ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಟ್ಟು ನಿಲ್ಲುವಿಕೆ
ಮುಟ್ಟು ನಿಲ್ಲುವಿಕೆ - ಸ್ತ್ರೀಯ ಸಂತಾನಪ್ರಾಪ್ತಿಕಾಲ ಮುಗಿಯಿತೆಂಬುದಕ್ಕೆ ಬಲು ಸ್ಪಷ್ಟ ಕಾರಣವಾಗಿರುವ ಮಾಸಿಕ ರಜಸ್ಸ್ರಾವದ ಸ್ಥಿರನಿಲುಗಡೆ (ಮೆನೋಪಾಸ್ ಆಥವಾ ಕ್ಲೈಮ್ಯಾಕ್ಟೆರಿಕ್). ಜನಜನಿತವಾಗಿ ಇದನ್ನು ದೇಹಕ್ರಿಯೆ ಬದಲಾಗುವ ಪರ್ವಕಾಲ (ಛೇಂಜ್ ಆಫ್ ಲೈಫ್) ಎಂದಿದೆ. ಮುಟ್ಟು ನಿಲ್ಲುವುದು ಮುಖ್ಯವಾಗಿ ಅಂಡಾಶಯಗಳ ಕ್ರಿಯೆ ಮುಗಿಯಿತೆಂಬುದರ ಬಾಹ್ಯಸೂಚನೆ ಅಷ್ಟೆ. ಅಂಡಾಶಯದಲ್ಲಿ ಕ್ಲುಪ್ತವಾಗಿ ಪ್ರತಿ ತಿಂಗಳೂ ಜರಗುವ ವ್ಯಾಪಾರಗಳು ದೇಹದ ರಾಸಾಯನಿಕಸ್ಥಿತಿಯಲ್ಲಿ ತಕ್ಕ ಬದಲಾವಣೆಗಳನ್ನು ಮಾಡುತ್ತವೆ. ಇಂಥ ಬದಲಾವಣೆಗಳಲ್ಲಿ ಇತರ ಅಂತಃಸ್ರಾವ ಗ್ರಂಥಿಗಳಾದ ಥೈರಾಯ್ಡ್ ಮತ್ತು ಪಿಟ್ಯೂಯಿಟರಿಗಳು ಭಾಗವಹಿಸುತ್ತವೆ. ರಜೋ ನಿವೃತ್ತಿಯಲ್ಲಿ ಅಂಡಾಶಯದ ಸ್ರಾವ ಸ್ಥಗಿತಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಧಕ್ಕೆ ಆಗುವುದೂ ಇದೆ.
ಮುಟ್ಟು ನಿಲ್ಲುವುದಕ್ಕೆ ನಿರ್ದಿಷ್ಟ ಕಾಲವಿಲ್ಲ. ಮುಕ್ಯಾಲುಪಾಲು ಸ್ತ್ರೀಯರಲ್ಲಿ 40-50 ವರ್ಷಗಳಲ್ಲಿ ನಿಲ್ಲುತ್ತದೆ. ಮುಟ್ಟು ನಿಲ್ಲುವ ವಿಧಾನ ಕೂಡ ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಕೆಲವರಲ್ಲಿ ಒಮ್ಮಿಂದೊಮ್ಮೆಗೆ ನಿಂತು ಹೋಗಬಹುದು ಅಥವಾ ಕ್ರಮೇಣ ಕಡಿಮೆಯಾಗಿ ಒಂದೆರಡು ವರ್ಷಗಳಲ್ಲಿ ನಿಂತುಹೋಗಬಹುದು. ಇನ್ನೂ ಕೆಲವರಲ್ಲಿ ಅವ್ಯವಸ್ಥಿತವಾಗಿ ಒಂದೊಂದು ಸಲ ಅತಿಸ್ರಾವವಾಗಬಹುದು.
ಸಾಧಾರಣವಾಗಿ ಈ ಸಮಯಗಳಲ್ಲಿ ದೇಹದೊಳಗೆ ಆಗುವ ಈ ಮಾರ್ಪಾಡುಗಳಿಂದ ಹೆಂಗಸಿನ ದೈಹಿಕ ಅಥವಾ ಮಾನಸಿಕಸ್ಥಿತಿಗೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಏನಾದರೂ ಅದರೆ ಅವು ಬಹಳ ಅಲ್ಪಪ್ರಮಾಣದ್ದಾಗಿರುತ್ತವೆ. ಈ ಸಣ್ಣ ತೊಂದರೆಗಳೇ ಅತಿಯಾಗಿ ತೋರಿ ಅವುಗಳಿಗೆ ಔಷಧಿ ಕೊಡಬೇಕಾಗಬಹುದು. ಮಾನಸಿಕ ತೊಂದರೆಗಳಲ್ಲಿ ಸಾಮಾನ್ಯವಾಗಿ ಮನಸ್ಸು ಕುಗ್ಗುವುದು, ಬಲ ಕಡಿಮೆಯಾಗುವುದು, ನಿದ್ದೆ ಇಲ್ಲದಿರುವುದು, ನರಗಳ ನೋವು ಮತ್ತು ತಲೆಸಿಡಿತ ಮುಂತಾದವು ಬರಬಹುದಾದ ತೊಂದರೆಗಳು. ಇಂಥ ಸಮಯದಲ್ಲೇ ಮಕ್ಕಳಿಲ್ಲದ ಹೆಣ್ಣಿಗೆ ತಾನು ಬಸುರಿಯೆಂಬ ಸುಳ್ಳು ನಂಬಿಕೆ ಬಂದು, ಹೊಟ್ಟೆ ದೊಡ್ಡದಾಗಿ ಹುಸಿ ಹೆರಿಗೆ ನೋವು ಕೂಡ ಬರಬಹುದು. ಮಾನಸಿಕದೌರ್ಬಲ್ಯಕ್ಕೆ ಒಳಗಾದವರಿಗೆ ಮತ್ತು ಅವರ ವಂಶದಲ್ಲಿ ಮಾನಸಿಕದೌರ್ಬಲ್ಯ ಉಂಟಾದವರಿದ್ದರೆ ಅಂಥವರಿಗೆ ಇಂಥ ಸವಯದಲ್ಲಿ ಮನೋರೋಗ ಖಿನ್ನತೆ ಬರುವ ಸಂಭವಗಳು ಹೆಚ್ಚಾಗುತ್ತವೆ.
ಹೆಂಗಸರಿಗೆ ಸಾಧಾರಣವಾಗಿ ಮುಟ್ಟು ನಿಲ್ಲುವ ಕಾಲದಲ್ಲಿ ಮುಖ ಮತ್ತು ಕುತ್ತಿಗೆ ಬೆಚ್ಚಗಾಗಿ ಕೆಂಪಾಗುತ್ತದೆ. ಅತಿಯಾಗಿ ಬೆವರು ಬರುತ್ತದೆ. ಇವು ಕೆಲವೇ ಕ್ಷಣಗಳಿರಬಹುದು ಅಥವಾ ಕೆಲವು ನಿಮಿಷಗಳು ಕೂಡ ಇರಬಹುದು. ಮುಟ್ಟು ನಿಂತಮೇಲೆ ಕೆಲವು ಹೆಂಗಸರು ಸ್ಥೂಲಕಾಯರಾಗುತ್ತಾರೆ.
ಅಂಡಾಶಯಗಳ ಕಾಯಿಲೆಯಿಂದಾಗಲಿ ಇನ್ನಿತರ ನಿರ್ನಾಳಗ್ರಂಥಿಗಳ ಕಾಯಿಲೆಯಿಂದಾಗಲಿ ನಿರ್ದಿಷ್ಟ ಕಾಲಕ್ಕೆ ಮೊದಲೇ ಮುಟ್ಟು ನಿಂತುಹೋಗಬಹುದು. ಕೆಲವೊಮ್ಮೆ ಅತಿಯಾದ ದೈಹಿಕಕಾಯಿಲೆಗಳಿಂದಲೂ ತೀವ್ರವಾದ ಭಾವಾತ್ಮಕ ಹಾಗೂ ಮಾನಸಿಕ ತೊಂದರೆಯಿಂದಲೂ 40ವರ್ಷಗಳಿಗೂ ಮೊದಲೇ ಮುಟ್ಟು ನಿಂತುಹೋಗಬಹುದು. ಅಂಡಾಶಯಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಅಥವಾ ಎಕ್ಸ್‍ಕಿರಣಗಳಿಂದ ಅವುಗಳ ಕೆಲಸವನ್ನು ನಿಲ್ಲಿಸಿ, ನಿರ್ದಿಷ್ಡ ಕಾಲಕ್ಕೆ ಮೊದಲೇ ಮುಟ್ಟು ನಿಲ್ಲಿಸಬಹುದು. ಆದರೆ ಇಂಥ ವ್ಯಕ್ತಿಗಳಿಗೆ ಮಾನಸಿಕ ಮತ್ತು ನರಸಂಬಂಧಿ ತೊಂದರೆಗಳು ಬಲುಬೇಗನೆ ಬರುತ್ತವೆ.
