ವಿಷಯಕ್ಕೆ ಹೋಗು

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ವಿಕಿಸೋರ್ಸ್ದಿಂದ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ!
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ.

ಭರಣಿಯ ತಂದರೆ ಅರಸಿನ ಕುಂಕುಮ-
ಅವಳದು ಈ ಸಂಪತ್ತು.
ತುಟಿಗಳ ತೆರೆದರೆ ತುಳುಕುವುವಿಂಪಿನ
ಎರಡೋ ಮೂರೋ ಮುತ್ತು.

ಯುದ್ಧದ ಬೇಗೆಯನರಿತವಳಿವಳಲ್ಲ;
ಮುತ್ತಿಗೆ ಪಡಿತರವಿಲ್ಲ.
ತುರುಬಿಗೆ ಮಲ್ಲಿಗೆ ತಪ್ಪುವುದಿಲ್ಲ;
ಹೂವಿಗೆ ಬಡತನವಿಲ್ಲ.

ಕೈಬಳೆ, ತಾಳಿ, ಓಲೆ, ಮೂಗುತಿ-
ಬಡವರ ಮಗಳೀ ಬಾಲೆ.
ತಿಂಗಳ ಚೆಲುವಿನ ಮಂಗಳ ಮೂರುತಿ,
ಶೀಲದ ಧವಳ ಜ್ವಾಲೆ.

ಕೈ ಹಿಡಿದವಳು, ಕೈ ಬಿಡದವಳು
ಮಾಡಿದಡಿಗೆಯೇ ಚೆಂದ.
ನಾಗರ ಕುಚ್ಚಿನ ನಿಡು ಜಡೆಯವಳು
ಈಕೆ ಬಂದುದು ಎಲ್ಲಿಂದ?

ಎಲ್ಲಿಯ ಹಾಡಿದು? ಏನಿದು ಗಡಿಬಿಡಿ?
ಏಕಿದು ಹಸಿರು ಮತಾಪು?
ಒಲುಮೆಯು ತಂಗಿತು ಬಡತನ ಮನೆಯಲಿ;
ಕಂಬಳಿಯೇ ಕಿನಕಾಪು!

ಕಬ್ಬಿಗನೂರಿಗೆ ದಾರಿಗಳಿದ್ದರೆ -
ಕನಸೇ ಇರಬೇಕು!
ಅಲ್ಲಿಯ ದೊರೆತನ ಸಿಗುವಂತಿದ್ದರೆ,
ನನಗೇ ಸಿಗಬೇಕು!

ತಾರೆಯ ಬೆಳಕಿನ ತುಂಬಿದ ಸಭೆಯಲಿ
ಸುಂದರಿ ಮೆರೆದಾಳು!
ನನ್ನೊಡನವಳೂ ಸಿಂಹಾಸನದಲಿ
ಮೆಲ್ಲನೆ ನಕ್ಕಾಳು!

ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ.
ಹೆಂಡತಿಯೊಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ.



ಕವಿ: ಕೆ ಎಸ್ ನರಸಿಂಹಸ್ವಾಮಿ
ಧ್ವನಿಸುರುಳಿ: ಭಾವಸಂಗಮ
ಸಂಗೀತ: ಮೈಸೂರು ಅನಂತಸ್ವಾಮಿ.
ಗಾಯಕರು: ಮೈಸೂರು ಅನಂತಸ್ವಾಮಿ