹ್ವಾನಿಸಿದ. ಪರುಷಪುರ ಅಥವಾ ಪೆಷಾವರ್ ಇವನ ರಾಜಧಾನಿ. ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ರಾಜಕೀಯ ಅನುಕೂಲತೆಗಾಗಿ ಹಲವು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ರಾಜಪ್ರತಿನಿಧಿಗಳ ಸಹಾಯದಿಂದ ರಾಜ್ಯಭಾರ ಸಾಗಿಸಿದ. ಕ್ಷತ್ರಪರ ರಾಜ್ಯಪದ್ಧತಿಯನ್ನೂ ಮುಂದುವರಿಸಿಕೊಂಡು ಬಂದ. ಕ್ಷತ್ರಪರು ಮತ್ತು ಮಹಾಕ್ಷತ್ರಪರೇ ಪ್ರಾಂತ್ಯಾಧಿಪತಿಗಳು. ಎರಡನೆಯ ಕಡ್‍ಫೀಸಿಸ್ ಧರಿಸಿದ ದೇವಪುತ್ರನೆಂಬ ಬಿರುದನ್ನು ಕನಿಷ್ಕನೂ ಧರಿಸುತ್ತಿದ್ದ. ಚೀನಾದ ದಳಪತಿ ಪಾನ್‍ಚಾವನೊಂದಿಗೆ ನಡೆದ ಕದನದಲ್ಲಿ ಕನಿಷ್ಕ ಸೋಲನ್ನನುಭವಿಸಿದರೂ ಅವನ ಮಗ ಪಾನಯಾಂಗನನ್ನು ಸೋಲಿಸಿ ಸೇಡು ತೀರಿಸಿಕೊಂಡು, ಕ್ಯಾಷ್‍ಘರ್, ಯಾರ್ಕಂಡ್ ಮತ್ತು ಖೋಟಾನುಗಳನ್ನು ವಶಪಡಿಸಿಕೊಂಡ. ಅನಂತರ ಪಾರ್ಥಿಯನರನ್ನೂ ಸೋಲಿಸಿದ. ಈ ಹಲವಾರು ವಿಜಯಗಳ ಸ್ಮಾರಕವಾಗಿ ಒಂದು ಹೊಸ ಶಕವನ್ನು ಕ್ರಿ.ಶ. 78ರಲ್ಲಿ ಪ್ರಾರಂಭಿಸಿದ. ರಾಜಧಾನಿಯಾದ ಪುರುಷಪುರದಲ್ಲಿ ಭವ್ಯವಾದ ಸಾರ್ವಜನಿಕ ಕಟ್ಟಡಗಳನ್ನೂ ಬೌದ್ಧವಿಹಾರಗಳನ್ನೂ ಬುದ್ಧನ ಅವಶೇಷಗಳನ್ನೊಳಗೊಂಡಿದ್ದ ಸ್ತೂಪವನ್ನೂ ಈತ ಕಟ್ಟಿಸಿದನೆಂದು ಹೇಳಲಾಗಿದೆ.

ಕನಿಷ್ಕ ಅಶೋಕ ಚಕ್ರವರ್ತಿಯಂತೆ ಬೌದ್ಧ ಮತಾನುಯಾಯಿ ಮತ್ತು ಪ್ರಸಾರಕನೆಂದು ಬೌದ್ಧ ಗ್ರಂಥಗಳಲ್ಲಿ ಕೀರ್ತಿ ಪಡೆದಿದ್ದಾನೆ. ಬೌದ್ಧ ಧರ್ಮದೊಂದಿಗೆ ಇತರ ಮತಗಳಲ್ಲೂ ಕನಿಷ್ಕನಿಗೆ ನಿಷ್ಠೆಯಿತ್ತೆಂಬ ಸಂಗತಿ ಅವನ ನಾಣ್ಯಗಳ ಮೇಲಿರುವ ಗ್ರೀಕ್, ಸುಮೇರಿಯ, ಪರ್ಷಿಯ ಹಾಗೂ ಭಾರತದ ಹಿಂದೂ ದೇವತೆಗಳ ಲಾಂಛನಗಳಿಂದ ಕಂಡುಬರುತ್ತದೆ. ಬೌದ್ಧ ಧರ್ಮದ ವಸುಮಿತ್ರ ಮತ್ತು ಅಶ್ವಘೋಷ ಇವರಿಂದ ಪ್ರಭಾವಿತನಾಗಿ, ಬೌದ್ಧ ಧರ್ಮವನ್ನು ಸ್ವೀಕರಿಸಿದರೂ ಕನಿಷ್ಕ ಅನ್ಯಮತೀಯರನ್ನು ಹಿಂಸಿಸದೆ, ಪರಧರ್ಮ ಸಹಿಷ್ಣುವಾಗಿದ್ದ. ಬೌದ್ಧ ಧರ್ಮ ಪ್ರಚಾರಕರನ್ನು ಏಷ್ಯದ ಮೂಲೆಮೂಲೆಗೂ ಕಳಿಸಿದುದರ ಪರಿಣಾಮವಾಗಿ ಬೌದ್ಧ ಧರ್ಮ ಬಹುಬೇಗನೆ ಚೀನ, ಜಪಾನ್, ಟಿಬೆಟ್ ಹಾಗೂ ಮಧ್ಯ ಏಷ್ಯದಲ್ಲಿ ಪ್ರಸರಿಸಿತು.

ಕನಿಷ್ಕ ಕಾಲದಲ್ಲಿ ನಡೆದ ಒಂದು ಮಹತ್ವದ ಘಟನೆಯೆಂದರೆ ಬೌದ್ಧ ಧರ್ಮದ ನಾಲ್ಕನೆಯ ಮಹಾಸಭೆ. ಸು. 500 ಬೌದ್ಧ ಸಂನ್ಯಾಸಿಗಳು ಇದರಲ್ಲಿ ಭಾಗವಹಿಸಿದ್ದರು. ಉದ್ಯಾಮ ಪಂಡಿತರೆನಿಸಿದ ವಸುಮಿತ್ರ, ಅಶ್ವಘೋಷ, ನಾಗಾರ್ಜುನ ಮತ್ತು ಪಾಶ್ರ್ವ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಕಾರ್ಯಕಲಾಪಗಳನ್ನು ನಡೆಸಲು ವಸುಮಿತ್ರ ಅಧ್ಯಕ್ಷನಾಗಿಯೂ ಅಶ್ವಘೋಷ ಉಪಾಧ್ಯಕ್ಷನಾಗಿಯೂ ಇದ್ದರು. ಬೌದ್ಧ ಧರ್ಮದಲ್ಲಿ ಬೆಳೆದುಬಂದ ಕೆಲವು ವಿವಾದಾಸ್ಪದವಾದ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಿ, ಆ ಧರ್ಮಕ್ಕೆ ಒಂದು ಹೊಸ ರೂಪ ಕೊಡುವುದೇ ಈ ಸಭೆಯ ಮೂಲ ಉದ್ದೇಶವಾಗಿತ್ತು. ಪಂಡಿತರು ಬೌದ್ಧ ಸಾಹಿತ್ಯವನ್ನು ಪರಿಶೀಲಿಸಿ ತ್ರಿಪಿಟಕಗಳ ಮೇಲೆ ಭಾಷ್ಯವನ್ನು ಬರೆದರು. ಅದೇ ಸಮಯದಲ್ಲಿ ಬೌದ್ಧಮತೀಯರಲ್ಲಿದ್ದ ಭಿನ್ನಾಭಿಪ್ರಾಯಗಳಿಂದ ಮತದ ಏಕತೆಗೆ ಭಂಗ ಬಂದು ಇಬ್ಭಾಗವಾಗಿ, ಹೀನಯಾನ ಮತ್ತು ಮಹಾಯಾನಗಳೆಂಬ ಎರಡು ಪಂಗಡಗಳು ಹುಟ್ಟಿಕೊಂಡುವು.

