ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಬಂಧ ಸಾಹಿತ್ಯ

ವಿಕಿಸೋರ್ಸ್ದಿಂದ

ಪ್ರಬಂಧ ಸಾಹಿತ್ಯ:-- ಸಂಸ್ಕøತ, ಕನ್ನಡ ಮುಂತಾದ ಪ್ರಾಚೀನ ಭಾರತೀಯ ಸಾಹಿತ್ಯಗಳಲ್ಲಿ ಪ್ರಬಂಧ ಎಂಬ ಮಾತನ್ನು ಸಾಹಿತ್ಯ ಕೃತಿ ಅಥವಾ ಕಾವ್ಯ ಎಂಬ ಸಾಮಾನ್ಯವಾದ ಅರ್ಥದಲ್ಲಿ ಬಳಸಿದೆ. ಪ್ರಬಂಧ ಪದ್ಯದಲ್ಲಿರಬಹುದು. ಗದ್ಯದಲ್ಲಿರಬಹುದು, ಕಾವ್ಯವಲ್ಲದೆ, ಸಂಗೀತ ಕೃತಿಗಳನ್ನೂ ಯಕ್ಷಗಾನವನ್ನೂ ಪ್ರಬಂಧ ಎಂದೇ ನಿರ್ದೇಶಿಸಿದೆ. ಬಂಧ ಎಂಬ ಮಾತಿಗೆ ಕಟ್ಟು, ಕಟ್ಟುವುದು ಎಂದು ಅರ್ಥ. ಪ್ರ ಎಂಬ ಉಪಸರ್ಗ ಸಂಯೋಗದಿಂದ ಸವಿಶೇಷ ಶಬ್ದರಚನೆ, ಕಾವ್ಯ ಎಂಬ ಅರ್ಥ ಬೆಳೆದುಬಂತು. ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಎಂಬ ಶಬ್ದವನ್ನು ಇಂಗ್ಲಿಷಿನ ಎಸ್ಸೆ ಎಂಬ ಶಬ್ದಕ್ಕೆ ಸಮಾನಾರ್ಥಕವಾಗಿ ಬಳಸುತ್ತಿದ್ದೇವೆ. ಇಂಗ್ಲೀಷಿನ ಎಸ್ಸೆ ಒಂದು ಗದ್ಯಸಾಹಿತ್ಯಪ್ರಕಾರ, ಕನ್ನಡದಲ್ಲೂ ಅಷ್ಟೆ. ಕನ್ನಡದಲ್ಲೂ ಎಸ್ಸೆ ಎಂಬ ಶಬ್ದವನ್ನೇ ರೂಢಿಗೆ ತರುವ ಪ್ರಯತ್ನ ನಡೆದಿದೆ. ನ್ಯಾಸ, ನಿಬಂಧ, ಹರಟೆ, ಚಿತ್ರ ಎಂಬ ಶಬ್ದಗಳನ್ನೂ ಬಳಸುವುದಿದೆ. ಗ್ರಾಂಥಿಕ ಗದ್ಯಶೈಲಿಯನ್ನು ಬಿಟ್ಟುಕೊಟ್ಟು, ಬಳಕೆಯ ಮಾತಿನ ಶೈಲಿಯಲ್ಲಿ, ವಿಡಂಬನಾತ್ಮಕವಾಗಿಯೋ ಹಾಸ್ಯ ಪ್ರಧಾನವಾಗಿಯೋ ಬರೆದ ಲಘು ಪ್ರಬಂಧಗಳನ್ನು ಹರಟೆ ಎಂದು ಪ್ರತ್ಯೇಕಿಸುವುದು ಸೂಕ್ತ. ಇಂಗ್ಲಿಷಿನಲ್ಲೂ ಇಂಥ ಬರಹಗಳನ್ನು ಸ್ಕಿಟ್, ಸ್ಕೆಚ್, ವಿನ್ಯೆಟ್ ಎಂಬ ಪ್ರತ್ಯೇಕ ಪ್ರಬಂಧ ಪ್ರಬೇಧಗಳಾಗಿ ಪರಿಗಣಿಸಿದೆ. ಶಬ್ದಾರ್ಥದಲ್ಲಿ ನಿಬಂಧಕ್ಕೂ ಪ್ರಬಂಧಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ನ್ಯಾಸ ಕನ್ನಡದಲ್ಲಿ ವಿಶೇಷವಾಗಿ ಬಳಕೆಯಲಿಲ್ಲ. ಆದ್ದರಿಂದ ಹೆಚ್ಚು ಬಳಕೆಯಲ್ಲಿರುವ ಪ್ರಬಂಧ ಎಂಬ ಶಬ್ದವೇ ವಿಹಿತ. ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿ ಪಠ್ಯವಿಷಯಗಳನ್ನು ಕುರಿತು ವಿದ್ಯಾರ್ಥಿಗಳು ಬರೆದೊಪ್ಪಿಸುವ ಸಣ್ಣ ಸಣ್ಣ ಗದ್ಯರಚನೆಗಳನ್ನೂ ಎಸ್ಸೆ, ಪ್ರಬಂಧ ಎಂದು ಕರೆಯುವುದರಿಂದ ವಾರ್ತಾಪತ್ರಿಕೆ ಮುಂತಾದ ನಿಯತಕಾಲಿಕಗಳಲ್ಲಿ ಬರೆಯಲಾಗುವ ನಿತ್ಯಗಟ್ಟಳೆಯ ವಿದ್ಯಮಾನಗಳನ್ನು ಕುರಿತ ಗದ್ಯರಚನೆಗಳೂ ಅನ್ವರ್ಥಕವಾಗಿ ಪ್ರಬಂಧಗಳೆ. ಆದ್ದರಿಂದ ಇವುಗಳಿಂದ ಭಿನ್ನವಾದ ಕನ್ನಡದ ಎಸ್ಸೆಯನ್ನು ಅದರ ಒಂದೊಂದು ಪ್ರಮುಖ ಲಕ್ಷಣಗಳನ್ನು ಅನುಲಕ್ಷಿಸಿ ಭಾವಪ್ರಬಂಧ, ಲಲಿತ ಪ್ರಬಂಧ ಎಂದು ನಿರ್ದೇಶಿಸುವುದೂ ರೂಢಿಗೆ ಬಂದಿದೆ. ಭಾವ, ಲಲಿತ ಮುಂತಾಗಿ ವಿಶೇಷಿಸುವುದರಿಂದ ಪ್ರಬಂಧದ ಲಕ್ಷಣವ್ಯಾಪ್ತಿಯನ್ನು ಪರಿಮಿತಗೊಳಿಸಿದಂತಾಗುತ್ತವೆ. ಆದ್ದರಿಂದ ಕನ್ನಡದ ಎಸ್ಸೆಯನ್ನು ಪ್ರಬಂಧ ಎಂದರೆ ಸಾಕು. ಬೇಕಿದ್ದರೆ, ಪೃಥಕ್ಕರಣಕ್ಕಾಗಿ ಇಂಗ್ಲಿಷ್ ಪ್ರಬಂಧವನ್ನು ಎಸ್ಸೆ ಎನ್ನೋಣ.

ಇಂಗ್ಲೀಷಿನಲ್ಲಿ ಎಸ್ಸೆ ಶಬ್ದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ ಎಂಬ ಅರ್ಥದಲ್ಲಿ ಮೊದಲು ಬಳಕೆಯಾಗುತ್ತಿರಲಿಲ್ಲ. Essai (ಎಸ್ಸೆಯ್ = Assay ಸಹ) ಎಂಬ ಹಳೆಯ ಫ್ರೆಂಚ್ ಭಾಷೆಯ ಶಬ್ದದ ಪ್ರಯತ್ನ ಎಂಬ ಅರ್ಥದಲ್ಲೆ ಇಂಗ್ಲಿಷ್ ಪದ ಬಳಕೆಗೆ ಬಂದದ್ದು. ಒಂದು ಸಾಹಿತ್ಯ ಪ್ರಕಾರ ಎಂಬ ಅರ್ಥ ಬಳಕೆಗೆ ಬಂದಮೇಲೂ ಎಸ್ಸೆ ಶಬ್ದ ಮೂಲಾರ್ಥದಲ್ಲಿ ಬಳಕೆಯಾಗುತ್ತಿದ್ದುದಕ್ಕೆ ಉದಾಹರಣೆಗಳು ಉಂಟು. ಕನ್ನಡದಲ್ಲಿ ಬಳಕೆಗೆ ಬಂದ ಸಂಸ್ಕøತ ಶಬ್ದ ಪ್ರಬಂಧದ ಮೂಲಾರ್ಥಕ್ಕೂ ಅದು ಈಚೆಗೆ ಪಡೆದುಕೊಂಡು ವಿಶಿಷ್ಟಾರ್ಥಕ್ಕೂ ಅಷ್ಟೊಂದು ಹೆಚ್ಚಿನ ವ್ಯತ್ಯಾಸವಿಲ್ಲದಿರುವುದು ಈ ಸಂದರ್ಭದಲ್ಲಿ ಗಮನಾರ್ಹ. ಹೀಗಿರುವುದರಿಂದ, ಎಸ್ಸೆ ಶಬ್ದಕ್ಕೆ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ ಎಂಬ ಅರ್ಥ ಬೆಳೆದು ಬಂದ ಬಗೆ ಕುತೂಹಲಕಾರಿ ಸಂಗತಿ. ಎಸ್ಸೆ ಫ್ರಾನ್ಸ್ ದೇಶೀಯನಾದ ಮಾನ್‍ಟೇನ್ (ನಿಜನಾಮ ಮೈಕೇಲ್) ಸೃಷ್ಟಿಸಿದ್ದು ಎಂಬುದು ಸರ್ವವಿದಿತವಾಗಿದ್ದರೂ ಅದು ಯೂರೋಪಿನ ಸಂಸ್ಕøತಿಯ ಪರಿಣಾಮ ಫಲದ ತಿರುಳು ಎಂಬ ಅಭಿಪ್ರಾಯವೂ ಇದೆ. ಅದು ಹೇಗೇ ಇರಲಿ, ಈ ಬರವಣಿಗೆಗೆ ಎಸ್ಸೆ ಎಂಬ ಹೆಸರನ್ನು ಟಂಕಿಸಿಕೊಟ್ಟವ ಮಾನ್‍ಟೇನ್ (1533-1592). ಈ ಸಾಹಿತ್ಯ ಪ್ರಕಾರದ ಪ್ರವರ್ತಕನೂ ಅವನೇ. ಒಂದು ಹೊಸ ಬಗೆಯ ಸಾಹಿತ್ಯ ನಿರ್ಮಾಣ ಪ್ರಯತ್ನದಲ್ಲಿ ಇವು ಕೇವಲ ಪ್ರಯೋಗಗಳು ಎಂದು ತನ್ನ ಬರಹಗಳ ಬಗೆಗೆ ಅವನೇ ಹೇಳಿಕೊಂಡಿದ್ದಾನೆ. ಮಾನ್‍ಟೇನ್ ಬದುಕಿದ್ದಾಗಲೇ ಅವನ ಎಸ್ಸೆಗಳು ಅವನ ನಾಡಿನಲ್ಲಿ ಅಪಾರ ಜನಪ್ರಿಯತೆ ಪಡೆದುವು; ಇಂಗ್ಲೆಂಡಿನಲ್ಲೂ ಜನ ಅವನ ಗದ್ಯರಚನೆಗಳನ್ನು ಮೂಲ ಫ್ರೆಂಚ್ ಭಾಷೆಯಲ್ಲೋ, ಇಲ್ಲವೆ ಫ್ಲೋರಿಯೊ ಎಂಬಾತನ ಅಚ್ಚುಕಟ್ಟಾದ ಅನುವಾದಗಳ ಮೂಲಕವೋ ಓದಿ ಮೆಚ್ಚಿಕೊಂಡರು. ಆದರೆ ಈ ಹೊಸ ಬರವಣಿಗೆ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿ ಇಂಗ್ಲೆಂಡಿಗೆ ಪ್ರಯಾಣ ಮಾಡಿ ಅಲ್ಲಿ, ಹೊಸ ನೆಲದಲ್ಲಿ, ಬೇರು ಬಿಟ್ಟ ಮೇಲೆ ಈ ಮೂಲಾರ್ಥ-ಎಂದರೆ. ಹೇಳಬೇಕಾದುದನ್ನೆಲ್ಲವನ್ನೂ ಹೇಳಿ ಮುಗಿಸಲು ಇನ್ನೂ ವಿಸ್ತಾರವಾದ ಸ್ಥಳಾವಕಾಶಬೇಕು ಎನ್ನುವಂಥ ವಿಷಯವನ್ನು ಮುಗಿಯದಿದ್ದರೂ ಹೇಳಿ ಮುಗಿಸಬೇಕು ಎನ್ನುವ ಪ್ರಯತ್ನಗಳು ಎಂಬ ಮಾಂಟೇನನ ಆಶಯ-18ನೆಯ ಶತಮಾನದ ವೇಳೆಗೆ ಮಾಸಿಹೋಯಿತು. ಇಂಗ್ಲೆಂಡಿನಲ್ಲಿ ಪ್ರಬಂಧ ಪ್ರವರ್ತಕನಾದ ಫ್ರಾನ್ಸಿನ್ ಬೇಕನ್ (1561-1626) ಸೆನಿಕನ (ರೋಮ್ ನಗರದಲ್ಲಿ ಕ್ರಿ.ಪೂ.4ರಿಂದ ಕ್ರಿ.ಶ. 65ರ ವರೆಗೆ ಬಾಳಿದ ದಾರ್ಶನಿಕ ಮತ್ತು ರಾಜನೀತಿಜ್ಞ) ಬರಹಗಳನ್ನು ಎಸ್ಸೆಗಳೆಂದು ನಿರ್ದೇಶಿಸುತ್ತ. ಎಸ್ಸೆ ಎಂಬ ಮಾತು ಈಚಿನದಷ್ಟೆ; ಬರಹದ ಬಗೆ ಬಹಳ ಹಳೆಯದು ಎಂದಿದ್ದಾನೆ. ಆದರೆ ಸಾಹಿತ್ಯ ಪ್ರಪಂಚದಲ್ಲಿ ಈ ಹೊಸ ಬಗೆಯ ಗದ್ಯರಚನೆಯ ಅವತಾರ ಎಂದು ಸಂಭವಿಸಿತು ಎಂದು ನಿಷ್ಕøಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ನಮಗೆ ಚಿರಪರಿಚಿತವಾದ ನಿಜವಾದ ಎಸ್ಸೆಯ ಜನಕ ಮಾಂಟೇನ್ ಎಂಬುದು ಮಾತ್ರ ನಿರ್ವಿವಾದವಾದ ಸಂಗತಿ. ತಾನು ಒಂದು ಪ್ರಭಾವಶಾಲಿ ಸಾಹಿತ್ಯ ಪ್ರಕಾರವನ್ನು ಸೃಷ್ಟಿ ಮಾಡುತ್ತಿದ್ದೇನೆ ಎಂಬ ಅರಿವು ಅವನಿಗೇ ಬರಲಿಲ್ಲ. ಅವನ ಎಸ್ಸೆ ಮೊತ್ತಮೊದಲು ಬೆಳಕು ಕಂಡದ್ದು 1571ರ ಮಾರ್ಚಿ ತಿಂಗಳಿನಲ್ಲಿ. 1580ರಿಂದ 1588ರ ವರೆಗಿನ 9 ವರ್ಷಗಳ ದೀರ್ಘಾವಧಿಯಲ್ಲಿ ಮಾಂಟೇನನ ಎರಡು ಪ್ರಬಂಧ ಸಂಕಲನಗಳು ಹೊರಬಂದವು. ಎರಡನೆಯ ಪುಸ್ತಕದ ಗೆಲವಾದ ಬರಹಗಳಲ್ಲಿ-ಸಂಕ್ಷೇಪವಾಗಿ ಒಂದು ಕ್ರಮಬದ್ಧ ರೂಪರಚನೆಗೆ ಕಟ್ಟು ಬೀಳದೆ, ಹೇಳುತ್ತಿರುವುದನ್ನು ನಿಲ್ಲಿಸಿ ಮತ್ತೇನನ್ನೋ ಹೇಳತೊಡಗಿ, ಇಚ್ಛೆ ಬಂದತ್ತ ಲೇಖನದ ಓಟವನ್ನು ಹರಿಯಬಿಟ್ಟು, ತನ್ನ ಕಣ್ಣೆದುರು ಸುಳಿದು ಲೋಕದ ವಿದ್ಯಮಾನಗಳನ್ನು ತಾನು ಕಂಡಂತೆ ಬರೆಯುವ ಸ್ವಾನುಭವನಿಷ್ಠ ವಿಧಾನವನ್ನು ಮಾಂಟೇನ್ ತೋರಿಸಿಕೊಟ್ಟ. ಹೀಗೆ, ಎಸ್ಸೆಯ ತವರು ಫ್ರೆಂಚ್ ಭಾಷೆಯಾದರೂ ಎಸ್ಸೆಯ ಸ್ವರೂಪ ವೈವಿಧ್ಯಮಯವಾಗಿ ವಿಕಾಸಗೊಂಡು ಜಾಗತಿಕ ಸಾಹಿತ್ಯಕ್ಕೆ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾಣಿಕೆಯಾಗಿ ದೊರೆತದ್ದು ಇಂಗ್ಲಿಷಿಗೆ ಮೂಲಕವೇ. ಕನ್ನಡಕ್ಕಂತೂ ಎಸ್ಸೆ ಅಥವಾ ಪ್ರಬಂಧ ಇಂಗ್ಲಿಷಿನ ಕೊಡುಗೆ. ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿ ಇಂಗ್ಲಿಷ್ ಎಸ್ಸೆ ಮೆರೆದ ವಿವಿಧ ವಿಲಾಸಗಳನ್ನು, ಭಂಗಿಭಣಿತೆಗಳನ್ನು ಕನ್ನಡ ಪ್ರಬಂಧ ಸಾಹಿತ್ಯದ ಬೆಳವಣಿಗೆಯಲ್ಲೂ ಗುರುತಿಸಬಹುದು.

ಈ ಸಾಹಿತ್ಯ ಪ್ರಕಾರದಲ್ಲಿ ಮಾಂಟೇನನ ತರುವಾಯ ಎರಡನೆಯ ದೊಡ್ಡ ಹೆಸರು ಬೇಕನ್. ಇವನ ಕಾಲಕ್ಕಾಗಲೇ ಮಾಂಟೇನ್ ಇಂಗ್ಲೆಂಡಿನಲ್ಲಿ ಚಿರಪರಿಚಿತನಾಗಿದ್ದ ಬರಹಗಾರ. ಆದರೂ ಬೇಕನ್ ಮಾಂಟೇನನ ಶೈಲಿಯನ್ನು ಅನುಸರಿಸಿದಂತೆ ಕಾಣುವುದಿಲ್ಲ. ಮಾಂಟೇನ್ ಕಾಲವಾದ ಐದು ವರ್ಷಗಳ ಮೇಲೆ, 1597ರಲ್ಲಿ, ತನ್ನ ಮೊದಲ ಹತ್ತು ಪ್ರಬಂಧಗಳನ್ನು ಬೇಕನ್ ಹೊರತಂದ. 1612ರಲ್ಲಿ ಈ ಸಂಖ್ಯೆ 38ಕ್ಕೂ 1625ರಲ್ಲಿ 58ಕ್ಕೂ ಏರಿತು. ಮಾಂಟೇನ್ 1603ರ ಸುಮಾರಿಗೆ ಇಂಗ್ಲೆಂಡಿನಲ್ಲಿ ಹೆಸರು ಮಾಡಿದ್ದ. ಅವನ ಪ್ರಬಂಧಗಳ ಇಂಗ್ಲಿಷ್ ಅನುವಾದಗಳು ಎಸೈಸ್ (ಇssಚಿis) ಎಂಬ ಹೆಸರಿನಿಂದ ಪ್ರಕಟವಾಗಿದ್ದುವು. ಬೇಕನ್ ತನ್ನ ಆಮೇಲಿನ ಬರಹಗಳಲ್ಲಿ ವಿಷಯ ವೈವಿಧ್ಯವನ್ನು ಸಾಧಿಸಿದ್ದ. ಆದರೆ ಮಾಂಟೇನನ ಸಿದ್ಧಿಗೆ ಕಾರಣಗಳಾದ ಅವನ ಪ್ರಬಂಧಗಳ ಬಿಡುವೀಸುತನ, ಅಭಿವ್ಯಕ್ತಿಯ ಧಾರಾಳ, ನಿರ್ದಿಷ್ಟ ಆಕಾರವಿಲ್ಲದ್ದು ಎಂದು ಭಾಸವಾದರೂ ಅನಿರ್ದೇಶ್ಯವಾದ ಒಂದು ಭಾವಸೂತ್ರಕ್ಕೆ ಕಟ್ಟುಬಿದ್ದ ಆಕಾರಸಿದ್ಧಿ-ಈ ಲಕ್ಷಣಗಳು ಬೇಕನ್ನನ ಪ್ರಬಂಧಗಳಲ್ಲಿ ಕಂಡುಬರುತ್ತಿರಲಿಲ್ಲ. ಬೇಕನ್ನನ ಪ್ರಬಂಧಗಳು ತುಂಬ ಸಂಕ್ಷೇಪವಾದವು; ಸೂತ್ರಪ್ರಾಯವಾದ, ಅಲಂಕೃತವಾದ, ವಿಧಿ-ನಿಷೇಧಗಳಿಂದ ಕೂಡಿದ ಪ್ರಭುಸಂಮಿತ ಶೈಲಿಯ ಗಂಭಿರಗದ್ಯ ರಚನೆಗಳು.

ಬೇಕನ್ನನ ತರುವಾಯ ಇಂಗ್ಲೆಂಡಿನಲ್ಲಿ ರೆಸ್ಟೋರೇಷನ್ (ರಾಜಪ್ರಭುತ್ವದ ಪುನಸ್ಥಾಪನೆ) ಆಗುವವರೆಗೆ ಗಣ್ಯರಾದ ಪ್ರಬಂಧಕಾರರು ಯಾರೂ ಕಂಡುಬರುವುದಿಲ್ಲ. ಏಬ್ರಹಾಮ್ ಕೌಲಿ (1618-1667) ಬರೆದ ಎಸ್ಸೆ ಎಂಬ ಕೆಲವು ಉಪನ್ಯಾಸಗಳು 1668ರಲ್ಲಿ ಪ್ರಕಟವಾದವು. ಇವುಗಳಲ್ಲಿ ನನ್ನನ್ನು ಕುರಿತು ಎಂಬ ಬರಹ ಈ ಜಾತಿಯ ಚಿಕ್ಕ ಗದ್ಯರಚನೆಗೆ ಮಾದರಿಯಾದ ಉದಾಹರಣೆ. ಇಂಗ್ಲಿಷ್ ಎಸ್ಸೆಯ ನಿಜವಾದ ಜನಕ ಬೇಕನ್ನನಲ್ಲ ಕೌಲಿ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ.

18ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಸುದ್ದಿ ಪತ್ರಿಕೆಯ ಬೆಳವಣಿಗೆ ಒಂದು ಪ್ರಮುಖ ಶಕ್ತಿಯಾಗಿ ಪರಿಣಮಿಸಿತ್ತು. ರಿಚರ್ಡ್ ಸ್ಟೀಲ್ ಎಂಬಾತ ಟ್ಯಾಟ್ಲಜ್ ಎಂಬ (ಪೆನ್ನಿಬೆಲೆಯ) ಪತ್ರಿಕೆಯ ಮೂಲಕವೂ (1709-11) ಸ್ಟೀಲ್ ಮತ್ತು ಜೋಸೆಫ್ ಅಡಿಸನ್ ಜೊತೆಗೂಡಿ ಸ್ಟೆಕ್ಟೇಟರ್ ಪತ್ರಿಕೆಯ ಮೂಲಕವೂ ಪ್ರಬಂಧ ಸಾಹಿತ್ಯವನ್ನು ಜನಪ್ರಿಯ ಮಾಡಿದರು. ಬದುಕಿನ ಬಹುಮುಖವಾದ ವಿದ್ಯಮಾನವನ್ನು ಪ್ರತಿಬಿಂಬಿಸುವ ಚಿಕ್ಕ ಚಿಕ್ಕ ಬರಹಗಳು ಈ ಪತ್ರಿಕೆಗಳಲ್ಲಿ ಕ್ರಮವಾಗಿ ಹೊರಬಂದವು. ಈ ಎಲ್ಲ ಬರಹಗಳೂ ಶುದ್ಧ ಎಸ್ಸೆಗಳಾಗಿರಲಿಲ್ಲ; ಎಸ್ಸೆ ಮತ್ತು ಪಾತ್ರಚಿತ್ರಣ-ಇವು ಬೆರೆತ ಮಿಶ್ರಜಾತಿಯ ಬರಹಗಳಾಗಿದ್ದುವು (ಗೊರೂರು ರಾಮಸ್ವಾಮಯ್ಯಂಗಾರರ ಕೆಲವು ಪ್ರಬಂಧಗಳು ಈ ಜಾತಿಯವು). ಈ ಬಗೆಯ ಬರಹಗಳಲ್ಲಿ ಸ್ಟೀಲ್‍ನ ಮಗುತನದ ನೆನಪುಗಳು ಗಮನಾರ್ಹ. ಇದರ ಮಾದರಿಯ ಮೇಲೆ ಮುಂದೆ ಆಲಿವರ್ ಗೋಲ್ಡ್‍ಸ್ಮಿತ್, ಚಾರಲ್ಸ್ ಲ್ಯಾಮ್ ಮತ್ತು ಆರ್. ಎಲ್. ಸ್ಟೀವನ್‍ಸನ್ ಅವರುಗಳು ತಮ್ಮ ಪ್ರಬಂಧಗಳನ್ನು ಬರೆದರು. ಪ್ರಬಂಧ ವ್ಯವಸಾಯಕ್ಕಾಗಿ ದುಡಿದ ಟ್ಯಾಟ್ಲರ್ (1711ರಲ್ಲಿ) ಮತ್ತು ಸ್ಪೆಕ್ಟೇಟರ್ (1713ರಲ್ಲಿ) ನಿಂತುಹೋದ ಮೇಲೆ ಅನೇಕ ಪತ್ರಿಕೆಗಳು ಈ ದಿಸೆಯಲ್ಲಿ ಕೆಲಸ ಮಾಡುದುವು. ಫೀಲ್ಡಿಂಗನ ಪ್ರಬಂಧಗಳು ಕೊವೆಂಟ್ ಗಾರ್ಡ್‍ನ್ ಪತ್ರಿಕೆಯಲ್ಲಿ (1752) ಪ್ರಕಟವಾದುವು; ಪ್ರಸಿದ್ಧ ನಿಘಂಟುಕಾರ ಮತ್ತು ಗ್ರಂಥಕರ್ತ ಸ್ಯಾಮ್ಯೂವಲ್ ಜಾನ್‍ಸನ್ನನ (1709-1784) ಪ್ರಬಂಧಗಳು ರ್ಯಾಂಬ್ಲರ್ (1750). ಅಡ್ವೆಂಚರರ್ (1752) ಮತ್ತು ಐಡ್ಲರ್ (1759) ಎಂಬೀ ಪತ್ರಿಕೆಗಳಲ್ಲಿ ಬೆಳಕು ಕಂಡುವು. ಇವನ್ನು ಹಿಂಬಾಲಿಸಿ ಹುಟ್ಟಿಕೊಂಡ ಅನೇಕ ಸಂಭಾವಿತ ಪತ್ರಿಕೆಗಳಲ್ಲಿ ಪ್ರತಿಷ್ಠಾವಂತರೂ ಪ್ರತಿಭಾಶಾಲಿಗಳೂ ಪ್ರಬಂಧವೆಂಬ ಶಿವಧನುಸ್ಸನ್ನು ಒಗ್ಗಿಸಿ ತಮ್ಮ ಬಲ ಪರೀಕ್ಷೆ ಮಾಡಿಕೊಳ್ಳುವುದು ಒಂದು ಫ್ಯಾಷನ್ನಾಯಿತು. ಈ ಫ್ಯಾಷನ್ ಮೆರವಣಿಗೆಯಲ್ಲಿ ತೇರ್ಗಡೆ ಹೊಂದಿದವನೆಂದರೆ ಆಲಿವರ್ ಗೋಲ್ಡ್‍ಸ್ಮಿತ್. ಸಿಟಿಜನ್ ಆಫ್ ದಿ ವಲ್ರ್ಡ್ (1760) ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಇವನ ರುಚಿಕರವಾದ ಪ್ರಬಂಧಗಳನ್ನು ಮೀರಿಸುವಂಥವು ಇವನ ತರುವಾಯ 18ನೆಯ ಶತಮಾನದಲ್ಲಿ ರಚಿತವಾಗಲಿಲ್ಲ. ಸುಮಾರು 50 ಸಂಪುಟಗಳನ್ನು ತುಂಬುವಷ್ಟು ಅಪಾರ ಸಂಖ್ಯೆಯಲ್ಲಿ ಪ್ರಬಂಧಗಳೇನೋ ರಚಿತವಾದುವು; ಆದರೆ ಸಾಮಾನ್ಯವಾಗಿ ಎಲ್ಲವೂ ಸಾಧಾರಣ ಕೈವಾಡದ ಸಪ್ಪೆಬರಹಗಳು. ಈ ಶತಮಾನದಲ್ಲಿ ಕಥೆ-ಕಾದಂಬರಿಗಳಂಥ ಕಾಲ್ಪನಿಕ ಸಾಹಿತ್ಯವಲ್ಲದ ಇತರ ಎಲ್ಲ ಬಗೆಯ ಗದ್ಯರಚನೆಗಳಿಗೂ ಎಸ್ಸೆಯ ಮುದ್ರೆಯೊತ್ತಿ, ಎಸ್ಸೆ ಎಂಬ ಹೆಸರಿನ ದುರುಪಯೋಗ ನಡೆಯಿತು; ಅದರ ನೈಜಗುಣದ ಇಳಿಕೆ ಮೊದಲಾಯಿತು. ಅದರ ಸತ್ತ್ವದ ಬೆಲೆ ಕುಗ್ಗತೊಡಗಿತು; ಇದರ ಪರಿಣಾಮವಾಗಿ, ಡ್ರೈಡನ್ ತನ್ನ ಸಾಹಿತ್ಯಕ ಸೌಂದರ್ಯಮೀಮಾಂಸೆಯ ವಿಚಾರ ವಿಮರ್ಶೆಯನ್ನು ಎನ್ ಎಸ್ಸೆ ಆನ್ ಡ್ರಮ್ಯಾಟಿಕ್ ಪೊಯೆಸಿ ಎಂದು ಕರೆಯುವಂತಾಯಿತು. ತನ್ನ ಸಮಾಜ ವಿಡಂಬನೆ ವಿಮರ್ಶೆಗಳ ಚುರುಕಾದ ಬರಹಗಳನ್ನು ಅಲೆಕ್ಸಾಂಡರ್ ಪೋಪ್ ಎಸ್ಸೆ ಆನ್ ಮ್ಯಾನ್ ಎಂದು ಹೆಸರಿಸುವಂತಾಯಿತು. 1609ರಲ್ಲಿಯೆ ನಾಟಕಕಾರ ಮತ್ತು ಕವಿ ಬೆನ್‍ಜಾನ್‍ಸನ್ ಪ್ರಬಂಧಕಾರನನ್ನು ಹೀಗಳೆದಿದ್ದ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

