ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಯ್ಯ)

ವಿಕಿಸೋರ್ಸ್ದಿಂದ

ಮುದ್ದಣ :- (ನಂದಳಿಕೆ ಲಕ್ಷ್ಮೀನಾರಾಯಣಯ್ಯ) 1870-1901 ಹೊಸಗನ್ನಡ ಕಾವ್ಯಕ್ಕೆ ನಾಂದಿಹಾಡಿದ ಕವಿ. ಶ್ರೀ ರಾಮಾಶ್ವಮೇಧಂ ಎಂಬ ಪ್ರಸಿದ್ಧ ಕಾವ್ಯದ ಕರ್ತೃ. ಕಾರ್ಕಳ ತಾಲ್ಲೂಕಿನ ನಂದಳಿಕೆ ಗ್ರಾಮದಲ್ಲಿ 1870 ಜನವರಿ 24 ರಂದು ಜನಿಸಿದ. ಇವನ ತಂದೆ ಪಾಟಾಳಿ ತಿಮ್ಮಪ್ಪಯ್ಯ. ತಾಯಿ ಲಕ್ಷ್ಮಮ್ಮ. ರಾಮಪ್ಪ ಮತ್ತು ಲಿಂಗಣ್ಣಯ್ಯ ಚಿಕ್ಕಪ್ಪಂದಿರು. ಶಿವರಾಮಯ್ಯ ಇವನ ತಮ್ಮ. ಮಳಲಿ ಸುಬ್ಬರಾಯರು ಗುರು. ಮುದ್ದಣ್ಣನ ಹುಟ್ಟು ಹೆಸರು ಲಕ್ಷ್ಮೀ ನಾರಾಯಣಯ್ಯ. ಹೆತ್ತವರು ಮುದ್ದಿನಿಂದ ಮುದ್ದಣ ಎಂದು ಕರೆಯುತ್ತಿದ್ದರು. ಬಾಲ್ಯದಲ್ಲಿ ಇವನು ನಂದಳಿಕೆಯಲ್ಲಿಯೇ ಶಿಕ್ಷಣ ಪಡೆದು ಅನಂತರ ಟ್ರೈನಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಬಡತನದಿಂದಾಗಿ ಆಂಗ್ಲ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಿದೆ. ಮದರಾಸಿನಲ್ಲಿ ವ್ಯಾಯಾಮ ಶಿಕ್ಷಣ ಪಡೆದು ಮರಳಿದ ಅನಂತರ ಉಡುಪಿಯ ಬೋರ್ಡ್ ಶಾಲೆಯಲ್ಲಿ ಅಂಗಸಾಧನೆಯ ಶಿಕ್ಷಕನಾಗಿ ನೇಮಕಗೊಂಡ (16-5-1889). ಆಗ ಇವನಿಗೆ ತಿಂಗಳಿಗೆ ಹತ್ತು ರೂಪಾಯಿ ಸಂಬಳ. ಮೂರು ವರ್ಷಗಳ ಅನಂತರ (26-3-1892) ಉಡುಪಿಯಿಂದ ಕುಂದಾಪುರಕ್ಕೆ ವರ್ಗವಾಯಿತು. ಆಗ ಇವನಿಗೆ 15 ರೂಪಾಯಿ ಸಂಬಳ. ಈ ಹೊತ್ತಿಗಾಗಲೇ ಇವನಿಗೆ ಶಿವಮೊಗ್ಗ ಜಿಲ್ಲೆಯ ಕಾಗೇಕೊಡ ಮೊಗ್ಗ ಜಿಲ್ಲೆಯ ಕಾಗೇಕೊಡ ಮಗ್ಗಿ ಗ್ರಾಮದ ನಾರಾಣಪ್ಪಯ್ಯ ಅವರ ಮಗಳು ಕಮಲಾಬಾಯಿ ಎಂಬಾಕೆ ಜೊತೆ ಮದುವೆ ಆಗಿದ್ದು ರಾಧಾಕೃಷ್ಣ ಎಂಬ ಮಗನೂ ಇದ್ದ. ಮುಂದೆ ಮುದ್ದಣನಿಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರ ಉದ್ಯೋಗ ದೊರೆಯಿತು. ಆಗ ಇವನಿಗೆ ದೊರೆಯುತ್ತಿದ್ದ ತಿಂಗಳ ಸಂಬಳ ಇಪ್ಪತ್ತು ರೂಪಾಯಿ. ಇಷ್ಟು ಹಣದಲ್ಲಿ ಇವನು ತನ್ನ ಸಂಸಾರ ನಿಭಾಯಿಸಬೇಕಾಗಿದ್ದು ಬಡತನದಲ್ಲಿ ತುಂಬ ಬಳಲಿದ. ಸ್ವಲ್ಪಕಾಲ ಕಳೆದ ಅನಂತರ ಕ್ಷಯರೋಗಕ್ಕೆ ತುತ್ತಾದ. ಈ ವ್ಯಾಧಿ ಉಲ್ಬಣಗೊಂಡು 1901 ಫೆಬ್ರವರಿ 15ರಂದು ಕೊನೆಯುಸಿರೆಳೆದ.

