ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋಲಾಟ

ವಿಕಿಸೋರ್ಸ್ದಿಂದ

ಕೋಲಾಟ

ಹಳ್ಳಿಗರಿಗೆ ಸುಲಭಸಾಧ್ಯವೂ ವೈವಿಧ್ಯಮಯವೂ ಆದ ಒಂದು ಮನೋರಂಜನೆಯ ಆಟ; ಅವರ ಬದುಕಿನೊಂದಿಗೆ ಸಹಜವಾಗಿ ಸೇರಿಹೋದ ಒಂದು ಮುಖ್ಯವಾದ ಜನಪದ ಕಲೆ. ಸಾಮಾನ್ಯವಾಗಿ ಕರ್ನಾಟಕ ಪ್ರತಿ ಹಳ್ಳಿಯಲ್ಲಿ ನೂರಕ್ಕೆ ಎಂಬತ್ತು ಮಂದಿಯಾದರೂ ಕೋಲಾಟವನ್ನು ಬಲ್ಲವರೇ ಆಗಿರುತ್ತಾರೆ. ಹಬ್ಬಹರಿದಿನಗಳಲ್ಲಿ, ಮದುವೆ ಉತ್ಸವಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಅವರು ತಪ್ಪದೆ ಕೋಲು ಹುಯ್ಯುವುದು ಅಭ್ಯಾಸವಾಗಿದೆ. ಸುಗ್ಗಿಯ ಸಮಯದ ತಿಂಗಳು ಬೆಳಕಿನ ರಾತ್ರಿಗಳಲ್ಲಿ ಕೋಲಾಟವಾಡುವುದೂ ಅದನ್ನು ನೋಡುತ್ತ ಹಳ್ಳಿಗರು ತಮ್ಮ ತಾಪತ್ರಯಗಳನ್ನೂ ಮುಂಜಾನೆಯಿಂದ ಸಂಜೆಯವರೆಗೆ ದುಡಿದ ದೇಹಾಲಸ್ಯವನ್ನೂ ಕಡಿಮೆ ಮಾಡಿಕೊಳ್ಳುವುದೂ ವಾಡಿಕೆಯಾಗಿದೆ. ಯಾವ ಖರ್ಚೂ ಇಲ್ಲದೆ ಒಳ್ಳೆಯ ಮನರಂಜನೆ ಒದಗಿಸುವುದು ಇದರ ಮತ್ತೊಂದು ವೈಶಿಷ್ಟ್ಯ.

ಕೋಲಾಟಕ್ಕೆ ಈ ಸಾಧನಗಳು ಬೇಕಾಗುತ್ತವೆ: 1 ಆಳುಗಳು 2 ಕೋಲುಗೂಟಗಳು 3 ಗೆಜ್ಜೆ 4 ದಮ್ಮಡಿ 5 ತಾಳ 6 ಮರಗಾಲುಗಳು.

1 ಆಳುಗಳು: ಕೋಲಾಟದಲ್ಲಿ ಭಾಗವಹಿಸುವ ಜನಗಳನ್ನು ಆಳುಗಳು ಎಂದು ಕರೆಯುತ್ತಾರೆ. ಈ ಆಳುಗಳು ಯಾವುದೇ ಬಗೆಯ ಕೋಲು ಹುಯ್ಯಬೇಕಾದರೂ ಕನಿಷ್ಠ ಪಕ್ಷ ಎಂಟು ಮಂದಿ ಬೇಕಾಗುತ್ತಾರೆ. ಅತಿ ಹೆಚ್ಚು ಎಂದರೆ ಇಪ್ಪತ್ತನಾಲ್ಕು ಮಂದಿ ಆಗಬಹುದು. 2 ಕೋಲುಗೂಟಗಳು ಕೋಲಾಟದ ಆಧಾರಸ್ತಂಭಗಳಿದ್ದ ಹಾಗೆ. ಉಳಿದೆಲ್ಲ ಸಾಧನಗಳಿಗಿಂತ ಇವುಗಳ ಪಾತ್ರ ಪ್ರಧಾನವಾದುದು. ಕೋಲಾಟ ಎಂಬ ಶೀರ್ಷಿಕೆಯೇ ಇದನ್ನು ಸಮರ್ಥಿಸುತ್ತದೆ. ಸುಮಾರು ಮುಕ್ಕಾಲು ಅಡಿಯ ಮರದ ಗೂಟಗಳನ್ನು ಕೋಲುಗೂಟಗಳು ಎಂಬುದಾಗಿ ಕರೆಯುತ್ತಾರೆ. ಇವನ್ನು ಸಾಮಾನ್ಯವಾಗಿ, ಬೈನೆ, ಕಾರೆಯಂಥ ಒಳ್ಳೆಯ ನಾದ ಬರುವ ಮರದಿಂದ ಕತ್ತರಿಸಿ ಮಾಡುತ್ತಾರೆ. ಇಂಥ ಕೋಲುಗಳಿಗೆ ರಂಜಕವಾದ ಬಣ್ಣ ಹಾಕಿರುವುದೂ ಉಂಟು. 3 ಕೋಲಿಗೆ ತಕ್ಕಂತೆ ಕಾಲು ಹಾಕು; ಕಾಲಿಗೆ ತಕ್ಕಂತೆ ಗೆಜ್ಜೆ ಕಟ್ಟು ಎಂಬುದು ಪ್ರಸಿದ್ಧ ಗಾದೆ. ಕೋಲಾಟಕ್ಕೆ ಮುಂಚೆ ಆಳುಗಳು ತಮ್ಮೆರಡು ಕಾಲುಗಳಿಗೂ ಒಂದೊಂದು ಸರ ಗೆಜ್ಜೆ ಕಟ್ಟುತ್ತಾರೆ. ಇವು ಕುಣಿತಕ್ಕೆ ಹೆಚ್ಚು ರೂಪು ಕೊಡುತ್ತವೆ; ಒಳ್ಳೆಯ ನಾದ ಕೊಡುತ್ತವೆ. 4 ಹತ್ತು ಅಂಗುಲಗಳ ಸುತ್ತಳತೆಯ ಮರದ ಸಾಧನವೊಂದಕ್ಕೆ ಉಡುವಿನ ಚರ್ಮವನ್ನು ಬಲವಾಗಿ ಬಿಗಿದು ಮಾಡಿದ ಒಂದು ಉಪಕರಣವೇ ದಮ್ಮಡಿ. ಪರಿಣತಿಯನ್ನು ಪಡೆದ ಒಬ್ಬ ವ್ಯಕ್ತಿ ಕೋಲಾಟಗಾರರ ಮಧ್ಯೆ ನಿಂತು ಇದನ್ನು ಬಾರಿಸುತ್ತಿರುತ್ತಾನೆ. 5 ಕಂಚು ಲೋಹದಿಂದ ಮಾಡಿದ ತಾಳಗಳನ್ನು ಕೋಲಾಟಗಾರರ ಮಧ್ಯದಲ್ಲಿ ಯಾರಾದರೊಬ್ಬ ನಿಂತು ಬಾರಿಸುತ್ತಿರುತ್ತಾನೆ. 6 ಎರಡು ಅಥವಾ ಎರಡೂವರೆ ಅಡಿ ಎತ್ತರದ ಹಾಲುವಾಣಮರದಿಂದ ಮಾಡಿದ ಮರದ ಸಾಧನಗಳು ಮರಗಾಲುಗಳು. ಇವನ್ನು ಒಬ್ಬ ವ್ಯಕ್ತಿ ಕಾಲಿಗೆ ಕಟ್ಟಿಕೊಂಡು ಕುಣಿಯುತ್ತಾನೆ. ಅವನು ಇತರ ವ್ಯಕ್ತಿಗಳಿಗಿಂತ ಎರಡು ಅಥವಾ ಎರಡೂವರೆ ಅಡಿ ಎತ್ತರವಾಗಿ ಕಾಣುವುದರಿಂದ ನೋಡುವವರಿಗೆ ವಿಚಿತ್ರವಾಗಿ ಕಂಡು ನಗುಬರುತ್ತದೆ. ಈ ರೀತಿ ಹಾಸ್ಯರಸೋತ್ಪತ್ತಿ ಇದರ ಉದ್ದೇಶ.

