ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗಸ್ಟಸ್ ಆಕ್ಟೇವಿಯಸ್
ಅಗಸ್ಟಸ್ ಆಕ್ಟೇವಿಯಸ್
[ಸಂಪಾದಿಸಿ]ಪ್ರ.ಶ.ಪು.63-ಪ್ರ.ಶ.14) ರೋಮ್ ಸಾಮ್ರಾಟರಲ್ಲೆಲ್ಲ ಅತ್ಯಂತ ಪ್ರಸಿದ್ಧನೂ ಪ್ರತಿಭಾನ್ವಿತನೂ ಯುಗಸ್ಥಾಪಕನೂ ಆದ ದೊರೆ. ಈತ ಜೂಲಿಯಸ್ ಸೀಸರನ ಮೊಮ್ಮಗ ಹಾಗೂ ದತ್ತುಪುತ್ರ. ಸೀಸರನ ಕೊಲೆಯಾದ ಅನಂತರ ರೋಮ್ ಸಾಮ್ರಾಜ್ಯದಲ್ಲಿ ಅಧಿಕಾರಕ್ಕಾಗಿ ನಡೆದ ಕಚ್ಚಾಟದಲ್ಲಿ ಕೇವಲ ಹದಿನೆಂಟು ವರ್ಷದ ಯುವಕನಾದ ಆಕ್ಟೇವಿಯಸ್ ತನ್ನ ಜಾಣತನ, ಆತ್ಮಸಂಯಮ ಮತ್ತು ಧಾರಣಶಕ್ತಿಯಿಂದ ರೋಮನರ ಮೆಚ್ಚಿಕೆ ಗಳಿಸಿದ. ಪ್ರ.ಶ.ಪು. 44-30ರವರೆಗೆ ಅಂತರ್ಯುದ್ಧಗಳನ್ನಡಗಿಸುವ ಮತ್ತು ರೋಮನ್ ಸಾಮ್ರಾಜ್ಯದ ಪ್ರಾಂತಗಳನ್ನು ತನ್ನ ಅಧಿಕಾರಕ್ಕೊಳಪಡಿಸುವ ಕಾರ್ಯದಲ್ಲಿ ಸಂಪುರ್ಣ ಯಶಸ್ವಿಯಾದ. ಪ್ರ.ಶ.ಪು. 30ರಲ್ಲಿ ಈಜಿಪ್ಟಿನ ಜೈತ್ರಯಾತ್ರೆಯನ್ನು ಮುಗಿಸಿಕೊಂಡು ರೋಮ್ ನಗರಕ್ಕೆ ಹಿಂದಿರುಗಿದ ಆಕ್ಟೇವಿಯಸ್ನನ್ನು ರೋಮನ್ನರು ಸಂಭ್ರಮದಿಂದ ಸ್ವಾಗತಿಸಿ ವಿಜಯೋತ್ಸವವನ್ನು ಆಚರಿಸಿದರು. ಈತ ಪ್ರ.ಶ.ಪು. 27ರಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಇವನ ಉತ್ಕೃಷ್ಟಸೇವೆಗಾಗಿ ರೋಮನ್ ಸೆನೆಟ್ಟು ಇವನಿಗೆ ಅಗಸ್ಟಸ್ ಎಂಬ ಗೌರವಸೂಚಕಬಿರುದನ್ನು ಕೊಟ್ಟಿತು. ಅಗಸ್ಟಸ್ ತನ್ನ ವೈಯಕ್ತಿಕ ಅಧಿಕಾರವನ್ನು ಪ್ರಜಾಪ್ರಭುತ್ವದ ಮೂಲಸ್ವರೂಪಕ್ಕೆ ಚತುರತೆಯಿಂದ ಸಮನ್ವಯಗೊಳಿಸಿದ. ಇವನ್ನು ಚಕ್ರಾಧಿಪತ್ಯದ ಮುಖ್ಯ ನ್ಯಾಯಾಧೀಶ ಮತ್ತು ಪ್ರಜಾಪ್ರಭುತ್ವದ ಪ್ರಥಮ ನಾಗರಿಕನೆಂದು ಜನ ಪರಿಗಣಿಸಿದರು. ಆದ್ದರಿಂದಲೇ ಇವನ ಆಳ್ವಿಕೆಯನ್ನು ಪ್ರಿನ್ಸಿಪೇಟ್ ಎಂದು ಕರೆಯಲಾಗಿದೆ. ಈತನ ಕಾಲದಲ್ಲಿ ರೋಮನ್ ಸಾಮ್ರಾಜ್ಯ ಯುರೋಪು, ಆಫ್ರಿಕ ಮತ್ತು ಏಷ್ಯ ಖಂಡಗಳ ಅನೇಕ ಭಾಗಗಳನ್ನೊಳಗೊಂಡಿತ್ತು. ಚಕ್ರಾಧಿಪತ್ಯದ ಗಡಿಗಳನ್ನು ನಿಗದಿಮಾಡಿ ಅವುಗಳ ರಕ್ಷಣೆಗಾಗಿ ಸುಸಜ್ಜಿತ ಸೈನ್ಯಗಳನ್ನು ಇಡಲಾಗಿತ್ತು.
