ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಜಗುಣಶಿವಯೋಗಿ

ವಿಕಿಸೋರ್ಸ್ದಿಂದ

"ನಿಜಗುಣ ಶಿವಯೋಗಿ":- ಸು. 1500. ಶಿವಯೋಗಿ, ದಾರ್ಶನಿಕ ಹಾಗೂ ಹಾಡುಗಬ್ಬಕಾರ. ಈತ ಕನ್ನಡದಲ್ಲಿ ವಿವೇಕಚಿಂತಾಮಣಿ, ಕೈವಲ್ಯಪದ್ದತಿ, ಪುರಾತನರ ತ್ರಿವಿಧಿ, ಅನುಭವಸಾರ, ಪರಮಾರ್ಥಪ್ರಕಾಶಿಕೆ, ಪರಮಾನುಭವಬೋಧ, ಪರಮಾರ್ಥಗೀತೆ ಎಂಬ ಏಳು ಗ್ರಂಥಗಳನ್ನು ಬರೆದಿದ್ದಾನೆ. ಸಂಸ್ಕøತದಲ್ಲಿ ಆತ್ಮತರ್ಕಚಿಂತಾಮಣಿ ಮತ್ತು ದರ್ಶನಸಾರ ಎಂಬ ಗ್ರಂಥಗಳನ್ನು ಬರೆದಂತೆ ಪ್ರತೀತಿ ಇದೆ. ಆದರೆ ಅವು ಉಪಲಬ್ಧವಿಲ್ಲ. ಈತನ ಗ್ರಂಥಗಳನ್ನು ಷಟ್‍ಶಾಸ್ತ್ರ ಎಂದೂ ಕರೆಯುವ ವಾಡಿಕೆ ಇದೆ. ಈತನ ಅನಂತರ ಕೃತಿರಚನೆಮಾಡಿದ ಮಹಲಿಂಗ ರಂಗ (ಅನುಭವಾಮೃತ), ಶಾಲ್ಯದ ಅರಸ (ಅನುಭವರಸಾಯನ), ಸರ್ಪಭೂಷಣ ಶಿವಯೋಗಿ (ಕೈವಲ್ಯಕಲ್ಪವಲ್ಲರಿ ಮತ್ತು ಜ್ಞಾನಶತಕ), ವೇದಾಂತ ಶಿವರಾಮಶಾಸ್ತ್ರಿ (ಬ್ರಹ್ಮಾನಂದಬೋಧೆ ಮತ್ತು ವೇದಾಂತ ತತ್ತ್ವಗಳು) ಮೊದಲಾದವರೆಲ್ಲರೂ ಈತನ ಪ್ರಭಾವಕ್ಕೊಳಗಾದವರೇ. ವಿವೇಕಚಿಂತಾಮಣಿ, ಕೈವಲ್ಯಪದ್ಧತಿ, 63 ಪುರಾತನರ ತ್ರಿವಿಧಿ-ಇವು ಈತನ ಸ್ವತಂತ್ರ ಗ್ರಂಥಗಳು. ಅನುಭವಸಾರ, ಪರಮಾನುಭವಬೋಧೆ, ಪರಮಾರ್ಥಗೀತೆ ಮತ್ತು ಪರಮಾರ್ಥಪ್ರಕಾಶಿಕೆ-ಇವು ಅನುವಾದಿತ ಗ್ರಂಥಗಳು.

ಕನ್ನಡದಲ್ಲಿ ಬಸವಣ್ಣನವರಿಗಿಂತಲೂ ಹಿಂದೆ ನಿಜಗುಣದೇವ ಎಂಬ ವಚನಕಾರ ಇದ್ದ. ಆತನ ಕೆಲವು ವಚನಗಳನ್ನು ವಚನಶಾಸ್ತ್ರದಲ್ಲಿ ಕಾಣಬಹುದು. ನಿಜಗುಣ ಶಿವಯೋಗಿ ಎಂಬ ಇನ್ನೊಬ್ಬ ಕವಿ ಇದ್ದಾನೆ. ಆತ 16ನೆಯ ಶತಮಾನದವನೆಂದು ವಿದ್ವಾಂಸರು ತರ್ಕಿಸಿದ್ದಾರೆ. ಪ್ರಸ್ತುತ ಶಿವಯೋಗಿ ಇವರಿಬ್ಬರಿಗಿಂತ ಭಿನ್ನ.

