ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಪ್ಪ ಕೆ ವಿ

ವಿಕಿಸೋರ್ಸ್ದಿಂದ

ಕೆ.ವಿ.ಪುಟ್ಟಪ್ಪ : - ೧೯೦೪-೯೪ . ಕುವೆಂಪು ಎಂಬ ಕಾವ್ಯನಾಮದಿಂದ ರಾಷ್ಟ್ರೀಯ ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ ಕನ್ನಡ ಕವಿ, ರಾಷ್ಟ್ರ ಕವಿ, ಕನ್ನಡದ ವರ್ಡ್ಸವರ್ತ್. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಮೊದಲ ಕನ್ನಡಿಗ.

ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪ ಎಂಬುದು ಇವರ ಪೂರ್ಣ ಹೆಸರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಸೇರಿದ್ದ ಕುಪ್ಪಳ್ಳಿ ತಂದೆಯ ಊರು. ಹುಟ್ಟಿದ್ದು ತಾಯಿಯ ಊರಾದ ಹಿರಿಕೊಡುಗೆಯಲ್ಲಿ, 1904ರ ಡಿಸೆಂಬರ್ 29ರಂದು. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ.

ಪ್ರಾಥಮಿಕ ವಿದ್ಯಾಭ್ಯಾಸ ದಕ್ಷಿಣ ಕನ್ನಡ ಜಿಲ್ಲೆಯ ಐಗಳ ಮಠದಲ್ಲಾಯಿತು. ಮನೆಯಲ್ಲಿ ಸಾಗುತ್ತಿದ್ದ ರಾಮಾಯಣ ಮಹಾಭಾರತಗಳ ವಚನ, ಊರಲ್ಲಿನ ಭಾಗವತರಾಟಗಳು ಇವರ ಮೇಲೆ ದಟ್ಟ ಪ್ರಭಾವ ಬೀರಿದವು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ಜೊತೆಯಲ್ಲೇ ಬೇಟೆಯ ಆಸಕ್ತಿಯೂ ಚಿಗುರಿತು. ತರಗತಿಗಿಂತ ಅದರ ಹೊರಗೆ ಕಲಿತಿದ್ದೇ ಹೆಚ್ಚು. ಮಲೆನಾಡಿನ ಪ್ರಕೃತಿ ಸೌಂದರ್ಯ ಗಾಂಭೀರ್ಯ ಜನಜೀವನಗಳು ಎಳೆಯ ಮನಸ್ಸಿನ ಮೇಲೆ ಅಚ್ಚೊತ್ತಿ ನಿಂತವು. 1916ರಲ್ಲಿ ತಂದೆ ತೀರಿಕೊಂಡರು. 1920ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರಿಯಿತು. ಸಾಹಿತ್ಯಾಸಕ್ತಿ ವ್ಯಾಪಕವಾಗಿ ಬೆಳೆಯಿತು.

ಪಾಶ್ಚಾತ್ಯ ಸಾಹಿತ್ಯದ ಪ್ರಮುಖ ಕವಿಗಳಾದ ವಡ್ರ್ಸ್‍ವರ್ತ್, ಷೆಲ್ಲಿ, ಟಾಲ್‍ಸ್ಟಾಯ್ ಮೊದಲಾದವರನ್ನು ಮಿಲ್ಟನ ಕವಿಯನ್ನೂ ಓದಿ ವಿಶ್ವಸಾಹಿತ್ಯದ ದಿವ್ಯ ಪ್ರಭಾವಕ್ಕೊಳಗಾದರು. ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣ ಪರಮಹಂಸರಿಂದಾಗಿ ಹಿಂದೂ ಧರ್ಮದ ಮೇಲೆ ಅಪಾರವಾಗಿ ಅನುರಾಗ ಬೆಳೆಯಿತು. ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಪ್ರಭಾವಕ್ಕೊಳಗಾದರು.