19ನೆಯ ಶತಮಾನದ ಪ್ರಥಮಪಾದದಲ್ಲಿ ಇಂಗ್ಲಿಷ್ ಪ್ರಬಂಧ ಪುನಶ್ಚೇತನಗೊಂಡಿತು. ಈ ಕಾಲದ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವ ಮಾಂಟೇನನ ಮಾರ್ಗವನ್ನು ಅನುಸರಿಸಿ ಬರೆದ ಚಾರಲ್ಸ್ ಲ್ಯಾಮ್ (1775-1834). ಪ್ರಬಂಧ ನಿಜವಾಗಿ ಮಾಡಬೇಕಾದ ಕೆಲಸ ಎಂದರೆ ಬರಹಗಾರ ಸ್ವಂತ ಅನುಭವಗಳನ್ನು ಪ್ರಕಾಶಪಡಿಸುವುದು ಎಂಬುದು ಇವನ ಅಭಿಪ್ರಾಯವಾಗಿತ್ತು. ಈ ಗುರಿಯಿಟ್ಟುಕೊಂಡು ಬರೆದ ಈತನ ಪ್ರಬಂಧಗಳು ಕ್ರಮವಾಗಿ (1820 ರಿಂದ 1822ರ ಪೂರ್ತಿ) ಎಸ್ಸೇಸ್‍ಆಫ್ ಈಲಿಯ ಎಂಬ ಹೆಸರಿನಲ್ಲಿ ಪ್ರಕಟವಾದುವು. ಒಬ್ಬ ಲಂಡನ್ ವರ್ತಕನ ಕಚೇರಿಯಲ್ಲಿ ಸಾಮಾನ್ಯ ಗುಮಾಸ್ತೆಯಾಗಿದ್ದ ಇವನ ಹೆಸರು ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಚಿರಸ್ಥಾಯಿಯಾಗಿರುವುದು ಷೇಕ್ಸ್‍ಪಿಯರ್ ನಾಟಕಕಥೆಗಳ (1807) ಮತ್ತು ಪ್ರಬಂಧಗಳ ಕಾರಣದಿಂದ. 1820ರಲ್ಲಿ ಪ್ರಾರಂಭವಾದ ಲಂಡನ್ ಮ್ಯಾಗಜೀನ್ ಪತ್ರಿಕೆ ಇವನ ಪ್ರಸಿದ್ಧವಾದ ಪ್ರಬಂಧಗಳ ರಚನೆಗೆ ಇಂಬು ಕೊಟ್ಟಿತು. ಅಡಿಸನ್ ಮತ್ತು ಜಾನ್‍ಸನ್ನರ ಸರಳನಿರೂಪಣಾ ಪದ್ಧತಿಯನ್ನು ಕೈಬಿಟ್ಟು ಲ್ಯಾಮ್ 17ನೆಯ ಶತಮಾನದ ಪ್ರಬಂಧಕಾರರ ವಾಗಾಡಂಬರದ ಹಾಗೂ ಪ್ರತಿಮಾನಿಷ್ಠ ಶೈಲಿಯಿಂದ ಸ್ಫೂರ್ತಿಪಡೆದ. ಸ್ವಂತ ಸಂವೇದನೆಗಳನ್ನು ಹೃದಯಸ್ಪರ್ಶಿಯಾಗುವಂತೆ ಅಭಿವ್ಯಕ್ತಪಡಿಸುವ ಕಲೆಯಲ್ಲಿ ಹಿಂದೆ ಯಾರೂ ಮುಟ್ಟದ ಮಟ್ಟವನ್ನು ಮುಟ್ಟಿದ. ಅವನ ಕನಸಿನ ಮಕ್ಕಳು ಈ ಬಗೆಯ ಬರಹಕ್ಕೆ ಶ್ರೇಷ್ಠ ಉದಾಹರಣೆ. ಈ ಕಾಲದಲ್ಲಿ ಲ್ಯಾಮ್ ಅಲ್ಲದೆ ಅನೇಕ ಬರಹಗಾರರು ಪ್ರಬಂಧದ ಕೃಷಿಮಾಡಿದರು. ಇವರಲ್ಲಿ ಅತ್ಯಂತ ಪ್ರಮುಖರಾದವರೆಂದರೆ-ಲೀ ಹಂಟ್ (1784-1859). ಫ್ರಾನ್ಸಿಸ್ ಜೆಫ್ರಿ (1773-1850), ವಿಲ್ಯಂ ಹ್ಯಾಸ್ಲಿಟ್ (1778-1830) ಮತ್ತು ತಾಮಸ್ ಡಕ್ವಿನ್ಸಿ (1785-1859). ಕಾಲಕ್ರಮದಲ್ಲಿ ಪ್ರಬಂಧ ಪ್ರಕಾರವನ್ನು ಆಕ್ರಮಿಸಿಕೊಂಡಿದ್ದ ಉಪದೇಶಪ್ರವೃತ್ತಿಯನ್ನೂ ಶ್ರೀಮದ್ಗಾಂಭೀರ್ಯವನ್ನೂ ಹೊರದೂಡಿ ಸ್ಪೆಕ್ಟೇಟರ್ ಪತ್ರಿಕೆಯ ಪ್ರಬಂಧಗಳ ಲಾಲಿತ್ಯಕ್ಕೆ ಜೀವ ದಾನ ಮಾಡಿದವ ಲೀ ಹಂಟ್. ಪ್ರಬಂಧವನ್ನು ಮೊತ್ತಮೊದಲಿಗೆ ಸಾಹಿತ್ಯ ವಿಮರ್ಶೆಯ ಕಾರ್ಯಕ್ಕೆ ಯಶಸ್ವಿಯಾಗಿ ಬಳಸಿಕೊಂಡವರು ಫ್ರಾನ್ಸಿಸ್ ಜೆಫ್ರಿ ಮತ್ತು ಹ್ಯಾಸ್ಲಿಟ್. ಈ ಪ್ರಕಾರಕ್ಕೆ ಹ್ಯಾಸ್ಲಿಟ್ಟನ ಮೈ ಫಸ್ಟ್ ಅಕ್ವೇಂಟೆನ್ಸ್ ವಿತ್ ಪೊಯೆಟ್ಸ್ ಎಂಬ ಪ್ರಬಂಧ ಸೊಗಸಾದ ಉದಾಹರಣೆ. ಡಿಕ್ವಿನ್ಸಿ ಅನೇಕ ಆತ್ಮವೃತ್ತರೂಪದ ಹಾಗೂ ವಿಮರ್ಶಾತ್ಮಕ ಪ್ರಬಂಧಗಳನ್ನು ರಚಿಸಿದ. ಇವನು ಕೇವಲ ಪ್ರಬಂಧಕಾರನಾಗಿಯೇ ಪ್ರಸಿದ್ಧನಾದರೂ ಒಂದು ಕಲಾಪ್ರಕಾರವಾಗಿ ಇವನ ರಚನೆಗಳು ಒಳ್ಳೆಯ ಮಾದರಿಗಳಲ್ಲಿ ಎಂಬ ಅಭಿಪ್ರಾಯವಿದೆ.

ಇಂಗ್ಲಿಷ್ ಪ್ರಬಂಧದ ಬೆಳೆವಣಿಗೆಯಲ್ಲಿ ಮುಂದಿನ ಘಟ್ಟ ವಿಕ್ಟೋರಿಯ ಮಹಾರಾಣಿಯ ಕಾಲ; 19ನೆಯ ಶತಮಾನದ ಉತ್ತರಾರ್ಧ. ಇದು ಗಂಭೀರ ರೀತಿಯ ಶಿಷ್ಟ ಪ್ರಬಂಧಗಳ ಹುಲುಸಾದ ಬೆಳೆಯನ್ನು ಕಂಡ ಕಾಲ; ಈ ಕಾಲದ ಪ್ರಬಂಧಗಳು ಬಹುಮಟ್ಟಿಗೆ ವಿಮರ್ಶಾತ್ಮಕ ಇಲ್ಲವೆ ಐತಿಹಾಸಿಕ; ವಸ್ತುನಿಷ್ಠವಾದ ಈ ಪ್ರಬಂಧಗಳು ಅನೇಕ ವೇಳೆ ಕಟುವಾಗಿಯೂ ವಿವಾದಾತ್ಮಕವಾಗಿಯೂ ಇರುತ್ತಿದ್ದವು. ಈ ಬಗೆಯ ಪ್ರಬಂಧ ತಾಮಸ್ ಮಕಾಲೆ (1800-1859) ಅಂಥವರ ಕೈಯಲ್ಲಿ ರಾಜಕೀಯ ಒಲವು ನಿಲವುಗಳ ಪ್ರಕಟಣೆಯ ಮಾಧ್ಯಮವೂ ಆಯಿತು. 19ನೆಯ ಶತಮಾನದ ಕೊನೆಯ ವೇಳೆಗೆ ಆರ್.ಎಲ್.ಸ್ಟೀವನ್‍ಸನನಂಥ (1850-94) ಸಾಹಿತಿಗಳ ಕೃಷಿಯಿಂದಾಗಿ ಪ್ರಬಂಧ ಮಾಂಟೇನ್ ಮತ್ತು ಲ್ಯಾಮ್ ಅವರ ಶುದ್ಧ ಸಂಪ್ರದಾಯವನ್ನು ಮತ್ತೆ ರೂಢಿಸಿಕೊಂಡು, ಉಚ್ಚಮಟ್ಟದ ಸಾಹಿತ್ಯಕೃತಿಯಾಯಿತು. ಈ ಕಾಲದಲ್ಲಿ ಅನೇಕ ಶ್ರೇಷ್ಠವರ್ಗದ ಕವಿಗಳೂ ವಿಮರ್ಶಕರೂ ಈ ಸಾಹಿತ್ಯಪ್ರಕಾರದಿಂದ ಆಕರ್ಷಿತರಾದರು. ಇವರಲ್ಲಿ ಹೆಸರಾದವರೆಂದರೆ, ಮ್ಯಾತ್ಯೂ ಆರ್ನಲ್ಡ್, ಅಗಸ್ಟೀನ್ ಬಿರೆಲ್, ಇ.ವಿ.ಲ್ಯೂಕಸ್, ಎಡ್‍ಮಂಡ್ ಗಾಸ್ ಮುಂತಾದವರು. ಈ ಪ್ರಬಂಧಕಾರರ ಶ್ರೇಣಿಯಲ್ಲಿ ತನ್ನ ಸೊಗಸಾದ ಪ್ರಬಂಧಗಳಿಂದ ಸಹೃದಯರ ಗಮನ ಸೆಳೆದ ಏಕೈಕ ಪ್ರಬಂಧಕಾರ್ತಿ, ಆ್ಯಲಿಸ್ ಮೇನೆಲ್.

20ನೆಯ ಶತಮಾನದಲ್ಲಿ ಪ್ರಬಂಧ ಹೂ ಹಗುರವಾಗಿ, ಒಂದು ಸಾಹಿತ್ಯಕ್ರೀಡೆಯಾಗಿ, ವಾಗ್ವಿಲಾಸವಾಗಿ ಶೋಭಿಸತೊಡಗಿತು. ಹೀಗೆ ಪ್ರಬಂಧರಚನೆಯನ್ನು ಭಾವಗೀತೆಯಂತೆ ಆತ್ಮಾಭಿವ್ಯಕ್ತಿಯ ಸಾಧನವಾಗಿ ಬಳಸಿಕೊಂಡು ಆತ್ಮಾರಾಮವಾಗಿ ಬರೆಯತೊಡಗಿದವರಲ್ಲಿ ಹಿಲೇರ್ ಬೆಲಕ್, ಮಾಕ್ಸ್ ಬೀರ್‍ಬಾಮ್, ಜಿ.ಕೆ.ಚೆಸ್ಟರ್‍ಟನ್, ಇ.ವಿ.ಲ್ಯೂಕಸ್, ಎ.ಜಿ.ಗಾರ್ಡಿನರ್ (ಕಾವ್ಯನಾಮ ಆಲ್ಫ ಆಫ್ ದಿ ಫ್ಲೊ), ರಾಬರ್ಟ್‍ಲಿಂಡ್ ಇವರು ಮುಖ್ಯರು.

