ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗರಡಿ

ವಿಕಿಸೋರ್ಸ್ದಿಂದ

ಕುಸ್ತಿ ಮೊದಲಾದ ಅಂಗಸಾಧನೆಗಳಿಗಾಗಿ ಗೊತ್ತಾದ ಸ್ಥಳ, ಆ ಸ್ಥಳವಿರುವ ಮನೆ. ಗರಡಿಗಾಗಿ ಮನೆ ಇರುವುದು ಹೆಚ್ಚಾಗಿ ದಕ್ಷಿಣ ಭಾರತದಲ್ಲೆ. ಉತ್ತರದವರು ಬಯಲಲ್ಲಿಯೇ ಕುಸ್ತಿ ಮುಂತಾದವನ್ನು ಅಭ್ಯಾಸ ಮಾಡುತ್ತಾರೆ. ಗರಡಿ ಮನೆಯೊಳಗೆ ಕುಸ್ತಿ ಕಲಿಯುವ ಸ್ಥಳಕ್ಕೆ ಮಟ್ಟಿ (ಮಣ್ಣು) ಎಂದೂ ಸ್ಪರ್ಧೆಯಲ್ಲಿ ಭಾಗವಹಿಸಿ ಕುಸ್ತಿ ಮಾಡುವ ಸ್ಥಳಕ್ಕೆ ಅಖಾಡ (ಕುಸ್ತಿಯ ಕಣ) ಎಂದೂ ಕರೆಯುತ್ತಾರೆ. ಗರಡಿ ಮಾಡುವುದು ಎಂದರೆ ಸಾಧನೆ ಮಾಡುವುದು, ವ್ಯಾಯಾಮ ಮಾಡುವುದು ಎಂಬುದಷ್ಟೇ ಅಲ್ಲದೆ ಕುಸ್ತಿ ಮಾಡುವುದು ಎಂಬ ಅರ್ಥವೂ ರೂಢಿಯಲ್ಲಿದೆ. ವಿರಾಟಪರ್ವದಲ್ಲಿ ಬರುವ ಮಲ್ಲಯುದ್ಧವನ್ನಿಲ್ಲಿ ನೆನೆಯಬಹುದು. ಹಿಂದಿನ ಕಾಲದಲ್ಲಿ ಕುಸ್ತಿ ಕಲೆಗೆ ಬಹಳ ಪ್ರೋತ್ಸಾಹವಿತ್ತು. ರಾಜಮಹಾರಾಜರುಗಳೇ ಈ ಕಲೆಯಲ್ಲಿ ಪರಿಣತಿ ಹೊಂದಿದ್ದರಲ್ಲದೆ ಪ್ರಖ್ಯಾತ ಪೈಲ್ವಾನರು (ಜಟ್ಟಿ)ಗಳನ್ನು ಸಾಕಿಕೊಂಡು ಈ ಕಲೆಗೆ ಪೋತ್ಸಾಹವೀಯುತ್ತಿದ್ದರು. ಸಂಗೊಳ್ಳಿ ರಾಯಣ್ಣ, ಮೈಸೂರಿನ ರಣಧೀರ ಕಂಠೀರವ ನರಸರಾಜ ಒಡೆಯರ್ ಮೊದಲಾದವರು ಈ ಕಲೆಯಲ್ಲಿ ಅಸಾಧಾರಣ ಚತುರತೆಯನ್ನು ಸಂಪಾದಿಸಿದ್ದರು. ರಣಧೀರ ಕಂಠೀರವ ನರಸಿಂಹರಾಜ ಒಡೆಯರು ಮಾರುವೇಷದಲ್ಲಿ ಹೋಗಿ ತಿರುಚನಾಪಳ್ಳಿ ಜಟ್ಟಿಯನ್ನು ಸೋಲಿಸಿದ ಕಥೆಯಂತೂ ಇತಿಹಾಸ ಪ್ರಸಿದ್ಧ. ಹಿಂದಿನ ಕಾಲದಲ್ಲಿ ಸೈನಿಕರಿಗೆ ಕಡ್ಡಾಯವಾಗಿ ಈ ಶಿಕ್ಷಣವನ್ನು ಕೊಡಲಾಗುತ್ತಿತ್ತು. ಮದಕರಿ ನಾಯಕರ ಕಾಲದಲ್ಲಿದ್ದ ಗರಡಿ ಮನೆಗಳನ್ನು ಚಿತ್ರದುರ್ಗದ ಕೋಟೆಯಲ್ಲಿ ನಾವು ಇಂದೂ ಕಾಣಬಹುದಾಗಿದೆ. ಹಳ್ಳಿಯಾದರೆ ಒಂದು, ಊರೆಂದರೆ ನಾಲ್ಕೈದು ಗರಡಿ ಮನೆಗಳಿದ್ದ ಕಾಲವೊಂದಿತ್ತು.