ಕೋಲು ಪದಗಳು: ಕೋಲಾಟಕ್ಕೆ ಹಿರಿಮೆಯನ್ನೂ ಮಹತ್ತ್ವವನ್ನೂ ತಂದು ಕೊಟ್ಟ ಮುಖ್ಯ ಸಾಧನಗಳೆಂದರೆ ಕೋಲು ಪದಗಳು. ಕೋಲುಪದಗಳನ್ನುಳಿದು ಕೋಲಾಟ ರಂಜಿಸಲು ಸಾಧ್ಯವೇ ಇಲ್ಲ. ಕೋಲಾಟವನ್ನು ಕುರಿತು ವಿವೇಚಿಸುವಾಗ ಅದರಲ್ಲಿ ಕೋಲುಪದಗಳು ಸೇರಿಕೊಂಡೇ ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಕೋಲು ಕೊಡುವುದರಲ್ಲಿ ಕಂಡುಬರುವ ವೈವಿಧ್ಯಕ್ಕಿಂತ ಹೆಚ್ಚಾಗಿ ಕೋಲುಪದಗಳಲ್ಲಿ ವೈವಿಧ್ಯ ಕಂಡುಬರುತ್ತದೆ. ಹಾಡಿದಾಗ ಇದು ನಮಗೆ ವೇದ್ಯವಾಗುತ್ತದೆ. ಹೀಗೆ ಕೋಲಾಟದಲ್ಲಿ ಗಾನ ನೃತ್ಯಗಳು ಮೇಳವಿಸಿರುವುದರಿಂದ ಇದು ಪ್ರೇಕ್ಷಕರಿಗೆ ಹೆಚ್ಚು ಆಕರ್ಷಣೀಯವೂ ಪ್ರಿಯವೂ ಆಗಿದೆ. ನೃತ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡಿದರೆ ಗಾನ ಕಿವಿಗೆ ಮಾಧುರ್ಯವನ್ನೊದಗಿಸುತ್ತದೆ.

ಕೋಲು ಪದಗಳು ಪ್ರಾಸಬದ್ಧ ರಚನೆಗಳು; ಪ್ರಾಸಾನುಪ್ರಾಸಗಳ ಪುನರಾವರ್ತನೆಯನ್ನು ಪಲ್ಲವಿ ಅನುಪಲ್ಲವಿಗಳನ್ನು ಇಲ್ಲಿ ನಿಚ್ಚಳವಾಗಿ ಗುರುತಿಸಬಹುದು. ಕೋಲು ಪದಗಳ ಆರಂಭದಲ್ಲಿ ಹೇಳುವ ಒಂದೆರಡು ಚರಣಗಳು ಕರ್ಣಮನೋಹರವಾಗಿರುತ್ತವೆ. ಕೋಲುಪದಗಳ ಹಾಗೆಯೇ ಕೋಲಾಟದ ವೈಶಿಷ್ಟ್ಯ, ಹೆಗ್ಗಳಿಕೆಗಳಿಗೆ ಈ ಆರಂಭದ ಚರಣಗಳು ಬಹಳ ಮಟ್ಟಿಗೆ ಕಾರಣ. ಕೋಲಾಟ ಆಡುವವರು ಜನಪದ ಗೀತೆಗಳನ್ನು ಪ್ರಾರಂಭಿಸಿದ ತಕ್ಷಣ ಹಾವು ಪುಂಗಿಯ ನಾದಕ್ಕೆ ತಲೆದೂಗುವಂತೆ ಜನ ಇವುಗಳ ಅನುಕರಣನಾದವೈಖರಿಗೆ ಮಾರು ಹೋಗುತ್ತಾರೆ. ಉದಾಹರಣೆಗಾಗಿ ಒಂದೆರಡನ್ನಿಲ್ಲಿ ನೋಡಬಹುದು. 1 ತಂದನಾನು ತಾನಂದೆನಾನ; ತಂದೆನಾನು ತಾನಂದೆನಾನ; ದಿಮ್ದಿಮ್ಮಿ ದಿಮ್ಮಯ ಲೋಲಿ, ತಯ್ಯೋ ತಮ್ಮಯ್ಯ ಜಿಗ್ಗಿ-ತಾರು ಲಲ್ಲಲ್ಲೆ 2 ಪಾವಕ್ಕಿ ರನ್ನದ ಜೀವಾಳ ಸರಸತಿ ರಾಣಿ ಬಾಕಲ ತೆಗಿತೆಗಿಯೇ. ಆರಂಭದ ಪ್ರಾರ್ಥನೆಯ ಕೋಲಿಗೂ ಮುಕ್ತಾಯದ ಕೋಲಿಗೂ ಯಾವಾಗಲೂ ಗೊತ್ತಾದ ಗೀತೆಗಳನ್ನೇ ಹಾಡುತ್ತಾರೆ. ಬಹಳ ಮೋಹಕವಾದ ಈ ಕೋಲುಪದಗಳಲ್ಲಿ ಶೃಂಗಾರದ ಸೋನೆಯಂತೂ ನಿರಂತರವಾಗಿ ಹರಿಯುತ್ತಿರುತ್ತದೆ. ವಿನೋದಕ್ಕೂ ಇಲ್ಲಿ ಸಾಕಷ್ಟು ಅವಕಾಶ ಉಂಟು. ಭಕ್ತಿಯ ಭಾವಾವೇಶಕ್ಕೇನೂ ಕಡಿಮೆ ಇಲ್ಲ. ವೀರರಸವೂ ಅಲ್ಲಲ್ಲೆ ಇಣಕು ಹಾಕುತ್ತದೆ. ಕೋಲಾಟದಲ್ಲಿ ಬಳಸಲಾಗುವ ಭಕ್ತಿಗೀತೆಗಳಲ್ಲಿ ಹೆಚ್ಚು ಸಂಖ್ಯೆಯವು ಗ್ರಾಮದೇವತೆಗಳನ್ನು ಕುರಿತವಾಗಿರುತ್ತವೆ. ನಿಲ್ಪದಗಳಲ್ಲಿ ಸಾಮಾನ್ಯವಾಗಿ ಹಾಸ್ಯ ಮತ್ತು ಸಂಭಾಷಣೆ ಹೆಚ್ಚಾಗಿ ಕಂಡುಬರುತ್ತದೆ.