ಪ್ರಬಂಧದ ತವರುನಾಡಾದ ಫ್ರಾನ್ಸಿನಲ್ಲೂ ಅದರ ಕೃಷಿ ಗಮನಾರ್ಹವಾಗಿ ಸಾಗಿಬಂದಿದೆ. ಪ್ರಸಿದ್ಧ ಸಾಹಿತಿಗಳಾದ ಸೆಯಿಂಟ್ ಬವ್, ಆ್ಯನತೊಲೆ ಫ್ರಾನ್ಸ್ ಮುಂತಾದವರು ಪ್ರಬಂಧಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ಸಲ್ಲಿಸಿದ್ದಾರೆ. ಫ್ರೆಂಚ್ ಪ್ರಬಂಧಗಳು ಕೆಲವಾದರೂ ಕನ್ನಡಕ್ಕೆ ಅನುವಾದವಾಗಬೇಕಾದದ್ದು ಅಗತ್ಯ.

ಎಸ್ಸೆ, ಎಸ್ಸೆಯಿಸ್ಟ್ ಎಂಬ ಪದಗಳನ್ನು ಬಹುಮಟ್ಟಿಗೆ ಎಲ್ಲ ಯೂರೋಪಿಯನ್ ಭಾಷೆಗಳವರೂ ಸ್ವೀಕರಿಸಿದ್ದಾರೆ. ಅಮೆರಿಕದಲ್ಲಿ ಹೆನ್ರಿ ಡೇವಿಡ್ ತೋರೊ ಮತ್ತು ಎಮರ್‍ಸನ್ (1803-1882) ಪ್ರಬಂಧ ಸಾಹಿತ್ಯದಲ್ಲಿ ಜಗತ್ಪ್ರಸಿದ್ಧರು. ಇವರ ಪ್ರಬಂಧಗಳು ಉದಾತ್ತ ವಿಚಾರಗಳಿಗೂ ಭವ್ಯಶೈಲಿಗೂ ಹೆಸರಾಗಿದ್ದು ಭಾರತೀಯ ವಿಚಾರಪರರ ಮೇಲೆ ಗಮನಾರ್ಹ ಪ್ರಭಾವ ಬೀರಿವೆ.

ಪ್ರಬಂಧಸಾಹಿತ್ಯವನ್ನು ಕುರಿತ ಸ್ಥೂಲವಾದ ಮೇಲಿನ ಚಾರಿತ್ರಕ ಸಮೀಕ್ಷೆಯ ಆಧಾರದ ಮೇಲೆ ಹೇಳುವುದಾದರೆ ಪಾಶ್ಚಾತ್ಯಪ್ರಬಂಧದ ಸ್ವರೂಪ ವಿವಿಧ ಬಗೆಯದು. ಒಂದೇ ರೂಪದ ಲಾರ್ವಾಕೀಟದಿಂದ ಬಗೆಬಗೆಯ ಅಳತೆಯ, ಆಕಾರದ ಬಣ್ಣ ಬಣ್ಣಗಳ ಚಿಟ್ಟೆಗಳು ಹುಟ್ಟಿಕೊಳ್ಳುವ ಹಾಗೆ ಮೂಲ ಎಸ್ಸೆಯಿಂದ ಅನೇಕ ಪ್ರಭೇದಗಳು ರೂಪಗೊಂಡಿವೆ. ಆ ಪ್ರಕಾರದ್ದು ಎಸ್ಸೆ, ಈ ಜಾತಿಯದು ಅಲ್ಲ ಎನ್ನುವಂತಿಲ್ಲ. ಪರಿವರ್ತನಶೀಲವಾಗಿ ಬೆಳೆದುಬಂದಿದೆ. ಪ್ರಬಂಧ ಸಾಹಿತ್ಯ ಹೀರಿರುವುದರಿಂದಲೇ ಅದರ ಸ್ವರೂಪವನ್ನು ಒಂದೇ ವಾಕ್ಯದಲ್ಲಿ ಸೂತ್ರಪ್ರಾಯವಾಗಿ ತಿಳಿಸುವುದು ಕಷ್ಟ. ಬೇಕನ್ನನ ಕಾಲದಿಂದ ಹಿಡಿದು ಇಂದಿನ ವರೆಗೂ ಪ್ರಬಂಧದ ಬದಲಾಗುತ್ತಾ ಬಂದ ಒಲವು ನಿಲವುಗಳನ್ನು ಅವಲಂಬಿಸಿ ಅದರ ವ್ಯಾಖ್ಯೆ ಮಾರ್ಪಾಡಾಗುತ್ತ ಸಾಗಿದೆ. ಬೇಕನ್ ಸೂತ್ರಿಸಿದ್ದು ಹೀಗೆ: ಎಸ್ಸೆ 'ವಿಕ್ಷಿಪ್ತ ಧ್ಯಾನ. ದಾರ್ಶನಿಕನಾದ ಬೇಕನ್ ಹೀಗೆ ಹೇಳಿದ್ದು ತೀರ ಸಹಜ. ಅವನ ಪ್ರಬಂಧಗಳ ವಿದ್ವದ್ವೀವೇಕದ ಕೋಶಗಳು, ಸುಭಾಷಿಗಳ ಭಂಡಾರ. ಎಲಿಸóಬೆತ್‍ರಾಣಿಯ ಕಾಲದ ನೈತಿಕ ಪ್ರವಣವಾದ ಯುಗಧರ್ಮಕ್ಕೆ ತಕ್ಕಂತಿದ್ದುವು, ಅವನ ಕಿರುಬರಹಗಳು. ಎಸ್ಸೆ-ಹರಿಯ ಬಿಟ್ಟ ಮನಸ್ಸಿನ ಸ್ವೇಚ್ಛಾವಿಹಾರ. ಕ್ರಮವಿಲ್ಲದ, ಅಪಕ್ವವಾದ ಕೃತಿ, ಸಕ್ರಮವಾದ, ವ್ಯವಸ್ಥಾಬದ್ಧ ರಚನೆಯಲ್ಲ ಎಂದು ಜಾನ್‍ಸನ್ ವಿವರಿಸಿದ. ಲ್ಯಾಮ್ ಮತ್ತು ಹ್ಯಾಸ್‍ಲಿಟ್ ಪ್ರಬಂಧಕ್ಕೆ ವೈಯಕ್ತಿಕ ಸ್ವರೂಪವನ್ನು ಕೊಟ್ಟರು. ಲ್ಯಾಮ್ ತಿಳಿಹಾಸ್ಯವನ್ನು ಬೆರೆಸಿ, ಪ್ರಬಂಧಕ್ಕೆ ಒಂದು ಹಸನ್ಮುಖವನ್ನು ನೀಡಿದ. ಅಡಿಸನ್ ಮತ್ತು ಸ್ಟೀಲ್ ಅನಿಬದ್ಧವಾಗಿದ್ದ ಪ್ರಬಂಧಕ್ಕೆ ಕ್ರಮಬದ್ಧತೆಯ ತೋರಿಕೆಯನ್ನು ಕಲ್ಪಿಸಿದರು. ಸ್ಟೀವನ್‍ಸನ್ ಗದ್ಯಶೈಲಿಯ ಸೊಬಗನ್ನು ಸೇರಿಸಿದ. ಬರ್ಕನ್‍ಹೆಡ್ ಎಂಬಾತನ ಈ ವಿವರಣೆ ಹೆಚ್ಚು ವಿವರಪೂರ್ಣವಾಗಿದೆ: `ನಿಜವಾದ ಎಸ್ಸೆ ಸಾಹಿತ್ಯದ ಚಿಲ್ಲರೆ ಅಲಂಕರಣಕಾರ್ಯಗಳಲ್ಲಿ ತೊಡಗಿರುವ ಮನಸ್ಸು ಆರಾಮವಾಗಿ ಚಿಂತನೆ ಮಾಡುತ್ತ ನಿರ್ಮಾಣ ಮಾಡಿದ ರಚನೆ. ನೆನಪಿನ ಗುಂಗಿನಲ್ಲಿ ತನ್ನಲ್ಲಿ ತಾನು ನಲಿಯುತ್ತ ಸೃಷ್ಟಿಸಿದ ಕಲಾಕೃತಿ. ತನ್ನ ಉದ್ಯಾನದಲ್ಲೋ, ತಾನು ಸಾಕಿದ ಮುದ್ದು ಪ್ರಾಣಿಗಳೊಡನೆಯೋ, ತನ್ನ ಗೆಳೆಯರೊಂದಿಗೋ ಕಾಲ ಕಳೆಯುವಾಗ ಪಡೆಯಬಹುದಾದಂಥ ಸಂತೋಷವನ್ನು ಕೊಡುವ ಒಂದು ವಿನೋದ ಪ್ರಬಂಧಕಾರನಿಗೆ ವಿನೋದವೆನಿಸತಕ್ಕದ್ದು ಸಹೃದಯನಿಗೂ ವಿನೋದವೇ ಆಗಿರಬೇಕಲ್ಲವೆ! ಪ್ರಬಂಧದ ಬೆಳವಣಿಗೆಯ ಎಲ್ಲ ಅವಸ್ಥಾಭೇದಗಳನ್ನೂ ಗಮನಿಸಿ, ನೂತನ ಆಕ್ಸ್‍ಫರ್ಡ್ ನಿಘಂಟು ಆಧುನಿಕ ಇಂಗ್ಲಿಷ್ ಎಸ್ಸೆಯ ಸ್ವರೂಪವನ್ನು ಹೀಗೆ ಒಕ್ಕಣಿಸಿದೆ. `ಎಸ್ಸೆ ಒಂದು ನಿರ್ದಿಷ್ಟ ವಿಷಯವನ್ನು ಕುರಿತ ಸಾಧಾರಣ ಉದ್ದದ ರಚನೆ, ಮೊದಲು ಅದರ ಸ್ವರೂಪದಲ್ಲಿ ಅಚ್ಚುಕಟ್ಟಿನ ಕೊರತೆಯಿತ್ತು. ಆದರೆ ಈಗ ಅದರ ವ್ಯಾಪ್ತಿ ಪರಿಮಿತವಾಗಿದ್ದರೂ ಶೈಲಿ ಪರಿಶ್ರಮಪೂರ್ಣವಾದ ವಿನ್ಯಾಸವುಳ್ಳದ್ದಾಗಿದೆ. ಹೀಗೆ ಬೆಳೆದು ಬಂದ ಎಸ್ಸೆ ಎಷ್ಟು ಉಪಯುಕ್ತ ಸಾಹಿತ್ಯ ಮಾಧ್ಯಮವಾಗಿ ಪರಿಣಮಿಸಿದೆ ಎಂದರೆ ತತ್ತ್ವ, ವಿಮರ್ಶೆ, ರಾಜ್ಯಶಾಸ್ತ್ರ, ಮತಧರ್ಮ ಮುಂತಾದ ಯಾವುದೇ ವಿಷಯವನ್ನು ಕುರಿತ ಗದ್ಯದ ಬರವಣಿಗೆಯನ್ನೂ ಎಸ್ಸೆಯ ರೂಪದಲ್ಲಿ ವಾಚಕರಿಗೆ ಉಪಾದೇಯವಾಗಿ ಮಾಡುವ ಲೇಖನಕಲೆ ಪಾಶ್ಚಾತ್ಯ ದೇಶಗಳಲ್ಲಿ ಬೆಳೆದು ಬಂದಿದೆ. ಕಾದಂಬರಿಯ ಬೆಳವಣಿಗೆಯಲ್ಲಿ ಅದರ ಒಂದು ಅಂಗವಾಗಿ ಎಸ್ಸೆ ರೂಪಗೊಂಡಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ಡಬ್ಲ್ಯೂ. ಎಂ. ತ್ಯಾಕರೆ ಮತ್ತು ಜಾರ್ಜ್ ಎಲಿಯಟ್ ಇವರ ಕಾದಂಬರಿಗಳಲ್ಲಿ ಈ ಅಂಶ ಸ್ಪಷ್ಟಗೋಚರ. ವಾರ್ತಾಪತ್ರಿಕೆಗಳ ಸುದ್ದಿ ಸಮಾಚಾರಗಳ ತುಣುಕು ಬರಹಗಳನ್ನು ಬಿಟ್ಟು ಉಳಿದ ಲೇಖನಗಳಲ್ಲಿ ಗಣ್ಯವಾದುವು ಎಸ್ಸೆ ರೂಪದಲ್ಲಿರುತ್ತವೆ. ಆದರೆ ಇವು ಯಾವುವೂ ಶುದ್ಧ ಎಸ್ಸೆ ಎನ್ನಿಸವು. ಇವು ಸುವಾಚಕೀಯವಾಗಿರಬಹುದು. ಆಕರ್ಷಕ ಬರವಣಿಗೆಯೂ ಆಗಿರಬಹುದು, ತಿಳಿವಳಿಕೆಯನ್ನು ನೀಡಿ, ವಿಚಾರಪ್ರಚೋದಕವಾಗಿರಬಹುದು, ಜನರ ನಂಬಿಕೆಗಳನ್ನು ಬುಡಮೇಲು ಮಾಡುವಷ್ಟು ಪ್ರಭಾವಶಾಲಿ ಬರಹಗಳಾಗಿರಬಹುದು. ಜಾನ್‍ಮಾರ್ಲೆ, ಜಾನ್ ಸ್ಟೂವರ್ಟ್ ಮಿಲ್, ಆಲ್ಡಸ್ ಹಕ್ಸ್ಲಿ, ಚಾರಲ್ಸ್ ಡಾರ್‍ವಿನ್, ಮಹಾತ್ಮಗಾಂಧಿ, ಬರ್‍ಟ್ರಂಡ್ ರಸೆಲ್, ಜವಹರಲಾಲ್ ನೆಹರೂ, ಶ್ರೀನಿವಾಸ ಶಾಸ್ತ್ರಿ, ರಾಧಾಕೃಷ್ಣನ್-ಮುಂತಾದವರ ಇಂಗ್ಲಿಷ್ ಲೇಖನಗಳನ್ನು ಉತ್ಕøಷ್ಟ ವೈಚಾರಿಕ ಪ್ರಬಂಧಗಳ ವರ್ಗಕ್ಕೆ ಸೇರಿಸಬಹುದು. ಬರ್ಕನ್‍ಹೆಡ್ ಸಂಪಾದನೆ ಮಾಡಿರುವ ದಿ ಹಂಡ್ರಡ್ ಬೆಸ್ಟ್ ಎಸ್ಸೇನ್ ಎಂಬ ಸಂಕಲನದಲ್ಲಿ (1929) ಮತ್ತು ಈಚಿನ ಕೆಲವು ಪಠ್ಯಗ್ರಂಥರೂಪದ ಸಂಕಲಗಳಲ್ಲಿ ಕೂಡ ಇಂಥ ಸಂಕೀರ್ಣ ಜಾತಿಯ ಪ್ರಬಂಧಗಳು ಸೇರ್ಪಡೆಯಾಗಿರುವುದನ್ನು ಗಮನಿಸಬಹುದು. ಇವು ಪ್ರಬಂಧ ಸಾಹಿತ್ಯ ಅಲ್ಲ ಎನ್ನುವ ಮಾತು ಸಲ್ಲದು. ಆದರೂ ನಿಜವಾದ ಶುದ್ಧ ಎಸ್ಸೆ ಕೊಡುವ ನಿರ್ಲಿಪ್ತ ರಸಾನಂದವನ್ನು ಇವು ಕೊಡಲಾರವು ಎನ್ನುವುದಕ್ಕೆ ಹಿಂದೆಗೆಯಬೇಕಾಗಿಲ್ಲ.