ಅತ್ಯಂತ ತೀಕ್ಷ್ಣಮತಿಯೂ ಏಕಪಾಠಿಯೂ ಎನ್ನಿಸಿದ್ದ ಮುದ್ದಣ ಬಿಡುವಿದ್ದಾಗಲೆಲ್ಲ ಸ್ವತಂತ್ರವಾಗಿಯೂ ಮಳಲಿ ಸುಬ್ಬರಾಯರಂಥ ಬಲ್ಲವರ ನೆರವಿನಿಂದಲೂ ಕಿಟ್ಟಲ್ ಕೋಶ, ಶಬ್ಬಮಣಿದರ್ಪಣ ಮತ್ತು ಕಾವ್ಯಕಲಾನಿಧಿಯಲ್ಲಿ ಅಚ್ಚಾಗಿ ಬರುತ್ತಿದ್ದ ಕನ್ನಡ ಕಾವ್ಯಗಳು ಬಿ. ವೆಂಕಟಾಚಾರ್ಯರ ಕಾದಂಬರಿಗಳು ಮುಂತಾದವನ್ನು ಅಧ್ಯಯನಮಾಡಿ ಶಬ್ದಸಂಪತ್ತನ್ನೂ ವೈದುಷ್ಯವನ್ನೂ ಹೆಚ್ಚಿಸಿಕೊಳ್ಳುತ್ತಿದ್ದ. ಜೊತೆಗೆ ಯಕ್ಷಗಾನದಲ್ಲೂ ಭಾಗವಹಿಸುತ್ತಿದ್ದ. ಇದರಿಂದ ಇವನ ರಸಿಕತೆ, ಪಾಂಡಿತ್ಯ ಮುಂತಾದ ಗುಣಗಳಿಗೆ ಸಾಣೆ ಹಿಡಿದಂತಾಯಿತು. ಇವನಿಗೆ ಕನ್ನಡ, ಸಂಸ್ಕøತಗಳಲ್ಲದೆ ಮಲಯಾಳಮ್, ಇಂಗ್ಲಿಷ್ ಭಾಷೆಗಳ ಪರಿಚಯವೂ ಇತ್ತು. ಬರವಣಿಗೆ ಮುದ್ದಾಗಿರುತ್ತಿತ್ತು. ಸಂಗೀತದಲ್ಲಿಯೂ ಇವನಿಗೆ ಸ್ವಲ್ಪ ಮಟ್ಟಿನ ಪರಿಶ್ರಮವಿತ್ತೆಂದು ತಿಳಿದುಬರುತ್ತದೆ.

ಜೋಜೋ ಎಂಬುದು ಇವನ ಮೊದಲ ಸಂಶೋಧನಾತ್ಮಕ ಲೇಖನ. 1900 ಜುಲೈನಲ್ಲಿ ಪ್ರಕಟವಾಗತೊಡಗಿದ ಸುವಾಸಿನಿ ಎಂಬ ಪ್ರತಿಕೆಯ ಮೊದಲ ಸಂಚಿಕೆಯಲ್ಲಿ ಈ ಲೇಖನ ಬೆಳಕುಕಂಡಿತು. ಚಕ್ರಧಾರಿ ಎಂಬ ಹೆಸರಿನಿಂದ ಈ ಲೇಖನದಲ್ಲಿ ತುಳುವಿನ ಜೋವು (ಸುಗಮ) ಎಂಬುದರಿಂದ ಕನ್ನಡದ ಜೋಗುಳ ಎಂಬ ಪದ ನಿಷ್ಪನ್ನವಾಗಿರಬೇಕೆಂದು ಸಾಧಿಸಲಾಗಿದೆ. ಅನಂತರ ಇವನು ಶ್ರೀರಾಮಾಶ್ವಮೇಧಂ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕ ಈ ಹಳಗನ್ನಡ ಕಾವ್ಯಗಳನ್ನೂ ರತ್ನಾವತೀಕಲ್ಯಾಣ, ಕುಮಾರವಿಜಯ ಮೊದಲಾದ ಯಕ್ಷಗಾನ ಕೃತಿಗಳನ್ನೂ ರಚಿಸಿದ. ಇವೆಲ್ಲ ಗೋದಾವರಿ ಎಂಬ ಕಾದಂಬರಿಯ ಕೆಲವು ಪರಿಚ್ಛೇದಗಳನ್ನೂ ಕನ್ನಡ ವ್ಯಾಕರಣದ ಕೆಲವು ಭಾಗಗಳನ್ನೂ ಬರೆದಿದ್ದನಂತೆ. ವಾರ್ಧಕ ಷಟ್ಟದಿಯಲ್ಲಿ ಕರ್ಣಾಟಕ ರಾಮಾಯಣವನ್ನೂ ಭಾಮಿನೀ ಷಟ್ಟದಿಯಲ್ಲಿ ಭಗವದ್ಗೀತೆಯನ್ನೂ ನವೀನರೀತಿಯಲ್ಲಿ ಕುಶವಿಜಯವನ್ನೂ ಬರೆಯಬೇಕೆಂದು ಯೋಜಿಸಿಕೊಂಡಿದ್ದನಂತೆ. ಕಾಮಶಾಸ್ತ್ರ ಗ್ರಂಥದ ಅನುವಾದ ಯೋಚನೆಯೂ ಇತ್ತಂತೆ. ಅಷ್ಟರಲ್ಲಿ ಬೆನ್ನುಹತ್ತಿದ ಕ್ಷಯರೋಗ ಮತ್ತು ಬಡತನ ಇವನನ್ನು ತಾರುಣ್ಯದಲ್ಲೇ ಬಲಿತೆಗೆದುಕೊಂಡವು. ಅದರೂ ಇವನ ಕೃತಿಗಳು ಮಾತ್ರ ಇವನನ್ನು ಅಮರನನ್ನಾಗಿ ಮಾಡಿವೆ.

ಶ್ರೀರಾಮಾಶ್ವಮೇಧಂ ಗದ್ಯಕಾವ್ಯ ಪದ್ಮಪುರಾಣದಲ್ಲಿ ಬರುವ ರಾಮಾಯಣಕ್ಕೆ ಸಂಬಂಧಿಸಿದ ಕಥೆ ಇದರ ಆಕರ. ಆರಂಭದಲ್ಲಿ ಬರುವ ಮಳೆಗಾಲದ ವರ್ಣನೆ, ಮುದ್ದಣ ಮನೋರಮೆಯರ ಸಂವಾದ ವಿನೂತನವಾಗಿದೆ. ನಿರೂಪಣೆಯಲ್ಲಿ ನವೀನತೆ ಕಂಡುಬರುತ್ತದೆ. ಓದುಗನಲ್ಲಿ ಹೊಸ ಸಂವೇದನೆಯನ್ನೂ ಕುತೂಹಲವನ್ನೂ ಕೆರಳಿಸುವಂತೆ ಇಡೀ ಕಾವ್ಯ ಮುದ್ದಣ ಮನೋರಮೆಯರ ಸಂವಾದದ ಮೇಲೆ ನಿಂತಿದೆ ಎನ್ನಬಹುದು. ರಾಮನ ಕಥೆ ಮುಖ್ಯವಾದರೂ ಶ್ರೀರಾಮಾಶ್ವಮೇಧಂ ಕಾವ್ಯ ಪ್ರಸಿದ್ಧವಾಗಿರುವುದು ಈ ಸಂಭಾಷಣೆಗಳಿಂದ ಮತ್ತು ಮಾತಿನ ಮೋಡಿಯಲ್ಲಿಯ ಹೊಸತನದಿಂದ.