ಪ್ರೌಢಶಾಲೆಯ ಮೂರನೆಯ ತರಗತಿಯಲ್ಲಿದ್ದಾಗ ಪದ್ಮಪತ್ರದ ಸಂಘವನ್ನು ಸ್ಥಾಪಿಸಿ (1921) ಅದರ ಆಶ್ರಯದಲ್ಲಿ ಕಾವ್ಯ ವಿಮರ್ಶೆ, ವಿವೇಕಾನಂದರ ಕೃತಿಗಳ ಬಗ್ಗೆ ಚರ್ಚೆ ಮತ್ತು ವ್ಯಾಸಂಗಗೋಷ್ಠಿಗಳನ್ನು ನಡೆಸಿದರು. ಅದೇ ಸಮಯದಲ್ಲಿ ರಾಮಕೃಷ್ಣಾಶ್ರಮದ ಸಂಪರ್ಕ ಬೆಳೆಯಿತು. ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಶ್ರೇಷ್ಠ ಇಂಗ್ಲಿಷ್ ಕವನಗಳನ್ನು ಅನುಸರಿಸಿ, ಇಂಗ್ಲಿಷ್‍ನಲ್ಲಿ ಅನೇಕ ಕವನಗಳನ್ನು ರಚಿಸಿ, ಬಿಗಿನರ್ಸ್ ಮ್ಯೂಸ್ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು (1921). ಇವರಿಗಿದ್ದ ಅಪಾರವಾದ ಇಂಗ್ಲಿಷ್ ವ್ಯಾಮೋಹವನ್ನು ಬಿಡಿಸಿ ಕನ್ನಡದ ಬಗ್ಗೆ ಆಸ್ಥೆ ಹುಟ್ಟಿಸಿದವರು ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರು. ಮುಂದೆ ಕುವೆಂಪು ಕನ್ನಡದಲ್ಲಿ ಕಾವ್ಯ ರಚನೆಗೆ ತೊಡಗಿದರು. 1921ರಲ್ಲಿ ಗೋವಿನ ಹಾಡಿನ ದಾಟಿಯಲ್ಲಿ ರಚಿತವಾದ ಅಮಲನ ಕಥೆ ಪ್ರಕಟವಾಯಿತು. 1923ರಲ್ಲಿ ತಾಯಿ ತೀರಿಕೊಂಡರು. ಬಿ.ಎ. ಓದಲು ಮಹಾರಾಜ ಕಾಲೇಜಿಗೆ ಸೇರಿದಾಗ (1924) ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣಶಾಸ್ತ್ರಿಗಳ ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಮತ್ತು ಮಾರ್ಗದರ್ಶನಗಳು ಲಭ್ಯವಾದವು. ಇಂಗ್ಲಿಷ್ ಕವನಗಳನ್ನು ಆಧರಿಸಿ ವಿವಿಧ ಲಯಗಳಲ್ಲಿ ಕನ್ನಡ ಕವಿತೆಯನ್ನು ರಚಿಸಿದರಲ್ಲದೆ ಬಿ.ಎ. ತರಗತಿಯಲ್ಲಿದ್ದಾಗಲೇ ಪ್ರಸಿದ್ಧ ಕೃತಿ ಕಿಂದರ ಜೋಗಿ ಪ್ರಕಟವಾಯಿತು. ರಾಬರ್ಟ್ ಬ್ರೌನಿಂಗ್ ಮಹಾಕವಿಯ ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್ ಎಂಬ ಮಕ್ಕಳ ಕಥನ ಕವನ ಇದಕ್ಕೆ ಪ್ರೇರಣೆಯೊದಗಿಸಿದರೂ ಇದು ಅದರ ತದ್ವತ್ ಅನುವಾದವಲ್ಲ. ಸ್ವತಂತ್ರ ಸುಂದರ ಕನ್ನಡ ಕವನ. ಇದರ ಪ್ರಕಟಣೆಯಿಂದಾಗಿ 1926ರ ಹೊತ್ತಿಗಾಗಲೇ ಕನ್ನಡ ನಾಡಿನಲ್ಲೆಲ್ಲ ಮನೆಮಾತಾದರು. 1928ರಲ್ಲಿ ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷರಾದರು. 1936ರ ಏಪ್ರಿಲ್ ತಿಂಗಳಲ್ಲಿ ದೇವಾಂಗಿಯ ರಾಮಣ್ಣಗೌಡರ ಮಗಳು ಹೇಮಾವತಮ್ಮನವರನ್ನು ಮದುವೆಯಾದರು. ಹದುಳ ಸಂಸಾರದ ಸಂಸ್ಕಾರದಿಂದಾಗಿ ಪ್ರೇಮ ಕಾಶ್ಮೀರ, ಜೇನಾಗುವ, ಚಂದ್ರ ಮಂಚಕೆ ಬಾ ಚಕೋರಿಯಂಥ ಉನ್ನತ ಮಟ್ಟದ ಶೃಂಗಾರಗೀತೆಗಳ ಸಂಕಲನಗಳೂ ಹೊರಬಂದವು : ಪೂರ್ಣಚಂದ್ರ ತೇಜಸ್ವಿ ಕೋಕಿಲೋದಯ ಚೈತ್ರ ಇವರ ಗಂಡು ಮಕ್ಕಳು : ಇಂದುಕಲಾ ಮತ್ತು ತಾರಿಣಿ ಹೆಣ್ಣು ಮಕ್ಕಳು. ಮದುವೆಗೆ ಮೊದಲೇ ಮಹಾ ಕಾದಂಬರಿ ಕಾನೂರು ಹೆಗ್ಗಡತಿ ಪ್ರಕಟವಾಗಿತ್ತು. ತರುವಾಯ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಪ್ರಕಟವಾಯಿತು. ಕುವೆಂಪು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನಬೋಧನೆ ಮಾಡಿದ್ದಲ್ಲದೆ 1955 ರಲ್ಲಿ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿಯೂ ಕಾರ್ಯನಿರ್ವಹಿಸಿದರು. 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡರು. ಅದೇ ವೇಳೆ ಇಂಟರ್‍ಮೀಡಿಯೆಟ್ ಹಂತದಲ್ಲಿ ಮೊದಲ ಬಾರಿಗೆ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲಾಯಿತು. ಮಾನಸ ಗಂಗೋತ್ರಿ ಅಸ್ತಿತ್ವಕ್ಕೆ ಬಂತು. ಈಗ ಅದು ಪ್ರಪಂಚದ ಒಂದು ಪ್ರಮುಖ ಆಕರ್ಷಕ ವಿದ್ಯಾಕೇಂದ್ರವಾಗಿ ಬೆಳೆದಿದೆ. ವಿಶ್ವವಿದ್ಯಾನಿಲಯದ ಕಾರ್ಯಕಲಾಪಗಳನ್ನು ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗ ಎಂದು ವಿಭಜಿಸಿ ಹೊಸ ಚೈತನ್ಯವನ್ನು ತುಂಬಲಾಯಿತು. ಭೂದಾನದ ಮಹಾಪ್ರವರ್ತಕ ಆಚಾರ್ಯ ವಿನೋಬಾಜಿ 1957ರ ಸೆಪ್ಟಂಬರ್ 9 ರಂದು ಕುವೆಂಪು ಅವರ ಮನೆಗೆ ಬಂದರಲ್ಲದೆ ಅದೇ ದಿನ ಸಂಜೆ ಮೈಸೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತ ಕುವೆಂಪು ಅವರು ಸಾಂಸ್ಕøತಿಕ ಸಾಮ್ರಾಜ್ಯದ ಸಾಮ್ರಾಟರೆಂದೂ, ಆಧುನಿಕ ವಾಲ್ಮೀಕಿಗಳೆಂದೂ ಅವರ ಶ್ರೀ ರಾಮಾಯಣ ದರ್ಶನಂ ಈ ಯುಗದ ಮಹಾಕಾವ್ಯವೆಂದೂ ಪ್ರಶಂಸಿಸಿದರು. ಇದೇ ವರ್ಷ ಕುವೆಂಪು ಅವರು ಧಾರವಾಡದಲ್ಲಿ ನಡೆದ 39 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಹಿತ್ಯಿಕ ಮತ್ತು ಶೈಕ್ಷಣಿಕ ಸೇವೆಗಾಗಿ 1958ರ ಜನವರಿ ತಿಂಗಳಲ್ಲಿ ರಾಷ್ಟ್ರಪತಿಗಳು ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದರು.

ಕುವೆಂಪು ಅವರು ಕನ್ನಡ ನಾಡುನುಡಿಗಳ ಏಳಿಗೆಗಾಗಿ ಸತತವಾಗಿ ಹೋರಾಟ ನಡೆಸಿದರು. ಛಿದ್ರವಾಗಿದ್ದ ಕನ್ನಡ ನಾಡು ಒಂದುಗೂಡಬೇಕು. ಅದಕ್ಕೆ ಕರ್ನಾಟಕವೆಂದು ಹೆಸರಾಗಬೇಕು, ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು, ಅದೇ ಆಡಳಿತ ಭಾಷೆಯೂ ಆಗಬೇಕು ಎಂಬುವುದಾಗಿ ಬರಹದಲ್ಲಿ ಭಾಷಣದಲ್ಲಿ ಘೋಷಿಸಿದರು. ಅಲ್ಲದೆ, ಕುಲಪತಿಯಾಗಿದ್ದಾಗ ಕನ್ನಡವನ್ನು ಕಾಲೇಜು ಮಟ್ಟದಲ್ಲಿ ಶಿಕ್ಷಣ ಮಾಧ್ಯಮ ಮಾಡಿದರು. ಬಹುಭಾಷೆಯಲ್ಲಿ ದ್ವಿಭಾಷೆ ಎಂಬುದು ಇವರ ಸೂತ್ರ. ಈ ಸೂತ್ರವನ್ನು ಅಂಗೀಕರಿಸಿದರೆ ಮಾತ್ರ ಕನ್ನಡದ (ಅಥವಾ ಯಾವುದೇ ಪ್ರಾಂತ ಭಾಷೆಯ) ಉಳಿವು, ಏಳಿಗೆ ಸಾಧ್ಯ ಎಂದವರು ಸಾರಿ ಹೇಳಿದರು.

ಕುವೆಂಪು ಅವರ ಸಾಹಿತ್ಯ ಸೃಷ್ಟಿ ಬೆರಗುಗೊಳಿಸುವಂಥದು. ಸಾಹಿತ್ಯದ ಸರ್ವ ಪ್ರಾಕಾರಗಳೂ ಅವರ ಲೇಖನಿಯಿಂದ ಪ್ರಭೆಗೊಂಡಿವೆ. ಕಾವ್ಯ, ಕತೆ, ಕಾದಂಬರಿ, ನಾಟಕ, ಚಲನಚಿತ್ರ, ಮಹಾಕಾವ್ಯ ಮುಂತಾದ ನಾನಾ ಪ್ರಾಕಾರಗಳಲ್ಲಿ ಇವರ ಸಾಧನೆ ಉನ್ನತವಾಗಿದೆ. ಪ್ರತಿಭೆ ಪಾಂಡಿತ್ಯ ಮತ್ತು ವ್ಯಾಪಕವಾದ ಜೀವಾನಾನುಭವಗಳ ಬೆಳಕಿನಲ್ಲಿ ಇವರ ಕೃತಿಗಳು ಕಾಂತಿಗೊಂಡಿವೆ.

