ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ
ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ
ಆನಂದದೊಡನೆ ಕುಣಿಕುಣಿದಾಡುವೆ
ಪರವಶದೊಡನೆ ಹಾಡುವೆ
ಭಕ್ತಿಯೊಡನೆ ಎರಗುವೆ
ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ
ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.