ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋವಿಂದರಾಜ
ಕಾಲ 12ನೆಯ ಶತಮಾನ. ಮೂರನೆಯ ಪೃಥ್ವೀರಾಜ ಚೌಹಾಣನಿಂದ ದೆಹಲಿ ಪ್ರದೇಶದ ಆಡಳಿತಮುಖ್ಯನಾಗಿ ನೇಮಕವಾಗಿದ್ದವ. ಈತ ಸ್ವಾಮಿಭಕ್ತ, ಸ್ವಾತಂತ್ರ್ಯ ಪ್ರೇಮಿ, ಉಜ್ವಲ ರಾಷ್ಟ್ರಭಕ್ತ, ಅಸಾಧಾರಣ ಪರಾಕ್ರಮಿ. ಮಹಮ್ಮದ್ ಘೋರಿ ತನ್ನ ಮೊದಲನೆಯ ದಂಡಯಾತ್ರೆಯಲ್ಲಿ ಪಂಜಾಬ್ ಪ್ರದೇಶವನ್ನು ಗೆದ್ದು ಮುಲ್ತಾನ್ ನಗರದಲ್ಲಿ ತನ್ನ ಪ್ರತಿನಿಧಿಯಾಗಿ ಮಲ್ಲಿಕ್ ಜಿಯಾವುದ್ದೀನನನ್ನು ನೇಮಿಸಿದ್ದ. ಆ ಪ್ರದೇಶದಲ್ಲಿ ಹಿಂದೂಗಳಿಗಾಗುತ್ತಿದ್ದ ಕಿರುಕುಳವನ್ನು ಗಮನಿಸಿದ ಗೋವಿಂದರಾಜ ಪೃಥ್ವೀರಾಜನ ಬಳಿಗೆ ಹೋಗಿ ಮಹಮ್ಮದೀಯರ ಆಡಳಿತವನ್ನು ಕೊನೆಗಾಣಿಸಿ ಅಲ್ಲಿಯ ಜನ ನೆಮ್ಮದಿಯಿಂದ ಬಾಳುವಂತೆ ಏರ್ಪಾಡು ಮಾಡಬೇಕೆಂದು ವಿನಂತಿಸಿದ. ಪೃಥ್ವೀರಾಜನಿಗೂ ಮಹಮ್ಮದ್ ಘೋರಿಗೂ 1190-91ರಲ್ಲಿ ತರೈನ್ ಮೈದಾನದಲ್ಲಿ ಘೋರಯುದ್ಧ ಸಂಭವಿಸಿತು. ಗೋವಿಂದರಾಜ ಆನೆಯ ಮೇಲೆ ಕುಳಿತು ಹೋರಾಡುತ್ತ ನೇರವಾಗಿ ಸುಲ್ತಾನನನ್ನು ಎದುರಿಸಿದ. ದಿಗ್ಭ್ರಮೆಗೊಂಡ ಸುಲ್ತಾನ ಒಂದು ಭರ್ಜಿಯನ್ನು ತೆಗೆದುಕೊಂಡು ಗೋವಿಂದರಾಜನ ಮುಖಕ್ಕೆ ಎಸೆದ. ಗೋವಿಂದರಾಜನ ಎರಡು ಹಲ್ಲುಗಳು ಮುರಿದುಹೋದುವು. ಆದರೂ ಇವನು ಧೃತಿಗೆಡದೆ ಪ್ರತಿಯಾಗಿ ಪ್ರಯೋಗಿಸಿದ ಭರ್ಜಿಯಿಂದ ಸುಲ್ತಾನ ಅತೀವವಾಗಿ ಪೆಟ್ಟುತಿಂದು ಕುದುರೆಯ ಮೇಲಿಂದ ಬಿದ್ದು ತನ್ನ ಅಂಗರಕ್ಷಕನೊಬ್ಬನ ಸಹಾಯದಿಂದ ರಣರಂಗದಿಂದ ಪಲಾಯನ ಮಾಡಿದ. ಅವನ ಸೈನ್ಯ ಕಂಗೆಟ್ಟು ಓಡಿಹೋಯಿತು. ಗೋವಿಂದರಾಜನ ಧೈರ್ಯ ಪರಾಕ್ರಮಗಳಿಂದ ಪೃಥ್ವೀರಾಜ ಜಯಗಳಿಸಿದ. ಮರುವರ್ಷ ಮಹಮ್ಮದ್ ಘೋರಿಗೂ ಪೃಥ್ವೀರಾಜನಿಗೂ ಪುನಃ ತರೈನ್ ಮೈದಾನದಲ್ಲಿ ಘೋರಯುದ್ಧ ನಡೆಯಿತು. ಗೋವಿಂದರಾಜ ಸುಲ್ತಾನನ ಭಾರಿ ಸೈನ್ಯವನ್ನು ಎದುರಿಸಿ ಜೀವಭಯವನ್ನು ತೊರೆದು ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಸಾವಿಗೆ ಈಡಾದ. ಇವನ ಮರಣದಿಂದ ಪೃಥ್ವೀರಾಜನ ಬಲ ಕುಗ್ಗಿತು. ಅಂತಿಮವಾಗಿ ಅವನು ಸೋತ.