ಕೋಲಾಟದ ಗೀತೆಗಳಲ್ಲೂ ವೈವಿಧ್ಯ ಉಂಟು; ಆಟಗಳಲ್ಲೂ ವೈವಿಧ್ಯವುಂಟು. ಕೋಲಾಟದಲ್ಲಿ ಒಂದರಂತೆ ಮತ್ತೊಂದು ಇರುವುದಿಲ್ಲ. ಒಂದು ಬಗೆಯ ಕೋಲನ್ನು ಪುನಃ ಹಯ್ಯುವ ಸಂಭವ ಉಂಟಾದರೂ ಅದಕ್ಕೆ ಬಳಸಿಕೊಳ್ಳುವ ಹಾಡುಗಳು ಮಾತ್ರ ಬೇರೆ ಬೇರೆಯಾಗುತ್ತವೆ. ಅಂದರೆ ಕೋಲಾಟದ ರೀತಿ ಯಥಾವತ್ತಾಗಿ ಒಂದೇ ಆಗಿ ಅದಕ್ಕೆ ಬಳಸಿರುವ ಹಾಡುಗಳು ಬೇರೆಯಾಗಿರುತ್ತವೆ. ಒಂದು ಗೊತ್ತಾದ ಗೀತೆಯನ್ನು ಬೇರೆ ಬೇರೆ ಬಗೆಯ ಕೋಲುಗಳಿಗೆ ಬಳಸಿಕೊಂಡು ಹುಯ್ಯುವುದು ಅತಿ ಪ್ರಯಾಸದ ಕೆಲಸ. ಏಕೆಂದರೆ ಸಾಮಾನ್ಯವಾಗಿ ಇಂಥ ಕೋಲಿಗೆ ಇಂಥದೇ ಹಾಡೆಂದು ನಿಗದಿಯಾಗಿರುತ್ತದೆ. ಒಂದೊಂದು ಕೋಲನ್ನು ಅದರ ಜಾಯಮಾನಕ್ಕನುಗುಣವಾಗಿ ಒಂದೊಂದು ಹೆಸರಿನಿಂದ ಕರೆಯುವುದು ರೂಢಿ: ಬಾಗಿ ಹುಯ್ಯುವ ಕೋಲು ಬಾಗ್ಗೋಲು. ಮುಂದು ಮುಂದಕ್ಕೆ ಹರಿಯುತ್ತ ಹುಯ್ಯುವ ಕೋಲು ಹರಿಗೋಲು ಇತ್ಯಾದಿ. ಕೆಲವು ಸಾರಿ ಹಾಡಿನ ಹೆಸರನ್ನೇ ಕೋಲಿಗೂ ಇಟ್ಟುಬಿಡುತ್ತಾರೆ. ಬಾರು ಗೀಜುಗನ ಮುದ್ದಿನ ತೇರು ಗೀಜುಗನೆ ಎಂಬ ಹಾಡಿನಿಂದ ಪ್ರಾರಂಭವಾಗುವ ಕೋಲನ್ನು ಗೀಜುಗನ ಕೋಲು ಎಂಬುದಾಗಿಯೇ ಕರೆಯುತ್ತಾರೆ.

ಕೋಲಾಟದ ಬಗೆಗಳು: ಕೋಲಾಟದಲ್ಲಿ ಮುಖ್ಯವಾಗಿ ಎರಡು ವಿಭಾಗಗಳು ಕಂಡುಬರುತ್ತವೆ-ನಾಡಕೋಲು ಮತ್ತು ಕೊರಮರ ಕೋಲು ಎಂಬುದಾಗಿ. ಬಹಳ ಪುರಾತನ ಕಾಲದಿಂದ ಈವರೆಗೆ ನೆಡದುಕೊಂಡು ಬಂದಿರುವುದು ನಾಡಕೋಲು. ತೀರ ಇತ್ತೀಚೆಗೆ ತಿಪರಿ ಜಾಯಮಾನದಿಂದ ಕೂಡಿರುವ ಕೋಲೇ ಕೊರಮರ ಕೋಲು. ನಾಡಕೋಲಿಗಿಂತ ಕೊರಮರ ಕೋಲು ಹುಯ್ಯಲು ಬಹಳ ಸುಲಭ. ಕೊರಮರ ಕೋಲುಗಳಲ್ಲಿ ಯಾವುದಾದರೂ ಒಂದು ಬಗೆಯನ್ನು ಕಲಿತರೂ ಆ ಕೋಲಿನ ಉಳಿದೆಲ್ಲ ಬಗೆಗಳನ್ನೂ ಸರಾಗವಾಗಿ ಹುಯ್ಯಬಹುದು. ಆದರೆ ನಾಡಕೋಲಿನಲ್ಲಿ ಈ ಸೌಲಭ್ಯವಿಲ್ಲ. ಇಲ್ಲಿ ಪ್ರತಿಯೊಂದು ಕೋಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಒಂದು ಮತ್ತೊಂದರ ಅನುಕರಣೆ ಅಲ್ಲ. ನಾಡಕೋಲಿನಲ್ಲಿ ವೈವಿಧ್ಯ ಹೆಚ್ಚು ಸೊಗಸು ಹೆಚ್ಚು, ಬನಿ ದಟ್ಟ. ನಾಡಕೋಲಿನಲ್ಲಿ ಅನೇಕ ವಿಧಗಳನ್ನು ಕಾಣಬಹುದು: 1 ಗೀಜುಗನ ಕೋಲು, 2 ಎಳೆಗೋಲು, 3 ಉಯ್ಯಾಲೆ ಕೋಲು, 4 ಬಾಗ್ಗೋಲು, 5 ತೇರುಗೋಲು, 6 ದಂಡೆಕೋಲು, 7 ಕರೆಭಂಟನ ಕೋಲು, 8 ಸೋಬಾನದ ಕೋಲು, 9 ಚಿತ್ತಾರ್ ಗೊಂಬೆ ಕೋಲು, 10 ಜಡೆಕೋಲು 11 ಕೊರವಂಜಿ ಕೋಲು, 12 ಆಲವಣೆಕೋಲು, 13 ಸುತ್ಕೋಲು, 14 ನೀಲ್‍ಕೋಲು, 15 ಹರಿಗೋಲು, 16 ಕೊರವಂಜಿ ಕೋಲು-ಇತ್ಯಾದಿ. ಮೇಲಿನ ಒಂದೊಂದು ಬಗೆಯ ಕೋಲಾಟಕ್ಕೂ ಒಂದೊಂದು ತೆರನಾಗಿ ಕೋಲು ಕೊಡಬೇಕಾಗುತ್ತದೆ. ಅವನ್ನು ಇಷ್ಟಿಷ್ಟು ಗತಕು ಅಥವಾ ಇಷ್ಟಿಷ್ಟು ಚಟುಕುಗಳು ಎಂಬುದಾಗಿ ಕರೆಯುತ್ತಾರೆ. ಇದೇ ರೀತಿ ಕೋಲು ಕೊಡುವ ವಿಧಾನಕ್ಕೂ ಒಂದೊಂದು ಹೆಸರಿದೆ: ಹಾರ್‍ಗಟಕು, ಗೀರ್‍ಗಟುಕ, ಒಡ್ಗೋಲು, ಒಂಟಿಕೋಲು, ಜೋಡ್ಗೋಲು-ಇತ್ಯಾದಿ. ಎಂ.ಸಿ.ವಸಂತಕುಮಾರರ ಕೋಲುಪದಗಳು ಎಂಬ ಪುಸ್ತಕದಲ್ಲಿ ಕೋಲಾಟದ ಅನೇಕ ವಿವರಗಳಿವೆ. ಇಲ್ಲಿ ಮುಖ್ಯವಾದ ಕೆಲವು ಕೋಲಾಟಗಳಿಗೆ ಮಾತ್ರ ವಿವರಣೆ ನೀಡಿದೆ.

