ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/17ನೆಯ ಶತಮಾನ-ಡ್ರೈಡನ್ ಯುಗ

ವಿಕಿಸೋರ್ಸ್ದಿಂದ

17ನೆಯ ಶತಮಾನದಲ್ಲಿ ಬೆಳೆದ ನಿಯೋಕ್ಲಾಸಿಕಲ್ ಸಂಪ್ರದಾಯಕ್ಕೆ ಮೂಲಸ್ಫೂರ್ತಿ ಇಟಲಿಯ ಸಾಹಿತ್ಯ. ಆದರೆ ನಿಯೋಕ್ಲಾಸಿಕಲ್ ಪಂಥದ ಪ್ರಭಾವ ಯುರೋಪಿನಲ್ಲಿ ವ್ಯಾಪಕವಾಗಿ ಪ್ರಸಾರವಾಗಲು ಮುಖ್ಯ ಕಾರಣರಾದವರು ಕಾರ್ನಿಲ್, ಬ್ವಾಲೋ, ರ್ಯಾಸಿನ್, ಲಾ ಬೋಸು ಮೊದಲಾದ ಫ್ರೆಂಚ್ ಸಾಹಿತಿಗಳು. ಇವರ ಪ್ರಭಾವ ಇಂಗ್ಲಿಷ್ ಸಾಹಿತ್ಯದ ಮೇಲೂ ಮೈಚಾಚಿ ಹರಡಿತು. ನಿಯೋಕ್ಲಾಸಿಕಲ್ ಪಂಥವನ್ನು ಇಂಗ್ಲೆಂಡಿನಲ್ಲಿ ಪ್ರಚಲಿತಗೊಳಿಸಿ, ಇಂಗ್ಲಿಷ್ ಸಾಹಿತ್ಯ ವಿಮರ್ಶಾಪರಂಪರೆಯನ್ನು ಹೊಸಹಾದಿಗೆ ಹಚ್ಚಿದವರಲ್ಲಿ ಡ್ರೈಡನ್ನ ಪಾತ್ರ ಅತ್ಯಂತ ಮುಖ್ಯ. ಸಮಕಾಲೀನ ಫ್ರೆಂಚ್ ಸಾಹಿತ್ಯದ ವಿದ್ಯಮಾನಗಳನ್ನು ಆತ ಚೆನ್ನಾಗಿ ತಿಳಿದಿದ್ದ. ಸ್ವಲ್ಪಮಟ್ಟಿಗೆ ಫ್ರೆಂಚ್ ಸಾಹಿತಿಗಳ ದೃಷ್ಟಿಯನ್ನು ಸಮರ್ಥಿಸುತ್ತಿದ್ದ. ಆದರೂ ಆತ ಸಂಪೂರ್ಣವಾಗಿ ಫ್ರೆಂಚ್ ಪ್ರಭಾವಕ್ಕೆ ಸೋಲಲಿಲ್ಲ. ಫ್ರೆಂಚ್ ವಿಮರ್ಶಕ ಬ್ವಾಲೋ ತನ್ನ ಹಿಂದಿನ ಸಾಹಿತಿಗಳನ್ನು ಕುರಿತು ಅವಹೇಳನ ಮಾಡಿದ ಹಾಗೆ ಡ್ರೈಡನ್ ತಪ್ಪು ದಾರಿ ಹಿಡಿಯಲಿಲ್ಲ. ಫ್ರೆಂಚ್ ನಾಟಕಕಾರರನ್ನು ಮೆಚ್ಚಿಕೊಂಡರೂ ತನ್ನ ಪೂರ್ವಜರಾದ ಬೆನ್ ಜಾನ್ಸನ್, ಷೇಕ್ಸ್ಪಿಯರ್ ಮೊದಲಾದವರ ಘನವಾದ ಸಾಧನೆಗಳನ್ನು ಆತ ಮೆಚ್ಚಿಕೊಂಡ. ಉತ್ತಮ ಸಾಹಿತ್ಯ ಕೇವಲ ನೀತಿನಿಯಮಗಳ ಕಠಿಣ ಅನುಸರಣೆಯಿಂದ ಸೃಷ್ಟಿಯಾಗಲಾರದು, ಸಾಹಿತಿಗೆ ಮಿತಿಮೀರಿದ ಪೂರ್ವಗ್ರಹ ಸಲ್ಲದು-ಎಂಬ ವಿಚಾರವನ್ನು ಡ್ರೈಡನ್ ತನ್ನ ಜೀವನದುದ್ದಕ್ಕೂ ಅರಿಯುತ್ತ ಬಂದ. ತನ್ನ ನಾಟಕಗಳಿಗೆ ಆತ ಜೋಡಿಸಿರುವ ಪೀಠಿಕೆಗಳು, ಅರ್ಪಣೆಗಳು, ಹಿನ್ನುಡಿಗಳು ಅವನ ಸೂಕ್ಷ್ಮ ವಿಚಾರದೃಷ್ಟಿ, ಬೌದ್ಧಿಕ ಪ್ರಾಮಾಣಿಕತೆಗಳಿಗೆ ಸಾಕ್ಷ್ಷಿಯಾಗಿವೆ. ಹಿಂದೆಂದೂ ಯಾವ ಇಂಗ್ಲಿಷ್ ಲೇಖನದಲ್ಲೂ ಕಾಣದ ಉಕ್ತಿಯ ಸರಳತೆ, ಸಂಭಾಷಣರೂಪದ ಆತ್ಮೀಯತೆ, ಮಾತಿನ ಕಸುವುಗಳನ್ನು ಡ್ರೈಡನ್ನನ ರೂಪಕ ಕಾವ್ಯ ಕುರಿತ ಪ್ರಬಂಧ (ಎಸ್ಸೇ ಆನ್ ಡ್ರಮ್ಯಾಟಿಕ್ ಪೊಯಟ್ರಿ), ಕಟ್ಟು ಕಥನಗಳಿಗೆ ಬರೆದ ಪೀಠಿಕೆ (ಪ್ರಿಫೇಸ್ ಟು ದ ಫೇಬಲ್ಸ್)-ಮುಂತಾದ ರಚನೆಗಳಲ್ಲಿ ಕಾಣುತ್ತೇವೆ. ತುಲನಾತ್ಮಕ ವಿಮರ್ಶಾವಿಧಾನವನ್ನು ರೂಪಿಸಿದ ಖ್ಯಾತಿ ಡ್ರೈಡನ್ಗೆ ಸಲ್ಲಬೇಕು. ಎರಡು ಸಾಹಿತ್ಯಕೃತಿಗಳು ಅಥವಾ ಇಬ್ಬರು ಸಾಹಿತಿಗಳ ನಡುವೆ ಕಾಣಬಹುದಾದ ಗುಣಲಕ್ಷಣಗಳ ಹೋಲಿಕೆ ವ್ಯತ್ಯಾಸಗಳನ್ನು ವಿವೇಚಿಸಿ, ಸಲ್ಲಬೇಕಾದ ಸ್ಥಾನವನ್ನು ಖಚಿತವಾಗಿ ನಿರ್ಧರಿಸಬೇಕೆನ್ನುವ ವಿಧಾನವನ್ನು ಎಲಿಜಬೆತ್ ಯುಗದ ವಿಮರ್ಶೆಯಲ್ಲಿ ಅಲ್ಲಲ್ಲಿ ಕಂಡರೂ ಅದಕ್ಕೊಂದು ವೈಜ್ಞಾನಿಕ ದೃಷ್ಟಿ, ವ್ಯವಸ್ಥೆ ನೀಡಿದವನು ಡ್ರೈಡನ್. ಆ ಕಾಲದಲ್ಲಿ ಈ ರೀತಿಯ ತುಲನಾತ್ಮಕ ವಿಧಾನದಿಂದ ತಪ್ಪುಗಳಾಗಲಿಲ್ಲವೆಂದಲ್ಲ. ಡ್ರೈಡನ್ ಸಹ ಅಲ್ಲಲ್ಲಿ ತಪ್ಪು ಮಾಡುತ್ತಾನೆ: ಆದರೆ ಆತ ನೀಡಿರುವ ಹೊರೇಸ್, ಜೂವಿನಲ್, ಹೋಮರ್, ವರ್ಜಿಲ್, ಷೇಕ್್ಸಪಿಯರ್, ಬೆನ್ ಜಾನ್ಸನ್, ಕಾರ್ನಿಲ್-ಇವರನ್ನು ಕುರಿತ ವಿವೇಚನಾಯುಕ್ತ ವಿಶ್ಲೇಷಣೆ ಇಂಗ್ಲಿಷ್ ವಿಮರ್ಶೆಯಲ್ಲಿ ಹೊಸ ಅಧ್ಯಾಯ ತೆರೆದು ತೋರಿಸಿತು.