ಈತನ ಕಾಲ ನಿರ್ಣಯದ ಬಗೆಗೆ ವಿವಾದವಿದೆ. ಈತ ತನ್ನ ವಿವೇಕಚಿಂತಾಮಣಿಯಲ್ಲಿ 1250ರಲ್ಲಿದ್ದ ಅಮಲಾನಂದನ ಕಲ್ಪತರುವೆಂಬ ವ್ಯಾಖ್ಯಾನದ ಹೆಸರು ಹೇಳುವುದರಿಂದ ಕವಿ ಆ ಕಾಲಕ್ಕೆ ಈಚೆಯವನೂ ಷಡಕ್ಷರದೇವ (1654) ಈತನನ್ನು ಸ್ತುತಿಸಿರುವುದರಿಂದ ಆ ಕಾಲಕ್ಕೆ ಹಿಂದಿನವನೂ ಇದ್ದಿರಬೇಕು. ಆದುದರಿಂದ ಕವಿ ಚರಿತೆಕಾರರು ಈತನ ಕಾಲವನ್ನು ಸು.1500 ಎಂದು ಊಹಿಸಿದ್ದಾರೆ.

ಈತನ ಸ್ಥಳ ಕೊಳ್ಳೇಗಾಲದ ಪಕ್ಕದಲ್ಲಿರುವ 'ಚಿಲಕವಾಡಿ' ಗ್ರಾಮ. ಈ ಗ್ರಾಮದ ಪಕ್ಕದಲ್ಲಿರುವ ಶಂಭುಲಿಂಗನ ಬೆಟ್ಟದಲ್ಲಿ ಈತ ಕೆಲಕಾಲ ತಪಸ್ಸು ಮಾಡಿದಂತೆ ತಿಳಿದುಬರುತ್ತದೆ. ಈತ ಮೊದಲು ಸಂಸಾರಿಯಾಗಿದ್ದು, ಆ ಭಾಗದ ಒಬ್ಬ ಪುಟ್ಟ ಪಾಳೆಯಗಾರನಾಗಿದ್ದನೆಂದೂ ಮುಂದೆ ಸಂಸಾರದಲ್ಲಿ ವಿರಕ್ತಿ ಉಂಟಾಗಿ ಸಂನ್ಯಾಸ ಸ್ವೀಕರಸಿದಂತೆಯೂ ತೋರುತ್ತದೆ. ಶಂಭುಲಿಂಗನ ಬೆಟ್ಟದಲ್ಲಿ ಈತ ತಪಸ್ಸು ಮಾಡಿದ ಗವಿಯನ್ನು ಈಗಲೂ ಕಾಣಬಹುದು. ಕೊಳ್ಳೇಗಾಲದಿಂದ ಸುಮಾರು 10 ಕಿಮೀ ದೂರದಲ್ಲಿ ಚಾಮರಾಜನಗರಕ್ಕೆ ಹೋಗುವ ದಾರಿಯಲ್ಲಿ ಶಂಭುಲಿಂಗನ ಬೆಟ್ಟ ಮತ್ತು ದೇವಾಲಯಗಳಿವೆ. ಇಲ್ಲಿನ ಶಂಭುಲಿಂಗ ಸ್ವಯಂಭು ಎನ್ನಲಾಗಿದೆ. ಈತನ ಅಂತಃಶಂಭುಲಿಂಗ.