(i) ಸುತ್ತುಕೋಲು: ಇದನ್ನು ವಿಶ್ರಾಂತಿಯ ಆಟವೆಂದು ಕರೆಯಬಹುದು. 6 ಜನರಿಂದ ಹಿಡಿದು 20 ಜನಕ್ಕೂ ಮೇಲ್ಪಟ್ಟು ಇರಬಹುದು. ಆಟಗಾರರು ವೃತ್ತಾಕಾರದಲ್ಲಿ ಸುತ್ತುತ್ತ, ತಮ್ಮೆರಡು ಕೈಗಳಲ್ಲಿನ ಕೋಲುಗಳಿಂದ ಒಂದಕ್ಕೊಂದಕ್ಕೆ ಹೊಡೆಯುತ್ತಾರೆ. ಆದರೆ ಬೇರೆಯವರ ಕೋಲುಗಳಿಗೆ ಕೋಲನ್ನು ತಗುಲಿಸುವುದಿಲ್ಲ. ಎಲ್ಲರ ಕಾಲುಗಳು ಒಂದೇ ರೀತಿಯ ಒಂದು ಬಗೆಯ ಲಯಗತಿಯಿಂದ ಕುಣಿಯುತ್ತಿರುತ್ತವೆ. ಹೀಗೆ ಸುತ್ತುತ್ತ ತಮ್ಮ ತಮ್ಮಲ್ಲೆ ಕೋಲು ಹುಯುತ್ತ ಕುಣಿಯುವ ಆಟವಿದು.

(ii) ಹಾರ್‍ಗಟಕು: ಕೋಲುಗಳು ಇತರರ ಕೋಲುಗಳಿಗೆ ಹೊಡೆದರೂ ಹೊಡೆಯುವ ಹಾಗೆ ಬಹುಬೇಗ ಹಾರುವುದರಿಂದ ಇದನ್ನು ಹಾರ್‍ಗಟಕು ಎಂದು ಕರೆದಿರಬಹುದು. ಕೋಲಾಟಗಾರರು ಕೋಲುಗಳನ್ನು ಸಾಮಾನ್ಯವಾಗಿ ತಲೆಯ ಮೇಲೆ ಎತ್ತಿ ಮತ್ತೊಬ್ಬರ ಕೋಲುಗಳಗೆ ಹೊಡೆಯುತ್ತಾರೆ. ಈ ಕೋಲನ್ನು ಹುಯ್ಯುವಾಗ ವೇಗಕ್ಕೆ ಮತ್ತು ಬಿರುಸಿಗೆ ಪ್ರಾಧಾನ್ಯ ಹೆಚ್ಚು. ಈ ಆಟದಲ್ಲಿ ಹಾಡಿಗಿಂತ ಕುಣಿತಕ್ಕೆ ಹೆಚ್ಚು ಒಲವು, ಮೆಚ್ಚು. ಇದರಲ್ಲಿ ಮೊದಲು ಎಡಗೈ ಕೋಲಿನಿಂದ ಮತ್ತೊಬ್ಬರ ಬಲಗೈ ಕೋಲಿಗೊ ಕೋಲು ಹುಯ್ಯುವುದೇ ಇದರ ರೀತಿ. ಎರಡು ಕೈನ ಕೋಲುಗಳನ್ನೂ ಒಂದೇ ಕೈಲಿ ಒಟ್ಟಿಗೆ ಹಿಡಿದು ಇತರರ ಕೋಲಗಳಿಗೆ ಬಡಿಯುವುದೇ ಎರಡನೆಯದು. (iii) ಗೀಜುಗನ ಕೋಲು: ಎರಡು ಕೋಲುಗಳನ್ನು ಜೋಡಿಸಿಕೊಂಡು ಹೊಡೆಯುವುದೇ ಇದರ ವೈಶಿಷ್ಟ್ಯ. ಎಂಟು ಜನರು ಆಡುತ್ತಿದ್ದರೆ ಎರಡು ಕೈಗಳಲ್ಲೂ ಜೋಡಿಸಿಟ್ಟುಕೊಂಡಿರುವ ಕೋಲುಗಳನ್ನು ಎಡಕ್ಕೊಂದು ಬಾರಿ, ಬಲಕ್ಕೊಂದು ಬಾರಿ ಕೊಟ್ಟು ಮೂರನೆ ಏಟಿಗೆ ಎರಡು ಕೈಗಳನ್ನು ಮೇಲೆತ್ತಿ ಹೊಡೆದು, ಬಲದಲ್ಲಿದ್ದವನು ಎಡಕ್ಕೆ, ಎಡದಲ್ಲಿದ್ದವನ ಬಲಕ್ಕೆ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತಾನೆ. ಹೀಗೆ ಕೋಲನ್ನು ಹುಯ್ಯುವಾಗ ಬಾರೋ ಗೀಜುಗ, ಬಾರೊ ಗೀಜುಗ, ಹಾರೊ ಮುತ್ತಿನರಗಿಣಿ, ಬಾರೊ ಗೀಜುಗ, ಬಾಳೆವನಕ್ಕೆ, ಸೈ, ಹೋದೇನ್ ಗೀಜುಗ, ಅಲ್ಲಿ ಬಾಲೇರಿಬ್ರುದ ಕಾದು ಕೂತವ್ರೆ, ಬಾರೋ ಗೀಜುಗ, ಎಂದು ಹಾಡುವುದು ಸಾಮಾನ್ಯ ವಾಡಿಕೆ.

