ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಸಾಳೆ
ಕಂಸಾಳೆ : ದೇವರ ಗುಡ್ಡರು ಎಂಬ ಒಂದು ವರ್ಗದ ಜನಪದ ಗಾಯಕರು ಬಳಸುವ ಕಂಚಿನ ತಾಳಗಳಿವು. ಕಾಂಸ್ಯತಾಲ ಎಂಬುದರ ತದ್ಬವ ರೂಪವೇ ಕಂಸಾಳೆ. ಸಾಧಾರಣ ತಾಳಗಳಿಗಿಂತ ಕಂಸಾಳೆ ಗಾತ್ರದಲ್ಲಿ ದೊಡ್ಡದು; ಆಕೃತಿಯಲ್ಲಿ ವಿಶಿಷ್ಟವಾದುದು. ಅಂಗೈ ಅಗಲದ ಚಕ್ರಾಕಾರವಾದ ಬಟ್ಟಲು. ಚಿಕ್ಕ ಜಾಗಟೆಯಂತಿರುವ ಮಟ್ಟಸವಾದ ಮೇಲುತಾಳ, ಮೇಲು ತಾಳಕ್ಕೆ ಸೇರಿದಂತೆ ಹಿಡಿದುಕೊಳ್ಳಲು ಮಾಡಿಕೊಂಡ ಗೊಂಡೇವದ ಕಲಾತ್ಮಕ ಹುರಿ-ಇವು ಕಂಸಾಳೆಯ ಮುಖ್ಯ ಭಾಗಗಳು. ಬಟ್ಟಲನ್ನು ಮೇಲು ಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು ಬಲಗೈಯಲ್ಲಿ ಹಿಡಿದು ಮೇಲು ತಾಳವನ್ನು ಅದರ ಮೇಲೆ ಕುಟ್ಟುವುದರಿಂದ ಕಣಿಕಣಿನಾದ ಉಂಟಾಗುತ್ತದೆ. ಈ ನಾದದ ಹಿನ್ನೆಲೆಯಲ್ಲಿ ಗುಡ್ಡರು ಅನೇಕ ಗೀತೆಗಳನ್ನೂ ಲಾವಣಿಗಳನ್ನೂ ಹಾಡುತ್ತಾರೆ. ಒಂದು ಆರಾಧ್ಯದೈವದ ಪರಂಪರೆಗೆ ಈ ವಾದ್ಯ ಸೇರುವುದರಿಂದ ವಿಶಿಷ್ಟವರ್ಗದ ಭಕ್ತರು ಇದನ್ನು ಬಳಸುವುದರಿಂದ ಇದೊಂದು ಧಾರ್ಮಿಕವಾದ್ಯವೆನಿಸಿದೆ. ಜನಪದ ಕಲಾವಿದರು ಮಾತ್ರ ಇದನ್ನು ಬಳಸುವುದರಿಂದ ಇದೊಂದು ಜನಪದ ವಾದ್ಯವೂ ಹೌದು. ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲೆಲ್ಲ ಭಿಕ್ಷಾಪಾತ್ರೆಯಾಗಿಯೂ ಬಳಸಲ್ಪಡುವ ಏಕಮಾತ್ರ ಸಾಧನವಿದು. ಗುಡ್ಡರು ಭಿಕ್ಷೆಯನ್ನು ಸ್ವೀಕರಿಸುವಾಗ ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ. ಇದೊಂದು ಪವಿತ್ರ ಸಾಧನವಾದುದರಿಂದ, ಅರ್ಪಿಸುವ ಕಾಣಿಕೆ ಮಲೆಯ ಮಾದಯ್ಯನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ. ಕಂಸಾಳೆಯ ಮಹಿಮೆ ದೊಡ್ಡದು ಎಂದು ಭಾವಿಸುವ ಗುಡ್ಡ ಅದನ್ನು ಪುಜಿಸುತ್ತಾನೆ. ಕೈಗೆತ್ತಿಕೊಳ್ಳುವ ಮುನ್ನ ಶರಣುಮಾಡಿಕೊಳ್ಳುತ್ತಾನೆ. ಮಾದಯ್ಯನ ಕೋಲನ್ನು ಕಂಕುಳಲ್ಲಿಟ್ಟು, ಕೈಯಲ್ಲಿ ಕಂಸಾಳೆ ಹಿಡಿದು, ಹಸುಬೆಯನ್ನು ಹೆಗಲಿಗೆ ಹಾಕಿ, ಬುತ್ತಿಯಗಂಟನ್ನು ತಲೆಯ ಮೇಲೆ ಹೊತ್ತು ಯಾತ್ರೆ ಹೊರಡುತ್ತಾನೆ, ಗುಡ್ಡ ಮಾದಯ್ಯನ ಗಿರಿಗೆ. ಜೊತೆಯಲ್ಲಿ ತನ್ನ ಮರಿಗುಡ್ಡರನ್ನೂ ಜೊತೆಗಾರರನ್ನೂ ಕರೆದುಕೊಳ್ಳುತ್ತಾನೆ. ಶಿವರಾತ್ರಿ ನವರಾತ್ರಿಗಳಲ್ಲಿ ಮಾದಯ್ಯನ ಗಿರಿಗೆ ಯಾತ್ರೆ ಹೊರಡುವ ಭಕ್ತರು ಅನೇಕ ತಂಡಗಳಾಗಿ ಒಂದೊಂದು ತಂಡದವರೂ ಇಂಥ ಗುಡ್ಡರ ಪುಟ್ಟ ಪರಿವಾರವನ್ನು ಮುಂದೆ ಬಿಟ್ಟುಕೊಂಡು ಹೊರಡುತ್ತಾರೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಏಳುಮಲೆಗಳಿಗೆ ಸಾಗಬೇಕಾಗಿದ್ದ ಈ ಭಕ್ತರಿಗೆ ಕಂಸಾಳೆಯ ಕಣಿಕಣಿನಾದ ಒಂದು ರೀತಿಯ ರಕ್ಷೆಯೂ ಆಗಿದ್ದಿರಬಹುದು. ನಾಲ್ಕಾರು ಕಂಸಾಳೆಗಳ ನಾದ ಕೂಡಿದಾಗ ಕಾಡಿನ ದುಷ್ಟಪ್ರಾಣಿಗಳು ಅಂಜಿ ದೂರ ಸರಿಯುವಷ್ಟು ದೊಡ್ಡನಾದ ಶಬ್ದ ಕೇಳಿಬರುತ್ತದೆ. ಕಂಸಾಳೆಯ ನಾದ, ಮಾದಯ್ಯನನ್ನು ಕುರಿತ ಜೈಕಾರ, ತಮಟೆಗಳ ಸದ್ದು ಕಾಡನ್ನು ಭೇದಿಸಿಕೊಂಡು ಸಾಗುತ್ತಿದ್ದ ಯಾತ್ರಾರ್ಥಿಗಳ ಅಂತರಂಗದಲ್ಲಿ ಭಕ್ತಿಯನ್ನೂ ಧೈರ್ಯವನ್ನೂ ಸೋಲದೆ ಮುಂದೆ ಸಾಗುವ ಉತ್ಸಾಹವನ್ನೂ ತುಂಬುತ್ತವೆ. ಅಲ್ಲದೆ ಭಕ್ತರು ತಾವು ತಂಗುವ ಪ್ರದೇಶಗಳಲ್ಲಿ ರಾತ್ರಿಯೆಲ್ಲ ಮಾದಯ್ಯನ ಪುಣ್ಯ ಕಥೆಗಳನ್ನು ಹಾಡುತ್ತ ಕಂಸಾಳೆಯನ್ನು ಬಾರಿಸುತ್ತ ಎಚ್ಚರವಾಗಿರುತ್ತಾರೆ. ಮಾದಯ್ಯನ ಜಾತ್ರೆಯಲ್ಲಂತೂ ಎಲ್ಲ ಕಡೆಯ ಕಂಸಾಳೆಯ ಗುಡ್ಡರೂ ಸೇರಿ ಅವರದೇ ಒಂದು ದೊಡ್ಡ ಕೂಟವಾಗುತ್ತದೆ. ಎಲ್ಲೆಂದರಲ್ಲಿ ಕಂಸಾಳೆಯ ಮೇಳಗಳು ನಡೆಯುತ್ತಿರುತ್ತವೆ. ಭಿಕ್ಷಾಟನೆ ಹಾಗೂ ಯಾತ್ರೆಗಳ ಸಂದರ್ಭದಲ್ಲಿ ಬಿಡಿಹಾಡುಗಳನ್ನು ಹೇಳಿಕೊಳ್ಳಲು ಮಾತ್ರವಲ್ಲದೆ ವಿಶೇಷ ಸಂದರ್ಭಗಳಲ್ಲಿ, ಹಬ್ಬ, ಆಚರಣೆಗಳಲ್ಲಿ ಮೇಳವನ್ನು ನಡೆಸಲೂ ಬೀಸು ಕಂಸಾಳೆಯ ನೃತ್ಯದಲ್ಲಿ ಹಾಡಲೂ ಕುಣಿಯಲೂ ಕಂಸಾಳೆಯನ್ನು ಬಳಸುತ್ತಾರೆ. ಗುಡ್ಡರು ಹಾಡುವ ಗೀತೆಗಳು, ತಾಳದ ಗತ್ತಿಗೆ ತಕ್ಕಂತೆ ವಿವಿಧ ಮಟ್ಟುಗಳಲ್ಲಿರುತ್ತವೆ. ಕಂಸಾಳೆಯ ನಾದವೈಖರಿಗೆ ತಕ್ಕಂತೆ, ಶಕ್ತಿವತ್ತಾದ, ಲಯಬದ್ಧವಾದ ರಚನೆಗಳವು.
ಕೂಗೊ ಕೂಗೊ ಮಾದೇವನ ಕೂಗಯ್ಯ ದುಂಡು ಮಾದೇವನ ಕೂಗಿದರೆ ಕುಣಿಯುತ್ತ ಬರುವನು ಮಾದೇವ ಕೂಗಯ್ಯ ಮುದ್ದು ಮಾದೇವನ ಮಗ್ಗು ಮಗ್ಗಲ ಗಿರಿಗೆ ಮೊಗ್ಗು ಬಂದವು ನೋಡಿರಿ ಮಾದಯ್ಯ ಗಿರಿಗೆ ಹೂವು ಬಂದವು ನೋಡಿರಿ
ಕಂಸಾಳೆ ಮೇಳದಲ್ಲಿ ಏಕತಾರಿ, ದಮ್ಮಡಿಗಳನ್ನು ಹಿಮ್ಮೇಳದವರು ಬಳಸಿದರೂ ಮುಖ್ಯಗುಡ್ಡ, ಮುಮ್ಮೇಳಗಾರಿ ಕಂಸಾಳೆಯನ್ನೇ ಹಿಡಿಯಬೇಕು. ಇದು ಕುಳಿತು ಮಾಡುವ ಮೇಳ, ನಡುವೆ ಕಂಸಾಳೆ ಹಿಡಿದು ಮುಖ್ಯ ಹಾಡುಗಾರ ಕುಳಿತಿರುತ್ತಾನೆ. ಅವನ ಅಕ್ಕ ಪಕ್ಕದಲ್ಲಿ ಹಿಮ್ಮೇಳದ ಗುಡ್ಡರು ಕುಳಿತಿರುತ್ತಾರೆ. ಕಂಸಾಳೆಯ ಗತ್ತಿಗೆ ತಕ್ಕಂತೆಯೇ ತಾಳಕ್ಕೆ ಅನುಗುಣವಾಗಿಯೇ ಕಥೆಯನ್ನು ಪದ್ಯ ಗದ್ಯಗಳಲ್ಲಿ ನಿರೂಪಿಸಲಾಗುತ್ತದೆ.