ಅಗಸ್ಟಸ್ ಚಕ್ರವರ್ತಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳನ್ನು ಜಾರಿಗೆ ತಂದ. ವಿಶಾಲವಾದ ಸಾಮ್ರಾಜ್ಯವನ್ನು ಆಡಳಿತಕ್ಕನುಗುಣವಾಗಿ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ದಕ್ಷತೆಯ ಆಧಾರದ ಮೇಲೆ ಪ್ರತಿ ಪ್ರಾಂತ್ಯದಲ್ಲೂ ರೋಮನ್ ಸೈನ್ಯದ ತುಕಡಿಗಳನ್ನಿಡಲಾಯಿತು. ಪ್ರಾಂತ್ಯಾಧಿಕಾರಿಗಳು ರಕ್ಷಣಾಪಡೆಗಳನ್ನು ಚಕ್ರವರ್ತಿಯ ಆಜ್ಞೆ ಪಡೆದು ಮಾತ್ರ ಉಪಯೋಗಿಸಬೇಕಾಗಿತ್ತು. ಅನೇಕ ವರ್ಷಗಳ ಕಾಲ ನಡೆದ ಅಂತರ್ಯುದ್ಧಗಳಿಂದ ಚಕ್ರಾಧಿಪತ್ಯದಲ್ಲಿ ಆರ್ಥಿಕ ಕ್ಷೋಭೆಯುಂಟಾಗಿತ್ತು. ಪರಿಸ್ಥಿತಿಯನ್ನು ಉತ್ತಮಪಡಿಸಲು ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಸಾಮ್ರಾಜ್ಯದ ಜನಗಣತಿಯನ್ನು ನಡೆಸಿದ. ಚಿಲ್ಲರೆ ತೆರಿಗೆಗಳನ್ನು ರದ್ದುಗೊಳಿಸಿದ. ಕೈಗಾರಿಕೆ ಹಾಗೂ ವ್ಯಾಪಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ. ಅನೇಕ ಸೇತುವೆಗಳನ್ನೂ ರಸ್ತೆಗಳನ್ನೂ ಕಾಲುವೆಗಳನ್ನೂ ಕಟ್ಟಿಸಿದ. ಅನೇಕ ಸಮಾಜ ಸುಧಾರಣೆಗಳು ಬಳಕೆಗೆ ಬಂದುವು. ರೋಮನ್ನರ ಉಡಿಗೆತೊಡಿಗೆ ಮತ್ತು ಮತಪದ್ಧತಿಗಳು ಸುಧಾರಿತವಾದವು; ಅನೇಕ ವಿಧವಾದ ಸ್ಪರ್ಧೆಗಳು ಹಾಗೂ ವಿನೋದ ಕ್ರೀಡೆಗಳು ಜಾರಿಗೆ ಬಂದುವು. ಪ್ರಾಚೀನ ದೇವಾಲಯಗಳು ಜೀರ್ಣೋದ್ಧಾರಗೊಂಡುವು. ರೋಮನ್ ಸಾಮ್ರಾಜ್ಯ ಹೆಚ್ಚಾಗಿ ವ್ಯಾಪಿಸಿ ದಂತೆ ಅನೇಕ ಮತಗಳು ರೋಮ್ನಲ್ಲಿ ಆಶ್ರಯಪಡೆದುವು. ರೋಮನ್ನರು ಗ್ರೀಕ್, ಈಜಿಪ್್ಟ ಮತ್ತು ಯಹೂದಿ ಮುಂತಾದ ದೇವತೆಗಳನ್ನು ಆರಾಧಿಸತೊಡಗಿದರು. ಈ ಕಾಲದಲ್ಲಿ ಜನರಲ್ಲಿ ನೈತಿಕಜಾಗೃತಿ ಮೂಡಿತ್ತು; ರೋಮ್ ನಗರ ಸುಂದರವಾದ ರಸ್ತೆಗಳಿಂದಲೂ ಉದ್ಯಾನಗಳಿಂದಲೂ ಮನೋಹರವಾದ ದೇವಾಲಯಗಳಿಂದಲೂ ಭವ್ಯ ಸಾರ್ವಜನಿಕ ಭವನಗಳಿಂದಲೂ ಕಂಗೊಳಿಸಿ ಸರ್ವತೋಮುಖವಾಗಿ ಬೆಳೆಯಿತು.