(iv) ತೇರು ಕೋಲು: ಈ ಕೋಲನ್ನು ಹುಯ್ಯುವಾಗ ಅರ್ಧ ಜನ ಹಿಂದಕ್ಕೆ ಬಾಗುತ್ತಾರೆ. ಉಳಿದರ್ಧ ಜನ ಅವರ ಮೇಲೆ ಬಾಗಿದಂತೆ ಮಾಡಿ, ಹಾಗೆಯೆ ಹಿಂದು ಹಿಂದಕ್ಕೆ ಸಾಗುತ್ತ ಹೋಗುತ್ತಾರೆ. ಕೋಲಾಟವಾಡುತ್ತ ಊರ ಬೀದಿಯನ್ನೆಲ್ಲ ಬಳಸುವರು. ಇದಕ್ಕೆ ತೇರುಕೋಲು ಎಂಬ ಹೆಸರೂ ಇದೆ. ಬಳಸುವ ಹಾಡು ಸಾಮಾನ್ಯವಾಗಿ ತೇರಿಗ್ಹೋಗನ ಬನ್ನೀರೆ ಸ್ವಾಮಿ, ರಥಾಕ್ಹೋಗನ ಬನ್ನೀರೆ ಎಂದಿರುತ್ತದೆ.

(v) ಮನೆ ಕೋಲು: ಇದರಲ್ಲಿ ಒಂದು ಮನೆಕೋಲು ಮತ್ತು ಎರಡು ಮನೆ ಕೋಲು ಎಂದು ಎರಡು ವಿಧಗಳಿವೆ. ಒಬ್ಬೊಬ್ಬರನ್ನೆ ದಾಟುವ (ಬಳಸುವ) ವಿಧಾನಕ್ಕೆ ಒಂದು ಮನೆಕೋಲೆಂದೂ ಪ್ರತಿಯೊಬ್ಬ ಆಟಗಾರನ್ನು ದಾಟಿ ಕೋಲು ಕೊಡುವ ವಿಧಾನಕ್ಕೆ ಎರಡು ಮನೆಕೋಲೆಂದೂ ಕರೆಯುತ್ತಾರೆ.

(vi) ಚಟುಕಿನ ಕೋಲು: ಇದರಲ್ಲಿ ಒಂದು ಚಟುಕಿನ ಕೋಲು ಮತ್ತು ಎರಡು ಚಟುಕಿನ ಕೋಲು ಎಂದು ಎರಡು ವಿಭಾಗಗಳಿವೆ. ಕೋಲು ಹುಯ್ಯುವಾಗ ಒಬ್ಬ ಮತ್ತೊಬ್ಬನ ಕೋಲಿಗೆ ಒಂದು ಸಾರಿ ಮಾತ್ರ ಬಡಿದು ಮುಂದೆ ಸಾಗುವುದೇ ಒಂದು ಚಟುಕಿನ ಕೋಲು. ಒಬ್ಬ ಮತ್ತೊಬ್ಬನ ಕೋಲಿಗೆ ಒಂದೊಂದು ಕೋಲಿನಿಂದಲೂ ಎರಡು ಬಾರಿ ಬಡಿದು ಮುಂದೆ ಸಾಗುವುದೇ ಎರಡು ಚಟುಕಿನದು.

(vii) ವಾದದ ಕೋಲು: ಇದು ಸ್ಪರ್ಧೆಯ ಕೋಲು. ಕೋಲಾಟದ ಮಂದಿಯನ್ನು ಸಮವಾಗಿ ಇಬ್ಭಾಗ ಮಾಡಿ ಎದರುಬದರು ನಿಲ್ಲಿಸುತ್ತಾರೆ. ಒಂದು ಕಡೆಯವರು ಪ್ರಶ್ನಾರ್ಥಕವಾದ ಹಾಡುಗಳನ್ನು ಹಾಡುತ್ತ ತಮ್ಮದೇ ಅದ ಗತ್ತು ಗಮ್ಮತ್ತುಗಳಿಂದ ಹೆಜ್ಜೆಹಾಕುತ್ತ ಮತ್ತೊಂದು ಕಡೆಯ ಗುಂಪಿನ ಕಡೆಗೆ ಅಕರ್ಷಕವಾದ ಭಂಗಿಯಲ್ಲಿ ಸಾಗುವರು. ಆಗ ಮತ್ತೊಂದು ಕಡೆಯ ಆಟಗಾರರು ಮೌನವಾಗಿ ಹಿಂದುಹಿಂದಕ್ಕೆ ಅವರದೇ ಆದ ಠೀವಿಯಿಂದ ಹೋಗುವರು. ಹಾಡು ಮುಗಿದ ಮೇಲೆ, ಹಿಂಬದಿಗೆ ನಡೆದ ಮಂದಿ ಮೊದಲಿನವರು ಹೋದ ಗತ್ತುಗಮ್ಮತ್ತುಗಳನ್ನೇ ಅನುಸರಸಿ ಠೀವಿಯಿಂದ ಇವರ ಪ್ರಶ್ನೆಗಳನ್ನು ಹಾಕಿ ಹಿಂದಕ್ಕೆ ಸಾಗುತ್ತಾರೆ. ಅವರು ಪ್ರಶ್ನೆಗಳನ್ನು ಹಾಕಿದ ಕೂಡಲೆ ಇವರು ಚಂಗನೆ ನೆಗೆಯುತ್ತ ಅದೇ ರೀತಿ ಹೋಗುತ್ತಾರೆ. ಇಲ್ಲಿ ಇಲ್ಲರ ಕೈಗಳ ಕೋಲುಗಳೂ ಮೌನವಾಗಿಯೇ ಇರುತ್ತವೆಯೇ ಹೊರತು ಶಬ್ಧ ಮಾಡುವುದಿಲ್ಲ. ಇಲ್ಲಿ ಹಾಡು, ಆದರೆ ಅರ್ಥ ಮತ್ತು ಅವರ ನಡಿಗೆ ಪ್ರಧಾನ. ಆಟ ಒಟ್ಟಾರೆ ರಮ್ಯ.

