ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು
ಭಕ್ತಿಯೋಗದ ಮೇಲೆ ನಿಂದು
ವೈರಾಗ್ಯಯೋಗದ ಮೇಲೆ ನಿಂದು
ನಡೆದು ನುಡಿದು ತೋರುವರು ಎಮ್ಮೆ ಶರಣರು
ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು
ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು
ದೃಕ್ಕು
[ದರ್ಶನ]
ದೃಶ್ಯವೆಂಬ ತ್ರಿಕರಣವ ಏಕವಮಾಡಿ
ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು
ಸಂದ ಹರಿದು
ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ
ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು
ನಾನು ಬಟ್ಟಬಯಲಾದೆನಯ್ಯಾ
ಕೂಡಲಸಂಗಮದೇವಾ.