ಬುದ್ಧನಿಂದ ಪ್ರಾರಂಭವಾಗಿ ಅಶೋಕನ ರಾಜಾಶ್ರಯ ಪಡೆದು ಪ್ರಬಲವಾದ ಬೌದ್ಧಧರ್ಮ ಈ ಒಡಕಿನಿಂದಾಗಿ ಬಲಗುಂದಿತು. ಮೊದಲು ಬುದ್ಧನ ಲಾಂಛನವನ್ನು ಮಾತ್ರ ಪೂಜಿಸುತ್ತಿದ್ದರೆ, ಮಹಾಯಾನದ ಉಗಮದಿಂದಾಗಿ ಬುದ್ಧನನ್ನು ದೇವರ ಅವತಾರವೆಂದು ಬಗೆದು ಅವನ ಪ್ರತಿಮೆಯನ್ನು ಪೂಜಿಸತೊಡಗಿದರು. ಮಹಾಯಾನ ಪಂಗಡದವರು ಕೇವಲ ಭಗವಾನ್ ಬುದ್ಧನ ಹಾಗೂ ಅವನ ಭಕ್ತರ ನಡುವೆ ವಾಹಕರೆಂದು ನಂಬಲಾದ ಬೋಧಿಸತ್ತ್ವರನ್ನೂ ಪೂಜಿಸತೊಡಗಿದರು. ಆದ್ದರಿಂದ ಮಹಾಯಾನವನ್ನು ಬೋಧಿಸತ್ತ್ವ ಯಾನವೆಂತಲೂ ಹೆಸರಿಸಲಾಗಿದೆ. ಜನಸಾಮಾನ್ಯರ ಭಾಷೆಯಾದ ಪಾಲಿಯಲ್ಲಿ ಮೊದಲು ಬೌದ್ಧ ಧರ್ಮದ ಗ್ರಂಥಗಳನ್ನು ಬರೆಯಲಾಗುತ್ತಿತ್ತು; ಆದರೆ ಮಹಾಯಾನ ಪಂಗಡದ ಉದಯದಿಂದಾಗಿ ಸಂಸ್ಕøತ ಬಳಕೆಗೆ ಬಂತು. ಕನಿಷ್ಕ ಸ್ವತಃ ಮಹಾಯಾನ ಬೌದ್ಧಧರ್ಮವನ್ನು ಸ್ವೀಕರಿಸಿ ತನ್ನ ವಿಸ್ತಾರವಾದ ಸಾಮ್ರಾಜ್ಯದಲ್ಲಿ ಇದು ಹರಡಲು ಕಾರಣನಾದ.

ಕಲೆ ಮತ್ತು ವಿದ್ಯೆಗೂ ಕನಿಷ್ಕ ಆಶ್ರಯದಾತನಾಗಿದ್ದ. ಬೌದ್ಧ ತತ್ತ್ವಜ್ಞಾನಿಗಳಾದ ಅಶ್ವಘೋಷ, ಪಾಶ್ವ ಮತ್ತು ವಸುಮಿತ್ರ, ಮಹಾವಿದ್ವಾಂಸನಾದ ಸಂಘರಕ್ಷಕ, ಮಹಾಯಾನ ತತ್ತ್ವನಿರೂಪಕನಾದ ನಾಗಾರ್ಜುನ, ಚರಕನೆಂಬ ವೈದ್ಯ ವಿಶಾರದ, ಮಂತ್ರಿ ಮತ್ತು ರಾಜಕಾರಣಕುಶಲಿ, ಮಾಥರ ಹಾಗೂ ಎಜೆಸಿಲಾನ್‍ನೆಂಬ ವಾಸ್ತುಶಿಲ್ಪಿಗಳು- ಇವರೆಲ್ಲ ಕುಷಾಣ ದೊರೆಯ ಆಶ್ರಯ ಪಡೆದು ಸಾಹಿತ್ಯ, ಧರ್ಮ, ತತ್ತ್ವಜ್ಞಾನ, ಕಲೆ ಹಾಗು ವಿಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. ಕನಿಷ್ಕ ವಾಸ್ತುಶಿಲ್ಪದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದ. ಪೆಷಾವರ್, ಮಥುರಾ, ತಕ್ಷಶಿಲೆ ಹಾಗೂ ಕನಿಷ್ಕಪುರಗಳಲ್ಲಿರುವ ಹಲವಾರು ಭೌದ್ಧ ವಿಹಾರಗಳು ಮತ್ತು ಶಿಲ್ಪಗಳು ಆ ಕಾಲದ ಕಲಾಪ್ರೌಢಿಮೆಯ ಪ್ರತೀಕಗಳಾಗಿವೆ.

ಕನಿಷ್ಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದಲ್ಲದೆ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯತೆಗಳಿಸಿ ದೇಶವನ್ನು ಉಚ್ಛ್ರಾಯಸ್ಥಿತಿಗೆ ತಂದ. ಮಹಾಯಾನ ಬೌದ್ಧಮತಾಭಿಮಾನಿಯಾದರೂ ಕನಿಷ್ಕ ಸರ್ವಧರ್ಮಸಹಿಷ್ಣುವಾಗಿದ್ದನೆಂಬುದಕ್ಕೆ ಅವನ ಕಾಲದಲ್ಲಿ ಮಥುರಾದಲ್ಲಿ ಊರ್ಜಿತಸ್ಥಿತಿಯಲ್ಲಿದ್ದ ಜೈನ ಸಂಘವೂ ಆತ ಮಾಡಿದ ಭಾರತೀಯ ಸಂಸ್ಕøತಿಯ ಪುನರುಜ್ಜೀವನ ಕಾರ್ಯವೂ ದೃಷ್ಠಾಂತಗಳಾಗಿವೆ. ಆತ ರೋಂ ಹಾಗೂ ಚೀನದೊಂದಿಗೆ ವ್ಯಾಪಾರ ಸಂಬಂಧವನ್ನಿರಿಸಿಕೊಂಡಿದ್ದ.

ಕನಿಷ್ಕನ ಅನಂತರ ಬಂದ ದೊರೆ ವಸಿಷ್ಕ. ಆದರೆ ಈ ದೊರೆ ಅಷ್ಟು ಪ್ರಬಲ ನಲ್ಲದ ಕಾರಣ ಇವನ ರಾಜ್ಯ ಕೇವಲ ಮಥುರಾ ಹಾಗೂ ಅದರ ಸುತ್ತಮುತ್ತಣ ಪ್ರದೇಶಗಳಿಗೇ ಸೀಮಿತವಾಗಿತ್ತು.