(viii) ಕಾಲುಸಂದಿನ ಕೋಲು: ಇದೊಂದು ರೀತಿಯ ವಿಚಿತ್ರದ ಕೋಲಾಟ. ಆಟಗಾರರಲ್ಲಿ ಇಬ್ಬಿಬ್ಬರು ಎದುರುಬದುರು ನಿಂತುಕೊಳ್ಳುವರು. ಪ್ರತಿಯೊಬ್ಬನೂ ಮೊದಲು ತನ್ನ ಎಡಗಾಲನ್ನು ಎತ್ತಿ ಎರಡು ಕೈಗಳ ಕೋಲುಗಳನ್ನು ಅಲ್ಲಿ ಒಂದಕ್ಕೊಂದಕ್ಕೆ ಬಡಿಯುತ್ತಾನೆ. ಅನಂತರ ಬಲಗಾಲನ್ನು ಎತ್ತಿ ಮತ್ತೆ ಹಾಗೆಯೇ ಮಾಡುತ್ತಾನೆ. ಇದೇ ಸಮಯದಲ್ಲಿ ಎಲ್ಲರೂ ಹೀಗೆಯೇ ಮಾಡುವುದರಿಂದ ಸಪ್ಪಳ ಒಂದೇ ರೀತಿ ಕೋಲು ಹುಯ್ಯಿದ ಮೇಲೆ ಮುಂದಕ್ಕೆ ನೆಗೆದು ಮತ್ತೊಬ್ಬನಿಗೆ ಕೋಲು ಕೊಟ್ಟು, ಮತ್ತೆ ಮೊದಲಿನಂತೆಯೇ ಕಾಲೆತ್ತಿ ಹುಯ್ಯಲು ಪ್ರಾರಂಭಿಸುತ್ತಾರೆ. ಇದೇ ರೀತಿ ಏಕಪ್ರಕಾರವಾಗಿ ಪುನರಾವರ್ತಿಸುತ್ತ ಇರುತ್ತದೆ. ಇದೇ ಕಾಲುಸಂದಿನ ಕೋಲು. (ix) ಕೊರವಂಜಿ ಕೋಲು: ಇದೂ ವಿಶಿಷ್ಟವಾದ ಕೋಲೆ, ಎಲ್ಲರೂ ಕೋಲಾಟ ಆಡುವಾಗ ಒಬ್ಬ ಮಾತ್ರ ಕೊರವಂಜಿಯ ವೇಷವನ್ನು ಹಾಕುತ್ತಾನೆ; ಮತ್ತೊಬ್ಬ ಅವಳನ್ನು ಹಿಡಿಯಲು ತೊಡಗುತ್ತಾನೆ. ಉಳಿದವರು ಕೋಲು ಹುಯ್ಯುತ್ತಿರುತ್ತಾರೆ. ಕೊರವಂಜಿ ಅವರ ಮಧ್ಯೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವಳು. ಆದರೆ ಹಿಡಿಯುವವನು ಅವಳನ್ನು ಅಟ್ಟಿಸಿಕೊಂಡು ಹೋಗುವನು. ಕೊನೆಗೊಮ್ಮೆ ಅವಳನ್ನು ಆತ ಹಿಡಿಯುತ್ತಾನೆ. ಹೀಗೆ ಆಟ ಸಾಗುತ್ತಿರುತ್ತದೆ.

(x) ಉಯ್ಯಾಲೆಯಾಟ: ಇದಕ್ಕೆ ಅವಶ್ಯವಾಗಿ ಎಂಟೇ ಜನರಿರಬೇಕು. ಪ್ರಾರಂಭದಲ್ಲಿ ಆ ಎಂಟು ಜನರೂ ವೃತ್ತಾಕಾರದಲ್ಲಿ ನಿಂತು ಕೋಲು ಹುಯ್ಯುತ್ತಿರುತ್ತಾರೆ. ಎಡಕ್ಕೊಮ್ಮೆ ಬಲಕ್ಕೊಮ್ಮೆ ಕೋಲನ್ನು ಕೊಡುತ್ತಿದ್ದ ಸಮಯದಲ್ಲಿ ಉಯ್ಯಾಲೆ ಬಣ್ಣದುಯ್ಯಾಲೆ, ಸಿರಿಗಂದಕಾಳವ್ವನ ಉಯ್ಯಾಲೆ ಎಂದು ನಾಯಕ ಹಾಡನ್ನು ಪ್ರಾರಂಭಿಸುತ್ತಾನೆ. ಈ ಚರಣಗಳನ್ನು ಪ್ರತಿ ಪದದ ಕೊನೆಯಲ್ಲೂ ಪುನರುಕ್ತಿ ಗೊಳಿಸುತ್ತಾರೆ ಉಳಿದವರು. ಉಯ್ಯಾಲೆನಾಡೊಳೆ, ಉಯ್ಯಾಲೆ ಸಣ್ಣ ದನಿಯೋಳೆ ಎಂಬ ಮುಂದಿನ ಮತ್ತೆರಡು ಸಾಲುಗಳನ್ನು ಹಾಡುವಾಗ ಆಟಗಾರರು ಮಧ್ಯದಲ್ಲಿ ನಾಲ್ವರು ಎದುರೆದುರಾಗಿ, ಉಳಿದ ನಾಲ್ವರು ಅಕ್ಕಪಕ್ಕದಲ್ಲಿ ನಿಂತು ಕೋಲು ಹುಯ್ಯುತ್ತಾರೆ. ಮುಂದಿನ ಮತ್ತೆರಡು ಸಾಲುಗಳನ್ನು ಉಯ್ಯಾಲೆ ಸಣ್ಣ ದನಿಯೋಳೆ ಕಾಳವ್ವ, ಉಯ್ಯಾಲೆನಾಡೊ ದೊರೆ ಬಂದ-ಹೇಳುವಾಗ ಅಕ್ಕ ಪಕ್ಕದಲ್ಲಿದ್ದವರು ಮಧ್ಯಕ್ಕೆ ಬಂದಿರುತ್ತಾರೆ. ಮಧ್ಯದಲ್ಲಿದ್ದವರು ಅಕ್ಕಪಕ್ಕಕ್ಕೆ ಸಂದಿರುತ್ತಾರೆ. ಒಂದೇ ಸಮನೆ ರಭಸದಿಂದಾಗುವ ಈ ಚಲನೆಯಿಂದಾಗಿ ಉಯ್ಯಾಲೆ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಉಯ್ಯಲೆಯಲ್ಲಿ ಕುಳಿತು, ತೂಗಿಸಿಕೊಂಡುದಕ್ಕಿಂತಲೂ ಹೆಚ್ಚಾದ ರಸಾನಂದ ಇದರಲ್ಲುಂಟಾಗುತ್ತದೆ.

