ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಸಾಯಿ
ಹಿಂದೂ ಸನ್ಯಾಸಿಗಳ ಒಂದು ಪಂಗಡ. ಇವರಿಗೆ ಗೋಸ್ವಾಮಿ, ಗೋಸಾಮಿ ಎಂಬ ನಾಮಾಂತರಗಳುಂಟು. 1901ರ ಜನಗಣತಿ ಪ್ರಕಾರ ಇವರ ಸಂಖ್ಯೆ ಭಾರತದಲ್ಲಿ ಎರಡು ಲಕ್ಷ ಇತ್ತು ; ಗೋಸಾಯಿಗಳು ಈಗಲೂ ಹೇರಳವಾಗಿದ್ದಾರೆ. ಇವರಲ್ಲಿ ಶೈವರೂ ಉಂಟು, ವೈಷ್ಣವರೂ ಉಂಟು. ಸಾಮಾನ್ಯವಾಗಿ ಶೈವರು ಶಂಕರಾಚಾರ್ಯರ ಅದ್ವೈತ ಸಂಪ್ರದಾಯದವರು. ಇವರಲ್ಲಿ ಹತ್ತು ಹೆಸರುಗಳು (ದಶನಾಮಿ) ರೂಢವಾಗಿವೆ. ಅವು ತೀರ್ಥ, ಆಶ್ರಮ, ವನ, ಅರಣ್ಯ, ಸರಸ್ವತಿ, ಭಾರತೀ, ಪುರೀ, ಗಿರಿ, ಪರ್ವತ, ಸಾಗರ. ಇವರು ದಂಡಧಾರಿಗಳಾದ್ದರಿಂದ ದಂಡಿಗಳೆಂದೂ ಕರೆಸಿಕೊಳ್ಳುವರು. ಮಠಧಾರಿಗಳಲ್ಲದೆ ಸಾಂಸಾರಿಕರೂ ಇವರಲ್ಲಿ ಕೆಲವರುಂಟು. ಕಾಶಿ, ಹರಿದ್ವಾರ ಮುಂತಾದ ಯಾತ್ರಾಸ್ಥಳಗಳಲ್ಲಿ ಇವರನ್ನು ಹೆಚ್ಚಾಗಿ ಕಾಣಬಹುದು. ವೈಷ್ಣವ ಸ್ವಾಮಿಗಳನ್ನು ಬಂಗಾಲ, ಅಸ್ಸಾಮ್ಗಳಲ್ಲಿ ಗೋಸಾಯಿಗಳೆನ್ನುವರು. ಇವರು ವಲ್ಲಭಾಚಾರ್ಯ, ಚೈತನ್ಯ ಮುಂತಾದವರ ಸಂಪ್ರದಾಯಗಳನ್ನು ಅನುಸರಿಸಿ ಶಿಷ್ಯರಿಗೆ ಬೋಧೆ ಮಾಡುವರು. ಸಾಮಾನ್ಯವಾಗಿ ಉದರನಿಮಿತ್ತವಾಗಿ ಕಾವಿ ಹಾಕಿಕೊಂಡು ತಿರುಗಾಡುವವರನ್ನೆಲ್ಲ ಗೋಸಾಯಿಯೆಂದು ಹಾಸ್ಯ ಮಾಡುವುದೂ ಇದೆ.