ಶ್ರೀರಾಮಪಟ್ಟಾಭಿಷೇಕ ಪದ್ಯಕಾವ್ಯ. ವಾರ್ಧಕ ಷಟ್ಟದಿಯಲ್ಲಿ ರಚಿತವಾಗಿದೆ. ಇದರಲ್ಲಿ 5 ಸಂಧಿಗಳೂ 242 ಪದ್ಯಗಳೂ ಇವೆ. ರಾವಣಾದಿಗಳ ಸಂಹಾರವಾದ ಬಳಿಕ ಶ್ರೀರಾಮ ಸೀತಾಸಮೇತವಾಗಿ ಅಯೋಧ್ಯೆಗೆ ಮರಳಿ ಷಟ್ಟಾಭಿಷಿಕ್ತನಾಗುವುದು ಕಾವ್ಯವಸ್ತು. ಇದರಲ್ಲಿ ಕಾವ್ಯ ಸೌಂದರ್ಯಕ್ಕಿಂತಲೂ ವರ್ಣನೆ ಹೆಚ್ಚು. ಕೆಲವು ಸಂದರ್ಭಗಳಲ್ಲಿ ವರ್ಣನೆಗಳು ಚೆನ್ನಾಗಿವೆ. ಒಟ್ಟಿನಲ್ಲಿ ಇದನ್ನು ಕಾವ್ಯಾಂಶವನ್ನು ಒಳಗೊಂಡ ಒಂದು ಚಿತ್ರಕಾವ್ಯವೆಂದು ಕರೆಯಬಹುದು.

ಅದ್ಭುತ ರಾಮಾಯಣಂ ಶಾಕ್ತಸಂಪ್ರದಾಯದ ಇದೇ ಹೆಸರಿನ ಸಂಸ್ಕøತ ಕೃತಿಯ ಆಧಾರದಿಂದ ರಚಿತವಾದ ಗದ್ಯಗ್ರಂಥ. ಇದನ್ನು ಮೂಲದ ಎಷ್ಟೋ ನೀರಸ ಅಂಶಗಳನ್ನು ಕೈಬಿಟ್ಟು ಕಥೆಯ ಓಟಕ್ಕೆ ಭಂಗಬರದಂತೆ ರಚಿಸಲಾಗಿದೆ. ಪ್ರಧಾನ ಕಥೆಗಿಂತ ಉಪಕಥೆಗಳು ಹೆಚ್ಚು ರಂಜನೀಯವಾಗಿವೆ. ಹಳಗನ್ನಡ ಗದ್ಯಶೈಲಿ ಬಿಗಿಯಾಗಿದ್ದು ಸೊಗಸಾಗಿದೆ.

ರತ್ನಾವತಿ ಕಲ್ಯಾಣ ಅಥವಾ ದೃಢವರ್ಮ ಕಾಳಗ ಶ್ರೀಹರ್ಷನ ಪ್ರಿಯದರ್ಶಿಕಾ ಎಂಬ ನಾಟಕದ ಸ್ವಲ್ಪ ಭಾಗವನ್ನು ಆರಿಸಿಕೊಂಡು ಬಯಲಾಟಕ್ಕೆ ಅನುಕೂಲವಾಗುವಂತೆ, ಆದರೆ ವಸ್ತುವಿಗೆ ಭಂಗ ಬರದಂತೆ ಹೊಸ ಅಂಶವನ್ನೊಳಗೊಂಡಂತೆ ರಚಿತವಾದ ಯಕ್ಷಗಾನ ಪ್ರಬಂಧ. ಕುಮಾರವಿಜಯ ಅಥವಾ ಶೂರ ಪದ್ಮಾಸುರ ಕಾಳಗ ಶಂಕರ ಸಂಹಿತೆಯ ಆಧಾರದಿಂದ ರಚಿತವಾಗಿದೆ. ಈ ಎರಡರಲ್ಲೂ ಮರಾಠಿ ನಾಟಕಗಳ ಹಾಡುಗಳ ಧಾಟಿಯೂ ಶಬ್ದಾಲಂಕಾರಗಳೂ ಹೇರಳವಾಗಿದ್ದು ಕವಿಯ ಸಂಗೀತಜ್ಞಾನವನ್ನು ಸೂಚಿಸುತ್ತವೆ. ಕುಮಾರವಿಜಯದಲ್ಲಿ ಪ್ರತಿಭೆಗಿಂತ ಪಾಂಡಿತ್ಯಕ್ಕೂ ಚಿತ್ರಕವಿತೆಗೂ ಅಗ್ರಸ್ಥಾನ ದೊರೆತಿದೆ. ಮುದ್ದಣ ಈ ಎರಡೂ ಕೃತಿಗಳನ್ನು ತನ್ನ ಗುರು ಮಳಲಿ ಸುಬ್ಬರಾಯರಿಗೆ ಅರ್ಪಿಸಿದ್ದಾನೆ.