(xi) ಜಡೆಕೋಲು: ಕೋಲಾಟವಾಡುವ ಸ್ಥಳದಲ್ಲಿ ಒಂದು ನಿಶ್ಚಿತವಾದ ಅಂತರದಲ್ಲಿ ಎರಡು ಕೊಂಬೆಗಳನ್ನು ನೆಟ್ಟು ಅವುಗಳ ಮೇಲೆ ಅಡ್ಡಲಾಗಿ ಒಂದು ಗಳುವನ್ನು ಹಾಕುತ್ತಾರೆ. ಆ ಗಳು ಸಾಮಾನ್ಯವಾಗಿ ಭೂಮಿಯಿಂದ ಎಂಟು ಅಡಿ ಎತ್ತರದಲ್ಲಿರುತ್ತದೆ. ಗಳುವಿನ ಮಧ್ಯಭಾಗಕ್ಕೆ ಎಂಟು ಹಗ್ಗಗಳನ್ನು ಒಟ್ಟಿಗೆ ಸೇರಿಸಿ ಕಟ್ಟಲಾಗಿರುತ್ತದೆ. ಹಗ್ಗಗಳ ಉಳಿದ ತುದಿಯನ್ನು ಕೋಲು ಹುಯ್ಯುವ ಮಂದಿ ತಮ್ಮ ಸೊಂಟಗಳಿಗೆ ಕಟ್ಟಿಕೊಂಡು ಕೋಲು ಹುಯ್ಯಲು ಪ್ರಾರಂಭಿಸುತ್ತಾರೆ. ಇಲ್ಲಿನ ವೈಶಿಷ್ಟ್ಯವೆಂದರೆ, ಆಳುಗಳು ಒಂದು ವರಸೆಯಲ್ಲಿ ತಿರುಗವಾಗ ಹಗ್ಗ ಮೇಲ್ಭಾಗದಿಂದ ಹೆಣೆದು ಕೊಳ್ಳುತ್ತ ಬಂದು ಜಡೆಯ ಆಕೃತಿ ತಾಳುತ್ತದೆ; ಅನಂತರ ಆಳುಗಳು ವರಸೆ ಬದಲಿಸಿದಾಗ ಕ್ರಮೇಣ ಹೆಣಿಗೆ ಬಿಚ್ಚಿ ಹಗ್ಗ ಮೊದಲಿನಂತೆಯೇ ಆಗುತ್ತದೆ. ಇಲ್ಲಿ ಆಳುಗಳು ಮನೆಗಳಿಗೆ ದಾಟುವಾಗ ಈ ಲೆಕ್ಕಾಚಾರವನ್ನು ಇಟ್ಟುಕೊಂಡಿರುವುದು ಕೋಲಿನ ನಿಯಮ. ಹೀಗೆ ಹಗ್ಗ ಜಡೆಯಂತೆ ಹೆಣೆದುಕೊಳ್ಳುವುದರಿಂದ ಇದನ್ನು ಜಡೆಕೋಲು ಎಂಬುದಾಗಿಯೇ ಕರೆಯುತ್ತಾರೆ. ತಮಿಳುನಾಡಿನ ಪಿನ್ನಲ್ ಕೋಲಾಟಕ್ಕೂ ಈ ಜಡೆಕೋಲಿಗೂ ಸಾಮ್ಯ ಇದೆ.

(xii) ಕೊರವಂಜಿ ಕೋಲು: ಇದೊಂದು ಬಹಳ ವೈವಿಧ್ಯದಿಂದ ಕೂಡಿದ ಆಕರ್ಷಣೀಯವಾದ ಕೋಲು. ನಾಲ್ಕು ಜನ ಒಂದು ಸಾಲಿನಲ್ಲಿ ನಿಂತಿರುತ್ತಾರೆ. ಅವರಿಗೆ ಅಭಿಮುಖವಾಗಿ ಎದುರು ಸಾಲಿನಲ್ಲಿ ಮತ್ತೆ ನಾಲ್ಕು ಮಂದಿ ನಿಂತುಕೊಳ್ಳುತ್ತಾರೆ. ಈ ಮಧ್ಯೆ ಓಣಿಯೋಪದಿಯಲ್ಲಿ ಸ್ವಲ್ಪ ಸ್ಥಳವಿರುತ್ತದೆ. ಎರಡು ಸಾಲಿನವರು ನಿಂತಲ್ಲಿಯೇ ನಿಂತು ತಾಳ ಗಟಕು ಹಾಕುತ್ತಿರುತ್ತಾರೆ. ಈ ಎಂಟು ಮಂದಿಯಲ್ಲದೆ ಬೇರೆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಕೊರವಂಜಿ ವೇಷ ಹಾಕುತ್ತಾನೆ. ಮತ್ತೊಬ್ಬ ರುಕ್ಮಿಣಿ ವೇಷ ಹಾಕುತ್ತಾನೆ. ಕೊರವಂಜಿ ಓಣಿಯ ಒಂದು ತುದಿಯಲ್ಲಿದ್ದರೆ ರುಕ್ಮಿಣಿ ಮತ್ತೊಂದು ತುದಿಯಲ್ಲಿರುತ್ತಾಳೆ. ಕೈ ತಾರೆ ಕೈ ತಾರೆ ಕೈ ತಾರೆ ದುಂಡಿ ಎಂದು ಹೇಳುತ್ತ ಕೊರವಂಜಿ ಉಕ್ಮಿಣಿಯನ್ನು ಅಟ್ಟಿಸಿಕೊಂಡು ಹೋಗುತ್ತಾಳೆ. ಇಬ್ಬರೂ ಹಾಡಿಗನುಗುಣವಾಗಿ ಬಾಗುತ್ತ ಬಳಕುತ್ತ ಅಭಿನಯಿಸುತ್ತ ಓಡಿಯಾಡುತ್ತಾರೆ. ಕೊನೆಗೆ ಕೊರವಂಜಿ ರುಕ್ಮಿಣಿಯನ್ನು ಹಿಡಿದುಬಿಡುತ್ತಾಳೆ. ಕೊರವಂಜಿ ವೇಷದಲ್ಲಿ ಬಂದವನು ಕೃಷ್ಣ ಎಂಬುದು ಹಾಡಿನಿಂದ ವ್ಯಕ್ತವಾಗುತ್ತದೆ. ಇಲ್ಲಿ ಕೊರವಂಜಿಯದೇ ಪ್ರಧಾನ ಪಾತ್ರವಾಗಿರುವುದರಿಂದಲೂ ಹಾಡು ಸಹ ಕೊರವಂಜಿಯನ್ನೇ ಕುರಿತಾಗಿರುವುದರಿಂದಲೂ ಇದನ್ನು ಕೊರವಂಜಿ ಕೋಲು ಎಂಬುದಾಗಿಯೇ ಕರೆದುದರಲ್ಲಿ ಔಚಿತ್ಯವಿದೆ. ಈ ಕೊರವಂಜಿ ನೃತ್ಯ ಭರತನಾಟ್ಯದಂಥ ಭಾರತೀಯ ಮಹಾನೃತ್ಯ ಒಂದಕ್ಕೆ ಆಧಾರವಾಗಿದೆ ಎಂಬುದಾಗಿ ಪ್ರೋಜೇಶ್ ಬ್ಯಾನರ್ಜಿಯವರ ಅಭಿಪ್ರಾಯ. ಕೊರವಂಜಿ ಕೋಲು ಜನಪದ ಕಲೆಗೆ ಸಂಬಂಧಿಸಿದರೆ ಕೊರವಂಜಿ ಪಾತ್ರ ಜನಪದ ಸಾಹಿತ್ಯದಲ್ಲೂ ಉಜ್ಜ್ವಲ ಸ್ಥಾನವನ್ನು ಪಡೆದುಕೊಂಡಿದೆ.