ಅನಂತರ ದೊರೆಯಾದ ಹುವಿಷ್ಕ ಕುಷಾಣರ ರಾಜ್ಯವನ್ನು ಸುಸ್ಥಿತಿಗೆ ಒಯ್ದ. ಬೌದ್ಧಧರ್ಮಕ್ಕೆ ಆಶ್ರಯ ನೀಡಿದ ಹುವಿಷ್ಕ 120-138ರಲ್ಲಿ ರಾಜ್ಯವಾಳಿದ. ಕನಿಷ್ಕ ಕಟ್ಟಿಸಿದ ವಿಪುಲವಾದ ಸ್ಮಾರಕಗಳಿಂದಾಗಿ ಪೆಷಾವರ್ ಅಲಂಕೃತವಾದರೆ ಹುವಿಷ್ಕ ಕಟ್ಟಸಿದ ವಿಪುಲವಾದ ಸ್ಮಾರಕಗಳಿಂದ ಮಥರಾ ಕಂಗೊಳಿಸಿತು.

ಕುಷಾಣರ ವಂಶಕ್ಕೆ ಸೇರಿದ ಕೊನೆಯ ಮುಖ್ಯ ಅರಸ 1ನೆಯ ವಾಸುದೇವ. ಇವನ ಆಳ್ವಿಕೆಯ ಕಾಲ 152-177. ಇವನ ಶಾಸನಗಳು ಮಥರಾದಲ್ಲಿ ಲಭಿಸಿವೆ. ಇವನ ನಾಣ್ಯಗಳಲ್ಲಿ ಶಿವನ ಲಾಂಛನವಿದೆ. ಮೊದಲನೆಯ ವಾಸುದೇವ ವಿದ್ವಾಂಸರಿಗೆ ಆಶ್ರಯದಾತನಾಗಿದ್ದ.

ಅನಂತರ ಬಂದ ಕುಷಾಣ ರಾಜರು ಅಶಕ್ತರಾಗಿದ್ದುದರಿಂದ ಕನಿಷ್ಕ ನಿರ್ಮಿಸಿದ ವಿಸ್ತಾರವಾದ ರಾಜ್ಯ ನಾಶವಾಯಿತು. ಕುಷಾಣ ವಂಶಕ್ಕೆ ಸೇರಿದ ಹಲವು ಪುಟ್ಟ ರಾಜರು ಭಾರತದ ವಾಯುವ್ಯ ಭಾಗದಲ್ಲಿ 9ನೆಯ ಶತಮಾನದವರೆಗೂ ಆಳುತ್ತಿದ್ದರು.

ಮೌರ್ಯ ಸಾಮ್ರಾಜ್ಯ ಆಳಿದ ಅನಂತರ ಇಳಿಮುಖವಾಗಿದ್ದ ಭಾರತದ ಸಂಸ್ಕøತಿಯನ್ನು ಪುರಸ್ಕರಿಸಿ ಕುಷಾಣರು ಉತ್ತರ ಭಾರತದ ಹಲವಾರು ಭಾಗಗಳನ್ನು ಸು. 300 ವರ್ಷಗಳವರೆಗೆ ಸಮರ್ಪಕವಾಗಿ ಆಳಿ ಧಾರ್ಮಿಕ, ಸಾಂಸ್ಕøತಿಕ, ಆರ್ಥಿಕ, ಬೌದ್ಧಿಕ ಹಾಗೂ ಕಲಾಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಲ್ಲದೆ ಹೊಸ ಚೈತನ್ಯವನ್ನೂ ನೀಡಿದರು. ಮಹಾಯಾನ ಬೌದ್ಧಪಂಥದ ಉದಯ, ಗಾಂಧಾರ ಶೈಲಿಯ ವಾಸ್ತು ಶಿಲ್ಪಕಲೆ, ಬುದ್ಧನ ಪ್ರತಿಮೆಯ ನಿರ್ಮಾಣ, ವಿವಿಧ ದೇಶಗಳೊಂದಿಗೆ ರಾಜಕೀಯ ಹಾಗೂ ವ್ಯಾಪಾರ ಸಂಬಂಧ, ಪಂಡಿತರಿಗೆ ಆಶ್ರಯ ಹಾಗೂ ಪರಧರ್ಮ ಸಹಿಷ್ಣತೆ-ಇವು ಕುಷಾಣರ ಕಾಲದ ಗಮನಾರ್ಹ ಕೊಡುಗೆಗಳು. (ಎ.ಕೆ.ಎಸ್.ಎಚ್.ಎ.)

  ನಾಣ್ಯಗಳು: ಕುಷಾಣರ ನಾಣ್ಯಗಳಿಂದ ಅವರ ಚರಿತ್ರೆಯನ್ನು ಪುನರ್ರಚಿಸಬಹುದು. ಕನಿಷ್ಕನಿಗಿಂತ ಹಿಂದಿನವರಾದ ಒಂದನೆಯ ಕುಜುಲ ಕಡ್‍ಫೀಸಿಸ್ ಮತ್ತು ಎರಡನೆಯ ವಿಮ ಕಡ್‍ಫೀಸಸ್ ಇವರ ಚರಿತ್ರೆಯನ್ನು ತಿಳಿಯಲು ನಾಣ್ಯಗಳಲ್ಲದೆ ಬೇರೆ ಆಧಾರಗಳೇ ಇಲ್ಲ. ಕುಜುಲ ಕಡ್‍ಫೀಸಿಸ್ ಭಾರತದಲ್ಲಿ ಆಳಿದ ಕೊನೆಯ ಗ್ರೀಕ್ ರಾಜ ಹರ್ಮಿಯಸನನ್ನು ಸೋಲಿಸಿ ಅವನ ರಾಜ್ಯವನ್ನು ಆಕ್ರಮಿಸುವ ಮುನ್ನ ಅವನ ಜೊತೆಯಲ್ಲೇ ಸ್ವಲ್ಪಕಾಲ ರಾಜ್ಯವನ್ನಾಳುತ್ತಿದ್ದನೆಂಬ ವಿಷಯ ನಾಣ್ಯಗಳಿಂದ ತಿಳಿದುಬಂದಿದೆ. ಒಂದು ನಾಣ್ಯದ ಮುಂಭಾಗದಲ್ಲಿ ಹರ್ಮಿಯಸನ ಎದೆ ವಿಗ್ರಹ ಮತ್ತು ಗ್ರೀಕ್ ಲಿಪಿಯಿಂದ ಕೂಡಿದ ಶಾಸನ ಇವೆ. ಹಿಂಭಾಗದಲ್ಲಿ ಬಲಗೈಯಲ್ಲಿ ದೊಣ್ಣೆ ಮತ್ತು ಎಡಗೈಯಲ್ಲಿ ಸಿಂಹದ ಚರ್ಮದೊಂದಿಗೆ ನಿಂತ ಹೆರಾಕ್ಲಿಸನ ಚಿತ್ರವಿದೆ. ಖರೋಷ್ಠಿ ಲಿಪಿಯಲ್ಲಿ ಕುಜಲಕನಸ ಎಂಬ ಶಾಸನವಿದೆ. ಈ ತಾಮ್ರದ ನಾಣ್ಯದ ಕಾಲ ಸು. 40-50. ಇನ್ನೊಂದು ತಾಮ್ರದ ನಾಣ್ಯದಲ್ಲಿ ಅವನೊಬ್ಬನ ಚಿತ್ರ ಮಾತ್ರ ಇರುವುದರಿಂದ ಆತ ಹರ್ಮಿಯಸನ್ನು ಸೋಲಿಸಿ ತಾನೊಬ್ಬನೇ ರಾಜ್ಯವನ್ನಾಳಲು ಪ್ರಾರಂಭಿಸಿದನೆಂದು ಊಹಿಸಬಹುದು. ಮುಂಭಾಗದ ಗ್ರೀಕ್ ಲಿಪಿಯ ಶಾಸನದಲ್ಲೂ ಹಿಂಭಾಗದ ಖರೋಷ್ಠಿ ಲಿಪಿಯ ಶಾಸನದಲ್ಲೂ ಅವನ ಹೆಸರಿದೆ. ಮೂರನೆಯ ರೀತಿಯ ತಾಮ್ರದ ನಾಣ್ಯದಲ್ಲಿ ಮುಂಭಾಗದಲ್ಲಿ ರಾಜನ ತಲೆಯೂ ಗ್ರೀಕ್ ಶಾಸನವೂ ಹಿಂಭಾಗದಲ್ಲಿ ಆಸೀನ ರಾಜನ ಚಿತ್ರವೂ ಇವೆ.