ಮುದ್ದಣ ತನ್ನ ಕೃತಿಗಳ ಪ್ರಕಟಣೆಗಾಗಿ ಶೋಚನೀಯವಾದದ್ದು. ರತ್ನಾವತೀ ಕಲ್ಯಾಣ ಇವನ ಚೊಚ್ಚಲ ಕೃತಿ. ಇವನ ಎಲ್ಲ ಕಾವ್ಯಗಳು ಕಾವ್ಯಮಂಜರಿಯಲ್ಲಿ ಪ್ರಕಟಗೊಂಡವು. ಅದ್ಭುತರಾಮಾಯಣಂ 1895ರಲ್ಲಿಯೂ ಶ್ರೀರಾಮ ಪಟ್ಟಾಭಿಷೇಕ 1896ರಲ್ಲಿಯೂ ಪ್ರಕಟಗೊಂಡವು. ರಾಮಾಶ್ವಮೇಧವೂ ಕಾವ್ಯಮಂಜರಿಯಲ್ಲೇ ಪ್ರಕಟಗೊಂಡಿತು. ಈ ಎಲ್ಲ ಕೃತಿಗಳನ್ನೂ ಇವನು ಗುಪ್ತವಾದ ಹೆಸರಿನಲ್ಲಿ ಪ್ರಕಟಗೊಳಿಸಿದ.

ಮುದ್ದಣ-ಮನೋರಮೆಯರ ಸರಸ ಸಂಭಾಷಣೆಯಲ್ಲಿ ಶೃಂಗಾರ, ಹಾಸ್ಯ, ಕರುಣರಸಗಳು ತುಂಬಿರುವುವಲ್ಲದೆ ಕವಿಯ ಜೀವನವೃತ್ತಾಂತದ ಕೆಲವಂಶವೂ ಸೂಚಿತವಾಗಿದೆ. ರತಿವರ್ಣನೆಯ ಸಂದರ್ಭ, ಸಪ್ತಾಕ್ಷರೀ ಮಂತ್ರಪ್ರಕರಣ ಮೊದಲಾದ ಸನ್ನಿವೇಶಗಳು ಕಾವ್ಯಕ್ಕೆ ಸತ್ತ್ವ ತುಂಬಿವೆ. ಅಲ್ಲಲ್ಲಿ ಬರುವ ವಿಶಿಷ್ಟ ವರ್ಣನೆಗಳೂ ಬಗೆಬಗೆಯ ಅಲಂಕಾರಗಳೂ ಕಾವ್ಯದ ಸೊಗಸನ್ನು ಹೆಚ್ಚಿಸುತ್ತವೆ. ಹಳಗನ್ನಡ ಗದ್ಯಶೈಲಿ ಸರಳತೆಯೊಂದಿಗೆ ಸಶಕ್ತವಾಗಿ ಮೂಡಿಬಂದಿದೆ. ಅಲ್ಲಲ್ಲಿ ಪದ್ಯಗಳೂ ಪದ್ಯಖಂಡಗಳೂ ಅನಾಯಾಸವಾಗಿ ಕವಿಯ ಲೇಖನಿಯಿಂದ ಹರಿದು ಇಡೀ ಕೃತಿ ಪದ್ಯಗಂಧಿಯಾಗಿದೆ. ದಕ್ಷಿಣ ಕನ್ನಡದ ತುಳುನಾಡಿನ ಎಷ್ಟೊ ನುಡಿಗಳನ್ನೂ ನುಡಿಗಟ್ಟುಗಳನ್ನೂ ಪ್ರಯೋಗಿಸಿ ದೇಸಿಯನ್ನು ತಂದುದು ಮಾತ್ರವಲ್ಲದೆ ಕೆಲವು ಹೊಸ ಶಬ್ದಗಳನ್ನೂ ಸೃಷ್ಟಿಮಾಡಿದ್ದಾನೆ. ತನ್ನ ಕಾವ್ಯಶೈಲಿಯನ್ನು ಪರ್ಯಾಯವಾಗಿ ಸೂಚಿಸಿರುವ ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ ರಸಮೊಸರೆ ಲಕ್ಕಣಂ ಮಿಕ್ಕಿರೆ ಎಡೆಯೆಡೆಯೊಳ್ ಸಕ್ಕದದ ಸಲ್ನುಡಿ ಮೆ¾õÉಯೆ ತಿರುಳ್ಗನ್ನಡದೊಳೆ ಕತೆಯನುಸಿರ್ವೆಂ ಎಂಬ ಮಾತುಗಳು ರಾಮಾಶ್ವಮೇಧ ಕಾವ್ಯಕ್ಕೆ ಸಂಪೂರ್ಣವಾಗಿ ಒಪ್ಪುತ್ತವೆ.