ಇನ್ನು ಕನ್ನಡ ಪ್ರಬಂಧಸಾಹಿತ್ಯದ ಬಗೆಗೆ ಸ್ವಲ್ಪ ವಿಚಾರ ಮಾಡಬಹುದು. ಈ ವಿಷಯವಾಗಿ ಪ್ರತ್ಯೇಕ ಪ್ರಬಂಧವೇ ಪ್ರಕಟವಾಗಿರುವುದರಿಂದ (ನೋಡಿ- ಕನ್ನಡದಲ್ಲಿ-ಪ್ರಬಂಧ-ಸಾಹಿತ್ಯ) ಒಟ್ಟಿನ ಮೇಲೆ ಇಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಗಮನಿಸುವ ಪ್ರಯತ್ನ ಮಾಡಿದೆ.

ಈ ಮೊದಲೇ ಗಮನಿಸಿರುವಂತೆ, ಕನ್ನಡ ಪ್ರಬಂಧ ಇಂಗ್ಲಿಷ್ ಎಸ್ಸೆಯ ನೇರವಾದ ಪರಿಣಾಮ ಫಲ. ಕನ್ನಡ ಪ್ರಬಂಧ ಜನ್ಮತಾಳಿದ್ದು ಇಂಗ್ಲಿಷ್ ಪ್ರಬಂಧ ಸಾಹಿತ್ಯದ ಪರಿಚಯುಳ್ಳ ಬರಹಗಾರರ ಪ್ರಯತ್ನದಿಂದಲೇ. ಕಾಲದೃಷ್ಟಿಯಿಂದ ಪುಲ್ಲಯ್ಯನ ಪ್ರಬಂಧಗಳು ಎಂಬ ಎರಡು ಭಾಗಗಳ ಸಂಕಲನವನ್ನು ಮೊತ್ತಮೊದಲಿಗೆ 1931ರಲ್ಲಿ ಹೊರತಂದು ಪ್ರಬಂಧಕಾರರನ್ನು ಮಾತ್ರವಲ್ಲದೆ ಅದರ ಹೆಸರನ್ನೂ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಚುರಪಡಿಸಿದ ಎಂ.ಜಿ. ವೆಂಕಟೇಶಯ್ಯನವರಿಗಿಂತಲೂ ಪೂರ್ವದಲ್ಲೇ ಪ್ರಬಂಧ ಸಾಹಿತ್ಯ ಕೃಷಿಗೆ ಬೀಜಾವಾಪನವಾಗಿತ್ತು. ಇದೇ ಸುಮಾರಿನಲ್ಲಿ-ಒಂದೆರಡು ವರ್ಷ ಹಿಂಚುಮುಂಚಾಗಿ-ವಿ.ಸೀ. (ಮೈಸೂರು ರುಮಾಲು, ಖಾಯಿಲೆಗಳು); ಕೆ. ಸಂಪದ್ಗಿರಿರಾವ್ (ಇಜಾರು); ತೀ.ನಂ. ಶ್ರೀಕಂಠಯ್ಯ (ಮನೆಗಳು); ಎ.ಎನ್. ಮೂರ್ತಿರಾವ್ (ಗೌರಜ್ಜಿ); ಎಂ.ವಿ.ಸೀ. (ಮುಗಿಲುಗಳು, ಹೆಸರುಗಳು) ಮುಂತಾದವರ ಪ್ರಬಂಧಗಳು ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುವು. ಸಂಪದ್ಗಿರಿರಾಯರು ಒಬ್ಬರು ಹೊರತಾಗಿ ಉಳಿದವರೆಲ್ಲರೂ ಶುದ್ಧಪ್ರಬಂಧಕಾರವನ್ನು ಬೆಳೆಸಿಕೊಂಡು ಬಂದು, ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ; ಈ ಮೊಮ್ಮದಲಿನ ಪ್ರಬಂಧಗಳೆಲ್ಲವೂ ರೂಪರಚನೆ, ಮಾತಿನ ಧೋರಣೆ, ಭಾವವಿನ್ಯಾಸ, ಆತ್ಮೀಯ ನಿರೂಪಣೆ, ಮುಂತಾದ ಪ್ರಬಂಧಲಕ್ಷಣಗಳಲ್ಲಿ ಆಂಗ್ಲಪ್ರಬಂಧಸಾಹಿತ್ಯದಿಂದ ಪ್ರಭಾವಿತವಾಗಿದ್ದರೂ ಯಾವ ಒಂದರಲ್ಲಿಯೂ ಯಾವುದೇ ಇಂಗ್ಲಿಷ್ ಪ್ರಬಂಧದ ಅನುಕರಣೆಯಾಗಲಿ ಅನುಸರಣೆಯಾಗಲಿ ಕಂಡುಬರುವುದಿಲ್ಲ. ವೆಂಕಟೇಶಯ್ಯನವರ ಪುಲ್ಲಯ್ಯನ ಪ್ರಬಂಧಗಳು ಚಾರಲ್ಸ್ ಲ್ಯಾಮ್‍ನ ಎಸ್ಸೇಸ್ ಆಫ್ ಈಲಿಯ ಸಂಕಲನವನ್ನು ತನ್ನ ಗ್ರಂಥದಿಂದ ನೆನಪಿಗೆ ತರುವುದಾದರೂ ಸ್ವತಂತ್ರ ರಚನೆಯಾಗಿಯೇ ಮೂಡಿಬಂದಿದೆ. ಪ್ರಬಂಧಪ್ರವರ್ತನೆ ದಕ್ಷಿಣ ಕರ್ನಾಟಕದಲ್ಲಿ ತೊಡಗಿದ ಕಾಲದಲ್ಲಿಯೆ ಉತ್ತರ ಕರ್ನಾಟಕದಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಜೊತೆಗೂಡಿಯೆ ಸಾಗಿತು. ಆಲೂರು ವೆಂಕಟರಾಯರು, ಪಂಜೆ ಮಂಗೇಶರಾಯರು, ಕಡೆಂಗೋಡ್ಲು ಶಂಕರಭಟ್ಟರು, ಜೆ. ವಾಮನಭಟ್ಟ ಮುಂತಾದವರ ವೈಚಾರಿಕೆ ಪ್ರಬಂಧಗಳು ಪತ್ರಿಕೆಗಳ ಮೂಲಕ ಹೊರಬಂದುವು. ಮೈಸೂರು ಪ್ರಾಂತ್ಯದ ಕಡೆ ಸಾಹಿತ್ಯದೃಷ್ಟಿಯ ಪ್ರಬಂಧಗಳ ಬೆಳವಣಿಗೆಗೆ ಪ್ರಬುದ್ಧ ಕರ್ಣಾಟಕ ಪ್ರಬಂಧ ವ್ಯವಸಾಯಕ್ಕೆ ಆಡುಂಬೋಲವಾಯಿತು. ಮಂಗಳೂರಿನ ರಾಷ್ಟ್ರಬಂಧು, ಕಂಠೀರವಗಳ ಪಾತ್ರವೂ ನೆನೆಯತಕ್ಕದ್ದು. ಉತ್ತರ ಕರ್ನಾಟಕದಲ್ಲಿ ಬಹುಶಃ ಮೊತ್ತಮೊದಲಿಗೆ ಪ್ರಕಟವಾದ ಹರಟೆಗಳು ಎಂಬ ಸಂಕಲನ ಧಾರವಾಡದ ಗೆಳೆಯರ ಗುಂಪಿನ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ, ರಂ.ಶ್ರೀ.