ಕೈವಲ್ಯಪದ್ಧತಿ ಎಂಬುದು ಹಾಡುಗಬ್ಬ. 5 ಸ್ಥಲಗಳಿದ್ದು 174 ಹಾಡುಗಳಿವೆ. ಹಾಡುಗಳು ರಾಗ, ತಾಳ, ಪಲ್ಲವಿ, ಅನುಪಲ್ಲವಿ, ಚರಣ ಇವುಗಳಿಂದ ಕೂಡಿದೆ. ಈ ಗ್ರಂಥದಲ್ಲಿ ಶಿವಕಾರುಣ್ಯ, ಜೀವಸಂಭೋದನೆ, ನೀತಿಕ್ರಿಯಾಚರ್ಯ ಪ್ರತಿಪಾದನ, ಯೋಗಪ್ರತಿಪಾದನ, ಜ್ಞಾನಪ್ರತಿಪಾದನ-ಎಂಬ ಐದು ಸ್ಥಲಗಳಲ್ಲಿ ಮೋಕ್ಷಕ್ಕೆ ದಾರಿಯನ್ನು ತೋರಿಸುವ ಕೆಲಸವನ್ನು ಕವಿ ಮಾಡಿದ್ದಾನೆ.

ಪುರಾತನರ ತ್ರಿವಿಧಿ ಎಂಬುದು 77 ತ್ರಿಪದಿಗಳಿಂದ ಕೂಡಿದ ಭಕ್ತಿಗೀತೆಗಳ ಸಂಕಲನ. ಶಿವಭಕ್ತರಾದ 63 ಮಂದಿ ಶರಣರನ್ನು ಕುರಿತು ಇಲ್ಲಿ ಹಾಡಲಾಗಿದೆ. ವೀರಶೈವರು ಇದನ್ನು ಕಂಠಪಾಠ ಮಾಡಿಕೊಂಡು ಸಂಜೆ ಮುಂಜಾನೆ ಹಾಡುವ ಪರಿಪಾಠವುಂಟು.

ವಿವೇಕಚಿಂತಾಮಣಿ ಎಂಬುದು ಈತ ಬರೆದಿರುವ ಗ್ರಂಥಗಳಲ್ಲಿ ಅತ್ಯಂತ ಮಹತ್ತ್ವದ್ದು. ಇದು ಕನ್ನಡದ ಮೊಟ್ಟಮೊದಲನೆಯ ವಿಶ್ವಕೋಶ ಎನಿಸಿದೆ. ಒಬ್ಬ ಸಂನ್ಯಾಸಿ ಬೆಟ್ಟದ ಗವಿಯೊಂದರಲ್ಲಿ ಕುಳಿತುಕೊಂಡು ಇಂಥ ವಿಶ್ವಕೋಶವನ್ನು ಹೇಗೆ ರಚಿಸಿದನೆಂಬುದು ಸೋಜಿಗದ ಸಂಗತಿ. ಈ ಗ್ರಂಥವನ್ನು 16ನೆಯ ಶತಮಾನದಲ್ಲಿ ಶಾಂತಲಿಂಗ ಶಿವಯೋಗಿ ಎಂಬಾತ ಮರಾಠಿಗೂ 17ನೆಯ ಶತಮಾನದಲ್ಲಿ ಮಹಾಕವಿ ಶಿವಪ್ರಕಾಶಸ್ವಾಮಿ ತಮಿಳಿಗೂ 18ನೆಯ ಶತಮಾನದಲ್ಲಿ ಲಿಂಗರಾಜ ಸಂಸ್ಕøತಕ್ಕೂ ಭಾಷಾಂತರಿಸಿದ್ದಾರೆ. 18ನೆಯ ಶತಮಾನದಲ್ಲಿ ಸಂಸ್ಕøತದಲ್ಲಿ ಶಿವತತ್ತ್ವ ರತ್ನಾಕರವೆಂಬ ವಿಶ್ವಕೋಶವನ್ನು ಬರೆದ ಕೆಳದಿಯ ಬಸವರಾಜ ಈ ಗ್ರಂಥದಿಂದ ಉಪಕೃತನಾಗಿದ್ದನೆಂದು ತಿಳಿದುಬರುತ್ತದೆ. ಈ ಗ್ರಂಥ ಗದ್ಯದಲ್ಲಿದ್ದು ಹತ್ತು ವಿಭಾಗಗಳಿಂದ ಕೂಡಿದೆ. ಒಟ್ಟು 592 ವಿಷಯಗಳು ನಿರೂಪಿತವಾಗಿವೆ. ಸಂಗೀತ ಶಾಸ್ತ್ರವನ್ನು ಕುರಿತ ಸಂಪೂರ್ಣ ವಿವರಣೆಯಿದೆ.