ಕುವೆಂಪು ಅವರು ಮೂಲತಃ ಕವಿ. ಇವರ ಯಾವುದೇ ಸಾಹಿತ್ಯ ಪ್ರಾಕಾರ ಇದನ್ನು ಸಮರ್ಥಿಸುತ್ತದೆ. ಇವರ ಸುಮಾರು ಅರವತ್ತೆಂಟು ಕೃತಿಗಳ ಪೈಕಿ ಮೂವತ್ತೆಂಟು ಕಾವ್ಯ ವಲಯಕ್ಕೆ ಸೇರುತ್ತವೆ. ಅಮಲನ ಕಥೆಯಿಂದ ಹಿಡಿದು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದವರೆಗೆ ಇವರ ಕಾವ್ಯವಾಹಿನಿ ವಿವಿಧ ಗತಿಗಳಲ್ಲಿ ವಿವಿಧ ರೀತಿಯಲ್ಲಿ ಪ್ರವಹಿಸಿದೆ. ಕಲೆ ಜೀವನ ತತ್ತ್ವ ಆಧ್ಯಾತ್ಮ ಪ್ರೀತಿ ರತಿದೇವರು ನಾಡುನುಡಿ ವಿಜ್ಞಾನ ಪುರಾಣ ಇತಿಹಾಸ ಸಾಹಿತ್ಯ ಮೀಮಾಂಸೆಗೆ ಹೀಗೆ ಎಲ್ಲವೂ ಇವರ ಕಾವ್ಯ ಚಿಂತನೆಗೆ ವಸ್ತುವಾಗಿವೆ. ಕೊಳಲು, ನವಿಲು, ಪಾಂಚಜನ್ಯ, ಕಲಾಸುಂದರಿ, ಕೃತ್ತಿಕೆ, ಕಿಂಕಿಣಿ, ಕಬ್ಬಿಗನ ಕೈಬುಟ್ಟಿ, ಪ್ರೇತಕ್ಯೂ, ಇಕ್ಷುಗಂಗೋತ್ರಿ ಮುಂತಾದ ಕವನ ಸಂಕಲನಗಳಲ್ಲಿ ನಾವಿದನ್ನು ಕಾಣಬಹುದಾಗಿದೆ.

ಜೀವನದ ನಾನಾ ವ್ಯಾಪಾರಗಳು ಇವರ ಅಂತಃಚಕ್ಷುವಿನಿಂದ ಆವಿಷ್ಕಾರಗೊಂಡು ಹೊಸಹೊಸ ಅರ್ಥಗಳನ್ನೂ ಹೊಮ್ಮಿಸುತ್ತವೆ. ಭಾವದ ಉನ್ಮಾತ್ತಾವಸ್ಥೆಯ ಶ್ರೇಷ್ಠತಮ ಅಭಿವ್ಯಕ್ತಿಯಲ್ಲೂ ಗಾಢವಾದ ಜೀವನ ಶ್ರದ್ಧೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿರುವುದು ಕುವೆಂಪು ಕಾವ್ಯದ ವಿಶೇಷವಾಗಿದೆ. ಅನುಭವದ ಸಂಕೀರ್ಣತೆ ಅಭಿವ್ಯಕ್ತಿಯ ಸಂಕೀರ್ಣತೆಗೆ ಮೀಟುಗೋಲಾಗಿ ಇವರ ಸಾಹಿತ್ಯ ನಾನಾ ರೀತಿಯಲ್ಲಿ ಬಣ್ಣಗೊಂಡಿದೆ. ವಿಮರ್ಶಕರೊಬ್ಬರ ಮಾತಿನಲ್ಲಿ ಹೇಳುವುದಾದರೆ ಇವರು ಪಾಶ್ಚಾತ್ಯ ಸಾಹಿತ್ಯಕ್ಕೆ ಒಂದು ಸವಾಲು. ಅಲ್ಲಿಯ ಅನೇಕಾನೇಕ ಕಾವ್ಯ ಪ್ರಾಕಾರಗಳನ್ನು ಕನ್ನಡಕ್ಕೆ ತಂದವರು ಇವರು. ಆಧುನಿಕ ಸಾಹಿತ್ಯಗಳಲ್ಲಿ ಇವರಷ್ಟು ವೈವಿಧ್ಯವನ್ನು, ವ್ಯಾಪಕತೆಯನ್ನು ಕನ್ನಡಕ್ಕೆ ತಂದುಕೊಟ್ಟವರು ಯಾರೂ ಇಲ್ಲ. ಇವರ ಸಾಹಿತ್ಯದ ಬಾಹ್ಯ ರೂಪಾಂಶಕ್ಕೆ ಪಾಶ್ಚಾತ್ಯ ಸಾಹಿತ್ಯಿಕ ಆಕಾರಗಳು ತಕ್ಕ ಮಟ್ಟಿಗೆ ಆಕಾರಗಳಾಗಿದ್ದರೂ ಭಾರತೀಯ ಬದುಕಿನ ಸಾಂಸ್ಕøತಿಕ ಹಿನ್ನಲೆ ಅದರ ಜೀವಶಕ್ತಿ ಎಂಬುದನ್ನು ಮರೆಯುವಂತಿಲ್ಲ.

ವೈಚಾರಿಕತೆ ಇವರ ಸಾಹಿತ್ಯದ ಸಂಜೀವಿನಿಯಾಗಿದೆ. ಇವರು ಮೌಢ್ಯದ ವಿರುದ್ಧವಾಗಿ ಸಿಡಿದು ಸಿಡಿಲಾದದ್ದು ಗಮನಾರ್ಹವಾದ ಅಂಶ. ಇವರ ಬಹುಪಾಲು ಕವನಗಳು ವಿಚಾರ ಪರಿಪ್ಲುತವಾಗಿವೆ. ಅಂಧಶ್ರದ್ಧೆಯ ಗೊಂಡಾರಣ್ಯದಿಂದ ಪಾರಾಗಿ ವಿಚಾರಬುದ್ಧಿಯನ್ನು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕೆಂಬ ಕಳಕಳಿ ಇವರ ಬಹಳಷ್ಟು ಕವನಗಳಲ್ಲಿ ವ್ಯಕ್ತವಾಗಿದೆ. ಜಾತಿ ಮತ ಪಂಥ ಗುಂಪು ವರ್ಗವ್ಯವಸ್ಥೆ ಮುಂತಾದ ಸಂಕುಚಿತ ದೃಷ್ಟಿಯ ನಾನಾ ಅಡ್ಡಗೋಡೆಗಳನ್ನು ಕೆಡವಿ, ಅಜ್ಞಾನದ ಕತ್ತಲೆಯನ್ನು ಭೇದಿಸಿಕೊಂಡು ಹೊರಬಂದು ಮಾನವ ಮತವನ್ನು ಹಿಡಿದು ವಿಶ್ವಪಥಕ್ಕೆ ನಡೆಯಬೇಕೆಂಬ ಹಿರಿಯ ಸಂದೇಶ ಇವರದು. ಕಲ್ಕಿ, ನನ್ನ ದೇವರು, ಕೋಗಿಲೆ ಮತ್ತು ಸೋವಿಯಟ್ ರಷ್ಯ, ಗೊಬ್ಬರ, ಪಾಂಚಜನ್ಯ ಮುಂತಾದ ಕವನಗಳನ್ನು ಇಲ್ಲಿ ನಡೆಯಬಹದು.

