ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಚಂದ್ರ
"ನಾಗಚಂದ್ರ":- (ಸು.೧೧೦೦). ಪ್ರಸಿದ್ಧ ಜೈನಕವಿ. ಅಭಿನವ ಪಂಪ ಎಂಬುದು ಈತನ ಬಿರುದು. ತನ್ನ ಗುರುಪರಂಪರೆಯ ವಿನಾ ಈತ ಮತ್ತಾವುದೇ ವೈಯಕ್ತಿಕ ವಿಷಯವನ್ನು ಹೇಳಿಕೊಂಡಿಲ್ಲ. ಆದ್ದರಿಂದ ಈತನ ಕಾಲ, ಊರು ಮುಂತಾದುವನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ. ವಿಜಯಪುರದಲ್ಲಿ ಮಲ್ಲಿಜಿನನ ಭವನವೊಂದನ್ನು ತಾನು ಕಟ್ಟಿಸಿದುದಾಗಿ ಹೇಳಿಕೊಂಡಿದ್ದಾನೆ. ಈತ ರಾಜಾಶ್ರಯದಲ್ಲಿದ್ದಂತೆ ತೋರುವುದಿಲ್ಲ. ಧರ್ಮಾಸಕ್ತಿ, ಜಿನಭಕ್ತಿಗಳು ಪ್ರಧಾನವಾಗಿರುವ ವ್ಯಕ್ತಿತ್ವವೊಂದು ಈತನ ಕೃತಿಗಳಲ್ಲಿ ಎದ್ದುಕಾಣುತ್ತದೆ. ಈತ ಮಲ್ಲಿನಾಥಪುರಾಣ ಮತ್ತು ರಾಮಚಂದ್ರಚರಿತಪುರಾಣ (ಪಂಪರಾಮಾಯಣ) ಎಂಬ ಎರಡು ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿದ್ದಾನೆ.
ಮಲ್ಲಿನಾಥಪುರಾಣ 19ನೆಯ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು ನಿರೂಪಿಸುವ 14 ಆಶ್ವಾಸಗಳ ಕೃತಿ. ಇದರಲ್ಲಿ ಜೀವಕ್ಕೆ ಶರಣ್ಯವೊಂದೇ ನಿರ್ಮಳಧರ್ಮಂ ಎಂಬ ಸಂದೇಶವನ್ನು ಮೊಳಗಿಸುವುದು ಕವಿಯ ಉದ್ದೇಶ. ಈ ಕಾವ್ಯಕ್ಕೆ ಮೂಲ ಗುಣಭದ್ರಾಚಾರ್ಯರ ಉತ್ತರಪುರಾಣ. ಮಲ್ಲಿನಾಥನ ಕತೆ ವಾಸ್ತವವಾಗಿ ಕಿರಿದು; ನಾಗಚಂದ್ರ ಅದನ್ನು ಬಹಳ ಹಿಗ್ಗಲಿಸಿದ್ದಾನೆ. ವರ್ಣನೆಗಳೆಲ್ಲ ಕೃತಿಯನ್ನು ತುಂಬಿವೆ. ಕವಿಯ ಪ್ರಥಮ ರಚನೆಯಾದುದರಿಂದ ಇದು ಬಹುಮಟ್ಟಿಗೆ ಪುರಾಣವಾಗಿ, ಸಾಂಪ್ರದಾಯಿಕ ಬರೆವಣಿಗೆಯಾಗಿ ಪರಿಣಮಿಸಿದೆ. ಆದರೆ ಕವಿಯ ಪ್ರತಿಭೆಯನ್ನು ಬಿಂಬಿಸುವ ಸುಂದರವಾದ ಭಾವಗೀತಾತ್ಮಕ ಭಾಗಗಳಿಗೆ ಕಾವ್ಯದಲ್ಲಿ ಕೊರತೆಯಿಲ್ಲ. ಈ ಕವಿಯ ಕೀರ್ತಿ ನಿಂತಿರುವುದು ಮುಖ್ಯವಾಗಿ ರಾಮಚಂದ್ರಚರಿತಪುರಾಣದ ಮೇಲೆ. ಇದು 16 ಆಶ್ವಾಸಗಳನ್ನುಳ್ಳ, ಉದಾತ್ತರಾಘವನ ಆಖ್ಯಾನ. ಇದು ವಾಲ್ಮೀಕಿ ಪರಂಪರೆಯ ರಾಮಾಯಣವಲ್ಲ. ಜೈನಪರಂಪರೆಯ ರಾಮಾಯಣ. ಇದರಲ್ಲಿ ಬರುವ ಪಾತ್ರಗಳೆಲ್ಲ ಜೈನರು; ಇಡೀ ಕೃತಿಯಲ್ಲಿ ಜೈನವಾತಾವರಣ ಹರಡಿದೆ. ಇಲ್ಲಿ ರಾಮಲಕ್ಷ್ಮಣ ರಾವಣರು ಜೈನ ಶಲಾಕಪುರುಷರು; ಆದ್ದರಿಂದ ಇದು ಅಪೂರ್ವವಾದ ರಾಮಕಥೆ. ಆದರೆ ಇದು ಕವಿಯ ಸ್ವತಂತ್ರ ಸೃಷ್ಟಿಯಲ್ಲ; ವಿಮಲ ಸೂರಿ ಎಂಬ ಕವಿ ಪ್ರಾಕೃತದಲ್ಲಿ ಬರೆದ ಪಉಮಚರಿಯಕ್ಕೆ ಕವಿ ಋಣಿ.
