ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೇಟ್ ಬ್ರಿಟನ್ನಿನ ಇತಿಹಾಸ

ವಿಕಿಸೋರ್ಸ್ದಿಂದ

ಗ್ರೇಟ್ ಬ್ರಿಟನ್ನಿನ ಇತಿಹಾಸ

ಗ್ರೇಟ್ ಬ್ರಿಟನ್ ಎಂಬ ಹೆಸರು ಅಧಿಕೃತವಾಗಿ ಬಳಕೆಗೆ ಬಂದದ್ದು 1604ರಿಂದ ಈಚೆಗೆ. ಸ್ಕಾಟ್ಲೆಂಡಿನ ಆರನೆಯ ಜೇಮ್ಸ್ ಇಂಗ್ಲೆಂಡ್ ಸ್ಕಾಟ್ಲೆಂಡ್‍ಗಳೆರಡಕ್ಕೂ ದೊರೆಯಾದ ಮೇಲೆ, ಆಗ ಅವನು ತನ್ನನ್ನು ಗ್ರೇಟ್ ಬ್ರಿಟನಿನ ದೊರೆಯೆಂದು ಕರೆದುಕೊಂಡ. ಆದರೆ ಈ ಹೆಸರು ಸಂವೈಧಾನಿಕವಾಗಿ ಬಳಕೆಗೆ ಬಂದದ್ದು 1707ರಲ್ಲಿ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‍ಗಳ ಪಾರ್ಲಿಮೆಂಟುಗಳನ್ನು ಒಂದುಗೊಳಿಸುವ ಅಧಿನಿಯಮ (ಆಕ್ಟ್ ಆಫ್ ಯೂನಿಯನ್) ಜಾರಿಗೆ ಬಂದಾಗ, ಇಂಗ್ಲೆಂಡಿನ ವಾಣಿಜ್ಯ ಸೌಲಭ್ಯಗಳು ಸ್ಕಾಟ್ಲೆಂಡಿಗೂ ದತ್ತವಾದವು. ಸ್ಕಾಟ್ಲೆಂಡಿನ ಚರ್ಚ್, ಸ್ಕಾಟಿಷ್ ಕಾನೂನುಗಳು ಮತ್ತು ನ್ಯಾಯ ಪ್ರಕ್ರಿಯೆಗಳನ್ನು ಪರಿಪಾಲಿಸುವ ಭರವಸೆ ನೀಡಲಾಯಿತು. ಸ್ಟ್ಯೂಯರ್ಟ್ ಮನೆತನದ ಅನಳ ಆಳ್ವಿಕೆಯೊಂದಿಗೆ ಗ್ರೇಟ್ ಬ್ರಿಟನಿನ ಇತಿಹಾಸ ವಾಸ್ತವವಾಗಿ ಆರಂಭವಾಗುತ್ತದೆ.

1ನೆಯ ಜಾರ್ಜ್ 1714ರಿಂದ 1727ರ ವರೆಗೂ ಅನಂತರ 2ನೆಯ ಜಾರ್ಜ್ 1727ರಿಂದ 1760ರ ವರೆಗೂ ಆಳಿದರು. ಇವರ ಕಾಲದಲ್ಲಿ ಪ್ರಧಾನ ಮಂತ್ರಿಯ ಹುದ್ದೆ ಪ್ರಾರಂಭವಾಯಿತು. 1ನೆಯ ಮತ್ತು 2ನೆಯ ಜಾರ್ಜರಿಗೆ ಇಂಗ್ಲಿಷ್ ಭಾಷೆಯ ಜ್ಞಾನವಿರಲಿಲ್ಲ. ಅವರಿಗೆ ಇಂಗ್ಲೆಂಡಿನ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದ್ದರಿಂದ ಅವರು ಹಿಂದಿನ ದೊರೆಗಳಂತೆ ಮಂತ್ರಿಮಂಡಲದ ಸಭೆಯ ಅಧ್ಯಕ್ಷತೆ ವಹಿಸುತ್ತಿರಲಿಲ್ಲ. ಆಗ ಮಂತ್ರಿಗಳಲ್ಲೊಬ್ಬ ಅಧ್ಯಕ್ಷತೆ ವಹಿಸಲಾರಂಭಿಸಿದ. ಆತನನ್ನು ಪ್ರಧಾನಮಂತ್ರಿ ಎಂದು ಕರೆಯಲಾರಂಭವಾಯಿತು. ಕಾಲಕ್ರಮದಲ್ಲಿ ಆತ ತನ್ನ ಸಹೋದ್ಯೋಗಿಗಳ ನೇಮಕದ ಮೇಲೆ ಹತೋಟಿ ಪಡೆದ. ಮಂತ್ರಿ ಮಂಡಲ ಮುಂದುವರಿಯಲು ಕಾಮನ್ಸ್ ಸಭೆಯ ಬಹುಮತದ ಬೆಂಬಲ ಅವಶ್ಯಕವಾಯಿತು. ಹೀಗೆ 1ನೆಯ ಮತ್ತು 2ನೆಯ ಜಾರ್ಜರ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಮಂತ್ರಿಮಂಡಲ ಮತ್ತು ಪಕ್ಷಸರ್ಕಾರದ ವಿಕಾಸವಾಯಿತು. 2ನೆಯ ಜಾರ್ಜನ ಕಾಲದಲ್ಲಿ 1740--1748ರಲ್ಲಿ ಆಸ್ಟ್ರಿಯ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಯುದ್ಧ ನಡೆಯಿತು. ಇದರಲ್ಲಿ ಬ್ರಿಟನ್ ಮತ್ತು ಆಸ್ಟ್ರಿಯ ಒಂದು ಕಡೆಗೂ ಫ್ರಾನ್ಸ್ ಮತ್ತು ಪ್ರಷ್ಯ ಇನ್ನೊಂದು ಕಡೆಗೂ ಇದ್ದುವು. ಅನಂತರ ಬ್ರಿಟನ್ ಮತ್ತು ಫ್ರಾನ್ಸ್‍ಗಳ ನಡುವೆ ಏಳು ವರ್ಷಗಳ ಯುದ್ಧ (1756 --- 63) ನಡೆಯಿತು. ಈ ಯುದ್ಧ 3ನೆಯ ಜಾರ್ಜನ ಆಳ್ವಿಕೆಯ ಕಾಲದಲ್ಲಿ (1760-- 1820) ಬ್ರಿಟನಿನ ವಿಜಯದೊಂದಿಗೆ ಮುಕ್ತಾಯವಾಯಿತು. ಇದರ ಫಲವಾಗಿ ಬ್ರಿಟನಿನ ಹಲವು ಸಾಗರಾಂತರ ವಸಾಹತುಗಳ ಸಂಪಾದನೆಯಾಯಿತು. ಬ್ರಿಟನಿನ ವಿಶಾಲ ಚಕ್ರಾಧಿಪತ್ಯ ಬೆಳೆಯಲಾರಂಭಿಸಿತು. ಬ್ರಿಟನಿನ ಕೀರ್ತಿಯಲ್ಲಿ ಹೆಮ್ಮೆ ತಳೆದ ಪ್ರಥಮ ಹ್ಯಾನೋವರಿಯನ್ ದೊರೆ 3ನೆಯ ಜಾರ್ಜ್. ಈತನ ಆಳ್ವಿಕೆಯ ಕಾಲದಲ್ಲಿ 1775ರಲ್ಲಿ ಸಂಗ್ರಾಮ ಆರಂಭವಾಯಿತು. ಉತ್ತರ ಅಮೆರಿಕದ ಹದಿಮೂರು ಸಂಸ್ಥಾನಗಳು ಸ್ವತಂತ್ರವಾದವು. ಇವು 1783ರಲ್ಲಿ ಸಂಯುಕ್ತ ಸಂಸ್ಥಾನಗಳಾದವು. 1789ರಲ್ಲಿ ಫ್ರಾನ್ಸಿನಲ್ಲಿ ಕ್ರಾಂತಿ ಸಂಭವಿಸಿತು. 1793ರಲ್ಲಿ ಫ್ರಾನ್ಸಿನೊಂದಿಗೆ ಬ್ರಿಟನಿನ ಯುದ್ಧ ಪ್ರಾರಂಭವಾಗಿ 1815ರಲ್ಲಿ ಫ್ರಾನ್ಸಿನ ನೆಪೋಲಿಯನನ ಸೋಲಿನೊಂದಿಗೆ ಕೊನೆಗೊಂಡಿತು. 1801ರಲ್ಲಿ ಜಾರಿಗೆ ಬಂದ ಒಕ್ಕೂಟ ಅಧಿನಿಯಮದಂತೆ ಐರ್ಲೆಂಡು ಗ್ರೇಟ್ ಬ್ರಿಟನಿನಲ್ಲಿ ಸಮಾವೇಶಗೊಂಡಿತು. ಗ್ರೇಟ್‍ಬ್ರಿಟನ್ ಮತ್ತು ಐರ್ಲೆಂಡ್ ಸಂಯುಕ್ತ ರಾಜ್ಯ ಎಂಬುದು ಈ ದೇಶದ ಅಧಿಕೃತ ನಾಮವಾಯಿತು.