ಮುಗಳಿ, ಮಧುರಚೆನ್ನ-ಮುಂತಾದವರ ರಚನೆಗಳನ್ನು ಪ್ರಬಂಧಕ್ಷೇತ್ರಕ್ಕೆ ಪ್ರವೇಶ ಮಾಡಿಸಿದುವು. `ಹರಟೆ ಎಂಬ ಮಾತು ಕೂಡ ಮೊದಲು ಪ್ರಚಾರಕ್ಕೆ ಬಂದದ್ದು ಈ ಸಂಕಲನದ ಪ್ರಕಟನೆಯ ನಿಮಿತ್ತದಿಂದ ಎಂದು ಹೇಳಬಹುದು. ಅಖಿಲ ಕರ್ನಾಟಕದ ಅನೇಕ ಲೇಖಕರ ಪ್ರಬಂಧಗಳನ್ನು ಒತ್ತಟ್ಟಿಗೆ ಕಲೆಹಾಕಿ, ಪ್ರಾಂತೀಯ ದೃಷ್ಟಿಯನ್ನು ಕೈಬಿಟ್ಟು. ಸುಳವು-ಹೊಳವು ಎಂಬ 26 ಪ್ರಬಂಧಗಳ ಪ್ರಾತಿನಿಧಿಕ ಪ್ರಬಂಧ ಸಂಗ್ರಹವನ್ನು ಮೊತ್ತಮೊದಲಿಗೆ (1939) ಬೆಳಕಿಗೆ ತಂದ ಕೀರ್ತಿ ಧಾರವಾಡದ ಮನೋಹರ ಗ್ರಂಥಮಾಲೆಗೆ ಸಲ್ಲಬೇಕು. ಅಲ್ಲಿಂದೀಚೆಗೆ ಪ್ರಕಟವಾಗಿರುವ ಏಕಕರ್ತೃಕ ಪ್ರಬಂಧಸಂಕಲನಗಳಿಗೆ ಹಲವು ವಿದ್ವಾಂಸರು ಬರೆದಿರುವ ಮುನ್ನುಡಿಗಳಲ್ಲಿ ಪ್ರಬಂಧನ ಸ್ವರೂಪವನ್ನು ಕುರಿತು ವ್ಯಾಖ್ಯಾನ ನಡೆದಿರುವುದಾದರೂ ಈ ಸಂಕಲನಕ್ಕೆ ಇದರ ಸಂಪಾದಕರಾದ ವಿ.ಕೃ. ಗೋಕಾಕರು ಬರೆದಿರುವ ಮುನ್ನುಡಿ ಚಾರಿತ್ರಿಕ ಪ್ರಾಮುಖ್ಯ ಉಳ್ಳದ್ದು. ಅವರು ತಮ್ಮ ಮುನ್ನುಡಿಯಲ್ಲಿ ಆ ವರೆಗೆ ಕನ್ನಡದಲ್ಲಿ ಕೈಗೆ ಬಂದ ಪ್ರಬಂಧದ ಬೆಳಸನ್ನು ಅನುಲಕ್ಷಿಸಿ, ಕನ್ನಡ ಪ್ರಬಂಧಸಾಹಿತ್ಯವನ್ನು ಲಕ್ಷಣಾನುಸಾರವಾಗಿ ಹೀಗೆ ವರ್ಗೀಕರಿಸಿರುವರು: (1) ಚಿಂತನಪರ ಪ್ರಬಂಧ (2) ಚರಿತ್ರಪ್ರಬಂಧ (ಎಂದರೆ, ವ್ಯಕ್ತಿಚರಿತ್ರೆಯನ್ನು ಕುರಿತವು), (3) ಐತಿಹಾಸಿಕ ಪ್ರಬಂಧ, (4) ವೈಜ್ಞಾನಿಕ ಪ್ರಬಂಧ, (5) ವಿಮರ್ಶಾತ್ಮಕ ಇಲ್ಲವೆ ವಿವೇಚನಾತ್ಮಕ ಪ್ರಬಂಧ, (6) ಸ್ವಭಾವವಿಭಜನ ಪ್ರಬಂಧ, (7) ಲಘು ಕಥಾತ್ಮಕ ಪ್ರಬಂಥ, (8) ವರ್ಣನಪರ ಪ್ರಬಂಧ, (9) ಪತ್ರ ಪ್ರಬಂಧ ಇಲ್ಲವೆ ಹರಟೆಯೋಲೆ, (10) ವಿಡಂಬನಾತ್ಮಕ ಪ್ರಬಂಧ. ಇವುಗಳ ಜೊತೆಗೆ (11) ವ್ಯಕ್ತಿ ಚಿತ್ರಗಳು (ಸುಧಾ ಪತ್ರಿಕೆಯ ವಾರದ ವ್ಯಕ್ತಿಗಳಂಥವು), (12) ಸ್ಮøತಿ ಚಿತ್ರಗಳು (ಡಿ.ವಿ.ಜಿ. ಅವರ ಜ್ಞಾಪಕಚಿತ್ರ ಶಾಲೆ)-ಈ ಪ್ರಭೇದಗಳನ್ನೂ ಸೇರಿಸಿಕೊಳ್ಳಬಹುದು. ಇವೆಲ್ಲವನ್ನೂ ಒಟ್ಟಿನಮೇಲೆ (1) ವರ್ಣನಾತ್ಮಕ, (2) ಚಿಂತನಾತ್ಮಕ (3) ವಿಚಾರಾತ್ಮಕ ಅಥವಾ ವಿವೇಚನಾತ್ಮಕ (4) ಲಘುಪ್ರಬಂಧ ಅಥವಾ ಹರಟೆ (ವಿನೋದಾತ್ಮಕ ಹಾಗೂ ವಿಡಂಬನಾತ್ಮಕ)-ಎಂದು ನಾಲ್ಕೈದು ಸ್ಥೂಲಪ್ರಭೇದಗಳಾಗಿ ವಿಂಗಡಿಸಿಕೊಳ್ಳುವುದು ಸೂಕ್ತ.

ಸುಳವು-ಹೊಳವು ಸಂಕಲನ ಪ್ರಕಟವಾಗುವ ವೇಳೆಗಾಗಲೇ ಪು.ತಿ. ನರಸಿಂಹಾಚಾರ್ಯರ ರಾಮಾಚಾರಿಯ ನೆನಪು (1931), ಅ.ನ. ಕೃಷ್ಣರಾಯರ ಹೊಸಹುಟ್ಟು. (1934), ಎ.ಎನ್. ಮೂರ್ತಿರಾಯರ ಹಗಲುಗನಸುಗಳು (1937), ಜೆ. ವಾಮಭಟ್ಟರ ಕೋದಂಡನ ಉಪನ್ಯಾಸಗಳು (1937),-ಈ ಕೆಲವು ಪ್ರಬಂಧ ಸಂಗ್ರಹಗಳು ಪ್ರಕಟವಾಗಿ ಪ್ರಬಂಧ ಸಾಹಿತ್ಯ ನಿರ್ಮಿತಿಗೆ ಮಾರ್ಗ ಕಲ್ಪನೆ ಮಾಡಿದ್ದುವು. ಹೊಸಗನ್ನಡ ಸಾಹಿತ್ಯದ ಸರ್ವೋದಯ ಕಾಲದಲ್ಲಿ ಜನ್ಮತಾಳಿದ ಪ್ರಬಂಧಶಿಶುವನ್ನು ಕುರಿತು ಗೋಕಾಕರು ಹೀಗೆ ಹೇಳಿದ್ದುಂಟು: 'ಒಂದು ಕಾಲದಲ್ಲಿ ಪ್ರಬಂಧಕ್ಕೆ ಪತ್ರಿಕಾ ವ್ಯವಸಾಯದಿಂದ ಪುಟ ಸಿಕ್ಕಿತು. ಇಂದು ಅದೇ ವ್ಯವಸಾಯವೇ ಪ್ರಬಂಧದ ಅವನತಿಗೆ ಕಾರಣವಾಗಿದೆಯೆಂದು ಅನೇಕ ಆಂಗ್ಲ ವಿಮರ್ಶಕರು ಗೊಣಗುಟ್ಟುವರು. ಈ ವಾದವು ಇಂದಿಗೆ ನಮ್ಮಲ್ಲಿ ನಿರರ್ಥಕವಾದುದು. ನಮ್ಮ ಪ್ರಬಂಧಗಳೂ ದೈನಿಕಗಳೂ ಇನ್ನೂ ತೊಟ್ಟಿಲುಗೂಸುಗಳಾಗಿವೆ. ಅಂದಮೇಲೆ ಇವೆರಡಕ್ಕೂ ಜೋಗುಳವನ್ನು ಹಾಡಿ ಸುವ್ವಿಗೆಯ್ಯದೆ ನಾವು ಇನ್ನೇನು ಮಾಡಬಹುದು? (ಸುಳವು-ಹೊಳವು).