ಹಿಂದಿನ ಕಾಲದ ಗರಡಿ ಮನೆಗಳು ವಿಶಾಲವಾಗಿರದೆ ಚಿಕ್ಕವಾಗಿರುತ್ತಿದ್ದುವು. ದೂರದಿಂದ ನೋಡಿಯೇ ಸುಲಭವಾಗಿ ಅವನ್ನು ಪತ್ತೆಮಾಡಬಹುದಾಗಿತ್ತು. ಗರಡಿಯ ಹೊರ ಗೋಡೆಗಳ ಮೇಲೆ ಕೆಮ್ಮಣ್ಣಿನ ದೊಡ್ಡ ದೊಡ್ಡ ಹಾಗೂ ಉದ್ದುದ್ದವಾದ ಪಟ್ಟೆಗಳನ್ನು ಹಾಕಿರುತ್ತಿದ್ದರು. ಹಾಗೂ ಗರಡಿಯ ಮುಂದೆ ದಪ್ಪ ದಪ್ಪ ಕಲ್ಲುಗುಂಡುಗಳನ್ನು ಇಟ್ಟಿರುತ್ತಿದ್ದರು. ಬಾಗಿಲಿನಲ್ಲಿ ಗರುಡನ ಅಥವಾ ಹನುಮಂತನ ಚಿತ್ರಪಟವಿರುತ್ತಿತ್ತು. ಗರಡಿ ಮನೆಗಳಿಗೆ ಎಲ್ಲೋ ಒಂದು ಸಣ್ಣ ಕಿಟಕಿ ಇದ್ದರೆ ಅದೇ ಹೆಚ್ಚು. ಒಳಗಡೆ ಹೆಚ್ಚು ಗಾಳಿ, ಬೆಳಕು ಪ್ರವೇಶ ಮಾಡುತ್ತಿರಲ್ಲಿಲ್ಲ. ಬಾಗಿಲು ಚಚ್ಚೌಕವಾಗಿದ್ದು ಸುಮಾರು 76 ಸೆಂ.ಮೀ ಅಗಲ ಹಾಗೂ 76 ಸೆಂ.ಮೀ ಎತ್ತರವಿರುತ್ತಿತ್ತು. ಆ ಮನೆಗೆ ಆ ಬಾಗಿಲು ತುಂಬ ಚಿಕ್ಕದೆಂದೇ ಹೇಳಬೇಕು. ಅಲ್ಲದೆ ಅದರ ದಪ್ಪ ಸು. 16 ಸೆಂ.ಮೀ ಇರುತ್ತಿತ್ತಾಗಿ ಅದನ್ನು ತಳ್ಳಿಕೊಂಡು ಒಳಗೆ ಹೋಗಬೇಕಾದರೆ ಸಾಕಷ್ಟು ಶಕ್ತಿ ಇರ ಬೇಕಾಗುತ್ತಿತ್ತು. ಈ ಬಾಗಿಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಮುಂಭಾಗದಲ್ಲಿ ಬೀಗ ಹಾಕಿಕೊಳ್ಳಲು ಚಿಲಕವಿರುತ್ತಿರಲಿಲ್ಲ. ಆದರೆ ಒಳಗಡೆಯಿಂದ ಬಾಗಿಲನ್ನು ಹಾಕಿಕೊಳ್ಳಲು ಅಗಳಿ ಇರುತ್ತಿತ್ತು. ಸಾಧಾರಣವಾಗಿ ಒಂದೇ ಊರಿನಲ್ಲಿ 3, 4, ಗರಡಿ ಮನೆಗಳಿದ್ದು ಅವಕ್ಕೆಲ್ಲ ಹೆಸರಾಂತ ಉಸ್ತಾದರ ನಾಮಕರಣವಿರುತ್ತಿತ್ತು. ಅಲ್ಲದೆ ಒಂದು ಗರಡಿಯವರಿಗೂ ಇನ್ನೊಂದು ಗರಡಿಯವರಿಗೂ ಪೈಪೋಟಿಯಲ್ಲದೆ ವಿರೋಧವೂ ಇರುತ್ತಿತ್ತು. ಹೀಗೆ ವಿರೋಧವಿದ್ದುದರಿಂದಲೇ ಗರಡಿ ಮನೆಗಳಿಗೆ ಬಾಗಿಲಿನ ಮುಂಭಾಗದಲ್ಲಿ ಬೀಗ ಹಾಕಿಕೊಳ್ಳಲು ಚಿಲಕವಿರುತ್ತಿರಲಿಲ್ಲ. ಕಾರಣ ಗರಡಿ ಮನೆಯೊಳಗೆ ಸಾಧನೆ ನಡೆಸುವುದನ್ನು ಕಂಡರೆ ಆಗದವರು ಚಿಲಕ ಹಾಕಿ ಹೊರಟು ಬಿಟ್ಟರೆ ಒಳಗಡೆ ಇದ್ದವರು ಗಾಳಿ ಬೆಳಕು ಇಲ್ಲದೆ ಅಲ್ಲಿಯೇ ಸಾಯಬೇಕಾಗುತ್ತಿತ್ತು. ಸಾಧನೆ ಮಾಡುವಾಗ ಉಸ್ತಾದ್ (ಗುರು) ತನ್ನ ಶಾಗಿರ್ದು (ಶಿಷ್ಯ) ಪೈಲ್ವಾನರುಗಳಿಗೆ ಹೇಳಿಕೊಡುವ ಡಾವುಗಳನ್ನು ಅವನ ಎದುರಾಳಿಗಳು ಯಾರಾದರೂ ಬಂದು ನೋಡಿಕೊಳ್ಳಬಹುದೆಂಬ ಕಾರಣದಿಂದ ಬಹುಶಃ ಒಳಗಡೆಯಿಂದ ಬಾಗಿಲನ್ನು ಹಾಕಿಕೊಳ್ಳಲು ಅಗಳಿ ಇರುತ್ತಿತ್ತು. ಗರಡಿ ಮನೆಯೊಳಗೆ ಪ್ರವೇಶ ಮಾಡಿದ್ದೇ ಆದರೆ ಗುಹೆಯೊಳಗೆ ಪ್ರವೇಶ ಮಾಡಿದ ಅನುಭವವಾಗುತ್ತಿತ್ತು. ಗರಡಿ ಮನೆಗಳು ಚಿಕ್ಕವಾಗಿದ್ದು ಗಾಳಿ ಬೆಳಕು ಪ್ರವೇಶ ಮಾಡದಂತಿದ್ದುದಕ್ಕೆ ಇನ್ನೊಂದು ಕಾರಣ, ಮೈ ಬೆವರು ಶೀಘ್ರವಾಗಿ ಹೊರಬೀಳಬೇಕೆಂಬುದೇ ಆಗಿತ್ತು. ಹೆಣ್ಣುಮಕ್ಕಳಾರೂ ಗರಡಿಮನೆಯನ್ನು ಪ್ರವೇಶಮಾಡಬಾರದು ಎಂಬ ನಿಯಮವಿತ್ತು. ಒಂದು ವೇಳೆ ಪ್ರವೇಶ ಮಾಡಿದರೆ ಅಂಥವರ ತಲೆಗೂದಲೆಲ್ಲ ಉದುರಿಹೋಗುತ್ತದೆ ಎಂಬ ನಂಬಿಕೆಯೂ ಇತ್ತು. ಬಹುಶಃ ಸಾಧನೆ ಮಡುವ ಪೈಲ್ವಾನನಿಗೆ ಹೆಂಗಸಿನ ದೃಷ್ಟಿ ತಗಲಬಾರದು. ಆತ ಆಕೆಯ ಬಲೆಗೆ ಬೀಳಬಾರದು ಎಂಬುವುದು ಈ ಕಟ್ಟಳೆಯ ಉದ್ದೇಶವೆಂದು ತೋರುತ್ತದೆ.