ಸು. 85-120 ಆಳುತ್ತಿದ್ದ ವಿಮ ಕಡ್‍ಫೀಸಿಸನ ಚಿನ್ನದ ಮತ್ತು ತಾಮ್ರದ ನಾಣ್ಯಗಳು ದೊರಕಿವೆ. ಇವನ ನಾಣ್ಯಗಳಿಂದ ಈತ ಶಿವಭಕ್ತನೆಂದು ಕಾಣುತ್ತದೆ. ಚಿನ್ನದ ನಾಣ್ಯದ ಮುಂಬದಿಯಲ್ಲಿ ಅಂಕುಶ ಮತ್ತು ದೊಣ್ಣೆಗಳೊಂದಿಗೆ ರಾಜನ ಎದೆ ಚಿತ್ರವೂ ಹಿಂಬದಿಯಲ್ಲಿ ಬಲಗೈಯಲ್ಲಿ ತ್ರಿಶೂಲ-ಪರಶುಗಳೆರಡೂ ಕೂಡಿರುವ ಆಯುಧ ಹಿಡಿದ ಶಿವನ ಚಿತ್ರವೂ ಇವೆ. ಎಡಗೈಯ ಮೇಲೆ ಚರ್ಮವಿದೆ (ಬಹುಶಃ ಹುಲಿಯ ಚರ್ಮ). ಹಿಂಬದಿಯಲ್ಲಿ ಮಹಾರಾಜನ ಸರ್ವಲೋಗ ಈಶ್ವರ ಮಹೇಶ್ವರಸ ವಿಮಾಕತ್ ಪಿಸಸ ತ್ರಾತರಸ ಎಂದಿದೆ. ಚಿನ್ನದ ಇನ್ನೊಂದು ಚಿಕ್ಕ ನಾಣ್ಯದ ಮೇಲಿನ ಚೌಕದಲ್ಲಿ ರಾಜನ ತಲೆ ಇದೆ. ಹಿಂಬದಿಯಲ್ಲಿ ತ್ರಿಶೂಲಕ್ಕೆ ಸೇರಿಸಿದ ಪರಶುವುಂಟು. ಮಹಾ ರಾಜಾಧಿರಾಜ ವಿಮಾಕತ್ ಪಿಸಸ ಎಂಬ ಖರೋಷ್ಠಿ ಶಾಸನವಿದೆ. ತಾಮ್ರದ ನಾಣ್ಯದಲ್ಲಿ ನಿಂತಿರುವ ರಾಜನ ಚಿತ್ರದಲ್ಲಿ ಉದ್ದವಾದ ಕೋಟು ಷರಾಯಿಗಳಿವೆ. ಹಿಮ್ಮುಖದಲ್ಲಿ ಬಸವನೊಂದಿಗೆ ನಿಂತಿರುವ ಶಿವನ ಚಿತ್ರವಿದೆ. ಕನಿಷ್ಕನ ನಾಣ್ಯಗಳ ಮೇಲೆ ಗ್ರೀಕರ ಮತ್ತು ಇರಾನಿನ ದೇವತೆಗಳೊಡನೆ ಬುದ್ಧ ಮತ್ತು ಈಶ್ವರ ಚಿತ್ರಗಳಿವೆ. ಮತೀಯ ವಿಚಾರಗಳಲ್ಲಿ ಆತ ಉದಾರ ನೀತಿ ತಳೆದಿದ್ದನೆಂಬುದಕ್ಕೆ ಇದು ದೃಷ್ಟಾಂತ. ಅವನ ಚಿನ್ನದ ನಾಣ್ಯವೊಂದರಲ್ಲಿ ಓಡುತ್ತಿರುವ ವಾಯುದೇವತೆಯ ಚಿತ್ರವಿದೆ. ಅವನ ಅನಂತರ ಬಂದ ಹುವಿಷ್ಕ ಮತ್ತು ವಾಸುದೇವರೂ ಇದೇ ಬಗೆಯ ನಾಣ್ಯಗಳನ್ನು ಅಚ್ಚು ಹಾಕಿಸಿದರು. (ಎಸ್.ಎಂ.)

ಶಾಸನಗಳು : ಕುಷಾಣರ ಶಾಸನಗಳು ಉತ್ತರ ಪ್ರದೇಶ, ಪಶ್ಚಿಮ ಪಾಕಿಸ್ತಾನ, ಕಾಬೂಲ್, ಬಲೂಚಿಸ್ತಾನ ಮತ್ತು ಮಧ್ಯ ತುರ್ಕಿಸ್ತಾನಗಳ ಅನೇಕ ಕಡೆಗಳಲ್ಲೂ ಒಂದು ಶಾಸನ ಸಾಂಚಿಯಲ್ಲೂ (ಮಧ್ಯಪ್ರದೇಶ) ಸಿಕ್ಕಿವೆ. ಇವನ್ನು ಶಿಲೆ, ತಾಮ್ರ ಬೆಳ್ಳಿ ಮತ್ತು ಕಂಚುಗಳ ಫಲಕಗಳ ಮೇಲೂ ತೆಳುವಾದ (ಬೆಳ್ಳಿಯ) ಹಾಳೆಗಳ ಮೇಲೂ ಬೌದ್ಧ ಹಾಗೂ ಜೈನ ಪ್ರತಿಮೆಗಳ ಪೀಠಗಳ ಮೇಲೂ ಪಾತ್ರೆ ಮತ್ತು ಯೂಪಕರಂಡಕಗಳ ಮೇಲೂ ಕೊರೆಯಲಾಗಿದೆ.

ಶಾಸನಗಳು ಅಂದು ಅತ್ಯಧಿಕ ಪ್ರಸಾರದಲ್ಲಿದ್ದ ಬ್ರಾಹ್ಮೀ ಹಾಗೂ ಖರೋಷ್ಠ ಲಿಪಿಗಳಲ್ಲಿವೆ. ಭಾಷೆ ಪ್ರಾಕೃತ ಮತ್ತು ಸಂಸ್ಕøತದಿಂದ ಹೆಚ್ಚು ಪ್ರಭಾವಿತವಾದ್ದು ಕಂಡು ಬರುತ್ತದೆ. ಶಾಸನಗಳ ಪಾಠಗಳು ಸಂಕ್ಷಿಪ್ತವಾಗಿವೆ. ಇವು ಸಾಮಾನ್ಯವಾಗಿ ಗದ್ಯದಲ್ಲಿವೆ. ಅಲ್ಲಲ್ಲಿ ಒಂದೆರಡು ಶ್ಲೋಕಗಳೂ ಕಾಣಸಿಗುತ್ತವೆ. ನಾಣ್ಯಗಳ ಮೇಲಿರುವ ಶಾಸನಗಳು ಖರೋಷ್ಠ ಅಥವಾ ಗ್ರೀಕ್ ಲಿಪಿಯಲ್ಲಿವೆ. ಅವುಗಳ ಭಾಷೆ ಪ್ರಾಕೃತ, ಪೂರ್ವ ಪರ್ಷಿಯನ್ ಅಥವಾ ಗ್ರೀಕ್.