ಪರಮಾರ್ಥಪ್ರಕಾಶಿಕೆ ಎಂಬುದು ಸಂಸ್ಕøತದಲ್ಲಿದೆ. ಇದು ಚನ್ನಸದಾಶಿವಯೋಗಿ ಬರೆದಿರುವ ಶಿವಯೋಗಪ್ರದೀಪಿಕೆ ಎಂಬ ಗ್ರಂಥದ ಅನುವಾದ. ಐದು ಪರಿಚ್ಛೇದಗಳಿಂದ ಕೂಡಿ ಹಠಯೋಗ, ರಾಜಯೋಗ, ಮಂತ್ರಯೋಗ, ಲಯಯೋಗ ಎಂದು ಪತಂಜಲಿ ಹೇಳುವ ನಾಲ್ಕು ಯೋಗಗಳಿಗಿಂತ ಶಿವಯೋಗ ಅಧಿಕವಾದುದೆಂದು ಈ ಗ್ರಂಥದಲ್ಲಿ ಹೇಳಿದೆ. ಇದು ತೆಲುಗಿನಲ್ಲಿ ಶಿವಯೋಗ ಸಾರಮು ಎಂದು ಭಾಷಾಂತರವಾಗಿದೆ. ಅನುಭವಸಾರವೆಂಬುದು ತ್ರಿಪದಿ ರೂಪದಲ್ಲಿರುವ ಒಂದು ವೇದಾಂತ ಗ್ರಂಥ. 8 ಸಂಧಿಗಳು 35 ತ್ರಿಪದಿಗಳೂ ಇವೆ. ಪರಮಾನುಭವಭೋಧೆ ಎಂಬುದು ಸಾಂಗತ್ಯದಲ್ಲಿರುವ ಒಂದು ವೇದಾಂತ ಗ್ರಂಥ ; ಇದು 6 ಸಂಧಿ, 975 ಸಾಂಗತ್ಯಗಳಿಂದ ಕೂಡಿದೆ. ಯಾಜ್ಞವಲ್ಕ್ಯ, ಮೈತ್ರೇಯ-ಇವರ ಸಂವಾದರೂಪದಲ್ಲಿದೆ. ಇದರಲ್ಲಿ ಪರತತ್ತ್ವಭೋಧೆಯನ್ನು ಯೋಗಿಜನರು ಒಪ್ಪುವಂತೆ ನಿರೂಪಿಸಲಾಗಿದೆ. ಪರಮಾರ್ಥಗೀತೆ ಎಂಬುದು ಸಂಸ್ಕøತದಲ್ಲಿ ಪ್ರಸಿದ್ಧವಾಗಿರುವ ಯೋಗವಾಸಿಷ್ಠದ ಕನ್ನಡ ಅನುವಾದ; ಮಂದಾನಿಲ ರಗಳೆಯಲ್ಲಿ ಗುರುಶಿಷ್ಯರ ಪ್ರಶ್ನೋತ್ತರ ರೂಪದಲ್ಲಿದೆ. ಪ್ರಾರಂಭದಲ್ಲಿ ಕೆಲವು ಕಂದಪದ್ಯಗಳಿವೆ. ಹನ್ನೊಂದು ಗತಿಗಳಾಗಿ ವಿಂಗಡನೆಗೊಂಡಿರುವ ಈ ಗ್ರಂಥದಲ್ಲಿ 1,469 ಚರಣಗಳಿವೆ. (ಬಿ.ಎಸ್.)