ಮಲೆಯ ಮಾದೇವ ಬರುವ ಚೆಂದವ ನೋಡಿ ನಮ್ಮ ಶಿವನ
ಇದು ಪಲ್ಲವಿ. ಕಥೆಯನ್ನು ಒಂದು ವಿಶಿಷ್ಟವಾದ ಪದ್ಯಗಂಧಿಯಾದ ಗದ್ಯದಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ. ಒಂದೊಂದು ಪುಟ್ಟ ಪುಟ್ಟ ಪಾದದ ಅಂತ್ಯದಲ್ಲಿ ಕಂಸಾಳೆಯನ್ನು ಬಾರಿಸುತ್ತ ಕಥಾನಿರೂಪಣೆಗೆ ಚೈತನ್ಯವನ್ನು ತುಂಬಿಕೊಳ್ಳಲಾಗುತ್ತದೆ. ಹೆಜ್ಜೆಹೆÀಜ್ಜೆಗೂ ಕಂಸಾಳೆಯ ಮಿಡಿತ ಅದರ ಜೊತೆಯಲ್ಲೆ ಸಾಗುವ ವಿಸ್ತಾರ ಗದ್ಯಕಥನ,
ಹರ ಹರ ನಮ್ಮಪ್ಪಾಜಿ ಮಾಯಕಾರ ಮಾದೇವ ಆ ಬಂಕಾಪುರಿ ಶ್ರವಣ ದೊರೆ ಮೇಲೆ | ದೃಷ್ಟಿ ಮಡಗುತಾರೆ ಮಾದೇವ || ಮಲೆಯ ಮಾದೇವ ಬರುವ ಚೆಂದವ ಆ ಶ್ರವಣದೊರೆ ಅಂದರೆ ಸಾಮಾನ್ಯವಲ್ಲ | ಈ ಭೂಮಿ ಭೂಮಂಡಲವನ್ನೆಲ್ಲ ಕೈಕೆಳಗಿಟ್ಟುಕೊಂಡಿದ್ದಾನೆ | ಸುರ ಮುನ್ನೂರು ಕೋಟಿ ದೇವ ಮಾನ್ಯವರ ತಂದು | ಕೈಸೆರೆ ಹಿಡಿದುಕೊಂಡಿದ್ದಾನೆ | ಕಂಗಳ್ಳಿ ಮಲ್ಲಿಕಾರ್ಜುನ ಪಟೇಲನಂತೆ | ಮುಡುಕುತೊರೆ ಮಲ್ಲಣ್ಣ ಚಾಕರನಂತೆ | ಕಂಕುಳಲ್ಲಿ ದೊಣ್ಣೆ ಕೊಟ್ಟಿದ್ದಾನೆ | ತಲೆದಿಂಬು ಮಾಡಿಕೊಂಡವನೆ ಶಿವನೆ ಶನಿದೇವರ ಹಿಡಿದು ಮಕ್ಕಡೆ ಕೆಡವಿಕೊಂಡು ನಾಲ್ಕುಕಾಲು ಮಂಚಮಾಡಿಕೊಂಡು ತನ್ನ ಪಾದವನ್ನು ಅವನ ಬೆನ್ನ ಮೇಲೆ ಇಟ್ಟುಕೊಂಡು ಕೂತವನೆ ಶಿವನೆ ಮಲಯಮಾದೇವ ಬರುವ ಚೆಂದವ ನೋಡಿ ನಮ್ಮ ಶಿವನಾ ||
ಪದ್ಯ, ವಚನಗಳೆರಡಕ್ಕೂ ಕಂಸಾಳೆಯ ನಾದ ಒಗ್ಗಿಕೊಳ್ಳುತ್ತದೆ. ಅದರ ಗುಂಗಿನಲ್ಲಿಯೇ ಕಥೆ ಸಾಗುತ್ತದೆ. ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ-ಮುಂತಾದ ವಿಸ್ತಾರವಾದ ಲೌಕಿಕ ಕಥೆಗಳನ್ನು ಗುಡ್ಡರು ಕಂಸಾಳೆಯ ಹಿನ್ನೆಲೆಯಲ್ಲೇ ಹಾಡುತ್ತಾರೆ. ಅವೆಲ್ಲ ಬಹುಮಟ್ಟಿಗೆ ಪದ್ಯಕಾವ್ಯಗಳೇ ಆದರೂ ನಡುನಡುವೆ ಗದ್ಯದಲ್ಲಿ ವಿವರಣೆ ಬರುತ್ತದೆ. ಪಿರಿಯಾಪಟ್ಟಣದ ಲಾವಣಿ ಮಾತ್ರ ವಿಶಿಷ್ಟವಾದ ಬಂಧುರವಾದ ಪದ್ಯಕಾವ್ಯ. ಕಂಸಾಳೆಯ ಗತ್ತಿಗೇ ರಚಿಸಿದಂತೆ ತೋರುತ್ತದೆ, ಆ ಲಾವಣಿ.