ಶಾಸನಗಳು ಸಿದ್ಧಂ ಎಂಬ ಮಂಗಳವಾಚಕದಿಂದ, ಆಳುವ ರಾಜನ ಸಂವತ್ಸರದಿಂದ ಅಥವಾ ಅವನ ಪ್ರಶಸ್ತಿಗಳಿಂದ ಪ್ರಾರಂಭವಾಗುತ್ತವೆ. ಅನಂತರ ಶಾಸನದ ಉದ್ದೇಶ ಹೇಳಲಾಗಿರುತ್ತದೆ. ಇವುಗಳಲ್ಲಿ ದಾನಶಾಸನಗಳೇ ಅಧಿಕ. ಸ್ತೂಪ ಹಾಗೂ ಚೈತ್ಯಗಳ ನಿರ್ಮಾಣ, ಶಾಕ್ಯಮುನಿಯ (ಬುದ್ಧ) ಶಾರೀರಿಕ ಅವಶೇಷಗಳ ಅಥವಾ ಜೈನಪ್ರತಿಮೆಗಳ ಪ್ರತಿಷ್ಠಾಪನೆ-ಇಂಥ ಸಂದರ್ಭಗಳಲ್ಲಿತ್ತ ದಾನಗಳ ವಿವರಗಳಿರುತ್ತವೆ. ದಾನಕೊಟ್ಟವರಿಗೆ, ಅವರ ಸಂಬಂಧಿಕರಿಗೆ ಅಥವಾ ಪ್ರಜಾಸಾಮಾನ್ಯರಿಗೆ ಶುಭಕೋರಿಕೆಯೊಂದಿಗೆ ಶಾಸನ ಅಂತ್ಯವಾಗುತ್ತದೆ. ಕೆಲವು ಶಾಸನಗಳಲ್ಲಿ ಅವುಗಳಲ್ಲಿ ಉಕ್ತವಾದ ವಿಗ್ರಹ ಮುಂತಾದವನ್ನು ನಿರ್ಮಿಸಿದ ಶಿಲ್ಪಿಗಳ, ಶಾಸನಗಳನ್ನು ಬರೆದವರ ಮತ್ತು ಕೊರೆದವರ ಹೆಸರುಗಳೂ ಕಂಡು ಬರುತ್ತವೆ. ಈ ಶಾಸನಗಳು ಆ ಕಾಲದ ವಾಸ್ತುಶಿಲ್ಪದ ಅಧ್ಯಯನಕ್ಕೆ ಅತ್ಯಂತ ಸಹಾಯಕ.

ಶಾಸನಗಳಲ್ಲಿ ಕೊಡಲಾಗಿರುವ ತೇದಿಯ ವಿವರಗಳು ಕುಷಾಣರ ಪ್ರಖ್ಯಾತ ಚಕ್ರವರ್ತಿ 1ನೆಯ ಕನಿಷ್ಕನ ರಾಜ್ಯ ಸಂವತ್ಸರಕ್ಕೆ ಅಥವಾ ಆಯಾ ಕಾಲಗಳಲ್ಲಿ ಆಳುತ್ತಿದ್ದ ಇತರ ಕುಷಾಣ ಚಕ್ರವರ್ತಿಗಳ ರಾಜ್ಯಸಂವತ್ಸರಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಸಂವತ್ಸರ ಮಾಸ ದಿವಸಗಳ, ಕೆಲವೊಮ್ಮೆ ಇವುಗಳ ಜೊತೆಗೆ ನಕ್ಷತ್ರದ ಉಲ್ಲೇಖ ಇರುತ್ತವೆ. ಸಂವತ್ಸರ ಮತ್ತು ದಿವಸ ಸಂಖ್ಯೆ ಸಾಮಾನ್ಯವಾಗಿ ಅಕ್ಷರ ಮತ್ತು ಅಂಕಿ ಎರಡರಲ್ಲೂ ಇರುತ್ತವೆ. ಈ ವಿವರಗಳನ್ನು ನೀಡುವಾಗ ಋತುಮಾನ ಅಥವಾ ಚಾಂದ್ರಮಾನ ಅಥವಾ ಯವನರ ಪದ್ಧತಿಯನ್ನು ಅನುಸರಿಸಲಾಗಿದೆ.

ಕುಷಾಣ ಎಂಬ ಪ್ರಯೋಗವೇ ಎಲ್ಲ ಶಾಸನಗಳಲ್ಲೂ ಇಲ್ಲ. ಮಧ್ಯ ತುರ್ಕಿಸ್ತಾನವನ್ನುಳಿದು ಇತರ ಪ್ರದೇಶಗಳಲ್ಲಿ ದೊರಕಿದ ಶಾಸನಗಳಲ್ಲಿ ಖುಷಣ, ಗುಷಣ ಮತ್ತು ಕುಷಾಣ ಎಂಬ ಪ್ರಯೋಗಗಳೂ ಮಧ್ಯ ತುರ್ಕಿಸ್ತಾನದಲ್ಲಿಯ ಶಾಸನಗಳಲ್ಲಿ ಕುಷಣ ಹಾಗೂ ಕುರ್ಷನ ಎಂಬ ಪ್ರಯೋಗಗಳೂ ಇವೆ. ನಾಣ್ಯಗಳ ಮೇಲಿರುವ ಶಾಸನಗಳಲ್ಲಿ ಕುಷನ ಮತ್ತು ಕೊಷಾನೊ ಎಂಬ ರೂಪಗಳುಂಟು.

ಭಾರತದಲ್ಲಿ ಇಂದಿಗೂ ಅಧಿಕ ಪ್ರಸಾರದಲ್ಲಿರುವ ಶಕಸಂವತ್ಸರ ಕುಷಾಣರ ಕೊಡುಗೆ. ಇದರ ಮೂಲಪುರುಷ ಒಂದನೆಯ ಕನಿಷ್ಕನೋ ಅವನ ಹಿಂದಿನವನಾದ ಎರಡನೆಯ ಕಡ್‍ಫೀಸಿಸನೊ ಎಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಕನಿಷ್ಕನೇ ಇದರ ಪ್ರವರ್ತಕನೆಂಬುದು ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ.

ಕುಷಾನರಾಜರಲ್ಲಿ 1ನೆಯ ಕನಿಷ್ಕನ ಪೂರ್ವಜರು ಅನೇಕ ವಿಷಯಗಳಲ್ಲಿ ಯವನ ರೀತಿಗಳನ್ನನುಸುತ್ತಿದ್ದರು. ಕನಿಷ್ಕ ಮತ್ತು ಅವನ ಅನಂತರದವರು ಹೆಚ್ಚುಹೆಚ್ಚಾಗಿ ಭಾರತೀಯ ಸಂಸ್ಕøತಿ ಮತ್ತು ಪರಂಪರೆಗಳ ಪ್ರಭಾವಕ್ಕೊಳಗಾದರು. ಈ ರಾಜರಲ್ಲೊಬ್ಬ ವಾಸುದೇವ ಎಂಬ ಭಾರತೀಯ ಹೆಸರನ್ನಿಟ್ಟುಕೊಂಡಿದ್ದುದೂ ಕನಿಷ್ಕನ ಕಾಲದಿಂದ ಸಂಸ್ಕøತ ಭಾಷೆಗೆ ಶಾಸನಗಳಲ್ಲಿ ಹೆಚ್ಚು ಪ್ರಾಧಾನ್ಯ ದೊರೆತಿತ್ತೆಂಬುದೂ ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಮಧ್ಯ ಏಷ್ಯದವರೆಗೆ ಹಬ್ಬಿತ್ತೆಂಬುದೂ ಇವರ ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತವೆ.