ಪ್ರಕೃತಿಯನ್ನು ಕುರಿತ ಇವರ ಕವನಗಳು ಕನ್ನಡದ ಕಾವ್ಯಕ್ಷೇತ್ರವನ್ನು ವಿಸ್ತರಿಸಿವೆ. ಕವಿ ಮತ್ತು ಪ್ರಕೃತಿಯ ನಿಕಟ ಸಂಬಂಧ, ಪ್ರಕೃತಿಯಲ್ಲಿ ಪಡೆಯುವ ತನ್ಮಯತೆ, ಅಲ್ಲಿ ಗುರುತಿಸುವ ಸೌಂದರ್ಯ, ಅದರಲ್ಲೇ ಭಗವಂತನನ್ನು ಕಾಣುವ ಮನೋಭಾವ ಇವು ಗಮನಾರ್ಹ. ಪ್ರಕೃತಿಯ ರೂಕ್ಷತೆಯನ್ನಾಗಲೀ, ಲಾಲಿತ್ಯವನ್ನಾಗಲೀ ಕಂಡಾಗಲೆಲ್ಲ ಕವಿಚೇತನ ಸಂಭ್ರಮಗೊಳ್ಳುತ್ತದೆ ; ತತ್ಪರಿಣಾಮವಾಗಿ ಕವನಗಳಲ್ಲಿ ಸಡಗರ ಮತ್ತು ಲವಲವಿಕೆ ಕಂಡುಬರುತ್ತವೆ. ಗೀತೆಗಳ ನಡಗೆ ಸಹಜ ಸುಂದರ. ಮೊದಮೊದಲು ಶಿಶುಸಹಜವಾದ ಮುಗ್ಧತೆಯಿಂದ ಪ್ರಕೃತಿಯನ್ನು ಕಂಡ ಕವಿ ಮುಂದೆ ಕ್ರಮ ಕ್ರಮವಾಗಿ ಆಧ್ಯಾತ್ಮಿಕ ಪ್ರೇಮರಹಸ್ಯದಿಂದ ಅದನ್ನು ದರ್ಶಿಸುತ್ತಾರೆ. ಚಿನ್ನದ ಚೆಂಡೆನೆ ಮೂಡುವ ಸೂರ್ಯ ಕವಿಯ ಪಾಲಿಗೆ ಸರ್ವೇಂದ್ರೀಯ ಸುಖನಿಧಿಯಾಗಿ, ಸರ್ವಾತ್ಮನ ಸನ್ನಿಧಿಯಾಗಿ ಕಂಡುಬರುತ್ತಾನೆ. ಬೆಳ್ಳಕ್ಕಿಗಳ ಹಾರುವಿಕೆ ದೇವರು ರುಜು ಮಾಡಿದಂತೆ ಕವಿಗೆ ಭಾಸವಾಗುತ್ತದೆ. ಅರಿಯುವಿಕೆಗಿಂತ ಇರುವಿಕೆಯ ಸುಖವನ್ನು ಪಡೆಯಬೇಕೆಂಬುದು ಕವಿಯ ಸಂದೇಶ. ಕನ್ನಡದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಸಾಹಿತ್ಯದಲ್ಲಿ ಕುವೆಂಪು ಅವರ ಹಾಗೆ ಪ್ರಕೃತಿಯನ್ನು ಸಾಹಿತ್ಯ ಶರೀರದ ಒಂದು ಅವಿಭಾಜ್ಯ ಅಂಗವಾಗಿ ರೂಪಿಸಿದ ಮತ್ತೊಬ್ಬ ಕವಿ ಕಂಡುಬರುವುದಿಲ್ಲ. ಕೆಲವರು ಕುವೆಂಪು ಅವರನ್ನು ಪ್ರಕೃತಿ ಕವಿಯೆಂದೇ ನಾಮಕರಣ ಮಾಡುವುದು ಸರಿಯಾಗಿ ಕಾಣುವುದಿಲ್ಲ. ಏಕೆಂದರೆ ಹೆಚ್ಚು ಸಂಖ್ಯೆಯ ಬೇರೆ ಬಗೆಯ ಭಾವನಾಂಶಗಳನ್ನುಳ್ಳ ಸಾರ್ಥಕ ಕವನಗಳನ್ನು ರಚಿಸಿದ್ದಾರೆ.

