ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡೋ - ಪಾರ್ಥಿಯನ್ನರು

ವಿಕಿಸೋರ್ಸ್ದಿಂದ

ಇಂಡೋ - ಪಾರ್ಥಿಯನ್ನರು

ಈ ರಾಜವಂಶದ ಮೂಲದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಭಾರತದ ವಾಯುವ್ಯ ಭಾಗದಲ್ಲಿ ಕ್ರಿ. ಪೂ. 2ನೆಯ ಶತಮಾನದಿಂದ ಕ್ರಿ.ಶ. 1ನೆಯ ಶತಮಾನದವರೆಗೆ ರಾಜ್ಯಾಡಳಿತ ನಡೆಸುತ್ತಿದ್ದ ಗವರ್ನರುಗಳು ಇಂಡೋ-ಪಾರ್ಥಿಯನ್ ಎಂಬ ನಾಮಾಂಕಿತದಿಂದ ಇತಿಹಾಸದಲ್ಲಿ ಬೆಳಕಿಗೆ ಬಂದರೆಂಬುದು ಮೊದಲನೆಯ ಅಭಿಪ್ರಾಯವಾದರೆ, ಆ ಕಾಲದಲ್ಲಿ ಆ ಪ್ರದೇಶವನ್ನು ಆಳುತ್ತಿದ್ದವರು ಶಕರಲ್ಲದೆ ಬೇರೆಯಲ್ಲವೆಂದೂ ಪಾರ್ಥಿಯನ್ನರ ಬಿರುದು ಬಾವಲಿಗಳನ್ನು ಅವರು ಉಪಯೋಗಿಸುತ್ತಿದ್ದುದರಿಂದ ಅವರನ್ನು ಇಂಡೋ-ಪಾರ್ಥಿಯನ್ನರೆಂದು ಕರೆಯಲಾಯಿತೆಂದೂ ಇರಾನೀ ಶಾಸನಗಳ ಆಧಾರದಿಂದ ಹೇಳಬಹುದೆಂಬುದು ಎರಡನೆಯ ಅಭಿಪ್ರಾಯ.

ಮೊದಲನೆಯ ದೊರೆ ಮಿತ್ರಡೇಟಸ್ (ಕ್ರಿ.ಪೂ. 171-136) ಯುಕ್ರಟೈಡಸ್‍ನ ಸಮಕಾಲೀನನಾಗಿದ್ದ. ಭಾರತದ ಮೇಲೆ ದಂಡಯಾತ್ರೆ ನಡೆಸಿ ಜೀಲಂ ಮತ್ತು ಸಿಂಧು ನದಿಗಳ ನಡುವಣ ಪ್ರದೇಶಗಳನ್ನು ವಶಪಡಿಸಿಕೊಂಡ. ಇವನ ಮರಣಾನಂತರ ಪಾರ್ಥಿಯನ್ ಗವರ್ನರುಗಳು ಸ್ವತಂತ್ರ ಸಂಸ್ಥಾನಗಳನ್ನು ಸ್ಥಾಪಿಸಿದರು.