ಕುಷಾಣ ಅರಸರಿಗೆ ಅನೇಕ ಯವನ ಹಾಗೂ ಭಾರತೀಯ ಬಿರುದುಗಳಿದ್ದುವೆಂಬುದು ಇವರ (ನಾಣ್ಯಗಳ ಮೇಲಿನ ಶಾಸನಗಳೂ ಸೇರಿದಂತೆ) ಶಾಸನಗಳಿಂದ ತಿಳಿದುಬರುತ್ತದೆ. ಷಾಹಿ (ಶಾಹಿ) ಶಾವೊನನೊ ಶಾವೊ (ಶಾಹನ್‍ಶಾಹ್ : ರಾಜಾಧಿ ರಾಜ), ಮುರೋಡ ಶಕ ಮುರುಣ್ಣ:ಅಧಿಪತಿ), ಮರ್ಝಕ, (ಶಕ:ಗೃಹಪತಿ), ಕಇಸರ ಇವು ಯವನ ಬಿರುದುಗಳು. ಬ್ಯಾಸಿಲಿಯಸ್ ಬ್ಯಾಸಿಲಿಯನ್ (ರಾಜಾಧಿರಾಜ) ಎಂಬುದು ಗ್ರೀಕ್ ಬಿರುದು. ಮಹರಜ (ಮಹಾರಾಜ), ರಜತಿರಜ (ರಾಜಾಧಿರಾಜ) ಮಹಿಶ್ವರ (ಮಹೇಶ್ವರ), ದೇವಪುತ್ರ , ಧ್ರಮೆಠಿದ (ಧರ್ಮಸ್ಥಿತ) ಅಥವಾ ಸಚಧ್ರ ಮಠಿದ (ಸತ್ಯಧರ್ಮಸ್ಥಿತ), ಸರ್ವಲೋಗ ಇಸ್ವರ (ಸರ್ವಲೋಕೇಶ್ವರ) ಹಾಗೂ ತ್ರತರ (ತ್ರಾತಾ) ಇವು ಭಾರತೀಯ ಬಿರುದುಗಳು. (ಎಂ.ಎಸ್.ಕೆ.)

ವಾಸ್ತು ಶಿಲ್ಪ: ಭಾರತೀಯ ವಾಸ್ತುಶಿಲ್ಪದ ಚರಿತ್ರೆಯಲ್ಲಿ ಕುಷಾಣರ ಪಾತ್ರ ಮಹತ್ತರವಾದ್ದು. ಅವರ ಆಳ್ವಿಕೆಯಲ್ಲಿ ಮಥುರಾ ಮತ್ತು ಗಾಂಧಾರ ರೀತಿಯ ಶಿಲ್ಪಗಳು ಬಳಕೆಗೆ ಬಂದುವು. ಕನಿಷ್ಕ, ಹುವಿಷ್ಕ ಮತ್ತು ವಾಸುದೇವ ಇವರ ಕಾಲದಲ್ಲಿ ಮಥುರಾ ಶಿಲ್ಪ ಮತ್ತು ವಾಸ್ತುಶಿಲ್ಪ ಅತ್ಯಂತ ಉನ್ನತಮಟ್ಟಕ್ಕೇರಿದುವು. ಸುಮಾರು 5,000 ಪ್ರಾಚೀನ ಅವಶೇಷಗಳು ಮಥುರಾದಲ್ಲಿ ಸಿಕ್ಕಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಕುಷಾಣರ ಕಾಲಕ್ಕೆ ಸೇರಿದವು.

ಮಥುರಶಿಲ್ಪಗಳು ಅನೇಕ ಸ್ತೂಪಗಳನ್ನು ಭಾರ್‍ಹುತ್ ಮತ್ತು ಸಾಂಚಿಗಳಲ್ಲಿಯ ಸ್ತೂಪಗಳ ಮಾದರಿಯಲ್ಲಿ ರಚಿಸಿದರು. ಕಂಕಾಲಿ ತೀಲಾದಲ್ಲಿದ್ದ ಸ್ತೂಪವೂ ಹುವಿಷ್ಕನ ಕಾಲದ ಭೂತೇಶ್ವರದ ಮತ್ತೊಂದು ಸ್ತೂಪವೂ ನಾಶವಾಗಿದ್ದರೂ ಅವಕ್ಕೆ ಸೇರಿದ ಅನೇಕ ಭಾಗಗಳು ಉಳಿದುಬಂದಿವೆ. ಪ್ರಾಕಾರದ ಕಂಬಗಳ ಮೇಲಿನ ಶಾಲಭಂಜಿಕಾವಿಗ್ರಹಗಳನ್ನು ಅತ್ಯಂತ ನಾಜೂಕಿನಿಂದ ಕೆತ್ತಲಾಗಿವೆ. ಶಾಲವೆಂಬ ಹೂಗಳನ್ನು ಮರಗಳ ಕೆಳಗೆ ನಿಂತು ಕೀಳುತ್ತಿರುವ ಬಾಲಕಿಯರ ಶಿಲ್ಪಗಳು ಥಳುಕು ವೈಯಾರಗಳಿಂದ ಕೂಡಿದೆ. ಯುವತಿ ಅಶೋಕವೃಕ್ಷವನ್ನು ಕಾಲಿನಿಂದ ಒದೆಯುತ್ತಿರುವಂತೆ ತೋರಿಸಲಾಗಿದೆ. ವೃಕ್ಷವನ್ನು ಒದ್ದರೆ ಅದು ಹೆಚ್ಚು ಹೂ ಬಿಡುವುದೆಂಬ ನಂಬಿಕೆ ಆಗ ಇತ್ತು. ಕೆಲವು ಶಿಲ್ಪಗಳಲ್ಲಿ ಯುವತಿಯರು ಹಕ್ಕಿಗಳ ಜೊತೆಯಲ್ಲಿ ಆಡುತ್ತಿರುವಂತೆ ಕೆತ್ತಲಾಗಿದೆ. ಯುವತಿಯೊಬ್ಬಳು ಸ್ನಾನಮಾಡಿ ತನ್ನ ತಲೆಕೂದಲನ್ನು ಹಿಂಡುವಾಗ ಬೀಳುವ ನೀರನ್ನು ಕುಡಿಯಲು ಬಾಯಿಬಿಟ್ಟು ಕೊಂಡಿರುವ ಹಕ್ಕಿಯ ಶಿಲ್ಪ ಅತ್ಯಂತ ಸುಂದರವಾದ್ದು. ಯುವತಿಯರು ಉಡುಪು ಧರಿಸುತ್ತಿರುವಂತೆ ಕಂಬಗಳ ಮೇಲಿನ ಕೆಲವು ಶಿಲ್ಪಗಳಲ್ಲಿ ತೋರಿಸಲಾಗಿದೆ.