ಹಿಂದೆ ಗರಡಿ ಮನೆಗಳು ಹೊರಗಡೆಯಿಂದ ಬಂದ ಪೈಲ್ವಾನರುಗಳಿಗೆ ಇಳಿದು ಕೊಳ್ಳುವ ವಸತಿಗೃಹಗಳೂ ಆಗಿದ್ದುವು. ಕೊಲ್ಹಾಪುರದ ಕಡೆಯ ಗರಡಿಮನೆ ಗಳಲ್ಲಿಯಂತೂ ವಸತಿ ಸೌಕರ್ಯದ ಜೊತೆ ಊಟದ ಸೌಕರ್ಯವೂ ಇರುತ್ತಿತ್ತು.


ಈಗೀಗ ಕಟ್ಟುತ್ತಿರುವ ಗರಡಿಗಳನ್ನು ವ್ಯಾಯಾಮಶಾಲೆಗಳು ಎಂದು ಕರೆಯುತ್ತಾರೆ. ಇವು ವಿಶಾಲವಾಗಿದ್ದು ಗಾಳಿ ಬೆಳಕು ಹೆಚ್ಚು ಬರುವಂತಿರುತ್ತದೆ. ವ್ಯಾಯಾಮ ಶಾಲೆಯ ಸುತ್ತಲೂ ಎತ್ತರವಾದ ನಿಲುಗನ್ನಡಿಗಳನ್ನು ನಿಲ್ಲಿಸಿರುತ್ತಾರೆ. ಹೀಗಿರುವುದರಿಂದ ಸಾಧನೆ ಮಾಡುವವರಿಗೆ ತಮ್ಮ ದೇಹದ ಅಂಗಾಂಗಗಳನ್ನು ಪೂರ್ಣವಾಗಿ ನೋಡಿಕೊಳ್ಳುವ ಅವಕಾಶವಿರುತ್ತದೆ. ಇಂಥ ವ್ಯಾಯಾಮಶಾಲೆಗಳಲ್ಲಿ ಕುಸ್ತಿಗಿಂತ ದೇಹದ ಅಂಗಸೌಷ್ಠವಕ್ಕೆ ಹೆಚ್ಚು ಪ್ರಾಧಾನ್ಯವಿರುತ್ತದೆ. ಮೈಸೂರು ಮತ್ತು ಮಹಾರಾಷ್ಟ್ರದಲ್ಲಿ ಸುವ್ಯವಸ್ಥಿತವಾದ ಗರಡಿಮನೆಗಳಿವೆ. ಈಗ ವ್ಯಾಯಾಮಶಾಲೆಗೆ ಹೋದರೆ ದೇಹದ ಅಂಗಾಂಗಗಳ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ ಮಾಡಿಕೊಂಡು ಬರಬಹುದು; ಕುಸ್ತಿ ಮಾಡಬೇಕೆಂಬ ನಿಯಮವೇನಿಲ್ಲ. ಅಂತೆಯೇ ಈಗಿನ ವ್ಯಾಯಾಮ ಶಾಲೆಗಳಲ್ಲಿ ದೇಹದ ಪ್ರತಿ ಅಂಗಾಂಗಗಳನ್ನು ಸುದೃಢವಾಗಿಸಲು ಬೇಕಾದ ವ್ಯಾಯಾಮ ಸಾಮಗ್ರಿಗಳನ್ನು ಕಾಣಬಹುದು.