ವಾಲ್ಮೀಕಿರಾಮಾಯಣಕ್ಕೂ ಈ ಜೈನರಾಮಾಯಣಕ್ಕೂ ಹಲವಾರು ವ್ಯತ್ಯಾಸಗಳಿವೆ. ಇಲ್ಲಿ ಲಕ್ಷ್ಮಣನಿಗೆ ಪ್ರಾಧಾನ್ಯ; ಕಡೆಗೆ ರಾವಣನನ್ನು ಕೊಲ್ಲುವವನು ಅವನೇ. ದಶರಥನಿಗೆ ನಾಲ್ವರು ರಾಣಿಯರು; ರಾಮಲಕ್ಷ್ಮಣರು ಏಕಪತ್ನೀವ್ರತಸ್ಥರಲ್ಲ ; ಆಂಜನೇಯ ಕೂಡ ವಿವಾಹಿತನಾಗಿದ್ದಾನೆ; ಮಾರೀಚ ಮಂಥರೆಯರ, ಸೇತುಬಂಧದ ಪ್ರಸಂಗಗಳು ಇಲ್ಲಿಲ್ಲ. ಇಂಥ ಅಸಂಖ್ಯಾತ ಮಾರ್ಪಾಟುಗಳಲ್ಲಿ ಬಹುಮುಖ್ಯವಾದದು ರಾವಣನ ಪಾತ್ರದಲ್ಲಿನದು. ಜೈನರಾಮಾಯಣದ ಈ ರಾವಣ ಸಾಹಿತ್ಯಕ್ಕೊಂದು ಅಮೂಲ್ಯ ಕೊಡುಗೆ.
ಇಲ್ಲಿಯ ರಾವಣ ಸದ್ಗುಣ ಸಂಪನ್ನನಾದ ಮಹಾಪುರುಷ; ಆದರೆ ವಿಧಿಯ ಕೈವಾಡದಿಂದ ಆಕಸ್ಮಿಕವಾಗಿ ಅಲ್ಪದೌರ್ಬಲ್ಯಕ್ಕೆ ವಶವಾಗಿ ಪತನಹೊಂದುತ್ತಾನೆ. ಈತ ಸೀತೆಯನ್ನು ಅಪಹರಿಸಿದರೂ ಕಡೆಗೆ ಪಶ್ಚಾತ್ತಾಪದಿಂದ ಪರಿವರ್ತಿತನಾಗಿ ಪೂತನಾಗುತ್ತಾನೆ. ಸೀತೆಯನ್ನು ರಾಮನಿಗೊಪ್ಪಿಸಬೇಕೆಂದು ಬಗೆದು ಯುದ್ಧದಲ್ಲಿ ರಾಮಲಕ್ಷ್ಮಣರನ್ನು ಸೆರೆಹಿಡಿದು ತರಲು ಹೋಗಿ ಹತನಾಗುವ ಈತನ ದುರಂತ ಅನುಕಂಪ ಹುಟ್ಟಿಸುತ್ತದೆ. ಸೀತಾಪಹರಣದ ಸನ್ನಿವೇಶ, ರಾಮನ ಶೋಕಪ್ರಕರಣ ಇವು ಪಂಪರಾಮಾಯಣದ ರಸಸ್ಥಾನಗಳು.
ನಾಗಚಂದ್ರನ ಶೈಲಿ ವಿಶಿಷ್ಟವಾದುದು; ಸರಳತೆ, ಮಾಧುರ್ಯ, ಗೇಯತೆ ಅದರ ಲಕ್ಷಣಗಳು. ಪಾಂಡಿತ್ಯಪ್ರದರ್ಶನಚಾಪಲ್ಯ ಈತನಲ್ಲಿಲ್ಲ. ಕಾವ್ಯ ಎಲ್ಲರಿಗೂ ಅರ್ಥವಾಗಬೇಕು, ಅದರಿಂದ ಬದುಕಿಗೆ ಒಳಿತಾಗಬೇಕು ಎಂಬ ನಿಲವು, ಜನತಾಂತರ್ದೃಷ್ಟಿ ಈತನದು. ಈ ದೃಷ್ಟಿಯಿಂದ ಚಂಪೂಕವಿಗಳಲ್ಲಿ ನಾಗಚಂದ್ರನಿಗೆ ವಿಶಿಷ್ಟ ಸ್ಥಾನವಿದೆ.
ಈತ ಮಹಾಕವಿಯಲ್ಲ: ಆದರೆ ಕವಿಗಳ ದ್ವಿತೀಯ ಶ್ರೇಣಿಯಲ್ಲಿ ಎಲ್ಲರಿಗಿಂತ ಮುಂದೆ ನಿಲ್ಲುವ ಯೋಗ್ಯತೆ ಈತನಿಗುಂಟು. (ಸಿ.ಪಿ.ಕೆ.)