ಮಥುರಾಶಿಲ್ಪಕ್ಕೆ ಆಧಾರವಾಗಿದ್ದದ್ದು ಜಾನಪದ ಕಲೆ. ಮಣ್ಣಿನಲ್ಲಿ ಮಾಡಿದ ನಮೂನೆಗಳೆ ಅದರ ತಯಾರಿಕಾ ತಂತ್ರಕ್ಕೆ ಆಧಾರ. ಶಿಲ್ಪಗಳನ್ನು ಚುಕ್ಕಿಚುಕ್ಕಿಯಿಂದ ಕೂಡಿದ ಕೆಂಪುಮರಳುಗಲ್ಲಿನಿಂದ ಮಾಡಲಾಗಿದೆ. ಅತ್ಯಂತ ಸುಂದರಿಯರೂ ಲಾವಣ್ಯವತಿಯರೂ ಬೆಡಗುಗಾರ್ತಿಯರೂ ಆದ ಯುವತಿಯರು, ಜೈನತೀರ್ಥಂಕರರು , ಬುದ್ಧ ಮತ್ತು ಬೋಧಿಸತ್ತ್ವರನ್ನು ಮಥುರಾ ಶಿಲ್ಪದಲ್ಲಿ ಹೆಚ್ಚಾಗಿ ಕಾಣಬಹುದು. ಈ ಕಾಲದಲ್ಲಿ ಜೈನರ ಸ್ತೂಪಗಳ ಅನೇಕ ಆಯಾಗಪಟಗಳೂ ಸಿಕ್ಕಿವೆ. ಜೈನ ತೀರ್ಥಂಕರರ ಶಿಲ್ಪಗಳು ಕಾಯೋತ್ಸರ್ಗ (ನಿಡಿದೋಳು ಮೂರ್ತಿಗಳು ಬೆತ್ತಲೆಯಾಗಿ ನಿಂತಿರುವ ಭಂಗಿ) ಮತ್ತು ಪದ್ಮಾಸನಗಳಲ್ಲಿವೆ. ಪ್ರಾರಂಭಕಾಲದ ವಿಗ್ರಹಗಳಲ್ಲಿ ಮುಖ್ಯ ಶಿಲ್ಪವನ್ನು ದೊಡ್ಡ ಆಕಾರದಲ್ಲೂ ಪರಿವಾರದ ಶಿಲ್ಪಗಳನ್ನು ಸಣ್ಣವಾಗಿಯೂ ರೂಪಿಸಿ ಪರಸ್ಪರ ಪ್ರಾಮುಖ್ಯವನ್ನು ತೋರಿಸುವ ತಂತ್ರ ಬಳಕೆಯಲ್ಲಿತ್ತು. ಅನಂತರ ಕಾಲದ ಸರಳ ಲಲಿತ ನಿರೂಪಣೆ ಕಾಣಬರದೆ, ಶಿಲ್ಪಗಳು ಒರಟಾಗಿಯೂ ಭಾರವಾಗಿಯೂ ಇವೆ. ಬುದ್ಧ, ಬೋಧಿಸತ್ತ್ವರ ಶಿಲ್ಪಗಳಲ್ಲಿ ಸಹ ಪುಷ್ಟವಾದ ಬಲಾಢ್ಯದೇಹ ಮತ್ತು ಅದರಲ್ಲಿ ಅಡಕವಾದ ಅಪರಿಮಿತ ಶಕ್ತಿಯ ರೂಪಣೆಯನ್ನು ಕಾಣಬಹುದಿತ್ತಲ್ಲದೆ ಸ್ನಿಗ್ಧತೆ ಮತ್ತು ದೈವೀಶಕ್ತಿಗಳು ಕಾಣುತ್ತಿರಲಿಲ್ಲ. ನಡುವಿನಿಂದ ತಳಭಾಗದ ದೇಹ ಸೆಡೆತು ನಿಂತಿರುವಂತಿತ್ತು. ಚಲನೆಯ ಸೂಚನೆಯಿರಲಿಲ್ಲ.

ಬುದ್ಧನ ಪ್ರತಿಮೆಗಳು ಮೊಟ್ಟಮೊದಲು ಮಥುರಾಶಿಲ್ಪದಲ್ಲಿ ಬಳಕೆಗೆ ಬಂದುವು. ವಾಸುದೇವ ಅಗ್ರವಾಲರ ಅಭಿಪ್ರಾಯದಂತೆ ಮೊಟ್ಟಮೊದಲಿನ ಬುದ್ಧನ ವಿಗ್ರಹಗಳು ಕನಿಷ್ಕನ ಕಾಲಕ್ಕೆ ಸೇರಿದವು. ಕುಳಿತಿರುವ ಅಥವಾ ನಿಂತಿರುವ ಬುದ್ಧನ ತಲೆಯ ಸುತ್ತಣ ಪ್ರಭಾಮಂಡಲ ಕುಷಾಣರ ಕಾಲದಲ್ಲಿ ಬಳಕೆಗೆ ಬಂತು. ಭಿಕ್ಷುಬಲನೆಂಬ ವ್ಯಕ್ತಿ ಕನಿಷ್ಕನ ಆಳ್ವಿಕೆಯ 3ನೆಯ ವರ್ಷದಲ್ಲಿ ಬೋಧಿಸತ್ವ್ತನ ಮೂರ್ತಿಯನ್ನು (ನಿಂತ ಭಂಗಿಯಲ್ಲಿ) ಸಾರನಾಥದಲ್ಲಿ ಮಾಡಿಸಿದ. ಅವನ ಆಳ್ವಿಕೆಯ 2ನೆಯ ವರ್ಷಕ್ಕೆ ಸೇರಿದ ಮತ್ತೊಂದು ಮೂರ್ತಿ ಕೌಶಾಂಬಿಯಲ್ಲಿ ಸಿಕ್ಕಿದೆ. ಬೋಧಿಸತ್ತ್ವ ಮೈತ್ರೇಯನ ಮೂರ್ತಿ ಬಲಗೈಯ ಅಭಯಮುದ್ರೆ ಮತ್ತು ಎಡಗೈಯ ಅಮೃತಘಟದಿಂದ ಕೂಡಿ ನಿಂತಿದೆ. ವಿಮ ಕಡ್‍ಫೀಸಿಸ್ ಮತ್ತು ಕನಿಷ್ಕನ ವಿಗ್ರಹಗಳು ಈ ಶೈಲಿಗೆ ಸೇರಿದ್ದರೂ ಉದ್ದನೆಯ ನಿಲುವಂಗಿ, ಪಾದರಕ್ಷೆ ಮುಂತಾದ ಉಡುಗೆಗಳ ಮತ್ತು ವಿಗ್ರಹಗಳ ಲಕ್ಷಣಗಳಿಂದ ಮಧ್ಯ ಏಷ್ಯದ ಶಕಶಿಲ್ಪಿಗಳು ಅವನ್ನು ನಿರ್ಮಿಸಿರಬಹುದೆಂಬುದು ನಿಹಾರ್‍ರಂಜನರ ಅಭಿಪ್ರಾಯ.

ವೈದಿಕ ಮತಕ್ಕೆ ಸೇರಿದ ಬ್ರಹ್ಮ, ಸೂರ್ಯ, ವಿಷ್ಣು, ಶಿವ, ಮಹಿಷಾಸುರಮರ್ದಿನಿ ಮೊದಲಾದ ಮೂರ್ತಿಗಳು ಕುಷಾಣರ ಕಾಲದಲ್ಲಿ ಮಥುರಾದಲ್ಲಿ ನಿರ್ಮಿತವಾದವು.