ಹತ್ತೊಂಬತ್ತನೆಯ ಶತಮಾನದ ಕೊನೆ ಇಪ್ಪತ್ತನೆಯ ಶತಮಾನದ ಮೊದಲು ಜೀವಿಸಿದ್ದ ಮುದ್ದಣ ಕೊನೆಮೊದಲಿಲ್ಲದ ಹೊಸತನಕೆ ಹಂಬಾಲಿಸಿದವನು. ಇವನ ಎರಡು ಯಕ್ಷಗಾನಪ್ರಸಂಗಗಳೂ ಹೊಸಕಥೆ. ಹೊಸಮಟ್ಟುಗಳನ್ನೊಳಗೊಂಡಿವೆ. ಎರಡು ಗದ್ಯಕಾವ್ಯಗಳ ಕಥೆಗಳೂ ಕನ್ನಡಕ್ಕೆ ಹೊಸತು. ಅವುಗಳ ರಚನಾವಿಧಾನ ಹೊಸತು. ಭಾಷೆ ಹಳತು ಪ್ರಯೋಗ ಹೊಸತು. ರಾಮಪಟ್ಟಾಭಿಷೇಕ ಶೇಷರಾಮಾಯಣದ (ಪದ್ಮಪುರಾಣ) ವಸ್ತುವುಳ್ಳ ವರ್ಣನಾತ್ಮಕ ಕಾವ್ಯ. ಪದ್ಯಕ್ಕೆ ಗಿರಾಕಿ (ಗ್ರಾಹಕ) ಕಡಿಮೆಯೆಂದು ಸ್ವಾನುಭವದಿಂದ ತಿಳಿದುಕೊಂಡು "ಪದ್ಯಂ ವಧ್ಯಂ ಗದ್ಯಂ ಹೃದ್ಯಂ" ಎಂದು ಭವಿಷ್ಯ ನುಡಿದ ದಾರ್ಶನಿಕ ದೇವತಾ ಸ್ತುತಿಯಿಂದಲೇ ಹೆಚ್ಚಾಗಿ ಆರಂಭಗೊಳ್ಳುತ್ತಿದ್ದ ಕಾವ್ಯಪದ್ದತಿಯನ್ನು ಎರಡು ಗದ್ಯ ಗ್ರಂಥಗಳಲ್ಲಿಯೂ ಅವಗಣಿಸಿ ಹೊಸದಾರಿ ಕಡಿದ ಕವಿ. ಕನ್ನಡಿಗರೇ ಕನ್ನಡವನ್ನು ಚೆನ್ನಾಗಿ ಕಲಿತು ಅರ್ಥಮಾಡಲು ಪ್ರಯತ್ನಿಸುವಂತೆ: ಹಾಗಾಗಿ ಅವರಿಗೆ ಕನ್ನಡ ಪಾಂಡಿತ್ಯ ಹೆಚ್ಚಾಗುವುದೆಂದು ತೋರಿಸಿಕೊಟ್ಟನು. (ಟಿ.ಜಿ.ಬಿ.)