ಕುವೆಂಪು ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಅವನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ನಾಟಕಗಳೆಂದು ವಿಭಾಗಿಸಬಹುದು. ಅವುಗಳಲ್ಲಿ ಜಲಗಾರ, ಬೆರಳ್ಗೆ ಕೊರಳ್, ಶ್ಮಶಾನ, ಕುರುಕ್ಷೇತ್ರ, ಶೂದ್ರ ತಪಸ್ವಿ ನಾಟಕಗಳು ತುಂಬ ಮಹತ್ವದ ಕೃತಿಗಳಾಗಿವೆ. ಸಂಪ್ರದಾಯ ಜಡವಾದ ಅಂಧ ಸಮಾಜದಲ್ಲಿ ಕರ್ಮಯೋಗಿ ಜಲಗಾರನ ವ್ಯಕ್ತಿತ್ವ ಆದರ್ಶಪ್ರಾಯವಾಗಿದೆ. ನಿಸರ್ಗದ ಬಯಲು ವೇದಿಕೆಯಲ್ಲಿ ಕಾಯಕವೇ ಕೈಲಾಸ ಎಂಬ ತತ್ತ್ವ ಪ್ರತಿಮಾರೂಪವನ್ನು ಪಡೆದುಕೊಂಡಿದೆ. ಅನೀತಿ ಅಧರ್ಮ ಮತ್ತು ಜಾತಿ ಮತಾಂಧತೆಯಿಂದ ಕೆಸರಾದ ಸಾಮಾಜಿಕ ಪರಿಸರವೊಂದನ್ನು ಪ್ರತಿಮಾರೂಪದ ಕಲಾಮಾಧ್ಯಮದಿಂದ ಮೊದಲ ಬಾರಿಗೆ ಯಶಸ್ವಿಯಾಗಿ ರಂಗಭೂಮಿಯ ಮೇಲೆ ತಂದು ಜನಮನದ ಮೇಲೆ ತೀವ್ರವಾದ ಪರಿಣಾಮವನ್ನು ಕವಿ ಉಂಟು ಮಾಡಿದ್ದಾರೆ. ನನಗೇಕೆ ಶಿವಗುಡಿಯ ಯಾತ್ರೆ, ಕರ್ಮವೇ ಆರಾಧನೆ, ಸೇವೆಯೇ ಪೂಜೆ, ಪೊರಕೆ ಎನ್ನ ಭಾಗದ ಆರತಿ, ಗುಡಿಸುವುದೇ ನನ್ನ ದೇವರ ಪೂಜೆ ಎನ್ನುವ ಜಲಗಾರನ ಮಾತಿನಲ್ಲಿ ಕರ್ಮ ಸುಧಾರಣೆ ಮತ್ತು ಪ್ರಗತಿ ದೃಷ್ಟಿಯಿದೆ. ಶೂದ್ರತಪಸ್ವಿ ನಾಟಕದಲ್ಲಿ ಪುರಾಣದ ವಸ್ತುವನ್ನು ಒಪ್ಪಿಕೊಂಡು ಅಲ್ಲಿನ ಮೌಢ್ಯವನ್ನು ತಿರಸ್ಕರಿಸಲಾಗಿದೆ. ತಪಸ್ಸು ಮಹಿಮಾಪೂರ್ಣವಾದುದು ; ಅದಕ್ಕೆ ಜಾತಿಮತದ ಸೋಂಕಿಲ್ಲ. ಅದು ಯಾರಲ್ಲಿದ್ದರೂ ಪೂಜನೀಯ ಎಂಬುದನ್ನು ತಿಳಿಸುವ ಈ ನಾಟಕ ತುಂಬ ವಿಚಾರ ಪ್ರಚೋದಕವಾಗಿದೆ. ಆಧುನಿಕವಾಗಿದೆ. ಬೆರಳ್ಗೆ ಕೊರಳ್ ಕನ್ನಡ ನಾಟಕ ಸಾಹಿತ್ಯದ ದೊಡ್ಡ ಸಿದ್ಧಿಗಳಲ್ಲಿ ಒಂದು. ಪೂರ್ಣ ದೃಷ್ಟಿಯಿಂದ ಕೂಡಿ ದರ್ಶನದೀಪ್ತವಾಗಿರುವ ಈ ನಾಟಕ ತುಂಬ ವಿಚಾರ ಪ್ರಚೋದಕವಾಗಿದೆ. ಗುರುತತ್ವ, ಕರ್ಮತತ್ವ ಮತ್ತು ಯಜ್ಞತತ್ವಗಳಲ್ಲಿ ಕಾಣಬಹುದು. ಅರ್ಜುನನ ಮತ್ಸರಾಗ್ನಿಯ ಫಲವಾಗಿ ಏಕಲವ್ಯನ ಬೆರಳು ಗುರು ದ್ರೋಣರಿಗೆ ಆಹುತಿಯಾಗುತ್ತದೆ. ಅದರ ಫಲವಾಗಿ ದ್ರೋಣರ ಕೊರಳು ಬಲಿಯಾಗುತ್ತದೆ. ಕರ್ಮದ ಪಾಂಗು ಮರಿಗೆ ಮರಿ, ಮರಿಗೆ ಮರಿಯಾಗಿ ಪರಿಣಮಿಸುತ್ತದೆ. ಶ್ಮಶಾನ ಕುರುಕ್ಷೇತ್ರಂ ನಾಟಕವನ್ನು ಅ.ನ.ಕೃ. ಮಹಾನಾಟಕ ಎಂದು ಕರೆದಿದ್ದಾರೆ. ಕುರುಕ್ಷೇತ್ರ ಭೂಮಿಯಲ್ಲಿ ಮಹಾಭಾರತದ ಯುದ್ಧಾನಂತರ ಕಂಡುಬರುವ ಭೀಕರ ಚಿತ್ರ ಇಲ್ಲಿನ ವಸ್ತು. ಯುದ್ಧದಿಂದಾಗುವ ಅನರ್ಥ ಪರಂಪರೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ವಸ್ತು ಪೌರಾಣಿಕವಾದರೂ ಅದಕ್ಕಿಂತ ಭಿನ್ನವಾದ ಹೊಸ ವಿಷಯಗಳು ಇದರಲ್ಲಿ ಕಂಡುಬರುತ್ತವೆ. ನಾಶವೆಲ್ಲ ನವಸೃಷ್ಟಿಗೆ ನಾಂದಿಯೆಂಬುದು ಇಲ್ಲಿನ ತತ್ತ್ವ. 1931ರಲ್ಲಿ ರಚಿತವಾದುದ್ದಾದರೂ ಈ ನಾಟಕದಲ್ಲಿ ಕವಿ ಕಾಣುವ ಭವಿಷ್ಯ ಗಮನಾರ್ಹ. ಸಾರ್ವಭೌಮತ್ವ ಭಂಗಂ ಸ್ವತಂತ್ರ ಭಾರತ ರಂಗಂ, ಸರ್ವಪ್ರಜಾಧಿಪತ್ಯಂ, ಸರ್ವಸಮತ್ವಂ, ಜಗತ್‍ಕಲ್ಯಾಣಂ ಎಂಬಲ್ಲಿ ಈ ಕವಿಗಿರುವ ಸ್ವಾತಂತ್ರ್ಯ ಪ್ರಜ್ಞೆ ಮತ್ತು ಸರ್ವೋದಯ ದೃಷ್ಟಿಯನ್ನು ಗಮನಿಸಬಹುದಾಗಿದೆ.

ಚಿಂತನೆ, ದರ್ಶನ, ವಾಸ್ತವತೆ ಮತ್ತು ಋಜುಮಾರ್ಗಗಳಿಂದಾಗಿ ಕುವೆಂಪು ಆವರ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ಬೆಳಕಾಗಿವೆ. ಅಂಧಶ್ರದ್ಧೆ, ಕಂದಾಚಾರ, ವರ್ಣವಿದ್ವೇಷ ಮೊದಲಾದ ಸಾಮಾಜಿಕ ರೋಗಗಳಿಗೆ ಅವರು ತಮ್ಮ ನಾಟಕಗಳಲ್ಲಿ ಮದ್ದು ಮಾಡಿ ಆಧುನಿಕತೆಯನ್ನು ಮೆರೆದಿದ್ದಾರೆ. ಪುರಾಣದ ಹಳೆಯ ತತ್ತ್ವಾಯುಧಗಳಿಗೆಲ್ಲ ವಿಜ್ಞಾನ ಯುಗದ ಹೊಸ ಸಾಣೆ ಹಿಡಿದಿದ್ದಾರೆ. ಪ್ರಕೃತಿ ಹಿನ್ನೆಲೆಯಾಗಿ ನಿಲ್ಲುವುದು ಮಾತ್ರವಲ್ಲದೆ ಪಾತ್ರವೂ ಆಗಿ ಬರುವುದು ಇಲ್ಲಿನ ಮತ್ತೊಂದು ವಿಶೇಷ. ರಸವತ್ತಾದ ಕಥಾಭಾಗಗಳು, ವಿನೂತನ ಕಲ್ಪನೆ, ಉತ್ತಮ ಸಂವಿಧಾನ, ಮನಮುಟ್ಟುವ ಸಂಭಾಷಣೆ, ಪಾತ್ರಗಳ ಜೀವಂತಿಕೆ, ಸಮಕಾಲೀನ ಪ್ರಜ್ಞೆ ಮುಂತಾದ ಅಂಶಗಳಿಂದ ಕುವೆಂಪು ಅವರ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ಅರ್ಹವಾಗಿದೆ.

ವಿಮರ್ಶೆ ಮತ್ತು ಕಾವ್ಯ ಮೀಮಾಂಸೆಯ ಕ್ಷೇತ್ರದಲ್ಲೂ ಕುವೆಂಪು ಅವರ ಸ್ವಂತ ಕೊಡುಗೆ ದೊಡ್ಡದಾಗಿಯೇ ಇದೆ. ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ತತ್ತ್ವಗಳನ್ನು ಮೊದಲಿಗೆ ಕನ್ನಡಕ್ಕೆ ತಂದುದಲ್ಲದೆ ಪ್ರತಿಮಾ, ಪ್ರಕೃತಿ, ದರ್ಶನಾ ವಿಮರ್ಶೆ ಮೊದಲಾದ ಮಾರ್ಗಗಳನ್ನು ಅವರು ತೆರೆದರು. ರಸೋವೈಸ: ವಿಭೂತಿಪೂಜೆ, ತಪೋನಂದನ, ದ್ರೌಪದಿಯ ಶ್ರೀಮುಡಿ, ಸಾಹಿತ್ಯ ಪ್ರಚಾರ ಮತ್ತು ಇತರ ಭಾಷಣಗಳು - ಈ ಕೃತಿಗಳು ಗಮನಾರ್ಹವಾಗಿವೆ. ಅವರ ಕಾವ್ಯಗಳಲ್ಲಿಯೂ ಕಾವ್ಯ ಮೀಮಾಂಸೆ ಸುಂದರವಾಗಿ ವ್ಯಕ್ತಗೊಂಡಿವೆ.