ಮಟ್ಟಿ[ಸಂಪಾದಿಸಿ]

ಗರಡಿಮನೆಯಲ್ಲಿ ಅತ್ಯಂತ ಪ್ರಧಾನವಾದ ಭಾಗವೆಂದರೆ ಮಟ್ಟಿ. ಅಂದರೆ ಕುಸ್ತಿ ಮಾಡುವ ಸ್ಥಳ. ಈ ಮಟ್ಟಿ ಕನಿಷ್ಠ ಪಕ್ಷ 4.27 ಮೀ ಇರುವ ಒಂದು ಚೌಕ. ಇಂಥ ಮಟ್ಟಿಯಲ್ಲಿ ಒಂದು ಜೊತೆ ಅಥವಾ ಎರಡು ಜೊತೆ ಜಟ್ಟಿಗಳು ಕುಸ್ತಿ ಮಾಡಬಹುದು. ಕುಸ್ತಿ ಮಾಡುವ ಸ್ಥಳವನ್ನು ಸು. 30.5 ಸೆಂ.ಮೀ ಆಳದವರೆಗೂ ಹುಡಿಮಣ್ಣಿನಿಂದ ತುಂಬಿರಬೇಕು. ಇದಕ್ಕೆ ಕೆಮ್ಮಣ್ಣು ಶ್ರೇಷ್ಠವೆಂದು ಹೇಳಲಾಗಿದೆ. ಉತ್ತಮದರ್ಜೆಯ ಮಣ್ಣನ್ನು ತುಂಬುವುದರಿಂದ ಚರ್ಮಕ್ಕೆ ತಗಲುವ ಅಪಾಯಗಳು ಕಡಿಮೆ. ಮಣ್ಣಿನಲ್ಲಿ ಸಣ್ಣ ಸಣ್ಣ ಮರಳು ಮತ್ತು ನುರುಜುಗಲ್ಲುಗಳಿಲ್ಲದಂತೆ ಮಾಡಲು ಮಣ್ಣನ್ನು ಜರಡಿ ಆಡಿಸಿರುತ್ತಾರೆ. ಕೆಮ್ಮಣ್ಣು 100 ಚೀಲ, ಜೇಕಿನ ಗೆಡ್ಡೆಯ ಪುಡಿ 10 ಚೀಲ, ಕರ್ಪುರ, ಕುಂಕುಮ ಸು. 9 ಕಿ.ಗ್ರಾಂಗಳು, ಟಿಂಕ್ಚರ್ ಸು. 20 ಕಿ.ಗ್ರಾಂ, ದೇವದಾರು ಎಣ್ಣೆ ಸು. 9 ಕಿ.ಗ್ರಾಂ, ಗಂಧದ ಹುಡಿ ಸು. 9 ಕಿ.ಗ್ರಾಂ, ಅತ್ತರು 20 ತೊಲ, ಎಳ್ಳಣ್ಣೆ 20 ಮಣ-ಇವೇ ಮೊದಲಾದ ಸಾಮಗ್ರಿಗಳನ್ನು ಬೆರೆಸಿದ ಮಟ್ಟಿ ತುಂಬ ಆರೋಗ್ಯದಾಯಕವಾದದ್ದು. ಲಡತ್ ಮಾಡಿ ಮುಗಿದ ಮೇಲೆ ಪೈಲ್ವಾನರು ಈ ಮಟ್ಟಿಯಲ್ಲಿ ಉದ್ದುದ್ದವಾದ ಗುಂಡಿಯನ್ನು ತೆಗೆದು ಅದರಲ್ಲಿ ಕತ್ತನ್ನು ಮಾತ್ರ ಹೊರಗೆ ಬಿಟ್ಟು ಮಲಗಿಕೊಳ್ಳುತ್ತಾರಲ್ಲದೆ ದೇಹದ ತುಂಬ ಮಣ್ಣನ್ನು ಮುಚ್ಚಿಸಿಕೊಳ್ಳುತ್ತಾರೆ. ಹೀಗೆ ಮಟ್ಟಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುವುದರಿಂದ ದೇಹದ ಕಾವೆಲ್ಲವೂ ಆರಿಹೋಗುತ್ತದೆ. ಅಲ್ಲದೆ ಶರೀರಕ್ಕೆ ತುಂಬ ತಂಪೊದಗಿ, ಒಂದು ರೀತಿಯ ಕಾಂತಿಯುಂಟಾಗುತ್ತದೆ. ಇದಕ್ಕೆ ಮಟ್ಟಿ ತೆಗೆದುಕೊಳ್ಳವು ದೆಂದು ಹೇಳುತ್ತಾರೆ. ಮಲ್ಲಾಡಿ ಹಳ್ಳಿಯ ಅನಾಥ ಸೇವಾಶ್ರಮದಲ್ಲಿ ರಾಘವೇಂದ್ರ ಸ್ವಾಮಿಗಳು ಹಲವಾರು ಆಯುರ್ವೇದೀಯ ಔಷಧಿಗಳನ್ನು ಬೆರಸಿದ ಮಟ್ಟಿಯನ್ನು ರೋಗ ಚಿಕಿತ್ಸೆಗಾಗಿ ಬಳಸುತ್ತಿದ್ದಾರೆ. ಹೀಗೆ ಮಟ್ಟಿ ತೆಗೆದುಕೊಳ್ಳವುದೂ ಒಂದೇ, ಒಂದು ಸೇರು ಹಾಲು ಕುಡಿಯುವುದೂ ಒಂದೇ ಎಂದು ನಂಬಿಕೆ. ಕುಸ್ತಿ ಮಾಡುವಾಗ ಪೈಲ್ವಾನರಿಗೆ ಅಕಸ್ಮಾತ್ ಗಾಯಗಳೇನಾದರೂ ಆದರೆ ಅವರು ಯಾವ ವೈದ್ಯನ ಬಳಿಗೂ ಹೋಗುವುದಿಲ್ಲ. ಗಾಯದ ಮೇಲೆ ಈ ಮಟ್ಟಿಯ ಮಣ್ಣನ್ನು ಮೆತ್ತುತ್ತಾರೆ. ನವರಾತ್ರಿಯದಿವಸ ಈ ಮಟ್ಟಿಗೆ ಹೊಸ ಮಣ್ಣು ಸೇರಿಸಿ ಉಸ್ತಾದರೆಲ್ಲ ಸೇರಿ ಪುಜೆ ಮಾಡುತ್ತಾರೆ. ಕುಸ್ತಿಯ ಸ್ಪರ್ಧೆ ಇರುವ ದಿವಸ ಮಟ್ಟಿಯ ಮಣ್ಣನ್ನು ಒಂದೆಡೆ ದೊಡ್ಡ ರಾಶಿಯಾಗಿ ಏರುಹಾಕಿ ಅದರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಪೈಲ್ವಾನರುಗಳು ಕಾಚ, ಹನುಮಾನ್ ಚಡ್ಡಿ, ವ್ಯಾಯಾಮ ಸಾಮಗ್ರಿಗಳೆಲ್ಲವನ್ನೂ ಇಟ್ಟು ಪುಜೆ ಮಾಡುತ್ತಾರೆ. ಆ ದಿವಸ ಗರಡಿಮನೆಯಲ್ಲಿ ಯಾರೂ ಕುಸ್ತಿ ಮಾಡುವುದಿಲ್ಲ. ಕುಸ್ತಿ ಮುಗಿದ ಮೂರನೆಯ ದಿವಸವೇ ಏರು ಹಾಕಿದ ಮಟ್ಟಿಯ ಮಣ್ಣನ್ನು ಒಡೆದು ದೈನಂದಿನ ಸಾಧನೆ ನಡೆಸುತ್ತಾರೆ.