4ನೆಯ ಜಾರ್ಜ್ 1820 ರಿಂದ 1830ರ ವರೆಗೆ ಆಳಿದ. 4ನೆಯ ವಿಲಿಯಮನ ಆಳ್ವಿಕೆಯ ಕಾಲ 1830--1837. ಈತನ ಆಳ್ವಿಕೆಯಲ್ಲಿ 1832ರಲ್ಲಿ ಮೊದಲನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮ ಜಾರಿಗೆ ಬಂತು. ಅದುವರೆಗೆ ಬ್ರಿಟನಿನಲ್ಲಿ ಶ್ರೀಮಂತರು ರಾಜಕೀಯ ಅಧಿಕಾರ ಹೊಂದಿದ್ದರು. ಕಾಮನ್ಸ್‍ಗೆ ನಡೆಯುತ್ತಿದ್ದ ಚುನಾವಣೆಗಳಲ್ಲಿ ಮತ ನೀಡುವ ಹಕ್ಕು ಭೂಮಾಲೀಕರಿಗೆ ಮಾತ್ರ ಇದ್ದದ್ದು ಇದಕ್ಕೆ ಕಾರಣ. ಈ ಸುಧಾರಣಾ ಅಧಿನಿಯಮದ ಪ್ರಕಾರ ಮಧ್ಯಮ ವರ್ಗದವರಿಗೂ ಮತ ನೀಡುವ ಹಕ್ಕು ಲಭ್ಯವಾಯಿತು. ಈ ವೇಳೆಗೆ ಗ್ರೇಟ್ ಬ್ರಿಟನಿನ ಆರ್ಥಿಕತೆಯಲ್ಲಿ ಮಹತ್ತ್ವದ ಬದಲಾವಣೆಗಳಾಗಲಾರಂಭವಾಗಿತ್ತು. ಕೃಷಿಪ್ರಧಾನವಾಗಿದ್ದ ಬ್ರಿಟನ್ ಕೈಗಾರಿಕಾ ದೇಶವಾಗಹತ್ತಿತ್ತು. ಈ ಬದಲಾವಣೆಗಳನ್ನು ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಗಿದೆ. 1837 --- 1901 ವಿಕ್ಟೋರಿಯ ರಾಣಿಯ ಆಳ್ವಿಕೆಯ ಕಾಲ. ಈಕೆಯ ಆಳ್ವಿಕೆಯ ಕಾಲದಲ್ಲಿ 1867ರಲ್ಲಿ ಎರಡನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮ ಜಾರಿಗೆ ಬಂತು. ಕಸಬುದಾರರಿಗೆ ಮತಚಲಾವಣೆಯ ಹಕ್ಕು ಲಭ್ಯವಾಯಿತು. ಗುಪ್ತ ಮತದಾನ ಅಧಿನಿಯಮ ಬಂದದ್ದು 1878ರಲ್ಲಿ. 1884ರಲ್ಲಿ ಬಂದ ಮೂರನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮದಂತೆ ರೈತರಿಗೆ ಮತದಾನದ ಹಕ್ಕು ದೊರೆಯಿತು. ಪ್ರಾಪ್ತ ವಯಸ್ಕ ಗಂಡಸರೆಲ್ಲರಿಗೂ ಮತ ಹಕ್ಕು ಲಭಿಸಿದಂತಾಯಿತು. ಪ್ರಜಾಪ್ರಭುತ್ವ ಸ್ಥಿರವಾಯಿತು. 1901ರಿಂದ 1910ರ ವರೆಗೆ 7ನೆಯ ಎಡ್ವರ್ಡನೂ 1910ರಿಂದ1936ರ ವರೆಗೆ 5ನೆಯ ಜಾರ್ಜನೂ ರಾಜರಾಗಿದ್ದರು. 5ನೆಯ ಜಾರ್ಜ ದೊರೆಯ ಆಳ್ವಿಕೆಯ ಕಾಲದಲ್ಲಿ ಒಂದನೆಯ ಮಹಾಯುದ್ಥ ನಡೆಯಿತು. 