ತಂದನಾನಿ ತಂದಾನಿ ತಾನನ
__ತಂದೇ„ನಾನ
ತಂದನಾನಿ ತಂದಾನಿ ತಾನನ
ಕೊಡಗು ಮಲೆಯಾಳ ರಾಜ್ಯಕೆ
ಗಡಿಯಾವುದು ಎಂದರೆ
ಬೆಡಗಿನಂಥ ಪಿರಿಯಾಪಟ್ಟಣ
ಬೆಡಗಿನಂಥ ಪಿರಿಯಾಪಟ್ಟಣಕೆ
ದೊರೆಯಾರು ಎಂದರೆ
__ಹೆಚ್ಚಿನದೊರೆ
ವೀರರಾಜು ದೊರೆರಾಯ
ಬೀಸು ಕಂಸಾಳೆನೃತ್ಯ ಕರ್ನಾಟಕದ ಜನಪದ ನೃತ್ಯಗಳಲ್ಲಿ ಅತ್ಯಪುರ್ವವಾದುದು. ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ ಮುದ್ದು ಲಿಂಗ ಬಾ | ನಮ್ಮ ಮುದ್ದು ಮಾದಯ್ಯನ ಲಿಂಗ ಬಾ ಎಂದು ಹಾಡುತ್ತಾರೆ. ಒಬ್ಬ ಗುಡ್ಡ ಕಂಸಾಳೆಯನ್ನು ಆ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತ ಕುಣಿಯುತ್ತಾನೆ. ತಲೆಯಮೇಲೆ ಬೆನ್ನಹಿಂದೆ, ಕಾಲಕೆಳಗೆ, ಕುಳಿತು, ನಿಂತು, ಬಾಗಿಬಳುಕಿ, ತೀವ್ರಗತಿಯಲ್ಲಿ ನರ್ತಿಸುವ ಬಗೆ ಆಶ್ಚರ್ಯಕರವಾದುದು, ಅದ್ಭುತವಾದುದು, ಮನೋಜ್ಞವಾದದ್ದು. ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದೂ ಉಂಟು. ಒಬ್ಬರ ಕಂಸಾಳೆಗೆ ಇನ್ನೊಬ್ಬರ ಕಂಸಾಳೆಯನ್ನು ಕುಟ್ಟುತ್ತ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ.
ಯಾತ್ರೆಯಲ್ಲಿ ಭಿಕ್ಷಾಟನೆಯಲ್ಲಿ, ಹಾಡುಗಾರಿಕೆಯಲ್ಲಿ ನೃತ್ಯದಲ್ಲಿ-ಹೀಗೆ ಹಲವು ಬಗೆಗಳಲ್ಲಿ ಬಳಕೆಯಾಗುವ ಕಂಸಾಳೆ ಇತರ ಜನಪದ ವಾದ್ಯಗಳಿಗಿಂತ ವ್ಯಾಪಕವಾದ ಬಳಕೆಯನ್ನು ಪಡೆದಿದೆ. ಇದನ್ನು ಬಳಸುವ ಕಲಾವಿದರು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ವಿಶೇಷವಾಗಿದ್ದಾರೆ. ಕಂಚಿನ ತಾಳಗಳಿಗೆ ಬದಲಾಗಿ ಹಿತ್ತಾಳೆಯ ತಾಳಗಳನ್ನು ಕೆಲವರು ಬಳಸುವುದುಂಟು. ಮೈಸೂರು ನಗರದಲ್ಲಿ ಕಂಸಾಳೆಗಳನ್ನು ಬಾರಿಸುವ ಕುಶಲಿಗಳಿದ್ದಾರೆ. ಗೊಂಡೇವವನ್ನು ಆಯಾ ಕಲಾವಿದರೇ ಮಾಡಿಕೊಳ್ಳುತ್ತಾರೆ. ಅವುಗಳ ಮಾರಾಟವೂ ಜಾತ್ರೆಗಳಲ್ಲಿ ನಡೆಯುವುದುಂಟು. ಕಂಸಾಳೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಹೊರತು ಇನ್ನೆಲ್ಲಿಯೂ ಕಂಡುಬಂದಿಲ್ಲ. (ಜೆ.ಎಸ್.ಪಿ.)