ವ್ಯಾಯಾಮಸಾಮಗ್ರಿಗಳು[ಸಂಪಾದಿಸಿ]

ಹಿಂದಿನ ಕಾಲದಲ್ಲಿ ಗರಡಿಮನೆಗಳಲ್ಲಿ ವ್ಯಾಯಾಮ ಸಾಮಗ್ರಿಗಳು ಹೆಚ್ಚು ಇದ್ದಿರಲಿಲ್ಲ. ದಂಡೆ ಒತ್ತುವುದು, ಬಸ್ಕಿ ಹೊಡೆಯುವುದು ಮತ್ತು ಮಟ್ಟಿ ಕುರಾಯಿಸುವುದು-ಇವಿಷ್ಟೇ ಅಂದಿನ ಪ್ರಧಾನ; ವ್ಯಾಯಾಮಗಳಾಗಿದ್ದವು. ಅಲ್ಲಿನ ಸಾಮಾನ್ಯ ವ್ಯಾಯಾಮಸಾಮಗ್ರಿಗಳೆಂದರೆ-ಡಂಬೆಲ್ಸ್, ಲೋಡು (ಗದೆ), ಬಳಪದ ಕಲ್ಲಿನಿಂದ ಮಾಡಿದ್ದು ಕುತ್ತಿಗೆಗೆ ಸಿಕ್ಕಿಸಿಕೊಳ್ಳುವ ಗಾಲಿ, ರಂಧ್ರವಿರುವ ಕಬ್ಬಿಣದ ಗುಂಡು, ಮಲ್ಲಗಂಬ, ದಂಡೆ ಹೊಡೆಯುವಾಗ ಹಿಡಿದುಕೊಳ್ಳಲು ಉಪಯೋಗಿಸುವ ಮರದಿಂದ ಮಾಡಿದ ಕೈಹಿಡಿಗಳು, ಮಣೆ, ಮಟ್ಟಿ ಕುರಾಯಿಸುವ ದೊಡ್ಡ ಗುದ್ದಲಿ ಮೊದಲಾದವು. ಈ ಎಲ್ಲ ವ್ಯಾಯಾಮಸಾಮಗ್ರಿಗಳೂ ಕುಸ್ತಿಕಲೆಗೆ ಸಹಾಯಕವಾಗುವಂಥವು.


ಪೈಲ್ವಾನರುಗಳ ಆರಾಧ್ಯದೈವವೆಂದರೆ ಮೌಲಾಲಿ ಮತ್ತು ಹನುಮಂತ. ಆದ್ದರಿಂದಲೇ ಎಲ್ಲ ಗರಡಿಮನೆಗಳಲ್ಲೂ ಹನುಮಂತ ಮತ್ತು ಮೌಲಾಲಿ ದೇವರುಗಳನ್ನು ಕಾಣಬಹುದು. ಮೌಲಾಲಿ ಆಕಾರವಿಲ್ಲದ ದೇವರು. ಸಾಮಾನ್ಯವಾಗಿ ಗರಡಿಮನೆಗಳಲ್ಲಿ ಕೆಳಗಡೆ ಮೂರು ಗುಂಡು. ಮೇಲ್ಗಡೆ ಒಂದು ಗುಂಡನ್ನು ಇಟ್ಟು ಇದನ್ನೇ ಮೌಲಾಲಿ ದೇವರೆಂದು ಪುಜಿಸುತ್ತಾರೆ. ಕುಸ್ತಿ ಇರುವ ದಿವಸ ಪೈಲ್ವಾನರು ಅಖಾಡವನ್ನು ಪ್ರವೇಶಿಸುವಾಗ, ಯಾಲಿ ಮೌಲಾಲಿ, ಯಾಲಿ ಮದಾತ್, ಯಾಲಿ ಉಸ್ತಾದ್, ಜೈ ಭಜರಂಗಬಲಿ ಮುಂತಾದ ಘೋಷಣೆಗಳನ್ನು ಮಾಡುತ್ತಾರೆ. ಇತ್ತೀಚೆಗೆ ಇದರ ಜೊತೆಗೆ ಹಿಂಕಣ್ಣು ಮುಂಕಣ್ಣು ಲಾಗ ಹಾಕಿಕೊಂಡು ಬರುವುದೂ ರೂಢಿಯಲ್ಲಿದೆ.