1918ರ ಮತ್ತು 1928ರ ಅಧಿನಿಯಮಗಳಿಂದ ಸ್ತ್ರೀಯರಿಗೂ ಹಕ್ಕು ದೊರೆಯಿತು. 1911ರಲ್ಲಿ ಜಾರಿಗೆ ಬಂದ ಪಾರ್ಲಿಮೆಂಟ್ ಅಧಿನಿಯಮ ಲಾಡ್ರ್ಸ್ ಸಭೆಯ ಅಧಿಕಾರವನ್ನು ಮೊಟಕುಮಾಡಿತು. 1922ರಲ್ಲಿ ಐರ್ಲೆಂಡಿನ 26 ಕೌಂಟಿಗಳು ಸ್ವತಂತ್ರವಾದುವು. ಉತ್ತರ ಐರ್ಲೆಂಡ್ ಒಕ್ಕೂಟದಲ್ಲಿ ಉಳಿದುಕೊಂಡಿತು. ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ ಎಂಬುದು ದೇಶದ ಹೆಸರಾಯಿತು. ಕಾಮನ್ಸ್ ಸಭೆಯ ಸದಸ್ಯರಿಗೆ ಪ್ರಪ್ರಥಮವಾಗಿ ವೇತನ ಕೊಡುವ ಪದ್ಥತಿ ಪ್ರಾರಂಭವಾಯಿತು. ಕಾಮನ್ಸ್ ಸಭೆಯ ಅವಧಿ ಐದು ವರ್ಷಗಳೆಂದು ನಿಗದಿ ಮಾಡಲಾಯಿತು.

1936ರಲ್ಲಿ 8ನೆಯ ಎಡ್ವರ್ಡ್ ರಾಜನಾದ. ಎರಡು ಸಾರಿ ವಿವಾಹವಿಚ್ಛೇದ ಮಾಡಿಕೊಂಡಿದ್ದ ಅಮೆರಿಕನ್ ಮಹಿಳೆ ಶ್ರೀಮತಿ ಅರ್ನೆಸ್ಟ್ ಸಿಮ್ಸನಳನ್ನು ವಿವಾಹವಾಗ ಬಯಸಿದ ಎಡ್ವರ್ಡ್ ಆಕೆಗಾಗಿ ಸಿಂಹಾಸನತ್ಯಾಗ ಮಾಡಬೇಕಾಯಿತು. ಈತನ ಸಹೋದರ 6ನೆಯ ಜಾರ್ಜ 1936 -- 1952ರಲ್ಲಿ ಗ್ರೇಟ್ ಬ್ರಿಟನಿನ ದೊರೆಯಾಗಿದ್ದ. ಈತನ ಆಳ್ವಿಕೆಯ ಕಾಲದಲ್ಲಿ ಎರಡನೆಯ ಮಹಾಯುದ್ಧ ಜರುಗಿತು. ಯುದ್ಧಾನಂತರದಲ್ಲಿ ಬ್ರಿಟನಿನ ಅನೇಕ ವಸಾಹತುಗಳು ಒಂದೊಂದಾಗಿ ಸ್ವತಂತ್ರಗೊಂಡುವು. 6ನೆಯ ಜಾರ್ಜ ದೊರೆ 1952ರಲ್ಲಿ ತೀರಿಕೊಂಡ. ಆತನ ಹಿರಿಯ ಮಗಳು 2ನೆಯ ಎಲಿಜಬೆತಳ ಆಳ್ವಿಕೆ ಆರಂಭವಾಯಿತು. ಆಕೆಯ ಆಳ್ವಿಕೆಯ ಕಾಲದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬ್ರಿಟಿಷ್ ಕಾಮನ್ವೆಲ್ತಿನ ಸ್ವರೂಪ ಬದಲಾವಣೆಗೊಂಡು ಅದು ಕಾಮನ್ವೆಲ್ತ್ ಬಂಧುಕೂಟವಾಗಿ ಪರಿಣಮಿಸಿದೆ. ಬ್ರಿಟನಿನ ಸಾಗರಾಂತರ ವಸಾಹತುಗಳೆಲ್ಲ ಕಳೆದುಹೋಗಿರುವುದರಿಂದ ಅದರ ಪೂರ್ವದ ಪ್ರತಿಷ್ಠೆ ಬಹಳಮಟ್ಟಿಗೆ ನಷ್ಟವಾಗಿದೆ. (ಎ.ವಿ.ವಿ.; ಎಂ.ಎಸ್.ಬಿ.)