1931ರಲ್ಲಿ ತೊಟ್ಟಿಲಶಿಶುವಾಗಿ ಜೋಗುಳ ಹಾಡಿಸಿಕೊಂಡ ಕನ್ನಡ ಪ್ರಬಂಧ ಶಿಶು ಅಲ್ಲಿಂದೀಚಿನ ಎರಡುಮೂರು ದಶಕಗಳಲ್ಲಿ ಜನನಬಾಲ್ಯಗಳ ಬೆಳವಣಿಗೆಯ ಹಂತವನ್ನು ದಾಟಿ ಪ್ರೌಢಾವಸ್ಥೆಯನ್ನು ಮುಟ್ಟಿ, ಸಹೃದಯರ ಮೆಚ್ಚಿಗೆಗೆ ಪಾತ್ರವಾಗಿ, ವಿಮರ್ಶಕರ ಗಮನವನ್ನು ಸೆಳೆದು, ಶಾಲಾಕಾಲೇಜುಗಳಲ್ಲಿ ಅಭ್ಯಾಸವಿಷಯವಾಗಿ, ಕನ್ನಡದ ಇತರ ಸಮಕಾಲೀನ ಸಾಹಿತ್ಯಪ್ರಕಾರಗಳೊಂದಿಗೆ ಗಣ್ಯಸ್ಥಾನವನ್ನು ಪಡೆಯಿತು. ಎಸ್. ಅನಂತನಾರಾಯಣ ಅವರು ಸಂಪಾದಿಸಿದ ಮುತ್ತು-ಹವಳ (1948). ಜೆ.ಬಿ. ಜೋಶಿ ಸಂಪಾದಿಸಿದ ನಡೆದುಬಂದ ದಾರಿ (ಸಂಪುಟ 3ರ ಪ್ರಬಂಧ ವಿಭಾಗ: 1961), ಗೊರೂರು ರಾಮಸ್ವಾಮಿ ಅಯ್ಯಂಗಾರರು ಕೇಂದ್ರ ಸಾಹಿತ್ಯ ಅಕಾಡೆಮಿಗೆಂದು ಸಂಪಾದಿಸಿದ ಕನ್ನಡ ಪ್ರಬಂಧಗಳು (1961)-ಈ ಮೂರು ಪ್ರಾತಿನಿಧಿಕ ಸಂಕಲನಗಳು; ಮೂವತ್ತು ವರ್ಷಗಳ (1931-61) ಪ್ರಬಂಧದ ಸುಗ್ಗಿಬೆಳೆಸಿನ, ಗಟ್ಟಿಕಾಳಿನ, ಆಯ್ದತೆನೆಗಳು. ಈಚೆಗೆ (1977) ಕನ್ನಡ ಸಾಹಿತ್ಯ ಪರಿಷತ್ತು ಕೆಲವು ಆಯ್ದ ಕನ್ನಡ ಪ್ರಬಂಧಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿಸಿ ಹೊರತಂದು, ಜಾಗತಿಕ ಪ್ರಬಂಧ ಸಾಹಿತ್ಯದೊಂದಿಗೆ ಕನ್ನಡ ಪ್ರಬಂಧ ಗಳಿಸಿಗೊಂಡಿರುವ ಸಮಾನಸ್ಥಾನ ಗೌರವವನ್ನು ವಿಶಾಲಲೋಕಕ್ಕೆ ಪರಿಚಯ ಮಾಡಿಕೊಡುವ ಸಾರ್ಥಕ ಪ್ರಯತ್ನವನ್ನು ಕೈಕೊಂಡಿದೆ.

ಈ ಸಂದರ್ಭದಲ್ಲಿ ಒಂದು ಸೋಜಿಗದ ಸಂಗತಿ ಗಮನಾರ್ಹ: ಕನ್ನಡ ಕಾವ್ಯ, ಕಥೆ, ಕಾದಂಬರಿ-ಈ ಸಾಹಿತ್ಯ ಪ್ರಕಾರಗಳಲ್ಲಿ 1910ರ ವೇಳೆಗೆ ಕಾಣಿಸಿಕೊಂಡ ಪ್ರಗತಿಶೀಲ ಚಳವಳಿಯಾಗಲಿ, 1950ರ ತರುವಾಯ ತಲೆದೋರಿದ ನವ್ಯಪಂಥವಾಗಲಿ ಪ್ರಬಂಧ ಕ್ಷೇತ್ರವನ್ನು ಸೋಂಕಲೂ ಇಲ್ಲ.

ಎಲ್ಲ ಕನ್ನಡ ಪ್ರಬಂಧ ಸಂಕಲನಗಳ ಹಾಗೂ ಪ್ರಬಂಧಕಾರರ ಹೆಸರುಗಳನ್ನು ಪಟ್ಟಿಮಾಡಿ ತಿಳಿಸುವುದು ಈ ಬರಹದ ಗುರಿಯಲ್ಲ. ಅದು ಸಾಧ್ಯವೂ ಅಲ್ಲ. ಆದರೂ ಈ ಮೊದಲು ಹೆಸರಿಸಿದವರ ಜೊತೆಗೆ ಪ್ರಮುಖವಾಗಿ ಪ್ರಬಂಧಕಾರರೆಂದು ಹೆಸರಾಂತ ದ.ಬಾ. ಕುಲಕರ್ಣಿ (ಸಾವಧಾನ-1960), ನಾ. ಕಸ್ತೂರಿ (ಡೊಂಕುಬಾಲ-1944, ಉಪಾಯವೇದಾಂತ-1951), ರಾ.ಕು. (ಗಾಳಿಪಟ-1960), ಎನ್. ಪ್ರಹ್ಲಾದರಾವ್ (ರಥ-ರಥಿಕ,-1947 ಮಧುವ್ರತ-1963, ಮುತ್ತಿನ ಹಾರ-1968). ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಜೇಡನ ಬಲೆ, ಬದುಕು-ಬೆಳಕು-1971) ಹಾ.ಮಾ. ನಾಯಕ (ನಮ್ಮ ಮನೆಯ ದೀಪ-1956), ಇವರುಗಳ ಸಾಧನೆ ಗಣ್ಯವಾದ್ದು. ಬಿ.ಆರ್. ವಾಡಪ್ಪಿ, ಎನ್.ಎಸ್. ಗದಗಕರ್, ಡಿ.ಎಸ್. ಕರ್ಕಿ. ಮ. ಶ್ರೀಧರಮೂರ್ತಿ, ಅ.ರಾ.ಮಿತ್ರ-ಇವರ ಕೊಡುಗೆಯೂ ಪ್ರಬಂಧ ಭಂಡಾರದ ಕಾಂತಿಯನ್ನು ಹೆಚ್ಚಿಸಿವೆ. ಕಾರಂತ, ರಾ.ಶಿ, ರಾಜರತ್ನಂ, ಬೀಚಿ ಬಳ್ಳಾರಿ, ಕುಡ್ಪಿ ವಾಸುದೇವ ಶೆಣೈ, ಅಷ್ಟಾವಕ್ರ, ನಾಡಿಗೇರ ಕೃಷ್ಣರಾಯ, ಕೆ. ವೆಂಕಟರಾಮಪ್ಪ ಮುಂತಾದವರು ತಿಳಿಹಾಸ್ಯದಿಂದ ಹಿಡಿದು ವಿಕಟಹಾಸ್ಯದವರೆಗೆ ಹಾಸ್ಯದ ವಿವಿಧಮುಖಗಳನ್ನೂ ವಿಡಂಬನೆಯ ಇರಿತ ಕೊರೆತಗಳನ್ನೂ ಪ್ರಬಂಧಕ್ಕೆ ಕೊಟ್ಟು ಅದರ ಹರವನ್ನು ಹಿಗ್ಗಿಸಿದ್ದಾರೆ; ಇದೇ ಬಳಗಕ್ಕೆ ಈಚೆಗೆ ಸೇರಿಕೊಂಡವರು ಎಚ್.ಕೆ. ರಂಗನಾಥ್, ಮತ್ತು ಎಚ್.ಎಲ್. ಕೇಶವಮೂರ್ತಿ. ನೆನಪಿಗೆ ಬರುವ ಒಬ್ಬ ಪ್ರಬಂಧಕಾರ್ತಿ, ಟಿ. ಸುನಂದಮ್ಮ.

ಇಂಗ್ಲಿಷ್ ಪ್ರಬಂಧ ಸಾಹಿತ್ಯದ ನಾಲ್ಕು ಶತಮಾನಗಳ ಸಮೃದ್ಧ ಬೆಳವಣಿಗೆಯ ಸಾರಸತ್ತ್ವವನ್ನೂ ವೈವಿಧ್ಯವನ್ನೂ ಕೇವಲ ನಾಲ್ಕು ದಶಕಗಳಲ್ಲಿ ಸ್ವಂತಿಕೆಯನ್ನು ಬಲಿಗೊಡದೆ ಮೈಗೂಡಿಸಿಕೊಂಡು ಕನ್ನಡ ಪ್ರಬಂಧ ನಮ್ಮ ಸಾಹಿತ್ಯ ಸಿರಿವಂತಿಕೆಯನ್ನೂ ಸೊಬಗನ್ನೂ ಹೆಚ್ಚಿಸಿರುವುದು ಸಾಮಾನ್ಯದ ಸಂಗತಿಯಲ್ಲ. ಆದರೆ ಈಚೆಗೆ ಇದರ ಬೆಳವಣಿಗೆ ಕುಂಠಿತವಾದಂತೆ ಕಂಡುಬರುತ್ತಿದೆ. ವಿಚಾರಪ್ರಬಂಧಗಳಿಗೂ ಹಾಸ್ಯಪ್ರಬಂಧಗಳಿಗೂ ಇಂದೂ ಪತ್ರಿಕೆಗಳಲ್ಲಿ ಎಡೆದೊರೆಯುತ್ತಿದೆ. ಒಂದು ಕಾಲದಲ್ಲಿ ನಿಯತಕಾಲಿತ ಪತ್ರಿಕೆಗಳ ಉತ್ತೇಜನದಿಂದ ಬೆಳೆದುಬಂದ ಶುದ್ಧ (ಲಲಿತ) ಪ್ರಬಂಧಕಾರ ಇಂದು ಅವುಗಳ ಬೆಂಬಲ ಪಡೆಯುತ್ತಿಲ್ಲ. ಓದುವುದನ್ನೆ ಹವ್ಯಾಸವಾಗಿ ಉಳ್ಳವರಿಗೆ ನಿರ್ಮಲವಾದ ಆನಂದವನ್ನು ಕೊಡುವ ಪ್ರಬಂಧ ಸಾಹಿತ್ಯವನ್ನು ಪೋಷಿಸಿಕೊಂಡು ಬರುವುದು ತಮ್ಮ ಪವಿತ್ರಕರ್ತವ್ಯ ಎಂದು ಪತ್ರಿಕೆಗಳು ಪಣತೊಟ್ಟದ್ದೇ ಆದರೆ, ಹೊಸಪೀಳಿಗೆಯ ಬರಹಗಾರರು ಇತರ ಸಾಹಿತ್ಯ ಪ್ರಕಾರಗಳಂತೆ ಪ್ರಬಂಧವೂ ಕೃಷಿಯೋಗ್ಯವಾದದ್ದು ಎಂದು ಭಾವಿಸುವುದಾದರೆ, ಕನ್ನಡ ಪ್ರಬಂಧ ಸಾಹಿತ್ಯವಾಹಿನಿ ಬತ್ತದೆ ನಿರಂತರವಾಗಿ ಹರಿಯುತ್ತಿರುವುದರಲ್ಲಿ ಸಂದೇಹವಿಲ್ಲ. (ಎಂ.ವಿ.ಎಸ್.)