  • ಮಲ್ಲಗಂಬ: ಮಲ್ಲಗಂಬಗಳಲ್ಲಿ ಮೂರು ವಿಧ
  1. ನೇಣು ಮಲ್ಲಗಂಬ
  2. ಹುಗಿದಿರುವ ಮಲ್ಲಗಂಬ
  3. ಬೆತ್ತದ ಮಲ್ಲಗಂಬ.

ಇವುಗಳ ಮೇಲೆ ವ್ಯಾಯಾಮ ಮಾಡುವುದರಿಂದ ತೊಡೆಗಳಿಗೆ ಅಸಾಧಾರಣವಾದ ಶಕ್ತಿ ಹಾಗೂ ಬಿಗಿಬರುತ್ತದಲ್ಲದೆ ದೇಹವನ್ನು ಹೇಗೆ ಬೇಕೋ ಹಾಗೆ ಮಣಿಸುವುದಕ್ಕೆ ಸಾಧ್ಯವಾಗುತ್ತದೆ.


ದಾದಾ ಬಾಲಂಭಟ್ಟ ಎಂಬಾತ ಮಲ್ಲಗಂಬದ ಮೇಲೆ ವ್ಯಾಯಾಮ ಮಾಡುವುದನ್ನು ಕಂಡುಹಿಡಿದ. ಇದಕ್ಕೆ ಸಂಬಂಧಿಸಿದಂತೆ ಕಥೆಯೊಂದಿದೆ. ಪ್ರಖ್ಯಾತ ಜಟ್ಟಿಯೊಬ್ಬನ ಸವಾಲನ್ನು ಎದುರಿಸಿ ಅವನ ಜೊತೆ ಕುಸ್ತಿ ಮಾಡಲುಒಪ್ಪಿಕೊಂಡ ಬಾಲಂಭಟ್ಟ ಅವನನ್ನು ಸೋಲಿಸುವ ಬಗೆಯನ್ನು ಕುರಿತು ತೀವ್ರವಾಗಿ ಯೋಚಿಸತೊಡಗಿದ. ಈ ಯೋಚನೆಯಲ್ಲಿರುವಾಗಲೇ ಒಂದು ದಿವಸ ಅವನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಕೋತಿಯೊಂದು ಮರದ ಕೊಂಬೆಯ ಮೇಲೆ ಲಾಗ ಹಾಕುತ್ತಾ ಅನೇಕ ರೀತಿಯ ಕಸರತ್ತು ಮಾಡುತ್ತಿರುವುದನ್ನು ಕಂಡ. ಅದು ಅವನಿಗೊಂದು ಸೂಚನೆಯನ್ನೊದಗಿಸಿತು. ಮಾರನೆಯ ದಿನವೇ ನುಣುಪಾದ ಮರದ ಕಂಬವನ್ನು ತಂದು ನೆಲದಲ್ಲಿ ನೆಟ್ಟು ಅದರ ಮೇಲೆ ಕಸರತ್ತು ಮಾಡಲು ಪ್ರಾರಂಭಿಸಿದ. ಅದರಿಂದಾಗಿ ಆತ ತನ್ನ ಎದುರಾಳಿಯನ್ನು ಸುಲಭವಾಗಿ ಸೋಲಿಸಿದ. ಮಲ್ಲಗಂಬದ ಮೇಲೆ ನಡೆಸುವ ವಿವಿಧ ಚಟುವಟಿಕೆಗಳ ಸ್ಪರ್ಧೆಯನ್ನು ಈಗಲೂ ಮಹಾರಾಷ್ಟ್ರದಲ್ಲಿ ನಡೆಸುತ್ತಾರೆ.