ಈ ವಂಶದ ಮತ್ತೊಬ್ಬ ಪ್ರಸಿದ್ಧನಾದ ದೊರೆಯೆಂದರೆ ಮಾಯುಸ್ (ಮೊಗ). ಗ್ರೀಕ್ ರಾಜರುಗಳ ರಾಜನೆಂಬ ಬಿರುದನ್ನು ಪಡೆದು ತಕ್ಷಶಿಲೆಯನ್ನು ರಾಜಧಾನಿಯನ್ನಾಗುಳ್ಳ ಒಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಬಹಳ ವರ್ಷಗಳ ಕಾಲ ಆಳಿದ ಮೊಗ ಎಂಬುವನೇ ಈ ದೊರೆಯೆಂದು ತಕ್ಷಶಿಲೆಯ ಶಾಸನದಿಂದ ಗೊತ್ತಾಗುತ್ತದೆ. ಮಿತ್ರಡೇಟಸ್ II ಮತ್ತೊಬ್ಬ ಪ್ರಖ್ಯಾತ ದೊರೆ. ಗೆದ್ದ ಭಾರತೀಯ ಪ್ರದೇಶಗಳನ್ನು ಈತ ಕ್ರೋಡೀಕರಿಸಿದನಲ್ಲದೆ ಶಕರ ಮೇಲೆ ಯುದ್ಧ ಮಾಡಿದ. ಈತನ ಅನಂತರ ದೂರ ದೂರ ಪ್ರಾಂತ್ಯಗಳಲ್ಲಿದ್ದ ಗವರ್ನರುಗಳು ಸ್ವತಂತ್ರರಾದರು. ಅಜಿಸ್ I ಮತ್ತು ಅಜಿಸ್ II ಹೆಸರಾಂತ ಇಂಡೋ-ಪಾರ್ಥಿಯನ್ ನಾಯಕರುಗಳಾಗಿದ್ದರೂ ಅವರ ಬಗ್ಗೆ ಹೆಚ್ಚಿನ ವಿಷಯಗಳೇನೂ ತಿಳಿದುಬಂದಿಲ್ಲ.

ಗೊಂಡೊಫರ್ನಿಸ್ (ಗೂಢಾಫರ್ನಾ) (ಕ್ರಿ.ಶ.20-41) ಇಂಡೋ-ಪಾರ್ಥಿಯನ್ ರಾಜರುಗಳಲ್ಲೆಲ್ಲ ಬಹುಶ್ರೇಷ್ಠನೂ ವೀರನೂ ಆಗಿದ್ದ. ಯೂರೋಪಿನಿಂದ ಬಂದ ಥಾಮಸ್ ಎಂಬ ಪಾದ್ರಿ ಇವನನ್ನೂ ಗದ್ ಎಂಬ ಇವನ ತಮ್ಮನನ್ನೂ ಇವನ ಜನಗಳನ್ನೂ ಕ್ರೈಸ್ತಮತಕ್ಕೆ ಸೇರಿಸಿದುದಾಗಿ ತಿಳಿದುಬರುತ್ತದೆ. ಆದರೆ ಇದು ಒಂದು ನಂಬಲಾಗದ ಕಥೆಯಲ್ಲದೆ ಬೇರೆಯಲ್ಲವೆಂದು ಇತಿಹಾಸಕಾರ ಸ್ಮಿತ್ ಇದನ್ನು ನಿರಾಕರಿಸಿದ್ದಾನೆ.

ಗೊಂಡೊಫರ್ನಿಸ್ಸನ ಕಾಲದಲ್ಲಿ, ಗೊಂಡೊಫರ್ನಿಸ್ ಮತ್ತು ಅವನ ವಂಶೀಕರು (ಪರ್ಷಿಯನ್ ಪ್ರಭಾವಕ್ಕೆ ಒಳಗಾದ ಶಕರು) ಮತ್ತು ಅಪ್ಪಟ ಪಾರ್ಥಿಯನ್ ಗುಂಪಿಗೆ ಸೇರಿದವರು ಎಂಬುದಾಗಿ ಎರಡು ಗುಂಪುಗಳನ್ನು ಕಾಣಬಹುದಾಗಿತ್ತು. ಕ್ರಿ.ಶ. 1ನೆಯ ಶತಮಾನ ಪೂರ್ತಿಯಾಗಿ ಇವರು ತಮ್ಮತಮ್ಮೊಳಗೆ ಜಗಳವಾಡುತ್ತಿದ್ದರು. ಕುಶಾನ ದೊರೆಯಾದ ವಿಮಾ ಕ್ಯಾಡ್ ಫಿಸಸ್ ಅವರ ರಾಜ್ಯದ ಬಹುಭಾಗಗಳನ್ನು ವಶಪಡಿಸಿಕೊಂಡದ್ದರಿಂದ ಪಾರ್ಥಿಯನ್ನರು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿಯಲು ಸಾಧ್ಯವಾಗಲಿಲ್ಲ.

(ಬಿ.ಎಂ.)