ಮಥುರಾ ಶೈಲಿಯ ಶಿಲ್ಪದ ಪ್ರಭಾವ ವಿದೇಶಗಳಿಗೂ ಹರಡಿತು. ಆಘ್ಘಾನಿಸ್ತಾನದ ಬೆಗ್ರಾಂನಲ್ಲೂ ಇಟಲಿಯ ಪಾಂಪೆಯಲ್ಲೂ ಸಿಕ್ಕಿದ ದಂತದ ಕೆತ್ತನೆಯ ಕೃತಿಗಳು ಮಥುರಾಶೈಲಿಗೆ ಸೇರಿದವೆಂಬುದು ವಿದ್ವಾಂಸರ ಅಭಿಪ್ರಾಯ.

ಮಥುರಾ ಶಿಲ್ಪ ಸ್ವಲ್ಪಮಟ್ಟಿಗೆ ಗಾಂಧಾರ ಶಿಲ್ಪದ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತದೆ. ಸಿಂಹದೊಡನೆ ಹಕ್ರ್ಯುಲಿಸ್ ಹೋರಾಡುವ ಶಿಲ್ಪ ಇದಕ್ಕೊಂದು ನಿದರ್ಶನ. ಕುಬೇರನ ಶಿಲ್ಪದಲ್ಲೂ ಈ ಪ್ರಭಾವವನ್ನು ಸ್ವಲ್ಪಮಟ್ಟಿಗೆ ಕಾಣಬಹುದು. ಪಾನದಲ್ಲಿ ಪ್ರಮತ್ತರಾಗಿರುವಂತೆ ತೋರಿಸುವ ಶಿಲ್ಪಗಳು ಇದೇ ಪ್ರಭಾವದಿಂದ ಬಂದಿರಬಹುದು. ಕ್ರಮೇಣ ಇದರಲ್ಲಿಯೂ ಭಾರತೀಯತೆ ಹೆಚ್ಚಾಗುತ್ತದೆ. 1938ರಲ್ಲಿ ಸಿಕ್ಕಿದ ಬೋಗುಣಿಯೊಂದರ ತಳಭಾಗದಲ್ಲಿರುವ ಶಿಲ್ಪ ಇದಕ್ಕೆ ಒಳ್ಳೆಯ ಉದಾಹರಣೆ. ಅದರಲ್ಲಿ ಪಾನಮತ್ತಳಾದ ಯುವತಿಯೊಬ್ಬಳು ಮಂಡಿ ಊರಿಕುಳ್ಳಾದ ತನ್ನ ಸಖಿಯ ಹೆಗಲ ಮೇಲೆ ತನ್ನ ಕೈಯನ್ನು ಆಸರೆಗಾಗಿ ಇಟ್ಟುಕೊಂಡಿದ್ದಾಳೆ. ಪುರುಷನೊಬ್ಬ ಅವಳ ಬಲತೋಳನ್ನು ಹಿಡಿದುಕೊಂಡಿದ್ದಾನೆ. ಚಕಿತಳಾದ ಸ್ತ್ರೀ ಹಿಂದೆ ನಿಂತಿದ್ದಾಳೆ.

ಗಾಂಧಾರ ಪ್ರದೇಶದಲ್ಲಿ ತಕ್ಷಶಿಲ, ಪುಷ್ಕಲಾವತಿ, ಪೆಷಾವರ್ ಮತ್ತು ಕಪಿಶಾ-ಇವುಗಳಿದ್ದುವು. ಈಗ ಈ ಪ್ರದೇಶ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಲ್ಲಿ ಹಂಚಿಹೋಗಿದೆ. ತಕ್ಷಶಿಲೆಯಲ್ಲಿ ಕನಿಷ್ಕನ ಕಾಲದಲ್ಲಿ ಸಿರ್‍ಸುಕ್ ಎಂಬ ಹೊಸ ಪಟ್ಟಣವಿತ್ತೆಂಬುದು ಜಾನ್ ಮಾರ್ಷಲ್ ಕೈಗೊಂಡ ಭೂಶೋಧನೆಯಿಂದ ಗೊತ್ತಾಗಿದೆ. ತಕ್ಷಶಿಲೆಯ ಜಾಲಿಯನ್ ಸ್ತೂಪದಲ್ಲಿ ಬುದ್ಧ ಮತ್ತು ಬೋಧಿಸತ್ತ್ವರ ಶಿಲ್ಪಗಳಿವೆ. ಧರ್ಮರಾಜಿಕ ಸ್ತೂಪ ಅಲ್ಲಿಯ ಬಹಳ ದೊಡ್ಡದಾದ ಪ್ರಸಿದ್ಧ ಸ್ತೂಪ (ಕಾಬೂಲ್ ನದಿಯ ಕೆಳಗೆ). ಭೂಶೋಧನೆಯಲ್ಲಿ ಕನಿಷ್ಕ ಕಟ್ಟಿಸಿದ ಸ್ತೂಪದ ಅವಶೇಷಗಳು ಕಾಣಬಂದಿವೆ. ಅವುಗಳಲ್ಲಿ 74/3 "ದ ತಾಮ್ರದ ಕೊಳವೆಯಾಕಾರದ ಮತ್ತು ಮುಚ್ಚಳದಿಂದ ಕೂಡಿದ ಸಂಪುಟವೂ ಒಂದು. ಮುಚ್ಚಳದ ಮೇಲೆ ಬುದ್ದ, ಇಂದ್ರ, ಬ್ರಹ್ಮ ಇವರ ಮೂರ್ತಿಗಳಿವೆ. ಸಂಪುಟದ ಮೇಲಿನ ಶಾಸನದಲ್ಲಿ ಕನಿಷ್ಕನ ಮತ್ತು ಅವನ ಗ್ರೀಕ್ ಶಿಲ್ಪಿ ಅಜಶಿಲನ ಹೆಸರುಗಳಿವೆ. ಗಾಂಧಾರಶಿಲ್ಪ ಗ್ರೀಕ್ ಮತ್ತು ರೋಮನ್ ಪ್ರಭಾವದಿಂದ ಮೂಡಿಬಂತು. ಪರದೇಶದ ಪ್ರಭಾವಕ್ಕೆ ಒಳಗಾದ ಈ ಮೂರ್ತಿಗಳು ಭಾರತೀಯ ಪರಂಪರೆಗೆ ಅನುಗುಣವಾಗಿರಲಿಲ್ಲ. ಬುದ್ಧನಿಗೆ ಮೀಸೆಯಿದೆ. ರೋಮನರ ತೊಡಿಗೆಯಿದೆ. ಇವು ಅನ್ಯದೇಶಗಳ ಪ್ರಭಾವದ ಫಲ ; ಇವುಗಳ ವಸ್ತು ಮಾತ್ರ ಭಾರತೀಯ. ಬುದ್ಧನ ಭಾರಿ ಪ್ರತಿಮೆಗಳು ಗಾಂಧಾರ ಶಿಲ್ಪದಲ್ಲಿ ಉಳಿದುಬಂದಿವೆ. ಬಾಮಿಯನ್ (ಆಫ್ಘಾನಿಸ್ತಾನ) ಬಂಡೆಯಲ್ಲಿ ಕೆತ್ತಿದ ವಿಗ್ರಹದ ಎತ್ತರ 175' ಸಾಹ್ರಿಬಹಲೂಲ್‍ನಲ್ಲಿರುವ ವಿಗ್ರಹ 86' 8 ಎತ್ತರವಿದೆ. ಹಡ್ಡದಲ್ಲೂ ಬುದ್ಧನ ಅನೇಕ ಮೂರ್ತಿಗಳು ಸಿಕ್ಕಿವೆ. (ಎಸ್.ಎಂ.)