ಮಲ್ಲಗಂಬದ ಮೇಲೆ ಮಾಡುವ ಸಾಧನೆಯಲ್ಲಿ ಅನೇಕ ಬಗೆಗಳಿವೆ. ಪವಿತ್ರ : ನೆಲದಲ್ಲಿ ಹುಗಿದಿರುವ ಕಂಬದ ಬದಿಯಲ್ಲಿ ಎಡಗಾಲನ್ನು ಸ್ವಲ್ಪ ಮುಂದೆ ಇಟ್ಟುಕೊಂಡು, ಎಡಮುಂಗೈಯನ್ನು ಕಂಬದ ಮುಂದುಗಡೆಯಲ್ಲಿ ಸೊಂಟದ ಮಟ್ಟದಲ್ಲಿಯೂ ಬಲಗೈಯನ್ನು ಕಂಬದ ಹಿಂಬದಿಯಲ್ಲಿಯೂ ಇಟ್ಟು ಬಲಗೈಯಿಂದ ಕಂಬವನ್ನು ಬಳಸಿ ನಿಲ್ಲುವುದಕ್ಕೆ ಎಡಪವಿತ್ರವೆಂದು ಹೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ನಿಲ್ಲುವುದು ಬಲಪವಿತ್ರ. ವ್ಯಾಯಾಮ ಮಾಡುವಾಗ ಮುಂಗೈ ತ್ರಾಣದಿಂದ ಕಂಬವನ್ನು ಹಿಡಿದು ತಲೆಯನ್ನು ಕೆಳಗೆಮಾಡಿ ಕಾಲುಗಳನ್ನು ಮೇಲೆಸೆದು ಎರಡು ತೊಡೆಗಳಿಂದಲೂ ಕಂಬವನ್ನು ಬಳಸಿ ಹಿಡಿದು ಎರಡು ಕೈಗಳನ್ನೂ ಬಿಡಬೇಕು. ತೊಡೆಗಳ ಬಲದಿಂದ ಕಂಬವನ್ನು ಬಿಗಿಹಿಡಿದು ಸ್ವಲ್ಪ ಹೊತ್ತಿನ ಅನಂತರ ತೊಡೆಗಳನ್ನು ಸಡಿಲಿಸಿ ಹಾಗೆಯೇ ನಿಧಾನವಾಗಿ ಕೆಳಗಡೆ ಜಾರಬೇಕು. ನೆಲವನ್ನು ಸಮೀಪಿಸಿದಾಗ ಕೈಗಳಿಂದ ಕಂಬವನ್ನು ಹಿಡಿದು ಕಾಲುಗಳನ್ನು ನೆಲಕ್ಕೆ ಸೋಕಿಸದಂತೆ ಇಳಿಬಿಟ್ಟು ಮತ್ತೆ ಮುಂಗೈ ತ್ರಾಣದಿಂದ ಕಾಲುಗಳನ್ನು ಮೇಲೆಸೆದು ತೊಡೆಗಳಿಂದ ಕಂಬವನ್ನು ಬಿಗಿ ಹಿಡಿಯಬೇಕು. ನೆಲಕ್ಕಿಳಿಯುವಾಗ ತೊಡೆಗಳನ್ನು ಸಡಿಲಿಸಿ ಕಂಬದ ಮೇಲಿನಿಂದ ತಲೆಕೆಳಗಾಗಿಯೇ ಜಾರಿಕೊಂಡು ಬಂದು ಕೈಗಳಿಂದ ಕಂಬವನ್ನು ಹಿಡಿದು ಕಂಬದ ಬದಿಯಲ್ಲಿ ಕಾಲುಗಳನ್ನು ಪೂರ್ತಿಯಾಗಿ ನೆಲದ ಮೇಲೆ ಊರದೆ ಬೆರಳುಗಳ ಸಹಾಯದಿಂದ ನಿಲ್ಲಬೇಕು. ಹೀಗೆಯೇ ಮಲ್ಲಗಂಬದ ಮೇಲೆ ವ್ಯಾಯಾಮ ಮಾಡುವ ಅನೇಕ ರೀತಿಯ ಉಡಿಗಳಿವೆ. ಅವುಗಳಲ್ಲಿ ಕಮಾನಿ ಉಡಿ, ದೋ ಹಾಥಿ ಉಡಿ, ನಕೀಕಸ್ ಸಾದಾ, ಬಗಲ್ ಉಡಿ, ಸಲಾಮಿ, ಸಾದಿತೇಡಿ, ಘಾಡ್ ಉಡಿ, ಬಗಲ್ ತೇಡಿ, ಕತ್ತರ ಪಕ್ಕಡ್, ಕಾನ್ಪಕ್ಕಡ್ ಘಾನ ಉಡಿ, ದೋಹಾಥಿ ದಸ್ರಂಗ್, ಖಾಂದಾದಸ್ರಂಗ್, ಮೊದಲಾದುವು ಪ್ರಖ್ಯಾತವಾದುವು. ಹೀಗೆಯೇ ಬೆತ್ತದ ಕಂಬ ಮತ್ತು ನೇಣುಗಂಬಗಳ ಮೇಲೆ ಆಸನಗಳನ್ನು ಹಾಕುತ್ತಾರೆ.


  • ಡಂಬೆಲ್ಲುಗಳು: ವಿವಿಧ ತೂಕದ ಡಂಬೆಲ್ಲುಗಳನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ದೀರ್ಘಶ್ವಾಸ ಎಳೆದುಕೊಂಡು ಕೈಗಳನ್ನು ಒಂದಾದ ಮೇಲೆ ಒಂದರಂತೆ ಮೇಲೆತ್ತಿ, ನಿಧಾನವಾಗಿ ಉಸಿರು ಬಿಡುತ್ತ ಕೆಳಗೆ ಇಳಿಸಬೇಕು. ಈ ವ್ಯಾಯಾಮದಿಂದ ಮುಂಗೈ ಮತ್ತು ತೋಳುಗಳಿಗೆ ಬಲ ಬರುತ್ತದೆ.