ಚಿತ್ರಾಂಗದಾ ಕಾವ್ಯ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮೊದಲ ಮೆಟ್ಟಲಾಗಿ ಹುಟ್ಟಿಬಂತು. ಭಾವಗೀತೆಗಳ ಎಲ್ಲ ಸಾಧ್ಯತೆಗಳನ್ನು ಸೂರೆಗೊಂಡು ಸಿದ್ಧಿ ಪಡೆದ ಮೇಲೆ ಮಹಾಕಾವ್ಯಕ್ಕೆ ಕೈಚಾಚುವುದು ಕವಿಗೆ ಅನಿವಾರ್ಯವಾಯಿತು. ಈ ಮಹಾಮಾರ್ಗ ಕ್ರಮಣಕ್ಕೆ ಆದಿಯಲ್ಲಿ ದೀವಿಗೆಯಾಗಿ ಬೆಳಕು ಬೀರಿದ್ದು, ಸೇತುವೆಯಾಗಿ ನಿಂತದ್ದು, ಚಿತ್ರಾಂಗದಾ ಖಂಡಕಾವ್ಯ. ವ್ಯಾಸ ಭಾರತದಲ್ಲಿ ತೃಣಮಾತ್ರವಾಗಿ ಗೋಚರಿಸುವ ಚಿತ್ರಾಂಗದೆಯ ಕಥೆ, ಜೈಮಿನಿ ಭಾರತದಲ್ಲಿ ಒಂದು ಅಖ್ಯಾನವಾಗಿ ದೊರೆಯುತ್ತದೆ. ಠಾಕೂರರು ಚಿತ್ರಾಂಗದೆಯ ಪ್ರಣಯ ಕಥೆಯನ್ನು ಆರಿಸಿ ಚಿತ್ರಾ ಎಂಬ ನಾಟಕವನ್ನು ರಚಿಸಿದ್ದಾರೆ. ಕುವೆಂಪು ಇವುಗಳೆಲ್ಲವನ್ನೂ ಆಧರಿಸಿ ಸಾಕಷ್ಟು ಮಾರ್ಪಾಡುಗಳೊಂದಿಗೆ ಚಿತ್ರಾಂಗದೆಯ ಜೀವನಕ್ಕೆ ಸಂಬಂಧಪಟ್ಟ ಪೂರ್ಣ ಸ್ವರೂಪದ ಕಲಾಕೃತಿಯನ್ನು ರಚಿಸಿದ್ದಾರೆ. ಸಾಹಸಸ್ತ್ರೀಯೋರ್ವಳ ಬದುಕಿನ ಪ್ರೇಮ, ತ್ಯಾಗ, ತಪಸ್ಸು, ಮತ್ತು ಪಾತಿವ್ರತ್ಯದ ಮಹತ್ವವನ್ನು ಭಾರತೀಯ ಸಂಸ್ಕøತಿಯ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಕಡೆದಿಟ್ಟಿದ್ದಾರೆ. ಪಾಶ್ಚಾತ್ಯ ಸಾಹಿತ್ಯದಲ್ಲಿ ಮಾತ್ರ ಕಂಡುಬರುತ್ತಿದ್ದ ಮಹೋಪಮೆಗಳನ್ನು ಮೊತ್ತಮೊದಲ ಬಾರಿಗೆ ನಮ್ಮಲ್ಲಿಯೂ ತಂದುದು ಇಲ್ಲಿನ ಹೆಗ್ಗಳಿಕೆಯಾಗಿದೆ. ಶೃಂಗಾರ, ವೀರ ಮತ್ತು ಕರುಣರಸ ಪ್ರಧಾನವಾದ ಆರು ಪರ್ವಗಳ ಈ ಖಂಡ ಕಾವ್ಯದಲ್ಲಿ ಏಳು ಮಹೋಪಮೆಗಳಿವೆ. ಇವು ಈ ಕಾವ್ಯದ ಯಶಸ್ಸಿಗೆ ಸಾಧಕವಾಗಿವೆ. ನಮ್ಮಲ್ಲಿನ ಲಲಿತ ರಗಳೆಯನ್ನು ಸಡಿಲಿಗೊಳಿಸಿ ಪಾಶ್ಚಾತ್ಯರ ಬ್ಲಾಂಕ್‍ವರ್ಸ್‍ನ್ನು ಅಳವಡಿಸಿಕೊಂಡು ಪಂಚಮಾತ್ರಾಗಣದ ಸರಳ ರಗಳೆಯಲ್ಲಿ ಈ ಕಾವ್ಯ ನಿರ್ಮಾಣವಾಗಿದೆ. ಕಥನಕಾವ್ಯಗಳಿಗೆ ಸರಳ ರಗಳೆ ಹೇಳಿ ಮಾಡಿಸಿದ ಮಾಧ್ಯಮ. ಸರಳ ರಗಳೆಯ ಬೆಳೆದ ಪರಿಪಕ್ವ ರೂಪವೇ ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಮಹಾಛಂದಸ್ಸು. ಶ್ರೀ ರಾಮಾಯಣ ದರ್ಶನಂ ಈ ಯುಗದ ಮಹಾಕಾವ್ಯ. ಅದು ಇಡೀ ಜನಾಂಗದ ಉಸಿರು. ಭಾರತೀಯ ಸಂಸ್ಕøತಿಯ ಕಲಾರೂಪ. ವೇದೋಪನಿಷತ್ತುಗಳ ಸಾರ. ಕವಿಯ ಆಧ್ಯಾತ್ಮಿಕ ಸಾಧನೆಯಿಂದ ಪ್ರಣೀತಗೊಂಡ ದರ್ಶನಗ್ರಂಥ. ವಾಲ್ಮೀಕಿ ರಾಮಾಯಣ ಇಲ್ಲಿ ಮರುಹುಟ್ಟನ್ನು ಪಡೆದಿದೆ. ಪಾತ್ರಗಳಲ್ಲಿ ಉನ್ನತವಾದ ಬೆಳವಣಿಗೆ ಕಂಡುಬಂದಿದೆ. ಕೆಲವೆಡೆ ಸಾಕಷ್ಟು ಮಾರ್ಪಾಡೂ ಆಗಿದೆ. ರಾವಣ, ಮಂಥರೆ, ಊರ್ಮಿಳಾ, ಅಹಲ್ಯೆ ಮೊದಲಾದ ಪಾತ್ರಗಳು ಕವಿಯ ದಾರ್ಶನಿಕ ಪ್ರಭೆಯಲ್ಲಿ ಮಿಂದು ಹಳೆಯ ಪೊರೆಯನ್ನು ಕಳಚಿಕೊಂಡು ಹೊಸ ಮೆರುಗನ್ನು ಪಡೆದಿವೆ. ವಾಲ್ಮೀಕಿ ರಾಮಾಯಣದಲ್ಲಿ ಕಾಮಾಂಧನೂ, ನೀಚನೂ ಜಗತ್ಕಂಟಕನೂ, ಗರ್ವಿಷ್ಠನೂ ಆಗಿದ್ದ. ರಾವಣ ಕೊನೆಯವರೆಗೂ ದುಷ್ಟನಾಗಿಯೂ ಉಳಿದು ರಾಮನಿಂದ ಹತನಾಗುತ್ತಾನೆ. ಇಲ್ಲಿ ರಾವಣ ಮಹಾವ್ಯಕ್ತಿಯಾಗಿ ಪರಿವರ್ತನೆ ಪಡೆಯುತ್ತಾನೆ. ರಾವಣ ಮತ್ತೊಂದು ರೂಪವಾಗಿರುತ್ತಾನೆ. ರಾಮಶಕ್ತಿಯೇ ರಾವಣಶಕ್ತಿಯಾಗಿರುತ್ತದೆ. ಕೊನೆಯಲ್ಲಿ ರಾವಣ ಶಕ್ತಿ ರಾಮಶಕ್ತಿಯಲ್ಲಿ ವಿಲೀನಗೊಳ್ಳುತ್ತದೆ. ಸೀತೆ ಅವನಿಗೆ ಮಾತೃ ಸ್ವರೂಪಳಾಗಿ ಕಂಡುಬರುತ್ತಾಳೆ. ಮರುಜನ್ಮದಲ್ಲಿ ಅದು ಕೃತಾರ್ಥವೆನಿಸುತ್ತದೆ. ರಾಮನ ವನವಾಸಕ್ಕೆ ಕಾರಣಳಾಗಿ ಎಲ್ಲರಿಂದ ದೂಷಿತಳಾದ ಮಂಥರೆ ಇಲ್ಲಿ ಲೋಕಕಲ್ಯಾಣದ ಕಾರಕ ಶಕ್ತಿಯಾಗಿ ಕಂಡುಬರುತ್ತಾಳೆ. ಈ ಎರಡೂ ಪಾತ್ರಗಳೂ ಮನಶಾಸ್ತ್ರೀಯ ಬೆಳಕಿನಲ್ಲಿ ಹೆಚ್ಚಾಗಿ ಹೊಳಪುಗೊಳ್ಳುತ್ತದೆ. ಜಡದಲ್ಲೂ ಚೈತನ್ಯವನ್ನು ಕಾಣುವ ಕವಿಪ್ರತಿಭೆ ಪಾಪಿಗೂ ಉದ್ಧಾರವನ್ನು ಬಯಸುತ್ತದೆ. ಪ್ರತಿಯೊಂದು ಪಾತ್ರವೂ ಮತ್ತೊಂದು ಪಾತ್ರದ ಉದ್ಧಾರಕ್ಕಾಗಿ ದುಡಿಯುತ್ತದೆ. ಇಲ್ಲೆಲ್ಲಾ ನಾವು ದರ್ಶನಾಂಶಗಳನ್ನು ಕಾಣುತ್ತೇವೆ. ಕಲೆಯ ಕೈಹಿಡಿದು ದರ್ಶನ ಸಾಗುವುದು, ತತ್ತ್ವ ಅನುಭವಗೊಂಡು ಕಾವ್ಯವಾಗುವುದು ಈ ಕಾವ್ಯದುದ್ದಕ್ಕೂ ಕಂಡುಬರುವ ಮಹತ್ವದ ಸಂಗತಿ. ಅತೀಂದ್ರಿಯ, ಯೋಗ ಮತ್ತು ಅನ್ನಮಯ, ಪ್ರಾಣಮಯಕ್ಕೆ ಸಂಬಂಧಪಟ್ಟ ವಿಷಯಗಳು ಕವಿಯ ಆತ್ಮಸಾಧನೆಯ ಉನ್ನತಿಯನ್ನು ಪರಿಚಯಿಸುತ್ತವೆ. ಭವ್ಯವಾದ ಪ್ರಕೃತಿವರ್ಣನೆಗೆ ಕರ್ತೃವಿನ ಅನುಭವ ಜೀವತುಂಬಿದೆ. ಇಲ್ಲಿನ ಮಹೋಪಮೆಗಳು ಕಾವ್ಯಶಕ್ತಿಯನ್ನು ಹೆಚ್ಚಿಸಿವೆ. ದಶಾನನ ಸ್ವಪ್ನಸಿದ್ಧಿಯಲ್ಲಿ ಸ್ವಯಂ ಕವಿ ಅನುಭವಿಸಿದ ಕನಸು ಮೂಲದ್ರವ್ಯವಾಗಿದೆ. ಆಧುನಿಕ ಸಂಕೀರ್ಣಯುಗ ಪ್ರಜ್ಞೆ ಕಾವ್ಯದುದ್ದಕ್ಕೂ ತೆರೆದುಕೊಂಡಿದೆ. ಇಂದ್ರಜಿತುವಿನ ಶಸ್ತ್ರಾಗಾರ ವರ್ಣನೆಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಹೆಸರುಗಳಿವೆ. ಯುದ್ಧ ವರ್ಣನೆಯಲ್ಲಿ ಎರಡನೆಯ ಮಹಾಯುದ್ಧದ ಪ್ರಭಾವವಿದೆ. ರಾಮಕೃಷ್ಣ ಪರಮಹಂಸರ ಸರ್ವಧರ್ಮ ಸಮನ್ವಯ, ಗಾಂಧೀಜಿಯವರ ಸರ್ವೋದಯ, ಅರವಿಂದರ ಪೂರ್ಣದೃಷ್ಟಿ; ಮನೋವಿಜ್ಞಾನ, ರಾಜಕೀಯ ವಿಚಾರಧಾರೆ, - ಹೀಗೆ ಒಂದೊಂದೂ ಮಹಾಕಾವ್ಯದ ನಿರ್ಮಿತಿಗೆ ಕಾಲವನ್ನೂ ನೆಲವನ್ನೂ ಸಿದ್ಧಗೊಳಿಸಿ ಬೆಂಬಲಿಸಿವೆ. ಕವಿಗಿರುವ ಸಕಲ ಧರ್ಮಗ್ರಂಥಗಳ ತಿಳಿವು, ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯಗಳ ಪರಿಚಯ, ಮನಶಾಸ್ತ್ರ, ಖಗೋಳ ಶಾಸ್ತ್ರ, ಸೌಂದರ್ಯ ಶಾಸ್ತ್ರ ಮತ್ತು ಭೌತಶಾಸ್ತ್ರಗಳ ಪರಿಜ್ಞಾನ, ಅಸಾಧಾರಣ ಕಲ್ಪನೆ, ಪ್ರತಿಭೆ, ಮಾನವೀಯತೆ, ವಿದ್ವತ್ತು ಮತ್ತು ಶಬ್ದ ಸಂಪತ್ತು - ಇವು ಶ್ರೀರಾಮಾಯಣದರ್ಶನಂ ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಲ್ಲೊಂದಾಗಲು ಕಾರಣವಾಗಿದೆ. ಶ್ರೀರಾಮಾಯಣದರ್ಶನಂ ಬಂದ ಮೇಲೆ ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಬರೆದರು. ಸಾಹಿತ್ಯ ಬದುಕನ್ನು ಹೆಚ್ಚಾಗಿ ಅಪ್ಪಿಕೊಂಡಿರುವುದು ಅವರ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ. ಇಲ್ಲಿ ಲೇಖಕರು ಯಾವುದೇ ಸಾಹಿತ್ಯಕ ತತ್ತ್ವಕ್ಕಾಗಲೀ ಕಲೆಗಾಗಲೀ ಅಷ್ಟಾಗಿ ಅಂಟಿಕೊಳ್ಳದೆ ಇರುವುದೇ ಇದಕ್ಕೆ ಕಾರಣವಿರಬಹುದು. ಮಲೆನಾಡಿನ ಹಲವಾರು ಜೀವನವಿಧಾನಗಳು ಇಲ್ಲಿ ತೆರೆದುಕೊಂಡಿವೆ. ಅವಕ್ಕೆ ಹಿನ್ನೆಲೆಯಾಗಿ ಪ್ರಕೃತಿ ತನ್ನೆಲ್ಲ ಸರ್ವಸಾಧ್ಯತೆಗಳಿಂದ ಮೈಚಾಚಿಕೊಂಡಿದೆ. ಪ್ರಾದೇಶಿಕ ವೈವಿಧ್ಯದಿಂದ ಕೂಡಿರುವ ಇಲ್ಲಿನ ಸಂಕೀರ್ಣ ಬದುಕಿನಲ್ಲಿ ಮಣ್ಣಿನ ವಾಸನೆ, ಹೆಣ್ಣಿನ ವಾಸನೆ, ಕಳ್ಳಿನ ವಾಸನೆ, ಬಾಡಿನ ವಾಸನೆ ಎಲ್ಲವೂ ಇದ್ದು, ಕಾದಂಬರಿಗಳಿಗೆ ಒಂದು ಹೊಸ ಗಮ್ಮತ್ತು ಬಂದಿದೆ. ಹಳತು ಹೊಸತರ ಸಂಘರ್ಷದ ಸಂಕ್ರಮಣಾವಸ್ಥೆಯ ಮಜಲಿನಲ್ಲಿ ಸಿಕ್ಕಿರುವ ಮಲೆನಾಡಿನ ಜನಜೀವನದ ಏರಿಳಿತ ಬಹುಶಃ ಕನ್ನಡದ ಬೇರಾವ ಕಾದಂಬರಿಯಲ್ಲೂ ಕಾಣದ ಮಟ್ಟಿಗೆ ಆಕರ್ಷಕವಾಗಿ ಇಲ್ಲಿ ಚಿತ್ರಿತವಾಗಿದೆ. ಕವಿಯ ಉಳಿದ ಕಾವ್ಯಗಳೆಲ್ಲ ಸಾಮಾನ್ಯವಾಗಿ ಮಲೆನಾಡಿನ ಪ್ರಕೃತಿಯ ರಮಣೀಯ ರೂಪ ಮಾತ್ರ ಪ್ರಕಟವಾಗಿದ್ದರೆ, ಇಲ್ಲಿ ಅದರ ಎಲ್ಲ ಮುಖಗಳೂ ಹೊರಕ್ಕೆ ಬಂದಿವೆ. ಇಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗನುಗಣವಾಗಿ ಜೀವನ ಬದಲಾವಣೆಗಳನ್ನು ಬುದ್ಧಿವಂತ ಓದುಗರು ಗುರುತಿಸಬಹುದು. ಮಾನವ ಪಾತ್ರಗಳಿಗೂ ಮಿಗಿಲಾಗಿ ಪ್ರಾಣಿ ಪಾತ್ರಗಳನ್ನು ತಂದುದು ಕುವೆಂಪು ಅವರ ಹೆಚ್ಚುಗಾರಿಕೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಯಾವುದೇ ಪಾತ್ರ ಮರೆತು ಹೋಗಬಹುದು. ಆದರೆ ನಾಯಿ ಹುಲಿಯೂ ಓದುಗರಲ್ಲಿ ಯಾವತ್ತೂ ಅಮರ. ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಪ್ರಣಯ ಪ್ರಧಾನವಾಗಿದೆ. ಒಂದೆಡೆ ಸ್ವಾರ್ಥ ಮೂಲವಾದ ಕ್ರಿಯೆಗಳು ಮತ್ತೊಂದೆಡೆ ತ್ಯಾಗಪೂರ್ಣ ದುಡಿಮೆ-ಹೀಗೆ ಮಾನವ ಪ್ರವೃತ್ರಿಯ ನಾನಾ ಸ್ವಭಾವಗಳಿಂದ ಆಯಾ ಸಾಮಾಜಿಕ ಪರಿಸರದಲ್ಲುಂಟಾಗುವ ಸಾಂಗತ್ಯ ಮತ್ತು ಅಸಾಂಗತ್ಯಗಳ ಪರಿಣಾಮಗಳನ್ನು ಲೇಖಕರು ಸಮರ್ಥವಾಗಿ ಚಿತ್ರಿಸಿದ್ದಾರೆ.