ರೋಮನ್ ಸಾಮ್ರಾಜ್ಯದ ಕ್ಷೇಮ ಹಾಗೂ ಒಳಿತೇ ಆಕ್ಟೇವಿಯಸ್ಸನ ಗುರಿ. ಎಲ್ಲ ವರ್ಗಗಳ ಪ್ರೀತಿ ವಿಶ್ವಾಸವನ್ನು ಆತ ಗಳಿಸಿದ್ದ. ಅವನನ್ನು ರೋಮ್ ಸಾಮ್ರಾಜ್ಯದ ರಕ್ಷಕನೆಂದೂ ಪ್ರತ್ಯಕ್ಷ ದೇವತೆಯೆಂದೂ ಪ್ರಜೆಗಳು ಪುಜಿಸಲಾರಂಭಿಸಿದರು. ವಿಶಾಲಸಾಮ್ರಾಜ್ಯದಲ್ಲಿದ್ದ ಭಿನ್ನ ಭಿನ್ನ ಪಂಗಡ ಮತ್ತು ಮತೀಯರಿಗೆ ಸಮಾನತೆಯ ಆಧಾರದ ಮೇಲೆ ನ್ಯಾಯ ಮತ್ತು ರಕ್ಷಣೆ ದೊರೆಯುವಂತಾಯಿತು. ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತು.
ಈತನ ಆಳ್ವಿಕೆಯನ್ನು ಅಗಸ್ಟಸ್ಯುಗವೆಂದೂ ರೋಮ್ಸಾಮ್ರಾಜ್ಯದ ಸುವರ್ಣಯುಗವೆಂದೂ ಕರೆದಿದ್ದಾರೆ. ಅಗಸ್ಟಸ್ ಚಕ್ರವರ್ತಿ ಸುಪ್ರಸಿದ್ಧ ರಾಜಕೀಯ ನಿಪುಣನೂ ಸುಧಾರಕನೂ ಆಗಿದ್ದುದಲ್ಲದೆ ಕಲೆಯನ್ನೂ ಸಾಹಿತ್ಯವನ್ನೂ ವಿಶೇಷವಾಗಿ ಪ್ರೋತ್ಸಾಹಿಸುವವನೂ ಆಗಿದ್ದ. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿತು. ಆ ಕಾಲದ ಮುಖ್ಯ ಕವಿಗಳಲ್ಲಿ ಈನಿಯಡ್ ಮಹಾಕಾವ್ಯವನ್ನು ರಚಿಸಿದ ವರ್ಜಿಲ್ ಅತ್ಯಂತ ಪ್ರಸಿದ್ಧ. ಓವಿಡ್, ಹೊರೇಸ್ ಮೊದಲಾದವರೂ ಆ ಕಾಲದವರೇ. ಅದೇ ಕಾಲದಲ್ಲಿ ಅನೇಕ ವಿದ್ವಾಂಸರು ವ್ಯಾಕರಣ, ವೈದ್ಯ, ವ್ಯವಸಾಯ, ಚರಿತ್ರೆ ಇತ್ಯಾದಿ ಗ್ರಂಥಗಳನ್ನು ರಚಿಸಿದರು.
44 ವರ್ಷಗಳ ಕಾಲ ಸಾಮ್ರಾಜ್ಯದ ಹಿತಚಿಂತನೆಗಾಗಿ ದುಡಿದು, ಚಕ್ರಾಧಿಪತ್ಯವನ್ನು ವಿಸ್ತರಿಸಿ, ಸುಭದ್ರವಾದ ಆಡಳಿತವನ್ನೂ ಶಾಂತಿಯನ್ನೂ ಸ್ಥಾಪಿಸಿ ಕಲೆಯನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಅಗಸ್ಟಸ್ ಪ್ರಜೆಗಳಿಂದ ಪ್ರತ್ಯಕ್ಷದೇವನೆಂಬ ಹೆಸರನ್ನು ಪಡೆದ.