  • ಗದೆ ಅಥವಾ ಲೋಡು: ವಿವಿಧ ತೂಕದ ಗದೆಗಳಿರುತ್ತವೆ. ಒಂದೇ ತೂಕವುಳ್ಳ ಎರಡು ಗದೆಗಳನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಮೂಗಿನ ನೇರದಲ್ಲಿ ನಿಲ್ಲಿಸಿಕೊಳ್ಳಬೇಕು. ಅನಂತರ ಒಂದು ಕೈಯಲ್ಲಿ ಹಿಡಿದಿರುವ ಗದೆಯನ್ನು ಮೂಗಿನ ನೇರದಲ್ಲಿಯೇ ನಿಲ್ಲಿಸಿಕೊಂಡು, ಇನ್ನೊಂದು ಕೈಯಲ್ಲಿರುವ ಗದೆಯನ್ನು ತಲೆಯ ಮೇಲೆ ಎತ್ತಿ ಬೆನ್ನ ಹಿಂದೆ ಇಳಿಸಿ ಅನಂತರ ಮೊದಲಿದ್ದ ಸ್ಥಾನಕ್ಕೇ ಅಂದರೆ ಮುಂಭಾಗದಿಂದ ಮೇಲೆತ್ತಿ ಮೂಗಿನ ನೇರಕ್ಕೇ ನಿಲ್ಲಿಸಿಕೊಳ್ಳಬೇಕು. ತಕ್ಷಣವೇ ಮತ್ತೊಂದು ಕೈಯಲ್ಲಿರುವ ಗದೆಯನ್ನು ತಲೆಯ ಮೇಲೆ ಎತ್ತಿ ಬೆನ್ನ ಹಿಂದೆ ಇಳಿಸಿ ಮುಂದುಗಡೆಯಿಂದ ಮೂಗಿನ ನೇರಕ್ಕೆ ತಂದು ನಿಲ್ಲಿಸಿಕೊಳ್ಳಬೇಕು. ಹೀಗೆ ಒಂದಾದ ಮೇಲೊಂದರಂತೆ ಗದೆಯನ್ನು ತಿರುಗಿಸಬೇಕು. ಇದರಿಂದ ಮುಂಗೈ ಮತ್ತು ತೋಳುಗಳಿಗೆ ಅಸಾಧಾರಣ ಶಕ್ತಿ ಬರುತ್ತದೆ.


  • ಗಾಲಿ: ಸಿಮೆಂಟಿನ ಈ ಗಾಲಿ 45 ಸೆಂಮೀ ಅಳತೆಯ ಸುತ್ತಳತೆಯದಾಗಿದ್ದು ತುಂಬ ಭಾರವಾಗಿರುತ್ತದೆ. ಇದರ ಮಧ್ಯೆ ತಲೆ ನುಗ್ಗುವಷ್ಟು ರಂಧ್ರವೊಂದಿರುತ್ತದೆ. ಈ ಗಾಲಿಯನ್ನು ನಿಲ್ಲಿಸಿಕೊಂಡು, ಕುಕ್ಕುರುಗಾಲಿನಲ್ಲಿ ಕುಳಿತು ರಂಧ್ರದ ಮಧ್ಯೆ ತಲೆಯನ್ನು ತೂರಿಸಿ ಗಾಲಿಯನ್ನು ಕುತ್ತಿಗೆಗೆ ಸಿಗಿಸಿಕೊಂಡು ಮೇಲೇಳಬೇಕು. ಮೇಲೆದ್ದು ಗರಡಿಮನೆಯ ಒಳಭಾಗದಲ್ಲಿಯೇ ಒಂದೆರಡು ನಿಮಿಷ ಸುತ್ತಾಡಬೇಕು. ಹೀಗೆ ಮಾಡುವುದರಿಂದ ಕುತ್ತಿಗೆಗೆ ಬಲ ಬರುತ್ತದೆ.


  • ಗುಂಡು: ಇದು ಭಾರವಾದ ಕಬ್ಬಿಣದ್ದಾಗಿದ್ದು ಮಧ್ಯೆ ಒಂದು ಅಂಗುಲ ಅಥವಾ ಎರಡು ಅಂಗುಲದಷ್ಟು ಅಗಲವಾದ ರಂಧ್ರವಿರುತ್ತದೆ. ಈ ರಂಧ್ರದ ಮಧ್ಯೆ ದಪ್ಪನಾದ ಕೋಲೊಂದನ್ನು ತಳ್ಳಿ ಕೈಯಿಂದ ಆ ಕೋಲನ್ನು ಹಿಡಿದು ಮುಂಗೈ ತ್ರಾಣದಿಂದ ಆ ಗುಂಡನ್ನು ಮೇಲೆತ್ತಬೇಕು. ಹೀಗೆ ಮಾಡುವುದರಿಂದ ಕೈಗಳಿಗೆ ಬಲ ಬರುತ್ತದೆ.


  • ಗುದ್ದಲಿ: ಇದು ವ್ಯವಸಾಯದ ಗುದ್ದಲಿಗಿಂತ ಆಕಾರದಲ್ಲಿ ದೊಡ್ಡದಾಗಿದ್ದು, ಭಾರವಾಗಿರುತ್ತದೆ. ಪ್ರತಿಯೊಬ್ಬ ಪೈಲ್ವಾನನೂ ಕುಸ್ತಿ ಮಾಡಿಯಾದ ಮೇಲೆ ಈ ಗುದ್ದಲಿಯಿಂದ ಮಟ್ಟಿಯನ್ನು ಪುರ್ತಿ ಕುರಾಯಿಸುತ್ತಾನೆ. ಇದರಿಂದ ಎದೆ ವಿಶಾಲವಾಗುತ್ತದೆ. ಅಲ್ಲದೆ ಮುಂಗೈಗಳು, ತೋಳುಗಳು ಮತ್ತು ಸೊಂಟಕ್ಕೆ ಹೆಚ್ಚಿನ ಶಕ್ತಿ ಬರುವುದಲ್ಲದೆ ದಮ್ಮುಕಸ್ತು ನಿಲ್ಲುತ್ತದೆ ಅಂಗಸಾಧನೆ: ಕುಸ್ತಿ ವ್ಯಾಯಾಮ ಶಾಲೆ.