ನನ್ನ ದೇವರು ಮತ್ತು ಇತರ ಕಥೆಗಳು, ಸನ್ಯಾಸಿ ಮತ್ತು ಇತರ ಕಥೆಗಳು ಕುವೆಂಪು ಕನ್ನಡ ಕಥಾಸಾಹಿತ್ಯಕ್ಕೆ ಕೊಟ್ಟ ಉತ್ತಮ ಕೊಡುಗೆಗಳಾಗಿವೆ.

ಕುವೆಂಪು ಅವರು ಪುರೋಹಿತ ಶಾಹಿಯ ವಿರುದ್ಧ, ಮೌಢ್ಯದ ವಿರುದ್ಧ, ಅಜ್ಞಾನದ ವಿರುದ್ಧ ಸಿಡಿದೆದ್ದರು. ವಿಚಾರಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿಗಾಗಿ ತಮ್ಮ ಸಾಹಿತ್ಯದಲ್ಲಿ ಸ್ಥಾನ ಒದಗಿಸಿದರು. ಸರ್ವರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶ, ಭಾಷಾ ಮಾಧ್ಯಮದ ಅಗತ್ಯವನ್ನು ಒತ್ತಿ ಹೇಳಿದರು. ವ್ಯಷ್ಟಿನಮನ, ನಿರಂಕುಶ ಮತಿಗಳಾಗಿ ವಿಚಾರಕ್ರಾಂತಿಗೆ ಆಹ್ವಾನ ಎಂಬ ಕೃತಿಗಳು ಈ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿವೆ. ಆಧ್ಯಾತ್ಮಿಕ ಮಹಾಪುರುಷರಾದ ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರನ್ನು ಕುರಿತ ಅವೇ ಹೆಸರಿನ ಜೀವನ ಚರಿತ್ರೆಗಳು ಕುವೆಂಪು ಅವರ ಕನ್ನಡದ ಅತ್ಯುತ್ತಮ ಗದ್ಯಕಾರರೆಂಬುದನ್ನು ತೋರಿಸಿಕೊಟ್ಟಿದೆ.

ಕುವೆಂಪು ಅವರಿಗೆ 1955ರಲ್ಲಿ ಸಾಹಿತ್ಯ ಅಕಾಡೆಮಿ, 1958ರಲ್ಲಿ ಪದ್ಮಭೂಷಣ, ಮತ್ತು 1968ರಲ್ಲಿ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದವು. 1964ರಲ್ಲಿ ಇವರನ್ನು ಕರ್ನಾಟಕದ ರಾಷ್ಟ್ರಕವಿ ಎಂಬ ಬಿರುದು ನೀಡಿ ಗೌರವಿಸಲಾಯಿತು. 1956 ರಲ್ಲಿ ಮೈಸೂರು, 1966ರಲ್ಲಿ ಕರ್ನಾಟಕ ಮತ್ತು 1969ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನಿತ್ತು ಸನ್ಮಾನಿಸಿದುವು.

ಬೇಂದ್ರೆ ಅವರ ಮಾತಿನಲ್ಲಿ ಹೇಳುವುದಾದರೆ ಕುವೆಂಪು ಜಗದ ಕವಿ, ಯುಗದ ಕವಿ, ಜಗತ್ತಿನ ಯಾವುದೇ ಶ್ರೇಷ್ಠ ಕವಿಗೆ ಹೆಗೆಲೆಣೆಯಾಗಿ ನಿಲ್ಲಬಲ್ಲ ಮಹಾಕವಿ, ಅವರ ಸಾಹಿತ್ಯ ಅಷ್ಟು ಶ್ರೀಮಂತವಾದದ್ದು, ಉನ್ನತವಾದುದು. (ಎಂ.ಸಿ.ವಿ.)