ಕೋಲಾಟದಲ್ಲಿ ಇನ್ನೂ ಅನೇಕ ಬಗೆಯ ಕೋಲುಗಳು ಕಂಡುಬರುತ್ತವೆ. ಕೆಲವು ಕೋಲುಗಳಲ್ಲಿ ಹುಯ್ಯುವ ವಿಧಾನ ಗೊತ್ತಿದ್ದರೂ ಅವಕ್ಕೆ ಇರುವ ಶಿರೋನಾಮೆಗಳು ಆಗಲೇ ಮಾಯವಾಗುತ್ತಿವೆ. ಕೆಲವು ಜಾತಿಯ ಕೋಲುಗಳನ್ನು ಈಗ ಹುಯ್ಯುವುದೂ ಸಾಧ್ಯವಾಗುತ್ತಿಲ್ಲ. ಆಲವಣೆ ಕೋಲು ಎಂಬುದು ಅತ್ಯಾಕರ್ಷವಾದ ಕೋಲು. ಆದರೆ ಅದು ಉಳಿದೆಲ್ಲ ಕೋಲುಗಳಿಗಿಂತ ಹೆಚ್ಚು ಕಷ್ಟತರವಾಗಿರುವುದರಿಂದಲೂ ಜನರಲ್ಲಿ ಕೋಲಾಟದ ಬಗ್ಗೆ ಮೊದಲಿದ್ದ ಗೀಳು ಕಡಿಮೆಯಾಗುತ್ತ ಬಂದಿರುವುದರಿಂದಲೂ ಈಗ ಅದನ್ನು ಹುಯ್ಯಲು ಸಾಧ್ಯ ವಾಗುತ್ತಿಲ್ಲ.

ಇತ್ತೀಚೆಗೆ ಕೆಲವು ಬೆರಕೆ ಕೋಲುಗಳು ರೂಢಿಗೆ ಬಂದಿವೆ. ಅಂದರೆ ಇಂದಿನ ಕೊರಮರ ಕೋಲಿನ ಕೆಲವು ವಿಧಾನಗಳನ್ನು ಹಿಂದಿನ ನಾಡಕೋಲಿನ ಕೆಲವು ವಿಧಾನಗಳೊಂದಿಗೆ ಸೇರಿಸಿ ಹೊಂದಿಕೆಯಾಗುವಂತೆ ಸ್ವಲ್ಪ ಮಾರ್ಪಡಿಸಿಕೊಂಡು ಹುಯ್ಯುವ ಕೋಲೇ ಬೆರಕೆ ಕೋಲು.

ಕೋಲಾಟ ಸಾಮಾನ್ಯವಾಗಿ ಭಾರತದ ಎಲ್ಲೆಡೆಯೂ ಕಂಡುಬರುತ್ತದಾದರೂ ಕರ್ಣಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು. ಕರ್ಣಾಟಕದಲ್ಲಿ ಇದು ಗಂಡಸರಿಗೆ ಮಾತ್ರ ಮೀಸಲಾದ ಆಟ. ಶಿಶುವಿಹಾರ ಶಾಲೆ ಮುಂತಾದ ವಿದ್ಯಾಸಂಸ್ಥೆಗಳಲ್ಲಿ ಮಾತ್ರ ಮಾದರಿಗಾಗಿ ಸುಲಭದ ಕೋಲಾಟವನ್ನು ಹೇಳಿ ಕೊಡುವುದು ಇತ್ತೀಚೆಗೆ ರೂಢಿಯಲ್ಲಿದೆ. ತಮಿಳು ನಾಡಿನ ಇತರ ನೃತ್ಯಗಳೀಗ ನಾಗರಿಕವೆನಿಸಿ ಸಾಮಾಜಿಕ ರೂಪ ತಳೆದಿವೆ. ಕೋಲಾಟ ಮತ್ತು ಕುಮ್ಮಿಗಳು ಮಹಿಳೆಯರ ನೃತ್ಯ ವಿಧಾನಗಳು ಇದ್ದು ಅವು ತಮಿಳುನಾಡು ಮತ್ತು ಕೇರಳಗಳಲ್ಲಿ ಜನಪ್ರಿಯವಾಗಿವೆ. ಆದರೂ ಎಲ್ಲ ರೀತಿಯ ನೃತ್ಯಗಳಲ್ಲೂ ಕೋಲು ಹಿಡಿದು ಗೋಲಾಕಾರವಾಗಿ ನಿಂತುಕೊಳ್ಳುವ ಪದ್ಧತಿ ಇದೆ. ಈ ಕೋಲಾಟದ ತಾಳವೂ ಭಿನ್ನ ಭಿನ್ನವಾಗಿರುತ್ತದೆ. ದಕ್ಷಿಣ ಭಾರತದ ಈ ಕೋಲಾಟ ಸಾಮಾನ್ಯವಾಗಿ ಗುಜರಾತಿನ ಗಾರ್ಭ ಮತ್ತು ಸೌರಾಷ್ಟ್ರದ ಡಂಡಿಯಾ ರಾಸುಗಳನ್ನು ಹೋಲುತ್ತದೆ. ಕೋಲಾಟದಲ್ಲಿನ ಮಹಿಳೆಯರ ಚಲನೆ, ಅಂಗಾಭಿನಯಗಳು ಸಾಮಾನ್ಯವಾಗಿ ಭರತನಾಟ್ಯವನ್ನು ಹೋಲುವಂತಿದ್ದು ಗಾರ್ಭದ ಅಂಗಾಭಿನಯ, ನಡುವನ್ನು ಪ್ರತ್ಯೇಕವಾಗಿ ಬಳುಕಿಸುವ ಅಭಿನಯ ಇಲ್ಲಿಲ್ಲ.

ಕೋಲಾಟ ಆಡುವವರಿಗೆ ಒಳ್ಳೆಯ ಮನೋರಂಜನೆ ದೊರೆಯುತ್ತದೆ. ದೇಹ ಮತ್ತು ಮನಸ್ಸುಗಳು ದೃಢವೂ ಉಲ್ಲಾಸಭರಿತವೂ ಆಗುತ್ತವೆ. ಕೂಟನೃತ್ಯಗಳಾದ ಇಂಥ ಕಲೆಗಳಿಂದ ಜನತೆಯಲ್ಲಿ ಸ್ನೇಹ, ಸಹಕಾರ, ಸೌಹಾರ್ದಗಳು ವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. (ನೋಡಿ- ಆಟಗಳು) (ನೋಡಿ- ಕರ್ನಾಟಕ-ಜಾನಪದ-ಸಂಗೀತ) (ಎಂ.ಸಿ.ವಿ.)

       (ಪರಿಷ್ಕರಣೆ: ಎಂ.ಬಿ.ಸಿಂಗ್)