ಮುಟ್ಟು ನಿಲ್ಲುವುದನ್ನು ವೈದ್ಯಕೀಯ ದೃಷ್ಟಿಯಂದ ನೋಡಿದರೆ ಮುಖ್ಯವಾಗಿ ಹೆಂಗಸಿನ ಬಾಳಿನಲ್ಲಿ ಮಕ್ಕಳನ್ನು ಹಡೆಯುವ ಕಾಲ ಮುಗಿಯುತ್ತ ಬಂದಂತೆ. ಆಗ ಗರ್ಭಕೋಶದ ಗಡ್ಡೆಗಳು ಮತ್ತು ಅಂಡಾಶಯದ ಗಡ್ಡೆಗಳು ಬರುವ ಸಂಭವ ಹೆಚ್ಚುತ್ತ ಹೋಗುತ್ತದೆ. ಅವ್ಯವಸ್ಥಿತವಾಗಿ ರಕ್ತಸ್ರಾವವಾಗುವುದೇ ಗರ್ಭಕೋಶದ ಏಡಿಗಂತಿ ರೋಗದ ಮೊದಲನೆಯ ಕುರುಹು. ಅತಿಸ್ರಾವವಾಗುವುದು ಗರ್ಭಕೋಶದ ಗಡ್ಡೆಗೆ ಕುರುಹು. ಇವೆರಡೂ ಮುಟ್ಟು ನಿಲ್ಲುವ ಕಾಲಕ್ಕೆ ಬರಬಹುದು. ಆದ್ದರಿಂದ ಹೆಂಗಸು ಇವಕ್ಕೆ ಹೆಚ್ಚು ಗಮನ ಕೊಡದೆ ಇರಬಹುದು ಮತ್ತು ರೋಗಗಳ ಮೊದಲನ್ನು ಅಸಡ್ಡೆ ಮಾಡಬಹುದು. ಹೊಟ್ಟೆ ದಪ್ಪವಾಗಿರುವುದನ್ನು ನಿರ್ಲಕ್ಷಿಸಿ ಅದನ್ನು ಮುಟ್ಟುನಿಂತಮೇಲೆ ಸಾಮಾನ್ಯವಾಗಿ ಬರುವ ಮೈ ಎಂದು ಭಾವಿಸಬಹುದು. ಇಂಥ ಸಂದರ್ಭಗಳಲ್ಲಿ ಯೋಗ್ಯ ವೈದ್ಯಕೀಯಸಲಹೆ ಪಡೆಯುವುದು ಅಪೇಕ್ಷಣೀಯ. (ಜೆ.ವೈ.ಐ.)
ಈ ಸಂದರ್ಭದಲ್ಲಿ ಮೂಳೆಗಳ ಸವೆತ ಆರಂಭವಾಗುತ್ತದೆ. ಬೆನ್ನುಮೂಳೆ ಸೊಂಟದ ಮೂಳೆ ತೊಡೆಯ ಮೂಳೆಗಳು ಅತಿಯಾಗಿ ತೆಳುವಾಗಿ ಬಿಡುತ್ತವೆ (ಆಸ್ಟಿಯೋಪೋರೋಸಿಸ್) ಸಣ್ಣ ಏಟು, ಏಳುವುದು, ಕೂಡುವುದು, ಇಂತಹ ನಿತ್ಯದ ಕೆಲಸಗಳಿಗೇ ಮೂಳೆ ಸುಲಭವಾಗಿ ಮುರಿಯುತ್ತದೆ. ಇದಕ್ಕಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನಿಯಮಿತ ಆಹಾರ, ವ್ಯಾಯಾಮ, ಯೋಗ, ಮಾನಸಿಕ ನೆಮ್ಮದಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಪ್ರಯೋಜನಕಾರಿ.